Tag: ಅಸ್ವಸ್ಥ

  • ಇಳಕಲ್ ಜೋಗಿಯನ್ನು ಮರಳಿ ಕುಟುಂಬಕ್ಕೆ ಸೇರಿಸ್ತು ಫೇಸ್‍ಬುಕ್ ವೈರಲ್ ವಿಡಿಯೋ!

    ಇಳಕಲ್ ಜೋಗಿಯನ್ನು ಮರಳಿ ಕುಟುಂಬಕ್ಕೆ ಸೇರಿಸ್ತು ಫೇಸ್‍ಬುಕ್ ವೈರಲ್ ವಿಡಿಯೋ!

    ಬಾಗಲಕೋಟೆ: ಐದು ವರ್ಷದಿಂದ ದೂರ ಇದ್ದ ಮಾನಸಿಕ ಅಸ್ವಸ್ಥನೊಬ್ಬ ಫೇಸ್‍ಬುಕ್ ವಿಡಿಯೋದ ಮೂಲಕ ಮರಳಿ ಕುಟುಂಬವನ್ನು ಸೇರಿದ್ದಾನೆ. ಇಳಕಲ್ ಜೋಗಿ ಎಂದೇ ಹೆಸರಾಗಿದ್ದ ನರಸಿಂಹನನ್ನು ಸಾಮಾಜಿಕ ಜಾಲತಾಣದ ವೈರಲ್ ವಿಡಿಯೋ ಮೂಲಕ ಗಮನಿಸಿದ ಕುಟುಂಬಸ್ಥರು ಮನೆಗೆ ಕರೆದೊಯ್ದಿದ್ದಾರೆ.

    ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಗೋವಿನಕೋವಿ ಗ್ರಾಮದ ನರಸಿಂಹ ಕಳೆದ ಐದು ವರ್ಷದಿಂದ ನಾಪತ್ತೆಯಾಗಿದ್ದ. ಮನೆಯವರೆಲ್ಲರೂ ಹುಡುಕಿ ಸುಸ್ತಾಗಿದ್ದರು. ಮಾನಸಿಕ ಅಸ್ವಸ್ಥನಾಗಿದ್ದರೂ ನರಸಿಂಹ ಇಳಕಲ್ ನಗರದಲ್ಲಿ ಸರ್ವ ವಿಜಯ ಸಂಸ್ಥೆಯವರು ನೆಟ್ಟ ನೂರಾರು ಗಿಡಗಳಿಗೆ ಪ್ರತಿ ನಿತ್ಯ ತಪ್ಪದೇ ಬಕೆಟ್ ಹಿಡಿದು ನೀರು ಹಾಕುತ್ತಿದ್ದ.

    ತಲೆ ತುಂಬ ಕೂದಲು ಬಿಟ್ಟುಕೊಂಡು ಹುಚ್ಚನಂತಾಗಿದ್ದ ನರಸಿಂಹನನ್ನು ಎಲ್ಲರೂ ಇಳಕಲ್ ಜೋಗಿ ಎಂದೇ ಕರೆಯುತ್ತಿದ್ದರು. ಮಾನಸಿಕ ಅಸ್ವಸ್ಥನಾಗಿದ್ದರೂ ಈತನ ಗಿಡದ ಮೇಲಿನ ಪ್ರೀತಿ ಎಲ್ಲರ ಮನಮಿಡಿಯುವಂತೆ ಮಾಡಿತ್ತು. ಕೊನೆಗೆ ಗಿಡಕ್ಕೆ ನೀರು ಹಾಕೋದನ್ನು ವಿಡಿಯೋ ಮಾಡಿದ ಸ್ಥಳೀಯರು ಅದಕ್ಕೆ ಒಳಿತು ಮಾಡು ಮನಸಾ ಎಂಬ ಹಾಡನ್ನು ಅಳವಡಿಸಿ ಫೇಸ್‍ಬುಕ್‍ನಲ್ಲಿ ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ಸಾಕಷ್ಟು ಜನರಿಂದ ಶೇರ್, ಲೈಕ್ಸ್, ಕಮೆಂಟ್ ಪಡೆಯುತ್ತಾ ನರಸಿಂಹನ ಕುಟುಂಬದ ಗಮನಕ್ಕೂ ಬಂದಿದೆ. ಕೂಡಲೇ ಕುಟುಂಬಸ್ಥರು ಇಳಕಲ್ ನಗರಕ್ಕೆ ಭೇಟಿ ನೀಡಿದ್ದಾರೆ.

    ಈ ವೇಳೆ ಸ್ಥಳೀಯರು ತಲೆ ತುಂಬ ಕೂದಲು ಬಿಟ್ಟಿದ್ದ ಆತನಿಗೆ ಕ್ಷೌರ ಮಾಡಿಸಿ, ಸ್ನಾನಮಾಡಿಸಿ ಹೊಸ ಟಿ-ಶರ್ಟ್ ಹಾಕಿಸಿ ಮನೆಗೆ ಕಳಿಸಿ ಕೊಟ್ಟಿದ್ದಾರೆ. ಫೇಸ್‍ಬುಕ್ ನಿಂದ ಓರ್ವ ವ್ಯಕ್ತಿ ಮರಳಿ ಮನೆ ಸೇರಿದ್ದು, ಕುಟುಂಬಸ್ಥರಿಂದ ಅಗಲಿದ ನರಸಿಂಹ ಮತ್ತೆ ಮನೆಯವರ ಜೊತೆ ಒಂದಾದ ಘಟನೆ ಎಲ್ಲರ ಮನ ಕಲಕುವಂತೆ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಯೂರಿಯಾ ಮಿಶ್ರಿತ ಹಾಲು ಕುಡಿದ ವಿದ್ಯಾರ್ಥಿಗಳು ಅಸ್ವಸ್ಥ!

    ಯೂರಿಯಾ ಮಿಶ್ರಿತ ಹಾಲು ಕುಡಿದ ವಿದ್ಯಾರ್ಥಿಗಳು ಅಸ್ವಸ್ಥ!

    ಚಿಕ್ಕಮಗಳೂರು: ಸರ್ಕಾರಿ ಶಾಲೆಯಲ್ಲಿ ಅಡುಗೆಯವರ ಎಡವಟ್ಟಿನಿಂದಾಗಿ ಯೂರಿಯಾ ಹಾಲು ಕುಡಿದ 19 ಮಕ್ಕಳು ಅಸ್ವಸ್ಥಗೊಂಡ ಘಟನೆ ಕೊಪ್ಪ ತಾಲೂಕು ಹರಹರಿಪುರ ಸಮೀಪದ ನಿಲುವಾಗಿಲು ಗ್ರಾಮದಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಮಕ್ಕಳು ಸದ್ಯ ಹರಿಹರಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಚೇತರಿಕೆಗೊಂಡ ಬಳಿಕ ಸಂಜೆ ಮನೆಗೆ ತೆರಳಿದ್ದಾರೆ. ಕೊಪ್ಪ ಕ್ಷೇತ್ರ ಶಿಕ್ಷಣಾಧಿಕಾರಿ ನಿಲುವಾಗಿಲು ಮುಖ್ಯಶಿಕ್ಷಕ ಅಶೋಕ, ಹಿರಿಯ ಅಡುಗೆಯವರಾದ ಯಶೋದಮ್ಮ, ಅಡುಗೆ ಸಹಾಯಕರಾದ ಶಾರದಾ ಹಾಗೂ ಗುಲಾಬಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    ನಡೆದದ್ದು ಏನು?
    ನಿಲುವಾಗಿಲು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಎಂದಿನಂತೆ ಶನಿವಾರ ವಿದ್ಯಾರ್ಥಿಗಳಿಗೆ ಹಾಲು ವಿತರಣೆ ಮಾಡಲಾಗಿದೆ. ಹಾಲು ಕುಡಿಯುತ್ತಿದ್ದಂತೆ ಮಕ್ಕಳು ಹಾಲು ಕಹಿಯಾಗಿದೆ ಎಂದು ಶಿಕ್ಷಕರಿಗೆ ತಿಳಿಸಿದ್ದಾರೆ. ತಕ್ಷಣವೇ ಜಾಗೃತಗೊಂಡ ದೈಹಿಕ ಶಿಕ್ಷಣ ಶಿಕ್ಷಕರು ತಾವು ಸ್ಪಲ್ಪ ಹಾಲು ಕುಡಿದಿದ್ದಾರೆ. ಹಾಲು ವಿಷವಾಗಿದೆ ಅಂತ ಗೊತ್ತಾಗುತ್ತಿದ್ದಂತೆ ಮಕ್ಕಳಿಗೆ ಹಾಲು ಕುಡಿಯದಂತೆ ಸೂಚಿಸಿ, ಮುಖ್ಯಶಿಕ್ಷಕರಿಗೆ ಆ ವೇಳೆಗಾಗಲೇ ಮುಖ್ಯೋಪಾಧ್ಯಾಯರ ಗಮನಕ್ಕೆ ತಂದಿದ್ದಾರೆ. ಅದರೆ ಅಷ್ಟೊತ್ತಿಗಾಗಲೇ ಶಾಲೆಯ 19 ಮಕ್ಕಳು ಹಾಲನ್ನು ಸೇವಿಸಿಯಾಗಿತ್ತು.

    ಹಾಲು ಕುಡಿದ 19 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ವೇಳೆ ಹಾಲಿನಲ್ಲಿ ವಿಷಕಾರಿ ಯೂರಿಯಾ ಸೇರಿರುವುದು ಪತ್ತೆಯಾಗಿದೆ. ಹಾಲಿನಲ್ಲಿ ಯಾರು ಯೂರಿಯಾ ಬೆರೆಸಿದ್ದು ಹಾಗೂ ಶಾಲೆಗೆ ಅದು ಹೇಗೆ ಬಂತು ಎನ್ನವುದು ಅನುಮಾನ ವ್ಯಕ್ತವಾಗಿದೆ.

    ಯಶೋಧಮ್ಮ ಅವರು ಇಂದು ರಜೆ ಇದ್ದರು. ಹೀಗಾಗಿ ಶುಕ್ರವಾರವೇ ಹಾಲಿಗೆ ಬೇಕಾಗಿದ್ದ ಸಕ್ಕರೆ ಪ್ಯಾಕೇಟ್ ನೀಡಿ ಹೋಗಿದ್ದರು. ಅದನ್ನು ಪರಿಶೀಲನೆ ಮಾಡದೇ ಹಾಲಿಗೆ ಹಾಕಿದ್ದೇವೆ ಎಂದು ಸಹಾಯಕಿಯರಾದ ಗುಲಾಬಿ ಹಾಗೂ ಶಾರದಾ ತಿಳಿಸಿದ್ದಾರೆ.

    ಕಳೆದ ಕೆಲವು ದಿನಗಳಿಂದ ಯಶೋಧಮ್ಮ ಹಾಗೂ ಅಡುಗೆ ಸಹಾಯಕರ ನಡುವೆ ಜಗಳವಾಗಿತ್ತು. ಒಬ್ಬರ ಮೇಲೆ ಮತ್ತೊಬ್ಬರು ಗೂಬೆ ಕೂರಿಸಲು ಮಕ್ಕಳ ಜೀವನದ ಜೊತೆಗೆ ಆಟವಾಡಿದ್ದಾರೆ. ಇನ್ನು ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಿದ್ದಾರೆ.

    ಅಶೋಕ ಅವರು ನಿಲುವಾಗಿಲು ಸರ್ಕಾರಿ ಶಾಲೆಯ ಮುಖ್ಯಶಿಕ್ಷಕರಾಗಿ ಬಂದ ಮೇಲೆ ಅನೇಕ ಬದಲಾವಣೆ ತಂದಿದ್ದರು. ಖಾಸಗಿ ಶಾಲೆಯಂತೆ ನರ್ಸರಿ ತರಗತಿಗಳನ್ನು ಪ್ರಾರಂಭಿಸಿದ್ದರು. ಇದರಿಂದಾಗಿ ಅನೇಕ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಅನುಕೂಲವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಕುಸಿದು ಬಿದ್ದ ಮಹಿಳಾ ಕಾರ್ಪೊರೇಟರ್

    ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಕುಸಿದು ಬಿದ್ದ ಮಹಿಳಾ ಕಾರ್ಪೊರೇಟರ್

    ಬೆಂಗಳೂರು: ಬಿಬಿಎಂಪಿ ಕೌನ್ಸಿಲ್ ಸಭೆಯ ವೇಳೆ ಮಹಿಳಾ ಕಾರ್ಪೊರೇಟರ್ ಒಬ್ಬರು ಅಸ್ವಸ್ಥರಾಗಿ ಕುಸಿದು ಬಿದ್ದ ಬಳಿಕ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ರಾಜಕುಮಾರ್ 106 ವಾರ್ಡ್ ಸದಸ್ಯರದ ರೂಪಾ ಸಭೆಯಲ್ಲಿ ಕುಸಿದು ಬಿದ್ದಿದ್ದಾರೆ. ಸಭೆಯ ವೇಳೆ ಏಕಾಏಕಿ ಉಸಿರಾಟದ ಹಾಗೂ ಎದೆ ನೋವು ಸಮಸ್ಯೆ ಎದುರಿಸಿ ಅಸ್ವಸ್ಥರಾದರು. ಈ ವೇಳೆ ತಕ್ಷಣ ಕೌನ್ಸಿಲ್ ಸಭೆಯನ್ನು ಮುಂದೂಡಿದ ಮೇಯರ್ ಸಂಪತ್‍ರಾಜ್ ಸೇರಿದಂತೆ ಇತರೇ ಕಾರ್ಪೊರೇಟರ್ ಗಳು ರೂಪಾ ಅವರನ್ನು ಆಸ್ಪತ್ರೆ ದಾಖಲಿಸಲು ಎತ್ತಿಕೊಂಡು ಹೊರ ನಡೆದರು.

    ಈ ವೇಳೆ ರೂಪಾ ಅವರಿಗೆ  ಪಾಲಿಕೆಯ ವೈದ್ಯರಿಂದ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿದ್ದು, ಪ್ರಥಮ ಚಿಕಿತ್ಸೆ ಬಳಿಕ ರೂಪಾ ಅವರು ಚೇತರಿಕೆ ಕಂಡರು. ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೇಯರ್ ಸಂಪತ್ ರಾಜ್, ತಮ್ಮ ಕಾರಿನಲ್ಲೇ ಕರೆದುಕೊಂಡು ಮಲ್ಯ ಆಸ್ಪತ್ರೆ ಕರೆದುಕೊಂಡು ಹೋದರು. ಸದ್ಯ ಮಲ್ಯ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಇದಕ್ಕೂ ಮುನ್ನ ರಾಜ್ಯ ಸರ್ಕಾರ ಮಂಡಿಸಿದ ಬಜೆಟ್ ಸ್ವಾಗತಿಸಿದ ಕಾಂಗ್ರೆಸ್ ಪಕ್ಷದ ನಾಯಕ ಶಿವರಾಜ್, ಬಜೆಟ್‍ನಲ್ಲಿ ಬೆಂಗಳೂರಿಗೆ ಅನೇಕ ಕೊಡುಗೆ ನೀಡಲಾಗಿದೆ. ಮೆಟ್ರೋ, ರಸ್ತೆ, ಮೂಲಭೂತ ಸೌಕರ್ಯ ನೀಡಿರೋ ಬಗ್ಗೆ ಸ್ವಾಗತ. ಬೆಂಗಳೂರು ರೈತ ಸಮುದಾಯದ ಮೇಲೆ ಅವಲಂಬಿಸಿದ್ದು, ರೈತರ ಸಾಲ ಮನ್ನಾ ಮಾಡಿದಕ್ಕೆ ಅಭಿನಂದನೆ ಎಂದು ತಿಳಿಸಿದರು.

  • ಕಲುಷಿತ ನೀರು ಸೇವಿಸಿ ಒಂದೇ ಗ್ರಾಮದ 25 ಜನರು ಅಸ್ವಸ್ಥ

    ಕಲುಷಿತ ನೀರು ಸೇವಿಸಿ ಒಂದೇ ಗ್ರಾಮದ 25 ಜನರು ಅಸ್ವಸ್ಥ

    ಬಾಗಲಕೋಟೆ: ಕಲುಷಿತ ನೀರು ಸೇವಿಸಿ ಒಂದೇ ಗ್ರಾಮದ 25 ಜನರು ಅಸ್ವಸ್ಥಗೊಂಡ ಘಟನೆ ಬಾಗಲಕೋಟೆ ತಾಲೂಕಿನ ಹಳೇ ರಾಂಪೂರ ಗ್ರಾಮದಲ್ಲಿ ನಡೆದಿದೆ.

    ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡ ಜನರು ವಾಂತಿ, ಭೇದಿಯಿಂದ ಬಳಲುತ್ತಿದ್ದರು. ಅಸ್ವಸ್ಥಗೊಂಡವರನ್ನು ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಕೆಲವರನ್ನು ಬಾಗಲಕೋಟೆಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಬೋರ್ ಮೂಲಕ ಗ್ರಾಮಕ್ಕೆ ನೀರು ಪೂರೈಸಲಾಗುತ್ತಿದ್ದು, ಪೈಪ್ ಒಡೆದು ಕಲುಷಿತ ನೀರು ಸೇರಿಕೊಂಡಿದೆ ಎನ್ನಲಾಗಿದೆ. ರೋಗಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೆಲದ ಮೇಲೆಯೇ ಮಲಗಿಸಿ ಚಿಕಿತ್ಸೆ ನೀಡಲಾಗಿದೆ. ಡಿಎಚ್.ಓ ಅನಂತ ದೇಸಾಯಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಸ್ವಸ್ಥಗೊಂಡ ರೋಗಿಗಳ ಆರೋಗ್ಯ ವಿಚಾರಿಸಿದ್ದಾರೆ.

  • ಕ್ಷೀರ ಭಾಗ್ಯದ ಹಾಲು ಕುಡಿದು 10ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ!

    ಕ್ಷೀರ ಭಾಗ್ಯದ ಹಾಲು ಕುಡಿದು 10ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ!

    ಕೋಲಾರ: ಸರ್ಕಾರಿ ಶಾಲೆಯಲ್ಲಿ ನೀಡುವ ಕ್ಷೀರ ಭಾಗ್ಯದ ಹಾಲು ಕುಡಿದು 10ಕ್ಕೂ ಹೆಚ್ಚು ಶಾಲಾ ಮಕ್ಕಳು ಹೊಟ್ಟೆ ನೋವು ಹಾಗೂ ವಾಂತಿ-ಬೇಧಿಯಿಂದ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಪೊಂಪಲ್ಲಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಗುರುವಾರ ಬೆಳಗ್ಗೆ 11 ಗಂಟಗೆ ಈ ಘಟನೆ ನಡೆದಿದ್ದು, ಅಸ್ವಸ್ಥಗೊಂಡ ಮಕ್ಕಳನ್ನ ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

    ಮೊದಲಿಗೆ ಹೊಟ್ಟೆ ನೋವು, ವಾಂತಿ ಹಾಗೂ ಬೇಧಿಯಾಗಿ ಅಸ್ವಸ್ಥಗೊಂಡ 10ಕ್ಕೂ ಹೆಚ್ಚು ಮಕ್ಕಳಿಗೆ ಕಲುಷಿತ ಹಾಲು ನೀಡಿರುವುದೇ ಕಾರಣ ಎನ್ನಲಾಗಿದೆ. ಸದ್ಯ ಆಸ್ಪತ್ರೆಗೆ ಅಕ್ಷರದಾಸೋಹ ಅಧಿಕಾರಿಗಳು ಸೇರಿದಂತೆ ಆಹಾರ ನಿರೀಕ್ಷಕರು ಭೇಟಿ ನೀಡಿದ್ದು ಮಕ್ಕಳಿಗೆ ಯಾವುದೇ ಅಪಾಯ ಇಲ್ಲ ಎಂದು ಖಚಿತ ಪಡಿಸಿದ್ದಾರೆ.

    ಈ ಘಟನೆಗೆ ನಿಖರ ಕಾರಣವನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನೂ ಶಾಲೆ ವಿರುದ್ಧ ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದು, ಆಸ್ಪತ್ರೆ ಹಾಗೂ ಶಾಲೆಗೆ ಅಂಡರ್‍ಸನ್ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

  • ಬಿಸಿಯೂಟ ಸೇವಿಸಿ ತುಮಕೂರಿನ 50ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

    ಬಿಸಿಯೂಟ ಸೇವಿಸಿ ತುಮಕೂರಿನ 50ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

    ತುಮಕೂರು: ಬಿಸಿಯೂಟ ಸೇವಿಸಿ 50ಕ್ಕೂ ಹೆಚ್ಚು ಶಾಲಾ ಮಕ್ಕಳು ಅಸ್ವಸ್ಥರಾದ ಘಟನೆ ತುಮಕೂರು ಜಿಲ್ಲೆ ತುರುವೆಕೆರೆ ತಾಲೂಕಿನ ತುಯ್ಯಾಳೆ ಪಾಳ್ಯದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

    ತುಯ್ಯಾಳೆ ಪಾಳ್ಯದ ಹಿರಿಯ ಪ್ರಾಥಮಿಕ ಶಾಲೆಯಲ್ಲಿಯೇ ಬಿಸಿಯೂಟ ತಯಾರಿಸಲಾಗುತ್ತಿದ್ದು, ಇಂದು ಮಧ್ಯಾಹ್ನದ ವಿದ್ಯಾರ್ಥಿಗಳಿಗೆ ಅನ್ನ ಸಾಂಬಾರ್ ಬಡಿಸಲಾಗಿತ್ತು. ಊಟ ಮಾಡಿ ಮತ್ತೆ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದರು. ಕೆಲ ಹೊತ್ತಿನ ನಂತರ ವಿವಿಧ ತರಗತಿಯಲ್ಲಿದ್ದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಾಂತಿ, ಭೇದಿ ಕಾಣಿಸಿಕೊಂಡಿದ್ದು ಅಸ್ವಸ್ಥಗೊಂಡಿದ್ದಾರೆ.

    ವಿದ್ಯಾರ್ಥಿಗಳನ್ನು ಗ್ರಾಮಸ್ಥರು ಹಾಗೂ ಶಿಕ್ಷಕರು ಆಟೋ ಹಾಗೂ ವಿವಿಧ ವಾಹನದಲ್ಲಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು. ಸದ್ಯ ಮಕ್ಕಳು ಚೇತರಿಸಿಕೊಂಡಿದ್ದಾರೆ. ಕೆಟ್ಟಿದ್ದ ತರಕಾರಿಯನ್ನು ಅಡುಗೆಗೆ ಬಳಸಿದ್ದರಿಂದ ಈ ಘಟನೆ ಸಂಭವಿಸಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. ಅಲ್ಲದೇ ಆಹಾರವನ್ನು ಯಾವುದೇ ಶಿಕ್ಷಕರು ಸೇವನೆ ಮಾಡಿರಲಿಲ್ಲ ಎಂದು ಮಾಹಿತಿ ಸಿಕ್ಕಿದೆ.

  • ಮದುವೆ ಮನೆಯಲ್ಲಿ ಊಟ ಸೇವಿಸಿ 60ಕ್ಕೂ ಹೆಚ್ಚು ಮಂದಿ ವಾಂತಿ, ಬೇಧಿ, ತಲೆ ಸುತ್ತಿನಿಂದ ಅಸ್ವಸ್ಥ!

    ಮದುವೆ ಮನೆಯಲ್ಲಿ ಊಟ ಸೇವಿಸಿ 60ಕ್ಕೂ ಹೆಚ್ಚು ಮಂದಿ ವಾಂತಿ, ಬೇಧಿ, ತಲೆ ಸುತ್ತಿನಿಂದ ಅಸ್ವಸ್ಥ!

    ಶಿವಮೊಗ್ಗ: ಮದುವೆ ಮನೆಯಲ್ಲಿ ಊಟ ಸೇವಿಸಿ 60ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಗುಡವಿ ಗ್ರಾಮದಲ್ಲಿ ನಡೆದಿದೆ.

    ಮದುವೆ ಮನೆಯಲ್ಲಿ ಊಟ ಮಾಡಿದ ಬಳಿಕ ಜನರು ವಾಂತಿ, ಬೇಧಿ, ತಲೆ ಸುತ್ತಿನಿಂದ ಅಸ್ವಸ್ಥಗೊಂಡಿದ್ದು, ಅಸ್ವಸ್ಥಗೊಂಡವರನ್ನು ಕೂಡಲೇ ಸೊರಬದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾತ್ರಿಯಿಂದಲೇ ಸೊರಬ ಆಸ್ಪತ್ರೆಗೆ ಅಸ್ವಸ್ಥರನ್ನು ಸೇರಿಸಲಾಗಿತ್ತು. ಇಂದು ಬೆಳಗ್ಗೆ ಕೂಡ ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಇನ್ನೂ ಆಸ್ಪತ್ರೆಯಲ್ಲಿ ಜಾಗ ಸಾಲದೇ ಇರುವುದರಿಂದ ಆಸ್ಪತ್ರೆಯ ಕಾರಿಡಾರ್ ನಲ್ಲಿ ಜನರನ್ನು ಮಲಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ಹಿಂದೆ ದಾವಣಗೆರೆಯಲ್ಲಿ ಆರತಕ್ಷತೆಯ ಊಟ ಮಾಡಿದ ಸುಮಾರು 200ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದರು. ಮೊದಲ ಒಂದು ಪಂಕ್ತಿಯ ನಂತರ ಊಟ ಮಾಡಿದ ಎಲ್ಲರೂ ಸ್ವಲ್ಪ ಸಮಯದಲ್ಲೇ ವಾಂತಿ- ಬೇಧಿ, ಹೊಟ್ಟೆನೋವು, ತಲೆಸುತ್ತು ಇತ್ಯಾದಿಗಳಿಂದ ಅಸ್ವಸ್ಥಗೊಂಡಿದ್ದರು. ವಧು-ವರ ಕೂಡ ಅಸ್ವಸ್ಥಗೊಂಡು ನಿತ್ರಾಣರಾಗಿದ್ದರು.

  • ಮದ್ವೆ ಮನೆಯಲ್ಲಿ ಊಟ ಮಾಡಿದ 200ಕ್ಕೂ ಹೆಚ್ಚು ಮಂದಿ ಅಸ್ವಸ್ಥ!

    ಮದ್ವೆ ಮನೆಯಲ್ಲಿ ಊಟ ಮಾಡಿದ 200ಕ್ಕೂ ಹೆಚ್ಚು ಮಂದಿ ಅಸ್ವಸ್ಥ!

    ಶಿವಮೊಗ್ಗ: ಆರತಕ್ಷತೆಯ ಊಟ ಮಾಡಿದ ಸುಮಾರು 200ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಸಮೀಪದ ಜಯಂತಿ ಗ್ರಾಮದ ತಾಂಡದಲ್ಲಿ ನಡೆದಿದೆ.

    ಅಸ್ವಸ್ಥಗೊಂಡವರಲ್ಲಿ 70 ಜನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಲ್ಲಿ ಇಬ್ಬರು ಮಕ್ಕಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ಶಿವಮೊಗ್ಗ ಗ್ರಾಮದ ಮಂಜಾನಾಯ್ಕ ಎಂಬವರ ಮದುವೆ ದಾವಣಗೆರೆಯಲ್ಲಿ ನಡೆದಿತ್ತು.

    ಈ ಪ್ರಯುಕ್ತ ಗ್ರಾಮದಲ್ಲಿ ಆರತಕ್ಷತೆ ಇಟ್ಟುಕೊಳ್ಳಲಾಗಿತ್ತು. ಮೊದಲ ಒಂದು ಪಂಕ್ತಿಯ ನಂತರ ಊಟ ಮಾಡಿದ ಎಲ್ಲರೂ ಸ್ವಲ್ಪ ಸಮಯದಲ್ಲೇ ವಾಂತಿ- ಬೇಧಿ, ಹೊಟ್ಟೆನೋವು, ತಲೆಸುತ್ತು ಇತ್ಯಾದಿಗಳಿಂದ ಅಸ್ವಸ್ಥಗೊಂಡರು. ವಧು-ವರ ಕೂಡ ಅಸ್ವಸ್ಥಗೊಂಡು ನಿತ್ರಾಣರಾಗಿದ್ದಾರೆ. ತಕ್ಷಣವೇ ಅಸ್ವಸ್ಥರನ್ನು ಚನ್ನಗಿರಿ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

    ಸದ್ಯ ಮೆಗಾನ್ ಆಸ್ಪತ್ರೆಗೆ ದಾಖಲಾದವರು ಚೇತರಿಸಿಕೊಳ್ಳುತ್ತಿದ್ದಾರೆ ಎಂಬುವುದಾಗಿ ಆಸ್ಪತ್ರೆಯ ಮೂಲಗಳಿಂದ ತಿಳಿದುಬಂದಿದೆ.

  • ಮನಕಲುಕುತ್ತಿದೆ ಮೂಕ ಮಂಗಗಳ ರೋಧನ

    ಮನಕಲುಕುತ್ತಿದೆ ಮೂಕ ಮಂಗಗಳ ರೋಧನ

    ಚಿಕ್ಕಬಳ್ಳಾಪುರ: ಅನುಮಾನಸ್ಫದ ರೀತಿಯಲ್ಲಿ ಮಂಗಗಳು ಅಸ್ವಸ್ಥಗೊಂಡು, ಕೂತಲ್ಲೇ ಕೂತು, ಕನಿಷ್ಠ ಒಂದು ಹೆಜ್ಜೆಯೂ ಇಡಲಾಗದ ನಿತ್ರಾಣ ಸ್ಥಿತಿಗೆ ತಲುಪಿರೋ ಮನಕಲುಕುವ ಘಟನೆ ಚಿಕ್ಕಬಳ್ಳಾಪುರ ತಾಲೂಕು ನಾಯನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದಲ್ಲಿ ಕಳೆದರೆಡು ದಿನಗಳಿಂದ 10 ಕ್ಕೂ ಹೆಚ್ಚು ಕೋತಿಗಳು ಮೃತಪಟ್ಟಿವೆ. ಇನ್ನೂ ಹಲವು ಕೋತಿಗಳು ಅಸ್ವಸ್ಥಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿವೆ. ಕೋತಿಗಳ ಮೂಕವೇದನೆಗೆ ಮರುಗಿದ ಗ್ರಾಮಸ್ಥರು ಕೂಡ ಕೋತಿಗಳಿಗೆ ಆರೈಕೆ ಮಾಡಲು ಮುಂದಾಗಿದ್ದಾರೆ. ಕೋತಿಗಳಿಗೆ ವಿಷ ಪ್ರಾಷನವಾಗಿರುವ ಶಂಕೆ ವ್ಯಕ್ತವಾಗಿದೆ.

    ಇನ್ನೂ ಕೋತಿಗಳ ಜೊತೆಗೆ ಜೇನು ನೊಣಗಳು ಸಹ ಎಲ್ಲಂದರಲ್ಲಿ ಸತ್ತು ಬಿದ್ದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಯಾಕೆ ಕೋತಿಗಳು ಅಸ್ವಸ್ಥಗೊಂಡಿವೆ ಅಂತ ಕಾರಣ ತಿಳಿದು ಬಂದಿಲ್ಲ. ಸದ್ಯ ಅರಣ್ಯಾಧಿಕಾರಿಗಳು ಹಾಗೂ ಪಶು ವೈದ್ಯಾಧಿಕಾರಿಗಳು ಗ್ರಾಮಕ್ಕೆ ಭೇಟಿ, ಅಸ್ವಸ್ಥ ಕೋತಿಗಳಿಗೆ ಚಿಕಿತ್ಸೆ ಕೊಡಲು ಮುಂದಾಗಿದ್ದಾರೆ.

  • ಬೇಕರಿ ತಿನಿಸು ತಿಂದು ಗರ್ಭಿಣಿ ಸೇರಿದಂತೆ 9 ಮಕ್ಕಳು ಅಸ್ವಸ್ಥ

    ಬೇಕರಿ ತಿನಿಸು ತಿಂದು ಗರ್ಭಿಣಿ ಸೇರಿದಂತೆ 9 ಮಕ್ಕಳು ಅಸ್ವಸ್ಥ

    ಮಂಡ್ಯ: ಬೇಕರಿಯಲ್ಲಿ ಖರೀದಿಸಿದ ತಿನಿಸು ತಿಂದು ಗರ್ಭಿಣಿ ಸೇರಿದಂತೆ 9 ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಘಟನೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯಲ್ಲಿ ನಡೆದಿದೆ.

    ಕೆಆರ್ ಪೇಟೆ ಪಟ್ಟಣದ ಬೇಕರಿಯೊಂದರಲ್ಲಿ ವಿವಿಧ ಗ್ರಾಮಗಳ ಜನ ಕೇಕ್ ಖರೀದಿಸಿ ಮನೆಗೆ ತೆಗೆದುಕೊಂಡು ಹೋಗಿದ್ದರು. ಕೇಕ್ ತಿಂದ ನಂತರ ಗರ್ಭಿಣಿ ಸೇರಿದಂತೆ 9 ಮಕ್ಕಳು ವಾಂತಿ ಮಾಡಿಕೊಂಡು ಅಸ್ವಸ್ಥರಾಗಿದ್ದಾರೆ.

    ಗುರುವಾರ ಸಂಜೆ 6 ಗಂಟೆಯಿಂದ ಒಬ್ಬರಾದ ಮೇಲೆ ಒಬ್ಬರಂತೆ ರಾತ್ರಿ 11 ಗಂಟೆವರೆಗೂ ಅಸ್ವಸ್ಥಗೊಂಡಿದ್ದು, ಕೂಡಲೇ ಅವರನ್ನು ಕೆಆರ್ ಪೇಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಮಕ್ಕಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

    ಏಳು ಮಕ್ಕಳನ್ನು ಮುಂಜಾಗ್ರತಾ ಕ್ರಮವಾಗಿ ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಎಲ್ಲರ ಆರೋಗ್ಯದಲ್ಲೂ ಚೇತರಿಕೆ ಕಂಡುಬಂದಿದ್ದು, ಈ ಪ್ರಕರಣದಿಂದಾಗಿ ಪೋಷಕರಲ್ಲಿ ಆತಂಕ ಮೂಡಿದೆ. ಘಟನೆ ನಡೆದ ತಕ್ಷಣ ಬೇಕರಿಗೆ ದೌಡಾಯಿಸಿದ ಅಧಿಕಾರಿಗಳು ಅನಾರೋಗ್ಯಕ್ಕೆ ಕಾರಣವಾದ ಕೇಕ್ ವಶಪಡಿಸಿಕೊಂಡು ತನಿಖೆ ನಡೆಸಿದ್ದಾರೆ.