Tag: ಅಸ್ವಸ್ಥ

  • ವಸತಿ ನಿಲಯದ ಊಟ ಸೇವಿಸಿ 14 ವಿದ್ಯಾರ್ಥಿನಿಯರು ಅಸ್ವಸ್ಥ

    ವಸತಿ ನಿಲಯದ ಊಟ ಸೇವಿಸಿ 14 ವಿದ್ಯಾರ್ಥಿನಿಯರು ಅಸ್ವಸ್ಥ

    ಬೆಳಗಾವಿ: ರಾಮದುರ್ಗದಲ್ಲಿ ವಸತಿ ನಿಲಯದಲ್ಲಿ ಊಟ ಸೇವಿಸಿ 14ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥರಾಗಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಅಸ್ವಸ್ಥರಾಗಿದ್ದ ವಿದ್ಯಾರ್ಥಿಗಳಿಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ರಾಮದುರ್ಗ ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಬಾಲಕಿಯರ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಅಸ್ವಸ್ಥರಾಗಿದ್ದ 14 ವಿದ್ಯಾರ್ಥಿನಿಯರನ್ನು ತಾಲೂಕು ಆಸ್ಪತ್ರೆ, ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅದರಲ್ಲಿ ನಾಲ್ವರು ವಿದ್ಯಾರ್ಥಿನಿಯರಿಗೆ ರಾಮದುರ್ಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಸದ್ಯ ವಿದ್ಯಾರ್ಥಿನಿಯರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ರಾಮದುರ್ಗ ತಹಶಿಲ್ದಾರ್ ಮಾಹಿತಿ ನೀಡಿದ್ದಾರೆ. ಆದರೆ ಹಾಸ್ಟೆಲ್‍ನಲ್ಲಿ ಊಟದ ಅವ್ಯವಸ್ಥೆ ಬಗ್ಗೆ ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಸ್ಟೆಲ್‍ನಲ್ಲಿ ಊಟ ಸರಿಯಾಗಿ ಕೊಡಲ್ಲ. ಗುಣಮಟ್ಟದ ಆಹಾರವನ್ನು ಹಾಸ್ಟೆಲ್ ಸಿಬ್ಬಂದಿ ನೀಡುತ್ತಿಲ್ಲ ಎಂದು ವಿದ್ಯಾರ್ಥಿನಿಯರ ಆರೋಪಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿಯ ಮೂವರು ಯುವತಿಯರು ನಾಪತ್ತೆ!

  • ವ್ಯಾಯಾಮ ಮಾಡಿದ್ದು ಸಾಕು ಎಂದಿದಕ್ಕೆ ತಾಯಿಯನ್ನೇ ಕೊಲೆಗೈದ ಮಗ

    ವ್ಯಾಯಾಮ ಮಾಡಿದ್ದು ಸಾಕು ಎಂದಿದಕ್ಕೆ ತಾಯಿಯನ್ನೇ ಕೊಲೆಗೈದ ಮಗ

    ಹೈದರಾಬಾದ್: ವ್ಯಾಯಾಮ ಮಾಡಿದ್ದು ಸಾಕು ನಿಲ್ಲಿಸು ಎಂದು ಹೇಳಿದ್ದ ತಾಯಿಯನ್ನು ಹೊಡೆದು ಕೊಂದಿರುವ ಘಟನೆ ಹೈದರಾಬಾದ್‍ನ ಸುಲ್ತಾನ್ ಬಜಾರ್‌ನಲ್ಲಿ ನಡೆದಿದೆ.

    24 ವರ್ಷದ ಕೊಂಡಾ ಸುಧೀರ್ ಕುಮಾರ್ ಆರೋಪಿಯಾಗಿದ್ದಾನೆ. ಕೊಂಡಾ ಪಾಪಮ್ಮ ಮೃತ ತಾಯಿ. ಸುಧೀರ್ ಕುಮಾರ್ ಮಾನಸಿಕವಾಗಿ ಸ್ವಲ್ಪ ಮಟ್ಟಿಗೆ ಅಸ್ವಸ್ಥ ಎನ್ನಲಾಗಿದೆ. ತಾಯಿಯನ್ನು ಹೊಡೆದು ಕೊಂದು ಪೊಲೀಸರ ವಶದಲ್ಲಿದ್ದಾನೆ.

    ನಡೇದಿದ್ದೇನು?: ಜನವರಿ 24ರ ತಡರಾತ್ರಿ 2 ಗಂಟೆ ಹೊತ್ತಿಗೆ ವ್ಯಾಯಾಮ ಮಾಡುತ್ತಿದ್ದನು. ತಾಯಿ ಸುಧೀರ್ ಕುಮಾರ್‌ಗೆ ಮಗನನ್ನು ಮಲಗುವಂತೆ ಹೇಳಿದ್ದಾರೆ. ಆದರೆ ಕೋಪಗೊಂಡ ಆತ ಕೈಯಲ್ಲಿ ಹಿಡಿದಿದ್ದ ಡಂಬಲ್ಸ್‌ನಿಂದ ಆಕೆಗೆ ಹೊಡೆದು ಕೊಂದಿದ್ದಾನೆ.

    ಕೊಂಡಾ ಸುಧೀರ್ ಶಿಕ್ಷಣ ಮುಗಿಸಿದ ಬಳಿಕ ಒಂದು ಫುಡ್ ಡೆಲಿವರಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ ವರ್ಷದ ಹಿಂದೆ ಆ ಕೆಲಸವನ್ನೂ ಬಿಟ್ಟು ಮನೆಯಲ್ಲೇ ಇರುತ್ತಿದ್ದ. ಆತನ ಮಾನಸಿಕ ಸ್ಥಿತಿ ಸ್ಥಿಮಿತದಲ್ಲಿಲ್ಲ. ಇತ್ತೀಚೆಗೆ ಕೋಟಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ. ಸುಧೀರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಶೀಘ್ರವೇ ಬಂಧಿಸುತ್ತೇವೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

  • ದೇವಾಲಯದ ಪ್ರಸಾದ ಸೇವಿಸಿ 50ಕ್ಕೂ ಹೆಚ್ಚು ಜನ ಅಸ್ವಸ್ಥ

    ದೇವಾಲಯದ ಪ್ರಸಾದ ಸೇವಿಸಿ 50ಕ್ಕೂ ಹೆಚ್ಚು ಜನ ಅಸ್ವಸ್ಥ

    ಕೋಲಾರ: ದೇವಾಲಯದಲ್ಲಿ ವಿತರಿಸಿದ ಪ್ರಸಾದ ಸೇವಿಸಿ ಭಕ್ತರು ಅಸ್ವಸ್ಥಗೊಂಡ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಬೀಗರಾಯನಹಳ್ಳಿಯಲ್ಲಿ ನಡೆದಿದೆ.

    ಹಳ್ಳಿಯ ಗಂಗಮ್ಮ ದೇವಾಲಯದಲ್ಲಿ ಶನಿವಾರ ಹೊಸ ವರ್ಷಾಚರಣೆಯ ಅಂಗವಾಗಿ ವಿಶೇಷ ಪೂಜೆ ನಡೆದಿತ್ತು. ನಂತರದಲ್ಲಿ ದೇವಾಲಯದ ಆಡಳಿತ ಮಂಡಳಿ ಮಾಡಿಸಿದ ಪ್ರಸಾದವನ್ನು ಭಕ್ತರಿಗೆ ವಿತರಿಸಲಾಗಿದೆ.

    ಪ್ರಸಾದದ ರೂಪದಲ್ಲಿ ಚಿತ್ರಾನ್ನ ಹಾಗೂ ಕೇಸರಿಬಾತ್ ಸೇವಿಸಿದ ಭಕ್ತರು ಅಸ್ವಸ್ಥಗೊಂಡಿದ್ದಾರೆ. 50ಕ್ಕೂ ಹೆಚ್ಚು ಜನರನ್ನು ಶ್ರೀನಿವಾಸಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: 10 ರೂಪಾಯಿ ಕೋಳಿ ಮರಿಗೆ 52 ರೂ. ಟಿಕೆಟ್!

    ಅಸ್ವಸ್ಥತರ ಪೈಕಿ 12 ಜನ ಮಕ್ಕಳು, 30 ಕ್ಕೂ ಹೆಚ್ಚು ಜನ ಪುರುಷರು ಹಾಗೂ ಮಹಿಳೆಯರು ಇದ್ದಾರೆ. ಈಗಾಗಲೇ ಭಕ್ತರು ಗುಣಮುಖರಾಗಿ ಮನೆಗಳತ್ತ ತೆರಳುತ್ತಿದ್ದಾರೆ. ಸ್ಥಳಕ್ಕೆ ಶ್ರೀನಿವಾಸಪುರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮೂರು ತಿಂಗಳ ಬಳಿಕ ಸಾವಿರ ಸೋಂಕು – ಬೆಂಗ್ಳೂರಲ್ಲಿ 810 ಕೇಸ್

  • ನಿಶ್ಚಿತಾರ್ಥದಲ್ಲಿ ಊಟ ಮಾಡಿದ 200ಕ್ಕೂ ಹೆಚ್ಚು ಮಂದಿ ಅಸ್ವಸ್ಥ

    ನಿಶ್ಚಿತಾರ್ಥದಲ್ಲಿ ಊಟ ಮಾಡಿದ 200ಕ್ಕೂ ಹೆಚ್ಚು ಮಂದಿ ಅಸ್ವಸ್ಥ

    ಬೀದರ್: ನಿಶ್ಚಿತಾರ್ಥ ಸಮಾರಂಭದಲ್ಲಿ ಊಟ ಮಾಡಿದ 100ಕ್ಕೂ ಅಧಿಕ ಜನರು ವಾಂತಿ, ಭೇದಿಯಿಂದ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮುಸ್ತಾಪುರ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಮಾರುತಿ ಪಾಟೀಲ ಎಂಬವರ ಮಗಳ ನಿಶ್ಚಿತಾರ್ಥ ಕಾರ್ಯಕ್ರಮ ನಿಮಿತ್ತ ಮಧ್ಯಾಹ್ನ ಸುಮಾರು 2 ಗಂಟೆಗೆ ಊಟ ಮಾಡಿದ ಜನರಿಗೆ ವಾಂತಿ ಭೇದಿ ಶುರುವಾಗಿದ್ದು, ವಾಂತಿ ಭೇದಿಯಿಂದ ಜನರ ಅಸ್ವಸ್ಥರಾಗಿದ್ದಾರೆ. ಬಸವಕಲ್ಯಾಣ ನಗರದ ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಾದ ಪಾಟೀಲ್ ಆಸ್ಪತ್ರೆ, ರಿಫಾ ಆಸ್ಪತ್ರೆ, ಬಿರಾದಾರ್ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಮುಸ್ತಾಪುರ ಗ್ರಾಮದ ಯುವತಿಯನ್ನು ನಾರಾಯಣಪೂರ ಗ್ರಾಮದ ಯುವಕನೊಂದಿಗೆ ಮದುವೆ ಸಂಬಂಧ ನಿಶ್ಚಿತಾರ್ಥ ನಡೆಸಲಾಗುತ್ತಿತ್ತು. ಮುಸ್ತಾಪುರ ಸೇರಿದಂತೆ ಮುಚಳಂಬ, ನಾರಾಯಣಪೂರ ಗ್ರಾಮದಿಂದ ಆಗಮಿಸಿದ ಸಂಬಂಧಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಊಟ ಮಾಡಿದರು. ಸುಮಾರು 600ರಷ್ಟು ಜನ ಊಟ ಮಾಡಿದ್ದು, ಇದರಲ್ಲಿ ಸುಮಾರು 200ಕ್ಕೂ ಅಧಿಕ ಜನರಿಗೆ ವಾಂತಿ, ಭೇದಿ ಶುರುವಾಗಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

    ಅಸ್ವಸ್ಥರಲ್ಲಿ ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಎಲ್ಲಾ ವಯೋಮಾನದ ಜನರಿದ್ದು ಕೆಲವರ ಸ್ಥಿತಿ ಗಂಭೀರವಾಗಿದೆ. ಸುದ್ದಿ ತಿಳಿದು ಬಸವಕಲ್ಯಾಣ ಉಪ ವಿಭಾಗದ ಸಹಾಯಕ ಆಯುಕ್ತ ಭಂವರಸಿಗ್ ಮೀನಾ, ಸಿಪಿಐ ಮಹೇಶಗೌಡ ಪಾಟೀಲ್, ಪಿಎಸ್‍ಐ ಸುನೀಲಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿನೆ ನಡೆಸಿ ಘಟನೆ ಬಗ್ಗೆ ಮಾಹಿತಿ ಪಡೆದರು.

  • ದೇವಸ್ಥಾನದಲ್ಲಿ ಜಾವಳ ಕಾರ್ಯಕ್ರಮದ ಊಟ ಸೇವಿಸಿ 50 ಮಂದಿ ಅಸ್ವಸ್ಥ

    ದೇವಸ್ಥಾನದಲ್ಲಿ ಜಾವಳ ಕಾರ್ಯಕ್ರಮದ ಊಟ ಸೇವಿಸಿ 50 ಮಂದಿ ಅಸ್ವಸ್ಥ

    ಯಾದಗಿರಿ: ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವನೆ ಮಾಡಿ 50 ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಯಾದಗಿರಿಯಲ್ಲಿ ನಡೆದಿದೆ.

    ಜಿಲ್ಲೆಯ ಸುರಪುರ ತಾಲೂಕಿನ ಬೆಂಚಿಗಡ್ಡಿ ಗ್ರಾಮದ ಗವಿರಂಗ ಹನುಮಾನ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಬೆಂಚಿಗಡ್ಡಿ ಗ್ರಾಮದ ಗವಿಯಪ್ಪ ಅವರ ಪುತ್ರನ ಜಾವಳ ಕಾರ್ಯಕ್ರಮ ಭಾನುವಾರ ನಡೆದಿತ್ತು. ಕಾರ್ಯಕ್ರಮಕ್ಕೆ ಬಂದವರಿಗಾಗಿ ಹೊಳಿಗೆ, ಅನ್ನ ಸಾಂಬರ್ ಹೀಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಜಾವಳ ಕಾರ್ಯಕ್ರಮ ಮುಗಿದ ನಂತರ ಊಟ ಬಡಿಸಲಾಯ್ತು. ಆದರೆ ಊಟ ಮಾಡಿದವರೆಲ್ಲರಿಗೂ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ.

    ಇದರಿಂದ ಗಾಬರಿಗೊಂಡ ಸ್ಥಳೀಯರು ಊಟವನ್ನು ಅರ್ಧಕ್ಕೆ ಬಿಟ್ಟು, ಅಸ್ವಸ್ಥಗೊಂಡವರನ್ನು ಕಕ್ಕೇರಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದಾರೆ. ಸದ್ಯ ವೈದ್ಯರು ಅಸ್ವಸ್ಥಗೊಂಡವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

    ಯಾವ ಕಾರಣಕ್ಕಾಗಿ ಈ ರೀತಿಯಾಗಿದೆ ಎಂದು ತಿಳಿದು ಬಂದಿಲ್ಲ. ಆಸ್ಪತ್ರೆಗೆ ಪೊಲೀಸರು ಭೇಟಿ ನೀಡಿ ಈ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ.

  • ಬಿಸಿಯೂಟ ಸೇವನೆ ಶಾಲಾ ಮಕ್ಕಳು ಅಸ್ವಸ್ಥ – ಆಸ್ಪತ್ರೆಗೆ ದಾಖಲು

    ಬಿಸಿಯೂಟ ಸೇವನೆ ಶಾಲಾ ಮಕ್ಕಳು ಅಸ್ವಸ್ಥ – ಆಸ್ಪತ್ರೆಗೆ ದಾಖಲು

    ಬಾಗಲಕೋಟೆ: ಬಿಸಿಯೂಟ ಸೇವಿಸಿ 20 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರನ್ನ ಬೆಳಗಲಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಸರ್ಕಾರಿ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಮಧ್ಯಾಹ್ನದ ಅನ್ನ-ಸಾಂಬರ್ ಬಿಸಿಯೂಟ ಸೇವಿಸಿದ್ರು. ಬಳಿಕ ಬಿಸಿಯೂಟ ಸೇವಿಸಿದ 20ಕ್ಕೂ ಹೆಚ್ಚು ಮಕ್ಕಳಿಗೆ ಹೊಟ್ಟೆನೋವು, ವಾಂತಿ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತ ಶಾಲಾ ಸಿಬ್ಬಂದಿ ಅಸ್ವಸ್ಥಗೊಂಡ ಮಕ್ಕಳನ್ನ ರನ್ನಬೆಳಗಲಿ ಗ್ರಾಮದ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು.

    ನಂತರ ಇನ್ನುಳಿದ ಮಕ್ಕಳಿಗೂ ಹೊಟ್ಟೆನೋವು ಕಾಣಿಕೊಂಡ ಪರಿಣಾಮ, ಬಿಸಿಯೂಟ ಸೇವಿಸಿದ 56 ಶಾಲಾ ಮಕ್ಕಳನ್ನೂ 108 ವಾಹನದ ಮೂಲಕ ಮುಧೋಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸದ್ಯ ಶಾಲೆಯ ಎಲ್ಲ ವಿದ್ಯಾರ್ಥಿಗಳನ್ನು ವೈದ್ಯರು ತಪಾಸಣೆ ಮಾಡಿದ್ದು ಯಾವುದೇ ಅಪಾಯ ಇಲ್ಲ ಎಂದು ಡಿಎಚ್‍ಓ ಅನಂತ್ ದೇಸಾಯಿ ಸ್ಪಷ್ಟಪಡಿಸಿದ್ದಾರೆ. ಆದರೆ ಬಿಯೂಟಕ್ಕೆ ಮಾಡಲಾಗಿದ್ದ ಸಾಂಬರ್ ಗೆ ಬಳಸಿದ ತರಾಕಾರಿಗಳು ಕೊಳೆತಿದ್ದು, ಸಾಂಬರ್ ನಲ್ಲಿ ಹಲ್ಲಿ ಬಿದ್ದು ಈ ಆವಾಂತರಕ್ಕೆ ಕಾರಣವಾಗಿದೆ ಎಂದು ಮಕ್ಕಳ ಪೋಷಕರು ಶಾಲಾ ಸಿಬ್ಬಂದಿಯ ಬೇಜವಾಬ್ದಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಅಲ್ಲದೇ ಇಂತಹ ಬೇಜವಾಬ್ದಾರಿ ಸಿಬ್ಬಂದಿಯ ಮೇಲೆ ಕ್ರಮಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಆಗ್ರಹಿಸಿದರು. ಇತ್ತ ವೈದ್ಯರು ಆಹಾರದಲ್ಲಿ ಕಣ್ತಪ್ಪಿನಿಂದ ಏನೋ ಕಲಬೆರಿಕೆ ಯಾಗಿರೋದು ಮಕ್ಕಳು ಅಸ್ವಸ್ಥಗೊಳ್ಳಲು ಕಾರಣ ಎಂದು ಹೇಳಿದ್ದಾರೆ. ಸ್ಥಳಕ್ಕೆ ಡಿಡಿಪಿಐ ಹಾಗೂ ಮುಧೋಳ ತಹಶೀಲ್ದಾರ್ ಹಾಗೂ ಸಿಪಿಐ ಎಚ್ ಆರ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಎಚ್.ವೈ ಮೇಟಿ ಅಸ್ವಸ್ಥ – ಏರ್ ಅಂಬುಲೆನ್ಸ್ ಮೂಲಕ ಬೆಂಗ್ಳೂರಿಗೆ ರವಾನೆ

    ಎಚ್.ವೈ ಮೇಟಿ ಅಸ್ವಸ್ಥ – ಏರ್ ಅಂಬುಲೆನ್ಸ್ ಮೂಲಕ ಬೆಂಗ್ಳೂರಿಗೆ ರವಾನೆ

    ಬಾಗಲಕೋಟೆ: ಮಾಜಿ ಸಚಿವ ಎಚ್.ವೈ. ಮೇಟಿ ಅವರನ್ನು ಏರ್ ಅಂಬುಲೆನ್ಸ್ ಮೂಲಕ ಬೆಂಗಳೂರಿಗೆ ರವಾನಿಸಲಾಗಿದೆ.

    ಬಾಗಲಕೋಟೆಯ ನವನಗರದ ಹೆಲಿಪ್ಯಾಡ್ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ನವೆಂಬರ್ 25ರಂದು ಎಚ್.ವೈ ಮೇಟಿ ಅವರು ಕಿಡ್ನಿ ಸ್ಟೋನ್ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಕೆಲವು ದಿನಗಳಿಂದ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಸ್ಟೋನ್ ಗಾತ್ರ 60 ಎಂಎಂ ಇದ್ದಿದ್ದರಿಂದ ನೋವು ತಾಳಲಾರದೇ ಮೇಟಿ ತೀವ್ರ ಅಸ್ವಸ್ಥಗೊಂಡಿದ್ದಾರೆ.

    ಆರೋಗ್ಯದಲ್ಲಾದ ಏರುಪೇರಿನಿಂದ ವಿಪರೀತ ಕಫ ಆಗಿದ್ದು, ಮೇಟಿಯವರಿಗೆ ವಾಂತಿ, ಬೇದಿಯೂ ಶುರುವಾಗಿತ್ತು. ಹೀಗಾಗಿ ಮೇಟಿಯವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸುವಂತೆ ಬಾಗಲಕೋಟೆ ವೈದ್ಯರು ಕುಟುಂಬಸ್ಥರಿಗೆ ಸಲಹೆ ನೀಡಿದ್ದರು.

    ವೈದ್ಯರ ಸಲಹೆ ಬೆನ್ನಲ್ಲೇ ಕುಟುಂಬಸ್ಥರು ಏರ್ ಅಂಬುಲೆನ್ಸ್ ಮೂಲಕ ಮೇಟಿ ಅವರನ್ನು ಬೆಂಗಳೂರಿಗೆ ರವಾನಿಸಿದ್ದಾರೆ. ಕಿಡ್ನಿ ಸ್ಟೋನ್‍ನಿಂದ ಮಾಜಿ ಸಚಿವರು ಬಳಲುತ್ತಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

  • ಗೃಹ ಪ್ರವೇಶದ ಆಹಾರ ಸೇವಿಸಿ 40 ಮಂದಿ ಅಸ್ವಸ್ಥ

    ಗೃಹ ಪ್ರವೇಶದ ಆಹಾರ ಸೇವಿಸಿ 40 ಮಂದಿ ಅಸ್ವಸ್ಥ

    ಹಾಸನ: ಜಿಲ್ಲೆಯ ಗುಡ್ಡೇನಹಳ್ಳಿಯಲ್ಲಿ ಭಾನುವಾರ ಗೃಹ ಪ್ರವೇಶ ಆಹಾರ ಸೇವಿಸಿ 40 ಮಂದಿ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ.

    ಭಾನುವಾರ ಗುಡ್ಡೇನಹಳ್ಳಿಯಲ್ಲಿ ಮನೆಯೊಂದರ ಗೃಹ ಪ್ರವೇಶವಿತ್ತು. ಈ ವೇಳೆ ಕಾರ್ಯಕ್ರಮಕ್ಕೆ ಬಂದಿದ್ದ 40 ಮಂದಿ ಅಸ್ವಸ್ಥಗೊಂಡಿದ್ದಾರೆ. ಊಟ ಮಾಡಿದ ಬಳಿಕ ವಾಂತಿ, ಭೇದಿ ಶುರುವಾಗಿ ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿ 40 ಮಂದಿ ಅಸ್ವಸ್ಥಗೊಂಡಿದ್ದಾರೆ.

    40 ಮಂದಿ ಅಸ್ವಸ್ಥಗೊಳ್ಳುತ್ತಿದ್ದಂತೆ ತಕ್ಷಣ ಅವರನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಕಲುಷಿತ ಆಹಾರ ಸೇವನೆಯಿಂದ ಜನರು ಅಸ್ವಸ್ಥರಾಗಿದ್ದಾರೆ ಎಂದು ಶಂಕಿಸಲಾಗಿದೆ. ಇಲ್ಲದಿದ್ದರೆ ಆಹಾರದಲ್ಲಿ ವ್ಯತ್ಯಾಸವಾಗಿ ಹೀಗಾಗಿರಬಹುದಾ? ಯಾರಾದರೂ ಆಹಾರದಲ್ಲಿ ಕಲಬೆರಕೆ ಮಾಡಿರಬಹುದಾ ಎಂಬ ಹತ್ತು ಹಲವು ಅನುಮಾನಗಳು ಹುಟ್ಟಿಕೊಂಡಿವೆ.

  • ಹಾಸ್ಟೆಲ್ ಊಟದಲ್ಲಿ ಹುಳು- 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ

    ಹಾಸ್ಟೆಲ್ ಊಟದಲ್ಲಿ ಹುಳು- 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ

    ವಿಜಯಪುರ: ಕಲುಷಿತ ಆಹಾರ ಸೇವಿಸಿ 20ಕ್ಕೂ ಹೆಚ್ಚು ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥರಾಗಿರುವ ಘಟನೆ ನಗರದ ಬಿಸಿಎಂ(ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ) ಹಾಸ್ಟೆಲ್‍ನಲ್ಲಿ ನಡೆದಿದೆ.

    ನಗರದ ಅಲ್ ಅಮೀನ್ ಬಳಿ ಇರುವ ಬಿಸಿಎಂ ಹಾಸ್ಟೆಲಿನ 20ಕ್ಕೂ ಅಧಿಕ ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದು, 10ಕ್ಕೂ ಅಧಿಕ ವಿದ್ಯಾರ್ಥಿನಿಯರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ. ನಗರದ ವಿವಿಧ ಆಸ್ಪತ್ರೆಗಳಿಗೆ ವಿದ್ಯಾರ್ಥಿನಿಯರನ್ನು ದಾಖಲಿಸಲಾಗಿದೆ.

    5ಕ್ಕೂ ಹೆಚ್ಚು ವಿದ್ಯಾರ್ಥಿನಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಅಡುಗೆಯಲ್ಲಿ ಹುಳುಗಳು ಬಂದಿದ್ದರಿಂದ ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದಾರೆ ಎಂದು ತಿಳಿದು ಬಂದಿದೆ. ವಾಂತಿ-ಭೇದಿ ಕಾಣಿಸಿಕೊಂಡ ಹಿನ್ನೆಲೆ ವಿದ್ಯಾರ್ಥಿನಿಯರು ತೀವ್ರ ಅಸ್ವಸ್ಥರಾಗಿದ್ದು, ವೇದಾಂತ ಖಾಸಗಿ ಆಸ್ಪತ್ರೆಯಲ್ಲಿ 3 ವಿದ್ಯಾರ್ಥಿನಿಯರನ್ನು ದಾಖಲಿಸಲಾಗಿದೆ. 15ಕ್ಕೂ ಅಧಿಕ ವಿದ್ಯಾರ್ಥಿನಿಯರಿಗೆ ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.

  • ಕುಡಿಯುವ ನೀರಿನ ಟ್ಯಾಂಕಿಗೆ ಕಲುಷಿತ ನೀರು ಮಿಶ್ರಣ – 10 ಜನ ಅಸ್ವಸ್ಥ

    ಕುಡಿಯುವ ನೀರಿನ ಟ್ಯಾಂಕಿಗೆ ಕಲುಷಿತ ನೀರು ಮಿಶ್ರಣ – 10 ಜನ ಅಸ್ವಸ್ಥ

    ಬೀದರ್: ಕುಡಿಯುವ ನೀರಿನ ಟ್ಯಾಂಕ್‍ಗೆ ಮಿಶ್ರಣಗೊಂಡ ಕಲುಷಿತ ನೀರನ್ನು ಕುಡಿದ 10 ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ಚಳಕಾಪೂರ್ ಗ್ರಾಮದಲ್ಲಿ ಇಂದು ನಡೆದಿದೆ.

    ಗ್ರಾಮದ ಚರಂಡಿ ನೀರು ಟ್ಯಾಂಕ್‍ಗೆ ಸಂಪರ್ಕವಿರುವ ಬೋರ್‍ವೆಲ್ ಒಳಗೆ ಮಿಶ್ರಣವಾಗಿದ್ದು, ಈ ನೀರು ಕುಡಿದ ಗ್ರಾಮದ 10ಕ್ಕೂ ಹೆಚ್ಚು ಜನ ವಾಂತಿ, ಭೇದಿಯಾಗಿ ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥಗೊಂಡವರನ್ನು ಬ್ರಿಮ್ಸ್ ಹಾಗೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಗ್ರಾಮದ ಜನರು ಕಲುಷಿತ ನೀರು ಕುಡಿಯಲು ಗ್ರಾಮ ಪಂಚಾಯತಿ ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣವಾಗಿದ್ದು, ಚರಂಡಿ ನೀರು ಸೇರಿದಂತೆ ಯಾವುದನ್ನು ಸ್ವಚ್ಛ ಮಾಡದ ಹಿನ್ನಲೆಯಲ್ಲಿ ಕುಡಿಯುವ ನೀರಿಗೆ ಕಲುಷಿತ ನೀರು ಮಿಶ್ರಣವಾಗಿದೆ. ಇದರಿಂದ ಜನರು ಅಸ್ವಸ್ಥಗೊಂಡದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.