Tag: ಅಸಾದುದ್ದಿನ್ ಓವೈಸಿ

  • ಓವೈಸಿ, ಮುಫ್ತಿ ಮತ್ತೊಮ್ಮೆ ಇತಿಹಾಸ ಓದಲಿ: ಕೇಂದ್ರ ಸಚಿವೆ

    ಓವೈಸಿ, ಮುಫ್ತಿ ಮತ್ತೊಮ್ಮೆ ಇತಿಹಾಸ ಓದಲಿ: ಕೇಂದ್ರ ಸಚಿವೆ

    ನವದೆಹಲಿ: ಎಐಎಮ್‍ಐಎಮ್ ಮುಖ್ಯಸ್ಥ ಅಸಾದುದ್ದಿನ್ ಓವೈಸಿ ಹಾಗೂ ಜಮ್ಮು- ಕಾಶ್ಮೀರದ ಮೆಹಬೂಬಾ ಮುಫ್ತಿ ಅವರು ಇತಿಹಾಸವನ್ನು ಮತ್ತೊಮ್ಮೆ ಓದಬೇಕು ಎಂದು ಸಲಹೆ ನೀಡುತ್ತೇನೆ ಎಂದು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಫ್ತಿ ಹಾಗೂ ಓವೈಸಿ ಅವರು ಶಾಂತಿ ಮತ್ತು ಸಹೋದರತ್ವವನ್ನು ಕಾಪಾಡಬೇಕು. ಇದರ ಜೊತೆಗೆ ಸಮಾಜಕ್ಕೆ ಧಕ್ಕೆ ತರುವ ಯಾವುದೇ ಕೆಲಸವನ್ನು ಮಾಡಬಾರದು ಎಂದು ಮನವಿ ಮಾಡಿದರು.

    ಜ್ಞಾನವಾಪಿ ಮಸೀದಿಯ ವಿಷಯ ನ್ಯಾಯಾಲಯದಲ್ಲಿದೆ. ಈ ಬಗ್ಗೆ ಅವರು ಮಧ್ಯ ಪ್ರವೇಶಿಸಬಾರದು. ಜೊತೆಗೆ ಸಮಾಜಕ್ಕೆ ಧಕ್ಕೆಯನ್ನು ತರಬಾರದು ಎಂದರು.

    ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಸರ್ವೇ ಕಾರ್ಯದ ವೇಳೆ ಮಸೀದಿಯ ಬಾವಿಯೊಳಗೆ 12 ಅಡಿ, 8 ಇಂಚಿನ ಶಿವಲಿಂಗ ಪತ್ತೆಯಾದ ಹಿನ್ನೆಲೆಯಲ್ಲೇ ಓವೈಸಿ ಹಾಗೂ ಮೆಹಬೂಬಾ ಮುಫ್ತಿ ಟೀಕಿಸಿದ್ದರು. ಇದನ್ನೂ ಓದಿ: ಭಾರೀ ಮಳೆಗೆ ಕೊಚ್ಚಿ ಹೋಯ್ತು ಸೇತುವೆ, ಕುಸಿಯಿತು ರಸ್ತೆ

    ನ್ಯಾಯಾಲಯದ ಆದೇಶವನ್ನು ಟೀಕಿಸಿದ್ದ ಓವೈಸಿ, ಡಿಸೆಂಬರ್ 1949ರಲ್ಲಿ ಬಾಬರಿ ಮಸೀದಿಯಲ್ಲಿ ಪಠ್ಯಪುಸ್ತಕ ಪುನರಾವರ್ತನೆ ಆಗಿದೆ. ಈ ಆದೇಶವು ಮಸೀದಿಯ ಧಾರ್ಮಿಕ ಸ್ವರೂಪವನ್ನು ಬದಲಾಯಿಸುತ್ತದೆ. ಇದು ಆರಾಧನ ಸ್ಥಳ (1991 ಕಾಯಿದೆ) ಕಾಯಿದೆ ಉಲ್ಲಂಘನೆಯಾಗಿದೆ. ಇದು ನನ್ನ ಆತಂಕವಾಗಿತ್ತು ಮತ್ತು ಇದು ನಿಜವಾಗಿದೆ. ಜ್ಞಾನವಾಪಿ ಮಸೀದಿಯು ಮಸೀದಿಯಾಗಿತ್ತು. ಮಸೀದಿಯಾಗಿಯೇ ಉಳಿಯುತ್ತದೆ ಎಂದಿದ್ದರು. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ವಿವಾದ – ಇಂದು ಸುಪ್ರೀಂ ಕೋರ್ಟ್ ವಿಚಾರಣೆ

  • ದೇಶ ವಿಭಜನೆಗೆ ಅಂದಿನ ಕಾಂಗ್ರೆಸ್ ನಾಯಕರೇ ಕಾರಣ: ಓವೈಸಿ

    ದೇಶ ವಿಭಜನೆಗೆ ಅಂದಿನ ಕಾಂಗ್ರೆಸ್ ನಾಯಕರೇ ಕಾರಣ: ಓವೈಸಿ

    ಲಕ್ನೋ: ದೇಶ ವಿಭಜನೆ ಮುಸ್ಲಿಮರಿಂದ ಅಲ್ಲ, ಬದಲಿಗೆ ಮೊಹಮ್ಮದ್ ಜಿನ್ನಾ ಅವರಿಂದ ಆಗಿದೆ. ದೇಶ ವಿಭಜನೆಗೆ ಅಲ್ಲಿನ ಕಾಂಗ್ರೆಸ್ ಹಾಗೂ ಆ ಸಮಯದಲ್ಲಿದ್ದ ನಾಯಕರೇ ಕಾರಣರಾಗಿದ್ದಾರೆ ಎಂದು ಎಂಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

    ಭಾರತೀಯ ಸಮಾಜ ಪಕ್ಷದ ಮುಖ್ಯಸ್ಥ ಸುಹೇಲ್‍ದೇವ್ ಹೇಳಿಕೆಗೆ ಮೊರದಬಾದ್‍ನಲ್ಲಿ ನಡೆದ ಸಾರ್ವಜನಿಕ ರ‍್ಯಾಲಿಯಲ್ಲಿ ಮಾತನಾಡುತ್ತಾ ಓವೈಸಿ ಟೀಕೆ ವ್ಯಕ್ತಪಡಿಸಿದ್ದಾರೆ. ಇತಿಹಾಸವನ್ನು ಓದದ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಭಾರತೀಯ ಜನತಾ ಪಕ್ಷ ಮತ್ತು ಸಮಾಜವಾದಿ ಪಕ್ಷದವರಿಗೆ ನಾನು ಸವಾಲು ಹಾಕುತ್ತೇನೆ.

    ಮುಸ್ಲಿಮರಿಂದ ಅಲ್ಲ ಜಿನ್ನಾ ಅವರಿಂದಾಗಿ ದೇಶ ವಿಭಜನೆ ಆಗಿದೆ. ಆ ಸಮಯದಲ್ಲಿ ಕೇವಲ ಮುಸ್ಲಿಮರು ಹಾಗೂ ನವಾಬರು ಮಾತ್ರವೇ ಜಿನ್ನಾ ಅವರಿಗೆ ಮತವನ್ನು ನೀಡಬಹುದಿತ್ತು. ಆ ಸಮಯದಲ್ಲಿ ಗೆದ್ದ ಕಾಂಗ್ರೆಸ್ ನಾಯಕರೇ ವಿಭಜನೆಗೆ ಕಾರಣರಾಗಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪೇಂಟಿಂಗ್‌ ಕೆಲಸಕ್ಕೆ ಬಂದು ಬೀಗ ಹಾಕಿದ ಮನೆಗಳಲ್ಲಿ ಕಳ್ಳತನ- ಖತರ್ನಾಕ್‌ ಕಳ್ಳ ಅಂದರ್‌!

    ಸುಹೇಲ್‍ದೇವ್ ಹೇಳಿದ್ದೇನು..?
    ಬುಧವಾರ ವಾರಣಾಸಿಯಲ್ಲಿ ಮಾತನಾಡಿದ್ದ ಸುಹೇಲ್‍ದೇವ್, ಜಿನ್ನಾ ಅವರನ್ನು ಮೊದಲ ಪ್ರಧಾನಿಯನ್ನಾಗಿ ಮಾಡಿದ್ದರೆ ದೇಶ ವಿಭಜನೆಯಾಗುತ್ತಿರಲಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಗೆ ಓವೈಸಿ ಮೊರದಾಬಾದ್‍ನಲ್ಲಿ ನಡೆದ ಸಾರ್ವಜನಿಕ ರ‍್ಯಾಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

  • ಓವೈಸಿಗೆ ಹಾಕುವ ಪ್ರತಿಯೊಂದು ಮತ ದೇಶದ ವಿರುದ್ಧ – ಹೈದರಾಬಾದ್‍ನಲ್ಲಿ ತೇಜಸ್ವಿ ಘರ್ಜನೆ

    ಓವೈಸಿಗೆ ಹಾಕುವ ಪ್ರತಿಯೊಂದು ಮತ ದೇಶದ ವಿರುದ್ಧ – ಹೈದರಾಬಾದ್‍ನಲ್ಲಿ ತೇಜಸ್ವಿ ಘರ್ಜನೆ

    ಹೈದರಾಬಾದ್: ಅಸಾದುದ್ದಿನ್ ಓವೈಸಿ ಮೊಹಮ್ಮದ್ ಅಲಿ ಜಿನ್ನಾನ ಅವತಾರವಾಗಿದ್ದು, ಅವರ ಪಕ್ಷಕ್ಕೆ ಹಾಕುವ ಪ್ರತಿಯೊಂದು ಮತ ದೇಶದ ವಿರುದ್ಧವಾಗಿದೆ ಎಂದು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಗುಡುಗಿದ್ದಾರೆ.

    ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಗುಡುಗಿದ್ದ ತೇಜಸ್ವಿ ಸೂರ್ಯ, ಇದೀಗ ಹೈದಾರಾಬಾದ್‍ನಲ್ಲಿ ಅಸಾದುದ್ದಿನ್ ಓವೈಸಿ ವಿರುದ್ಧ ಹರಿಹಾಯ್ದಿದ್ದಾರೆ. ಮುಂದಿನ ತಿಂಗಳು ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ ಇರುವ ಹಿನ್ನೆಲೆ ಬಿಜೆಪಿ ಪರ ತೇಜಸ್ವಿ ಸೂರ್ಯ ಪ್ರಚಾರ ನಡೆಸುತ್ತಿದ್ದಾರೆ.

    ಸದಾ ವಿಭಜನೆಯ ಹಾಗೂ ವಿವಾದಾತ್ಮಕ ಹೇಳಿಕೆ ನೀಡುವ ಅಸಾದುದ್ದಿನ್ ಓವೈಸಿ ವಿರುದ್ಧ ಗುಡುಗಿರುವ ತೇಜಸ್ವಿ ಸೂರ್ಯ, ಅವರಿಗೆ ಹಾಕುವ ಪ್ರತಿಯೊಂದು ಮತ ದೇಶದ ವಿರುದ್ಧವಾಗಿದೆ ಎಂದಿದ್ದಾರೆ. ಅಸಾದುದ್ದಿನ್ ಓವೈಸಿ ಹಾಗೂ ಸಹೋದರ ಅಕ್ಬರುದ್ದಿನ್ ಓವೈಸಿ ವಿಭಜನೆ ಹಾಗೂ ಕೋಮುವಾದಿ ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ಅಭಿವೃದ್ಧಿ ಬೇಕಾಗಿಲ್ಲ. ಬದಲಿಗೆ ರೊಹಿಂಗ್ಯಾ ಮುಸ್ಲಿಮರಿಗೆ ಮಾತ್ರ ಆಶ್ರಯ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.

    ನೀವು ಇಲ್ಲಿ ಓವೈಸಿಗೆ ಮತ ಹಾಕಿದರೆ ಮುಂದೆ ಅವರು ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಮುಸ್ಲಿಂ ಪ್ರದೇಶಗಳಲ್ಲಿ ಬಲಶಾಲಿಯಾಗುತ್ತಾರೆ. ಓವೈಸಿ ಜಿನ್ನಾನ ಹೊಸ ಅವತಾರ. ಹೀಗಾಗಿ ಅವರನ್ನು ಸೋಲಿಸಲೇಬೇಕು. ನೀವು ಬಿಜೆಪಿಗೆ ಹಾಕುವ ಪ್ರತಿ ಮತ ಭಾರತ, ಹಿಂದುತ್ವಕ್ಕೆ, ಇದರಿಂದ ದೇಶ ಬಲಗೊಳ್ಳಲಿದೆ ಎಂದು ಕರೆ ನೀಡಿದರು.

    ಇದು ನಿಜಾಮರ ಕಾಲಾವಧಿಯಲ್ಲ ಎಂಬುದನ್ನು ನಾನು ಅಸಾದುದ್ದಿನ್ ಹಾಗೂ ಅಕ್ಬರುದ್ದಿನ್ ಅವರಿಗೆ ತಿಳಿಸಲು ಬಯಸುತ್ತೇನೆ. ಇದು ಹಿಂದೂ ಹೃದಯ ಸಾಮ್ರಾಟರಾದ ಪ್ರಧಾನಿ ನರೇಂದ್ರ ಮೋದಿಯವರ ಕಾಲಾವಧಿ. ನೀವಿಲ್ಲಿ ಏನೂ ಅಲ್ಲ ಎಂದು ಕಿಡಿಕಾರಿದರು.

    ಪ್ರಚಾರದುದ್ದಕ್ಕೂ ಹೈದರಾಬಾದ್‍ಗೆ ಭಾಗ್ಯ ನಗರವೆಂದೇ ಸಂಬೋಧಿಸಿದ ತೇಜಸ್ವಿ, ಹೈದರಾಬಾದ್‍ನ್ನು ಭಾಗ್ಯಾನಗರವಾಗಿ ಬದಲಿಸಬೇಕಿದೆ ಎಂದರು. ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾಪೋರೇಷನ್ ಚುನಾವಣೆ ಡಿಸೆಂಬರ್ 1ರಂದು ನಡೆಯುತ್ತಿದ್ದು, ಇದು ದಕ್ಷಿಣ ಭಾರತದ ಗೇಟ್‍ವೇಯಾಗಿದೆ. ಹೀಗಾಗಿ ಇಂದು ಹೈದರಾಬಾದನ್ನು ಬದಲಿಸೋಣ, ನಾಳೆ ತೆಲಂಗಾಣ, ನಾಡಿದ್ದು ದಕ್ಷಿಣ ಭಾರತವನ್ನು ಬದಲಿಸೋಣ. ಹೈದರಾಬಾದ್ ಚುನಾವಣೆಯನ್ನು ಇಡೀ ದೇಶವೇ ಬೆರಗುಗಣ್ಣಿನಿಂದ ನೋಡುತ್ತಿದೆ ಎಂದರು.

  • ಬಿಹಾರದಲ್ಲಿ ಕ್ಲಿಕ್, ಪಶ್ಚಿಮ ಬಂಗಾಳದಲ್ಲೂ ಸ್ಪರ್ಧೆ – ಕಾಂಗ್ರೆಸ್‍ಗೆ ಓವೈಸಿ ತಿರುಗೇಟು

    ಬಿಹಾರದಲ್ಲಿ ಕ್ಲಿಕ್, ಪಶ್ಚಿಮ ಬಂಗಾಳದಲ್ಲೂ ಸ್ಪರ್ಧೆ – ಕಾಂಗ್ರೆಸ್‍ಗೆ ಓವೈಸಿ ತಿರುಗೇಟು

    – ಮಹಾರಾಷ್ಟ್ರದಲ್ಲಿ ನೀವು ಶಿವಸೇನೆಯ ತೊಡೆಯ ಮೇಲೆ ಕುಳಿತುಕೊಳ್ಳಬಹುದು
    – ನಾವು ಏಕಾಂಗಿಯಾಗಿ ಸ್ಪರ್ಧಿಸಿದರೆ ನಿಮಗೆ ಏನು ಕಷ್ಟ?

    ಹೈದರಾಬಾದ್: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‍ಡಿಎ ಮೈತ್ರಿ ಕೂಟ ಬಹುಮತ ಸಾಧಿಸುವ ಮೂಲಕ ಅಧಿಕಾರದ ಗದ್ದುಗೆ ಏರಿದೆ. ಆದರೆ ಅಸಾದುದ್ದಿನ್ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷ 5 ಸ್ಥಾನಗಳಲ್ಲಿ ಜಯಗಳಿಸಿ ಕಾಂಗ್ರೆಸ್ ನಾಯಕರ ಹುಬ್ಬೇರುವಂತೆ ಮಾಡಿದೆ.

    ಬಿಹಾರ ಯಶಸ್ಸಿನ ಹಿನ್ನೆಲೆಯಲ್ಲಿ ಮಾತನಾಡಿರುವ ಓವೈಸಿ, ಮುಂದೆ ದೇಶದ ವಿವಿಧ ರಾಜ್ಯಗಳ ಚುನಾವಣೆಯಲ್ಲಿ ಸ್ಪರ್ಧಿಸಲು ನಾವು ತೀರ್ಮಾನಿಸಿದ್ದೇವೆ. ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಹಾಕುವುದಾಗಿ ತಿಳಿಸಿದ್ದಾರೆ.

    ಈ ಕುರಿತು ಅಸಾದುದ್ದಿನ್ ಓವೈಸಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಬಿಹಾರದ ಸೀಮಾಂಚಲ್ ಪ್ರದೇಶದಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ. ಬಿಹಾರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಎಐಎಂಐಎಂ ಪಕ್ಷ ಬಿಜೆಪಿ ವಿರೋಧಿ ಮತಗಳನ್ನು ಒಡೆದಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ನಾವು ರಾಜಕೀಯ ಪಕ್ಷವನ್ನು ನಡೆಸುತ್ತಿದ್ದೇವೆ. ಹೀಗಾಗಿ ನಮ್ಮ ಸ್ವಂತ ಬಲದಿಂದ ಚುನಾವಣೆಯನ್ನು ಎದುರಿಸುವುದೇ ಸರಿ ಎಂದು ಅಸಾದುದ್ದೀನ್ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಎನ್‍ಡಿಎ ಮೈತ್ರಿಕೂಟಕ್ಕೆ ಮತ್ತೆ ಬಿಹಾರ – ನಿತೀಶ್‍ಗೆ ಒಲಿದ ಸಿಎಂ ಪಟ್ಟ

    ನೀವು ಮಹಾರಾಷ್ಟ್ರದಲ್ಲಿ ಶಿವಸೇನೆ ತೊಡೆಯ ಮೇಲೆ ಹೋಗಿ ಕುಳಿತುಕೊಳ್ಳಬಹುದು. ಆದರೆ ನಾವು ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಬಾರದೆ ಎಂದು ಕಾಂಗ್ರೆಸ್‍ನ್ನು ಪ್ರಶ್ನಿಸಿದ್ದಾರೆ. ಚುನಾವಣೆಯಲ್ಲಿ ನೀವು ಯಾಕೆ ಸ್ಪರ್ಧಿಸುತ್ತೀರಿ ಎಂದು ಯಾರಾದರೂ ಕೇಳಿದಿರಾ, ಇಲ್ಲ. ನಾವು ಪಶ್ಚಿಮ ಬಂಗಾಳದಲ್ಲೂ ಸ್ಪರ್ಧಿಸುತ್ತೇವೆ. ಉತ್ತರ ಪ್ರದೇಶದಲ್ಲೂ ಸ್ಪರ್ಧಿಸುತ್ತೇವೆ. ಅಲ್ಲದೆ ದೇಶದ ಪ್ರತಿ ಚುನಾವಣೆಯಲ್ಲಿಯೂ ನಾವು ಸ್ಪರ್ಧೆ ಮಾಡುತ್ತೇವೆ ಎಂದು ಓವೈಸಿ ತಿಳಿಸಿದ್ದಾರೆ.

    ನಾನು ಚುನಾವಣೆಗೆ ಸ್ಪರ್ಧಿಸಲು ಯಾರದ್ದಾದರೂ ಅಪ್ಪಣೆ ಪಡೆಯಬೇಕೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಇತರ ರಾಜ್ಯಗಳಲ್ಲಿ ಮೈತ್ರಿ ಮಾಡಿಕೊಂಡು ಸ್ಪರ್ಧಿಸುತ್ತಿರಾ ಅಥವಾ ಕೇವಲ ನಿಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೀರಾ ಎಂಬ ಪ್ರಶ್ನೆಗೆ ಅವರು ಉತ್ತರಿಸಲಿಲ್ಲ. 2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಎಐಎಂಐಎಂ ಸ್ಪರ್ಧಿಸಲಿದೆ. ಯಾರ ಜೊತೆಗೆ ಮೈತ್ರಿ ಮಾಡಿಕೊಳ್ಳುತ್ತೇವೆ ಎಂಬುದನ್ನು ಸಮಯ ಬಂದಾಗ ತಿಳಿಸುತ್ತೇನೆ ಎಂದು ಉತ್ತರಿಸಿದರು. ಇದನ್ನೂ ಓದಿ: ಮಹಿಳೆಯರಿಂದ ಬಿಹಾರ ಲೆಕ್ಕಾಚಾರ ಉಲ್ಟಾ – ಮತ್ತೆ ಅಧಿಕಾರಕ್ಕೆ ಎನ್‍ಡಿಎ

    ಎಐಎಂಐಎಂ ಬಿಹಾರ ಚುನಾವಣೆಯಲ್ಲಿ ‘ವೋಟ್ ಕಟ್ಟರ್’ ಆಗಿದೆ ಎಂದು ಹೇಳಿಕೆ ನೀಡಿದ್ದ ಪಶ್ಚಿಮ ಬಂಗಾಳ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿಕೆಗೆ ತಿರುಗೇಟು ನೀಡಿದ ಓವೈಸಿ, ಮುಸ್ಲಿಮರ ಕಲ್ಯಾಣಕ್ಕಾಗಿ ನಿಮ್ಮ ಕ್ಷೇತ್ರದಲ್ಲಿ ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಅಧೀರ್ ರಂಜನ್ ಚೌಧರಿ, ನನ್ನ ಕ್ಷೇತ್ರದಲ್ಲಿನ ಮುಸ್ಲಿಮರ ಸ್ಥಿತಿ ಏನಾಗಿದೆ, ಚೆನ್ನಾಗಿಯೇ ಇದೆ ಎಂದು ಉತ್ತರಿಸಿದ್ದಾರೆ.

    ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಅಸಾದುದ್ದೀನ್ ಹಾಗೂ ಎಐಎಂಐಎಂ ಬಿಜೆಪಿಯ ಬಿ-ಟೀಮ್ ಎಂದು ಆರೋಪಿಸಿವೆ. ಬಿಹಾರ ಚುನಾವಣೆಗಳಲ್ಲಿ ಆರ್‍ಜೆಡಿ ನೇತೃತ್ವದ ಮಹಾಘಟಬಂಧನ್ ಮತಗಳನ್ನು ಕಡಿತಗೊಳಿಸಿದೆ ಎಂದು ಕಿಡಿಕಾರಿವೆ. ಬಿಹಾರ ಚುನಾವಣೆಯಲ್ಲಿ ಒಟ್ಟು 20 ಕ್ಷೇತ್ರಗಳಲ್ಲಿ ಎಐಎಂಐಎಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿತ್ತು. ಇದರಲ್ಲಿ ಐದು ಸ್ಥಾನಗಳಲ್ಲಿ ಪಕ್ಷ ಜಯಗಳಿಸಿದ್ದು ಕಾಂಗ್ರೆಸ್ಸಿಗೆ ನುಂಗಲಾರದ ತುತ್ತಾಗಿದೆ.

  • ಬೀದರ್‌ಗೆ ಸಂಸದ ಓವೈಸಿ ಭೇಟಿ

    ಬೀದರ್‌ಗೆ ಸಂಸದ ಓವೈಸಿ ಭೇಟಿ

    ಬೀದರ್: ಹೈದರಾಬಾದ್‍ನ ಸಂಸದ ಮತ್ತು ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದಿನ್ ಓವೈಸಿ ಇಂದು ಬೀದರ್‌ಗೆ ಭೇಟಿ ನೀಡಿದ್ದಾರೆ.

    ಶಾಲೆಯೊಂದರಲ್ಲಿ ನಾಟಕವನ್ನು ಮಾಡುವ ಮೂಲಕ ಪ್ರಧಾನಿ ಮೋದಿ ಅವರಿಗೆ ಅವಮಾನ ಮಾಡಲಾಗಿದೆ ಎಂದು ಬೀದರ್ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಈ ವಿಷಯ ತಿಳಿದ ಸಂಸದ ಅಸಾದುದ್ದಿನ್ ಓವೈಸಿ ಇಂದು ಬೀದರ್‍ಗೆ ಭೇಟಿ ನೀಡಿ, ಎಸ್‍ಪಿ ಟಿ ಶ್ರೀಧರ್‍ರನ್ನು ಭೇಟಿ ಮಾಡಿ ಪ್ರಕರಣ ಬಗ್ಗೆ ಮಾಹಿತಿ ಪಡೆದುಕೊಂಡರು.

    ಇದಾದ ಬಳಿಕ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದ ಓವೈಸಿ ಪ್ರಕರಣದಲ್ಲಿ ಬಂಧನವಾಗಿರುವ ಇಬ್ಬರನ್ನು ಭೇಟಿ ಮಾಡಿ ಮಾಹಿತಿ ಕಲೆಹಾಕಿದರು. ಭೇಟಿ ಬಳಿಕ ಟ್ವೀಟ್ ಮಾಡಿರುವ ಸಂಸದ ಓವೈಸಿ ದೇಶದ್ರೋಹ ಪ್ರಕರಣ ದಾಖಲಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇಂದು ನಾನು ಬೀದರ್ ಎಸ್‍ಪಿ ಅವರನ್ನು ಭೇಟಿ ಮಾಡಿದೆ. ಶಾಲೆಯಲ್ಲಿ ನಾಟಕ ಮಾಡಿದಕ್ಕೆ ಬಂಧಿಸಿ, ದೇಶದ್ರೋಹದ ಆರೋಪ ಮಾಡಿರುವುದನ್ನು ನಾವು ಬಲವಾಗಿ ಆಕ್ಷೇಪಿಸಿದ್ದೇವೆ.

    ಈ ಪ್ರಕರಣ ತನಿಖೆಯಲ್ಲಿದೆ ಮತ್ತು ದೇಶದ್ರೋಹ ಎಂಬುದನ್ನು ತನಿಖೆ ನಂತರ ತೆಗೆದುಹಾಕಬಹುದು ಎಂದು ಎಸ್‍ಪಿ ಅವರು ಹೇಳಿದ್ದಾರೆ. ಆದರೆ ಈ ಮಹಿಳೆಯರು ಸ್ಥಳೀಯ ನಿವಾಸಿಗಳಾಗಿದ್ದರಿಂದ ಅವರನ್ನು ಬಂಧಿಸುವ ಮೊದಲು ಇದನ್ನು ಮಾಡಬೇಕು ಎಂಬುದು ನನ್ನ ವಾದ ಮತ್ತು ಶಾಲೆಯಲ್ಲಿ ನಾಟಕ ಮಾಡುವುದು ಹೇಗೆ ಅಪರಾಧವಾಗುತ್ತದೆ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

    ಏನಿದು ಪ್ರಕರಣ?
    ಜನವರಿ 23 ರಂದು ಪ್ರತಿಷ್ಠಿತ ಶಾಹೀನ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ವಿದ್ಯಾರ್ಥಿಗಳಿಂದ ನಾಟಕ ಮಾಡಿಸುವ ಮೂಲಕ ಪ್ರಧಾನಿಗೆ ಅವಮಾನ ಮಾಡಲಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿ ದೇಶಾದ್ಯಂತ ಬಾರಿ ಸುದ್ದಿಯಾದ ಬಳಿಕ ಬಿಜೆಪಿಯ ಯುವ ಮೋರ್ಚಾ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದಾದ ಬಳಿಕ ಪೊಲೀಸರು ತನಿಖೆ ಮಾಡಿ ಸಂಸ್ಥೆಯ ಮುಖ್ಯ ಶಿಕ್ಷಕಿ ಫರಿನಾಭಾನು ಹಾಗೂ ವಿದ್ಯಾರ್ಥಿಯ ತಾಯಿ ನಶೀಮಾ ಎಂಬವರನ್ನು ಪೊಲೀಸರು ಬಂಧಿಸಿದ್ದರು.

  • ಪೌರತ್ವ ತಿದ್ದುಪಡಿ ಮಸೂದೆಯ ಪ್ರತಿ ಹರಿದು ಹಾಕಿದ ಓವೈಸಿ

    ಪೌರತ್ವ ತಿದ್ದುಪಡಿ ಮಸೂದೆಯ ಪ್ರತಿ ಹರಿದು ಹಾಕಿದ ಓವೈಸಿ

    ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆಯನ್ನು ಸೋಮವಾರ ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಮಂಡಿಸಿದ್ದು, ಪಾಸ್ ಸಹ ಆಗಿದೆ. ಆದರೆ ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಭಾರೀ ಗದ್ದಲ ಎಬ್ಬಿಸಿದ್ದು, ಎಐಎಂಐಎಂ ನಾಯಕ ಅಸಾದುದ್ದಿನ್ ಓವೈಸಿ ಮಸೂದೆಯ ಪ್ರತಿಯನ್ನೇ ಹರಿದು ಹಾಕುವ ಮೂಲಕ ತೀವ್ರ ಚರ್ಚೆಗೆ ಕಾರಣರಾಗಿದ್ದಾರೆ.

    ಗೃಹ ಸಚಿವರು ಲೋಕಸಭೆಯಲ್ಲಿ ಮಸೂದೆ ಮಂಡಿಸುತ್ತಿದ್ದಂತೆ ವಿರೋಧ ಪಕ್ಷಗಳು ಕೋಲಾಹಲ ಎಬ್ಬಿಸಿವೆ. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಲೋಕಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಮಸೂದೆಯ ಪ್ರತಿಯನ್ನು ಹರಿದು ಹಾಕಿದ್ದಾರೆ. ಈ ಮಸೂದೆಯ ಮೂಲಕ ಭಾರತವನ್ನು ವಿಭಾಗಿಸಲಾಗುತ್ತಿದೆ. ಹೀಗಾಗಿ ಈ ಮಸೂದೆಯನ್ನು ನಾನು ಹರಿದು ಹಾಕುತ್ತೇನೆ. ಇದು ಎರಡನೇ ವಿಭಜನೆಯಾಗಿದೆ ಎಂದು ಕಿಡಿಕಾರಿದ್ದಾರೆ.

    ಇತ್ತ ಈಶ್ವಾನ್ಯ ರಾಜ್ಯಗಳಲ್ಲಿಯೂ ಸಹ ಈ ಕುರಿತು ಜನಾಕ್ರೋಶ ಹೆಚ್ಚಾಗುತ್ತಿದೆ. ಅಕ್ರಮ ವಲಸಿಗರನ್ನು ಧಾರ್ಮಿಕ ಆಧಾರದ ಮೇಲೆ ಹೊರತಾಗಿಯೂ ಗಡಿಪಾರು ಮಾಡುವ 1985ರ ಅಸ್ಸಾಂ ಒಪ್ಪಂದವನ್ನು ರದ್ದುಗೊಳಿಸಿ, ಮಸೂದೆಯನ್ನು ಅಂಗೀಕಾರ ಮಾಡಲಾಗುತ್ತಿದೆ ಎಂದು ಈಶಾನ್ಯ ರಾಜ್ಯಗಳಲ್ಲಿ ವಿದ್ಯಾರ್ಥಿ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.

    ಮಸೂದೆ ಕುರಿತು ಈಶಾನ್ಯ ರಾಜ್ಯಗಳಲ್ಲಿನ ಬಹುತೇಕ ಜನ ವಿರೋಧ ವ್ಯಕ್ತಪಡಿಸಿದ್ದು, ಪ್ರತಿಭಟನೆ ನಡೆಸುತ್ತಿದ್ದಾರೆ. ಆರು ದಶಕಗಳ ಹಳೆಯ ಪೌರತ್ವ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದ್ದು, ಬಾಂಗ್ಲಾದೇಶ, ಅಫ್ಘಾನಿಸ್ಥಾನ ಹಾಗೂ ಪಾಕಿಸ್ತಾನದ ಮುಸ್ಲಿಮೇತರರಿಗೆ ಭಾರತೀಯ ಪೌರತ್ವ ನೀಡುವುದು ತಿದ್ದುಪಡಿಯ ಉದ್ದೇಶವಾಗಿದೆ.

    ಭಾರೀ ಚರ್ಚೆಗೆ ಕಾರಣವಾಗಿದ್ದ ಪೌರತ್ವ ತಿದ್ದುಪಡಿ ಮಸೂದೆಯು 293 ಮತಗಳಿಂದ ಲೋಕಸಭೆಯಲ್ಲಿ ಪಾಸ್ ಆಗಿದೆ. ಲೋಕಸಭೆಯಲ್ಲಿ ಸೋಮವಾರ ನಡೆದ ಪೌರತ್ವ ತಿದ್ದುಪಡಿ ಮಸೂದೆ ಚರ್ಚೆ ನಡೆಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಸೂದೆಯನ್ನು ಸದನದಲ್ಲಿ ಮಂಡಿಸಿ ಮತಕ್ಕೆ ಹಾಕಿದರು. ಆದರೆ ಇದಕ್ಕೆ ವಿಪಕ್ಷಗಳು ಭಾರೀ ವಿರೋಧ ವ್ಯಕ್ತಪಡಿಸಿ, ಇದು ಅಲ್ಪಸಂಖ್ಯಾತ ವಿರೋಧಿ ಎಂದು ಕರೆದರು. ಆರೋಪವನ್ನು ತಳ್ಳಿ ಹಾಕಿದ ಅಮಿತ್ ಶಾ, ಪೌರತ್ವ ತಿದ್ದುಪಡಿ ಮಸೂದೆಯು ಶೇ.0.001 ರಷ್ಟು ಕೂಡ ದೇಶದ ಅಲ್ಪಸಂಖ್ಯಾತ ಸಮುದಾಯದ ವಿರುದ್ಧವಿಲ್ಲ ಎಂದು ಸ್ಪಷ್ಟಪಡಿಸಿದರು.

    ಮಸೂದೆ ಮಂಡನೆಗೂ ಮುನ್ನ ಮಾತನಾಡಿದ ಅಮಿತ್ ಶಾ, ನಿಮ್ಮ ಪ್ರತಿ ಪ್ರಶ್ನೆಗೂ ನಾವು ಉತ್ತರಿಸುತ್ತೇವೆ. ಆದರೆ ಸದನವನ್ನು ಬಹಿಷ್ಕರಿಸಿ ಹೊರ ನಡೆಯಬೇಡಿ. ಈ ಮಸೂದೆಯಲ್ಲಿ ಒಮ್ಮೆಯೂ ಮುಸ್ಲಿಂ ಸಮುದಾಯವನ್ನು ಉಲ್ಲೇಖಿಸಲಾಗಿಲ್ಲ ಎಂದು ಮನವಿ ಮಾಡಿಕೊಂಡರು. ಇದನ್ನು ಲೆಕ್ಕಿಸಿದ ವಿಪಕ್ಷಗಳ ಸಂಸದರು, ಮಸೂದೆ ಮಂಡಿಸುವುದನ್ನು ವಿರೋಧಿಸುತ್ತಲೇ ಇದ್ದರು. ಇದರಿಂದಾಗಿ ಸುಮಾರು ಒಂದು ಗಂಟೆ ಸುದೀರ್ಘ ಚರ್ಚೆಯಾಯಿತು.

    ಕಾಂಗ್ರೆಸ್‍ನ ಸಂಸದ, ಮುಖಂಡ ಅಧೀರ್ ರಂಜನ್ ಚೌಧರಿ, ಎಐಎಂಐಎಂನ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸೇರಿದಂತೆ ಅನೇಕ ಸಂಸದರು ಸದನದಲ್ಲಿ ಅಸಮಾಧಾನ ಹೊರಹಾಕಿದರು. ಈ ಎಲ್ಲ ಬೆಳವಣಿಗೆಯಿಂದಾಗಿ ಸ್ಪೀಕರ್ ಓಂ ಬಿರ್ಲಾ ಮಸೂದೆಯನ್ನು ಮಂಡಿಸಿ, ಮತದಾನಕ್ಕೆ ಹಾಕುವಂತೆ ನಿರ್ದೇಶನ ನೀಡಿದರು. ಮಸೂದೆಯನ್ನು ಮತಕ್ಕೆ ಹಾಕಿದಾಗ 375 ಸಂಸದರು ಮತದಾನದಲ್ಲಿ ಭಾಗವಹಿಸಿದ್ದರು. ಈ ಪೈಕಿ 293 ಸಂಸದರು ಮಸೂದೆ ಪರವಾಗಿ ಮತ ಹಾಕಿದರೆ, ಪ್ರತಿಪಕ್ಷದ 82 ಸಂಸದರು ವಿರೋಧವಾಗಿ ಮತ ಹಾಕಿದರು. ಪೌರತ್ವ ತಿದ್ದುಪಡಿ ಮಸೂದೆಯೂ ಬಹುಮತ ಪಡೆದು ಲೋಕಸಭೆಯಲ್ಲಿ ಪಾಸ್ ಆಯಿತು.

  • ಓವೈಸಿ ಹೇಳಿಕೆಗೆ ಕಾಂಗ್ರೆಸ್ ನಾಯಕ ಸಲ್ಮಾನ್ ಪ್ರತಿರೋಧ

    ಓವೈಸಿ ಹೇಳಿಕೆಗೆ ಕಾಂಗ್ರೆಸ್ ನಾಯಕ ಸಲ್ಮಾನ್ ಪ್ರತಿರೋಧ

    ನವದೆಹಲಿ: ಸುಪ್ರೀಂ ಕೋರ್ಟ್ ತೀರ್ಪನ್ನು ಭಾರತದ ಮುಸ್ಲಿಮರು ಸ್ವಾಗತಿಸುವುದಿಲ್ಲ ಎಂಬ ಹೈದರಾಬಾದ್ ಸಂಸದ ಅಸಾದುದ್ದಿನ್ ಓವೈಸಿ ಹೇಳಿಕೆಗೆ ಕಾಂಗ್ರೆಸ್ ನಾಯಕ ಸಲ್ಮಾನ್ ನಿಜಾಮಿ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.

    ರಾಮ ಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದ ತೀರ್ಪನ್ನು ಓವೈಸಿ ಪ್ರಶ್ನಿಸಿದ್ದರು. ವಿವಾದಾತ್ಮಕ ಸ್ಥಳದಿಂದ ದೂರದಲ್ಲಿ ಮುಸ್ಲಿಮರಿಗೆ 5 ಎಕರೆ ಜಾಗ ಮಂಜೂರು ಮಾಡಿರುವುದು ಮುಸ್ಲಿಮರ ನಂಬಿಕೆಗೆ ಮಾಡಿದ ಅವಮಾನ ಎಂದು ಟೀಕಿಸಿದ್ದರು.

    ಓವೈಸಿ ಸುಪ್ರೀಂ ಕೋರ್ಟ್ ವಿರುದ್ಧವೇ ಹರಿಹಾಯ್ದಿದ್ದು, 1992ರ ಡಿಸೆಂಬರ್‍ನಲ್ಲಿ ಬಾಬರಿ ಮಸೀದಿಯನ್ನು ನೆಲಸಮ ಮಾಡಿದವರಿಗೇ ಇಂದು ಸುಪ್ರೀಂ ಕೋರ್ಟ್ ಟ್ರಸ್ಟ್ ರಚಿಸಿ ದೇವಸ್ಥಾನ ನಿರ್ಮಿಸಲು ಸೂಚಿಸಿದೆ. ನಮ್ಮ ಕಾನೂನು ಬದ್ಧ ಹಕ್ಕಿಗಾಗಿ ನಾವು ಹೋರಾಡಿದ್ದೆವು. ನಮಗೆ ದಾನವಾಗಿ ಬಂದ 5 ಎಕರೆ ಭೂಮಿ ಅಗತ್ಯವಿಲ್ಲ. ಈ 5 ಎಕರೆ ಭೂಮಿ ಪ್ರಸ್ತಾವವನ್ನು ನಾವು ತಿರಸ್ಕರಿಸಬೇಕು. ನಮಗೆ ಪ್ರೋತ್ಸಾಹ ನೀಡಬೇಡಿ. ನಾನು ಹೈದರಾಬಾದ್ ರಸ್ತೆಯಲ್ಲಿ ಭಿಕ್ಷೆ ಬೇಡಿಯಾದರೂ ಯುಪಿಯಲ್ಲಿ ಮಸೀದಿ ನಿರ್ಮಿಸಲು ಸಾಕಾಗುವಷ್ಟು ಹಣವನ್ನು ಸಂಗ್ರಹಿಸುತ್ತೇನೆ ಎಂದು ಹೇಳಿಕೆ ನೀಡಿದ್ದರು.

    ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕ ನಿಜಾಮಿ ಟ್ವೀಟ್ ಮಾಡುವ ಮೂಲಕ ಓವೈಸಿ ವಿರುದ್ಧ ಹರಿಹಾಯ್ದಿದ್ದು, 5 ಎಕರೆ ಭೂಮಿಯನ್ನು ಏಕೆ ತಿರಸ್ಕರಿಸಬೇಕು. ಓವೈಸಿ ದೇಶದ ಎಲ್ಲ ಮುಸ್ಲಿಮರ ಯಜಮಾನ ಅಲ್ಲ. ಹಿಂದೂಗಳು ಮತ್ತು ಮುಸ್ಲಿಮರು ಇಬ್ಬರೂ ಒಟ್ಟಿಗೆ ಸೇರಿ ಮಸೀದಿಯನ್ನು ನಿರ್ಮಿಸಬೇಕು. ಈ ಕುರಿತು ಯಾರೂ ಅಸೂಯೆ ಪಡಬಾರದು. ದ್ವೇಷ ಮತ್ತು ದುಷ್ಟತನವನ್ನು ಸಕಾರಾತ್ಮಕ ಶಕ್ತಿ ಹಾಗೂ ಆಲೋಚನೆಗಳಿಂದ ಮಾತ್ರ ನಿಭಾಯಿಸಬಹುದು ಎಂದು ತಿಳಿಸಿದರು.

    ರಾಮ ಮಂದಿರದ ಕಡೆಯ ಹಕ್ಕುಗಳನ್ನು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಎತ್ತಿ ಹಿಡಿದಿದೆ. ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಮಸೀದಿ ನಿರ್ಮಾಣಕ್ಕಾಗಿ ಮುಸ್ಲಿಮರಿಗೆ 5 ಎಕರೆ ಜಾಗವನ್ನು ಮಂಜೂರು ಮಾಡುವಂತೆ ಸೂಚಿಸಿದೆ. ಅಲ್ಲದೆ ಇದರ ಜವಾಬ್ದಾರಿಯನ್ನು ವಕ್ಫ್ ಮಂಡಳಿಗೆ ವಹಿಸಿದೆ.