ಬೆಂಗಳೂರು: ಪದವಿ ವಿದ್ಯಾರ್ಥಿಗಳ ಲಸಿಕೆ ಅಭಿಯಾನಕ್ಕೆ ಇಂದಿನಿಂದಲೇ ಮತ್ತಷ್ಟು ಚುರುಕು ನೀಡಲಾಗಿದೆ. ಇನ್ನು ಕೆಲ ದಿನಗಳಲ್ಲೇ ಎಲ್ಲ ವಿದ್ಯಾರ್ಥಿಗಳಿಗೂ ಲಸಿಕೆ ನೀಡಲಾಗುವುದು. ಅಲ್ಲದೆ ಇದುವರೆಗೆ ಸರ್ಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳ ಶೇ.65.14ರಷ್ಟು ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗೆ ಲಸಿಕೆ ಕೊಡಲಾಗಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ ತಿಳಿಸಿದರು.
ಡಾ.ಸಿ.ಎನ್ ಅಶ್ವಥ್ ನಾರಾಯಣ ಫೌಂಡೇಷನ್ ಹಾಗೂ ಶೇಷಾದ್ರಿಪುರಂ ಶಿಕ್ಷಣ ಟ್ರಸ್ಟ್ ವತಿಯಿಂದ ಮಲ್ಲೇಶ್ವರ ಕ್ಷೇತ್ರದ ಮತ್ತಿಕೆರೆಯ 3ನೇ ಮುಖ್ಯರಸ್ತೆಯಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತ ಲ್ಯಾಪ್‍ಟಾಪ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪದವಿ ವಿದ್ಯಾರ್ಥಿಗಳಿಗೆ ಲಸಿಕೆ ಅಭಿಯಾನ ರಾಜ್ಯಾದ್ಯಂತ ಚುರುಕುಗೊಳಿಸಲು ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯಕ್ ಹಾಗೂ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮ ಅವರು ಇಂದು ಎಲ್ಲ ಜಿಲ್ಲಾಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಸರ್ಕಾರ ಈ ಬಗ್ಗೆ ವಿಶೇಷ ಒತ್ತು ನೀಡಿ ಆದ್ಯತಾ ಗುಂಪಿನಡಿಯಲ್ಲಿ ವಿದ್ಯಾರ್ಥಿಗಳು, ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಗೆ ಲಸಿಕೆ ಕೊಡುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಜುಲೈ 19ರಿಂದ ಪದವಿ ಕಾಲೇಜುಗಳು ಪ್ರಾರಂಭ?
ಖಾಸಗಿ ಕಾಲೇಜುಗಳಲ್ಲಿ ಎಷ್ಟು ಪ್ರಮಾಣದಲ್ಲಿ ಲಸಿಕೆ ನೀಡಲಾಗಿದೆ ಎಂಬ ಬಗ್ಗೆ ಅಂಕಿ-ಅಂಶ ಪಡೆದುಕೊಳ್ಳುತ್ತಿದ್ದೇವೆ. ಆ ಮಾಹಿತಿ ಸಿಕ್ಕಿದ ಕೂಡಲೇ ಉಳಿದ ಎಷ್ಟು ವಿದ್ಯಾರ್ಥಿಗಳಿಗೆ ಇನ್ನೆಷ್ಟು ದಿನದಲ್ಲಿ ಲಸಿಕೆ ನೀಡಲಾಗುವುದು ಎಂಬುದನ್ನು ನಿರ್ದಿಷ್ಟವಾಗಿ ತಿಳಿಸಲಾಗುತ್ತದೆ ಎಂದು ಮಾಹಿತಿ ಹಂಚಿಕೊಂಡರು.
ವಿದ್ಯಾರ್ಥಿಗಳಿಗೆ ಲಸಿಕೆ ಅಂಕಿ-ಅಂಶ
ರಾಜ್ಯದ ಆರು ಶೈಕ್ಷಣಿಕ ವಲಯಗಳ ಸರ್ಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ 4,90,799 ವಿದ್ಯಾರ್ಥಿಗಳಿದ್ದು, ಈವರೆಗೆ 3,13,898 ವಿದ್ಯಾರ್ಥಿಗಳಿಗೆ ವ್ಯಾಕ್ಸಿನ್ ಕೊಡಲಾಗಿದ್ದು, 63.96% ಗುರಿ ತಲುಪಲಾಗಿದೆ. ಅದೇ ರೀತಿ ಒಟ್ಟು 29,241 ಸಿಬ್ಬಂದಿ ಇದ್ದು, ಈ ಪೈಕಿಗೆ 24,875 ಸಿಬ್ಬಂದಿಗೆ ಲಸಿಕೆ ನೀಡಲಾಗಿದ್ದು, 85.07% ಗುರಿ ಸಾಧಿಸಲಾಗಿದೆ. ವಿದ್ಯಾರ್ಥಿಗಳು, ಸಿಬ್ಬಂದಿ ಸೇರಿ 65.14% ಗುರಿ ತಲುಪಲಾಗಿದೆ ಎಂದು ಮಾಹಿತಿ ನೀಡಿದರು.
– ಆಮ್ಲಜನಕ ಟ್ಯಾಂಕ್ ಗೆ ಜಾಗತಿಕ ಟೆಂಡರ್ – ಆಮ್ಲಜನಕ, ಲಸಿಕೆ ವ್ಯವಸ್ಥೆ ಪರಿಶೀಲನೆ ನಡೆಸಿದ ಡಿಸಿಎಂ
ಬೆಂಗಳೂರು: ಇನ್ನು 10 ದಿನಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲ ಕಾಲೇಜು ವಿದ್ಯಾರ್ಥಿಗಳಿಗೂ ಕೋವಿಡ್ ಲಸಿಕೆ ನೀಡುವುದು ಹಾಗೂ ಅಗಸ್ಟ್ ಒಳಗೆ 360 ಘಟಕಗಳಿಂದ ಆಮ್ಲಜನಕ ಉತ್ಪಾದನೆ ಸೇರಿ 2,800 ಟನ್ ಆಕ್ಸಿಜನ್ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಹೇಳಿದರು.
ರಾಜ್ಯದಲ್ಲಿನ ಆಮ್ಲಜನಕ ವ್ಯವಸ್ಥೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿಸುವ ಸಂಬಂಧ ಆರೋಗ್ಯ, ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ, ವಿದ್ಯಾರ್ಥಿಗಳು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೋರಿದರು. ಇದನ್ನೂ ಓದಿ: ತೆಂಗಿನಮರದ ಕಾಯಿ ಬಿದ್ದು 11 ತಿಂಗಳ ಹಸುಗೂಸು ಸಾವು
ಸೋಮವಾರ 94,000 ವಿದ್ಯಾರ್ಥಿಗಳಿಗೆ ಲಸಿಕೆ ಕೊಡಲಾಯಿತು. ರಾಜ್ಯದೆಲ್ಲೆಡೆ ಆಯಾ ಕಾಲೇಜುಗಳ ಪ್ರಾಂಶುಪಾಲರಿಗೆ ಜವಾಬ್ದಾರಿ ವಹಿಸಲಾಗಿದ್ದು, ಇನ್ನು ಹತ್ತು ದಿನದಲ್ಲಿ ಎಂಜಿನಿಯರಿಂಗ್, ಮೆಡಿಕಲ್, ಪ್ಯಾರಾ ಮೆಡಿಕಲ್, ಡಿಪ್ಲೋಮಾ, ಜಿಸಿಐಟಿ, ಐಟಿಐ, ಪಾಲಿಟೆಕ್ನಿಕ್ ಮತ್ತು ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಚುರುಕಾಗಿ ಲಸಿಕೆ ಕೊಡಲಾಗುವುದು. ಅಲ್ಲದೆ, ಮುಖ್ಯಮಂತ್ರಿಗಳ ಕೌಶಲ್ಯ ಯೋಜನೆ ಅಡಿ ನೋಂದಾಯಿಸಿಕೊಂಡಿರುವ ಪ್ರತಿಯೊಬ್ಬರಿಗೂ ಲಸಿಕೆ ಲಭ್ಯವಾಗಲಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.
ಜೂನ್ ತಿಂಗಳಲ್ಲಿ 60 ಲಕ್ಷ ಲಸಿಕೆ ನೀಡಲಾಗಿದ್ದು, ಜುಲೈನಲ್ಲಿ ಇನ್ನೂ ಹೆಚ್ಚು ಕೊಡಲಾಗುವುದು. ಈಗಾಗಲೇ ಕೇಂದ್ರದಿಂದ ಉತ್ತಮವಾಗಿ ಲಸಿಕೆ ಪೂರೈಕೆ ಆಗುತ್ತಿದ್ದು, ಖಾಸಗಿ ಕ್ಷೇತ್ರದಿಂದಲೂ ವ್ಯಾಕ್ಸಿನ್ ಪಡೆದು ಜನರಿಗೆ ಕೊಡಲಾಗುವುದು. ಲಸಿಕೆ ಅಭಿಯಾನದಲ್ಲಿ ಇಡೀ ದೇಶದಲ್ಲೇ ರಾಜ್ಯವೂ 3ನೇ ಸ್ಥಾನದಲ್ಲಿದೆ ಎಂದು ಡಾ.ಅಶ್ವಥ್ ನಾರಾಯಣ ತಿಳಿಸಿದರು.
ಆಕ್ಸಿಜನ್ ಉತ್ಪಾದನೆ ಮತ್ತು ಸಂಗ್ರಹ:
ಎರಡನೇ ಅಲೆಯ ಸಂಕಷ್ಟ ದೃಷ್ಟಿಯಲ್ಲಿ ಇಟ್ಟುಕೊಂಡು ಮೂರನೇ ಅಲೆಗೆ ಸರ್ವ ಸನ್ನದ್ಧವಾಗಿದೆ ಸರ್ಕಾರ. ಆಮ್ಲಜನಕ ಕೊರತೆ ಆಗದಂತೆ ಕಟ್ಟೆಚ್ಚರ ವಹಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಸಂಗ್ರಹ ಸಾಮಥ್ರ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಸದ್ಯಕ್ಕೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ (ಸರ್ಕಾರಿ ಮತ್ತು ಖಾಸಗಿ) ಇಲಾಖೆಗಳ ವ್ಯಾಪ್ತಿಯಲ್ಲಿ 400 ಮೆಟ್ರಿಕ್ ಟನ್ ಆಮ್ಲಜನಕ ಉತ್ಪಾದನೆ ಆಗುವುದಿದೆ. ಕೆಲವೆಡೆ ಈಗಾಗಲೇ ಉತ್ಪಾದನೆ ಆಗುತ್ತಿದ್ದರೆ, ಇನ್ನು ಕೆಲವೆಡೆ ಘಟಕಗಳನ್ನು ಅಳವಡಿಸಲಾಗುತ್ತಿದೆ. ಇನ್ನು ಕೇಂದ್ರ ಸರ್ಕಾರ, ಪಿಎಂ ಕೇರ್, ಸಿಎಸ್‍ಆರ್ ಹಾಗೂ ರಾಜ್ಯ ಸರಕಾರ ಖರೀದಿ ಮಾಡಿರುವ 40 ಸೇರಿ 187 ಆಮ್ಲಜನಕ ಘಟಕಗಳನ್ನು ಆರೋಗ್ಯ ಇಲಾಖೆಗೆ ನೀಡಲಾಗಿದೆ. ಇವುಗಳ ಅಳವಡಿಕೆ ಕಾರ್ಯ ವಿವಿಧ ಹಂತಗಳಲ್ಲಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಕೆಲ ಘಟಕಗಳು ಈ ತಿಂಗಳ ಒಳಗಾಗಿ ಉತ್ಪಾದನೆ ಆರಂಭಿಸುವುದಿದ್ದು, ಉಳಿದವು ಆಗಸ್ಟ್ ನಲ್ಲಿ ಪೂರ್ಣ ಉತ್ಪಾದನೆ ಶುರು ಮಾಡಲಿವೆ. ವೈದ್ಯಕೀಯ ಶಿಕ್ಷಣ ಇಲಾಖೆಗೆ ಕೇಂದ್ರವು ನೀಡಿರುವ 17 ಸೇರಿ ಸಿ ಎಸ್ ಆರ್ ನಿಂದ ಬಂದಿರುವವು ಸೇರಿ 40 ಆಕ್ಸಿಜನ್ ಜನರೇಟರ್ ಗಳಿವೆ. ಇದಲ್ಲದೆ, ರಾಜ್ಯ ಸರ್ಕಾರ 35 ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಆಕ್ಸಿಜನ್ ಜನರೇಟರ್ ಗಳ ಅಳವಡಿಕೆ ಮತ್ತು ಸಂಗ್ರಹಕ್ಕೆ ಆರ್ಥಿಕ ನೆರವು ನೀಡಲಾಗಿದೆ. ಇಲ್ಲಿಯೂ ಕೂಡ ಅಗಸ್ಟ್ ನಿಂದಲೇ ಆಮ್ಲಜನಕ ಉತ್ಪಾದನೆಯಾಗಲಿದೆ. ಒಟ್ಟು 360 ಘಟಕಗಳಿಂದ ಆಮ್ಲಜನಕ ಲಭ್ಯವಾಗಲಿದೆ. ಜತೆಗೆ, ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ವಿಪತ್ತು ಪರಿಹಾರ ನಿಧಿ, ಸಿಎಸ್ಆರ್ ನೆರವು ಇತ್ಯಾದಿಗಳಿಂದ ಘಟಕಗಳನ್ನು ಹಾಕಲಾಗಿದೆ. ಬುಧವಾರದ ಹೊತ್ತಿಗೆ ಆ ಮಾಹಿತಿ ಸಿಗುತ್ತದೆ. ರಾಜ್ಯದಲ್ಲಿ ನಿಖರವಾಗಿ ಎಷ್ಟು ಪ್ರಮಾಣದಲ್ಲಿ ಆಮ್ಲಜನಕ ಉತ್ಪಾದನೆ ಆಗುತ್ತದೆ ಎಂಬುದನ್ನು ತಿಳಿದುಕೊಂಡು ಮತ್ತಷ್ಟು ಕ್ರಮ ವಹಿಸಲಾಗುವುದು ಎಂದು ಉಪ ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.
ಆಮ್ಲಜನಕ ಸಂಗ್ರಹಕ್ಕೂ ಕ್ರಮ:
ಆಮ್ಲಜಕನ ಉತ್ಪಾದನೆ ಜತೆಗೆ ಅದರ ಅತ್ಯುತ್ತಮ ಸಂಗ್ರಹಣಾ ವ್ಯವಸ್ಥೆಗೂ ಆದ್ಯತೆ ನೀಡಲಾಗಿದೆ ಎಂದ ಡಿಸಿಎಂ, ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲೇ 1806 ಮೆಟ್ರಿಕ್ ಟನ್ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 500 ಮೆಟ್ರಿಕ್ ಟನ್ ಆಮ್ಲಜನಕವನ್ನು ಹೆಚ್ಚುವರಿ ಸಂಗ್ರಹ ಮಾಡುವ ಗುರಿ ಇದ್ದು, ಅದಕ್ಕೆ ಬೇಕಾದ ಎಲ್ಲ ಕ್ರಮವನ್ನು ಈಗಾಗಲೇ ವಹಿಸಲಾಗಿದೆ. ಅಗಸ್ಟ್ ತಿಂಗಳ ಒಳಗೆ ಇದೆಲ್ಲ ಪೂರ್ಣವಾಗಿ ಅನುಷ್ಠಾನಕ್ಕೆ ಬರಲಿದೆ ಎಂದರು.
ಜಾಗತಿಕ ಟೆಂಡರ್
ಆರೋಗ್ಯ ಇಲಾಖೆಯಲ್ಲಿ 1806 ಟನ್ ಸಂಗ್ರಹ ಸಾಮರ್ಥ್ಯದ ಯೋಜನೆಗೆ ಹಣಕಾಸು ಇಲಾಖೆಯ ಒಪ್ಪಿಗೆ ಸಿಕ್ಕ ಕೂಡಲೇ ಜಾಗತಿಕ ಟೆಂಡರ್ ಕರೆಯಲಾಗುವುದು. ನಮ್ಮ ದೇಶದಲ್ಲಿ ಲಿಕ್ವಿಡ್ ಆಕ್ಸಿಜನ್ ಟ್ಯಾಂಕರ್ ಗಳನ್ನು ತಯಾರಿಸುವ ಎರಡೇ ಕಂಪೆನಿಗಳಿರುವ ಕಾರಣಕ್ಕೆ ಗ್ಲೋಬಲ್ ಟೆಂಡರ್ ಕರೆಯಲಾಗುವುದು ಎಂದು ಡಿಸಿಎಂ ಹೇಳಿದರು.
ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ತಲಾ 6 ಮೆ.ಟನ್ ಹಾಗೂ ಪ್ರತಿ ಜಿಲ್ಲಾಸ್ಪತ್ರೆಯಲ್ಲಿ ತಲಾ 20 ಮೆ.ಟನ್ ಸಂಗ್ರಹ ಮಾಡುವ ಗುರಿ ಇದೆ. ಕೆಲ ಮೆಡಿಕಲ್ ಕಾಲೇಜ್ ಗಳಲ್ಲಿ 40-50 ಮೆ.ಟನ್ ಸಂಗ್ರಹ ಸಾಮರ್ಥ್ಯವುಳ್ಳ ಆಕ್ಸಿಜನ್ ಟ್ಯಾಂಕರ್ ಗಳಿವೆ. ಇಂಥ ಟ್ಯಾಂಕರ್ ಗಳನ್ನು ತಯಾರಿಸಲು ಈ ಟೆಂಡರ್ ಕರೆಯಲಾಗುತ್ತಿದೆ. ಈ ಎಲ್ಲ ಲೆಕ್ಕದಂತೆ 2,500-2,800 ಟನ್ ಆಕ್ಸಿಜನ್ ಸಂಗ್ರಹ ಮಾಡುವ ವ್ಯವಸ್ಥೆ ರಾಜ್ಯದಲ್ಲಿ ಆಗಲಿದೆ. ಜತೆಗೆ ಜಂಬೋ ಮತ್ತು ಡ್ಯೂರಾ ಸಿಲಿಂಡರ್ ಗಳ ಮೂಲಕ 45 ಟನ್ ಆಕ್ಸಿಜನ್ ಸಂಗ್ರಹ ಸಾಮರ್ಥ್ಯ ಮಾಡಿಕೊಳ್ಳಲು ಕ್ರಮ ವಹಿಸಲಾಗಿದೆ. ಅಲ್ಲದೆ, 9 ಜಿಲ್ಲೆಗಳಲ್ಲಿ ಆಕ್ಸಿಜನ್ ರೀ ಫಿಲ್ಲಿಂಗ್ ಸೌಲಭ್ಯ ಇಲ್ಲ, ಅದನ್ನೂ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಜತೆಗೆ, ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲೇ ಆಕ್ಸಿಜನ್ ಸಂಗ್ರಹ ಘಟಕಗಳಿಲ್ಲ. ಕೂಡಲೇ ಅಳವಡಿಸಿಕೊಳ್ಳಬೇಕು ಎಂದು ಸರ್ಕಾರ ನೋಟಿಸ್ ಜಾರಿ ಮಾಡಿದೆ ಎಂದು ಡಿಸಿಎಂ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಆಕ್ಸಿಜನ್ ಬೆಡ್ ಸಂಖ್ಯೆಯೂ ಹೆಚ್ಚಳ:
ರಾಜ್ಯದಲ್ಲಿ ಈಗ 58,000 ಆಕ್ಸಿಜನ್ ಬೆಡ್ ಗಳಿದ್ದು, ಈ ಪ್ರಮಾಣವನ್ನು 84,000ಕ್ಕೆ ಹೆಚ್ಚಿಸಲು ಕ್ರಮ ವಹಿಸಲಾಗಿದೆ. ಜತೆಗೆ, ಎಲ್ಲ ತಾಲೂಕು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ಐಸಿಯು ಘಟಕಗಳನ್ನು ಆದ್ಯತೆಯ ಮೇರೆಗೆ ಅಳವಡಿಸಲಾಗುತ್ತಿದೆ ಎಂದರು.
ಅರಿವಳಿಕೆ ತಜ್ಞ ಡಾ.ರಾಘವೇಂದ್ರ ನೇತೃತ್ವದ ಆಮ್ಲಜನಕ ನಿರ್ವಹಣೆ ಸಮಿತಿ ವರದಿ ನೀಡಿದ್ದು ಆ ಪ್ರಕಾರ ಮೂಲಸೌಕರ್ಯ ಕಲ್ಪಿಸಲು ಕ್ರಮ ಜರುಗಿಸಲಾಗಿದೆ ಎಂದರು.
ಆರೋಗ್ಯ ಇಲಾಖೆ ಹೆಚ್ವುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಕ್ತರ್, ಲಸಿಕೆ ಉಸ್ತುವಾರಿ ಅಧಿಕಾರಿ ವಂದಿತಾ ಶರ್ಮಾ, ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ ಅನಿಲ ಕುಮಾರ್, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ಗಿರೀಶ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಇದ್ದರು.
ಬೆಂಗಳೂರು: 21ನೇ ಶತಮಾನದಲ್ಲಿ ಕರ್ನಾಟಕ ಸೇರಿ ಇಡೀ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಬಹುದೊಡ್ಡ ಕ್ರಾಂತಿಕಾರಕ ಬದಲಾವಣೆಗಳಾಗುತ್ತವೆ. ಆ ನಿಟ್ಟಿನಲ್ಲಿ ಕರ್ನಾಟಕ ರಾಜ್ಯವು ಮುಂಚೂಣಿಯಲ್ಲಿದೆ ಎಂದು ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿಯ ಅಧ್ಯಕ್ಷರೂ ಆದ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮಾಜಿ ಅಧ್ಯಕ್ಷ ಡಾ.ಕಸ್ತೂರಿ ರಂಗನ್ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಮತ್ತು ಡೆನ್ಮಾರ್ಕ್ ನ ಅಲ್ಬೋರ್ಗ್ ವಿವಿಯ ಯುನೆಸ್ಕೊ ಸೆಂಟರ್ ಫಾರ್ ಪ್ರಾಬ್ಲಮ್ ಬೇಸ್ಡ್ ಲನಿರ್ಂಗ್ ಇನ್ ಎಂಜಿನಿಯರಿಂಗ್ ಸೈನ್ಸ್ ಮತ್ತು ಸಸ್ಟೈನಬಿಲಿಟಿ ಸಹಯೋಗದಲ್ಲಿ ‘ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕಲಿಕಾ ಪದ್ಧತಿ’ ಬಗೆಗಿನ ಪ್ರಾದೇಶಿಕ ಸಂಶೋಧನಾ ವಿಚಾರ ಸಂಕಿರಣವನ್ನು ಉದ್ದೇಶಿಸಿ ಅವರು ಮಾತನಾಡಿದರು.
“ರಾಷ್ಟ್ರೀಯ ಶಿಕ್ಷಣ ನೀತಿ ಕರ್ನಾಟಕದಲ್ಲಿ ಅತ್ಯಂತ ವೇಗವಾಗಿ ಜಾರಿಗೆ ಬರುತ್ತಿದೆ. ನೂತನ ಶಿಕ್ಷಣ ನೀತಿಯ ಕರಡು ಲಭ್ಯವಾದ ಕೂಡಲೇ ಹಾಗೂ ಕೇಂದ್ರ ಸರಕಾರ ಈ ನೀತಿಯನ್ನು ಪ್ರಕಟಿಸಿದ ಮೊದಲ ದಿನದಿಂದಲೇ ಸರಕಾರ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಈ ನಿಟ್ಟಿನಲ್ಲಿ ಕಾರ್ಯೋನ್ಮುಕರಾಗಿದ್ದನ್ನು ಕಂಡಿದ್ದೇನೆ” ಎಂದು ಕಸ್ತೂರಿರಂಗನ್ ಮೆಚ್ವುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ನೂತನ ಶಿಕ್ಷಣ ನೀತಿ ಈ ವರ್ಷದಿಂದ್ಲೇ ಜಾರಿ: ಅಶ್ವಥ್ ನಾರಾಯಣ್
ಶಿಕ್ಷಣ ನೀತಿಯ ಬಗ್ಗೆ ರಾಜ್ಯ ಸರಕಾರಕ್ಕೆ ಇರುವ ಬದ್ಧತೆ, ದೂರದೃಷ್ಟಿ ಶ್ಲಾಘನೀಯ. ಡಾ.ಅಶ್ವತ್ಥನಾರಾಯಣ ಅವರು ಹೋಗುತ್ತಿರುವ ವೇಗ ನನಗೆ ಅಚ್ಚರಿ ಉಂಟು ಮಾಡಿದೆ ಎಂದು ಕಸ್ತೂರಿ ರಂಗನ್ ಹೇಳಿದರು.
ಈ ವರ್ಷವೇ ಜಾರಿಗೆ ಸಿದ್ಧತೆ
ಉನ್ನತ ಶಿಕ್ಷಣ ಸಚಿವ ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಮಾತನಾಡಿ, “ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಈ ವರ್ಷದಿಂದಲೇ ಜಾರಿ ಮಾಡಲು ಸರ್ಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ” ಎಂದರು.
ರಾಜ್ಯವು ಉದ್ಯಮಶೀಲತೆ, ಆವಿಷ್ಕಾರ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಇರುವುದರಿಂದ ಶಿಕ್ಷಣ ನೀತಿಯೂ ರಾಜ್ಯದ ಶೈಕ್ಷಣಿಕ ವ್ಯವಸ್ಥೆಗೆ ಹೊಸ ಹುರುಪು ನೀಡಲಿದೆ. ಸಮಸ್ಯೆಗೆ ಪರಿಹಾರ ಕಲ್ಪಿಸುವ ಶಿಕ್ಷಣ ನೀಡುವ ಮೂಲಕ ಸಮಾಜ ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಶೀಘ್ರದಲ್ಲೇ ಸಾಕಾರವಾಗಲಿದೆ ಎಂದೇ ಡಿಸಿಎಂ ಹೇಳಿದರು.
ಶಿಕ್ಷಣ ನೀತಿ ಜಾರಿ ಮಾಡುವ ನಿಟ್ಟಿನಲ್ಲಿ ನನಗೆ ಅವಕಾಶ ಸಿಕ್ಕಿದ್ದು, ನನ್ನ ಜೀವಮಾನದಲ್ಲಿ ಸಿಕ್ಕಿದ ಸುವರ್ಣಾವಕಾಶ ಎಂದ ಡಿಸಿಎಂ, ನಮ್ಮ ಜ್ಞಾನ ಸಂಪತ್ತು ಹೆಚ್ಚಿಸಿಕೊಳ್ಳಲು ನೀತಿಯೂ ಹೆಚ್ಚು ಪರಿಣಾಮಕಾರಿ. ಎಲ್ಲ ಸಮಸ್ಯೆಗಳಿಗೂ ಇದೊಂದೇ ಪರಿಹಾರ ಎಂದರು.
ಯುನೆಸ್ಕೋದ ಸಮಸ್ಯೆಗೆ ಪರಿಹಾರ ಕಲ್ಪಿಸುವ ಕಲಿಕಾ ಶಿಕ್ಷಣ ವಿಭಾಗದ ಮುಖ್ಯಸ್ಥೆ ಪ್ರೊ ಅನೆಟ್ ಕೊಲ್ಮಾಸ್ ಅವರು ಮಾತನಾಡಿ, ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ತಾಂತ್ರಿಕ ಮತ್ತು ಆವಿಷ್ಕಾರ ಶಿಕ್ಷಣಕ್ಕೆ ಯುನೆಸ್ಕೋ ಹೆಚ್ಚು ಒತ್ತು ನೀಡುತ್ತಿದೆ. ಆ ನಿಟ್ಟಿನಲ್ಲಿ ನಾವು ಎಲ್ಲ ದೇಶಗಳ ಜತೆ, ಮುಖ್ಯವಾಗಿ ಭಾರತದ ಜತೆ ನಿಕಟವಾಗಿ ಕೆಲಸ ಮಾಡಲು ಸಿದ್ಧರಿದ್ದೇವೆ ಎಂದರು.
ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ. ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲ ಜೋಷಿ ಸೇರಿದಂತೆ ದೇಶ- ವಿದೇಶಗಳ ತಜ್ಞರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಬೆಂಗಳೂರು: ಕನ್ನಡ ಸಾಹಿತ್ಯದ ಅಗ್ರಗಣ್ಯ ಲೇಖಕ, ದಲಿತ ಕವಿ ಡಾ.ಸಿದ್ದಲಿಂಗಯ್ಯ ಅವರು ಕರುಣೆ ಇಲ್ಲದ ಕರೋನಾ ಕೈಗೆ ಸಿಕ್ಕು, ‘ಊರು ಕೇರಿ’ ತೊರೆದು ಹೋಗಿದ್ದಾರೆ. ಇದು ಕನ್ನಡ ಸಾಂಸ್ಕೃತಿಕ ಲೋಕಕ್ಕೆ ದೊಡ್ಡ ಆಘಾತ ಎಂದು ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಶೋಕ ಸಂದೇಶದಲ್ಲಿ ಏನಿದೆ?
ಡಾ.ಸಿದ್ದಲಿಂಗಯ್ಯ ನನ್ನ ಅತ್ಯಂತ ಆತ್ಮೀಯ ಮಿತ್ರರಾಗಿದ್ದರು, ಸಾವಿರಾರು ಶಿಷ್ಯರ ಪಾಲಿಗೆ ಪ್ರೀತಿಯ ಮೇಷ್ಟ್ರು, ಅತ್ಯಂತ ಸರಳ, ನೇರ ನಡೆ, ಸದಾ ಹಾಸ್ಯಭರಿತ ಮಾತುಗಳಿಂದಲೇ ಎದುರಿಗಿದ್ದವರನ್ನು ಮೋಡಿ ಮಾಡುವ ಮಾತುಗಾರ, ಅವರ ಪಿ ಹೆಚ್ ಡಿ ಪ್ರಬಂಧ ಗ್ರಾಮದೇವತೆಗಳು ಮೂಲಕವೇ ಕನ್ನಡ ಸಾಹಿತ್ಯಾಸಕ್ತರ ಮನ ಗೆದ್ದವರು ಸಿದ್ದಲಿಂಗಯ್ಯ. ಅತ್ಯಂತ ಸಣ್ಣ ಗ್ರಾಮ ಒಂದರಿಂದ ಬಂದವರು ವಿದ್ಯೆ ವಂಚಿತ ಜನಾಂಗದ ಮೂಲಕ ಎಲ್ಲ ಜನಾಂಗಕ್ಕೂ ವಿದ್ಯೆ ಹಂಚುವ ಕೆಲಸಕ್ಕೆ ಅವರು ತೊಡಗಿಸಿಕೊಂಡಿದ್ದೆ ಒಂದು ಅದ್ಭುತ.
ಕೇವಲ 34 ವರ್ಷದವರಾಗಿದ್ದಾಗಲೇ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾದರು. ಸದನದಲ್ಲಿ ಅವರು ಮಂಡಿಸಿದ ವಿಷಯಗಳು ವೈವಿಧ್ಯಪೂರ್ಣವಾಗಿದ್ದವು ಜೊತೆಗೆ ಅತ್ಯಂತ ವಿಚಾರಪೂರ್ಣ ವಾಗಿದ್ದವು. ಅಲ್ಲಿ ಅವರು ವಿಷಯ ಮಂಡಿಸುತ್ತಿದ್ದ ರೀತಿ ಇಡೀ ಸದನವನ್ನು ಆಕರ್ಷಿಸಿ ಬಿಡುತ್ತಿತ್ತು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅವರು ಕನ್ನಡ ಕಟ್ಟಲು ಮಾಡಿದ ಕೆಲಸ ಅದ್ಭುತವಾದದ್ದು. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಅವರು ಮಾಡಿದ ಕೆಲಸ, ಆನಂತರ ಸಿಂಡಿಕೇಟ್ ಸದಸ್ಯರಾಗಿ ಅವರು ಮಾಡಿದ ಕೆಲಸ ಗಮನಾರ್ಹವಾದದ್ದು.
ದಲಿತ ಕವಿ ಎಂದೇ ಪ್ರಸಿದ್ಧರಾಗಿ ಕೆಳವರ್ಗಗಳ ನೋವಿಗೆ ದನಿಯಾಗಿ ಮಿಡಿದ ಸಿದ್ದಲಿಂಗಯ್ಯ ಈಗ ನಮ್ಮನ್ನು ಅಗಲಿರುವುದು ದುರಾದೃಷ್ಟಕರ. ಗ್ರಾಮದೇವತೆಗಳು, ಹೊಲೆಮಾದಿಗರ ಹಾಡು, ಮೆರವಣಿಗೆ, ಸಾವಿರಾರು ನದಿಗಳು, ಮುಂತಾದ ಕವನ ಸಂಕಲನಗಳು ಕನ್ನಡ ಸಾಹಿತ್ಯಕ್ಕೆ ಅವರು ಕೊಟ್ಟ ಅನನ್ಯ ಕೊಡುಗೆಗಳಾಗಿವೆ. ಅವರ ಆತ್ಮಕಥನ ಊರುಕೇರಿ ಯಿಂದ ಸ್ಪೂರ್ತಿಗೊಂಡವರು ಓದಿ ಆನಂದಿಸಿದವರು ಅಸಂಖ್ಯಾತ ಮಂದಿ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ನಾಡೋಜ ಗೌರವ,ಸತ್ಯಕಾಮ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಅಸಂಖ್ಯಾತ ಪ್ರಶಸ್ತಿ-ಪುರಸ್ಕಾರಗಳು ಅವರಿಗೆ ಸಂದಿವೆ.
ಸಿದ್ದಲಿಂಗಯ್ಯ ಅವರ ಅಗಲಿಕೆ ಕನ್ನಡ ಸಾಹಿತ್ಯದಲ್ಲಿ ಬಹುದೊಡ್ಡ ಶೂನ್ಯವನ್ನು ಸೃಷ್ಟಿಸಿದೆ. ಅದನ್ನು ತುಂಬುವುದು ಸುಲಭವಲ್ಲ. ಸಿದ್ದಲಿಂಗಯ್ಯ ಅವರ ಕುಟುಂಬಕ್ಕೆ ಅವರ ಅಭಿಮಾನಿಗಳಿಗೆ ನನ್ನ ಸಂತಾಪಗಳನ್ನು ಸೂಚಿಸುತ್ತೇನೆ ಎಂದು ಸಚಿವ ಅರವಿಂದ ಲಿಂಬಾವಳಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಹಿರಿಯ ಕವಿ, ಸಾಹಿತಿ, ಪ್ರಾಧ್ಯಾಪಕರೂ ಆಗಿದ್ದ ಡಾ. ಸಿದ್ಧಲಿಂಗಯ್ಯ ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು.
ಅವರ ಈ ಅಗಲಿಕೆಯಿಂದ ಕನ್ನಡ ಸಾಹಿತ್ಯ ಲೋಕದ ಕೊಂಡಿಯೊಂದು ಕಳಚಿದಂತಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬ-ಹಿತೈಷಿ ವರ್ಗಕ್ಕೆ ಈ ನೋವನ್ನು ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ.
— Dr. C.N. Ashwath Narayan (@drashwathcn) June 11, 2021
ಡಿಸಿಎಂ ಕಂಬನಿ
ಸಿದ್ದಲಿಂಗಯ್ಯ ಅವರು ಕನ್ನಡದ ಅಗ್ರ ಲೇಖಕರಲ್ಲೊಬ್ಬರು. ‘ದಲಿತ ಕವಿ’ ಎಂದೇ ಪ್ರಸಿದ್ಧರು. ಸಾಮಾಜಿಕ ಸಮಾನತೆಯ ಆಶಯದೊಂದಿಗೆ ಅವರು ರಚಿಸಿದ ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಆಧುನಿಕ ಸಾಹಿತ್ಯದಲ್ಲಿ ಅತ್ಯುನ್ನತ ಸ್ಥಾನ ಹೊಂದಿವೆ ಎಂದು ಡಿಸಿಎಂ ಅಶ್ವಥ್ ನಾರಾಯಣ ಗುಣಗಾನ ಮಾಡಿದ್ದಾರೆ.
ಮೂಲತಃ ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದಲ್ಲಿ ಜನಿಸಿದ ಅವರು ನೆಲದ ಸೊಗಡನ್ನೂ ತಮ್ಮ ಸಾಹಿತ್ಯದಲ್ಲಿ ಸೊಗಸಾಗಿ ಕಟ್ಟಿಕೊಟ್ಟವರು. ಅಪ್ರತಿಮ ಭಾಷಣಕಾರರು ಆಗಿದ್ದ ಸಿದ್ದಲಿಂಗಯ್ಯ ಅವರು ವಿಧಾನ ಪರಿಷತ್ ಸದಸ್ಯರಾಗಿಯೂ ಚಿರಸ್ಮರಣೀಯ ಸೇವೆ ಮಾಡಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬದವರಿಗೆ, ಬಂಧುಗಳಿಗೆ ಮತ್ತು ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ದಯಪಾಲಿಸಲಿ ಎಂದು ಡಿಸಿಎಂ ಪ್ರಾರ್ಥನೆ ಮಾಡಿದ್ದಾರೆ.
ನಾಡಿನ ಹಿರಿಯ ಸಾಹಿತಿ ನಾಡೋಜ ಡಾ. ಸಿದ್ದಲಿಂಗಯ್ಯ ಅವರು ವಿಧಿವಶರಾದ ಸುದ್ದಿ ತಿಳಿದು ಮನಸ್ಸಿಗೆ ನೋವುಂಟಾಗಿದೆ.
ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಿ, ಕುಟುಂಬಸ್ಥರು ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸುವೆ. pic.twitter.com/l7IPCSNLWB
ಶೆಟ್ಟರ್ ಸಂತಾಪ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಗಿ ಜನಪ್ರತಿನಿಧಿಯಾಗಿ ರಾಜ್ಯಕ್ಕೆ ನೀಡಿರುವ ಕೊಡುಗೆ ಅಪಾರ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಗಿ ಕನ್ನಡ ನಾಡು ನುಡಿಯ ರಕ್ಷಣೆ ಮಾಡುವ ಕೆಲಸ ಮಾಡಿದ್ದರು. ನಾಡೋಜ ಡಾ ಸಿದ್ದಲಿಂಗಯ್ಯ ಅವರ ಅಗಲಿಕೆ ರಾಜ್ಯದ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ. ಅವರ ಅಗಲಿಕೆ ಯ ನೋವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬ ವರ್ಗದವರಿಗೂ ಹಾಗೂ ಅಭಿಮಾನಿಗಳಿಗೂ ನೀಡಲಿ ಎಂದು ಭಗವಂತನ ನಲ್ಲಿ ಪ್ರಾರ್ಥಿಸುವುದಾಗಿ ತಮ್ಮ ಶೋಕ ಸಂದೇಶ ದಲ್ಲಿ ತಿಳಿಸಿದ್ದಾರೆ.
ಬೆಂಗಳೂರು: ವಿವಿಧ ಜಿಲ್ಲೆಗಳ ವಿವಿಧ ಮಠಗಳ ಮೂವತ್ತಕ್ಕೂ ಹೆಚ್ಚು ಸ್ವಾಮೀಜಿಗಳು ಶುಕ್ರವಾರ ಬೆಳಗ್ಗೆ ಬೆಂಗಳೂರಿನಲ್ಲಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ನಗರದ ಡಾಲರ್ಸ್ ಕಾಲೋನಿಯಲ್ಲಿರುವ ಡಿಸಿಎಂ ನಿವಾಸಕ್ಕೆ ಆಗಮಿಸಿದ ರಾಮನಗರ, ತುಮಕೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಶ್ರೀಗಳು ಮಾಗಡಿ ತಾಲೂಕಿನಲ್ಲಿರುವ ಸಂಸ್ಕೃತ ವಿಶ್ವವಿದ್ಯಾಲಯವನ್ನು ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಮಾಡುವುದೂ ಸೇರಿ ಕೆಲವಾರು ವಿಷಯಗಳ ಕುರಿತು ಡಿಸಿಎಂ ಅವರ ಚರ್ಚೆ ನಡೆಸಿದರು. ಇದನ್ನೂ ಓದಿ: ವಿಜಯೇಂದ್ರ ಮಠಗಳ ಯಾತ್ರೆ: ಬಿಎಸ್‍ವೈಗೆ ಮಠಾಧೀಶರ ಶ್ರೀರಕ್ಷೆ ಎಂದು ಅಭಿಮಾನಿಗಳಿಂದ ಪೋಸ್ಟರ್
ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಕನ್ನಡಿಗರನ್ನೇ ನೇಮಕ ಮಾಡುವುದು ಹಾಗೂ ಸಂಸ್ಕೃತ ಪ್ರಸರಣೆಗೆ ಸೂಕ್ತ ಪ್ರೋತ್ಸಾಹ ಹಾಗೂ ಬಯಲುಸೀಮೆಯ ಈ ಜಿಲ್ಲೆಗಳಿಗೆ ನೀರಾವರಿ ಒದಗಿಸುವ ಬಗ್ಗೆ ಸ್ವಾಮೀಜಿಗಳು ಡಿಸಿಎಂ ಜತೆ ಮಾತುಕತೆ ನಡೆಸಿದರು.
ಅಖಿಲ ಭಾರತ ಸನಾತನ ಮಠಾಧಿಪತಿಗಳ ಒಕ್ಕೂಟದ ಸೇವಾ ಟ್ರಸ್ಟ್ ವತಿಯಿಂದ ಕೊಳದ ಮಠದ ಶ್ರೀ ಶಾಂತವೀರ ಸ್ವಾಮೀಜಿ, ಶ್ರೀ ಬಸವಲಿಂಗ ಸ್ವಾಮೀಜಿ, ತುಮಕೂರು ಹಿರೇಮಠದ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಸೋಲೂರು ಚಿಲುಮ ಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಭದ್ರಗಿರಿ ಮಠದ ಶ್ರೀ ವೀರಭದ್ರ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ತಮ್ಮಿಡಿಹಳ್ಳಿ ಮಠದ ಶ್ರೀ ಸಿದ್ದಲಿಂಗ ದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ಅನೇಕ ಶ್ರೀಗಳು ಆಗಮಿಸಿದ್ದರು.
ಸ್ವಾಮೀಜಿ ನೀಡಿದ ಮನವಿ ಪತ್ರ ಸ್ವೀಕರಿಸಿದ ಡಿಸಿಎಂ ಅವರು, ಅತಿ ಶೀಘ್ರದಲ್ಲೇ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಕೆಲಸಗಳನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು. ನಮ್ಮ ಸರ್ಕಾರ ನೀರಾವರಿ ಯೋಜನೆಗಳ ಅನುಷ್ಠಾಕ್ಕೆ ಆದ್ಯತೆ ನೀಡಲಿದೆ ಎಂದು ಡಿಸಿಎಂ ಅವರು ಸ್ವಾಮೀಜಿಗಳಿಗೆ ಭರವಸೆ ನೀಡಿದರು.
ತಿರುವನಂತಪುರ: ಮಕ್ಕಳಲ್ಲಿ ಕಲಿಕಾ ಸಾಮಥ್ರ್ಯ ಹೆಚ್ಚಿಸಿ ಅವರಲ್ಲಿ ಆವಿಷ್ಕಾರ ಮನೋಭಾವವನ್ನು ಮೂಡಿಸುವ ಬಿ-ಕ್ಯಾಂಪ್ & ಫೆಸ್ಟ್ ಇದೀಗ ಕರ್ನಾಟಕಕ್ಕೂ ಕಾಲಿಡಲಿದ್ದು, ಅದರ ವಿವರಗಳನ್ನು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವಥ್ ನಾರಾಯಣ್ ಅವರಿಗೆ ಟ್ರಾವಂಕೂರು ರಾಜಮನೆತನದ ಮಹಾರಾಣಿ ಪೋಯಂ ತಿರುನಾಳ್ ಗೌರಿಪಾರ್ವತಿ ಭಾಯಿ ಅವರು ಹಸ್ತಾಂತರ ಮಾಡಿದರು.
ತಿರುವನಂತಪುರದಲ್ಲಿ ಭಾನುವಾರ ಕೌಡಿಯಾರ್‍ನಲ್ಲಿರುವ ಅರಮನೆಯಲ್ಲಿ ಈ ಕಾರ್ಯಕ್ರಮ ನಡೆಯಿತು. ಈಗಾಗಲೇ ಕೇರಳದಲ್ಲಿ ಬಿ-ಕ್ಯಾಂಪ್ & ಫೆಸ್ಟ್ ಬಹಳ ಹೆಸರುವಾಸಿಯಾಗಿದ್ದು, ಇದನ್ನು ಕೇರಳದ ಬ್ಲೂಮ್‍ಬ್ಲೂಮ್ ಎಂಬ ಸ್ಟಾರ್ಟಪ್ ಅಭಿವೃದ್ಧಿಪಡಿಸಿದೆ.
ಜಾಗತಿಕವಾಗಿ ಶೈಕ್ಷಣಿಕ ರಂಗದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನದಲ್ಲಿ ಇಟ್ಟುಕೊಂಡು ಬಿ-ಕ್ಯಾಂಪ್ & ಫೆಸ್ಟ್ ಅನ್ನು ರೂಪಿಸಲಾಗಿದ್ದು, ಅಪರಿಮಿತವಾಗಿ ಕಲಿಯಲು ಅವಕಾಶವಿದೆ. 5 ರಿಂದ 15 ವರ್ಷದೊಳಗಿನ ಮಕ್ಕಳಲ್ಲಿ ನಾವೀನ್ಯತೆಯನ್ನು ಬೆಳೆಸುವ ಉದ್ದೇಶ ಇದರದ್ದು. ಕೇರಳದಲ್ಲಿ 500ಕ್ಕೂ ಹೆಚ್ಚು ಶಿಕ್ಷಣತಜ್ಞರ ಮಾರ್ಗದರ್ಶನದಲ್ಲಿ 6,000ಕ್ಕೂ ಹೆಚ್ಚು ಮಕ್ಕಳು ಇದರ ಪ್ರಯೋಜನವನ್ನು ಪಡೆದಿದ್ದಾರೆ ಎಂದು ಬ್ಲೂಮ್‍ಬ್ಲೂಮ್ ಪ್ರತಿನಿಧಿಗಳು ಡಿಸಿಎಂ ಅವರಿಗೆ ಮಾಹಿತಿ ನೀಡಿದರು.
ಆನ್‍ಲೈನ್ ಮೂಲಕವೂ ತಮ್ಮ ಆಯ್ಕೆಯ ವಿಷಯಗಳನ್ನು ಮಕ್ಕಳು ಪರಿಣಾಮಕಾರಿಯಾಗಿ ಕಲಿಯಬಹುದಾಗಿದೆ.
– ಡಿಪ್ಲೊಮಾ, ಪಿಜಿ ಸಿಇಟಿ ನಿಗದಿಯಂತೆ ನಡೆಯಲಿದೆ
– ಅಕ್ಟೋಬರ್ 1 ರಿಂದ ಆಫ್‍ಲೈನ್ ತರಗತಿ ಆರಂಭ
ಬೆಂಗಳೂರು: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಹತ್ವದ ನಿರ್ಧಾರ ಕೈಕೊಂಡಿರುವ ರಾಜ್ಯ ಸರಕಾರವು, 2019-20ನೇ ಸಾಲಿನಲ್ಲಿ ಎಂಜಿನಿಯರಿಂಗ್ ಸೇರಿ ಇತರ ಪದವಿ, ಸ್ನಾತಕೋತ್ತರ, ಡಿಪ್ಲೊಮಾ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಧ್ಯಂತರ ಸೆಮಿಸ್ಟರ್ (intermediate Semester) ವಿದ್ಯಾರ್ಥಿಗಳನ್ನು ಅಂತಿಮ ಪರೀಕ್ಷೆ ಇಲ್ಲದೆಯೇ ಮುಂದಿನ ಹಂತಕ್ಕೆ ಉತ್ತೀರ್ಣಗೊಳಿಸುವುದಾಗಿ ಪ್ರಕಟಿಸಿದೆ. ಜೊತೆಗೆ ಪ್ರಸಕ್ತ ಶೈಕ್ಷಣಿಕ ವರ್ಷದ ಅಂತಿಮ ಸೆಮಿಸ್ಟರ್ ಅಥವಾ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಯುಜಿಸಿ ಮಾರ್ಗಸೂಚಿ ಅನ್ವಯ ಸೆಪ್ಟೆಂಬರ್ ಅಂತ್ಯದೊಳಗೆ ಪರೀಕ್ಷೆ ನಡೆಸಲೂ ನಿರ್ಧರಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಮತ್ತು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ, ಎಂಜಿನಿಯರಿಂಗ್, ಪದವಿ, ಸ್ನಾತ್ತಕೋತ್ತರ ಪದವಿಗೆ ಪರೀಕ್ಷೆ ನಡೆಸಬೇಕಾಗಿತ್ತು. ಆದರೆ ಕೊರೊನಾದಿಂದ ತಡವಾಗಿತ್ತು. ಹೀಗಾಗಿ ವಿದ್ಯಾರ್ಥಿಗಳಿಗೆ ಅನಾನುಕೂಲ ಆಗದಂತೆ ಕ್ರಮವಹಿಸಿದ್ದೇವೆ. ಆನ್‍ಲೈನ್ ಶಿಕ್ಷಣ, ಡಿಜಿಟಲ್ ಮೂಲಕ ಶಿಕ್ಷಣ ನೀಡಲಾಗಿದೆ. ಅನೇಕ ಮಾರ್ಗದಲ್ಲಿ ಶಿಕ್ಷಣ ನೀಡಲಾಗಿದೆ. ವಿವಿಗಳಲ್ಲಿ ಅಗತ್ಯ ಪಾಠ ಮಾಡಲಾಗಿದೆ. ಕೆಲವರಿಗೆ ನೆಟ್ ಸಮಸ್ಯೆ ಅಂತ ಹೇಳಲಾಗುತ್ತಿದೆ ಎಂದರು.
ಎಂಜಿನಿಯರಿಂಗ್ 1, 2, 3 ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲ. ಪದವಿ 1, 2 ವರ್ಷದ ವಿದ್ಯಾರ್ಥಿಗಳಿಗೂ ಪರೀಕ್ಷೆ ಇಲ್ಲ. ಅದೇ ರೀತಿ ಡಿಪ್ಲೋಮಾ 1, 2, ವರ್ಷದ ವಿದ್ಯಾರ್ಥಿಗಳಿಗೂ ಪರೀಕ್ಷೆ ಇಲ್ಲ. ಮೊದಲ ವರ್ಷದ ಸ್ನಾತಕೋತ್ತರ ಪದವಿ ಪರೀಕ್ಷೆ ಇಲ್ಲ. ಅಂತಿಮ ವರ್ಷದ ಪರೀಕ್ಷೆ ಬಿಟ್ಟು ಯಾರಿಗೂ ಪರೀಕ್ಷೆ ಇಲ್ಲ. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ವಿವಿಗಳು ಪರೀಕ್ಷೆ ಮಾಡಬೇಕು.
ಬ್ಯಾಕ್ ಸಬ್ಜೆಕ್ಟ್ ಇದ್ದರೆ ಫೈನಲ್ ಪರೀಕ್ಷೆಯಲ್ಲಿ ಬರೆಯಬೇಕು. ಸೆಪ್ಟೆಂಬರ್‍ನಲ್ಲಿ ಅಂತಿಮ ವರ್ಷದ ಪರೀಕ್ಷೆ ಮಾಡಬೇಕು ಎಂದು ಸರ್ಕಾರ ಅಧಿಕೃತ ಘೋಷಣೆ ಮಾಡಿದೆ.
ಸೆಪ್ಟೆಂಬರ್ ನಲ್ಲಿ ಪರೀಕ್ಷೆ ಬರೆಯಲು ಇಷ್ಟ ಇಲ್ಲದೆ ಇರೋರಿಗೆ ಮುಂದಿನ ಪರೀಕ್ಷೆ ಬರೆಯಲು ಅವಕಾಶ. ಫ್ರೆಶ್ ಅಭ್ಯರ್ಥಿಗಳಾಗಿ ಬರೆಯಬಹುದು. ಇಂಟರನಲ್ ಅಸೆಸ್ಮೆಟ್, ಹಿಂದಿನ ವರ್ಷದ ಪರೀಕ್ಷೆ ಆಧಾರದಲ್ಲಿ ಪಾಸ್ ಮಾಡುತ್ತೇವೆ. ಇಂಟರನಲ್ ಅಸೆಸ್ಮೆಟ್ 50% ಹಿಂದಿನ ಪರೀಕ್ಷೆ 50% ಆಧಾರದಲ್ಲಿ ಪಾಸ್ ಮಾಡುತ್ತೀವಿ. ಆರೋಗ್ಯ, ಸುರಕ್ಷಿತೆ ದೃಷ್ಟಿಯಿಂದ ಪರೀಕ್ಷೆ ರದ್ದು ಮಾಡಿದ್ದೇವೆ. ಕೇಂದ್ರ ಸರ್ಕಾರ ನಮಗೆ ಅವಕಾಶ ಕೊಟ್ಟಿತ್ತು. ಹೀಗಾಗಿ ನಾವು ಈ ನಿರ್ಧಾರ ಮಾಡಿದ್ದೇವೆ ಎಂದರು.
ಇಂಟರನಲ್ ಅಸೆಸ್ಮೆಟ್ ಮಾಡಲು ಅವಕಾಶ ಮಾಡಲು ಅವಕಾಶ ಇದೆ. ಆನ್‍ಲೈನ್, ಆಫ್‍ಲೈನ್ ಮೂಲಕ ಮಾಡಬಹುದು. ಪರೀಕ್ಷೆ ಕೂಡ ಆನ್‍ಲೈನ್, ಆಫ್‍ಲೈನ್ ಮಾಡಬಹುದು ಎಂದು ತಿಳಿಸಿದರು.
2020-21ರ ಶೈಕ್ಷಣಿಕ ಸಾಲಿನ ಮೊದಲ ಸೆಮಿಸ್ಟರ್‍ಗೆ ಸೆಪ್ಟೆಂಬರ್ 1 ರಿಂದಲೇ ಆನ್‍ಲೈನ್ ತರಗತಿಗಳು ಹಾಗೂ ಅಕ್ಟೋಬರ್ 1 ರಿಂದ ಆಫ್‍ಲೈನ್ ತರಗತಿಗಳು ಆರಂಭವಾಗುತ್ತವೆ. ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ವಿವಿಗಳು, ಕಾಲೇಜುಗಳಿಗೆ ಸೂಚಿಸಲಾಗಿದೆ. ಪ್ರತಿ ವಿವಿಯಲ್ಲಿ ಹೆಲ್ತ್‍ಲೈನ್ ಪ್ರಾರಂಭ ಮಾಡಲಾಗಿದೆ. ಅಗತ್ಯ ಮಾಹಿತಿ ಸಂಗ್ರಹ ಮಾಡಲು ವಿದ್ಯಾರ್ಥಿಗಳು ಸಮಸ್ಯೆ ಹೇಳಿಕೊಳ್ಳಲು ಹೆಲ್ಪ್‍ಲೈನ್‍ಗೆ ಫೋನ್ ಮಾಡಬಹುದು ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.
ಸಿಇಟಿ ಪರೀಕ್ಷೆ ಜುಲೈ 30, 31ಕ್ಕೆ ನಡೆಯುತ್ತೆ. ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ. ಸಿಇಟಿ ಪರೀಕ್ಷೆಗೂ ಹೆಲ್ತ್ ಲೈನ್ ಮಾಡುತ್ತೇವೆ. ವಿದ್ಯಾರ್ಥಿಗಳು ಸಮಸ್ಯೆ ಹೇಳಿಕೊಳ್ಳಬಹುದು. ಪಿಜಿಸಿಇಟಿ ಆಗಸ್ಟ್ 8, 9 ನಡೆಯುತ್ತೆ. ಡಿಪ್ಲೋಮಾ ಸಿಇಟಿ ಆಗಸ್ಟ್ 9ಕ್ಕೆ ನಡೆಯುತ್ತೆ. ಈ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ. ಕುಲಪತಿಗಳು, ಶಿಕ್ಷಣ ತಜ್ಞರ ಜೊತೆ ಚರ್ಚೆ ಮಾಡಿ ಈ ನಿರ್ಧಾರ ಮಾಡಲಾಗಿದೆ. ರಾಜ್ಯಪಾಲರ ಅನುಮತಿ ಪಡೆದು, ಯುಜಿಸಿ ಸಲಹೆ ಪಡೆದು ಈ ನಿರ್ಧಾರ ಮಾಡಲಾಗಿದೆ ಎಂದು ಡಿಸಿಎಂ ತಿಳಿಸಿದರು.
ಬೆಂಗಳೂರು: ಜನರ ಜೀವ ರಕ್ಷಣೆ ಜತೆಗೆ ಜನ ಜೀವನವನ್ನು ಸಹಜ ಸ್ಥಿತಿಗೆ ತರುವುದು ರಾಜ್ಯ ಸರ್ಕಾರದ ಗುರುತರ ಜವಾಬ್ದಾರಿಯಾಗಿದ್ದು ಇಂದಿನ ಕೇಂದ್ರದ ಮಾರ್ಗಸೂಚಿಯಂತೆ ಕಾರ್ಯ ನಿರ್ವಹಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ಹೇಳಿದರು.
ಟಿ.ದಾಸರಹಳ್ಳಿಯ ಶೆಟ್ಟಿಹಳ್ಳಿ ಬಿಜೆಪಿ ಮುಖಂಡ ಸುರೇಶ್ ನೇತೃತ್ವದಲ್ಲಿ ಶ್ರೀ ಸಾಯಿ ಫೌಂಡೇಶನ್ ವತಿಯಿಂದ ಸುಮಾರು 4 ಸಾವಿರ ಬಡವರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದರು. ಆರ್ಥಿಕ ನಷ್ಟವನ್ನು ಲೆಕ್ಕಿಸದೆ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಹಂತದಲ್ಲಿ ಲಾಕ್‍ಡೌನ್ ಜಾರಿಗೊಳಿಸಿ ದೇಶವನ್ನು ಮಹಾಮಾರಿ ಗಂಡಾಂತರದಿಂದ ಪಾರು ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಕೋವಿಡ್ 19 ಸೋಂಕು ಕಟ್ಟಿ ಹಾಕಲು ದೇಶ ಸರ್ವ ಸನ್ನದ್ಧವಾಗಿದ್ದು, ಸೋಂಕು ಪತ್ತೆಗೆ ಅಗತ್ಯವಿರುವ ಪರೀಕ್ಷಾ ಲ್ಯಾಬ್ ಗಳನ್ನು ಸ್ಥಾಪಿಸಲಾಗಿದೆ. ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ಮೂಲಕ ಕೊರೊನಾವನ್ನು ನಿಯಂತ್ರಿಸಲಾಗುತ್ತಿದೆ. ಪಿಪಿಇ ಕಿಟ್ ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಜನರ ಆರೋಗ್ಯ ವರ್ಧನೆಗೆ ಆಪ್ತ ಮಿತ್ರ ಆ್ಯಪ್ ಮೂಲಕ ಈ ಎಲ್ಲ ರೀತಿಯ ನೆರವು ನೀಡಲಾಗುತ್ತಿದ್ದು, ಲಾಕ್‍ಡೌನ್ ಅವಧಿಯಲ್ಲಿ ಬಡವರಿಗೆ ಅಸಹಾಯಕರಿಗೆ ತೊಂದರೆಯಾಗದಂತೆ ಸರ್ಕಾರವೂ ಸಾಕಷ್ಟು ಕ್ರಮ ಕೈಗೊಂಡಿದೆ ಎಂದರು.
ಮಾಜಿ ಶಾಸಕ ಮುನಿರಾಜು ಮಾತನಾಡಿ, ಕ್ಷೇತ್ರದಾದ್ಯಂತ 25 ಬಿಎಸ್‍ವೈ ಕ್ಯಾಂಟೀನ್ ಗಳ ಮೂಲಕ ನಿತ್ಯ 50 ರಿಂದ 60 ಸಾವಿರ ಬಡವರಿಗೆ ಆಹಾರ ಪೂರೈಸಲಾಗುತ್ತಿದೆ. ಜತೆಗೆ ಕಡು ಬಡವರಿಗೆ 60 ಸಾವಿರ ಕಿಟ್ ವಿತರಿಸಲಾಗಿದ್ದು, ಬಿಜೆಪಿ ಮುಖಂಡರು ಕೈಜೋಡಿಸಿದ್ದಾರೆ ಎಂದರು.
ಬಿಜೆಪಿ ಮುಖಂಡ ಶೆಟ್ಟಿಹಳ್ಳಿ ಸುರೇಶ್ ಮಾತನಾಡಿ, ಲಾಕ್‍ಡೌನ್ ದಿನದಿಂದಲೂ ಸುಮಾರು 2000 ಮಂದಿಗೆ ನಿರಂತರವಾಗಿ ತಿಂಡಿ, ಊಟ ನೀಡಲಾಗುತ್ತಿದೆ. ವಾರ್ಡ್ ವ್ಯಾಪ್ತಿಯಲ್ಲಿ ಕಡು ಬಡವರನ್ನು ಗುರುತಿಸಿ ಲಾಕ್‍ಡೌನ್ ವಿಸ್ತರಣೆಯಾದಂತೆಲ್ಲಾ ಬಡವರಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಲಾಗಿದೆ ಎಂದರು.
ಈ ವೇಳೆ ಡಿಸಿಎಂ ಅಶ್ವಥ್ ನಾರಾಯಣ್ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರ ಪಿಓಪಿಯಲ್ಲಿ ನಿರ್ಮಾಣ ಮಾಡಿರುವ ಮೂರ್ತಿಯನ್ನ ಉಡುಗರೆಯಾಗಿ ನೀಡಿ ಗೌರವಿಸಲಾಯಿತು. ಇನ್ನೂ ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಬಿಜೆಪಿ ಅಧ್ಯಕ್ಷ ಎನ್ ಲೋಕೇಶ್, ಶೆಟ್ಟಿಹಳ್ಳಿ ವಾರ್ಡ್ ಬಿಜೆಪಿ ಅಧ್ಯಕ್ಷ ರಮೇಶ್ ಯಾದವ್, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಬಿ.ಆರ್ ಸತೀಶ್ ಬಿಜೆಪಿ ಮುಖಂಡರಾದ ಮಂಜುನಾಥ್, ಕೃಷ್ಣಕುಮಾರ್ ಮೊದಲಾದವರಿದ್ದರು.
ಬೆಂಗಳೂರು: ಕೊರೊನಾ ವಿಚಾರಕ್ಕೆ ಕರೆದ ಸಭೆಯ ಬಳಿಕ ಡಿಸಿಎಂ ಅಶ್ವಥ್ ನಾರಾಯಣ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಧ್ಯೆ ಜಟಾಪಟಿ ನಡೆದಿದೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಕೊರೊನಾಗೆ ಕರ್ನಾಟಕ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಡಿಸಿಗಳ ಜೊತೆ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಜಿಲ್ಲೆಗಳ ಪರಿಸ್ಥಿತಿ ತಿಳಿಯಲು ಡಿಸಿಗಳ ಜೊತೆ ಸಿಎಂ ಯಡಿಯೂರಪ್ಪ ಮೂಲಕ ಸಭೆ ನಡೆಸಿದ್ದು, ಸಚಿವರಾದ ಅಶೋಕ್, ಬೊಮ್ಮಾಯಿ, ಸುರೇಶ್ ಕುಮಾರ್, ಸುಧಾಕರ್, ಲಕ್ಷ್ಮಣ ಸವದಿ ಸೇರಿದಂತೆ ಅನೇಕ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.
ಈ ಸಭೆಯ ಬಳಿಕ ಅನ್ ಲೈನ್ ಫುಡ್ ಡೆಲಿವರಿ, ಸಿಬ್ಬಂದಿಗೆ ಪಾಸ್ ನೀಡಬೇಕೆಂದು ಡಿಸಿಎಂ ಅಶ್ವಥ್ ನಾರಾಯಣ ಆಗ್ರಹಿಸಿದ್ದಾರೆ. ಈ ವೇಳೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಬೇಡ ಎಂದು ಹೇಳಿದ್ದಾರೆ. ಈ ವಿಚಾರಕ್ಕೆ ಇಬ್ಬರ ಮಧ್ಯೆ ಜಟಾಪಟಿ ನಡೆದಿದೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.
ಕೆಲ ಅಂಗಡಿಗಳನ್ನು ಓಪನ್ ಮಾಡಿಸಿದ್ದೀರಿ. ಆ ಅಂಗಡಿ ಮಾಲೀಕರಿಂದ ಹಣ ಪಡೆದು ಸೂಪರ್ ಮಾರ್ಕೆಟ್ ತೆರೆಯಲು ಅನುಮತಿ ನೀಡಿದ್ದೀರಿ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಆರೋಪ ಮಾಡಿದ್ದಾರೆ. ಅಶ್ವಥ್ ನಾರಾಯಣ್ ಆರೋಪಕ್ಕೆ ಭಾಸಸ್ಕರ್ ರಾವ್ ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದೀರಿ. ನನಗೆ ಪೊಲೀಸ್ ಆಯುಕ್ತ ಹುದ್ದೆಯೇ ಬೇಡ ಎಂದು ಹೇಳಿ ಬೇಸರ ವ್ಯಕ್ತಪಡಿಸಿ ಸಭೆಯಿಂದ ಹೊರ ನಡೆದಿದ್ದಾರೆ.
ಬೆಂಗಳೂರು: ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‍ಆರ್)ಯನ್ನು ಶಾಲಾ ಪೂರ್ವ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಬಳಸಿದರೆ ಉತ್ತಮ. ಈ ನಿಟ್ಟಿನಲ್ಲಿ ಕಂಪನಿಗಳು ಕೈಗೊಳ್ಳುವ ಎಲ್ಲ ಯೋಜನೆಗಳಿಗೆ ಸರ್ಕಾರದ ಸಂಪೂರ್ಣ ಬೆಂಬಲ ಇರುತ್ತದೆ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ತಿಳಿಸಿದರು.
ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯ ಬಳಕೆಯ ಪರಿಣಾಮಗಳ ಕುರಿತು ಅಮೆರಿಕ ಚೇಂಬರ್ ಆಫ್ ಕಾರ್ಮರ್ಸ್ ನಿಂದ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಬದುಕಿನಲ್ಲಿ ಕಲಿಯುವ ಪ್ರತಿ ಕೌಶಲ, ಜ್ಞಾನ ಸಮಾಜದ ಒಳಿತಿಗೆ ಬಳಕೆಯಾಗಬೇಕು. ನಮ್ಮ ಕಲಿಕೆ ಸಮಾಜದ ಒಳಿತಿಗೆ ಬಳಕೆಯಾಗದಿದ್ದರೆ ಅಂಥ ಕಲಿಕೆ ವ್ಯರ್ಥ. ಸಿಎಸ್‍ಆರ್ ಒಳ್ಳೆಯ ಕೆಲಸ ಮಾಡುತ್ತಿದೆ. ಸಮಾಜ ಹಾಗೂ ಸರ್ಕಾರಕ್ಕೆ ಪೂರಕವಾಗಿ ಕೆಲಸ ಮಾಡುತ್ತಿವೆ. ಶಿಕ್ಷಣ ವ್ಯವಸ್ಥೆಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಇಂಥ ಸಂಸ್ಥೆಗಳು ಕೈಗೊಳ್ಳುವ ಎಲ್ಲ ಯೋಜನೆಗಳಿಗೆ ಸರ್ಕಾರದ ಸಹಕಾರ ಇರುತ್ತದೆ ಎಂದು ಭರವಸೆ ನೀಡಿದರು.
ಸಾಮಾನ್ಯವಾಗಿ ಸರ್ಕಾರಗಳು ತತ್‍ಕ್ಷಣದ ಫಲಿತಾಂಶಕ್ಕೆ ಹೆಚ್ಚು ಒತ್ತು ನೀಡಲು ಪ್ರಯತ್ನಿಸುತ್ತವೆ. ನರ್ಸರಿ ಶಾಲೆಗಳಿದ್ದರೂ, ಅವುಗಳ ಕಾರ್ಯವೈಖರಿ, ಇನ್ನೂ ಸುಧಾರಿಸಬೇಕಿದೆ. ಈ ಕೊರತೆಯನ್ನು ನೀಗಿಸುವಲ್ಲಿ ಸಿಎಸ್‍ಆರ್ ಪಾತ್ರ ದೊಡ್ಡದು. ಶಿಕ್ಷಣದಲ್ಲಿ ಮೊದಲ ಆದ್ಯತೆ ನರ್ಸರಿ ಶಿಕ್ಷಣಕ್ಕೆ ಸಿಗಬೇಕು. ಈ ನಿಟ್ಟಿನಲ್ಲಿ ಕಾರ್ಪೊರೇಟ್ ಕಂಪನಿಗಳು ತಮ್ಮ ಸಾಮಾಜಿಕ ಹೊಣೆಗಾರಿಕೆ ನಿಧಿ ಉತ್ತಮ ರೀತಿಯಲ್ಲಿ ಬಳಕೆಯಾಗಬೇಕು ಎಂದರು.
ಸೂಕ್ತ ಶಿಕ್ಷಣ ಒದಗಿಸುವ ಮೂಲಕ ಸಮಾಜದ ಬಹುತೇಕ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ರಚನಾತ್ಮಕ ಬದಲಾವಣೆಗಳನ್ನು ಒಳಗೊಂಡಿದ್ದು, ಹಲವು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಸೂಚಿಸಲಿದೆ. ಸಾಮಾಜಿಕ ಬದ್ಧತೆ, ಕ್ರೀಡೆ, ಸಂಸ್ಕೃತಿಯನ್ನೊಳಗೊಂಡಂತೆ ಶಿಕ್ಷಣ ನೀತಿ ಬಹಳ ಮುಖ್ಯ. ಸರಿಯಾದ ರೀತಿಯಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳದಿದ್ದರೆ ಸಮಸ್ಯೆಗಳು ಎದುರಾಗುತ್ತವೆ. ಹೊಸ ನೀತಿಗಳನ್ನು ತರುವುದರ ಜೊತೆಗೆ ಅವುಗಳ ಅನುಷ್ಠಾನಕ್ಕೂ ಆದ್ಯತೆ ನೀಡಬೇಕು. ಅಲ್ಲದೆ ಸುಸ್ಥಿರ ಅಭಿವೃದ್ಧಿ ಸಾಧಿಸುವುದು ಸಹ ಬಹಳ ಮುಖ್ಯ ಎಂದರು.
ಶಿಕ್ಷಣ ಕ್ಷೇತ್ರದ ಬಹು ದೊಡ್ಡ ಸಮಸ್ಯೆ ಎಂದರೆ ಸೂಕ್ತ ಸಂವಹನ ಇಲ್ಲದಿರುವುದು. ಯಾವ ಸೌಲಭ್ಯಗಳಿವೆ ಎಂಬ ಮಾಹಿತಿ ಇಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಾರೆ. ಈ ಗೊಂದಲವನ್ನು ಪರಿಹರಿಸಲು ಎಲ್ಲವನ್ನೂ ಡಿಜಿಟಲೀಕರಣಗೊಳಿಸುವ ಕೆಲಸ ಆಗುತ್ತಿದೆ. ಉದ್ದಿಮೆಗಳು ಹಾಗೂ ಶೈಕ್ಷಣಿಕ ಮಾರ್ಗದರ್ಶಕರ ಪಟ್ಟಿ ಇರುವ ಆನ್‍ಲೈನ್ ವೇದಿಕೆ ಸೃಷ್ಟಿಸಲಾಗುವುದು. ಎಲ್ಲೆಲ್ಲಿ ಇಂಟರ್ನ್‍ಶಿಪ್, ಪ್ರಾಜೆಕ್ಟ್ ಮಾಡಲು ಅವಕಾಶ ಇದೆ, ಉದ್ಯೋಗಾವಕಾಶಗಳು ಎಲ್ಲಿವೆ ಎಂಬ ಮಾಹಿತಿ ಈ ಆನ್‍ಲೈನ್ ವೇದಿಕೆಯಲ್ಲಿ ಲಭ್ಯ. ಈ ಸೌಲಭ್ಯಗಳನ್ನು ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ಅಮೆರಿಕ ಚೇಂಬರ್ ಆಫ್ ಕಾರ್ಮರ್ಸ್ ಸಿಇಓ ರಂಜನಾ ಖನ್ನಾ ಹಾಗೂ ಅಮೆರಿಕ ಮೂಲದ ಹಲವು ಕಂಪನಿಗಳ ಮುಖ್ಯಸ್ಥರು ಭಾಗಿಯಾಗಿದ್ದರು.