Tag: ಅಶ್ವತ್ಥ ನಾರಾಯಣ್

  • ಬೆಂಗಳೂರಿನಲ್ಲಿ ರಸ್ತೆಗುಂಡಿ ಮುಚ್ಚುವ ಮೂಲಕ ಸಾಂಕೇತಿಕ ಹೋರಾಟ – ಅಶ್ವತ್ಥ ನಾರಾಯಣ್

    ಬೆಂಗಳೂರಿನಲ್ಲಿ ರಸ್ತೆಗುಂಡಿ ಮುಚ್ಚುವ ಮೂಲಕ ಸಾಂಕೇತಿಕ ಹೋರಾಟ – ಅಶ್ವತ್ಥ ನಾರಾಯಣ್

    – ಬುಧವಾರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರಸ್ತೆ ತಡೆ

    ಬೆಂಗಳೂರು: ಅಭಿವೃದ್ಧಿ ಶೂನ್ಯತೆ ಹಾಗೂ ರಸ್ತೆ ಗುಂಡಿಯ ವಿಷಯವನ್ನು ಸರ್ಕಾರಕ್ಕೆ ಮನವರಿಕೆ ಮಾಡುವ ದೃಷ್ಟಿಯಿಂದ ರಾಜ್ಯದ ಎಲ್ಲ ಕಡೆ ಬುಧವಾರ (ಸೆ.24) ರಸ್ತೆ ತಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ್ (Ashwath Narayana) ಅವರು ತಿಳಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ (Bengaluru) ರಸ್ತೆ ಗುಂಡಿಗಳನ್ನು ಮುಚ್ಚುವ ಮೂಲಕ ಸಾಂಕೇತಿಕವಾಗಿ ಹೋರಾಟ ಮಾಡುತ್ತೇವೆ. ಕಾಂಗ್ರೆಸ್ (Congress) ಸರ್ಕಾರವು ಜನವಿರೋಧಿಯಾಗಿದ್ದು, ಆಡಳಿತದಲ್ಲಿ ವಿಫಲವಾಗಿದೆ. ಜನರನ್ನು ಬೆದರಿಸುವ ಸರ್ಕಾರವಾಗಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ವರ್ತನೆಯನ್ನು ಖಂಡಿಸಿ ಮತ್ತು ತಕ್ಷಣ ರಸ್ತೆಗಳ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ಕೊಪ್ಪಳ ಯಲ್ಲಾಲಿಂಗನ ಕೊಲೆ ಪ್ರಕರಣ – ಅ.3ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್

    ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ದಿನದಿಂದಲೂ ಸಂಪೂರ್ಣವಾಗಿ ಅಭಿವೃದ್ಧಿ ಕುಂಠಿತವಾಗಿದೆ. ರಸ್ತೆಗಳು ಎಲ್ಲೆಡೆ ಸಂಪೂರ್ಣವಾಗಿ ಹಾಳಾಗಿವೆ. ಎಲ್ಲ ಕಡೆ ಗುಂಡಿಯಲ್ಲಿ ರಸ್ತೆ ಇದೆ. ಇಷ್ಟೊಂದು ತೆರಿಗೆ ಹೇರಿದ ಮೇಲೂ ಹೀಗಾಗಿದೆ. ಬೆಲೆ ಏರಿಕೆ, ತೆರಿಗೆಗಳ ಮೂಲಕ ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 1.5 ಲಕ್ಷ ಕೋಟಿ ರೂ. ಆದಾಯ ಪಡೆದುಕೊಂಡಿದೆ. ಗ್ಯಾರಂಟಿಗೆ 90 ಸಾವಿರ ಕೋಟಿ ರೂ. ಖರ್ಚಾಗಿರಬಹುದು. ಇನ್ನೊಂದೆಡೆ ಸುಮಾರು 39 ಸಾವಿರ ಕೋಟಿ ರೂ. ಎಸ್‌ಇಪಿ, ಟಿಎಸ್‌ಪಿ ಹಣವನ್ನೂ ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿದ್ದಾರೆ.

  • ರಾಮನಗರ ಜಿಲ್ಲೆಯಲ್ಲಿ ಮಳೆ ಹಾವಳಿ- ಇಂದು ಮಧ್ಯಾಹ್ನ ಸಿಎಂ, ಉಸ್ತುವಾರಿ ಸಚಿವರ ಭೇಟಿ

    ರಾಮನಗರ ಜಿಲ್ಲೆಯಲ್ಲಿ ಮಳೆ ಹಾವಳಿ- ಇಂದು ಮಧ್ಯಾಹ್ನ ಸಿಎಂ, ಉಸ್ತುವಾರಿ ಸಚಿವರ ಭೇಟಿ

    ಬೆಂಗಳೂರು: ಸತತ ಮಳೆಯಿಂದ ನಲುಗಿರುವ ರಾಮನಗರ ಜಿಲ್ಲೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಉಸ್ತುವಾರಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಇಂದು ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಜಿಲ್ಲಾಡಳಿತದೊಂದಿಗೆ ಚರ್ಚಿಸಿ, ಆಗಿರುವ ನಷ್ಟದ ಅಂದಾಜು ತೆಗೆದುಕೊಳ್ಳಲಿದ್ದಾರೆ.

    ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ ಮಾತನಾಡಿ, ರಾಮನಗರ ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಅಪಾರ ಹಾನಿಯಾಗಿದೆ. ಸಂತ್ರಸ್ತರಿಗೆ ತಕ್ಷಣವೇ ಗಂಜಿಕೇಂದ್ರ, ಸುರಕ್ಷಿತ ಸ್ಥಳಾಂತರ, ದವಸ-ಧಾನ್ಯ ವಿತರಣೆ ಮತ್ತು ಮನೆಗಳಿಂದ ನೀರು ತೆರವಿಗೆ ಜಿಲ್ಲಾಡಳಿತ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದೆ ಎಂದಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿರುವ ಅವರು, ಜಿಲ್ಲೆಯಲ್ಲಿ ಸೃಷ್ಟಿಯಾಗಿರುವ ಪ್ರವಾಹ ಪರಿಸ್ಥಿತಿ ಕುರಿತು ಮುಖ್ಯಮಂತ್ರಿ ಬೊಮ್ಮಾಯಿಯವರ ಜತೆ ಬೆಳಗ್ಗೆ ಚರ್ಚಿಸಿದೆ. ಜೊತೆಗೆ ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದು ತತ್‍ಕ್ಷಣಕ್ಕೆ ಅಗತ್ಯವಿರುವ ಕ್ರಮಗಳನ್ನು ಕ್ಷಿಪ್ರವಾಗಿ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಆದೇಶಿಸಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ರಾಮನಗರದಲ್ಲಿ ಕಂಡು ಕೇಳರಿಯದ ಮಳೆ – ಶಾಲಾ, ಕಾಲೇಜುಗಳಿಗೆ ರಜೆ

    ಜಿಲ್ಲೆಯ ಹಲವು ಕೆರೆಗಳು ಕೋಡಿ ಬಿದ್ದು ಬೆಂಗಳೂರು-ಮೈಸೂರು ಹೆದ್ದಾರಿಯ ಮೇಲೆ ನೀರು ನುಗ್ಗಿ, ಅಸ್ತವ್ಯಸ್ತವಾಗಿದೆ. ಆದ್ದರಿಂದ ಎರಡೂ ನಗರಗಳ ನಡುವೆ ಪಯಣ ಮಾಡುವವರು ಪರ್ಯಾಯ ಮಾರ್ಗಗಳನ್ನು ಆಶ್ರಯಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ. ಕೆರೆಗಳು ಕೋಡಿ ಬಿದ್ದು ಸಾವಿರಾರು ಎಕರೆ ಜಮೀನಿಗೆ ನುಗ್ಗಿ, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಬೆಳೆ ನಷ್ಟದ ಅಂದಾಜು ಮಾಡಲು ಕೃಷಿ ಮತ್ತು ಕಂದಾಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಂತ್ರಸ್ತರಿಗೆ ಸೂಕ್ತ ಪರಿಹಾರ ಕೊಡಲು ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ಹೇಳಿದರು.

    ರಾಮನಗರದಲ್ಲಿ ಹಲವು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಇಂಥವರಿಗೂ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಮೊದಲಿಗೆ ನೀರು ತೆರವುಗೊಳಿಸಲು ಆದ್ಯತೆ ಕೊಡಲಾಗಿದೆ. ಇದರ ಜತೆಗೆ ಮಳೆ ನೀರಿನ ಹರಿವನ್ನು ಬೇರೆಡೆಗೆ ಹೊರಳಿಸಲು ಅಗತ್ಯ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅರಗ ಜ್ಞಾನೇಂದ್ರ, ಅಶ್ವತ್ಥ ನಾರಾಯಣ್ ಮೇಲಿನ ಆರೋಪಕ್ಕೆ ಹುರುಳು, ತಿರುಳು ಇಲ್ಲ: ಆರ್.ಅಶೋಕ್

    ಅರಗ ಜ್ಞಾನೇಂದ್ರ, ಅಶ್ವತ್ಥ ನಾರಾಯಣ್ ಮೇಲಿನ ಆರೋಪಕ್ಕೆ ಹುರುಳು, ತಿರುಳು ಇಲ್ಲ: ಆರ್.ಅಶೋಕ್

    ಬೆಂಗಳೂರು: ಗೃಹಸಚಿವ ಅರಗ ಜ್ಞಾನೇಂದ್ರ ಮತ್ತು ಅಶ್ವತ್ಥ ನಾರಾಯಣ್ ಅವರ ಮೇಲಿನ ಆರೋಪಕ್ಕೆ ಹುರುಳು, ತಿರುಳು ಯಾವುದೂ ಇಲ್ಲ. ನಿಮ್ಮ ತಟ್ಟೆಯಲ್ಲಿ ಕತ್ತೆ ಸತ್ತುಬಿದ್ದಾಗ ನಮ್ಮ ನೊಣ ಸತ್ತಿದ್ದನ್ನ ಹೇಳಲು ಬರಬೇಡಿ ಎಂದು ಕಾಂಗ್ರೆಸ್‍ಗೆ ಸಚಿವ ಆರ್.ಅಶೋಕ್ ತಿರುಗೇಟು ನೀಡಿದರು.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಎಲ್ಲಕಡೆ ಡಬಲ್ ಇಂಜಿನ್, ಮುಂದೆ ಕರ್ನಾಟಕದಲ್ಲೂ ಡಬಲ್ ಇಂಜಿನ್ ಸರ್ಕಾರ ಬರಲಿದೆ. ಇದರ ಭಯಕ್ಕೆ ಕಾಂಗ್ರೆಸ್ ಹೆದರಿದೆ. ಚುನಾವಣೆ ಬಂದಾಗ ಕಾಂಗ್ರೆಸ್ ಗಿಮಿಕ್ ಮಾಡುತ್ತೆ. ಇದು ಅವರಿಗೆ ರಕ್ತಗತವಾಗಿ ಬಂದಿದೆ. ಕಾಂಗ್ರೆಸ್ ಯಾವುದೇ ಸಾಕ್ಷ್ಯ ಇಲ್ಲದೇ ಆರೋಪ ಮಾಡ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅಶ್ವತ್ಥ ನಾರಾಯಣ್ ವಿರುದ್ಧ ಡಿಕೆಶಿ ಷಡ್ಯಂತ್ರ ಮಾಡುತ್ತಿದ್ದಾರೆ: ಎಸ್.ಟಿ.ಸೋಮಶೇಖರ್ 

    ಪಿಎಸ್‍ಐ ಹಗರಣ ಕಂಡುಹಿಡಿದಿದ್ದೆ ಗೃಹ ಸಚಿವರು. ಕಾಂಗ್ರೆಸ್ ಗೃಹಸಚಿವರನ್ನು ಅಭಿನಂದಿಸಬೇಕಿತ್ತು. ಈಗ ಅವರ ಮೇಲೆಯೇ ಯಾವುದೇ ದಾಖಲೆ ಇಲ್ಲದೇ ಸುಳ್ಳು ಆರೋಪ ಮಾಡಿದ್ದಾರೆ. ಹಿಂದೆ ಬಿಟ್‍ಕಾಯಿನ್‍ನಲ್ಲೂ ಹೀಗೆ ಆರೋಪ ಮಾಡಿ ಝೀರೋ ಆಯ್ತು. ಕಾಂಗ್ರೆಸ್ ಸಂತೆ ಭಾಷಣ ಬಿಟ್ಟು ದಾಖಲೆ ಇದ್ದರೆ ಕೊಡಲಿ ಎಂದು ಸವಾಲು ಹಾಕಿದರು.

    ಇದೇ ವೇಳೆ ಸಿಎಂ ಆಗುವುದು ಎಲ್ಲ ಪಕ್ಷ ತೀರ್ಮಾನ ಮಾಡುತ್ತದೆ. ಅಶ್ವತ್ಥ ನಾರಾಯಣ್ ಅವರು ಎಲ್ಲೂ ನಾನು ಸಿಎಂ ಆಗ್ತೀನಿ ಅಂತ ಹೇಳಿಲ್ಲ. ಡಿ.ಕೆ.ಶಿವಕುಮಾರ್ ಹೇಳಿಕೆಯನ್ನು ಅಶ್ವಥ್ ನಾರಾಯಣ ಉಲ್ಲೇಖ ಮಾಡಿದ್ದಾರೆ ಅಂತಾ ಸಮರ್ಥನೆ ಮಾಡಿಕೊಂಡ್ರು. ಎಲ್ಲವೂ ಹೊರಗೆ ಬರಲಿ. ಎಷ್ಟೇ ದೊಡ್ಡವರಾಗಿದ್ದವರೂ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    HDK

    ಇದೇ ವೇಳೆ ಸ್ವಪಕ್ಷೀಯರೇ ದಾಖಲೆ ಕೊಟ್ಟಿದ್ದಾರೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅಶೋಕ್, ಕುಮಾರಸ್ವಾಮಿ ಕಾಂಗ್ರೆಸ್‍ಗಿಂತ ಸ್ವಲ್ಪ ಮುಂದೆ ಹೋಗಿ ಟೀಕೆ ಮಾಡ್ತಿದ್ದಾರೆ. ಸ್ವಲ್ಪ ಅವರ ಪಕ್ಷದಲ್ಲಿ ಏನು ಆಗ್ತಿದೆ ಅಂತಾ ನೋಡಿಕೊಳ್ಳಲಿ. ನಮ್ಮ ಪಕ್ಷದ ವಿಚಾರ ನೋಡಿಕೊಳ್ಳಲು ಬಲಾಢ್ಯ ಕೇಂದ್ರದ ನಾಯಕತ್ವ ಇದೆ. ಜೆಡಿಎಸ್, ಕಾಂಗ್ರೆಸ್‍ನಲ್ಲಿ ವಂಶದ ನಾಯಕತ್ವ ಇದೆ. ವಂಶದ ನಾಯಕತ್ವದಿಂದ ಬಿಜೆಪಿ ಕಲಿಯಬೇಕಾಗಿಲ್ಲ. ವೈಯಕ್ತಿಕ ದ್ವೇಷಗಳು ರಾಜಕೀಯವಾಗಿ ಒಳ್ಳೆಯದಲ್ಲ. ಸೈದ್ದಾಂತಿಕವಾಗಿ ಹೋರಾಟ ಮಾಡಬೇಕು ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ:  ಕರ್ನಾಟಕ ಮಾಧ್ಯಮ ಅಕಾಡೆಮಿ ನಿಯೋಗದಿಂದ ರಾಜ್ಯಪಾಲರ ಭೇಟಿ – ಪತ್ರಿಕಾ ದಿನಾಚರಣೆಗೆ ಆಹ್ವಾನ 

  • ಅಶ್ವತ್ಥ ನಾರಾಯಣ್ ವಿರುದ್ಧ ಡಿಕೆಶಿ ಷಡ್ಯಂತ್ರ ಮಾಡುತ್ತಿದ್ದಾರೆ: ಎಸ್.ಟಿ.ಸೋಮಶೇಖರ್

    ಅಶ್ವತ್ಥ ನಾರಾಯಣ್ ವಿರುದ್ಧ ಡಿಕೆಶಿ ಷಡ್ಯಂತ್ರ ಮಾಡುತ್ತಿದ್ದಾರೆ: ಎಸ್.ಟಿ.ಸೋಮಶೇಖರ್

    ಬೆಂಗಳೂರು: ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಸಚಿವ ಅಶ್ವತ್ಥ ನಾರಾಯಣ್ ಮೇಲೆ ಕಾಂಗ್ರೆಸ್ ಮುಗಿಬೀಳ್ತಿದ್ದಾರೆ. ಸಚಿವರ ಪರ ಸಂಪುಟ ಸಹೋದ್ಯೋಗಿಗಳು ಬ್ಯಾಟಿಂಗ್‍ಗೆ ಇಳಿದಿದ್ದಾರೆ. ಈ ಹಿನ್ನೆಲೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸಹ ಅಶ್ವತ್ಥ ನಾರಾಯಣ್ ಅವರ ಪರ ಬ್ಯಾಟಿಂಗ್ ಮಾಡಿದರು.

    ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಎಸ್.ಟಿ.ಸೋಮಶೇಖರ್ ಅವರು ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ರಾಮನಗರ ಜಿಲ್ಲೆಯಲ್ಲಿ ಲೀಡರ್‍ಶಿಪ್ ಫೈಟ್ ನಡೆಸುತ್ತಿದ್ದಾರೆ. ಒಕ್ಕಲಿಗರ ಜಿಲ್ಲೆ ಎಂಬ ಕಾರಣಕ್ಕೆ ನಾಯಕತ್ವಕ್ಕೆ ಪೈಪೋಟಿ ನಡೆಯುತ್ತಿದೆ. 4 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗಾಗಿ ಶ್ರಮಿಸುತ್ತಿರುವ ಕಾರಣ ಅಶ್ವತ್ಥ ನಾರಾಯಣ್ ಅವರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಅಲ್ಲಿ ಅಭಿವೃದ್ಧಿ ಕಾರ್ಯಕ್ರಮ ನಡೆಸುತ್ತಿದ್ದಾರೆ. ಇದರಿಂದಾಗಿ ಪ್ರಕರಣದಲ್ಲಿ ಆಧಾರ ರಹಿತ ಆರೋಪ ಮಾಡುವ ಮೂಲಕ ಅಶ್ವತ್ಥ ನಾರಾಯಣ್ ಅವರ ವಿರುದ್ಧ ಷಡ್ಯಂತ್ರ ಮಾಡಲಾಗಿದೆ ಎಂದು ಆಕ್ಷೇಪಿಸಿದರು.

    ಅಶ್ವತ್ಥ ನಾರಾಯಣ್ ವಿರುದ್ಧ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ ಮಾಡುತ್ತಿದ್ದಾರೆ. ಪಿಎಸ್‍ಐ ನೇಮಕಾತಿ ಪ್ರಕರಣದಲ್ಲಿ ನಿರುದ್ಯೋಗಿಗಳ ಭವಿಷ್ಯದ ವಿಚಾರದಲ್ಲಿ ಚೆಲ್ಲಾಟ ಆಡಬಾರದು ಎಂಬ ಉದ್ದೇಶ ನಮ್ಮದು ಎಂದು ತಿಳಿಸಿದರು. ಅಂತೆಕಂತೆಗಳಿಗೆ ಉತ್ತರ ಕೊಡುವುದಿಲ್ಲ. ಪ್ರಾಮಾಣಿಕವಾಗಿ ತನಿಖೆ ಆಗಬೇಕಿದೆ. ಮಾಹಿತಿ ಕೊಟ್ಟರೆ ಸಮರ್ಥವಾಗಿ ತನಿಖೆ ನಡೆಯಲು ಸಹಕಾರಿ ಎಂದು ತಿಳಿಸಿದರು. ಇದನ್ನೂ ಓದಿ: ಕರ್ನಾಟಕ ಮಾಧ್ಯಮ ಅಕಾಡೆಮಿ ನಿಯೋಗದಿಂದ ರಾಜ್ಯಪಾಲರ ಭೇಟಿ – ಪತ್ರಿಕಾ ದಿನಾಚರಣೆಗೆ ಆಹ್ವಾನ 

    ಅಶ್ವತ್ಥ ನಾರಾಯಣ್ ಅವರು ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದಾರೆ. ಅಲ್ಲದೆ ಶಿಕ್ಷಣ ಕ್ಷೇತ್ರದಲ್ಲಿ 2 ವರ್ಷಗಳಲ್ಲಿ ಕ್ರಾಂತಿಕಾರಿ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಇದನ್ನು ಸಹಿಸಲಾಗದೆ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಅಸ್ತಿತ್ವಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇವರು ತಮ್ಮ ಹುದ್ದೆಯ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು. ಅಶ್ವತ್ಥ ನಾರಾಯಣ್ ಅವರ ತೇಜೋವಧೆ ಮಾಡುವುದು ಸರಿಯಲ್ಲ ಎಂದು ಬೆಂಬಲ ಕೊಟ್ಟರು.

    ಅಪರಾಧಿಗಳಿಗೆ ಶಿಕ್ಷೆ ಆಗಬೇಕು ಎಂದ ಅವರು, ಪ್ರಿಯಾಂಕ್ ಖರ್ಗೆ ಅವರಿಗೆ ನೋಟಿಸ್ ಕೊಡಬಾರದು ಎಂದಿದೆಯೇ? ದಾಖಲಾತಿ ಕೊಡಿ ಎಂದು ಕೇಳಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ಕರ್ನಾಟಕ ಪೊಲೀಸ್ ನಂಬರ್ ಒನ್ ಪೊಲೀಸ್. ಪೊಲೀಸರು ಯಾರದೇ ಹಿಡಿತದಲಿಲ್ಲ. ಅವರದೇ ಆದ ತನಿಖೆ ಮಾಡಲಿದ್ದಾರೆ ಎಂದು ಪ್ರಶ್ನೆಗೆ ಉತ್ತರಿಸಿದರು.

    ನಾಲ್ಕು ವರ್ಷ ಎಲ್ಲ ಮಲಗಿದ್ದರು. ನಾವು ಜೀವಂತವಾಗಿ ಇದ್ದೇವೆಂದು ತೋರಿಸಲು ಈಗ ನಿರಾಧಾರ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ವಿಪಕ್ಷಗಳ ವಿರುದ್ಧ ಆಕ್ರೋಶ ಹೊರಹಾಕಿದರು. ನಮ್ಮ ಸರ್ಕಾರ ಈಗ ಸಮರ್ಥವಾಗಿದೆ. ಸಿಎಂ ಬೊಮ್ಮಾಯಿ ಅವರು ಸಮರ್ಥರಿದ್ದಾರೆ. ‘ಉಪ್ಪು ತಿಂದವರು ನೀರು ಕುಡಿಯಲಿದ್ದಾರೆ’ ಎಂದರು. ಇದನ್ನೂ ಓದಿ:  ಟ್ರಕ್ ಟರ್ಮಿನಲ್ ನಿರ್ಮಾಣ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಗ್ರಾಮಸ್ಥರು 

    ಕಾಂಗ್ರೆಸ್ ಪಕ್ಷದ ಡಿ.ಕೆ.ಸುರೇಶ್ ಸಂಸದರಾದ ಬಳಿಕ ಬದಲಾಗುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ, ಅವರು ಗಲಾಟೆ ಮಾಡುವುದನ್ನು ಸಾರ್ವಜನಿಕರೂ ಗಮನಿಸಲಿದ್ದಾರೆ ಎಂದು ತಿಳಿಸಿದರು.

  • ಪಿಎಸ್‍ಐ ಅಕ್ರಮದಲ್ಲಿ ಅಶ್ವತ್ಥ ನಾರಾಯಣ್ ಶಾಮೀಲು: ಸಿದ್ದು ಆರೋಪ

    ಪಿಎಸ್‍ಐ ಅಕ್ರಮದಲ್ಲಿ ಅಶ್ವತ್ಥ ನಾರಾಯಣ್ ಶಾಮೀಲು: ಸಿದ್ದು ಆರೋಪ

    ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್ ಮೇಲೆ ಪಿಎಸ್‍ಐ ಆಕ್ರಮದ ತೂಗುಗತ್ತಿ ಇದೆ. ಅಶ್ವತ್ಥ ನಾರಾಯಣ್ ಕೂಡಲೇ ರಾಜೀನಾಮೆ ಕೊಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

    ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೇಮಕಾತಿಯಲ್ಲಿ 5ನೇ ರ‍್ಯಾಂಕ್ ಪಡೆದಿರುವ ದರ್ಶನ್ ಗೌಡ, 10ನೇ ರ‍್ಯಾಂಕ್ ಪಡೆದಿರುವ ನಾಗೇಶ್ ಗೌಡ ಇಬ್ಬರು ಅಶ್ವತ್ಥ ನಾರಾಯಣ್ ಅವರ ಸಂಬಂಧಿಕರು. ಇದರಲ್ಲಿ ಅಶ್ವತ್ಥ ನಾರಾಯಣ್ ಕೈವಾಡ ಇರೋದು ಸ್ಪಷ್ಟವಾಗಿದೆ ಎಂದು ನೇರವಾಗಿ ಆರೋಪಿಸಿದರು. ಮೈಸೂರಲ್ಲಿ ಪ್ರೊ.ನಾಗರಾಜ್ ಅರೆಸ್ಟ್ ಮಾಡಿದ್ದಾರೆ. ಗೃಹ ಸಚಿವರು, ಉನ್ನತ ಶಿಕ್ಷಣ ಸಚಿವರನ್ನು ಕೂಡಲೇ ಸಂಪುಟದಿಂದ ಕಿತ್ತು ಹಾಕಬೇಕು ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ನಾನು ಧರಣಿ ಕುಳಿತರು ಸ್ಥಳಕ್ಕೆ ಡಿಸಿ ಬರಲಿಲ್ಲ, ನಾನೇನು ದನಕಾಯೋನ: ಹೆಚ್‍ಡಿ.ರೇವಣ್ಣ 

    ASHWATH NARAYAN 1

    ದರ್ಶನ್ ಗೌಡ 5ನೇ ರ‍್ಯಾಂಕ್, ಫಸ್ಟ್ ಪೇಪರ್‌ನಲ್ಲಿ 50 ಮಾರ್ಕ ಗೆ 19 ಬಂದಿದೆ. ಎರಡನೇ ಪೇಪರ್‌ನಲ್ಲಿ ಟಿಕ್ ಮಾಡುವುದರಲ್ಲಿ 150ಕ್ಕೆ 141 ಮಾರ್ಕ್ಸ್ ಬಂದಿದೆ. ನಾಗೇಶ್ ಗೌಡರಿಗೆ 10ನೇ ರ‍್ಯಾಂಕ್, ಮೊದಲ ಪೇಪರ್‌ನಲ್ಲಿ 29.05, ಎರಡನೇಯ ಪೇಪರ್‌ನಲ್ಲಿ 127 ಮಾರ್ಕ್ಸ್ ಬಂದಿದೆ. ಇವರಿಬ್ಬರು ಅಶ್ವತ್ಥ ನಾರಾಯಣ್ ಸಂಬಂಧಿಕರು ಎಂದು ಒತ್ತಿ ಹೇಳಿದರು.

    ಸಚಿವರ ಸಹಾಯ ಇಲ್ಲದೆ ಇದೆಲ್ಲ ಆಗುತ್ತಾ? ದರ್ಶನ್ ಗೌಡ, ನಾಗೇಶ್ ಗೌಡ ಇಬ್ಬರನ್ನು ವಿಚಾರಣೆಗೆ ಕರೆದು, ಬಿಟ್ಟು ಕಳುಹಿಸಿದ್ದಾರೆ. ಏಕೆ ಇವರನ್ನು ಅರೆಸ್ಟ್ ಮಾಡಿಲ್ಲ? ಸಾಕ್ಷಿ ಇಲ್ಲದೆ ಹೇಗೆ ನೋಟೀಸ್ ಕೊಟ್ಟರು? ಎಂದು ಖಾರವಾಗಿ ಪ್ರಶ್ನಿಸಿದರು. ಸಾಕ್ಷಿಯನ್ನು ಫೋಟೋ ಹೊಡೆದು ತಂದು ತೋರಿಸಲು ಆಗಲ್ಲ. ಇದರಲ್ಲಿ ಅಶ್ವತ್ಥ ನಾರಾಯಣ್ ಸಂಪೂರ್ಣ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ:  ಹನುಮಾನ್ ಚಾಲೀಸಾ ನುಡಿಸುವುದು ಒಂದು ದಿನದ ವಿಷಯವಲ್ಲ, ಅದು ಮುಂದುವರಿಯಬೇಕು: ರಾಜ್ ಠಾಕ್ರೆ 

  • ‘ಆರ್‌ಎಸ್‌ಎಸ್’ ದೇಶದ ಶ್ರೀಮಂತ ಎನ್‍ಜಿಓ, ಅದಕ್ಕೆ ಹಣ ಎಲ್ಲಿಂದ ಬರುತ್ತೆ?: ಬಿ.ಕೆ ಹರಿಪ್ರಸಾದ್

    ‘ಆರ್‌ಎಸ್‌ಎಸ್’ ದೇಶದ ಶ್ರೀಮಂತ ಎನ್‍ಜಿಓ, ಅದಕ್ಕೆ ಹಣ ಎಲ್ಲಿಂದ ಬರುತ್ತೆ?: ಬಿ.ಕೆ ಹರಿಪ್ರಸಾದ್

    ಬೆಂಗಳೂರು: ಆರ್‌ಎಸ್‌ಎಸ್ ದೇಶದ ಶ್ರೀಮಂತ ಎನ್‍ಜಿಓ ಆಗಿದ್ದು, ಅದಕ್ಕೆ ಹಣ ಎಲ್ಲಿಂದ ಬರುತ್ತದೆ ಎಂದು ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಪ್ರಶ್ನಿಸಿದ್ದಾರೆ.

    ಮಲ್ಲೇಶ್ವರಂನಲ್ಲಿ ಹಮ್ಮಿಕೊಳ್ಳಲಾಗಿದ್ದ ಪದರತಿಭಟನೆಯಲ್ಲಿ ಭಾಗವಹಿಸಿ ಸಚಿವರಾದ ಅಶ್ವತ್ಥನಾರಾಯಣ್ ಮೇಲೆ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ಸರ್ಕಾರ 40% ಕಮಿಷನ್ ಸರ್ಕಾರವಾಗಿದೆ. ಪ್ರತಿಯೊಂದು ಯೋಜನೆಯಲ್ಲಿ ಮಂತ್ರಿಗಳಿಗೆ ಕಮಿಷನ್ ಹೋಗುತ್ತಿದೆ. ಮಲ್ಲೇಶ್ವರಂನಲ್ಲಿ ಪ್ರತಿಯೊಂದು ಕಾಮಗಾರಿಗಳಲ್ಲಿ ಅಶ್ವತ್ಥ ನಾರಾಯಣನಿಗೆ ಕಮಿಷನ್ ಹೋಗುತ್ತಿದೆ. ಮಲ್ಲೇಶ್ವರಂನ ಬಹುತೇಕ ಗುತ್ತಿಗೆದಾರರು ಸಚಿವರ ಸಂಬಂಧಿಗಳೇ ಇದ್ದಾರೆ. ಈಗ ಪಿಎಸ್‍ಐ ನೇಮಕಾತಿಯಲ್ಲಿ ಸಚಿವರ ಸಹೋದರನೇ ಭಾಗಿಯಾಗಿರುವ ಗಂಭೀರ ಆರೋಪ ಕೇಳಿ ಬಂದಿದೆ ಎಂದು ಆರೋಪ ವ್ಯಕ್ತಪಡಿಸಿದರು. ಇದನ್ನೂ ಓದಿ: 10 ದಿನಗಳ ಬಂಧನದ ಬಳಿಕ ರಾಣಾ ದಂಪತಿಗೆ ಜಾಮೀನು

    ಅಶ್ವತ್ಥ ನಾರಾಯಣ್ ಮಲ್ಲೇಶ್ವರಂನಲ್ಲಿ ಗುಳಂ ನಾರಾಯಣ ಎಂದು ಖ್ಯಾತಿ ಪಡೆದಿದ್ದಾರೆ. ಭ್ರಷ್ಟಾಚಾರಕ್ಕೆ ಆರ್‍ಎಸ್‍ಎಸ್‍ನ ಕುಮ್ಮಕ್ಕು ಇದೆ. ಅದರ ಹಣದಿಂದಲೇ ಶ್ರೀಮಂತ ಎನ್‍ಜಿಓ ಆಗಿ ಆರ್‍ಎಸ್‍ಎಸ್ ಬೆಳೆಯುತ್ತಿದೆ. ಪ್ರತಿಯೊಬ್ಬ ಸಚಿವರ ಬಳಿ ಆರ್‍ಎಸ್‍ಎಸ್‍ನ ಒಎಸ್‍ಡಿ ಇದ್ದಾರೆ. ಹಣ ಕಲೆಕ್ಷನ್ ಮಾಡುವುದೇ ಒಎಸ್‍ಡಿಗಳ ಪೂರ್ಣಾವಧಿಯ ಕೆಲಸವಾಗಿದೆ. ಹಾವಿನಪುರದಲ್ಲಿ ಕುಳಿತು ಅವರು ಹಣ ಕಲೆಕ್ಷನ್ ಮಾಡುತ್ತಾರೆ ಎಂದರು.

    ನಿನ್ನೆ ಅಮಿತ್ ಶಾ ಬಂದಿದ್ದರು ಸಹ ಬಿಜೆಪಿಯವರು ಯಾವುದೇ ಕ್ರಮ ಕೈಗೊಂಡಿಲ್ಲ. 40% ಕಮಿಷನ್ ಹಾಗೂ ಅಕ್ರಮ ಪಿಎಸ್‍ಐ ನೇಮಕಾತಿಯಲ್ಲಿ ಅಮಿತ್ ಶಾ ಪಾಲು ತೆಗೆದುಕೊಳ್ಳಲು ಬಂದಿದ್ದಾರೆ. ಶಾ ಆಗಮನದಿಂದ ರಾಜ್ಯದ ಜನರಿಗೆ ನಯಾಪೈಸೆ ಪ್ರಯೋಜನವಾಗಿಲ್ಲ. ಈ ಕೂಡಲೇ ಅಶ್ವಥ್ ನಾರಾಯಣ್ ರಾಜೀನಾಮೆ ನೀಡಬೇಕು ಎಂದು ಹೇಳಿದರು. ಇದನ್ನೂ ಓದಿ: ಶಿವಸೇನೆಗೆ ಹಿಂದುತ್ವವನ್ನು ಕಲಿಸುವ ಅಗತ್ಯವಿಲ್ಲ: ಸಂಜಯ್ ರಾವತ್

    ಸ್ವ-ಇಲಾಖೆಯಲ್ಲಿ ಗಂಭೀರವಾದ ಆರೋಪ ಎದುರಿಸುತ್ತಿರುವ ಗೃಹ ಸಚಿವ ಆರಗ ಜ್ಞಾನೆಂದ್ರ ರಾಜೀನಾಮೆ ನೀಡಬೇಕು. ಸಂಪೂರ್ಣವಾಗಿ ತನಿಖೆಯಾಗಬೇಕು, ಗೃಹ ಸಚಿವರ ಮೇಲೆ ತನಿಖೆ ನಡೆಯಬೇಕು ಎಂದರು.

     

  • ಪಕ್ಷದ ಕಾರ್ಯಕರ್ತರೊಂದಿಗೆ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ವೀಕ್ಷಿಸಿದ: ಅಶ್ವತ್ಥ ನಾರಾಯಣ್

    ಪಕ್ಷದ ಕಾರ್ಯಕರ್ತರೊಂದಿಗೆ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ವೀಕ್ಷಿಸಿದ: ಅಶ್ವತ್ಥ ನಾರಾಯಣ್

    ಬೆಂಗಳೂರು: ದೇಶದಾದ್ಯಂತ ಸಂಚಲನ ಹುಟ್ಟಿಸಿರುವ `ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ಇಂದು ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಜೊತೆಗೂಡಿ ಒರಾಯನ್ ಮಾಲ್‍ನಲ್ಲಿ ವೀಕ್ಷಿಸಿದರು.

    ಚಿತ್ರ ವೀಕ್ಷಣೆಯ ನಂತರ ಮಾತನಾಡಿದ ಅವರು, `ಈ ಸಿನಿಮಾ ಇದುವರೆಗೂ ಹುದುಗಿಸಿಟ್ಟಿದ್ದ ಅನೇಕ ಸತ್ಯಗಳನ್ನು ಅನಾವರಣಗೊಳಿಸಿದೆ. ಈ ಮೂಲಕ ಕಾಶ್ಮೀರದಲ್ಲಿ ಧರ್ಮದ ಹೆಸರಿನಲ್ಲಿ ನಡೆಸಿದ ಭಯೋತ್ಪಾದನೆಯ ಕರಾಳತೆ ಜಗತ್ತಿಗೆ ಗೊತ್ತಾಗಿದೆ ಎಂದರು. ಇದನ್ನೂ ಓದಿ: ಗುಜರಾತ್ ಹತ್ಯಾಕಾಂಡದ ಸಿನಿಮಾ ಬಂದ್ರೆ ಸಿದ್ದರಾಮಯ್ಯ ಊರು ಬಿಟ್ಟು ಓಡಬೇಕಾಗುತ್ತದೆ: ಕಲ್ಲಡ್ಕ ಪ್ರಭಾಕರ ಭಟ್

    ನೋಡುಗರ ಎದೆ ಝಲ್ಲೆನಿಸುವಂತಹ ಇಂತಹ ಒಂದು ಸಿನಿಮಾವನ್ನು ಮಾಡುವುದು ತುಂಬಾ ಸಾಹಸದ ಕೆಲಸವಾಗಿದೆ. ವಿವೇಕ್ ಅಗ್ನಿಹೋತ್ರಿ ಮತ್ತು ಅನುಪಮ್ ಖೇರ್ ತಂಡದವರು ಇಂಥದೊಂದು ಚಿತ್ರವನ್ನು ಕೊಡುವ ಮೂಲಕ, ಇತಿಹಾಸದ ಕತ್ತಲಿನಲ್ಲಿದ್ದ ಅಪ್ರಿಯ ಸತ್ಯಗಳನ್ನು ಹೊರತಂದಿದ್ದಾರೆ. ಈ ಸಿನಿಮಾ ವಿರುದ್ಧ ಚಿತ್ರರಂಗದಲ್ಲಿ ಸಂಚುಗಳು ನಡೆದವು. ಆದರೆ, ಸಿನಿಮಾ ಮಾತ್ರ ಎಲ್ಲರ ನಿರೀಕ್ಷೆಯನ್ನೂ ತಲೆಕೆಳಗಾಗಿಸಿ 100 ಕೋಟಿ ರೂ. ಕ್ಲಬ್ ಸೇರಿದೆ. ಜೊತೆಗೆ, ಇಡೀ ಜಗತ್ತಿನ ಗಮನ ಸೆಳೆದಿದ್ದು, ಮನರಂಜನೆಯ ಜೊತೆಗೆ ಅರಿವನ್ನೂ ಹೇಗೆ ವಿಸ್ತರಿಸಬಹುದು ಎನ್ನುವುದಕ್ಕೆ ಈ ಚಿತ್ರ ಒಳ್ಳೆಯ ನಿದರ್ಶನವಾಗಿದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಫ್ರೀ ಲಿಂಕ್ ಬಗ್ಗೆ ಇರಲಿ ಎಚ್ಚರ – ಮಂಗಳೂರಿನಲ್ಲೂ ಸೈಬರ್ ವಂಚನೆ ಬೆಳಕಿಗೆ

    ಚಿತ್ರ ವೀಕ್ಷಣೆಯಲ್ಲಿ ಮಲ್ಲೇಶ್ವರಂ ಮಂಡಲ ಬಿಜೆಪಿ ಮುಖಂಡರಾದ ಕಾವೇರಿ ಕೇದಾರನಾಥ್ ಮುಂತಾದವರಿದ್ದರು.

  • ಮಲ್ಲೇಶ್ವರದಲ್ಲಿ ದಲಿತರಿಗೆ ಲಸಿಕೆ ನಿರಾಕರಣೆ: ಹರಿಪ್ರಸಾದ್ ಆರೋಪ ಶುದ್ಧ ಸುಳ್ಳೆಂದ ಡಿಸಿಎಂ

    ಮಲ್ಲೇಶ್ವರದಲ್ಲಿ ದಲಿತರಿಗೆ ಲಸಿಕೆ ನಿರಾಕರಣೆ: ಹರಿಪ್ರಸಾದ್ ಆರೋಪ ಶುದ್ಧ ಸುಳ್ಳೆಂದ ಡಿಸಿಎಂ

    – ಲಸಿಕೆ ಅಭಿಯಾನ ಹಳಿತಪ್ಪಿಸುವುದೇ ಅವರ ದುರುದ್ದೇಶ

    ಬೆಂಗಳೂರು: ನಗರದ ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಜಾತಿ ಆಧಾರದ ಮೇಲೆ ಲಸಿಕೆ ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾಡಿರುವ ಆರೋಪವನ್ನು ಕ್ಷೇತ್ರದ ಶಾಸಕರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

    ಈ ಬಗ್ಗೆ ಬೆಂಗಳೂರಿನಲ್ಲಿ ಬುಧವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಇದೊಂದು ಬೇಜವಾಬ್ದಾರಿ ಹೇಳಿಕೆ. ಅವರಿಗೆ ಜಾತಿ- ಧರ್ಮದ ಹೆಸರೇಳದಿದ್ದರೆ ನಿದ್ದೆಯೂ ಬರಲ್ಲ. ರಾಜ್ಯದಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ಲಸಿಕೆ ಅಭಿಯಾನವನ್ನು ಹೇಗಾದರೂ ಹಳಿತಪ್ಪಿಸಬೇಕು ಎಂಬ ಷಡ್ಯಂತ್ರ ಅವರು ಇಟ್ಟುಕೊಂಡಿರುವಂತಿದೆ ಎಂದು ತರಾಟೆಗೆ ತೆಗೆದುಕೊಂಡರು.

    ಲಸಿಕೆಯಲ್ಲಿ ಜಾತಿ ತರುವ ಕೆಲಸವನ್ನು ನಾನಾಗಲಿ ಅಥವಾ ನಮ್ಮ ಪಕ್ಷವಾಗಲಿ ಮಾಡಿಲ್ಲ. ಅಂಥ ಯಾವುದೇ ಘಟನೆ ಕ್ಷೇತ್ರದಲ್ಲಿ ನಡೆದಿಲ್ಲ. ಯಾರಿಗೂ ಲಸಿಕೆ ನಿರಾಕರಿಸಿಲ್ಲ” ಎಂದು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

    ಅಂಕಿ- ಅಂಶ ಕೊಟ್ಟ ಡಿಸಿಎಂ:
    ದಾನಿಗಳ ನೆರವಿನಿಂದ ಮುಕ್ತ ಮಾರುಕಟ್ಟೆಯಲ್ಲಿ ಲಸಿಕೆ ಖರೀದಿ ಮಾಡಿ ಕೊಳೆಗೇರಿಗಳಲ್ಲಿ ವಾಸಿಸುವ 1,000ಕ್ಕೂ ಹೆಚ್ಚು ಬಡವರಿಗೆ, ಆರ್ಥಿಕ ದುರ್ಬಲರಿಗೆ ಲಸಿಕೆ ಕೊಡಿಸಿದ್ದೇನೆ. ಅಲ್ಲದೆ 9,000 ಜನರಿಗೆ ಲಸಿಕೆ ನೀಡಲಾಗಿದೆ. ಇದರಲ್ಲಿ ಕ್ಷೇತ್ರದ 7 ಸ್ಲಂಗಳ ಜನರೇ ಹೆಚ್ಚು ಇದ್ದಾರೆ. ಸತ್ಯ ಅರ್ಥ ಮಾಡಿಕೊಳ್ಳದೆ ಸುಳ್ಳು ಆರೋಪ ಮಾಡುವುದು ಎಷ್ಟು ಸರಿ ಎಂದು ಡಾ.ಅಶ್ವತ್ಥನಾರಾಯಣ ಪ್ರಶ್ನೆ ಮಾಡಿದರು.

    ಮಲ್ಲೇಶ್ವರದ ಬಾಲಕಿಯರ ಪ್ರೌಢಶಾಲೆಯಲ್ಲಿ ಮಂಗಳವಾರ ದಲಿತರಿಗೆ ಲಸಿಕೆ ನಿರಾಕರಿಸಲಾಗಿದೆ ಎಂದು ಹರಿಪ್ರಸಾದ್ ದೂರಿದ್ದಾರೆ. ಇದು ಶುದ್ಧ ಸುಳ್ಳು. ಅಂದು, ಮುಂಚೂಣಿ ಕಾರ್ಯಕರ್ತರು ಹಾಗೂ ಆದ್ಯತಾ ಗುಂಪಿನ ಜನರೂ, ಅವರ ಆರೈಕೆ ಮಾಡುವವರಿಗೆ ಲಸಿಕೆ ನೀಡಲಾಗುತ್ತಿತ್ತು. ಸರ್ಕಾರ ಹೊರಡಿಸಿರುವ ಈ ಮಾರ್ಗಸೂಚಿ ಪ್ರಕಾರ ಯಾರೇ ಬಂದರೂ ಲಸಿಕೆ ಹಾಕಿ ಕಳಿಸಲಾಗುತ್ತಿದೆ. ಪ್ರತಿಯೊಬ್ಬರ ಆಧಾರ್ ಸಂಖ್ಯೆ ದಾಖಲಿಸಿಕೊಂಡು ವ್ಯಾಕ್ಸಿನ್ ನೀಡಲಾಗುತ್ತಿದೆ. ಇಷ್ಟಕ್ಕೂ ಆಧಾರ್ ಕಾರ್ಡ್ ಮೇಲೆ ಜಾತಿ ನಮೂದಾಗಿರುವುದಿಲ್ಲ ಎಂಬ ಅಂಶವನ್ನು ಹರಿಪ್ರಸಾದ್ ಗಮನಿಸಬೇಕು ಎಂದು ಉಪ ಮುಖ್ಯಮಂತ್ರಿ ತಿರುಗೇಟು ಕೊಟ್ಟರು.

    ವೈರಸ್‍ಗೆ ಜಾತಿ- ಧರ್ಮದ ಹಂಗಿಲ್ಲ. ಅದೇ ರೀತಿ ವ್ಯಾಕ್ಸಿನ್‍ಗೆ ಇರುವುದಿಲ್ಲ. ಇದನ್ನು ಹರಿಪ್ರಸಾದ್ ಅವರು ಅರ್ಥ ಮಾಡಿಕೊಳ್ಳಬೇಕು. ಸಂಕಷ್ಟದ ಸಮಯದಲ್ಲಿ ಅವರು ಸರಕಾರಕ್ಕೆ ಸಲಹೆಗಳನ್ನು ನೀಡಿ ಉತ್ತೇಜಿಸಬೇಕೆ ಹೊರತು ಆಗುತ್ತಿರುವ ಕೆಲಸದಲ್ಲಿ ಕಲ್ಲು ಹುಡುಕಿ ನೈತಿಕ ಸ್ಥೈರ್ಯ ಕುಗ್ಗಿಸಬಾರದು. ಇಂಥ ಸೂಕ್ಷ್ಮ ವಿಷಯಗಳಲ್ಲಿ ಜಾತಿ-ಧರ್ಮದಂಥ ಸೂಕ್ಷ್ಮ ಸಂಗತಿಗಳನ್ನು ತರಬಾರದು. ಇವರಿಗೆ ನಾಚಿಕೆಯಾಗಬೇಕು. ಜನ ಪಾಠ ಕಲಿಸಿದ್ದರೂ ಇವರಿಗೆ ಬುದ್ಧಿ ಬಂದಿಲ್ಲ. ಹಾಗಾದರೆ ಇವರ ಪ್ರಕಾರ ಅರ್ಚಕರಿಗೆ ಲಸಿಕೆ ಕೊಡುವ ಹಾಗಿಲ್ಲವೆ? ಎಂದು ಡಿಸಿಎಂ ತರಾಟೆಗೆ ತೆಗೆದುಕೊಂಡರು.

  • ವಿದೇಶದಲ್ಲಿ ಉದ್ಯೋಗ, ವ್ಯಾಸಂಗ ಮಾಡುವವರಿಗೆ ವ್ಯಾಕ್ಸಿನ್ ನೀಡಲು ಚಾಲನೆ ಕೊಟ್ಟ ಡಾ.ಸಿ.ಎನ್.ಅಶ್ವತ್ಥನಾರಾಯಣ

    ವಿದೇಶದಲ್ಲಿ ಉದ್ಯೋಗ, ವ್ಯಾಸಂಗ ಮಾಡುವವರಿಗೆ ವ್ಯಾಕ್ಸಿನ್ ನೀಡಲು ಚಾಲನೆ ಕೊಟ್ಟ ಡಾ.ಸಿ.ಎನ್.ಅಶ್ವತ್ಥನಾರಾಯಣ

    ಬೆಂಗಳೂರು: ವಿದೇಶದಲ್ಲಿ ಉದ್ಯೋಗ & ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ಆದ್ಯತಾ ಗುಂಪಿನ ಕೋಟಾದಲ್ಲಿ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಮಂಗಳವಾರ ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಚಾಲನೆ ನೀಡಿದರು.

    ಬೆಂಗಳೂರು ನಗರ ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜು ಆವರಣದಲ್ಲಿ ಲಸಿಕೆ ಹಾಕಲು ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು. 300ಕ್ಕೂ ಹೆಚ್ಚು ಮಂದಿ ಲಸಿಕೆ ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು 6 ವಾರಗಳ ಅಂತರದಲ್ಲಿ ಇವರಿಗೆ ಎರಡನೇ ಡೋಸ್ ನೀಡಿ, ವ್ಯಾಕ್ಸಿನ್ ಪಡೆದಿರುವ ಬಗ್ಗೆ ಪಾಸ್ ಪೋರ್ಟ್ ನಂಬರ್ ಸಹಿತ ಸರ್ಟಿಫಿಕೇಟ್ ನೀಡಲಾಗುವುದು. ಎಲ್ಲರಿಗೂ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ನೀಡಿರುವ ಕೋವಿಶೀಲ್ಡ್ ಲಸಿಕೆಯನ್ನೇ ನೀಡಲಾಗುತ್ತಿದೆ ಎಂದು ಡಿಸಿಎಂ ಸ್ಪಷ್ಟವಾಗಿ ತಿಳಿಸಿದರು.

    ಲಸಿಕೆ ಪಡೆಯುವವರು ಆಧಾರ್ ಕಾರ್ಡ್, ಪಾಸ್‍ಪೋರ್ಟ್ ಜತೆಗೆ, ವಿದೇಶದಲ್ಲಿನ ತಮ್ಮ ಉದ್ಯೋಗ ಅಥವಾ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಅಧಿಕೃತ ದಾಖಲೆ ಹಾಜರುಪಡಿಸುವುದು ಕಡ್ಡಾಯ. ಅದೇ ಮಾರ್ಗಸೂಚಿಯಂತೆ ಇವರಿಗೆ ವ್ಯಾಕ್ಸಿನ್ ಕೊಡಲಾಗುತ್ತಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.

    ಬ್ಲ್ಯಾಕ್ ಫಂಗಸ್ ಔಷಧಿ ಖರೀದಿ:
    ಬ್ಲ್ಯಾಕ್ ಫಂಗಸ್‍ಗೆ ಲೈಸೋಜೋಮಲ್ ಆಂಫೋಟೆರಿಸಿನ್- ಬಿ ಔಷಧಿಯ ಕೊರತೆ ಮಾತ್ರ ಇದೆ. ಅದಕ್ಕೆ ಪರ್ಯಾಯವಾಗಿ ಇನ್ನೂ ಪರಿಣಾಮಕಾರಿಯಾದ ಸಾಕಷ್ಟು ಔಷಧಿಗಳಿವೆ. ಆದರೆ, ಸೈಡ್ ಏಫೆಕ್ಟ್‍ಗಳಾಗುತ್ತಿವೆ ಎನ್ನುವ ಕಾರಣವೊಡ್ಡಿ ಜನರು ಇವುಗಳನ್ನು ಬಳಕೆ ಮಾಡುತ್ತಿಲ್ಲ. ಆದರೂ ಸರಕಾರಿ-ಖಾಸಗಿ ಆಸ್ಪತ್ರೆಗಳಿಗೆ ಈ ಪರ್ಯಾಯ ಔಷಧಿಗಳನ್ನೇ ಹೆಚ್ಚು ಪ್ರಮಾಣದಲ್ಲಿ ಪೂರೈಕೆ ಮಾಡಲಾಗುತ್ತಿದೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.

    ಲೈಸೋಜೋಮಲ್ ಆಂಫೋಟೆರಿಸಿನ್- ಬಿ ಖರೀದಿಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಈಗ ಒಂದು ಲಕ್ಷ ವಯಲ್ಸ್ ಖರೀದಿಗೆ ಟೆಂಡರ್ ಕರೆಯಲಾಗಿದ್ದು, ಇನ್ನೂ ಮೂರು ಲಕ್ಷ ವಯಲ್ಸ್ ಖರೀದಿಗೆ ಆದೇಶ ನೀಡಲಾಗಿದೆ. ಕಾಸೋಕೊನೋಜಲ್ ಔಷಧಿಯ 15,000 ವಯಲ್ಸ್ ಖರೀದಿಗೆ ಆದೇಶ ಕೊಡಲಾಗಿದೆ. ಇಸ್ವಕೋನೋಜಲ್ ಎಂಬ ಔಷಧಿಯ 7,000 ವಯಲ್ಸ್, ಪೊಸಕೊನೊಜಲ್ ಟ್ಯಾಬ್ಲೆಟ್ ಖರೀದಿಗೂ ಆದೇಶ ನೀಡಲಾಗಿದೆ ಎಂದು ಅವರು ವಿವರ ನೀಡಿದರು.

    ಇನ್ನು ಲಾಕ್‍ಡೌನ್ ಮುಂದುವರಿಸುವ ಅಥವಾ ಸೆಮಿಲಾಕ್ ಮಾಡುವ ಬಗ್ಗೆ ತಜ್ಞರ ವರದಿ ಬಂದ ಮೇಲೆ ನಿರ್ಧರಿಸಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು. ಸೆಂಟ್ರಲ್ ಕಾಲೇಜು ಆವರಣದಲ್ಲಿ ಲಸಿಕೆ ನೀಡುವ ಕೆಲಸ ಮುಂದುವರಿಯಲಿದೆ. ಶಾಸಕ ಪುಟ್ಟಣ್ಣ, ಸಿಟಿ ವಿವಿ ಕುಲಪತಿ ಡಾ.ಲಿಂಗರಾಜ ಗಾಂಧಿ, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ, ವಿವಿ ಕುಲಸಚಿವ ರಮೇಶ ಮತ್ತಿತರರು ಹಾಜರಿದ್ದರು.

  • ವಿದೇಶದಲ್ಲಿ ಉದ್ಯೋಗ, ವ್ಯಾಸಂಗ ಮಾಡುವವರಿಗೆ ವ್ಯಾಕ್ಸಿನ್: ಅಶ್ವತ್ಥನಾರಾಯಣ್

    ವಿದೇಶದಲ್ಲಿ ಉದ್ಯೋಗ, ವ್ಯಾಸಂಗ ಮಾಡುವವರಿಗೆ ವ್ಯಾಕ್ಸಿನ್: ಅಶ್ವತ್ಥನಾರಾಯಣ್

    ಬೆಂಗಳೂರು: ವಿದೇಶದಲ್ಲಿ ಉದ್ಯೋಗ ಮಾಡುವ ಮತ್ತು ವ್ಯಾಸಂಗ ಮಾಡುತ್ತಿರುವವರಿಗೆ ಸಿಹಿ ಸುದ್ದಿ. ಆದ್ಯತಾ ಗುಂಪಿನ ಕೋಟಾದಲ್ಲಿ ಅವರಿಗೆ ಮಂಗಳವಾರದಿಂಲೇ ಲಸಿಕೆ ನೀಡಲಾಗುವುದು ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

    ಬೆಂಗಳೂರಿನಲ್ಲಿ ಸೋಮವಾರ ಈ ಬಗ್ಗೆ ಮಾಹಿತಿ ನೀಡಿದ ಅವರು, ಬೆಂಗಳೂರು ನಗರ ವಿಶ್ವವಿದ್ಯಾಲಯದ ಆಡಳಿತ ವಿಭಾಗದಲ್ಲಿ ಮಂಗಳವಾರ 3 ಗಂಟೆಗೆ ಈ ವರ್ಗದವರಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಗುವುದು. ಅವಶ್ಯಕತೆ ಇದ್ದವರು ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕೋರಿದರು.

    ಸದ್ಯದ ಸಂದರ್ಭದಲ್ಲಿ ವಿದೇಶಕ್ಕೆ ಹೋಗಬೇಕಾದರೆ ಲಸಿಕೆ ಪಡೆಯಲೇಬೇಕು ಹಾಗೂ ಆ ಕುರಿತ ‘ಪ್ರಮಾಣ ಪತ್ರ’ವನ್ನು ಕಡ್ಡಾಯವಾಗಿ ಹೊಂದಿರಲೇಬೇಕು. ಹೀಗಾಗಿ ವಿದೇಶದಲ್ಲಿ ಉದ್ಯೋಗ ಹಾಗೂ ವಿದ್ಯಾಭ್ಯಾಸದಲ್ಲಿ ನಿರತರಾಗಿರುವವರಿಂದ ಲಸಿಕೆ ಬೇಡಿಕೆ ಇತ್ತು. ಈಗ ಸರ್ಕಾರ ಅವರ ಬೇಡಿಕೆಯನ್ನು ಪರಿಗಣಿಸಿದ್ದು, ಎಲ್ಲರಿಗೂ ಕೋವಿಶೀಲ್ಡ್ ಕೊಡಲಾಗುವುದು ಎಂದು ಡಿಸಿಎಂ ತಿಳಿಸಿದರು.

    ಲಸಿಕೆ ಪಡೆಯಲು ಇಚ್ಛಿಸುವವರು ತಮ್ಮ ಆಧಾರ್ ಕಾರ್ಡ್, ಪಾಸ್‍ಪೋರ್ಟ್ ಹಾಗೂ ವಿದೇಶದಲ್ಲಿನ ತಮ್ಮ ಕೆಲಸ ಅಥವಾ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಪೂರಕ ದಾಖಲೆಯನ್ನು ಹಾಜರುಪಡಿಸುವುದು ಕಡ್ಡಾಯ. ಅಲ್ಲದೆ, ಸದ್ಯಕ್ಕೆ ಕೋವಿಶೀಲ್ಡ್ ಮೊದಲ ಡೋಸ್ ಪಡೆದವರ ಎರಡನೇ ಡೋಸ್ ಅಂತರವನ್ನು ಇವರ ಅನುಕೂಲಕ್ಕಾಗಿ 12 ವಾರಗಳಿಂದ ಒಂದು ತಿಂಗಳಕ್ಕೆ ಕುಗ್ಗಿಸಲಾಗಿದೆ. ಇದು ಇವರಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಡಾ.ಅಶ್ವತ್ಥನಾರಾಯಣ ಮಾಹಿತಿ ನೀಡಿದರು.

    ಮುಖ್ಯವಾಗಿ ವ್ಯಾಕ್ಸಿನ್ ನೀಡಿದ ಬಗ್ಗೆ ಇವರಿಗೆ ಸರಕಾರದಿಂದ ಪ್ರಮಾಣ ಪತ್ರ ಕೊಡಲಾಗುವುದು. ಅದು ಎರಡನೇ ಡೋಸ್ ಪಡೆದಾಕ್ಷಣ ನೀಡಲಾಗುತ್ತದೆ ಎಂದು ಡಿಸಿಎಂ ಹೇಳಿದರು.ಇದೇ ರೀತಿ ಆಯಾ ಜಿಲ್ಲೆಗಳಲ್ಲಿ ಕೂಡ ಈ ರೀತಿ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು.