Tag: ಅವಾಚ್ಯ ಪದ

  • ನಾನು ಹೇಳಿದ್ದು ಹೌದು, ಆ ಒಂದು ಪದ ಬಳಸಿದ್ದು ತಪ್ಪು: ಈಶ್ವರಪ್ಪ

    ನಾನು ಹೇಳಿದ್ದು ಹೌದು, ಆ ಒಂದು ಪದ ಬಳಸಿದ್ದು ತಪ್ಪು: ಈಶ್ವರಪ್ಪ

    – ಸುಲಭ್ ಶೌಚಾಲಯಕ್ಕೆ ಮೋದಿ ಹೆಸರಿಡಿ ಎಂಬುದುನ್ನು ಕಾಂಗ್ರೆಸ್ ಒಪ್ಪುತ್ತಾ?

    ಬೆಳಗಾವಿ: ನಾನು ಆ ಪದ ಬಳಸಬಾರದಿತ್ತು, ಆದರೆ ಬಳಸಿದ್ದೇನೆ. ಅದು ತಪ್ಪು, ಈ ಕುರಿತು ಕ್ಷಮೆಯನ್ನು ಯಾಚಿಸಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

    ಕಾಂಗ್ರೆಸ್‍ನವರ ವಿರುದ್ಧ ಅಶ್ಲೀಲ ಶಬ್ದ ಬಳಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಹೇಳಿದ್ದು ಹೌದು, ಆ ಒಂದು ಪದ ಬಳಸಿದ್ದು ತಪ್ಪು. ಸಿಟ್ಟಿನ ಭರದಲ್ಲಿ ಹೇಳಿ ಆ ಪದವನ್ನು ಹಿಂಪಡೆದುಕೊಂಡಿದ್ದೇನೆ. ಆದರೆ ಸುಲಭ್ ಶೌಚಾಲಯಕ್ಕೆ ನರೇಂದ್ರ ಮೋದಿ ಅವರ ಹೆಸರಿಡಬೇಕು ಎಂದು ಹೇಳಿದನ್ನು ಕಾಂಗ್ರೆಸ್ ಅವರು ಒಪ್ಪುತ್ತಾರಾ? ಕಾಂಗ್ರೆಸ್ ಅವರು ರಾಜಕಾರಣ ಮಾಡಲು ಕಾಯುತ್ತಿದ್ದಾರೆ ಎಂದು ತಿರುಗೇಟು ಕೊಟ್ಟಿದ್ದಾರೆ.

    ಅವಾಚ್ಯ ಪದ ಬಳಕೆಗೆ ಕ್ಷಮೆ ಯಾಚಿಸುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಒಂದು ಬಾರಿ ಆಯಿತಲ್ಲ. ಬೆಳಗ್ಗೆಯಿಂದ ಸಂಜೆಯವರೆಗೂ ಅದೇ ಮಾಡಬೇಕಾ ಎಂದು ಮರು ಪ್ರಶ್ನೆ ಕೇಳಿದರು.

    ನೆರೆ ಪೀಡಿತ ಬೆಳಗಾವಿ ಜಿಲ್ಲೆಗೆ ಇನ್ನೂ ಹಣ ಬಿಡುಗಡೆ ಮಾಡದ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಷ್ಟೇ ಸರ್ಕಾರ ಬಂದಿದೆ. ಬರುತ್ತಿದ್ದ ಹಾಗೇ ನೆರೆಹಾನಿ, ಕೊರೊನಾ ಎಂಬ ಸಂಕಟಗಳು ಎದುರಾಗಿವೆ. ಈ ಬಗ್ಗೆ ಇನ್ನೂ ವರದಿ ಬಂದಿಲ್ಲ. ವರದಿ ಬಂದ ಮೇಲೆ ಎಷ್ಟು ನಷ್ಟವಾಗಿದೆ ಎಂದು ನೋಡಿ ಖಂಡಿತ ಹಣ ಬಿಡುಗಡೆ ಮಾಡುತ್ತೇವೆ. ಇಡೀ ಕರ್ನಾಟಕದಲ್ಲಿ ನೆರೆಯಿಂದ ಹಾನಿಯಾದ ಬಗ್ಗೆ ಸಮೀಕ್ಷೆ ಮಾಡಲಾಗುತ್ತಿದೆ. ಸಮೀಕ್ಷೆ ಮಾಡಿ ಜಿಲ್ಲಾ ಉಸ್ತುವಾರಿ ಸಚಿವರು ವರದಿ ಕಳುಹಿಸುತ್ತಿದ್ದಾರೆ ಎಂದರು.

    ಕಳೆದ ಬಾರಿ ಪ್ರವಾಹದ ವೇಳೆ 1,800 ಕೋಟಿ ರೂ. ರಸ್ತೆ ದುರಸ್ತಿಗಾಗಿ ಬಿಡುಗಡೆ ಮಾಡಿದ್ದೆವು. ಎಲ್ಲ ಜಿಲ್ಲೆಗಳಿಗೆ ಎಷ್ಟೆಷ್ಟು ಹಣ ಬಿಡುಗಡೆ ಮಾಡಬೇಕೆಂಬ ಬಗ್ಗೆ ಸಿಎಂ ಜತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಹೋಗಿ ಸಮೀಕ್ಷೆ ಮಾಡಿಕೊಂಡು ಬಂದಿದ್ದಾರೆ. ಉಸ್ತುವಾರಿ ಸಚಿವರು ವರದಿ ನೀಡುತ್ತಿದ್ದಂತೆ ಹಣ ಬಿಡುಗಡೆ ಮಾಡುತ್ತಾರೆ ಎಂದು ತಿಳಿಸಿದರು.

  • ಪೂಜಾರಾ ವಿರುದ್ಧ ಅವಾಚ್ಯ ಪದ ಪ್ರಯೋಗಿಸಿದ ರೋಹಿತ್ ಶರ್ಮಾ: ವಿಡಿಯೋ ವೈರಲ್

    ಪೂಜಾರಾ ವಿರುದ್ಧ ಅವಾಚ್ಯ ಪದ ಪ್ರಯೋಗಿಸಿದ ರೋಹಿತ್ ಶರ್ಮಾ: ವಿಡಿಯೋ ವೈರಲ್

    ವಿಶಾಖಪಟ್ಟಣಂ: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದ ವೇಳೆ ಟೀಂ ಇಂಡಿಯಾ ಆಟಗಾರ ರೋಹಿತ್ ಶರ್ಮಾ, ಸಹ ಆಟಗಾರ ಚೇತೇಶ್ವರ ಪೂಜಾರ ವಿರುದ್ಧ ಅವಾಚ್ಯ ಪದ ಪ್ರಯೋಗ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪಂದ್ಯದಲ್ಲಿ ಟೀಂ ಇಂಡಿಯಾ 2ನೇ ಇನ್ನಿಂಗ್ಸ್ ನ 4ನೇ ದಿನದಾಟದ 26ನೇ ಓವರಿನಲ್ಲಿ ಈ ಘಟನೆ ನಡೆದಿದೆ. ಬೌಲರ್ ಪೀಡ್ ಎಸೆದ ಬಾಲನ್ನು ರೋಹಿತ್ ಶರ್ಮಾ ಕವರ್ ಪಾಯಿಂಟ್ ನತ್ತ ತಳ್ಳಿ ಒಂದು ರನ್ ಓಡಲು ಮುಂದಾದರು. ಈ ವೇಳೆ ನಾನ್ ಸ್ಟ್ರೈಕ್ ನಲ್ಲಿದ್ದ ಪೂಜಾರ ರನ್ ಓಡಲು ಮುಂದಾಗಿ ನಂತರ ತಮ್ಮ ನಿರ್ಧಾರದಿಂದ ಹಿಂದಕ್ಕೆ ಸರಿದರು. ಅಸಮಾಧಾನಗೊಂಡ ರೋಹಿತ್ ಶರ್ಮಾ ಮರಳಿ ಕ್ರೀಸ್ ನತ್ತ ಓಡಿದರು. ಒಂದು ರನ್ ಪಡೆಯಲು ಸಾಧ್ಯವಿದ್ದರೂ ಓಡದ್ದಕ್ಕೆ ರೋಹಿತ್ ಶರ್ಮಾ ಪೂಜಾರ ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿದರು.

    ಅವಾಚ್ಯ ಪದ ಬಳಕೆ ಮಾಡಿರುವುದು ಸ್ಟಂಪ್ ಮೈಕ್‍ನಲ್ಲಿ ದಾಖಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟ್ವಿಟ್ಟಗರು ರೋಹಿತ್‍ರನ್ನು ಟ್ರೋಲ್ ಮಾಡುತ್ತಿದ್ದಾರೆ.

    ಗೆಲುವಿಗೆ 9 ವಿಕೆಟ್ ಬಾಕಿ: ಇತ್ತ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ರೋಹಿತ್ 147 ಎಸೆತಗಳಲ್ಲಿ 6 ಸಿಕ್ಸರ್, 10 ಬೌಂಡರಿಗಳ ನೆರವಿನಿಂದ 127 ರನ್ ಗಳಿಸಿ ನಿರ್ಗಮಿಸಿದರು. ಪೂಜಾರ 81 ರನ್, ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿದ ಜಡೇಜಾ 40 ರನ್, ಕೊಹ್ಲಿ 31 ರನ್, ರಹಾನೆ 27 ರನ್ ಗಳ ನೆರವಿನಿಂದ ಟೀಂ ಇಂಡಿಯಾ 4 ವಿಕೆಟ್ ನಷ್ಟಕ್ಕೆ 323 ರನ್ ಗಳಿಸಿದ್ದ ಸಂದರ್ಭದಲ್ಲಿ 2ನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

    ಗೆಲ್ಲಲು 395 ರನ್ ಗುರಿ ಪಡೆದ 2ನೇ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಅಫ್ರಿಕಾ 4ನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 11 ರನ್ ಗಳಿಸಿತು. ತಂಡದ ಪರ ಜಡೇಜಾ 2ನೇ ಇನ್ನಿಂಗ್ಸ್ ನಲ್ಲಿ ಎದುರಾಳಿಯ ಮೊದಲ ವಿಕೆಟ್ ಪಡೆದು ಅಘಾತ ನೀಡಿದರು.

    ಸಂಕ್ಷೀಪ್ತ ಸ್ಕೋರ್:
    ಟೀಂ ಇಂಡಿಯಾ: ಮೊದಲ ಇನ್ನಿಂಗ್ಸ್ 502/7 ಡಿಕ್ಲೇರ್
    2ನೇ ಇನ್ನಿಂಗ್ಸ್ 323/4 ಡಿಕ್ಲೇರ್

    ದಕ್ಷಿಣ ಆಫ್ರಿಕಾ: 431 ಅಲೌಟ್
    2ನೇ ಇನ್ನಿಂಗ್ಸ್ 11/1

  • ಬೆಂಬಲಿಗರಿಗೆ ಅವಾಚ್ಯ ಪದಗಳಿಂದ ನಿಂದಿಸಿದ ನಿರಂಜನಾನಂದಪುರಿ ಸ್ವಾಮೀಜಿ- ಆಡಿಯೋ ವೈರಲ್

    ಬೆಂಬಲಿಗರಿಗೆ ಅವಾಚ್ಯ ಪದಗಳಿಂದ ನಿಂದಿಸಿದ ನಿರಂಜನಾನಂದಪುರಿ ಸ್ವಾಮೀಜಿ- ಆಡಿಯೋ ವೈರಲ್

    ದಾವಣಗೆರೆ: ಕನಕ ಗುರು ಪೀಠ ಶಾಖಾ ಮಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಆವಾಚ್ಯ ಶಬ್ದಗಳನ್ನು ಬಳಸಿದ ಆಡಿಯೋ ಈಗ ಸಖತ್ ವೈರಲ್ ಆಗಿದೆ.

    ದಾವಣಗೆರೆ ಜಿಲ್ಲೆ, ಹರಿಹರ ತಾಲೂಕಿನ ಬೆಳ್ಳೂಡಿ ಸಮೀಪದ ಕನಕ ಗುರು ಪೀಠ ಶಾಖಾ ಮಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಅವಾಚ್ಯ ಶಬ್ದ ಬಳಸಿ ಬಾಯಿಗೆ ಬಂದಂತೆ ಮಾತನಾಡಿರುವ ಆಡಿಯೋ ಎಲ್ಲೆಡೆ ಹರಿದಾಡ್ತಿದೆ. ಜೂನ್ 2 ರಂದು ಬೆಳ್ಳೂಡಿ ಮಠದಲ್ಲಿ ಆಯೋಜಿಸಿದ್ದ ಕುರುಬ ಸಮಾಜದ ಮುಖಂಡರ ಸಭೆಯಲ್ಲಿ ಸೊಂಟದ ಕೆಳಗಿನ ಭಾಷೆ ಬಳಸಿ ಒಬ್ಬ ರೌಡಿಯಂತೆ ವರ್ತಿಸಿರುವುದನ್ನ ರೆಕಾರ್ಡ್ ಮಾಡಿ ವಾಟ್ಸಪ್‍ನಲ್ಲಿ ಹರಿಬಿಟ್ಟಿದ್ದಾರೆ.

    ಹರಿಹರ ತಾಲೂಕು ಕುರುಬ ಸಮುದಾಯದ ಕೆಲ ನಾಯಕರು ವಿಧಾನಸಭಾ ಕ್ಷೇತ್ರದ ಟಿಕೆಟ್ ಗಾಗಿ ಸ್ವಾಮೀಜಿ ಹಿಂದೆ ದುಂಬಾಲು ಬಿದಿದ್ದಾರೆ. ಅಲ್ಲದೆ ಮುಖಂಡರು ಬಹಿರಂಗವಾಗಿ ಕಿತ್ತಾಡುತ್ತಿದ್ದನ್ನ ಕಂಡಿದ್ದ ನಿರಂಜನಾನಂದಪುರಿ ಸ್ವಾಮೀಜಿ, ನಿಮ್ಮಂಥವರಿಂದಲೇ ಸಮಾಜದ ಮರ್ಯಾದೆ ಹಾಳಾಗಿರೋದು. ನಾನು ಮನಸ್ಸು ಮಾಡಿದ್ರೆ ಲಿಂಗಾಯಿತರನ್ನ ಎಂಎಲ್‍ಎ ಮಾಡ್ತಿನಿ ನೋಡ್ತಿರಾ. ನಾಚಿಕೆ ಆಗಲ್ವಾ, ಹೊಟ್ಟೆಗೆ ಅನ್ನ ತಿಂತಿರೋ ಏನ್ ತಿಂತಿರೋ. ಯಾವನ್ ಗೆಲ್ತಿರೋ ಗೆಲ್ರೋ ನೋಡೋಣ ಅಂತ ಫುಲ್ ಗರಂ ಆಗಿರೋದು ಆಡಿಯೋದಲ್ಲಿದೆ.

    ಜೂನ್ 2 ರಂದು ಮಠಕ್ಕೆ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಭೇಟಿ ನೀಡಿದ್ರು. ಈಶ್ವರಪ್ಪ ನೇತೃತ್ವದಲ್ಲಿ ಸಭೆ ಮುಗಿದ ಬಳಿಕ ಮಾಧ್ಯಮದವರನ್ನ ಹೊರಗಿಟ್ಟು ಸಭೆ ಮುಂದುವರಿಸಿದ ನಿರಂಜನಾನಂದಪುರಿ ಸ್ವಾಮೀಜಿ ಸಮಾಜದ ಮುಖಂಡರಿಗೆ ಸೊಂಟದ ಕೆಳಗಿನ ಭಾಷೆ ಬಳಸಿ ನಿಂದಿಸಿದ್ದಾರೆ. ಒಬ್ಬ ಖಾವಿಧಾರಿಯಾಗಿ ಹೀಗೆ ಪದ ಬಳಕೆ ಮಾಡಿರೋದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ಸ್ವಾಮೀಜಿ ಭಕ್ತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಕ್ಕೆ ರಾಜ್ಯದ ಹಲವು ಮಠದ ಪೀಠಾಧ್ಯಕ್ಷರು ಅವರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧಾರವಾಡದಲ್ಲಿ ಕೂಡಲ ಸಂಗಮ ಪೀಠದ ಪೀಠಾಧ್ಯಕ್ಷೆ ಮಾತೇ ಮಹಾದೇವಿ ಹೇಳಿಕೆ ನೀಡಿದ್ದು, ಸ್ವಾಮೀಜಿಗಳು ಅತ್ಯಂತ ಸೌಜನ್ಯದಿಂದ ಮಾತನಾಡಬೇಕು. ಸ್ವಾಮೀಜಿಗಳು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದು, ಖಾವಿಧಾರಿಗಳಿಗೆ ಅವಮಾನ ಮಾಡಿದ್ದಾರೆ ಎಂದು ಹೇಳಿದ ಮಾತೆ, ಈ ರೀತಿ ನಿಂದನೆ ಮಾಡಿ ಸ್ವಾಮೀಜಿ ಭಕ್ತರಿಗೆ ನೋವುಂಟು ಮಾಡಿದ್ದಾರೆ ಎಂದು ಹೇಳಿದರು.

    ಇನ್ನೊಂದೆಡೆ ಕುಡುಬ ಮಠವಾದ ರೇವಣಸಿದ್ದೇಶ್ವರ ಮಠದ ಬಸವರಾಜ್ ದೇವ್ರು ಸ್ವಾಮೀಜಿ ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರಂಜನಾನಂದ ಸ್ವಾಮೀಜಿ ತಮ್ಮ ಹೇಳಿಕೆ ವಾಪಸ್ ಪಡೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರುವ ಅವರು, ಕನಕ ಗುರು ಪೀಠದ ಸ್ವಾಮೀಜಿಗಳ ಬಗ್ಗೆ ಭಕ್ತರಾಗಿರುವ ಸಿಎಂ ಸಿದ್ಧರಾಮಯ್ಯ ಹಾಗೂ ಎಚ್‍ಎಂ ರೇವಣ್ಣ ತಮ್ಮ ನಿಲುವನ್ನ ತಿಳಿಸಲಿ ಎಂದು ಹೇಳಿದರು.

    ಈ ಬಗ್ಗೆ ದಾವಣಗೆರೆಯಲ್ಲಿ ಕಾಗಿನೆಲೆ ಪೀಠದ ಭಕ್ತ ಮಂಡಳಿ ಸುದ್ದಿಗೋಷ್ಠಿ ನಡೆಸಿದ್ದು, ಯಾರೋ ಕಿಡಿಗೇಡಿಗಳು, ಮಠದ ಏಳಿಗೆಯನ್ನು ಸಹಿಸದ ವ್ಯಕ್ತಿಗಳು ಈ ರೀತಿ ಮಾಡಿದ್ದಾರೆ. ಸ್ವಾಮೀಜಿಯವರು ಸಮಾಜದ ಏಳಿಗೆಗಾಗಿ ಶ್ರಮಿಸಿದವರು. ಸಮಾಜವನ್ನು ತಿದ್ದಲು ಈ ರೀತಿ ಪದ ಬಳಕೆ ಮಾಡಿದ್ದು, ಅದನ್ನು ಬಿಟ್ಟು ಬೇರೆ ಕಾರಣಕ್ಕೆ ಅಲ್ಲ ಎಂದು ಭಕ್ತ ಮಂಡಳಿಯ ಸದಸ್ಯ ಮಹೇಶ್ವರಪ್ಪ ಹೇಳಿದ್ರು. ಅಲ್ಲದೆ ಹರಿಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದ್ರು.

    https://www.youtube.com/watch?v=6KrNjQ-Ih6U