Tag: ಅವಳಿ ಮಕ್ಕಳು

  • ಮದ್ವೆಯಾಗಿ 10 ವರ್ಷಗಳ ಬಳಿಕ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಕೊರೊನಾ ಸೋಂಕಿತೆ

    ಮದ್ವೆಯಾಗಿ 10 ವರ್ಷಗಳ ಬಳಿಕ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಕೊರೊನಾ ಸೋಂಕಿತೆ

    ಹಾಸನ: ಕೊರೊನಾ ಪಾಸಿಟಿವ್ ನಡುವೆಯೂ ಹಾಸನದ ಮಹಿಳೆಯೊಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಆರೋಗ್ಯವಾಗಿದ್ದಾರೆ.

    ಸಕಲೇಶಪುರ ಮೂಲದ ರಮ್ಯ ಮತ್ತು ಲೋಹಿತ್ ಎಂಬವರಿಗೆ ಹತ್ತು ವರ್ಷದ ಹಿಂದೆ ವಿವಾಹವಾಗಿತ್ತು. ಹತ್ತು ವರ್ಷ ಕಳೆದರೂ ಈ ದಂಪತಿಗೆ ಮಕ್ಕಳಾಗಿರಲಿಲ್ಲ. ನಂತರ ರಮ್ಯ ಗರ್ಭಿಣಿಯಾದರು. ಡೆಲಿವರಿಗೆ ಇನ್ನು ಕೇವಲ ಹನ್ನೊಂದು ದಿನ ಮಾತ್ರ ಬಾಕಿಯಿರುವಾಗಲೇ ರಮ್ಯಾಗೆ ಕೊರೊನಾ ಸೋಂಕು ತಗುಲಿತು. ಕೂಡಲೇ ಅವರನ್ನು ಹಾಸನ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು.

    ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ 400ಕ್ಕೂ ಹೆಚ್ಚು ಕೊರೊನಾ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ಆಸ್ಪತ್ರೆಯಲ್ಲಿ ರಮ್ಯಾ ಚಿಕಿತ್ಸೆ ಪಡೆಯುತ್ತಿದ್ದು ಗರ್ಭದಲ್ಲಿರುವ ಮಕ್ಕಳಿಗೂ ಸೋಂಕು ತಗುಲುವ ಸಾಧ್ಯತೆ ಜೊತೆಗೆ ತಾಯಿ-ಮಕ್ಕಳು ಬದುಕಿ ಉಳಿಯುವುದು ಕಷ್ಟವಾಗಿತ್ತು. ಹಗಲಿರುಳೆನ್ನದೆ ದುಡಿಯುತ್ತಿರುವ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ರಮ್ಯಾಳ ಬಗ್ಗೆ ಹೆಚ್ಚು ನಿಗಾವಹಿಸಿ ಸಿಸೇರಿಯನ್ ಮೂಲಕ ಅವಳಿ ಮಕ್ಕಳನ್ನು ಹೊರತೆಗೆದಿದ್ದಾರೆ. ಅವಳಿ ಹೆಣ್ಣು ಮಕ್ಕಳು ಆರೋಗ್ಯವಾಗಿದ್ದಾರೆ.

    ಮಕ್ಕಳಿಗೆ ಜನ್ಮ ನೀಡಿದ ಕೊರೊನಾ ಸೋಂಕಿತ ಮಹಿಳೆ ಪ್ರಾಣಾಯಾಮದಿಂದ ಪಾರಾಗಿದ್ದಾರೆ. ರಮ್ಯಾಳ ಪತಿ ಲೋಹಿತ್ ಹಿಮ್ಸ್ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕೆಲವರು ವೈದ್ಯರನ್ನು, ವೈದ್ಯಕೀಯ ಸಿಬ್ಬಂದಿಯನ್ನು ಬಯ್ಯುತ್ತಿದ್ದಾರೆ. ಅವರು ಅವರ ಕುಟುಂಬ ಮರೆತು ನಮ್ಮ ಕುಟುಂಬಕ್ಕಾಗಿ ದುಡಿಯುತ್ತಿದ್ದಾರೆ. ಈಗಲೂ ನನ್ನ ಪತ್ನಿ ಇನ್ನೂ ಕೋವಿಡ್‍ನಿಂದ ಸಂಪೂರ್ಣ ಗುಣಮುಖರಾಗಿಲ್ಲ. ಯಾರೂ ವೈದ್ಯರನ್ನು ದೂಷಿಸಬೇಡಿ. ದೇವರ ರೀತಿ ನಮಗೆ ಸಹಾಯ ಮಾಡಿದ ಹಾಸನ ವೈದ್ಯರು, ವೈದ್ಯಕೀಯ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ.

    ಕಳೆದ ಒಂದು ತಿಂಗಳಿನಿಂದ ಹಾಸನದ ಹಿಮ್ಸ್ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇದರ ನಡುವೆ ಕೊರೊನಾ ಸೋಂಕಿತ ಗರ್ಭಿಣಿ ಮಹಿಳೆ ಹಾಗೂ ಅವಳಿ ಮಕ್ಕಳನ್ನು ಉಳಿಸಲು ಪಟ್ಟ ಶ್ರಮಕ್ಕೆ ಸಾರ್ವಜನಿಕರು ಪ್ರಶಂಸಿದ್ದಾರೆ. ಇತ್ತ ತಾಯಿ-ಮಗು ಆರೋಗ್ಯವಾಗಿರುವುದು ರಮ್ಯಾ ಹಾಗೂ ಲೋಹಿತ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.

  • ರಾಜ್ಯದಲ್ಲೇ ಮೊದಲ ಬಾರಿಗೆ ಕೋವಿಡ್ ಸೋಂಕಿತ ಗರ್ಭಿಣಿಗೆ ಅವಳಿ ಮಕ್ಕಳು ಜನನ

    ರಾಜ್ಯದಲ್ಲೇ ಮೊದಲ ಬಾರಿಗೆ ಕೋವಿಡ್ ಸೋಂಕಿತ ಗರ್ಭಿಣಿಗೆ ಅವಳಿ ಮಕ್ಕಳು ಜನನ

    ಬಳ್ಳಾರಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತ ಗರ್ಭಿಣಿ ಅವಳಿ-ಜವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

    ಬಳ್ಳಾರಿಯ ಡಾ.ರಾಜ್ ರಸ್ತೆಯಲ್ಲಿರುವ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ (ಕೋವಿಡ್ ಕೇರ್) ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿಯವರ ನೇತೃತ್ವದಲ್ಲಿ ಕೋವಿಡ್ ಸೋಂಕಿತ ಗರ್ಭಿಣಿಗೆ ಹೆರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇಂದು ಬೆಳಗ್ಗೆ ಸುಮಾರು 8.35ಕ್ಕೆ ಒಂದು ಗಂಡು ಮತ್ತು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

    ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ. ಕೋವಿಡ್ ಸೋಂಕಿತ ಗರ್ಭಿಣಿಯು ಕಾರ್ಮಿಕ ವಲಯದಲ್ಲಿ ಕೆಲಸ ಮಾಡುತ್ತಿದ್ದು, ಎಲ್.ಎಸ್.ಸಿ.ಎಸ್ (Lower segment Caesarean section) ತಂತ್ರಜ್ಞಾನದ ಮೂಲಕ ತುರ್ತು ಹೆರಿಗೆ ಶಸ್ತ್ರಚಿಕಿತ್ಸೆಯನ್ನ ಮಾಡಲಾಗಿದೆ.

    ನವಜಾತ ಹೆಣ್ಣು ಶಿಶು 1.8 ಕೆ.ಜಿಯಷ್ಟು ಹಾಗೂ ನವಜಾತ ಗಂಡು ಶಿಶು 2.5 ಕೆ.ಜಿ ಯಷ್ಟು ತೂಕವಿರುತ್ತದೆ. ಮಹಿಳೆಗೆ ಇದು ಮೊದಲನೇಯ ಹೆರಿಗೆಯಾಗಿದೆಂದು ಡಿಸಿ ನಕುಲ್ ತಿಳಿಸಿದ್ದಾರೆ. ಇಡೀ ರಾಜ್ಯದಲ್ಲಿಯೇ ಇದೇ ಮೊದಲ ಬಾರಿಗೆ ಕೋವಿಡ್ ಸೋಂಕಿತ ಗರ್ಭಿಣಿ ಅವಳಿ-ಜವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ತಿಳಿದು ಬಂದಿದೆ.

  • ಕೋವಿಡ್ ಆಸ್ಪತ್ರೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಕೊರೊನಾ ಸೋಂಕಿತೆ!

    ಕೋವಿಡ್ ಆಸ್ಪತ್ರೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಕೊರೊನಾ ಸೋಂಕಿತೆ!

    ವಿಜಯಪುರ: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇಂದು ಆಸ್ಪತ್ರೆಯ ವೈದ್ಯರು ಮಹಿಳೆಗೆ ಸಹಜ ಹೆರಿಗೆ ಮಾಡಿಸಿದ್ದಾರೆ.

    ನಿನ್ನೆಯಷ್ಟೇ ಗರ್ಭಿಣಿ ಮಹಿಳೆಗೆ ಕೊರೊನಾ ಪಾಸಿಟಿವ್ ವರದಿ ದೃಢವಾಗಿತ್ತು. ರೋಗಿ ಸಂಖ್ಯೆ-8789 ಎಂಬ 20 ವರ್ಷದ ಗರ್ಭಿಣಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇಂದು ಬೆಳಗ್ಗೆ ಮಹಿಳೆಗೆ ಏಕಾಏಕಿ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಕೊರೊನಾ ಸುರಕ್ಷತಾ ಕ್ರಮ ಕೈಗೊಂಡ ವೈದ್ಯರು ಗರ್ಭಿಣಿಗೆ ಚಿಕಿತ್ಸೆ ನೀಡಿ, ಹೆರಿಗೆ ಮಾಡಿಸಿದ್ದಾರೆ.

    ನವಜಾತ ಶಿಶುಗಳು 2 ಕೆಜಿ ಹಾಗೂ 2.1 ಕೆಜಿ ತೂಕ ಹೊಂದಿದ್ದು, ತಾಯಿ ಮತ್ತು ಮಕ್ಕಳ ಆರೋಗ್ಯ ಸ್ಥಿರ ಎಂದು ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಶರಣಪ್ಪ ಕಟ್ಟಿ ಮಾಹಿತಿ ನೀಡಿದ್ದಾರೆ. ಅನೇಮಿಯಾ (ರಕ್ತಹೀನತೆ) ಸಮಸ್ಯೆಯಿಂದ ಬಳಲುತ್ತಿದ್ದ ಗರ್ಭಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅವರಿಗೆ ಕೋವಿಡ್ 19 ಪರೀಕ್ಷೆ ನಡೆಸಿದ ವೇಳೆ ಕೊರೊನಾ ಪಾಸಿಟಿವ್ ವರದಿ ದೃಢವಾಗಿತ್ತು.

  • ನೆನಪಿಗಾಗಿ ಅವಳಿ ಮಕ್ಕಳಿಗೆ ‘ಕೊರೊನಾ, ಕೋವಿಡ್’ ಎಂದು ನಾಮಕರಣ

    ನೆನಪಿಗಾಗಿ ಅವಳಿ ಮಕ್ಕಳಿಗೆ ‘ಕೊರೊನಾ, ಕೋವಿಡ್’ ಎಂದು ನಾಮಕರಣ

    – ಕೊರೊನಾ ಉತ್ತಮ ಅಭ್ಯಾಸಗಳನ್ನ ಬೆಳೆಸಿಕೊಳ್ಳುವಂತೆ ಮಾಡಿದೆ

    ರಾಯ್ಪುರ್: ಕೊರೊನಾ ವೈರಸ್ ವಿಶ್ವದಾದ್ಯಂತ ವ್ಯಾಪಿಸಿದ್ದು, ಜನರಲ್ಲಿ ಆತಂಕ ಸೃಷ್ಟಿಸುತ್ತಿದೆ. ಕೊರೊನಾ ಮತ್ತು ಕೋವಿಡ್ ಈ ಎರಡು ಪದಗಳು ಜನರಲ್ಲಿ ಈಗಾಗಲೇ ಆತಂಕ ಸೃಷ್ಟಿಸಿವೆ. ಅಲ್ಲದೇ ಇದರಿಂದ ಆರ್ಥಿಕ ಕಷ್ಟವನ್ನು ಎದುರಿಸಲಾಗುತ್ತಿದೆ. ಆದರೆ ಈ ಮಧ್ಯೆ ಛತ್ತೀಸ್‍ಗಢ ದಂಪತಿ ತಮಗೆ ಜನಿಸಿದ ಅವಳಿ ಮಕ್ಕಳಿಗೆ ‘ಕೊರೊನಾ’ ಮತ್ತು ‘ಕೋವಿಡ್’ ಎಂದು ನಾಮಕರಣ ಮಾಡಿದ್ದಾರೆ.

    ರಾಯ್ಪುರ ಮೂಲದ ದಂಪತಿಗೆ ಮಾರ್ಚ್ 26-27ರ ಮಧ್ಯರಾತ್ರಿ ರಾಯ್ಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಅವಳಿ ಮಕ್ಕಳ ಜನನವಾಗಿದೆ. ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಜನಿಸಿದ್ದು, ಲಾಕ್‍ಡೌನ್ ಮಧ್ಯೆಯೂ ಜನಿಸಿದ್ದಕ್ಕಾಗಿ ಮಕ್ಕಳಿಗೆ ‘ಕೊರೊನಾ-ಕೋವಿಡ್’ ಎಂದು ಹೆಸರನ್ನು ಇಡಲಾಗಿದೆ.

    ಮಾರ್ಚ್ 27 ರಂದು ಮುಂಜಾನೆ ನಾನು ಅವಳಿ ಮಕ್ಕಳಿಗೆ ಜನ್ಮ ನೀಡಿದೆ. ನಾವು ಗಂಡು ಮಗುವಿಗೆ ಕೋವಿಡ್ ಮತ್ತು ಹೆಣ್ಣು ಮಗುವಿಗೆ ಕೊರೊನಾ ಎಂದು ಹೆಸರಿಟ್ಟಿದ್ದೇವೆ. ಹೆರಿಗೆಯ ವೇಳೆ ನಾವು ಅನೇಕ ತೊಂದರೆಗಳನ್ನು ಎದುರಿಸಿದ್ದೇವೆ. ಆದ್ದರಿಂದ ನನ್ನ ಪತಿ ನೆನಪಿಗಾಗಿ ಈ ಹೆಸರು ಇಟ್ಟಿದ್ದಾರೆ ಎಂದು ತಾಯಿ ಪ್ರೀತಿ ವರ್ಮಾ ತಿಳಿಸಿದರು.

    ಪ್ರಸ್ತುತ ಕೊರೊನಾ ವೈರಸ್ ಅಪಾಯಕಾರಿಯಾಗಿದೆ. ಆದರೆ ಇದೇ ವೇಳೆ ಜನರಿಗೆ ನೈರ್ಮಲ್ಯ, ಸ್ವಚ್ಛತೆ ಮತ್ತು ಇತರ ಉತ್ತಮ ಅಭ್ಯಾಸಗಳನ್ನು ಬೆಳೆಸಿಕೊಳ್ಳುವಂತೆ ಮಾಡಿದೆ. ಹೀಗಾಗಿ ನಾವು ಈ ಹೆಸರುಗಳ ಬಗ್ಗೆ ಯೋಚಿಸಿದ್ದೆವು. ಆಸ್ಪತ್ರೆಯ ಸಿಬ್ಬಂದಿ ಸಹ ‘ಕೊರೊನಾ ಮತ್ತು ಕೋವಿಡ್’ ಎಂದು ಕರೆಯುತ್ತಿದ್ದರು. ಕೊನೆಗೆ ಸಾಂಕ್ರಾಮಿಕ ರೋಗದ ಹೆಸರನ್ನು ಇಡಲು ನಿರ್ಧರಿಸಿದ್ದೇವೆ ಎಂದು ಹೇಳಿದರು.

    ಮಾರ್ಚ್ 26ರಂದು ತಡರಾತ್ರಿ ನನಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಪತಿ ಅಂಬುಲೆನ್ಸ್‌ಗೆ ಫೋನ್ ಮಾಡಿದ್ದಾರೆ. ಲಾಕ್‍ಡೌನ್ ಆದ ಪರಿಣಾಮ ಯಾವುದೇ ವಾಹನಕ್ಕೂ ಅವಕಾಶ ಇರಲಿಲ್ಲ. ಹೀಗಾಗಿ ಪೊಲೀಸರು ವಿವಿಧ ಸ್ಥಳಗಳಲ್ಲಿ ಅಂಬುಲೆನ್ಸ್ ನಿಲ್ಲಿಸಿ, ಪರಿಶೀಲನೆ ಮಾಡಿದ್ದಾರೆ. ಕೊನೆಗೆ ನನ್ನ ಸ್ಥಿತಿ ನೋಡಿ ಬಿಟ್ಟಿದ್ದಾರೆ. ಆದರೆ ಮಧ್ಯರಾತ್ರಿಯಾಗಿದ್ದರಿಂದ ಆಸ್ಪತ್ರೆಯಲ್ಲಿ ಏನಾಗಬಹುದು ಎಂಬ ಭಯ ಆಗಿತ್ತು. ಅದೃಷ್ಟವಶಾತ್ ವೈದ್ಯರು ಮತ್ತು ಇತರ ಸಿಬ್ಬಂದಿ ಆಸ್ಪತ್ರೆಯಲ್ಲೇ ಇದ್ದು ನನಗೆ ಹೆರಿಗೆ ಮಾಡಿಸಿದರು ಎಂದು ಹೆರಿಗೆ ವೇಳೆ ಎದುರಾದ ತೊಂದರೆಯ ಬಗ್ಗೆ ವರ್ಮಾ ತಿಳಿಸಿದ್ದಾರೆ.

    ತಾಯಿ ಮತ್ತು ಮಕ್ಕಳು ಇಬ್ಬರೂ ಆರೋಗ್ಯವಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ದಂಪತಿ ಕೊರೊನಾ-ಕೋವಿಡ್ ಎಂದು ಮಕ್ಕಳಿಗೆ ಹೆಸರಿಟ್ಟ ನಂತರ ಆಸ್ಪತ್ರೆಯಲ್ಲಿ ಅವಳಿ ಮಕ್ಕಳು ಕೇಂದ್ರ ಬಿಂದುವಾಗಿದ್ದವು ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ. ಮೂಲತಃ ಉತ್ತರ ಪ್ರದೇಶದವರಾಗಿದ್ದು, ದೆಹಲಿಯ ಪುರಾಣಿ ಬಸ್ತಿ ಪ್ರದೇಶದ ಬಾಡಿಗೆ ಮನೆಯಲ್ಲಿ ದಂಪತಿ ವಾಸಿಸುತ್ತಿದ್ದಾರೆ.

  • 42 ನಿಮಿಷದಲ್ಲಿ 80 ಕಿಮೀ ಚಾಲನೆ – ಅವಳಿ ಮಕ್ಕಳ ಜೀವ ಉಳಿಸಿದ ಅಂಬ್ಯುಲೆನ್ಸ್ ಸಿಬ್ಬಂದಿ

    42 ನಿಮಿಷದಲ್ಲಿ 80 ಕಿಮೀ ಚಾಲನೆ – ಅವಳಿ ಮಕ್ಕಳ ಜೀವ ಉಳಿಸಿದ ಅಂಬ್ಯುಲೆನ್ಸ್ ಸಿಬ್ಬಂದಿ

    ಹಾವೇರಿ: ಸಂಚಾರಿ ಪೊಲೀಸರ ನೆರವಿನಿಂದ ಅವಳಿ ಮಕ್ಕಳನ್ನ ಅಂಬ್ಯುಲೆನ್ಸ್ ಸಿಬ್ಬಂದಿ ಹಾವೇರಿಯಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಿ ಜೀವ ಉಳಿಸಿದ್ದಾರೆ.

    ಹಾವೇರಿ ನಗರದ ನಿವಾಸಿ ಲಕ್ಷ್ಮಿ ಜಿಲ್ಲಾಸ್ಪತ್ರೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಆದರೆ ಮಕ್ಕಳಲ್ಲಿ ತೀವ್ರತರದ ಸಮಸ್ಯೆ ಕಾಣಿಸಿಕೊಂಡಿತ್ತು. ಜಿಲ್ಲಾಸ್ಪತ್ರೆಯ ವೈದ್ಯರ ಸಲಹೆಯಂತೆ ಆದಷ್ಟು ಬೇಗ ನವಜಾತ ಶಿಶುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಅರ್ಥಮಾಡಿಕೊಂಡ ಅಂಬ್ಯುಲೆನ್ಸ್ ಸಿಬ್ಬಂದಿ ಕೇವಲ 42 ನಿಮಿಷಗಳಲ್ಲಿ 80 ಕಿಮೀ ಕ್ರಮಿಸಿ ಮಕ್ಕಳನ್ನು ಕಿಮ್ಸ್ ಗೆ ದಾಖಲಿಸಿದ್ದಾರೆ.

    ಹುಬ್ಬಳ್ಳಿಯ ಹೊರವಲಯಕ್ಕೆ ಅಂಬ್ಯುಲೆನ್ಸ್ ಬರುತ್ತಿದ್ದಂತೆ ಹುಬ್ಬಳ್ಳಿ ಸಂಚಾರಿ ಪೊಲೀಸರು ಅಂಬ್ಯುಲೆನ್ಸಗೆ ಯಾವುದೇ ಟ್ರಾಫಿಕ್ ಸಮಸ್ಯೆ ಬರದಂತೆ ಕಿಮ್ಸ್ ವರೆಗೆ ದಾರಿ ಮಾಡಿಕೊಟ್ಟಿದ್ದಾರೆ. ಈ ಮೂಲಕ ಟ್ರಾಫಿಕ್ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ಅಂಬ್ಯುಲೆನ್ಸ್ ಸಿಬ್ಬಂದಿ ತೌಫಿಕ್ ಪಠಾಣ್ ಮತ್ತು ಕುಮಾರ್ ಹಾಗೂ ಹುಬ್ಬಳ್ಳಿ ಟ್ರಾಫಿಕ್ ಪೊಲೀಸರ ಈ ಕಾರ್ಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

  • ಮಗುವಿಗೆ ಜನ್ಮ ನೀಡಿ 11 ವಾರದಲ್ಲಿ ಎರಡನೇ ಬಾರಿ ತಾಯಿಯಾದ ಲಿಲಿಯಾ

    ಮಗುವಿಗೆ ಜನ್ಮ ನೀಡಿ 11 ವಾರದಲ್ಲಿ ಎರಡನೇ ಬಾರಿ ತಾಯಿಯಾದ ಲಿಲಿಯಾ

    ನೂರ್ ಸುಲ್ತಾನ್: ಮಹಿಳೆಯೊಬ್ಬರು ಮೊದಲ ಮಗುವಿಗೆ ಜನ್ಮ ನೀಡಿ 11 ವಾರದಲ್ಲೇ ಮತ್ತೊಂದು ಶಿಶುವಿಗೆ ಜನ್ಮ ನೀಡಿದ ಘಟನೆ ಕಜಾಖಸ್ತಾನದಲ್ಲಿ ನಡೆದಿದೆ.

    ಲಿಲಿಯಾ ಕೋನೋವಾಲೋವಾ ಮೊದಲ ಮಗುವಿಗೆ ಜನ್ಮ ನೀಡಿದ 11 ವಾರದಲ್ಲೇ ಮತ್ತೊಂದು ಮಗುವಿಗೆ ಜನ್ಮ ನೀಡಿದ್ದಾರೆ. ವಿಶೇಷ ಅಂದರೆ ಇಬ್ಬರು ಅವಳಿ ಮಕ್ಕಳು. ಲಿಲಿಯಾ ಆರೋಗ್ಯದ ಪರಿಸ್ಥಿತಿ ತಿಳಿದ ವೈದ್ಯರು ಡೆಲಿವರಿಗೆ ಮೊದಲೇ ಎಲ್ಲಾ ತಯಾರಿ ನಡೆಸಿದ್ದರು. ಈಗಾಗಲೇ ಲಿಲಿಯಾ ಅವರಿಗೆ 7 ವರ್ಷದ ಮಗಳಿದ್ದಾಳೆ. ಲಿಲಿಯಾ ಮೊದಲ ಬಾರಿಗೆ ಗರ್ಭಿಣಿಯಾಗಿದ್ದಾಗ, ಅವರಿಗೆ ಎರಡು ಗರ್ಭಕೋಶ ಇರುವುದಾಗಿ ವೈದ್ಯರು ಹೇಳಿದ್ದರು.

    ಎರಡನೇ ಬಾರಿಗೆ ಲಿಲಿಯಾ ಗರ್ಭಿಣಿಯಾಗಿದ್ದಾಗ, ಅವಳಿ ಮಕ್ಕಳಿಗೆ ಜನ್ಮ ನೀಡುವುದಾಗಿ ವೈದ್ಯರು ತಿಳಿಸಿದ್ದರು. ಇಬ್ಬರು ಮಕ್ಕಳು ಲಿಲಿಯಾಳ ಬೇರೆ ಬೇರೆ ಗರ್ಭದಲ್ಲಿ ಬೆಳೆಯುತ್ತಿತ್ತು. ಮೇ 24ರಂದು ಲಿಲಿಯಾ 6 ತಿಂಗಳ ಗರ್ಭಿಣಿಯಾಗಿದ್ದಾಗಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆಗ ಮಗುವಿನ ತೂಕ ಕೇವಲ 850 ಗ್ರಾಂ ಇತ್ತು. ಲಿಲಿಯಾ ಅವರ ಮತ್ತೊಂದು ಗರ್ಭದಲ್ಲಿ ಬೆಳೆಯುತ್ತಿದ್ದ ಮಗು 9 ತಿಂಗಳು ನಂತರ ಜನಿಸಿದೆ. ಇಬ್ಬರು ಮಕ್ಕಳು ಈಗ ಆರೋಗ್ಯದಿಂದ ಇದ್ದಾರೆ.

    ವೈದ್ಯರು ನನ್ನ ಆರೋಗ್ಯದ ಸ್ಥಿತಿ ಬಗ್ಗೆ ಹೇಳಿದ್ದಾಗ ನಾನು ಆತಂಕಗೊಂಡಿದೆ. 9 ತಿಂಗಳು ಆಗುವ ಮೊದಲೇ ಮಗಳು ಜನಿಸಿದರಿಂದ ನಾನು ಚಿಂತೆಗೊಳಗಾಗಿದೆ. ಆದರೆ ವೈದ್ಯರು ದೊಡ್ಡವರು. ಅವರು ನನ್ನ ಮಗುವನ್ನು ಉಳಿಸಿದರು. ಅಗಸ್ಟ್ 9ರಂದು ನಾನು ಗಂಡು ಮಗುವಿಗೆ ಜನ್ಮ ನೀಡಿದ್ದೇನೆ. ನಾನು ಈಗ ಶೀಘ್ರದಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತೇನೆ ಎಂದು ಲಿಲಿಯಾ ಸ್ಥಳೀಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

    ಬೇರೆ ಬೇರೆ ಸಮಯದಲ್ಲಿ ಅವಳಿ ಮಕ್ಕಳು ಜನಿಸಿರುವುದು ಇದು ಕಜಾಖಸ್ತಾನದ ಇತಿಹಾಸದಲ್ಲೇ ಮೊದಲ ಬಾರಿ ಆಗಿದೆ. ಅವಳಿ ಮಕ್ಕಳು ಇಬ್ಬರು ಅಣ್ಣ-ತಂಗಿಯಾಗಿದ್ದು, ಇಬ್ಬರ ನಡುವೆ 11 ವಾರ ಅಂತರವಿದೆ. ತಾಯಿ ಹಾಗೂ ಇಬ್ಬರು ಮಕ್ಕಳು ಕ್ಷೇಮವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

  • ಅವಳಿ ಮಕ್ಕಳಿಗಾಗಿ ಹೋಟೆಲ್‍ನಲ್ಲಿ ಸೌಟು ಹಿಡಿದ ಸನ್ನಿ

    ಅವಳಿ ಮಕ್ಕಳಿಗಾಗಿ ಹೋಟೆಲ್‍ನಲ್ಲಿ ಸೌಟು ಹಿಡಿದ ಸನ್ನಿ

    ಮುಂಬೈ: ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ತನ್ನ ಅವಳಿ ಮಕ್ಕಳಿಗಾಗಿ ಹೋಟೆಲ್‍ವೊಂದರಲ್ಲಿ ಅಡುಗೆ ಮಾಡಿದ್ದಾರೆ. ತಾವು ಅಡುಗೆ ಮಾಡುತ್ತಿರುವ ಫೋಟೋವನ್ನು ಸ್ವತಃ ಸನ್ನಿ ಲಿಯೋನ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ಸನ್ನಿ ಲಿಯೋನ್ ಖಾಸಗಿ ವಾಹಿನಿಯ ಪ್ರಸಾರವಾಗುವ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿದ್ದಾರೆ. ಈ ಶೂಟಿಂಗ್‍ಗಾಗಿ ಸನ್ನಿ ಲಿಯೋನ್ ತಮ್ಮ ಅವಳಿ ಮಕ್ಕಳಾದ ನೋಹಾ ಹಾಗೂ ಅಶ್‍ಹರ್ ರನ್ನು ಕರೆದುಕೊಂಡು ಹೋಗಿದ್ದಾರೆ.

    ಈ ರಿಯಾಲಿಟಿ ಶೋಗಾಗಿ ಸನ್ನಿ ಲಿಯೋನ್ ತಮ್ಮ ಮಕ್ಕಳ ಜೊತೆ ಹೋಟೆಲಿನಲ್ಲಿ ತಂಗಿದ್ದಾರೆ. ಈ ವೇಳೆ ಅವರು ಅಲ್ಲಿನ ಹೋಟೆಲ್‍ನಲ್ಲಿ ತಮ್ಮ ಮಕ್ಕಳಿಗಾಗಿ ಅಡುಗೆ ಮಾಡಿದ್ದಾರೆ. ಸನ್ನಿ ಅಡುಗೆ ಮಾಡುತ್ತಿರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ಸನ್ನಿ ಫೋಟೋ ಹಾಕಿ ಅದಕ್ಕೆ, “ನಾನು ನನ್ನ ಮಕ್ಕಳಾದ ನೋಹಾ ಹಾಗೂ ಅಶ್‍ಹರ್ ಗಾಗಿ ಬನಾನಾ ವೀಟ್ ಪ್ಯಾನ್‍ಕೇಕ್ ಹಾಗೂ ಆ್ಯಪಲ್ ಸಾಸ್ ತಯಾರಿಸುತ್ತಿದ್ದೇನೆ. ತಾಯಿಯ ಜೀವನ ಎಂದು ಹ್ಯಾಶ್‍ಟ್ಯಾಗ್ ಬಳಸಿ ಇಲ್ಲಿನ ಸಿಬ್ಬಂದಿ ಮಕ್ಕಳಿಗಾಗಿ ಅಡುಗೆ ಮಾಡಲು ನನಗೆ ಅನುಮತಿ ನೀಡಿದ್ದಾರೆ” ಎಂದು ಪೋಸ್ಟ್ ಮಾಡಿದ್ದಾರೆ.

    ಕಳೆದ ವರ್ಷ ಬಾಡಿಗೆ ತಾಯಿ ಮೂಲಕ ಸನ್ನಿ ಲಿಯೋನ್ ಹಾಗೂ ಅವರ ಪತಿ ಡೇನಿಯಲ್ ವೆಬರ್ ಇಬ್ಬರು ಅವಳಿ ಗಂಡು ಮಕ್ಕಳನ್ನು ಪಡೆದಿದ್ದರು. ಅಲ್ಲದೆ ಸನ್ನಿ 2017ರಲ್ಲಿ ಮಹಾರಾಷ್ಟ್ರದ ಲಾತೂರಿನಲ್ಲಿ ನಿಶಾಳನ್ನು ದತ್ತು ಪಡೆದುಕೊಂಡಿದ್ದರು.

  • 13 ಸಾವಿರ ಅಡಿ ಎತ್ತರದಿಂದ ಜಿಗಿದು ಅವಳಿ ಮಕ್ಕಳಿಂದ ಹುಟ್ಟುಹಬ್ಬ ಆಚರಣೆ

    13 ಸಾವಿರ ಅಡಿ ಎತ್ತರದಿಂದ ಜಿಗಿದು ಅವಳಿ ಮಕ್ಕಳಿಂದ ಹುಟ್ಟುಹಬ್ಬ ಆಚರಣೆ

    ಪುಣೆ: 10 ವರ್ಷದ ಅವಳಿ ಸಹೋದರರು ತಮ್ಮ ತಂದೆ – ತಾಯಿ ಜೊತೆ ಸೇರಿ 13 ಸಾವಿರ ಅಡಿ ಎತ್ತರದಿಂದ ಜಿಗಿದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

    ಅವಳಿ ಮಕ್ಕಳಾದ ವೈಷ್ಣವ್ ಹಾಗೂ ವೃಷಭ್ ತನ್ನ ತಂದೆ ವೈಭವ್ ರಾಣೆ ಮತ್ತು ಶೀತಲ್ ಮಹಾಜನ್ ಅವರ ಜೊತೆ ಆಂಸ್ಟಡ್ರ್ಯಾಮ್‍ನಲ್ಲಿ 13,000 ಅಡಿ ಎತ್ತರದಿಂದ ಜಿಗಿದು ವಿಭಿನ್ನವಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

    ವೈಶ್ಣವ್ ಹಾಗೂ ವೈಶಭ್‍ಗೆ ತಮ್ಮ 10ನೇ ವರ್ಷದ ಹುಟ್ಟುಹಬ್ಬ ತನ್ನ ಪೋಷಕರ ಜೊತೆ ಸ್ಕೈಡೈವಿಂಗ್ ಮಾಡುವ ಮೂಲಕ ವಿಶೇಷವಾಗಿ ಆಚರಿಸಬೇಕು ಎಂದು ಕನಸು ಕಂಡಿದ್ದರು. ಹಾಗೆಯೇ ಈ ಕುಟುಂಬ ಏಪ್ರಿಲ್ 26ರಂದು ಆಂಸ್ಟಡ್ರ್ಯಾಮ್‍ಗೆ ಹೋಗಿ ಸೂಪರ್ ಕಾರವನ್ 206 ವಿಮಾನದಿಂದ ಸ್ಕೈಡೈವಿಂಗ್ ಮಾಡಿದೆ.

    ಶೀತಲ್ ಹಾಗೂ ವೈಭವ್ ವೃತ್ತಿಪರ ಸ್ಕೈಡೈವರ್ ಗಳಾಗಿದ್ದು, ಶೀತಲ್ ಒಟ್ಟು 740 ಸ್ಕೈಡೈವಿಂಗ್ ಮಾಡಿದರೆ, ವೈಭವ್ 58 ಸ್ಕೈಡೈವಿಂಗ್ ಮಾಡಿದ್ದಾರೆ. ಅತಿ ಚಿಕ್ಕವಯಸ್ಸಿನಲ್ಲಿ ಅವಳಿ ಮಕ್ಕಳು ಸ್ಕೈಡೈವಿಂಗ್ ಮಾಡಿರುವುದು ರಾಷ್ಟ್ರೀಯ ಮಟ್ಟದಲ್ಲಿ ದಾಖಲೆ ಆಗಬೇಕು ಎಂದು ಶೀತಲ್ ಅವರ ಕುಟುಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

    ಏಪ್ರಿಲ್ 26ರಂದು ನಮ್ಮ ಮಕ್ಕಳು ತಮ್ಮ 10ನೇ ವರ್ಷದ ಹುಟ್ಟುಹಬ್ಬವನ್ನು ಸ್ಕೈಡೈವಿಂಗ್ ಮಾಡುವ ಮೂಲಕ ಆಚರಿಸಿಕೊಳ್ಳಬೇಕು ಎಂದು ಇಚ್ಛಿಸಿದ್ದರು. ಅವರ ಆಸೆಯನ್ನು ಪೂರೈಸಲು ನಾವು ಕಳೆದ ವಾರ ಜೊತೆ ಆಂಸ್ಟಡ್ರ್ಯಾಮ್‍ಗೆ ಬಂದು ಸ್ಕೈಡೈವಿಂಗ್ ಮಾಡಿದ್ದೇವೆ ಎಂದು ತಂದೆ ವೈಭವ್ ತಿಳಿಸಿದ್ದಾರೆ.

    ಏಪ್ರಿಲ್ 18, 2004ರಂದು ಶೀತಲ್ ಯಾವುದೇ ತರಬೇತಿ ಪಡೆಯದೇ ಮೈನಸ್ 37 ಡಿಗ್ರಿ ಸೆಲ್ಸಿಯಸ್‍ನಲ್ಲಿ 2,700 ಅಡಿ ಎತ್ತರದಿಂದ ಜಿಗಿದು ಮೊದಲ ಸ್ಕೈಡೈವಿಂಗ್ ಮಾಡಿದ್ದರು. ಸದ್ಯ ಶೀತಲ್ 17 ರಾಷ್ಟ್ರೀಯ ದಾಖಲೆ ಹಾಗೂ 6 ವಿಶ್ವ ದಾಖಲೆಯನ್ನು ಮಾಡಿದ್ದಾರೆ.

  • ಮೊದಲ ಮಗುವಾದ 26 ದಿನಕ್ಕೆ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

    ಮೊದಲ ಮಗುವಾದ 26 ದಿನಕ್ಕೆ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

    ಢಾಕಾ: ಬಾಂಗ್ಲಾದೇಶದ ತಾಯಿಯೊಬ್ಬರು ಮೊದಲ ಮಗುವಿಗೆ ಜನ್ಮ ನೀಡಿ 26 ದಿನಕ್ಕೆ ಅವಳಿ ಮಕ್ಕಳಿಗೆ ಜನ್ಮ ನೀಡುವುದರ ಮೂಲಕ ವೈದ್ಯರಿಗೆ ಅಚ್ಚರಿ ನೀಡಿದ್ದಾರೆ.

    ಅರಿಫಾ ಸುಲ್ತಾನ(20) ಕಳೆದ ತಿಂಗಳು ನಾರ್ಮಲ್ ಡೆಲಿವರಿ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮೊದಲ ಮಗುವಿನ ಡೆಲಿವರಿ ಮಾಡುವ ವೇಳೆ ವೈದ್ಯರು ಮಹಿಳೆ ದೇಹದಲ್ಲಿ ಎರಡನೇ ಗರ್ಭಾಶಯ ಇರುವುದನ್ನು ಗಮನಿಸಿರಲಿಲ್ಲ.

    ಅರಿಫಾ ಅವರಿಗೂ ನಾನು ಅವಳಿ ಮಕ್ಕಳ ಗರ್ಭಿಣಿ ಎಂಬ ವಿಷಯ ಗೊತ್ತಿರಲಿಲ್ಲ. ಆಕೆ ಮೊದಲ ಮಗುವಿಗೆ ಜನ್ಮ ನೀಡಿ 26 ದಿನದ ಬಳಿಕ ಆಕೆಯ ಹೊಟ್ಟೆಯಲ್ಲಿದ್ದ ನೀರು ಒಡೆದಿದೆ. ಆಗ ಅರಿಫಾ ಆಸ್ಪತ್ರೆಗೆ ದಾಖಲಾದರು ಎಂದು ಸ್ತ್ರೀರೋಗ ತಜ್ಞೆ ಶೀಲಾ ಪೊದರ್ ತಿಳಿಸಿದ್ದಾರೆ.

    ಕಳೆದ ಶುಕ್ರವಾರ ಅರಿಫಾ ಆಸ್ಪತ್ರೆಗೆ ಬಂದ ತಕ್ಷಣ ವೈದ್ಯೆ ಶೀಲಾ ಸಿಸೇರಿಯನ್ ಮಾಡಿ ಅವಳಿ ಮಕ್ಕಳಾದ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವನ್ನು ಹೊರತೆಗೆದಿದ್ದಾರೆ. ಮಕ್ಕಳಿಬ್ಬರು ಆರೋಗ್ಯವಾಗಿದ್ದು, ಮಂಗಳವಾರ ತಾಯಿ- ಮಕ್ಕಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

    ನಾನು ನನ್ನ 30 ವರ್ಷದ ವೈದ್ಯಕೀಯದ ಅನುಭವದಲ್ಲಿ ಇಂತಹ ಕೇಸ್ ನೋಡಿಲ್ಲ ಎಂದು ಜೆಸ್ಸೋರ್ ಜಿಲ್ಲಾಸ್ಪತ್ರೆಯ ವೈದ್ಯ ದಿಲೀಪ್ ರಾಯ್ ಹೇಳಿದ್ದಾರೆ. ಅಲ್ಲದೆ ಅರಿಫಾಳ ಎರಡನೇ ಗರ್ಭಧಾರಣವನ್ನು ಪತ್ತೆ ಹಚ್ಚದ ಕಾರಣ ಖುಲ್ನಾ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯರ ವಿರುದ್ಧ ದಿಲೀಪ್ ಕ್ರಮಕೈಗೊಂಡಿದ್ದಾರೆ.

    ನನ್ನ ಪತಿ ಕಾರ್ಮಿಕನಾಗಿದ್ದು, ಪ್ರತಿ ತಿಂಗಳು 5 ಸಾವಿರ ರೂ. ದುಡಿಯುತ್ತಾರೆ. ನನಗೆ ಮೂವರು ಮಕ್ಕಳು ಹುಟ್ಟಿರುವುದು ಸಂತೋಷ. ಆದರೆ ಅವರನ್ನು ಹೇಗೆ ನೋಡಿಕೊಳ್ಳುವುದು ಎಂಬ ಚಿಂತೆ ಶುರುವಾಗಿದೆ ಎಂದು ಅರಿಫಾ ಹೇಳಿದ್ದಾರೆ. ಅಲ್ಲಾನ ಚಮತ್ಕಾರದಿಂದ ನನ್ನ ಮೂವರು ಮಕ್ಕಳು ಆರೋಗ್ಯವಾಗಿದ್ದಾರೆ. ನನ್ನ ಮಕ್ಕಳನ್ನು ಖುಷಿಯಾಗಿ ಇಡಲು ನಾನು ಪ್ರಯತ್ನಪಡುತ್ತೇನೆ ಎಂದು ಅರಿಫಾ ಪತಿ ಸುಮೋನ್ ಬಿಸ್ವಾಸ್ ತಿಳಿಸಿದ್ದಾರೆ.

  • ಅವಳಿ ಮಕ್ಕಳ ಜೊತೆ ಏರ್‌ಪೋರ್ಟ್‌ನಲ್ಲಿ ಸನ್ನಿ..!

    ಅವಳಿ ಮಕ್ಕಳ ಜೊತೆ ಏರ್‌ಪೋರ್ಟ್‌ನಲ್ಲಿ ಸನ್ನಿ..!

    ಮುಂಬೈ: ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ತನ್ನ ಅವಳಿ ಮಕ್ಕಳ ಜೊತೆ ಏರ್‌ಪೋರ್ಟ್‌ನಲ್ಲಿ ಕಾಣಿಸಿದ್ದು, ಅವರ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಸನ್ನಿ ತನ್ನ ಅವಳಿ ಮಕ್ಕಳಾದ ಆಶೇರ್ ಸಿಂಗ್ ವೆಬ್ಬರ್ ಹಾಗೂ ನೋಹಾ ಸಿಂಗ್ ವೆಬ್ಬರ್ ಜೊತೆ ಏರ್‌ಪೋರ್ಟ್‌ ಗೆ ಆಗಮಿಸಿದ್ದಾರೆ. ಇಬ್ಬರು ಮಕ್ಕಳಲ್ಲಿ ಒಂದು ಮಗುವನ್ನು ಸನ್ನಿ ಎತ್ತಿಕೊಂಡಿದ್ದರೆ, ಮತ್ತೊಂದು ಮಗುವನ್ನು ನಾನಿ ಎತ್ತಿಕೊಂಡಿದ್ದರು.

    ಸನ್ನಿ ಟಿಲ್ ಬ್ಲೂ ಬಣ್ಣದ ಟ್ರ್ಯಾಕ್‍ಸ್ಯೂಟ್ ಧರಿಸಿ ಅದಕ್ಕೆ ಗೋಲ್ಡ್ ಸ್ನಿಕರ್ಸ್ ಧರಿಸಿದ್ದಾರೆ. ಕಳೆದ ವರ್ಷ ಸರೊಗಸಿ ಮೂಲಕ ಸನ್ನಿ ಲಿಯೋನ್ ಹಾಗೂ ಅವರ ಪತಿ ಡೇನಿಯಲ್ ವೆಬರ್ ಇಬ್ಬರು ಅವಳಿ ಗಂಡು ಮಕ್ಕಳನ್ನು ಪಡೆದಿದ್ದರು. ಅಲ್ಲದೇ ಸನ್ನಿ 2017ರಲ್ಲಿ ಮಹಾರಾಷ್ಟ್ರದ ಲಾತೂರಿನಲ್ಲಿ ನಿಶಾ ಎಂಬ ಮಗುವನ್ನು ದತ್ತು ಪಡೆದುಕೊಂಡಿದ್ದರು.

    ಸನ್ನಿ ಲಿಯೋನ್ ತನ್ನ ಮೂವರು ಮಕ್ಕಳು ಹಾಗೂ ಪತಿ ಡೇನಿಯಲ್ ಜೊತೆ ಇರುವ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅವರು ಪೋಸ್ಟ್ ಮಾಡಿದ ಎಲ್ಲ ಫೋಟೋ, ವಿಡಿಯೋಗಳು ವೈರಲ್ ಆಗುತ್ತದೆ.

    ಸನ್ನಿ ಲಿಯೋನ್ ಈಗ ತಮಿಳಿನ ‘ವೀರಮಹಾದೇವಿ’ ಎಂಬ ಐತಿಹಾಸಿಕ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ವಿ.ಸಿ ವದಿವುದ್ದಯ್ಯನ್ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾ ತಮಿಳು, ತೆಲುಗು ಹಾಗೂ ಮಲೆಯಾಳಂನಲ್ಲಿ ಬಿಡುಗಡೆ ಆಗಲಿದೆ.

     

    View this post on Instagram

     

    Beautiful Mommy with equally handsome twins #sunnyleone

    A post shared by Viral Bhayani (@viralbhayani) on

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv