Tag: ಅವಲಕ್ಕಿ ಸಿಹಿ ಪೊಂಗಲ್

  • ಸಂಕ್ರಾಂತಿಗೆ ನಿಮ್ಮ ಮನೆಯಲ್ಲಿರಲಿ ಅವಲಕ್ಕಿ ಸಿಹಿ ಪೊಂಗಲ್

    ಸಂಕ್ರಾಂತಿಗೆ ನಿಮ್ಮ ಮನೆಯಲ್ಲಿರಲಿ ಅವಲಕ್ಕಿ ಸಿಹಿ ಪೊಂಗಲ್

    ಸಂಕ್ರಾಂತಿಗೆ ಮನೆಯಲ್ಲಿ ಈಗಾಗಲೇ ಸಿದ್ಧತೆ ನಡೆದಿರುತ್ತದೆ. ಕಳೆದ ಒಂದು ವಾರದಿಂದ ಮಾರುಕಟ್ಟೆಯಲ್ಲಿ ಸಂಕ್ರಾಂತಿ ಎಳ್ಳು-ಬೆಲ್ಲ ಬಣ್ಣ ಬಣ್ಣದ ಪ್ಯಾಕೆಟ್ ಗಳಲ್ಲಿ ಮಾರಾಟಕ್ಕೆ ಇಟ್ಟಿರೋದನ್ನು ಕಾಣಬಹುದು. ಸಕ್ಕರೆ ಅಚ್ಚು, ಎಳ್ಳು-ಬೆಲ್ಲ ಮಿಶ್ರಣದ ಪ್ಯಾಕೆಟ್ ಹೀಗೆ ಸಿಹಿ ಪದಾರ್ಥಗಳು ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಹಬ್ಬ ಅಂದ್ರೆ ಮನೆಯಲ್ಲಿ ಶುಚಿ-ರುಚಿಯಾಗಿ ತಯಾರಿಸಿದ ಅಡುಗೆ ಇರಲೇ ಬೇಕು. ಸಂಕ್ರಾಂತಿ ಬಂದ್ರೆ ಸಾಕು ಎಲ್ಲರ ಮನೆಯಲ್ಲೂ ಪೊಂಗಲ್ ಪರಿಮಳ ಹರಡಿರುತ್ತದೆ. ಸಾಮಾನ್ಯವಾಗಿ ಅಕ್ಕಿ ಬಳಸಿಯೇ ಪೊಂಗಲ್ ಮಾಡುತ್ತಾರೆ. ಆದ್ರೆ ಈ ಬಾರಿ ಅವಲಕ್ಕಿ ಸಿಹಿ ಪೊಂಗಲ್ ತಯಾರಿಸಿ ಹಬ್ಬವನ್ನು ವಿಶೇಷವಾಗಿ ಆಚರಿಸಿ.

    ಬೇಕಾಗುವ ಸಾಮಾಗ್ರಿಗಳು
    * ಹೆಸರುಬೇಳೆ – ಅರ್ಧ ಕಪ್
    * ಗಟ್ಟಿ ಅವಲಕ್ಕಿ – 1 ಕಪ್
    * ಬೆಲ್ಲ – 1 ಅಚ್ಚು
    * ತುಪ್ಪ – ಅರ್ಧ ಕಪ್
    * ದ್ರಾಕ್ಷಿ, ಗೋಡಂಬಿ – ಅರ್ಧ ಬಟ್ಟಲು
    * ಏಲಕ್ಕಿ ಪುಡಿ – ಸ್ವಲ್ಪ
    * ಪಚ್ಚಕರ್ಪೂರ – ಚಿಟಿಕೆ

    ಮಾಡುವ ವಿಧಾನ
    * ಒಂದು ಬೌಲ್‍ಗೆ ಬೆಲ್ಲವನ್ನು ಕುಟ್ಟಿ ಹಾಕಿ ಸ್ವಲ್ಪ ನೀರು ಹಾಕಿಡಿ.
    * ಮೊದಲಿಗೆ ಒಂದು ಪ್ಯಾನ್‍ಗೆ ಹೆಸರುಬೇಳೆಯನ್ನು ಹಾಕಿ ತಿಳಿಕಂದು ಬಣ್ಣಕ್ಕೆ ತಿರುಗುವವರೆಗೆ ಹುರಿದು ಪಕ್ಕಕ್ಕಿಡಿ.
    * ಒಂದು ಪಾತ್ರೆಯನ್ನು ಸ್ಟೌವ್ ಮೇಲಿಟ್ಟು ನೀರು ಹಾಕಿ ಕುದಿಸಿ.
    * ನೀರು ಒಂದು ಕುದಿ ಬಂದ ಮೇಲೆ ಹುರಿದ ಹೆಸರು ಬೇಳೆಯನ್ನು ಸೇರಿಸಿ.
    * ಹೆಸರುಬೇಳೆ ಕುದಿಯುತ್ತಿರುವಾಗ ನೆನೆ ಹಾಕಿದ್ದ ಬೆಲ್ಲವನ್ನು ಸೋಸಿ ಹಾಕಿ.
    * ಈಗ ತುಪ್ಪದಲ್ಲಿ ದ್ರಾಕ್ಷಿ, ಗೋಡಂಬಿಯನ್ನು ಹುರಿದುಕೊಳ್ಳಿ.
    * ಅವಲಕ್ಕಿಯನ್ನು ನೀರಿನಲ್ಲಿ 2-5 ನಿಮಿಷ ನೆನೆಸಿ ಸೋಸಿಕೊಳ್ಳಿ. ಗಟ್ಟಿಯಾಗಿ ನೀರಿಲ್ಲದಂತೆ ಹಿಂಡಿಕೊಳ್ಳಿ.


    * ಈಗ ಕುದಿಯುತ್ತಿರುವ ಹೆಸರುಬೇಳೆ, ಬೆಲ್ಲದ ಪಾತ್ರೆಗೆ ಅವಲಕ್ಕಿಯನ್ನು ಸೇರಿಸಿ.
    * ಗಂಟು ಕಟ್ಟದಂತೆ ಒಮ್ಮೆಲೆ ತಿರುಗಿಸಿ.
    * ಈಗ ಪೊಂಗಲ್‍ಗೆ ಏಲಕ್ಕಿ ಪುಡಿ, ಚಿಟಿಕೆ ಪಚ್ಚಕರ್ಪೂರವನ್ನು ಹಾಕಿ ತಿರುಗಿಸಿ. ಇದರಿಂದ ಪೊಂಗಲ್ ಘಮಘಮ ಅನ್ನುತ್ತಿರುತ್ತದೆ.
    * ಗಟ್ಟಿಯಾಗುತ್ತಾ ಬಂದ ಪೊಂಗಲ್‍ಗೆ ಹುರಿದ ದ್ರಾಕ್ಷಿ, ಗೋಡಂಬಿ, 1 ಸ್ಪೂನ್ ತುಪ್ಪವನ್ನು ಸೇರಿಸಿ ಸ್ಟೌವ್ ಆರಿಸಿ.
    * ಕೆಲಕಾಲ ಪಾತ್ರೆಗೆ ತಟ್ಟಿ ಮುಚ್ಚಿಡಿ. ಬಳಿಕ ನಿಮ್ಮ ಸಿಹಿ ಪೊಂಗಲ್ ರೆಡಿ.

    ಇದನ್ನೂ ಓದಿ : ಸಂಕ್ರಾಂತಿಗೆ ಚಟಾಪಟ್ ಅಂತಾ ಮಾಡಿ ಸಕ್ಕರೆ ಅಚ್ಚು