Tag: ಅಲಂಕಾರಿಕ ವಸ್ತು

  • ಮನೆಯಲ್ಲೇ ಕುಳಿತು ಬೇಜಾರಾಗಿದ್ದ ವಿದ್ಯಾರ್ಥಿನಿಯಿಂದ ಹೊಸ ಐಡಿಯಾ- ನೆಟ್ಟಿಗರು ಫಿದಾ

    ಮನೆಯಲ್ಲೇ ಕುಳಿತು ಬೇಜಾರಾಗಿದ್ದ ವಿದ್ಯಾರ್ಥಿನಿಯಿಂದ ಹೊಸ ಐಡಿಯಾ- ನೆಟ್ಟಿಗರು ಫಿದಾ

    ಚೆನ್ನೈ: ಕೊರೊನಾ ವೈರಸ್ ಎಂಬ ಮಹಾಮಾರಿ ಭಾರತಕ್ಕೆ ಲಗ್ಗೆ ಇಡುತ್ತಿದ್ದಂತೆಯೇ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿತ್ತು. ಇದರಿಂದ ಜನ-ಜೀವನ ಅಸ್ತವ್ಯಸ್ತ ಆಗಿದ್ದಂತು ಸುಳ್ಳಲ್ಲ. ಈ ಮಧ್ಯೆ ಲಾಕ್‍ಡೌನ್ ಅನ್ನು ಕೆಲವರು ಚೆನ್ನಾಗಿಯೇ ಬಳಸಿಕೊಂಡೊದ್ದಾರೆ. ಇದಕ್ಕೆ ನೈಜ ಉದಾಹರಣೆ ಮಧುರೈನ ಕಾಲೇಜು ವಿದ್ಯಾರ್ಥಿನಿ.

    ಹೌದು. ಜೆನ್ನಿಫರ್ ಎಂಬ ವಿದ್ಯಾರ್ಥಿನಿ ಲಾಕ್ ಡೌನ್ ಅನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ. ತ್ಯಾಜ್ಯ ಹಾಗೂ ಮರುಬಳಕೆಯ ವಸ್ತುಗಳಿಂದ ಅಲಂಕಾರಿಕ ವಸ್ತುಗಳನ್ನು ತಯಾರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸದ್ಯ ಈಕೆ ಯುವ ಉದ್ಯಮಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಜನಮನ್ನಣೆ ಗಳಿಸುತ್ತಿದ್ದಾರೆ.

    ಈ ಸಂಬಂಧ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಜೆನ್ನಿಫರ್, ಲಾಕ್ ಡೌನ್ ಹೇರಿದ್ದರಿಂದ ಮನೆಯಲ್ಲಿದ್ದು ತುಂಬಾ ಬೇಸರ ಗೊಂಡಿದ್ದೆ. ಈ ವೇಳೆ ನನಗೆ ಕಸದಿಂದ ರಸ ಅಂದರೆ ಬೇಡವಾದ ವಸ್ತುಗಳನ್ನು ಮರುಬಳಕೆ ಮಾಡುವ ಕಲ್ಪನೆ ಸಿಕ್ಕಿತ್ತು. ಹೀಗಾಗಿ ಬಿಸಾಕಿದ್ದ ಬಾಟ್ಲಿಗಳನ್ನು ಸಂಗ್ರಹಿಸಲು ಆರಂಭಿಸಿದ್ದೆ. ನಂತರ ಅವುಗಳನ್ನು ಟಿಶ್ಯೂ ಪೇಪರ್ಸ್, ಪಿಸ್ತಾ ಚಿಪ್ಪುಗಳು ಮುಂತಾದ ವಸ್ತುಗಳನ್ನು ಬಳಸಿಕೊಂಡು ಅಲಂಕಾರಿಕಾ ವಸ್ತುಗಳಾಗಿ ಪರಿವರ್ತಿಸಿದೆ. ನನ್ನ ಸೃಜನಶೀಲತೆಗಾಗಿ 2020 ಈ ವರ್ಷವನ್ನು ನಾನು ನೆನಪಿನಲ್ಲಿಟ್ಟುಕೊಳ್ಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.

    ಒಟ್ಟಿನಲ್ಲಿ ಲಾಕ್ ಡೌನ್ ಹೇರಿದ್ದರಿಂದ ದುಡಿಮೆ, ಸಂಪಾನೆ ಇಲ್ಲದೆ ಜನ ಕಂಗಾಲಾಗಿದ್ದರು. ಈ ವೇಳೆ ಕೆಲವರು ಹಣ ಸಂಪಾದನೆ ಮಾಡಲು ಬೇರೆ ದಾರಿಯೇ ಇಲ್ಲ ಎಂದು ಯೋಚನೆ ಮಾಡುತ್ತಲೇ ಕೊರಗಿ ಹೋಗಿದ್ದರು. ಈ ಮಧ್ಯೆ ತನ್ನದೇ ಕಲ್ಪನೆಯ ಮೂಲಕ ಲಾಕ್ ಡೌನ್ ಅನ್ನು ಜೆನ್ನಿಫರ್ ಸದುಪಯೋಗಪಡಿಸಿಕೊಳ್ಳುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.