Tag: ಅರ್ಶ್‌ದೀಪ್‌

  • ಆಫ್ರಿಕಾಗೆ ಆಘಾತ ನೀಡಿದ ಅರ್ಶ್‌ದೀಪ್, ಚಹಾರ್, ಶೈನ್‌ ಆದ ಸೂರ್ಯ, ರಾಹುಲ್- ಭಾರತಕ್ಕೆ 8 ವಿಕೆಟ್‌ಗಳ ಜಯ

    ಆಫ್ರಿಕಾಗೆ ಆಘಾತ ನೀಡಿದ ಅರ್ಶ್‌ದೀಪ್, ಚಹಾರ್, ಶೈನ್‌ ಆದ ಸೂರ್ಯ, ರಾಹುಲ್- ಭಾರತಕ್ಕೆ 8 ವಿಕೆಟ್‌ಗಳ ಜಯ

    ತಿರುವನಂತಪುರಂ: ಅರ್ಶ್‌ದೀಪ್‌ ಸಿಂಗ್‌ (Arshdeep Singh), ದೀಪಕ್‌ ಚಹಾರ್‌ (Deepak Chahar) ಮಾರಕ ಬೌಲಿಂಗ್‌ ದಾಳಿ ಹಾಗೂ ಸೂರ್ಯಕುಮಾರ್‌ ಯಾದವ್‌ (Suryakumar Yadav), ಕೆ.ಎಲ್‌.ರಾಹುಲ್‌ (KL Rahul) ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯದಲ್ಲೇ  ಭಾರತ ಭರ್ಜರಿ ಜಯ ಸಾಧಿಸಿದೆ.

    ತಿರುವನಂತಪುರಂನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ (South Africa) ವಿರುದ್ಧ ನಡೆದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾದ (Team India) ಬೌಲಿಂಗ್ ಪಡೆ ಅಮೋಘ ಪ್ರದರ್ಶನ ನೀಡುವ ಮೂಲಕ ಹರಿಣ ಪಡೆ ಆಘಾತ ಅನುಭವಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 108 ಅಲ್ಪಮೊತ್ತದ ರನ್‌ಗಳಿಸಿತು. ಈ ಗುರಿ ಬೆನ್ನತ್ತಿದ ಟೀಂ ಇಂಡಿಯಾ 16.4 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 110 ರನ್‌ ಸಿಡಿಸುವ ಮೂಲಕ ಗೆದ್ದು ಬೀಗಿತು.

    ನಿಧಾನಗತಿಯಲ್ಲೇ ಬ್ಯಾಟಿಂಗ್‌ ಆರಂಭಿಸಿದ ಟೀಂ ಇಂಡಿಯಾಕ್ಕೂ ಆರಂಭದಲ್ಲಿ ಆಘಾತ ಎದುರಾಗಿತ್ತು. ಪವರ್‌ಪ್ಲೇ ಮುಗಿಯುವಷ್ಟರಲ್ಲೇ ಪ್ರಮುಖ ಬ್ಯಾಟರ್‌ಗಳನ್ನು ಟೀಂ ಇಂಡಿಯಾ ಕಳೆದುಕೊಂಡಿತ್ತು. ಆಸ್ಟ್ರೇಲಿಯಾ ವಿರುದ್ಧ ಸ್ಫೋಟಕ ಬ್ಯಾಟಿಂಗ್‌ ನಡೆಸಿದ್ದ ನಾಯಕ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಔಟಾದರು. 2 ಎಸೆತ ಎದುರಿಸಿದ ರೋಹಿತ್‌ ಶರ್ಮಾ (Rohit Sharma) ಡಕೌಟ್‌ ಆದರೆ 9 ಎಸೆತ ಎದುರಿಸಿದ ರನ್‌ ಮಿಷಿನ್‌ ಕೊಹ್ಲಿ 3 ರನ್‌ಗಳಿಗೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಸೇರಿದರು.

    ಈ ನಡುವೆ ಮೂರನೇ ಕ್ರಮಾಂಕದಲ್ಲಿ ಬಂದ ಸೂರ್ಯಕುಮಾರ್‌ ಯಾದವ್‌ (Suryakumar Yadav) ಹಾಗೂ ಮತ್ತೊಬ್ಬ ಆರಂಭಿಕ ಕೆಎಲ್‌ ರಾಹುಲ್‌ (KL Rahul) ಜವಾಬ್ದಾರಿಯುತ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. ಭರ್ಜರಿ ಸಿಕ್ಸ್‌ ಫೋರ್‌ಗಳ ಮೂಲಕ ರನ್‌ ಪೇರಿಸುತ್ತಾ ಟೀಂ ಇಂಡಿಯಾವನ್ನು ಗೆಲುವಿನ ಹಾದಿಗೆ ಕೊಂಡೊಯ್ದರು.

    ಸ್ಫೋಟಕ ಬ್ಯಾಟಿಂಗ್‌ ನಡೆಸಿದ ಸೂರ್ಯಕುಮಾರ್‌ ಯಾದವ್‌ 33 ಎಸೆತಗಳಲ್ಲಿ 3 ಸಿಕ್ಸರ್‌, 5 ಬೌಂಡರಿಗಳ ಮೂಲಕ ಸ್ಫೋಟಕ 50 ರನ್‌ ಸಿಡಿಸಿ ಮಿಂಚಿದರೆ, ಉಪನಾಯಕ ಜವಾಬ್ದಾರಿಯುತ ಆಟವಾಡಿದ ಕೆಎಲ್‌ ರಾಹುಲ್‌ ಸಹ 56 ಎಸೆತಗಳಲ್ಲಿ 51 ರನ್‌ (4 ಸಿಕ್ಸರ್‌, 2 ಬೌಂಡರಿ) ಸಿಡಿಸುವ ಮೂಲಕ ಮಿಂಚಿದರು.

    ಹರ್ಷ ತಂದ ಅರ್ಶ್‌ದೀಪ್:
    ಏಷ್ಯಾಕಪ್‌ನ ಇಂಡೋ ಪಾಕ್‌ ಕದನದಲ್ಲಿ ಭಾರೀ ಟೀಕೆಗೆ ಗುರಿಯಾಗಿದ್ದ ಅರ್ಶ್‌ದೀಪ್ ಸಿಂಗ್‌ ದಕ್ಷಿಣ ಆಫ್ರಿಕಾದ ವಿರುದ್ಧದ ಮೊದಲ ಪಂದ್ಯದಲ್ಲೇ 3 ವಿಕೆಟ್‌ಗಳನ್ನು ಕಬಳಿಸಿ ಗಮನ ಸೆಳೆದರು. ಇನ್ನುಳಿದಂತೆ 4 ಓವರ್‌ಗಳಲ್ಲಿ 24 ರನ್‌ ನೀಡಿದ ದೀಪಕ್‌ ಚಹಾರ್‌ 2 ವಿಕೆಟ್‌, ಹರ್ಷಕ್‌ ಪಟೇಲ್‌ 2 ವಿಕೆಟ್‌ ಹಾಗೂ ಅಕ್ಷರ್‌ ಪಟೇಲ್‌ 1 ವಿಕೆಟ್‌ ಪಡೆದು ಟೀಂ ಇಂಡಿಯಾ ಗೆಲುವಿಗೆ ಕಾರಣರಾದರು.

    ದಕ್ಷಿಣ ಆಫ್ರಿಕಾಗೆ ಆರಂಭಿಕ ಆಘಾತ:
    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಫ್ರಿಕಾ ತಂಡ ಮೊದಲ 2.3 ಓವರ್‌ಗಳಲ್ಲಿಯೇ ಅರ್ಧದಷ್ಟು ಆಟಗಾರರನ್ನು ಕಳೆದುಕೊಳ್ಳುವ ಮೂಲಕ ದೊಡ್ಡ ಆಘಾತಕ್ಕೆ ಒಳಗಾಯಿತು. ಟೀಂ ಇಂಡಿಯಾ ಬೌಲರ್‌ಗಳಾದ ಅರ್ಶ್‌ದೀಪ್ ಸಿಂಗ್‌ ಹಾಗೂ ದೀಪಕ್ ಚಾಹರ್ ಆರಂಭದಲ್ಲಿಯೇ ಪ್ರಮುಖ ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಅಟ್ಟುವಲ್ಲಿ ಯಶಸ್ವಿಯಾದರು. ಇದರಲ್ಲಿ ಎರಡು ವಿಕೆಟ್‌ಗಳನ್ನು ದೀಪಕ್ ಚಾಹರ್ ಪಡೆದುಕೊಂಡಿದ್ದರೆ ಮೂರು ವಿಕೆಟ್‌ಗಳು ಅರ್ಶ್‌ದೀಪ್ ಸಿಂಗ್ ಪಾಲಾದವು.

    ಕಳೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದ ಅರ್ಶ್‌ದೀಪ್ ಸಿಂಗ್ ಈ ಪಂದ್ಯದಲ್ಲಿ ತಂಡಕ್ಕೆ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿದ್ದಾರೆ. ತಮ್ಮ ಮೊದಲ ಓವರ್‌ನಲ್ಲಿಯೇ ಅತ್ಯಂತ ಅಪಾಯಕಾರಿಯಾಗಿ ಕಾಣಿಸಿದ ಅರ್ಶ್‌ದೀಪ್ ಸಿಂಗ್ ವಿಕೆಟ್‌ಗಳ ಮೇಲೆ ವಿಕೆಟ್ ಪಡೆದುಕೊಂಡರು. ಈ ಒಂದು ಓವರ್‌ನಲ್ಲಿಯೇ ಅರ್ಶ್‌ದೀಪ್ ಸಿಂಗ್ ಮೂರು ವಿಕೆಟ್ ಪಡೆದು ಗಮನ ಸೆಳೆದರು.

    ಮೊದಲಿಗೆ 1 ರನ್‌ಗಳಿಸಿದ್ದ ಕ್ವಿಂಟನ್ ಡಿಕಾಕ್ (Quinton de Kock) ಅವರನ್ನು ಬೌಲ್ಡ್ ಮಾಡಿದ ಅರ್ಷ್‌ದೀಪ್‌ ಸಿಂಗ್ ನಂತರ ರಿಲೀ ರೊಸ್ಸೋ ಅವರನ್ನು ಪೆವಿಲಿಯನ್‌ಗೆ ಅಟ್ಟಿದರು. ತಮ್ಮ ಮುಂದಿನ ಎಸೆತದಲ್ಲಿಯೇ ಡೇವಿಡ್ ಮಿಲ್ಲರ್‌ ಅನ್ನು ಡಕೌಟ್‌ ಮಾಡಿ ಪೆವಿಲಿಯನ್‌ಗೆ ದಾರಿ ತೋರಿಸಿದರು. ಈ ಮೂಲಕ ದಕ್ಷಿಣ ಆಫ್ರಿಕಾ ತಂಡಕ್ಕೆ ಆಘಾತ ನೀಡಿದರು.

    ಆರಂಭಿಕ ಆಘಾತ ಅನುಭವಿಸಿ ಕನಿಷ್ಠ ಮೊತ್ತಕ್ಕೆ ಆಲೌಟ್ ಆಗಬೇಕಿದ್ದ ದಕ್ಷಿಣ ಆಫ್ರಿಕಾ ಪರವಾಗಿ ಮಾರ್ಕ್ರಮ್, ಪಾರ್ನೆಲ್ ಹಾಗೂ ಅಂತಿಮ ಹಂತದಲ್ಲಿ ಕೇಶವ್ ಮಹಾರಾಜ್ ಜವಾಬ್ದಾರಿಯುತ ಪ್ರದರ್ಶನ ನೀಡಿದರು. ಹೀಗಾಗಿ ದಕ್ಷಿಣ ಆಫ್ರಿಕಾ ತಂಡ ನಿಗದಿತ 20 ಓವರ್‌ಗಳ ಆಟವನ್ನು ಪೂರ್ಣಗೊಳಿಸಿದ್ದು 106 ರನ್‌ಗಳನ್ನು ಗಳಿಸಲು ಶಕ್ತವಾಯಿತು. ಕೇಶವ್ ಮಹಾರಾಜ್ 35 ಎಸೆತಗಳಲ್ಲಿ 41 ರನ್‌ (2 ಸಿಕ್ಸರ್‌, 5 ಬೌಂಡರಿ) ಸಿಡಿಸಿದರೆ, ಜೊತೆಯಲ್ಲಿ ಸಾಥ್‌ ನೀಡಿದ ಪಾರ್ನೆಲ್‌ 37 ಎಸೆತಗಳಲ್ಲಿ 1 ಸಿಕ್ಸರ್‌, 1 ಬೌಂಡರಿಯೊಂದಿಗೆ 24 ರನ್‌ಗಳನ್ನಷ್ಟೇ ಗಳಿಸಿದರು. ಮಾಕ್ರಮ್‌ 25 ರನ್‌ಗಳಿಸಿದರು. ಉಳಿದ ಯಾವೊಬ್ಬ ಆಟಗಾರರು ಸ್ಥಿರವಾಗಿ ನಿಲ್ಲದ ಕಾರಣ ದಕ್ಷಿಣ ಆಫ್ರಿಕಾ ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾ ಎದುರು ಸೋಲು ಒಪ್ಪಿಕೊಳ್ಳಬೇಕಾಯಿತು.

    ದಕ್ಷಿಣ ಆಫ್ರಿಕಾ ವಿರುದ್ಧ ಕಗಿಸೋ ರಬಾಡ ಹಾಗೂ ಅನ್ರಿಚ್ ನಾರ್ಟ್ಜೆ ತಲಾ ಒಂದೊಂದು ವಿಕೆಟ್‌ ಪಡೆದರು.

    Live Tv
    [brid partner=56869869 player=32851 video=960834 autoplay=true]

  • ಅರ್ಶ್‌ದೀಪ್‌ ಪೇಜ್‌ ಎಡಿಟ್‌ – ವಿಕಿಪೀಡಿಯಾಗೆ ಸಮನ್ಸ್‌ ಜಾರಿ ಮಾಡಿದ ಕೇಂದ್ರ

    ಅರ್ಶ್‌ದೀಪ್‌ ಪೇಜ್‌ ಎಡಿಟ್‌ – ವಿಕಿಪೀಡಿಯಾಗೆ ಸಮನ್ಸ್‌ ಜಾರಿ ಮಾಡಿದ ಕೇಂದ್ರ

    ನವದೆಹಲಿ: ಟೀಂ ಇಂಡಿಯಾ ಸದಸ್ಯ ಅರ್ಶ್‌ದೀಪ್‌ ಸಿಂಗ್‌ ಅವರ ಪೇಜ್‌ ಅನ್ನು ಎಡಿಟ್‌ ಮಾಡಿದ್ದಕ್ಕೆ ಭಾರತದಲ್ಲಿರುವ ವಿಕಿಪೀಡಿಯಾ ಪ್ರತಿನಿಧಿಗೆ ಕೇಂದ್ರ ಸರ್ಕಾರ ಸಮನ್ಸ್‌ ಜಾರಿ ಮಾಡಿದೆ.

    ಅರ್ಶ್‌ದೀಪ್‌ ಅವರ ಪುಟದಲ್ಲಿ ಖಾಲಿಸ್ತಾನ ಆಟಗಾರ ಎಂದು ಎಡಿಟ್‌ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಚರ್ಚೆ ಆಗುತ್ತಿದ್ದಂತೆ ಮಾಹಿತಿ ಮತ್ತು ತಂತ್ರಜ್ಞಾನ ಖಾತೆಯ ಸಚಿವಾಲಯ ವಿಕಿಪೀಡಿಯಾದ ಭಾರತದ ಪ್ರತಿನಿಧಿಗೆ ಸಮನ್ಸ್‌ ಜಾರಿ ಮಾಡಿದೆ.

    ಭಾನುವಾರ ನಡೆದ ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅರ್ಶ್‌ದೀಪ್‌ ಸುಲಭ ಕ್ಯಾಚನ್ನು ಕೈ ಚೆಲ್ಲಿದ್ದರು. 18ನೇ ಓವರ್‌ನಲ್ಲಿ ರವಿ ಬಿಷ್ಣೋಯ್ ಅವರ ಬೌಲಿಂಗ್‌ನಲ್ಲಿ ಆಸಿಫ್ ಅಲಿ ಸಿಕ್ಸ್‌ ಹೊಡೆಯಲು ಮುಂದಾಗಿದ್ದರು. ಆದರೆ ಮೇಲಕ್ಕೆ ಚಿಮ್ಮಿದ ಬಾಲನ್ನು ಹಿಡಿಯಲು ಅರ್ಶ್‌ದೀಪ್‌ ವಿಫಲರಾದರು. ಸುಲಭವಾಗಿ ಕ್ಯಾಚ್‌ ಕೈ ಚೆಲ್ಲಿದ್ದಕ್ಕೆ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಮಾಡಲಾಗುತ್ತಿತ್ತು. ಇದನ್ನೂ ಓದಿ: ತಪ್ಪುಗಳು ಆಗಬಹುದು, ಅದರಿಂದ ಕಲಿಯುವುದು ಬಹಳ ಮುಖ್ಯ – ಅರ್ಶ್‌ದೀಪ್‌ ಬೆಂಬಲಿಸಿದ ಕಿಂಗ್ ಕೊಹ್ಲಿ

    ಈ ಟ್ರೋಲ್‌ ಅನ್ನೇ ಬಳಸಿಕೊಂಡ ಪಾಕಿಸ್ತಾನಿ ಪೇಜ್‌ಗಳು, ಅರ್ಶ್‌ದೀಪ್‌ ಸಿಂಗ್‌ ಖಾಲಿಸ್ತಾನಿ ಬೆಂಬಲಿಗ. ಭಾರತವನ್ನು ಸೋಲಿಸಲೆಂದೇ ಕ್ಯಾಚ್‌ ಬಿಟ್ಟಿದ್ದಾನೆ ಎಂಬರ್ಥದಲ್ಲಿ ಸುಳ್ಳು ಪೋಸ್ಟ್‌ಗಳನ್ನು ಮಾಡುತ್ತಿದ್ದಾರೆ.

    ಭಾರತ ಬೇರೆ ದೇಶಗಳ ಜೊತೆ ಕ್ರಿಕೆಟ್‌ ಪಂದ್ಯಕ್ಕೆ ಅಷ್ಟೊಂದು ಮಹತ್ವ ಕೊಡದೇ ಇದ್ದರೂ  ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಅಭಿಮಾನಿಗಳು ಭಾರೀ ಮಹತ್ವ ಕೊಡುತ್ತಾರೆ. ಭಾವನಾತ್ಮಕವಾಗಿ ಪಂದ್ಯವನ್ನು ಸ್ವೀಕರಿಸುವ ಕಾರಣ ತಂಡ ಸೋತರೂ ಆಟಗಾರರ ಮೇಲೆ ತಮ್ಮ ಸಿಟ್ಟನ್ನು ಹೊರ ಹಾಕುತ್ತಿರುತ್ತಾರೆ. ಆರ್ಶ್‌ದೀಪ್‌ ವಿರುದ್ಧ ಸಿಟ್ಟು ಹೊರ ಹಾಕುತ್ತಿರುವಾಗಲೇ ಖಾಲಿಸ್ತಾನ ಬೆಂಬಲಿಗ ಎಂಬ ಪೋಸ್ಟ್‌ ವಿಕೀಪಿಡಿಯಾದಲ್ಲಿ ಪ್ರಕಟವಾಗಿದ್ದು ಬೆಂಕಿಗೆ ತುಪ್ಪ ಸುರಿದಂತಾಗಿತ್ತು. ಎಡಿಟ್‌ ಮಾಡಿದ ವಿಚಾರ ತಿಳಿಯತ್ತಿದ್ದಂತೆ, ಪಾಕಿಸ್ತಾನ ಭಾರತದ ಕ್ರಿಕೆಟ್‌ ಅಭಿಮಾನಿಗಳಲ್ಲಿ ಒಡಕು ಮೂಡಿಸುವ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಬಲಿಯಾಗಬೇಡಿ ಎಂದು ಭಾರತೀಯ ಕ್ರಿಕೆಟ್‌ ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]