Tag: ಅರ್ಮುಗಂಸ್ವಾಮಿ ಆಯೋಗ

  • ಜಯಾ ಸೀಕ್ರೆಟ್: 75 ದಿನವೂ ಅಪೋಲೋ ಆಸ್ಪತ್ರೆಯ ಸಿಸಿಟಿವಿ ಆಫ್ ಆಗಿತ್ತು!

    ಜಯಾ ಸೀಕ್ರೆಟ್: 75 ದಿನವೂ ಅಪೋಲೋ ಆಸ್ಪತ್ರೆಯ ಸಿಸಿಟಿವಿ ಆಫ್ ಆಗಿತ್ತು!

    ಚೆನ್ನೈ: ತಮಿಳುನಾಡಿನ ಮಾಜಿ ಸಿಎಂ ಜೆ.ಜಯಲಲಿತಾ ಅವರು ಅಸ್ವಸ್ಥರಾಗಿ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ 75 ದಿನವೂ ಅಪೋಲೋ ಆಸ್ಪತ್ರೆಯ ಎಲ್ಲಾ ಸಿಸಿಟಿವಿಗಳೂ ಆಫ್ ಆಗಿತ್ತು ಎಂದು ಅಪೋಲೋ ಆಸ್ಪತ್ರೆಯ ಮುಖ್ಯಸ್ಥ ಡಾ.ಪ್ರತಾಪ್ ರೆಡ್ಡಿ ಹೇಳಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಯಲಲಿತಾ ಸಾವಿನ ಬಗ್ಗೆ ತನಿಖೆ ನಡೆಸುತ್ತಿರುವ ನ್ಯಾ. ಎ.ಅರ್ಮುಗಂಸ್ವಾಮಿ ಆಯೋಗದ ಮುಂದೆ ಎಲ್ಲಾ ದಾಖಲಾತಿಗಳನ್ನು ಸಲ್ಲಿಸಿದ್ದೇವೆ ಎಂದು ಹೇಳಿದ್ದಾರೆ.

    ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳು, ಆಯೋಗಕ್ಕೆ ಸಿಸಿಟಿವಿ ದೃಶ್ಯಾವಳಿಗಳನ್ನೂ ನೀಡಿದ್ದೀರಾ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಅವರು, ಕ್ಷಮಿಸಿ, ಜಯಲಲಿತಾ ಅವರು ಆಸ್ಪತ್ರೆಯಲ್ಲಿದ್ದ 75 ದಿನವೂ ಆಸ್ಪತ್ರೆಯ ಸಿಸಿಟಿವಿ ಸ್ವಿಚ್ ಆಫ್ ಆಗಿತ್ತು. ಜಯಲಲಿತಾ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ಐಸಿಯುವನ್ನೂ ಮುಚ್ಚಿದ್ದೆವು. ಜಯಾ ಆಗಮನಕ್ಕೂ ಆಗಮಿಸಿದ್ದ ರೋಗಿಗಳನ್ನು ಬೇರೆ ಐಸಿಯುವಿಗೆ ವರ್ಗಾಯಿಸಿದೆವು. ಒಟ್ಟು 24 ಕೊಠಡಿಯಿರುವ ಐಸಿಯುವಿನಲ್ಲಿ ಜಯಲಲಿತಾಗೆ ಮಾತ್ರ ಚಿಕಿತ್ಸೆ ನೀಡುತ್ತಿದ್ದೆವು. ಯಾರೂ ಏನೂ ನೋಡಬಾರದು ಎಂದು ಅವರು ಸಿಸಿಟಿವಿಯನ್ನು ಆಫ್ ಮಾಡಿಸಿದ್ದರು. ಜಯಲಲಿತಾ ಭೇಟಿಗೆ ಯಾವುದೇ ಸಂದರ್ಶಕರಿಗೂ ಅವಕಾಶ ನೀಡಿರಲಿಲ್ಲ ಎಂದರು.

    ಜಯಲಲಿತಾರ ಹತ್ತಿರದ ಸಂಬಂಧಿಕರಿಗೆ ಮಾತ್ರ ಅವಕಾಶ ನೀಡಿದ್ದೆವು. ಜಯಲಲಿತಾ ಸ್ಥಿತಿ ಗಂಭೀರವಾಗಿದ್ದರಿಂದ ನಾವು ಭೇಟಿಗೆ ಅವಕಾಶ ನೀಡಿರಲಿಲ್ಲ. ಈ ಭೇಟಿಗೆ ಡ್ಯೂಟಿಯಲ್ಲಿದ್ದ ವೈದ್ಯರ ಅನುಮತಿ ಪಡೆಯಬೇಕಿತ್ತು ಎಂದು ಪ್ರತಾಪ್ ರೆಡ್ಡಿ ಹೇಳಿದರು.

    ವಾರ್ಡ್ ಬಾಯ್ ನಿಂದ ತೊಡಗಿ ನರ್ಸ್‍ಗಳು, ವೈದ್ಯರವರೆಗೆ ಎಲ್ಲರೂ ಜಯಲಲಿತಾರನ್ನು ಚೆನ್ನಾಗಿ ನೋಡಿಕೊಂಡರು. ವಿದೇಶದಿಂದಲೂ ವೈದ್ಯರು ಬಂದಿದ್ದರು. ಜಯಲಲಿತಾ ಗುಣಮುಖರಾಗುತ್ತಾರೆ ಎಂಬ ನಿರೀಕ್ಷೆ ನಮ್ಮದಾಗಿತ್ತು. ಈಗಾಗಲೇ ನಾವು ಆಯೋಗಕ್ಕೆ ಎಲ್ಲಾ ದಾಖಲೆ ಸಲ್ಲಿಸಿದ್ದೇವೆ. ಆಯೋಗವು ನಮಗೆ ಸೂಚಿಸಿದರೆ ಆಯೋಗದ ಮುಂದೆ ವಿಚಾರಣೆಗೆ ಹಾಜರಾಗುತ್ತೇವೆ ಎಂದರು.