Tag: ಅರ್ಜುನ್ ರಣತುಂಗ

  • ಶ್ರೀಲಂಕಾದ ಮಾಜಿ ಕ್ರಿಕೆಟಿಗ ಅರ್ಜುನ್ ರಣತುಂಗಾ ಬಂಧನ!

    ಶ್ರೀಲಂಕಾದ ಮಾಜಿ ಕ್ರಿಕೆಟಿಗ ಅರ್ಜುನ್ ರಣತುಂಗಾ ಬಂಧನ!

    ಕೊಲೊಂಬೊ: ಶೂಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಪೆಟ್ರೋಲಿಯಂ ಸಚಿವ ಅರ್ಜುನ್ ರಣತುಂಗಾರನ್ನು ಶ್ರೀಲಂಕಾ ಪೊಲೀಸರು ಬಂಧಿಸಿದ್ದಾರೆ.

    ಗುಂಡು ಹಾರಿಸಿ ವ್ಯಕ್ತಿಯನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜುನ್ ರಣತುಂಗಾರನ್ನು ಕೊಲೊಂಬೊ ಅಪರಾಧ ವಿಭಾಗದ ಮುಖ್ಯಸ್ಥರು ಬಂಧಿಸಿದ್ದು, ಶೀಘ್ರವೇ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

    ಏನಿದು ಪ್ರಕರಣ?
    ಮಂತ್ರಿ ಸ್ಥಾನ ಕಳೆದುಕೊಂಡ ನಂತರವೂ ಅರ್ಜುನ್ ರಣತುಂಗಾ ಭಾನುವಾರ ತಮ್ಮ ಕಚೇರಿಗೆ ಪ್ರವೇಶಿಸಲು ಯತ್ನಿಸಿದ್ದರು. ಇದನ್ನು ತಡೆಯಲು ಮುಂದಾದ ರಾಜಪಕ್ಸೆ ಬೆಂಬಲಿಗರ ನಡುವೆ ತೀವ್ರ ವಾಗ್ವಾದ ಏರ್ಪಟ್ಟಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ, ರಣತುಂಗಾ ಅವರ ಗನ್ ಮ್ಯಾನ್ ಗಳು ಏಕಾಏಕಿ ಫೈರಿಂಗ್ ನಡೆಸಿದ್ದರು. ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟಿದ್ದ.

    ಕಳೆದ ಶನಿವಾರ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ, ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ಸರ್ಕಾರ ಹಾಗೂ ಸಚಿವ ಸಂಪುಟವನ್ನು ವಿಸರ್ಜನೆ ಮಾಡಿ, ಮಹಿಂದಾ ರಾಜಪಕ್ಸೆಯವರನ್ನು ದೇಶದ ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದರು. ನೂತನ ಪ್ರಧಾನಿ ಆಯ್ಕೆಯಾದ ಬೆನ್ನಲ್ಲೇ ಶ್ರೀಲಂಕಾದಲ್ಲಿ ರಾಜಕೀಯ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಅಲ್ಲದೇ ಹಳೆಯ ಸಚಿವರ ಪ್ರವೇಶಕ್ಕೆ ರಾಜಪಕ್ಸೆ ಬೆಂಬಲಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv