Tag: ಅರ್ಜುನ್ ಜನ್ಯ

  • ಕೊರೊನಾ ಜಾಗೃತಿಗಾಗಿ ಒಂದಾದ ಯೋಗರಾಜ್ ಭಟ್, ಅರ್ಜುನ್ ಜನ್ಯ, ವಿಜಯ್ ಪ್ರಕಾಶ್

    ಕೊರೊನಾ ಜಾಗೃತಿಗಾಗಿ ಒಂದಾದ ಯೋಗರಾಜ್ ಭಟ್, ಅರ್ಜುನ್ ಜನ್ಯ, ವಿಜಯ್ ಪ್ರಕಾಶ್

    ಬೆಂಗಳೂರು: ಯೋಗರಾಜ್ ಭಟ್ಟರು ತಮ್ಮ ವಿಭಿನ್ನ ಸಾಹಿತ್ಯ, ನಿರ್ದೇಶನದ ಮೂಲಕವೇ ಪ್ರಸಿದ್ಧರು. ಅವರ ಸಾಹಿತ್ಯ ಯುವ ಸಮೂಹಕ್ಕೆ ಅಪ್ಯಾಯಮಾನ. ಹಲವು ವಿಶಿಷ್ಠ ಗೀತೆಗಳ ಮೂಲಕ ಯುವ ಸಮೂಹಕ್ಕೆ ಭಟ್ಟರು ಹುಚ್ಚು ಹಿಡಿಸುತ್ತಾರೆ. ಅದೇ ರೀತಿ ಇದೀಗ ಕೊರೊನಾ ಜಾಗೃತಿ ಗೀತೆಯನ್ನು ಕಟ್ಟಿಕೊಟ್ಟಿದ್ದಾರೆ.

    ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ಕುರಿತು ಈಗಾಗಲೇ ಹಲವು ಗಾಯಕರು ಹಾಗೂ ಬರಹಗಾರರು ಹಾಡು ರಚಿಸಿದ್ದು, ಇದೀಗ ಯೋಗರಾಜ್ ಭಟ್ಟರು ಹಾಡು ರಚಿಸಿದ್ದಾರೆ. ರಾಜ್ಯ ಸರ್ಕಾರ ಹಾಗೂ ಬೆಂಗಳೂರು ಪೊಲೀಸ್ ಸಹಯೋಗದಲ್ಲಿ ಈ ಜಾಗೃತಿ ಗೀತೆ ರಚಿಸಿದ್ದು, ಕೊರೊನಾ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ತೋರಿಸಿದ್ದಾರೆ. ಇದರ ಮಧ್ಯೆಯೇ ಕೊರೊನಾ ವಾರಿಯರ್ಸ್ ಗೆ ಸೆಲ್ಯೂಟ್ ಮಾಡಿದ್ದಾರೆ.

    ಹಾಡು ಆರಂಭವಾಗುತ್ತಿದ್ದಂತೆ ಹೃದಯ ಬಡಿತದ ಶಬ್ದ ಕೇಳಿಸುತ್ತದೆ. ಇದರ ನಡುವೆಯೇ ವಿಧಾನಸೌಧ, ಬೆಂಗಳೂರು ಪೊಲೀಸ್, ವೈದ್ಯರು ಪೌರ ಕಾರ್ಮಿಕರು, ಮಾಧ್ಯಮದವರನ್ನು ತೋರಿಸಿದ್ದಾರೆ. ಅಷ್ಟರಲ್ಲೇ ಊರಿಗೂರೆ ಖಾಲಿ, ದಾರಿ ತುಂಬಾ ಬೇಲಿ….ತಿಳಿದುಕೊಳ್ಳುವ ಬನ್ನಿ ಬಾನ ಬಣ್ಣ ನೀಲಿ, ತಿರುಗುತಿರುವ ಭೂಮಿ ಇಂದು ನಿಲ್ಲಬಹುದೇ ಜ್ವರವು ಬಂದು ಎಂಬ ವಿಜಯ್ ಪ್ರಕಾಶ್ ಧ್ವನಿ ಕೇಳುತ್ತದೆ. ನಂತರ ಯಾರು ನೀನು ಮಾನವ, ಕೇಳುತಿಹುದು ಕೊರೊನಾ ಎಂದು ಹಾಡು ಮುಂದುವರಿಯುತ್ತದೆ.

    ಇದರಲ್ಲೇ ಸಿಎಂ, ಸುಧಾಮೂರ್ತಿ, ಸಚಿವ ಶ್ರೀರಾಮುಲು ಅವರನ್ನು ತೋರಿಸಲಾಗಿದೆ. ಅಲ್ಲದೆ ರೋಗ ಕೇಳುತ ಬರುವುದೇ ಮನುಜನಾ ಕುಲ ಗೋತ್ರವಾ, ಸಾವು ನೋಡುತ ನಗುತಿದೆ ಬ್ಯಾಂಕ್ ಅಕೌಂಟಿನ ಗಾತ್ರವ ಎಂಬ ಸಾಲುಗಳು ಸೆಳೆಯುತ್ತವೆ. ವಿಜಯ್ ಪ್ರಕಾಶ್ ಧ್ವನಿಯಲ್ಲಿ ಈ ಜಾಗೃತಿ ಗೀತೆ ಅದ್ಭುತವಾಗಿ ಮೂಡಿ ಬಂದಿದೆ.

    ಈ ಹಾಡನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಬಿಡುಗಡೆಗೊಳಿಸಿದರು. ಈ ವೇಳೆ ಯೋಗರಾಜ್ ಭಟ್, ಅರ್ಜುನ್ ಜನ್ಯ ಹಾಗೂ ವಿಜಯ್ ಪ್ರಕಾಶ್ ಉಪಸ್ಥಿತರಿದ್ದರು.

    ಯೋಗರಾಜ್ ಭಟ್ಟರೇ ಸಾಹಿತ್ಯ ಬರೆದು ಹಾಡು ರಚಿಸಿದ್ದು, ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಜಯ್ ಪ್ರಕಾಶ್ ಹಾಡಿದ್ದಾರೆ. ಈ ಹಾಡು ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.

  • ಹಂಸಲೇಖ ಕಳಿಸಿದ ಮೆಸೇಜ್‍ನಿಂದ ಸ್ಫೂರ್ತಿ ಬಂತು: ಅರ್ಜುನ್ ಜನ್ಯ

    ಹಂಸಲೇಖ ಕಳಿಸಿದ ಮೆಸೇಜ್‍ನಿಂದ ಸ್ಫೂರ್ತಿ ಬಂತು: ಅರ್ಜುನ್ ಜನ್ಯ

    ಬೆಂಗಳೂರು: ಮ್ಯಾಜಿಕಲ್ ಮ್ಯೂಸಿಕ್ ಕಂಪೋಸರ್ ಅರ್ಜುನ್ ಜನ್ಯ ಗುಣಮುಖರಾಗಿ ರಿಯಾಲಿಟಿ ಶೋಗೆ ಕಂ ಬ್ಯಾಕ್ ಮಾಡಿದ್ದಾರೆ. ಅರ್ಜುನ್ ಜನ್ಯ ನೆಚ್ಚಿನ ಸಂಗೀತ ಕಾರ್ಯಕ್ರಮ ಸರಿಗಮಪ ಶೋಗೆ ಎಂಟ್ರಿ ಕೊಟ್ಟಿದ್ದಕ್ಕೆ ಸಂಭ್ರಮಾಚರಣೆಯನ್ನೇ ಮಾಡಿದ್ದಾರೆ.

    ಈ ವೇಳೆ ಅರ್ಜುನ್ ಜನ್ಯ ಆಸ್ಪತ್ರೆ ದಿನಗಳನ್ನು ನೆನೆದಿದ್ದು, ನಾನು ಆಸ್ಪತ್ರೆ ಸೇರಿದಾಗ ಎಲ್ಲರೂ ನನ್ನನ್ನು ಮಗನಂತೆ ಕಂಡಿರಿ, ನಾನು ತಂದೆ ಕಳೆದುಕೊಂಡು 25 ರಿಂದ 26 ವರ್ಷಗಳಾಯಿತು. ಆದರೆ ವಿಜಯ್ ಪ್ರಕಾಶ್ ಹಾಗೂ ರಾಜೇಶ್ ಕೃಷ್ಣನ್ ಅವರಲ್ಲಿ ನನ್ನ ತಂದೆಯನ್ನು ನೋಡಿದೆ ಎಂದರು. ಇದಕ್ಕೆ ಅನುಶ್ರೀ ಅವರು ಸ್ನೇಹಿತರಲ್ಲಿ ತಂದೆಯನ್ನು ಕಾಣುವ ನಿಮ್ಮ ಮನಸ್ಸು ನಿಜಕ್ಕೂ ದೊಡ್ಡದು ಎಂದು ಕೊಂಡಾಡಿ, ಚಪ್ಪಾಳೆ ತಟ್ಟಿದರು.

    ನೀವು ಈ ಕಾರ್ಯಕ್ರಮಕ್ಕೆ ಬಂದು, ಈ ಚೇರ್ ಮೇಲೆ ಕುಳಿತುಕೊಳ್ಳುವ ವರೆಗೂ ಅವರು ತಮ್ಮ ಚೇರ್‍ನಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಮಹಾಗುರುಗಳು ಪಟ್ಟು ಹಿಡಿದಿದ್ದರು. ಅಲ್ಲದೆ ಅರ್ಜುನ್ ಹೇಳಿರುವ ಹಾಗೆ ಸಿಂಹ ಎಲ್ಲಿ ಕುಳಿತುಕೊಂಡರು ಅದು ಸಿಂಹಾಸನವೇ ಎಂಬ ಮಾತನ್ನು ಗಂಭೀರವಾಗಿ ಪರಿಗಣಿಸಿ ಅದೇ ಚೇರ್‍ನಲ್ಲಿ ಕುಳಿತುಕೊಂಡರು. ಅವರ ಚೇರ್‍ನಲ್ಲಿ ಕುಳಿತುಕೊಳ್ಳಲೇ ಇಲ್ಲ. ಇದಕ್ಕೆ ಏನು ಹೇಳುತ್ತೀರಿ ಎಂದು ನಿರೂಪಕಿ ಅನುಶ್ರೀ ಕೇಳಿದರು.

    ಇದಕ್ಕೆ ಉತ್ತರಿಸಿದ ಅರ್ಜುನ್ ಜನ್ಯ, ತುಂಬಾ ದಿನ ಲೈಫಲ್ಲಿ ಒಂದು ಸೈಲೆನ್ಸ್ ಇತ್ತು. ಆಗ ಒಳ್ಳೆಯ ವಿಷಯ ತಿಳಿದುಕೊಂಡೆ. ನನಗೆ ಆಪರೇಷನ್ ನಂತರ ಆಸ್ಪತ್ರೆಯಲ್ಲಿದ್ದಾಗ ಏನೇನೋ ನೆನಸಿಕೊಂಡು ತುಂಬಾ ಭಯವಾಗಿತ್ತು. ಭವಿಷ್ಯದ ಬಗ್ಗೆ ನನಗೆ ತುಂಬಾ ಭಯ ಉಂಟಾಗಿತ್ತು. ಬೆಳಗಿನ ಜಾವ ಸುಮಾರು 2-3 ಗಂಟೆಯಾಗಿತ್ತು. ಎಚ್ಚರವಾಗಿ ಭಯಭೀತನಾಗಿ ಕುಳಿತಿದ್ದೆ ಎಂದರು.

    ಆಸ್ಪತ್ರೆಯಲ್ಲಿದ್ದಾಗ ಫೋನ್ ಬಳಸದಂತೆ ನನ್ನ ಹೆಂಡತಿ ಮೊಬೈಲ್ ಕೊಟ್ಟಿರಲೇ ಇಲ್ಲ. ಬೆಳಗಿನ ಜಾವ 2-3 ಗಂಟೆಗೆ ಅವಳಿಗೆ ಗೊತ್ತಾಗದಂತೆ ನಾನೇ ಮೊಬೈಲ್ ತೆಗೆದುಕೊಂಡು ನೋಡಿದೆ. ಎಷ್ಟೋಂದು ಮೆಸೇಜ್‍ಗಳಿದ್ದವು ಅದರಲ್ಲಿ ಹಂಸಲೇಖ ಸರ್ ಕಳುಹಿಸಿದ ಮೆಸೇಜ್ ಸಹ ಇತ್ತು. ಒಂದು ವಾಯ್ಸ್ ನೋಟ್ ಕಳುಹಿಸಿದ್ದರು.

    ಸುಮ್ಮನೇ ಆನ್ ಮಾಡಿದೆ….ತಕ್ಷಣ, ಯು ಆರ್ ಅರ್ಜುನ್, ಐ ನೌ ವಾಟ್ ಯು ಆರ್, ಐ ನೌ ವಾಟ್ ಇಸ್ ಯುವರ್ ಹಾರ್ಟ್, ಐ ನೌ ಹೌ ಯು ಕ್ಯಾನ್ ಕಂ ಬ್ಯಾಕ್, ಕಂ ಬ್ಯಾಕ್ ಅರ್ಜುನ್, ಕಂ ಬ್ಯಾಕ್….. ಎಂದು ವಾಯ್ಸ್ ನೋಟ್ ಕಳುಹಿಸಿದ್ದರು. ಇದರಿಂದಾಗಿ ನನಗೆ ತುಂಬಾ ಸ್ಫೂರ್ತಿ ಉಕ್ಕಿತು ಎಂದು ಹೇಳಿಕೊಂಡಿದ್ದಾರೆ.

    ಈ ವಾಯ್ಸ್ ನೋಟ್ ಕೇಳಿದ ತಕ್ಷಣ ಸಿಕ್ಕಾಪಟ್ಟೆ ಅಳು ಬಂದು, ನಂತರ ಸುಮಾರು ಅರ್ಧ ಗಂಟೆಗಳ ಕಾಲ ನನ್ನಲ್ಲಿ ಒಂದು ರೀತಿಯ ಸಂಚಲನ ಸೃಷ್ಟಿಯಾಯಿತು ಎಂದು ಅರ್ಜುನ್ ಜನ್ಯ ತಿಳಿಸಿದ್ದಾರೆ. ಇವೆಲ್ಲ ನಮ್ಮ ಲೈಫ್‍ಗೆ ಟ್ರೇಲರ್, ನಾವಿಲ್ಲ ಎಂದರೆ ಯಾವ ರೀತಿಯಾಗುತ್ತದೆ ಎಂಬುದನ್ನು ದೇವರು ಟ್ರೇಲರ್ ತೋರಿಸುತ್ತಾನೆ. ಕೆಲವು ಬದಲಾವಣೆಗಳಿಂದ ಬೆಳವಣಿಗೆಯಾಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಕೆಲವು ಬೆಳವಣಿಗೆಗೆ ಬದಲಾವಣೆಗಳು ಬೇಕು. ಚಿಕ್ಕ ಬದಲಾವಣೆಯಾಗಿದೆ ಎಂದು ಅರ್ಜುನ್ ಜನ್ಯ ಭಾವುಕರಾದರು.

  • ಎಲ್ಲರಲ್ಲಿ ತಂದೆಯನ್ನ ನೋಡಿದೆ: ಅಭಿಮಾನಿಗಳಿಗೆ ಅರ್ಜುನ್ ಜನ್ಯ ಧನ್ಯವಾದ

    ಎಲ್ಲರಲ್ಲಿ ತಂದೆಯನ್ನ ನೋಡಿದೆ: ಅಭಿಮಾನಿಗಳಿಗೆ ಅರ್ಜುನ್ ಜನ್ಯ ಧನ್ಯವಾದ

    -ರಾಜೇಶ್ ಕೃಷ್ಣನ್ ಸಹಾಯ, ವಿಜಯ್ ಪ್ರಕಾಶ್ ಮಮತೆ ತಿಳಿಸಿದ್ರು

    ಬೆಂಗಳೂರು: ಮ್ಯಾಜಿಕಲ್ ಮ್ಯೂಸಿಕ್ ಕಂಪೋಸರ್ ಅರ್ಜುನ್ ಜನ್ಯ ಗುಣಮುಖರಾಗಿದ್ದು, ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋಗೆ ಕಮ್ ಬ್ಯಾಕ್ ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸಿದ ಅರ್ಜುನ್ ಜನ್ಯ, ತಮ್ಮ ಚೇತರಿಕೆಗಾಗಿ ಪ್ರಾರ್ಥಿಸಿದ ಎಲ್ಲ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

    ತಮಗಾಗಿ ಪ್ರಾರ್ಥಿಸಿದವರಿಗೆ ಎಷ್ಟು ಧನ್ಯವಾದ ಹೇಳಿದ್ರೂ ಕಡಿಮೆ. ನಾಡಿನ ಪ್ರತಿಯೊಬ್ಬರ ಆಶೀರ್ವಾದ, ಪ್ರಾರ್ಥನೆಯಿಂದ ಗುಣಮುಖವಾಗಿದ್ದೇನೆ. ಈ ವೇದಿಕೆಯನ್ನು ಸಹ ಮಿಸ್ ಮಾಡಿಕೊಂಡಿದ್ದೇನೆ. ಆರೋಗ್ಯದಲ್ಲಿ ಏರುಪೇರು ಕಂಡ ತಕ್ಷಣ ಎಲ್ಲರೂ ನನ್ನ ಬಳಿ ಬಂದರು. ನಾನು ಒಪ್ಪಿಕೊಂಡಿದ್ದ ಕಾರ್ಯಕ್ರಮವನ್ನ ರಾಜೇಶ್ ಕೃಷ್ಣನ್ ನಡೆಸಿಕೊಟ್ಟರು. ಇನ್ನು ವಿಜಯ್ ಪ್ರಕಾಶ್ ಮನೆಗೆ ಬಂದು ಗಾಳಿ ಆಂಜನೇಯ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ತಾಯತ ಕಟ್ಟಿಸಿದರು ಎಂದು ಅರ್ಜುನ್ ಜನ್ಯ ಹೇಳಿದರು. ಇದನ್ನೂ ಓದಿ:   ಅರ್ಜುನ್ ಜನ್ಯ ಆರೋಗ್ಯದ ಬಗ್ಗೆ ರಾಜೇಶ್ ಕೃಷ್ಣನ್ ಹೇಳಿದ್ದು ಹೀಗೆ

    ನಮ್ಮ ತಂದೆ ಅಗಲಿ 25 ರಿಂದ 26 ವರ್ಷ ಆಯ್ತು. ಕೆಲವು ದಿನಗಳಲ್ಲಿ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಮತ್ತು ನನಗಾಗಿ ಹಾರೈಸಿದವರಲ್ಲಿ ನಮ್ಮ ತಂದೆಯನ್ನು ನೋಡಿದೆ ಎಂದು ಭಾವುಕರಾದರು. ಕೊನೆಗೆ ನಿರೂಪಕಿ ಅನುಶ್ರೀ, ಸ್ನೇಹಿತರಲ್ಲಿ ತಂದೆಯನ್ನು ಕಾಣುವ ನಿಮ್ಮ ಮನಸ್ಸು ನಿಜಕ್ಕೂ ದೊಡ್ಡದು ಚಪ್ಪಾಳೆ ಮೂಲಕ ಕೊಂಡಾಡಿದರು. ಇದನ್ನೂ ಓದಿ: I am OK, Nothing to Worry: ಅರ್ಜುನ್ ಜನ್ಯ

  • ಅರ್ಜುನ್ ಜನ್ಯ ಆರೋಗ್ಯದ ಬಗ್ಗೆ ರಾಜೇಶ್ ಕೃಷ್ಣನ್ ಹೇಳಿದ್ದು ಹೀಗೆ

    ಅರ್ಜುನ್ ಜನ್ಯ ಆರೋಗ್ಯದ ಬಗ್ಗೆ ರಾಜೇಶ್ ಕೃಷ್ಣನ್ ಹೇಳಿದ್ದು ಹೀಗೆ

    ಬೆಂಗಳೂರು: ಶಸ್ತ್ರಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿಯಲ್ಲಿರುವ ಮ್ಯೂಸಿಕ್ ಕಂಪೋಸರ್ ಅರ್ಜುನ್ ಜನ್ಯ ಬಗ್ಗೆ ಮೆಲೋಡಿ ಕಿಂಗ್, ಗಾಯಕ ರಾಜೇಶ್ ಕೃಷ್ಣನ್ ಮಾತನಾಡಿದ್ದು, ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸಂಗೀತ ಕಾರ್ಯಕ್ರಮದಲ್ಲಿ ರಾಜೇಶ್ ಕೃಷ್ಣನ್ ಮತ್ತು ಅರ್ಜುನ್ ಜನ್ಯ ತೀರ್ಪುಗಾರರಾಗಿದ್ದಾರೆ. ಶನಿವಾರ ಪ್ರಸಾರವಾದ ಸಂಚಿಕೆಯಲ್ಲಿ ಅರ್ಜುನ್ ಜನ್ಯ, ಕಾರ್ಯಕ್ರಮಕ್ಕೆ ಗೈರಾಗುತ್ತಿರುವ ಬಗ್ಗೆ ಸ್ಪಷ್ಟನೆ ನೀಡಿ ವಿಡಿಯೋ ಸಂದೇಶ ರವಾನಿಸಿದ್ದರು. ವಿಡಿಯೋ ನೋಡಿದ ಬಳಿಕ ಮಾತನಾಡಿದ ರಾಜೇಶ್ ಕೃಷ್ಣನ್, ಇಷ್ಟೆಲ್ಲ ಸಾಧನೆ ಮಾಡಿದ್ದರೂ ಅರ್ಜುನ್ ಜನ್ಯ ಬೆಳೆಯವ ಹುಡುಗ. ಇನ್ನು ಸಾಕಷ್ಟು ಸಾಧನೆ ಮಾಡುವುದು ಬಾಕಿ ಉಳಿದಿದೆ. ಆದಷ್ಟು ಬೇಗ ಗುಣಮುಖರಾಗಿ ಈ ವೇದಿಕೆಗೆ ಬರಲಿ. ಆರೋಗ್ಯದಲ್ಲಿ ಚೇತರಿಕೆ ಕಾಣಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.

    ಅರ್ಜುನ್ ಜನ್ಯ ವಿಡಿಯೋ ಸಂದೇಶ: ಕಾರಣಾಂತರಗಳಿಂದ ಆರೋಗ್ಯ ತಪ್ಪಿತ್ತು. ನಿಮ್ಮೆಲ್ಲರ ಪ್ರೀತಿ, ಪ್ರಾರ್ಥನೆ ಮತ್ತು ಆಶೀರ್ವಾದದಿಂದ ಚೇತರಿಸಿಕೊಳ್ಳುತ್ತಿದ್ದೇನೆ. ಸರಿಗಮಪ ವೇದಿಕೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಆದಷ್ಟು ಬೇಗ ವೇದಿಕೆಗೆ ಬರುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ಮತ್ತು ಪ್ರೀತಿ ಹೀಗೆ ಇರಲಿ. ನನಗೋಸ್ಕರ ಮತ್ತು ನನ್ನ ಕುಟುಂಬಕ್ಕಾಗಿ ಬಹಳಷ್ಟು ಪ್ರಾರ್ಥನೆ ಮಾಡಿದ್ದೀರಿ. ಎಲ್ಲರಿಗೂ ನನ್ನ ಧನ್ಯವಾದಗಳು. ಶೀಘ್ರದಲ್ಲಿಯೇ ಎಲ್ಲರನ್ನು ಭೇಟಿಯಾಗುತ್ತೇನೆ. ಆಯ್ ಆ್ಯಮ್ ಓಕೆ, ನಥಿಂಗ್ ಡೋಂಟ್ ವರಿ ಎಂದು ವಿಡಿಯೋ ಸಂದೇಶವನ್ನು ಅರ್ಜುನ್ ಜನ್ಯ ಕಳುಹಿಸಿದ್ದಾರೆ.

    ಅರ್ಜುನ್ ಜನ್ಯರಿಗೆ ಚಿಕಿತ್ಸೆ ನೀಡಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಹೃದ್ರೋಗ ತಜ್ಞ ಡಾ. ಆದಿತ್ಯ ಉಡುಪ, ಭಾನುವಾರ ಮಧ್ಯಾಹ್ನ ಅರ್ಜುನ್ ಜನ್ಯ ಅವರು ಗ್ಯಾಸ್ಟ್ರಿಕ್, ತಲೆ ನೋವು, ಎದೆ ನೋವು ಹಾಗೂ ಬೆನ್ನು ನೋವು ಎಂದು ಆಸ್ಪತ್ರೆಗೆ ದಾಖಲಾದಾಗ ಇಸಿಜಿ ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಮಂಗಳವಾರ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಇಸಿಜಿ ಮಾಡಿಸಿದಾಗ ಸ್ವಲ್ಪ ಏರುಪೇರಾಗಿರುವ ವಿಷಯ ತಿಳಿಯಿತು. ಇಸಿಜಿಯಲ್ಲಿ ವ್ಯತ್ಯಾಸ ಕಾಣುತ್ತಿದ್ದಂತೆ ಆ್ಯಂಜಿಯೋಗ್ರಾಮ ಮಾಡಿದಾಗ ಹೃದಯ ಶೇ.99ರಷ್ಟು ಬ್ಯಾಕ್ ಆಗಿತ್ತು. ಕೂಡಲೇ ಕುಟುಂಬಸ್ಥರ ಅನುಮತಿ ಪಡೆದು ಆ್ಯಂಜಿಯೋಪ್ಲಾಸ್ಟಿ ಮಾಡಲಾಗಿತ್ತು ಎಂದು ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದರು.

    ಫೆಬ್ರವರಿ 28ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ವಿಶ್ರಾಂತಿಯಲ್ಲಿದ್ದಾರೆ. ವೈದ್ಯರು ಎರಡು ತಿಂಗಳು ವಿಶ್ರಾಂತಿ ಸೂಚಿಸಿದ ಹಿನ್ನೆಲೆಯಲ್ಲಿ ಸಿನಿಮಾ ಮತ್ತು ಸಂಗೀತ ಕಾರ್ಯಕ್ರಮಗಳಿಂದ ದೂರ ಉಳಿದುಕೊಂಡಿದ್ದಾರೆ.

  • I am OK, Nothing to Worry: ಅರ್ಜುನ್ ಜನ್ಯ

    I am OK, Nothing to Worry: ಅರ್ಜುನ್ ಜನ್ಯ

    ಬೆಂಗಳೂರು: ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ವಿಶ್ರಾಂತಿಯಲ್ಲಿರುವ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ.

    ಸಂಗೀತ ಸಂಯೋಜನೆ ಜೊತೆಗೆ ಖಾಸಗಿ ವಾಹಿನಿಯ ಸಂಗೀತ ಕಾರ್ಯಕ್ರಮದ ತೀರ್ಪುಗಾರರಾಗಿದ್ದಾರೆ. ಶನಿವಾರ ಪ್ರಸಾರವಾದ ಸಂಚಿಕೆಯಲ್ಲಿ ಅರ್ಜುನ್ ಜನ್ಯ, ಅಭಿಮಾನಿಗಳಿಗೆ ವಿಡಿಯೋ ಸಂದೇಶ ರವಾನಿಸಿ, ನಾನು ಚೆನ್ನಾಗಿದ್ದೇನೆ. ಆದಷ್ಟು ಬೇಗ ಎಲ್ಲರನ್ನು ಭೇಟಿಯಾಗುತ್ತೇನೆ ಎಂದು ತಿಳಿಸಿದ್ದಾರೆ.

    ಅರ್ಜುನ್ ಜನ್ಯ ಸಂದೇಶ: ಕಾರಣಾಂತರಗಳಿಂದ ಆರೋಗ್ಯ ತಪ್ಪಿತ್ತು. ನಿಮ್ಮೆಲ್ಲರ ಪ್ರೀತಿ, ಪ್ರಾರ್ಥನೆ ಮತ್ತು ಆಶೀರ್ವಾದದಿಂದ ಚೇತರಿಸಿಕೊಳ್ಳುತ್ತಿದ್ದೇನೆ. ಸರಿಗಮಪ ವೇದಿಕೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಆದಷ್ಟು ಬೇಗ ವೇದಿಕೆಗೆ ಬರುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ಮತ್ತು ಪ್ರೀತಿ ಹೀಗೆ ಇರಲಿ. ನನಗೋಸ್ಕರ ಮತ್ತು ನನ್ನ ಕುಟುಂಬಕ್ಕಾಗಿ ಬಹಳಷ್ಟು ಪ್ರಾರ್ಥನೆ ಮಾಡಿದ್ದೀರಿ. ಎಲ್ಲರಿಗೂ ನನ್ನ ಧನ್ಯವಾದಗಳು. ಶೀಘ್ರದಲ್ಲಿಯೇ ಎಲ್ಲರನ್ನು ಭೇಟಿಯಾಗುತ್ತೇನೆ. ಆಯ್ ಆ್ಯಮ್ ಓಕೆ, ನಥಿಂಗ್ ಡೋಂಟ್ ವರಿ ಎಂದು ವಿಡಿಯೋ ಸಂದೇಶವನ್ನು ಅರ್ಜುನ್ ಜನ್ಯ ಕಳುಹಿಸಿದ್ದಾರೆ.

    ಫೆಬ್ರವರಿ 26ರಂದು ಗ್ಯಾಸ್‍ಟ್ರಿಕ್ ಸಮಸ್ಯೆಯಿಂದ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಪರೀಕ್ಷೆ ನಡೆಸಿದಾಗ ಹೃದಯದಲ್ಲಿ ಶೇ.99ರಷ್ಟು ಬ್ಲಾಕ್ ಇತ್ತು. ಹೀಗಾಗಿ ವೈದ್ಯರು ಅಂದೇ ರಾತ್ರಿ ಶಸ್ತ್ರ ಚಿಕಿತ್ಸೆ ನಡೆಸಿ ಸ್ಟಂಟ್ ಅಳವಡಿಸಿದ್ದರು. ಎರಡು ತಿಂಗಳು ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರ ಸೂಚನೆ ಹಿನ್ನೆಲೆಯಲ್ಲಿ ಸಿನಿಮಾ ಕೆಲಸ ಹಾಗೂ ರಿಯಾಲಿಟಿ ಶೋಗಳಿಂದ ದೂರ ಉಳಿದುಕೊಂಡಿದ್ದಾರೆ.

  • ಅರ್ಜುನ್ ಜನ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್

    ಅರ್ಜುನ್ ಜನ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್

    ಮೈಸೂರು: ಲಘು ಹೃದಯಾಘಾತದಿಂದ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಅರ್ಜುನ್ ಜನ್ಯ ಅವರು ಕಳೆದ ಮಂಗಳವಾರ ಅತಿಯಾದ ಗ್ಯಾಸ್‍ಟ್ರಿಕ್ ಪರಿಣಾಮ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದರು. ಆಗ ಹೃದಯ ಪರೀಕ್ಷೆ ನಡೆಸಿದ್ದಾಗ ಹೃದಯಾಘಾತವಾಗಿರುವುದು ಸ್ಪಷ್ಟವಾಗಿತ್ತು. ಅವರ ಹೃದಯದಲ್ಲಿ ಶೇಕಡಾ 99 ರಷ್ಟು ಬ್ಲಾಕ್ ಇತ್ತು. ಹೀಗಾಗಿ ಮಂಗಳವಾರ ರಾತ್ರಿಯೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಸ್ಟಂಟ್ ಅಳವಡಿಸಿದ್ದರು.

    ಮೂರು ದಿನಗಳ ಪರೀಕ್ಷೆ ನಂತರ ಇವತ್ತು ಅರ್ಜುನ್ ಜನ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಎರಡು ತಿಂಗಳು ಸಂಪೂರ್ಣ ವಿಶ್ರಾಂತಿ ತೆಗೆದು ಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಎರಡು ತಿಂಗಳು ಸಿನಿಮಾ ಕೆಲಸ ಹಾಗೂ ರಿಯಾಲಿಟಿ ಶೋ ಗಳಿಂದ ಅರ್ಜುನ್ ಜನ್ಯ ದೂರ ಉಳಿಯಲಿದ್ದಾರೆ.

    ಅರ್ಜುನ್ ಅವರ ಆರೋಗ್ಯದ ಬಗ್ಗೆ ಗುರುವಾರ ಪ್ರತಿಕ್ರಿಯಿಸಿದ್ದ ಅಪೋಲೋ ಹೃದ್ರೋಗ ತಜ್ಞ ಆದಿತ್ಯ ಉಡುಪ, ಭಾನುವಾರ ಮಧ್ಯಾಹ್ನ ಅರ್ಜುನ್ ಜನ್ಯ ಅವರು ಗ್ಯಾಸ್ಟ್ರಿಕ್, ತಲೆ ನೋವು, ಎದೆ ನೋವು ಹಾಗೂ ಬೆನ್ನು ನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ಆಗ ನಾವು ಅವರಿಗೆ ಚಿಕಿತ್ಸೆ ನೀಡಿದಾಗ ಅವರ ಗ್ಯಾಸ್ಟ್ರಿಕ್ ಸಮಸ್ಯೆ ಸರಿ ಹೋಯಿತು. ಮಂಗಳವಾರ ರಾತ್ರಿ ಮತ್ತೆ ಅವರಿಗೆ ಇಸಿಜಿ ಮಾಡಿಸಿದಾಗ ವರದಿಯಲ್ಲಿ ಕೆಲವು ವ್ಯತ್ಯಾಸಗಳು ಕಂಡು ಬಂತು. ಅಲ್ಲದೆ ಅರ್ಜುನ್ ಅವರಿಗೆ ಬೆನ್ನು, ಎದೆ ಹಾಗೂ ತಲೆ ನೋವು ಜಾಸ್ತಿಯಾಗಿತ್ತು. ಹಾಗಾಗಿ ಮತ್ತೆ ಇಸಿಜಿ ಮಾಡಿಸಿದ್ದೇವು ಎಂದಿದ್ದರು.

    ಇಸಿಜಿ ವರದಿ ಬಂದಾಗ ಅರ್ಜುನ್ ಅವರ ಬಳಿ ಹೋಗಿ ಆರೋಗ್ಯ ಹೇಗಿದೆ ಎಂದು ಕೇಳಿದ್ದೇವು. ಆಗ ಅವರು ಹೊಟ್ಟೆ ನೋವು ಕಡಿಮೆ ಆಗಿದೆ. ಆದರೆ ತುಂಬಾ ಬೆನ್ನು ಹಾಗೂ ತಲೆ ನೋವು ಇದೆ, ಸ್ವಲ್ಪ ಎದೆ ನೋವಾಗುತ್ತಿದೆ ಎಂದರು. ಇಸಿಜಿಯಲ್ಲಿ ಬಹಳ ವ್ಯತ್ಯಾಸ ಕಂಡಿದ್ದರಿಂದ ತಕ್ಷಣ ಆಂಜಿಯೋಗ್ರಾಂ ಪರೀಕ್ಷೆ ಮಾಡಿದ್ವಿ. ಆಗಲೇ ಶೇ. 99 ಹಾರ್ಟ್ ಬ್ಲಾಕೇಜ್ ಆಗಿದೆ ಎಂಬುದು ತಿಳಿಯಿತು. ತಕ್ಷಣ ಅವರ ಕುಟುಂಬಸ್ಥರು ಜೊತೆ ಮಾತನಾಡಿ ಆಂಜಿಯೋಪ್ಲ್ಯಾಸ್ಟಿ ಮಾಡಲಾಯಿತು. ಚಿಕಿತ್ಸೆ ನಡೆದ ಅವರು ಸಂಪೂರ್ಣ ನಿರಾಳರಾದರು ಎಂದು ಮಾಹಿತಿ ನೀಡಿದ್ದರು.

    ಮಂಗಳವಾರ ಬೆಳಗ್ಗೆ 2.30ಕ್ಕೆ ಅರ್ಜುನ್ ಅವರಿಗೆ ಆಂಜಿಯೋಪ್ಲ್ಯಾಸ್ಟಿ ಮಾಡಿದ್ದೇವೆ. ನಿಜವಾಗಿಯೂ 2 ಗಂಟೆ ತಡವಾಗಿದ್ರೆ ಕೆಟ್ಟ ಪರಿಣಾಮ ಎದುರಿಸಬೇಕಿತ್ತು. ಸದ್ಯ ಎಲ್ಲವು ಸರಿಯಾಗಿದೆ. ಚಿಕಿತ್ಸೆ ಪಡೆದು ಅವರನ್ನು ವಾರ್ಡ್ ಗೆ ಶಿಫ್ಟ್ ಮಾಡಿದ್ದೇವೆ. ಸದ್ಯಕ್ಕೆ ಅರ್ಜುನ್ ಜನ್ಯ ಕ್ಷೇಮವಾಗಿದ್ದಾರೆ ಎಂದು ಹೃದ್ರೋಗ ತಜ್ಞ ಆದಿತ್ಯ ಉಡುಪ ಗುರುವಾರ ಹೇಳಿದ್ದರು.

  • 2 ಗಂಟೆ ತಡವಾಗಿದ್ರೆ ಕೆಟ್ಟ ಪರಿಣಾಮ ಎದುರಿಸಬೇಕಿತ್ತು: ಜನ್ಯ ಆರೋಗ್ಯದ ಬಗ್ಗೆ ವೈದ್ಯರ ಪ್ರತಿಕ್ರಿಯೆ

    2 ಗಂಟೆ ತಡವಾಗಿದ್ರೆ ಕೆಟ್ಟ ಪರಿಣಾಮ ಎದುರಿಸಬೇಕಿತ್ತು: ಜನ್ಯ ಆರೋಗ್ಯದ ಬಗ್ಗೆ ವೈದ್ಯರ ಪ್ರತಿಕ್ರಿಯೆ

    ಮೈಸೂರು: ಮ್ಯಾಜಿಕಲ್ ಮ್ಯೂಸಿಕ ಕಂಪೋಸರ್ ಅರ್ಜುನ್ ಜನ್ಯ ಅವರು ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯದ ಬಗ್ಗೆ ಪ್ರತಿಕ್ರಿಯಿಸಿರುವ ವೈದ್ಯರು, 2 ಗಂಟೆ ತಡವಾಗಿದ್ರೆ ಕೆಟ್ಟ ಪರಿಣಾಮ ಎದುರಿಸಬೇಕಿತ್ತು ಎಂದು ಹೇಳಿದರು.

    ಅರ್ಜುನ್ ಅವರ ಆರೋಗ್ಯದ ಬಗ್ಗೆ ಅಪೋಲೋ ಹೃದ್ರೋಗ ತಜ್ಞ ಆದಿತ್ಯ ಉಡುಪ ಪ್ರತಿಕ್ರಿಯಿಸಿ, ಭಾನುವಾರ ಮಧ್ಯಾಹ್ನ ಅರ್ಜುನ್ ಜನ್ಯ ಅವರು ಗ್ಯಾಸ್ಟ್ರಿಕ್, ತಲೆ ನೋವು, ಎದೆ ನೋವು ಹಾಗೂ ಬೆನ್ನು ನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ಆಗ ನಾವು ಅವರಿಗೆ ಚಿಕಿತ್ಸೆ ನೀಡಿದಾಗ ಅವರ ಗ್ಯಾಸ್ಟ್ರಿಕ್ ಸಮಸ್ಯೆ ಸರಿ ಹೋಯಿತು. ಮಂಗಳವಾರ ರಾತ್ರಿ ಮತ್ತೆ ಅವರಿಗೆ ಇಸಿಜಿ ಮಾಡಿಸಿದಾಗ ವರದಿಯಲ್ಲಿ ಕೆಲವು ವ್ಯತ್ಯಾಸಗಳು ಕಂಡು ಬಂತು. ಅಲ್ಲದೆ ಅರ್ಜುನ್ ಅವರಿಗೆ ಬೆನ್ನು, ಎದೆ ಹಾಗೂ ತಲೆ ನೋವು ಜಾಸ್ತಿಯಾಗಿತ್ತು. ಹಾಗಾಗಿ ಮತ್ತೆ ಇಸಿಜಿ ಮಾಡಿಸಿದ್ದೇವು ಎಂದರು. ಇದನ್ನೂ ಓದಿ: ಸಂಗೀತ ನಿರ್ದೇಶಕ ಅರ್ಜುನ್ ಜನ್ಯಗೆ ಹೃದಯಾಘಾತ

    ಇಸಿಜಿ ವರದಿ ಬಂದಾಗ ಅರ್ಜುನ್ ಅವರ ಬಳಿ ಹೋಗಿ ಆರೋಗ್ಯ ಹೇಗಿದೆ ಎಂದು ಕೇಳಿದ್ದೇವು. ಆಗ ಅವರು ಹೊಟ್ಟೆ ನೋವು ಕಡಿಮೆ ಆಗಿದೆ. ಆದರೆ ತುಂಬಾ ಬೆನ್ನು ಹಾಗೂ ತಲೆ ನೋವು ಇದೆ, ಸ್ವಲ್ಪ ಎದೆ ನೋವಾಗುತ್ತಿದೆ ಎಂದರು. ಇಸಿಜಿಯಲ್ಲಿ ಬಹಳ ವ್ಯತ್ಯಾಸ ಕಂಡಿದ್ದರಿಂದ ತಕ್ಷಣ ಆಂಜಿಯೋಗ್ರಾಂ ಪರೀಕ್ಷೆ ಮಾಡಿದ್ವಿ. ಆಗಲೇ ಶೇ. 99% ಹಾರ್ಟ್ ಬ್ಲಾಕೇಜ್ ಆಗಿದೆ ಎಂಬುದು ತಿಳಿಯಿತು. ತಕ್ಷಣ ಅವರ ಕುಟುಂಬಸ್ಥರು ಜೊತೆ ಮಾತನಾಡಿ ಆಂಜಿಯೋಪ್ಲ್ಯಾಸ್ಟಿ ಮಾಡಲಾಯಿತು. ಚಿಕಿತ್ಸೆ ನಡೆದ ಅವರು ಸಂಪೂರ್ಣ ನಿರಾಳರಾದರು ಎಂದು ಮಾಹಿತಿ ನೀಡಿದರು.

    ಮಂಗಳವಾರ ಬೆಳಗ್ಗೆ 2.30ಕ್ಕೆ ಅರ್ಜುನ್ ಅವರಿಗೆ ಆಂಜಿಯೋಪ್ಲ್ಯಾಸ್ಟಿ ಮಾಡಿದ್ದೇವೆ. ನಿಜವಾಗಿಯೂ 2 ಗಂಟೆ ತಡವಾಗಿದ್ರೆ ಕೆಟ್ಟ ಪರಿಣಾಮ ಎದುರಿಸಬೇಕಿತ್ತು. ಸದ್ಯ ಎಲ್ಲವು ಸರಿಯಾಗಿದೆ. ಚಿಕಿತ್ಸೆ ಪಡೆದು ಅವರನ್ನು ವಾರ್ಡ್ ಗೆ ಶಿಫ್ಟ್ ಮಾಡಿದ್ದೇವೆ. ಸದ್ಯಕ್ಕೆ ಅರ್ಜುನ್ ಜನ್ಯ ಕ್ಷೇಮವಾಗಿದ್ದಾರೆ ಎಂದು ಹೃದ್ರೋಗ ತಜ್ಞ ಆದಿತ್ಯ ಉಡುಪ ಹೇಳಿದ್ದಾರೆ.

  • ಸಂಗೀತ ನಿರ್ದೇಶಕ ಅರ್ಜುನ್ ಜನ್ಯಗೆ ಹೃದಯಾಘಾತ

    ಸಂಗೀತ ನಿರ್ದೇಶಕ ಅರ್ಜುನ್ ಜನ್ಯಗೆ ಹೃದಯಾಘಾತ

    ಮೈಸೂರು: ಮ್ಯಾಜಿಕಲ್ ಮ್ಯೂಸಿಕ್ ಕಂಪೋಸರ್ ಅರ್ಜುನ್ ಜನ್ಯ ಅವರಿಗೆ ಹೃದಯಾಘಾತ ಸಂಭವಿಸಿದ್ದು, ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಮಧ್ಯರಾತ್ರಿ ಮನೆಯಲ್ಲಿರುವಾಗ ಅರ್ಜುನ್ ಜನ್ಯ ಅವರಿಗೆ ಹೃದಯಾಘಾತ ಸಂಭವಿಸಿದೆ. ಕೂಡಲೇ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಸ್ಟಾರ್ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿರುವ ಅರ್ಜುನ್ ಜನ್ಯ ಹಲವು ಚಿತ್ರಗಳಿಗೆ ಮ್ಯೂಸಿಕ್ ನೀಡಿದ್ದಾರೆ. ಪ್ರತಿ ಸಿನಿಮಾಗಳಿಗೂ ಅರ್ಜುನ್ ಜನ್ಯಯವರ ಸಂಗೀತಕ್ಕಾಗಿ ನಿರ್ದೇಶಕರು ಕಾಯುತ್ತಾರೆ. ಸಂಗೀತ ನಿರ್ದೇಶನದ ಜೊತೆಗೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಗುರುತಿಸಿಕೊಂಡಿದ್ದಾರೆ.

    ಮ್ಯೂಸಿಕಲ್ ಪೈಲ್ವಾನ್ ಆಗಿರುವ ಅರ್ಜುನ್ ಜನ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. ಸಿನಿಮಾಗಳಿಗೆ ಸಂಗೀತ ನೀಡುವ ಜೊತೆಗೆ ಲೈವ್ ಕಾರ್ಯಕ್ರಮಗಳ ಮೂಲಕ ಕರುನಾಡಿನ ಜನತೆಗೆ ಹತ್ತಿರವಾಗಿರುವ ಅರ್ಜುನ್ ಜನ್ಯ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

  • ಅಂಧ ಸೋದರಿಯರಿಗೆ ಬೆಳಕಾದ ಜಗ್ಗೇಶ್

    ಅಂಧ ಸೋದರಿಯರಿಗೆ ಬೆಳಕಾದ ಜಗ್ಗೇಶ್

    ಬೆಂಗಳೂರು: ಅಂಧ ಸಹೋದರಿಯರ ಕಷ್ಟವನ್ನು ಆಲಿಸಿದ ನವರಸ ನಾಯಕ ಜಗ್ಗೇಶ್ ಅವರ ಬಡ ಕುಟುಂಬಕ್ಕೆ ಸಹಾಯದ ಹಸ್ತವನ್ನು ಚಾಚಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಪಮ ಶೋಗೆ ತುಮಕೂರಿನ ಮಧುಗಿರಿ ತಾಲೂಕಿನ ರತ್ನಮ್ಮ ಮತ್ತು ಮಂಜಮ್ಮ ಇಬ್ಬರು ಸಹೋದರಿಯರು ಬಂದಿದ್ದರು. ಈ ವೇಳೆ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದರು. ಇದೀಗ ಈ ಅಂಧ ಸಹೋದರಿಯರ ಬದುಕಿಗೆ ನವರಸ ಜಗ್ಗೇಶ್ ಬೆಳಕಾಗಿದ್ದಾರೆ.

    ಸಹೋದರಿಯ ನೋವಿನ ಕಥೆ ಕೇಳಿದ ನವರಸ ನಾಯಕ ಜಗ್ಗೇಶ್ ಅವರ ಕಷ್ಟಕ್ಕೆ ಸಹಾಯದ ಹಸ್ತ ಚಾಚಿದ್ದಾರೆ. ಸಹೋದರಿಯರ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ “ದೇವರ ಮಕ್ಕಳ ಸ್ಥಿತಿಕಂಡು ಭಾವುಕನಾದೆ. ತಡಮಾಡದೆ ಇವರಿಗೆ ಸೂರು ಕಲ್ಪಿಸಿಕೊಡುವಂತೆ ರಾಯರ ಪ್ರೇರಣೆಯಾಯಿತು. ಆ ಕಾರ್ಯಕ್ಕೆ ಶಿರಬಾಗಿ ಮಾಡಿಕೊಡಲು ಕೊರಟಗೆರೆ ಜಗ್ಗೇಶ್ ಅಭಿಮಾನಿಗಳ ಸಂಘದ ಫ್ರೆಂಡ್ಸ್ ಗ್ರೂಪ್‍ಗೆ ಜವಾಬ್ಧಾರಿ ನೀಡಿರುವೆ. ಈ ಕಲಾವಿದರ ಕೂಗು ರಾಯರ ಮಡಿಲು ಸೇರಿತು” ಎಂದು ಬರೆದುಕೊಂಡಿದ್ದಾರೆ.

    ಜಗ್ಗೇಶ್ ಅವರ ಈ ಮಾನವೀಯ ನಡೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಕೂಡ ಸಹೋದರಿಯರ ಸಹಾಯಕ್ಕೆ ಮುಂದಾಗಿದ್ದಾರೆ. ನನಗೆ ಶಕ್ತಿ ಇರುವವರೆಗೂ ನಿಮ್ಮ ಮನೆಗೆ ಪ್ರತಿ ತಿಂಗಳ ಊಟಕ್ಕೆ ಏನು ಬೇಕು ಅದು ನನ್ನ ಕಡೆಯಿಂದ ಸಿಗಲಿದೆ ಎಂದು ಭರವಸೆ ಕೊಟ್ಟಿದ್ದಾರೆ.

    https://www.instagram.com/p/B8alhdFpw-j/?igshid=1k84g3s74w787

    ಸಹೋದರಿಯರಿಗೆ ಹುಟ್ಟಿನಿಂದ ಕಣ್ಣಿಲ್ಲ. ಇವರು ಒಟ್ಟು ನಾಲ್ಕು ಜನ ಮಕ್ಕಳು, ಅವರಲ್ಲಿ ಇಬ್ಬರಿಗೆ ಕಣ್ಣಿಲ್ಲ. ಗಂಡು ಮಗ ಇದ್ದನು. ಆತನೂ ಕೂಡ ಕಾಯಿಲೆಯಿಂದ ಮೃತಪಟ್ಟಿದ್ದಾನೆ. ತಾಯಿಯೂ ಕೂಡ ಸಾವನ್ನಪ್ಪಿದು, ಅಜ್ಜಿ ಜೊತೆ ವಾಸವಾಗಿದ್ದಾರೆ. ತಂದೆಯೂ ಕಾಯಿಲೆಯಿಂದ ಬಳಲುತ್ತಿದ್ದಾರೆ. ಕಷ್ಟದಲ್ಲೂ ಅಂಧ ಸಹೋದರಿಯರು ಸಂಸಾರದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಊಟಕ್ಕಾಗಿ ರತ್ಮಮ್ಮ ಮತ್ತು ಮಂಜಮ್ಮ ಊರಿನ ದಂಡಿನ ಮಾರಮ್ಮ ದೇವಾಲಯದ ಮುಂದೆ ಹಾಡು ಹೇಳಲು ಶುರು ಮಾಡಿದರು. ಅಲ್ಲಿಗೆ ಬರುವ ಭಕ್ತರು ನೀಡುವ ಹಣದಿಂದ ಸಂಸಾರವನ್ನು ನಡೆಸುತ್ತಿದ್ದಾರೆ.

     

  • 3 ದಿನ ನಡೆದ ಪ್ರವಾಸಿ ಉತ್ಸವಕ್ಕೆ ತೆರೆ- ಅರ್ಜುನ್ ಜನ್ಯ, ಅನುರಾಧ ಭಟ್ ಕಾರ್ಯಕ್ರಮಕ್ಕೆ ಹುಚ್ಚೆದ್ದು ಕುಣಿದ ಪ್ರೇಕ್ಷಕರು

    3 ದಿನ ನಡೆದ ಪ್ರವಾಸಿ ಉತ್ಸವಕ್ಕೆ ತೆರೆ- ಅರ್ಜುನ್ ಜನ್ಯ, ಅನುರಾಧ ಭಟ್ ಕಾರ್ಯಕ್ರಮಕ್ಕೆ ಹುಚ್ಚೆದ್ದು ಕುಣಿದ ಪ್ರೇಕ್ಷಕರು

    ಮಡಿಕೇರಿ: ಭಾನುವಾರ ನಗರದ ಗಾಂಧಿ ಮೈದಾನದಲ್ಲಿ ಕೊಡಗು ಪ್ರವಾಸಿ ಉತ್ಸವ ಕಾರ್ಯಕ್ರಮಕ್ಕೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಗಾಯಕಿ ಅನುರಾಧ ಭಟ್ ಮತ್ತು ತಂಡ ನಡೆಸಿಕೊಟ್ಟ ರಸಸಂಜೆ ಕಾರ್ಯಕ್ರಮ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು.

    ಇದೇ ಮೊದಲ ಬಾರಿಗೆ ಪ್ರವಾಸೋದ್ಯಮ ಇಲಾಖೆ ಕೊಡಗು ಜಿಲ್ಲಾಡಳಿತ ವತಿಯಿಂದ ನಡೆಸಿದ ಪ್ರವಾಸಿ ಉತ್ಸವಕ್ಕೆ ನೀರಿಕ್ಷೆಗೂ ಮೀರಿ ಕೊಡಗಿನ ಜನತೆ ಸೇರಿದಂತೆ ದೇಶ ವಿದೇಶದ ಜನರು ಭಾಗವಹಿಸಿ ಸಖತ್ ಎಂಜಾಯ್ ಮಾಡಿದ್ದಾರೆ. ಇದನ್ನೂ ಓದಿ: ಇಂದಿನಿಂದ 3 ದಿನ ಮಂಜಿನ ನಗರಿಯಲ್ಲಿ ಪ್ರವಾಸಿ ಉತ್ಸವ- ಕಿರುತೆರೆ ಕಲಾವಿದರು ಭಾಗಿ

    ವೇದಿಕೆ ಮೇಲೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಆಗಮಿಸುತ್ತಿದ್ದಂತೆ ಪ್ರೇಕ್ಷಕರ ಮೊಗದಲ್ಲಿ ಮಂದಹಾಸ ಮೂಡಿತ್ತು. ಅರ್ಜುನ್ ಜನ್ಯ ಅವರ ತಂಡ ಕಾರ್ಯಕ್ರಮ ನೀಡಿ ಮಡಿಕೇರಿ ಜನತೆಯ ಮೆಚ್ಚುಗೆಗೆ ಪಾತ್ರರಾದರು. ಇದನ್ನೂ ಓದಿ: ಕೊಡಗು ಉತ್ಸವ- ರಾಜಾಸೀಟ್‍ನಲ್ಲಿ ಫಲಪುಷ್ಪಗಳ ಕಲರವ

    ಮೂರು ದಿನಗಳ ಕಾಲ ನಡೆದ ಈ ಕೊಡಗು ಉತ್ಸವಕ್ಕೆ ರಾಜಾಸೀಟ್‍ನಲ್ಲಿ ಬಗೆ ಬಗೆಯ ಹೂಗಳಿಂದ ಹೂಗಳಿಂದ ಕಲಾಕೃತಿಗಳನ್ನು ಮಾಡಲಾಗಿತ್ತು. ಬಗೆ ಬಗೆಯ ಹೂಗಳಿಂದ ರಾಜಾಸೀಟ್ ಭೂ ಲೋಕದ ಸ್ವರ್ಗದಂತೆ ಕಂಗೊಳಿಸುತ್ತಿದ್ದು, ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿತ್ತು.

    ಪ್ರವಾಸೋದ್ಯಮ ಇಲಾಖೆ, ತೋಟಗಾರಿಕೆ ಹಾಗೂ ಪಶುಸಂಗೋಪನಾ ಇಲಾಖೆ ಆಶ್ರಯದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ಮಂಜಿನ ನಗರಿ ಮಡಿಕೇರಿಯಲ್ಲಿ ಪ್ರವಾಸಿ ಉತ್ಸವ ನಡೆಸಿತ್ತು. ಆಗಸ್ಟ್ ನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಕಹಿ ನೆನಪಿನಿಂದ ಜಿಲ್ಲೆಯ ಜನತೆಯನ್ನು ಹೊರತರಲು ಹಾಗೂ ಕುಸಿದು ಬಿದ್ದಿರುವ ಪ್ರವಾಸೋದ್ಯಮವನ್ನು ಪುನಶ್ಚೇತನಗೊಳಿಸಲು ಕೊಡಗು ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರವಾಸಿ ಉತ್ಸವವನ್ನು ಆಯೋಜಿಸಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv