Tag: ಅರ್ಜುನ

  • ಆನೆ ಅರ್ಜುನನ ಸಮಾಧಿ ಪರ ದರ್ಶನ್ ಧ್ವನಿ : ಮೆಚ್ಚುಗೆಯ ಮಹಾಪೂರ

    ಆನೆ ಅರ್ಜುನನ ಸಮಾಧಿ ಪರ ದರ್ಶನ್ ಧ್ವನಿ : ಮೆಚ್ಚುಗೆಯ ಮಹಾಪೂರ

    ಸರಾ ಸಡಗರದ ವೇಳೆ ಬಹಳಷ್ಟು ಬಾರಿ ಅಂಬಾರಿ ಹೊತ್ತು ತನ್ನ ಗಜಗಾಂಭೀರ್ಯಕ್ಕೆ ಹೆಸರುವಾಸಿಯಾಗಿದ್ದ ಅರ್ಜುನನ ಸಮಾಧಿ ಕುರಿತಂತೆ ನಟ ದರ್ಶನ್ ನಿನ್ನೆಯಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಧ್ವನಿ ಎತ್ತಿದ್ದರು. ಸಮಾಧಿ ಸಲ್ಲಬೇಕಾದ ಗೌರವ ನೀಡಿ ಎಂದು ಬರೆದುಕೊಂಡಿದ್ದರು. ನಟನ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ದರ್ಶನ್ ಅವರ ಪ್ರಾಣಿ ಪ್ರೀತಿಗೆ ಅಭಿಮಾನಿಗಳು ಮತ್ತು ಪ್ರಾಣಿ ಪ್ರಿಯರು ಜೈ ಹೋ ಎಂದಿದ್ದಾರೆ.

    ದರ್ಶನ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ, ಕಳೆದ ವರ್ಷ ನಡೆದ ಕಾಡಾನೆ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿರುವುದು ತಿಳಿದೇ ಇದೆ. ಆತನ ಸಮಾಧಿಗೆ (Samadhi) ಯಾರು ದಿಕ್ಕು-ದೆಸೆ ಇಲ್ಲದಂತೆ ಭಾಸವಾಗುತ್ತಿದೆ. ಆತನಿಗೆ ಸಲ್ಲಬೇಕಾದ ಗೌರವ ಆದಷ್ಟು ಬೇಗ ದೊರೆಯಲಿ. ಇನ್ನೇನು ಮಳೆಗಾಲ ಶುರುವಾಗುವ ಮುನ್ನ ಇದಕ್ಕೊಂದು ಒಳ್ಳೆ ವ್ಯವಸ್ಥೆಯಾಗಲಿ ಎಂಬ ಕೋರಿಕೆ ನಮ್ಮದು ಎಂದು ನಟ ದರ್ಶನ್ (Darshan) ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ಅರ್ಜುನ್ ಗೆ ಸಿಗಬೇಕಾದ ಗೌರವವನ್ನು ಕೂಡಲೇ ಸಲ್ಲಿಸಬೇಕು ಎಂದು ದರ್ಶನ್ ಮನವಿ ಮಾಡಿಕೊಂಡಿದ್ದಾರೆ. ಈ ಮೂಲಕ ಮತ್ತೊಮ್ಮೆ ಅವರು ಪ್ರಾಣಿಗಳ ಮೇಲಿನ ಪ್ರೀತಿಯನ್ನು ತೋರಿಸಿದ್ದಾರೆ.

    ಸ್ವತಃ ಪ್ರಾಣಿ ಪ್ರಿಯರೂ ಆಗಿರುವ ದರ್ಶನ್, ಮೈಸೂರು ಮೃಗಾಲಯ ಸೇರಿದಂತೆ ನಾನಾ ಮೃಗಾಲಯದಲ್ಲಿರುವ ಪ್ರಾಣಿಗಳನ್ನು ಅವರು ದತ್ತು ಪಡೆದಿದ್ದಾರೆ. ಜೊತೆಗೆ ಮನೆಯಲ್ಲೂ ಹಲವು ರೀತಿಯ ಪ್ರಾಣಿ ಪಕ್ಷಿಗಳನ್ನು ಸಾಕಿದ್ದಾರೆ. ಅದರಲ್ಲೂ ಆನೆಗಳೆಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಹಾಗಾಗಿಯೇ ತಮ್ಮ ಕಾಟೇರ ಸಿನಿಮಾವನ್ನು ಹುತಾತ್ಮ ಆನೆ (Elephant) ಅರ್ಜುನ್ (Arjun) ಗೆ ಅರ್ಪಿಸಿದ್ದಾರೆ.

     

    ಸಿನಿಮಾ ಶುರುವಾಗುವ ಮುನ್ನ ‘ನಾಡ ದೇವಿ ಚಾಮುಂಡಿಯ ಅಂಬಾರಿಯನ್ನು ಹೊತ್ತು ದಸರೆಯ ವೈಭವವನ್ನು ಜಗತ್ತಿನಾದ್ಯಂತ ಕಣ್ತುಂಬಿಸಿ ಕಣ್ಮರೆಯಾದ ದೃತ್ಯ ಮತ್ತು ದೈವ ಜೀವ ಅರ್ಜುನ ಇದಕ್ಕೆ ನಮ್ಮ ಕಾಟೇರ ಚಿತ್ರ ಅರ್ಪಣೆ’ ಎಂದು ಬರೆಯಲಾಗಿದೆ. ಈ ಮೂಲಕ ಅರ್ಜುನ್ ಗೆ ಗೌರವ ನೀಡಲಾಗಿದೆ.

  • ಅರ್ಜುನನ ಕಾಲಿಗೆ ಗುಂಡೇಟು ಬಿದ್ದಿಲ್ಲ, ಯಾವುದೇ ಲೋಪ ಆಗಿಲ್ಲ: ವೈದ್ಯ ರಮೇಶ್ ಸ್ಪಷ್ಟನೆ

    ಅರ್ಜುನನ ಕಾಲಿಗೆ ಗುಂಡೇಟು ಬಿದ್ದಿಲ್ಲ, ಯಾವುದೇ ಲೋಪ ಆಗಿಲ್ಲ: ವೈದ್ಯ ರಮೇಶ್ ಸ್ಪಷ್ಟನೆ

    – ಕಾರ್ಯಾಚರಣೆಯ ಸಂಪೂರ್ಣ ವಿವರ ಹಂಚಿಕೊಂಡ ವನ್ಯಜೀವಿ ವೈದ್ಯ

    ಹಾಸನ: ಯಾವುದೇ ಕಾರಣದಿಂದ ಅರ್ಜುನನ (Arjuna) ಕಾಲಿಗೆ ಗುಂಡೇಟು ಬಿದ್ದಿಲ್ಲ. ನಮ್ಮ ಕಾರ್ಯಾಚರಣೆ ತಂಡದ ಯಾರ ಬಳಿಯು ಬಂದೂಕು ಇರಲಿಲ್ಲ. ನಮ್ಮ ಸಿಬ್ಬಂದಿ ಬಳಿ ಇದ್ದದ್ದು ಡಬಲ್ ಬ್ಯಾರಲ್ ಚರ್ರೆ ಕೋವಿ ಮಾತ್ರ. ಅದರಲ್ಲಿ ಹಾರಿದ ಚರ‍್ರೆಯಿಂದ ಆನೆ ಸಾಯೋದಿಲ್ಲ. ಇದನ್ನ ಕಾಡಾನೆ ಹೆದರಿಸಲು ಮಾತ್ರ ಬಳಕೆ ಮಾಡುತ್ತೇವೆ ಎಂದು ವನ್ಯಜೀವಿ ವೈದ್ಯ ಡಾ.ರಮೇಶ್ (Dr.Ramesh) ಸ್ಪಷ್ಟನೆ ನೀಡಿದ್ದಾರೆ.

    ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ದಸರಾ ಆನೆ ಅರ್ಜುನನ ಸಾವು ಪ್ರಕರಣದ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅರ್ಜುನ ತಾನು ಪ್ರಾಣ ಬಿಟ್ಟು ನಮ್ಮನ್ನ ಉಳಿಸಿದ್ದಾನೆ. ನಾನು ನಿತ್ಯ ಹೊರ ಬರುವಾಗ ಅರ್ಜುನನಿಗೆ ಕೈ ಮುಗಿದು ಬರಬೇಕು. ನಾವು ಬದುಕಿರೋದು ಅರ್ಜುನನಿಂದ ಎಂದು ಅರ್ಜುನನ ಸಾವು ನೆನೆದು ಭಾವುಕರಾದರು. ಕಾರ್ಯಾಚರಣೆ ದಿನ ಅಂದರೆ ಡಿಸೆಂಬರ್ 4 ರಂದು ನಾನು, ಆನೆ ಮಾವುತ ವಿನು, ಹಾಗೂ ಕರ್ನಾಟಕ ಭೀಮ ಆನೆ ಮಾವುತ ಗುಂಡ ಅರ್ಜುನನ ಮೇಲೆ ಇದ್ದೆವು. ಪ್ರಶಾಂತ್ ಆನೆ ಮೇಲೆ ಕೊಡಗಿನ ಡಿಆರ್‌ಎಫ್‌ಓ ರಂಜನ್ ಇದ್ದರು. ವಿಕ್ರಾಂತ್ ಹೆಸರಿನ ಒಂದು ಹಾಗೂ ಮತ್ತೊಂದು ಸಲಗ ಸೇರಿ ಎರಡು ಆನೆಗಳ ಸೆರೆಗೆ ಟಾರ್ಗೆಟ್ ಫಿಕ್ಸ್ ಆಗಿತ್ತು ಎಂದು ಕಾರ್ಯಾಚರಣೆಯ ಇಂಚಿಂಚು ಮಾಹಿತಿಯನ್ನು ಬಿಚ್ಚಿಟ್ಟರು. ಇದನ್ನೂ ಓದಿ: 5 ಕಿ.ಮೀ. ಹೊತ್ತು, ಬೆಟ್ಟದಿಂದ ಬೆಟ್ಟಕ್ಕೆ ಹಗ್ಗ ಕಟ್ಟಿ ಟೆಕ್ಕಿ ಮೃತದೇಹ ತಂದ್ರು!

    ವಿಕ್ರಾಂತ್ ಆನೆ ಎದುರಾದರೆ ನಾನು ಹಾಗೂ ಇನ್ನೊಂದು ಆನೆ ಎದುರಾದರೆ ರಂಜನ್ ಅರವಳಿಕೆ ಮದ್ದು ನೀಡುವ ನಿರ್ಧಾರ ಆಗಿತ್ತು. ಅದರಂತೆ ನಾವು ಕಾಡಿನೊಳಗೆ ಎಂಟ್ರಿ ಆದಾಗ ಒಂದು ಆನೆಯ ಗುಂಪು ಕಾಣಿಸಿತು. ಅದರಲ್ಲಿ ವಿಕ್ರಾಂತ್ ಆನೆ ಇರಲಿಲ್ಲ. ನಾವು 400 ಮೀಟರ್ ಮುಂದೆ ಹೋದಾಗ ಒಂದು ಆನೆ ಕಾಣಿಸಿತು. ಕಾಡಿನಲ್ಲಿ ಲಂಟಾನ ಹೆಚ್ಚಾಗಿ ಬೆಳೆದಿದ್ದರಿಂದ ಆನೆಯ ಮುಖ ಕಾಣಲಿಲ್ಲ. ಆನೆಯ ಹಿಂಬದಿಯ ಸ್ವಲ್ಪ ಭಾಗ ಕಾಣುತ್ತಿದ್ದಾಗ ಅದು ಸಣ್ಣ ಆನೆ ಎಂದು ಭಾವಿಸಿದೆವು. ಅಲ್ಲಿರುವ ಆನೆ ನಮ್ಮ ಟಾರ್ಗೆಟ್ ಆನೆಯಾ ಅಥವಾ ಹೆಣ್ಣಾನೆಯಾ ಎಂಬುದು ಖಾತ್ರಿ ಆಗಬೇಕಿತ್ತು. ನಾವು ಮೇಲಿದ್ದೆವು, ಆ ಒಂಟಿಸಲಗ ಕೆಳಗೆ ಇತ್ತು. ಇದು ದೊಡ್ಡ ಆನೆ ಎಂದು ಖಾತ್ರಿ ಆದಾಗ ಆನೆಗೆ ಸುತ್ತುವರಿದೆವು. ಇದನ್ನು ಡಾಟ್ ಮಾಡುವ ಬಗ್ಗೆ ರಂಜನ್ ಮತ್ತು ನಾವು ಮಾತನಾಡಿಕೊಂಡು ನಾನು ಡಾಟ್ ಮಾಡುತ್ತೇನೆ ಎಂದು ಹೇಳಿ ನಾನು ನನ್ನ ಅರವಳಿಕೆ ಸಜ್ಜು ಮಾಡಿಕೊಂಡೆ. ಪ್ರಸರ್ ಫಿಕ್ಸ್ ಮಾಡಿ ಡಾಟ್ ಮಾಡಲು ರೆಡಿಯಾಗಿದ್ದ ವೇಳೆಗೆ ಆ ಆನೆ ಏಕಾಏಕಿ ದಾಳಿ ಮಾಡಿತು. ಅದು ಮುಖವನ್ನು ಮುಂದೆ ಮಾಡಿ ಬಂದಿದ್ದರಿಂದ ನಾನು ಮುಖಕ್ಕೆ ಡಾಟ್ ಮಾಡಲು ಆಗಲಿಲ್ಲ ಎಂದರು. ಇದನ್ನೂ ಓದಿ: ನಮ್ಮ ಪಕ್ಷದ ಮುಖಂಡರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ: ಬೋಸರಾಜು

    ಯಾವುದೇ ಆನೆಯ ಮುಖದ ಭಾಗಕ್ಕೆ, ಹೊಟ್ಟೆಗೆ ಇಂಜೆಕ್ಷನ್ ಹೊಡೆಯುವ ಹಾಗಿಲ್ಲ. ಅಕಸ್ಮಾತ್ ಹಾಗೆ ಇಂಜೆಕ್ಟ್ ಆದರೆ ಆನೆಯ ಜೀವಕ್ಕೆ ಅಪಾಯ ಇದೆ. ಹಾಗಾಗಿ ಆಗ ಡಾಟ್ ಮಾಡಲು ಆಗಲಿಲ್ಲ. ಏಕಾಏಕಿ ಅರ್ಜುನನ ಮೇಲೆ ಆನೆ ದಾಳಿ ಮಾಡಿದಾಗ ನಾವೆಲ್ಲಾ ಕೆಳಗೆ ಬೀಳುವಂತೆ ಆದೆವು. ಈ ವೇಳೆಯಲ್ಲಿ ನನ್ನ ಕೈಯಲ್ಲಿದ್ದ ಅರವಳಿಕೆ ಟ್ರಿಗರ್ ಆಗಿ ಫೈರ್ ಆಗಿದೆ. ಅದು ಆಕಾಶದ ಕಡೆಗೆ ಹಾರಿ ಕೆಳಗೆ ಬೀಳುವಾಗ ಪ್ರಶಾಂತ್ ಕಾಲಿಗೆ ಬಿದ್ದಿದೆ. ಅದು ನನಗೆ ಮಾಹಿತಿ ಇರಲಿಲ್ಲ. ಪ್ರಶಾಂತ್‌ಗೆ ಅರವಳಿಕೆ ಮದ್ದು ಬಿದ್ದ ಬಗ್ಗೆ ಗೊತ್ತಾದ ಕೂಡಲೇ ನಾನು ಓಡಿದೆ. ಅಷ್ಟರಲ್ಲಿ ಅರ್ಜುನ ಕಾಡಾನೆ ಜೊತೆ ಫೈಟ್ ಮಾಡಿ ಓಡಿಸಿತ್ತು. ನಾವು ಪ್ರಶಾಂತ್ ಆನೆ ಬಳಿ ಬಂದು ಅಲ್ಲಿ ರಿವರ್ಸ್ ಇಂಜೆಕ್ಷನ್ ಕೊಡುವ ವೇಳೆಗೆ ಕಾಡಾನೆ ಮತ್ತೆ ಬಂದು ಜಗಳಕ್ಕೆ ಬಿದ್ದಿದೆ. ಅರ್ಜುನನ ಮಾವುತ ವಿನು ಕೂಡ ನನ್ನೊಟ್ಟಿಗೆ ಇದ್ದಿದ್ದರಿಂದ ಅಲ್ಲಿ ಮತ್ತೊಬ್ಬ ಹುಡುಗ ಅರ್ಜುನನ ಮೇಲಿದ್ದ. ನಾವು ವಾಪಸ್ ಓಡುವ ವೇಳೆಗೆ ಅಲ್ಲಿ ಎರಡೂ ಆನೆಗಳ ನಡುವೆ ಜಗಳ ಶುರುವಾಗಿತ್ತು. ನಾನು ಮತ್ತೊಂದು ಸುತ್ತು ಅರವಳಿಕೆ ಲೋಡ್ ಮಾಡಿ ಕಾಡಾನೆಗೆ ಹೊಡೆದೆ. ಆದರೆ ಆ ಆನೆ ಕೆಳಗೆ ಬೀಳಲಿಲ್ಲ. ಅಷ್ಟು ಹೊತ್ತಿಗೆ ಅರ್ಜುನನಿಗೆ ಗಂಭೀರವಾಗಿ ಗಾಯವಾಗಿ ಕೆಳಗೆ ಬಿದ್ದಿದ್ದ. ಈ ಆನೆಗಳ ಕಾಳಗ ಶುರುವಾದಾಗ ಬೇರೆ ಆನೆಗಳು ಹೆದರಿ ಓಡಿವೆ ಎಂದು ತಿಳಿಸಿದರು. ಇದನ್ನೂ ಓದಿ: ಆಸ್ತಿ ಬರೆಯಲು ನಿರಾಕರಿಸಿದ ಅಮ್ಮನ ಶಿರಚ್ಛೇದ ಮಾಡಿದ ಪಾಪಿ ಪುತ್ರ!

    ಅರ್ಜನನ ಕಾಲಿಗೆ ಕೂಳೆ ಹೊಡೆದು ಗಾಯ ಆಗಿತ್ತು. ಅದನ್ನ ಮಾವುತ ವಿನು ಅಲ್ಲೇ ಗಮನಿಸಿದ್ದಾನೆ. ಕಾರ್ಯಾಚರಣೆ ವೇಳೆ ಯಾವುದೇ ಲೋಪ ಆಗಿಲ್ಲ. ಜನರು ದಸರಾ ಅಂಬಾರಿ ಹೊತ್ತಾಗ ಮಾತ್ರ ಅರ್ಜುನನನ್ನು ನೋಡಿರುತ್ತಾರೆ. ನಾವು ನಿತ್ಯ ಅವನ ಜೊತೆ ಇರೋರು. ನಮಗೆ ಆಗಿರುವ ನೋವು ಹೇಳಲು ಆಗಲ್ಲ. ನಾನು ಇದುವರೆಗೆ 65 ಆನೆ ಸೆರೆ ಕಾರ್ಯಾಚರಣೆ ಮಾಡಿದ್ದೇನೆ. 40 ಆನೆಗಳಿಗೆ ನಾನೇ ಅರವಳಿಕೆ ಡಾಟ್ ಮಾಡಿದ್ದೇನೆ. 7 ಹುಲಿ, 50ಕ್ಕೂ ಹೆಚ್ಚು ಚಿರತೆ, 10 ಕರಡಿಗೆ ಡಾಟ್ ಮಾಡಿದ್ದೇನೆ. ಎಲ್ಲವೂ ಕೂಡ ಯೋಜನೆಯಂತೆಯೇ ನಡೆಯಿತು. ಆದರೆ ಕಾಡಾನೆ ದಾಳಿಯಿಂದ ಅರ್ಜುನ ಮೃತಪಟ್ಟಿದೆ. ಬಹುಶಃ ಮಾವುತ ವಿನು ಅರ್ಜುನನ ಮೇಲೆ ಇದ್ದಿದ್ದರೆ ಹೋರಾಟ ಮಾಡಬಹುದಿತ್ತಾ ಅಥವಾ ಆಗಲೂ ಹೀಗೆ ಆಗುತ್ತಿತ್ತಾ ಎಂದು ಹೇಳೋದು ಕಷ್ಟ ಎಂದು ಅರ್ಜುನನ ಸಾವಿನ ಬಗ್ಗೆ ಹರಡಿದ್ದ ಹಲವು ವದಂತಿಗಳಿಗೆ ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಉಪ್ಪಿನಂಗಡಿಯಲ್ಲಿ ಒಂದೇ ಕೋಮಿನ ಜೋಡಿಯನ್ನು ತಡೆದು ಹಲ್ಲೆಗೆ ಯತ್ನ!

  • ಸಕಲೇಶಪುರದ ಗ್ರಾಮದೊಳಗೆ ಎಂಟ್ರಿ ಕೊಟ್ಟ ಗಜಪಡೆ – ಗುಂಪಿನಲ್ಲಿ ಸೇರಿಕೊಂಡ ಅರ್ಜುನನನ್ನು ಕೊಂದ ಪುಂಡಾನೆ

    ಸಕಲೇಶಪುರದ ಗ್ರಾಮದೊಳಗೆ ಎಂಟ್ರಿ ಕೊಟ್ಟ ಗಜಪಡೆ – ಗುಂಪಿನಲ್ಲಿ ಸೇರಿಕೊಂಡ ಅರ್ಜುನನನ್ನು ಕೊಂದ ಪುಂಡಾನೆ

    ಹಾಸನ: ಹಾಡಹಗಲೇ ಸಕಲೇಶಪುರದ (Sakleshpura) ಚಿಕ್ಕಕಲ್ಲೂರು ಗ್ರಾಮಕ್ಕೆ ಆನೆಗಳ ಹಿಂಡು (Elephant) ಲಗ್ಗೆ ಇಟ್ಟಿವೆ. ಈ ಗುಂಪಿನಲ್ಲಿ ಅರ್ಜುನನನ್ನು ತಿವಿದು ಕೊಂದಿರುವ ಪುಂಡಾನೆಯೂ ಸೇರಿಕೊಂಡಿದ್ದು ಜನರಲ್ಲಿ ಆತಂಕ ಮೂಡಿಸಿದೆ.

    ಆನೆಗಳ ಗುಂಪಿನಲ್ಲಿ ನಾಲ್ಕು ಸಲಗಗಳು ಹಾಗೂ ಒಂದು ಮರಿ ಸೇರಿಕೊಂಡಿವೆ. ಆನೆಗಳು ಓಡಾಡುವ ವೀಡಿಯೋ ಮೊಬೈಲ್‍ನಲ್ಲಿ ಸೆರೆಯಾಗಿದ್ದು, ಈ ಗುಂಪಿನಲ್ಲಿ ಅರ್ಜುನನ್ನು ಕೊಂದಿರುವ ಆನೆ ಸೇರಿಕೊಂಡಿರುವುದನ್ನು ಅರಣ್ಯ ಇಲಾಖೆಯ (Forest Department) ಆರ್‌ಆರ್‌ಟಿ ಹಾಗೂ ಇಟಿಎಫ್ ಸಿಬ್ಬಂದಿ ಗುರುತಿಸಿದ್ದಾರೆ. ಆನೆಗಳು ಈಗ ಮರಡಿಕೆರೆ ಗ್ರಾಮದ ಬಳಿ ಬೀಡುಬಿಟ್ಟಿದ್ದು, ಗ್ರಾಮಸ್ಥರಿಗೆ ಎಚ್ಚರಿಕೆಯಿಂದ ಇರುವಂತೆ ಅರಣ್ಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅರ್ಜುನನ ಸಾವಿನ ರಹಸ್ಯ ಬಿಚ್ಚಿಟ್ಟ ಮಾವುತನ ಬಾಮೈದಾ- ಮತ್ತೊಂದು ಆಡಿಯೋ ವೈರಲ್

    ಕಾಡಾನೆಗಳಿಂದ ಯಸಳೂರು, ಚಿಕ್ಕಕಲ್ಲೂರು, ಮರಡಿಕೆರೆ ಗ್ರಾಮಸ್ಥರು ಆತಂಕಗೊಂಡಿದ್ದು, ಜೀವ ಭಯದಿಂದ ಕಾಫಿ ತೋಟದ ಕೆಲಸಕ್ಕೆ ಹೋಗಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ವಾಹನ ಸವಾರರು ಜೀವಭಯದಲ್ಲಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಅರ್ಜುನನನ್ನು ಕಳೆದುಕೊಂಡಿದ್ದು ಮಗನನ್ನೇ ಕಳೆದುಕೊಂಡಂತಾಗಿದೆ: ಮಾವುತನ ಕಣ್ಣೀರು

  • ಅರ್ಜುನನ ಸಾವಿನ ರಹಸ್ಯ ಬಿಚ್ಚಿಟ್ಟ ಮಾವುತನ ಬಾಮೈದಾ- ಮತ್ತೊಂದು ಆಡಿಯೋ ವೈರಲ್

    ಅರ್ಜುನನ ಸಾವಿನ ರಹಸ್ಯ ಬಿಚ್ಚಿಟ್ಟ ಮಾವುತನ ಬಾಮೈದಾ- ಮತ್ತೊಂದು ಆಡಿಯೋ ವೈರಲ್

    ಹಾಸನ: ಅಂಬಾರಿ ಆನೆ (Elephant) ಅರ್ಜುನನ (Arjuna) ಸಾವು ಪ್ರಕರಣದಲ್ಲಿ ಮತ್ತೊಂದು ಆಡಿಯೋ ವೈರಲ್ ಆಗಿದೆ. ಅರ್ಜುನನ ಮಾವುತ ವಿನು ಅವರ ಬಾಮೈದಾ ರಾಜು ಅವರು, ಹೋರಾಟಗಾರರೊಬ್ಬರ ಜೊತೆ ಮಾತಾಡಿರುವ ಆಡಿಯೋ ವೈರಲ್ ಆಗಿದ್ದು, ಡಾ.ರಮೇಶ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.

    ಕಾಡಾನೆಯೊಂದಿಗೆ ಕಾದಾಟದ ವೇಳೆ ಅದಕ್ಕೆ ನೀಡಬೇಕಾದ ಅರವಳಿಕೆಯನ್ನು ಪ್ರಶಾಂತ ಆನೆಗೆ ನೀಡಿದ್ದಾರೆ. ಇದರಿಂದ ಅದು ನೆಲಕ್ಕೆ ಬಿದ್ದಿದೆ. ಈ ವೇಳೆ ಅರ್ಜುನನನ್ನು ವಾಪಸ್ ಕರೆದುಕೊಂಡು ಬರಬಹುದಿತ್ತು. ಹಾಗೆ ಮಾಡಿದ್ದರೆ ಆನೆ ಉಳಿಯುತ್ತಿತ್ತು. ಪ್ರಶಾಂತ ಆನೆ ಬಿದ್ದಿದ್ದಕ್ಕಾಗಿ ಅದನ್ನು ವಾಪಸ್ ಕರೆದುಕೊಂಡು ಅಲ್ಲೇ ಉಳಿದುಕೊಂಡಿದ್ದಾರೆ. ಈ ವೇಳೆ ಕಾಡಾನೆ ಮತ್ತೆ ಕಾದಾಟಕ್ಕೆ ಬಂದಿದೆ. ಈ ಸಮಯದಲ್ಲಿ ಕಾಡಾನೆಗೆ ಗುಂಡು ಹಾರಿಸಲು ಹೋಗಿ ಅರ್ಜುನನಿಗೆ ಹೊಡೆದಿದ್ದಾರೆ. ನಮ್ಮ ಆನೆ ಅದೇ ಕಾಲಲ್ಲಿ ಕುಂಟಿಕೊಂಡು ಕಾದಾಟ ನಡೆಸಿದೆ. ಹೊಟ್ಟೆ ಬಳಿ ಗಾಯವಾಗಿದ್ದು ಅದೇನು ಎಂದು ಗೊತ್ತಾಗಲಿಲ್ಲ ಎಂದು ಹೋರಾಟಗಾರರೊಂದಿಗೆ ಅವರು ಮಾತಾಡಿದ್ದಾರೆ. ಇದನ್ನೂ ಓದಿ: ಮೋದಿಯನ್ನ ಹೆಸರಿಸಬಹುದು ಅಂತ ಊಹಿಸೋಕು ಸಾಧ್ಯವಿಲ್ಲ – ಹಾಡಿ ಹೊಗಳಿದ ಪುಟಿನ್‌

    ಕಾರ್ಯಾಚರಣೆ ವೇಳೆ, ಅಲ್ಲಿರುವ ವಾಚರ್‌ಗಾರ್ಡೋ ಯಾರೋ ಗೊತ್ತಿಲ್ಲ ಗಾಬರಿಯಲ್ಲಿ ಕಾಡಾನೆಗೆ ಗುಂಡು ಹಾರಿಸಲು ಹೋಗಿ ಅರ್ಜುನನಿಗೆ ಹೊಡೆದಿದ್ದಾರೆ. ಅಲ್ಲದೇ ಸಾಕಾನೆಗೆ ಡಾ.ರಮೇಶ್ ಅವರು ಗಾಬರಿಯಲ್ಲಿ ಅರವಳಿಕೆ ಹೊಡೆದುಬಿಟ್ಟಿದ್ದಾರೆ. ಇದರಿಂದ ಪ್ರಶಾಂತ ಕುಸಿದು ಬಿತ್ತು ಎಂದಿದ್ದಾರೆ.

    ನಾನು ಫೋನ್ ಮಾಡಿ ಅಪ್ಪನಿಗೆ ಹುಷಾರಿಲ್ಲ, ನನಗೆ ಬರಲು ಆಗಲ್ಲ. ಅನಿಲ್ ತಮ್ಮನು ಮರದಿಂದ ಬಿದ್ದು ಸಮಸ್ಯೆಯಾಗಿದೆ. ವಿನು ಅಣ್ಣ ಒಬ್ಬರೇ ಆಗ್ತಾರೆ ಆನೆ ಕಳಿಸಿಕೊಡಿ ಎಂದಿದ್ದೆ. ಈ ವೇಳೆ ಆನೆಯನ್ನು ಕಳಿಸಲು ಆಗುವುದಿಲ್ಲ ಎಂದು ರಮೇಶ್ ಹೇಳಿದ್ದರು. ನೀವು ಏನು ಮಾಡ್ತಿರೋ ಬಿಡ್ತಿರೋ ಗೊತ್ತಿಲ್ಲ. ನನ್ನ ಕೆಲಸ ಹೋದರೂ ಪರವಾಗಿಲ್ಲ. ಆ ರಮೇಶ್ ಆನೆ ವೈದ್ಯರಾಗಿ ಇರಬಾರದು. ಅವರು ನರಕ ಅನುಭವಿಸಬೇಕು, ಆ ಥರ ಮಾಡಿ ಕೊಡಣ್ಣ ನಿನ್ ಕಾಲಿಗೆ ಬೀಳ್ತಿನಿ ಎಂದು ಹೋರಾಟಗಾರರ ಬಳಿ ಹೇಳಿಕೊಂಡಿದ್ದಾರೆ.

    ಬೇರೆ ಆನೆಗಳಿಗೆ ಸೊಪ್ಪನ್ನು ಅದರ ಕೈಯಲ್ಲಿ ಹೊರಿಸಿಕೊಂಡು ಬರ್ತಾರೆ. ನಾನು ನಮ್ಮಪ್ಪನ ನಿವೃತ್ತಿ ಹಣ ಹಾಗೂ ಸಾಲ ಮಾಡಿ ಒಂದು ದಿನವೂ ಸೊಪ್ಪನ್ನು ಹೊರಿಸದೆ ಸಾಕಿದ್ದೆ. ಅಂತ ಆನೆಯನ್ನು ಸಾಯಿಸಿಬಿಟ್ಟರು ಎಂದು ಅಳಲು ತೋಡಿಕೊಂಡಿದ್ದಾರೆ.

    ಈ ವೇಳೆ ಆತ ಅನುಭವಿಸುವಂತೆ ಮಾಡುತ್ತೇನೆ. ನೀವು ಹೇಳಿಕೆ ಕೊಡಲು ಆಗಲ್ವಾ ಎಂದು ಹೋರಾಟಗಾರ ಕೇಳಿದ್ದಾರೆ. ಈ ವೇಳೆ ನಾನು ಹೇಳಿಕೆ ಕೊಟ್ಟರೆ ನೀವು ಇರಲಿಲ್ವಾ? ಎಂದು ಕೇಳುತ್ತಾರೆ. ಸ್ಥಳೀಯರು ಹೇಳಿಕೆ ಕೊಟ್ಟಂತೆ ಇರಬೇಕು ಹಾಗೆ ಕೊಡಬೇಕು ಎಂದು ಅವರು ಹೇಳಿದ್ದಾರೆ.

    ನಮ್ಮ ಆನೆಗೆ ಮದ ಇದೆ ಎಂದರು ಆನೆಯನ್ನು ಕರೆಸಿಕೊಂಡಿದ್ದಾರೆ. ನಾನು ಏನು ಹೇಳಿದ್ರು ಕೇಳಲಿಲ್ಲ. ನಾನು ಸುಮ್ಮನಾಗಿಬಿಟ್ಟೆ. ಆ ವೈದ್ಯರದ್ದು ಹುಣಸೂರು ಡಿವಿಷನ್. ಅವರೇ ಆನೆ ಸಾವಿಗೆ ಕಾರಣ ಎಂದು ಮಾವುತನ ಬಾಮೈದಾ ಆರೋಪಿಸಿದ್ದಾರೆ. ಇದನ್ನೂ ಓದಿ: ಪನ್ನೂ ಹತ್ಯೆಗೆ ಸಂಚು ರೂಪಿಸಿದ್ದರ ಬಗ್ಗೆ ಸಮಗ್ರ ತನಿಖೆಯಾಗ್ಬೇಕು- ಅಮೆರಿಕ ಒತ್ತಾಯ

  • ಮಾವುತನೇ ಅನುಮಾನ ವ್ಯಕ್ತಪಡಿಸಿದರೂ ವಿಸ್ತೃತ ಮರಣೋತ್ತರ ಪರೀಕ್ಷೆ ನಡೆಸಲಿಲ್ಲ ಯಾಕೆ? – ಅರ್ಜುನ ಸಾವಿನ ಸುತ್ತ ಎದ್ದಿವೆ ಹಲವು ಪ್ರಶ್ನೆಗಳು

    ಮಾವುತನೇ ಅನುಮಾನ ವ್ಯಕ್ತಪಡಿಸಿದರೂ ವಿಸ್ತೃತ ಮರಣೋತ್ತರ ಪರೀಕ್ಷೆ ನಡೆಸಲಿಲ್ಲ ಯಾಕೆ? – ಅರ್ಜುನ ಸಾವಿನ ಸುತ್ತ ಎದ್ದಿವೆ ಹಲವು ಪ್ರಶ್ನೆಗಳು

    ಬೆಂಗಳೂರು: ಮೈಸೂರು ದಸರಾ (Mysuru Dasara) ವೇಳೆ ಚಾಮುಂಡೇಶ್ವರಿಯನ್ನು ಹೊತ್ತಿದ್ದ ಅರ್ಜುನ (Arjuna) ಆನೆಯ ಸಾವಿನ ಸುತ್ತ ಉತ್ತರವಿಲ್ಲದ ಪ್ರಶ್ನೆಗಳ ದೊಡ್ಡ ಹುತ್ತವೇ ಬೆಳೆದಿದೆ.

    ಅರ್ಜುನ ಕಾಲಿಗೆ ಗುಂಡು ತಾಗಿತ್ತು ಎಂದು ಮಾವುತರು ಆರೋಪಿಸಿದ್ದರು. ಆದರೆ ಅರ್ಜುನ ಆನೆಯ ಮೃತದೇಹವನ್ನು ವಿಸ್ತೃತ ಮರಣೋತ್ತರ ಪರೀಕ್ಷೆಗೆ ಒಳಪಡಿಸದ ಅರಣ್ಯಾಧಿಕಾರಿಗಳು ಹಾಗೆಯೇ ಅಂತ್ಯಕ್ರಿಯೆ ಮುಗಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

    ಅರ್ಜುನನ ಸಾವಿನ ಸತ್ಯ ಸಮಾಧಿಯಾಯ್ತಾ ಎಂಬ ಪ್ರಶ್ನೆಗಳೆದ್ದಿವೆ. ಅರ್ಜುನ ಆನೆಯ ಮರಣೋತ್ತರ ಪರೀಕ್ಷೆಗೆ ಒತ್ತಾಯ ಕೇಳಿಬಂದಿದೆ. ಅರ್ಜುನನ ಸಾವಿಗೆ ನ್ಯಾಯ ಕೋರಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನಗಳು ಆರಂಭವಾಗಿದೆ.  ಇದನ್ನೂ ಓದಿ: ಜೀವ ಬೆದರಿಕೆ ಇದ್ದರೂ ಗೆಹ್ಲೋಟ್, ಪೊಲೀಸರು ಭದ್ರತೆ ನೀಡಲಿಲ್ಲ: ಕರ್ಣಿ ಸೇನಾ ಮುಖ್ಯಸ್ಥನ ಪತ್ನಿ ಆರೋಪ

     

    ಉತ್ತರವಿಲ್ಲದ ಪ್ರಶ್ನೆಗಳು
    * ಆನೆ ಸಾವಿನ ಬಗ್ಗೆ ಮಾವುತನೇ ಅನುಮಾನ ವ್ಯಕ್ತಪಡಿಸಿದರೂ ಸ್ಪಂದಿಸಲಿಲ್ಲ ಏಕೆ?
    * ಕೇವಲ ಬಾಹ್ಯ ಮರಣೋತ್ತರ ಪರೀಕ್ಷೆ ನಡೆಸಿ ಕೈತೊಳೆದುಕೊಂಡಿದ್ದೇಕೆ?
    * ಅರ್ಜುನ ಆನೆಯ ವಿಸ್ತೃತ ಮರಣೋತ್ತರ ಪರೀಕ್ಷೆ ಮಾಡಿಲ್ಲ ಏಕೆ?
    * ಆನೆ ಮೃತದೇಹಕ್ಕೆ ಮೆಟಲ್ ಡಿಟೆಕ್ಟರ್ ಟೆಸ್ಟ್ ಏಕೆ ಮಾಡಿಲ್ಲ?
    * ಕನಿಷ್ಠ ಅರ್ಜನನ ಮೃತದೇಹದ ಮತ್ತೊಂದು ಭಾಗ ನೋಡದೇ ಮಣ್ಣು ಮುಚ್ಚಿದ್ದೇಕೆ?
    * ಅರ್ಜುನ ಮೃತಪಟ್ಟು ಬಿದ್ದ ಸ್ಥಿತಿಯಂತೆಯೇ ಮೃತದೇಹವನ್ನು ಗುಂಡಿಗಿಳಿಸಿದ್ದೇಕೆ?
    * ಅರ್ಜುನನ ಬಲ ಭಾಗವನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡಲಾಯ್ತಾ?

    ಕಾನೂನು ಏನು ಹೇಳುತ್ತೆ?
    ಪ್ರಾಣಿ ಸಾವಿನ ಬಗ್ಗೆ ಅನುಮಾನವಿದ್ದಾಗ ಮರಣೋತ್ತರ ಪರೀಕ್ಷೆ ನಡೆಸಬೇಕು. ಮರಣೋತ್ತರ ಪರೀಕ್ಷೆಯಲ್ಲಿ ಗುಂಡೇಟಿನ ಸತ್ಯ ಸಂಪೂರ್ಣವಾಗಿ ತಿಳಿಯುವುದಿಲ್ಲ. ಸಾಮಾನ್ಯವಾಗಿ ದೊಡ್ಡ ಪ್ರಾಣಿಗಳಿಗೆ ಮೆಟಲ್ ಡಿಟೆಕ್ಟರ್ ಟೆಸ್ಟ್ ಮಾಡುತ್ತಾರೆ. ಮರಣೋತ್ತರ ಪರೀಕ್ಷೆಗೂ ಮುನ್ನ ಮೆಟಲ್ ಡಿಟೆಕ್ಟರ್ ಟೆಸ್ಟ್ ನಡೆಸಬೇಕು. ಇದಕ್ಕಾಗಿ ಅರಣ್ಯ ಇಲಾಖೆಯಲ್ಲಿ ಪ್ರತ್ಯೇಕ ಮಾರ್ಗಸೂಚಿಯೇ ಇದೆ. ಅರ್ಜುನ ಆನೆ ಸಾವಿನ ವಿಚಾರದಲ್ಲಿ ಇದ್ಯಾವುದು ಕೂಡ ಪಾಲನೆ ಮಾಡಿಲ್ಲ.

     

  • ಹೆಚ್‌.ಡಿ.ಕೋಟೆ, ಪ್ರಾಣ ಕಳೆದುಕೊಂಡ ಜಾಗದಲ್ಲಿ ಅರ್ಜುನನ ಸ್ಮಾರಕ ನಿರ್ಮಾಣ: ಸಿಎಂ

    ಹೆಚ್‌.ಡಿ.ಕೋಟೆ, ಪ್ರಾಣ ಕಳೆದುಕೊಂಡ ಜಾಗದಲ್ಲಿ ಅರ್ಜುನನ ಸ್ಮಾರಕ ನಿರ್ಮಾಣ: ಸಿಎಂ

    ಬೆಂಗಳೂರು: ದಸರಾ ಆನೆ ಅರ್ಜುನ (Dasara Elephant Arjuna) ಪ್ರಾಣ ಕಳೆದುಕೊಂಡ ಜಾಗ ಹಾಗೂ ಮೈಸೂರಿನ ಹೆಚ್.ಡಿ ಕೋಟೆಯಲ್ಲಿ ಸ್ಮಾರಕ ನಿರ್ಮಾಣ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

    ಅಂಬಾರಿ ಹೊತ್ತ ಅರ್ಜುನ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಅರ್ಜುನನ ಸಾವಿನ ಕುರಿತು ಸಂಪೂರ್ಣ ಮಾಹಿತಿ ಕೇಳಿದ್ದೇನೆ. ಅರ್ಜುನ ಆನೆ ಸಕಲೇಶಪುರದಲ್ಲಿ ಎಲ್ಲಿ ಪ್ರಾಣ ಕಳೆದುಕೊಂಡಿದ್ನೋ ಅಲ್ಲಿಯೇ ಸ್ಮಾರಕ ಮಾಡುತ್ತೇವೆ. ಹಾಗೂ ಹೆಗ್ಗಡದೇವನಕೋಟೆಯಲ್ಲಿಯೂ ಸ್ಮಾರಕ ಮಾಡಲು ತಿಳಿಸಿದ್ದೇವೆ ಎಂದರು.

    ಅರ್ಜುನ ಎಂಟು ಬಾರಿ ದಸರಾ ಅಂಬಾರಿ ಹೊತ್ತಿದ್ದವನ ಅಚಾನಕ್ ಸಾವಾಗಿದೆ. ಆತ ಇನ್ನೂ ಹೆಚ್ಚು ಕಾಲ ಬದುಕಬೇಕಿತ್ತು, ಇನ್ನೊಂದು ಆನೆ ಕಾರ್ಯಾಚರಣೆಗೆ ಅರ್ಜುನ ನನ್ನ ಉಪಯೋಗಿಸಿದ ಕಾರಣ ಸಾವನಪ್ಪಿದೆ ಎಂದು ಸಿಎಂ ಹೇಳಿದರು. ಇದನ್ನೂ ಓದಿ: ಅರ್ಜುನನ ದುರಂತ ಅಂತ್ಯ – ಕಾಡಾನೆ ಸೆರೆ ಕಾರ್ಯಾಚರಣೆ ಸ್ಥಗಿತ

    ಇತ್ತ ಹಾಸನದಲ್ಲಿ ಮಾವುತ ವಿನು ಮಾತನಾಡುತ್ತಾ, ಅರ್ಜುನನ್ನು ನೆನೆದು ಕಣ್ಣೀರು ಹಾಕಿದರು. ಕಾದಾಟದ ವೇಳೆ ಕಾಲಿನಲ್ಲಿ ರಕ್ತ ಬಂತು. ಆದರೂ ಮದಗಜದ ಜೊತೆಗೆ ಹೋರಾಡಿದ. ನಂತರ ಮಿಸ್ ಫೈರ್ ಆಗಿ ಕಾಲಿಗೆ ಗುಂಡು ಬಿತ್ತು. ಪ್ರಶಾಂತ ಇಲ್ಲದಿದ್ದರೂ ಅರ್ಜುನ ಹೋರಾಡಿ ಗೆಲ್ಲುತ್ತಿದ್ದನು. ಆದರೆ ಕಾಲಿಗೆ ಬಿದ್ದ ಗಾಯದಿಂದ ಆಗಲಿಲ್ಲ. ಕಾಡಾನೆ ತಿವಿದು ಸಾಯಿಸಿತು. ಅರ್ಜುನ ಹತ್ತು ಜನರ ಪ್ರಾಣ ಉಳಿಸಿ ಸಾವನ್ನಪ್ಪಿದ್ದಾನೆ. ಹೀಗಾಗಿ ಮೈಸೂರಿನಲ್ಲೇ ಆತನ ಸ್ಮಾರಕ ಮಾಡಬೇಕು ಎಂದು ಕಣ್ಣೀರಿಡುತ್ತಲೇ ಸರ್ಕಾರಕ್ಕೆ ಒತ್ತಾಯಿಸಿದರು.

  • ಅರ್ಜುನನ ದುರಂತ ಅಂತ್ಯ – ಕಾಡಾನೆ ಸೆರೆ ಕಾರ್ಯಾಚರಣೆ ಸ್ಥಗಿತ

    ಅರ್ಜುನನ ದುರಂತ ಅಂತ್ಯ – ಕಾಡಾನೆ ಸೆರೆ ಕಾರ್ಯಾಚರಣೆ ಸ್ಥಗಿತ

    ಹಾಸನ: ಕಾಡಾನೆ ಸೆರೆ ವೇಳೆ ಕ್ಯಾಪ್ಟನ್ ಅರ್ಜುನ (Arjuna) ದುರಂತ ಸಾವು ಕಂಡ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ (Forest Department) ಸ್ಥಗಿತಗೊಳಿಸಿದೆ. ಇಂದು (ಬುಧವಾರ) ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಐದು ಸಾಕಾನೆಗಳನ್ನು ಕ್ಯಾಂಪ್‍ಗಳಿಗೆ ಕಳುಹಿಸಲು ನಿರ್ಧರಿಸಲಾಗಿದೆ.

    ಅರ್ಜುನನ ನಾಯಕತ್ವದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಪ್ರಶಾಂತ, ಭೀಮ, ಸುಗ್ರೀವ, ಅಶ್ವತ್ಥಾಮ ಹಾಗೂ ಧನಂಜಯ ಆನೆಗಳನ್ನು ವಾಪಸ್ ಕ್ಯಾಂಪ್‍ಗೆ ಕಳಿಸಲು ತಿರ್ಮಾನಿಸಲಾಗಿದೆ. ಬೆಳಗ್ಗೆ 10 ಗಂಟೆಗೆ ಸಾಕಾನೆಗಳು ವಾಪಸ್ ತೆರಳಲಿವೆ. ಅರ್ಜುನನ ನೇತೃತ್ವದಲ್ಲಿ ನ.24 ರಿಂದ 9 ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ, ಆರು ಸಲಗಗಳ ಸೆರೆ ಮತ್ತು ಸ್ಥಳಾಂತರ ಕಾರ್ಯಾಚರಣೆ ಆರಂಭವಾಗಿತ್ತು. ಇದುವರೆಗೂ ಮೂರು ರೇಡಿಯೋ ಕಾಲರ್ ಅಳವಡಿಸಿದ್ದು, ಮೂರು ಸಲಗಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಲಾಗಿದೆ. ಇದನ್ನೂ ಓದಿ: ಮೈಸೂರಿಗೆ ಕಳುಹಿಸಿಕೊಡಿ ಇಲ್ಲವೇ ಅರ್ಜುನನ ಜೊತೆ ನಮ್ಮನ್ನೂ ಮಣ್ಣು ಮಾಡಿ: ಗೋಳಾಡಿದ ಮಾವುತ

    ಕಾಡಾನೆ ಜೊತೆಗಿನ ಕಾಳಗದಲ್ಲಿ ದುರಂತ ಸಾವಿಗೀಡಾದ ಅರ್ಜುನನನ್ನು ಮಂಗಳವಾರ ವಿಧಿ-ವಿಧಾನ ಹಾಗೂ ಸಕಲ ಸರ್ಕಾರಿ ಗೌರವಗಳೊಂದಿಗೆ ಸಕಲೇಶಪುರದ ದಬ್ಬಳ್ಳಿಕಟ್ಟೆ ಅರಣ್ಯ ಪ್ರದೇಶದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.

    ಮಣ್ಣಲ್ಲಿ ಮಣ್ಣಾಯ್ತಾ ಅರ್ಜುನನ ಸಾವಿನ ರಹಸ್ಯ?: ಅರ್ಜುನನ ಸಾವಿನ ಬಗ್ಗೆ ಸ್ವತಃ ಮಾವುತನೇ ಅನುಮಾನ ವ್ಯಕ್ತಪಡಿಸಿದ್ದಾನೆ. ಅರ್ಜುನನ ದೇಹಕ್ಕೆ ಗುಂಡೇಟು ತಗುಲಿದೆ ಎಂಬ ಅನುಮಾನ ಇದ್ದರೂ ಸಹ ವಿಸ್ತೃತ ಮರಣೋತ್ತರ ಪರೀಕ್ಷೆ ನಡೆದಿಲ್ಲ. ಕೇವಲ ಬಾಹ್ಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕನಿಷ್ಠ ಅರ್ಜನನ ಮೃತದೇಹದ ಮತ್ತೊಂದು ಭಾಗವನ್ನು ನೋಡದೇ ಅಂತ್ಯಕ್ರಿಯೆ ಮಾಡಿದ್ದಾರೆ ಎಂದು ಅಧಿಕಾರಿಗಳ ನಡೆಯ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅರ್ಜುನ ಮೃತಪಟ್ಟು ಬಿದ್ದ ಸ್ಥಿತಿಯಲ್ಲಿಯೇ ಅಧಿಕಾರಿಗಳು ಗುಂಡಿಗಿಳಿಸಿದ್ದಾರೆ. ಮೃತದೇಹದ ಮತ್ತೊಂದು ಮಗ್ಗುಲು ಹೊರಳಿಸಿ ನೋಡುವ ಬಗ್ಗೆಯೂ ಅಧಿಕಾರಿಗಳು ಕ್ರಮವಹಿಸಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳ ಈ ನಡೆ ಬಗ್ಗೆ ಹಲವು ಅನುಮಾನ ಮೂಡಿದ್ದು, ಕೇವಲ ದಂತ ತೆಗೆದು, ದೇಹದ ಒಂದು ಭಾಗದ ಬಾಹ್ಯ ಪರೀಕ್ಷೆ ನಡೆಸಿ ಇದೇ ಮರಣೋತ್ತರ ಪರೀಕ್ಷೆ ಎನ್ನುತ್ತಿದ್ದಾರೆ. ಅಂಬಾರಿ ಹೊತ್ತಿದ್ದ ಆನೆ ಎನ್ನುವ ನೆಪ ಹೇಳಿ ಅನುಮಾನ ಉಳಿಸಿಯೇ ಅಂತ್ಯಕ್ರಿಯೆ ಮಾಡಿದ್ದಾರೆ ಎಂದು ಜನ ಆರೋಪಿಸಿದ್ದಾರೆ. ಅಲ್ಲದೇ ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಅರ್ಜುನನ ಅಂತ್ಯಸಂಸ್ಕಾರಕ್ಕೆ ಅಡ್ಡಿ – ಪೊಲೀಸರಿಂದ ಲಾಠಿ ಪ್ರಹಾರ, ದಿಕ್ಕಾಪಾಲಾಗಿ ಓಡಿದ ಜನ

  • ಅಗಲಿದ ಆನೆ ಅರ್ಜುನನಿಗೆ ಹಾಸನ, ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಈಶ್ವರ್ ಖಂಡ್ರೆ

    ಅಗಲಿದ ಆನೆ ಅರ್ಜುನನಿಗೆ ಹಾಸನ, ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಈಶ್ವರ್ ಖಂಡ್ರೆ

    ಬೆಳಗಾವಿ: ಮದಗಜಗಳ ಕಾದಾಟದಲ್ಲಿ ವೀರಮರಣ ಹೊಂದಿದ ಅರ್ಜುನ (Arjuna) ಆನೆಗೆ (Elephant) ಹಾಸನ (Hassan) ಹಾಗೂ ಮೈಸೂರಿನಲ್ಲಿ (Mysuru) ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwar Khandre) ಹೇಳಿದ್ದಾರೆ.

    ಬೆಳಗಾವಿ (Belagavi) ಸುವರ್ಣ ಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ಮಾರಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಿಎಂ ಜೊತೆ ಚರ್ಚ ಮಾಡಿದ್ದೇನೆ. ರಾಜ್ಯ, ರಾಷ್ಟ್ರಕ್ಕೆ ಹೆಮ್ಮೆ ತಂದಂತಹ 8 ಬಾರಿ ದಸರಾ ಹಬ್ಬ ಯಶಸ್ಸಿಗೆ ಕಾರಣವಾದಂತಹ ಅರ್ಜುನ ಸ್ಮಾರಕ ನಿರ್ಮಾಣಕ್ಕೆ ತೀರ್ಮಾನ ಮಾಡಲಾಗಿದೆ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಪಕ್ಷದವರು ಕೋಮುವಾದಿಗಳು: ಅಶ್ವಥ್ ನಾರಾಯಣ್

    ಎಂಟು ಬಾರಿ ಅಂಬಾರಿ ಹೊತ್ತ ಅರ್ಜುನ ಸಾವಿಗೆ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಎಂದು ಈಗಲೇ ಹೇಳಲು ಆಗುವುದಿಲ್ಲ. ಇಂತಹ ಕಾರ್ಯಾಚರಣೆಗಳಲ್ಲಿ ಸುಮಾರು ಅರಣ್ಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಅಪಾಯ ಇದೆ ಎಂದು ತಿಳಿದು ಸಾರ್ವಜನಿಕರ ಆಸ್ತಿ, ಜೀವ ರಕ್ಷಣೆಗೆ ಸೇವೆ ಮಾಡುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ಹೀಗೆ ಆಗಿದೆ ಎನ್ನುವುದಕ್ಕಿಂತ ಹೇಗೆ ಆಗಿದೆ ಎಂದು ಪರಿಶೀಲಿಸಲಾಗುವುದು ಈಗಲೇ ಈ ಬಗ್ಗೆ ಹೇಳಲು ಆಗುವುದಿಲ್ಲ. ತನಿಖಾ ವರದಿ ಬಂದ ಮೇಲೆ ಲೋಪದೋಷಗಳಿದ್ದರೆ ಕ್ರಮ ಕೈಗೊಳ್ಳಲಾಗುವುದು. ಎಲ್ಲಾ ವಿಷಯಗಳ ಬಗ್ಗೆ ತನಿಖಾ ವರದಿ ಬರುತ್ತದೆ ಎಂದರು. ಇದನ್ನೂ ಓದಿ: ನೈಸ್‌ಗೆ ಕೊಟ್ಟಿರುವ ಹೆಚ್ಚುವರಿ 554 ಎಕ್ರೆ ಜಾಗ ವಾಪಸ್‌

    ಪ್ರಜಾಪ್ರಭುತ್ವದಲ್ಲಿ ಲಾಠಿ ಚಾರ್ಜ್ ಆಗಬಾರದು. ಜನರು ಸಂಯಮ ಶಾಂತಿಯಿಂದ ಇರಬೇಕು. ಜನರು ಶಾಂತಿ ಕಾಪಾಡಬೇಕು. ಅರ್ಜುನನ ಅಗಲಿಕೆ ರಾಜ್ಯಕ್ಕೆ ದುಃಖ ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.  ಇದನ್ನೂ ಓದಿ: ಅರ್ಜುನನ ಅಂತ್ಯಸಂಸ್ಕಾರಕ್ಕೆ ಅಡ್ಡಿ – ಪೊಲೀಸರಿಂದ ಲಾಠಿ ಪ್ರಹಾರ, ದಿಕ್ಕಾಪಾಲಾಗಿ ಓಡಿದ ಜನ

  • ಅರ್ಜುನನ ಅಂತ್ಯಸಂಸ್ಕಾರಕ್ಕೆ ಅಡ್ಡಿ – ಪೊಲೀಸರಿಂದ ಲಾಠಿ ಪ್ರಹಾರ, ದಿಕ್ಕಾಪಾಲಾಗಿ ಓಡಿದ ಜನ

    ಅರ್ಜುನನ ಅಂತ್ಯಸಂಸ್ಕಾರಕ್ಕೆ ಅಡ್ಡಿ – ಪೊಲೀಸರಿಂದ ಲಾಠಿ ಪ್ರಹಾರ, ದಿಕ್ಕಾಪಾಲಾಗಿ ಓಡಿದ ಜನ

    ಹಾಸನ: ಪುಂಡಾನೆ ಸೆರೆ ಕಾರ್ಯಾಚರಣೆ ವೇಳೆ ವೀರಮರಣವನ್ನಪ್ಪಿದ ಕ್ಯಾಪ್ಟನ್ ಅರ್ಜುನನ ಅಂತ್ಯಸಂಸ್ಕಾರಕ್ಕೆ ಅಡ್ಡಿಪಡಿಸಿದ ವೇಳೆ ಲಘು ಲಾಠಿ ಪ್ರಹಾರ ನಡೆದಿದೆ.

    ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ, ಯಸಳೂರು, ಬಾಳೆಕೆರೆ ಅರಣ್ಯದಲ್ಲಿ ಪುಂಡಾನೆ ಸೆರೆ ಕಾರ್ಯಾಚರಣೆ ವೇಳೆ ಅರ್ಜುನ ವೀರಮರಣವನ್ನಪ್ಪಿತು. ಅರ್ಜುನನ ಕಳೇಬರವನ್ನು ಮೈಸೂರಿಗೆ ಕರೆತರುವಂತೆ ಕೆಲ ಸಂಘಟನೆಯ ಪ್ರಮುಖರು ಒತ್ತಾಯಿಸಿದ್ದರು. ಆದ್ರೆ ಅರಣ್ಯ ಇಲಾಖೆ ಅಧಿಕಾರಿಗಳು ಮೃತಪಟ್ಟ ಸ್ಥಳದಲ್ಲೇ ಅಂತ್ಯಕ್ರಿಯೆ ನೆರವೇರಿಸಲು ಮುಂದಾದರು.

    ಅರ್ಜುನನ ಅಂತ್ಯ ಸಂಸ್ಕಾರಕ್ಕೆ ಗುಂಡಿ ತೆಗೆಯುತ್ತಿದ್ದ ವೇಳೆ ಕೆಲ ಸಂಘಟನೆಯ ಕಾರ್ಯಕರ್ತರು ಅಡ್ಡಿಪಡಿಸಿದರು. ಇದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು. ಪೊಲೀಸರು ಲಾಠಿ ಚಾರ್ಜ್ಗೆ ಮುಂದಾಗುತ್ತಿದ್ದಂತೆ ಸ್ಥಳದಲ್ಲಿದ್ದ ಜನ ದಿಕ್ಕಾಪಾಲಾಗಿ ಓಡಿದರು. ಓಡುವ ಬರದಲ್ಲಿ ಕೆಲವರು ಬಿದ್ದು ಕೈಕಾಲಿಗೆ ಪೆಟ್ಟಾಗಿಸಿಕೊಂಡಿದ್ದಾರೆ. ಇದನ್ನೂ ಓದಿ: ಮೈಸೂರಿಗೆ ಕಳುಹಿಸಿಕೊಡಿ ಇಲ್ಲವೇ ಅರ್ಜುನನ ಜೊತೆ ನಮ್ಮನ್ನೂ ಮಣ್ಣು ಮಾಡಿ: ಗೋಳಾಡಿದ ಮಾವುತ

    ವೀರಮರಣವನ್ನಪ್ಪಿದ ಕ್ಯಾಪ್ಟನ್ ಅರ್ಜುನ ಅಂತ್ಯಕ್ರಿಯೆಗೂ ಮುನ್ನ ಮೂರು ಸುತ್ತು ಕುಶಾಲತೋಪು ಹಾರಿಸಿ, ಸಕಲ ಪೊಲೀಸ್ ಗೌರವವನ್ನೂ ಸಲ್ಲಿಸಲಾಯಿತು. ರಾಜಮನೆತನದ ಪುರೋಹಿತ ಪ್ರಹ್ಲಾದ್ ತಂಡದಿಂದ ಪೂಜಾ ವಿಧಿವಿಧಾನ ನೇರವೇರಿಸಲಾಯಿತು. ಇದನ್ನೂ ಓದಿ:  ತನ್ನ ಪ್ರಾಣ ತ್ಯಾಗ ಮಾಡಿ ಹಲವರ ಜೀವ ಉಳಿಸಿದ ಅರ್ಜುನ – ನಡೆದಿದ್ದೇನು?

    ರಾಜಮನೆತನದ ಪುರೋಹಿತ ಪ್ರಹ್ಲಾದ್ ಅರ್ಜುನನಿಗೆ ಅಂತಿಮ ವಿಧಿವಿಧಾನ ನೇರವೇರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ನಮ್ಮ ದುರದೃಷ್ಟ ಇವತ್ತು ಅರ್ಜುನನ್ನು ಕಳೆದುಕೊಂಡಿದ್ದೇವೆ. ಹುಟ್ಟು ಸಹಜ, ಸಾವು ಖಚಿತ, ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಅರ್ಜುನ ಮೃತಪಟ್ಟಿದ್ದಾನೆ. ಅರಮನೆಗೆ ಬಂದಾಗಿನಿಂದ ನಾನೇ ಪೂಜೆ ಮಾಡುತ್ತಿದ್ದೆ. ನನ್ನ ಒಬ್ಬ ಸಹೋದರನನ್ನು ಕಳೆದುಕೊಂಡಂತಾಗಿದೆ. ರಾಷ್ಟ್ರಪತಿಗೆ ಕೊಡುವ ಗೌರವ ಕೊಟ್ಟು ದಸಾರೆಯಲ್ಲಿ ಭಾಗಿಯಾಗುತ್ತಿದ್ದ ಸಾಕಾನೆಗಳನ್ನು ಅರಮೆನೆ ಒಳಗೆ ಕರೆದುಕೊಳ್ಳುತ್ತಿದ್ದೆವು. ರಾಜ ಗಾಂಭಿರ್ಯದಿಂದ ಅಂಬಾರಿ ಹೊತ್ತುಕೊಂಡು ಹೋಗಬೇಕಾದರೆ ನೋಡುವುದೇ ಒಂದು ಸಂತೋಷ. ಆದರೀಗ ಅರ್ಜುನನನ್ನು ಕಳೆದುಕೊಂಡಿರುವುದು ಅತೀವ ನೋವು ತಂದಿದೆ ಎಂದರು.

    ಅಲ್ಲದೇ ಅರ್ಜುನ ಇಲ್ಲಿಯೇ ಮೃತಪಟ್ಟಿದ್ದಾನೆ, ಇದೇ ಜಾಗದಲ್ಲಿ ಅಂತ್ಯಸಂಸ್ಕಾರವಾಗಲಿ, ಆನಂತರ ಇಲ್ಲಿ ಸ್ಮಾರಕ ಭವನ ನಿರ್ಮಾಣ ಮಾಡಲಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ನಡೆದು ಹೋಯ್ತಾ ಮಹಾ ಪ್ರಮಾದ – ಗುರಿ ತಪ್ಪಿ ಬಿದ್ದ ಗುಂಡೇಟಿನಿಂದ ಅರ್ಜುನ ಸಾವು?

  • ಮೈಸೂರಿಗೆ ಕಳುಹಿಸಿಕೊಡಿ ಇಲ್ಲವೇ ಅರ್ಜುನನ ಜೊತೆ ನಮ್ಮನ್ನೂ ಮಣ್ಣು ಮಾಡಿ: ಗೋಳಾಡಿದ ಮಾವುತ

    ಮೈಸೂರಿಗೆ ಕಳುಹಿಸಿಕೊಡಿ ಇಲ್ಲವೇ ಅರ್ಜುನನ ಜೊತೆ ನಮ್ಮನ್ನೂ ಮಣ್ಣು ಮಾಡಿ: ಗೋಳಾಡಿದ ಮಾವುತ

    ಹಾಸನ: ನನ್ನ ಆನೆಯನ್ನು (Elephant) ಮೈಸೂರಿಗೆ ಕಳುಹಿಸಿಕೊಡಿ. ಇಲ್ಲಾ ನನ್ನನ್ನು, ನನ್ನ ಕುಟುಂಬವನ್ನು ಅರ್ಜುನನ (Arjuna) ಜೊತೆ ಮಣ್ಣು ಮಾಡಿ ಎಂದು ಮಾವುತರೊಬ್ಬರು ಕಣ್ಣೀರು ಹಾಕಿದ್ದು, ನೆರೆದವರ ಕಣ್ಣಂಚಲ್ಲಿಯೂ ನೀರು ತರಿಸುವಂತಿತ್ತು.

    ಅರ್ಜುನನ ಅಂತಿಮ ದರ್ಶನ ಪಡೆದು ಮಾವುತ ವಿನು ಕಣ್ಣೀರಿಟ್ಟರು. ಅರ್ಜುನನ ಸೊಂಡಿಲನ್ನು ತಬ್ಬಿಕೊಂಡು ನನ್ನ ಆನೆಯನ್ನು ಬದುಕಿಸಿಕೊಡಿ. ನನ್ನ ಆನೆಯನ್ನು ಮೈಸೂರಿಗೆ ಕಳುಹಿಸಿಕೊಡಿ. ಇಲ್ಲವೇ ನನ್ನನ್ನು ಹಾಗೂ ನನ್ನ ಕುಟುಂಬವನ್ನು ಅರ್ಜುನನ ಜೊತೆ ಮಣ್ಣು ಮಾಡಿ. ಅರ್ಜುನ ಸತ್ತಿಲ್ಲ ಎಂದು ನನ್ನ ಹೆಂಡತಿ ಮಕ್ಕಳಿಗೆ ಹೇಳಿದ್ದೇನೆ. ಅರ್ಜುನನನ್ನು ನನ್ನ ಜೊತೆ ಕಳುಹಿಸಿಕೊಡಿ ಎಂದು ಮಾವುತ ಅರ್ಜುನನ ಎದುರು ರೋಧಿಸಿದ್ದಾರೆ.

    ವಿನು ಅವರು ಅರ್ಜುನನ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದರು. ಇದೀಗ ಅರ್ಜುನನ ಸಾವಿನ ನೋವನ್ನು ಅರಗಿಸಿಕೊಳ್ಳಲಾಗದೆ ರೋಧಿಸುತ್ತಿದ್ದಾರೆ. ಮಂಗಳವಾರ ಅರ್ಜುನನ ಸಾವಿನ ಸುದ್ದಿ ಕೇಳಿ ಕುಸಿದು ಬಿದ್ದಿದ್ದರು. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರು. ಇಂದು ಚೇತರಿಸಿಕೊಂಡು ಬಂದಿದ್ದ ವಿನು ಅವರು ತನ್ನ ಪ್ರೀತಿಯ ಅರ್ಜುನನ್ನು ಕಂಡು ಬಿಕ್ಕಳಿಸಿ ಬಿಕ್ಕಳಿಸಿ ಅತ್ತಿದ್ದಾರೆ. ಇದು ನೋಡಗರ ಕಣ್ಣಲ್ಲಿ ನೀರು ತರಿಸುವಂತಿತ್ತು.

    ಮಹಿಳೆಯೊಬ್ಬರು ಕೂಡ ಅರ್ಜುನನ ಅಂತಿಮ ದರ್ಶನ ಪಡೆದು ಬಾವೋದ್ವೇಗಕ್ಕೆ ಒಳಗಾದರು. ನಾಗಮ್ಮ ಎಂಬವರು ಅರ್ಜುನನ್ನು ಕಂಡು ಕಣ್ಣೀರಿಟ್ಟರು. ದೇವರೇ ಅರ್ಜುನನ್ನು ನಿನ್ನಲ್ಲಿ ಸೇರಿಸಿಕೊಳ್ಳು. ಅರ್ಜುನನಿಗೆ ಮುಕ್ತಿ ಕೊಡು ದೇವರೇ ಎಂದು ಕಣ್ಣೀರು ಹಾಕಿದರು. ಇದನ್ನೂ ಓದಿ: ನಡೆದು ಹೋಯ್ತಾ ಮಹಾ ಪ್ರಮಾದ – ಗುರಿ ತಪ್ಪಿ ಬಿದ್ದ ಗುಂಡೇಟಿನಿಂದ ಅರ್ಜುನ ಸಾವು?

    ಇತ್ತ ಕಾಡಾನೆ ಕಾರ್ಯಾಚರಣೆ ವೇಳೆ ಮೃತಪಟ್ಟ ಅಂಬಾರಿ ಹೊತ್ತ ಅರ್ಜುನನ ಅಂತಿಮ ದರ್ಶನಕ್ಕೆ ಅಭಿಮಾನಿಗಳ ದಂಡೇ ಹರಿದು ಬರುತ್ತಿದೆ. ಮೈಸೂರಿನಿಂದ ಬಂದು ಜನ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಮೃತ ಅರ್ಜುನನ ಕಳೇಬರಕ್ಕೆ ಹಾರ ಹಾಕಿ ನಮನ ಸಲ್ಲಿಕೆ ಮಾಡುತ್ತಿದ್ದಾರೆ. 8 ಬಾರಿ ಅಂಬಾರಿ ಹೊತ್ತು ಜನರ ಪ್ರೀತಿ ಪಾತ್ರವಾಗಿದ್ದ ಅರ್ಜುನ, ಕಾರ್ಯಾಚರಣೆ ವೇಳೆ ಹುತಾತ್ಮನಾದ. ಈ ಹಿನ್ನೆಲೆಯಲ್ಲಿ ದೂರದೂರುಗಳಿಂದ ಅರ್ಜುನನ ಅಂತಿಮ ದರ್ಶನಕ್ಕೆ ಜನ ಬರುತ್ತಿದ್ದಾರೆ.