Tag: ಅರುಣ್ ಸಿಂಗ್

  • ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿದರೆ ಸೂಕ್ತ ಕ್ರಮ- ಅರುಣ್ ಸಿಂಗ್ ಎಚ್ಚರಿಕೆ

    ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿದರೆ ಸೂಕ್ತ ಕ್ರಮ- ಅರುಣ್ ಸಿಂಗ್ ಎಚ್ಚರಿಕೆ

    – ಇಬ್ಬರು, ಮೂವರಿಂದ ನಾಯಕತ್ವ ಬದಲಾವಣೆ ಮಾತು
    – ಹೊಸಬರಿಗೆ ಪಕ್ಷದ ರೀತಿ, ನೀತಿ ಗೊತ್ತಿಲ್ಲ

    ಬೆಂಗಳೂರು: ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ, ಕೇವಲ ಇಬ್ಬರು, ಮೂವರು ಈ ಬಗ್ಗೆ ಮಾತನಾಡುತ್ತಿರುವುದು ಗಮನಕ್ಕೆ ಬಂದಿದೆ. ಅವರ ಮನವೊಲಿಕೆ ಕೆಲಸ ಸಹ ನಡೆಯುತ್ತಿದೆ. ಒಂದು ವೇಳೆ ಸುಮ್ಮನಾಗದಿದ್ದರೆ ಸೂಕ್ತ ಕ್ರಮವನ್ನು ಸಹ ಕೈಗೊಳ್ಳಲಾಗುವುದು ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದರು.

    ಬಿಜೆಪಿ ಕಚೇರಿಯಲ್ಲಿ 15 ಶಾಸಕರು ಸೇರಿ ಹಲವು ನಾಯಕರೊಂದಿಗೆ ಚರ್ಚಿಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಕುರಿತು ಯಾವ ಶಾಸಕರ ಬಳಿಯೂ ನಾನು ಚರ್ಚಿಸಿಲ್ಲ. ಈ ಕುರಿತು ಚರ್ಚಿಸುವುದಾದರೆ ಎಲ್ಲ ನಾಯಕರೊಂದಿಗೆ ಸಭೆ ನಡೆಸುತ್ತಿದ್ದೆ. ಪಕ್ಷದಲ್ಲಿ ಒಬ್ಬಬ್ಬಿರು ಇಂತಹ ನಾಯಕರು ಇದ್ದಾರೆ, ಇದರಿಂದಾಗಿ ಪಕ್ಷಕ್ಕೆ ಮುಜುಗರವಾಗುತ್ತಿರುವುದು ಸತ್ಯ. ಪಕ್ಷದ ಸಂಘಟನೆ, ನಾಯಕರ ಹೇಳಿಕೆಗಳ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಪರಿಶೀಲಿಸುತ್ತಿದ್ದಾರೆ. ಆದರೆ ಯಾರೂ ಸಹ ಮಾಧ್ಯಮದ ಮುಂದೆ ಮಾತನಾಡಿ, ಪಕ್ಷಕ್ಕೆ ಮುಜುಗರವನ್ನುಂಟು ಮಾಡಬೇಡಿ ಎಂದು ಎಚ್ಚರಿಸಿದರು.

    ಕೇವಲ ಇಬ್ಬರು, ಮೂವರು ಹೇಳಿಕೆ ನೀಡುವ ಮೂಲಕ ರಾಜ್ಯದ ಲಕ್ಷಾಂತರ ಕಾರ್ಯಕರ್ತರಿಗೆ ನೋವುಂಟು ಮಾಡುತ್ತಿದ್ದಾರೆ. ಈ ಕುರಿತು ನಾವು ಖಂಡಿತವಾಗಿಯೂ ಲಕ್ಷ್ಯ ವಹಿಸುತ್ತೇವೆ. ಇದು ನಮ್ಮ ಪಕ್ಷದ ರಾಜ್ಯಾಧ್ಯಕ್ಷರಿಗೆ ತಿಳಿದಿದೆ, ನಮಗೂ ಈ ಕುರಿತು ಗೊತ್ತಿದೆ. ಅವರ ಮನವೊಲಿಸುವ ಪ್ರಕ್ರಿಯೆ ಸಹ ನಡೆಯುತ್ತಿದೆ. ಮಾತು ಕೇಳದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಕೆಲ ಹೊಸಬರು ನಾಯಕತ್ವದ ಬಗ್ಗೆ ಮಾತನಾಡುತ್ತಿರುವುದನ್ನು ಪಕ್ಷದ ನಾಯಕರು ತಿಳಿಸಿದರು. ಅವರಿಗೆ ಪಕ್ಷದ ರೀತಿ, ನೀತಿ, ಸಿದ್ಧಾಂತ ತಿಳಿದಿಲ್ಲ, ಹೀಗಾಗಿ ಮಾತನಾಡುತ್ತಿದ್ದಾರೆ. ನಮ್ಮ ಲಕ್ಷಾಂತರ ಕಾರ್ಯಕರ್ತರು ತಮ್ಮ ಜೀವನನ್ನು ಪಣಕ್ಕಿಟ್ಟು ಪಕ್ಷವನ್ನು ಸಂಘಟಿಸಿ, ಉನ್ನತ ಸ್ಥಾನದಲ್ಲಿರಿಸಿದ್ದಾರೆ. ಆದರೆ ಕೆಲ ಹೊಸಬರಿಗೆ ಪಕ್ಷದ ಸಂಸ್ಕøತಿ, ರೀತಿ, ನೀತಿ ಗೊತ್ತಿಲ್ಲ. ಈ ರೀತಿಯ ಹೇಳಿಕೆಯನ್ನು ನೀಡುವ ಮೂಲಕ ಪಕ್ಷಕ್ಕೆ ನಷ್ಟವನ್ನುಂಟುಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರಿಗೆ ಎಚ್ಚರಿಕೆ ನೀಡಿದರು.

    ನಾವು ಯಾರನ್ನೂ ಕರೆದಿರಲಿಲ್ಲ, ಬಿಡುವು ಇದ್ದಿದ್ದಕ್ಕಾಗಿ ಕೆಲ ನಾಯಕರು ಹಾಗೂ ಶಾಸಕರು ಅವರೇ ಬಂದು ಭೇಟಿಯಾಗಿದ್ದಾರೆ. ಈ ವೇಳೆ ಕೊರೊನಾ ಸಂಕಷ್ಟದ ಸಮಯದಲ್ಲಿ ಯಾವ ರೀತಿ ಕೆಲಸ ಮಾಡುತ್ತಿದ್ದೀರಿ, ಕ್ಷೇತ್ರದಲ್ಲಿ ಕೆಲಸ ಹೇಗೆ ನಡೆಯುತ್ತಿದೆ ಎಂದು ಪ್ರಶ್ನಿಸಲಾಯಿತು. ತುಂಬಾ ಚೆನ್ನಾಗಿ ಕೆಲಸ ಮಾಡಿರುವುದಾಗಿ ಶಾಸಕರು ಉತ್ತರಿಸಿದರು. ಅಂಬುಲೆನ್ಸ್, ಕೋವಿಡ್ ಆಸ್ಪತ್ರೆ, ರೇಷನ್ ಕಿಟ್ ನೀಡುವುದು ಸೇರಿದಂತೆ ಇತರೆ ಸೇವೆಗಳನ್ನು ಅಚ್ಚುಕಟ್ಟಾಗಿ ಮಾಡಿದ್ದು, ಹಗಲು ರಾತ್ರಿ ಎನ್ನದೆ ಶಾಸಕರು ದುಡಿದಿದ್ದಾರೆ.

    ಇದೀಗ ಪಕ್ಷದಲ್ಲಿನ ಕೆಲಸ, ಸಂಘಟನೆ ಸೇರಿದಂತೆ ವಿವಿಧ ಕೆಲಸಗಳ ಬಗ್ಗೆ ನಾವು ಚರ್ಚಿಸುತ್ತಿದ್ದೇವೆ. ಪಕ್ಷ ಹೇಳಿದ ಕೆಲಸವನ್ನು ನಾವು ಮಾಡುತ್ತಿದ್ದೇವೆ, ಅಂತರಾಷ್ಟ್ರೀಯ ಯೋಗ ದಿನ, ಡಾ.ಶ್ಯಾಮ್‍ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನ, ಸಸಿ ನೆಡುವುದು ಹಾಗೂ ಲಸಿಕೆ ಕೇಂದ್ರಗಳಲ್ಲಿ ಸಹಾಯ ಮಾಡುವುದು ಹಾಗೂ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಹಾಗೂ ಸಿಎಂ ಬಿ.ಎಸ್.ಯಡಿಯೂರಪ್ಪ ಸರ್ಕಾರದ ಯೋಜನೆಗಳ ಕುರಿತು ಯಾವ ರೀತಿ ಪ್ರಚಾರ ಮಾಡಿದ್ದೀರಿ ಎಂದು ವಿವರಣೆ ಕೇಳಲಾಗಿದೆ. ಸರ್ಕಾರದ ಕಾರ್ಯಕ್ರಮ ಹಾಗೂ ಯೋಜನೆಗಳನ್ನು ಕುರಿತು ಜಾಗೃತಿ, ಪ್ರಚಾರ ಮಾಡಬೇಕಿದೆ ಎಂದರು.

    ಎಲ್ಲರೂ ಒಟ್ಟಾಗಿ ಸೇರಿ ಪಕ್ಷವನ್ನು ಬಲವರ್ಧನೆ ಮಾಡಬೇಕು. ಅಲ್ಲದೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಗ್ರಾಮಮಟ್ಟಕ್ಕೂ ಕೊಂಡೊಯ್ಯಬೇಕು. ಸಚಿವರು ಕಾರ್ಯಕರ್ತರಿಗೆ ಸಮಯ ನೀಡಲು ತಿಳಿಸಲಾಗಿದೆ. ಅಲ್ಲದೆ ಪಕ್ಷದ ಕಾರ್ಯಕರ್ತರು ಸಮರೋಪಾದಿಯಲ್ಲಿ ಕೆಲಸ ಮಾಡಿದ್ದಾರೆ. ನನಗೆ ತುಂಬಾ ಸಂತೋಷವಾಗಿದೆ. ಶಾಸಕರು, ಕಾರ್ಯಕರ್ತರು ಅದ್ಭುತವಾಗಿ ಕೆಲಸ ಮಾಡಿದ್ದಾರೆ.

  • ಬಿಜೆಪಿಯವ್ರು ಏನಾದ್ರೂ ಮಾಡ್ಲಿ, ನಮ್ಗೆ ಕೊರೊನಾ ಸಂದರ್ಭದಲ್ಲಿ ಜನ್ರ ಜೀವ ಉಳಿಯಬೇಕು: ಡಿಕೆಶಿ

    ಬಿಜೆಪಿಯವ್ರು ಏನಾದ್ರೂ ಮಾಡ್ಲಿ, ನಮ್ಗೆ ಕೊರೊನಾ ಸಂದರ್ಭದಲ್ಲಿ ಜನ್ರ ಜೀವ ಉಳಿಯಬೇಕು: ಡಿಕೆಶಿ

    ಬೆಂಗಳೂರು: ಬಿಜೆಪಿಯವರು ಏನಾದರೂ ಮಾಡಿಕೊಳ್ಳಲಿ. ನಮಗೆ ಕೊರೊನಾ ಸಂದರ್ಭದಲ್ಲಿ ಜನರ ಜೀವ ಉಳಿಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಯಡಿಯೂರಪ್ಪನವರಿಗೆ ವಯಸ್ಸಾಗಿದೆ. ಅವರು ಸಿಎಂ ಸ್ಥಾನದಿಂದ ಕೆಳಗೆ ಇಳಿಯಲಿ ಎಂಬ ವಿಶ್ವನಾಥ್ ಹೇಳಿಕೆಗೆ ಡಿಕೆಶಿ ಪ್ರತಿಕ್ರಿಯಿಸಿದರು. ಇದು ಬಿಜೆಪಿ ಪಾರ್ಟಿ ವಿಚಾರ. ನಮಗೂ ಈ ಪಾರ್ಟಿ ವಿಚಾರಕ್ಕೂ ಸಂಬಂಧವಿಲ್ಲ. ಬಿಜೆಪಿಯವರು ಬಿಎಸ್ ವೈ ನಾದ್ರೂ ಇಟ್ಕೊಳ್ಳಲಿ, ವಿಶ್ವನಾಥ್ ರನ್ನಾದ್ರೂ ಮಾಡಲಿ, ಈಶ್ವರಪ್ಪನವರಾನ್ನಾದ್ರೂ ಮಾಡಿಕೊಳ್ಳಲಿ. ನಮಗೆ ಕೊರೊನಾ ಸಂದರ್ಭದಲ್ಲಿ ಜನರ ಜೀವ ಉಳಿಯಬೇಕು ಅಷ್ಟೆ ಎಂದರು.

    ಕೇಂದ್ರ ಸರ್ಕಾರ ಕೊರೊನಾದಿಂದ ಸತ್ತವರಿಗೆ ಪರಿಹಾರ ಕೊಡುವ ವಿಚಾರ ಮಾಡ್ತಿಲ್ಲ. ರಾಜ್ಯದಲ್ಲಿ ಅನೌನ್ಸ್ ಮಾಡಿದವರಿಗೆ ಪರಿಹಾರ ಸರಿಯಾಗಿ ತಲುಪಿಲ್ಲ. ಬೇರೆ ಬೇರೆ ರಾಜ್ಯದಲ್ಲಿ ಟ್ಯಾಕ್ಸ್ ಮನ್ನಾ ಮಾಡಿದ್ದಾರೆ. ಇಲ್ಲಿ ಜನರಿಗೆ ಅನುಕೂಲವಾಗೋ ಯಾವ ಕೆಲಸನೂ ಮಾಡಿಲ್ಲ. ಚೆಕ್ ನಮಗೆ ಕೊಡಿ ಒಂದು ರೂಪಾಯಿನೂ ನಾವು ವೇಸ್ಟ್ ಮಾಡಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಯಡಿಯೂರಪ್ಪಗೆ ವಯಸ್ಸಾಗಿದೆ, ಸ್ಪಿರಿಟ್ ಇಲ್ಲ: ಹೆಚ್. ವಿಶ್ವನಾಥ್

    ವಿಶ್ವನಾಥ್ ಒಬ್ಬರೇ ಈ ಮಾತನ್ನು ಆಡಿಲ್ಲ. ಯತ್ನಾಳ್ ಈಶ್ವರಪ್ಪ ಬೇರೆ ಬೇರೆ ಮಿನಿಸ್ಟರ್ ಮಾತಾನಾಡಿದ್ದಾರಲ್ಲ, ನಾವು ಪಾರ್ಟಿ ಇನ್ ಸೈಡ್ ವಿಚಾರಕ್ಕೆ ಹೆಚ್ಚು ಮಾತಾನಾಡಲ್ಲ. ಅರುಣ್ ಸಿಂಗ್ ಅವರೇ ಬಿಎಸ್ ವೈ ಸರ್ಕಾರ ಕೊರೊನಾ ಸಂದರ್ಭದಲ್ಲಿ ಉತ್ತಮ ಕೆಲಸ ಮಾಡಿದೆ ಅಂತೀರಲ್ಲ. 36 ಜನ ಮರ್ಡರ್ ಮಾಡಿದ್ದಾರೆ. ಇಲ್ಲಿ ಒಬ್ಬರ ಮೇಲೂ ಎಫ್ ಐ ಆರ್ ಹಾಕಿಲ್ಲ. ಇದು ಉತ್ತಮ ಕೆಲಸವೇ ಎಂದು ಪ್ರಶ್ನಿಸಿದರು.

    ಆಕ್ಸಿಜನ್ ಐಸಿಯು ಇಲ್ಲದೇ ಜನ ಸತ್ತಿದ್ದಾರೆ. ಇದು ಉತ್ತಮ ಕೊರೊನಾ ನಿರ್ವಹಣೆಯೇ..? ಎಲ್ಲದಕ್ಕೂ ಕೋರ್ಟ್ ಮಧ್ಯಪ್ರವೇಶಿಸಿ ನಿಮಗೆ ತರಾಟೆಗೆ ತೆಗೆದುಕೊಂಡಿರೋದು ಎಂದು ಡಿಕೆಶಿ ಅವರು ಅರುಣ್ ಸಿಂಗ್ ವಿರುದ್ಧ ವಾಗ್ಧಾಳಿ ನಡೆಸಿದರು.

  • ಯಡಿಯೂರಪ್ಪಗೆ ವಯಸ್ಸಾಗಿದೆ, ಸ್ಪಿರಿಟ್ ಇಲ್ಲ: ಹೆಚ್. ವಿಶ್ವನಾಥ್

    ಯಡಿಯೂರಪ್ಪಗೆ ವಯಸ್ಸಾಗಿದೆ, ಸ್ಪಿರಿಟ್ ಇಲ್ಲ: ಹೆಚ್. ವಿಶ್ವನಾಥ್

    – ಬಿಜೆಪಿಯಲ್ಲೂ ಕುಟುಂಬ ರಾಜಕಾರಣ ಇದೆ
    – ಅರುಣ್ ಸಿಂಗ್ ಮುಂದೆ ವಿಶ್ವನಾಥ್ ಬೇಡಿಕೆ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ, ಸ್ಪಿರಿಟ್ ಇಲ್ಲ ಎಂದು ಎಂಎಲ್‍ಸಿ ಹೆಚ್. ವಿಶ್ವನಾಥ್ ಹೇಳಿದ್ದಾರೆ.

    ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅರುಣ್ ಸಿಂಗ್ ಭೇಟಿ ಮಾಡಿದೆ. ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳ ವಸ್ತುಸ್ಥಿತಿ ಹೇಳಿದ್ದೇನೆ. ನಮಗೆ ಮಂತ್ರಿಗಿರಿ ಸಿಕ್ಕಿಲ್ಲ ಅನ್ನೋ ಬೇಸರವಿಲ್ಲ. ಈ ಬಗ್ಗೆ ನಾನು ದೂರುತ್ತಿಲ್ಲ. ಅರುಣ್ ಸಿಂಗ್ ಅವರಿಗೆ ಪಕ್ಷದ ವಸ್ತುಸ್ಥಿತಿಯನ್ನು ಆಳವಾಗಿ ತಿಳಿಸಿದ್ದೇನೆ. ನಾನು ಯಾರ ಬಣವೂ ಅಲ್ಲ, ಯಾರ ವಿರುದ್ಧವೂ ಅಲ್ಲ. ಯಡಿಯೂರಪ್ಪಗೆ ವಯಸ್ಸಾಗಿದೆ, ಸ್ಪಿರಿಟ್ ಇಲ್ಲ ಎಂದರು.

    ನಾನು ಪ್ರಧಾನಿಗಳ ಜತೆ ನೇರ ಸಂಪರ್ಕ ಇಟ್ಕೊಂಡಿದ್ದೇನೆ. ಜೆಡಿಎಸ್ ನಲ್ಲಿ ರಾಜೀನಾಮೆ ಕೊಟ್ಟು, ಹಲವು ವಿಚಾರ ವಿರೋಧ ಮಾಡಿ ಬಂದೆವು. ಬಿಜೆಪಿಯಲ್ಲೂ ಅವೇ ವಿಚಾರಗಳಿವೆ. ಬಿಜೆಪಿಯಲ್ಲೂ ಕುಟುಂಬ ರಾಜಕಾರಣ ಇದೆ. ರಾಕ್ಷಸ ರಾಜಕಾರಣ ಇಲ್ಲೂ ಕಾಣ್ತಿದ್ದೇವೆ. ಯಡಿಯೂರಪ್ಪ ಮಾಡಿದ ಕೆಲಸಗಳ ಬಗ್ಗೆ ಗೌರವ ಇದೆ. ಆದರೂ ಇವತ್ತಿನ ಪ್ರಶ್ನೆ ಯಡಿಯೂರಪ್ಪ ಬಗ್ಗೆ ಅಲ್ಲ ಎಂದು ತಿಳಿಸಿದರು.

    ಹೈಕಮಾಂಡ್ ಎಸ್ ಅಂದ್ರೆ ರಾಜೀನಾಮೆಗೆ ಸಿದ್ಧ ಅಂತ ಖುದ್ದು ಬಿಎಸ್‍ವೈ ಅವರೇ ಹೇಳಿದ್ದಾರೆ. ಆ ಪ್ರಕಾರ ಆಗಿ ಅವರು ಪಕ್ಷದಲ್ಲಿ ಮಾರ್ಗದರ್ಶಕರಾಗಿ ಮುಂದುವರಿಯಲಿ. ವೀರಶೈವ ಲಿಂಗಾಯತ ಸಮುದಾಯದ ಮತ್ತೊಬ್ಬ ನಾಯಕನಿಗೆ ಅವಕಾಶ ಮಾಡಿಕೊಡಲಿ. ಮಠಾಧಿಪತಿಗಳು ಬಸವತತ್ವ ಮೀರಿ ಹೋಗಬಾರದು. ಇನ್ನೊಬ್ಬ ಲಿಂಗಾಯತರನ್ನೇ ಮುಖ್ಯಮಂತ್ರಿ ಮಾಡಿ. ಪಂಚಮಸಾಲಿಸಮುದಾಯದವರನ್ನೇ ಸಿಎಂ ಮಾಡಲಿ. ಅವರಿಗೊಂದು ಅವಕಾಶ ಕೊಡಲಿ. ಲಿಂಗಾಯತ ಮಠಾಧೀಶರಿಗೆ ವಿಶ್ವನಾಥ್ ಮನವಿ ಮಾಡಿದರು.

    ಪಂಚಮಸಾಲಿಯಲ್ಲಿ ನಿರಾಣಿ, ಯತ್ನಾಳ್, ಬೆಲ್ಲದ್ ಇದ್ದಾರೆ. ಯಂಗ್ ಸ್ಟರ್ ಬೇಕಾದರೆ ಬೆಲ್ಲದ್ ಮಾಡಿ. ಮಧ್ಯ ವಯಸ್ಕ ಬೇಕಾದರೆ ನಿರಾಣಿಯವರನ್ನ ಮಾಡಿ. ಎಲ್ಲದಕ್ಕೂ ಬೇಕು ಅಂದ್ರೆ ಯತ್ನಾಳ್ ಅವರನ್ನ ಮಾಡಿ ಎಂದು ತಿಳಿಸಿದರು. ಇದನ್ನೂ ಓದಿ: ಸಿಎಂ ವಿರುದ್ಧ ಸಿಪಿವೈ, ಬೆಲ್ಲದ್, ಯತ್ನಾಳ್ ಚಾರ್ಜ್‍ಶೀಟ್ ಏನು?

    ಸಿಎಂ ಬದಲಾವಣೆಗೆ ವಿಶ್ವನಾಥ್ ಬೇಡಿಕೆ:
    ಅರುಣ್ ಸಿಂಗ್ ಮುಂದೆ ಸಿಎಂ ಬದಲಾವಣೆ ಮಾಡುವಂತೆ ವಿಶ್ವನಾಥ್ ಬೇಡಿಕೆ ಇಟ್ಟಿದ್ದಾರೆ. ಯಡಿಯೂರಪ್ಪ ಮಾರ್ಗದರ್ಶಕರಾಗಿರಲಿ. ಪಂಚಮಸಾಲಿ ಸಮುದಾಯದವರಿಗೆ ಅವಕಾಶ ಕೊಡಲಿ. ಒಂದು ಉತ್ತಮ ತಂಡವನ್ನ ಕೊಡಲಿ. ಯಡಿಯೂರಪ್ಪ ಮಾರ್ಗದರ್ಶಕರಾಗಿರಲಿ. ಅವರ ಜಾಗಕ್ಕೆ ಮತ್ತೊಬ್ಬ ನಾಯಕರು ಬರಲಿ. ಎಲ್ಲರನ್ನು ಒಟ್ಟುಗೂಡಿಸಿಕೊಂಡು ಹೋಗಲಿ ಎಂದು ಬೇಡಿಕೆ ಇಟ್ಟಿರುವುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

  • ಬಿಜೆಪಿಯಲ್ಲಿ ಬಿಕ್ಕಟ್ಟು – ಬಿಎಸ್‍ವೈ ಪರ, ವಿರೋಧ ಯಾರು? ತಟಸ್ಥ ಬಣದಲ್ಲಿ ಯಾರಿದ್ದಾರೆ?

    ಬಿಜೆಪಿಯಲ್ಲಿ ಬಿಕ್ಕಟ್ಟು – ಬಿಎಸ್‍ವೈ ಪರ, ವಿರೋಧ ಯಾರು? ತಟಸ್ಥ ಬಣದಲ್ಲಿ ಯಾರಿದ್ದಾರೆ?

    ಬೆಂಗಳೂರು: ಇವತ್ತು ಸಿಎಂ ಯಡಿಯೂರಪ್ಪ ಮತ್ತು ಕರ್ನಾಟಕ ಬಿಜೆಪಿಗೆ ಬಿಗ್ ಡೇ ಆಗಿದ್ದು 30ಕ್ಕೂ ಹೆಚ್ಚು ಶಾಸಕರ ಬಳಿ ಉಸ್ತುವಾರಿ ಅರುಣ್ ಸಿಂಗ್ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.

    ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಪರ, ಯಡಿಯೂರಪ್ಪ ವಿರೋಧಿ ಮತ್ತು ತಟಸ್ಥ ಬಣಗಳಿವೆ. ಈ ಪೈಕಿ ಯಡಿಯೂರಪ್ಪ ಪರ ಶಾಸಕರ ಸಂಖ್ಯೆ ಹೆಚ್ಚಿದೆ. 30ಕ್ಕೂ ಶಾಸಕರು ಅಭಿಪ್ರಾಯ ಸಂಗ್ರಹಕ್ಕೆ ಹೆಸರು ನೋಂದಣಿ ಮಾಡಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಿಗೆ ಕರೆ ಮಾಡಿ ತಮ್ಮ ಹೆಸರನ್ನು ನೀಡಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಸಿಎಂ ಬಿಎಸ್‍ವೈ ನೇತೃತ್ವದಲ್ಲಿ ಉತ್ತಮ ಕೆಲಸವಾಗುತ್ತಿದೆ: ಅರುಣ್ ಸಿಂಗ್

    ಬಿಎಸ್‍ವೈ ಪರ ಯಾರು?
    ರೇಣುಕಾಚಾರ್ಯ(ಹೊನ್ನಾಳಿ, ದಾವಣಗೆರೆ), ಎ.ಎಸ್. ಪಾಟೀಲ್ ನಡಹಳ್ಳಿ (ಮುದ್ದೇಬಿಹಾಳ, ವಿಜಯಪುರ), ಮಾಡಾಳ್ ವಿರೂಪಾಕ್ಷಪ್ಪ(ಚನ್ನಗಿರಿ, ದಾವಣಗೆರೆ), ರಾಜುಗೌಡ(ಸುರಪುರ, ಯಾದಗಿರಿ), ಪ್ರೀತಂ ಗೌಡ(ಹಾಸನ ನಗರ, ಹಾಸನ), ಬೆಳ್ಳಿ ಪ್ರಕಾಶ್(ಕಡೂರು, ಚಿಕ್ಕಮಗಳೂರು), ಹರತಾಳು ಹಾಲಪ್ಪ(ಸಾಗರ, ಶಿವಮೊಗ್ಗ), ಸಿದ್ದು ಸವದಿ(ತೇರದಾಳ, ಬಾಗಲಕೋಟೆ), ಮಹೇಶ್ ಕುಮಟಳ್ಳಿ( ಅಥಣಿ, ಬೆಳಗಾವಿ), ಮಸಾಲೆ ಜಯರಾಂ(ತುರುವೇಕೆರೆ, ತುಮಕೂರು) ಜ್ಯೋತಿ ಗಣೇಶ್(ತುಮಕೂರು), ರಾಜೇಶ್ ಗೌಡ(ಶಿರಾ, ತುಮಕೂರು), ಪರಣ್ಣ ಮುನವಳ್ಳಿ(ಗಂಗಾವತಿ, ಕೊಪ್ಪಳ).

    ಬಿಎಸ್‍ವೈ ವಿರೋಧಿ ಬಣ
    ಸಿ.ಪಿ.ಯೋಗೇಶ್ವರ್(ಎಂಎಲ್‍ಸಿ, ರಾಮನಗರ), ಎಚ್ ವಿಶ್ವನಾಥ್(ಎಂಎಲ್‍ಸಿ, ಮೈಸೂರು), ಅರವಿಂದ ಬೆಲ್ಲದ್(ಧಾರವಾಡ ಪಶ್ಚಿಮ) ಬಸನಗೌಡ ಪಾಟೀಲ್ ಯತ್ನಾಳ್(ವಿಜಯಪುರ ನಗರ).

    ತಟಸ್ಥ ಬಣದ ಶಾಸಕರು
    ಸುನೀಲ್ ಕುಮಾರ್(ಕಾರ್ಕಳ, ಉಡುಪಿ), ಉದಯ್ ಗರುಡಾಚಾರ್(ಚಿಕ್ಕಪೇಟೆ, ಬೆಂಗಳೂರು), ರೂಪಾಲಿ ನಾಯ್ಕ್(ಕಾರವಾರ, ಉತ್ತರ ಕನ್ನಡ), ಶಂಕರ್ ಪಾಟೀಲ್ ಮುನೇನಕೊಪ್ಪ(ನವಲಗುಂದ, ಧಾರವಾಡ), ಸೋಮಶೇಖರ್ ರೆಡ್ಡಿ(ಬಳ್ಳಾರಿ ನಗರ), ಸತೀಶ್ ರೆಡ್ಡಿ(ಬೊಮ್ಮನಹಳ್ಳಿ, ಬೆಂಗಳೂರು), ಪ್ರದೀಪ್ ಶೆಟ್ಟರ್(ಎಂಎಲ್‍ಸಿ).

  • ಸಿಎಂ ಬಿಎಸ್‍ವೈ ನೇತೃತ್ವದಲ್ಲಿ ಉತ್ತಮ ಕೆಲಸವಾಗುತ್ತಿದೆ: ಅರುಣ್ ಸಿಂಗ್

    ಸಿಎಂ ಬಿಎಸ್‍ವೈ ನೇತೃತ್ವದಲ್ಲಿ ಉತ್ತಮ ಕೆಲಸವಾಗುತ್ತಿದೆ: ಅರುಣ್ ಸಿಂಗ್

    ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಉತ್ತರ ಕೆಲಸಗಳಾಗುತ್ತಿವೆ. ನಾನು ಇದನ್ನು ಪ್ರತಿ ಬಾರಿ ಹೇಳಿದ್ದೇನೆ. ಈ ಬಗ್ಗೆ ಹೆಚ್ಚು ಪ್ರಶ್ನಿಸುವ ಅಗತ್ಯವಿಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದರು.

    ಕುಮಾರ ಕೃಪಾ ಗೆಸ್ಟ್ ಹೌಸ್‍ನಲ್ಲಿ ಈ ಕುರಿತು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಉತ್ತರ ಕೆಲಸಗಳಾಗುತ್ತಿವೆ. ನಾನು ಇದನ್ನು ಪ್ರತಿ ಬಾರಿ ಹೇಳಿದ್ದೇನೆ. ಈ ಬಗ್ಗೆ ಹೆಚ್ಚು ಪ್ರಶ್ನಿಸುವ ಅಗತ್ಯವಿಲ್ಲ. ಬಿಜೆಪಿ ಸಚಿವರು, ಶಾಸಕರು, ನಾಯಕರು ಒಟ್ಟಾಗಿದ್ದಾರೆ. ಅಲ್ಲದೆ ಯಾರೂ ಸಹ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಮಾತನಾಡಬಾರದು. ಪಕ್ಷದ ವೇದಿಕೆಯಲ್ಲೇ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಅರುಣ್ ಸಿಂಗ್ ಪಕ್ಷದ ಶಾಸಕರು ಹಾಗೂ ಕಾರ್ಯಕರ್ತರಿಗೆ ಸೂಚಿಸಿದರು.

    ಅಲ್ಲದೆ ಪಕ್ಷದ ಸಂಘಟನೆ, ಕಾರ್ಯಕರ್ತರ ಬಗ್ಗೆ ಚರ್ಚಿಸಲಾಗುತ್ತಿದೆ. ಬಿಜೆಪಿ ಕಾರ್ಯಕರ್ತರು ಸಾಕಷ್ಟು ಸೇವೆಯಲ್ಲಿ ತೊಡಗಿದ್ದಾರೆ. ಅಲ್ಲದೆ ಅಂತರಾಷ್ಟ್ರೀಯ ಯೋಗ ದಿನದ ಕುರಿತು ಸಹ ಚರ್ಚಿಸಬೇಕಿದೆ ಎಂದು ತಿಳಿಸಿದರು.

    ಸಿಎಂ ಬದಲಾವಣೆ ಬಗ್ಗೆ ಮುಂದೆ ತಿಳಿಸ್ತೇನೆ
    ಇದಕ್ಕೂ ಮೊದಲು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಸಿಎಂ ಬದಲಾವಣೆ ಕುರಿತು ಮುಂದೆ ತಿಳಿಸುತ್ತೇನೆ ಎಂದು ಹೇಳುವ ಮೂಲಕ ನಾಯಕತ್ವ ಬದಲಾವಣೆ ಕುರಿತು ಮಾಹಿತಿ ನೀಡಲು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನಿರಾಕರಿಸಿದ್ದಾರೆ.

    ಕೋವಿಡ್ ಸಂಕಷ್ಟ ಕಾಲದಲ್ಲಿ ಕಾರ್ಯಕರ್ತರು ಸಮರೋಪಾದಿಯಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಜೀವವನ್ನು ಲೆಕ್ಕಿಸದೆ, ಸಾರ್ವಜನಿಕರ ಸೇವೆ ಮಾಡಿದ್ದಾರೆ, ಸೇವೆಯೇ ಸಂಘಟನೆ ಎಂಬ ಮನೋಭಾವದಿಂದ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಿದ್ದಾರೆ. ಅಲ್ಲದೆ ಈ ಸಂದರ್ಭದಲ್ಲಿ ಸೇವೆ ಮಾಡುವುದು ನಮ್ಮ ಪರಮ ಕರ್ತವ್ಯವಾಗಿದೆ. ಆದರೆ ಇಂತಹ ಕಠಿಣ ಪರಿಸ್ಥಿತಿಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದವರು ಆರೋಪ, ಪ್ರತ್ಯಾರೋಪ ಮಾಡುತ್ತಿದ್ದಾರೆ. ಜೆಡಿಎಸ್‍ನವರು ಇಂತಹ ಸಂದರ್ಭದಲ್ಲಿ ಕ್ವಾರಂಟೈನ್‍ನಲ್ಲಿ ಉಳಿದಿದ್ದಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ಏನ್ ಹೇಳ್ಬೇಕೋ ಅದನ್ನು ಕರ್ನಾಟಕದಲ್ಲೇ ಹೇಳ್ತೀನಿ: ಅರುಣ್ ಸಿಂಗ್

    ಅವರು ಜನತೆಯ ಸೇವೆಯನ್ನು ಮಾಡುತ್ತಿಲ್ಲ, ಆದರೆ ಬಿಜೆಪಿ ಕಾರ್ಯಕರ್ತರು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು ಜನತೆಗೆ ತಿಳಿದಿದೆ ಸಹ, ಅವರ ಕಾರ್ಯದ ಕುರಿತು ಸಮೀಕ್ಷೆ ಮಾಡಬೇಕಿದೆ. ಈ ಮೂಲಕ ಸೇವೆಯ ಮುಂದೆ ಹೇಗೆ ನಡೆಸಬೇಕು ಎಂಬುದರ ಕುರಿತು ಸಹ ನೋಡಬೇಕಿದೆ. ಬಿಜೆಪಿ ಕಾರ್ಯಕರ್ತರು ಗಿಡ ನೆಡುವುದು, ಒನ್ ಟೈಪ್ ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಮೂಡಿಸುವುದು ಸೇರಿದಂತೆ ಹಲವು ಕಾರ್ಯಗಳಲ್ಲಿ ತೊಡಗಿದ್ದಾರೆ. ಅಲ್ಲದೆ ಮುಂದೆ ಯೋಗ ದಿನಾಚರಣೆಯನ್ನು ಸಹ ಅದ್ಧೂರಿಯಾಗಿ ಮಾಡಬೇಕಿದೆ. ಈ ಕಾರ್ಯಕ್ರಮಗಳ ಕುರಿತು ಸಹ ಕಾರ್ಯಕರ್ತರೊಂದಿಗೆ ಹಾಗೂ ಬಿಜೆಪಿ ನಾಯಕರೊಂದಿಗೆ ಚರ್ಚೆ ನಡೆಸಬೇಕಿದೆ ಎಂದು ವಿವರಿಸಿದರು.

    ಅರುಣ್ ಸಿಂಗ್ ಸ್ವಾಗತಕ್ಕೆ ದೆಹಲಿ ವಿಶೇಷ ಪ್ರತಿನಿಧಿ ಶಂಕರ್ ಗೌಡ ಪಾಟೀಲ್ ಆಗಮಿಸಿದ್ದರು. ಜೊತೆಗೆ ಸಾಕಷ್ಟು ಬಿಜೆಪಿ ಕಾರ್ಯಕರ್ತರು ಸಹ ಆಗಮಿಸಿದ್ದರು. ಅಲ್ಲದೆ ಹವಾಮಾನದ ವೈಪರೀತ್ಯ ಹಿನ್ನೆಲೆ ವಿಮಾನ 25 ನಿಮಿಷ ತಡವಾಗಿ ವಿಮಾನ ಲ್ಯಾಂಡ್ ಆಯಿತು. 3.55ಕ್ಕೆ ಏರ್ಪೋರ್ಟ್ ಗೆ ಆಗಮಿಸಲಿರುವ ಅರುಣ್ ಸಿಂಗ್, ಕಾರ್ಯಕರ್ತರೊಂದಿಗೆ ನಡೆದರು. ಈ ವೇಳೆ ಸಾಮಾಜಿಕ ಅಂತರ ಕಾಪಾಡದ್ದಕ್ಕೆ ಕಾರ್ಯಕರ್ತರು ಹಾಗೂ ಪೋಲೀಸರ ನಡುವೆ ಮಾತಿನ ಚಕಮಕಿ ಸಹ ನಡೆಯಿತು.

  • ನಾಯಕತ್ವ ಬದಲಾವಣೆ ನೂರಕ್ಕೆ ನೂರು ಸುಳ್ಳು: ಈಶ್ವರಪ್ಪ

    ನಾಯಕತ್ವ ಬದಲಾವಣೆ ನೂರಕ್ಕೆ ನೂರು ಸುಳ್ಳು: ಈಶ್ವರಪ್ಪ

    ಬೆಂಗಳೂರು: ನಾಯಕತ್ವ ಬದಲಾವಣೆ ಅನ್ನೋದು ನೂರಕ್ಕೆ ನೂರು ಸುಳ್ಳು ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕರ್ನಾಟಕದ ಭಾರತೀಯ ಜನತಾ ಪಾರ್ಟಿಯಲ್ಲಿ ಶಾಸಕರು ಸಚಿವರ ನಡುವೆ ಸ್ವಲ್ಪ ಗೊಂದಲ ಇರುವುದು ನಿಜ. ಅದರ ಬಗ್ಗೆ ಮಾತುಕತೆ ನಡೆಸಿ ಗೊಂದಲ ನಿವಾರಣೆ ಮಾಡಲು ಅರುಣ್ ಸಿಂಗ್ ಬರುತ್ತಿದ್ದಾರೆ. ಮುಖ್ಯಮಂತ್ರಿ ಬದಲಾವಣೆಯೇ ಪ್ರಮುಖ ಅಂಶ ಅನ್ನೋದು ಸುಳ್ಳು ಎಂದರು.

    ಭಾರತಿಯ ಜನತಾ ಪಾರ್ಟಿಯಲ್ಲಿ ಮಾತ್ರ ಈ ರೀತಿ ನಾಲ್ಕು ಗೋಡೆಯ ಮಧ್ಯದಲ್ಲಿ ಮಾತನಾಡುವ ಅವಕಾಶ ಇರುವುದು. ಜಮೀರ್, ಸಿದ್ದರಾಮಯ್ಯ ಚಾಮರಾಜಪೇಟೆಗೆ ಬರ್ತಾರೆ, ಮುಂದೆ ಸಿಎಂ ಆಗ್ತಾರೆ ಅಂತಾರೆ. ಅವರೆ ಬಿಫಾರಂ ಕೊಡುವುದಾ…? ಅವರೆ ಸಿಎಂ ಮಾಡುವುದಾ..? ಹೈಕಮಾಂಡ್ ಇಲ್ವಾ, ಕೆಪಿಸಿಸಿ ಅಧ್ಯಕ್ಷರು ಇಲ್ವಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಯಡಿಯೂರಪ್ಪ ಸಮರ್ಥ ನಾಯಕ, ಅವರನ್ನೇ ಮುಂದುವರಿಸಿ – ವೀರಶೈವ ಲಿಂಗಾಯತ ಯುವ ವೇದಿಕೆ

    ರೇಣುಕಾಚಾರ್ಯ, ಯೋಗೇಶ್ವರ್, ಸುನೀಲ್ ಕುಮಾರ್ ಎಲ್ಲರು ಮಾತನಾಡಿದಾರೆ ಹೌದು. ಅವರಿಗೆ ಮಾತನಾಡಬೇಡಿ ಅಂತ ನಾನು ಹೇಳಿದ್ದೇನೆ. ಆ ಕಾರಣಕ್ಕೆ ಅರುಣ್ ಸಿಂಗ್ ಬರುತ್ತಿದ್ದಾರೆ. ಎಲ್ಲಾ ಗೊಂದಲ ಪರಿಹಾರವಾಗುತ್ತೆ. ಭಾರತೀಯ ಜನತಾ ಪಾರ್ಟಿಯ ಈ ವ್ಯವಸ್ಥೆ ಕಾಂಗ್ರೆಸ್ಸಿನಲ್ಲಿ ಇಲ್ಲಾ. 17 ಜನ ಬಂದಿದ್ದರಿಂದಲೇ ನಮಗೆ ಸರ್ಕಾರ ಬಂದಿದೆ. ಪೂರ್ಣ ಬಹುಮತ ಬಂದಿದ್ದರೆ ಈ ರೀತಿ ಸಮಸ್ಯೆ ಇರುತ್ತಿರಲಿಲ್ಲ ಅನ್ನೋದು ನನ್ನ ಅಭಿಪ್ರಾಯ. ನೀವು ಏನು ಬೇಕಾದರು ತಿಳಿದುಕೊಳ್ಳಿ. ಕೇಂದ್ರದ ನಾಯಕರು ಏನು ಹೇಳ್ತಾರೋ ಅದನ್ನ ಶಿರಸ್ಸಾವಹಿಸಿ ಪಾಲಿಸುತ್ತೇನೆ. ನಮ್ಮ ನಾಯಕರ ತೀರ್ಮಾನವನ್ನ ರಾಜ್ಯದ ಎಲ್ಲರು ಪಾಲಿಸಲೇಬೇಕು ಎಂದು ಈಶ್ವರಪ್ಪ ತಿಳಿಸಿದ್ದಾರೆ.

  • ಏನ್ ಹೇಳ್ಬೇಕೋ ಅದನ್ನು ಕರ್ನಾಟಕದಲ್ಲೇ ಹೇಳ್ತೀನಿ: ಅರುಣ್ ಸಿಂಗ್

    ಏನ್ ಹೇಳ್ಬೇಕೋ ಅದನ್ನು ಕರ್ನಾಟಕದಲ್ಲೇ ಹೇಳ್ತೀನಿ: ಅರುಣ್ ಸಿಂಗ್

    ನವದೆಹಲಿ: ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಇಂದು ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದು, ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.

    ಕರ್ನಾಟಕಕ್ಕೆ ಹೊಗ್ತಿದ್ದಿನಿ, ಏನು ಹೇಳಬೇಕೋ ಅದನ್ನು ಕರ್ನಾಟಕದಲ್ಲಿಯೇ ಹೇಳುತ್ತೇನೆ. ಮೂರು ದಿನಗಳ ಕಾಲ ಕರ್ನಾಟಕದಲ್ಲಿ ಇರಲಿದ್ದೇನೆ. ಹೀಗಾಗಿ ಅಲ್ಲಿಯೇ ಹೋಗಿ ಮಾತನಾಡುವುದಾಗಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದರು.

    ಅರುಣ್ ಸಿಂಗ್ ಅವರು ಬೆಂಗಳೂರಿಗೂ ಭೇಟಿಗೂ ಮುನ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ರಾಜ್ಯದಲ್ಲಿ ಚರ್ಚಿಸಬೇಕಾದ ಪ್ರಮುಖ ವಿಚಾರಗಳ ಬಗ್ಗೆ ಅರುಣ್ ಸಿಂಗ್, ನಡ್ಡಾ ಚರ್ಚೆ ಮಾಡಿದರು. ಈ ವೇಳೆ ನಡ್ಡಾ ಹಲವು ಸಲಹೆಗಳನ್ನು ನೀಡಿದ್ದು, ನಡ್ಡಾ ನೀಡಿರುವ ಸಲಹೆಗಳ ಆಧಾರದ ಮೇಲೆ ಅರುಣ್ ಸಿಂಗ್ ರಾಜ್ಯದಲ್ಲಿ ಮಾಹಿತಿ ಕಲೆ ಹಾಕಲಿದ್ದಾರೆ. ಇದನ್ನೂ ಓದಿ: ಕೆಲವರು ಸೂಟು ಹೊಲಿಸಿ ಸಿಎಂ ಆಗುವ ತಿರುಕನ ಕನಸು ಕಾಣ್ತಿದ್ದಾರೆ: ರೇಣುಕಾಚಾರ್ಯ

    ಇತ್ತ ಇಂದು ಅರುಣ್ ಸಿಂಗ್ ಆಗಮನ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗುತ್ತಿದ್ದಾರೆ. ಶಾಸಕ ರಾಜುಗೌಡ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಹಲವು ಶಾಸಕರು ಇಂದು ಸಿಎಂ ಅವರ ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಚರ್ಚೆ ನಡೆಸುತ್ತಿದ್ದಾರೆ.

  • ಬಿಜೆಪಿ ಬಿಕ್ಕಟ್ಟು – ಹೈಕಮಾಂಡ್ ಮುಂದಿರುವ 3 ಆಯ್ಕೆಗಳು ಏನು?

    ಬಿಜೆಪಿ ಬಿಕ್ಕಟ್ಟು – ಹೈಕಮಾಂಡ್ ಮುಂದಿರುವ 3 ಆಯ್ಕೆಗಳು ಏನು?

    ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾಗ್ತಾರಾ? ಯಡಿಯೂರಪ್ಪಗೆ ಹೈಕಮಾಂಡ್ ಶಾಕ್ ಕೊಡುತ್ತಾ? ಅಥವಾ ಅವರ ವಿರೋಧಿ ಬಣಕ್ಕೆ ಶಾಕ್ ಕೊಡುತ್ತಾ? ರಾಜ್ಯ ಬಿಜೆಪಿಯಲ್ಲಿ ಮುಂದೇನು? ಭಿನ್ನಮತ ಶಮನವಾಗುತ್ತಾ ಇಲ್ವಾ? ಈ ಎಲ್ಲಾ ಪ್ರಶ್ನೆಗಳಿಗೆ, ಗೊಂದಲಗಳಿಗೆ ಉತ್ತರ ಸಿಗುವ ಕಾಲ ಸನ್ನಿಹಿತವಾಗಿದೆ.

    ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ ಎಂದು ಹೈಕಮಾಂಡ್ ಪ್ರತಿನಿಧಿ ಅರುಣ್ ಸಿಂಗ್ ಈಗಾಗಲೇ ಹೇಳಿದ್ದಾರೆ. ಯಡಿಯೂರಪ್ಪ ಕೂಡ ಇನ್ನು ಎರಡು ವರ್ಷವೂ ನಾನೇ ಸಿಎಂ ಎನ್ನುತ್ತಿದ್ದಾರೆ. ಆದರೆ ಬಿಎಸ್‍ವೈ ವಿರೋಧಿಗಳು ಮಾತ್ರ ರಣತಂತ್ರ ರೂಪಿಸುವುದನ್ನು ನಿಲ್ಲಿಸಿಲ್ಲ. ಮೇಲಿಂದ ಮೇಲೆ ದಾಳ ಉರುಳಿಸುತ್ತಿದ್ದಾರೆ.

    ಜೆಪಿ ನಡ್ಡಾ, ಅರುಣ್ ಸಿಂಗ್ ಅವರನ್ನು ದೆಹಲಿಯಲ್ಲಿ ಅರವಿಂದ್ ಬೆಲ್ಲದ್ ಭೇಟಿ ಆಗಿದ್ದರೆ ಮಂಗಳವಾರ ಬೆಂಗಳೂರಿನಲ್ಲಿ ಗೃಹ ಸಚಿವ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಒಂದು ಗಂಟೆ ಚರ್ಚೆ ನಡೆಸಿದ್ದಾರೆ. ಇದ್ದಕ್ಕಿದ್ದಂತೆ ಸಚಿವ ಯೋಗೇಶ್ವರ್ ಹೈದರಾಬಾದ್‍ಗೆ ತೆರಳಿದ್ದು, ಬಿಎಸ್‍ವೈ ಕೆಳಗಿಳಿಸಲು ಭಾರೀ ಪ್ಲಾನ್ ರೂಪಿಸ್ತಿದ್ದಾರಾ ಎಂಬ ಅನುಮಾನ ಮೂಡಿದೆ.  ಇದನ್ನೂ ಓದಿ : ನಾವು ಬಿಜೆಪಿಗೆ ಬಂದಿದ್ದಕ್ಕೆ ಈಶ್ವರಪ್ಪ ಮಿನಿಸ್ಟರ್ ಆಗಿದ್ದು: ಬಿ.ಸಿ.ಪಾಟೀಲ್ ತಿರುಗೇಟು

    ಈ ಬೆಳವಣಿಗೆ ನಡುವೆ ಇಂದಿನಿಂದ ಮೂರು ದಿನ ಅರುಣ್ ಸಿಂಗ್ ಬೆಂಗಳೂರು ಪ್ರವಾಸ ಕೈಗೊಳ್ಳುತ್ತಿದ್ದಾರೆ. ಅರುಣ್ ಸಿಂಗ್ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಿಎಂ ವಿರೋಧಿ ಬಣ, ಶಾಸಕರನ್ನು ಒಗ್ಗೂಡಿಸುವ ಪ್ರಯತ್ನ ನಡೆಸುತ್ತಿದೆ. ಅದರಲ್ಲೂ, ಉತ್ತರ ಕರ್ನಾಟಕದ ಇಬ್ಬರು ಶಾಸಕರು ತಮಗೆ ಬೆಂಬಲ ನೀಡುವಂತೆ ಕಂಡ ಕಂಡ ಶಾಸಕರಿಗೆ ದೂರವಾಣಿ ಕರೆ ಮಾಡಿ ಮನವಿ ಮಾಡುತ್ತಿದ್ದಾರೆ.

    ಅರುಣ್ ಸಿಂಗ್ ಪ್ರವಾಸದ ಮೊದಲ ದಿನವಾದ ನಾಳೆ ಸಂಜೆ ಬಿಜೆಪಿ ಕಚೇರಿಯಲ್ಲಿ ಸಚಿವರ ಮೌಲ್ಯಮಾಪನ ನಡೆಯಲಿದ್ದು, ಈ ಸಭೆಯಲ್ಲಿ ಹಾಜರಿರುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್‍ಗೆ ಸೂಚಿಸಲಾಗಿದೆ. ಒಂದು ವೇಳೆ ನಾಯಕತ್ವ ಬದಲಾವಣೆ ಆಗದಿದ್ದರೆ, ಸಂಪುಟ ಪುನಾರಚನೆ ಆಗಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಇದು ಕೆಲ ಸಚಿವರ ಆತಂಕಕ್ಕೆ ಕಾರಣವಾಗಿದೆ.

    ಹೈಕಮಾಂಡ್ ಮುಂದಿರುವ ಆಯ್ಕೆಗಳೇನು?
    ನಾಯಕತ್ವ ಬದಲಾವಣೆ:
    ಈಗಾಗಲೇ ಸಿಎಂ ಬದಲಾವಣೆ ಇಲ್ಲ ಅಂತ ಸ್ಪಷ್ಟವಾಗಿ ಹೇಳಿರುವ ಹಿನ್ನೆಲೆಯಲ್ಲಿ ಈ ಆಯ್ಕೆ ಜಾರಿಯಾಗುವುದು ಅನುಮಾನ.

    ಸಂಪುಟ ಪುನಾರಚನೆ:
    ಈ ಸಾಧ್ಯತೆ ಹೆಚ್ಚಿದೆ. ಖಾಲಿ ಇರುವ ಸಚಿವ ಸ್ಥಾನ ಜೊತೆಗೆ ಕೆಲವು ಸಚಿವರು ಕೈಬಿಡುವ ಸಾಧ್ಯತೆ ಇದೆ. ಮೌಲ್ಯಮಾಪನ ಬಳಿಕ ಅಂತಿಮ ನಿರ್ಧಾರವಾಗಲಿದೆ.

    ಶಾಸಕಾಂಗ ಸಭೆ
    ಅತೃಪ್ತರ ಬೇಡಿಕೆಯಂತೆ ಶಾಸಕಾಂಗ ಸಭೆ ಕರೆಯಬಹುದು. ನಾಡಿದ್ದು ಯಾವುದೇ ಕಾರ್ಯಕ್ರಮ ಇಲ್ಲದಿರುವುದರಿಂದ ಶಾಸಕರ ಸಭೆ ನಡೆಸಿ, ಹೈಕಮಾಂಡಿಗೆ ವರದಿ ಸಲ್ಲಿಸಬಹುದು. ಈಗಾಗಲೇ ಕಾರ್ಕಳ ಶಾಸಕ ಸುನಿಲ್ ಕುಮಾರ್, ನಮ್ಮ ಅಭಿಪ್ರಾಯಗಳನ್ನು ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲವಾದ್ದರಿಂದ ಪಕ್ಷದ ವರಿಷ್ಠರು ಅಭಿಪ್ರಾಯ ಆಲಿಸಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದರು.

  • ಧರ್ಮ ಬಿಟ್ಟು ರಾಜಕಾರಣವಿಲ್ಲ, ರಾಜಕಾರಣ ಬಿಟ್ಟು ಧರ್ಮವಿಲ್ಲ: ಸಚಿವ ಬಿ.ಸಿ.ಪಾಟೀಲ್

    ಧರ್ಮ ಬಿಟ್ಟು ರಾಜಕಾರಣವಿಲ್ಲ, ರಾಜಕಾರಣ ಬಿಟ್ಟು ಧರ್ಮವಿಲ್ಲ: ಸಚಿವ ಬಿ.ಸಿ.ಪಾಟೀಲ್

    ಚಾಮರಾಜನಗರ: ಸಿಎಂ ಯಡಿಯೂರಪ್ಪ ಪರ ಮಠಾಧೀಶರ ಬ್ಯಾಟಿಂಗ್ ವಿಚಾರವಾಗಿ ಪ್ರತಿಕ್ರಿಯಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್, ಧರ್ಮ ಬಿಟ್ಟು ರಾಜಕಾರಣವಿಲ್ಲ, ರಾಜಕಾರಣ ಬಿಟ್ಟು ಧರ್ಮವಿಲ್ಲ. ಪ್ರತಿಯೊಬ್ಬರಿಗು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇದೆ, ವಾಕ್ ಸ್ವಾತಂತ್ರ್ಯ ಇದೆ, ಮಠಾಧೀಶರು ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

    ಚಾಮರಾಜನಗರ ಜಿಲ್ಲೆಯಲ್ಲಿ ಮಾತನಾಡಿದ ಅವರು, ಸಿಎಂ ಬದಲಾವಣೆ ಇಲ್ಲ ಎಂದು ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಸ್ಪಷ್ಡಪಡಿಸಿದ್ದಾರೆ. ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮಾಮೂಲಿಯಂತೆ ಪಕ್ಷದ ಆಗು ಹೋಗುಗಳು ಹಾಗು ಪಕ್ಷ ಸಂಘಟನೆ ಬಗ್ಗೆ ಚರ್ಚಿಸಲು ಬರುತ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾವು ಬಿಜೆಪಿಗೆ ಬಂದಿದ್ದಕ್ಕೆ ಈಶ್ವರಪ್ಪ ಮಿನಿಸ್ಟರ್ ಆಗಿದ್ದು: ಬಿ.ಸಿ.ಪಾಟೀಲ್ ತಿರುಗೇಟು

    ಮುಖ್ಯಮಂತ್ರಿ ಬದಲಾವಣೆ ವಿಚಾರ ಸಂಪೂರ್ಣ ಸುಳ್ಳು, ಮುಂದಿನ ಎರಡು ವರ್ಷ ಕಾಲ ಯಡಿಯೂರಪ್ಪ ನವರೇ ಸಿಎಂ ಆಗಿರುತ್ತಾರೆ. ನಾನೇ ಮುಂದಿನ ಸಿಎಂ ಎಂದು ಯತ್ನಾಳ್ ಎಲ್ಲಾ ಶಾಸಕರಿಗೆ ಫೋನ್ ಮಾಡಿ ಬೆಂಬಲ ಕೋರುತ್ತಿದ್ದಾರೆಂಬ ರೇಣುಕಾಚಾರ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನಗೆ ಯಾರಿಂದಲೂ ಯಾವುದೇ ಫೋನ್ ಬಂದಿಲ್ಲ ಎಂದು ತಿಳಿಸಿದ್ದಾರೆ.  ಇದನ್ನೂ ಓದಿ: ಈಶ್ವರಪ್ಪನವರಿಗೆ ಈಗ ಅರಿವಾಗುತ್ತಿರುವುದು ಆಶ್ಚರ್ಯ: ಆರ್.ವಿ.ದೇಶಪಾಂಡೆ

  • ನಾವು ಬಿಜೆಪಿಗೆ ಬಂದಿದ್ದಕ್ಕೆ ಈಶ್ವರಪ್ಪ ಮಿನಿಸ್ಟರ್ ಆಗಿದ್ದು: ಬಿ.ಸಿ.ಪಾಟೀಲ್ ತಿರುಗೇಟು

    ನಾವು ಬಿಜೆಪಿಗೆ ಬಂದಿದ್ದಕ್ಕೆ ಈಶ್ವರಪ್ಪ ಮಿನಿಸ್ಟರ್ ಆಗಿದ್ದು: ಬಿ.ಸಿ.ಪಾಟೀಲ್ ತಿರುಗೇಟು

    ಮೈಸೂರು: ನಾವು 17 ಜನ ಬಿಜೆಪಿಗೆ ಬಂದಿದ್ದರಿಂದ ಸರ್ಕಾರ ರಚನೆಯಾಗಿ, ಈಶ್ವರಪ್ಪ ಮಿನಿಸ್ಟರ್ ಆಗಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿರುಗೇಟು ನೀಡಿದ್ದಾರೆ.

    17 ಜನ ಹೊರಗಿನಿಂದ ಬಂದಿದ್ದರಿಂದ ಸಮಸ್ಯೆ ಆಗಿದೆ ಎಂಬ ಕೆ.ಎಸ್.ಈಶ್ವರಪ್ಪ ಹೇಳಿಕೆ ವಿಚಾರಕ್ಕೂ ಈಶ್ವರಪ್ಪಗೆ ಟಾಂಗ್ ಕೊಟ್ಟ ಬಿ.ಸಿ.ಪಾಟೀಲ್, 17 ಜನ ಬಿಜೆಪಿಗೆ ಬಂದ ಕಾರಣದಿಂದ ಸರ್ಕಾರ ಬಂದಿದೆ. ಸರ್ಕಾರ ಬಂದಿರುವ ಕಾರಣ ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾರೆ. ಈಶ್ವರಪ್ಪ ಆ ರೀತಿ ಹೇಳಿಕೆ ಕೊಟ್ಟಿದ್ದರೆ ಇದು ಸರಿಯಲ್ಲ. ಅವರು ಆ ರೀತಿ ಮಾತನಾಡಿಲ್ಲ ಎಂದುಕೊಳ್ಳುತ್ತೇನೆ ಎಂದರು.

    ಕೆಲವರು ನಾಯಕತ್ವ ವಿಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಈ ಎಲ್ಲಾ ವಿಚಾರಗಳಿಗು ನಾಳೆ ತೆರೆ ಬೀಳಲಿದೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಬರುತ್ತಿದ್ದಾರೆ. ಇವರು ಎಲ್ಲರಿಗೂ ತಿಳಿ ಹೇಳಲಿದ್ದಾರೆ. ಪಕ್ಷದಲ್ಲಿ ಗೊಂದಲಗಳಿದ್ದರೆ ಅದನ್ನ ಆಂತರಿಕವಾಗಿ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಬೆಂಗ್ಳೂರು ಭೇಟಿಗೆ ಮುಹೂರ್ತ ಫಿಕ್ಸ್

    ಈಶ್ವರಪ್ಪ ಹೇಳಿದ್ದೇನು?: ಭಾರತೀಯ ಜನತಾ ಪಾರ್ಟಿಗೆ ಪೂರ್ಣ ಬಹುಮತ ಸಿಕ್ಕಿದ್ದರೆ ಮುಖ್ಯಮಂತ್ರಿ ಬದಲಾವಣೆಯ ಗೊಂದಲ ಆಗುತ್ತಿರಲಿಲ್ಲ. 17 ಜನ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದ ನಂತರ ಈ ಸಣ್ಣ ಸಣ್ಣ ಗೊಂದಲವಾಗಿದೆ. ಗೊಂದಲ ನಿರ್ಮಾಣ ಮಾಡಿಕೊಂಡವರು ಪಕ್ಷದ ನಾಯಕರಲ್ಲ. ಚುನಾವಣೆ ಫಲಿತಾಂಶದ ಗೊಂದಲ. ಕೇಂದ್ರ ನಾಯಕ ಅರುಣ್ ಸಿಂಗ್ ಬೆಂಗಳೂರಿಗೆ ಬರುತ್ತಾರೆ ಸಮಸ್ಯೆ ಆಲಿಸಿ ಪರಿಹಾರ ನೀಡುತ್ತಾರೆ. ಯಾರಿಗೆ ಏನು ಅಸಮಧಾನವಿದೆಯೋ ಕೇಂದ್ರದ ನಾಯಕರ ಮುಂದೆ ಹೇಳಿಕೊಳ್ಳುತ್ತಾರೆ ಎದು ಸಚಿವ ಈಶ್ವರಪ್ಪ ಹೇಳಿದ್ದರು. ಇದನ್ನೂ ಓದಿ: ನಾಯಕತ್ವ ಬದಲಾವಣೆಗೆ ದೆಹಲಿಯಲ್ಲಿ ಬೆಲ್ಲದ್ ರಣತಂತ್ರ- ಅರುಣ್ ಸಿಂಗ್ ಮುಂದೆ ಬೆಲ್ಲದ್ ಹೇಳಿದ್ದೇನು?