Tag: ಅರುಣಾಚಲ ಪ್ರದೇಶ

  • ಚೀನಾದಿಂದ ಅರುಣಾಚಲ ಪ್ರದೇಶದ ಹುಡುಗನ ಅಪಹರಣ – ಪ್ರಧಾನಿ ವಿರುದ್ಧ ರಾಗಾ ಕಿಡಿ

    ಚೀನಾದಿಂದ ಅರುಣಾಚಲ ಪ್ರದೇಶದ ಹುಡುಗನ ಅಪಹರಣ – ಪ್ರಧಾನಿ ವಿರುದ್ಧ ರಾಗಾ ಕಿಡಿ

    ನವದೆಹಲಿ: ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯ ಹುಡುಗನನ್ನು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‍ಎ) ಅಪಹರಿಸಿದ ಘಟನೆಯ ಕುರಿತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವೀಟ್ ಮಾಡಿ ಪ್ರಧಾನಿ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?: ಗಣರಾಜ್ಯೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಇದಕ್ಕೂ ಮೊದಲೇ ಭಾರತದ ಹುಡುಗನನ್ನು ಚೀನಾ ಅಪಹರಿಸಿದೆ. ನಾವು ಮಿರಾಮ್ ಟ್ಯಾರೋನ್ ಅವರ ಕುಟುಂಬದೊಂದಿಗೆ ನಿಲ್ಲುತ್ತೇವೆ ಹಾಗೂ ಅವರ ಭರವಸೆಯನ್ನು ಹುಸಿಗೊಳಿಸುವುದಿಲ್ಲ. ಸೋಲನ್ನು ಒಪ್ಪಿಕೊಳ್ಳುವುದಿಲ್ಲ ಎಂದು ತಿಳಿಸಿದರು.

    ಪ್ರಧಾನಿ ಮೋದಿಯವರ ಮೌನವೇ ಅವರ ಹೇಳಿಕೆಯಾಗಿದೆ. ಇದಕ್ಕೆಲ್ಲಾ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

    ಘಟನೆಯೇನು?: ಅರುಣಾಚಲ ಪ್ರದೇಶದಲ್ಲಿ ತ್ಸಾಂಗ್ಪೋ ನದಿಯು ಭಾರತವನ್ನು ಪ್ರವೇಶಿಸುವ ಸಮೀಪದಲ್ಲಿ ಜೀಡೋ ಗ್ರಾಮದ ಮಿರಾಮ್ ಟ್ಯಾರೋನ್ (17) ಹಾಗೂ ಆತನ ಸ್ನೇಹಿತ ಜಾನಿ ಯಾಯಿಂಗ್ ಬೇಟೆಗಾಗಿ ತೆರಳಿದ್ದರು. ಅಲ್ಲಿ ಮಿರಾಮ್ ಅವರನ್ನು ಪಿಎಲ್‍ಎ ಅಧಿಕಾರಿಗಳನ್ನು ಅಪಹರಿಸಿದ್ದರು. ಅವನ ಜೊತೆಯಿದ್ದ ಸ್ನೇಹಿತ ಜಾನಿ ಯಾಯಿಂಗ್ ಪಿಎಲ್‍ಎ ಅಧಿಕಾರಿಗಳಿಂದ ತಪ್ಪಿಸಿಕೊಂಡು ಬಂದಿದ್ದಾನೆ. ನಂತರ ವಿರಾಮನ್ ಟ್ಯೂರೋನ್‍ನ ಅಪಹರಣದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ.  ಓದಿ: ಲಡಾಖ್‌ನಲ್ಲಿ ಚೀನಾದಿಂದ ಪ್ಯಾಂಗ್ಯಾಂಗ್‌ ಸೇತುವೆ ನಿರ್ಮಾಣ – ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

    ಘಟನೆ ಕುರಿತು ನಿನ್ನೆ ರಾಜ್ಯ ಸಂಸದ ತಪಿರ್ ಗಾವೊ ಟ್ವೀಟ್ ಮಾಡಿ, ಭಾರತ ಸರ್ಕಾರದ ಎಲ್ಲಾ ಏಜೆನ್ಸಿಗಳು ಮಿರಾಮ್ ಟ್ಯಾರೋನ್‍ನನ್ನು ಶೀಘ್ರ ಬಿಡುಗಡೆ ಮಾಡಲು ಕ್ರಮ ವಹಿಸುವಂತೆ ಮನವಿ ಮಾಡಿದ್ದರು. ತ್ಸಾಂಗ್ಪೋ ನದಿಯನ್ನು ಅರುಣಾಚಲ ಪ್ರದೇಶದಲ್ಲಿ ಸಿಯಾಂಗ್ ಮತ್ತು ಅಸ್ಸಾಂನಲ್ಲಿ ಬ್ರಹ್ಮಪುತ್ರ ಎಂದು ಕರೆಯುತ್ತಾರೆ. ಇದನ್ನೂ ಓದಿ: ಚರಣ್‍ಜಿತ್ ಸಿಂಗ್ ಚನ್ನಿ ಅಪ್ರಾಮಾಣಿಕ ವ್ಯಕ್ತಿ: ಅರವಿಂದ್ ಕೇಜ್ರಿವಾಲ್

  • ಅರುಣಾಚಲ ಪ್ರದೇಶ ಈಗ ಕೊರೊನಾ ವೈರಸ್ ಮುಕ್ತ ರಾಜ್ಯ

    ಅರುಣಾಚಲ ಪ್ರದೇಶ ಈಗ ಕೊರೊನಾ ವೈರಸ್ ಮುಕ್ತ ರಾಜ್ಯ

    ಇಟಾನಗರ: ಅರುಣಾಚಲ ಪ್ರದೇಶವು ಭಾನುವಾರ ಕೊರೊನಾ ವೈರಸ್ ಮುಕ್ತ ರಾಜ್ಯವಾಗಿದೆ. ಕಳೆದ 24 ಗಂಟೆಯಲ್ಲಿ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ.

    ರಾಜ್ಯದಲ್ಲಿ ಒಟ್ಟು 16,836 ರಷ್ಟು ಸೋಂಕಿತರಿದ್ದರು. ಈ ಪೈಕಿ 16,780 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 56 ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಚೇತರಿಕೆ ಪ್ರಮಾಣ ಶೇ.99.66 ರಷ್ಟಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶನಿವಾರ 312 ಮಂದಿಗೆ ಕೊರೊನಾ ಪರೀಕ್ಷೆ ಮಾಡಿಸಲಾಗಿದೆ.

    ಇಲ್ಲಿಯವರೆಗೆ ಒಟ್ಟು 4,05,647 ಜನರನ್ನು ಪರೀಕ್ಷಿಸಲಾಗಿದೆ. ರಾಜ್ಯದಲ್ಲಿ 32,325 ಆರೋಗ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಲಸಿಕೆಯನ್ನು ನೀಡಲಾಗಿದೆ. ವಾರದಲ್ಲಿ ನಾಲ್ಕುದಿನ ಲಸಿಕೆ ನೀಡುವ ಕಾರ್ಯವನ್ನು ಆರೋಗ್ಯ ಇಲಾಖೆ ಮಾಡುತ್ತಿದೆ.

  • ಮತ್ತೆ ಗಡಿಯಲ್ಲಿ ಚೀನಾ ಕ್ಯಾತೆ – ಅರುಣಾಚಲ ಪ್ರದೇಶದ ಗಡಿ ಭಾಗದಲ್ಲಿ 3 ಗ್ರಾಮ ನಿರ್ಮಾಣ

    ಮತ್ತೆ ಗಡಿಯಲ್ಲಿ ಚೀನಾ ಕ್ಯಾತೆ – ಅರುಣಾಚಲ ಪ್ರದೇಶದ ಗಡಿ ಭಾಗದಲ್ಲಿ 3 ಗ್ರಾಮ ನಿರ್ಮಾಣ

    ನವದೆಹಲಿ: ಮತ್ತೆ ಗಡಿಯಲ್ಲಿ ಚೀನಾ ತನ್ನ ಪುಂಡಾಟವನ್ನು ಮುಂದುವರಿಸಿದ್ದು, ಅರುಣಾಚಲ ಪ್ರದೇಶದ ಗಡಿ ಭಾಗದಲ್ಲಿ ಮೂರು ಹೊಸ ಗ್ರಾಮಗಳನ್ನು ನಿರ್ಮಾಣ ಮಾಡುತ್ತಿದೆ.

    ಪಶ್ಚಿಮ ಅರುಣಾಚಲ ಪ್ರದೇಶದ ಭಾರತ, ಚೀನಾ ಮತ್ತು ಭೂತಾನ್ ನಡುವಿನ ತ್ರಿ-ಜಂಕ್ಷನ್‍ಗೆ ಸಮೀಪದಲ್ಲಿರುವ ಬಮ್ ಲಾ ಪಾಸ್‍ನಿಂದ ಸುಮಾರು 5 ಕಿಲೋಮೀಟರ್ ದೂರದಲ್ಲಿ ಚೀನಾ 3 ಗ್ರಾಮಗಳನ್ನು ನಿರ್ಮಿಸಿದೆ. ಈ ಪ್ರದೇಶದಲ್ಲಿ ಭಾರತ ಮತ್ತು ಚೀನಾಗೆ ಗಡಿ ವಿವಾದವಿದೆ. ಹೀಗಾಗಿ ಇಲ್ಲಿ ಗ್ರಾಮಗಳನ್ನು ನಿರ್ಮಾಣ ಮಾಡಿ ಪ್ರಾದೇಶಿಕ ಹಕ್ಕುಗಳನ್ನು ಬಲಪಡಿಸುವ ಯೋಜನೆ ರೂಪಿಸಿದೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಜಿಯೋಸ್ಟ್ರಾಟೆಜಿಸ್ಟ್ ಡಾ. ಬ್ರಹ್ಮ ಚೆಲ್ಲಾನಿ ಚೀನಾ ತನ್ನ ಪ್ರಾದೇಶಿಕ ಹಕ್ಕುಗಳನ್ನು ಬಲಪಡಿಸಲು ಮತ್ತು ಗಡಿಯಲ್ಲಿ ಒಳನುಸುಳುವಿಕೆಯನ್ನು ಹೆಚ್ಚಿಸಲು ಹಾನ್ ಚೈನೀಸ್ ಮತ್ತು ಟಿಬೆಟಿಯನ್ ಸದಸ್ಯರನ್ನು ಭಾರತದ ಗಡಿಯಲ್ಲಿ ನೆಲೆಸುವ ತಂತ್ರವನ್ನು ಬಳಸುತ್ತಿದೆ. ಈ ಹಿಂದೆಯೂ ಕೂಡ ದಕ್ಷಿಣ ಚೀನಾ ಸಮುದ್ರದಲ್ಲಿ ಮೀನುಗಾರರನ್ನು ಈ ತಂತ್ರಗಾರಿಕೆಗೆ ಬಳಸಿಕೊಂಡಿತ್ತು ಎಂದು ಹೇಳಿದ್ದಾರೆ.

    ಸದ್ಯ ಲಭ್ಯವಾಗಿರುವ ಹೊಸ ಉಪಗ್ರಹ ಚಿತ್ರಗಳಲ್ಲಿ ಭೂತಾನ್ ಸಾರ್ವಭೌಮ ಭೂಪ್ರದೇಶದಲ್ಲಿ ಚೀನಾ ಗ್ರಾಮಗಳನ್ನು ನಿರ್ಮಾಣ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಈಗ ನಿರ್ಮಾಣವಾಗುತ್ತಿರುವ ಗ್ರಾಮಗಳು 2017ರಲ್ಲಿ ಭಾರತೀಯ ಮತ್ತು ಚೀನಾದ ನಡುವೆ ಗಲಾಟೆಯಾದ ಡೋಕ್ಲಾಮ್ ಸ್ಥಳದಿಂದ ಕೇವಲ ಏಳು ಕಿಲೋಮೀಟರ್ ದೂರದಲ್ಲಿದೆ. ಇದರ ಜೊತೆಗೆ ಪೂರ್ವ ಲಡಾಕ್‍ನಲ್ಲಿ ಇತ್ತೀಚೆಗೆ ಗಲಾಟೆಯಾದ ಸ್ಥಳದಲ್ಲೇ ಈ ಗ್ರಾಮಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

  • ಅರುಣಾಚಲ ಪ್ರದೇಶದಲ್ಲಿ ಮಕ್ಕಳಿಗೆ ತ್ರಿವರ್ಣದ ಮಾಸ್ಕ್

    ಅರುಣಾಚಲ ಪ್ರದೇಶದಲ್ಲಿ ಮಕ್ಕಳಿಗೆ ತ್ರಿವರ್ಣದ ಮಾಸ್ಕ್

    ಗುವಾಹಟಿ: ಮಕ್ಕಳಲ್ಲಿ ರಾಷ್ಟ್ರ ಭಕ್ತಿ ಹೆಚ್ಚಿಸಲು ಅರುಣಾಚಲ ಪ್ರದೇಶದಲ್ಲಿ ತ್ರಿವರ್ಣ ಧ್ವಜ ಬಣ್ಣದ ಮಾಸ್ಕ್ ಗಳನ್ನು ವಿತರಿಸಲಾಗುತ್ತಿದೆ. ನವೆಂಬರ್ 16ರಿಂದ ಶಾಲೆಗಳು ಆರಂಭವಾಗಲಿದ್ದು, ಹೀಗಾಗಿ ಸಾವಿರಾರು ಮಾಸ್ಕ್ ಗಳನ್ನು ವಿತರಿಸಲಾಗುತ್ತಿದೆ.

    ಈ ಕುರಿತು ಅರುಣಾಚಲ ಪ್ರದೇಶ ಸರ್ಕಾರ ಆದೇಶ ಹೊರಡಿಸಿದ್ದು, ನವೆಂಬರ್ 16ರಿಂದ 10ನೇ ತರಗತಿ ಹಾಗೂ 12 ತರಗತಿ ಶಾಲೆ, ಕಾಲೇಜುಗಳನ್ನು ತೆರೆಯಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಇದರ ಭಾಗವಾಗಿ ಖಾದಿ ಆ್ಯಂಡ್ ವಿಲೇಜ್ ಇಂಡಸ್ಟ್ರೀಸ್ ಕಮಿಷನ್(ಕೆವಿಐಸಿ)ನಿಂದ 60 ಸಾವಿರ ಖಾದಿ ಬಟ್ಟೆಯ ಮಾಸ್ಕ್ ಖರೀದಿಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದೆ.

    ಕೊರೊನಾ ಲಾಕ್‍ಡೌನ್ ಬಳಿಕ ಮೊದಲ ಬಾರಿಗೆ ಶಾಲೆಗೆ ಮರಳಿದ ಬಳಿಕ ಸಾವಿರಾರು ಮಕ್ಕಳು ತ್ರಿವರ್ಣದ ಮಾಸ್ಕ್ ಧರಿಸಲಿದ್ದಾರೆ ಎಂದು ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಸಚಿವಾಲಯ ತಿಳಿಸಿದೆ. ಕೆವಿಐಸಿ ಈಗಾಗಲೇ ಸರ್ಕಾರಕ್ಕೆ ಮಾಸ್ಕ್ ಪೂರೈಸಿದ್ದು, ಇನ್ನು ಕೇವಲ 6 ದಿನಗಳಲ್ಲಿ ಮಾಸ್ಕ್‍ಗಳನ್ನು ಮಕ್ಕಳಿಗೆ ನೀಡಬೇಕಿದೆ.

    ಮಕ್ಕಳಲ್ಲಿ ರಾಷ್ಟ್ರೀಯತೆ ಜಾಗೃತಗೊಳಿಸುವ ಉದ್ದೇಶದಿಂದ ತ್ರಿವರ್ಣದ ಮಾಸ್ಕ್‍ಗಳನ್ನು ವಿತರಿಸಲಾಗುತ್ತಿದೆ. ಎಲ್ಲ ಮಾಸ್ಕ್‍ಗಳನ್ನು ಕೆವಿಐಸಿ ಉತ್ಪಾದಿಸಲಿದೆ. ಡಬಲ್ ಟ್ವಿಸ್ಟೆಡ್ ಖಾದಿ ಬಟ್ಟೆಯಿಂದ ಮಾಸ್ಕ್ ತಯಾರಿಸಲಾಗಿದೆ. ಇದರಿಂದಾಗಿ ಉಸಿರಾಟದ ಸಮಸ್ಯೆ ಸಹ ಕಾಡುವುದಿಲ್ಲ ಎಂದು ಸರ್ಕಾರ ತನ್ನ ಆದೇಶದಲ್ಲಿ ಮಾಹಿತಿ ನೀಡಿದೆ.

  • ಸ್ವಗ್ರಾಮಕ್ಕೆ ಆಗಮಿಸಿದ ಯೋಧ ಮಲ್ಲೇಶ್ ಪಾರ್ಥಿವ ಶರೀರ

    ಸ್ವಗ್ರಾಮಕ್ಕೆ ಆಗಮಿಸಿದ ಯೋಧ ಮಲ್ಲೇಶ್ ಪಾರ್ಥಿವ ಶರೀರ

    – ಸೇನಾ ಅವಧಿ ಮುಗಿದಿದ್ದರೂ ಸೇವೆಯ ಹಂಬಲ
    – ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

    ಹಾಸನ: ಅರುಣಾಚಲ ಪ್ರದೇಶದಲ್ಲಿ ಮಿಲಿಟರಿ ಸಾಮಗ್ರಿ ಸಾಗಿಸುವಾಗ ಗುಡ್ಡ ಕುಸಿದು ಸಾವನ್ನಪ್ಪಿದ ಭಾರತೀಯ ಯೋಧ ಮಲ್ಲೇಶ್ ಅವರ ಪಾರ್ಥಿವ ಶರೀರ ಹಾಸನದ ಸ್ವಗ್ರಾಮಕ್ಕೆ ಆಗಮಿಸಿದೆ. ಇದೀಗ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

    ಯೋಧ ಮಲ್ಲೇಶ್ ಅವರು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಅತ್ನಿ ಗ್ರಾಮದವರು. ಇವರು ಅರುಣಾಚಲ ಪ್ರದೇಶದ ಬೆಟಾಲಿಯನ್ 18 ರಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮಿಲಿಟರಿ ಸಾಮಗ್ರಿಗಳನ್ನು ಗಡಿ ಭಾಗಕ್ಕೆ ಸಾಗಿಸುವಾಗ ಗುಡ್ಡ ಕುಸಿದು ಮಲ್ಲೇಶ್ ತೀವ್ರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಮಿಲಿಟರಿ ಆಸ್ಪತ್ರೆಗೆ ಸೇರಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದರು.

    ಮಲ್ಲೇಗೌಡ ಹಾಗೂ ಪುಟ್ಟಮ್ಮ ಎಂಬವರ ಪುತ್ರರಾಗಿರುವ ಯೋಧ ಮಲ್ಲೇಶ್‍ಗೆ ಪತ್ನಿ ಪೂರ್ಣಿಮಾ ಹಾಗೂ ಋತ್ವಿಕ್, ಸಹನ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಮಲ್ಲೇಶ್ ಸೇನೇ ಸೇವಾ ಅವಧಿ ಮುಗಿದಿದ್ದರೂ ದೇಶ ಸೇವೆ ಹಂಬಲದಲ್ಲಿ ಕೆಲಸ ಮುಂದುವರಿಸಿದ್ದರು.

    ಇಂದು ಸ್ವಗ್ರಾಮಕ್ಕೆ ಯೋಧ ಮಲ್ಲೇಶ್ ಪಾರ್ಥಿವ ಶರೀರ ಆಗಮಿಸಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

  • 29 ಎಸೆತಗಳಲ್ಲಿ ಹ್ಯಾಟ್ರಿಕ್ ಸೇರಿ 10 ವಿಕೆಟ್ ಕಿತ್ತ ಕಾಶ್ವಿ ಗೌತಮ್ – ವಿಡಿಯೋ

    29 ಎಸೆತಗಳಲ್ಲಿ ಹ್ಯಾಟ್ರಿಕ್ ಸೇರಿ 10 ವಿಕೆಟ್ ಕಿತ್ತ ಕಾಶ್ವಿ ಗೌತಮ್ – ವಿಡಿಯೋ

    – ಇತಿಹಾಸ ಬರೆದ ಚಂಡೀಗಢದ ವೇಗದ ಬೌಲರ್

    ಹೈದರಾಬಾದ್: ಮಾಜಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದ ಇನ್ನಿಂಗ್ಸ್ ನಲ್ಲಿ ಎಲ್ಲಾ 10 ವಿಕೆಟ್‍ಗಳನ್ನು ದಾಖಲೆ ನಿರ್ಮಿಸಿದ್ದರು. ಈಗ ಚಂಡೀಗಢದ 16 ವರ್ಷದ ವೇಗದ ಬೌಲರ್ ಕಾಶ್ವಿ ಗೌತಮ್ ಸೀಮಿತ ಓವರಿನಲ್ಲಿ 10 ವಿಕೆಟ್ ಕಿತ್ತು ಕಿರಿಯರ ವಿಭಾಗದಲ್ಲಿ ದಾಖಲೆ ನಿರ್ಮಿಸಿದ್ದಾರೆ.

    ಆಂಧ್ರ ಪ್ರದೇಶದ ಕೆಎಸ್‌ಆರ್‌ಎಂ ಕಾಲೇಜು ಮೈದಾನದಲ್ಲಿ ಅರುಣಾಚಲ ಪ್ರದೇಶ ವಿರುದ್ಧ ಮಂಗಳವಾರ ನಡೆದ ದೇಶಿಯ ಕ್ರಿಕೆಟ್‍ನ ಅಂಡರ್-19 ಏಕದಿನ ಟ್ರೋಫಿಯಲ್ಲಿ 10 ವಿಕೆಟ್ ಗಳಿಸಿ ಕಾಶ್ವಿ ಗೌತಮ್ ಮಿಂಚಿದ್ದಾರೆ. ಜೊತೆಗೆ ಇದೇ ಪಂದ್ಯದಲ್ಲಿ ಕಾಶ್ವಿ ಗೌತಮ್ ಹ್ಯಾಟ್ರಿಕ್ ವಿಕೆಟ್ ಕೂಡ ಪಡೆದಿದ್ದಾರೆ.

    ಕಾಶ್ವಿ 4.5 ಓವರ್ ಬೌಲಿಂಗ್ ಮಾಡಿ ಕೇವಲ 12 ರನ್‍ಗಳನ್ನು ಬಿಟ್ಟುಕೊಟ್ಟರು. ಈ ಪಂದ್ಯದಲ್ಲಿ ಚಂಡೀಗಢ ತಂಡವು ಅರುಣಾಚಲ ಪ್ರದೇಶವನ್ನು ಕೇವಲ 25 ರನ್‍ಗಳಿಗೆ ಆಲೌಟ್ ಮಾಡಿತು. ಸೀಮಿತ ಓವರ್‍ಗಳ ಕ್ರಿಕೆಟ್‍ನಲ್ಲಿ 10 ವಿಕೆಟ್ ಪಡೆದ ಮೊದಲ ಮಹಿಳಾ ಬೌಲರ್ ಎಂಬ ಹೆಗ್ಗಳಿಕೆಗೆ ಕಾಶ್ವಿ ಗೌತಮ್ ಪಾತ್ರರಾಗಿದ್ದಾರೆ.

    ಬಿಸಿಸಿಐ ಅಂಡರ್ -19 ಏಕದಿನ ಟೂರ್ನಿಯಲ್ಲಿ ಚಂಡೀಗಢ ಮೊದಲು ಬ್ಯಾಟಿಂಗ್ ಮಾಡಿ 4 ವಿಕೆಟ್‍ಗಳಿಗೆ 186 ರನ್ ಗಳಿಸಿತ್ತು. ಈ ಸಮಯದಲ್ಲಿ ಚಂಡೀಗಢ ಕ್ಯಾಪ್ಟನ್ ಕಾಶ್ವಿ 68 ಎಸೆತಗಳಲ್ಲಿ 49 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದರು. 187 ರನ್ ಗುರಿ ಬೆನ್ನಟ್ಟಿದ ಅರುಣಾಚಲ ಪ್ರದೇಶ ತಂಡವು 8.5 ಓವರ್‍ಗಳಲ್ಲಿ 25 ರನ್ ಗಳಿಸಿ ಸರ್ವಪತನ ಕಂಡಿತು.

    ಬಿಸಿಸಿಐ ಮಹಿಳಾ ಟ್ವಿಟ್ಟರ್ ಖಾತೆ ಹಾಗೂ ಐಸಿಸಿ, ಕಾಶ್ವಿ ಗೌತಮ್ 10 ವಿಕೆಟ್ ಪಡೆದ ವಿಡಿಯೋವನ್ನು ಟ್ವೀಟ್ ಮಾಡಿ ಅಭಿನಂದಿಸಿದೆ. ಭಾರತವು ತನ್ನ ರಾಷ್ಟ್ರೀಯ ತಂಡಕ್ಕೆ 16 ವರ್ಷದ ಕಾಶ್ವಿ ಅವರನ್ನು ಸೇರಿಸಿಕೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಕೇಳಿದೆ.

    ಬಿಸಿಸಿಐ ಅಂಡರ್ -19 ಏಕದಿನ ಟೂರ್ನಿಯಲ್ಲಿ ಕಾಶ್ವಿ ಇದುವರೆಗೆ ಮೂರು ಪಂದ್ಯಗಳಲ್ಲಿ 18 ವಿಕೆಟ್ ಪಡೆದಿದ್ದಾರೆ. ಇದಕ್ಕೂ ಮೊದಲು ಅವರು ಜಮ್ಮು ಮತ್ತು ಕಾಶ್ಮೀರ ವಿರುದ್ಧ 7 ವಿಕೆಟ್ ಪಡೆದಿದ್ದರು.

    ಅಂತರರಾಷ್ಟ್ರೀಯ ಪಂದ್ಯವೊಂದರ ಇನ್ನಿಂಗ್ಸ್‍ನಲ್ಲಿ 10 ವಿಕೆಟ್:
    ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಸಂಬಂಧಿಸಿದಂತೆ ಒಂದೇ ಇನ್ನಿಂಗ್ಸ್ ನಲ್ಲಿ 10 ವಿಕೆಟ್‍ಗಳನ್ನು ಪಡೆದ ಬೌಲರ್‍ಗಳ ಪಟ್ಟಿಯಲ್ಲಿ ಭಾರತದ ಅನಿಲ್ ಕುಂಬ್ಳೆ ಹಾಗೂ ಇಂಗ್ಲೆಂಡ್‍ನ ಜಿಮ್ ಲೇಕರ್ ಮಾತ್ರ ಇದ್ದಾರೆ. 1956ರಲ್ಲಿ ನಡೆದ ಟೆಸ್ಟ್ ಪಂದ್ಯವೊಂದರಲ್ಲಿ ಆಸ್ಟ್ರೇಲಿಯಾ ವಿರುದ್ಧ ಲೇಕರ್ 10 ವಿಕೆಟ್ ಕಿತ್ತಿದ್ದರು. ಈ ಸಮಯದಲ್ಲಿ ಅವರು 51.2 ಓವರ್ ಬೌಲಿಂಗ್ ಮಾಡಿದ್ದರು. 1999ರಲ್ಲಿ ಪಾಕಿಸ್ತಾನ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಅನಿಲ್ ಕುಂಬ್ಳೆ 26.3 ಓವರ್ ಬೌಲಿಂಗ್ ಮಾಡಿ 10 ವಿಕೆಟ್ ಪಡೆದು ದಾಖಲೆ ಬರೆದಿದ್ದರು.

    ಟೆಸ್ಟ್ ಸ್ವರೂಪದಲ್ಲಿ ಅನಿಲ್ ಕುಂಬ್ಳೆ ಹಾಗೂ ಜಿಮ್ ಲೇಕರ್ ದಾಖಲೆ ಬರೆದಿದ್ದಾರೆ. ಆದರೆ ಇದುವರೆಗೂ ಅಂತರರಾಷ್ಟ್ರೀಯ ಏಕದಿನ ಅಥವಾ ಟಿ20ಗಳಲ್ಲಿ ಯಾವುದೇ ಬೌಲರ್ ಇದುವರೆಗೆ ಎಲ್ಲಾ 10 ವಿಕೆಟ್‍ಗಳನ್ನು ಪಡೆದಿಲ್ಲ. ಏಕದಿನ ಪಂದ್ಯವೊಂದರಲ್ಲಿ ಅತ್ಯುತ್ತಮ ವ್ಯಕ್ತಿಗಳ ದಾಖಲೆಯನ್ನು ಶ್ರೀಲಂಕಾದ ಚಮಿಂಡ ವಾಸ್ ಅವರು ಜಿಂಬಾಬ್ವೆ ವಿರುದ್ಧ ಮಾಡಿದ್ದರು. ಅವರು ಕೇವಲ 19 ರನ್ ನೀಡಿ 8 ವಿಕೆಟ್ ಪಡೆಸಿದ್ದರು. ಮತ್ತೊಂದೆಡೆ ಟಿ20ಯಲ್ಲಿ ಬಾಂಗ್ಲಾದೇಶ ವಿರುದ್ಧ ನಾಗ್ಪುರದಲ್ಲಿ ಟೀಂ ಇಂಡಿಯಾ ಬೌಲರ್ ದೀಪಕ್ ಚಹರ್ 7 ರನ್ ನೀಡಿ 6 ವಿಕೆಟ್ ಕಿತ್ತಿದ್ದರು.

  • ಉಗ್ರರಿಂದ ಹಾಲಿ ಶಾಸಕ ಸೇರಿ 7 ಜನರ ಬರ್ಬರ ಹತ್ಯೆ

    ಉಗ್ರರಿಂದ ಹಾಲಿ ಶಾಸಕ ಸೇರಿ 7 ಜನರ ಬರ್ಬರ ಹತ್ಯೆ

    ಇಟಾನಗರ್: ಅರುಣಾಚಲ ಪ್ರದೇಶದ ಬೋಗಾಪನಿ ಎಂಬಲ್ಲಿ ಉಗ್ರರ ಗುಂಡಿನ ದಾಳಿಗೆ ಸ್ಥಳೀಯ ಎನ್‍ಪಿಪಿ ಶಾಸಕ ತಿರಾಂಗ್ ಅಬೋಹ್ ಸೇರಿದಂತೆ ಏಳು ಜನರು ಮೃತಪಟ್ಟಿದ್ದಾರೆ.

    ತಿರಾಂಗ್ ಅಬೋಹ್ ಅವರು ಕೋನ್ಸಾ ದಕ್ಷಿಣ ಕ್ಷೇತ್ರದಿಂದ ಎನ್‍ಪಿಪಿ ಪಕ್ಷದ ಶಾಸಕರಾಗಿದ್ದರು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ವಕ್ಷೇತ್ರದಿಂದ ಸ್ಪರ್ಧಿಸಿದ್ದರು. ಫಲಿತಾಂಶಕ್ಕೆ ಎರಡು ದಿನ ಬಾಕಿ ಇರುವಾಗಲೇ ತಿರಾಂಗ್ ಅಬೋಹ್ ಅವರು ಉಗ್ರರು ಅಟ್ಟಹಾಸಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ.

    ಶಾಸಕ ತಿರಾಂಗ್ ಅಬೋಹ್ ಅವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಬೋಗಾಪನಿ ಎಂಬಲ್ಲಿ ಶಾಸಕರ ಕಾರನ್ನು ತಡೆದ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ಸ್ಥಳದಲ್ಲಿಯೇ ತಿರಾಂಗ್ ಅಬೋಹ್ ಸೇರಿದಂತೆ 7 ಜನರು ಮೃತಪಟ್ಟಿದ್ದಾರೆ.

    ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಲ್ಯಾಂಡ್ (ಎನ್‍ಎಸ್‍ಸಿಎನ್) ಸಂಘನೆಯ ಉಗ್ರರು ಈ ದಾಳಿ ನಡೆಸಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ. ತಿರಾಂಗ್ ಅಬೋಹ್ ಅವರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ.

    ಕೋನ್ಸಾ ದಕ್ಷಿಣ ಕ್ಷೇತ್ರದಲ್ಲಿ ನ್ಯಾಯಯುತ ಚುನಾವಣೆಯಾಗಿಲ್ಲ. ಹೀಗಾಗಿ ಮರು ಚುನಾವಣೆ ನಡೆಸಬೇಕು ಎಂದು ತಿರಾಂಗ್ ಅಬೋಹ್ ಅವರು, ಚುನಾವಣಾ ಆಯೋಗಕ್ಕೆ ಒತ್ತಾಯಿಸಿದ್ದರು. ಈ ಕಾರಣಕ್ಕೆ ಗುಂಡಿನ ದಾಳಿ ಮಾಡಲಾಗಿದೆ ಎನ್ನುವ ಶಂಕೆ ವ್ಯಕ್ತವಾಗಿದೆ.

    ಈ ಘಟನೆಯನ್ನು ಖಂಡಿಸಿ ಟ್ವೀಟ್ ಮಾಡಿರುವ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಕೆ.ಸಂಗ್ಮಾ ಅವರು, ಶಾಸಕ ತಿರಾಂಗ್ ಅಬೋಹ್ ಅವರ ಸಾವಿನ ಸುದ್ದಿಯಿಂದ ಎದೆ ಭಾರವಾಗಿದೆ. ಶಾಸಕರ ಕುಟುಂಬದವರಿಗೆ ಹಾಗೂ ಸಂಬಂಧಿಕರಿಗೆ ನೋವು ತಡೆದುಕೊಳ್ಳುವ ಶಕ್ತಿಯನ್ನು ದೇವರು ನೀಡಲಿ ಎಂದು ಹೇಳಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ.

  • ಚೌಕಿದಾರ್‌ನನ್ನು ಟೀಕಿಸುವವರು ಜಾಮೀನು ಪಡೆದು ಹೊರಗಿದ್ದಾರೆ: ಪ್ರಧಾನಿ ಮೋದಿ

    ಚೌಕಿದಾರ್‌ನನ್ನು ಟೀಕಿಸುವವರು ಜಾಮೀನು ಪಡೆದು ಹೊರಗಿದ್ದಾರೆ: ಪ್ರಧಾನಿ ಮೋದಿ

    ಇಟಾನಗರ: ಚೌಕಿದಾರ್‌ನನ್ನು ನಿಂದಿಸುವವರು ದೆಹಲಿಯಲ್ಲಿ ಕುಳಿತು ತೆರಿಗೆ ವಂಚಿಸಿದ್ದಾರೆ. ಆದರೆ ಈಗ ಕೋರ್ಟ್ ಜಾಮೀನು ಪಡೆದು ಹೊರಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ವಿರುದ್ಧ ಹರಿಹಾಯ್ದಿದ್ದಾರೆ.

    ಅರುಣಾಚಲ ಪ್ರದೇಶದ ವೆಸ್ಟ್ ಜಿಯಾಂಗ್ ಜಿಲ್ಲೆಯ ಐಟಿಬಿಪಿ ಮೈದಾನದಲ್ಲಿ ಇಂದು ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಮೋದಿ ಅವರು, ಸರ್ಕಾರಿ ಭೂಮಿಯನ್ನು ಪಡೆದು ಲಕ್ಷಾಂತರ ರೂಪಾಯಿಗಾಗಿ ಪತ್ರಿಕೆಗಳಿಗೆ ಬಾಡಿಗೆ ಕೊಟ್ಟವರು, ಭಾರತೀಯ ಸೇನೆಯ ವ್ಯವಹಾರದಲ್ಲಿ ಡೀಲ್ ಮಾಡಿ ಕಮಿಷನ್ ಪಡೆದವರು ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಈ ಆರೋಪ ಎದುರಿಸುತ್ತಿರವವರು ರಾಜಕೀಯ ನಾಯಕರಾಗಿದ್ದು, ಕೋರ್ಟ್ ನಿಂದ ಜಾಮೀನು ಪಡೆದು ಈಗ ಹೊರಗಿದ್ದಾರೆ ಎಂದು ಹೆಸರು ಪ್ರಸ್ತಾಪಿಸದೇ ವಾಗ್ದಾಳಿ ನಡೆಸಿದರು.

    ಅರುಣಾಚಲ ಪ್ರದೇಶದ ಪ್ರತಿಯೊಬ್ಬರೂ ದೇಶದ ರಕ್ಷಣೆಗಾಗಿ ನಿಮ್ಮನ್ನ ಸಮರ್ಪಿಸಿಕೊಂಡಿದ್ದೀರಿ. ಹೀಗಾಗಿ ನಿಮ್ಮನ್ನು ಹೊಗಳಲು ನಾನು ಹೆಮ್ಮೆಪಡುತ್ತೇನೆ. ಕಳೆದ ಐದು ವರ್ಷಗಳಿಂದ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವೆ. ಮುಂದಿನ ಅವಧಿಯಲ್ಲಿ ಅರುಣಾಚಲ ಪ್ರದೇಶದಿಂದಲೇ ನನ್ನ ಅಭಿವೃದ್ಧಿಯ ಕಾರ್ಯಗಳು ಆರಂಭವಾಗುತ್ತದೆ ಎಂದು ಭರವಸೆ ನೀಡಿದರು.

    ನೀವು ಚೌಕಿದಾರ್ ಹೌದು ಅಲ್ವಾ ಎಂದು ಪ್ರಧಾನಿ ಮೋದಿ ಸಮಾವೇಶದಲ್ಲಿ ನೆರೆದಿದ್ದ ಜನರನ್ನು ಪ್ರಶ್ನಿಸಿದರು. ಜನರು ಹೌದು ನಾವು ಚೌಕಿದಾರ್ ಎಂದು ಕೂಗಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮೋದಿ, ಹಾಗಾದರೇ ನಾನು ಚೌಕಿದಾರ್ ಅಂತ ಒಮ್ಮೆ ಹೇಳಿ ಎಂದು ಜನರಿಗೆ ಕೇಳಿದರು. ಆಗ ಸಮಾವೇಶದಲ್ಲಿ ಸೇರಿದ್ದ ಜನರು ಮೈ ಬಿ ಚೌಕಿದಾರ್ ಹೂಂ ಎಂದು ಕೂಗಿದರು.

    2016ರಲ್ಲಿ ಭಾರತೀಯ ಸೈನಿಕರು ಉರಿ ದಾಳಿಗೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದರು. ಇದೇ ವರ್ಷ ಫೆಬ್ರವರಿ 14ರಂದು ನಡೆದ ಪುಲ್ವಾಮಾ ದಾಳಿಗೆ ನಮ್ಮ ಭಾರತೀಯ ಪಡೆ ಏರ್ ಸ್ಟ್ರೈಕ್ ಮೂಲಕ ಪ್ರತ್ಯುತ್ತರ ನೀಡಿತು. ದೇಶದ ಜನರು ಸಂತೋಷ ವ್ಯಕ್ತಪಡಿಸಿದರು. ಆದರೆ ಕಾಂಗ್ರೆಸ್ ಹಾಗೂ ಉಗ್ರರು ಸಂತೋಷ ವ್ಯಕ್ತಪಡಿಸಲಿಲ್ಲ ಎಂದು ಹೇಳಿದರು.

    ಕಾಂಗ್ರೆಸ್ ಕೇವಲ ಒಂದು ಕುಟುಂಬಕ್ಕಾಗಿ ಶ್ರಮಿಸುತ್ತಿದೆ. ಹೀಗಾಗಿ ಅವರು ದೇಶದ ಅಭಿವೃದ್ಧಿಗಾಗಿ ಕಾಳಜಿ ತೆಗೆದುಕೊಳ್ಳುವುದಿಲ್ಲ. ಕಾಂಗ್ರೆಸ್ ನೇತೃತ್ವದ ಸರ್ಕಾರವು ದೇಶವನ್ನು ದುರ್ಬಲವಾಗಿಯೇ ಉಳಿಯುವಂತೆ ಮಾಡಿತು ಎಂದು ಆರೋಪಿಸಿದರು.

  • ಚುನಾವಣೆಗೆ ಮುನ್ನವೇ 2 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು

    ಚುನಾವಣೆಗೆ ಮುನ್ನವೇ 2 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು

    ಇಟಾನಗರ: ಅರುಣಾಚಲ ಪ್ರದೇಶದ ವಿಧಾನಸಭಾ ಚುನಾವಣೆಗೂ ಮುನ್ನವೇ ಬಿಜೆಪಿಯ ಅಭ್ಯರ್ಥಿಗಳು ಎರಡು ಕ್ಷೇತ್ರಗಳಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಅರುಣಾಚಲ ಪ್ರದೇಶದಿಂದ ಬಿಜೆಪಿಯ ವಿಜಯೋತ್ಸವ ಆರಂಭವಾಗಿದೆ. ರಾಜ್ಯದ ಅಲೋ ಪೂರ್ವ ಕ್ಷೇತ್ರದಿಂದ ಕೆಂಟೋ ಜಿನಿ ಜಯಗಳಿಸಿದ್ದಾರೆ. ಯಚುಲಿ ಕ್ಷೇತ್ರದಿಂದ ತಾಬಾ ತೆಡಿರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಟ್ವೀಟ್ ಮಾಡಿದ್ದಾರೆ.

    ಈ ಎರಡೂ ಕ್ಷೇತ್ರದಿಂದ ಕೇವಲ ಬಿಜೆಪಿ ಅಭ್ಯರ್ಥಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಈ ಇಬ್ಬರು ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ವರದಿಯಾಗಿದೆ.

    ಅರುಣಾಚಲ ಪ್ರದೇಶದಲ್ಲಿ ಒಟ್ಟು 60 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ ಬಿಜೆಪಿಯು ಈಗಾಗಲೇ ಎರಡು ಕ್ಷೇತ್ರಗಳಲ್ಲಿ ಅವಿರೋಧವಾಗಿ ಆಯ್ಕೆಯಾಗಿದೆ. ಉಳಿದಂತೆ ಎರಡು ಲೋಕಸಭಾ ಕ್ಷೇತ್ರಗಳ ಚುನಾವಣೆ ಏಪ್ರಿಲ್ 11ರಂದು ನಡೆಯಲಿದೆ.

    2014ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 36, ಎನ್‍ಪಿಪಿ 16 ಹಾಗೂ ಐಎನ್‍ಡಿ 2, ಕಾಂಗ್ರೆಸ್ 6 ಕ್ಷೇತ್ರಗಳಿಂದ ಜಯಗಳಿಸಿತ್ತು. ಈ ಮೂಲಕ ಬಿಜೆಪಿಯು ಎನ್‍ಪಿಪಿ ಹಾಗೂ ಐಎನ್‍ಡಿ ಜೊತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿತ್ತು.

  • ಅರುಣಾಚಲ ಪ್ರದೇಶದಲ್ಲಿ ಬಿಜೆಪಿಗೆ ಬಿಗ್ ಶಾಕ್ – 25 ನಾಯಕರು ಗುಡ್‍ಬೈ

    ಅರುಣಾಚಲ ಪ್ರದೇಶದಲ್ಲಿ ಬಿಜೆಪಿಗೆ ಬಿಗ್ ಶಾಕ್ – 25 ನಾಯಕರು ಗುಡ್‍ಬೈ

    – ಬಿಜೆಪಿಯ ಇಬ್ಬರು ಸಚಿವರು, 6 ಶಾಸಕರು ಎನ್‍ಪಿಪಿಗೆ ಸೇರ್ಪಡೆ

    ಇಟಾನಗರ: ಲೋಕಸಭಾ ಚುನಾವಣೆಗೆ ಬೆರಳೆಣಿಕೆ ದಿನಗಳು ಬಾಕಿಯಿದೆ. ಹೀಗಿರುವಾಗಲೇ ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಸಾಮೂಹಿಕ ರಾಜೀನಾಮೆ ಶಾಕ್‍ಗೆ ಒಳಗಾಗಿದೆ.

    ಆಡಳಿತರೂಢ ಪಕ್ಷ ಬಿಜೆಪಿಯ ಇಬ್ಬರು ಸಚಿವರು, ಆರು ಜನ ಶಾಸಕರು ಸೇರಿದಂತೆ ಒಟ್ಟು 25 ಮುಖಂಡರು ಪಕ್ಷಕ್ಕೆ ಗುಡ್‍ಬೈ ಹೇಳಿದ್ದಾರೆ. ಈ ಮೂಲಕ ಎಲ್ಲರೂ ನ್ಯಾಷನಲ್ ಪಿಪಲ್ಸ್ ಪಾರ್ಟಿ (ಎನ್‍ಪಿಪಿ) ಸೇರ್ಪಡೆಯಾಗಿದ್ದು, ಬಿಜೆಪಿಗೆ ಭಾರೀ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತದೆ.

    ಲೋಕಸಭಾ ಚುನಾವಣೆ ಜೊತೆಗೆ ಅರುಣಾಚಲ ಪ್ರದೇಶದ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ನಿನ್ನೆಯಷ್ಟೇ ವಿಧಾನಸಭೆಯ 60 ಕ್ಷೇತ್ರಗಳ ಪೈಕಿ 54 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಕೆಲ ಪ್ರಮುಖ ಶಾಸಕರು, ಸಚಿವರನ್ನೇ ಪಟ್ಟಿಯಿಂದ ಕೈಬಿಡಲಾಗಿದೆ. ಇದರಿಂದಾಗಿ ಒಟ್ಟು 25 ಜನರು ಬಿಜೆಪಿಗೆ ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ.

    ಬಿಜೆಪಿ ರಾಜ್ಯಾಧ್ಯಕ್ಷ ಜರ್ಪಮ್ ಗಾಮ್ಲಿನ್, ರಾಜ್ಯ ಗೃಹಸಚಿವ ಕುಮಾರ್ ವೈಯ್ ಹಾಗೂ ಪ್ರವಾಸೋದ್ಯಮ ಸಚಿವ ಜಾರ್ಕರ್ ಗಾಮ್ಲಿನ್ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಎನ್‍ಪಿಪಿ ಸೇರ್ಪಡೆಯಾಗಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿದ ಕುಮಾರ್ ವೈಯ್ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸುವಲ್ಲಿ ಬಿಜೆಪಿ ವಿಫಲವಾಗಿದ್ದು, ಜನರಿಗೆ ಮೋಸ ಮಾಡಿದೆ. ನಾವು ಕೇವಲ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಈ ಬಾರಿ ಎನ್‍ಪಿಪಿ ಸರ್ಕಾರ ರಚನೆಗೆ ಶ್ರಮಿಸುತ್ತೇವೆ ಎಂದು ಶಪಥ ಮಾಡಿದರು.

    ಸಚಿವರು ಸೇರಿದಂತೆ ಬಿಜೆಪಿಯ 8 ಶಾಸಕರು, ಪಿಪಲ್ಸ್ ಪಾರ್ಟಿ ಅರುಣಾಚಲ ಪ್ರದೇಶದ ಓರ್ವ ಶಾಸಕರು ಎನ್‍ಪಿಪಿಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಎನ್‍ಪಿಪಿ ನಾಯಕ ಕಾನ್ರಾಡ್ ಸಂಗ್ಮಾ ಭಾರೀ ಬೆಂಬಲ ಸಿಕ್ಕಿದ್ದು, ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಎನ್‍ಪಿಪಿ ಪ್ರಧಾನ ಕಾರ್ಯದರ್ಶಿ ಥಾಮಸ್ ಸಾಂಗ್ಮಾ ಅವರು, ಅರುಣಾಚಲ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಮೈತ್ರಿಯಿಲ್ಲ. ಏಕಾಂಗಿಯಾಗಿ ಸ್ಪರ್ಧೆ ಮಾಡಲಿದ್ದು, ಬುಧವಾರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ. ಜೊತೆಗೆ ಲೋಕಸಭಾ ಅಭ್ಯರ್ಥಿಗಳ ಪಟ್ಟಿಯನ್ನು ಕೂಡ ಸದ್ಯದಲ್ಲಿಯೇ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.