Tag: ಅರವಿಂದ ಲಿಂಬಾವಳಿ

  • ಬಿಜೆಪಿ, ಜೆಡಿಎಸ್ ವಿಲೀನ ಶುದ್ಧ ಸುಳ್ಳು: ಸಿಎಂ ಬಿಎಸ್‌ವೈ

    ಬಿಜೆಪಿ, ಜೆಡಿಎಸ್ ವಿಲೀನ ಶುದ್ಧ ಸುಳ್ಳು: ಸಿಎಂ ಬಿಎಸ್‌ವೈ

    ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್‌ ವಿಲೀನ ಸುದ್ದಿ ಶುದ್ಧ ಸುಳ್ಳು ಎಂದು ಮುಖ್ಯ ಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

    ಅರವಿಂದ ಲಿಂಬಾವಳಿ ರಾಜಕೀಯ ಧ್ರುವೀಕರಣ ಹೇಳಿಕೆಯ ಬೆನ್ನಲ್ಲೇ ಬಿಜೆಪಿ ಜೊತೆ ಜೆಡಿಎಸ್‌ ವಿಲೀನವಾಗುತ್ತಾ ಎಂಬ ಪ್ರಶ್ನೆಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ಸಿಎಂ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಮುಂದೆ ರಾಜಕೀಯ ಧ್ರುವೀಕರಣ, ಒಂದು ಪಕ್ಷವೇ ವಿಲೀನವಾಗಬಹುದು – ಲಿಂಬಾವಳಿ 

    ಹೇಳಿಕೆಯಲ್ಲಿ ಏನಿದೆ?
    ಮಾನ್ಯ ಜಾತ್ಯಾತೀತ ಜನತಾದಳದ ಶಾಸಕಾಂಗ ಪಕ್ಷದ ನಾಯಕರಾದ ಹೆಚ್.ಡಿ.ಕುಮಾರಸ್ವಾಮಿಯವರು ವಿಧಾನ ಪರಿಷತ್ ಸಭಾಪತಿಗಳ ವಿಚಾರದಲ್ಲಿ ನಮ್ಮ ಪಕ್ಷಕ್ಕೆ ಬೆಂಬಲ ನೀಡಿದ್ದು ಸರಿಯಷ್ಟೇ. ಆದರೆ ಯಾವುದೇ ಜೆಡಿಎಸ್ ಶಾಸಕರು ಭಾರತೀಯ ಜನತಾ ಪಕ್ಷಕ್ಕೆ ಬರುವುದಾಗಲೀ ಅಥವಾ ಜೆಡಿಎಸ್ ಪಕ್ಷವನ್ನು ಭಾರತೀಯ ಜನತಾ ಪಕ್ಷದಲ್ಲಿ ವಿಲೀನಗೊಳಿಸುವಂತಹ ಗೊಂದಲಗಳ ವರದಿಗಳು ಶುದ್ಧ ಸುಳ್ಳು. ಅಂತಹ ಯಾವುದೇ ಸಂದರ್ಭ ಇಲ್ಲ.

    ಕೇವಲ ಪರಿಷತ್ ಸಭಾಪತಿ ವಿಚಾರದಲ್ಲಿ ಮಾತ್ರ ನಮಗೆ ಸಹಕಾರ ನೀಡುತ್ತಿದ್ದಾರೆಯೇ ವಿನಾ: ಮತ್ತೇನೂ ಇಲ್ಲ. ಗೋಹತ್ಯೆ ನಿಷೇಧದ ಬಗ್ಗೆ ನಮ್ಮ ಬೆಂಬಲವಿಲ್ಲ ಎಂದು ಸಹ ಕುಮಾರಸ್ವಾಮಿ ಸ್ಪಷ್ಟವಾಗಿ ಹೇಳಿದ್ದರಿಂದ ನಾವು ಸುಗ್ರೀವಾಜ್ಞೆ ಮೂಲಕ ಗೋಹತ್ಯೆ ನಿಷೇಧ ಜಾರಿಗೆ ತರುತ್ತಿದ್ದೇವೆ. ವಿಧಾನಸಭೆಗೆ ಚುನಾವಣೆ ಇನ್ನೂ ಎರಡೂವರೆ ವರ್ಷ ಇದೆ. ಈಗ ಮಾಧ್ಯಮಗಳಲ್ಲಿ ಬರುವ ಸುದ್ದಿಗಳು ಸತ್ಯಕ್ಕೆ ದೂರವಾಗಿವೆ.

  • ಮುಂದೆ ರಾಜಕೀಯ ಧ್ರುವೀಕರಣ, ಒಂದು ಪಕ್ಷವೇ ವಿಲೀನವಾಗಬಹುದು – ಲಿಂಬಾವಳಿ

    ಮುಂದೆ ರಾಜಕೀಯ ಧ್ರುವೀಕರಣ, ಒಂದು ಪಕ್ಷವೇ ವಿಲೀನವಾಗಬಹುದು – ಲಿಂಬಾವಳಿ

    ಬೆಂಗಳೂರು: ಮುಂದಿನ ದಿನದಲ್ಲಿ ರಾಜಕೀಯ ಧ್ರುವೀಕರಣ ನಡೆಯಲಿದೆ ಎಂದು ರಾಜ್ಯ ಬಿಜೆಪಿಯ ಉಪಾಧ್ಯಕ್ಷ ಮತ್ತು ವಕ್ತಾರ ಅರವಿಂದ ಲಿಂಬಾವಳಿ ಸ್ಫೋಟಕ ಹೇಳಿಕೆ ಹೇಳಿದ್ದಾರೆ.

    ರಾಜಕಿಯ ಧ್ರುವೀಕರಣ ಯಾವ ಥರ ಆಗುತ್ತೆ ಅಂತ ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿ ಭದ್ರವಾಗಲಿದೆ. ಪತ್ರಿಕೆಯವರ ಮೂಲಕ ಒಂದು ರಾಜಕೀಯ ಪಕ್ಷವೇ ವಿಲೀನವಾಗುವ ಸಾಧ್ಯತೆಯೂ ಇದೆ ಎಂದು ಹೇಳಿದ್ದಾರೆ.

    ಮೋದಿ ಅಲೆ, ಬಿಜೆಪಿ ಅಲೆ ದೇಶದಲ್ಲಿ ಇದೆ. ಸಮ್ಮಿಶ್ರ ಸರ್ಕಾರದಲ್ಲಿದ್ದವರೇ ಈಗ ಕಿತ್ತಾಡುತ್ತಿದ್ದಾರೆ. ದೇಶ, ರಾಜ್ಯದಲ್ಲಿ ಆಡಳಿತ ಸುಭದ್ರವಾಗಿದೆ ಎನ್ನುವುದರ ಸಂಕೇತವಿದು. ನಮ್ಮ ವರದಿ ಪ್ರಕಾರ ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ನಮ್ಮ ಪಕ್ಷದ ಶೇ.70 ರಿಂದ 80 ರಷ್ಟು ಕಾರ್ಯಕರ್ತರು ಜಯ ಸಾಧಿಸುತ್ತಾರೆ ಎಂದು ತಿಳಿಸಿದರು.

    ಗ್ರಾಮ ಪಂಚಾಯತ್‌ ಚುನಾವಣೆ ಪಕ್ಷಾತೀತ ಚುನಾವಣೆಯಾಗಿದ್ದು, ಈ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಸಹ ಸ್ಪರ್ಧೆ ಮಾಡಿದ್ದಾರೆ. ಬಿಜೆಪಿಗೆ ಗ್ರಾಮ ಪಂಚಾಯತ್ ಚುನಾವಣೆ ಮಹತ್ವದ್ದ. ದೊಡ್ಡ ಸಂಖ್ಯೆಯಲ್ಲಿ ಗ್ರಾಮಕ್ಕೆ ಅನುಕೂಲ ಮಾಡುವವರು ಗೆದ್ದು ಬರಬೇಕು. ನಮ್ಮ ಪಕ್ಷದ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಆಯ್ಕೆಯಾಗುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಕಾಂಗ್ರೆಸ್‌ನಲ್ಲಿ ಒಳ ಜಗಳ ಪ್ರಾರಂಭವಾಗಿದೆ. ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಚಿವ ಎಚ್ ಸಿ ಮಹಾದೇವಪ್ಪ ದನಿಗೂಡಿಸಿದ್ದಾರೆ. ಮೈತ್ರಿ ಸರ್ಕಾರದ ವೈಖರಿ ಖಂಡಿಸಿ 18 ಜನ ರಾಜೀನಾಮೆ ಕೊಟ್ಟರು. ಈಗ ರಾಜ್ಯದಲ್ಲಿ ಸ್ಥಿರ ಸರ್ಕಾರ ಇದೆ. ಸಿದ್ದರಾಮಯ್ಯ ಮೈತ್ರಿ ಸರ್ಕಾರದ ವಿರುದ್ಧವೂ ಮಾತಾಡಿದ್ದಾರೆ. ಇದಕ್ಕೆ ಎಚ್ಡಿಕೆ ಸಹ ಪ್ರತಿಕ್ರಿಯೆ ಕೊಟ್ಟಿದ್ದಾರೆ ಎಂದು ಹೇಳಿದರು.

    ಜನವರಿ 2, 3 ರಂದು ಶಿವಮೊಗ್ಗದಲ್ಲಿ ಕೋರ್ ಕಮಿಟಿ ಸಭೆ ಮತ್ತು ಪ್ರಧಾನ ಕಾರ್ಯದರ್ಶಿಗಳ ಸಭೆ ನಡೆಯಲಿದೆ. ಜನಪ್ರತಿನಿಧಿಗಳ ಸಮಾವೇಶ ಜನವರಿ 8 ರಿಂದ 11 ರವರೆಗೆ ನಡೆಯಲಿದೆ ಎಂದು ತಿಳಿಸಿದರು.

    ಡಿ.25 ರಂದು ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನವಾಗಿದ್ದು ಆ ದಿನವನ್ನು ಬಿಜೆಪಿ ರೈತರ ದಿನ ಎಂದು ಆಚರಿಸಲಿದೆ. ಆ ದಿನ ಹಲವು ಕಡೆ ರೈತರ ಸಮಾವೇಶಗಳು ಆಯೋಜನೆ ಆಗಲಿದೆ. ಕೃಷಿ ಕಾಯ್ದೆಗಳ ಕುರಿತು ಜಾಗೃತಿ ಮೂಡಿಸುವ ಕೆಲಸ ಆ ದಿನ ಮಾಡ್ತೇವೆ. ಆ ದಿನ ಮಧ್ಯಾಹ್ನ 12 ಗಂಟೆಗೆ ಪ್ರಧಾನಿಯವರು ರೈತರನ್ನುದ್ದೇಶಿಸಿ ಮಾತಾಡ್ತಾರೆ. ಪ್ರಧಾನಿಯವರ ಭಾಷಣವನ್ನು ಜನರ ಬಳಿ ತಲುಪಿಸಲು ಅಲ್ಲಲ್ಲಿ ಟಿವಿ ಸ್ಕ್ರೀನ್ ಗಳನ್ನು ಹಾಕುತ್ತೇವೆ ಎಂದು ವಿವರಿಸಿದರು.

    ಬಿಜೆಪಿ ಮೇಲೆ ಜೆಡಿಎಸ್ ಸಾಫ್ಟ್ ಆಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಲಿಂಬಾವಳಿ, ಜೆಡಿಎಸ್ ಬಿ ಟೀಂ ಎಂಬ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಜೆಡಿಎಸ್ ನಮ್ಮ ಬಿ ಟೀಂ ಆಗಿದ್ದಿದ್ರೆ, ವಿಧಾನಸಭೆ ಚುನಾವಣೆ ಬಳಿಕ ಸಿ ಟೀಂ ಜತೆ ಯಾಕೆ ಹೋದರು? ವಿಧಾನ ಪರಿಷತ್ ನಲ್ಲಿ ನಮಗೆ ಬಹುಮತ ಇಲ್ಲ. ಹಾಗಾಗಿ ಗೋಹತ್ಯೆ ಮಸೂದೆ ಮಂಡನೆ ಆಗಲಿಲ್ಲ. ಜೆಡಿಎಸ್ ಅನೇಕ ವಿಚಾರಗಳಲ್ಲಿ ನಮ್ಮ ವಿರೋಧವೂ ಮಾಡಬಹುದು. ವಿಷಾಯಾಧಾರಿತವಾಗಿ ಜೆಡಿಎಸ್ ನಡೆದುಕೊಳ್ಳುತ್ತದೆ ಎಂದು ಉತ್ತರಿಸಿದರು.

  • ಮಧ್ಯಪ್ರದೇಶದ ಕೈ ಶಾಸಕರ ಕಾವಲಿಗೆ ಒನ್ ಟು ಒನ್- ಒನ್ ಕನೆಕ್ಷನ್ ಆಪರೇಷನ್

    ಮಧ್ಯಪ್ರದೇಶದ ಕೈ ಶಾಸಕರ ಕಾವಲಿಗೆ ಒನ್ ಟು ಒನ್- ಒನ್ ಕನೆಕ್ಷನ್ ಆಪರೇಷನ್

    ಬೆಂಗಳೂರು: ಮಧ್ಯಪ್ರದೇಶದ ಕೈ ಶಾಸಕರನ್ನು ಬೆಂಗಳೂರಿಗೆ ಶಿಫ್ಟ್ ಮಾಡುವ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಎಚ್ಚರಿಕೆಯ ಅಸ್ತ್ರ ಪ್ರಯೋಗಿಸಿದೆ. ರಾಜ್ಯ ಬಿಜೆಪಿಯ ಯಾರೊಬ್ಬರನ್ನ ಗಣನೆಗೆ ತೆಗೆದುಕೊಳ್ಳದೇ ಹೈಕಮಾಂಡ್ ಪ್ಲ್ಯಾನ್ ಅನುಷ್ಠಾನಕ್ಕೆ ತರುವ ಕೆಲಸಕ್ಕೆ ರಹಸ್ಯ ಸೂತ್ರ ಹೆಣೆದಿರುವುದು ಗೊತ್ತಾಗಿದೆ. ಅದೇ ಒನ್ ಟು ಒನ್ – ಒನ್ ಕನೆಕ್ಷನ್ ಆಪರೇಷನ್ ತಂತ್ರ.

    ಅಂದಹಾಗೆ ಮಧ್ಯಪ್ರದೇಶದ ಕೈ ಶಾಸಕರು ಕರ್ನಾಟಕದಲ್ಲಿ ಸೇಫ್ ಎನ್ನುವ ವರದಿಯನ್ನು ಹೈಕಮಾಂಡ್ ತರಿಸಿಕೊಂಡಿತ್ತು. ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನಕ್ಕೆ ಮಾತ್ರ ತಂದು ಶಾಸಕರನ್ನು ಶಿಫ್ಟ್ ಮಾಡುವ ಕೆಲಸ ಮಾಡಿತ್ತು. ಆ ಶಾಸಕರ ಕಾವಲಿಗೆ ನಾಯಕರನ್ನು ಗುಡ್ಡೆ ಹಾಕದೇ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಅವರನ್ನು ಮಾತ್ರ ನೇಮಿಸಿ ಉಳಿದವರಿಗೆ ಪ್ಲ್ಯಾನ್ ಗೊತ್ತಾಗದಂತೆ ರಹಸ್ಯ ಕಾಪಾಡಿಕೊಂಡು ಬಂದಿದೆ.

    ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಅಥವಾ ಬೇರೆ ಯಾವುದೇ ನಾಯಕರಿಗಾಗಲೀ ಶಾಸಕರನ್ನ ಕಾವಲು ಕಾಯುವ ತಂತ್ರ ಗೊತ್ತಾಗದಂತೆ ರಹಸ್ಯ ಕಾಪಾಡಿಕೊಂಡು ಬರಲಾಗುತ್ತಿದೆ ಎನ್ನಲಾಗಿದೆ. ಪೊಲೀಸ್ ರಕ್ಷಣೆ ಕೊಡುವ ಕೆಲಸವನ್ನಷ್ಟೇ ಗೃಹ ಸಚಿವರು ಮಾಡಬೇಕು ಹೊರತು, ಶಾಸಕರ ಕಾಯುವ ತಂತ್ರದಲ್ಲಿ ಇರಬಾರದು ಎನ್ನುವುದು ಹೈಕಮಾಂಡ್ ಆದೇಶ ಎನ್ನಲಾಗಿದೆ.

    ಮಧ್ಯಪ್ರದೇಶದ ಶಾಸಕರ ಬಳಿ ಕರ್ನಾಟಕದ ಯಾವುದೇ ಬಿಜೆಪಿ ನಾಯಕರಾಗಲಿ, ಯಡಿಯೂರಪ್ಪ ಕ್ಯಾಬಿನೆಟ್ ಸಚಿವರು ಭೇಟಿ ಆಗಬಾರದು ಅಂತಾ ಹೈಕಮಾಂಡ್ ಫರ್ಮಾನು ಹೊರಡಿಸಿದೆ ಎನ್ನಲಾಗಿದೆ. ಯಡಿಯೂರಪ್ಪ ಸಂಪುಟದ ಇಬ್ಬರು ಪಕ್ಷನಿಷ್ಠ ಸಚಿವರನ್ನು ಮಧ್ಯಪ್ರದೇಶದ ಶಾಸಕರ ಕಾವಲಿಗೆ ನೇಮಿಸಿ ಎಂಬ ರಾಷ್ಟ್ರೀಯ ನಾಯಕರ ಸಲಹೆ ಕೂಡ ಬಿಜೆಪಿ ಹೈಕಮಾಂಡ್ ತಿರಸ್ಕರಿಸಿದೆ ಎನ್ನಲಾಗುತ್ತಿದೆ.

    ದೆಹಲಿಯಿಂದ ಬರುವ ಪ್ಲ್ಯಾನ್ ಅನ್ನು ಮಾತ್ರ ಅನುಷ್ಠಾನಕ್ಕೆ ತರುವ ಕೆಲಸವನ್ನ ಮಾತ್ರ ಅರವಿಂದ ಲಿಂಬಾವಳಿ ಮಾಡಬೇಕು ಎನ್ನುವ ಸಂದೇಶ ರಾಜ್ಯ ಬಿಜೆಪಿ ನಾಯಕರಿಗೆ ಶಾಕ್ ಕೊಟ್ಟಿದೆ. ರಾಜ್ಯದಲ್ಲಿ ಆಪರೇಷನ್ ಕಮಲ ಎರಡು, ಮೂರು ಬಾರಿ ವಿಫಲವಾದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಎಚ್ಚರಿಕೆಯ ಹೆಜ್ಜೆಯನ್ನಿಟ್ಟಿದೆ.

  • ಸಚಿವ ಸ್ಥಾನಕ್ಕಾಗಿ ದೈವ ಮಾನವನ ಮೊರೆ

    ಸಚಿವ ಸ್ಥಾನಕ್ಕಾಗಿ ದೈವ ಮಾನವನ ಮೊರೆ

    ಬೆಂಗಳೂರು: ಕೊನೆ ಗಳಿಗೆಯಲ್ಲಿ ಸಚಿವ ಸ್ಥಾನದಿಂದ ವಂಚಿತರಾದ ಮಾಜಿ ಸಚಿವ ಹಾಗೂ ಹಾಲಿ ಶಾಸಕರೊಬ್ಬರು ದೈವ ಮಾನವನ ಮೊರೆ ಹೋಗಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅನ್ನೋ ನೋವಿನಲ್ಲಿ ಶಾಸಕ ಅರವಿಂದ ಲಿಂಬಾವಳಿ, ವಿನಯ್ ಗುರೂಜಿ ಮೊರೆ ಹೋಗಿದ್ದಾರೆ. ದೈವ ಮಾನವನ ಮಾತು ಕೇಳಿ ಲಿಂಬಾವಳಿ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.

    ನೂತನ ಸಚಿವರ ಪ್ರಮಾಣ ವಚನ ಸ್ವೀಕಾರದ ಜೊತೆಗೆ ಮೂಲ ಬಿಜೆಪಿ ಶಾಸಕರು ಕೆಲವರು ಸಚಿವರಾಗಬೇಕಿತ್ತು. ಆದರೆ ಕೊನೆ ಗಳಿಗೆಯಲ್ಲಿ ಮೂಲ ಬಿಜೆಪಿ ಶಾಸಕರ ಪ್ರಮಾಣ ವಚನ ಸ್ವೀಕಾರ ರದ್ದಾಗಿತ್ತು. ಹಾಗೆಯೇ ಕೊನೆ ಗಳಿಗೆಯಲ್ಲಿ ಸಚಿವ ಸ್ಥಾನ ಕಳೆದುಕೊಂಡವರಲ್ಲಿ ಶಾಸಕ ಅರವಿಂದ ಲಿಂಬಾವಳಿ ಸಹ ಒಬ್ಬರು. ತಮಗಾದ ಕೊನೆ ಗಳಿಗೆಯ ನಿರಾಸೆಯಿಂದ ಬೇಸರಗೊಂಡ ಲಿಂಬಾವಳಿ ದೈವ ಮಾನವ ವಿನಯ ಗುರೂಜಿ ಮೊರೆ ಹೋಗಿದ್ದಾರೆ.

    ಜೆಡಿಎಸ್‍ನ ವಿಧಾನ ಪರಿಷತ್ ಸದಸ್ಯ ಶರವಣ ಜೊತೆ ವಿನಯ್ ಗುರೂಜಿಯನ್ನ ಭೇಟಿಯಾಗಿ ತಮ್ಮ ಮನದ ಇಚ್ಛೆಯನ್ನ ವ್ಯಕ್ತಪಡಿಸಿದ್ದಾರೆ. ಆದರೆ ಇದಕ್ಕೆ ಪ್ರತಿಕ್ರಿತಿಸಿರುವ ವಿನಯ್ ಗುರೂಜಿ, ಸಚಿವರಾಗಲು ಇನ್ನೂ ಸ್ವಲ್ಪ ಸಮಯದವರೆಗೆ ಕಾಯುವುದು ಅನಿವಾರ್ಯ ಎಂದಿದ್ದಾರೆ. ಅಲ್ಲಿಗೆ ತಮಗೆ ಸಚಿವ ಸ್ಥಾನದ ಯೋಗ ಸದ್ಯಕ್ಕೆ ಇಲ್ಲಾ ಎಂಬುದು ಶಾಸಕ ಅರವಿಂದ ಲಿಂಬಾವಳಿಗೆ ಖಚಿತವಾಗಿದೆ. ಮೊದಲೇ ಸಚಿವ ಸ್ಥಾನದಿಂದ ಕೊನೆ ಗಳಿಗೆಯಲ್ಲಿ ವಂಚಿತರಾದ ಅರವಿಂದ ಲಿಂಬಾವಳಿ ಸದ್ಯಕ್ಕೆ ಸಚಿವ ಸ್ಥಾನದ ಅವಕಾಶ ಇಲ್ಲ ಎನ್ನುವ ದೈವ ಮಾನವನ ಮಾತು ಕೇಳಿ ಮತ್ತಷ್ಟು ಬೇಸರಗೊಂಡಿದ್ದಾರೆ.

  • ನಮ್ಗೆ ಶಾಸಕರ ಅಗತ್ಯವಿಲ್ಲ, ಅವರೇ ಬರ್ತೀನಿ ಅಂದ್ರೆ ಬಿಡೋದಕ್ಕೆ ಆಗಲ್ಲ- ಅರವಿಂದ ಲಿಂಬಾವಳಿ

    ನಮ್ಗೆ ಶಾಸಕರ ಅಗತ್ಯವಿಲ್ಲ, ಅವರೇ ಬರ್ತೀನಿ ಅಂದ್ರೆ ಬಿಡೋದಕ್ಕೆ ಆಗಲ್ಲ- ಅರವಿಂದ ಲಿಂಬಾವಳಿ

    ಬೆಂಗಳೂರು: ಎರಡೂ ಪಕ್ಷಗಳ ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ. ಡಿಸೆಂಬರ್ 9ರಂದು ಯಾರು ಬರ್ತಾರೆ ಅನ್ನೋದನ್ನ ಹೇಳುತ್ತೇವೆ. ಪಕ್ಷಕ್ಕೆ ಸೇರಿಸಿಕೊಳ್ಳುವುದನ್ನ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಮಗೆ ಶಾಸಕರ ಅಗತ್ಯ ಇಲ್ಲ. ಆದರೆ ಅವರೇ ಬರುತ್ತೇನೆ ಎಂದು ಹೇಳಿದರೆ ಬಿಡೋದಕ್ಕೆ ಆಗಲ್ಲ. ಬೈ ಎಲೆಕ್ಷನ್ ಬಳಿಕ ಕಾಂಗ್ರೆಸ್, ಜೆಡಿಎಸ್ ಸ್ಥಿತಿ ಚಿಂತಾಜನಕ ಆಗುತ್ತದೆ ಎಂದು ಉಪಚುನಾವಣೆ ಬಿಜೆಪಿ ಉಸ್ತುವಾರಿ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

    ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 15 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ಇದೆ. ಉಪಚುನಾವಣೆ ಬಳಿಕ ನಮ್ಮ ಸರ್ಕಾರ ಸುಭದ್ರವಾಗಲಿದೆ. ಮಹಾರಾಷ್ಟ್ರದ ಬೆಳವಣಿಗೆ ಬಳಿಕ ನಾನೂ ಸಿಎಂ ಆಗಬಹುದು ಅಂತ ಕಾಂಗ್ರೆಸ್ ನಾಯಕರಲ್ಲಿ ಆಸೆ ಹುಟ್ಟಿಕೊಂಡಿದೆ. ಜೆಡಿಎಸ್ ಕೂಡ ಸೋನಿಯಾ ಸೂಚನೆಗೆ ಕಾಯುತ್ತೇವೆ ಎಂದು ಹೇಳಿ ಈಗ ಮತ್ತೆ ಬಿಜೆಪಿ ಸರ್ಕಾರ ಸುಭದ್ರ ಅಂತಿದ್ದಾರೆ. ಇದೆಲ್ಲವೂ ಜನರನ್ನ ಗೊಂದಲದಲ್ಲಿ ಸಿಲುಕಿಸಲು ಸೃಷ್ಟಿಸಿ ಅವರೇ ಗೊಂದಲದಲ್ಲಿ ಸಿಲುಕಿದ್ದಾರೆ. ಇದರಿಂದ ಬಿಜೆಪಿಗೆ ಸಹಾಯ ಮಾಡಿದ್ದಕ್ಕೆ ಅವರಿಗೆ ಧನ್ಯವಾದಗಳು ಎಂದರು.

    ಉಪಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಕಾಂಗ್ರೆಸ್, ಜೆಡಿಎಸ್ ಗೆ ಇದ್ದಿದ್ರೆ ರಾಜ್ಯಸಭೆಗೆ ಅಭ್ಯರ್ಥಿ ಹಾಕಬಹುದಿತ್ತು. ಅವರಿಗೆ ವಿಶ್ವಾಸ ಇಲ್ಲದೇ ರಾಜ್ಯಸಭೆಗೆ ಸ್ಪರ್ಧಿಸಿಲ್ಲ. ನಮ್ಮ ಪಕ್ಷದ ಅಭ್ಯರ್ಥಿಯಾಗಿರುವ ಕೆ.ಸಿ ರಾಮಮೂರ್ತಿ ಅವರು ಅವಿರೋಧ ಆಯ್ಕೆಯಾಗುತ್ತಿದ್ದಾರೆ. ಅವರಿಗೆ ಅಭಿನಂದನೆ ತಿಳಿಸಿದರು.

    ಇದೇ ವೇಳೆ ಬೈ ಎಲೆಕ್ಷನ್ ಬಳಿಕ ಕ್ಯಾಬಿನೆಟ್ ವಿಸ್ತರಣೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ, ಹೈಕಮಾಂಡ್ ಚರ್ಚೆ ಮಾಡಿ ಅಂತಿಮಗೊಳಿಸುತ್ತಾರೆ. ಯಾರನ್ನು ಸೇರಿಸಿಕೊಳ್ಳಬೇಕೋ, ಬಿಡಬೇಕೋ ಅನ್ನೋದನ್ನ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದರು.

  • ಸಚಿವರೊಬ್ಬರು ಕರೆ ಮಾಡಿ ನನ್ನನ್ನೇ ಕೇಳಿದ್ರು- ಅರವಿಂದ ಲಿಂಬಾವಳಿ

    ಸಚಿವರೊಬ್ಬರು ಕರೆ ಮಾಡಿ ನನ್ನನ್ನೇ ಕೇಳಿದ್ರು- ಅರವಿಂದ ಲಿಂಬಾವಳಿ

    ಬೆಂಗಳೂರು: ಇತ್ತೀಚೆಗೆ 2 ಬಾರಿ ಸಚಿವರಾಗಿದ್ದವರು ದೂರವಾಣಿ ಕರೆ ಮಾಡಿ ನನ್ನನ್ನೇ ಕೇಳುವ ಮಟ್ಟಕ್ಕೆ ಬಂದಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರ ಎಷ್ಟರಮಟ್ಟಿಗೆ ತಮ್ಮತ್ತ ಸೆಳೆಯಲು ಪ್ರಯತ್ನ ಮಾಡುತ್ತಿದೆ ಎಂಬುದು ತಿಳಿಯುತ್ತದೆ ಎಂದು ಶಾಸಕ ಅರವಿಂದ ಲಿಂಬಾವಳಿ ಆರೋಪಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ವಿರುದ್ಧ ರಾಜಕೀಯ ಷಡ್ಯಂತ್ರ ಮಾಡುತ್ತಿದ್ದಾರೆ. ಬಿಜೆಪಿಯ ರಾಜಕೀಯ ಬೆಳವಣಿಗೆಗಳನ್ನು ಕಂಡು ಈ ಷಡ್ಯಂತ್ರ ನಡೆಯುತ್ತಿದೆ. ನನ್ನ ವಿರುದ್ಧವೂ ಕಾಂಗ್ರೆಸ್-ಜೆಡಿಎಸ್ ನಾಯಕರಿಂದ ಷಡ್ಯಂತ್ರ ನಡೆಯುತ್ತಿದೆ. ಮೈತ್ರಿ ನಾಯಕರ ಜೊತೆ ನಮ್ಮ ಪಕ್ಷದ ಒಂದಿಬ್ಬರು ನಾಯಕರು ಕೈಜೋಡಿಸಿ ಸಂಚು ಮಾಡುತ್ತಿದ್ದಾರೆ. ಯಾವ ಷಡ್ಯಂತ್ರ ಎಂದು ಸಂದರ್ಭ ಬಂದಾಗ ತಿಳಿಸುತ್ತೇನೆ ಎಂದು ಹೇಳುವ ಮೂಲಕ ಯಾವ ವಿಚಾರ ಎನ್ನುವುದನ್ನು ಲಿಂಬಾವಳಿ ಅವರು ಸ್ಪಷ್ಟವಾಗಿ ಹೇಳಲಿಲ್ಲ.

    ವಿಶ್ವಾಸ ಮತವನ್ನು ಇಂದಾದರೂ ಮುಗಿಸಬೇಕು ಎಂದು ಬಿಜೆಪಿ ಒತ್ತಾಯ ಮಾಡುತ್ತಿದೆ. ಈಗಾಗಲೇ ಈ ಬಗ್ಗೆ ಸ್ಪೀಕರ್ ಅವರಿಗೆ ಪತ್ರ ಬರೆಯುವ ಮೂಲಕ ಕುದುರೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಹೇಳಿದ್ದೇವೆ. ಇಷ್ಟು ಮಾತ್ರವಲ್ಲದೇ ಇನ್ನೂ ಅನೇಕ ರೀತಿಯ ಬೆಳವಣಿಗೆಗಳನ್ನು ರಾಜ್ಯದ ಆಡಳಿತಾರೂಢ ಸರ್ಕಾರ ಮಾಡುತ್ತಿದೆ ಎಂದರು.

    ಶಾಸಕರಿಗೆ ಹೆದರಿಸುವುದು, ಬಿಜೆಪಿ ಶಾಸಕರಿಗೆ ಆಮಿಷ ತೋರಿಸುವ ಕೆಲಸವನ್ನೂ ಮಾಡುತ್ತಿದೆ. ಸುಪ್ರೀಂ ಕೋರ್ಟ್ ಇಂದು ಇದನ್ನು ವಿಚಾರಣೆಗೆ ತೆಗೆದುಕೊಳ್ಳುವುದಿಲ್ಲ ಎಂದು ಬಹಳ ಸ್ಪಷ್ಟವಾಗಿ ಹೇಳಿದೆ. ಸದನದ ಬೆಳವಣಿಗೆ ನೋಡಿ ನಾಳೆ ತೆಗೆದುಕೊಳ್ಳಬೇಕೋ ಬೇಡವೋ ಎಂದು ನಿರ್ಧರಿಸುವುದಾಗಿ ಕೋರ್ಟ್ ಹೇಳಿದೆ ಎಂದು ಅವರು ತಿಳಿಸಿದರು.

    ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಇನ್ನಾದರೂ ವಾಮಮಾರ್ಗಗಳನ್ನು ಬಿಟ್ಟು ಸದನದೊಳಗೆ ತಮ್ಮ ವಿಶ್ವಾಸ ಮತವನ್ನು ಕೇಳಬೇಕು ಎಂದು ಒತ್ತಾಯಿಸಿದರು.

  • ಕಾಂಗ್ರೆಸ್ಸಿನವರಿಗೆ ಮಕ್ಳಾಗದಿದ್ದರೆ ಬಿಜೆಪಿಗೆ ಬೈತಾರೆ – ಅರವಿಂದ ಲಿಂಬಾವಳಿ

    ಕಾಂಗ್ರೆಸ್ಸಿನವರಿಗೆ ಮಕ್ಳಾಗದಿದ್ದರೆ ಬಿಜೆಪಿಗೆ ಬೈತಾರೆ – ಅರವಿಂದ ಲಿಂಬಾವಳಿ

    ಬೆಂಗಳೂರು: ಕಾಂಗ್ರೆಸ್ ಪಕ್ಷದವರಿಗೆ ಮಕ್ಕಳಗದಿದ್ದರೂ ಅವರು ಬಿಜೆಪಿಗೇ ಬೈತಾರೆ ಎಂದು ಶಾಸಕ ಅರವಿಂದ ಲಿಂಬಾವಳಿಯವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಪಾರ್ಟಿಯವರು ನಮ್ಮನ್ನೇ ದೂಷಿಸುತ್ತಾರೆ. ಮಕ್ಕಳಾಗದಿದ್ದರೂ ಅವರು ಬಿಜೆಪಿಯನ್ನೇ ಬೈತಾರೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷರಾಗಿರುವ ದಿನೇಶ್ ಗುಂಡೂರಾವ್ ಅವರು ಅರ್ಥಮಾಡಿಕೊಳ್ಳಬೇಕು. ಬಾಯಿಗೆ ಬಂದಂತೆ ಮಾತನಾಡೋದು ಅಲ್ಲ. ಅವರ ಪಕ್ಷವನ್ನು ಸರಿಯಾಗಿ ಇಟ್ಟುಕೊಳ್ಳಲ್ಲ. ಇನ್ನು ಬಿಜೆಪಿ ಮೇಲೆ ಹರಿಹಾಯ್ದರೆ ಜನ ಏನು ನಂಬಲ್ಲ ಅಂದುಕೊಂಡಿದ್ರಾ ಎಂದು ಪ್ರಶ್ನಿಸಿದ್ದಾರೆ.

    ಅವರ ಪಕ್ಷದ ಶಾಸಕರನ್ನು ಅವರು ಹೆಂಗೆ ನಡೆಸಿಕೊಂಡಿದ್ದಾರೆ ಎಂಬುದು ಗೊತ್ತಿದೆಯಾ. ಈ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲವೆಂದು ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಾನೆ ಇದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿಯೂ ಅಸಮಾಧಾನಗಳು ವ್ಯಕ್ತವಾಯಿತು. ಶಾಸಕ ಆನಂದ್ ಸಿಂಗ್ ಹಾಗೂ ಕಂಪ್ಲಿ ಗಣೇಶ್ ಮಧ್ಯೆ ಹೊಡೆದಾಟವೇ ನಡೆಯಿತು. ಅವುಗಳನ್ನು ನಿಭಾಯಿಸಲು ಸಾಧ್ಯವಾಗದಿದ್ದವರೂ ಅನಗತ್ಯವಾಗಿ ಬಿಜೆಪಿ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದ್ರು.

    ಒಟ್ಟಿನಲ್ಲಿ ಅವರೊಳಗೆ ಹುಳುಕನ್ನು ಮುಚ್ಚಿಕೊಳ್ಳುವ ಸಲುವಾಗಿ ಬಿಜೆಪಿ ಮೇಲೆ ಆರೋಪ ಮಾಡುವುದು ದಿನೇಶ್ ಗುಂಡೂರಾವ್ ಅವರ ಅಧ್ಯಕ್ಷಗಿರಿಗೆ ಶೋಭೆ ತರುವಂತದ್ದಲ್ಲ ಎಂದು ಗರಂ ಆದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಾಡಹಗಲೇ ಪೊಲೀಸರ ಮೇಲೆ ಹಲ್ಲೆಗೈದ ಯುವನಾಯಕ ಬಿಜೆಪಿಯಿಂದ ಅಮಾನತು: ಆರ್. ಅಶೋಕ್

    ಹಾಡಹಗಲೇ ಪೊಲೀಸರ ಮೇಲೆ ಹಲ್ಲೆಗೈದ ಯುವನಾಯಕ ಬಿಜೆಪಿಯಿಂದ ಅಮಾನತು: ಆರ್. ಅಶೋಕ್

    ಬೆಂಗಳೂರು: ಪೊಲೀಸರ ಮೇಲೆ ಹಾಡಹಗಲೇ ಹಲ್ಲೆ ನಡೆಸಿದ ಆರೋಪಿಗಳಲ್ಲಿ ಓರ್ವ ಬಿಜೆಪಿ ಮುಖಂಡನಾಗಿದ್ದು, ಆತನನ್ನು ಪಕ್ಷದಿಂದ ಅಮಾನತು ಮಾಡುವಂತೆ ಈಗಾಗಲೇ ಸೂಚನೆ ನೀಡಿರುವುದಾಗಿ ಬಿಜೆಪಿ ನಾಯಕ ಆರ್ ಅಶೋಕ್ ತಿಳಿಸಿದ್ದಾರೆ.

    ಪೊಲೀಸರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿಸದಂತೆ ಆರೋಪಿಗಳಲ್ಲಿ ಒಬ್ಬನಾದ ಸಂದೀಪ್, ಶಾಸಕ ಅರವಿಂದ ಲಿಂಬಾವಳಿ ಬೆಂಬಲಿಗನಾಗಿದ್ದಾನೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಅಶೋಕ್, ಆರೋಪಿ ಸಂದೀಪ್, ಗುಂಡೂರು ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷನಾಗಿದ್ದಾನೆ. ಹೀಗಾಗಿ ಆತನನ್ನು ಪಕ್ಷದಿಂದ ಕೂಡಲೇ ಅಮಾನತು ಮಾಡುವಂತೆ ಸೂಚಿಸಿದ್ದೇನೆ ಅಂದ್ರು. ಇದನ್ನೂ ಓದಿ: ಇಸ್ಪೀಟ್ ಅಡ್ಡೆ ಮೇಲೆ ದಾಳಿ ಮಾಡಿದ್ದಕ್ಕೆ ಪೊಲೀಸರ ಮೇಲೆಯೇ ಹಲ್ಲೆ- ಪುಡಿರೌಡಿಗಳ ಅಟ್ಟಹಾಸಕ್ಕೆ ಓಡಿಹೋದ ಪೇದೆಗಳು

    ಉಳಿದ ಮೂವರು ಆರೋಪಿಗಳು ಯಾವ ಪಕ್ಷದವರು ಅಂತಾ ಗೃಹಸಚಿವರು ಸ್ಪಷ್ಟಪಡಿಸಬೇಕು. ಆ ಮೂವರು ಕಾಂಗ್ರೆಸ್ ನವರು ಅಂತಾ ಹೇಳಲಾಗ್ತಿದೆ. ಅವರ ಹೆಸರು ಯಾಕೆ ಹೇಳ್ತಿಲ್ಲ ಅಂತ ಪ್ರಶ್ನಿಸಿದ್ರು.

    ಪೊಲೀಸರ ಮೇಲಿನ ಹಲ್ಲೆಗಳನ್ನು ನೋಡಿದ್ರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟರ ಮಟ್ಟಿಗಿದೆ ಅನ್ನೋದು ಗೊತ್ತಾಗುತ್ತೆ. ಯಾರೇ ತಪ್ಪು ಮಾಡಿದ್ರು, ಅದು ತಪ್ಪು. ಹಲ್ಲೆ ಮಾಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತೇನೆ ಅಂತ ಅವರು ಹೇಳಿದ್ದಾರೆ.

    ನಗರದ ವರ್ತೂರು ಮುಖ್ಯರಸ್ತೆಯ ಸಿದ್ದಾಪುರ ಬಳಿ ಭಾನುವಾರ ಪೇದೆಗಳಾದ ಬಸಪ್ಪ ಗಾಣೆಗಾರ, ಶರಣಬಸಪ್ಪ ಇಸ್ಪೀಟ್ ಅಡ್ಡೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಕುಡಿತ ಮತ್ತಿನಲ್ಲಿದ್ದ ಗ್ಯಾಂಗ್ ಪೊಲೀಸರ ಮೇಲೆಯೇ ಹಾಡಹಗಲೇ ಹಲ್ಲೆ ನಡೆಸಿವೆ. ಪ್ರಕರಣ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಕುಮಾರ್, ಸುದೀಪ್, ಮೂರ್ತಿ, ಮುರಳಿ ಮೋಹನ್ ಎಂಬ ನಾಲ್ವರನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

    https://www.youtube.com/watch?v=6caEcDoIStw

    https://www.youtube.com/watch?v=DrZ-G_iCIfI