Tag: ಅರವಿಂದ ಲಿಂಬಾವಳಿ

  • ನೈಟ್ ಕರ್ಫ್ಯೂ ಮೇಲ್ನೋಟಕ್ಕೆ, ನಾವು ನಿರ್ಬಂಧಿಸಿರುವುದು ನೈಟ್ ಲೈಫ್: ಅರವಿಂದ ಲಿಂಬಾವಳಿ

    ನೈಟ್ ಕರ್ಫ್ಯೂ ಮೇಲ್ನೋಟಕ್ಕೆ, ನಾವು ನಿರ್ಬಂಧಿಸಿರುವುದು ನೈಟ್ ಲೈಫ್: ಅರವಿಂದ ಲಿಂಬಾವಳಿ

    ಚಾಮರಾಜನಗರ: ನೈಟ್ ಕರ್ಫ್ಯೂ ಜಾರಿಗೆ ತಂದಿರುವುದು ಮೇಲ್ನೋಟಕ್ಕೆ ಆದರೆ ನಾವೂ ನೈಟ್‍ಲೈಫ್‍ನ್ನು ನಿರ್ಬಂಧ ಮಾಡಿದ್ದೇವೆ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

    ರಾಜ್ಯದಲ್ಲಿ ನೈಟ್ ಕರ್ಫ್ಯೂ ಕುರಿತು ಚಾಮರಾಜನಗರದಲ್ಲಿ ಮಾತನಾಡಿದ ಅರವಿಂದ ಲಿಂಬಾವಳಿ ಅವರು, ನೈಟ್ ಕರ್ಫ್ಯೂ ಕುರಿತು ವಿರೋಧ ಪಕ್ಷದವರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಜನರ ರಕ್ಷಣೆ ಮಾಡುವ ಹೊಣೆ ಸರ್ಕಾರದ್ದಾಗಿದೆ. ವಿರೋಧ ಪಕ್ಷದವರಿಗೆ ಸಹಕಾರ ಕೊಡುವಂತೆ ನಾವು ಮನವಿ ಮಾಡುತ್ತೇವೆ. ಮಹಾರಾಷ್ಟ್ರದಲ್ಲಿ ಕೊರೊನಾ ಸ್ಫೋಟ ಹೇಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಅಲ್ಲಿ ಕೂಡ ಸರ್ಕಾರ ಹಾಗೂ ವಿರೋಧ ಪಕ್ಷ ಇದೆ. ಅವರು ಯಾವ ರೀತಿ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ ನೋಡಿ ಎಂದರು.

    ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಕೈಗೊಳ್ಳುವ ಕ್ರಮಕ್ಕೆ ಬೆಂಬಲ ಸೂಚಿಸಿ. ನೈಟ್ ಕರ್ಫ್ಯೂ ಅನ್ನೋದು ನಿಮಗೆ ಮೇಲ್ನೋಟಕ್ಕೆ ಕಂಡು ಬರುತ್ತದೆ. ಅದರೆ ನೈಟ್‍ಲೈಫ್‍ನ್ನು ನಿರ್ಬಂಧಿಸಿದ್ದೇವೆ. ನೇರವಾಗಿ ಹೇಳುವುದಾದರೆ. ಕ್ಲಬ್, ಬಾರ್, ರೆಸ್ಟೋರೆಂಟ್‍ಗಳು ರಾತ್ರಿ ಒಂದು ಗಂಟೆಯ ವರೆಗೆ ಓಪನ್ ಇರುತ್ತದೆ. ಇಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಿಲ್ಲ ಆದ್ದರಿಂದ ನೈಟ್ ಕರ್ಫ್ಯೂ ಜಾರಿಗೆ ತರಲಾಗಿದೆ. ಕೊರೊನಾ ನಿಯಂತ್ರಣಕ್ಕೆ ಬರದಿದ್ದರೆ ರಾಜ್ಯದಲ್ಲಿ ಮತ್ತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

  • ಬಂಡೀಪುರದಲ್ಲಿ ಪ್ರಾಣಿಗಳಿಗೆ ನೀರಿನ ದೊಡ್ಡ ಅಭಾವವಿದೆ: ಲಿಂಬಾವಳಿ

    ಬಂಡೀಪುರದಲ್ಲಿ ಪ್ರಾಣಿಗಳಿಗೆ ನೀರಿನ ದೊಡ್ಡ ಅಭಾವವಿದೆ: ಲಿಂಬಾವಳಿ

    ಚಾಮರಾಜನಗರ: ಬಂಡೀಪುರದಲ್ಲಿ ಪ್ರಾಣಿಗಳಿಗೆ ನೀರಿನ ದೊಡ್ಡ ಅಭಾವವಿದೆ. ಈ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಿ ತೊಂದರೆಯಾಗದಂತೆ ಕ್ರಮವಹಿಸಲು ಸೂಚಿಸಲಾಗಿದೆ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.

    ಗಡಿ ಜಿಲ್ಲೆಯ ಬಂಡೀಪುರಕ್ಕೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೈಗೊಳ್ಳಬೇಕಾದ ಕೆಲಸದ ಬಗ್ಗೆ ಮಾತುಕತೆ ನಡೆಸಿದರು. ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬೇಸಿಗೆ ಆರಂಭವಾಗಿದೆ, ಈ ಹಿನ್ನಲೆಯಲ್ಲಿ ಕಾಡಿನಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಬೇಸಿಗೆ ಇರುವುದರಿಂದ ಪ್ರಾಣಿಗಳ ಸಮಸ್ಯೆ ಕೂಡ ಆಲಿಸಲಾಗಿದೆ. ಸೋಲಾರ್ ಪಂಪ್ ಗಳ ಮೂಲಕ ಕೆಲವೆಡೆ ನೀರು ತುಂಬಿಸಲಾಗುತ್ತಿದೆ. ಮುಂದಿನ ಬೇಸಿಗೆ ವೇಳೆಗೆ ಪ್ರಾಣಿಗಳಿಗೆ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕಿದೆ. ಬಂಡೀಪುರದಲ್ಲಿ ಪ್ರಾಣಿಗಳಿಗೆ ನೀರಿನ ದೊಡ್ಡ ಅಭಾವವಿದೆ. ಈ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ತೊಂದರೆಯಾಗದಂತೆ ಕ್ರಮವಹಿಸುವಂತೆ ತಿಳಿಸಿದರು.

    ಇದೇ ವೇಳೆ ಹುಲಿಸಂರಕ್ಷಿತಾರಣ್ಯಕ್ಕೆ ಭೇಟಿ ನೀಡಿ, ಅಧಿಕಾರಿಗಳೊಟ್ಟಿಗೆ ಬಂಡೀಪುರ ಫಾರೆಸ್ಟ್ ರೌಂಡ್ ಹಾಕಿದ್ದರು. ಈ ವೇಳೆ ಎರಡು ಕಡೆ ಹುಲಿ ಪ್ರತ್ಯಕ್ಷವಾಗಿವೆ. ತೀರಾ ಅಪರೂಪಕ್ಕೆ ದರ್ಶನ ಕೊಡುವ ಹುಲಿಗಳು ಸಚಿವರಿಗೆ ಎರಡು ಕಡೆ ದರ್ಶನ ಕೊಟ್ಟಿರೋದು ವಿಶೇಷ. ಬಂಡೀಪುರದ ಕಡುಬನಕಟ್ಟೆ, ಗಾರೆಪಾಲದ ಬಳಿ ಹುಲಿ ದರ್ಶನವಾಗಿದೆ. ಕಡುಬನಕಟ್ಟೆ ಬಳಿ ನೀರಿನಲ್ಲಿ ಕುಳಿತಿದ್ದ ಹುಲಿ ದರ್ಶನವಾಗಿದೆ. ಇದರ ಜೊತೆಗೆ ಆನೆಗಳ ಹಿಂಡಿನ ದರ್ಶನ ಸಹ ಆಗಿದೆ.

  • ಬಿಜೆಪಿ ಕೋರ್ ಕಮಿಟಿ ಪುನಾರಚನೆ – ಬಿಎಸ್‌ವೈ ಬಣಕ್ಕೆ ಹಿನ್ನಡೆ‌

    ಬಿಜೆಪಿ ಕೋರ್ ಕಮಿಟಿ ಪುನಾರಚನೆ – ಬಿಎಸ್‌ವೈ ಬಣಕ್ಕೆ ಹಿನ್ನಡೆ‌

    ಬೆಂಗಳೂರು: ರಾಜ್ಯ ಬಿಜೆಪಿ ಕೋರ್ ಕಮಿಟಿ ಪುನಾರಚನೆಯಾಗಿದ್ದು, ಸಿಎಂ ಯಡಿಯೂರಪ್ಪ ಬಣಕ್ಕೆ ಹಿನ್ನೆಡೆಯಾಗಿದೆ. ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಅಶ್ವಥನಾರಾಯಣ್, ಸಚಿವ ಶ್ರೀರಾಮುಲುಗೆ ಸ್ಥಾನ ಸಿಕ್ಕಿದೆ.

    ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಆಪ್ತ ನಿರ್ಮಲ್ ಕುಮಾರ್ ಸುರಾನಾಗೆ ಹೈಕಮಾಂಡ್ ಸ್ಥಾನ ಕಲ್ಪಿಸಿದೆ. ಇದೇ ವೇಳೆ, ಕೋರ್ ಕಮಿಟಿಯಿಂದ ಸಿಎಂ ಅಪ್ತರಾದ ಅರವಿಂದ ಲಿಂಬಾವಳಿ, ಸಿಎಂ ಉದಾಸಿಗೆ ಕೊಕ್ ನೀಡಲಾಗಿದೆ.

    ಉಳಿದಂತೆ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸದಾನಂದಗೌಡ, ಸಚಿವ ಆರ್ ಅಶೋಕ್, ಈಶ್ವರಪ್ಪ, ಪಕ್ಷದ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಕೋರ್ ಕಮಿಟಿಯಲ್ಲಿ ಮುಂದುವರೆದಿದ್ದಾರೆ.

    ವಿಶೇಷ ಆಹ್ವಾನಿತರಾಗಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಹ ಉಸ್ತುವಾರಿ ಡಿಕೆ ಅರುಣಾ ಕೋರ್ ಕಮಿಟಿಗೆ ಸೇರ್ಪಡೆ ಆಗಿದ್ದಾರೆ.

  • ಮಂತ್ರಾಲಯದ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಸಚಿವ ಅರವಿಂದ ಲಿಂಬಾವಳಿ

    ಮಂತ್ರಾಲಯದ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಸಚಿವ ಅರವಿಂದ ಲಿಂಬಾವಳಿ

    ರಾಯಚೂರು: ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ಚುರುಕುಗೊಳಿಸಲು ಅಗತ್ಯ ಸಹಕಾರ ನೀಡುವುದಾಗಿ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

    ಇಂದು ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿ, ದರ್ಶನ ಪಡೆದರು. ಈ ವೇಳೆ ಮಠದಿಂದ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಈ ಸಮಯದಲ್ಲಿ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಭುಧೇಂದ್ರ ತೀರ್ಥ ಸ್ವಾಮೀಜಿ ಈ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು.

    ಸಚಿವ ಅರವಿಂದ ಲಿಂಬಾವಳಿ ಮಂತ್ರಾಲಯ ಗುರು ಶ್ರೀ ರಾಘವೇಂದ್ರ ಮಠದ ಅಭಿವೃದ್ಧಿ ಸಮಿತಿ ಸದಸ್ಯರಾಗಿ 2009ರಿಂದಲೂ ಕರ್ತವ್ಯ ನಿರ್ವಹಿಸುತ್ತಿದ್ದು, ಶ್ರೀಮಠದ ಕೆಲಸಗಳಲ್ಲಿ ಸಕ್ರಿಯವಾಗಿದ್ದಾರೆ. ಹೀಗಾಗಿ ಅವರು ಇಂದು ಮಂತ್ರಾಲಯದ ಅಭಿವೃದ್ಧಿ ಕಾರ್ಯಗಳ ವೀಕ್ಷಣೆ ನಡೆಸಿದರು. ನಾನಾ ಹಂತಗಳಲ್ಲಿ ಈ ಕಾಮಗಾರಿಗಳು ನಡೆಯುತ್ತಿದ್ದು, ಹಲವು ಸಮಸ್ಯೆಗಳು ಮತ್ತು ಅಡಚಣೆಗಳಿಂದಾಗಿ ಕೆಲಸ ನಿಧಾನವಾಗುತ್ತಿದೆ ಎಂದು ಸಚಿವರ ಗಮನ ಸೆಳೆದರು. ಇದಕ್ಕೆ ಸ್ಪಂದಿಸಿದ ಸಚಿವರು, ಈ ಬಗ್ಗೆ ಕೂಡಲೇ ಕ್ರಮ ವಹಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅಗತ್ಯವಿರುವ ಎಲ್ಲ ಸಹಕಾರ ನೀಡುವುದಾಗಿ ತಿಳಿಸಿದರು.

    ಇದೇ ವೇಳೆ ನಾಡಿದ್ದು ಮಂತ್ರಾಲಯದಲ್ಲಿ ಉದ್ಘಾಟನೆ ಆಗಲಿರುವ ಶ್ರೀ ಅಭಯ ಆಂಜನೇಯ ಸ್ವಾಮಿ ದರ್ಶನ ಪಡೆದು, ಕಾಮಗಾರಿಗಳ ಪರಿಶೀಲನೆ ನಡೆಸಿದರು. ಅಲ್ಲದೆ ಉದ್ಘಾಟನಾ ಕಾರ್ಯಕ್ರಮದ ಬಗ್ಗೆ ಸಚಿವರು ಮಾಹಿತಿ ಪಡೆದರು.

  • ಆಜಾದ್ ಕಿ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ರಾಜ್ಯಪಾಲರಿಗೆ ಆಮಂತ್ರಣ

    ಆಜಾದ್ ಕಿ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ರಾಜ್ಯಪಾಲರಿಗೆ ಆಮಂತ್ರಣ

    ಬೆಂಗಳೂರು: ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅವರು ಇಂದು ರಾಜ್ಯಪಾಲರಾದ ವಜೂಭಾಯಿ ವಾಲಾ ಅವರನ್ನು ಭೇಟಿ ಮಾಡಿ ನಾಳೆ ವಿದುರಾಶ್ವತ್ಥದಲ್ಲಿ ನಡೆಯಲಿರುವ ಆಜಾದಿ ಕಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಲು ಆಮಂತ್ರಣ ನೀಡಿದರು.

    ರಾಜಭವನದಲ್ಲಿ ವಜೂಭಾಯಿ ವಾಲಾ ಅವರನ್ನು ಭೇಟಿ ಮಾಡಿದ ಅರವಿಂದ ಲಿಂಬಾವಳಿ ಪುಷ್ಪ ಗುಚ್ಚವನ್ನು ನೀಡಿ, ನಾಳೆ ವಿದುರಾಶ್ವತ್ಥದಲ್ಲಿ ನಡೆಯಲಿರುವ ಆಜಾದಿ ಕಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಬೇಕಾಗಿ ಕೇಳಿಕೊಂಡರು. ಈ ಸಂದರ್ಭ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಜೊತೆಗಿದ್ದರು.

    ದೇಶದ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ರಾಜ್ಯದ ಮೂರು ಸ್ಥಳಗಳನ್ನು ಒಳಗೊಂಡಂತೆ ದೇಶದ 75 ಸ್ಥಳಗಳಲ್ಲಿ 75 ವಾರಗಳ ಕಾಲ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ ಎಂಬ ಮಾಹಿತಿಯನ್ನು ರಾಜ್ಯಪಾಲರೊಂದಿಗೆ ಸಚಿವರು ಮಾಹಿತಿ ಹಂಚಿಕೊಂಡರು.

  • 14 ಸಾವಿರ ಗಿಡ ನೆಡುವ ಬೃಹತ್ ಆಂದೋಲನಕ್ಕೆ ಚಾಲನೆ

    14 ಸಾವಿರ ಗಿಡ ನೆಡುವ ಬೃಹತ್ ಆಂದೋಲನಕ್ಕೆ ಚಾಲನೆ

    ಬೆಂಗಳೂರು: ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ 14 ಸಾವಿರ ಗಿಡ ನೆಡುವ ಬೃಹತ್ ಕಾರ್ಯಕ್ರಮವನ್ನು ಬೆಂಗಳೂರಿನ ಜಕ್ಕಾಸಂದ್ರದಲ್ಲಿ ಉದ್ಘಾಟಿಸಿದರು.

    ಸೇ ಟ್ರೀಸ್ (say tree) ಎನ್ವಿರಾನ್ಮೆಂಟಲ್ ಟ್ರಸ್ಟ್‌ ಈ ಕಾರ್ಯಕ್ರಮ ಆಯೋಜಿಸಿತ್ತು. ಕೆಎಸ್ಆರ್ ಪಿ ಪೊಲೀಸ್ ಕ್ವಾಟ್ರರ್ಸ್, ಜಕ್ಕಸಂದ್ರ 1ನೇ ಬ್ಲಾಕ್, ಕೋರಮಂಗಲದಲ್ಲಿ ನಡೆದ ಸಮಾರಂಭದಲ್ಲಿ ಸಚಿವ ಅರವಿಂದ ಲಿಂಬಾವಳಿ ಗಿಡ ನೆಟ್ಟು ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

    14 ಸಾವಿರ ಗಿಡ ನೆಡುವ ಉದ್ದೇಶಿತ ಯೋಜನೆಯ ಜಾಗ ಕೇಂದ್ರ ರೇಷ್ಮೆ ಮಂಡಳಿ (ಸೆಂಟ್ರಲ್ ಸಿಲ್ಕ್ ಬೋರ್ಡ್) ಜಂಕ್ಷನ್ ನಿಂದ‌ ಕೇವಲ 200 ಮೀಟರ್ ದೂರದಲ್ಲಿದೆ. ಮಿಯಾವಾಲ್ಕಿ ಅರಣ್ಯ ಎಂದು ಕರೆಯಲ್ಪಡುವ ಈ ದಟ್ಟವಾದ ಗಿಡವನ್ನು ನೆಟ್ಟ ಪ್ರದೇಶದ ಮರಗಳು ,ಸಾಮಾನ್ಯ ಮರಗಳಿಗಿಂತ ಶೇ. 30-40 ರಷ್ಟು ವೇಗವಾಗಿ ಬೆಳೆಯುತ್ತವೆ ಮತ್ತು ಕೇವಲ 2.5 ವರ್ಷಗಳಲ್ಲಿ ಕಾರ್ಬನ್ ಡೈಆಕ್ಸೈಡ್ ಹೀರಿಕೊಂಡು ಕೇಂದ್ರ ರೇಷ್ಮೆ ಮಂಡಳಿಯ ಸುತ್ತಲಿನ ಪ್ರದೇಶದ ಮಾಲಿನ್ಯವನ್ನು ಕಡಿಮೆ ಮಾಡಲಿದೆ.

    ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, ಬೆಂಗಳೂರನಲ್ಲಿ ಕಾಡು ಬೆಳಸುತ್ತಿರುವುದು ಸಂತಸದ ಸಂಗತಿ, ಬೆಂಗಳೂರಿನಲ್ಲಿ ಶೇ.9 ರಷ್ಟು ಕಾಡಿದೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ. 80 ರಷ್ಟು ಕಾಡಿದೆ. ಕೆಎಸ್‌ಆರ್‌ಪಿ ಕ್ಯಾಂಪಸ್ ನ ನಿವಾಸಿಗಳು ಇಲ್ಲಿನ ಗಿಡಗಳ ರಕ್ಷಣೆ ಮಾಡಿ ಬೆಳೆಸಬೇಕು ಎಂದು ಅವರು ಹೇಳಿದರು.

    ಸ್ಥಳೀಯ ನಿವಾಸಿಗಳು ಒಂದೊಂದು ಗಿಡದ ರಕ್ಷಣೆ ಮಾಡಿದರೆ ಉತ್ತಮವಾಗಿ ಗಿಡಗಳು ಬೆಳೆಯುತ್ತವೆ. ಅರಣ್ಯ ಇಲಾಖೆಯಲ್ಲಿ ಉತ್ತಮ ಯೋಜನೆಯಿದ್ದು, ಯಾರಾದರು ಜಮೀನು ನೀಡಿದರೆ ಟ್ರಿ ಪಾರ್ಕ್ ಮಾಡಲಾಗುವುದು. ಸೋಶಿಯಲ್ ಫಾರೆಸ್ಟ್ ನಿರ್ಮಾಣ ನಾವೆಲ್ಲರೂ ಮಾಡಬೇಕಿದೆ, ಕಾಡು ಬೆಳೆದರೆ ನಾಡು ಉಳಿಯಲು ಸಾಧ್ಯ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಕಾಡು ಬೆಳೆಸಿ, ನಾಡು ಉಳಿಸೋಣ ಎಂದು ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.

    ಕಾರ್ಯಕ್ರಮದಲ್ಲಿ ವಿಧಾನಪರಿಷತ್ತನ ಸದಸ್ಯರಾದ ರಘುನಾಥ ಮಲ್ಕಾಪುರ, ಕೆಎಸ್ ಆರ್ ಪಿ ಎಡಿಜಿಪಿ ಅಲೋಕ್ ಕುಮಾರ್, ಕೆಎಸ್ಆರ್ ಪಿ ಡಿಐಜಿಪಿ ವಿಕಾಶ್ ಕುಮಾರ್ ವಿಕಾಶ್, ಬಿಬಿಎಂಪಿ ಮಾಜಿ ಸದಸ್ಯರಾದ ಸರಸ್ವತಮ್ಮ, ಕ್ಲೆಮೆಂಟ್ ಜಯಕುಮಾರ, ದೇವಕಾಂತ, ದುರ್ಗೇಶ ಅಗ್ರಹಾರ, ಮದಸೂದನ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

  • ಕೋರ್ಟ್ ಮೊರೆ ಹೋದ 6 ಮಂದಿ ಸಚಿವರು – ಲಿಂಬಾವಳಿಯಿಂದ ನಡ್ಡಾ ಮಾಹಿತಿ ಸಂಗ್ರಹ

    ಕೋರ್ಟ್ ಮೊರೆ ಹೋದ 6 ಮಂದಿ ಸಚಿವರು – ಲಿಂಬಾವಳಿಯಿಂದ ನಡ್ಡಾ ಮಾಹಿತಿ ಸಂಗ್ರಹ

    – ಲಿಂಬಾವಳಿಗೆ ನಡ್ಡಾ ಪ್ರಶ್ನೆಗಳ ಮೇಲೆ ಪ್ರಶ್ನೆ

    ನವದೆಹಲಿ: ಮಾಜಿ ಸಚಿವರೊಬ್ಬರ ರಾಸಲೀಲೆ ಸಿಡಿ ಹೊರ ಬರುತ್ತಿದ್ದಂತೆಯೇ ಆರು ಮಂದಿ ಸಚಿವರು ಕೋರ್ಟ್ ಮೊರೆ ಹೋಗಿದ್ದಾರೆ. ಈ ಬೆನ್ನಲ್ಲೇ ಕೆಲಸದ ನಿಮಿತ್ತ ದೆಹಲಿಗೆ ಆಗಮಿಸಿರುವ ಸಚಿವ ಅರವಿಂದ ಲಿಂಬಾವಳಿಯಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಮಾಹಿತಿ ಸಂಗ್ರಹಿಸಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಹೌದು. 6 ಮಂದಿ ಸಚಿವರು ಕೋರ್ಟ್ ಮೆಟ್ಟಿರುತ್ತಿದ್ದಂತೆಯೇ ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೆಹಲಿಗೆ ಆಗಮಿಸಿದ್ದ ಅರವಿಂದ ಲಿಂಬಾವಳಿ ಬಳಿಯಿಂದ ಜೆ.ಪಿ. ನಡ್ಡಾ ಇಂಚಿಂಚೂ ಮಾಹಿತಿ ಸಂಗ್ರಹಿಸಿದ್ದಾರೆ ಎನ್ನಲಾಗಿದೆ.

    ಪಶ್ಚಿಮ ಬಂಗಾಳ ಚುನಾವಣೆಯ ಹಿನ್ನೆಲೆಯಲ್ಲಿ ಅರವಿಂದ ಲಿಂಬಾವಳಿ ದೆಹಲಿಗೆ ಆಗಮಿಸಿದ್ದಾರೆ. ಹೀಗೆ ಭೇಟಿ ವೇಳೆ ಜೆ.ಪಿ ನಡ್ಡಾ ಭೇಟಿ ಮಾಡಿ ಸಿಡಿ ಬಗ್ಗೆ ಚರ್ಚೆ ಮಾಡಿದ್ದಾರೆ. ಕೋರ್ಟ್ ಮೆಟ್ಟಿಲೇರಿ ತಾವೇ ತಪ್ಪಿತಸ್ಥರು ಎಂದು ಒಪ್ಪಿಕೊಂಡಂತಲ್ಲವೇ ಎಂದು ಲಿಂಬಾವಳಿಯನ್ನು ನಡ್ಡಾ ಪ್ರಶ್ನಿಸಿದ್ದಾರೆ. ಅಲ್ಲದೆ ಕೋರ್ಟಿಗೆ ಹೋಗುವ ಮುನ್ನ ಪಕ್ಷದ ನಾಯಕರ ಜೊತೆ ಚರ್ಚೆ ಮಾಡಿದ್ದರಾ…? ಮುಂದಿನ ನಡೆಗಳು ಏನು ಅನ್ನೊ ಬಗ್ಗೆ ಲಿಂಬಾವಳಿ ಬಳೀ ನಡ್ಡಾ ಸಮಾಲೋಚನೆ ನಡೆಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಕೋರ್ಟ್ ಮೊರೆ ಹೋಗಿರುವ ಸಚಿವರು:
    ತಮ್ಮ ವಿರುದ್ಧ ಮಾಧ್ಯಮಗಳು ವರದಿ ಪ್ರಸಾರ ಮಾಡಬಾರದು ಎಂದು 6 ಮಂದಿ ಸಚಿವರು ಕೋರ್ಟ್ ಮೊರೆ ಹೋಗಿದ್ದಾರೆ. ಸಚಿವರಾದ ಶಿವರಾಮ್ ಹೆಬ್ಬಾರ್, ಬಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್, ಕೆ.ಸುಧಾಕರ್, ನಾರಾಯಣಗೌಡ, ಭೈರತಿ ಬಸವರಾಜ್ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

    ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಬೇಕೆಂದು ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದಾರೆ. ಆರು ಸಚಿವರಿಗೆ ಭೀತಿ ಹುಟ್ಟಿರುವುದು ಏಕೆ? ಇದ್ದಕ್ಕಿಂದ್ದಂತೆ ಯಾಕೆ ಕೋರ್ಟ್ ಮೊರೆ ಹೋಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

  • ಅರಣ್ಯ ಇಲಾಖೆಗೆ ಒಳಪಟ್ಟಿರುವ 6.5 ಲಕ್ಷ ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ಕಂದಾಯ ಇಲಾಖೆಗೆ ಹಸ್ತಾಂತರ: ಲಿಂಬಾವಳಿ

    ಅರಣ್ಯ ಇಲಾಖೆಗೆ ಒಳಪಟ್ಟಿರುವ 6.5 ಲಕ್ಷ ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ಕಂದಾಯ ಇಲಾಖೆಗೆ ಹಸ್ತಾಂತರ: ಲಿಂಬಾವಳಿ

    ಬೆಂಗಳೂರು: ಅರಣ್ಯ ಇಲಾಖೆಗೆ ಒಳಪಟ್ಟಿರುವ 6.5 ಲಕ್ಷ ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ನ್ನು ಕಂದಾಯ ಇಲಾಖೆಗೆ ಹಸ್ತಾಂತರ ಮಾಡಿದ್ದೇವೆ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

    ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಬೆಳಗ್ಗೆಯಿಂದಲೇ ಮಲೆನಾಡು ಭಾಗದ ಶಾಸಕರು ಹಾಗೂ ಅಧಿಕಾರಿಗಳ ಜೊತೆ ಸುದೀರ್ಘ ಚರ್ಚೆ ನಡೆಸಿದ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಸಚಿವರು, ಮಲೆನಾಡು ಭಾಗದ ಶಾಸಕರ ಸಭೆ ಕರೆದಿದ್ದೆ. ಮಲೆನಾಡು ಭಾಗದ ಅರಣ್ಯಕ್ಕೆ ಸಂಬಂಧಿಸಿದ ಸಭೆ ಕರೆಯುತ್ತೇನೆ ಎಂದು ಕಳೆದ ವಿಧಾನಸಭಾ ಅಧಿವೇಶನದಲ್ಲಿ ಭರವಸೆ ಕೊಟ್ಟಿದ್ದೆ. ಅದರಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ, ಜೆಡಿಎಸ್ ಶಾಸಕ ಹೆಚ್.ಕೆ. ಕುಮಾರಸ್ವಾಮಿ ಸೇರಿದಂತೆ ಮಲೆನಾಡು ಹಾಗೂ ಕರಾವಳಿ ಭಾಗದ ಇಪ್ಪತ್ತು ಶಾಸಕರು ಸಭೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದರು.

    ಮಲೆನಾಡಿನ ಕೆಲವು ಭಾಗಗಳಲ್ಲಿ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಡೆತಡೆ ಕೂಡಾ ಇದೆ. ರಾಷ್ಟ್ರೀಯ ಅರಣ್ಯಕ್ಕೆ ಒಳಪಟ್ಟಿದ್ದರೆ ಕೇಂದ್ರದ ಅನುಮತಿ ಪಡೆಯಬೇಕು. ಇದು ರಾಜ್ಯದ ಪ್ರದೇಶವಾಗಿದ್ದರೆ ನಮ್ಮ ಅರಣ್ಯಾಧಿಕಾರಿಗೆ ಇದರ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಇದೆ ಎಂದರು.

    ಹಕ್ಕು ಪತ್ರ ವಿತರಣೆ : ಅರಣ್ಯ ವಾಸಿಗಳಿಗೆ ಹಕ್ಕು ಪತ್ರಗಳನ್ನು ನೀಡುವ ವ್ಯವಸ್ಥೆ ಯನ್ನು ಕಂದಾಯ ಇಲಾಖೆ ಜೊತೆಗೂಡಿ ಮಾಡುತ್ತೇವೆ ಎಂದು ತಿಳಿಸಿದರು. ಉತ್ತರ ಕನ್ನಡ ಭಾಗದಲ್ಲಿ ಈ ಸಮಸ್ಯೆ ಸ್ವಲ್ಪ ಹೆಚ್ಚಾಗಿದೆ. ಕೆಲವು ಅರಣ್ಯ ಗಳಲ್ಲಿ ಇರುವ ಗ್ರಾಮಗಳು ಕಾಡಿನಿಂದ ಹೊರಗೆ ಸ್ಥಳಾಂತರಿಸಲು ಹಣಕಾಸಿನ ಕೊರತೆ ಇದೆ ಎಂದ ಸಚಿವರು, ಸ್ಥಳಾಂತರಕ್ಕೆ ಅರಣ್ಯ ಗ್ರಾಮ ವಾಸಿಗಳು ಒಪ್ಪಿದ್ದಾರೆ. ಮುಂದಿನ ಬಜೆಟ್ ನಲ್ಲಿ ಹಣ ಮಂಜೂರಾದರೆ ಈ ಕಾರ್ಯವನ್ನು ಪೂರ್ಣ ಗೊಳಿಸಲಾಗುವುದು ಎಂದು ಹೇಳಿದರು.

    ಆನೆ ಕಾರಿಡಾರ್ : ಆನೆ ಮತ್ತು ಮಾನವ ನಡುವಿನ ಸಂಘರ್ಷ ಹೆಚ್ಚಾಗುತ್ತಿದೆ. ಸಾಕಷ್ಟು ಮಂದಿ ಇದರಿಂದ ಪ್ರಾಣ ಕಳೆದು ಕೊಳ್ಳುತ್ತಿದ್ದಾರೆ. ಇದನ್ನು ತಡೆಗಟ್ಟಲು ಆನೆ ಕಾರಿಡಾರ್ ಸುತ್ತ ರೈಲು ಕಂಬಿಗಳನ್ನು ಅಳವಡಿಸಲಾಗಿದೆ. ಪ್ರಾಯೋಗಿಕವಾಗಿ ಯಶಸ್ಸು ಕಂಡಿದ್ದೇವೆ. ಇದನ್ನು ಸಂಪೂರ್ಣವಾಗಿ ಮುಗಿಸುವ ನಿಟ್ಟಿನಲ್ಲಿ ಕೇಂದ್ರ ಅರಣ್ಯ ಸಚಿವ ಮತ್ತು ರೈಲ್ವೆ ಸಚಿವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಲಾಗುವುದು ಎಂದರು.

    ವರದಿಯನ್ನು ಒಪ್ಪಿಲ್ಲ : ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರ್ಕಾರ ಇನ್ನೂ ಒಪ್ಪಿಕೊಂಡಿಲ್ಲ. ಹಾಗಾಗಿ, ಅದರ ಬಗ್ಗೆ ಇವತ್ತಿನ ಸಭೆಯಲ್ಲಿ ಚರ್ಚೆ ಆಗಿಲ್ಲ ಎಂದು ಸಚಿವ ಲಿಂಬಾವಳಿ ಸ್ಪಷ್ಟಪಡಿಸಿದರು.

  • ಅರಣ್ಯಕ್ಕೆ ಪತ್ನಿ ಜೊತೆಗೆ ಹೋಗ್ತೀರಾ – ಲಿಂಬಾವಳಿಗೆ ರಮೇಶ್ ಕುಮಾರ್ ಪ್ರಶ್ನೆ

    ಅರಣ್ಯಕ್ಕೆ ಪತ್ನಿ ಜೊತೆಗೆ ಹೋಗ್ತೀರಾ – ಲಿಂಬಾವಳಿಗೆ ರಮೇಶ್ ಕುಮಾರ್ ಪ್ರಶ್ನೆ

    ಬೆಂಗಳೂರು: ಅರಣ್ಯಕ್ಕೆ ಹೋಗುವಾಗ ಪತ್ನಿ ಜೊತೆಗೆ ಹೋಗುತ್ತೀರಾ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಸಚಿವ ಅರವಿಂದ ಲಿಂಬಾವಳಿಯನ್ನು ಪ್ರಶ್ನಿಸಿದ್ದಾರೆ.

    ವಿಧಾನಸಭಾ ಕಲಾಪದ ಶೂನ್ಯವೇಳೆಯಲ್ಲಿ ಮಲೆನಾಡು ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿ ಬಗ್ಗೆ ಚರ್ಚೆ ನಡೆಯುತ್ತಿತ್ತು. ಈ ವೇಳೆ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರು ಉತ್ತರ ಕೊಡಲು ಮುಂದಾದಾಗ ರಮೇಶ್ ಕುಮಾರ್ ಮಧ್ಯಪ್ರವೇಶ ಮಾಡಿದರು.

    ಅರಣ್ಯಕ್ಕೆ ಪತ್ನಿ ಜೊತೆಗೆ ಹೋಗ್ತೀರಾ ಅಥವಾ ಒಬ್ಬನೇ ಹೋಗುತ್ತೀರಾ ಎಂದು ಪ್ರಶ್ನಿಸುವ ಮೂಲಕ ರಮೇಶ್ ಕುಮಾರ್, ಲಿಂಬಾವಳಿ ಕಾಳೆಲೆದಿದ್ದಾರೆ. ಇದಕ್ಕೆ ಉತ್ತರಿಸಿದ ಲಿಂಬಾವಳಿ, ಪತ್ನಿ ಸಮೇತ ಹೋಗಲ್ಲ, ನಾನೊಬ್ಬನೇ ಹೋಗುತ್ತೇನೆ. ಅರಣ್ಯ ಜೊತೆಗೆ ಕನ್ನಡ ಸಂಸ್ಕೃತಿ ಇಲಾಖೆ ನೀಡಿದ್ದಾರೆ. ಇದರಿಂದ ಕಾಡಿನ ಜೊತೆಗೆ ನಾಡಿಗೂ ಬರಬೇಕಾಗುತ್ತೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

  • ಸಾಲುಮರದ ತಿಮ್ಮಕ್ಕ ಮನೆಗೆ ಅರಣ್ಯ ಸಚಿವ ಲಿಂಬಾವಳಿ ಭೇಟಿ

    ಸಾಲುಮರದ ತಿಮ್ಮಕ್ಕ ಮನೆಗೆ ಅರಣ್ಯ ಸಚಿವ ಲಿಂಬಾವಳಿ ಭೇಟಿ

    ಬೆಂಗಳೂರು: ಅರಣ್ಯ ಸಚಿವ ಅರವಿಂದ ಲಿಂಬಾವಳಿ ಇಂದು ಸಾಲುಮರದ ತಿಮ್ಮಕ್ಕ ಅವರ ಮನೆಗೆ ತೆರಳಿ ಸಲಹೆ, ಸೂಚನೆಗಳನ್ನು ಪಡೆದಿದ್ದಾರೆ.

    ದಾಸರಹಳ್ಳಿಯ ಮಂಜುನಾಥ ನಗರದಲ್ಲಿರುವ ವೃಕ್ಷ ಮಾತೆ, 110 ವಯಸ್ಸಿನ ಸಾಲುಮರದ ತಿಮ್ಮಕ್ಕ ರವರ ಮನೆಗೆ ಭೇಟಿ ನೀಡಿ, ಅವರ ಯೋಗಕ್ಷೇಮ ವಿಚಾರಿಸಿ, ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ಸಲಹೆ, ಸೂಚನೆಗಳನ್ನು ಪಡೆಯಲಾಯಿತು ಎಂದು ಲಿಂಬಾವಳಿ ಟ್ವೀಟ್‌ ಮಾಡಿದ್ದಾರೆ.

    ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.