Tag: ಅರವಿಂದ ಲಿಂಬಾವಳಿ

  • ಸಂಚಾರದ ಹಾದಿಯಲ್ಲಿ ಹೆಜ್ಜೆಗುರುತು ಮೂಡಿಸಿ ಹೋದ ವಿಜಯ್: ಅರವಿಂದ ಲಿಂಬಾವಳಿ ಶೋಕ

    ಸಂಚಾರದ ಹಾದಿಯಲ್ಲಿ ಹೆಜ್ಜೆಗುರುತು ಮೂಡಿಸಿ ಹೋದ ವಿಜಯ್: ಅರವಿಂದ ಲಿಂಬಾವಳಿ ಶೋಕ

    ಬೆಂಗಳೂರು: ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್ ಅವರ ನಿಧನಕ್ಕೆ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ, ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

    ವಿಜಯ್ ತಮ್ಮ ಜೀವನ ಯಾನದ ಸಂಚಾರವನ್ನು ಅಪೂರ್ಣವಾಗಿಸಿ ಬದುಕು ತೊರೆದು ಹೋಗಿದ್ದಾರೆ. ಆದರೆ ಬದುಕಿನ ಸಂಚಾರದ ಹಾದಿಯಲ್ಲಿ ಅವರು ಅಂಗಾಂಗ ದಾನ ಮಾಡುವ ಮೂಲಕ ಹೆಜ್ಜೆ ಗುರುತುಗಳನ್ನು ಉಳಿಸಿ ಹೋಗಿದ್ದಾರೆ. ಇದು ಅತ್ಯಂತ ಭಾವನಾತ್ಮಕ, ಮನಮಿಡಿಯುವ ಸಂದರ್ಭ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

    ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಜೀವನದ ಪಯಣ ಮುಗಿಸಿದ ವಿಜಯ್ ಹಲವೇ ಚಿತ್ರಗಳಲ್ಲಿ ಅಭಿನಯಿಸಿದ್ದರೂ, ಅವೆಲ್ಲವೂ ಚಲನಚಿತ್ರ ಪ್ರೇಮಿಗಳ ಮನದಲ್ಲಿ ಅಚ್ಚಳಿಯದೆ ಉಳಿದಿದೆ ‘ನಾನು ಅವನಲ್ಲ ಅವಳು’ ಚಿತ್ರದ ಅವರ ಮನೋಜ್ಞ ಅಭಿನಯ ಅವರಿಗೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟಿತ್ತು.ಸಂಚಾರಿ ಥಿಯೇಟರ್ಸ್ ಮೂಲಕ ರಂಗಭೂಮಿಯ ಬದುಕಿಗೆ ಕಾಲಿಟ್ಟ ವಿಜಯ್ ಅನೇಕ ಮಹತ್ವದ ನಾಟಕಗಳಲ್ಲಿ ಪಾತ್ರ ವಹಿಸಿದ್ದರು. ಆನಂತರ ಕಿರುತೆರೆ ಮತ್ತು ಹಿರಿತೆರೆಗಳಿಗೂ ಪ್ರವೇಶಿಸಿ ತಮ್ಮ ಅಭಿನಯದ ಮೂಲಕ ಎಲ್ಲರ ಗಮನಸೆಳೆದರು.ಕೃಷ್ಣ ತುಳಸಿ ಚಿತ್ರದ ಅಂಧ ಯುವಕನ ಪಾತ್ರ ಸದಾ ಮನದಲ್ಲಿ ಉಳಿಯುವಂಥದ್ದು, ರಂಗಪ್ಪ ಹೋಗ್ಬಿಟ್ಟ, ಒಗ್ಗರಣೆ, ನಾತಿಚರಾಮಿ, ಪಿರಂಗಿಪುರ ಮತ್ತು ಹರಿವು ಮುಂತಾದ ಚಿತ್ರಗಳು ಅವರಿಗೆ ಅಪಾರ ಹೆಸರು ತಂದುಕೊಟ್ಟಿದೆ.

    ಭವಿಷ್ಯದಲ್ಲಿ ಇನ್ನೂ ದೊಡ್ಡ ಹೆಸರು ಮಾಡುವ ಎಲ್ಲಾ ಅವಕಾಶಗಳು ಇದ್ದ ವಿಜಯ್ ಅವರ ನಿಧನ ದುಃಖದಾಯಕ. ಪ್ರಗತಿಪರ ಚಿಂತನೆಯುಳ್ಳ, ಸಂವೇದನಾಶೀಲ ನಟ ಎನಿಸಿಕೊಂಡಿದ್ದ ವಿಜಯ್ ಸಾವಿನಲ್ಲೂ ತಮ್ಮ ಆದರ್ಶ ಮೆರೆದಿದ್ದಾರೆ. ಅಂಗಾಂಗ ದಾನ ಮಾಡಿದ ಅವರ ಕುಟುಂಬದ ನಿರ್ಣಯಕ್ಕೆ ನನ್ನ ಅನಂತ ವಂದನೆಗಳು. ಇಂತಹ ನಿರ್ಧಾರ ಕೈಗೊಳ್ಳುವುದು ಸಾಮಾನ್ಯ ಸಂಗತಿಯಲ್ಲ ,ಇತರರಿಗೆ ಮಾದರಿಯಾದ ಅವರ ಕುಟುಂಬಕ್ಕೆ ನನ್ನ ಕೃತಜ್ಞತೆಗಳು ಮತ್ತು ಸಂತಾಪಗಳನ್ನು ಸಲ್ಲಿಸುತ್ತೇನೆ. ಅವರ ದುಃಖ ದಲ್ಲಿನಾನೂ ಭಾಗಿ, ಭಗವಂತ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಸಚಿವ ಅರವಿಂದ ಲಿಂಬಾವಳಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

    ಚಿಕಿತ್ಸೆ ಪಡೆಯುತ್ತಿದ್ದ ವಿಜಯ್ ಬದುಕಿ ಬರುತ್ತಾರೆ ಎಂಬ ವಿಶ್ವಾಸ ನಂಬಿಕೆ ನನಗಿತ್ತು. ಅವರ ಕುಟುಂಬ ಸದಸ್ಯರು, ಅಭಿಮಾನಿಗಳಂತೆ ನಾನು ಕೂಡ ಪ್ರಾರ್ಥನೆ ಮಾಡಿದ್ದೆ. ಸೋಮವಾರ ಆಸ್ಪತ್ರೆಗೂ ಭೇಟಿ ನೀಡಿ ವೆಂಟಿಲೇಟರ್ ಮೇಲೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಉಸಿರಾಡುತ್ತಿದ್ದರು. ಹೀಗಾಗಿ ಅವರು ಬದುಕುಳಿಯುತ್ತಾರೆಂಬ ನಿರೀಕ್ಷೆ ಇತ್ತು. ಕೆಲ ದಿನಗಳ ಚಿಕಿತ್ಸೆ ನಂತರ ಅವರು ಮನೆ ಮರಳಲಿದ್ದಾರೆಂಬ ವಿಶ್ವಾಸ ಬಂದಿತ್ತು. ಆದರೆ, ಎಲ್ಲರ ನಿರೀಕ್ಷೆ ಹುಸಿ ಮಾಡಿ ಅವರು ಅಗಲಿದ್ದಾರೆ. ಇದು ನನಗೆ ವೈಯಕ್ತಿಕವಾಗಿ ಬಹಳಷ್ಟು ದುಃಖ ಉಂಟು ಮಾಡಿದೆ ಎಂದು ಡಾ.ಸಿ.ಎನ್.ಅಶ್ವತ್ಥನಾರಾಯಣ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

    ಕನ್ನಡಕ್ಕೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಹಿರಿಮೆ ಅವರದ್ದು. ‘ನಾನು ಅವನಲ್ಲ…ಅವಳು’ ಚಿತ್ರದಲ್ಲಿ ಅವರದ್ದು ಅಮೋಘ ನಟನೆ. ಅಷ್ಟೇ ಅಲ್ಲ ಅವರು ನಟಿಸಿದ ಎಲ್ಲ ಪಾತ್ರಗಳಲ್ಲೂ ಜೀವಿಸುತ್ತಿದ್ದರು. ಅವರ ನಿಧನ ಕನ್ನಡ ಚಿತ್ರರಂಗಕ್ಕೆ ಭರಿಸಲಾಗದ ನಷ್ಟ. ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬದ ಸದಸ್ಯರಿಗೆ, ಅಭಿಮಾನಿಗಳಿ ಹಾಗೂ ಚಿತ್ರರಂಗಕ್ಕೆ ದಯಪಾಲಿಸಲಿ ಎಂದು ಡಿಸಿಎಂ ಪ್ರಾರ್ಥನೆ ಮಾಡಿದ್ದಾರೆ.

     

  • ‘ಊರುಕೇರಿ’ ತೊರೆದು ಹೋದ ಸಿದ್ದಲಿಂಗಯ್ಯ

    ‘ಊರುಕೇರಿ’ ತೊರೆದು ಹೋದ ಸಿದ್ದಲಿಂಗಯ್ಯ

    ಬೆಂಗಳೂರು: ಕನ್ನಡ ಸಾಹಿತ್ಯದ ಅಗ್ರಗಣ್ಯ ಲೇಖಕ, ದಲಿತ ಕವಿ ಡಾ.ಸಿದ್ದಲಿಂಗಯ್ಯ ಅವರು ಕರುಣೆ ಇಲ್ಲದ ಕರೋನಾ ಕೈಗೆ ಸಿಕ್ಕು, ‘ಊರು ಕೇರಿ’ ತೊರೆದು ಹೋಗಿದ್ದಾರೆ. ಇದು ಕನ್ನಡ ಸಾಂಸ್ಕೃತಿಕ ಲೋಕಕ್ಕೆ ದೊಡ್ಡ ಆಘಾತ ಎಂದು ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

    ಶೋಕ ಸಂದೇಶದಲ್ಲಿ ಏನಿದೆ?
    ಡಾ.ಸಿದ್ದಲಿಂಗಯ್ಯ ನನ್ನ ಅತ್ಯಂತ ಆತ್ಮೀಯ ಮಿತ್ರರಾಗಿದ್ದರು, ಸಾವಿರಾರು ಶಿಷ್ಯರ ಪಾಲಿಗೆ ಪ್ರೀತಿಯ ಮೇಷ್ಟ್ರು, ಅತ್ಯಂತ ಸರಳ, ನೇರ ನಡೆ, ಸದಾ ಹಾಸ್ಯಭರಿತ ಮಾತುಗಳಿಂದಲೇ ಎದುರಿಗಿದ್ದವರನ್ನು ಮೋಡಿ ಮಾಡುವ ಮಾತುಗಾರ, ಅವರ ಪಿ ಹೆಚ್ ಡಿ ಪ್ರಬಂಧ ಗ್ರಾಮದೇವತೆಗಳು ಮೂಲಕವೇ ಕನ್ನಡ ಸಾಹಿತ್ಯಾಸಕ್ತರ ಮನ ಗೆದ್ದವರು ಸಿದ್ದಲಿಂಗಯ್ಯ. ಅತ್ಯಂತ ಸಣ್ಣ ಗ್ರಾಮ ಒಂದರಿಂದ ಬಂದವರು ವಿದ್ಯೆ ವಂಚಿತ ಜನಾಂಗದ ಮೂಲಕ ಎಲ್ಲ ಜನಾಂಗಕ್ಕೂ ವಿದ್ಯೆ ಹಂಚುವ ಕೆಲಸಕ್ಕೆ ಅವರು ತೊಡಗಿಸಿಕೊಂಡಿದ್ದೆ ಒಂದು ಅದ್ಭುತ.

    ಕೇವಲ 34 ವರ್ಷದವರಾಗಿದ್ದಾಗಲೇ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾದರು. ಸದನದಲ್ಲಿ ಅವರು ಮಂಡಿಸಿದ ವಿಷಯಗಳು ವೈವಿಧ್ಯಪೂರ್ಣವಾಗಿದ್ದವು ಜೊತೆಗೆ ಅತ್ಯಂತ ವಿಚಾರಪೂರ್ಣ ವಾಗಿದ್ದವು. ಅಲ್ಲಿ ಅವರು ವಿಷಯ ಮಂಡಿಸುತ್ತಿದ್ದ ರೀತಿ ಇಡೀ ಸದನವನ್ನು ಆಕರ್ಷಿಸಿ ಬಿಡುತ್ತಿತ್ತು.

    ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅವರು ಕನ್ನಡ ಕಟ್ಟಲು ಮಾಡಿದ ಕೆಲಸ ಅದ್ಭುತವಾದದ್ದು. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಅವರು ಮಾಡಿದ ಕೆಲಸ, ಆನಂತರ ಸಿಂಡಿಕೇಟ್ ಸದಸ್ಯರಾಗಿ ಅವರು ಮಾಡಿದ ಕೆಲಸ ಗಮನಾರ್ಹವಾದದ್ದು.

    https://twitter.com/ArvindLBJP/status/1403337280383635460

    ದಲಿತ ಕವಿ ಎಂದೇ ಪ್ರಸಿದ್ಧರಾಗಿ ಕೆಳವರ್ಗಗಳ ನೋವಿಗೆ ದನಿಯಾಗಿ ಮಿಡಿದ ಸಿದ್ದಲಿಂಗಯ್ಯ ಈಗ ನಮ್ಮನ್ನು ಅಗಲಿರುವುದು ದುರಾದೃಷ್ಟಕರ. ಗ್ರಾಮದೇವತೆಗಳು,  ಹೊಲೆಮಾದಿಗರ ಹಾಡು, ಮೆರವಣಿಗೆ, ಸಾವಿರಾರು ನದಿಗಳು, ಮುಂತಾದ ಕವನ ಸಂಕಲನಗಳು ಕನ್ನಡ ಸಾಹಿತ್ಯಕ್ಕೆ ಅವರು ಕೊಟ್ಟ ಅನನ್ಯ ಕೊಡುಗೆಗಳಾಗಿವೆ. ಅವರ ಆತ್ಮಕಥನ ಊರುಕೇರಿ ಯಿಂದ ಸ್ಪೂರ್ತಿಗೊಂಡವರು ಓದಿ ಆನಂದಿಸಿದವರು ಅಸಂಖ್ಯಾತ ಮಂದಿ.

    ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ನಾಡೋಜ ಗೌರವ,ಸತ್ಯಕಾಮ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಅಸಂಖ್ಯಾತ ಪ್ರಶಸ್ತಿ-ಪುರಸ್ಕಾರಗಳು ಅವರಿಗೆ ಸಂದಿವೆ.

    ಸಿದ್ದಲಿಂಗಯ್ಯ ಅವರ ಅಗಲಿಕೆ ಕನ್ನಡ ಸಾಹಿತ್ಯದಲ್ಲಿ ಬಹುದೊಡ್ಡ ಶೂನ್ಯವನ್ನು ಸೃಷ್ಟಿಸಿದೆ. ಅದನ್ನು ತುಂಬುವುದು ಸುಲಭವಲ್ಲ. ಸಿದ್ದಲಿಂಗಯ್ಯ ಅವರ ಕುಟುಂಬಕ್ಕೆ ಅವರ ಅಭಿಮಾನಿಗಳಿಗೆ ನನ್ನ ಸಂತಾಪಗಳನ್ನು ಸೂಚಿಸುತ್ತೇನೆ ಎಂದು ಸಚಿವ ಅರವಿಂದ ಲಿಂಬಾವಳಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

    ಡಿಸಿಎಂ ಕಂಬನಿ
    ಸಿದ್ದಲಿಂಗಯ್ಯ ಅವರು ಕನ್ನಡದ ಅಗ್ರ ಲೇಖಕರಲ್ಲೊಬ್ಬರು. ‘ದಲಿತ ಕವಿ’ ಎಂದೇ ಪ್ರಸಿದ್ಧರು. ಸಾಮಾಜಿಕ ಸಮಾನತೆಯ ಆಶಯದೊಂದಿಗೆ ಅವರು ರಚಿಸಿದ ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಆಧುನಿಕ ಸಾಹಿತ್ಯದಲ್ಲಿ ಅತ್ಯುನ್ನತ ಸ್ಥಾನ ಹೊಂದಿವೆ ಎಂದು ಡಿಸಿಎಂ ಅಶ್ವಥ್ ನಾರಾಯಣ ಗುಣಗಾನ ಮಾಡಿದ್ದಾರೆ.

    ಮೂಲತಃ ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದಲ್ಲಿ ಜನಿಸಿದ ಅವರು ನೆಲದ ಸೊಗಡನ್ನೂ ತಮ್ಮ ಸಾಹಿತ್ಯದಲ್ಲಿ ಸೊಗಸಾಗಿ ಕಟ್ಟಿಕೊಟ್ಟವರು. ಅಪ್ರತಿಮ ಭಾಷಣಕಾರರು ಆಗಿದ್ದ ಸಿದ್ದಲಿಂಗಯ್ಯ ಅವರು ವಿಧಾನ ಪರಿಷತ್ ಸದಸ್ಯರಾಗಿಯೂ ಚಿರಸ್ಮರಣೀಯ ಸೇವೆ ಮಾಡಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬದವರಿಗೆ, ಬಂಧುಗಳಿಗೆ ಮತ್ತು ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ದಯಪಾಲಿಸಲಿ ಎಂದು ಡಿಸಿಎಂ ಪ್ರಾರ್ಥನೆ ಮಾಡಿದ್ದಾರೆ.

    ಶೆಟ್ಟರ್ ಸಂತಾಪ
    ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಗಿ ಜನಪ್ರತಿನಿಧಿಯಾಗಿ ರಾಜ್ಯಕ್ಕೆ ನೀಡಿರುವ ಕೊಡುಗೆ ಅಪಾರ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಗಿ ಕನ್ನಡ ನಾಡು ನುಡಿಯ ರಕ್ಷಣೆ ಮಾಡುವ ಕೆಲಸ ಮಾಡಿದ್ದರು. ನಾಡೋಜ ಡಾ ಸಿದ್ದಲಿಂಗಯ್ಯ ಅವರ ಅಗಲಿಕೆ ರಾಜ್ಯದ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ. ಅವರ ಅಗಲಿಕೆ ಯ ನೋವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬ ವರ್ಗದವರಿಗೂ ಹಾಗೂ ಅಭಿಮಾನಿಗಳಿಗೂ ನೀಡಲಿ ಎಂದು ಭಗವಂತನ ನಲ್ಲಿ ಪ್ರಾರ್ಥಿಸುವುದಾಗಿ ತಮ್ಮ ಶೋಕ ಸಂದೇಶ ದಲ್ಲಿ ತಿಳಿಸಿದ್ದಾರೆ.

  • ಸೋಂಕಿನಿಂದ ನಿಧನರಾದವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಸಚಿವ ಅರವಿಂದ ಲಿಂಬಾವಳಿ

    ಸೋಂಕಿನಿಂದ ನಿಧನರಾದವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಸಚಿವ ಅರವಿಂದ ಲಿಂಬಾವಳಿ

    ಬೆಂಗಳೂರು: ಕೊರೊನಾದಿಂದ ನಿಧನರಾದ ಮಹದೇವಪುರ ಕ್ಷೇತ್ರದ ವಿವಿಧ ಭಾಗಗಳಲ್ಲಿ ಅನೇಕರ ಮನೆಗಳಿಗೆ ಭೇಟಿ ನೀಡಿ ಅವರ ಕುಟುಂಬಗಳಿಗೆ ಧೈರ್ಯ ತುಂಬುವ ಕೆಲಸವನ್ನು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅವರು ಮಾಡಿದ್ದಾರೆ. ಇದನ್ನೂ ಓದಿ: ವೀಡಿಯೋ ವೈರಲ್: ಸೀರೆಯುಟ್ಟು ಮ್ಯಾನ್‍ಹೋಲ್‍ಗೆ ಇಳಿದ ಮುನ್ಸಿಪಲ್ ಆಫೀಸರ್

    ಕಳೆದ ನಾಲ್ಕು ದಿನಗಳಿಂದ ಈ ರೀತಿ ಸಾವಿಗೀಡಾದವರ ಅನೇಕರ ಮನೆಗಳಿಗೆ ಸತತವಾಗಿ ಭೇಟಿನೀಡುತ್ತಿರುವ ಸಚಿವ ಅರವಿಂದ ಲಿಂಬಾವಳಿ ಅವರು ಇಂದೂ ಸಹ ಮುಂದುವರೆಸಿದ್ದಾರೆ. ಇಂದು ಹೂಡಿಯಲ್ಲಿ ಕೋವಿಡ್ ನಿಂದ ನಿಧನರಾದ ಶ್ರೀ ವೆಂಕಟೇಶ ರೆಡ್ಡಿ ಅವರ ನಿಧನಕ್ಕೆ ಸಂತಾಪ ಸೂಚಿಸಿಸಲು ಅವರ ಮನೆಗೆ ಭೇಟಿ ನೀಡಿ ಕುಟುಂಬ ವರ್ಗಕ್ಕೆ ಧೈರ್ಯ ತುಂಬಿದರು. ಇದನ್ನೂ ಓದಿ: ಸಿದ್ದರಾಮಯ್ಯಗೆ ಬುದ್ಧಿ ಇಲ್ಲ, ಕಾಂಗ್ರೆಸ್ ವಿಪಕ್ಷ ಸ್ಥಾನದಲ್ಲಿರಲು ವಿಫಲ: ಈಶ್ವರಪ್ಪ

    ಕಾಡ ಅಗ್ರಹಾರದ ಶ್ರೀ ವೆಂಕಟೇಶ ಅವರು ಕೋವಿಡ್ ನಿಂದ ನಿಧನರಾದ ಹಿನ್ನೆಲೆಯಲ್ಲಿ ಇಂದು ಅವರ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಕುಟುಂಬ ಸದಸ್ಯರ ಭಾವನೆಗಳಿಗೆ ಸ್ಪಂದಿಸಿದ ಸಚಿವ ಅರವಿಂದ ಲಿಂಬಾವಳಿ ಅವರ ನೆರವಿಗೆ ನಾವು ಸದಾ ಇರುತ್ತೇವೆ ಎಂದು ಭರವಸೆಯನ್ನು ನೀಡಿದ್ದಾರೆ.

  • ದರ್ಶನ್‍ಗೆ ಕೃತಜ್ಞತೆ ಸಲ್ಲಿಸಿದ ಅರವಿಂದ ಲಿಂಬಾವಳಿ

    ದರ್ಶನ್‍ಗೆ ಕೃತಜ್ಞತೆ ಸಲ್ಲಿಸಿದ ಅರವಿಂದ ಲಿಂಬಾವಳಿ

    ಬೆಂಗಳೂರು: ಮೃಗಾಲಯದ ಪ್ರಾಣಿಗಳನ್ನು ದತ್ತು ತೆಗೆದುಕೊಂಡು ಪೋಷಿಸುತ್ತಿರುವ ಹಾಗೂ ಮೃಗಾಲಯದ ಪ್ರಾಣಿ ದತ್ತು ತೆಗೆದುಕೊಳ್ಳಲು ಕರೆನೀಡಿದ ಕನ್ನಡ ಚಿತ್ರರಂಗದ ಜನಪ್ರಿಯ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕೆಲಸಕ್ಕಾಗಿ ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಕೃತಜ್ಞತೆ ಸಲ್ಲಿಸಿದ್ದಾರೆ.

    ಈ ಬಗ್ಗೆ ಹೇಳಿಕೆ ನೀಡಿರುವ ಅವರು ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ಎಂದೇ ಖ್ಯಾತರಾದ ದರ್ಶನ್ ಅವರು ರಾಜ್ಯದ ಮೃಗಾಲಯದ ಪ್ರಾಣಿಗಳ ಬಗ್ಗೆ ಪ್ರೀತಿ ಮತ್ತು ಆಸಕ್ತಿ ಹೊಂದಿದ್ದಾರೆ, ಅವರು ಸ್ವಇಚ್ಛೆಯಿಂದ ಪ್ರಾಣಿ ಪ್ರಿಯರಲ್ಲಿ ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುವಂತೆ ಕರೆಕೊಟ್ಟರು ಅವರ ಕರೆಯ ಮೇರೆಗೆ 40 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹವಾಗಿದೆ.

    ಕೊರೊನಾದ ಈ ಕಷ್ಟಕಾಲದಲ್ಲಿ ಸರ್ಕಾರ ಜನರ ರಕ್ಷಣೆಯ ಹೊಣೆ ಹೊತ್ತಿರುವ ಹಾಗೆ ದರ್ಶನ್ ಅವರು ಮೃಗಾಲಯದ ಪ್ರಾಣಿಗಳ ರಕ್ಷಣೆಗೆ ಹೆಚ್ಚಿನ ಕಾಳಜಿ ವಹಿಸಿದ್ದಾರೆ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು, ಹಾಗೆಯೇ ಪ್ರಾಣಿ ದತ್ತು ಪಡೆಯಲು ದೇಣಿಗೆ ನೀಡಿದ ಎಲ್ಲ ಪ್ರಾಣಿಪ್ರಿಯರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಾನು ಸಹ ರಾಜ್ಯದ ಎಲ್ಲಾ ಪ್ರಾಣಿ ಪ್ರಿಯರಲ್ಲಿ ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯಬೇಕು ಮತ್ತು ಈ ಉದ್ದೇಶಕ್ಕಾಗಿ ಹೆಚ್ಚಿನ ನೆರವು ನೀಡಬೇಕು ಎಂದು ಮನವಿ ಮಾಡುತ್ತೇನೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ. ಇದನ್ನೂ ಓದಿ: ಮೃಗಾಲಯಗಳನ್ನ ಉಳಿಸಿ ಬೆಳೆಸಿ: ದರ್ಶನ್ ಮನವಿ

  • ಅಮೇಜಾನ್ ವಿರುದ್ಧ ಕಾನೂನು ಕ್ರಮ: ಅರವಿಂದ ಲಿಂಬಾವಳಿ

    ಅಮೇಜಾನ್ ವಿರುದ್ಧ ಕಾನೂನು ಕ್ರಮ: ಅರವಿಂದ ಲಿಂಬಾವಳಿ

    ಬೆಂಗಳೂರು: ಹೆಣ್ಣು ಮಕ್ಕಳ ಒಳ ಉಡುಪಿನ ಮೇಲೆ ಕನ್ನಡದ ಬಾವುಟದ ಬಣ್ಣಗಳನ್ನು ಹಾಗೂ ಕರ್ನಾಟಕದ ರಾಜ್ಯ ಲಾಂಛನವನ್ನು ಬಳಸಿರುವ ಅಮೇಜಾನ್ ಕೆನಡಾ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ,ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

    ಕನ್ನಡದ ಭಾಷೆ, ಸಂಸ್ಕೃತಿ ಮತ್ತು ಪರಂಪರೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡ ನೆಲದ ಶ್ರೇಷ್ಠತೆಯ ಅರಿವಿಲ್ಲದ ವಿದೇಶಿ ಸಂಸ್ಥೆಗಳು ಕನ್ನಡದ ಅಸ್ಮಿತೆಗೆ ಅವಮಾನ ಮಾಡುವಂತಹ ಯಾವುದೇ ಕೆಲಸ ಮಾಡಿದರೂ ಅದನ್ನು ನಾನು ಪ್ರಬಲವಾಗಿ ಖಂಡಿಸುತ್ತೇನೆ ಎಂದರು. ಇದನ್ನೂ ಓದಿ: ಬ್ರಾ, ಪ್ಯಾಂಟಿ ಮೇಲೆ ಕರ್ನಾಟಕದ ಲಾಂಛನ, ಕನ್ನಡದ ಬಣ್ಣ- ಗೂಗಲ್ ಬಳಿಕ ಅಮೇಜಾನ್ ಅವಾಂತರ

    ಕನ್ನಡ ನೆಲದ ಭಾವನೆಗೆ ಧಕ್ಕೆ ಮಾಡುವಂತಹ ಯಾವುದೇ ಕ್ರಮಕ್ಕೆ ನನ್ನ ತೀವ್ರ ವಿರೋಧವಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವನಾಗಿ ನಾನು ಇಂತಹ ಕೃತ್ಯದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಅವಶ್ಯವೆಂದು ಭಾವಿಸಿ ಅಮೇಜಾನ್ ಕೆನಡಾ ಸಂಸ್ಥೆಯ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಲು ಸೂಚಿಸುತ್ತೇನೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.  ಇದನ್ನೂ ಓದಿ: ಕನ್ನಡಿಗರಲ್ಲಿ ಕನ್ನಡದಲ್ಲೇ ಕ್ಷಮೆ ಕೇಳಿದ ಗೂಗಲ್

     

  • ಸಾಹಿತಿ ಪ್ರೊ.ವಸಂತ ಕುಷ್ಟಗಿ ನಿಧನಕ್ಕೆ ಲಿಂಬಾವಳಿ ಸಂತಾಪ

    ಸಾಹಿತಿ ಪ್ರೊ.ವಸಂತ ಕುಷ್ಟಗಿ ನಿಧನಕ್ಕೆ ಲಿಂಬಾವಳಿ ಸಂತಾಪ

    ಬೆಂಗಳೂರು: ಕನ್ನಡದ ಹಿರಿಯ ಬರಹಗಾರ, ಕವಿ, ಪ್ರೊ.ವಸಂತ ಕುಷ್ಟಗಿ ಅವರ ನಿಧನಕ್ಕೆ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಸಂತಾಪ ವ್ಯಕ್ತಪಡಿಸಿದ್ದಾರೆ.

    ಕನ್ನಡ ಪುಸ್ತಕಲೋಕಕ್ಕೆ ತಮ್ಮ ಅನನ್ಯ ಕಾವ್ಯ ಪ್ರತಿಭೆಯಿಂದ ಮಹತ್ವದ ಕೊಡುಗೆ ಕೊಟ್ಟ ಲೇಖಕರಲ್ಲಿ ಪ್ರೊಫೆಸರ್ ವಸಂತ ಕುಷ್ಟಗಿ ಅವರೂ ಒಬ್ಬರು. ಕಲಬುರಗಿ ಮೂಲದ ವಸಂತ ಕುಷ್ಟಗಿ, ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಎಂ.ಎ.ಪದವಿ ಪಡೆದ ನಂತರ ಬೀದರ್ ನ ಭೂಮಿ ರೆಡ್ಡಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ನಂತರ ವಿವಿಧ ಕಾಲೇಜುಗಳಲ್ಲಿ ಅನೇಕ ಹಂತದ ಹುದ್ದೆಗಳನ್ನು ನಿರ್ವಹಿಸಿ, ಪ್ರಾಂಶುಪಾಲರಾಗಿ ನಿವೃತ್ತರಾದರು. ರಮನಂದ ತೀರ್ಥ ಸಂಶೋಧನಾ ಸಂಸ್ಥೆಯ ಗೌರವ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು ಎಂದು ನೆನೆದಿದ್ದಾರೆ. ಇದನ್ನೂ ಓದಿ: ಕಲ್ಯಾಣ ಕರ್ನಾಟಕದ ಹಿರಿಯ ಸಾಹಿತಿ ವಸಂತ ಕುಷ್ಟಗಿ ಇನ್ನಿಲ್ಲ

    ಅವರ ಭಕ್ತಿ ಗೋಪುರ, ಹೊಸ ಹೆಜ್ಜೆ, ಗಾಂಧಾರಿಯ ಕರುಣೆ, ಬೆತ್ತಲೆಯ ಬಾನು, ಚಂದ್ರಲಾ, ಮಾನ್ಯಖೇಟ ಮತ್ತು ಇತ್ತೀಚೆಗಿನ ಅಪ್ ಆ್ಯಂಡ್ ಡೌನ್ ಋತುಚಕ್ರ ಮುಂತಾದ ಕೃತಿಗಳು ಬಹು ಜನಪ್ರಿಯವಾಗಿವೆ. ಪ್ರತಿಷ್ಠಿತ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕಡೆಂಗೋಡ್ಲು ಕಾವ್ಯ ಪ್ರಶಸ್ತಿ, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಪ್ರಶಸ್ತಿ, ಸರ್ ಎಂ.ವಿ. ಪ್ರಶಸ್ತಿ ಸೇರಿದಂತೆ ಅಸಂಖ್ಯಾತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ ಎಂದು ಸ್ಮರಿಸಿದ್ದಾರೆ.

    ವಸಂತ ಕುಷ್ಟಗಿ ಅವರ ನಿಧನದಿಂದ ಕನ್ನಡ ಸಾಹಿತ್ಯಲೋಕ ಒಬ್ಬ ಅತ್ಯುತ್ತಮ ಲೇಖಕನನ್ನು ಕಳೆದುಕೊಂಡಿದೆ. ಭಗವಂತ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಮತ್ತು ಅಭಿಮಾನಿ ಬಳಗಕ್ಕೆ ನೀಡಲಿ ಎಂದು ಸಚಿವ ಅರವಿಂದ ಲಿಂಬಾವಳಿ ಶೋಕ ವ್ಯಕ್ತಪಡಿಸಿದ್ದಾರೆ.

  • ದುಬಾರೆ ಆನೆ ಶಿಬಿರದಿಂದ ‘ಕುಶ’ ಬಂಧ ಮುಕ್ತ- ಸಚಿವ ಅರವಿಂದ ಲಿಂಬಾವಳಿ

    ದುಬಾರೆ ಆನೆ ಶಿಬಿರದಿಂದ ‘ಕುಶ’ ಬಂಧ ಮುಕ್ತ- ಸಚಿವ ಅರವಿಂದ ಲಿಂಬಾವಳಿ

    ಬೆಂಗಳೂರು: ಕುಶ ಆನೆಯನ್ನು ದುಬಾರೆ ಶಿಬಿರದಿಂದ ಕರೆದೊಯ್ದು ನಿನ್ನೆ ಸಂಜೆ ಅರಣ್ಯ ಪ್ರದೇಶದಲ್ಲಿ ಬಿಡುಗಡೆ ಮಾಡಲಾಗಿದೆ. ಇದರಿಂದ ಕುಶ ಬಂಧಮುಕ್ತ ನಾಗಿದ್ದಾನೆ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

    ಅರಣ್ಯ ಇಲಾಖೆಯ ವಶದಲ್ಲಿದ್ದ ಆನೆ ಕುಶ ನನ್ನು ಸ್ವತಂತ್ರವಾಗಿ ಅರಣ್ಯದಲ್ಲಿ ಬಿಡಲು ಈ ಹಿಂದೆ ನಡೆದ ಸಭೆಯಲ್ಲಿ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

    ಅದರಂತೆ ಅಗತ್ಯ ಸಿದ್ಧತೆಗಳನ್ನು ನಡೆಸಿ ಕುಶನನ್ನು ಬಿಡುಗಡೆ ಮಾಡಬೇಕಾದ ಪ್ರದೇಶವನ್ನು ಗುರುತಿಸಿ, ಅದಕ್ಕೆ ರೇಡಿಯೋ ಕಾಲರ್ ಅಳವಡಿಸಿ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ದುಬಾರೆಯಲ್ಲಿದ್ದ ಆನೆಯ ಕಣ್ಣಿಗೆ ಕಡ್ಡಿ ಬಡಿದು ಕುರುಡ – ಸೊಂಡಿಲೇ ಈಗ ರಾಮನಿಗೆ ಆಧಾರ

    ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್ ಜೆ, ಉಪವಲಯ ಅರಣ್ಯಾಧಿಕಾರಿ ಕೆ.ಪಿ ರಂಜನ್ ಹಾಗೂ ಅರಣ್ಯ ಪಶುವೈದ್ಯಾಧಿಕಾರಿ ಡಾಕ್ಟರ್ ವಾಸಿಂ ಮಿರ್ಜಾ ಹಾಗೂ ಅರಣ್ಯ ಇಲಾಖೆಯ ಇತರ ಅಧಿಕಾರಿಗಳು ಕುಶ ಬಿಡುಗಡೆಯ ಸಂದರ್ಭದಲ್ಲಿ ಹಾಜರಿದ್ದು, ಬೀಳ್ಕೊಟ್ಟರು.

  • ಮಹದೇವಪುರದ ವಿವಿಧೆಡೆ ವಾರ್ ರೂಮ್, ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿದ ಅರವಿಂದ ಲಿಂಬಾವಳಿ

    ಮಹದೇವಪುರದ ವಿವಿಧೆಡೆ ವಾರ್ ರೂಮ್, ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿದ ಅರವಿಂದ ಲಿಂಬಾವಳಿ

    ಬೆಂಗಳೂರು: ಮಹದೇವಪುರ ವಲಯದ ವಿವಿಧ ಭಾಗಗಳಲ್ಲಿ ಕೋವಿಡ್ ಕೇರ್ ಸೆಂಟರ್ ಮತ್ತು ಟ್ರಯಾಜಿಂಗ್ ಕೇಂದ್ರಗಳನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಉದ್ಘಾಟಿಸಿದರು.

    ಈ ವೇಳೆ ಮಾತನಾಡಿದ ಅವರು, ಕೋವಿಡ್ ಸೋಂಕಿತರು ಪಾಸಿಟಿವ್ ಬಂದಿದ್ದರೂ ಹೊರಗೆ ತಿರುಗಾಡುತ್ತಿರುವುದು ಗಮನಕ್ಕೆ ಬಂದಿದೆ. ಸೋಂಕಿತರು ಮನೆಯೊಳಗೆ ಇರಬೇಕು, ಹೊರಗೆ ತಿರುಗುವುದರಿಂದ ಇತರರಿಗೂ ಸೋಂಕು ಹಬ್ಬುವ ಅಪಾಯವಿದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಹೊರಗೆ ಸುತ್ತುತ್ತಿರುವ ಸೋಂಕಿತರನ್ನು ಪತ್ತೆ ಮಾಡಲು ಪೊಲೀಸರ ನೆರವು ಪಡೆಯಲಾಗುವುದು ಎಂದು ತಿಳಿಸಿದರು.

    ಒಂದೇ ಶೌಚಾಲಯ ಇರುವ ಮನೆಗಳಲ್ಲಿ ಸೋಂಕಿತರು ಹೋಮ್ ಐಸೋಲೇಷನ್ ನಲ್ಲಿ ಇರುವುದು ಕಷ್ಟ, ಅಂತಹವರಿಗೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಸೋಂಕಿತರು ಟ್ರೈಯಾಜಿಂಗ್ ಕೇಂದ್ರಕ್ಕೆ ಬಂದ ನಂತರ ಪರಿಶೀಲನೆ ಮಾಡಿ, ವೈದ್ಯಕೀಯ ಚಿಕಿತ್ಸೆಗೆ ಅನುಗುಣವಾಗಿ ಆಸ್ಪತ್ರೆ ಅಥವಾ ಕೋವಿಡ್ ಕೇರ್ ಸೆಂಟರ್ ಗೆ ಸೇರಿಸಲಾಗುವುದು ಎಂದರು.

    ಮೊದಲು ಹಾಲನಾಯಕನಹಳ್ಳಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಕೋವಿಡ್ ವಾರ್ ರೂಮ್ ಉದ್ಘಾಟನೆ ಮಾಡಲಾಯಿತು, ನಂತರ ಹಾಡೋಸಿದ್ದಾಪುರದ ಐವಿರೋಜ್ ರೆಸಾರ್, ಟ್ರೈಯಾಜ್ ಸೆಂಟರ್ ಹಾಗೂ ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ ಮಾಡಲಾಯಿತು. ಮಂಡೂರು ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಕೋವಿಡ್ ವಾರ್ ರೂಮ್, ಬಿದರಹಳ್ಳಿ ಈಸ್ಟ್ ಪಾಯಿಂಟ್ ಮೆಡಿಕಲ್ ಕಾಲೇಜು ಹತ್ತಿರ ಟ್ರೈಯಾಜ್ ಸೆಂಟರ್ ಹಾಗೂ ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ ಮಾಡಲಾಯಿತು.

  • ರಾಜ್ಯದಲ್ಲಿ ವ್ಯಾಕ್ಸಿನ್ ಅವ್ಯವಸ್ಥೆಯನ್ನ ಒಪ್ಪಿಕೊಂಡ ಲಿಂಬಾವಳಿ

    ರಾಜ್ಯದಲ್ಲಿ ವ್ಯಾಕ್ಸಿನ್ ಅವ್ಯವಸ್ಥೆಯನ್ನ ಒಪ್ಪಿಕೊಂಡ ಲಿಂಬಾವಳಿ

    ಕೋಲಾರ: ವ್ಯಾಕ್ಸಿನ್ ಹಾಕಿಸಿಕೊಳ್ಳುವ ಕ್ರೇಜ್ ಹಾಗೂ ಕೊರೊನಾ ಹೆದರಿಕೆ ಶುರುವಾಗಿದೆ. ಹಾಗಾಗಿ ವ್ಯಾಕ್ಸಿನ್‍ಗೆ ಬೇಡಿಕೆ ಸೃಷ್ಟಿಯಾಗಿರುವ ಕಾರಣ ರಾಜ್ಯದಲ್ಲಿ ಅವ್ಯವಸ್ಥೆ ಆಗಿದೆ ಎಂದು ಕೋಲಾರದಲ್ಲಿ ಅರಣ್ಯ ಸಚಿವ ಅರವಿಂದ ಲಿಂಬಾವಳಿ ವ್ಯಾಕ್ಸಿನ್ ಅವ್ಯವಸ್ಥೆಯನ್ನ ಒಪ್ಪಿಕೊಂಡಿದ್ದಾರೆ.

    ಕೋಲಾರದ ಜಿಲ್ಲಾ ಎಸ್‍ಎನ್‍ಆರ್ ಆಸ್ಪತ್ರೆಗೆ ಭೇಟಿ ನೀಡಿ ಬೆಡ್, ಆಕ್ಸಿಜನ್, ವ್ಯಾಕ್ಸಿನ್ ಸೇರಿದಂತೆ ಕೋವಿಡ್ ಸೆಂಟರ್‌ಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವ್ಯಾಕ್ಸಿನ್ ಕುರಿತು ಸಿಎಂ ಕೂಡ ಹೇಳಿದ್ದಾರೆ. ರಾಜ್ಯದಲ್ಲಿ ಜನರು ಪ್ಯಾನಿಕ್ ಆಗುವ ಅವಶ್ಯಕತೆ ಇಲ್ಲ. ನಮ್ಮ ರಾಜ್ಯಕ್ಕೆ ಬೇಕಾದ ವ್ಯಾಕ್ಸಿನ್ ನಮಗೆ ಸಿಗುತ್ತೆ ಎಂದಿದ್ದಾರೆ.

    ಕೋವಿಶೀಲ್ಡ್ ದೊಡ್ಡ ಪ್ರಮಾಣದಲ್ಲಿ ಸಿಗುತ್ತಿದೆ. ಆದರೆ ಕೊವ್ಯಾಕ್ಸಿನ್ ಸಿಗುತ್ತಿಲ್ಲ. ರಾಜ್ಯದಲ್ಲಿ ವ್ಯಾಕ್ಸಿನ್ ಸಿಗುತ್ತಿಲ್ಲ ಎನ್ನುವುದನ್ನು ನಾನು ಒಪ್ಪಿಕೊಳ್ಳಲೇ ಬೇಕು ಎಂದು ರಾಜ್ಯದಲ್ಲಿರುವ ವ್ಯಾಕ್ಸಿನ್ ಅವ್ಯವಸ್ಥೆ ಒಪ್ಪಿಕೊಂಡಿದ್ದಾರೆ. ಕೋವ್ಯಾಕ್ಸಿನ್ ಉತ್ಪಾದನೆ ಕಡಿಮೆಯಾಗಿದ್ದು, ನಮಗಿಂತ ಬೇರೆ ರಾಜ್ಯದಲ್ಲಿ ಹೆಚ್ಚು ಆರ್ಡರ್ ಮಾಡಿದ್ದಾರೆ. ಹಾಗಾಗಿ ಇರುವುದರಲ್ಲಿ ಅಡ್ಜಸ್ಟ್ ಮಾಡಿ ಕೊಡುತ್ತಿದ್ದಾರೆ ಎಂದರು.

    ಸೋಂಕಿನ ಪ್ರಮಾಣ ಹೆಚ್ಚಾದಂತೆ ಜನರಲ್ಲಿ ಅರಿವು ಹೆಚ್ಚಾಗಿದೆ. ಶೇ.30 ರಷ್ಟು ಸೋಂಕಿತ ಜನರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಹೀಗಾಗಿ ಸೋಂಕು ಹರಡಲು ಮತ್ತಷ್ಟು ಕಾರಣವಾಗಿದೆ. ಲಾಕ್‍ಡೌನ್ ಅನಿವಾರ್ಯತೆಯನ್ನು ಜನರೇ ನಿರ್ಮಾಣ ಮಾಡುತ್ತಿದ್ದಾರೆ.

    ರಾಜ್ಯದಲ್ಲಿ ಕೇಸ್‍ಗಳು ಹೆಚ್ಚಾದರೆ ತಪ್ಪೇನಿಲ್ಲ, ಯಾಕೆಂದರೆ ನಮ್ಮಲ್ಲಿ ಟೆಸ್ಟಿಂಗ್‍ಗಳು ಹೆಚ್ಚಾಗುತ್ತಿದೆ. ಎರಡನೇ ಅಲೆಯಲ್ಲಿ ಏನಾಗುತ್ತದೆ ಅಂತ ಗೊತ್ತಾಗುತ್ತಿಲ್ಲ ಎಂದು ತಮ್ಮ ಅಸಾಹಯಕತೆಯನ್ನ ಹೇಳಿಕೊಂಡಿದ್ದಾರೆ. ಬೆಳಿಗ್ಗೆ ಒಂದು ರೀತಿ ಇದ್ದರೆ ಸಂಜೆಗೆ ಮತ್ತೊಂದು ಥರ ದೇಹದಲ್ಲಿ ಬದಲಾಗುತ್ತದೆ. ರೋಗ ಲಕ್ಷಣ ಇದ್ದರೆ ಕೋವಿಡ್ ಕೇರ್ ಸೆಂಟರ್‌ಗೆ ಕೂಡಲೇ ಕಳುಹಿಸಬೇಕು ಎಂದು ಆಶಾ ಕಾರ್ಯಕರ್ತರಿಗೆ, ವೈದ್ಯರಿಗೆ ಸೂಚನೆ ನೀಡಿದ್ದೇನೆ ಎಂದರು.

  • ಕುಶ ಆನೆಯನ್ನು ಮರಳಿ ಕಾಡಿಗೆ ಬಿಡಿ – ಅರಣ್ಯಧಿಕಾರಿಗಳಿಗೆ ಲಿಂಬಾವಳಿ ಸೂಚನೆ

    ಕುಶ ಆನೆಯನ್ನು ಮರಳಿ ಕಾಡಿಗೆ ಬಿಡಿ – ಅರಣ್ಯಧಿಕಾರಿಗಳಿಗೆ ಲಿಂಬಾವಳಿ ಸೂಚನೆ

    ಮಡಿಕೇರಿ: ದುಬಾರೆಯಲ್ಲಿರುವ ಕುಶ ಆನೆಯನ್ನು ಮರಳಿ ಕಾಡಿಗೆ ಬಿಡುವಂತೆ ಅಧಿಕಾರಿಗಳಿಗೆ ಅರಣ್ಯ ಸಚಿವ ಲಿಂಬಾವಳಿ ಸೂಚನೆ ನೀಡಿದ್ದಾರೆ.

    ಕಳೆದ ವರ್ಷ ಸಾಕಾನೆ ಶಿಬಿರದಿಂದ ತಪ್ಪಿಸಿಕೊಂಡು ಹೋಗಿದ್ದ ಸಾಕಾನೆ ಕುಶಾ ಆನೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಮಾವತರು ಸೆರೆಹಿಡಿದಿದ್ದು ದುಬಾರೆ ಅರಣ್ಯ ಪ್ರದೇಶಕ್ಕೆ ಕರೆ ತಂದಿದ್ದರು. ಆದರೆ ಇದೀಗಾ ಸಾಕಾನೆ ಕುಶನನ್ನು ಮರಳಿ ಕಾಡಿಗೆ ಬಿಡಲು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅರಣ್ಯಧಿಕಾರಿಗಳಿಗೆ ಆದೇಶಿಸಿದ್ದಾರೆ.

    ಇಂದು ಈ ಸಂಬಂಧ ಸಚಿವ ಅರವಿಂದ ಲಿಂಬಾವಳಿ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.ಕಳೆದ ಒಂದು ವರ್ಷದಿಂದ ದುಬಾರೆ ಶಿಬಿರದಿಂದ ತಪ್ಪಿಸಿಕೊಂಡ ಆನೆ ಕುಶನನ್ನು ಸೆರೆ ಹಿಡಿದು ತರಲಾಗಿತ್ತು. ಆದರೆ ಕುಶ ಆನೆಯನ್ನು ಸೆರೆ ಹಿಡಿದು ಇಲಾಖೆಯಿಂದ ಹಿಂಸೆ ನೀಡಲಾಗುತ್ತಿದೆ ಎಂದು ಪ್ರಾಣಿಪ್ರಿಯರು ಆಕ್ಷೇಪ ವ್ಯಕ್ತಪಡಿಸಿದ್ದರು.

    ಈ ಹಿನ್ನೆಲೆಯಲ್ಲಿ ಸಚಿವ ಅರವಿಂದ ಲಿಂಬಾವಳಿ ಇಂದು ಸಭೆ ನಡೆಸಿ ಮಾಹಿತಿ ಪಡೆದರು. ಅಧಿಕಾರಿಗಳು ಕುಶ ಆನೆಗೆ ಯಾವುದೇ ತರಹದ ಹಿಂಸೆ ನೀಡಿಲ್ಲ. ಕುಶ ಆನೆ ಆರೋಗ್ಯವಾಗಿದೆ ಎಂದು ಮಾಹಿತಿ ನೀಡಿದರು. ಅಂತಿಮವಾಗಿ ಸಚಿವರು ಕುಶ ಆನೆಗೆ ರೇಡಿಯೋ ಕಾಲರ್ ಅಳವಡಿಸಿ, ಬಿಡುಗಡೆ ಮಾಡಲು ಬಿಡುಗಡೆಗೆ ಸೂಕ್ತ ಸ್ಥಳ ನಿಗದಿ ಪಡಿಸಿದ ಮೇಲೆ, ಎಲ್ಲಾ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಬಿಡುಗಡೆ ಮಾಡಲು ಆದೇಶಿಸಿದರು.

    ಇದೇ ಸಂದರ್ಭದಲ್ಲಿ ದುಬಾರೆ ಸಮೀಪ ಪ್ರಜ್ಞಾ ಚೌಟ ಎಂಬವರು ಆನೆಗಳನ್ನು ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡು ಪೋಷಿಸುತ್ತಿರುವ ಬಗ್ಗೆ ಸ್ಥಳೀಯರಿಂದ ವ್ಯಕ್ತವಾಗಿರುವ ಆಕ್ಷೇಪಣೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಅವರ ಸುಪರ್ದಿಯಲ್ಲಿರುವ ಆನೆಗಳನ್ನು ಇಲಾಖೆ ವಶಕ್ಕೆ ಪಡೆಯುವ ಬಗ್ಗೆ ಸಚಿವರು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಸಭೆಯಲ್ಲಿ ಸಂಜಯ್ ಮೋಹನ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಅರಣ್ಯ ಪಡೆ ಮುಖ್ಯಸ್ಥರು ಮತ್ತು ವಿಜಯಕುಮಾರ್ ಗೋಗಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ,) ಹಾಗೂ ವನ್ಯಜೀವಿ ಪರಿಪಾಲಕರು ಭಾಗವಹಿಸಿದ್ದರು.