Tag: ಅರಬ್ಬೀ ಸಮುದ್ರ

  • ಎಚ್ಚರಿಕೆಯನ್ನು ಲೆಕ್ಕಿಸದೆ ನೀರಿಗಿಳಿದ- ಸಮುದ್ರಕ್ಕೆ ಜಂಪ್ ಮಾಡಿ ಯುವಕನ ರಕ್ಷಣೆ

    ಎಚ್ಚರಿಕೆಯನ್ನು ಲೆಕ್ಕಿಸದೆ ನೀರಿಗಿಳಿದ- ಸಮುದ್ರಕ್ಕೆ ಜಂಪ್ ಮಾಡಿ ಯುವಕನ ರಕ್ಷಣೆ

    ಉಡುಪಿ: ಇಲ್ಲಿನ ಅರಬ್ಬೀ ಸಮುದ್ರ ಪ್ರಕ್ಷುಬ್ಧವಾಗಿದೆ. ಸಮುದ್ರಕ್ಕೆ ಇಳೀಬೇಡಿ ಎಂದು ಎಷ್ಟು ಹೇಳಿದರೂ ಪ್ರವಾಸಿಗರು ಲೈಫ್ ಗಾರ್ಡ್ ಗಳ ಮಾತು ಕೇಳುತ್ತಿಲ್ಲ. ಹೀಗಾಗಿ ಬೀಚ್ ಸಿಬ್ಬಂದಿಗೆ ಪ್ರವಾಸಿಗರನ್ನು ನೀರಿಗಿಳಿಯದಂತೆ ನೋಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ.

    ಉಡುಪಿ ಜಿಲ್ಲೆ ಮಲ್ಪೆಯಲ್ಲಿ ಸಮುದ್ರಕ್ಕಿಳಿದು ಮುಳುಗುತ್ತಿದ್ದ ಯುವಕನನ್ನು ರಕ್ಷಣೆ ಮಾಡಲಾಗಿದೆ. ಕಳೆದ ಮೂರು ದಿನಗಳಿಂದ ಕಡಲಲ್ಲಿ ಅಬ್ಬರ ಜೋರಾಗಿದೆ. ಭದ್ರಾವತಿ ಮೂಲದ ಯುವಕರ ತಂಡ ಮಲ್ಪೆ ಬೀಚ್‍ಗೆ ಬಂದಿತ್ತು. ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದ್ದರೂ ಲೆಕ್ಕಿಸದೆ ತಂಡ ನೀರಿಗಿಳಿದಿತ್ತು.

    ಈ ಸಂದರ್ಭ ಒಬ್ಬ ಯುವಕ ಅಲೆಗಳ ಮಧ್ಯೆ ಸಿಕ್ಕಿ ಹಾಕಿಕೊಂಡಿದ್ದಾನೆ. ಕೂಡಲೇ ಮಲ್ಪೆಯ ಜೀವ ರಕ್ಷಕ ತಂಡದ ಮಧು ಸಮುದ್ರಕ್ಕೆ ಜಿಗಿದು ಯುವಕನನ್ನು ರಕ್ಷಿಸಿದ್ದಾರೆ. ಎರಡು ದಿನಗಳ ಹಿಂದಿನ ಈ ವೀಡಿಯೋ ಲಭ್ಯವಾಗಿದೆ. ಉಡುಪಿ ಜಿಲ್ಲೆಯಲ್ಲಿ ವಾಯು ಚಂಡಮಾರುತದ ಅಬ್ಬರ ಜಾಸ್ತಿಯಾಗಿದ್ದು, ಕಡಲಬ್ಬರ ವಿಪರೀತವಾಗಿದೆ.

    ಪ್ರವಾಸಿಗರು ಕಡಲಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ. ಸದ್ಯ ಮಳೆ ಮತ್ತು ಗಾಳಿ ವಿಪರೀತ ಇರುವುದರಿಂದ ಕಡಲಿಗಿಳಿಯದಂತೆ ಅಲರ್ಟ್ ಘೋಷಿಸಲಾಗಿದೆ.

    ಲೈಫ್ ಗಾರ್ಡ್ ಮಧು ಮಾತನಾಡಿ, ಮಳೆಗಾಲದಲ್ಲಿ ಪ್ರವಾಸಿಗರು ಸಮುದ್ರದಿಂದ ದೂರ ಇರುವುದೇ ಒಳ್ಳೆಯದು. ಬೇರೆ ಊರಿನವರಿಗೆ ಸಮುದ್ರದ ಬಗ್ಗೆ ಗೊತ್ತಿಲ್ಲ. ಮಾಮೂಲಿ ನದಿಯ ಈಜಾಟದ ತರ ಇದಲ್ಲ. ಕಾಲಿನಡಿಯ ಮರಳು ಜಾರಿಕೊಂಡು ಸಮುದ್ರದತ್ತ ಎಳೆಯುತ್ತದೆ. ತೂಫಾನ್ ಕಡಿಮೆಯಾಗುವವರೆಗೆ ದಯವಿಟ್ಟು ಯಾರೂ ಸಮುದ್ರಕ್ಕೆ ಇಳಿಯಬೇಡಿ. ದೂರದಲ್ಲೇ ಸಮುದ್ರ ನೋಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

  • ಉಳ್ಳಾಲದ ಸೋಮೇಶ್ವರ, ಉಚ್ಚಿಲ ಭಾಗದಲ್ಲಿ ಕಡಲಬ್ಬರ- ಸ್ಥಳೀಯರಲ್ಲಿ ಆತಂಕ

    ಉಳ್ಳಾಲದ ಸೋಮೇಶ್ವರ, ಉಚ್ಚಿಲ ಭಾಗದಲ್ಲಿ ಕಡಲಬ್ಬರ- ಸ್ಥಳೀಯರಲ್ಲಿ ಆತಂಕ

    ಮಂಗಳೂರು: ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಕಾಣಿಸಿಕೊಂಡ ಪರಿಣಾಮ ಕರಾವಳಿಯಲ್ಲಿ ಒಮ್ಮಿಂದೊಮ್ಮೆಲೇ ಕಡಲಿನ ಅಬ್ಬರ ಉಂಟಾಗಿದೆ.

    ಮಂಗಳೂರಿನ ಉಳ್ಳಾಲದ ಸೋಮೇಶ್ವರ ಮತ್ತು ಉಚ್ಚಿಲ ಭಾಗದಲ್ಲಿ ಕಡಲು ಅಬ್ಬರಿಸುತ್ತಿದ್ದು, ತೀರ ಪ್ರದೇಶದ ಮನೆಗಳಿಗೆ ನೀರು ನುಗ್ಗುತ್ತಿದೆ. ಹೀಗಾಗಿ ಹಲವು ಮನೆಗಳ ನಿವಾಸಿಗಳು ಆತಂಕದಲ್ಲಿದ್ದಾರೆ.

    ಮಳೆ ಕಡಿಮೆಯಾಗಿ ತೀರದ ನಿವಾಸಿಗಳು ನಿಟ್ಟುಸಿರು ಬಿಟ್ಟಿರುವಾಗಲೇ ಕಡಲಬ್ಬರ ಆತಂಕಕ್ಕೆ ಕಾರಣವಾಗಿದೆ. ಲಕ್ಷದ್ವೀಪ ಸೇರಿದಂತೆ ಸಮುದ್ರ ಮಧ್ಯೆ ಭಾರೀ ಮಳೆಯಾಗಿರುವುದು ಮತ್ತು ಚಂಡಮಾರುತ ಕಾಣಿಸಿಕೊಂಡ ಕಾರಣ ಕಡಲಿನಬ್ಬರ ದಿಢೀರಾಗಿ ಕಾಣಿಸಿಕೊಂಡಿದೆ. ಚಂಡಮಾರುತ ಪರಿಣಾಮ ಮಳೆಯ ಮುನ್ಸೂಚನೆ ಇತ್ತಾದರೂ, ಕರಾವಳಿಯಲ್ಲಿ ಅಷ್ಟೇನು ಮಳೆ ಬಿದ್ದಿಲ್ಲ. ಬಿಸಿಲಿನ ವಾತಾವರಣ ಇದ್ದರೂ, ತೀರದಲ್ಲಿ ಕಡಲಬ್ಬರ ಕಾಣಿಸಿಕೊಂಡಿದ್ದು ಜನರಲ್ಲಿ ಅಚ್ಚರಿಗೆ ಕಾರಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅರಬ್ಬೀಸಮುದ್ರದಲ್ಲಿ ವಾಯುಭಾರ ಕುಸಿತ- ಕರಾವಳಿಯಲ್ಲಿ ಇನ್ನೆರಡು ದಿನ ಭಾರೀ ಮಳೆ

    ಅರಬ್ಬೀಸಮುದ್ರದಲ್ಲಿ ವಾಯುಭಾರ ಕುಸಿತ- ಕರಾವಳಿಯಲ್ಲಿ ಇನ್ನೆರಡು ದಿನ ಭಾರೀ ಮಳೆ

    – ಕಡಲಿಗೆ ಇಳಿಯದಂತೆ ಮೀನುಗಾರರಿಗೆ ಸೂಚನೆ

    ಮಂಗಳೂರು/ಉಡುಪಿ: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತಗೊಂಡಿರುವ ಹಿನ್ನೆಲೆ ಇಂದಿನಿಂದ ಕರಾವಳಿಯಲ್ಲಿ ಭಾರೀ ಮಳೆಯಾಗಲಿದೆ. ಈಗಾಗಲೇ ಮೀನುಗಾರರಿಗೆ ಕಡಲಿಗಿಳಿಯದಂತೆ ಸೂಚಿಸಲಾಗಿದೆ. ಜಿಲ್ಲಾಡಳಿತ ಎಚ್ಚರದಿಂದಿರುವಂತೆ ಸೂಚಿಸಲಾಗಿದೆ. ಇತ್ತ ರಾಜ್ಯದ ಹಲವೆಡೆ ಮಳೆಯಾಗಿದೆ.

    ಕಳೆದ ತಿಂಗಳು ಸುರಿದ ಭಾರೀ ಮಳೆಗೆ ದಕ್ಷಿಣ ಕರ್ನಾಟಕ ತತ್ತರಿಸಿತ್ತು. ಇಂದಿನಿಂದ ಕರಾವಳಿಯಲ್ಲಿ ಭಾರೀ ಮಳೆಯಾಗಲಿದೆ ಅಂತಾ ಹವಾಮಾನ ಇಲಾಖೆ ಎಚ್ಚರಿಸಿದೆ. ಇತ್ತ ಹವಾಮಾನ ಎಚ್ಚರಿಕೆ ನಡುವೆಯೇ ಕರಾವಳಿಯಲ್ಲಿ ಗುಡುಗು ಸಹಿತ ಮಳೆಯಾಗಿದೆ. ಇನ್ನು ಅರಬ್ಬೀ ಸಮುದ್ರ ಪಕ್ಷಕ್ಷುಬ್ಧಗೊಳ್ಳಲಿದ್ದು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ 5 ದಿನ ರೆಡ್ ಅಲರ್ಟ್ ಘೋಷಿಸಲಾಗಿದೆ. ಆಳಸಮುದ್ರ ಮೀನುಗಾರಿಕೆಗೆ ತೆರಳಿದ ಬೋಟ್‍ಗಳನ್ನು ದಡಕ್ಕೆ ಕರೆಸಿಕೊಳ್ಳಲಾಗಿದೆ. ಮೀನುಗಾರರಿಗೆ ಮೈಕ್ ಮೂಲಕ ಸೂಚನೆ ನೀಡಲಾಗಿದ್ದು, ಬೋಟ್‍ಗಳೆಲ್ಲ ಬಂದರಿನಲ್ಲೇ ಲಂಗರು ಹಾಕಿದೆ.

    ಇನ್ನೆರಡು ದಿನದಲ್ಲಿ ವರ್ಷಧಾರೆಯಾಗಲಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ಮೈಸೂರು, ಮಂಡ್ಯ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆಗಳಲ್ಲಿ ಹಿಂಗಾರು ಮಳೆ 140ರಿಂದ 180 ಮಿಲಿ ಮೀಟರ್ ಮಳೆಯಾಗಲಿದೆ ಅಂತ ರಾಜ್ಯ ಪ್ರಕೃತಿ ಪ್ರಕೋಪ ಇಲಾಖೆ ನಿರ್ದೇಶಕ ಶ್ರೀನಿವಾಸರೆಡ್ಡಿ ಹೇಳಿದ್ದಾರೆ.

    ಚಿಕ್ಕಮಗಳೂರಿನಲ್ಲಿ ಮಳೆಯಾಗ್ತಿದ್ದು, ಕಸ್ಕೆಮನೆ ಗ್ರಾಮದ ದೇವದಾನ ಎಸ್ಟೇಟ್‍ನಲ್ಲಿ ಬಳ್ಳಾರಿ ಮೂಲದ ಕಾರ್ಮಿಕ ಶಿವಪ್ಪ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಮಂಡ್ಯದಲ್ಲಿ ಬಿರುಗಾಳಿ ಸಹಿತ ಮಳೆಗೆ ಮರಗಳು ಬಿದ್ದು ನಾಲ್ಕು ಕಾರುಗಳ ಗಾಜು ಪುಡಿಪುಡಿಯಾಗಿದೆ. ಬಯಲುಸೀಮೆ ಕೋಲಾರ, ಚಿಕ್ಕಬಳ್ಳಾಪುರದಲ್ಲೂ ಮಳೆಯಾಯ್ತು. ಮಳೆಯಿಂದ ರೈತರಲ್ಲಿ ಸಂತಸ ಮೂಡಿದೆ. ಇತ್ತ ಬೆಂಗಳೂರು ಸುತ್ತಮುತ್ತಲಿನ ಆನೇಕಲ್, ಎಲೆಕ್ಟ್ರಾನಿಕ್ಸ್ ಸಿಟಿ, ಬನ್ನೇರುಘಟ್ಟ ರಸ್ತೆ ಮತ್ತು ಕೆ.ಆರ್.ಪುರಂ ಭಾಗಗಳಲ್ಲಿ ಮಳೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅರಬ್ಬೀ ಸಮುದ್ರದ ನೀರಿನ ಬಣ್ಣ ಬದಲು- ಸ್ಥಳೀಯರಲ್ಲಿ ಆತಂಕ

    ಅರಬ್ಬೀ ಸಮುದ್ರದ ನೀರಿನ ಬಣ್ಣ ಬದಲು- ಸ್ಥಳೀಯರಲ್ಲಿ ಆತಂಕ

    – ಸಿಡಿಲಿನ ಹೊಡೆತಕ್ಕೆ ಉಡುಪಿಯಲ್ಲಿ ಮಹಿಳೆ ಬಲಿ

    ಉಡುಪಿ: ಜಿಲ್ಲೆಯಲ್ಲಿ ಅರಬ್ಬಿ ಸಮುದ್ರ ಅಬ್ಬರಿಸುತ್ತಿದೆ. ಮೆಕ್ನೂ ಚಂಡಮಾರುತ ಹಿನ್ನೆಲೆಯಲ್ಲಿ ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಸಮುದ್ರದ ನೀರು ಬಣ್ಣ ಬದಲಾಯಿಸಿದ್ದು ಸ್ಥಳೀಯರು ಆತಂಕಗೊಂಡಿದ್ದಾರೆ. ಕಾರ್ಕಳದಲ್ಲಿ ಸಿಡಿಲಿನ ಹೊಡೆತಕ್ಕೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ.

    ಗಲ್ಫ್ ರಾಷ್ಟ್ರಗಳನ್ನು ಬೆಚ್ಚಿಬೀಳಿಸಿರುವ ಚಂಡಮಾರುತ, ಈಗ ಕರ್ನಾಟಕ ಕರಾವಳಿಯನ್ನು ನಡುಗಿಸುತ್ತಿದೆ. ಕಡಲ ಅಬ್ಬರ ತೀರದಿಂದ ಅರ್ಧ ಕಿ.ಮೀ ದೂರದಿಂದಲೇ ಮೇಲೇರಿ ಬರುತ್ತಿದೆ. ಕಡಲಿನ ಅಬ್ಬರ ಕಂಡು ಕರಾವಳಿಗರಲ್ಲಿ ಆತಂಕ ಸೃಷ್ಟಿಯಾಗಿದೆ. ಕಾಪು, ಮಲ್ಪೆ, ಮರವಂತೆ, ಪಡುಬಿದ್ರೆ ಬೀಚ್ ಗಳಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ.

    ಸಿಡಿಲು ಬಡಿದು ಮಹಿಳೆ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಬೈಲೂರಿನಲ್ಲಿ ನಡೆದಿದೆ. ಮಲಗಿದಲ್ಲೇ 34 ವರ್ಷದ ಶೀಲಾ ನಲ್ಕೆ ಮೃತಪಟ್ಟಿದ್ದಾರೆ. ನಿನ್ನೆ ರಾತ್ರಿ ಭಾರೀ ಗುಡುಗು ಸಹಿತ ಮಳೆಯಾಗಿತ್ತು. ಗ್ರಾಮ ಪಂಚಾಯತ್ ಸದಸ್ಯೆಯಾಗಿದ್ದ ಶೀಲಾ, ಮನೆಯೊಳಗೆ ಮೃತಪಟ್ಟಿದ್ದಾರೆ.

    ಘಟನಾ ಸ್ಥಳಕ್ಕೆ ಶಾಸಕ ಸುನೀಲ್ ಕುಮಾರ್ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ. ಕಾರ್ಕಳ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

  • ಉಡುಪಿಗೆ ಬನ್ನಿ, ಅರಬ್ಬೀ ಸಮುದ್ರದಲ್ಲಿ ವಾಕ್ ಮಾಡಿ!

    ಉಡುಪಿಗೆ ಬನ್ನಿ, ಅರಬ್ಬೀ ಸಮುದ್ರದಲ್ಲಿ ವಾಕ್ ಮಾಡಿ!

    ಉಡುಪಿ: ಸುತ್ತಾಟ ಮಾಡ್ಬೇಕು, ಟೆನ್ಶನ್ ಫ್ರೀ ಮಾಡ್ಕೋಬೇಕು ಅಂತ ಉಡುಪಿಗೆ ಬರೋ ಐಡಿಯಾ ಮಾಡಿರೋರಿಗೆ ಇದು ಶುಭಸುದ್ದಿ. ಇಷ್ಟು ದಿನ ಉಡುಪಿಗೆ ಬರೋ ಪ್ರವಾಸಿಗರು ಸಮುದ್ರ ನೋಡಿ- ಬೋಟಿಂಗ್ ಮಾಡಿ ಖುಷಿ ಪಡ್ತಾಯಿದ್ರು. ಇನ್ಮುಂದೆ ಮಲ್ಪೆಗೆ ಬರೋ ಪ್ರವಾಸಿಗರು ಸಮುದ್ರದ ನಡುವೆ ವಾಕ್ ಮಾಡ್ಬಹುದು. ಸುತ್ತಲೂ ಸಮುದ್ರ ಕಾಣೋ ಥರ ಸೆಲ್ಫೀ ತೆಗೆದು ಎಂಜಾಯ್ ಮಾಡ್ಬಹುದು.

    ಮಲ್ಪೆ ಕಡಲ ತೀರ ಭಾರತದಲ್ಲೇ ಸೇಫೆಸ್ಟ್ ಕಡಲತೀರ. ಅರಬ್ಬೀ ಸಮುದ್ರದ ಸೌಂದರ್ಯ ನೋಡಲು ಜನ ಎಲ್ಲೆಲ್ಲಿಂದಲೋ ಉಡುಪಿಗೆ ಬರ್ತಾರೆ. ಉಡುಪಿಯಲ್ಲಿರೋ ಪ್ರವಾಸಿ ತಾಣಗಳ ಪಟ್ಟಿಗೆ ಹೊಸಾ ಸೇರ್ಪಡೆಯಾಗಿದೆ. ಅದೇ ಸೀ ವಾಕ್..!

    ಸಿಂಪಲ್ಲಾಗಿ ಹೇಳೋದಾದ್ರೆ ಸೀ ವಾಕ್ ಅಂದ್ರೆ ಸಮುದ್ರದ ಮೇಲೆ ನಡೆದಾಡೋದು. ಇಂತದ್ದೊಂದು ಅವಕಾಶ ಮಲ್ಪೆಯಲ್ಲಿ ಶುರುವಾಗಿದೆ. ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿ ಜನರನ್ನು ಹೆಚ್ಚು ಸಂಖ್ಯೆಯಲ್ಲಿ ಸೆಳೆಯುವ ಉದ್ದೇಶದಿಂದ ಸೀ ವಾಕ್ ಆರಂಭಿಸಲಾಗಿದೆ. ಮಲ್ಪೆ ಬಂದರು ಸಮೀಪದಲ್ಲಿ ಸೀ ವಾಕ್ ಟ್ರ್ಯಾಕ್ ಮಾಡಲಾಗಿದೆ. ಸಮುದ್ರದ ನಡುವೆ ಸುಮಾರು ಮುಕ್ಕಾಲು ಕಿಲೋಮೀಟರ್ ನಡ್ಕೊಂಡು ಹೋಗಿ ಸಮುದ್ರದ ಸೌಂದರ್ಯವನ್ನು ಆಸ್ವಾದಿಸಬಹುದು.

    ಈ ಹಿಂದೆ ಮೀನುಗಾರಿಕಾ ಬೋಟ್ ಓಡಾಡಲು ಇಲ್ಲಿ ಉದ್ದಕ್ಕೆ ಕಲ್ಲನ್ನು ಹಾಕಿ ಅಲೆಗಳನ್ನು ತಡೆಯಲಾಗಿತ್ತು. ಇದೀಗ ಅದರ ಮೇಲೆ ಟ್ರ್ಯಾಕ್ ಮಾಡಿ ಸೀ ವಾಕ್ ಗೆ ಅವಕಾಶ ಮಾಡಿಕೊಡಲಾಗಿದೆ. ಸುಮಾರು 53 ಲಕ್ಷ ರೂಪಾಯಿ ವೆಚ್ಚದಲ್ಲಿ ತಡೆಗೋಡೆ, ವಾಕಿಂಗ್ ಟ್ರ್ಯಾಕ್- ದೀಪಸ್ತಂಭ, ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ಇಂಟರ್ಲಾಕ್ ಟೈಲ್ಸ್ ಹಾಕಿ ಪಕ್ಕಾ ಟ್ರ್ಯಾಕ್ ನಿರ್ಮಾಣ ಮಾಡಲಾಗಿದೆ. ಜನ ಸಮುದ್ರದ ನಡುವೆ ಸಲೀಸಾಗಿ ಓಡಾಡೋ ಅವಕಾಶ ಇದು. ಸಮುದ್ರದ ಅಲೆಗಳಿಂದ ಏಳೋ ರಭಸ ಗಾಳಿಗೆ ಮೈಯ್ಯೊಡ್ಡುವ ಅವಕಾಶ ಜನರಿಗೆ ಸಿಕ್ಕಿದೆ.

    ಸಚಿವ ಪ್ರಮೋದ್ ಮಧ್ವರಾಜ್ ರಾಜ್ಯದ ಮೊಟ್ಟ ಮೊದಲ ಸೀ ವಾಕ್ ಗೆ ಚಾಲನೆ ನೀಡಿದ್ದಾರೆ. ಕಡಲಿನ ಜೊತೆ ಕಡಲಾಳವನ್ನು ಕಂಡ ಜನರಿಗೆ ವಿಭಿನ್ನ ಅನುಭವವಾಗಿದೆ. ಕಡಲಿನಲ್ಲಿ ಓಡುವ ಬೋಟ್ಗಳನ್ನು ಪಕ್ಕದಲ್ಲೇ ನಿಂತು ನೋಡುವ ಅವಕಾಶ ಜನರಿಗೆ ಸಿಕ್ಕಿದೆ. ಈ ಕುರಿತು ಪಬ್ಲಿಕ್ ಟಿವಿ ಜೊತೆ ಸ್ಥಳೀಯ ನವೀನ್ ಕೊಳಲಗಿರಿ ಮಾತನಾಡಿ, ಉಡುಪಿಯಲ್ಲೇ ಇರುವವರು ನಾವು. ಆದ್ರೆ ಯಾವತ್ತೂ ಸೀ ವಾಕ್ ಮಾಡಿರಲಿಲ್ಲ. ಈ ಪ್ಲೇಸ್ ಡೇಂಜರಸ್ ಆಗಿತ್ತು. ಆದ್ರೆ ಈಗ ಪ್ರವಾಸಿ ತಾಣ ಆಗಿರೋದು ಬಹಳ ಸಂತಸವಾಗುತ್ತಿದೆ ಎಂದು ಅಭಿಪ್ರಾಯ ಹಂಚಿಕೊಂಡರು.

    ಕೇರಳದಲ್ಲಿ ಒಂದು ಕಡೆ ಸೀ ವಾಕ್ ಇದೆ. ರಾಜ್ಯದಲ್ಲಿ ಮಲ್ಪೆ ಕಡಲ ತೀರದಲ್ಲಿ ಮೊದಲ ಸೀ ವಾಕ್ ನಿರ್ಮಾಣವಾಗಿದೆ. ಹುಣಸೂರಿನ ಅನಿತಾ ಮತ್ತು ಅನುಶಾ ಮಲ್ಪೆ ಸೀ ವಾಕ್ ಗೆ ಫುಲ್ ಫಿದಾ ಆಗಿದ್ರು. ಸಮುದ್ರದ ಆಳಕ್ಕೆ ಹೋಗಿ ಬಂದ ಅನುಭವ ಆಯ್ತು, ಮೀನು ಅಲೆಗಳ ನಡುವೆ ಹಾರೋದನ್ನು ನೋಡಿದೆವು. ಸಮುದ್ರದ ಮೇಲೆ ವಾಕ್ ಮಾಡಿದ ಅನುಭವ ಆಯ್ತು. ಮತ್ತೆ ಮತ್ತೆ ಬರಬೇಕು ಅಂತ ಡಿಸೈಡ್ ಮಾಡಿದ್ದೇವೆ, ಇದೊಂದು ಮರೆಯಲಾಗದ ಪ್ರವಾಸ ಅಂತ ಹೇಳಿದ್ರು.

    ಮಲ್ಪೆ ಅಭಿವೃದ್ಧಿ ಸಮಿತಿ ಸೀ ವಾಕ್ ನ ಮೇಲ್ವಿಚಾರಣೆ ನೋಡಿಕೊಳ್ಳಲಿದೆ. ಸಮುದ್ರದ ಮೇಲೆ ಒಂದು ವಾಕ್ ಮಾಡೋ ಅನುಭವ ನಿಮ್ಗೂ ಆಗ್ಬೇಕೂಂದ್ರೆ ಉಡುಪಿಗೆ ಒಂದು ಸಾರಿ ಬನ್ನಿ. ಫ್ರೀಯಾಗಿ ಸೀ ಮೇಲೆ ವಾಕ್ ಮಾಡ್ಬಹುದು.

  • ಓಖಿಗೆ ಕಡಲ ಒಡಲು ನಲುಗಿತು-ಸಮುದ್ರದ ನೀರು ರಸ್ತೆಗೆ ಬಂತು!

    ಓಖಿಗೆ ಕಡಲ ಒಡಲು ನಲುಗಿತು-ಸಮುದ್ರದ ನೀರು ರಸ್ತೆಗೆ ಬಂತು!

    ಉಡುಪಿ: ಕಡಲ ಒಡಲು ಓಖಿಗೆ ಸಿಲುಕಿ ಪ್ರಕ್ಷುಬ್ಧ ಆಗಿರುವುದರಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್‍ಗಳು ಮತ್ತೆ ವಾಪಸ್ ಬಂದು ಬಂದರಿನಲ್ಲಿ ಲಂಗರು ಹಾಕುತ್ತಿದೆ. ಉಡುಪಿಯ ಮಲ್ಪೆ ಬೀಚ್‍ನಲ್ಲಿ ಸೈಂಟ್ ಮೇರಿಸ್ ಐಲ್ಯಾಂಡ್ ಗೆ ಹೋಗುವ ಪ್ರವಾಸಿ ಬೋಟ್ ಸಂಚಾರ ನಿಷೇಧಿಸಲಾಗಿದೆ. ಕಳೆದ ರಾತ್ರಿಯಿಂದ ರಸ್ತೆಗೆ ಕಡಲ ಅಲೆಗಳು ಅಪ್ಪಳಿಸುತ್ತಿದ್ದು ತೀರದ ಜನ ಆತಂಕಕ್ಕೀಡಾಗಿದ್ದಾರೆ.

    ಓಖಿ ಚಂಡಮಾರುತದಿಂದ ಅರಬ್ಬೀ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಓಖೀ ಚಂಡಮಾರುತ ರಾಜ್ಯದ ಕರಾವಳಿಯಲ್ಲಿ ಹಾದು ಹೋಗುತ್ತಿರುವುದರಿಂದ ರಾಜ್ಯ ಕರಾವಳಿಯಲ್ಲಿಯೂ ಬದಲಾವಣೆಯಾಗಿದೆ. ಅಲೆಗಳ ಅಬ್ಬರ ಹೆಚ್ಚಾಗಿದ್ದು ಇನ್ನೆರಡು ದಿನಗಳ ಕಾಲ ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ಕಳೆದ ರಾತ್ರಿ ಕಾಪು- ಪಡುಕೆರೆಯಲ್ಲಿ ಸಮುದ್ರದ ನೀರು ರಸ್ತೆಗೆ ಅಪ್ಪಳಿಸಿದೆ. ರಾತ್ರೋ ರಾತ್ರಿ ದೋಣಿಗಳನ್ನು ತೀರದಿಂದ ತಟಕ್ಕೆ ಎಳೆದು ಹಾಕಲಾಗುತ್ತಿದೆ. ಮೀನುಗಾರಿಕೆಗೆ ತೆರಳಿದ್ದ ಯಾಂತ್ರೀಕೃತ ಮೀನುಗಾರಿಕ ಬೋಟ್‍ಗಳು ಮತ್ತೆ ಬಂದರು ಸೇರುತ್ತಿದೆ. ಕೇರಳ, ತಮಿಳುನಾಡಿನ ಬೋಟ್‍ಗಳು, ಮೀನುಗಾರರು ಆಶ್ರಯಕ್ಕಾಗಿ ಉಡುಪಿಯ ಮಲ್ಪೆ ಬಂದರಿನತ್ತ ಧಾವಿಸಿ ಬರುತ್ತಿದ್ದಾರೆ. ಮಲ್ಪೆ ಬೀಚ್‍ನಲ್ಲಿಯೂ ಪ್ರವಾಸಿಗರು ಸಮುದ್ರದಲ್ಲಿ ಬಹುದೂರ ಹೋಗಿ ನೀರಿನಲ್ಲಿ ನೀರಾಟ ಆಡದಂತೆ ಎಚ್ಚರಿಕೆ ನೀಡಲಾಗುತ್ತಿದೆ.

    ಜಾಗ್ರತೆ, ಜೀವದ ಜೊತೆ ಚೆಲ್ಲಾಟ ಬೇಡ: ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಲ್ಪೆಯ ಲೈಫ್ ಗಾರ್ಡ್ ಮೋಹನ್, ಹೊರ ಜಿಲ್ಲೆಯ ಪ್ರವಾಸಿಗರನ್ನು ನಿಯಂತ್ರಿಸೋದೇ ಸವಾಲು. ಹೇಳಿದರೂ ಸಮುದ್ರಕ್ಕೆ ಇಳಿದು ಬಿಡುತ್ತಾರೆ. ಅಪಾಯ ಎಂದು ಬೋರ್ಡ್ ಹಾಕಿದ್ರೂ ಅದನ್ನು ಜನ ಗಣನೆಗೆ ತೆಗೆದುಕೊಳ್ಳಲ್ಲ ಅಂತ ಅಸಮಾಧಾನಗೊಂಡರು.

    ಸಮುದ್ರದಲ್ಲಿ ಭಾರಿ ಪ್ರಮಾಣದ ಅಲೆಗಳು ಏಳುತ್ತಿರುವುದರಿಂದ ಕಸಗಳು ದಡ ಸೇರುತ್ತಿದೆ. ಮಲ್ಪೆಯ ಸೈಂಟ್ ಮೇರಿಸ್ ಐಲ್ಯಾಂಡ್‍ಗೆ ತೆರಳುವ ಪ್ರವಾಸಿ ಬೋಟ್‍ಗಳ ಸಂಚಾರ ನಿಷೇಧಿಸಲಾಗಿದೆ. ಇಂದು ಪ್ರವಾಸಿಗರಿಗೆ ಐಲ್ಯಾಂಡ್ ನೋಡುವ ಭಾಗ್ಯ ಸಿಗುವುದಿಲ್ಲ. ನಾಳೆ ಮಧ್ಯ ರಾತ್ರಿವರೆಗೂ ಹವಾಮಾನ ಏರುಪೇರಾಗುವ ಸಾಧ್ಯತೆಯಿದೆ ಎಂದು ಈಗಾಗಲೇ ಹವಮಾನ ಇಲಾಖೆ ಸೂಚನೆ ನೀಡಿದೆ. ಹೀಗಾಗಿ ಕೋಸ್ಟ್ ಗಾರ್ಡ್ ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರುವುದಕ್ಕೆ ಸೂಚಿಸಲಾಗಿದೆ. ಬೀಚ್‍ನಲ್ಲಿರುವ ಲೈಫ್ ಗಾರ್ಡ್‍ಗಳು ಪ್ರವಾಸಿಗರ ಮೇಲೆ ಹೆಚ್ಚಿನ ಗಮನವನ್ನು ಕೇಂದ್ರಿಕರಿಸಿದ್ದಾರೆ. ಮೈಕ್ ಮೂಲಕ ಓಖಿ ಚಂಡಮಾರುತದ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ.

    ಓಖಿ ಚಂಡಮಾರುತ ರಾಜ್ಯ ಕರಾವಳಿಯಿಂದ ಬಹುದೂರದಲ್ಲಿ ಸಾಗುತ್ತಿದ್ದು, ಲಕ್ಷದ್ವೀಪದಿಂದ ಗುಜರಾತ್ ಕಡೆಗೆ ಪಯಣಿಸಲಿದೆ. ಈ ಬಗ್ಗೆ ಹವಾಮಾನ ಇಲಾಖೆ ಮ್ಯಾಪ್ ಸಿದ್ಧಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಇದನ್ನು ಹರಿಯಬಿಟ್ಟು ಗೊಂದಲ ನಿವಾರಣೆಗೆ ಯತ್ನಿಸುತ್ತಿದೆ. ಒಟ್ಟಿನಲ್ಲಿ ಓಖಿ ಚಂಡಮಾರುತದಿಂದ ಸಮುದ್ರ ತೀರದ ಜನರು ಆತಂಕಗೊಂಡಿದ್ದಾರೆ. ಎರಡು ದಿನಗಳಲ್ಲಿ ಕಡಲು ಸಮಸ್ಥಿತಿಗೆ ಬರಬಹುದು ಎಂಬ ಆಶಾಭಾವನೆಯಲ್ಲಿದ್ದಾರೆ.

     

    ಇದನ್ನೂ ಓದಿ: ಓಖಿ ಚಂಡಮಾರುತದ ಅಬ್ಬರ- ಮಂಗಳೂರಲ್ಲಿ 4 ಮಿನಿ ಹಡಗು ಮುಳುಗಿ 8 ಮಂದಿ ಕಣ್ಮರೆ

    https://www.youtube.com/watch?v=QC37Q2pdg9w

  • ಓಖಿ ವಕ್ರದೃಷ್ಟಿಗೆ ಕೇರಳ, ತಮಿಳ್ನಾಡು ತತ್ತರ- ಬೆಂಗ್ಳೂರು, ಕರಾವಳಿಯಲ್ಲಿ ಇಂದೂ ಮಳೆ ಸಾಧ್ಯತೆ

    ಓಖಿ ವಕ್ರದೃಷ್ಟಿಗೆ ಕೇರಳ, ತಮಿಳ್ನಾಡು ತತ್ತರ- ಬೆಂಗ್ಳೂರು, ಕರಾವಳಿಯಲ್ಲಿ ಇಂದೂ ಮಳೆ ಸಾಧ್ಯತೆ

    ಚೆನ್ನೈ: ಸುಮಾರು 12 ಮಂದಿಯನ್ನು ಬಲಿ ಪಡೆದಿರುವ ಓಖಿ ಚಂಡಮಾರುತ ಇನ್ನೂ ತಣ್ಣಗಾಗಿಲ್ಲ. ಲಕ್ಷದ್ವೀಪ, ಕೇರಳ, ತಮಿಳುನಾಡಿನಲ್ಲಿ ಅನಾಹುತ ಸೃಷ್ಟಿಸಿರುವ ಚಂಡಮಾರುತ ಇಂದು ಮತ್ತಷ್ಟು ತೀವ್ರತೆ ಪಡೆದುಕೊಳ್ಳಲಿದೆ. ಮುಂದಿನ 24 ಗಂಟೆಗಳಲ್ಲಿ ಬಿರುಗಾಳಿ ಸಹಿತ ಇನ್ನಷ್ಟು ಅಬ್ಬರ ಮಾಡಲಿದೆ. 48 ಗಂಟೆಗಳಲ್ಲಿ ಧಾರಾಕಾರ ಮಳೆಯಾಗಲಿದೆ ಅಂತಾ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಕೇರಳ ಮತ್ತು ತಮಿಳುನಾಡಿನ ಕರಾವಳಿ ಪ್ರದೇಶಗಳಲ್ಲಿರುವ ಶಾಲಾ-ಕಾಲೇಜುಗಳಿಗೆ ಈಗಾಗಲೇ ರಜೆ ಘೋಷಿಸಲಾಗಿದೆ. ತಿರುವನಂತಪುರಂ ತೀರದಲ್ಲಿ ಇನ್ನೂ 80 ಮಂದಿ ಮೀನುಗಾರರು ಸಿಲುಕಿರುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ. ಚೆನ್ನೈನಲ್ಲಿಯೂ ಮಳೆಯಾಗ್ತಿದೆ. ಕೇರಳ ಮತ್ತು ತಮಿಳುನಾಡಿನಲ್ಲಿರುವ ನದಿಗಳು ಅಪಾಯದ ಮಟ್ಟ ಮೀರಿ ಹರಿಯುವ ಸಾಧ್ಯತೆ ಇದೆ.

    ಓಖಿ ಚಂಡಮಾರುತ ಹಿನ್ನೆಲೆಯಲ್ಲಿ ಕರ್ನಾಟಕದ ಕರಾವಳಿ ತೀರ ಪ್ರದೇಶಗಳಲ್ಲೂ ಕಟ್ಟೆಚ್ಚರ ಘೋಷಿಸಲಾಗಿದೆ. ಗಂಟೆಗೆ 45 ರಿಂದ 65 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿ ಸಹಿತ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ.

    ಇತ್ತ ಬೆಂಗಳೂರಲ್ಲೂ ಇಂದು ಮತ್ತು ನಾಳೆ ಮಳೆ ಮುಂದುವರಿಯಲಿದೆ ಅಂತಾ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಳಿಗಾಳಿ ಬೀಸುತ್ತಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ಮಳೆಯಾಗುವ ಸಾಧ್ಯತೆ ಇದೆ.

    ಓಖಿ ಚಂಡಮಾರುತಕ್ಕೆ ಲಕ್ಷದ್ವೀಪದಲ್ಲಿರುವ ಕಲ್ಪೇನಿ ಮತ್ತು ಮಿನಿಕಾಯ್ ದ್ವೀಪಗಳು ಥಂಡಾ ಹೊಡೆದಿವೆ. ಭೀಮಗಾತ್ರದ ಅಲೆಗಳು ತೀರ ಪ್ರದೇಶದಲ್ಲಿರುವ ಮನೆ, ರೆಸಾರ್ಟ್‍ಗಳಿಗೆ ನುಗ್ಗಿದೆ. ಸಾವು ನೋವು ಸಂಭವಿಸಿಲ್ಲವಾದರೂ ಹಲವಾರು ಮನೆಗಳು ಸಮುದ್ರ ಪಾಲಾಗಿವೆ ಎಂದು ವರದಿಯಾಗಿದೆ.

    https://www.youtube.com/watch?v=nI9KBpvAA3k