Tag: ಅರಬ್ಬೀ ಸಮುದ್ರ

  • ಸಾಗರದಬ್ಬರಕ್ಕೆ ಮಗುಚಿ ಬಿದ್ದ ದೋಣಿ- ಸಮುದ್ರಕ್ಕೆ ಜಿಗಿದ್ರು 6 ಮಂದಿ

    ಸಾಗರದಬ್ಬರಕ್ಕೆ ಮಗುಚಿ ಬಿದ್ದ ದೋಣಿ- ಸಮುದ್ರಕ್ಕೆ ಜಿಗಿದ್ರು 6 ಮಂದಿ

    ಉಡುಪಿ: ಮುಂಗಾರು ಮಳೆಯಿಂದ ಅರಬ್ಬೀ ಸಮುದ್ರ ಪ್ರಕ್ಷುಬ್ಧವಾಗಿದೆ. ಭಾರೀ ಅಲೆಗಳು ಸಾಗರದಲ್ಲಿ ಏಳುತ್ತಿವೆ. ಉಡುಪಿ ಜಿಲ್ಲೆಯ ಉಪ್ಪುಂದದ ಮಡಿಕಲ್ ನಲ್ಲಿ ಮೀನುಗಾರಿಗೆ ತೆರಳಲು ಹೊರಟ ದೋಣಿಯೊಂದು ಕಡಲ ಅಲೆಗಳ ಅಬ್ಬರಕ್ಕೆ ಸಿಲುಕಿ ಮಗುಚಿಬಿದ್ದಿದೆ.

    ಯಾಂತ್ರೀಕೃತ ಮೀನುಗಾರಿಕೆ ನಿಷೇಧ ಇದ್ದು, ಸಾಂಪ್ರದಾಯಿಕ ನಾಡದೋಣಿಗಳಲ್ಲಿ ಮೀನುಗಾರರು ಮೀನುಗಾರಿಕೆ ನಡೆಸುತ್ತಾರೆ. ಹೀಗೆ ದೋಣಿಯಲ್ಲಿ ಮೀನುಗಾರಿಕೆಗೆ ದಡದಿಂದ ಕಡಲಿಗೆ ಇಳಿದ ಕೆಲವೇ ಕ್ಷಣಗಳಲ್ಲಿ ಅಲೆಗಳ ಹೊಡೆತಕ್ಕೆ ಸಿಕ್ಕಿದ ದೋಣಿ ಮಗುಚಿ ಬಿದ್ದಿದೆ.

    ನಾಡ ದೋಣಿಯಲ್ಲಿ ಆರು ಜನರಿದ್ದು ಅವರೆಲ್ಲಾ ಘಟನೆಯ ಮುನ್ಸೂಚನೆಯನ್ನು ಅರಿತುಕೊಂಡು ಸಮುದ್ರಕ್ಕೆ ಹಾರಿದ್ದಾರೆ. ಕ್ಷಣಾರ್ಧದಲ್ಲಿ ಅಲೆಗೆ ಸಿಕ್ಕಿ ದೋಣಿ ಮಗುಚಿದೆ. ಮೀನುಗಾರರು ಈಜಿ ದಡ ಸೇರಿದ್ದಾರೆ. ಸದ್ಯ ದೋಣಿಯನ್ನು ಮೇಲಕ್ಕೆಳೆಯಲಾಗಿದೆ.

    ಕಡಲ ಮಕ್ಕಳು ಪ್ರಾಣ ಪಣಕ್ಕಿಟ್ಟಂತ ಹೋರಾಟದ ಜೀವನ ನಡೆಸುತ್ತಾರೆ ಎಂಬೂದಕ್ಕೆ ಈ ವೀಡಿಯೋ ಒಂದು ಸಾಕ್ಷಿಯಂತಿದೆ.

  • ವಾಯುಭಾರ ಕುಸಿತ ಹಿನ್ನೆಲೆ ಕೊಡಗಿನಲ್ಲಿ ಆರೆಂಜ್ ಅಲರ್ಟ್

    ವಾಯುಭಾರ ಕುಸಿತ ಹಿನ್ನೆಲೆ ಕೊಡಗಿನಲ್ಲಿ ಆರೆಂಜ್ ಅಲರ್ಟ್

    ಮಡಿಕೇರಿ: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದ ಹಿನ್ನೆಲೆ ಕೊಡಗು ಜಿಲ್ಲೆಯಲ್ಲಿ ವ್ಯಾಪಕ ಮಳೆ ಬೀಳುವ ಸಾಧ್ಯತೆಗಳು ಇರುವುದರಿಂದ ಹವಾಮಾನ ಇಲಾಖೆಯ ಮುನ್ಸೂಚನೆ ಮೇರೆಗೆ ಜಿಲ್ಲಾಡಳಿತ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ.

    ಪೂರ್ವ ಹಾಗೂ ಮಧ್ಯ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿದಿದ್ದು, ಪರಿಣಾಮ ಮೇ 31 ಹಾಗೂ ಜೂನ್ 1 ರವರೆಗೆ ಜಿಲ್ಲೆಯ ಒಳನಾಡು ಪ್ರದೇಶಗಳಲ್ಲಿ ಚದುರಿದಂತೆ ಹಾಗೂ ಗಾಳಿ ಸಹಿತ 115.60 ಮಿ.ಮೀ ನಿಂದ 204.4 ಮಿ.ಮೀಟರ್ ನಷ್ಟು ವ್ಯಾಪಕ ಭಾರೀ ಮಳೆ ಆಗುವ ಸಾಧ್ಯತೆಗಳು ಇರುವುದರಿಂದ ಆರೆಂಜ್ ಅಲರ್ಟ್ ಘೋಷಿಸಿದೆ.

    ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದು, ಪ್ರವಾಹಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳು ಎದುರಾದರೆ ಜಿಲ್ಲಾಡಳಿತದ 08272-221077 ತುರ್ತು ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಲು ಜಿಲ್ಲಾಧಿಕಾರಿ ಅನೀಸ್ ಕೆ.ಜಾಯ್ ಮನವಿ ಮಾಡಿದ್ದಾರೆ.

    ದಕ್ಷಿಣ ಒಳನಾಡು, ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಕೆಲವು ಭಾಗದಲ್ಲಿ ಮಳೆ ಮುಂದುವರೆಯುಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಸಾಧ್ಯತೆ ಹಿನ್ನೆಲೆಯಲ್ಲಿ ಜೂನ್ 4ರವರೆಗೂ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

  • ಅರಬ್ಬೀ ಸಮುದ್ರದಲ್ಲಿ ಅಪಘಾತ- ಬಂಡೆಗೆ ಮೀನುಗಾರಿಕಾ ಬೋಟ್ ಡಿಕ್ಕಿ

    ಅರಬ್ಬೀ ಸಮುದ್ರದಲ್ಲಿ ಅಪಘಾತ- ಬಂಡೆಗೆ ಮೀನುಗಾರಿಕಾ ಬೋಟ್ ಡಿಕ್ಕಿ

    – ಸುಮಾರು 80 ಲಕ್ಷ ರೂ. ನಷ್ಟ

    ಉಡುಪಿ: ಅರಬ್ಬೀ ಸಮುದ್ರದಲ್ಲಿ ಅಪಘಾತವೊಂದು ಸಂಭವಿಸಿದೆ. ಸಮುದ್ರದ ನಡುವೆ ಬಂಡೆಗೆ ಮೀನಿಗಾರಿಕಾ ಬೋಟ್ ಡಿಕ್ಕಿಯಾಗಿದೆ. ಪರಿಣಾಮ ಸುಮಾರು 80 ಲಕ್ಷ ರೂಪಾಯಿ ನಷ್ಟವಾಗಿದೆ.

    ಮೀನುಗಾರಿಕೆಗೆ ತೆರಳಿ ವಾಪಸ್ ಆಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ರೇಷ್ಮಾ ಖಾರ್ವಿ ಅವರಿಗೆ ಸೇರಿದ ಶ್ರೀ ಸ್ವರ್ಣರಾಜ್ ಆಳ ಸಮುದ್ರ ಬೋಟ್ ಮಲ್ಪೆ ಬಂದರು ಸಮೀಪ ಬರುವಾಗ ಬಂಡೆಗೆ ಬಡಿದಿದೆ.

    ಮೇ 14 ರಂದು ಮಲ್ಪೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿತ್ತು. ಮೇ 19(ನಿನ್ನೆ)ರಂದು ವಾಪಸ್ ಆಗುವಾಗ ಅಚಾತುರ್ಯ ಮಡೆದಿದೆ. ಬೋಟ್ ನ ಸ್ಟೇರಿಂಗ್ ಕಟ್ ಆಗಿ ನಿಯಂತ್ರಣ ತಪ್ಪಿ ಬಂಡೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೋಟ್ ನೀರಿನಲ್ಲಿ ಮುಳುಗಿದ್ದು, ಪಕ್ಕದಲ್ಲಿದ್ದ ಇನ್ನೊಂದು ದೋಣಿಯವರಿಂದ ಬೋಟ್ ನಲ್ಲಿದ್ದ 6 ಮಂದಿಯನ್ನು ರಕ್ಷಣೆ ಮಾಡಲಾಗಿದೆ.

    ಘಟನೆಯಿಂದಾಗಿ ಸುಮಾರು 5 ಲಕ್ಷ ಮೌಲ್ಯದ ಮೀನು, ಬಲೆ, ಡೀಸೆಲ್ ಸಮುದ್ರ ಪಾಲಾಗುವ ಮೂಲಕ ಅಂದಾಜು 80 ಲಕ್ಷ ರೂಪಾಯಿ ನಷ್ಟವಾಗಿದೆ. ಈ ಸಂಬಂಧ ಕರಾವಳಿ ಕಾವಲುಪಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅರಬ್ಬೀ ಸಮುದ್ರದಲ್ಲಿ ಮುಳುಗುತ್ತಿದ್ದ 6 ಉಡುಪಿ ಮೀನುಗಾರರ ರಕ್ಷಣೆ

    ಅರಬ್ಬೀ ಸಮುದ್ರದಲ್ಲಿ ಮುಳುಗುತ್ತಿದ್ದ 6 ಉಡುಪಿ ಮೀನುಗಾರರ ರಕ್ಷಣೆ

    ಉಡುಪಿ: ಜೀವನದ ಬಂಡಿ ದೂಡಲು ಆ ಆರು ಮಂದಿ ಭೂಮಿಬಿಟ್ಟು ಕಡಲಿಗೆ ಇಳಿದಿದ್ದರು. ಕಡಲು ಮುನಿದಿತ್ತು. ಬೋಟನ್ನು ಬುಡಮೇಲು ಮಾಡಿದ ಸುಂಟರಗಾಳಿ ಆರು ಜನರನ್ನು ಸಮುದ್ರಕ್ಕೆ ಎಸೆದಿತ್ತು.

    ಉಡುಪಿ ಜಿಲ್ಲೆಯ ಕುಂದಾಪುರದ ಗಂಗೊಳ್ಳಿ ಮೀನುಗಾರಿಕಾ ಬಂದರಿನಿಂದ 30 ನಾಟಿಕಲ್ ಮೈಲು ದೂರದಲ್ಲಿ ಮಲ್ಪೆ ನೋಂದಾಯಿತ ಮೀನುಗಾರಿಕಾ ಬೋಟ್‍ವೊಂದು ಭಾಗಶಃ ಮುಳುಗಿತ್ತು. ಸುತ್ತಮುತ್ತ ಒಂದೂ ಬೋಟ್ ಇರಲಿಲ್ಲ. ಕೊನೆಯ ಹಂತದಲ್ಲಿ ಜಿಪಿಎಸ್ ಮೂಲಕ ಮಾಹಿತಿ ರವಾನಿಸಲಾಯ್ತು. ಐದು ನಾಟಿಕಲ್ ಮೈಲ್ ದೂರದಲ್ಲಿದ್ದ ಮೀನುಗಾರಿಕಾ ಬೋಟ್ ಅಲ್ಲಿಗೆ ಬಂದು ಆ ಬೋಟ್ ನ ಸಹಾಯದಿಂದ ಅದರಲ್ಲಿದ್ದ 6 ಮಂದಿ ಮೀನುಗಾರರನ್ನು ರಕ್ಷಿಸಿದ್ದಾರೆ.

    ಮಲ್ಪೆಯ ಮೀನುಗಾರರಾದ ಬೋಟಿನ ಚಾಲಕ ವೆಂಕಟೇಶ ಹರಿಕಾಂತ, ನಂದೀಶ್ ಖಾರ್ವಿ, ಸಂತೋಷ, ಹುಲಿಯಪ್ಪ, ದುರ್ಗಪ್ಪ ಹರಿಕಾಂತ ಹಾಗೂ ಅಣ್ಣಪ್ಪ ಹರಿಕಾಂತ ಅವರು ಪ್ರಾಣಾಪಾಯದಿಂದ ಪಾರಾದವರು. ಮಲ್ಪೆಯ ನೋಂದಣಿ ಹೊಂದಿದ ಬೋಟ್ ಇದಾಗಿದ್ದು, ಕೋಡಿ ಕನ್ಯಾನದ ಜಯಲಕ್ಷ್ಮಿ ಅವರ ಹೆಸರಲ್ಲಿದೆ. ಜ.12 ರಂದು ರಾತ್ರಿ 10.30 ಕ್ಕೆ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಬೋಟ್ ತೆರಳಿದೆ. ಜ.14 ರಂದು ಗಂಗೊಳ್ಳಿಯಿಂದ ಸುಮಾರು 30 ನಾಟಿಕಲ್ ಮೈಲ್ ದೂರದಲ್ಲಿದ್ದಾಗ ಬೋಟಿನ ಹಿಂದಿನ ಹಲಗೆ ತುಂಡಾಗಿ, ಬೋಟಿನೊಳಗೆ ನೀರು ಹೋಗಿದೆ.

    ಚಾಲಕ ವೆಂಕಟೇಶ್ ತಕ್ಷಣ ವೈಯರ್ ಲೆಸ್ ಫೋನ್ ಮೂಲಕ ಹತ್ತಿರದ ಬೋಟಿಗೆ ಸೂಚನೆ ಕೊಟ್ಟಿದ್ದು, ಕೂಡಲೇ ಅಲ್ಲೇ ಸಮೀಪದಲ್ಲಿದ್ದ ಸಾಯಿರಾಮ್ ಎನ್ನುವ ಬೋಟಿನವರು ಇದರಲ್ಲಿದ್ದ ಎಲ್ಲ 6 ಮಂದಿ ಮೀನುಗಾರರನ್ನು ಪಾರು ಮಾಡಿದ್ದಾರೆ. ಈ ಸಂಬಂಧ ಗಂಗೊಳ್ಳಿಯ ಕರಾವಳಿ ಕಾವಲು ಪೊಲೀಸ್ ಠಾಣೆಯ ಎಸ್‍ಐ ಸಂದೀಪ್ ಜಿ.ಎಸ್., ಎಎಸ್‍ಐ ಭಾಸ್ಕರ, ಸಿಬ್ಬಂದಿಯಾದ ಸುರೇಂದ್ರ, ಮತ್ತಿತರರು ಮಾಹಿತಿ ಪಡೆದುಕೊಂಡಿದ್ದಾರೆ. ಬೋಟ್ ಮುಳುಗಿದ್ದರಿಂದ 10 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

    ಬೋಟ್ ಭಾಗಶಃ ಮುಳುಗಡೆಯಾಗಿದ್ದು, ಇದನ್ನು ಮೇಲೆತ್ತುವ ಸಂಬಂಧ ಮೀನುಗಾರರು 2 ಬೋಟಿನಲ್ಲಿ ತೆರಳಿ ಪರಿಶೀಲನೆ ನಡೆಸಿದ್ದಾರೆ. ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೋಟ್ ಮೇಲೆತ್ತುವ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ.

  • ಅರಬ್ಬಿ ಸಮುದ್ರದಲ್ಲಿ ಪ್ರತ್ಯಕ್ಷವಾದ ಅಪರೂಪದ ವೇಲ್ ಶಾರ್ಕ್

    ಅರಬ್ಬಿ ಸಮುದ್ರದಲ್ಲಿ ಪ್ರತ್ಯಕ್ಷವಾದ ಅಪರೂಪದ ವೇಲ್ ಶಾರ್ಕ್

    ಮಂಗಳೂರು: ಆಳ ಸಮುದ್ರದಲ್ಲಿ ಮಾತ್ರ ಕಾಣ ಸಿಗುವ ಸಮುದ್ರದ ರಕ್ಕಸ ಮೀನು ಶಾರ್ಕ್ ಮಂಗಳೂರಿನ ಕಡಲಿನಲ್ಲಿ ಪ್ರತ್ಯಕ್ಷವಾಗಿದೆ.

    ಮೀನುಗಾರರಿಗೂ ಬಲು ಅಪರೂಪದಲ್ಲಿ ಕಾಣ ಸಿಗುವ ಈ ವೇಲ್ ಶಾರ್ಕ್ ಮಂಗಳೂರಿನ ಕಡಲತೀರದಿಂದ ಸುಮಾರು 20 ಕಿಲೋ ಮೀಟರ್ ದೂರದಲ್ಲಿ ಸಮುದ್ರದ ಮೇಲ್ಮೈ ನಲ್ಲಿ ಈಜುತ್ತಿರುವ ಅಪರೂಪದ ದೃಶ್ಯ ಕೋಸ್ಟಲ್ ಬರ್ಡ್ ವಾಚರ್ಸ್ ತಂಡದವರಿಗೆ ಕಾಣಸಿಕ್ಕಿದೆ.

    ಈವರೆಗೆ ಈ ಮೀನು ಗುಜರಾತ್, ಮಹಾರಾಷ್ಟ್ರ ಸಮುದ್ರ ಭಾಗದಲ್ಲಿ ಕಾಣಸಿಗುತ್ತಿದ್ದು, ಇದೇ ಮೊದಲ ಬಾರಿಗೆ ಮಂಗಳೂರಿನಲ್ಲೂ ವೇಲ್ ಶಾರ್ಕ್ ಕಂಡಿದೆ. 20 ಅಡಿ ಉದ್ದವಿರುವ ಈ ಶಾರ್ಕ್ ನೇತ್ರಾಣಿ ಭಾಗದಿಂದ ಮಂಗಳೂರಿಗೆ ಬಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ.

  • ಸುಡು ಬಿಸಿಲಿನಿಂದ ದೂರಾಗಿ ಮಂಜಿನಗರಿಯಾದ ಗಡಿ ಜಿಲ್ಲೆ

    ಸುಡು ಬಿಸಿಲಿನಿಂದ ದೂರಾಗಿ ಮಂಜಿನಗರಿಯಾದ ಗಡಿ ಜಿಲ್ಲೆ

    ಬೀದರ್: ಸದಾ ಬಿಸಿಲಿನ ಬೆಗೆಯಿಂದ ಸುಡುತ್ತಿದ್ದ ಗಡಿ ಜಿಲ್ಲೆ ಬೀದರ್ ಅರಬ್ಬೀ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಮಂಜಿನನಗರಿಯಾಗಿ ಬದಲಾಗಿದ್ದು, ಮೊದಲ ಬಾರಿಗೆ ಕೂಲ್ ವಾತಾವರಣ ಜಿಲ್ಲೆಯಲ್ಲಿ ಸೃಷ್ಟಿಯಾಗಿದೆ.

    ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಬೀದರ್ ಜಿಲ್ಲೆ ಮಂಜಿನಿಂದ ಆವರಿಸಿಕೊಂಡಿದೆ. ಯಾವಾಗಲೂ ಕೆಂಡದಂತ ಬಿಸಿಲಿನ ಬೇಗೆಗೆ ಸುಡುತ್ತಿದ್ದ ಜನರು ಇಂದು ಮಂಜಿನ ವಾತವಾರಣಕ್ಕೆ ಮನಸೋತ್ತಿದ್ದಾರೆ.

    ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ದಟ್ಟವಾದ ಮಂಜು ಕವಿದಿದ್ದು ಜನರು ಸುಂದರ ವಾತಾವರಣವನ್ನು ಕಣ್ತುಂಬಿ ಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚು ಚಳಿ ಗಡಿ ಜಿಲ್ಲೆಯಲ್ಲಿ ದಾಖಲಾಗಿದ್ದು, ಒಂದೆಡೆ ಜಿಲ್ಲೆ ಮಂಜಿನ ನಗರಿಯಾಗಿದೆ ಎಂದು ಜನರು ಖುಷಿ ಪಟ್ಟರೆ, ಇನ್ನೊಂದೆಡೆ ಚಳಿಗೆ ಹೈರಾಣಾಗಿದ್ದಾರೆ.

    ಶಬ್ಬಲ್ ಬರಿದ್, ಕೋಟೆ, ರಿಂಗ್ ರೋಡ್ ಸೇರಿದಂತೆ ಹಲವು ಕಡೆ ಜನರು ಹೆಚ್ಚಾಗಿ ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದರು. ಆದರೆ ಇಂದು ದಟ್ಟವಾದ ಮಂಜು ಕವಿದಿರುವ ವಾತಾವರಣ ಇರುವ ಪರಿಣಾಮ ಜನರು ಮನೆಯಿಂದ ಹೊರಗೆ ಬಾದರೆ ಬೆಚ್ಚಗೆ ಕುಳಿತಿದ್ದಾರೆ.

  • ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ – ಗಡಿ ಜಿಲ್ಲೆ ಬೀದರ್‌ನಲ್ಲಿ ತುಂತುರು ಮಳೆ

    ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ – ಗಡಿ ಜಿಲ್ಲೆ ಬೀದರ್‌ನಲ್ಲಿ ತುಂತುರು ಮಳೆ

    ಬೀದರ್: ಬಂಗಾಳಕೊಲ್ಲಿ ಹಾಗೂ ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಭಾಗದಲ್ಲಿ ಮಳೆ ಪ್ರಾರಂಭವಾಗಿದ್ದು, ಈ ಎಫೆಕ್ಟ್ ಗಡಿ ಜಿಲ್ಲೆ ಬೀದರ್‌ಗೂ ತಟ್ಟಿದೆ.

    ಜಿಲ್ಲೆಯಲ್ಲಿ ಬೆಳಗ್ಗಿನಿಂದಲೂ ತುಂತುರು ಮಳೆ ಪ್ರಾರಂಭವಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಒಂದು ಕಡೆ ತುಂತುರು ಮಳೆ ಮೊತ್ತೊಂದು ಕಡೆ ಅತಿ ಚಳಿಗೆ ಜಿಲ್ಲೆಯ ಜನರು ಕಂಗಾಲಾಗಿದ್ದು, ಮನೆಯಿಂದ ಹೊರಗೆ ಬರಲು ಜನರು ಯೋಚನೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

    ವಾಯುಭಾರ ಕುಸಿತ ಎಫೆಕ್ಟ್ ನಿಂದಾಗಿ ಜಿಲ್ಲೆಯ ಜನರು ಸರ್ಕಾರಿ ಕೆಲಸಕ್ಕೆ ಹಾಗೂ ಯಾವುದೇ ಖಾಸಗಿ ಕೆಲಸಕ್ಕೂ ಹೊರಗಡೆ ಹೋಗಬೇಕಾದರೂ ಹಿಂದೇಟು ಹಾಕುತ್ತಿದ್ದಾರೆ.

    ವಾಯುಭಾರ ಕುಸಿತದಿಂದಾಗಿ ಇನ್ನು ಎರಡು ಮೂರು ಮೂರು ದಿನಗಳ ಕಾಲ ಸತತವಾಗಿ ತುಂತುರು ಮಳೆ ಜಿಲ್ಲೆಯಲ್ಲಿ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಜನರು ಇನ್ನು ಮೂರು ದಿನಗಳ ಕಾಲ ಮನೆಯಿಂದ ಹೊರಗೆ ಬರುವುದು ಕಷ್ಟ ಸಾಧ್ಯವಾಗಿದೆ.

  • ‘ಕುದಿಯುತ್ತಿರುವ ಅರಬ್ಬೀ ಸಮುದ್ರದಿಂದ ಕಾಪಾಡು’ – ದೈವದ ಮೊರೆ ಹೋದ ಕಡಲ ಮಕ್ಕಳು

    ‘ಕುದಿಯುತ್ತಿರುವ ಅರಬ್ಬೀ ಸಮುದ್ರದಿಂದ ಕಾಪಾಡು’ – ದೈವದ ಮೊರೆ ಹೋದ ಕಡಲ ಮಕ್ಕಳು

    – 40 ವರ್ಷದಲ್ಲಿ ಮೊದಲ ಬಾರಿ ವೈಪರೀತ್ಯ
    – ತಟಕ್ಕೆ ಬರುತ್ತಿದೆ ಜೆಲ್ಲಿ, ಕಾರ್ಗಿಲ್ ಮೀನುಗಳು

    ಉಡುಪಿ: ಜಾಗತಿಕ ತಾಪಮಾನದಿಂದ ಮನುಷ್ಯ ತತ್ತರಿಸಿ ಹೋಗುತ್ತಿದ್ದಾನೆ. ಭೂಮಿಯ ಉಷ್ಣತೆ ಹೆಚ್ಚಿರೋದು ಮಾತ್ರವಲ್ಲ, ಸಮುದ್ರ ಕೂಡಾ ಕಾದು ಕೆಂಡದಂತಾಗಿದೆ. ಕಡಲು ಕುದಿಯುತ್ತಿರೋದ್ರಿಂದ ಮೊಗವೀರರು ಕಸುಬು ಕಳೆದುಕೊಂಡು ದೈವ ಬೊಬ್ಬರ್ಯನ ಮೊರೆ ಹೋಗುವಂತಾಗಿದೆ.

    ಜಾಗತಿಕ ತಾಪಮಾನ ವಿಪರೀತವಾಗಿ ಏರುತ್ತಿದೆ. ತಾಪಮಾನದ ಏರಿಕೆಯಿಂದಾಗಿ ಸಮುದ್ರದ ಮೀನೆಲ್ಲಾ ಸಾಗರದ ತಳಕ್ಕೆ ಸೇರುತ್ತಿದೆ. ಮತ್ಸ್ಯ ಸಂಪತ್ತನ್ನೇ ನಂಬಿರುವ ಮೀನುಗಾರರಿಗೆ ಇದರಿಂದ ಕಸುಬೇ ಇಲ್ಲದಂತಾಗಿದೆ. ಬೆಳಗ್ಗೆಯಿಂದ ಸಂಜೆಯ ತನಕ ಸಮುದ್ರಕ್ಕೆ ಬಲೆ ಬೀಸಿದರೂ ನಿರೀಕ್ಷಿತ ಮೀನು ಸಿಗುತ್ತಿಲ್ಲ. ನೀರು ತಂಪಾಗುತ್ತಿಲ್ಲ, ಮೀನು ತಟಕ್ಕೋ, ನೀರಿನ ಮೇಲ್ಮೈಗೋ ಬರುತ್ತಲೇ ಇಲ್ಲ. ಕಳೆದ 40 ವರ್ಷಗಳಲ್ಲೆ ಮೊದಲ ಬಾರಿಗೆ ಈ ತರದ ಹವಾಮಾನ ವೈಪರಿತ್ಯವಾಗಿದೆ.

    ವರ್ಷದಲ್ಲಿ ಮಳೆ ಹೆಚ್ಚಾದಾಗ ನೆರೆ ಬಂದಾಗ ಕಡಲು ಪ್ರಕ್ಷುಬ್ಧವಾಗುತ್ತದೆ. ಈ ಸಂದರ್ಭ ಯಥೇಚ್ಛ ಮತ್ಸ್ಯ ಸಂಪತ್ತು ಕಡಲಮಕ್ಕಳ ಪಾಲಾಗುತ್ತದೆ. ಆದರೆ ಈ ಬಾರಿ ಆಗದೆ ಇರುವುದು ಆತಂಕಕ್ಕೆ ಕಾರಣವಾಗಿದೆ. ಕಷ್ಟ ಮತ್ತು ಸುಖ ಬಂದಾಗ ಕಡಲ ಮಕ್ಕಳು ದೈವ ಬೊಬ್ಬರ್ಯನ ಮೊರೆ ಹೋಗ್ತಾರೆ. ಇದೀಗ ಅರಬ್ಬೀ ಸಮುದ್ರದಲ್ಲಿ ಮತ್ಸ್ಯಕ್ಷಾಮ ಎದುರಾಗಿದ್ದು ಮತ್ತೆ ಬೊಬ್ಬರ್ಯ ದೈವಕ್ಕೆ ದರ್ಶನ ಸೇವೆ ಕೊಟ್ಟಿದ್ದಾರೆ. ಮಲ್ಪೆ ಸಮೀಪದ ಕಲ್ಮಾಡಿ ಬೊಬ್ಬರ್ಯ ಪಾದೆಯಲ್ಲಿ ದರ್ಶನ ಸೇವೆ ನಡೆದಿದೆ. ಹವಾಮಾನ ವೈಪರೀತ್ಯ ನೀಗಿಸಿ ತಾಪಮಾನ ಇಳಿಸು ಎಂದು ಸಾವಿರಾರು ಮೀನುಗಾರರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಗಾಯದ ಮೇಲೆ ಬರೆ ಎಂಬಂತೆ ಸಮುದ್ರದ ತಾಪಮಾನ ಏರಿದ್ದರಿಂದ ಜೆಲ್ಲಿ ಫಿಶ್ ಮತ್ತು ಕಾರ್ಗಿಲ್ ಫಿಶ್ ಎಂಬ ಆಕ್ರಮಣ ಮಾಡುವ ಮೀನು ಸಾಗರದ ತಟಕ್ಕೆ ಲಗ್ಗೆಯಿಡುತ್ತಿದೆ. ಈ ಮೀನುಗಳು ಲಕ್ಷಾಂತರ ರೂಪಾಯಿಯ ಬಲೆಯನ್ನು ಕತ್ತರಿಸಿ ಪುಡಿ ಮಾಡುತ್ತವೆ. ಇದನ್ನು ಓದಿ: ಸಮುದ್ರದಲ್ಲಿ ಸಿಕ್ತು ಟನ್ ಗಟ್ಟಲೇ ಅಪರೂಪದ ಕಾರ್ಗಿಲ್ ಮೀನು – ಮೀನುಗಾರರಲ್ಲಿ ಆತಂಕ

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪರ್ಸಿನ್ ಬೋಟ್ ಮೀನುಗಾರ ರಮೇಶ್ ಮೆಂಡನ್, ಸಮುದ್ರದ ನೀರು ಇಷ್ಟೊತ್ತಿಗೆ ತಂಪೇರಬೇಕಿತ್ತು. ಆದರೆ ತಾಪಮಾನ ತುಂಬಾ ಹೆಚ್ಚಾಗಿದೆ. ಮೀನಿನ ಬುಗ್ಗೆಗಳು ತಳ ಬಿಟ್ಟು ಮೇಲಕ್ಕೆ ಬರುತ್ತಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮೀನುಗಾರಿಕೆಗೆ ಹೋದರೂ ಏನೂ ಗಿಟ್ಟುತ್ತಿಲ್ಲ ಎಂದರು. ನಾವು ದೈವ ದೇವರನ್ನು ನಂಬಿ, ಪ್ರಾಣದ ಹಂಗು ತೊರೆದು ಕಡಲಿಗೆ ಇಳಿಯುತ್ತೇವೆ. ಇದೀಗ ಮತ್ಸ್ಯಕ್ಷಾಮ ಬಂದಿದೆ. ಕಡಲರಾಜ ಬೊಬ್ಬರ್ಯನೇ ನಮ್ಮ ಕೈಹಿಡಿಬೇಕೆಂದು ದರ್ಶನ ಸೇವೆ ಕೊಟ್ಟಿದ್ದೇವೆ. ನಮ್ಮ ಭಾರವನ್ನು ದೇವರ ಮೇಲೆ ಹಾಕಿದ್ದೇವೆ ಎಂದು ಪೂವಪ್ಪ ಮೀನುಗಾರ ಹೇಳಿದರು.

    ವಾಯುಭಾರ ಕುಸಿತ, ವಿಪರೀತ ಮಳೆಯಿಂದ ಆರಂಭದ ದಿನಗಳಲ್ಲಿ ಮೀನುಗಾರಿಕೆ ಆಗಿರಲಿಲ್ಲ. ನಾಡದೋಣಿ ಮೀನುಗಾರಿಕೆಗೆ ಈ ಬಾರಿ ಹವಾಮಾನ ಸಹಕರಿಸಿಯೇ ಇಲ್ಲ. ಇದೀಗ ಪರ್ಸೀನ್ ಮೀನುಗಾರಿಕೆ ಆರಂಭವಾಗುವ ಕಾಲಕ್ಕೆ ಸಮುದ್ರದ ನೀರು ಕುದಿಯುತ್ತಿದೆ. ಸಮುದ್ರವನ್ನೇ ನಂಬಿರುವ ಮೊಗವೀರರನ್ನು ಸಮುದ್ರರಾಜ ಕೈಹಿಡಿಯುತ್ತಾನಾ ನೋಡಬೇಕು.

  • ಉಡುಪಿಯಲ್ಲಿ ರೆಡ್ ಅಲರ್ಟ್ – ಅರಬ್ಬೀ ಸಮುದ್ರದ ಅಬ್ಬರಕ್ಕೆ ಇಬ್ಬರು ಮೀನುಗಾರರು ಬಲಿ

    ಉಡುಪಿಯಲ್ಲಿ ರೆಡ್ ಅಲರ್ಟ್ – ಅರಬ್ಬೀ ಸಮುದ್ರದ ಅಬ್ಬರಕ್ಕೆ ಇಬ್ಬರು ಮೀನುಗಾರರು ಬಲಿ

    ಉಡುಪಿ: ಭಾರೀ ಮಳೆ, ಕಡಲ ಅಬ್ಬರಕ್ಕೆ ಇಬ್ಬರು ಮೀನುಗಾರರು ಬಲಿಯಾಗಿದ್ದಾರೆ. ಮಲ್ಪೆ ಮತ್ತು ಕಾಪು ಕಡಲ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಮೀನುಗಾರರು ಸಾವನ್ನಪ್ಪಿದ್ದಾರೆ.

    ಕಾಪು ಸಮೀಪದ ಉಳಿಯಾರಗೋಳಿಯ ನಿವಾಸಿ ಸಂಜೀವ ಕೋಟ್ಯಾನ್(55) ಮತ್ತು ಉದ್ಯಾವರ ಪಿತ್ರೋಡಿಯ ನಿವಾಸಿ ಗೋವರ್ಧನ್ ಕುಂದರ್(42) ಮೃತಪಟ್ಟ ಮೀನುಗಾರರು. ಅರಬ್ಬೀ ಸಮುದ್ರದಲ್ಲಿ ಸಂಜೀವ ಇತರೆ ಮೀನುಗಾರರ ಜೊತೆ ಮೀನುಗಾರಿಕೆಗೆ ತೆರಳಿದ್ದರು. ಪಡುಬಿದ್ರೆ ಕಡಲ ಕಿನಾರೆಯಿಂದ ಎರಡು ಕಿ.ಮೀ ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಕಡಲ ಅಲೆಗೆ ಸಿಲುಕಿ ಸಂಜೀವ ಮೃತಪಟ್ಟಿದ್ದಾರೆ. ಈ ಸಂಬಂಧ ಕಾಪು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇತ್ತ ಮಲ್ಪೆ ಕಡಲಲ್ಲಿ ಗೋವರ್ಧನ್ ಟ್ರಾಲ್ ಬೋಟ್‍ನಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಮಲ್ಪೆ ಲೈಟ್ ಹೌಸ್ ಬಳಿ ಮೀನುಗಾರಿಕೆ ನಡೆಸುತ್ತಿದ್ದಾಗ ಒಮ್ಮೆಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಜೊತೆಗೆ ಇದ್ದವರು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಗೋವರ್ಧನ್ ಸಾವನ್ನಪ್ಪಿದ್ದರು. ಸದ್ಯ ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಕಳೆದ 42 ಗಂಟೆಗಳಿಂದ ನಿರಂತರ ಮಳೆಯಾಗುತ್ತಿದೆ. ಗುರುವಾರ ಬೆಳಗ್ಗೆ 8.30ರವರೆಗೆ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ತಗ್ಗು ಪ್ರದೇಶಗಳಲ್ಲಿ ನೆರೆಯ ಭೀತಿ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ನದಿ ತೀರದ ಜನ ಮುಂಜಾಗ್ರತೆ ವಹಿಸಿ, ಪ್ರವಾಸಿಗಳು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಆದೇಶಿಸಿದೆ.

    ಕಳೆದ 24 ಗಂಟೆಯಲ್ಲಿ ಉಡುಪಿಯಲ್ಲಿ 69 ಮಿಲಿಮೀಟರ್ ಸರಾಸರಿ ಮಳೆಯಾಗಿದೆ. ಹಾಗೆಯೇ ಮುಂದಿನ 24 ಗಂಟೆಯಲ್ಲಿ 115 ಮಿಮೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿದಿದೆ. ಸೋಮವಾರ ರಾತ್ರಿಯಿಂದ ನಿರಂತರ ಮಳೆಯಾಗುತ್ತಿದ್ದು, ಕಾರ್ಕಳ ತಾಲೂಕಿನಲ್ಲಿ 70 ಮಿಮೀ, ಕುಂದಾಪುರಲ್ಲಿ 55 ಮಿಮೀ, ಉಡುಪಿ ತಾಲೂಕಿನಲ್ಲಿ 80 ಮಿಮೀ ಮಳೆ ದಾಖಲಾಗಿದೆ. ಇತ್ತ ಉಡುಪಿಯ ಕೃಷ್ಣಮಠದ ಪಾರ್ಕಿಂಗ್ ಏರಿಯಾ ಬಳಿಯ ತೊರೆ ಉಕ್ಕಿ ಹರಿದಿದೆ. ವಾಹನ ನಿಲುಗಡೆ ಪ್ರದೇಶದ ಒಂದು ಭಾಗದಲ್ಲಿ ಮೊಣಕಾಲುವರೆಗೆ ನೀರು ನಿಂತಿದೆ.

  • ಕಪ್ಪು ಸಮುದ್ರವಾಗಿದೆ ಉಡುಪಿಯ ಅರಬ್ಬೀ ಸಮುದ್ರ – ಈ ರೀತಿ ಬದಲಾಗಿದ್ದು ಯಾಕೆ?

    ಕಪ್ಪು ಸಮುದ್ರವಾಗಿದೆ ಉಡುಪಿಯ ಅರಬ್ಬೀ ಸಮುದ್ರ – ಈ ರೀತಿ ಬದಲಾಗಿದ್ದು ಯಾಕೆ?

    ಉಡುಪಿ: ಜಿಲ್ಲೆಯಲ್ಲಿ ಅರಬ್ಬೀ ಸಮುದ್ರ ಬುಡಮೇಲಾಗಿದೆ. ನೀಲಿ ಸಮುದ್ರ ಈಗ ಕಪ್ಪು ಸಮುದ್ರವಾಗಿದೆ. ದಡಕ್ಕೆ ಬರುವ ಅಲೆಗಳು, ನಡು ಸಮುದ್ರದ ಚಿತ್ರಣ ಯುರೋಪಿನ ಸಮುದ್ರವನ್ನು ಹೋಲುತ್ತಿದೆ.

    ಮಳೆಯ ರೌದ್ರನರ್ತನದ ಬಳಿಕ ಇದೀಗ ಅರಬ್ಬೀ ಸಮುದ್ರ ಕಪ್ಪುಬಣ್ಣಕ್ಕೆ ತಿರುಗಿದೆ. ಸಾಮಾನ್ಯವಾಗಿ ಪೂರ್ಣಪ್ರಮಾಣದ ಗಾಳಿಮಳೆಯಾದಾಗ ಸಮುದ್ರ ಪ್ರಕ್ಷುಬ್ಧಗೊಳ್ಳುತ್ತದೆ. ಅಲೆಯ ಅಬ್ಬರವೂ ಜೋರಾಗಿ ಕಡಲ ನೀರು ಸಂಪೂರ್ಣ ಉಲ್ಟಾಪಲ್ಟಾವಾಗುತ್ತದೆ. ಈ ಸಂದರ್ಭದಲ್ಲಿ ಸಮುದ್ರದ ಮರಳು, ಅಲೆಯಲ್ಲಿ ಮಿಶ್ರಣಗೊಂಡಾಗ ಸಮುದ್ರ ಕಪ್ಪು ಬಣ್ಣಕ್ಕೆ ತಿರುಗಿದಂತೆ ಭಾಸವಾಗುತ್ತದೆ. ಇದು ನದಿಗಳ ನೀರು ಸಂಗಮಗೊಳ್ಳುವ ಅಳಿವೆ ಬಾಗಿಲ ಬಳಿಯ ಕಡಲು ಸಂಪೂರ್ಣ ಕದಡಿಹೋಗಿದೆ.

    ನದಿ ನೀರು ಸಮುದ್ರ ಸೇರುವ ಉಡುಪಿಯ ಪಡುಕೆರೆ, ಕೋಡಿ ಬೆಂಗ್ರೆ, ಗಂಗೊಳ್ಳಿ, ಪಡುಬಿದ್ರೆಯಲ್ಲಿ ಈ ದೃಶ್ಯ ಈಗ ಸಾಮಾನ್ಯವಾಗಿದೆ. ನಿಜವಾಗಿ ಸಮುದ್ರದ ತೀವ್ರತೆ ಮತ್ತು ಭೋರ್ಗರೆತ ಕಣ್ತುಂಬಿಕೊಳ್ಳಬೇಕಾದರೆ ಈಗ ಅರಬ್ಬೀ ಸಮುದ್ರವನ್ನು ನೋಡಬೇಕು.

    ಮಾಮೂಲಿಯಾಗಿ ಸಮುದ್ರದ ನೀರು ತಿಳಿಯಾಗಿರುತ್ತದೆ. ನೀಲಿ ಬಣ್ಣದಲ್ಲಿ ಕಂಗೊಳಿಸುತ್ತದೆ. ಪಶ್ಚಿಮ ಘಟ್ಟದ ತಪ್ಪಲು ಮತ್ತು ಕರಾವಳಿ ಜಿಲ್ಲೆಗಳಲ್ಲಿ ವಿಪರೀತ ಮಳೆಯಾಗುಗಿರುವುದಿಂದ ಭಾರೀ ಪ್ರಮಾಣದ ನೀರು ಸಮುದ್ರದತ್ತ ಧುಮ್ಮುಕ್ಕುತ್ತಿದೆ. ಹೀಗಾಗಿ ಸಮುದ್ರ ಪುಡಿಯಾಗಿದೆ. ಹರಿಯುವ ನದಿ ಖನಿಜ, ಲವಣಾಂಶ, ಕೊಳೆತ ತರಗೆಲೆ, ಮರ, ಮಣ್ಣು ಎಲ್ಲವನ್ನೂ ತಂದಿದೆ. ಸಮುದ್ರದ ಉಪ್ಪು ನೀರಿನ ಜೊತೆ ನದಿಯ ಕೆನ್ನೀರು ಸೇರಿ ಕಡಲು ಬಣ್ಣ ಬದಲಿಸಿದೆ.

    ನಿಜಾರ್ಥದ ಸಮುದ್ರ ನೋಡುವ ಮನಸ್ಸಿದ್ದವರು ಸಮುದ್ರದ ವೈಭವ ನೋಡುವ ಆಸೆಯಿರುವವರು ಈಗ ಉಡುಪಿಗೆ ಬರಬೇಕು. ಸಮುದ್ರಕ್ಕಿಳಿದು ಆಡುವ ಅವಕಾಶ ಇಲ್ಲದಿದ್ದರೂ ಕಡಲಿನ ಅಬ್ಬರವನ್ನು ಕಣ್ತುಂಬಿಕೊಳ್ಳಬಹುದು.