Tag: ಅರಣ್ಯ ಇಲಾಖೆ ಸಿಬ್ಬಂದಿ

  • ಅರಣ್ಯ ಇಲಾಖೆ ಮಾಹಿತಿದಾರನೇ ಬೇಟೆಗಾರ: ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಆರೋಪಿ

    ಅರಣ್ಯ ಇಲಾಖೆ ಮಾಹಿತಿದಾರನೇ ಬೇಟೆಗಾರ: ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಆರೋಪಿ

    – ಜಿಂಕೆ ಕೊಂದು ಚರ್ಮ ಸುಲಿಯುತ್ತಿದ್ದ ವೇಳೆ ಬಂಧನ

    ಚಾಮರಾಜನಗರ: ಅರಣ್ಯ ಇಲಾಖೆ ಮಾಹಿತಿದಾರನೇ ಕಳ್ಳ ಬೇಟೆಗಾರನಾಗಿ ಪ್ರಾಣಿಗಳನ್ನು ವಧೆ ಮಾಡುತ್ತಿದ್ದ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

    ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ಅರೇಪಾಳ್ಯದಲ್ಲಿ ಘಟನೆ ನಡೆದಿದ್ದು, ನಾಗೇಗೌಡ ಬಂಧಿತ ಬೇಟೆಗಾರ. ಈತ ಅರಣ್ಯ ಇಲಾಖೆಯ ಮಾಹಿತಿದಾರನಾಗಿದ್ದ ಎಂದು ತಿಳಿದುಬಂದಿದ್ದು, ಕಳ್ಳಬೇಟೆಯ ಕುರಿತು ಆಗಾಗ್ಗೆ ಮಾಹಿತಿ ನೀಡುತ್ತಿದ್ದನಂತೆ. ಆದರೆ ಅರಣ್ಯ ಇಲಾಖೆಯ ಮತ್ತೊಬ್ಬ ಮಾಹಿತಿದಾರನಿಂದ ಈತನ ಕುಕೃತ್ಯ ಬೆಳಕಿಗೆ ಬಂದಿದೆ. ಜಿಂಕೆಯೊಂದನ್ನು ಕೊಂದು ಅದರ ಚರ್ಮ ಸುಲಿಯುತ್ತಿದ್ದ ಖಚಿತ ಮಾಹಿತಿ ಮೇಲೆ ಆರ್‍ಎಫ್‍ಒ ಮಹಾದೇವಯ್ಯ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

    ಕೊಂದ ಜಿಂಕೆ, ಕತ್ತಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

  • ನಾಡಿಗೆ ಬಂದು ಬಾವಿಗೆ ಬಿದ್ದ ಚಿರತೆ ರಕ್ಷಣೆ

    ನಾಡಿಗೆ ಬಂದು ಬಾವಿಗೆ ಬಿದ್ದ ಚಿರತೆ ರಕ್ಷಣೆ

    ಮಂಗಳೂರು: ಲಾಕ್‍ಡೌನ್ ಹಿನ್ನೆಲೆ ಜನದಟ್ಟಣೆ ಕಡಿಮೆಯಾಗಿರುವುದರಿಂದ ಆಹಾರ ಹುಡುಕಿಕೊಂಡು ಕಾಡಿನಿಂದ ನಾಡಿಗೆ ಬಂದಿದ್ದ ಚಿರತೆಯೊಂದು ಬಾವಿಗೆ ಬಿದ್ದಿದ್ದು, ನಂತರ ರಕ್ಷಣೆ ಮಾಡಿ ಕಾಡಿಗೆ ಬಿಡಲಾಗಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ತುಂಬೆಯಲ್ಲಿ ಘಟನೆ ನಡೆದಿದ್ದು, ಮಜಿ ಮೋನಪ್ಪ ಅವರ ಜಮೀನಿನಲ್ಲಿರುವ ಸುಮಾರು 6 ಅಡಿ ಆಳದ ಬಾವಿಗೆ ಚಿರತೆ ಬಿದ್ದು ಆತಂಕ ಸೃಷ್ಟಿಸಿತ್ತು. ಬಾವಿಯಿಂದ ಮೇಲಕ್ಕೆ ಬರಲು ಸಾಧ್ಯವಾಗದೆ ಹೊರಳಾಡುತ್ತಿತ್ತು. ರಾತ್ರಿ ವೇಳೆ ಕಾಣದೆ ಚಿರತೆ ಬಾವಿಯಲ್ಲಿ ಬಿದ್ದಿದ್ದು, ಬೆಳಗ್ಗೆ ಹೊಲದ ಮಾಲೀಕರ ಗಮನಕ್ಕೆ ಬಂದಿದೆ.

    ಬಳಿಕ ಮನೆಯವರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದು, ಅರಣ್ಯ ಇಲಾಖೆ, ಅಗ್ನಿ ಶಾಮಕದಳ ಸಿಬ್ಬಂದಿ ಹಾಗೂ ಪೋಲೀಸರು ಜಂಟಿ ಕಾರ್ಯಚರಣೆ ನಡೆಸಿ ಚಿರತೆಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಿದ್ದಾರೆ. ಸುಮಾರು ಎರಡು ವರ್ಷ ಪ್ರಾಯದ ಮರಿ ಚಿರತೆ ಇದಾಗಿದ್ದು, ಚಿರತೆಯನ್ನು ರಕ್ಷಿಸಿದ ಬಳಿಕ ಸುರಕ್ಷಿತವಾಗಿ ಪಶ್ಚಿಮಘಟ್ಟದ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.

  • ಒಂಟಿ ಸಲಗದ ದಾಳಿಗೆ ಎರಡನೇ ಬಲಿ

    ಒಂಟಿ ಸಲಗದ ದಾಳಿಗೆ ಎರಡನೇ ಬಲಿ

    ಹಾಸನ: ಜಿಲ್ಲೆಯಲ್ಲಿ ಒಂಟಿ ಸಲಗದ ದಾಳಿಗೆ ಎರಡನೇ ಬಲಿಯಾಗಿದೆ. ನಾಡಿಗೆ ನುಗ್ಗಿದ್ದ ಆನೆಯನ್ನು ಕಾಡಿಗೆ ಓಡಿಸುತ್ತಿದ್ದಾಗ ಘಟನೆ ನಡೆದಿದೆ.

    ಅರಣ್ಯ ಇಲಾಖೆ ವಾಚರ್ ಅಣ್ಣೇಗೌಡ (52) ಮೃತ ವ್ಯಕ್ತಿ. ಒಂಟಿ ಸಲಗವು ಮಂಗಳವಾರ ಬೆಳಗಿನ ಜಾವ 3 ಗಂಟೆಗೆ ಹಾಸನ ನಗರಕ್ಕೆ ಬಂದಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಸತತ ನಾಲ್ಕು ಗಂಟೆ ಕಾರ್ಯಾಚರಣೆ ನಡೆಸಿ, ಆನೆಯನ್ನು ಸೀಗೆಗುಡ್ಡ ಅರಣ್ಯಕ್ಕೆ ಓಡಿಸಿದ್ದರು. ಈ ವೇಳೆ ಆನೆಯು ಏಕಾಏಕಿ ದಾಳಿ ಆರಂಭಿಸಿತು. ತಕ್ಷಣವೇ ಅಣ್ಣೇಗೌಡ ಅವರನ್ನು ಹೊರತು ಪಡಿಸುವಂತೆ ಏಳು ಮಂದಿ ಆನೆ ದಾಳಿಯಿಂದ ತಪ್ಪಿಸಿಕೊಂಡಿದ್ದರು.

    ಆನೆಯ ದಾಳಿಗೆ ಸಿಕ್ಕ ಅಣ್ಣೇಗೌಡ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸಿಬ್ಬಂದಿಯ ಸಾವಿಗೆ ಡಿಸಿಎಫ್ ಸಿವರಾಂಬಾಬು ಕಣ್ಣೀರಿಟ್ಟಿದ್ದು, ಶೀಘ್ರವೇ ಹಂತಕ ಆನೆಯನ್ನು ಸೆರೆ ಹಿಡಿಯುವುದಾಗಿ ಭರವಸೆ ನೀಡಿದ್ದಾರೆ. ಹಾಸನ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • 8 ಸಾಕಾನೆ ಬಳಸಿ ಕೊಡಗಿನಲ್ಲಿ ಪುಂಡಾಟ ನಡೆಸುತ್ತಿದ್ದ ಕಾಡಾನೆ ಸೆರೆ

    8 ಸಾಕಾನೆ ಬಳಸಿ ಕೊಡಗಿನಲ್ಲಿ ಪುಂಡಾಟ ನಡೆಸುತ್ತಿದ್ದ ಕಾಡಾನೆ ಸೆರೆ

    ಮಡಿಕೇರಿ: ಕೊಡಗಿನಲ್ಲಿ ಪುಂಡಾಟ ನಡೆಸುತ್ತಿದ್ದ ಕಾಡಾನೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ 8 ಸಾಕಾನೆಗಳನ್ನು ಬಳಸಿ ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ.

    ಕೊಡಗು ಜಿಲ್ಲೆಯ ನೆಲ್ಯಹುದಿಕೇರಿ ಹಾಗೂ ಸುತ್ತಮುತ್ತ ಪ್ರದೇಶದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿತ್ತು. ಕಾಡಾನೆಯ ಉಪಟಳಕ್ಕೆ ಬೇಸತ್ತಿದ್ದ ಜನರು ಆನೆಗಳನ್ನು ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಹೀಗಾಗಿ ಕಾಡಾನೆಯನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಈ ಕಾರ್ಯಾಚರಣೆಯಲ್ಲಿ 40 ಕ್ಕೂ ಅಧಿಕ ಸಿಬ್ಬಂದಿ ಭಾಗಿಯಾಗಿದ್ದು, 8 ಸಾಕಾನೆಗಳ ಬಳಸಿಕೊಂಡು ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ಪರಿಶ್ರಮ ಪಟ್ಟು ಕೊನೆಗೂ ಕಾಡಾನೆಯನ್ನು ಸೆರೆಹಿಡಿಯಲಾಗಿದೆ.

    ಪಶುವೈದ್ಯ ಡಾ.ಮುಜೀಬ್ ಮಾರ್ಗದರ್ಶನದಲ್ಲಿ ಹಾಗೂ ಮಡಿಕೇರಿ, ವಿರಾಜಪೇಟೆ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ, ಕಾರ್ಯಾಚರಣೆ ನಡೆಸಲಾಗಿದೆ. ಅಭಿಮನ್ಯು, ಹರ್ಷ, ಅಜಯ, ಧನಂಜಯ, ವಿಕ್ರಮ, ಕೃಷ್ಣ, ಲಕ್ಷಣ, ಈಶ್ವರ ಸಾಕಾನೆಗಳು ಕಾರ್ಯಾಚರಣೆಯಲ್ಲಿ ಶ್ರಮಪಟ್ಟಿದೆ. ಅಲ್ಲದೆ ಎಸಿಎಫ್ ಚಿಣ್ಣಪ್ಪ, ಡಿಎಫ್‍ಓ ಮಂಜುನಾಥ್, ರೇಂಜರ್ ಅರುಣ್ ಅವರು ಕೂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

  • ಬರೋಬ್ಬರಿ 35 ಅಡಿ ಎತ್ತರದ ತೆಂಗಿನ ಮರ ಏರಿ ಕುಳಿತ ಚಿರತೆ!

    ಬರೋಬ್ಬರಿ 35 ಅಡಿ ಎತ್ತರದ ತೆಂಗಿನ ಮರ ಏರಿ ಕುಳಿತ ಚಿರತೆ!

    ಮಂಡ್ಯ: ಆಹಾರ ಅರಸಿ ನಾಡಿಗೆ ಬಂದಿದ್ದ ಚಿರತೆಯೊಂದು ತೋಟವೊಂದರ ತೆಂಗಿನ ಮರವನ್ನು ಏರಿ ಕುಳಿತ ಘಟನೆ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಸೋಮನಾಥಪುರ ಗ್ರಾಮದಲ್ಲಿ ನಡೆದಿದೆ.

    ಸೋಮನಾಥಪುರದ ಯೋಗೇಶ್ ಎಂಬುವರ ತೋಟದಲ್ಲಿ ಚಿರತೆ ತೆಂಗಿನ ಮರ ಏರಿ ಕುಳಿತಿದೆ. ಸುಮಾರು 30-35 ಅಡಿ ಎತ್ತರದ ತೆಂಗಿನ ಮರವನ್ನು ಚಿರತೆ ಏರಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸುತ್ತಮುತ್ತಲ ಗ್ರಾಮಸ್ಥರು, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದರು.

    ಮರದಿಂದ ಕೆಳಗೆ ಬರಲಾಗದೇ ಚಿರತೆ ನರಳಾಡುತ್ತ ಕೂಗುತ್ತಿತ್ತು. ಸ್ಥಳದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರುವುದಕ್ಕೆ ಚಿರತೆ ಭಯಗೊಂಡು ಮರದ ಮೇಲೆಯೇ ಕುಳಿತಿತ್ತು. ಚಿರತೆಯನ್ನು ಕೆಳಗಿಳಿಸಿ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾಗ ಚಿರತೆಗೆ ಮರದಿಂದ ಕೆಳಗಡೆ ಇಳಿದು ಓಡಿ ಹೋಗಿದೆ.

    ಈ ಭಾಗದಲ್ಲಿ ಬೇಸಿಗೆ ಕಾಲದಲ್ಲಿ ಚಿರತೆ ಪ್ರತ್ಯಕ್ಷವಾಗುತ್ತಿದ್ದವು. ಆದ್ರೆ ಈ ಬಾರಿ ಕಂಡುಬಂದಿರುವ ಮೊದಲ ಚಿರತೆ ಇದು ಎಂದು ಸ್ಥಳೀಯರು ಹೇಳಿದ್ದಾರೆ. ಕೆ.ಆರ್.ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಚಿರತೆ ಪ್ರತ್ಯಕ್ಷದಿಂದ ಸೋಮನಾಥಪುರವಷ್ಟೇ ಅಲ್ಲದೇ ಸುತ್ತಮುತ್ತಲ ಗ್ರಾಮಸ್ಥರು ಕೂಡ ಆತಂಕಗೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮನೆಗೆ ನುಗ್ಗಿ 3 ವರ್ಷದ ಬಾಲಕನನ್ನು ಕಚ್ಚಿ ಎಳೆದುಕೊಂಡು ಹೋಯ್ತು ಚಿರತೆ

    ಮನೆಗೆ ನುಗ್ಗಿ 3 ವರ್ಷದ ಬಾಲಕನನ್ನು ಕಚ್ಚಿ ಎಳೆದುಕೊಂಡು ಹೋಯ್ತು ಚಿರತೆ

    ಕಾಶ್ಮೀರ: ಚಿರತೆಯೊಂದು ಮನೆಗೆ ನುಗ್ಗಿ 3 ವರ್ಷದ ಬಾಲಕನನ್ನು ಎಳೆದುಕೊಂಡು ಹೋಗಿ ಸಾಯಿಸಿರುವ ದಾರುಣ ಘಟನೆ ಜಮ್ಮು- ಕಾಶ್ಮೀರದಲ್ಲಿ ನಡೆದಿದೆ.

    ವಾಸಿಮ್ ಅಕ್ರಮ್ ಎಂಬ ಮೂರು ವರ್ಷದ ಬಾಲಕನನ್ನು ಚಿರತೆ ಸಾಯಿಸಿದೆ. ಬಾಲಕ ತನ್ನ ಮನೆಯಲ್ಲಿ ತಾಯಿಯ ಜೊತೆ ಅಡುಗೆ ಮನೆಯಲ್ಲಿದ್ದಾಗ ಚಿರತೆಯೊಂದು ಏಕಾಏಕಿ ನುಗ್ಗಿ ಮಗುವನ್ನು ಬಾಯಿಯಲ್ಲಿ ಕಚ್ಚಿ ಎಳೆದುಕೊಂಡು ಹೋಗಿದೆ.

    ಘಟನೆ ಕುರಿತು ತಕ್ಷಣ ಬಾಲಕನ ತಾಯಿ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದಾರೆ. ಮಗುವನ್ನು ಹುಡುಕಲು ಅರಣ್ಯಕ್ಕೆ ಹೋದ ಸಿಬ್ಬಂದಿಗೆ ತಲೆ ಇಲ್ಲದ ಸ್ಥಿತಿಯಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಬಾಲಕನ ಮೃತದೇಹವನ್ನು ಪೋಷಕರಿಗೆ ಒಪ್ಪಿಸಿದ್ದು, ಚಿರತೆಯನ್ನು ಸೆರೆಹಿಡಿಯುವ ಪ್ರಯತ್ನ ಸಾಗಿದೆ.

    ಬುಧವಾರ ಬೆಳಗ್ಗೆ ಜಮ್ಮುವಿನ ಅರಣ್ಯ ಪ್ರದೇಶದಲ್ಲಿ ಚಿರತೆ ಕಾಣಿಕೊಂಡಿತ್ತು. ಆದರೆ ಸೆರೆಹಿಡಿಯಲು ಸಾಧ್ಯವಾಗಲಿಲ್ಲ. ಅರಣ್ಯದ ಸಮೀಪ ವಾಸಿಸುವ ಜನರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಿದ್ದೇವೆ ಎಂದು ಜಮ್ಮುವಿನ ಪ್ರದೇಶಿಕ ವನ್ಯಜೀವಿ ಅಧಿಕಾರಿ ತಾಹಿರ್ ಅಹ್ಮದ್ ಶಾವ್ಲ್ ತಿಳಿಸಿದ್ದಾರೆ.

    ಅರಣ್ಯ ಪ್ರದೇಶದಲ್ಲಿ ಮನುಷ್ಯರ ಓಡಾಟ ಇತ್ತೀಚಿಗೆ ಹೆಚ್ಚಾಗುತ್ತಿದೆ. ತಮ್ಮ ಸ್ವಾರ್ಥಕ್ಕಾಗಿ ಕಾಡನ್ನು ನಾಶ ಮಾಡುವುದರಿಂದ ವನ್ಯಜೀವಿಗಳು ನಾಡಿಗೆ ಬರುತ್ತಿದೆ. ಸುಮಾರು 12 ಸಾವಿರದಿಂದ 14 ಸಾವಿರ ಚಿರತೆಗಳು ಭಾರತದಲ್ಲಿ ಇದೆ. ಆದರೆ 2017ರಲ್ಲಿ 431 ಚಿರತೆಗಳನ್ನು ಭೇಟೆಯಾಡಲಾಗಿದೆ. ನಗರ ಪ್ರದೇಶವು ಬೆಳೆಯುತ್ತಿರುವುದರಿಂದ ಕಾಡು ಪ್ರಾಣಿಗಳು ಜನ ವಾಸಿಸುತ್ತಿರುವ ಜಾಗಗಳಿಗೆ ಬರುತ್ತಿದೆ ಎಂದು ಅರಣ್ಯಾಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಬೇಟೆಗೆಂದು ಹಾಕಿದ್ದ ಉರುಳಿಗೆ ಸಿಲುಕಿ ನರಳಿದ ಹುಲಿ, ಕರಡಿ

    ಬೇಟೆಗೆಂದು ಹಾಕಿದ್ದ ಉರುಳಿಗೆ ಸಿಲುಕಿ ನರಳಿದ ಹುಲಿ, ಕರಡಿ

    ಮೈಸೂರು: ಬೇಟೆಗೆ ಹಾಕಿದ್ದ ಉರುಳಿಗೆ ಸಿಲುಕಿ ನರಳಾಡುತ್ತಿದ್ದ ಕಾಡುಪ್ರಾಣಿಗಳ ಜೀವವನ್ನು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟು ಉಳಿಸಿದ್ದಾರೆ.

    ಅರಣ್ಯ ಪ್ರದೇಶದಲ್ಲಿ ದುಷ್ಕರ್ಮಿಗಳು ಕಾಡು ಪ್ರಾಣಿಗಳ ಬೇಟೆಗೆಂದು ಹಾಕಿದ್ದ ಉರುಳಿಗೆ ಸಿಲುಕಿ ನರಳುತ್ತಿದ್ದ ಹುಲಿ ಹಾಗೂ ಕರಡಿಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ. ಜಿಲ್ಲೆ ಹುಣಸೂರು ತಾಲೂಕಿನ ಶೆಟ್ಟಹಳ್ಳಿ ಅರಣ್ಯ ಪ್ರದೇಶದಲ್ಲಿ ಕಾಡುಹಂದಿ ಬೇಟೆಗೆ ಹಾಕಿದ್ದ ಉರುಳಿಗೆ 2.5 ವರ್ಷದ ಗಂಡು ಹುಲಿ ಸಿಲುಕಿ ಒದ್ದಾಡುತ್ತಿತ್ತು. ಕುತ್ತಿಗೆಗೆ ಉರುಳು ಸಿಲುಕಿದ ಪರಿಣಾಮ ಘರ್ಜಿಸುತ್ತಿದ್ದ ಹುಲಿ ಪ್ರಾಣ ಉಳಿಸಿಕೊಳ್ಳಲು ನರಳಾಡುತ್ತಿತ್ತು. ಈ ವೇಳೆ ಹುಲಿಯನ್ನು ಗಮನಿಸಿದ ಅರಣ್ಯ ಇಲಾಖೆಯ ಗಸ್ತು ಸಿಬ್ಬಂದಿ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.

    ತಕ್ಷಣ ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಹುಲಿಗೆ ಅರವಳಿಕೆ ಚುಚ್ಚುಮದ್ದು ನೀಡಿ ಉರುಳಿನಿಂದ ರಕ್ಷಣೆ ಮಾಡಿ, ಪ್ರಾಥಮಿಕ ಚಿಕಿತ್ಸೆ ನೀಡಲು ಮೈಸೂರು ಮೃಗಾಲಯಕ್ಕೆ ಹುಲಿಯನ್ನು ರವಾನಿಸಿದ್ದಾರೆ. ಸದ್ಯ ಮೈಸೂರಿನ ಹೊರವಲಯದ ಕೂರ್ಗಳ್ಳಿ ಪ್ರಾಣಿ ಪುರ್ನವಸತಿ ಕೇಂದ್ರದಲ್ಲಿ ಹುಲಿಗೆ ಆರೈಕೆಯನ್ನು ಮಾಡಲಾಗುತ್ತಿದೆ.

    ಒಂದೆಡೆ ಹುಲಿಯಾದರೇ ಇನ್ನೊಂದೆಡೆ ಉರುಳಿಗೆ ಸಿಲುಕಿ ನರಳುತ್ತಿದ್ದ ಸುಮಾರು ಆರು ವರ್ಷದ ಗಂಡು ಕರಡಿಯನ್ನು ಅರಣ್ಯ ಇಲಾಖೆಯವರು ರಕ್ಷಿಸಿದ್ದಾರೆ. ಜಿಲ್ಲೆ ಹೆಚ್.ಡಿ ಕೋಟೆ ತಾಲೂಕಿನ ನುಗು ಜಲಾಶಯದ ಬಳಿಯ ಹೊಸ ಬಿರುವಾಳು ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದ್ದು, ವೈದ್ಯ ನಾಗರಾಜು ಹಾಗೂ ಅರಣ್ಯ ಸಿಬ್ಬಂದಿ ಅಕ್ರಂಪಾಷರಿಂದ ಕರಡಿ ರಕ್ಷಣೆ ಮಾಡಿದ್ದಾರೆ. ಗಾಯಗೊಂಡಿದ್ದ ಕರಡಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಮತ್ತೆ ಯಡಿಯಾಳ ಅರಣ್ಯಕ್ಕೆ ಬಿಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾಯಿಗಳಿಗೆ ಹೆದರಿ ಮರವೇರಿದ ಚಿರತೆ

    ನಾಯಿಗಳಿಗೆ ಹೆದರಿ ಮರವೇರಿದ ಚಿರತೆ

    ಮೈಸೂರು: ನಾಯಿಗಳಿಗೆ ಹೆದರಿ ಚಿರತೆಯೊಂದು ಮರವೇರಿ ಕುಳಿತ ಘಟನೆ ಜಿಲ್ಲೆ ಹುಣಸೂರಿನ ಕಳ್ಳಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.

    ಕಳ್ಳಿಕೊಪ್ಪಲು ಗ್ರಾಮದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಚಿರತೆಯನ್ನು ನೋಡಿದ ನಾಯಿಗಳು ಚಿರತೆಯನ್ನು ಅಟ್ಟಿಸಿಕೊಂಡು ಬಂದಿದೆ. ಈ ವೇಳೆ ನಾಯಿಗಳಿಗೆ ಹೆದರಿದ ಚಿರತೆ ಮರವೇರಿ ಕುಳಿತಿದೆ. ಈ ಬಗ್ಗೆ ಸ್ಥಳಿಯರು ಅರಣ್ಯ ಅಧಿಕಾರಿಗಳಿ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದ ಬಳಿಕ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಚಿರತೆಯನ್ನು ಬಲೆ ಬೀಸಿ ಬಂಧಿಸಿದ್ದಾರೆ. ಗ್ರಾಮದಲ್ಲಿ ಚಿರತೆ ನೋಡಲು ನೂರಾರು ಸಂಖ್ಯೆಯಲ್ಲಿ ಜನ ಸೇರಿದ್ದರು.

  • ಎಸ್ಟೇಟ್‍ ನಲ್ಲಿ ತಿರುಗಾಡಿ ಆತಂಕ ಸೃಷ್ಟಿಸಿದ್ದ ಒಂಟಿ ಸಲಗ ಸೆರೆ!

    ಎಸ್ಟೇಟ್‍ ನಲ್ಲಿ ತಿರುಗಾಡಿ ಆತಂಕ ಸೃಷ್ಟಿಸಿದ್ದ ಒಂಟಿ ಸಲಗ ಸೆರೆ!

    ಮಡಿಕೇರಿ: ಹಲವರ ಮೇಲೆ ದಾಳಿ ನಡೆಸಿ ಭಯದ ವಾತಾವರಣ ಸೃಷ್ಟಿಸಿದ ಒಂಟಿ ಸಲಗವನ್ನು ಸಾಕಾನೆಗಳ ನೆರವಿನಿಂದ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮೋದೂರು ಎಸ್ಟೇಟ್‍ ನಲ್ಲಿ ತಿರುಗಾಡುತ್ತಿದ್ದ ಒಂಟಿ ಸಲಗನನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಸೋಮವಾರ ಆರಂಭವಾಗಿತ್ತು. ಆದರೆ ಮೊದಲ ದಿನ ಕಾರ್ಯಾಚರಣೆ ಪಡೆಯ ಕಣ್ಣಿಗೆ ಕಾಣಿಸಿಕೊಳ್ಳದೆ ಈ ಸಲಗ ಅಡಗಿಕೊಂಡಿತ್ತು.

    ಕಾರ್ಯಾಚರಣೆಗೆ ದುಬಾರೆ ಆನೆ ಶಿಬಿರದಿಂದ ಸಾಕಾನೆಗಳಾದ ಹರ್ಷ, ವಿಕ್ರಂ ಮತ್ತು ಜ್ಯೋತಿ. ಜೊತೆಗೆ ಮತ್ತಿಗೋಡು ಶಿಬಿರದಿಂದ ಅಭಿಮನ್ಯು ಹಾಗು ಕೃಷ್ಣರನ್ನು ಸೋಮವಾರ ಬೆಳಗ್ಗೆಯೇ ಮೋದೂರು ಎಸ್ಟೇಟ್‍ ಗೆ ತರಲಾಗಿತ್ತು. ಇದಕ್ಕಾಗಿ ಅರಣ್ಯ ಇಲಾಖೆಯ ನುರಿತ ಸಿಬ್ಬಂದಿಯನ್ನು ಸಜ್ಜುಗೊಳಿಸಲಾಗಿತ್ತು. ಆದರೆ ಆನೆಯನ್ನು ಸೋಮವಾರ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ನಾಲ್ಕು ದಿನಗಳ ನಂತರ ಕಾಫಿ ತೋಟದ ಒಳಗೆ ಒಂಟಿ ಸಲಗನನ್ನು ಪತ್ತೆ ಹಚ್ಚಲಾಯಿತು.

    ಹುಣಸೂರು ವನ್ಯಜೀವಿ ವಿಭಾಗದ ಪಶುವೈದ್ಯ ಡಾ.ಮುಜೀಬ್ ಅರವಳಿಕೆ ಮದ್ದು ನೀಡಿದರು. ಬಳಿಕ ಸಾಕಾನೆಗಳು ಸುತ್ತುವರಿದಾಗ ಅವುಗಳ ನೆರವಿನಿಂದ ಸಿಬ್ಬಂದಿ ಸಲಗನನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ನಂತರ ಅದನ್ನು ದುಬಾರೆ ಶಿಬಿರಕ್ಕೆ ಸಾಗಿಸಲಾಯಿತು. ಕಾರ್ಯಾಚರಣೆಯಲ್ಲಿ ಮಡಿಕೇರಿ ಉಪ ವಿಭಾಗದ ಉಪ ಅರಣ್ಯಸಂರಕ್ಷಣಾಧಿಕಾರಿ ಮಂಜುನಾಥ್ ಮತ್ತು ಸೋಮವಾರಪೇಟೆ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್.ಚಿಣ್ಣಪ್ಪ ಪಾಲ್ಗೊಂಡಿದ್ದರು.

    ಸಲಗನ ಸೆರೆಯಿಂದಾಗಿ ಮೋದೂರು ವಿಭಾಗದ ನಿವಾಸಿಗಳು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಹಲವರ ಮೇಲೆ ದಾಳಿ ನಡೆಸಿ ಸಲಗ ಗಾಯಗೊಳಿಸಿತ್ತು. ಈ ಭಾಗದಲ್ಲಿ ವಾಹನಗಳ ಮೇಲೂ ದಾಳಿ ನಡೆಸಿತ್ತು. ಇದರಿಂದ ಜನರು ಆತಂಕದಿಂದ ಹೊರಗೆ ಹೋಗುತ್ತಿರಲಿಲ್ಲ. ಕಾಫಿ ತೋಟಗಳಿಗೆ ಬರಲು ಕಾರ್ಮಿಕರು ಹಿಂಜರಿಯುತ್ತಿದ್ದರು. ಇದೀಗ ಒಂಟಿ ಸಲಾಗವನ್ನು ದುಬಾರೆ ಸಾಕಾನೆ ಶಿಬಿರಕ್ಕೆ ರವಾನೆ ಮಾಡಲಾಗಿದೆ.

  • ಅರಣ್ಯ ಇಲಾಖೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಬೆಳ್ತಂಗಡಿಯಲ್ಲಿ ಚಿರತೆ ದುರಂತ ಸಾವು

    ಅರಣ್ಯ ಇಲಾಖೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಬೆಳ್ತಂಗಡಿಯಲ್ಲಿ ಚಿರತೆ ದುರಂತ ಸಾವು

    ಮಂಗಳೂರು: ಅರಣ್ಯ ಇಲಾಖೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಚಿರತೆ ದುರಂತ ಸಾವು ಕಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಗುಂಡೂರಿನಲ್ಲಿ ನಡೆದಿದೆ.

    ವೇಣೂರು ಬಳಿ ಸೆರೆ ಸಿಕ್ಕಿದ್ದ ಚಿರತೆಯನ್ನು ಅರಣ್ಯ ಸಿಬ್ಬಂದಿ ಜನವಸತಿ ಇರುವ ಪ್ರದೇಶದಲ್ಲಿ ಬಿಟ್ಟಿದ್ದರು. ಆದರೆ ಅಲ್ಲಿ ಕಾಡು ಹಂದಿಗೆಂದು ಇಟ್ಟಿದ್ದ ಉರುಳಿಗೆ ಚಿರತೆ ಬಿದ್ದಿದೆ. ಎರಡು ದಿನಗಳ ಬಳಿಕ ಚಿರತೆ ಸಿಲುಕಿಕೊಂಡಿರುವುದು ಸ್ಥಳೀಯರಿಗೆ ಗೊತ್ತಾಗಿದೆ.

    ಚಿರತೆ ಉರುಳಿಗೆ ಬಿದ್ದ ಸ್ಥಿತಿಯಲ್ಲೇ ಸಾವನ್ನಪ್ಪಿದೆ. ಕಳೆದ ಸೋಮವಾರ ಚಿರತೆಯನ್ನು ಜನವಸತಿ ಇರುವಲ್ಲಿ ಬಿಟ್ಟಿದ್ದಕ್ಕೆ ಸ್ಥಳೀಯರು ಅರಣ್ಯ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಈಗ ಅದೇ ಚಿರತೆ ಸಾವನ್ನಪ್ಪಿರುವುದನ್ನು ನೋಡಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಚಿರತೆ ಸಾವನ್ನಪ್ಪಿದೆ ಎಂದು ಆರೋಪಿಸುತ್ತಿದ್ದಾರೆ. ವೇಣೂರು ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸಿದ್ದಾರೆ.