Tag: ಅರಣ್ಯ ಇಲಾಖೆ ಸಿಬ್ಬಂದಿ

  • ಅರಣ್ಯ ಇಲಾಖೆ ಸಿಬ್ಬಂದಿಯನ್ನು ಬಲಿ ಪಡೆದ ಪುಂಡಾನೆ ಸೆರೆ

    ಅರಣ್ಯ ಇಲಾಖೆ ಸಿಬ್ಬಂದಿಯನ್ನು ಬಲಿ ಪಡೆದ ಪುಂಡಾನೆ ಸೆರೆ

    ಮಡಿಕೇರಿ: ಗ್ರಾಮದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಬಲಿ ಪಡೆದಿದ್ದ ಕಾಡಾನೆಯನ್ನು (Elephant) ಬುಧವಾರ ಇತರ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.

    ಗ್ರಾಮದ ಜನರಿಗೆ ದಿನನಿತ್ಯ ರಸ್ತೆಯಲ್ಲಿ ನಿಂತು ತೊಂದರೆ ನೀಡುತ್ತಿದ್ದ ಕಾಡಾನೆಯನ್ನು ಅರಣ್ಯ ಪ್ರದೇಶಕ್ಕೆ ಓಡಿಸುವ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಗಿರೀಶ್ ಮೇಲೆ ಆನೆ ದಾಳಿ ನಡೆಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಗಿರೀಶ್ ಸೋಮವಾರ ಮೃತಪಟ್ಟಿದ್ದರು.

    ಈ ಹಿನ್ನೆಲೆಯಲ್ಲಿ ಆನೆಯನ್ನು ಹಿಡಿಯಲು ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಳೆದ 2 ದಿನಗಳಿಂದ ಮಡಿಕೇರಿ ತಾಲೂಕಿನ ಕೆದಕಲ್ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಕಾನೆಗಳ ಸಹಾಯದಿಂದ ಹುಡುಕಾಟ ನಡೆಸಿದ್ದಾರೆ. ಒಂಟಿ ಸಲಗ ಮಾತ್ರ ನಿನ್ನೆಯವರೆಗೂ ಗೋಚರಿಸಿರಲಿಲ್ಲ. ದುಬಾರೆ ಸಾಕಾನೆ ಶಿಬಿರದಿಂದ ಸುಮಾರು 6 ಆನೆಗಳು 50ಕ್ಕೂ ಹೆಚ್ಚು ಸಿಬ್ಬಂದಿ ಕಾಡಾನೆಯ ಶೋಧ ಕಾರ್ಯವನ್ನು ಇಂದು ಮುಂದುವರಿಸಿದ್ದರು. ಇದನ್ನೂ ಓದಿ: ತಮಿಳುನಾಡು ಕಾವೇರಿ ನೀರಿನ ಸಮರ್ಪಕ ಬಳಕೆ ಮಾಡುತ್ತಿಲ್ಲ – ಸುಪ್ರೀಂನಲ್ಲಿ ಕರ್ನಾಟಕ ಆಕ್ಷೇಪ

    ಇಂದು ಮಧ್ಯಾಹ್ನದ ವೇಳೆಯಲ್ಲಿ ಕೆದಕಲ್ ಸಮೀಪದ ಹೊರೂರು ಬಳಿಯ ಕಳತ್ಮಾಡು ಎಸ್ಟೇಟ್‌ನಲ್ಲಿ ಒಂಟಿ ಸಲಗ ಇರುವುದು ಗೋಚರಿಸಿದೆ. ಬಳಿಕ ಅದಕ್ಕೆ ಅರವಳಿಕೆ ನೀಡಿ ಆನೆಯನ್ನು ಖೆಡ್ಡಾಗೆ ಬೀಳಿಸಿ ದುಬಾರೆ ಸಾಕಾನೆ ಶಿಬಿರಕ್ಕೆ ಪುಂಡಾನೆಯನ್ನು ಸ್ಥಳಾಂತರ ಮಾಡಲಾಗಿದೆ. ಒಂದೇ ದಿನ 4 ಕಡೆ ದಾಳಿ ನಡೆಸಿ ಓರ್ವನನ್ನು ಬಲಿ ಪಡೆದಿದ್ದ ಒಂಟಿ ಸಲಗವನ್ನು ಸೆರೆ ಹಿಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ನಿಟ್ಟುಸಿರು ಬಿಡುವಂತೆ ಆಗಿದೆ. ಇದನ್ನೂ ಓದಿ: ಸೆ.18-22 ವಿಶೇಷ ಸಂಸತ್ ಅಧಿವೇಶನ- ಪ್ರಮುಖ 9 ವಿಷಯಗಳ ಚರ್ಚೆಗೆ ಸೋನಿಯಾ ಗಾಂಧಿ ಆಗ್ರಹ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕರ್ತವ್ಯದಲ್ಲಿದ್ದ ಅರಣ್ಯ ವೀಕ್ಷಕ ನಾಪತ್ತೆ

    ಕರ್ತವ್ಯದಲ್ಲಿದ್ದ ಅರಣ್ಯ ವೀಕ್ಷಕ ನಾಪತ್ತೆ

    ಮಡಿಕೇರಿ: ವಿರಾಜಪೇಟೆ (Virajpet) ತಾಲೂಕಿನ ಮಾಕುಟ್ಟ ಅರಣ್ಯ ವ್ಯಾಪ್ತಿಯಲ್ಲಿ ಕರ್ತವ್ಯದಲ್ಲಿದ್ದ ಅರಣ್ಯ ವೀಕ್ಷಕ (Forest officer) ನಾಪತ್ತೆಯಾಗಿದ್ದಾರೆ.

    ಪವನ್ (23) ನಾಪತ್ತೆಯಾದ ಅರಣ್ಯ ವೀಕ್ಷಕ. ಮೂಲತಃ ಬಾಳೆಲೆ ಗ್ರಾಮದ ಪವನ್ ಮಾಕುಟ್ಟ ಅರಣ್ಯ ವ್ಯಾಪ್ತಿಯಲ್ಲಿ ಕರ್ತವ್ಯನಿರತರಾಗಿದ್ದ ವೇಳೆ ನಾಪತ್ತೆಯಾಗಿದ್ದಾರೆ. ಕಾಲು ಜಾರಿ ನದಿಗೆ ಬಿದ್ದಿರುವ ಶಂಕೆ ವ್ಯಕ್ತವಾಗುತ್ತಿದೆ.   ಇದನ್ನೂ ಓದಿ: ಬೆಲೆ ಮಿತಿ ನ್ಯಾಯುತವಾಗಿಲ್ಲದಿದ್ದರೇ ಜಾಗತಿಕ ಮಾರುಕಟ್ಟೆಗೆ ತೈಲ ಪೂರೈಕೆ ಬಂದ್ – ರಷ್ಯಾ

    ಇದೀಗ ಪೊನ್ನಂಪೇಟೆ ತಾಲೂಕಿನ ಬಾಳೆಲೆ ಗ್ರಾಮದಲ್ಲಿ ನಾಪತ್ತೆಯಾದ ಪವನ್ ಪತ್ತೆಗೆ ಅರಣ್ಯ ಇಲಾಖೆ ಸಿಬ್ಬಂದಿ (Forest Department Staff) ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮಂಗಳೂರು ಹಾಸ್ಟೆಲ್‌ನ ಕಿಟಕಿ ರಾಡ್ ಮುರಿದು ಪರಾರಿಯಾಗಿದ್ದ ಮೂವರು ವಿದ್ಯಾರ್ಥಿನಿಯರು ಚೆನ್ನೈನಲ್ಲಿ ಪತ್ತೆ

    Live Tv
    [brid partner=56869869 player=32851 video=960834 autoplay=true]

  • ಹುಲಿ ಹುಡುಕೋ ಕಾರ್ಯಾಚರಣೆ ವೇಳೆ ಸಿಕ್ತು ಕಾಡುಕೋಣ..!

    ಹುಲಿ ಹುಡುಕೋ ಕಾರ್ಯಾಚರಣೆ ವೇಳೆ ಸಿಕ್ತು ಕಾಡುಕೋಣ..!

    ಚಿಕ್ಕೋಡಿ: ಹುಲಿ ಬಂದಿದೆ ಎಂಬ ಶಂಕೆಯಿಂದ ನಡೆದ ಕಾರ್ಯಾಚರಣೆಯಲ್ಲಿ ಅರಣ್ಯಾಧಿಕಾರಿಗಳಿಗೆ ಕಾಡುಕೋಣ ಸಿಕ್ಕಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ಕಾಡುಕೋಣವನ್ನು ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.

    ಗ್ರಾಮದಲ್ಲಿ ಇತ್ತೀಚಿಗೆ ಹುಲಿ ಬಂದಿದೆಯೆಂದು ಶಂಕೆ ವ್ಯಕ್ತವಾಗಿದ್ದು, ಹುಲಿ ಹುಡುಕಾಟದಲ್ಲಿ ಕಾಡುಕೋಣ ಪತ್ತೆಯಾಗಿದೆ. ಗ್ರಾಮದಲ್ಲಿ ಕಾಡುಕೋಣ ಕಾಣಿಸಿಕೊಂಡು ಜನರಲ್ಲಿ ಭಯ ಉಂಟು ಮಾಡಿತ್ತು. ಕೊನೆಗೆ ಹರಸಾಹಸಪಟ್ಟು ಗ್ರಾಮಸ್ಥರು ಅರಣ್ಯ ಸಿಬ್ಬಂದಿ ನೇತೃತ್ವದಲ್ಲಿ ಕಾಡುಕೋಣವನ್ನು ಸೆರೆ ಹಿಡಿದಿದ್ದಾರೆ. ಇದನ್ನೂ ಓದಿ: ಜಿಲ್ಲಾಧಿಕಾರಿ ಕಚೇರಿ ಹೆಸರಿನಲ್ಲಿ ನಕಲಿ ನೇಮಕಾತಿ ಆದೇಶ ಪತ್ರ

    ಬೃಹದಾಕಾರದ ಕಾಡುಕೋಣ ಗ್ರಾಮದಲ್ಲಿ ಕಾಣಿಸಿಕೊಂಡಿತ್ತು. ಹಲವಾರು ಬೆಳೆಗಳನ್ನು ನಾಶ ಪಡಿಸುತ್ತಿರುವ ಹಿನ್ನೆಲೆಯಲ್ಲಿ, ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರಿನ ಮೃಗಾಲಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಬೆಳಗಾವಿ ಅರಣ್ಯ ಇಲಾಖೆ ಅರಣ್ಯಾಧಿಕಾರಿ ಅಂಥೋನಿ ಮರಿಯಪ್ಪ ಮತ್ತು ಪ್ರಶಾಂತ್ ಗಾಣಿಗೇರ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಸತತ ನಾಲ್ಕು ದಿನ ಕಾರ್ಯಾಚರಣೆ ನಡೆಸಿ ಕಾಡುಕೋಣವನ್ನು ಹಿಡಿದಿದ್ದಾರೆ. ಇದನ್ನೂ ಓದಿ: ಸರಕು, ಸೇವೆಗಳ ಬೇಡಿಕೆ ಹೆಚ್ಚಿಸಲು ಗುಣಮಟ್ಟದ ರಫ್ತು ಅವಶ್ಯಕ – ವಸಂತ ಲದ್ವಾ

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅಥಣಿ ಅರಣ್ಯ ಇಲಾಖೆ ಅಧಿಕಾರಿ ಪ್ರಶಾಂತ್ ಗಾಣಿಗೇರ್, ಈ ಭಾಗದಲ್ಲಿ ಕಾಡುಕೋಣ ಕಾಣಿಸಿಕೊಳ್ಳುವುದು ಅಪರೂಪ. ಸುತ್ತಮುತ್ತ ನೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಕಾಡುಕೋಣ ಕಾಣಿಸುವುದಿಲ್ಲ. ಖಾನಾಪುರ ಕಾಡಿನಲ್ಲಿ ಕಾಡು ಕೋಣಗಳಿವೆ. ಆದರೂ ಅಥಣಿ ತಾಲೂಕಿನ ಬಯಲುಸೀಮೆಯಲ್ಲಿ ಕಾಡುಕೋಣ ಬಂದಿರೋದು ಅಪರೂಪದ ಘಟನೆಯೆಂದು ಮಾಹಿತಿ ಹಂಚಿಕೊಂಡರು. ಸದ್ಯ ಕಾಡುಕೋಣ ಆರೋಗ್ಯದಿಂದಿದ್ದು, ಮೈಸೂರು ಮೃಗಾಲಯಕ್ಕೆ ರವಾನೆ ಮಾಡಲಾಗಿದೆ ಎಂದು ತಿಳಿಸಿದರು.

  • ದಾರಿ ತಪ್ಪಿ ಬಳ್ಳಾರಿ ನಗರಕ್ಕೆ ಕರಡಿ ಎಂಟ್ರಿ

    ದಾರಿ ತಪ್ಪಿ ಬಳ್ಳಾರಿ ನಗರಕ್ಕೆ ಕರಡಿ ಎಂಟ್ರಿ

    ಬಳ್ಳಾರಿ: ದಾರಿ ತಪ್ಪಿ, ಆಹಾರ ಹುಡುಕಿಕೊಂಡು ಕರಡಿಯೊಂದು ನಗರಕ್ಕೆ ಎಂಟ್ರಿ ಕೊಟ್ಟಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ಕರಡಿ ಸೆರೆ ಹಿಡಿದಿದ್ದಾರೆ.

    ನಗರದ ತಾಳೂರ ರಸ್ತೆಯ ರೇಣುಕಾ ನಗರದ 16ನೇ ಕ್ರಾಸ್ ನಲ್ಲಿ ಇಂದು ಮುಂಜಾನೆ ಕರಡಿ ಪ್ರತ್ಯಕ್ಷವಾಗಿತ್ತು. ಮಾಹಿತಿ ತಿಳಿದ ಅರಣ್ಯ ಇಲಾಖೆಯ ಸಿಬ್ಬಂದಿ ಕರಡಿ ಸೆರೆ ಹಿಡಿದಿದ್ದಾರೆ. ಸತತ 5 ಗಂಟೆಗಳ ಕಾರ್ಯಾಚರಣೆ ನಡೆಸಿ ಕೊನೆಗೂ ಕರಡಿಯನ್ನು ಸೆರೆ ಹಿಡಿದಿದ್ದಾರೆ. ಇಂದು ಬೆಳಗ್ಗೆಯಿಂದ ಹರಸಾಹಸ ಪಟ್ಟು ಮಧ್ಯಾಹ್ನದ ವೇಳೆಗೆ ಕರಡಿಯನ್ನು ಸೆರೆ ಹಿಡಿದಿದ್ದಾರೆ.

    ಪ್ರತ್ಯಕ್ಷ ದರ್ಶಿಗಳು ಹೇಳುವಂತೆ ನಿನ್ನೆ ರಾತ್ರಿ ನಗರದ ವಿಮ್ಸ್ ನ ಹೊಸ ಡೆಂಟಲ್ ಕಾಲೇಜು ಬಳಿ ಬಂದ ಕರಡಿ, ಅಲ್ಲಿನ ಹೋಮ್ ಗಾರ್ಡ್ ಒಬ್ಬರನ್ನು ಅಟ್ಟಿಸಿಕೊಂಡು ಹೋಗಿದೆ.ನಂತರ ಅಲೆಯುತ್ತ ತಾಳೂರು ರಸ್ತೆಯ ರೇಣುಕಾ ನಗರದ 16 ನೇ ಕ್ರಾಸ್ ನಲ್ಲಿರುವ ಬೇಲಿಯಲ್ಲಿ ಅಡಗಿಕೊಂಡಿತ್ತು. ಬೆಳ್ಳಂ ಬೆಳಗ್ಗೆ ಕರಡಿ ಬರುತ್ತಿರುವುದನ್ನು ನೋಡಿ ನಾಯಿಗಳು ಬೊಗಳಿವೆ, ಬಳಿಕ ಸ್ಥಳೀಯರು ಗಮನಿಸಿ ದಂಗಾಗಿದ್ದಾರೆ.

    ಬಳಿಕ ಕರಡಿ ನೋಡಲು ಹೆಚ್ಚು ಜನ ಸೇರಿದ್ದು, ಹೆಚ್ಚು ಜನ ಸೇರಿದ್ದರಿಂದ ಕರಡಿ ಭಯಗೊಂಡು ಬೇಲಿಯ ಪೊದೆಯಲ್ಲಿ ಅಡಗಿಕೊಂಡಿತ್ತು. ವಿಷಯ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕಾಗಮಿಸಿದ್ದು, ಕಾರ್ಯಚರಣೆ ನಡೆಸಿ ಕರಡಿಯನ್ನು ಸೆರೆ ಹಿಡಿದಿದ್ದಾರೆ.

  • ಒಂದು ತಿಂಗಳಲ್ಲಿ 3 ಕರು, 2 ಮೇಕೆ ತಿಂದಿದ್ದ ಚಿರತೆ ಕೊನೆಗೂ ಸೆರೆ

    ಒಂದು ತಿಂಗಳಲ್ಲಿ 3 ಕರು, 2 ಮೇಕೆ ತಿಂದಿದ್ದ ಚಿರತೆ ಕೊನೆಗೂ ಸೆರೆ

    – ಇನ್ನೂ ನಾಲ್ಕು ಚಿರತೆಗಳಿವೆ ಎಂದ ಗ್ರಾಮಸ್ಥರು

    ಹಾಸನ: ಕೇವಲ ಒಂದು ತಿಂಗಳಲ್ಲಿ ಕರು, ಮೇಕೆ, ನಾಯಿಯನ್ನು ತಿಂದು ಭೀತಿ ಹುಟ್ಟಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕೊನೆಗೂ ಸೆರೆ ಹಿಡಿದಿದ್ದಾರೆ.

    ಜಿಲ್ಲೆಯ ಚೆನ್ನರಾಯಪಟ್ಟಣ ತಾಲೂಕಿನ, ದಿಂಡಗೂರು ಗ್ರಾಮದ ಹೊರವಲಯದಲ್ಲಿ ಚಿರತೆಯನ್ನು ಸೆರೆ ಹಿಡಿಯಲಾಗಿದ್ದು, ಚಿಕ್ಕೇನಹಳ್ಳಿ ಗ್ರಾಮದ ರೈತ ಪ್ರಭು ಅವರ ಜಮೀನಿನಲ್ಲಿ ಚಿರತೆ ಬೋನಿಗೆ ಬಿದ್ದಿದೆ. ಕಳೆದ ಒಂದು ತಿಂಗಳಿಂದ ಮೂರು ಕರು, ಎರಡು ಮೇಕೆ, ಒಂದು ನಾಯಿಯನ್ನು ತಿಂದು ಚಿರತೆ ಭೀತಿ ಮೂಡಿಸಿತ್ತು. ಐದು ದಿನಗಳ ಹಿಂದೆ ಚಿರತೆ ಸೆರೆಗೆ ಬೋನ್ ಇಡಲಾಗಿತ್ತು. ಸೋಮವಾರ ರಾತ್ರಿ ಚಿರತೆ ಬೋನಿಗೆ ಬಿದ್ದಿದೆ.

    ಚಿರತೆಯನ್ನು ವಶಕ್ಕೆ ಪಡೆಯಲು ಬಂದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದು, ಈ ಭಾಗದಲ್ಲಿ ಇನ್ನೂ ನಾಲ್ಕು ಚಿರತೆಗಳು ಓಡಾಡಿಕೊಂಡು ಭೀತಿ ಮೂಡಿಸಿವೆ. ಅವುಗಳನ್ನೂ ಹಿಡಿದು ನಂತರ ಈ ಚಿರತೆ ಕೊಂಡೊಯ್ಯಿರಿ ಎಂದು ಆಕ್ರೋಶಗೊಂಡರು. ಬಳಿಕ ಎಲ್ಲ ಚಿರತೆ ಹಿಡಿಯುವ ಭರವಸೆ ನೀಡಿ, ಅರಣ್ಯಾಧಿಕಾರಿಗಳು ಚಿರತೆ ತೆಗೆದುಕೊಂಡು ಹೋದರು.

  • ದಸರಾದಿಂದ ಬಿಡುಗಡೆ ಸಿಕ್ಕರೂ ಅರ್ಜುನನಿಗಿಲ್ಲ ವಿಶ್ರಾಂತಿ- ಪುಂಡಾನೆ ಸೆರೆಗೆ ಬಳಕೆ

    ದಸರಾದಿಂದ ಬಿಡುಗಡೆ ಸಿಕ್ಕರೂ ಅರ್ಜುನನಿಗಿಲ್ಲ ವಿಶ್ರಾಂತಿ- ಪುಂಡಾನೆ ಸೆರೆಗೆ ಬಳಕೆ

    ಮಡಿಕೇರಿ: ಅರ್ಜುನನಿಗೆ ದಸರಾದಿಂದ ಬಿಡುವು ಸಿಕ್ಕರೂ ಬಿಡುವಿಲ್ಲದಂತಾಗಿದ್ದು, ಪುಂಡಾನೆ ಸೆರೆಗೆ ಅರ್ಜುನನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.

    ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಸಮೀಪದ ಹೊಸೂರು ಹಾಗೂ ಬೆಟ್ಟಗೇರಿ ಹಾಗೂ ದೇವರ ಪುರ ಗ್ರಾಮದ ಬಹುತೇಕ ಭಾಗದಲ್ಲಿ ಕಾಫಿ ತೋಟದಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತ ಸಾರ್ವಜನಿಕರ ಮೇಲೆ ದಾಳಿ ನಡೆಸುತ್ತಿರುವ ಪುಂಡಾನೆಯನ್ನು ಇಂದು ಸೆರೆ ಹಿಡಿಯಲಾಗಿದೆ. ಆದರೆ ಬೇಸರದ ಸಂಗತಿ ಎಂದರೆ ಪುಂಡಾನೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಅರ್ಜುನನ್ನು ಬಳಸಿಕೊಂಡಿದೆ.

    ಪುಂಡಾನೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡು ಬಳಿಕ ಇಂದು ಸಾಕಾನೆ ಶಿಬಿರದಿಂದ ಅರ್ಜುನ ಆನೆಯನ್ನು ಬಳಸಿ ಕಾರ್ಯಚರಣೆ ಮಾಡಿ ಪುಂಡಾನೆಯನ್ನು ಸೆರೆ ಹಿಡಿಯಲಾಗಿದೆ.

    ಒಂಟಿ ಸಲಗ ಸೆರೆ ಹಿಡಿಯಲು ಅರ್ಜುನ, ಕೃಷ್ಣ, ಗೋಪಾಲಸ್ವಾಮಿ, ಗಣೇಶ, ಹರ್ಷ ಎಂಬ 5 ಸಾಕಾನೆಗಳನ್ನು ಬಳಸಲಾಗಿದೆ. ಮತ್ತಿಗೋಡು ಸಾಕಾನೆ ಶಿಬಿರ ಹಾಗೂ ದುಬಾರೆ ಸಾಕಾನೆ ಶಿಬಿರಗಳಿಂದ ಸಾಕಾನೆಗಳನ್ನು ಕರೆತರಲಾಗಿತ್ತು. ಪ್ರತಿ ಬಾರಿ ಮೈಸೂರು ದಸರಾದಲ್ಲಿ ಅಂಬಾರಿ ಹೊರುತ್ತಿದ್ದ ಅರ್ಜುನನಿಗೆ 60 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಿವೃತ್ತಿ ನೀಡಲಾಗಿತ್ತು. ಆದರೆ ಇಂದು ಪುಂಡಾನೆ ಸೆರೆಗೆ ಅರ್ಜುನ ಆನೆಯನ್ನು ಅರಣ್ಯ ಇಲಾಖೆ ಬಳಸಿಕೊಂಡಿದೆ.

    ಒಂಟಿ ಸಲಗ ಕಳೆದ ಸುಮಾರು ತಿಂಗಳಿನಿಂದ ಹೊಸೂರು ಭಾಗದ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿತ್ತು. ಇದರ ಉಪಟಳದಿಂದ ಗ್ರಾಮಸ್ಥರು ಭಯಭೀತರಾಗಿದ್ದರು. ಈ ಹಿನ್ನೆಲೆಯಲ್ಲಿ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳ ಪೈಕಿ ಪುಂಡಾನೆಯನ್ನು ಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ಕೈಗೊಂಡಿತ್ತು. 50 ಜನ ಸಿಬ್ಬಂದಿ, ಅರಣ್ಯಾಧಿಕಾರಿಗಳು, ವನ್ಯಜೀವಿ ವೈದ್ಯಾಧಿಕಾರಿಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು. ಎಲ್ಲರ ಪ್ರಯತ್ನದಿಂದಾಗಿ ದೇವರಪುರದ ಕಾಫಿ ತೋಟದಲ್ಲಿ ಪುಂಡಾನೆಯನ್ನು ಸೆರೆ ಹಿಡಿಯಲಾಗಿದು.

  • ಆಕಸ್ಮಿಕವಾಗಿ 40 ಅಡಿಯ ಪಾಳು ಬಾವಿಗೆ ಬಿದ್ದ ಕೃಷ್ಣ ಮೃಗ ರಕ್ಷಣೆ

    ಆಕಸ್ಮಿಕವಾಗಿ 40 ಅಡಿಯ ಪಾಳು ಬಾವಿಗೆ ಬಿದ್ದ ಕೃಷ್ಣ ಮೃಗ ರಕ್ಷಣೆ

    – ಗ್ರಾಮಸ್ಥರು, ಅರಣ್ಯ ಇಲಾಖೆ ಸಿಬ್ಬಂದಿ ಜಂಟಿ ಕಾರ್ಯಾಚರಣೆ

    ಬೀದರ್: ಮೇಯಲು ಹೋದಾಗ ಆಕಸ್ಮಿಕವಾಗಿ 40 ಅಡಿಯ ಪಾಳು ಬಾವಿಗೆ ಎರಡು ಕೃಷ್ಣ ಮೃಗಗಳು ಬಿದ್ದಿದ್ದು, ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

    ಬೀದರ್ ತಾಲೂಕಿನ ಔರಾದ್ ಸಿರ್ಸಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಎರಡು ಕೃಷ್ಣ ಮೃಗಗಳು ಬಾವಿಗೆ ಬಿದ್ದಿದ್ದನ್ನು ನೋಡುತ್ತಿದ್ದಂತೆ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ನಂತರ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಜಂಟಿ ಕಾರ್ಯಾರಚಣೆ ನಡೆಸಿ ಎರಡೂ ಕೃಷ್ಣ ಮೃಗಗಳನ್ನು ರಕ್ಷಿಸಿದ್ದಾರೆ. ಕಾರ್ಯಾಚರಣೆ ದೃಶ್ಯವನ್ನು ಸ್ಥಳೀಯರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

    ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಜಂಟಿಯಾಗಿ ಹರಸಾಹಸಪಟ್ಟು ಎರಡು ಕೃಷ್ಣ ಮೃಗಗಳ ರಕ್ಷಣೆ ಮಾಡಿದ್ದಾರೆ. ಸತತ ಒಂದು ಗಂಟೆಗಳ ಕಾಲ ರಕ್ಷಣೆ ಕಾರ್ಯಚರಣೆ ನಡೆಸಿದ್ದು, ಕೊನೆಗೂ ಎರಡೂ ಕೃಷ್ಣ ಮೃಗಗಳನ್ನು ರಕ್ಷಣೆ ಮಾಡಿ, ಅರಣ್ಯ ಅಧಿಕಾರಿಗಳು ಅವುಗಳನ್ನು ಕಾಡಿಗೆ ಬಿಟ್ಟಿದ್ದಾರೆ.

  • ಕಡಲಾಮೆ, ಸಾಗರ ಪಕ್ಷಿಗೆ ಮರುಜೀವ ನೀಡಿದ ಅರಣ್ಯ ಇಲಾಖೆ

    ಕಡಲಾಮೆ, ಸಾಗರ ಪಕ್ಷಿಗೆ ಮರುಜೀವ ನೀಡಿದ ಅರಣ್ಯ ಇಲಾಖೆ

    ಉಡುಪಿ: ಕಡಲ ಆಮೆ ಮತ್ತು ಸೀಬರ್ಡ್ ಗೆ ಜಿಲ್ಲೆಯ ಅರಣ್ಯ ಇಲಾಖೆ ಸಿಬ್ಬಂದಿ ಮರುಜೀವ ನೀಡಿದ್ದಾರೆ.

    ಒಂದು ತಿಂಗಳ ಹಿಂದೆ ಬೀಜಾಡಿ ಕಡಲತೀರದಲ್ಲಿ ಗಾಯಗೊಂಡ ಸುಮಾರು 20 ಕೆ.ಜಿ.ಯ ಕಡಲಾಮೆ ಮೀನುಗಾರರಿಗೆ ಸಿಕ್ಕಿತ್ತು. ಹರಿತವಾದ ಬಲೆ ಕಡಲ ಆಮೆಯ ಕಾಲಿಗೆ ಗಾಸಿ ಮಾಡಿತ್ತು. ಮೀನುಗಾರರು ಕಡಲಾಮೆಯ ರಕ್ಷಣೆ ಮಾಡಿ ಅರಣ್ಯ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದರು. ಸುಮಾರು ಒಂದು ತಿಂಗಳ ಕಾಲ ಪಾಲನೆ-ಪೋಷಣೆ ಮಾಡಿದ ಅರಣ್ಯ ಇಲಾಖೆ, ಕಾಲಿನ ಗಾಯವನ್ನು ಗುಣಪಡಿಸಿದೆ. ಸಾಗರ ಜೀವಿಗಳ ತಜ್ಞ ಬೆಂಗಳೂರಿನ ಡಾ. ಶಂತನು ವಿಶೇಷ ಮುತುವರ್ಜಿಯಲ್ಲಿ ಚಿಕಿತ್ಸೆ ಕೊಟ್ಟಿದ್ದರು.

    ಈ ಮೂಲಕ ಸುಮಾರು 250 ವರ್ಷ ಆಯಸ್ಸು ಇರುವ ಆಮೆಗೆ ಮರುಜೀವ ಸಿಕ್ಕಿದೆ. ಗುಣಪಡಿಸಲಾದ ಆಮೆಯನ್ನು ಇದೀಗ ಮರಳಿ ಸಮುದ್ರಕ್ಕೆ ಬಿಡಲಾಗಿದೆ.

    ಇದಾದ ಬಳಿಕ 15 ದಿನಗಳ ಹಿಂದೆ ಹಾರಲಾಗದೆ ಒದ್ದಾಡುತ್ತಿದ್ದ ಸಮುದ್ರ ಪಕ್ಷಿ ಮೀನುಗಾರರಿಗೆ ಸಿಕ್ಕಿತ್ತು. ಪಕ್ಷಿಯನ್ನು ಮೀನುಗಾರರು ಅರಣ್ಯ ಇಲಾಖೆಗೆ ನೀಡಿದ್ದರು. ಸಮುದ್ರ ಪಕ್ಷಿಗೆ ಶುಶ್ರೂಷೆ ಮಾಡಿದ ಅರಣ್ಯ ಇಲಾಖೆ ಕೆಲ ದಿನಗಳ ಹಿಂದೆ ಸಮುದ್ರ ತೀರದಲ್ಲಿ ಸ್ವಚ್ಛಂದವಾಗಿ ಹಾರಲು ಬಿಟ್ಟಿದ್ದರು. ಆದರೆ ಹಕ್ಕಿ ಹಾರದೆ ಹಿಂದೆ ಬಂದಿತ್ತು. ಇದೀಗ ಅರಣ್ಯ ಇಲಾಖೆ ಕಡಲತಡಿಯಿಂದ ಒಂದು ಕಿಲೋಮೀಟರ್ ದೂರ ಹೋಗಿ ಬಿಟ್ಟು ಬಂದಿದ್ದಾರೆ.

    ಕಡಲ ಆಮೆ ಮತ್ತು ಸಾಗರ ಪಕ್ಷಿ ವನ್ಯಜೀವಿ ವ್ಯಾಪ್ತಿಗೆ ಬರುತ್ತದೆ. ಈ ವರ್ಷ ಎಂಟು ಆಮೆ ರಕ್ಷಣೆ ಮಾಡಿದ್ದೇವೆ. ಮಳೆಗಾಲದಲದಲ್ಲಿ ಕಡಲಬ್ಬರಕ್ಕೆ ಸಿಕ್ಕಿ ಪ್ರತಿ ವರ್ಷ ಕಡಲಾಮೆ, ಪಕ್ಷಿಗಳನ್ನು ಮೀನುಗಾರರು ರಕ್ಷಣೆ ಮಾಡುತ್ತಾರೆ. ನಾವು ಶುಶ್ರೂಷೆ ಮಾಡುತ್ತೇವೆ ಎಂದು ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

  • ಅರಣ್ಯ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿ, ಸಿನಿಮೀಯ ರೀತಿಯಲ್ಲಿ ಚಿರತೆ ಎಸ್ಕೇಪ್

    ಅರಣ್ಯ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿ, ಸಿನಿಮೀಯ ರೀತಿಯಲ್ಲಿ ಚಿರತೆ ಎಸ್ಕೇಪ್

    – ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶ

    ಚಾಮರಾಜನಗರ: ಬಾವಿಗೆ ಬಿದ್ದಿದ್ದ ಚಿರತೆ ಸಿನಿಮೀಯ ರೀತಿಯಲ್ಲಿ ಎಸ್ಕೇಪ್ ಆಗಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಹಸಗೂಲಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಲಿಂಗರಾಜಪ್ಪ ಅವರಿಗೆ ಸೇರಿದ ಜಮೀನಿನಲ್ಲಿದ್ದ ಪಾಳು ಬಾವಿಗೆ ಕಳೆದ ಐದು ದಿನಗಳ ಹಿಂದೆ ಚಿರತೆಯೊಂದು ಬಿದ್ದಿತ್ತು. ವಿಷಯ ತಿಳಿದ ಬಂಡೀಪುರ ಅರಣ್ಯಾಧಿಕಾರಿಗಳು ಚಿರತೆ ಸೆರೆಹಿಡಿಯಲು ಕಾರ್ಯಾಚರಣೆ ನಡೆಸಿದ್ದರು. ಬಾವಿಯ ಪೊಟರೆಯೊಂದಕ್ಕೆ ಚಿರತೆ ಸೇರಿಕೊಂಡಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಎಷ್ಟೇ ಪ್ರಯತ್ನಪಟ್ಟರೂ ಹೊರಬರಲಿಲ್ಲ. ಅಲ್ಲದೆ ಅರಣ್ಯ ಇಲಾಖೆ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿದೆ.

    ಪೊಟರೆ ಬಳಿ ಕಲ್ಲು ಕೊರೆದು ಚಿರತೆ ಹೊರಗೆ ಬರುವಂತೆ ಪ್ರಯತ್ನಿಸಲಾಗಿತ್ತು. ಅಗ್ನಿಶಾಮಕ ದಳದಿಂದ ಪೊಟರೆಗೆ ನೀರು ಸಹ ಹಾಕಲಾಗಿತ್ತು. ಚಿರತೆ ಮಾತ್ರ ಇದಾವುದಕ್ಕೂ ಜಗ್ಗಿರಲಿಲ್ಲ. ಚಿರತೆ ಸೆರೆಗೆ ನಾಯಿ ಕಟ್ಟಿದ ಬೋನನ್ನು ಬಾವಿಯೊಳಗೆ ಇಳಿಬಿಡಲಾಗಿತ್ತು. ಬಾವಿಯ ಪೊಟರೆಯೊಳಗೆ ಅಡಗಿ ಕುಳಿತ ಚಿರತೆ ಐದು ದಿನಕಳೆದರೂ ಬೋನಿಗೆ ಬಿದ್ದಿರಲಿಲ್ಲ. ಚಿರತೆಯ ಸುಳಿವೇ ಇಲ್ಲದ ಕಾರಣ ಹೇಗೋ ಬಾವಿಯಿಂದ ಮೇಲೆ ಬಂದು ಹೊರಟು ಹೋಗಿರಬಹುದೆಂದು ಭಾವಿಸಲಾಗಿತ್ತು. ಆದರೂ ಬಾವಿಯೊಳಗೆ ಏಣಿಯನ್ನು ಇಳಿಬಿಡಲಾಗಿತ್ತು. ಬಾವಿಯ ಹೊರ ಭಾಗದಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.

    ಕಳೆದ ರಾತ್ರಿ ಏಣಿ ಹತ್ತಿಕೊಂಡು ಬಾವಿಯಿಂದ ಮೇಲೆ ಬಂದಿರುವ ಚಿರತೆ, ಕಾಡಿನತ್ತ ಹೋಗಿದೆ. ಚಿರತೆ ಏಣಿ ಮೂಲಕ ಬಾವಿಯಿಂದ ಹೊರಬರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದರೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಈ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಅರಣ್ಯದಂಚಿನಲ್ಲಿ ಸಮಪರ್ಕ ಅನೆಕಂದಕ ಹಾಗೂ ಸೋಲಾರ್ ತಂತಿ ಬೇಲಿ ಅಳವಡಿಸಿ ಕಾಡುಪ್ರಾಣಿಗಳ ಉಪಟಳಕ್ಕೆ ಕಡಿವಾಣ ಹಾಕಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ಬೆಂಕಿ ಆರಿಸಲೆಂದು ಕರೆದೊಯ್ದು ಅರಣ್ಯ ಇಲಾಖೆ ಸಿಬ್ಬಂದಿಯಿಂದ ಹಲ್ಲೆ?

    ಬೆಂಕಿ ಆರಿಸಲೆಂದು ಕರೆದೊಯ್ದು ಅರಣ್ಯ ಇಲಾಖೆ ಸಿಬ್ಬಂದಿಯಿಂದ ಹಲ್ಲೆ?

    – 7 ಮಂದಿ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಎಫ್‍ಐಆರ್

    ಚಾಮರಾಜನಗರ: ಬೆಂಕಿ ಆರಿಸಬೇಕೆಂದು ನೆಪ ಹೇಳಿ ಕರೆದೊಯ್ದ ಅರಣ್ಯ ಇಲಾಖೆ ಸಿಬ್ಬಂದಿ, ನಾಲ್ವರು ಸ್ಥಳೀಯರಿಗೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

    ಕಾವೇರಿ ವನ್ಯಜೀವಿ ಧಾಮದ ಕೊತ್ತನೂರು ಬೀಟ್‍ನ 7 ಮಂದಿ ಸಿಬ್ಬಂದಿ ವಿರುದ್ಧ ಆರೋಪ ಕೇಳಿಬಂದಿದೆ. ಕೊಳ್ಳೇಗಾಲ ತಾಲೂಕಿನ ಜಾಗೇರಿ ರಾಶಿಬೋಳಿ ತಾಂಡದ ವಿನ್ಸೆಂಟ್ ಈ ಗಂಭೀರ ಆರೋಪ ಮಾಡಿದ್ದು, ಬೆಂಕಿ ಆರಿಸಬೇಕೆಂದು ನನ್ನನ್ನೂ ಸೇರಿ ನಾಲ್ವರನ್ನು ಕಾಡಿಗೆ ಕರೆದೊಯ್ದ ಅರಣ್ಯ ಇಲಾಖೆ ಸಿಬ್ಬಂದಿಯಾದ ಮಧುಕುಮಾರ್, ಅನಿಲ್ ವಾಲೇಕರ್, ಪುಟ್ಟಲಿಂಗ, ರಾಘವೇಂದ್ರ ರಾಥೋಡ್, ಅನಿಲ್, ಮಹೇಶ್ ಹಾಗೂ ಮಾದೇಶ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಅಲ್ಲದೆ ಕಾಡಿಗೆ ಬೆಂಕಿಯಿಟ್ಟು ಶಿಖಾರಿ ಮಾಡಲು ಬಂದಿದ್ದಾರೆ ಎಂದು ನಮ್ಮ ವಿರುದ್ಧವೇ ಸುಳ್ಳು ಮೊಕದ್ದಮೆ ದಾಖಲಿಸಿದ್ದಾರೆ ಎಂದು ಹನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಆರೋಪವೇನು:
    ಅರಣ್ಯ ವಾಚರ್ರಾದ ಅಯ್ಯನ್ ದೊರೆ ಅವರ ಮಗ ನನ್ನ ಮಗಳ ಮೇಲೆ ಅತ್ಯಾಚಾರ ಎಸಗಿದ್ದ. ಈ ಆರೋಪದ ಮೇಲೆ 2018ರಲ್ಲಿ ಬಂಧಿಸಲಾಗಿತ್ತು. ಒಂದು ವರ್ಷ ಕಾರಾಗೃಹದ್ದಲ್ಲಿದ್ದು ಬಂದಿದ್ದಾನೆ. ಮಗನನ್ನು ಜೈಲಿಗೆ ಕಳುಹಿಸಿದ ದ್ವೇಷ ಇಟ್ಟುಕೊಂಡ ಅಯ್ಯನ್ ದೊರೆ ಫಾರೆಸ್ಟ್ ಗಾರ್ಡ್ ಗಳಿಗೆ ಹಣ ನೀಡಿ ನಮಗೆ ಹೊಡೆಸಿದ್ದಲ್ಲದೆ ಮೊಕದ್ದಮೆ ಹಾಕಿಸಿದ್ದಾರೆ ಎಂಬುದು ವಿನ್ಸೆಂಟ್ ಆರೋಪವಾಗಿದೆ.

    ಕಳೆದ ಏಪ್ರಿಲ್ 21ರ ಬೆಳಗಿನ ಜಾವ ಕಾಡಿಗೆ ಬೆಂಕಿ ಬಿದ್ದಿದ್ದು, ಆರಿಸಬೇಕೆಂದು ವಿನ್ಸೆಂಟ್, ಸಗಾಯ್ ರಾಜ್, ಶಬರಿನಾಥನ್, ಜ್ಞಾನಪ್ರಕಾಶ್ ಅವರನ್ನು ಕರೆದೊಯ್ದು ಅರ್ಧ ತಾಸಿನ ಬಳಿಕ ಕೈಕಾಲುಗಳನ್ನು ಕಟ್ಟಿ ಭೀಮೆಶ್ವರಿ ಕಳ್ಳಬೇಟೆ ತಡೆ ಕ್ಯಾಂಪ್ ಗೆ ಕರೆತಂದು ಗನ್, ಲಾಠಿಯಿಂದ ಹೊಡೆದು ಹಲ್ಲೆ ದೃಶ್ಯವನ್ನು ವಾಚರ್ ಅಯ್ಯನ್ ದೊರೆಗೆ ಕಳುಹಿಸಿದ್ದಾರೆ ಎಂದು ವಿನ್ಸೆಂಟ್ ದೂರಿದ್ದಾರೆ.

    ನಮ್ಮ ಮೇಲೆ ಹಲ್ಲೆ ಮಾಡಲು ಅರಣ್ಯ ಇಲಾಖೆ ಸಿಬ್ಬಂದಿಗೆ 10-15 ಸಾವಿರ ರೂ. ಹಣ ಕೊಡುವ ಜೊತೆಗೆ ಕ್ಯಾಂಪಿನಲ್ಲಿ ಅವರಿಗೆ 7 ಸಾವಿರ ರೂ. ಖರ್ಚು ಮಾಡಿ ಮದ್ಯದ ಪಾರ್ಟಿ ಕೊಡಿಸಿದ್ದಾರೆ. ನಮ್ಮ ಮೇಲೆ ಹಲ್ಲೆ ಮಾಡುವ ವಿಡಿಯೋವನ್ನು ಅಯ್ಯನ್ ದೊರೆ ಮಗ ರಾಜ ವೈರಲ್ ಮಾಡಿದ ಬಳಿಕ ಈ ವಿಚಾರ ನಮಗೆ ತಿಳಿಯಿತು ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಹನೂರು ಪೊಲೀಸ್ ಠಾಣೆಯವರೂ ಕೂಡ ಕಳೆದ ಒಂದು ತಿಂಗಳಿನಿಂದ ದೂರು ಪಡೆಯಲು ಸತಾಯಿಸಿ ಕಳೆದ 1ರಂದು ಪ್ರಕರಣ ದಾಖಲಿಸಿದ್ದಾರೆ ಎಂದು ವಿನ್ಸೆಂಟ್ ಆರೋಪಿಸಿದ್ದಾರೆ. ಸದ್ಯ ಹನೂರು ಠಾಣೆಯಲ್ಲಿ 7 ಮಂದಿ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.