Tag: ಅರಣ್ಯ ಇಲಾಖೆ

  • Mysuru| ರೈತನ ಬಲಿ ಪಡೆದಿದ್ದ ಹುಲಿ ಸೆರೆ

    Mysuru| ರೈತನ ಬಲಿ ಪಡೆದಿದ್ದ ಹುಲಿ ಸೆರೆ

    ಮೈಸೂರು: ದನ ಮೇಯಿಸಲು ಹೋಗಿದ್ದ ವೇಳೆ ರೈತನನ್ನು (Farmer) ಬಲಿ ಪಡೆದಿದ್ದ ಹುಲಿಯನ್ನು (Tiger) ಅರಣ್ಯ ಇಲಾಖೆ (Forest Department) ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದ್ದಾರೆ.

    ಸಾಕಾನೆಗಳ ಸಹಾಯದಿಂದ ಹುಲಿಯನ್ನು ಸೆರೆಹಿಡಿಯಲಾಗಿದೆ. ಸರಗೂರು (Saraguru) ತಾಲೂಕಿನ ಮುಳ್ಳೂರು ಬಳಿ ಹುಲಿ ಸೆರೆಯಾಗಿದೆ. ಯಡಿಯಾಲ ಅರಣ್ಯ ವಲಯದ ಮುಳ್ಳೂರು ಬಳಿ ಅರವಳಿಕೆ ನೀಡಿ ಹುಲಿಯನ್ನು ಸೆರೆಹಿಡಿಯಲಾಯಿತು. ಸೆರೆಹಿಡಿದ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಅರಣ್ಯ ಪ್ರದೇಶಕ್ಕೆ ರವಾನಿಸಿದ್ದಾರೆ. ಸದ್ಯ ಹುಲಿ ಸೆರೆಯಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: ಮೈಸೂರು| ದನ ಮೇಯಿಸುವಾಗ ಹುಲಿ ದಾಳಿಗೆ ರೈತ ಬಲಿ

    ಘಟನೆ ಏನು?
    ದನ ಮೇಯಿಸಲು ಹೋಗಿದ್ದ ವೇಳೆ ರೈತ ಹುಲಿ ದಾಳಿಗೆ ಬಲಿಯಾದ ಘಟನೆ ಸರಗೂರು ತಾಲೂಕಿನ ಬೆಣ್ಣೆಗೆರೆ ಗ್ರಾಮದಲ್ಲಿ ನಡೆದಿತ್ತು. ರಾಜಶೇಖರ (58) ಮೃತ ರೈತ. ಘಟನೆ ಬಳಿಕ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದನ್ನೂ ಓದಿ: ದನ ಮೇಯಿಸುವಾಗ ಹುಲಿ ದಾಳಿಗೆ ರೈತ ಬಲಿ ಕೇಸ್ – ಶವಾಗಾರಕ್ಕೆ ಆಗಮಿಸಿದ ಖಂಡ್ರೆಗೆ ರೈತರಿಂದ ಘೇರಾವ್

    ಸೋಮವಾರ (ಅ.27) ಮೈಸೂರಿನ ಕೆ.ಆರ್.ಆಸ್ಪತ್ರೆ ಶವಾಗಾರದಲ್ಲಿ ಮೃತ ರೈತನ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದ ವೇಳೆ ಸಚಿವ ಈಶ್ವರ್ ಖಂಡ್ರೆ ಆಗಮಿಸಿದ್ದರು. ಈ ವೇಳೆ ರೈತರು ಸಚಿವರಿಗೆ ಘೇರಾವ್ ಹಾಕಿ, ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ, ಸೂಕ್ತ ಪರಿಹಾರ ಘೋಷಣೆ ಮಾಡಬೇಕು. ಪ್ರಾಣಿ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ನೀಡಬೇಕು. ಘಟನೆಗೆ ಕಾರಣೀಕರ್ತರಾದವರಿಗೆ ತಕ್ಷಣ ವಜಾ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದ್ದರು. ಇದನ್ನೂ ಓದಿ: ಸರಗೂರಿನಲ್ಲಿ ಹುಲಿ ದಾಳಿಗೆ ರೈತ ಬಲಿ – ಅಧಿಕಾರಿಗಳ ನಿರ್ಲಕ್ಷ್ಯ ಇದ್ರೆ ಕ್ರಮ ಗ್ಯಾರಂಟಿ: ಈಶ್ವರ್‌ ಖಂಡ್ರೆ

    ಅಲ್ಲದೇ ಮೃತ ರೈತನ ಮೃತದೇಹವನ್ನು ಮೈಸೂರಿಗೆ ತಂದಿದಕ್ಕೆ ಆಕ್ಷೇಪ ಹೊರಹಾಕಿದ್ದರು. ಭಾನುವಾರ ಸರಗೂರಿನಲ್ಲಿದ್ದರೂ ಸಚಿವರು ಬರಲಿಲ್ಲ. ಘಟನಾ ಸ್ಥಳದಲ್ಲಿ ಗಲಾಟೆ ಆಗುತ್ತೆ ಅಂತ ಗೊತ್ತಿತ್ತು. ಅದಕ್ಕೆ ಮೈಸೂರಿಗೆ ಮೃತದೇಹ ತಂದಿದ್ದೀರಿ ಎಂದು ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದನ್ನೂ ಓದಿ: ಮೈಸೂರು| ನಾಲೆಯಲ್ಲಿ ಮುಳುಗುತ್ತಿದ್ದ ಬಾಲಕನ ರಕ್ಷಿಸಿ ತಾವೇ ಜಲಸಮಾಧಿಯಾದ ಇಬ್ಬರು ಸಹೋದರರು

  • Ramanagara | ಬಾವಿಗೆ ಬಿದ್ದ ಚಿರತೆ ರಕ್ಷಿಸಿದ ಅರಣ್ಯ ಇಲಾಖೆ

    Ramanagara | ಬಾವಿಗೆ ಬಿದ್ದ ಚಿರತೆ ರಕ್ಷಿಸಿದ ಅರಣ್ಯ ಇಲಾಖೆ

    ರಾಮನಗರ: ಆಹಾರ ಅರಸಿ ಜನವಸತಿ ಪ್ರದೇಶಕ್ಕೆ ಬಂದು ಬಾವಿಗೆ ಬಿದ್ದಿದ್ದ ಚಿರತೆಯನ್ನು (Leopard) ಅರಣ್ಯ ಇಲಾಖೆ (Forest Department) ರಕ್ಷಿಸಿರುವ ಘಟನೆ ಮಾಗಡಿ (Magadi) ತಾಲೂಕಿನ ಹಾಲಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ರೈತ ರೇವಣ್ಣ ಎಂಬವರ ತೋಟದ ಬಾವಿಗೆ ಚಿರತೆ ಬಿದ್ದಿತ್ತು. ಕೂಡಲೇ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು 5 ವರ್ಷದ ಹೆಣ್ಣು ಚಿರತೆಯನ್ನು ರಕ್ಷಣೆ ಮಾಡಿದ್ದಾರೆ. ಬೋನ್ ಹಾಗೂ ಬಲೆ ಸಹಾಯದಿಂದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಮೇಲೆತ್ತಿದ್ದಾರೆ. ಇದನ್ನೂ ಓದಿ: ಎಡಗಾಲಲ್ಲಿದ್ದ ರಾಡ್ ತೆಗೆಯಲು ಬಲಗಾಲಿಗೆ ಆಪರೇಷನ್ – ಹಿಮ್ಸ್ ಆಸ್ಪತ್ರೆ ವೈದ್ಯರ ಯಡವಟ್ಟು

    ಬಾವಿಗೆ ಬಿದ್ದ ರಭಸಕ್ಕೆ ಚಿರತೆಯ ತಲೆಭಾಗಕ್ಕೆ ಪೆಟ್ಟು ಬಿದ್ದಿದೆ. ಸದ್ಯ ಚಿರತೆಯನ್ನ ಬನ್ನೇರುಘಟ್ಟ ರೆಸ್ಕ್ಯೂ ಸೆಂಟರ್‌ಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎಸಿಎಫ್ ಪುಟ್ಟಮ್ಮ ಹಾಗೂ ಆರ್‌ಎಫ್‌ಓ ಚೈತ್ರಾ ಮನ್ಸೂರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಇದನ್ನೂ ಓದಿ: ಬುರುಡೆ ಗ್ಯಾಂಗ್‌ಗೆ ಫಂಡಿಂಗ್ – 11 ಮಂದಿಗೆ ಎಸ್‌ಐಟಿ ನೋಟಿಸ್

  • 20 ದಿನಗಳಲ್ಲಿ 11 ದಾಳಿ, ಇಬ್ಬರು ಬಾಲಕಿಯರು ಸಾವು – ಬಹ್ರೈಚ್‌ನಲ್ಲಿ ಮತ್ತೆ ನರಭಕ್ಷಕ ತೋಳಗಳ ಹಾವಳಿ

    20 ದಿನಗಳಲ್ಲಿ 11 ದಾಳಿ, ಇಬ್ಬರು ಬಾಲಕಿಯರು ಸಾವು – ಬಹ್ರೈಚ್‌ನಲ್ಲಿ ಮತ್ತೆ ನರಭಕ್ಷಕ ತೋಳಗಳ ಹಾವಳಿ

    – ಇಲ್ಲಿನ ತೋಳಗಳು ನರಭಕ್ಷಕಗಳಾಗಿದ್ದು ಹೇಗೆ? – ದಾಳಿಯ ʻಸೇಡಿನ ಕಥೆʼ

    ಲಕ್ನೋ: ರುದ್ರಪ್ರಯಾಗದಲ್ಲಿ ನರಭಕ್ಷಕ ಚಿರತೆಗೆ ಹೆದರಿದ್ದ ಜನ ಸಂಜೆ ಹೊತ್ತಾದ್ರೆ ಸಾಕು ಮನೆಯಿಂದಾಚೆಗೆ ಕಾಲಿಡುವುದಕ್ಕೂ ಹೆದರುತ್ತಿದ್ದರು. ಅದೇ ಪರಿಸ್ಥಿತಿ ಉತ್ತರ ಪ್ರದೇಶದ (Uttar Pradesh) ಬಹ್ರೈಚ್‌ನಲ್ಲಿ ಮತ್ತೆ ಶುರುವಾಗಿದೆ. ನರಭಕ್ಷಕ ತೋಳಗಳ ಹಾವಳಿ ಮುಂದುವರಿದಿದ್ದು, ಬ್ರಹ್ರೈಚ್‌ನ ಕೈಸರ್‌ಗಂಜ್ ಮತ್ತು ಮಹ್ಸಿ ತಹಸಿಲ್‌ಗಳಲ್ಲಿರುವ ಹಳ್ಳಿಗಳ ಜನರಲ್ಲಿ ಭೀತಿ ಉಂಟುಮಾಡಿದೆ.

    ಕಳೆದ 20 ದಿನಗಳಲ್ಲಿ 11 ದಾಳಿ ನಡೆದಿದ್ದು, ಇಬ್ಬರು ಹುಡುಗಿಯರು ಸಾವನ್ನಪ್ಪಿದ್ದಾರೆ. 9 ಮಂದಿ ತೋಳಗಳ ದಾಳಿಗೆ ಸಿಕ್ಕಿ ಗಾಯಗೊಂಡಿದ್ದಾರೆ. ಈ ಬೆನ್ನಲ್ಲೇ ನರಭಕ್ಷಕ ತೋಳಗಳನ್ನ (Wolf) ಸೆರೆ ಹಿಡಿಯಲು ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು (Forest Department Officers) ಹಾಗೂ ಅಂತಾರಾಜ್ಯ ತಜ್ಞರು ಸೇರಿದಂತೆ 100ಕ್ಕೂ ಹೆಚ್ಚು ಸಿಬ್ಬಂದಿಯನ್ನ ನಿಯೋಜಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

    Wolves IN UP 2

    ಈ ಕುರಿತು ಮಾತನಾಡಿರುವ ದೇವಿಪಟನ್ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಡಾ.ಎಂ ಸಿಮ್ರಾನ್, ಕಾರ್ಯಾಚರಣೆ ಹಾಗೂ ಸಾರ್ವಜನಿಕರ ಮಾಹಿತಿಗಾಗಿ ಕಂಟ್ರೋಲ್‌ ರೂಮ್‌ ಸ್ಥಾಪಿಸಲಾಗಿದೆ. ಜೊತೆಗೆ ಡ್ರೋನ್‌ (Drone), ನೈಟ್‌ ವಾಚ್‌ಕ್ಯಾಮೆರಾಗಳನ್ನೂ ಕಣ್ಗಾವಲಿಗೆ ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ.

    ಘಟನೆ ಬೆಳಕಿಗೆ ಬಂದಿದ್ದು ಯಾವಾಗ?
    ಕಳೆದ ವರ್ಷ ಸೆಪ್ಟಂಬರ್‌ನಲ್ಲೇ ನರಭಕ್ಷಕ ತೋಳಗಳು ಬಹ್ರೈಚ್‌ನ (Bahraich) ಜನರನ್ನ ಕಾಡಿದ್ದವು. ಈ ವರ್ಷ ಸೆಪ್ಟೆಂಬರ್‌ನಲ್ಲಿ ಮತ್ತೆ ತೋಳಗಳ ಹಾವಳಿ ಹೆಚ್ಚಾಗಿದೆ. ಇದೇ ಸೆ.9ರಂದು ಜ್ಯೋತಿ ಎಂಬ ನಾಲ್ಕು ವರ್ಷದ ಬಾಲಕಿಯನ್ನ ತೋಳವೊಂದು ಹೊತ್ತೊಯ್ದಿತ್ತು. ಮರುದಿನ ಬೆಳಗ್ಗೆ ಆಕೆಯ ಮೃತದೇಹ ಪತ್ತೆಯಾಗಿತ್ತು. ನಂತ್ರ ಸೆ.11ರಂದು ಮೂರು ತಿಂಗಳ ಸಂಧ್ಯಾ ಎಂಬ ಹೆಣ್ಣು ಮಗುವನ್ನು ಆಕೆಯ ತಾಯಿ ಕಂಕುಳಲ್ಲಿ ಇರಿಸಿಕೊಂಡಿದ್ದಾಗಲೇ ಕಚ್ಚಿಕೊಂಡು ಎಳೆದೊಯ್ದಿತ್ತು. ಆ ನಂತರ ತೋಳಗಳ ಹಾವಳಿ ಮತ್ತೆ ಶುರುವಾಗಿರುವುದು ಕಂಡುಬಂದಿತು. ಅಧಿಕಾರಿಗಳು ಡ್ರೋನ್‌ ಕಾರ್ಯಾಚರಣೆ ವೇಳೆ 2 ತೋಳಗಳ ದೃಶ್ಯ ಸೆರೆಯಾಗಿತ್ತು. ಆದ್ರೆ ಅಧಿಕಾರಿಗಳು ಸೆರೆ ಹಿಡಿಯುವಲ್ಲಿ ವಿಫಲರಾದ್ರು.

    Wolves IN UP 4

    ಇಲ್ಲಿನ ತೋಳಗಳು ನರಭಕ್ಷಕಗಳಾಗಿದ್ದು ಹೇಗೆ?
    ಇಲ್ಲಿನ ಸಾಯಿ ನದಿ ತಟದ ಜಾನ್‌ ಪುರ, ಪ್ರತಾಪ್‌ಗಢ ಮತ್ತು ಸುಲ್ತಾನ್‌ ಪುರದ ಗಡಿಗೆ ಹೊಂದಿಕೊಂಡಂತಿರುವ ಅರಣ್ಯ ಪ್ರದೇಶಗಳು ಅಂದು ತೋಳಗಳ ಆವಾಸಸ್ಥಾನವಾಗಿತ್ತು. ನರಿಗಳೂ ಸಹ ಇಲ್ಲಿ ವಾಸಿಸುತ್ತಿದ್ದವು. ಸಾಮಾನ್ಯವಾಗಿ ಸುಲಭವಾಗಿ ಆಹಾರ ಹುಡುಕಾಟದಲ್ಲಿದ್ದಾಗ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತವೆ ಎಂದು ವನ್ಯಜೀವಿ ತಜ್ಞರು ಹೇಳುತ್ತಾರೆ. ಅದೇ ರೀತಿ ಇಲ್ಲಿಯೂ ಆಗಿದೆ. ಇಲ್ಲಿನ ಹೆಣ್ಣು ತೋಳವೊಂದು ಮರಿಗಳಿಗೆ ಜನ್ಮ ನೀಡಿತ್ತು. ಈ ಸಮಯದಲ್ಲಿ ಹೆಣ್ಣು ತೋಳಗಳು ಬೇಟೆಯಾಡಲು ಸಾಧ್ಯವಿರಲಿಲ್ಲ. ಹಾಗಾಗಿ ಗಂಡು ತೋಳದ ಆಶ್ರಯ ಬಯಸಿತ್ತು. ಒಮ್ಮೆ ಆಹಾರ ಹುಡುಕಿಕೊಂಡು ಹೊರಟಿದ್ದ ಗಂಡು ತೋಳ ಮಗುವೊಂದನ್ನು ಬೇಟೆಯಾಡಿ, ಭಾಗಶಃ ತಾನು ತಿಂದು ಉಳಿದ ಮಾಂಸವನ್ನು ಮರಿಗಳಿಗಾಗಿ ಹೊತ್ತೊಯ್ದಿತ್ತು. ಆದ್ರೆ ಮರಿಗಳು ಮನುಷ್ಯನ ಆಹಾರ ತಿನ್ನುತ್ತಿದ್ದಂತೆ ವಾಂತಿ ಮಾಡಿಕೊಂಡಿದ್ದವು, ಕ್ರಮೇಣ ಅದೇ ಆಹಾರಕ್ಕೆ ಒಗ್ಗಿಕೊಂಡವು. ಆ ನಂತರದಲ್ಲಿ ತೋಳಗಳು ಮಕ್ಕಳನ್ನು ಬೇಟೆಯಾಟಲು ಮುಂದುವರಿಸಿದವು.

    ತೋಳಗಳು ನರಭಕ್ಷಕವೇ?
    ಭಾರತೀಯ ತೋಳಗಳು ಪ್ರಾಚೀನ ವಂಶಾವಳಿ ಹೊಂದಿವೆ ಎಂದು ವನ್ಯಜೀವಿ ತಜ್ಞರು ಹೇಳುತ್ತಾರೆ. ತೋಳಗಳಲ್ಲಿ ಬೂದು ತೋಳ ಹಾಗೂ ನಾಯಿ ತೋಳ ಎಂಬ ಸಂತತಿಗಳಿವೆ. ಅವುಗಳನ್ನು ದೇಹದ ಆಕಾರ, ಬಣ್ಣಗಳಿಂದ ಪ್ರತ್ಯೇಕಿಸಬಹುದು. ಈ ಎರಡು ಉಪಜಾತಿಗಳ ಪೈಕಿ ನಾಯಿ ತೋಳಗಳು ನರಭಕ್ಷಕ ತೋಳಗಳಾಗಿವೆ. ಇವು ಅತ್ಯಂತ ಚುರುಕು ಬುದ್ಧಿ ಹೊಂದಿರುತ್ತವೆ. ಇವುಗಳನ್ನು ಸೆರೆ ಹಿಡಿಯುವಾಗ ಮೀನಿಗೆ ಗಾಳ ಹಾಕಿದಂತೆ, ಮಾಂಸವನ್ನು ಬಳಸಿ ಎಚ್ಚರಿಕೆಯಿಂದ ಹಿಡಿಯಬೇಕಾಗುತ್ತದೆ ಎನ್ನುತ್ತಾರೆ ತಜ್ಞರು.

    ದಾಳಿ ಹಿಂದಿದೆ ʻಸೇಡಿನ ಕಥೆʼ:
    ಬಹ್ರೈಚ್‌ ಜಿಲ್ಲೆಯ ಕತರ್ನಿಯಾಘಾಟ್ ವನ್ಯಜೀವಿ ವಿಭಾಗದ ನಿವೃತ್ತ ಭಾರತೀಯ ಅರಣ್ಯ ಸೇವೆ ಅಧಿಕಾರಿ ಜ್ಞಾನ್ ಪ್ರಕಾಶ್ ಸಿಂಗ್ ತೋಳಗಳ ದಾಳಿಯ ಬಗ್ಗೆ ರೋಚಕ ಸಂಗತಿಯೊಂದನ್ನ ಈ ಹಿಂದೆಯೇ ಬಿಚ್ಚಿಟ್ಟಿದ್ದರು. ತೋಳಗಳು ಇತರ ಕಾಡು ಪ್ರಾಣಿಗಳಿಗಿಂತ ಭಿನ್ನವಾಗಿ ಸೇಡು ತೀರಿಸಿಕೊಳ್ಳುವ ಪ್ರವೃತ್ತಿಯನ್ನು ಹೊಂದಿವೆ. ನನ್ನ ಅನುಭವದ ಆಧಾರದ ಮೇಲೆ ಹೇಳುವುದಾದ್ರೆ, ತೋಳಗಳು ಸೇಡು ತೀರಿಸಿಕೊಳ್ಳುತ್ತವೆ. ಈ ಹಿಂದೆ ಮನುಷ್ಯರು ತೋಳಗಳಿಗೆ ಯಾವುದೋ ಒಂದು ರೀತಿಯಲ್ಲಿ ತೊಂದರೆ ಕೊಟ್ಟಿರುವುದರಿಂದ ಈ ದಾಳಿಗಳು ನಡೆಯುತ್ತಿವೆ ಎಂದಿದ್ದಾರೆ.

    wolf

    ಸುಮಾರು 25 ವರ್ಷಗಳ ಹಿಂದೆ ಉತ್ತರ ಪ್ರದೇಶದ ಚೌನ್‌ಪುರ ಮತ್ತು ಪ್ರತಾಪ್‌ ಗಢ ಜಿಲ್ಲೆಗಳ ಸಾಯಿ ನದಿಯ ಜಲಾನಯನ ಪ್ರದೇಶದಲ್ಲಿ 50ಕ್ಕೂ ಹೆಚ್ಚು ಮಕ್ಕಳನ್ನು ತೋಳಗಳು ಕೊಂದಿದ್ದವು. ಈ ಬಗ್ಗೆ ತನಿಖೆ ಮಾಡಿದ ನಂತರ ಕೆಲವು ಮಕ್ಕಳು ಎರಡು ತೋಳದ ಮರಿಗಳನ್ನು ಗುಹೆಯಲ್ಲಿ ಕೊಂದಿರುವುದು ಕಂಡುಬಂದಿತು. ಬಳಿಕ ತೋಳದ ಮರಿಗಳ ಪೋಷಕರು ತುಂಬಾ ಆಕ್ರಮಣಕಾರಿಯಾದವು ಮತ್ತು ಆ ಪ್ರದೇಶದಲ್ಲಿ ವಾಸಿಸುವ ಮನುಷ್ಯರ ಮೇಲೆ ದಾಳಿ ಮಾಡಲು ಪ್ರಾರಂಭಿಸಿದವು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆಯನ್ನು ಪ್ರಾರಂಭಿಸಿ, ಕೆಲವು ತೋಳಗಳನ್ನು ಹಿಡಿಯಲಾಯಿತು ಆದರೆ, ಎರಡು ನರಭಕ್ಷಕ ತೋಳಗಳು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದವು. ಅಂತಿಮವಾಗಿ ಆ ತೋಳಗಳನ್ನು ಗುರುತಿಸಿ, ಗುಂಡಿಕ್ಕಿ ಕೊಲ್ಲಲಾಯಿತು ಎಂದು ಜ್ಞಾನ್ ಪ್ರಕಾಶ್ ಸಿಂಗ್ ಹೇಳಿದ್ದರು.

  • ಸ್ಥಳೀಯರೊಂದಿಗೆ ಚರ್ಚಿಸಿ ಆನೆ ವಿಹಾರಧಾಮ ಸ್ಥಾಪನೆ: ಈಶ್ವರ ಖಂಡ್ರೆ

    ಸ್ಥಳೀಯರೊಂದಿಗೆ ಚರ್ಚಿಸಿ ಆನೆ ವಿಹಾರಧಾಮ ಸ್ಥಾಪನೆ: ಈಶ್ವರ ಖಂಡ್ರೆ

    ಬೆಂಗಳೂರು: ಆನೆ-ಮಾನವ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಆನೆ ವಿಹಾರಧಾಮ (Elephant Soft Release Center) ಸೂಕ್ತವೆಂದು ತಜ್ಞರು ಅಭಿಪ್ರಾಯಪಟ್ಟಿದ್ದು, ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ (Eshwar Khandre) ತಿಳಿಸಿದರು.

    ಬೆಂಗಳೂರಿನಲ್ಲಿಂದು ವನ್ಯಜೀವಿ-ಮಾನವ ಸಂಘರ್ಷ ಹಾಗೂ ರೈಲ್ವೆ ಬ್ಯಾರಿಕೇಡ್ ಯೋಜನೆಗಳನ್ನು ಅಂತಿಮಗೊಳಿಸುವ ಸಂಬಂಧ ನಡೆದ ವೀಡಿಯೋ ಕಾನ್ಫರೆನ್ಸ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಮಾತನಾಡಿದ ಅವರು ಚಿಕ್ಕಮಗಳೂರಿನ ಮುತ್ತೋಡಿಗಿಂತಲೂ ತಣಿಗೆಬೈಲು ಸೂಕ್ತ ಪ್ರದೇಶ ಎಂದು ತಜ್ಞರು ವರದಿ ನೀಡಿದ್ದು, ಈ ಕುರಿತಂತೆ ಸ್ಥಳೀಯರ ಸಭೆ ಕರೆದು ಚರ್ಚಿಸಲಾಗುವುದು ಎಂದರು. ಇದನ್ನೂ ಓದಿ: ಕುಟುಂಬ ರಾಜಕಾರಣದಲ್ಲಿ ದೇಶದಲ್ಲೇ ಕರ್ನಾಟಕಕ್ಕೆ ನಾಲ್ಕನೇ ಸ್ಥಾನ

    ಆನೆಗಳ ಸಮಸ್ಯೆ ಯಾವ ವಲಯದಲ್ಲಿ ಹೆಚ್ಚಾಗಿದೆ. ಆನೆಗಳ ದಾಳಿ ನಡೆಯುತ್ತಿರುವ ಸಮಯ, ಕಾರಣ ಕುರಿತಂತೆ ಅಧ್ಯಯನ ನಡೆಸಿ, ಸ್ಥಳೀಯರಿಗೆ ಮುನ್ನೆಚ್ಚರಿಕೆ ನೀಡಬೇಕು. ಆನೆ ಧಾಮ ಬಹುಪಾಲು ಆನೆ-ಮಾನವ ಸಂಘರ್ಷ ತಗ್ಗಿಸುವ ಭರವಸೆ ಇದೆ. ಮುಂದಿನ ವಾರ ತಾವು ದೆಹಲಿಯಲ್ಲಿ ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವರನ್ನು ಭೇಟಿ ಮಾಡುತ್ತಿದ್ದು, ಈ ಸಂದರ್ಭದಲ್ಲಿ ಆನೆ ವಿಹಾರಧಾಮ ಕುರಿತಂತೆ ಸಮಗ್ರವಾಗಿ ಚರ್ಚಿಸಲಾಗುವುದು. ಕಾಂಪಾದಿಂದ ಹಣ ಬಿಡುಗಡೆ ಮಾಡುವಂತೆ ಕೋರಲಾಗುವುದು ಎಂದು ತಿಳಿಸಿದರು.

    ಕಮಾಂಡ್ ಕೇಂದ್ರ:
    ವನ್ಯಜೀವಿ-ಮಾನವ ಸಂಘರ್ಷ ತಡೆಗೆ ಸಮಗ್ರ ಕಮಾಂಡ್ ಸೆಂಟರ್ ಸ್ಥಾಪಿಸಲು ತಾವು ಸೂಚನೆ ನೀಡಿದ್ದರೂ, ವಿಳಂಬವಾಗುತ್ತಿದೆ. ಕೂಡಲೇ ಈ ಬಗ್ಗೆ ಕಾರ್ಯಯೋಜನೆ ರೂಪಿಸಿ, ಆನೆ ಸೇರಿದಂತೆ ವನ್ಯಜೀವಿಗಳ ಸಂಚಾರದ ಬಗ್ಗೆ ನಿಗಾ ಇಟ್ಟು ಸ್ಥಳೀಯರಿಗೆ ಕಾಲ ಕಾಲಕ್ಕೆ ಮುನ್ನೆಚ್ಚರಿಕೆ ನೀಡಲು ಮತ್ತು ವನ್ಯಮೃಗಗಳು ನಾಡಿಗೆ ಬಂದಿರುವ ಬಗ್ಗೆ ಸ್ವೀಕರಿಸುವ ದೂರಿಗೆ ತತ್ ಕ್ಷಣವೇ ಸ್ಪಂದಿಸಲಾಗಿದೆಯೇ ಇಲ್ಲವೇ ಎಂಬುದನ್ನು ಕೇಂದ್ರ ಸ್ಥಾನದಲ್ಲಿ ಕುಳಿತು ಮೇಲ್ವಿಚಾರಣೆ ನಡೆಸುವ ವ್ಯವಸ್ಥೆ ರೂಪಿಸುವಂತೆ ತಿಳಿಸಿದರು.

    ಸನ್ನಾ, ಲ್ಯಾಂಟೆನ ಸಮಸ್ಯೆ ಪರಿಹರಿಸಿ:
    ಸನ್ನಾ ಮತ್ತು ಲ್ಯಾಂಟೆನ ಕಳೆಗಳು ವಿಪರೀತವಾಗಿ ಕಾಡನ್ನು ಆವರಿಸುತ್ತಿವೆ. ನೆರೆಯ ತಮಿಳುನಾಡು ಮತ್ತು ಕೇರಳದಲ್ಲಿ ಇದನ್ನು ಹೇಗೆ ನಿರ್ವಹಿಸಲಾಗಿದೆ ಎಂಬ ಮಾಹಿತಿ ಪಡೆದು, ದೊಡ್ಡ ಪ್ರಮಾಣದಲ್ಲಿ ಈ ಕಳೆ ನಾಶಕ್ಕೆ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಇದನ್ನೂ ಓದಿ: ವಿಧಾನ ಮಂಡಲದಲ್ಲಿಯ ಆರೋಗ್ಯಪೂರ್ಣ ಚರ್ಚೆಗಳೇ ಪ್ರಜಾಪ್ರಭುತ್ವದ ಯಶಸ್ಸಿನ ಮೂಲಾಧಾರ: ಬಸವರಾಜ ಹೊರಟ್ಟಿ

    ಹೊರಗುತ್ತಿಗೆ ಸಿಬ್ಬಂದಿ ಮಾಹಿತಿ ಕೇಳಿದ ಸಚಿವರು:
    ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳ ಸಾವಿನ ನಂತರ ಹೊರಗುತ್ತಿಗೆ ಸಿಬ್ಬಂದಿಗೆ ಸಕಾಲದಲ್ಲಿ ವೇತನ ಪಾವತಿ ಆಗುತ್ತಿಲ್ಲ. ನೌಕರರ ಭವಿಷ್ಯ ನಿಧಿ ಹಣವನ್ನು ಸಂದಾಯ ಮಾಡುತ್ತಿಲ್ಲ ಎಂಬ ದೂರುಗಳು ಬಂದಿದ್ದು, ರಾಜ್ಯದಲ್ಲಿ ಎಷ್ಟು ಹೊರಗುತ್ತಿಗೆ ಸಿಬ್ಬಂದಿ ಇದ್ದಾರೆ. ಅವರಿಗೆ ವೇತನ, ಭತ್ಯೆ ಎಷ್ಟು ತಿಂಗಳಿನಿಂದ ಪಾವತಿಯಾಗಿಲ್ಲ. ವಿಳಂಬಕ್ಕೆ ಕಾರಣ ಏನು, ಗುತ್ತಿಗೆದಾರ ಸಂಸ್ಥೆ ಇಪಿಎಫ್ ಪಾವತಿಸಿದೆಯೇ ಇತ್ಯಾದಿ ಎಲ್ಲ ಅಂಶಗಳ ವರದಿಯನ್ನು ವಿಳಂಬ ಮಾಡದೆ ಸಲ್ಲಿಸುವಂತೆ ಸೂಚಿಸಿದರು.

    ವನ್ಯಜೀವಿ ಸಂರಕ್ಷಣೆಯೂ ಆಗಬೇಕು. ಅಮೂಲ್ಯವಾದ ಜೀವ ಹಾನಿ ಮತ್ತು ಬೆಳೆ ಹಾನಿ ಆಗಬಾರದು. ಈ ಬಗ್ಗೆ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಶಕ್ತಿ ಮೀರಿ ಶ್ರಮಿಸಬೇಕು. ಅರಣ್ಯ ನಾಶ ಆಗದಂತೆ ತಡೆಯಬೇಕು ಎಂದರು.

    ವೀಡಿಯೋ ಕಾನ್ಫರೆನ್ಸ್ನಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ, ಹಾಗೂ ಆನೆ ಸಂಘರ್ಷ ಇರುವ ವಲಯಗಳ ಉನ್ನತಾಧಿಕಾರಿಗಳು ಪಾಲ್ಗೊಂಡಿದ್ದರು.

  • ದುಡ್ಡು ಏನ್‌ ಮೊಟ್ಟೆಯಿಡುತ್ತಾ? – ಅರಣ್ಯ ಸಚಿವರಿಗೆ ಸಿಎಂ ಪ್ರಶ್ನೆ

    ದುಡ್ಡು ಏನ್‌ ಮೊಟ್ಟೆಯಿಡುತ್ತಾ? – ಅರಣ್ಯ ಸಚಿವರಿಗೆ ಸಿಎಂ ಪ್ರಶ್ನೆ

    ಬೆಂಗಳೂರು: ದುಡ್ಡು ಏನ್‌ ಮೊಟ್ಟೆಯಿಡುತ್ತಾ..? ದುಡ್ಡು ಇಲ್ವೇನ್ರಿ ನಿಮ್ ಹತ್ರ? ಏನು ಅರಣ್ಯ ಇಲಾಖೆ ಬಡ ಇಲಾಖೆನಾ..? ಹೀಗಂತ ಸಿಎಂ ಸಿದ್ದರಾಮಯ್ಯ (Siddaramaiah), ಅರಣ್ಯ ಇಲಾಖೆ ಸಚಿವ ಈಶ್ವರ್‌ ಖಂಡ್ರೆ (Eshwar Khandre) ಅವರಿಗೆ ಪ್ರಶ್ನೆ ಮಾಡಿದ ಪ್ರಸಂಗವೊಂದು ನಡೆಯಿತು.

    ಅರಣ್ಯ ಇಲಾಖೆಯ (Forest Department) ಹಮ್ಮಿಕೊಂಡಿದ್ದ ʻರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ-2025ʼ ಹುತಾತ್ಮರ ದಿನಾಚರಣೆಯ ಕಾರ್ಯಕ್ರಮಲ್ಲಿ ವೇದಿಕೆಯಲ್ಲೇ ಸಿಎಂ ಈ ರೀತಿ ಪ್ರಶ್ನೆ ಮಾಡಿದ್ರು. ಆನೆ ಹಾವಳಿ ಹೆಚ್ಚಾಗಿರುವ ಬಗ್ಗೆ ಮಾತಾನಾಡಿದ ಸಿಎಂ, ಇದಕ್ಕೆ ರೈಲ್ವೇ ಬ್ಯಾರಿಕೇಡ್ (Railway Barricade) ವ್ಯವಸ್ಥೆಗೆ ಸೂಚಿಸಿದ್ರು. ಈ ವೇಳೆ 410 ಕಿಮಿ ಆಗಿದೆ ಇನ್ನು 500 ಕಿಮಿ ಮಾಡಬೇಕು ಅಂತಾ ಖಂಡ್ರೆ ಹೇಳಿದ್ರು. ಸರಿ ಮಾಡಿ ದುಡ್ ಇಲ್ವಾ ನಿಮ್ ಇಲಾಖೆನಲ್ಲಿ? ಇದನ್ನೇ ಹೇಳ್ಕೊಂಡು ಕೂರೋದಲ್ಲ. ನಿಮ್ದು ಬಡ ಇಲಾಖೆ ಏನು ಅಲ್ವಲ್ಲ? ಅಂತಾ ಟಾಂಗ್ ಕೊಟ್ರು. ಇದನ್ನೂ ಓದಿ: Forest Martyrs Day | ಹುತಾತ್ಮರಿಗೆ 50 ಲಕ್ಷ ರೂ. ಪರಿಹಾರ: ಈಶ್ವರ್ ಖಂಡ್ರೆ

    ಬೋರ್ಡ್‌ನಲ್ಲಿ ರಿಜೆಕ್ಟ್ ಮಾಡ್ತಾರೆ ಸರ್, ಫೈನಾನ್ಸ್ ನಿಮ್ದೆ ಅಲ್ವಾ ಅಂತಾ ಖಂಡ್ರೆನೂ ಮರು ಉತ್ತರ ನೀಡಿದ್ರು‌. ಯಾರ್ರಿ ಅವ್ರು ರಿಜೆಕ್ಟ್ ಮಾಡೋರು ಕರ್ಕೊಂಡು ಬನ್ನಿ. ಅಂತಾ ಸಿಎಂ ಹೇಳಿದ್ರು. ಇನ್ನು ಈಗ ವೀರಪ್ಪನ್ ನಂತಹ ಚೋರನ ಕಾಟ ಇಲ್ಲ, ಈಗ ಮಾನವ – ಪ್ರಾಣಿಗಳ ಸಂಘರ್ಷವೇ ದೊಡ್ಡ ವಿಚಾರವಾಗಿದೆ. ವನ್ಯಜೀವಿಗಳ ಸಂಖ್ಯೆ ಹೆಚ್ಚಾಗಿದೆ ಕಾಡು ಕಡಿಮೆಯಾಗಿದೆ. ಹಿರಿಯ ಅಧಿಕಾರಿಗಳು ಮೊದಲು ಇದರ ಬಗ್ಗೆ ಗಮನ ಹರಿಸಿ ಕಾಡುಬೆಳೆಸಬೇಕು ಜೊತೆಗೆ ಕಾಡಿಗೆ ಹೋಗಬೇಕು ಆಗ ಕಿರಿಯ ಅಧಿಕಾರಿಗಳು ಉತ್ಸಾಹದಿಂದ ಕೆಲ್ಸ ಮಾಡ್ತಾರೆ ಅಂತಾ ಕಿವಿಮಾತು ಹೇಳಿದ್ರು. ಇದನ್ನೂ ಓದಿ: ಸಾಕಿದ ನಾಯಿಯ ಮೇಲೆ ಮಾರಣಾಂತಿಕ ಹಲ್ಲೆ – ಕರುಳು ಕಿತ್ತು ಬರುವಂತಿದೆ ಈ ದೃಶ್ಯ

    ಹುಲಿ ಚಿರತೆ ಆನೆಗಳು ಕಾಡು ಬಿಟ್ಟು ನಾಡಿಗೆ ಬರುತ್ತಿದೆ. ಅನೇಕರು ಇದ್ರಲ್ಲಿ ಸಾಯುತ್ತಿದ್ದಾರೆ. ಸರ್ಕಾರ ಹುತಾತ್ಮರಿಗೆ ಪರಿಹಾರ ಕೊಡೋದು ದೊಡ್ಡದಲ್ಲ. ಆದ್ರೇ ಮಾನವ – ಪ್ರಾಣಿಗಳ ಸಂಘರ್ಷ ಕಡಿಮೆಗೆ ಪ್ರಯತ್ನ ಪಡಬೇಕು. ಪ್ರಾಣಿಗಳು ಕಾಡು ಬಿಟ್ಟು ಯಾಕೆ ಹೊರಗೆ ಬರುತ್ತಿದೆ. ಇದು ಸವಾಲಿನ ಪ್ರಶ್ನೆಯಾಗಿದೆ. ಕಾಡಿನಲ್ಲಿ ಆಹಾರ ನೀರು ಸಿಕ್ಕರೆ ನಾಡಿಗೆ ಬರೋದು ಕಡಿಮೆಯಾಗುತ್ತದೆ. ಅರಣ್ಯ ಪ್ರದೇಶದ ಅಧಿಕಾರಿಗಳು ಇದನ್ನು ಮಾಡಲೇಬೇಕು. ಕಾಡಿನಲ್ಲಿ ನೀರು, ಆಹಾರದ ವ್ಯವಸ್ಥೆ ಸರಿಯಾಗಬೇಕು ಅಂದ್ರು. ಇದನ್ನೂ ಓದಿ: ನನ್ನ ರಕ್ತ ಬೆರಕೆಯಲ್ಲ, ಪ್ಯೂರ್‌ ಹಿಂದುತ್ವ – ಸಿಟಿ ರವಿ

  • ಅರಣ್ಯ ಇಲಾಖೆ ಸಿಬ್ಬಂದಿಯಿಂದ ಏಲಕ್ಕಿ ಬೆಳೆ ನಾಶ – ಲಕ್ಷಾಂತರ ರೂಪಾಯಿ ನಷ್ಟ, ರೈತರ ಆಕ್ರೋಶ

    ಅರಣ್ಯ ಇಲಾಖೆ ಸಿಬ್ಬಂದಿಯಿಂದ ಏಲಕ್ಕಿ ಬೆಳೆ ನಾಶ – ಲಕ್ಷಾಂತರ ರೂಪಾಯಿ ನಷ್ಟ, ರೈತರ ಆಕ್ರೋಶ

    – ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರೋ ಕೃಷಿಕ ದಂಪತಿ ಕಂಗಾಲು

    ಮಡಿಕೇರಿ: 2018-19ರಲ್ಲಿ ಪ್ರಕೃತಿ ವಿಕೋಪಕ್ಕೆ ನಲುಗಿ ಹೋಗಿದ ಮಡಿಕೇರಿ ತಾಲೂಕಿನ ಮುಕೋಡ್ಲು ಗ್ರಾಮದಲ್ಲಿ ಮತ್ತೆ ರೈತರ ಬದುಕು ಚಿಗುರೊಡೆದಿತ್ತು. ಅಳಿದುಳಿದ ಕೃಷಿ ಭೂಮಿಯಲ್ಲಿ ಕೃಷಿ ಚಟುವಟಿಕೆ ಗರಿಬಿಚ್ಚಿತ್ತು. ಕಾಫಿ, ಏಲಕ್ಕಿ (Cardamom And Coffee crop) ಬೆಳೆದು ಬದುಕು ಕಟ್ಟಿಕೊಳ್ಳುತ್ತಿದ್ರು. ಆದ್ರೆ ಏಕಾಏಕಿ ಬಂದ ಅರಣ್ಯ ಸಿಬ್ಬಂದಿ ರೈತನ ಕಾಫಿ‌ತೋಟ, ಏಲಕ್ಕಿ ತೋಟಕ್ಕೆ ನುಗ್ಗಿ ಈ ಜಾಗ ಅರಣ್ಯ ಪ್ರದೇಶಕ್ಕೆ ಸೇರಿದೆ ಅಂತ ತಕರಾರು ತೆಗೆದಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೇ ಕಾಫಿ ಗಿಡಗಳನ್ನ ಕಡಿದುಹಾಕಿದ್ದಾರೆ.

    ಅರಣ್ಯ ಸಿಬ್ಬಂದಿಯ ದುರ್ವರ್ತನೆಯಿಂದ ರೈತರಿಗೆ (Farmers) ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಇದರಿಂದಾಗಿ ಬೆಳೆಗಾರರು, ಗ್ರಾಮಸ್ಥರು ಅರಣ್ಯ ಇಲಾಖೆಯ ನಡೆಯನ್ನ ತೀವ್ರವಾಗಿ ಖಂಡಿಸಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ ನಿರಂತರ ಮಳೆಯಿಂದ ಕಾಫಿ ಬೆಳೆಗಾರರು ಕಂಗಾಲು – ಬಿಜೆಪಿ ನಿಯೋಗದಿಂದ ಸರ್ವೇ ಕಾರ್ಯ

    ಏಲಕ್ಕಿ ತೋಟದಲ್ಲಿ ನಡೆದಿದ್ದೇನು?
    ಮಡಿಕೇರಿ ತಾಲೂಕಿನ ಮುಕೋಡ್ಲು ಗ್ರಾಮ 2018-19 ರಲ್ಲಿ ಸಂಪೂರ್ಣವಾಗಿ ಪ್ರಕೃತಿ ವಿಕೋಪಕ್ಕೆ ನಲುಗಿ ಹೋಗಿತ್ತು. ಈ ಗ್ರಾಮದಲ್ಲಿ ಅಳಿದುಳಿದ ತೋಟಗಳಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡಿಕೊಂಡು ಇಲ್ಲಿನ ನೂರಾರು ಜನ ರೈತರು, ಬೆಳೆಗಾರರು ಮತ್ತೆ ಬದುಕು ಕಟ್ಟಿಕೊಳ್ಳುತ್ತಿದ್ದರು. ಇಂತಹ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಈ ಗ್ರಾಮದ ಕಲ್ಸೋಡ್ಸ್ ಎಂಬ ಪೈಸಾರಿ ಜಾಗದಲ್ಲಿ ಬೆಳೆದಿದ್ದ ನಾಣಿಯಪ್ಪ ಅವರಿಗೆ ಸೇರಿದ್ದ ಏಲಕ್ಕಿ ತೋಟದಲ್ಲಿ ಬೆಳೆಯನ್ನ ನಾಶ ಮಾಡಿದ್ದಾರೆ. ಏಲಕ್ಕಿ ತೋಟ ಹಾಗೂ ಕಾಫಿ ತೋಟದ ಜಾಗ ಅರಣ್ಯ ಪ್ರದೇಶಕ್ಕೆ ಒಳಪಟ್ಟಿದೆ ಅಂತ ಹೇಳಿದವರೇ ಭೂಮಾಲೀಕರಿಗೆ ಯಾವುದೇ ನೋಟಿಸ್ ಕೂಡ ಕೊಡದೇ ಏಕಾಏಕಿ ತೋಟಕ್ಕೆ ನುಗ್ಗಿ ಏಲಕ್ಕಿ ಮತ್ತು ಕಾಫಿ ಗಿಡಗಳನ್ನು ಕಡಿದು ಹಾಕಿದ್ದಾರೆ. ಇದರಿಂದ ಮಾಲೀಕರಿಗೆ 5 ಲಕ್ಷರೂಗಿಂಗಳೂ ಅಧಿಕ ವರಮಾನ ನಷ್ಟವಾಗಿದ್ದು, ಕಣ್ಣೀರಿಡುವಂತಾಗಿದೆ.

    ಕೃಷಿಕ ದಂಪತಿ ವೃದ್ಧರಾಗಿದ್ದಾರೆ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಪ್ರಸ್ತುತ ಕೃಷಿ ಕೈಗೊಂಡಿರುವ ಜಾಗವು ಪೈಸಾರಿ ಎಂಬ ದಾಖಲೆ ಲಭಿಸಿದೆ. ಆದರೂ ಸಹ ಅರಣ್ಯ ಇಲಾಖೆಯವರು ದೌರ್ಜನ್ಯ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಿರಂತರ ಮಳೆಯಿಂದ ಕೊಡಗಿನಲ್ಲಿ ಮತ್ತೆ ಭೂಕುಸಿತದ ಭೀತಿ

    ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ ಮಾಜಿ‌ ಸ್ಪೀಕರ್ ಕೆ.ಜಿ ಬೋಪಯ್ಯ, ಕೃಷಿಕ ದಂಪತಿಗಳೊಂದಿಗೆ ನ್ಯಾಯಕ್ಕಾಗಿ ಹೋರಾಟ ಮಾಡುತ್ತೇವೆ. ಅರಣ್ಯ ಇಲಾಖೆ ಪರಿಹಾರ ನೀಡಬೇಕು. ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಖುದ್ದಾಗಿ ಜಾಗ ಪರಿಶೀಲನೆ ಮಾಡಬೇಕು. ಏಲಕ್ಕಿ ಕೊಯ್ಲು ಮಾಡುವ ಸಂದರ್ಭವೇ ಗಿಡಗಳನ್ನು ತುಂಡರಿಸಿದ್ದಾರೆ. ಜಿಲ್ಲಾಧಿಕಾರಿ ತಕ್ಷಣ ಮಧ್ಯೆ ಪ್ರವೇಶಿಸಿ ಈ ಜಾಗ ಪೈಸಾರಿಯೋ ಅಥವಾ ಅರಣ್ಯ ಇಲಾಖೆಗೆ ಸೇರಿದ್ದೂ ಎಂಬುದನ್ನು ಮೊದಲು ಬಹಿರಂಗಪಡಿಸಲಿ ಎಂದು ಆಗ್ರಹಿಸಿದ್ದಾರೆ.

    50 ವರ್ಷದಿಂದ ಕೃಷಿ ಮಾಡಿಕೊಂಡು ಬಂದಿರುವ ಜಾಗಕ್ಕೆ ದಾಖಲೆ ಒದಗಿಸುವಂತೆ ಈಗಾಗಲೇ ಕಂದಾಯ ಇಲಾಖೆಗೆ 50, 53, 57ರಡಿ ಅರ್ಜಿ ಹಾಕಿದ್ದಾರೆ. ಭೋಗ್ಯದ ಯೋಜನೆಗೂ ಅರ್ಜಿ ಹಾಕಿದ್ದಾರೆ. ಈ ನಡುವೆ ಅರಣ್ಯ ಇಲಾಖೆ ದೌರ್ಜನ್ಯ ಎಸಗಿರುವುದು ಅಕ್ಷಮ್ಯ ಅಪರಾಧ. ಈಗಾಗಲೇ 33/2 ಸರ್ವೆ ನಂಬರ್‌ನಲ್ಲಿ ವಿಭಾಗ ಮಾಡಿ 60 ಎಕ್ರೆ ಜಾಗದ ಪೈಕಿ 4.50 ಸೆಂಟ್ ಜಾಗವನ್ನು ಸ್ಥಳೀಯ ವ್ಯಕ್ತಿಗೆ ದಾಖಲಾತಿ ಮಾಡಿಕೊಟ್ಟಿದ್ದಾರೆ. ಇವರಿಗೆ ಮಾತ್ರ ಮಾಡಿಕೊಟ್ಟಿಲ್ಲ. ರೈತರನ್ನು ಕೆರಳಿಸಲು, ಉದ್ದೇಶಪೂರ್ವಕವಾಗಿ ರೈತರನ್ನು ಕೆಣಕುವ ಯತ್ನಕ್ಕೆ ಅರಣ್ಯ ಇಲಾಖೆ ಕೈ ಹಾಕಿದೆ ಎಂದು ಅಕ್ರೋಶ ಹೋರ ಹಾಕಿದ್ರು. ಇದನ್ನೂ ಓದಿ: ಕೊಡಗಿನಲ್ಲಿ ನಿರಂತರ ಗಾಳಿ ಮಳೆಯಿಂದ ಹರಡುತ್ತಿದೆ ವೈರಲ್ ಫೀವರ್‌ – ಒಂದೇ ತಿಂಗಳಲ್ಲಿ 3,000 ಕೇಸ್‌

    \

  • ಹುಲಿ ಹಿಡಿಯಲು ವಿಫಲ – ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಬೋನಿಗೆ ಕೂಡಿ ಹಾಕಿದ ಜನ

    ಹುಲಿ ಹಿಡಿಯಲು ವಿಫಲ – ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಬೋನಿಗೆ ಕೂಡಿ ಹಾಕಿದ ಜನ

    ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನಲ್ಲಿ ಅರಣ್ಯ ಪ್ರದೇಶ ಹೆಚ್ಚಿದೆ. ಅರಣ್ಯದ ಅಂಚಿನ ಗ್ರಾಮಗಳಿಗೆ ಹುಲಿ, ಚಿರತೆಗಳು ನುಗ್ಗಿ ಜನ – ಜಾನುವಾರುಗಳ ಮೇಲೆ ದಾಳಿ ಮಾಡುವುದು ಸಾಮಾನ್ಯವಾಗಿದೆ. ಜೀವ ಭಯದಲ್ಲಿರುವ ಜನರಿಗೆ ಅರಣ್ಯ ಇಲಾಖೆ ನೆರವು ನೀಡುತ್ತಿಲ್ಲ ಎಂದು ಆರೋಪಿಸಿ, ಹುಲಿ ಹಿಡಿಯಲು ಇಟ್ಟಿದ್ದ ಬೋನಿನಲ್ಲಿ ಸಿಬ್ಬಂದಿ ಕೂಡಿ ಹಾಕಿದ ಘಟನೆ ತಾಲೂಕಿನ ಬೊಮ್ಮಲಾಪುರದಲ್ಲಿ ನಡೆದಿದೆ.

    ಹುಲಿ, ಚಿರತೆ ದಾಳಿಗೆ ಬೇಸತ್ತ ರೈತರು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಆಕ್ರೋಶ ವ್ಯಕ್ತಪಡಿಸಿ, ಸ್ಥಳಕ್ಕೆ ಹುಲಿ ಹಿಡಿಯಲು ಎಂದು ಬಂದಿದ್ದ ಅರಣ್ಯ ಇಲಾಖೆ ಸಿಬ್ಬಂದಿಯನ್ನ ಜನರು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಾಣ ಭಯದಲ್ಲಿ ಜೀವ ನಡೆಸುತ್ತಿರುವ ನಮಗೆ ರಕ್ಷಣೆ ನೀಡುತ್ತಿಲ್ಲ ಎಂದು ಜಮೀನಿನಲ್ಲಿ ಇದ್ದ ಬೋನಿನಲ್ಲಿ ಸಿಬ್ಬಂದಿ ಕೂಡಿ ಹಾಕಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಳೆದ 2 ತಿಂಗಳಿನಿಂದ ಗ್ರಾಮದ ಹೊರವಲಯದಲ್ಲಿ ಹುಲಿ ಹಾಗೂ ಚಿರತೆ ಕಾಣಿಸಿಕೊಳ್ಳುತ್ತಿವೆ. ಈ ಬಗ್ಗೆ ಜನರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅದರಂತೆ, ಬೊಮ್ಮಲಾಪುರ ಗ್ರಾಮದ ಗಂಗಪ್ಪ ಎಂಬವರ ಜಮೀನಿನಲ್ಲಿ ಬೋನು ಇಡಲಾಗಿದೆ. ಮಂಗಳವಾರ ಹುಲಿ ಮತ್ತೆ ಕಾಣಿಸಿಕೊಂಡಿದ್ದು, ಈ ಬಗ್ಗೆ ಜನರು ಅರಣ್ಯ ಸಿಬ್ಬಂದಿಗೆ ಮಾಹಿತಿ ರವಾನಿಸಿದ್ದಾರೆ.

    ಜಾನುವಾರುಗಳ ಮೇಲೆ ದಾಳಿ:
    ತಿಂಗಳಿನಿಂದ ಗ್ರಾಮದ ಸುತ್ತಲೂ ಓಡಾಡುತ್ತಿರುವ ಹುಲಿ ಜಾನುವಾರುಗಳ ಮೇಲೆ ದಾಳಿ ಮಾಡಿ ಕೊಂದು ಹಾಕಿತ್ತು. ರೈತರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆ ಬೋನ್ ಇರಿಸಿತ್ತು. ನಂತರ ಅರಣ್ಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಇತ್ತ ಸುಳಿಯದೇ ಇರುವುದು ರೈತರು ಪಿತ್ತ ನೆತ್ತಿಗೇರಿಸಿತ್ತು.

    ಅರಣ್ಯ ಇಲಾಖೆ ಸಿಬ್ಬಂದಿಯನ್ನ ಬೋನ್​​ನಲ್ಲಿ ಇರಿಸಿದ ಬಗ್ಗೆ ಮಾಹಿತಿ ಪಡೆದ ಗುಂಡ್ಲುಪೇಟೆ ವಲಯದ ಎಸಿಎಫ್ ಸುರೇಶ್ ಹಾಗೂ ಬಂಡೀಪುರ ವಲಯದ ಎಸಿಎಫ್ ನವೀನ್ ಕುಮಾರ್ ಸ್ಥಳಕ್ಕೆ ಭೇಟಿ‌ ನೀಡಿದ್ದಾರೆ. ಈ ವೇಳೆ, ರೈತರು ಹಾಗೂ ಅರಣ್ಯಾಧಿಕಾರಿಗಳ ನಡುವೆ ಮಾತಿನ‌ ಚಕಮಕಿ ನಡೆಯಿತು. ಕಾಡುಪ್ರಾಣಿಗಳ ಭೀತಿಯಲ್ಲಿ ನಾವು ಜೀವನ ನಡೆಸುತ್ತಿದ್ದೇವೆ. ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು. ಬಳಿಕ ಸಿಬ್ಬಂದಿಯನ್ನ ಬೋನಿನಿಂದ ಹೊರ ಬಿಡುವಂತೆ ಅರಣ್ಯ ಇಲಾಖೆ ಸಿಬ್ಬಂದಿ ಮನವೊಲಿಸಿದರು.

  • ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಹೊಸ ಪ್ರಯೋಗ – ಫಾರ್ಮ್ ಗಾರ್ಡ್ ಡಿವೈಸ್ ಮೂಲಕ ಅರಣ್ಯ ಇಲಾಖೆ ಕಾರ್ಯಾಚರಣೆ

    ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಹೊಸ ಪ್ರಯೋಗ – ಫಾರ್ಮ್ ಗಾರ್ಡ್ ಡಿವೈಸ್ ಮೂಲಕ ಅರಣ್ಯ ಇಲಾಖೆ ಕಾರ್ಯಾಚರಣೆ

    ರಾಮನಗರ: ಜಿಲ್ಲೆಯಲ್ಲಿ ಕಾಡಾನೆಗಳ (Wild Elephant) ಹಾವಳಿ ಮಿತಿಮೀರಿದ್ದು, ಅರಣ್ಯದಿಂದ ಜನವಸತಿ ಪ್ರದೇಶಕ್ಕೆ ಬರುವ ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಅರಣ್ಯ ಇಲಾಖೆ (Forest Department) ಹೊಸ ಪ್ರಯೋಗ ಮಾಡಿದೆ.

    ಆನೆ ಕಂದಕ, ರೈಲ್ವೆ ಬ್ಯಾರಿಕೇಡ್‌ಗಳನ್ನ ನುಸುಳಿ ಗ್ರಾಮದತ್ತ ಬರುವ ಕಾಡಾನೆಗಳ ತಡೆಗೆ ಫಾರ್ಮ್ ಗಾರ್ಡ್ (Farm Guard) ಡಿವೈಸ್ ಎಂಬ ಎಲೆಕ್ಟ್ರಾನಿಕ್ ಉಪಕರಣ ಬಳಕೆ ಮಾಡಿ ಕಾಡಾನೆಗಳನ್ನು ಹಿಮ್ಮೆಟ್ಟಿಸುವ ಪ್ರಯೋಗ ಯಶಸ್ವಿಯಾಗಿದೆ. ಆನೆಗಳು ಕಾಡಿನಿಂದ ಆಚೆ ಬರುವಾಗ ಡಿವೈಸ್‌ನಲ್ಲಿರುವ ಸೆನ್ಸಾರ್ ಆನೆಗಳನ್ನು ಗುರುತಿಸಿ ಬಳಿಕ ವಿಚಿತ್ರ ಶಬ್ದ, ಬೆಳಕಿನ ಮೂಲಕ ಕಾಡಾನೆಗಳನ್ನು ವಾಪಸ್ ಕಾಡಿಗೆ ಓಡಿಸುತ್ತವೆ. ಈ ಡಿವೈಸ್ ನಲ್ಲಿರುವ ಸೆನ್ಸಾರ್‌ನಿಂದ ಕಾಡು ಪ್ರಾಣಿಗಳ ಚಲನವಲನಗಳ ಮೇಲೆ ನಿಗಾ ಇಡಲಿದ್ದು, ಕಾಡಿನಿಂದ ಆನೆಗಳು ಆಚೆ ಬರುವುದನ್ನ ತಡೆಯುವುದಲ್ಲದೇ, ತಕ್ಷಣ ಆನೆ ಕಾರ್ಯಪಡೆ ತಂಡಕ್ಕೆ ಮೊಬೈಲ್ ಮೂಲಕವೇ ವೀಡಿಯೋ ಸಹಿತ ಸಂದೇಶವನ್ನ ಕಳುಹಿಸಿಕೊಡುತ್ತದೆ. ಇದನ್ನೂ ಓದಿ: ದಸರಾ ಬಳಿಕ ಬಿಹಾರ ವಿಧಾನಸಭೆ ಚುನಾವಣೆ ದಿನಾಂಕ ನಿಗದಿ – ಚುನಾವಣಾ ಆಯೋಗದ ಮೂಲಗಳ ಹೇಳಿಕೆ

    ಸದ್ಯ ಕನಕಪುರ ಹಾಗೂ ಚನ್ನಪಟ್ಟಣದಲ್ಲಿ ಎರಡು ಡಿವೈಸ್‌ಗಳನ್ನು ಅರಣ್ಯ ಇಲಾಖೆ ಇಟ್ಟಿದ್ದು, ಇದರಿಂದ ಕಾಡಾನೆಗಳನ್ನು ಹಿಮ್ಮೆಟ್ಟಿಸುವ ಪ್ರಯತ್ನ ಯಶಸ್ವಿಯಾಗಿದೆ. ಕಾಡಂಚಿನ ಗ್ರಾಮಗಳಲ್ಲಿ ಈ ಡಿವೈಸ್‌ಗಳ ಅಳವಡಿಕೆಗೆ ಅರಣ್ಯ ಇಲಾಖೆ ತಯಾರಿ ನಡೆಸಿದ್ದು, ಇದರಿಂದ ರೈತರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗೂ ಅನುಕೂಲವಾಗಲಿದೆ. ಅಲ್ಲದೇ ಸಬ್ಸಿಡಿ ದರದಲ್ಲಿ ರೈತರಿಗೆ ಫಾರ್ಮ್ ಗಾರ್ಡ್ ಡಿವೈಸ್ ವಿತರಿಸಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ ಎಂದು ಡಿಸಿಎಫ್ ರಾಮಕೃಷ್ಣಪ್ಪ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಜಿಎಸ್‌ಟಿ ಸುಧಾರಣೆ; ಮೋದಿ ಸರ್ಕಾರದಿಂದ ರಾಷ್ಟ್ರದ ಜನತೆಗೆ ದೀಪಾವಳಿ ಕೊಡುಗೆ – ಹೆಚ್‌ಡಿಕೆ ಹರ್ಷ

  • ವಿಷ್ಣು ಸಮಾಧಿ ಇದ್ದ ಅಭಿಮಾನ್ ಸ್ಟುಡಿಯೋ ಮುಟ್ಟುಗೋಲು?

    ವಿಷ್ಣು ಸಮಾಧಿ ಇದ್ದ ಅಭಿಮಾನ್ ಸ್ಟುಡಿಯೋ ಮುಟ್ಟುಗೋಲು?

    ಬೆಂಗಳೂರು: ವಿವಾದದಿಂದ ಕೂಡಿದ್ದ ಬೆಂಗಳೂರಿನ ಅಭಿಮಾನ್ ಸ್ಟುಡಿಯೋ (Abhiman Studio) ಮುಟ್ಟುಗೋಲು ಹಾಕಲು ಅರಣ್ಯ ಇಲಾಖೆ (Forest Department) ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ.

    ಇದೇ ಆಗಸ್ಟ್ 7 ರಂದು ರಾತ್ರೋರಾತ್ರಿ ಅಭಿಮಾನ್ ಸ್ಟುಡಿಯೋದಲ್ಲಿದ್ದ ಕನ್ನಡದ ಮೇರುನಟ ಸಾಹಸಸಿಂಹ ಡಾ. ವಿಷ್ಣುವರ್ಧನ್ (Dr Vishnuvardhan) ಅವರ ಸಮಾಧಿಯನ್ನ ಧ್ವಂಸ ಮಾಡಲಾಗಿತ್ತು. ಈ ಕಾರಣಕ್ಕೆ ಭಾರೀ ವಿವಾದಕ್ಕೀಡಾಗಿದ್ದ ಜಾಗವನ್ನ ಇದೀಗ ಸರ್ಕಾರ ವಶಪಡಿಸಿಕೊಳ್ಳುವಂತೆ ಅರಣ್ಯ ಇಲಾಖೆ ಡಿಸಿ ಜಗದೀಶ್ ಅವರಿಗೆ ಪತ್ರ ಬರೆದಿದೆ.

    ಬೆಂಗಳೂರು ದಕ್ಷಿಣ ತಾಲೂಕು ಕೆಂಗೇರಿ ಹೋಬಳಿ, ಮೈಲಸಂದ್ರ ಗ್ರಾಮಕ್ಕೆ ಸೇರಿದ ಸರ್ವೇ ನಂ, 26ರಲ್ಲಿ ಅಭಿಮಾನ್ ಸ್ಟುಡಿಯೋಗೆ ಸರ್ಕಾರ ನೀಡಿರುವ ಅರಣ್ಯ ಪ್ರದೇಶ ಆದೇಶವನ್ನು ರದ್ದು ಪಡಿಸಿ ಹಿಂಪಡೆಯುವ ಬಗ್ಗೆ ಅರಣ್ಯ ಇಲಾಖೆ ಪತ್ರದಲ್ಲಿ ಉಲ್ಲೇಖಿಸಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್ ರವೀಂದ್ರಕುಮಾರ್ ಅವರು ಪತ್ರ ಬರೆದಿದ್ದಾರೆ. ಇದನ್ನೂ ಓದಿ: ರೋಷನ್ ಕೋಟಿ ಕೋಟಿ ಒಡೆಯ ಎಂದವರಿಗೆ ಅನುಶ್ರೀ ಕ್ಲ್ಯಾರಿಟಿ ಏನು?

     

    ಪತ್ರದಲ್ಲಿ ಏನಿದೆ?
    ಸರ್ಕಾರಿ ಆದೇಶದ ಅನ್ವಯ ಏಪ್ರಿಲ್‌ 09, 1969 ರಂದು 20 ಎಕರೆ ಪ್ರದೇಶವನ್ನು ಟಿ ಎನ್ ಬಾಲಕೃಷ್ಣ ಅವರಿಗೆ ಅಭಿಮಾನ್ ಚಿತ್ರ ಸ್ಟುಡಿಯೋ ಸ್ಥಾಪಿಸುವ ಸಲುವಾಗಿ 20 ವರ್ಷಗಳ ಅವಧಿಗೆ ಗೇಣಿ ಆಧಾರದ ಮೇಲೆ ನೀಡಲಾಗಿತ್ತು. ಸರ್ಕಾರಿ ಆದೇಶದಲ್ಲಿ ಅಭಿಮಾನ್ ಸ್ಟಡಿಯೋ ಅಭಿವೃದ್ಧಿ ಹೊರತಾಗಿ ಬೇರೆ ಯಾವುದೇ ಉದ್ದೇಶಕ್ಕೆ ಬಳಸದಿರಲು ಮಾರಾಟ/ ಪರಭಾರೆ ಕೊಡದಿರಲು ಷರತ್ತು ವಿಧಿಸಲಾಗಿತ್ತು. ಇದನ್ನೂ ಓದಿ: ಕೆಜಿಎಫ್ ಖ್ಯಾತಿಯ ಹರೀಶ್ ರಾಯ್ ಸಹಾಯಕ್ಕೆ ನಿಂತ ಧ್ರುವ ಸರ್ಜಾ

    ಉಲ್ಲಂಘನೆಯಾದಲ್ಲಿ ಮಂಜೂರಾತಿ ರದ್ಧುಪಡಿಸಿ ಭುಮಿಯನ್ನು ಸರ್ಕಾರ ಹಿಂಪಡೆಯಲಾಗುವುದು ಎನ್ನುವ ಆದೇಶ ಸ್ಪಷ್ಟವಾಗಿ ನಮೂದಿಸಲಾಗಿತ್ತು. ಇದನ್ನ ಮನವಿ ಪತ್ರದಲ್ಲಿ ಮತ್ತೆ ಸೂಚಿಸಿ ಅರಣ್ಯ ಇಲಾಖೆ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

    ಬಾಲಕೃಷ್ಣ ನಿಧನದ ಬಳಿಕ ಅವರ ಮಕ್ಕಳಾದ ಗಣೇಶ್ ಹಾಗೂ ಮೊಮ್ಮಗ ಕಾರ್ತಿಕ್ ಅನಧಿಕೃತವಾಗಿ 10 ಎಕರೆ ಆಸ್ತಿ ಮಾರಾಟ ಮಾಡಿದ್ದಾರೆ ಎಂದು ನಮೂದಿಸಲಾಗಿದೆ. ಅಭಿಮಾನ್ ಸ್ಟುಡಿಯೋ ನವೀಕರಣ ಮಾಡುವ ಸಲುವಾಗಿ ಬೇಕಾಗುವ ಹಣಕ್ಕಾಗಿ ಆಸ್ತಿ ಮಾರಾಟಕ್ಕೆ ಅನುಮತಿ ಕೇಳಿ ಮಾರಿದ್ದರು. ಇಲ್ಲಿಯೂ ಉದ್ದೇಶವನ್ನು ಉಲ್ಲಂಘನೆ ಮಾಡಿದ್ದಾರೆ ಎಂಬುದಾಗಿ ಪತ್ರದಲ್ಲಿ ಉಲೇಖವಾಗಿದೆ.

  • ಕೊಡಗು ಜಿಲ್ಲೆಯಲ್ಲಿ ಮಿತಿಮೀರಿದ ಕಾಡಾನೆಗಳ ಉಪಟಳ – ಎಚ್ಚರಿಕೆ ನೀಡಲು AI ಸೈರನ್ ಅಳವಡಿಕೆ

    ಕೊಡಗು ಜಿಲ್ಲೆಯಲ್ಲಿ ಮಿತಿಮೀರಿದ ಕಾಡಾನೆಗಳ ಉಪಟಳ – ಎಚ್ಚರಿಕೆ ನೀಡಲು AI ಸೈರನ್ ಅಳವಡಿಕೆ

    ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ ಆನೆ ಮಾನವನ ಸಂಘರ್ಷಕ್ಕೆ ಮೀತಿಯೇ ಇಲ್ಲದಂತೆ ಆಗಿದೆ. ಆನೆಗಳ ಚಲನವಲನದ ಬಗ್ಗೆ ಎಚ್ಚರಿಕೆ ನೀಡಲು ಎಐ ಆಧಾರಿತ ಸೈರನ್ (AI Siren) ವ್ಯವಸ್ಥೆ ರೂಪಿಸಲಾಗಿದೆ.

    ಕೊಡಗು ಜಿಲ್ಲೆಯಲ್ಲಿ ದಿನ ಬೆಳಗಾದ್ರೆ ಸಾಕು ವನ್ಯಜೀವಿ (WildLife) ಕಾಡಾನೆಗಳ ಉಪಟಳ ಹೆಚ್ಚಾಗಿರುತ್ತದೆ. ಹೀಗಾಗಿ ವನ್ಯಜೀವಿಗಳ ಸಂಚಾರಕ್ಕೆ ಸಂಬಂಧಿಸಿದ ಅಹಿತಕರ ಘಟನೆಗಳನ್ನು ತಡೆಗಟ್ಟುವ ಸಲುವಾಗಿ ಕೊಡಗಿನಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಹೊಸ ಯೋಜನೆ ಕೈಗೊಳ್ಳಲಾಗುತ್ತಿದೆ. ಈ ಕ್ರಮಕ್ಕೆ ಖಾಸಗಿ ಕಂಪನಿಯೊಂದು ಹಣಕಾಸು ಒದಗಿಸಿದ್ದು, ಸರ್ಕಾರೇತರ ಸಂಸ್ಥೆಯಿಂದ ಸೈರನ್ ವ್ಯವಸ್ಥೆ ಅಳವಡಿಸಲಾಗಿದೆ. ಕೊಡಗಿನ ವಿರಾಜಪೇಟೆಯಾದ್ಯಂತ (Virajapete) ವನ್ಯಜೀವಿಗಳ ಚಲನೆಯ ಬಗ್ಗೆ ನಿವಾಸಿಗಳಿಗೆ ಎಚ್ಚರಿಕೆ ನೀಡಲು ಸೈರನ್ ವ್ಯವಸ್ಥೆಯನ್ನ ಸ್ನೇಹ ಸಂಸ್ಥೆ ಪ್ರಾಯೋಗಿಕವಾಗಿ ಆರಂಭಿಸಿದೆ.

    ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ, ಬಡಗ, ಬನಂಗಾಲ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಂಘರ್ಷ ವಲಯಗಳಲ್ಲಿ 12 ಅಂತಹ ಸೈರನ್‌ಗಳನ್ನ ಸ್ಥಾಪಿಸುವ ಎನ್‌ಜಿಓ ಕೆಲಸ ಮಾಡಿದೆ. ಈ ಯೋಜನೆ ಪ್ರಸ್ತುತ ಪ್ರಾಯೋಗಿಕ ಹಂತದಲ್ಲಿದ್ದರೂ, ಸ್ವಯಂಚಾಲಿತ ಎಚ್ಚರಿಕೆ ವ್ಯವಸ್ಥೆಗಳನ್ನ ಪರಿಚಯಿಸುವ ಮೂಲಕ ಸ್ನೇಹ ಸಂಸ್ಥೆ ಕೆಲಸ ಮಾಡ್ತಿದೆ.

    ಈಗಾಗಲೇ ಈ ಗ್ರಾಮದಲ್ಲಿ ಆನೆ ಕಂದಕ ಸೋಲಾರ್ ವಿದ್ಯುತ್ ತಂತಿಬೇಲಿ ಅಳವಡಿಕೆ ಮಾಡಿದ್ರು ಕಾಡಾನೆಗಳ ಉಪಟಳ ಕಡಿಮೆ ಆಗಿರಲಿಲ್ಲ. ಇದರಿಂದ ಗ್ರಾಮೀಣ ಭಾಗದ ಜನರು ಮನೆಯಿಂದ ಹೋರ ಬರಲು ಹಿಂದೆಟ್ಟು ಹಾಕುತ್ತಿದ್ರು. ಆದರೀಗ ಎಐ ಆಧಾರಿತ ಸೈರನ್ ಅಳವಡಿಕೆ ಮಾಡಿರುವುದರಿಂದ ಕಾಡಂಚಿನ ಜನರು ಓಡಾಟ ನಡೆಸುತ್ತಿದ್ದಾರೆ.

    ಎಐ ಸೈರನ್‌ ಹೇಗೆ ಕೆಲಸ ಮಾಡುತ್ತೆ?
    ಇನ್ನೂ ಎಐ ಆಧಾರಿತ ವ್ಯವಸ್ಥೆಯ ಮೂಲಕ, ಆನೆಯ ಚಲನೆಯನ್ನು ಪತ್ತೆಹಚ್ಚಲಾಗುತ್ತದೆ. ಅಲ್ಲದೇ, ಆನೆಯಿದ್ದ ಸ್ಥಳವನ್ನಾಧರಿಸಿ, ಒಂದು ಕಿಲೋಮೀಟರ್ ವ್ಯಾಪ್ತಿಯೊಳಗೆ ನಿವಾಸಿಗಳನ್ನ ಎಚ್ಚರಿಸಲು ಸೈರನ್ ಮೊಳಗುತ್ತದೆ. ಹೀಗಾಗಿ ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನರು, ಶಾಲಾ ಕಾಲೇಜು ಮಕ್ಕಳು ಯಾವುದೇ ಭಯ ಇಲ್ಲದೇ ಹೆಜ್ಜೆ ಹಾಕುತ್ತಿದ್ದಾರೆ. ನಿತ್ಯ ಕಾಫಿ ತೋಟಗಳಲ್ಲಿ ಕಾಡಾನೆ ಹಿಂಡುಗಳು ಕಂಡು ಬರುತ್ತಿದ್ದ ಹಿನ್ನೆಲೆಯಲ್ಲಿ ಶಾಲೆಗಳಿಗೆ ತಮ್ಮ ಮಕ್ಕಳನ್ನ ಕಳಿಸಲು ಪೋಷಕರು ಹಿಂದೆಟ್ಟು ಹಾಕುತ್ತಿದ್ರು. ಇದೀಗ ಆನೆಗಳ ಚಲನವಲನದ ಬಗ್ಗೆ ಎಚ್ಚರಿಕೆ ನೀಡಲು ಎಐ ಆಧಾರಿತ ಸೈರನ್ ವ್ಯವಸ್ಥೆ ರೂಪಿಸಿರುವ ಹಿನ್ನಲೆಯಲ್ಲಿ ಕಳೆದ ಕೆಲ ದಿನಗಳಿಂದ ಸರ್ಕಾರಿ ಶಾಲೆಗಳತ್ತ ಮಕ್ಕಳು ಹೆಜ್ಜೆ ಹಾಕುತ್ತಿದ್ದಾರೆ.

    ಒಟ್ಟಿನಲ್ಲಿ ಆಧಾರಿತ ವ್ಯವಸ್ಥೆಯ ಮೂಲಕ, ಆನೆಯ ಚಲನೆಯನ್ನು ಪತ್ತೆಹಚ್ಚಲಾಗುತ್ತಿದೆ. ಆನೆಯಿದ್ದ ಸ್ಥಳವನ್ನ ಆಧರಿಸಿ, ಒಂದು ಕಿಲೋಮೀಟರ್ ವ್ಯಾಪ್ತಿಯೊಳಗೆ ನಿವಾಸಿಗಳನ್ನು ಎಚ್ಚರಿಸಲು ಸೈರನ್ ಮೊಳಗಲಿದೆ.