Tag: ಅರಣ್ಯ ಅಧಿಕಾರಿಗಳು

  • 3.80 ಲಕ್ಷ ಮೌಲ್ಯದ ಬೀಟೆ ನಾಟಾಗಳ ವಶ

    3.80 ಲಕ್ಷ ಮೌಲ್ಯದ ಬೀಟೆ ನಾಟಾಗಳ ವಶ

    ಮಡಿಕೇರಿ: ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಸಮೀಪದ ದೊಡ್ಡಕೊಳತ್ತೂರು ಗ್ರಾಮದಿಂದ ಗೂಡ್ಸ್ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 3.80 ಲಕ್ಷ ರೂ. ಮೌಲ್ಯದ ನಾಟಾಗಳನ್ನು ಅರಣ್ಯ ವಲಯಾಧಿಕಾರಿ ವಶಪಡಿಸಿಕೊಂಡಿದ್ದಾರೆ.

    ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಕೊಳತ್ತೂರು ಗ್ರಾಮದ ಕಾಫಿತೋಟದಿಂದ ಅರಕಲಗೂಡಿಗೆ ಮೂವರು ಆರೋಪಿಗಳು ಗೂಡ್ಸ್ ಪಿಕಪ್ ವಾಹನದಲ್ಲಿ ಅಕ್ರಮವಾಗಿ ನಾಟಾಗಳನ್ನು ಸಾಗಿಸುತ್ತಿದ್ದರು. ಈ ವೇಳೆ ಅರಣ್ಯ ವಲಯಾಧಿಕಾರಿ ಕೆ.ಕೊಟ್ರೇಶ್ ಹಾಗೂ ಸಿಬ್ಬಂದಿ ವಾಹನವನ್ನು ಪರಿಶೀಲನೆ ಮಾಡಿದ್ದು, ವಾಹನ ಜೊತೆಗೆ 3.80 ಲಕ್ಷ ಮೌಲ್ಯದ 3 ಬೀಟೆ ನಾಟಾಗಳನ್ನು ವಶಪಡಿಸಿಕೊಂಡಿದ್ದಾರೆ.

    ಗುಂಡೂರಾವ್ ಬಡಾವಣೆಯ ಎಚ್.ಎನ್.ಪುನೀತ್ ಹಾಗೂ ಜಾಬಿಕೋಡಿ ಗ್ರಾಮದ ಡಿ.ವಿ.ವಿನಯ್ ಬಂಧಿತ ಆರೋಪಿಗಳು. ಶಿರಂಗಾಲ ಗ್ರಾಮದ ಆರೋಪಿ ಸಾಬು ತಲೆಮರೆಸಿಕೊಂಡಿದ್ದಾನೆ. ವಿಜಯಕುಮಾರ್ ತೋಟದಿಂದ ವಾಹನದಲ್ಲಿ ಅರಕಲಗೂಡಿಗೆ ಸಾಗಿಸುವಾಗ ದೊರೆತ ಮಾಹಿತಿ ಅನ್ವಯ ಹೊಸೂರು ರಸ್ತೆಯ ಬಾಪೂಜಿ ವಿದ್ಯಾಸಂಸ್ಥೆಯ ಬಳಿ ಅಡ್ಡಗಟ್ಟಿ ವಶಪಡಿಸಿಕೊಳ್ಳಲಾಗಿದೆ.

    ಅರಣ್ಯ ವಲಯಾಧಿಕಾರಿ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತಾರೆ.

  • ತಿಥಿಗೆ ಬಾಡಿಗೆಗೆ ಸಿಗುತ್ತೆ ಕಾಗೆ- ವೈರಲ್ ಆಯ್ತು ಯುವಕನ ಪೋಸ್ಟ್

    ತಿಥಿಗೆ ಬಾಡಿಗೆಗೆ ಸಿಗುತ್ತೆ ಕಾಗೆ- ವೈರಲ್ ಆಯ್ತು ಯುವಕನ ಪೋಸ್ಟ್

    – ಕಾಗೆಯನ್ನ ಕಾಡಿಗೆ ಬಿಟ್ಟ ಅರಣ್ಯಾಧಿಕಾರಿಗಳು

    ಬೆಂಗಳೂರು: ಉಪಾಯ ಇದ್ದರೆ ಯಾವುದು ವ್ಯರ್ಥವಾಗುವುದಿಲ್ಲ ಎಂಬುದಕ್ಕೆ ಉಡುಪಿಯ ನಿವಾಸಿಯೊಬ್ಬರು ತಾಜಾ ಉದಾಹರಣೆಯಾಗಿದ್ದಾರೆ.

    ಯಾವುದೇ ಕುಟುಂಬದಲ್ಲಿ ಸಾವು ಸಂಭವಿಸುವ ಸಂದರ್ಭದಲ್ಲಿ ತಿಥಿ ಕಾರ್ಯಗಳು ಸಾಂಪ್ರದಾಯಿಕವಾಗಿ ನಡೆಯುತ್ತದೆ. ಈ ಸಂದರ್ಭದಲ್ಲಿ ಮೃತರಿಗೆ ಪ್ರಿಯವಾದ ಆಹಾರಗಳನ್ನು ಅರ್ಪಿಸುತ್ತೇವೆ. ಆದರೆ ಈ ವೇಳೆ ಕಾಗೆ ಅನ್ನ ತಿನ್ನದಿದ್ದರೆ ಮೃತರ ಕುಟುಂಬಸ್ಥರು ನೊಂದುಕೊಳ್ಳುತ್ತಾರೆ. ಇದನ್ನೇ ಮನಗಂಡ ಯುವಕರೊಬ್ಬರು ಬ್ಯುಸಿನೆಸ್ ಮಾಡಿಕೊಂಡಿದ್ದಾರೆ.

    ಉಡುಪಿ ಜಿಲ್ಲೆಯ ಪ್ರಶಾಂತ್ ಪೂಜಾರಿ ಎಂಬವರು ಈ ಕಾರ್ಯದಲ್ಲಿ ತೊಡಗಿದ್ದು, ಶ್ರಾದ್ಧ, ತಿಥಿ ಕಾರ್ಯಕ್ರಮಗಳಿಗೆ ಕಾಗೆ ಬೇಕಾದರೆ ಬಾಡಿಗೆಗೆ ದೊರೆಯುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಹಾಕಿದ್ದಾರೆ. ಈ ಪೋಸ್ಟ್ ಸದ್ಯ ರಾಷ್ಟ್ರಮಟ್ಟದಲ್ಲಿ ವೈರಲ್ ಆಗುತ್ತಿದ್ದು, ಯುವಕನ ಚಿಂತನೆಗೆ ಸಾಕಷ್ಟು ಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.

    ಸಾಂದರ್ಭಿಕ ಚಿತ್ರ

    ಕಾಗೆ ಸಿಕ್ಕಿದ್ದು ಹೇಗೆ?
    ಪ್ರಶಾಂತ್ ಪೂಜಾರಿ ಅವರಿಗೆ ಪ್ರಾಣಿ, ಪಕ್ಷಿಗಳು ಎಂದರೆ ತುಂಬಾ ಇಷ್ಟ. ಒಂದು ದಿನ ಇವರ ಮನೆಯ ಸಮೀಪ ಮೂರು ಕಾಗೆ ಮರಿಗಳು ಅನಾಥವಾಗಿ ಬಿದ್ದಿದ್ದವು. ಇದನ್ನು ಗಮನಿಸಿದ್ದ ಪ್ರಶಾಂತ್, ಅವುಗಳ ಆರೈಕೆ ಮಾಡಲು ಮುಂದಾಗಿದ್ದರು. ಆದರೆ 3ರಲ್ಲಿ 2 ಮರಿಗಳು ಸಾವನ್ನಪ್ಪಿದ್ದು, ಒಂದು ಮಾತ್ರ ಬದುಕುಳಿದಿತ್ತು.

    ಈ ಸಂದರ್ಭದಲ್ಲಿ ಅವರಿಗೆ ಶ್ರಾದ್ಧಾ ಕಾರ್ಯಕ್ರಮಗಳಲ್ಲಿ ಕಾಗೆ ಆಹಾರ ತಿನ್ನದೆ ಮೃತರ ಕುಟುಂಬಸ್ಥರು ನೊಂದುಕೊಳ್ಳುತ್ತಿದ್ದರ ಬಗ್ಗೆ ಮಾಹಿತಿ ಲಭಿಸಿತ್ತು. ತಮ್ಮ ಬಳಿ ಕಾಗೆ ಇರುವುದಿರಿಂದ ಇದನ್ನೇ ಉಪಾಯ ಮಾಡಿದ್ದ ಪ್ರಶಾಂತ್, ಕಾಗೆ ಸೇವೆ ನೀಡಲು ನಿರ್ಧರಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಫೇಸ್‍ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.

    ಸಾಂದರ್ಭಿಕ ಚಿತ್ರ

    ಅರಣ್ಯ ಅಧಿಕಾರಿಗಳಿಂದ ಕ್ರಮ:
    ಸಾಮಾಜಿಕ ಜಾಲತಾಣದಲ್ಲಿ ಪ್ರಶಾಂತ್ ಅವರ ಪೋಸ್ಟ್ ವೈರಲ್ ಆಗುತ್ತಿದಂತೆ ಎಚ್ಚೆತ್ತ ಸ್ಥಳೀಯ ಅರಣ್ಯ ಅಧಿಕಾರಿಗಳು ಪ್ರಶಾಂತ್ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಮನವರಿಕೆ ಮಾಡಿ ಕಾಗೆಯನ್ನು ಮತ್ತೆ ಕಾಡಿಗೆ ಬಿಟ್ಟಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಯುವಕ ಪ್ರಶಾಂತ್, ನನಗೆ ಕಾಗೆಯನ್ನು ಇಟ್ಟುಕೊಂಡು ಬ್ಯುಸಿನೆಸ್ ಮಾಡುವ ಯೋಚನೆ ಇರಲಿಲ್ಲ. ತಾನು ಸಾಕಿರುವ ಕಾಗೆಗೆ ರೆಕ್ಕೆ ಸರಿ ಇರಲಿಲ್ಲ. ಆದ್ದರಿಂದ ಅದು ಚೇತರಿಕೆ ಕಂಡ ಮೇಲೂ ಆಹಾರ ನೀಡಿ ಆರೈಕೆ ಮಾಡುತ್ತಿದ್ದೆ. ಈಗ ಕಾಗೆಯನ್ನ ಅರಣ್ಯಕ್ಕೆ ಬಿಟ್ಟಿದ್ದೇವೆ ಎಂದಿದ್ದಾರೆ. ಅಲ್ಲದೆ ಈ ಹಿಂದೆ ಗಾಯಗೊಂಡಿದ್ದ ಉಡವನ್ನು ಕೂಡ ರಕ್ಷಣೆ ಮಾಡಿದ್ದೆ ಎಂದು ಹೇಳಿದ್ದಾರೆ.

  • ಕೊಪ್ಪಳದ ಕೃಷಿ ಮಾರುಕಟ್ಟೆಯಲ್ಲಿ ಕರಡಿ ಪ್ರತ್ಯಕ್ಷ – ಕಕ್ಕಾಬಿಕ್ಕಿಯಾದ ಜನ

    ಕೊಪ್ಪಳದ ಕೃಷಿ ಮಾರುಕಟ್ಟೆಯಲ್ಲಿ ಕರಡಿ ಪ್ರತ್ಯಕ್ಷ – ಕಕ್ಕಾಬಿಕ್ಕಿಯಾದ ಜನ

    ಕೊಪ್ಪಳ: ಕಾಡಿನಲ್ಲಿ ಇರಬೇಕಾದ ಕರಡಿ ಇಂದು ಕೊಪ್ಪಳದ ಕೃಷಿ ಮಾರುಕಟ್ಟೆಗೆ ಎಂಟ್ರಿಕೊಟ್ಟಿದ್ದು, ಕರಡಿ ನೋಡಿದ ಜನ ಭಯದಿಂದ ದಿಕ್ಕಾಪಾಲಾಗಿ ಓಡಿದ್ದಾರೆ.

    ಕರಡಿ ಕೃಷಿ ಮಾರುಕಟ್ಟೆಯಲ್ಲೆಲ್ಲ ಓಡಾಡಿದೆ. ಮಾರುಕಟ್ಟೆಯನ್ನೆಲ್ಲ ಸುತ್ತಿ ಇದೀಗ ದೇವರಾಜು ಅರಸು ಕಾಲೋನಿಯ ಪೂರ್ತಿ ಜಾಲಿ ಗಿಡ ಬೆಳೆದಿರುವ ಪ್ರದೇಶದಲ್ಲಿ ಅಡಗಿ ಕುಳಿತಿದೆ.

    ನಗರದ ಹೃದಯ ಭಾಗದಲ್ಲಿರುವ ಮಾರುಕಟ್ಟೆಗೆ ಕರಡಿ ಎಂಟ್ರಿ ಕೊಟ್ಟಿರುವುದರಿಂದ ಜನ ಆತಂಕಗೊಂಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಕರಡಿ ಹಿಡಿಯಲು ಸಿದ್ಧತೆ ನಡೆಸುತ್ತಿದ್ದಾರೆ.

    ಜಾಲಿ ಗಿಡ ಬೆಳೆದಿರುವ ಪ್ರದೇಶದಲ್ಲಿ ಕರಡಿ ಅಡಗಿ ಕುಳಿತಿರುವ ಪರಿಣಾಮ ಸೆರೆ ಹಿಡಿಯುವುದು ಸವಾಲಾಗಿ ಪರಿಣಮಿಸಿದೆ.

  • ಅರಣ್ಯ ಅಧಿಕಾರಿಗಳ ಜೊತೆ ಗೂಂಡಾವರ್ತನೆ ತೋರಿದ ಮೂಡಿಗೆರೆ ಶಾಸಕ!

    ಅರಣ್ಯ ಅಧಿಕಾರಿಗಳ ಜೊತೆ ಗೂಂಡಾವರ್ತನೆ ತೋರಿದ ಮೂಡಿಗೆರೆ ಶಾಸಕ!

    ಚಿಕ್ಕಮಗಳೂರು: ಅಧಿಕಾರಿಗಳ ಮೇಲೆ ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ಗೂಂಡಾವರ್ತನೆ ತೋರಿಸಿದ್ದು, ಈ ಮೂಲಕ ಹುಲಿ ಉಗುರು ಮಾರಾಟಗಾರರ ಬೆಂಬಲಕ್ಕೆ ಬಿಜೆಪಿ ಶಾಸಕರು ನಿಂತಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.

    ಅರಣ್ಯ ಅಧಿಕಾರಿಗಳು ಹುಲಿ ಉಗುರು ಮಾರುತ್ತಿದ್ದ ವೆಂಕಟೇಶ್, ರಂಜಿತ್ ಹಾಗೂ ಶಿವಕುಮಾರ್ ಅವರನ್ನು ಬಂಧಿಸಿದ್ದರು. ಇದರಿಂದ ಕೋಪಗೊಂಡು ತನ್ನ ಹಿಂಬಾಲಕರನ್ನ ಬಂಧಿಸಿದಕ್ಕೆ ಶಾಸಕ ಎಂ.ಪಿ ಕುಮಾರಸ್ವಾಮಿ ಫುಲ್ ಗರಂ ಆಗಿ ಅರಣ್ಯಾಧಿಕಾರಿಗಳ ಜೊತೆ ಜಗಳ ಮಾಡಿ ಅವರಿಗೆ ಅವಾಜ್ ಹಾಕಿದ್ದಾರೆ.

    ರಂಪಾಟ ಮಾಡಿಬಿಡುತ್ತೇನೆ. ನನಗೆ ಏನು ಸಮಸ್ಯೆ ಆಗಲ್ಲ. ನನ್ನ ಫೋನ್ ರಿಸೀವ್ ಮಾಡದೇ ಇದ್ದರೆ ಆಫೀಸ್ ಬಾಗಿಲು ಹಾಕಿಸುತ್ತೇನೆ ಎಂದು ಮೂಡಿಗೆರೆ ಅರಣ್ಯ ಇಲಾಖೆ ಕಚೇರಿಯಲ್ಲಿ ಕುಮಾರಸ್ವಾಮಿ ರಂಪಾಟ ಮಾಡಿ ಕಿರುಚಾಟ ಮಾಡಿದ್ದಾರೆ. ಸೋಮವಾರ ತಡರಾತ್ರಿ ಈ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಈಗ ಹರಿದಾಡುತ್ತಿದ್ದು, ಎಂ.ಪಿ.ಕುಮಾರಸ್ವಾಮಿ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ ಕೇಳಿ ಬರುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಡಾನೆಗಳ ಹಿಂಡು ಪ್ರತ್ಯಕ್ಷ – ಅಪಾರ ಪ್ರಮಾಣದ ಬೆಳೆ ನಾಶ

    ಕಾಡಾನೆಗಳ ಹಿಂಡು ಪ್ರತ್ಯಕ್ಷ – ಅಪಾರ ಪ್ರಮಾಣದ ಬೆಳೆ ನಾಶ

    ಹಾಸನ: ಸಕಲೇಶಪುರ ತಾಲೂಕಿನ ನಿಡನೂರು ಗ್ರಾಮದಲ್ಲಿ ಕಾಡಾನೆಗಳ ಹಿಂಡೊಂದು ಪ್ರತ್ಯಕ್ಷವಾಗಿ ಅಪಾರ ಪ್ರಮಾಣದ ಬೆಳೆ ನಾಶ ಮಾಡಿರುವ ಘಟನೆ ನಡೆದಿದೆ.

    ಆಲೂರು ಸಕಲೇಶಪುರ ತಾಲೂಕಿನ ಗಡಿಭಾಗವಾದ ನಿಡನೂರು ಸಮೀಪ ಬೆಳ್ಳಂಬೆಳಿಗ್ಗೆ ಈ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದ್ದು, ಮಲ್ಲಿಕ್ ಎಂಬವರ ಕಾಫಿ ತೋಟ ಹಾಗೂ ಗದ್ದೆಯಲ್ಲಿ ದಾಂಧಲೆ ನಡೆಸಿ ಅಪಾರ ಪ್ರಮಾಣದ ಬೆಳೆ ನಾಶ ಮಾಡಿವೆ.

    ಮಲೆನಾಡು ಭಾಗದಲ್ಲಿ ಆನೆ ಮತ್ತು ಮಾನವನ ನಡುವಿನ ಸಂಘರ್ಷ ಮುಂದುವರಿದಿದ್ದು, ರೈತರು ಭಯದ ವಾತಾವರಣದಲ್ಲಿ ಜೀವಿಸುವಂತಾಗಿದೆ. ಕಾಡಾನೆಗಳ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಹಲವಾರು ಪ್ರತಿಭಟನೆಗಳು ಮಾಡಿದ್ದರೂ ಸಹ ಪ್ರಯೋಜನವಾಗಿಲ್ಲ.

    ಮೂರು ತಿಂಗಳ ಹಿಂದೆ ಹೊಸಗದ್ದೆ ಸಮೀಪ ತಾಯಮ್ಮ ಎಂಬ ಮಹಿಳೆ ಆನೆ ದಾಳಿಯಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಸಾರ್ವಜನಿಕರ ಪ್ರತಿಭಟನೆಗೆ ಮಣಿದ ಸರ್ಕಾರ ಎರಡು ಕಾಡಾನೆಗಳನ್ನು ಹಿಡಿಯಲು ಅನುಮತಿ ನೀಡಿತ್ತು. ಮಳೆಗಾಲವಾಗಿದ್ದರಿಂದ ಕಾಡಾನೆ ಹಿಡಿಯುವ ಕಾರ್ಯಾಚರಣೆಯನ್ನು ಮುಂದೂಡಲಾಗಿತ್ತು.

    ದಸರಾ ಮುಗಿದ ನಂತರ ಸಾಕಾನೆಗಳಿಗೆ ವಿಶ್ರಾಂತಿ ನೀಡಲಾಗಿದ್ದು, ಸೋಮವಾರದಿಂದ ಕಾಡಾನೆ ಹಿಡಿಯುವ ಕಾರ್ಯಚರಣೆ ಆರಂಭಿಸಲು ಸಿದ್ಧತೆ ನಡೆದಿತ್ತು. ಆದರೆ ದುಬಾರೆಯಿಂದ ಸಾಕಾನೆಗಳು ಆಗಮಿಸುವುದು ತಡವಾಗಿದ್ದರಿಂದ ನಾಳೆಯಿಂದ ಕಾಡಾನೆ ಹಿಡಿಯುವ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎಲಿಫೆಂಟ್ ಗೋಲ್ಮಾಲ್: ಕಾಫಿ ತೋಟದ ಕೆಲಸಕ್ಕೆ ಆನೆ ಬಳಕೆ

    ಎಲಿಫೆಂಟ್ ಗೋಲ್ಮಾಲ್: ಕಾಫಿ ತೋಟದ ಕೆಲಸಕ್ಕೆ ಆನೆ ಬಳಕೆ

    -ಟಿಂಬರ್ ಮಾಫಿಯಾಕ್ಕಾಗಿ ಆನೆಯನ್ನು ಕರೆತಂದಿರೋ ಶಂಕೆ!

    ಚಿಕ್ಕಮಗಳೂರು: ಕಾಡು ಪ್ರಾಣಿಗಳನ್ನ ಸರ್ಕಸ್ ಅಥವಾ ದುಡಿಸಿಕೊಳ್ಳುವದಕ್ಕಾಗಿ ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ ಚಿಕ್ಕಮಗಳೂರಿನ ಪಂಡರವಳ್ಳಿ ಕಾಫಿತೋಟದ ಕೆಲಸಕ್ಕೆ ಆನೆಯನ್ನ ಅಕ್ರಮವಾಗಿ ಕರೆತರಲಾಗಿತ್ತು. ಆರ್‍ಎಫ್‍ಓ ಶಿಲ್ಪಾ ನೇತೃತ್ವದಲ್ಲಿ ದಾಳಿ ನಡೆಸಿ ಕೇರಳದಿಂದ ಬಂದಿದ್ದ ಆನೆಯನ್ನ ರಕ್ಷಣೆ ಮಾಡಲಾಗಿದೆ.

    ಅರಣ್ಯ ಅಧಿಕಾರಿಗಳು ಶನಿವಾರ ರಾತ್ರಿ ಆನೆಯನ್ನ ಅದೇ ಲಾರಿಯಲ್ಲಿ ಪುನಃ ಕೇರಳಕ್ಕೆ ಕಳುಹಿಸಿದ್ದಾರೆ. ಆನೆ ಮೂಲತಃ ಅಸ್ಸಾಂ ರಾಜ್ಯದ ಜೋನೋರಾಂ ಬಹುರಾ ಎಂಬವರಿಗೆ ಸೇರಿದೆ. ಆನೆಗೆ ಅಳವಡಿಸಿರೋ ಮೈಕ್ರೋ ಚಿಪ್ ಕೂಡ ಅಸ್ಸಾಂ ಅಂತಾ ತೋರಿಸುತ್ತಿದೆ.

    ಆನೆ ನಮ್ಮದೆಂದು ಹೇಳಿಕೊಳ್ಳುವ ಕೇರಳದ ಪಿ.ಕೋಯಾ ಮತ್ತು ಸೈದಲಿ ಕುಟ್ಟಿ ಎಂಬವರ ಮೇಲೆ ಅಥವಾ ಆನೆಯ ಮೂಲ ಮಾಲೀಕನ ಮೇಲಾಗಲಿ ಪ್ರಕರಣ ದಾಖಲು ಮಾಡದೆ ಕೇವಲ ಮಾವುತ ಹಾಗೂ ಲಾರಿಯ ಚಾಲಕನ ಮೇಲೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಟಿಂಬರ್ ಮಾಫಿಯಾ ಪ್ರಭಾವಕ್ಕೆ ಕಟ್ಟುಬಿದ್ದು ಅಧಿಕಾರಿಗಳು ಆನೆಯ ಮಾಲೀಕರನ್ನು ರಕ್ಷಿಸಿದ್ದಾರೆಂದು ಪರಿಸರವಾದಿಗಳು ಆರೋಪಿಸುತ್ತಿದ್ದಾರೆ.

    ಆನೆಯನ್ನ ಅಸ್ಸಾಂನಿಂದ ಕೇರಳಾಕ್ಕೆ ತಂದಿರೋ ಬಗ್ಗೆಯೂ ಅಥವಾ ಸಾಗಾಟದ ಅನುಮತಿ ಪತ್ರವೂ ಯಾರ ಬಳಿಯೂ ಇಲ್ಲ. ನಕಲಿ ದಾಖಲೆ ಸೃಷ್ಟಿಸಿ ಆನೆಯನ್ನ ಕೇರಳದಲ್ಲಿ ಇಟ್ಟುಕೊಂಡು ಟಿಂಬರ್ ಕೆಲಸಕ್ಕೆ ಕರ್ನಾಟಕಕ್ಕೆ ತರಲಾಗಿದೆ. ಇದೊಂದು ದೊಡ್ಡ ಪ್ರಕರಣವಾಗಿದ್ದು ಸೂಕ್ತ ತನಿಖೆಯಾಗಬೇಕು. ರಾಜ್ಯದ ಉನ್ನತ ಅಧಿಕಾರಿಗಳು ಹಾಗೂ ಸ್ಥಳೀಯ ಅಧಿಕಾರಿಗಳು ಆನೆ ಕಳ್ಳಸಾಗಾಣೆ ದಂಧೆಕೋರರ ಮತ್ತು ರಾಜಕಾರಣಿಗಳ ಒತ್ತಡಕ್ಕೆ ಮಣಿದು ಪ್ರಕರಣವನ್ನು ಕೈಬಿಟ್ಟಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಆರೋಪಿಸುವ ಪರಿಸರವಾದಿಗಳು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

  • ಆಹಾರ ಸೇವಿಸುವಾಗ ವಿದ್ಯುತ್ ಶಾಕ್ ಹೊಡೆದು ಹೆಣ್ಣಾನೆ ಸಾವು

    ಆಹಾರ ಸೇವಿಸುವಾಗ ವಿದ್ಯುತ್ ಶಾಕ್ ಹೊಡೆದು ಹೆಣ್ಣಾನೆ ಸಾವು

    ಕಾರವಾರ: ವಿದ್ಯುತ್ ಶಾಕ್ ಹೊಡೆದು ಹೆಣ್ಣಾನೆ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಬೆಡಸಗಾಂವ ಬಳಿಯ ಕಾಳೇಬೈಲ್ ನಲ್ಲಿ ನಡೆದಿದೆ.

    ಸುಮಾರು ಹತ್ತು ವರ್ಷದ ಹೆಣ್ಣಾನೆ ಕಾಳೇಬೈಲ್ ಬಳಿ ಆಹಾರ ಸೇವಿಸುತ್ತಿತ್ತು. ಹೈಟೆನ್ಶನ್ ವಿದ್ಯುತ್ ತಂತಿ ಹಸಿ ಗಿಡಕ್ಕೆ ತಾಗಿದ್ದು, ಆಹಾರ ತಿನ್ನುತ್ತಿದ್ದ ಆನೆ ಅದನ್ನು ಮುಟ್ಟಿದೆ. ಇದರಿಂದ ತಕ್ಷಣ ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲೇ ಆನೆ ಮೃತಪಟ್ಟಿದೆ.

    ವಿಚಾರ ತಿಳಿದ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಈ ಹಿಂದೆ ಅಂದರೆ ಶುಕ್ರವಾರ ಇದೇ ಭಾಗದಲ್ಲಿ ಗರ್ಭಿಣಿ ಆನೆಯೊಂದು ಸಾವು ಕಂಡಿತ್ತು. ಒಂದು ವಾರದೊಳಗೆ ಎರಡು ಆನೆಗಳು ಸಾವನ್ನಪ್ಪಿದ್ದು, ನೋವಿನ ಸಂಗತಿಯಾಗಿದೆ.