Tag: ಅರಣ್ಯಾಧಿಕಾರಿಗಳು

  • ಕೇರಳದಲ್ಲಿ ಮತ್ತೆ ಪ್ರಾಣಿಗಳ ಮೇಲೆ ಕ್ರೌರ್ಯ – ಗರ್ಭಿಣಿ ಕಾಡು ಎಮ್ಮೆ ಬಲಿ

    ಕೇರಳದಲ್ಲಿ ಮತ್ತೆ ಪ್ರಾಣಿಗಳ ಮೇಲೆ ಕ್ರೌರ್ಯ – ಗರ್ಭಿಣಿ ಕಾಡು ಎಮ್ಮೆ ಬಲಿ

    – ಐದು ಜನರ ಬಂಧನ

    ತಿರುವನಂತಪುರಂ: ಕೇರಳದಲ್ಲಿ ಮತ್ತೆ ಪ್ರಾಣಿಗಳ ಮೇಲಿನ ಕ್ರೌರ್ಯ ಮರುಕಳಿಸಿದೆ. ಗರ್ಭಿಣಿ ಕಾಡು ಎಮ್ಮೆಯನ್ನು ಅಮಾನುಷವಾಗಿ ಬೇಟೆಯಾಡಿ ಕೊಲ್ಲಲಾಗಿದೆ.

    ಗರ್ಭಿಣಿ ಕಾಡು ಎಮ್ಮೆ ಹತ್ಯೆಗೆ ಸಂಬಂಧಿಸಿದಂತೆ ರಾಜ್ಯ ಅರಣ್ಯ ಇಲಾಖೆ ಈಗ ಐದು ಜನರನ್ನು ಬಂಧಿಸಿದೆ. ಆರೋಪಿಗಳನ್ನು ಪುಲ್ಲಾರ ಅಬು ಅಕಾ ನಾನಿಪ್ಪ (47), ಮುಹಮ್ಮದ್ ಬುಸ್ತಾನ್ (30), ಮುಹಮ್ಮದ್ ಅನ್ಸಿಫ್ (23), ಆಶಿಕ್ (27) ಮತ್ತು ಸುಹೇಲ್ (28) ಎಂದು ಗುರುತಿಸಲಾಗಿದೆ.

    ಕಳೆದ ಎರಡು ತಿಂಗಳ ಹಿಂದೆ ಇದೇ ಕೇರಳದ ಪಾಲಕ್ಕಾಡ್ ಜಿಲ್ಲೆಯ ಮನ್ನಾರ್ಕಡ್ ಅರಣ್ಯ ವ್ಯಾಪ್ತಿಯಲ್ಲಿ ಗರ್ಭಿಣಿ ಆನೆಯನ್ನು ಹಣ್ಣಿನಲ್ಲಿ ಪಟಾಕಿ ಇಟ್ಟು ಕೊಲೆ ಮಾಡಲಾಗಿತ್ತು. ಈಗ ನಿಲಾಂಬೂರ್ ದಕ್ಷಿಣ ಅರಣ್ಯ ವಿಭಾಗದ ಕಾಳಿಕಾವ್ ವ್ಯಾಪ್ತಿಯಲ್ಲಿರುವ ಚಕ್ಕಿಕುಜಿ ಅರಣ್ಯ ಕೇಂದ್ರದ ವ್ಯಾಪ್ತಿಯ ಪುಂಚ ಅರಣ್ಯದಲ್ಲಿ ಆರೋಪಿಗಳು ಕಾಡು ಎಮ್ಮೆಯನ್ನು ಬೇಟೆಯಾಡಿದ್ದಾರೆ ಎಂದು ವರದಿಯಾಗಿದೆ.

    ಆಗಸ್ಟ್ 10ರಂದು ರಾತ್ರಿ ನಡೆದ ದಾಳಿಯಲ್ಲಿ ಅರಣ್ಯ ಅಧಿಕಾರಿಗಳು ಆರೋಪಿಗಳ ಮನೆಯಿಂದ ಕಾಡು ಎಮ್ಮೆ ಮಾಂಸವನ್ನು ಪತ್ತೆ ಮಾಡಿದ್ದಾರೆ. ಅರಣ್ಯ ಅಧಿಕಾರಿಗಳು ಸುಮಾರು 25 ಕೆಜಿಗಳಷ್ಟು ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು 200 ಕೆಜಿಗಳಷ್ಟು ಮಾಂಸ ಇತ್ತು ಎಂದು ಅಂದಾಜಿಸಲಾಗಿದೆ. ಆರೋಪಿಗಳು ಎರಡು ತಲೆಬುರುಡೆ ಮತ್ತು ಇತರ ಕಾಡು ಎಮ್ಮೆಯ ಅವಶೇಷಗಳನ್ನು ಕಾಡಿನ ವಿವಿಧ ಭಾಗಗಳಲ್ಲಿ ಎಸೆದಿದ್ದಾರೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಈ ಕಾಡು ಎಮ್ಮೆಯ ಹತ್ಯೆ ಪ್ರಕರಣದಲ್ಲಿ ಹೆಚ್ಚಿನ ಆರೋಪಿಗಳು ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆಯನ್ನು ಮುಂದುವರೆಸಿದ್ದಾರೆ. ಆರೋಪಿಗಳನ್ನು ಇಂದು ಮಲಪ್ಪುರಂ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು.

  • ಹೊನ್ನಾವರದಲ್ಲಿ ಚಿರತೆ ಉಗುರುಗಳ ವಶ-ನಾಲ್ವರು ಆರೋಪಿಗಳ ಬಂಧನ

    ಹೊನ್ನಾವರದಲ್ಲಿ ಚಿರತೆ ಉಗುರುಗಳ ವಶ-ನಾಲ್ವರು ಆರೋಪಿಗಳ ಬಂಧನ

    ಕಾರವಾರ: ವನ್ಯಜೀವಿಗಳನ್ನು ಬೇಟೆಯಾಡಿ ಚಿರತೆ ಉಗುರು ಮಾರಾಟ ಮಾಡುತಿದ್ದವರನ್ನು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

    ಮುಗ್ವಾದ ಅಂತೋಣಿ ಮಿನಿನ್ ಫರ್ನಾಂಡಿಸ್ (48), ಬೆಳ್ಳಿಮಕ್ಕಿ ರೋಶನ್ ವಿಲ್ಲೆಂಟ್ ಲೊಬೋ (45), ಸಾಲ್ಕೋಡ್ ಮಹೇಶ ರಾಮ ನಾಯ್ಕ (36), ಹೊಸಗೋಡ ಗಣಪತಿ ನಾರಾಯಣ ಗೌಡ (29) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 16 ಚಿರತೆ ಉಗುರುಗಳನ್ನು ವಶಕ್ಕೆ ಪಡೆಯಲಾಗಿದೆ.

    ಚಿರತೆ ಉಗುರು ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಪಡೆದ ಹೊನ್ನಾವರ ಅರಣ್ಯ ಇಲಾಖೆ ಅಧಿಕಾರಿಗಳು ಹೊನ್ನಾವರ ತಾಲೂಕಿನ ಮುಗ್ವಾ ಕ್ರಾಸ್ ಹಾಗೂ ಅರೇಅಂಗಡಿ ಸರ್ಕಲ್ ಬಳಿ ಕಾರ್ಯಾಚರಣೆ ನಡೆಸಿ ಚಿರತೆ ಉಗುರುಗಳ ಸಹಿತ ಆರೋಪಿಗಳನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಚಿರುತೆ ಉಗುರು, 1 ಬೈಕ್ ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಕಾರ್ಯಾಚರಣೆಯಲ್ಲಿ ವಲಯ ಅರಣ್ಯಧಿಕಾರಿಗಳಾದ ಶರತ್ ಶೆಟ್ಟಿ, ಶಿವಾನಂದ ಕೋಟ್ಯಾಳ, ಉಪ ವಲಯ ಅರಣ್ಯಾಧಿಕಾರಿ ರಾಜು ನಾಯ್ಕ, ತುಕಾರಾಂ, ಸುಬ್ರಹ್ಮಣ್ಯ ಗೌಡ, ಈಶ್ವರ ಗೌಡ, ಅರಣ್ಯ ರಕ್ಷಕರಾದ ಅಲ್ಲಾಮರ್ತುಜ ಬಾವಿಕಟ್ಟೆ, ಚಂದ್ರಪ್ಪ, ಯಲ್ಲಪ್ಪ ಪಾಲ್ಗೊಂಡಿದ್ದರು.

  • ಚಾಮರಾಜನಗರದಲ್ಲಿ ಹೆಚ್ಚಾಯ್ತು ಚಿರತೆ ಕಾಟ- ನಾಲ್ಕು ಜಾನುವಾರು ಬಲಿ, ಮೂವರ ಮೇಲೆ ದಾಳಿ

    ಚಾಮರಾಜನಗರದಲ್ಲಿ ಹೆಚ್ಚಾಯ್ತು ಚಿರತೆ ಕಾಟ- ನಾಲ್ಕು ಜಾನುವಾರು ಬಲಿ, ಮೂವರ ಮೇಲೆ ದಾಳಿ

    ಚಾಮರಾಜನಗರ: ಒಂದು ಊರಿನ ಬಳಿಕ ಮತ್ತೊಂದು ಊರಿನಲ್ಲಿ ಚಿರತೆ ದಾಳಿ ಮಾಡುತ್ತಿದ್ದು, ಈ ವರೆಗೆ ಎರಡು ಜಾನುವಾರುಗಳನ್ನು ಕೊಂದು ಹಾಕಿದೆ. ಅಲ್ಲದೆ ಮೂವರ ಮೇಲೆ ದಾಳಿ ಮಾಡಿದೆ. ಹೀಗಾಗಿ ಚಾಮರಾಜನಗರ ರೈತರು ಆತಂಕಗೊಂಡಿದ್ದಾರೆ.

    ಮೂರು ದಿನಗಳ ಅಂತರದಲ್ಲಿ ನಂಜದೇವನಪುರ, ಮರಿಯಾಲ, ಉಡಿಗಾಲ, ತಮ್ಮಡಹಳ್ಳಿ ಗ್ರಾಮಗಳಲ್ಲಿ ಚಿರತೆ ದಾಳಿಗೆ ಮೂರು ಹಸು ಒಂದು ಕುದುರೆ ಬಲಿಯಾಗಿದ್ದು, ಕೃಷಿ ಚಟುವಟಿಕೆಯಲ್ಲಿ ತೊಡಗಲು ರೈತರು ಭಯಪಡುತ್ತಿದ್ದಾರೆ. ಗುರುವಾರ ತಮ್ಮಡಹಳ್ಳಿಯಲ್ಲಿ ಕುದುರೆ ಬಲಿ ಪಡೆದಿದ್ದ ಚಿರತೆ, ಶುಕ್ರವಾರ ಮರಿಯಾಲದ ರಾಮಣ್ಣ ಅವರ ಹಸುವನ್ನು ಕೊಂದು ಹಾಕಿದೆ. ಇಂದು ಉಡಿಗಾಲದ ಶ್ರೀಕಂಠಪ್ಪ ಅವರ ಎತ್ತನ್ನು ಚಿರತೆ ಸಾಯಿಸಿದೆ.

    ಕೆಲವು ದಿನಗಳ ಹಿಂದಷ್ಟೇ ವೀರನಪುರದಲ್ಲಿ ಇಬ್ಬರು ಮತ್ತು ಹಳೇಪುರದ ಓರ್ವ ವ್ಯಕ್ತಿಯ ಮೇಲೂ ಚಿರತೆ ದಾಳಿ ಮಾಡಿ ಭಯಗೊಳಿಸಿತ್ತು. ನಂಜದೇವನಪುರ, ವೀರನಪುರ, ಹಳೇಪುರ, ಉಡಿಗಾಲ, ಕಲ್ಪುರ, ಕಡುವಿನಕಟ್ಟೆ ಹುಂಡಿ, ತಮ್ಮಡಹಳ್ಳಿ ಭಾಗದಲ್ಲಿ ನಿತ್ಯ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದು, ಅರಣ್ಯ ಇಲಾಖೆ ಸ್ಪಂದಿಸುತ್ತಿಲ್ಲ. ಇಬ್ಬರು ಬೈಕಿನಲ್ಲಿ ಬಂದು ನೋಡಿಕೊಂಡು ಹೋಗುತ್ತಾರೆ, ಚಿರತೆ ಸೆರೆ ಹಿಡಿಯುವ ಪ್ರಯತ್ನ ಮಾಡುತ್ತಿಲ್ಲ ಎಂದು ನಂಜದೇವನಪುರದ ರೈತ ಮುಖಂಡ ರಾಜಣ್ಣ ದೂರಿದ್ದಾರೆ.

    ನಂಜದೇವನಪುರ ಭಾಗದಲ್ಲಿ ಕಲ್ಲು ಗಣಿಗಾರಿಕೆಗಳ ಕ್ವಾರಿಗಳು ಚಿರತೆಗಳ ಅವಾಸಸ್ಥಾನವಾಗಿ ಮಾರ್ಪಟ್ಟಿವೆ. ತೋಟದ ಮನೆಯಲ್ಲಿರುವವರು, ದನಗಾಹಿಗಳು ಜೀವ ಕೈಯಲ್ಲಿ ಹಿಡಿದು ತೆರಳಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆತಂಕ ಹೊರಹಾಕಿದ್ದಾರೆ.

    ಈ ಸಂಬಂಧ ಚಾಮರಾಜನಗರ ವಲಯ ಅರಣ್ಯಾಧಿಕಾರಿ ಅಭಿಲಾಶ್ ಪ್ರತಿಕ್ರಿಯಿಸಿ, ಚಿರತೆ ಸೆರೆಗೆ ಈಗಾಗಲೇ ನಾಲ್ಕು ಬೋನುಗಳನ್ನು ಇಡಲಾಗಿದೆ. ಚಿರತೆಯ ಮೇಲೆ ನಿಗಾ ಇಡಲಾಗಿದೆ ಎಂದು ತಿಳಿಸಿದರು. ಚಿರತೆ ಗಾಯಗೊಂಡಿದೆಯೇ, ವಯಸ್ಸಾಗಿದೆಯೇ ಎಂಬ ಗೊಂದಲ ಮುಂದುವರೆದಿದ್ದು, ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ನಿರಾಂತಕವಾಗಿದ್ದ ಮರಿಯಾಲದಲ್ಲೂ ಚಿರತೆ ಕಾಣಿಸಿಕೊಂಡು ನಿದ್ದೆಗೆಡಿಸದೆ.

  • ಎರಡು ಮರಿಗಳು ಸೇರಿ ಒಂದೇ ದಿನದಲ್ಲಿ ಬೋನಿಗೆ ಬಿತ್ತು 4 ಚಿರತೆಗಳು

    ಎರಡು ಮರಿಗಳು ಸೇರಿ ಒಂದೇ ದಿನದಲ್ಲಿ ಬೋನಿಗೆ ಬಿತ್ತು 4 ಚಿರತೆಗಳು

    ನೆಲಮಂಗಲ: ಒಂದು ವಾರದಲ್ಲಿ ಇಬ್ಬರು ಮಾನವರನ್ನು ತಿಂದು ಮುಗಿಸಿದ ನರಭಕ್ಷಕ ಚಿರತೆಗಳ ಹಾವಳಿ ನೆಲಮಂಗಲದ ಹೊರವಲಯದಲ್ಲಿ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸುಮಾರು 11 ಬೋನ್ ಇಟ್ಟಿದ್ದರು. ಇಂದು ಬೆಳ್ಳಂಬೆಳಗ್ಗೆ ಎರಡು ಚಿರತೆ ಮತ್ತು ಮರಿಗಳು ಬೋನಿಗೆ ಬಿದ್ದಿವೆ.

    ತಡರಾತ್ರಿ ಎರಡು ಮರಿ ಹಾಗೂ ಇಂದು ಬೆಳಗ್ಗೆ ಎರಡು ಚಿರತೆ ಬೋನಿಗೆ ಬಿದ್ದಿರುವ ಮಾಹಿತಿಯನ್ನು ಮಾಗಡಿ ಅರಣ್ಯಾಧಿಕಾರಿಗಳು ನೀಡಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸೋಲೂರು ಮತ್ತು ಮಾಗಡಿ ತಾಲೂಕಿನ ಗಡಿ ಗ್ರಾಮದಲ್ಲಿ ಚಿರತೆ ಬೋನಿಗೆ ಬಿದ್ದಿವೆ.

    ಒಂದು ಚಿರತೆ ಬೋಡಗನಪಾಳ್ಯ ಹಾಗೂ ಮತ್ತೊಂದು ಚಿರತೆ ಶಿರಗನಹಳ್ಳಿಯಲ್ಲಿ ಬೋನಿಗೆ ಬಿದ್ದಿದೆ. ಚಿರತೆ ಮರಿ ದಾಸೇಗೌಡನ ಪಾಳ್ಯದಲ್ಲಿ ಪ್ರತ್ಯೇಕವಾಗಿ ಕಂಡಿದೆ. ಒಂದೇ ವಾರದಲ್ಲಿ ಮೂರು ವರ್ಷದ ಮಗು, 68 ವರ್ಷದ ವೃದ್ಧೆಯನ್ನು ಬಲಿಪಡೆದ ಚಿರತೆಗಳ ಚಲನ ವಲನದ ಮೇಲೆ ಅರಣ್ಯಧಿಕಾರಿಗಳು ಕಣ್ಣಿಟ್ಟಿದ್ದರು. ದೊಡ್ಡ ಚಿರತೆ ಹಿಡಿಯಲು ಮರಿ ಚಿರತೆ ಬಳಸಿಕೊಂಡಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.

    ಇದೀಗ ಮಾಗಡಿ ವಲಯ ಅರಣ್ಯಾಧಿಕಾರಿಗಳ ಕಾರ್ಯಚರಣೆಗೆ ಅಲ್ಪ ಯಶಸ್ಸು ಸಿಕ್ಕಿದೆ. ಸೆರೆಯಾಗಿರುವ ಚಿರತೆ ನಿನ್ನೆ ವೃದ್ಧೆಯನ್ನು ಬಲಿ ಪಡೆದ ಚಿರತೆಯೋ ಅಥವಾ ಬೇರೆ ಚಿರತೆಯೋ ಎಂಬ ಗೊಂದಲದಲ್ಲಿ ಗ್ರಾಮಸ್ಥರು ಇದ್ದಾರೆ. ಚಿರತೆಯನ್ನು ನೋಡಲು ನೂರಾರು ಜನ ಸ್ಥಳದಲ್ಲಿ ಜಮಾಯಿಸಿದ್ದರು. ಸುತ್ತಮುತ್ತ ಗ್ರಾಮಗಳಲ್ಲಿ ಚಿರತೆ ಆತಂಕ ವ್ಯಕ್ತವಾಗಿದೆ.

  • ಹೂ ಬಿಟ್ಟಿದ್ದ 4 ಎಕರೆ ಕಾಫಿ ಗಿಡಗಳನ್ನು ಕಡಿದ ಅಧಿಕಾರಿಗಳು-ರೈತ ಕಂಗಾಲು

    ಹೂ ಬಿಟ್ಟಿದ್ದ 4 ಎಕರೆ ಕಾಫಿ ಗಿಡಗಳನ್ನು ಕಡಿದ ಅಧಿಕಾರಿಗಳು-ರೈತ ಕಂಗಾಲು

    ಚಿಕ್ಕಮಗಳೂರು: ತುಮಕೂರಿನ ಘಟನೆ ಮಾಸುವ ಮುನ್ನವೇ ಚಿಕ್ಕಮಗಳೂರಿನ ಅರಣ್ಯಾಧಿಕಾರಿಗಳು ಹೂ ಬಿಟ್ಟಿದ್ದ ಕಾಫಿ ಗಿಡಗಳಿಗೆ ಕೊಡಲಿ ಏಟು ಹಾಕಿದ್ದಾರೆ. ಅಧಿಕಾರಿಗಳ ದಿಢೀರ್ ನಿರ್ಧಾರದಿಂದ ರೈತ ಕಂಗಾಲಾಗಿದ್ದಾರೆ.

    ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ದೇವಗೋಡು ಗ್ರಾಮದ ರೈತ ದಿನೇಶ್ ಹೆಬ್ಬಾರ್ ಎಂಬವರಿಗೆ ಸೇರಿದ ಕಾಫಿ ಗಿಡಗಳನ್ನು ಅಧಿಕಾರಿಗಳು ನಾಶಗೊಳಿಸಿದ್ದಾರೆ. ದೇವಗೋಡು ಗ್ರಾಮದ ಸರ್ವೆ ನಂ. 78 ರಲ್ಲಿ ದಿನೇಶ್ ಅವರ ತೋಟವಿದೆ. ದಿನೇಶ್ ಅವರ ಅರಣ್ಯ ಪ್ರದೇಶ ಒತ್ತುವರಿ ಆರೋಪಗಳಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ. ಮೂರು ವರ್ಷಗಳ ಹಿಂದೆ ಅರಣ್ಯಾಧಿಕಾರಿಗಳು ದಿನೇಶ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಯಥಾ ಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಾಲಯ ತಡೆ ನೀಡಿತ್ತು. ಇದನ್ನೂ ಓದಿ: 30 ವರ್ಷಗಳಿಂದ ಬೆಳೆದು ನಿಂತಿದ್ದ ತೋಟ ನಾಶ ಮಾಡಿದ್ರಾ ತಹಶೀಲ್ದಾರ್?

    ಪ್ರಕರಣ ನ್ಯಾಯಾಲಯದಲ್ಲಿರುವ ಅರಣ್ಯಾಧಿಕಾರಿಗಳು ಕಾಫಿ ಗಿಡಗಳನ್ನು ನಾಶ ಮಾಡಿದ್ದಾರೆ. ಕಾಫಿ ಗಿಡಗಳು ಹೂ ಬಿಟ್ಟಿದ್ದರಿಂದ ರೈತ ದಿನೇಶ್ ಲಾಭದ ನಿರೀಕ್ಷೆಯಲ್ಲಿದ್ದರು.

  • ಹಗಲು ಹೊತ್ತಲ್ಲೇ ಚಿರತೆ ಕಾಟ- ಗ್ರಾಮಸ್ಥರು ಕಂಗಾಲು

    ಹಗಲು ಹೊತ್ತಲ್ಲೇ ಚಿರತೆ ಕಾಟ- ಗ್ರಾಮಸ್ಥರು ಕಂಗಾಲು

    ಹಾಸನ: ಹಗಲು ಹೊತ್ತಿನಲ್ಲೇ ಚಿರತೆಯೊಂದು ಹೊಲ, ಮನೆಗಳ ಸಮೀಪ ಓಡಾಡುತ್ತಿದ್ದು, ಗ್ರಾಮಸ್ಥರು ಕಂಗಾಲಾಗಿದ್ದಾರೆ. ಜೀವ ಕೈಯಲ್ಲೇ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಗಾನಗರ ಗ್ರಾಮದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಚಿರತೆ ಓಡಾಡುವ ದೃಶ್ಯವನ್ನು ಗ್ರಾಮಸ್ಥರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಹಗಲು ಹೊತ್ತಿನಲ್ಲೇ ಗ್ರಾಮದ ಸುತ್ತ-ಮುತ್ತ ಚಿರತೆ ಜನರ ಕಣ್ಣಿಗೆ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ತಿಳಿಸಿ ಚಿರತೆ ಹಿಡಿಯುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

    ಚಿರತೆಯ ಕಾಟದಿಂದ ಬೇಸತ್ತ ಗ್ರಾಮಸ್ಥರು, ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಹಗಲು ಹೊತ್ತಿನಲ್ಲೇ ಚಿರತೆ ಓಡಾಡುವ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದು, ಚಿರತೆ ದಾಳಿಯಿಂದ ಅನಾಹುತ ಸಂಭವಿಸುವ ಮುನ್ನ ಚಿರತೆ ಸೆರೆ ಹಿಡಿಯಿರಿ. ಇಲ್ಲವಾದಲ್ಲಿ ಆಗುವ ಅನಾಹುತಕ್ಕೆ ನೀವೇ ಹೊಣೆಗಾರರು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

  • ಅಪರೂಪದ ಪುನುಗು ಬೆಕ್ಕು ಕಳ್ಳಸಾಗಣೆ- ಇಬ್ಬರ ಬಂಧನ

    ಅಪರೂಪದ ಪುನುಗು ಬೆಕ್ಕು ಕಳ್ಳಸಾಗಣೆ- ಇಬ್ಬರ ಬಂಧನ

    ಉಡುಪಿ: ಪಶ್ಚಿಮಘಟ್ಟ ದಟ್ಟ ಕಾಡು, ಅಭಯಾರಣ್ಯಗಳಲ್ಲಿ ಮಾತ್ರ ಕಾಣಸಿಗುವ ಅಪರೂಪದ ಪುನುಗು ಬೆಕ್ಕನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರ ಮೇಲೆ ಅರಣ್ಯಾಧಿಕಾರಿಗಳು ದಾಳಿ ಮಾಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಅರಣ್ಯ ಸಂಚಾರಿ ದಳ ಇಲ್ಲಿನ ಅಧಿಕಾರಿ ಹಾಗೂ ಸಿಬ್ಬಂದಿ ಪುನುಗು ಬೆಕ್ಕು ಸಹಿತ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

    ಬ್ರಹ್ಮಾವರ ತಾಲೂಕಿನ ಹಿಲಿಯಾಣ ಗ್ರಾಮದ ಹೈಕಾಡಿ ಎಂಬಲ್ಲಿ ಈ ಘಟನೆ ನಡೆದಿದೆ. ಕುಂದಾಪುರ ವೆಸ್ಟ್ ಬ್ಲಾಕ್ ರಸ್ತೆ ದತ್ತಾತ್ರೇಯ ನಗರದ ನಿವಾಸಿ ಅಸ್ಗರ್ ಅಲಿ ಹಾಗೂ ಬಿದ್ಕಲಕಟ್ಟೆ ನಿವಾಸಿ ಶರತ್ ಬಂಧಿತ ಆರೋಪಿಗಳು. ಬಂಧಿತರಿಂದ ಜೀವಂತ ಪುನುಗು ಬೆಕ್ಕು, ಪಂಜರ, ಮಾರುತಿ ಇಕೋ ಕಾರು, ಮೊಬೈಲ್ ಫೋನುಗಳನ್ನು ವಶಕ್ಕೆ ಪಡೆಯಲಾಗಿದೆ.

    ದಾಳಿಯ ವೇಳೆ ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಪ್ರಕರಣವು ವನ್ಯಜೀವಿ ಅರಣ್ಯ ಸಂರಕ್ಷಣಾ ಕಾಯ್ದೆಗೆ ಸಂಬಂಧಿಸಿದ ಪ್ರಕರಣವಾದ್ದರಿಂದ ಆರೋಪಿಗಳನ್ನು ಮತ್ತು ಸ್ವತ್ತುಗಳನ್ನು ಮುಂದಿನ ತನಿಖೆ ಬಗ್ಗೆ ನ್ಯಾಯಾಲಯದ ಅನುಮತಿ ಪಡೆದು ಶಂಕರನಾರಾಯಣ ವಲಯ ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.

    ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಮಾತ್ರ ಹೆಚ್ಚಾಗಿ ಕಂಡು ಬರುವ ಪುನುಗು ಬೆಕ್ಕು ವಿನಾಶದಂಚಿನಲ್ಲಿರುವ ಜೀವಿಗಳ ಪಟ್ಟಿಯಲ್ಲಿದೆ. ಲಕ್ಷಾಂತರ ಬೆಲೆ ಬಾಳುವ ಪುನುಗು ಬೆಕ್ಕನ್ನು ಕಳ್ಳ ಸಾಗಣೆ ಮಾಡುವ ದೊಡ್ಡ ಜಾಲವೇ ಈ ಭಾಗದಲ್ಲಿದೆ ಎನ್ನುತ್ತಾರೆ ಪ್ರಾಣಿಪ್ರಿಯರು. ಜಿಂಕೆ ಕೊಂಬು, ಚಿರತೆ ಚರ್ಮದಂತೆ ಪುನುಗು ಬೆಕ್ಕಿನ ಮಾಂಸ ಮತ್ತು ಎಣ್ಣೆಗೆಯ ತಯಾರಿಗೆ ಉಪಯೋಗಿಸುತ್ತಾರೆ ಎಂಬ ಮಾಹಿತಿಯಿದೆ.

  • ನಂಬರ್ ಪ್ಲೇಟ್ ಬದಲಿಸಿ ರಕ್ತಚಂದನ ಸಾಗಿಸುತ್ತಿದ್ದ ಕಾರು ವಶಕ್ಕೆ

    ನಂಬರ್ ಪ್ಲೇಟ್ ಬದಲಿಸಿ ರಕ್ತಚಂದನ ಸಾಗಿಸುತ್ತಿದ್ದ ಕಾರು ವಶಕ್ಕೆ

    – ಕಾರು ಬಿಟ್ಟು ಪರಾರಿಯಾದ ಖದೀಮರು

    ಚಿಕ್ಕಬಳ್ಳಾಪುರ: ತಮಿಳುನಾಡು ನೊಂದಣಿಯ ಸ್ಕಾರ್ಪಿಯೋ ಕಾರಿಗೆ ಕರ್ನಾಟಕ ನಂಬರ್ ಪ್ಲೇಟ್ ಬಳಸಿ ಅಕ್ರಮವಾಗಿ ರಕ್ತಚಂದನವನ್ನು ಸಾಗಿಸುತ್ತಿದ್ದ ಕಾರನ್ನು ಚಿಕ್ಕಬಳ್ಳಾಪುರ ಅರಣ್ಯ ಇಲಾಖಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ಅಂದಹಾಗೆ ಆಯಾ ರಾಜ್ಯಗಳಲ್ಲಿ ಆ ರಾಜ್ಯದ ನಕಲಿ ನಂಬರ್ ಪ್ಲೇಟ್ ಗಳನ್ನು ಬಳಸಿ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ರಕ್ತ ಚಂದನ ಸಾಗಾಟ ಮಾಡುತ್ತಿದ್ದ ಕಾರನ್ನು ಬೆನ್ನಟ್ಟಿದ ಚಿಕ್ಕಬಳ್ಳಾಪುರ ಅರಣ್ಯ ಇಲಾಖೆ ಅಧಿಕಾರಿಗಳು, ಚಿಕ್ಕಬಳ್ಳಾಪುರ ತಾಲೂಕಿನ ಚದಲಪುರ ಬಳಿ ಸ್ಕಾರ್ಪಿಯೋ ಕಾರನ್ನು ತಡೆದು ಕಾರು ಸಮೇತ ರಕ್ತ ಚಂದನ ತುಂಡುಗಳನ್ನು ಜಪ್ತಿ ಮಾಡಿದ್ದಾರೆ.

    ಕಾರಿನಲ್ಲಿ 14 ರಕ್ತಚಂದನದ ತುಂಡುಗಳಿದ್ದು ಆರೋಪಿಗಳು ಅಧಿಕಾರಿಗಳನ್ನು ನೋಡುತ್ತಿದ್ದಂತೆ ಕಾರು ಬಿಟ್ಟು ಇನ್ನೊಂದು ಕಾರಿನಲ್ಲಿ ಪರಾರಿಯಾಗಿದ್ದಾರೆ. ಈ ಕಾರಿನ ನಂಬರ್ ಟಿಎನ್ 49, ಎ.ಎಫ್ 0333 ಅಸಲಿ ಆಗಿದ್ದು, ಇದಕ್ಕೆ ಕೆಎ 34 ಎಂ 6866 ನಂಬರ್ ಪ್ಲೇಟನ್ನು ಅಳವಡಿಸಿದ್ದಾರೆ. ಕಾರಿನ ಪರಿಶೀಲನೆ ವೇಳೆ ಸರಿಸುಮಾರು 500 ಕೆಜಿಯ ಲಕ್ಷಾಂತರ ರೂಪಾಯಿ ಮೌಲ್ಯದ 14 ರಕ್ತ ಚಂದನದ ತುಂಡುಗಳು, ಎರಡು ಆಸಲಿ ತಮಿಳುನಾಡಿನ ನೊಂದಣಿಯ ನಂಬರ್ ಪ್ಲೇಟುಗಳು, ಕಾರಿಗೆ ಸಂಬಂಧಿಸಿದ ದಾಖಲೆಗಳು ಸಿಕ್ಕಿವೆ.

    ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯಾಧಿಕಾರಿಗಳು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

  • ಬೆನ್ನಟ್ಟಿ ಬಂದ ಚಿರತೆಯನ್ನು ಬಾವಿಗೆ ಬೀಳಿಸಿದ ಶ್ವಾನ

    ಬೆನ್ನಟ್ಟಿ ಬಂದ ಚಿರತೆಯನ್ನು ಬಾವಿಗೆ ಬೀಳಿಸಿದ ಶ್ವಾನ

    ಕಾರವಾರ: ನಾಯಿಯನ್ನು ಅಟ್ಟಿಸಿಕೊಂಡು ಬಂದ ಚಿರತೆಯೊಂದು ಓಡಿಬಂದ ವೇಗಕ್ಕೆ ಆಯಾ ತಪ್ಪಿ ಬಾವಿಗೆ ಬಿದ್ದು ನರಳಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟ ತಾಲೂಕಿನ ಬರ್ಗಿ ಗ್ರಾಮದಲ್ಲಿ ನಡೆದಿದೆ.

    ಇಂದು ಬೆಳಗ್ಗೆ ಕಾಡಿನಿಂದ ನಾಡಿಗೆ ಆಹಾರ ಅರಸಿ ಬಂದಿದ್ದ ಚಿರತೆ, ಕುಮಟಾ ತಾಲೂಕಿನ ಬರ್ಗಿ ಬಳಿಯ ವಸಂತ್ ಶಿವು ನಾಯ್ಕ ಮನೆಯ ಬಳಿ ಬೀದಿ ನಾಯಿಯನ್ನು ನೋಡಿ ಅಟ್ಟಿಸಿಕೊಂಡು ಹೋಗಿದೆ. ಈ ವೇಳೆ ನಾಯಿ ಓಟ ಕಿತ್ತಿದ್ದು ಅಲ್ಲಿಯೇ ಇದ್ದ ಬಾವಿ ಬಳಿ ಜಿಗಿದು ತಪ್ಪಿಸಿಕೊಂಡಿದೆ. ಈ ವೇಳೆ ಚಿರತೆ ಬಂದ ವೇಗಕ್ಕೆ ಆಯ ತಪ್ಪಿ ಬಾವಿಗೆ ಬಿದ್ದಿದೆ.

    ಚಿರತೆಯು ಬಿದ್ದ ಹೊಡೆತಕ್ಕೆ ಬಾವಿಯಿಂದ ಏಳಲು ಪ್ರಯತ್ನಿಸಿದೆ. ಈ ವೇಳೆ ಅದರ ಗರ್ಜನೆಗೆ ಮನೆಯವರಿಗೆ ತಿಳಿದಿದ್ದು, ಬಾವಿಯಲ್ಲಿ ಚಿರತೆ ಬಿದ್ದಿರುವುದು ಗೊತ್ತಾಗಿದೆ. ಆಗ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಅರಣ್ಯ ಇಲಾಖೆಗೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಅದರ ರಕ್ಷಣೆಗಾಗಿ ಡೇರಿಂಗ್ ಟೀಮ್ ಬಂದಿದೆ. ಬಾವಿಗೆ ಬಿದ್ದಿರುವ ಚಿರತೆಯನ್ನು ರಕ್ಷಿಸಲು ಬಾವಿಗೆ ದೊಡ್ಡ ಬುಟ್ಟಿಯನ್ನು ಇಳೆ ಬಿಡುವ ಮೂಲಕ ಬಲೆ ಹಾಕಿ ಚಿರತೆ ರಕ್ಷಣೆ ಮಾಡಿದ್ದಾರೆ.

  • ಗ್ರಾಮದಲ್ಲಿ ಉಪಟಳ ನೀಡುತ್ತಿದ್ದ ದೈತ್ಯ ಚಿರತೆ ಕೊನೆಗೂ ಬೋನಿನಲ್ಲಿ ಸೆರೆ

    ಗ್ರಾಮದಲ್ಲಿ ಉಪಟಳ ನೀಡುತ್ತಿದ್ದ ದೈತ್ಯ ಚಿರತೆ ಕೊನೆಗೂ ಬೋನಿನಲ್ಲಿ ಸೆರೆ

    ನೆಲಮಂಗಲ: ಕಳೆದ ಇಪ್ಪತ್ತು ದಿನಗಳಿಂದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಉಪಟಳ ನೀಡುತ್ತಿದ್ದ ದೈತ್ಯ ಚಿರತೆಯೊಂದು ಬೋನಿಗೆ ಬಿದ್ದಿದೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಗಡಿ ಗ್ರಾಮವಾದ ಬರಗೂರು ಗ್ರಾಮದ ಬಳಿಯಲ್ಲಿ ಚಿರತೆ ಸೆರೆ ಸಿಕ್ಕಿದೆ.

    ಗ್ರಾಮಸ್ಥರ ಒತ್ತಾಯದಿಂದ ಕಳೆದ ಒಂದು ವಾರದ ಹಿಂದೆ ನೆಲಮಂಗಲ ಅರಣ್ಯ ಅಧಿಕಾರಿಗಳು ಚಿರತೆ ಸೆರೆಗೆ ಬೋನ್‍ನ್ನು ಇರಿಸಿದ್ದರು. ಈ ದೈತ್ಯ ಚಿರತೆ ಪ್ರತಿದಿನ ಗ್ರಾಮದಲ್ಲಿ ಭಾರಿ ಆರ್ಭಟ ಮಾಡುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು.

    ಈ ಕಾರಣದಿಂದ ನೆಲಮಂಗಲ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಹಲವಾರು ದಿನಗಳಿಂದ ನಾಗರಿಕರಿಗೆ ನಿದ್ದೆಗೆಡಿಸಿದ್ದ ಚಿರತೆ ಹಿಡಿಯಲು ಬೋನ್ ಹಾಕಿದ್ದರು. ಇಂದು ಗ್ರಾಮದ ದಿಣ್ಣೆ ಹೊಲ ಎಂಬಲ್ಲಿ ಆಹಾರ ಅರಸಿ ಬಂದು ಚಿರತೆ ಬೋನಿಗೆ ಬಿದ್ದಿದೆ. ಚಿರತೆ ಸೆರೆಯಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟದ್ದಾರೆ.