Tag: ಅರಣ್ಯಾಧಿಕಾರಿಗಳು

  • ಪ್ರತಿ ಜಿಲ್ಲೆಯಲ್ಲಿ ಕನಿಷ್ಟ ಶೇ. 30 ಅರಣ್ಯ ನಿರ್ಮಿಸಿ: ಅಧಿಕಾರಿಗಳಿಗೆ ಸಚಿವ ಉಮೇಶ್ ಕತ್ತಿ ಸೂಚನೆ

    ಪ್ರತಿ ಜಿಲ್ಲೆಯಲ್ಲಿ ಕನಿಷ್ಟ ಶೇ. 30 ಅರಣ್ಯ ನಿರ್ಮಿಸಿ: ಅಧಿಕಾರಿಗಳಿಗೆ ಸಚಿವ ಉಮೇಶ್ ಕತ್ತಿ ಸೂಚನೆ

    ಬೆಳಗಾವಿ: ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಕನಿಷ್ಟ ಶೇ. 3೦ರಷ್ಟು ಅರಣ್ಯ ನಿರ್ಮಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಅರಣ್ಯ ಸಚಿವ ಉಮೇಶ್ ಕತ್ತಿ ಸೂಚನೆ ನೀಡಿದ್ದಾರೆ‌.

    ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ಒಂದು ವೇಳೆ ಅರಣ್ಯ ನಿರ್ಮಿಸಲು ಭೂಮಿ ಇಲ್ಲದ ಜಿಲ್ಲೆಗಳು ಸಂಬಂಧಪಟ್ಟ ಕಂದಾಯ ಇಲಾಖೆ, ಜಲ ಸಂಪನ್ಮೂಲ ಇಲಾಖೆ ಸೇರಿದಂತೆ ಬೇರೆ ಇಲಾಖೆಗೆ ಒಳಪಡುವ ಭೂಮಿಯನ್ನು ಅರಣ್ಯ ಇಲಾಖೆಗೆ ವಿಲೀನ ಮಾಡದೆಯೇ ಆ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಗಿಡಗಳನ್ನು ಬೆಳೆಸಿ ಎಂದು ಅರಣ್ಯಾಧಿಕಾರಿಗಳಿಗೆ ಸಚಿವರು ತಿಳಿಸಿದ್ದಾರೆ. ಇದನ್ನೂ ಓದಿ: ನಾಗರಹಾವಿನೊಂದಿಗೆ ಹುಡುಗಾಟವಾಡಿ ಮಸಣ ಸೇರಿದ ವೃದ್ಧ

    ರಾಜ್ಯದ ಅರಣ್ಯ ಭೂಮಿಯನ್ನು ರಕ್ಷಿಸುವುದರ ಜೊತೆಗೆ ವರ್ಷದಿಂದ ವರ್ಷಕ್ಕೆ ಉತ್ತಮ ಪರಿಸರ ನಿರ್ಮಾಣ ಮಾಡುವುದು ಅರಣ್ಯ ಇಲಾಖೆಯ ಕರ್ತವ್ಯವಾಗಿದೆ. ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಶೇ. 70 ರಷ್ಟು ಅರಣ್ಯ ಇದೆ‌. ಆದರೆ ವಿಜಯಪುರ, ಬೀದರ್, ಕಲಬುರಗಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಶೇ. 10 ಕ್ಕಿಂತಲೂ ಕಡಿಮೆ ಅರಣ್ಯ ಭೂಮಿ ಇದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹಳಿ ದಾಟುತ್ತಿದ್ದಾಗ ರೈಲು ಡಿಕ್ಕಿ- ತಾಯಿ, ಮರಿಯಾನೆಗಳು ಸಾವು

    ಕಡಿಮೆ ಅರಣ್ಯ ಇರುವ ಜಿಲ್ಲೆಗಳಲ್ಲಿ ಹವಾಮಾನ ವೈಪರೀತ್ಯವಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಹಾಗಾಗಿ ಅರಣ್ಯ ಇಲಾಖೆಯವರು ಹೆಚ್ಚಿನ ಮುತುವರ್ಜಿ ವಹಿಸುವುದು ಅವಶ್ಯಕವಾಗಿದೆ. ನಮಗೆ ಗೊತ್ತಿಲ್ಲದಂತೆ ಮರಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಲೇ ಇದೆ. ಇದರಿಂದ ಆಮ್ಲಜನಕ ಪ್ರಮಾಣ ಕುಸಿಯುತ್ತಿದೆ. ಈಗ ನಮ್ಮ ಯುವಕರು ನೋಡುತ್ತಿರುವ ಸುಂದರವಾದ ಅರಣ್ಯ ಪ್ರದೇಶವನ್ನು ನಮ್ಮ ಮುಂದಿನ ಪೀಳಿಗೆ ನೋಡುವಂತಾಗಬೇಕು. ಇರುವ ಅರಣ್ಯ ಭೂಮಿ ರಕ್ಷಣೆ ಮಾಡಿದರೆ ಸಾಲದು. ಅರಣ್ಯ ಭೂಮಿ ವೃದ್ಧಿಸುವ ಕಡೆಗೂ ಗಮನ ಹರಿಸಬೇಕಿದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

  • ಕಳ್ಳಬೇಟೆ ಬಯಲು – ದಂತ, ಹುಲಿ ಹಲ್ಲು, ಜಿಂಕೆ ಕೊಂಬು, ಸ್ಫೋಟಕ ವಶ!

    ಕಳ್ಳಬೇಟೆ ಬಯಲು – ದಂತ, ಹುಲಿ ಹಲ್ಲು, ಜಿಂಕೆ ಕೊಂಬು, ಸ್ಫೋಟಕ ವಶ!

    ಚಾಮರಾಜನಗರ: ಅರಣ್ಯಾಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಗ್ರಾ.ಪಂ. ಸದಸ್ಯರೊಬ್ಬರ ಕಳ್ಳಬೇಟೆ ಬಯಲು ಮಾಡಿ ಅಪಾರ ಪ್ರಮಾಣದ ಸ್ಫೋಟಕ, ದಂತ, ಹುಲಿ ಹಲ್ಲು ವಶಪಡಿಸಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಬೂದಿಪಡಗ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ರಂಗಸ್ವಾಮಿ(45) ಎಂಬವರ ಮನೆ ಮೇಲೆ ತಮಿಳುನಾಡು ಅರಣ್ಯ ಇಲಾಖೆ ನೀಡಿದ ಮಾಹಿತಿ ಮೇರೆಗೆ ಪುಣಜನೂರು ವಲಯ ಅರಣ್ಯಾಧಿಕಾರಿ ಕಾಂತರಾಜು ಮತ್ತು ಕೆ.ಗುಡಿ ಆರ್.ಎಫ್.ಒ ಶಾಂತಪ್ಪ ಪೂಜಾರ್ ಜಂಟಿ ಕಾರ್ಯಾಚರಣೆ ನಡೆಸಿ ದಂತದ ಚೂರುಗಳು, ತಲಾ ಒಂದು ಚಿರತೆ ಮತ್ತು ಹುಲಿ ಹಲ್ಲು, 5-6 ಜಿಂಕೆ ಕೊಂಬುಗಳು, ಅಪಾರ ಪ್ರಮಾಣದ ಉರುಳು, 4-5 ನಾಡ ಬಂದೂಕಿಗೆ ಬಳಸುವ ಟ್ರಿಗರ್ ಗಳು, ಸ್ಫೋಟಕವನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಬ್ಲೂ ಫಿಲಂಗಳ ಬಗ್ಗೆ ಹೆಚ್‍ಡಿಕೆಗೆ ಚೆನ್ನಾಗಿಯೇ ಗೊತ್ತಿರುತ್ತೆ: ಅಶ್ವಥ್ ನಾರಾಯಣ

    ರಂಗಸ್ವಾಮಿ ಪುಣಜನೂರು ಗ್ರಾ.ಪಂಚಾಯಿತ್ ನ ಹಾಲಿ ಸದಸ್ಯನಾಗಿದ್ದು, ಕಳ್ಳಬೇಟೆ ಬಯಲಾಗುತ್ತಿದ್ದಂತೆ ತಲೆ ಮರೆಸಿಕೊಂಡಿದ್ದಾರೆ. ಅರಣ್ಯಾಧಿಕಾರಿಗಳು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

  • ರೈತರ ಮೇಲೆ ಥಳಿತ – ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

    ರೈತರ ಮೇಲೆ ಥಳಿತ – ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

    ಶಿವಮೊಗ್ಗ: ದರಾಕಾಸ್ತಿನ ಅಡಿಯಲ್ಲಿ ದಲಿತರಿಗೆ ಮಂಜೂರಾಗಿದ್ದ ಜಮೀನನ್ನು ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆಯಲು ಯತ್ನಿಸಿದ್ದು, ಜಮೀನು ಬಿಡಲು ಒಪ್ಪದ ರೈತರ ಮೇಲೆ ದೌರ್ಜನ್ಯ ನಡೆಸಿ, ಹಲ್ಲೆ ನಡೆಸಿದ್ದಾರೆ. ಅದು ಅಲ್ಲದೇ ರೈತರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿ ಶಿವಮೊಗ್ಗ ತಾಲೂಕಿನ ದೇವಕಾತಿಕೊಪ್ಪ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

    ಶಿವಮೊಗ್ಗದ ಜಿಲ್ಲಾ ಪಂಚಾಯ್ತಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ದೇವಕಾತಿಕೊಪ್ಪ ಹೊರವಲಯದ ಸರ್ವೇ ನಂ 115 ರಿಂದ 126ರ ವರೆಗಿನ ಭೂಮಿಯಲ್ಲಿ 12 ಮಂದಿ ದಲಿತ ಕುಟುಂಬಗಳಿಗೆ 1979 ರಲ್ಲಿ ಅಂದಿನ ಸರ್ಕಾರ ತಲಾ 2 ಎಕರೆಯಂತೆ 24 ಎಕರೆ ಭೂಮಿಯನ್ನು ಮಂಜೂರು ಮಾಡಿತ್ತು. ಕಂದಾಯ ಇಲಾಖೆ ಈ ಭೂಮಿಗೆ ಪಣಿ ಹಾಗೂ ಖಾತೆ ಮಾಡಿ ಕೊಟ್ಟಿತ್ತು. ಇದನ್ನೂ ಓದಿ: ಪೋಕ್ಸೋ ಆರೋಪಿ ಠಾಣೆಯಿಂದ್ಲೇ ಎಸ್ಕೇಪ್ – ನಾಲ್ವರು ಪೊಲೀಸರು ಸಸ್ಪೆಂಡ್

    ಕಳೆದ ಎರಡು ದಿನದ ಹಿಂದೆ ಈ ಭೂಮಿಯಲ್ಲಿದ್ದ ಗಿಡ ಗಂಟೆಗಳನ್ನು ಕಡಿದು ಸ್ವಚ್ಛಗೊಳಿಸಿ ಸಾಗುವಳಿಗೆ ಮುಂದಾಗಿದ್ದ ರೈತರ ಮೇಲೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಲ್ಲದೇ ನಾಲ್ವರು ರೈತರ ವಿರುದ್ಧ ಶ್ರೀಗಂಧ ಕಳವು ಮಾಡಿರುವುದಾಗಿ ಪ್ರಕರಣ ದಾಖಲಿಸಿರುವ ಅರಣ್ಯ ಸಿಬ್ಬಂದಿ ನಾಲ್ವರು ರೈತರನ್ನು ಜೈಲಿಗೆ ಕಳುಹಿಸಿದ್ದಾರೆ. ನಿಜವಾಗಿಯೂ ಶ್ರೀಗಂಧ ಕಳವು ಮಾಡಿದ್ದರೆ ತನಿಖೆ ನಡೆಸಿ ಶಿಕ್ಷೆ ಕೊಡಲಿ ಅದು ಬಿಟ್ಟು ಸುಳ್ಳು ದೂರು ದಾಖಲಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಸುಳ್ಳು ದೂರು ದಾಖಲಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ಶಿರಸಿಯಲ್ಲಿ ಚಿರತೆ ಕಾಟ -ಮನೆಯಿಂದ ಹೊರ ಬರಲು ಹೆದರಿದ ಜನ

    ಶಿರಸಿಯಲ್ಲಿ ಚಿರತೆ ಕಾಟ -ಮನೆಯಿಂದ ಹೊರ ಬರಲು ಹೆದರಿದ ಜನ

    -ಚಿರತೆ ಸೆರೆಗೆ ಅರಣ್ಯಾಧಿಕಾರಿಗಳ ತಂಡ ದಿನವಿಡೀ ಗಸ್ತು

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ಅರಣ್ಯ ವಲಯ ವ್ಯಾಪ್ತಿಯ ಶಿವಳ್ಳಿ, ದಾನಂದಿ ಭಾಗದಲ್ಲಿ ಚಿರತೆ ಜಾನುವಾರುಗಳ ಮೇಲೆ ಕೆಲ ದಿನಗಳಿಂದ ಸತತ ದಾಳಿ ನಡೆಸುತ್ತಿದೆ. ಇದರಿಂದಾಗಿ ಗ್ರಾಮದ ಜನ ಮನೆಯಿಂದ ಹೊರ ಬರಲು ಹೆದರುತಿದ್ದು, ಅಪಾಯಕಾರಿ ಚಿರತೆ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ.

    ಬಿಸಲಕೊಪ್ಪ, ಎಕ್ಕಂಬಿ, ಶಿವಳ್ಳಿ ಭಾಗದಲ್ಲಿ ಸಮೃದ್ದ ಅರಣ್ಯ ಪ್ರದೇಶ, ಸಾಗುವಾನಿ ನೆಡುತೋಪು ಹೆಚ್ಚಿದ್ದು ಪ್ರಾಣಿಗಳ ಓಡಾಟಕ್ಕೆ ಅನುಕೂಲವಾಗಿದೆ. ಹೀಗಾಗಿ ಚಿರತೆ, ಆನೆಗಳು ಈ ಪ್ರದೇಶಕ್ಕೆ ಲಗ್ಗೆ ಇಡುವುದು ಸಾಮಾನ್ಯವಾದಂತಾಗಿದೆ. ಹದಿನೈದು ದಿನಗಳಿಂದ ಈಚೆಗೆ ಬೊಪ್ಪನಳ್ಳಿ, ದಾನಂದಿ ಭಾಗದಲ್ಲಿ ಸುಮಾರು ನಾಲ್ಕು ಹಸುಗಳನ್ನು ಚಿರತೆ ಬಲಿ ಪಡೆದಿದೆ. ಈ ಪೈಕಿ ಎರಡು ಕರು ಮತ್ತು ಎರಡು ದೊಡ್ಡ ಆಕಳು ಸೇರಿದೆ. ಇದನ್ನೂ ಓದಿ: ಅರಣ್ಯ ಪ್ರದೇಶಕ್ಕೆ ಎಳೆದೊಯ್ದು 55ರ ಮಹಿಳೆ ಮೇಲೆ ಗ್ಯಾಂಗ್ ರೇಪ್

    cheetah

    ಕೊರ್ಸೆ, ದಾನಂದಿ, ಶಿವಳ್ಳಿ, ಬೊಪ್ಪನಳ್ಳಿ, ಸಂಬಯ್ಯನಜಡ್ಡಿ, ಗೇರಮನೆ ಸುತ್ತಮುತ್ತ ಚಿರತೆಗಳು ಹದಿನೈದು ದಿನಗಳಿಂದ ನಿರಂತರವಾಗಿ ಓಡಾಡುತ್ತಿದೆ. ಈಚೆಗೆ ಮೂರು ಚಿರತೆಗಳು ಒಟ್ಟೊಟ್ಟಿಗೆ ಇದ್ದಿದ್ದನ್ನು ಸ್ಥಳೀಯರು ನೋಡಿದ್ದಾರೆ. ಇನ್ನು ಸಂಜೆಯಾಗುತ್ತಿದ್ದಂತೆ ಚಿರತೆಗಳು ಗ್ರಾಮದ ಭಾಗದಲ್ಲಿ ಓಡಾಡುತಿದ್ದು, ಚಿರತೆ ಭಯದಿಂದ ಮಕ್ಕಳು ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಜನರು ಸೊಪ್ಪಿನ ಬೆಟ್ಟ, ತೋಟಕ್ಕೆ ತೆರಳಲು ಆತಂಕ ಪಡುತ್ತಿದ್ದು, ಸಂಜೆಯಾಗುತ್ತಿದ್ದಂತೆ ಭಯದಲ್ಲಿ ಗ್ರಾಮಗಳು ಖಾಲಿ ಹೊಡೆಯುತ್ತಿದೆ.

    ಪ್ರತಿ ದಿನ ಚಿರತೆಗಳು ಗ್ರಾಮದಲ್ಲಿ ಕಾಣಿಸುತ್ತಿರುವುದರಿಂದ ಗ್ರಾಮದಲ್ಲಿ ಭಯ ಆವರಿಸಿದೆ. ಜಾನುವಾರುಗಳ ಮೇಲೆ ನಿರಂತರ ದಾಳಿ ನಡೆಸುತ್ತಿರುವ ಚಿರತೆ ಸೆರೆಹಿಡಿಯಲು ಅರಣ್ಯ ಇಲಾಖೆ ಆಯ್ದ ಜಾಗಗಳನ್ನು ಗುರುತಿಸಿ ಅಲ್ಲಿ ಬೋನುಗಳನ್ನು ಇರಿಸಿದೆ. ಅರಣ್ಯ ರಕ್ಷಕರು ಗಸ್ತು ತಿರುಗಲು ಆರಂಭಿಸಿದ್ದಾರೆ. ಇದನ್ನೂ ಓದಿ: ಮದುವೆಗಾಗಿ ಮತಾಂತರ ತಪ್ಪು: ಮೋಹನ್ ಭಾಗವತ್

    ಜನರ ಆತಂಕ ದೂರ ಮಾಡಲು ಜಾನುವಾರುಗಳನ್ನು ಬಲಿ ಪಡೆಯುತ್ತಿರುವ ಪ್ರಾಣಿ ಸೆರೆ ಹಿಡಿಯುವ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಯಕ್ಕುಂಬಿ ವಿಭಾಗದ ಡೆಪ್ಯುಟಿ ಆರ್.ಎಫ್.ಓ ರವೀಂದ್ರ ಎಸ್.ಕರ್ನಲ್ ಮಾಹಿತಿ ನೀಡಿದ್ದಾರೆ. ಚಿರತೆ ದಾಳಿಗೆ ಮೃತಪಟ್ಟ ಆಕಳುಗಳ ವಾರಸುದಾರರಿಗೆ ಇಲಾಖೆಯಿಂದ ಪರಿಹಾರ ಒದಗಿಸಲಾಗುವುದು. ಗ್ರಾಮಗಳತ್ತ ಚಿರತೆ ನುಗ್ಗದಂತೆ ಎಚ್ಚರವಹಿಸಲಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಗ್ಗತ್ತಲಲ್ಲಿ ಕರ್ನಾಟಕ ಮುಳುಗುವ ಆತಂಕ – ಇಂಧನ ಸಚಿವರು ಹೇಳಿದ್ದೇನು?

    ಶಿರಸಿ ವಿಭಾಗದ ಡಿಸಿಎಫ್ ಎಸ್.ಜಿ ಹೆಗಡೆ ಮಾರ್ಗದರ್ಶನದಲ್ಲಿ ಎ.ಸಿ.ಎಫ್. ಅಶೋಕ್ ಅಲಗೇರ್, ಬನವಾಸಿ ಆರ್.ಎಫ್.ಒ. ಉಷಾ ಕಬ್ಬೇರರವರ ತಂಡ ರಚನೆ ಮಾಡಿ ಚಿರತೆ ಹಿಡಿಯುವ ಕಾರ್ಯಾಚರಣೆ ನಡೆದಿದೆ.

  • 83 ಕೆ.ಜಿ. ಶ್ರೀಗಂಧದ ಜೊತೆ ಇಬ್ಬರ ಬಂಧನ

    83 ಕೆ.ಜಿ. ಶ್ರೀಗಂಧದ ಜೊತೆ ಇಬ್ಬರ ಬಂಧನ

    ದಾವಣಗೆರೆ: ಶ್ರೀಗಂಧ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ಚನ್ನಗಿರಿ ವಲಯ ಅರಣ್ಯ ಇಲಾಖೆಯ ಸಿಬ್ಬಂದಿ ಇಬ್ಬರನ್ನು ಬಂಧಿಸಿದ್ದಾರೆ.

    ಜಿಲ್ಲೆಯ ಚನ್ನಗಿರಿ ತಾಲೂಕಿನ ಶಾಂತಿ ಸಾಗರ ಅರಣ್ಯ ಪ್ರದೇಶದಲ್ಲಿ ಶ್ರೀಗಂಧ ಕಡಿದು ಸಾಗಿಸುತ್ತಿದ್ದ ಆರೋಪಿಗಳನ್ನು ಹೆಡೆಮುರಿ ಕಟ್ಟಲಾಗಿದೆ. ಮುನಿಯಪ್ಪ, ರಾಧಾಕೃಷ್ಣ ಬಂಧಿತ ಆರೋಪಿಗಳು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಾವಿನಕಟ್ಟೆ ವಲಯ ಅರಣ್ಯ ಇಲಾಖೆಯ ಸಿಬ್ಬಂದಿಗಳು. ಇದನ್ನೂ ಓದಿ: ಫಿಟ್ ಆಗಿದ್ದ ಸಿದ್ಧಾರ್ಥ್ ಹೃದಯಾಘಾತಕ್ಕೆ ಕಾರಣವೇನು?

    ಬಂಧಿತರಿಂದ 83 ಕೆ.ಜಿ. ಶ್ರೀಗಂಧ, ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಕುರಿತು ಅರಣ್ಯಾಧಿಕಾರಿಗಳು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಇನ್ನು ಹೆಚ್ಚಿನ ಜನರ ಬಂಧನಕ್ಕೆ ಬಕೆ ಬೀಸಿದ್ದಾರೆ.

  • ಬೆಂಕಿ ನಂದಿಸುವವರ ಬಾಳಿಗೇ ಬೆಂಕಿಯಿಟ್ಟ ಅರಣ್ಯ ಅಧಿಕಾರಿಗಳು

    ಬೆಂಕಿ ನಂದಿಸುವವರ ಬಾಳಿಗೇ ಬೆಂಕಿಯಿಟ್ಟ ಅರಣ್ಯ ಅಧಿಕಾರಿಗಳು

    ಬೆಳಗಾವಿ: ಕಾಡಿನಲ್ಲಿ ಬೆಂಕಿ ನಂದಿಸುವ ಕಾರ್ಮಿಕರ ಬಾಳಿಗೇ ಅರಣ್ಯ ಅಧಿಕಾರಿಗಳು ಬೆಂಕಿಯಿಟ್ಟರಾ ಎಂಬ ಪ್ರಶ್ನೆ ಕಾಡುತ್ತಿದ್ದು, ಒಂದು ಹೊತ್ತು ಊಟಕ್ಕೂ ಗತಿಯಿಲ್ಲದೆ ಬಡ ಕುಟುಂಬಗಳು ಬೀದಿಗೆ ಬಂದಿವೆ.

    ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪೂರ ಜಿಲ್ಲೆಯ ದಿನಗೂಲಿ ಕಾರ್ಮಿಕರನ್ನು ಅರಣ್ಯಾಧಿಕಾರಿಗಳು ಬೀದಿಗೆ ತಳ್ಳಿದ್ದಕ್ಕೆ ಪ್ರತಿಭಟನೆ ನಡೆಸಿದರು. ನರೇಗಾ ಯೋಜನೆಯಲ್ಲಿ ಕನಿಷ್ಟ 150 ದಿನಗಳಾದರೂ ಕೆಲಸ ನೀಡಿ ಮತ್ತು ನಮಗೆ ಜಾಬ್ ಕಾರ್ಡ್ ನೀಡಿ ಎಂಬುದು ಕಾರ್ಮಿಕರ ಬೇಡಿಕೆ. ದಿನಗೂಲಿ ಅರಣ್ಯ ಕಾರ್ಮಿಕರಿಗೆ ಗುರುತಿನ ಚೀಟಿ, ಸಮವಸ್ತ್ರ ನೀಡಿ ಎಂದು ಕಾರ್ಮಿಕ ಸಂಘಟನೆಗಳು ಡಿಸೆಂಬರ್ 23 ರಂದು ಸರ್ಕಾರಕ್ಕೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದಿವೆ. ಹೀಗಾಗಿ ಕೆಲಸದಿಂದ ತೆಗೆಯುತ್ತಿದ್ದಾರೆ ಎಂದು ಕಾರ್ಮಿಕ ಮುಖಂಡರ ಆರೋಪವಾಗಿದೆ. ಇನ್ನೊಂದೆಡೆ ಕೆಲಸವಿದ್ದಾಗ ಮಾತ್ರ ನಾವು ದಿನಗೂಲಿ ನೀಡುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

    ಕಾರ್ಮಿಕರ ತೊಂದರೆ ಏನು ಎಂಬುದು ನನ್ನ ಗಮನಕ್ಕೆ ಬಂದಿದೆ. ಅವರ ಜಾಬ್ ಕಾರ್ಡ್ ಇಲ್ಲ ಎಂಬುದು ಗೊತ್ತಾಗಿದೆ. ಈ ಕುರಿತು ಜಿಲ್ಲಾ ಅರಣ್ಯ ಅಧಿಕಾರಿಗಳನ್ನು ಕರೆದು ಮಾಹಿತಿ ಪಡೆಯುತ್ತೇನೆ. ಕಾರ್ಮಿಕರ ಸಮಸ್ಯೆ ಸುಖಾಂತ್ಯವಾಗುವ ರೀತಿ ಕ್ರಮ ಕೈಗೊಳ್ಳುತ್ತೇನೆ ಎಂದು ಸಿಸಿಎಫ್ ಬಸವರಾಜ್ ಪಾಟೀಲ್ ತಿಳಿಸಿದ್ದಾರೆ.

    ಅರಣ್ಯ ಇಲಾಖೆಯಲ್ಲಿ ತುರ್ತು ಕೆಲಸಕ್ಕಾಗಿ ನಿಯೋಜನೆಗೊಂಡ ದಿನಗೂಲಿ ನೌಕರರು ಕಾಡಿಗೆ ಬೆಂಕಿ ಬಿದ್ದಾಗ ಅಥವಾ ಕಾಡುಪ್ರಾಣಿಗಳು ನಾಡಿಗೆ ಬಂದಾಗ ತುರ್ತು ಕೆಲಸವನ್ನು ನಿರ್ವಹಿಸುವ ಕೌಶಲ ಹೊಂದಿದವರು. ಕಾಡಿಗೆ ಬೆಂಕಿ ಬಿದ್ದಾಗ ತಕ್ಷಣ ಕಾರ್ಯಪ್ರವರ್ತರಾಗುವ ಇವರ ಬಾಳಲ್ಲಿ ಈಗ ಬೆಂಕಿ ಬಿದ್ದಿದೆ. ಕೆಲಸವಿಲ್ಲ ನೀವು ಯಾರು ಎಂಬುದೇ ನಮಗೆ ಗೊತ್ತಿಲ್ಲ ಎಂದು ಅರಣ್ಯ ಅಧಿಕಾರಿಗಳು ಬೇಜವಾಬ್ದಾರಿ ಹೇಳಿಕೆ ನೀಡಿ ಇವರನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಅಲ್ಲದೆ ಕ್ವಾಟ್ರಸ್ ಖಾಲಿ ಮಾಡಿ ಇಲ್ಲದಿದ್ದರೆ ಪಾತ್ರೆಗಳನ್ನು ಹೊರಕ್ಕೆ ಬೀಸಾಡುತ್ತೇವೆ ಎಂದು ಧಮಕಿ ಹಾಕುತ್ತಿದ್ದಾರೆ.

  • ನರಭಕ್ಷಕ ಚಿರತೆ ಸೆರೆಗೆ ಕೃತಕ ಕುರಿ ಹಟ್ಟಿ ತಯಾರಿ- ಅಧಿಕಾರಿಗಳಿಗೆ ಸವಾಲಾದ ಗುಹೆಗಳು

    ನರಭಕ್ಷಕ ಚಿರತೆ ಸೆರೆಗೆ ಕೃತಕ ಕುರಿ ಹಟ್ಟಿ ತಯಾರಿ- ಅಧಿಕಾರಿಗಳಿಗೆ ಸವಾಲಾದ ಗುಹೆಗಳು

    – ಚಿರತೆ ತಿರುಗಾಡುವ ಸೂಕ್ಷ್ಮ ಸ್ಥಳಗಳ ಪತ್ತೆ

    ಕೊಪ್ಪಳ: ಕಳೆದ ಎರಡು ತಿಂಗಳಿಂದ ಅಧಿಕಾರಿಗಳ ನಿದ್ದೆಗೆಡಿಸಿರುವ ನರಭಕ್ಷಕ ಚಿರತೆ ಸೆರೆ ಹಿಡಿಯಲು ಅಕಾರಿಗಳು ನಾನಾ ತಂತ್ರಗಳನ್ನು ರೂಪಿಸಿ, ಕಾರ್ಯಚರಣೆ ನಡೆಸಿದರೂ ಪ್ರಯೋಜನವಾಗಿಲ್ಲ. ಇದೀಗ ಕುರಿ ಸಾಕಾಣಿಕೆಯ ಕೃತಕ ಹಟ್ಟಿ ನಿರ್ಮಿಸಿ, ಚಿರತೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಸಂಚು ರೂಪಿಸಿದ್ದಾರೆ.

    ಪ್ರವಾಸಿಗರ ನೆಚ್ಚಿನ ಸ್ಥಳ ಎಂದು ಗುರುತಿಸಿಕೊಂಡಿದ್ದ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ, ವಿರುಪಾಪೂರ ಗಡ್ಡೆ, ಸಣಾಪೂರ, ಜಂಗ್ಲಿ ಗ್ರಾಮಗಳಲ್ಲಿ ನರಭಕ್ಷಕ ಚಿರತೆ ಕಾಟ ಹೆಚ್ಚಳವಾಗಿದೆ. ಮೂರ್ನಾಲ್ಕು ತಿಂಗಳಿನಲ್ಲಿ ಈಗಾಗಲೇ ಇಬ್ಬರು ಯುವಕರನ್ನು ಬಲಿ ಪಡೆದಿರುವ ಚಿರತೆ, ಇಬ್ಬರನ್ನು ಗಂಭೀರವಾಗಿ ಗಾಯಗೊಳಿಸಿದೆ. ಇಂತಹ ನರಭಕ್ಷಕ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳು ಎರಡು ತಿಂಗಳಿಂದ ಇಲ್ಲಿಯೇ ಬೀಡು ಬಿಟ್ಟು, ಆನೆ, ನೆಟ್‍ವರ್ಕ್ ಟ್ರ್ಯಾಪರ್, ಸೆನ್ ಸರ್ವೆ, ಟ್ರ್ಯಾಪ್ ಕ್ಯಾಮೆರಾ, ಬೋನ್ ಅಳವಡಿಕೆ ಸೇರಿದಂತೆ ನಾನಾ ಕಾರ್ಯಚರಣೆಗಳನ್ನು ನಡೆಸುತ್ತಿದ್ದಾರೆ. ಆದರೆ ಎರಡು ತಿಂಗಳಿಂದ ನರಭಕ್ಷಕ ಚಿರತೆ ಕಣ್ತಪ್ಪಿಸಿಕೊಂಡು ತಿರುಗಾಡುತ್ತಿದ್ದು, ಅಧಿಕಾರಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ.

    ವೈಜ್ಞಾನಿಕ ಕಾರ್ಯಚರಣೆ ನಡೆಸಿ ಅರಣ್ಯ ಇಲಾಖೆ ಅಕಾರಿಗಳು ಯಶಸ್ವಿಯಾಗದಿರುವುದರಿಂದ ಬೆಸತ್ತು ಕೃತಕ ಪ್ರಯೋಗಕ್ಕೆ ಮುಂದಾಗಿದ್ದಾರೆ. ಸೆನ್ ಸರ್ವೆ ಮೂಲಕ ಚಿರತೆ ಚಲನವಲನಗಳ ಬಗ್ಗೆ ಮಾಹಿತಿ ಕಲೆ ಹಾಕಿದ ಅಧಿಕಾರಿಗಳು, ಹೆಚ್ಚು ಕಾಣಿಸಿಕೊಳ್ಳುವ ಸ್ಥಳವಾಗಿರುವ ಜಂಗ್ಲಿ ಸಮೀಪದಲ್ಲಿ ಕೃತಕ ಕುರಿ ಹಟ್ಟಿಯನ್ನು ನಿರ್ಮಿಸಲು ಮುಂದಾಗಿದ್ದಾರೆ. ಕೃತಕ ಹಟ್ಟಿಯಲ್ಲಿ ಕುರಿ ಮರಿಗಳ ಸಾಕಾಣಿಕೆ ಮಾಡಿ, ಅದಕ್ಕೆ ಹೊಂದಿಕೊಂಡಂತೆ ಬೋನ್ ಅಳವಡಿಸಲಾಗಿದೆ. ಹಟ್ಟಿಯಲ್ಲಿನ ಕುರಿಗಳ ಮೇಲೆ ದಾಳಿ ಮಾಡಲು ಚಿರತೆ ಬರುವ ವೇಳೆ ಅಧಿಕಾರಿಗಳು ಅರವಳಿಕೆ ನೀಡಲು ಕೂಡ ಸಂಚು ರೂಪಿಸಿದ್ದಾರೆ.

    ಸವಾಲಿನ ಕೆಲಸ: ಎರಡು ತಿಂಗಳಿಂದ ಕಾರ್ಯಚರಣೆ ನಡೆಸುತ್ತಿರುವ ಅಧಿಕಾರಿಗಳು, ನರಭಕ್ಷಕ ಚಿರತೆಯ ಚಲನವಲನಗಳನ್ನು ಗಂಭೀರವಾಗಿ ಪರಿಶೀಲಿಸಿದ್ದಾರೆ. ಬನ್ನೇರುಘಟ್ಟ, ಚಿತ್ರದುರ್ಗ, ಮೈಸೂರು, ದರೋಜಿಯಿಂದ ತತ್ಞರು ಭೇಟಿಯನ್ನು ನೀಡಿ, ಚಿರತೆಯ ಮೂತ್ರ, ಲದ್ದಿ, ತಿಂದು ಬಿಟ್ಟಿರುವ ಮಾಂಸದ ತುಕುಣುಗಳು, ತಿರುಗಾಡುವ ಸ್ಥಳಗಳ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಅಧಿಕಾರಿಗಳು ಹೇಳುವ ಪ್ರಕಾರ ಸಣಾಪೂರ ಗ್ರಾಮದಿಂದ ಸಂಗಾಪೂರ ಗ್ರಾಮದವರೆಗೆ ಅಂದರೆ 32 ಚ.ಕಿ.ಮೀ ಯಲ್ಲಿ ಚಿರತೆ ಸಂಚಾರ ನಡೆಸುತ್ತಿದೆ. ಇಂತಹ ವಿಶಾಲ ಬೆಟ್ಟಗುಡ್ಡಗಳ ಸಾಲಿನಲ್ಲಿ ಗುಹೆಗಳು ಹೆಚ್ಚಾಗಿದ್ದು, ಚಿರತೆ ವಾಸಕ್ಕೆ ಯೋಗ್ಯವಾಗಿದೆ. ಸೆನ್ ಸರ್ವೆಯಲ್ಲಿ ಸಾಕಷ್ಟು ಗುಹೆಗಳು ಪತ್ತೆಯಾಗಿದ್ದು, ಗುಹೆಗಳಲ್ಲಿ ಚಿರತೆ ವಾಸವಾಗಿದ್ದರೆ ಗುರುತಿಸುವುದು ಅಧಿಕಾರಿಗಳಿಗೆ ಸವಾಲಿನ ಕೆಲಸವಾಗಿದೆ.

  • ಕಾಡು ಪ್ರಾಣಿಗಳ ಬೇಟೆಯಾಡುತ್ತಿದ್ದ 7 ಜನರ ಬಂಧನ

    ಕಾಡು ಪ್ರಾಣಿಗಳ ಬೇಟೆಯಾಡುತ್ತಿದ್ದ 7 ಜನರ ಬಂಧನ

    – ಬಂದೂಕು, ಪಿಸ್ತೂಲ್, ವಾಹನಗಳ ವಶ

    ಚಿತ್ರದುರ್ಗ: ಅಕ್ರಮವಾಗಿ ಕಾಡು ಪ್ರಾಣಿಗಳ ಬೇಟೆಯಾಡುತ್ತಿದ್ದ ಏಳು ಮಂದಿ ಬೇಟೆಗಾರರನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ ಪಿಸ್ತೂಲು, ಬಂದೂಕು ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಜಿಲ್ಲೆಯ ಹಿರಿಯೂರು ತಾಲೂಕಿನ ಕಾಡಿನಂಚಿನಲ್ಲಿ ಘಟನೆ ನಡೆದಿದ್ದು, ಆರೋಪಿಗಳು ತಂದಿದ್ದ ಅತ್ಯಾಧುನಿಕ ನಾಲ್ಕು ಬಂದೂಕುಗಳನ್ನು, ಒಂದು ಪಿಸ್ತೂಲ್, ಬೌ ಆ್ಯಂಡ್ ಆರೋ, ಹೈ ಫ್ಲ್ಯಾಶ್ ಲೈಟ್‍ಗಳು ಹಾಗೂ ಬೇಟೆಗೆ ಉಪಯೋಗಿಸುವ ಹಲವಾರು ಉಪಕರಣಗಳು, ಬೇಟೆಗಾರರ ಎರಡು ಮಹಿಂದ್ರ ಜೀಪ್ ಹಾಗೂ ಮಹಿಂದ್ರ ಸ್ಕಾರ್ಪಿಯೋ ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

    ಬಂಧಿತ 7 ಮಂದಿ ಆರೋಪಿಗಳು ಶಿವಮೊಗ್ಗ, ಬೆಂಗಳೂರು ಮೂಲದವರಾಗಿದ್ದು, ಪ್ರಮುಖ ನಾಲ್ಕು ಮಂದಿ ಬೇಟೆಗಾಗರರು ಮತ್ತು ಮೂರು ಮಂದಿ ವಾಹನಗಳ ಚಾಲಕರಾಗಿದ್ದಾರೆ. ಬೇಟೆಗಾರರನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ಮತ್ತು ವನ್ಯಜೀವಿ ಪರಿಪಾಲಕರು ಕಾರ್ಯ ಪ್ರವೃತ್ತರಾಗಿ, ಇಡೀ ಅರಣ್ಯ ಪ್ರದೇಶವನ್ನು ಎರಡು ಬಾರಿ ಸ್ಥಳ ವೀಕ್ಷಣೆ ಮಾಡಿ ಖಚಿತಪಡಿಸಿಕೊಂಡಿದ್ದಾರೆ. ಬಳಿಕ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಚಿತ್ರದುರ್ಗ ಜಿಲ್ಲಾ ಗೌರವ ವನ್ಯಜೀವಿ ಪರಿಪಾಲಕರಾದ ರಘುರಾಮ್ ಜಿ.ಎಚ್., ಹಿರಿಯೂರು ವಲಯ ಅರಣ್ಯಾಧಿಕಾರಿ ಶ್ರಿಹರ್ಷ, ಉಪ ವಲಯ ಅರಣ್ಯಾಧಿಕಾರಿ ಪ್ರದೀಪ್ ಕೇಸರಿ ಮತ್ತು ಸಿಬ್ಬಂದಿ ನೇರವಾಗಿ ದಾಳಿ ನಡೆಸಿ ಬೇಟೆಗಾರರನ್ನು ಹಿಡಿದಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸಿಸಿಎಫ್ ಲಿಂಗರಾಜು ಬೆನ್ನೆಲುಬಾಗಿ ನಿಂತು ಮಾರ್ಗದರ್ಶನ ನೀಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

  • ಮಾರುವೇಷದಲ್ಲಿ ಹೋಗಿ ಕೃಷ್ಣಮೃಗ ಬೇಟೆಗಾರರನ್ನು ಬಂಧಿಸಿದ ಅರಣ್ಯಾಧಿಕಾರಿಗಳು

    ಮಾರುವೇಷದಲ್ಲಿ ಹೋಗಿ ಕೃಷ್ಣಮೃಗ ಬೇಟೆಗಾರರನ್ನು ಬಂಧಿಸಿದ ಅರಣ್ಯಾಧಿಕಾರಿಗಳು

    – 20 ಕೃಷ್ಣಮೃಗ ಚರ್ಮ, 2 ಕೊಂಬು ವಶಕ್ಕೆ, 6 ಮಂದಿ ಅರೆಸ್ಟ್

    ಕೊಪ್ಪಳ: ಕೃಷ್ಣಮೃಗಳ ಬೇಟೆಯಾಡಿ ಚರ್ಮ, ಕೊಂಬುಗಳ ಮಾರಾಟ ಮಾಡುತ್ತಿದ್ದ ಗ್ಯಾಂಗ್‍ವೊಂದನ್ನು ಅರಣ್ಯಾಧಿಕಾರಿಗಳು ಬಂಧಿಸಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಹುಣಸಿಹಾಳ ಗ್ರಾಮದ ನಿವಾಸಿಗಳಾದ ತುಗ್ಲೆಪ್ಪ, ಶರಣಪ್ಪ ಚೌಹಾಣ, ಮಲ್ಲಯ್ಯ ಹಿರೇಮಠ, ಶಿವಯ್ಯ ಹಿರೇಮಠ, ಸಂಗಪ್ಪ ಕಟ್ಟಿಮನಿ, ಹನುಮಂತ ಕಟ್ಟಿಮನಿ ಬಂಧಿತರಾಗಿದ್ದಾರೆ. ಬಂಧಿತ ಆರೋಪಿಗಳು ಯಲಬುರ್ಗಾ ಭಾಗದ ಅರಣ್ಯ ಪ್ರದೇಶಗಳಲ್ಲಿ ಕೃಷ್ಣಮೃಗಗಳನ್ನು ಬೇಟೆಯಾಡಿ ಅದರ ಚರ್ಮ ಮತ್ತು ಕೊಂಬುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು.

    ಬಂಧಿತರಿಂದ 20 ಕೃಷ್ಣಮೃಗ ಚರ್ಮ, 2 ಕೃಷ್ಣಮೃಗ ಟ್ರೋಫಿಯುಳ್ಳ ಕೊಂಬು, ಒಂದು ಜಿಂಕೆ ಮರಿ ಸೇರಿದಂತೆ ದಂಧೆಗೆ ಬಳಸುತ್ತಿದ್ದ ಮೂರು ಬೈಕ್ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆಗಿಳಿದು ಕೃಷ್ಣಮೃಗ ಬೇಟೆಗಾರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಕೃಷ್ಣಮೃಗದ ಒಂದು ಚರ್ಮಕ್ಕೆ 50 ಸಾವಿರ ರೂಪಾಯಿಯಂತೆ ಮಾರಾಟ ಮಾಡುತ್ತಿದ್ದರು. ಬೆಂಗಳೂರು, ಮಂಗಳೂರು ಭಾಗದಲ್ಲಿ ಮಾರಾಟ ಮಾಡಿ ದುಡ್ಡು ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಸಿನಿಮಿಯ ರೀತಿಯಲ್ಲಿ ಅರಣ್ಯ ಅಧಿಕಾರಿಗಳು ಮಾರುವೇಶ ಧರಿಸಿಕೊಂಡು ಜಿಂಕೆ ಚರ್ಮ ಖರೀದಿಗೆ ಬಂದಿದ್ದೇವೆ ಎಂದು ಹೇಳಿ ಗ್ಯಾಂಗ್‍ನ್ನು ಸೆರೆಹಿಡಿದಿದ್ದಾರೆ. ಅರಣ್ಯ ಇಲಾಖೆಯ ಈ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

  • ಆಹಾರ ಹುಡುಕಿ ನಾಡಿಗೆ ಬಂದ ಕಾಡಾನೆ- ವಿದ್ಯುತ್ ಸ್ಪರ್ಶಿಸಿ ದುರ್ಮರಣ

    ಆಹಾರ ಹುಡುಕಿ ನಾಡಿಗೆ ಬಂದ ಕಾಡಾನೆ- ವಿದ್ಯುತ್ ಸ್ಪರ್ಶಿಸಿ ದುರ್ಮರಣ

    ಮಂಗಳೂರು: ಆಹಾರ ಅರಸಿ ನಾಡಿಗೆ ಬಂದಿದ್ದ ಕಾಡಾನೆ ವಿದ್ಯತ್ ಸ್ಪರ್ಷಿಸಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೊಂಬಾರುನಲ್ಲಿ ವಿದ್ಯುತ್ ಲೈನ್ ಸ್ಪರ್ಶದಿಂದಾಗಿ ಕಾಡಾನೆ ಮೃತಪಟ್ಟಿದೆ. ಇಂದು ಬೆಳಗಿನ ಜಾವ ಆಹಾರ ಹುಡುಕಿ ಬಂದ ಸುಮಾರು 35 ರಿಂದ 40 ವರ್ಷದ ಗಂಡು ಕಾಡಾನೆ ಸ್ಥಳದಲ್ಲಿದ್ದ ಈಚಲು ಮರದ ಗರಿ ತಿನ್ನಲು ಯತ್ನಿಸಿದ್ದು, ಈ ಸಮಯದಲ್ಲಿ ಮರ ವಿದ್ಯುತ್ ಲೈನ್ ಗೆ ತಾಗಿ ವಿದ್ಯುತ್ ಸ್ಪರ್ಶ ಆಗಿದೆ. ಹೀಗಾಗಿ ಆನೆ ಅಸುನೀಗಿದೆ.

    ಆನೆಯನ್ನು ನೋಡಲು ನೂರಾರು ಜನ ಆಗಮಿಸಿದ್ದು, ದೇವರ ಸಮನವಾದ ಆನೆಯನ್ನು ಮುಟ್ಟಿ ನಮಸ್ಕರಿಸಿದ ದೃಶ್ಯವೂ ಕಂಡು ಬಂತು. ಸ್ಥಳಕ್ಕೆ ವಲಯ ಅರಣ್ಯಧಿಕಾರಿ ರಾಘವೇಂದ್ರ ಸೇರಿದಂತೆ ಅರಣ್ಯ ಇಲಾಖೆಯ ಇತರ ಅಧಿಕಾರಿಗಳು, ಮೆಸ್ಕಾಂ ಅಧಿಕಾರಿಗಳು, ಕಡಬ ಠಾಣೆಯ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಇಂದು ನಸುಕಿನ ಜಾವ ಘಟನೆ ನಡೆದಿರಬಹುದು ಎನ್ನಲಾಗಿದೆ. ಅರಣ್ಯಗಳ ಬದಿಯಲ್ಲಿ ಕಂದಕಗಳನ್ನು ನಿರ್ಮಿಸಿ, ಕಾಡುಪ್ರಾಣಿಗಳನ್ನು ಹಾಗೂ ಸ್ಥಳೀಯ ಕೃಷಿಕರು ಹಾಗೂ ಗ್ರಾಮಸ್ಥರಿಗೆ ರಕ್ಷಣೆ ಒದಗಿಸಬೇಕೆಂದು ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.