Tag: ಅರಣ್ಯಧಿಕಾರಿ

  • ಮಹಿಳಾ ಅರಣ್ಯಾಧಿಕಾರಿಯನ್ನು ಪ್ರಭಾವ ಬಳಸಿ ವರ್ಗಾವಣೆ – ಹರೀಶ್ ಪೂಂಜಾ ವಿರುದ್ಧ ಗಂಭೀರ ಆರೋಪ

    ಮಹಿಳಾ ಅರಣ್ಯಾಧಿಕಾರಿಯನ್ನು ಪ್ರಭಾವ ಬಳಸಿ ವರ್ಗಾವಣೆ – ಹರೀಶ್ ಪೂಂಜಾ ವಿರುದ್ಧ ಗಂಭೀರ ಆರೋಪ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಅರಣ್ಯ ಸಂಚಾರಿ ದಳದ ಮಹಿಳಾ ಅಧಿಕಾರಿ ಸಂಧ್ಯಾ ಸಚಿನ್‍ರನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ತನ್ನ ಪ್ರಭಾವವನ್ನು ಬಳಸಿಕೊಂಡು ವರ್ಗಾವಣೆ ಮಾಡಿರುವ ಆರೋಪ ಕೇಳಿಬಂದಿದೆ.

    ದಕ್ಷಿಣ ಕನ್ನಡ ಜಿಲ್ಲಾ ಅರಣ್ಯ ಸಂಚಾರಿದಳದ ಪ್ರಭಾರ ಅಧಿಕಾರಿಯಾಗಿದ್ದ ಸಂಧ್ಯಾ ಸಚಿನ್, ಬೆಳ್ತಂಗಡಿ ತಾಲೂಕಿನ ಅಕ್ರಮ ಮರ ಸಾಗಾಟಗಾರರ ಮರಮಟ್ಟು, ವಾಹನ ವಶಪಡಿಸಿಕೊಂಡಿದ್ದರು. ಇದಕ್ಕೆ ಹರೀಶ್ ಪೂಂಜಾ ಆಕ್ಷೇಪ ವ್ಯಕ್ತಪಡಿಸಿದ್ದರು. ಆ ಬಳಿಕ ಹರೀಶ್ ಪೂಂಜಾ ಅರಣ್ಯ ಅಧಿಕಾರಿಯನ್ನು ಬೀದರ್‌ಗೆ ವರ್ಗಾವಣೆ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದರು ಎಂಬ ಆರೋಪವಿದೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಮೋದಿ ದೀರ್ಘಾಯಸ್ಸು, ಆರೋಗ್ಯ ವೃದ್ಧಿಗಾಗಿ ಮಹಾಮೃತ್ಯುಂಜಯ ಯಾಗ

    ಸದ್ಯ ಬೀದರ್‌ನ ನೌಬಾದ್ ಅರಣ್ಯ ತರಬೇತಿ ಕೇಂದ್ರಕ್ಕೆ ಸಂಧ್ಯಾ ಸಚಿನ್ ವರ್ಗಾವಣೆಯಾಗಿದ್ದಾರೆ. ಈ ನಡುವೆ ಹರೀಶ್ ಪೂಂಜಾ, ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರಕ್ಕೆ ಬಸವರಾಜ ಬೊಮ್ಮಾಯಿ ಸಹಿ ಹಾಕಿರುವ ಪತ್ರದ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಗಮನಿಸಿ ಶಾಸಕರು ಮರಗಳ್ಳರಿಗೆ ಬೆಂಬಲಿಸಿ ದ್ವೇಷದಿಂದ ವರ್ಗ ಮಾಡಿದ್ದಾರೆ ಎಂದು ಸಂಧ್ಯಾ ಸಚಿನ್ ಆರೋಪಿಸಿದ್ದಾರೆ. ಇದನ್ನೂ ಓದಿ: ನೈಟ್ ಕರ್ಫ್ಯೂ ರದ್ದು – ಸಿನಿಮಾಗೆ ಶೇ.50 ರಷ್ಟು ನಿರ್ಬಂಧ ಮುಂದುವರಿಕೆ

    ಶಾಸಕರು ಕೋಪಗೊಂಡು ನನ್ನಲ್ಲಿ ವೈಯಕ್ತಿಕ ದ್ವೇಷ ಹಗೆತನ ಸಾಧಿಸಿ ಬೀದರ್‌ಗೆ ವರ್ಗಾವಣೆ ಮಾಡಿದ್ದಾರೆ. ಇದು ಏಕಪಕ್ಷೀಯ ಆದೇಶ ಎಂದು ಆರೋಪಿಸಿ ಸಂಧ್ಯಾ ಸಚಿನ್ ನ್ಯಾಯ ಒದಿಗಿಸಿಕೊಡಿ ಎಂದು ಬೆಳ್ತಂಗಡಿ ನಾರಾಯಣ ಗುರು ಸ್ವಾಮಿ ಸೇವಾ ಸಂಘಟನೆಗೆ ಪತ್ರ ಬರೆದಿದ್ದಾರೆ. ಇದೀಗ ಸಂಧ್ಯಾ ಸಚಿನ್ ಬರೆದಿರುವ ಪತ್ರ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಒಟ್ಟಿನಲ್ಲಿ ಸರ್ಕಾರಿ ಅಧಿಕಾರಿ ಮತ್ತು ಜನಪ್ರತಿನಿಧಿಗಳ ಸಂಘರ್ಷ ಪದೇ ಪದೇ ರಾಜ್ಯದಲ್ಲಿ ಸದ್ದು ಮಾಡುತ್ತಿದೆ.

  • ಕೃಷ್ಣಮೃಗಗಳ ಕಾಟ, ಕಡಲೆಬೆಳೆ ನಾಶ- ಚಿತ್ರದುರ್ಗದ ರೈತರಲ್ಲಿ ಆತಂಕ

    ಕೃಷ್ಣಮೃಗಗಳ ಕಾಟ, ಕಡಲೆಬೆಳೆ ನಾಶ- ಚಿತ್ರದುರ್ಗದ ರೈತರಲ್ಲಿ ಆತಂಕ

    ಚಿತ್ರದುರ್ಗ: ಕೋಟೆನಾಡಿನ ರೈತರ ಬೆಳೆಗಳಿಗೆ ಇವರೆಗೆ ಕೀಟಬಾಧೆ ಹಾಗೂ ನೀರಿನ ಅಭಾವ ಕಾಡುತ್ತಿತ್ತು. ಆದರೆ ಈಗ ಹೊಸ ಪ್ರಾಣಿಗಳ ಕಾಟ ರೈತರಿಗೆ ತಲೆನೋವು ತಂದಿದೆ.

    ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಹೂವಿನ ಹೊಳೆ ಗ್ರಾಮದ ರೈತ ರಾಜೇಂದ್ರ ಎಂಬವರು ಸುಮಾರು 20ಕ್ಕೂ ಹೆಚ್ಚು ಎಕರೆಗಳಲ್ಲಿ ಕಡಲೆಬೆಳೆಯನ್ನು ಬೆಳೆದಿದ್ದಾರೆ. ಈ ಕಡಲೆಬೆಳೆಯನ್ನು ಕೃಷ್ಣಮೃಗ ಪ್ರತಿನಿತ್ಯ ತಿಂದು ಹಾಕುತ್ತಿವೆ. ಹೀಗಾಗಿ ರೈತ ರಾಜೇಂದ್ರ ಕಣ್ಣೀರು ಹಾಕುತ್ತಿದ್ದಾರೆ.

    ಇದೇ ಗ್ರಾಮದ ರೈತರು ನೂರಾರು ಎಕರೆ ಜಮೀನಿನಲ್ಲಿ ಈ ಕಡಲೆಬೆಳೆಯನ್ನು ಬೆಳೆದಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಈ ಬಗ್ಗೆ ಮಾತನಾಡಿದ ರೈತರು, ಕೈಗೆ ಬಂದ ಬೆಳೆ ಇದೇ ರೀತಿ ದಿನನಿತ್ಯ ಕಡವೆ ಮತ್ತು ಕೃಷ್ಣಮೃಗಗಳ ಪಾಲಾಗುತ್ತಿದ್ದು, ನಮ್ಮ ಬೆಳೆ ನಾಶವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಇರುವುದನ್ನು ಕಾಪಾಡಿಕೊಳ್ಳಲು ಪ್ರಯತ್ನ ಮಾಡುತ್ತೇವೆ ಎಂದು ಹೇಳಿದ್ದಾರೆ.

    ಇದಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿ ಮಾಡಲಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ರೈತ ರಾಜೇಂದ್ರ, ಕಳೆದ ವರ್ಷ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕ ಮಾಡಿದ್ದು ನಾಶವಾಗಿರುವ ಬೆಳಗ್ಗೆ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಸಂಬಂಧಪಟ್ಟ ದಾಖಲೆಗಳನ್ನು ನಮ್ಮಿಂದ ಪಡೆದುಕೊಂಡಿದ್ದಾರೆ. ಆದರೆ ಇದುವರೆಗೂ ಯಾವುದೇ ಪರಿಹಾರ ದೊರಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಹಿರಿಯೂರು ಅರಣ್ಯ ವಲಯ ಅಧಿಕಾರಿ ಶ್ರೀಹರ್ಷ ಪ್ರತಿಕ್ರಿಯಿಸಿದ್ದು, ಈ ಭಾಗವು ಆಂಧ್ರ ಮತ್ತು ಕರ್ನಾಟಕ ರಾಜ್ಯಗಳ ಗಡಿ ಭಾಗವಾಗಿರುವುದರಿಂದ ಇಲ್ಲಿ ಕೃಷ್ಣಮೃಗಗಳು ಹೆಚ್ಚಾಗಿ ಕಾಣತೊಡಗಿವೆ. ಅವುಗಳನ್ನು ನಾಶ ಮಾಡುವುದು ಕಾನೂನು ಬಾಹಿರ. ಹಾಗಾಗಿ ಇವುಗಳಿಂದ ನಷ್ಟಕ್ಕೊಳಗಾದ ರೈತರು ಕಛೇರಿಗೆ ಧಾವಿಸಿ ಅವರ ಬೆಳೆ ನಾಶದ ಬಗ್ಗೆ ದಾಖಲಾತಿಗಳನ್ನು ಒದಗಿಸಿದರೆ, ನಾವು ಇ-ಆಫ್ ಎಂಬ ಒಂದು ಹೊಸ ಯೋಜನೆ ಅಡಿಯಲ್ಲಿ ಆ ರೈತರಿಗೆ 15ರಿಂದ 30 ದಿನಗಳ ಒಳಗೆ ನಷ್ಟವಾದ ಬೆಳೆಗೆ ನೇರವಾಗಿ ರೈತರ ಖಾತೆಗೆ ಪರಿಹಾರವನ್ನು ಕೊಡಲಾಗುವುದು ಎಂಬ ಭರವಸೆ ನೀಡಿದ್ದಾರೆ.

  • ರಾಮದೇವರ ಬೆಟ್ಟದಲ್ಲಿ ಎರಡು ಕರಡಿ ಪ್ರತ್ಯಕ್ಷ – ಜನರಲ್ಲಿ ಆತಂಕ

    ರಾಮದೇವರ ಬೆಟ್ಟದಲ್ಲಿ ಎರಡು ಕರಡಿ ಪ್ರತ್ಯಕ್ಷ – ಜನರಲ್ಲಿ ಆತಂಕ

    ಬೆಂಗಳೂರು: ರಾಮದೇವರ ಬೆಟ್ಟದಲ್ಲಿ ಕರಡಿ ಮತ್ತು ಕರಡಿ ಮರಿ ಕಾಣಿಸಿದ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ರಾಯರಪಾಳ್ಯ ಗ್ರಾಮದ ಬಳಿ ಇರುವಂತಹ ರಾಮದೇವರ ಬೆಟ್ಟದಲ್ಲಿ ಎರಡು ಕರಡಿಗಳು ಕಾಣಿಸಿಕೊಂಡು ಜನರಲ್ಲಿ ಭಯ ಹುಟ್ಟಿಸಿದೆ. ಕರಡಿಗಳನ್ನು ಕಂಡ ರಾಯರಪಾಳ್ಯ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.

    ಕರಡಿಗಳನ್ನು ಹಿಡಿಯಲು ಅರಣ್ಯಧಿಕಾರಿಗಳು ವಿಫಲರಾಗಿದ್ದು, ಬೋನ್‍ಗಳನ್ನು ನೀಡಲು ಗ್ರಾಮಸ್ಥರ ಸಹಕಾರವೇ ಬಯಸುತ್ತಾರೆ ಎಂದು ಗ್ರಾಮಸ್ಥರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅದಷ್ಟೂ ಬೇಗ ಕರಡಿಗಳನ್ನು ಹಿಡಿಯಬೇಕೆಂದು ಗ್ರಾಮದವರು ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

    ಈ ಘಟನೆ ಡಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.