– ಸಿಜೆಐ ಹೇಳಿಕೆಗೆ ಕಾಂಗ್ರೆಸ್ ನಾಯಕ ಉದಿತ್‌ರಾಜ್ ವ್ಯಂಗ್ಯ
ನವದೆಹಲಿ: ಅಯೋಧ್ಯೆ ವಿವಾದ (Ayodhya Dispute) ಇತ್ಯರ್ಥಪಡಿಸಲು ಕಷ್ಟಸಾಧ್ಯವಾದ ಪ್ರಕರಣವಾಗಿತ್ತು. ವಿವಾದ ಇತ್ಯರ್ಥಕ್ಕಾಗಿ ನಾನು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೆ ಎಂದು ಸಿಜೆಐ ಚಂದ್ರಚೂಡ್ ( CJI Chandrachud) ಹೇಳಿದ್ದಾರೆ.
ಹುಟ್ಟೂರಾದ ಮಹಾರಾಷ್ಟ್ರದ ಕನ್ಹೆರ್‌ಸರ್‌ನಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಅಯೋಧ್ಯೆ ವಿವಾದ ಇತ್ಯರ್ಥಪಡಿಸಲು ದೇವರೆದುರು ಕುಳಿತು ಪರಿಹಾರಕ್ಕೆ ಧ್ಯಾನಿಸಿದ್ದೆ. ನಿಯಮಿತವಾಗಿ ಪ್ರಾರ್ಥನೆ ಸಲ್ಲಿಸೋದಾಗಿ ತಿಳಿಸಿದ್ದಾರೆ. ನನ್ನನ್ನು ನಂಬಿ, ನಿಮಗೆ ನಂಬಿಕೆ ಇದ್ರೆ ದೇವರು ಯಾವುದೋ ಒಂದು ವಿಧದಲ್ಲಿ ನಿಮಗೆ ದಾರಿ ತೋರಿಸುತ್ತಾನೆ ಎಂದಿದ್ದಾರೆ.
ಇದೀಗ ಈ ವಿಚಾರದಲ್ಲಿಯೂ ಕಾಂಗ್ರೆಸ್ ರಾಜಕೀಯ ಮಾಡಿದೆ. ಇತರೆ ವಿಷಯಗಳ ಪರಿಹಾರಕ್ಕಾಗಿಯೂ ಸಿಜೆಐ ಪ್ರಾರ್ಥನೆ ಮಾಡಿದರೆ, ಸುಪ್ರೀಂಕೋರ್ಟ್, ಹೈಕೋರ್ಟ್‌ಗಳಲ್ಲಿ ಜನಸಾಮಾನ್ಯರಿಗೆ ದುಡ್ಡಿಲ್ಲದೇ ನ್ಯಾಯ ಸಿಗ್ತಿತ್ತು. ಇಡಿ, ಸಿಬಿಐ, ಐಟಿಗಳ ದುರ್ಬಳಕೆಯೂ ನಿಲ್ತಿತ್ತು ಎಂದು ಕಾಂಗ್ರೆಸ್‌ನ (Congress) ಉದಿತ್‌ರಾಜ್ ಟ್ವೀಟ್ ಮೂಲಕ ವ್ಯಂಗ್ಯ ಮಾಡಿದ್ದಾರೆ.
ರಾಮಜನ್ಮಭೂಮಿ ವಿವಾದ (Ram Janmabhoomi) ಸಂಬಂಧ ಐತಿಹಾಸಿಕ ತೀರ್ಪು ನೀಡಿದ ಸಾವಿಂಧಾನಿಕ ಪಂಚಪೀಠದಲ್ಲಿ ಚಂದ್ರಚೂಡ್ ಕೂಡ ಇದ್ದರು. ಇದೀಗ ರಾಮಜನ್ಮಭೂಮಿ ವಿವಾದ ಇತ್ಯರ್ಥವಾಗಿ ಅಯೋಧ್ಯೆಯಲ್ಲಿ ರಾಮಮಂದಿರವೂ ನಿರ್ಮಾಣಗೊಂಡಿದೆ. ಇದೀಗ ಸಿಜೆಐ ಮಾತಿಗೆ, ಕಾಂಗ್ರೆಸ್‌ನ ನಾಯಕನ ಪ್ರತಿಕ್ರಿಯೆ ಭಾರೀ ಚರ್ಚೆಗೆ ಗ್ರಾಸವಾಗಿದೆ.
– ಮಧ್ಯಸ್ಥಿಕೆ ಸಮಿತಿಗೆ ನಿರ್ಧಾರ ತಿಳಿಸಿದ ವಕ್ಫ್ ಮಂಡಳಿ
– ಇಂದಿಗೆ ಸುಪ್ರೀಂನಲ್ಲಿ ವಾದ ಮುಕ್ತಾಯ
ನವದೆಹಲಿ: ಅಯೋಧ್ಯೆಯ ವಿವಾದಿತ ಜಾಗದ ಕುರಿತಾದ ತನ್ನ ಹಕ್ಕನ್ನು ಕೈಬಿಡಲು ಸುನ್ನಿ ವಕ್ಫ್ ಮಂಡಳಿ ಪ್ರಸ್ತಾಪಿಸಿದೆ. ಸರ್ಕಾರವು ರಾಮ ಮಂದಿರಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಯಾವುದೇ ಆಕ್ಷೇಪವಿಲ್ಲ ಎಂದು ಸುನ್ನಿ ವಕ್ಫ್ ಮಂಡಳಿ ಹೇಳಿದೆ ಸುಪ್ರೀಂ ಕೋರ್ಟಿನ ಮಧ್ಯಸ್ಥಿಕೆ ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ವಕ್ಫ್ ಮಂಡಳಿಯು ಧ್ವಂಸಗೊಂಡ ಬಾಬರಿ ಮಸೀದಿಯ ಸ್ಥಳದ ಮೇಲಿನ ತನ್ನ ಹಕ್ಕನ್ನು ಬಿಟ್ಟುಕೊಡಲು ಒಪ್ಪಿದ್ದಲ್ಲದೆ, ಅಯೋಧ್ಯೆಯಲ್ಲಿ ಅಸ್ತಿತ್ವದಲ್ಲಿರುವ ಮಸೀದಿಗಳನ್ನು ಸರ್ಕಾರವು ನವೀಕರಿಸಬೇಕೆಂದು ಮನವಿ ಮಾಡಿಕೊಂಡಿದೆ ಎನ್ನಲಾಗಿದೆ. ವಕ್ಫ್ ಮಂಡಳಿಯು ಬೇರೊಂದು ಸೂಕ್ತ ಸ್ಥಳದಲ್ಲಿ ಮಸೀದಿ ನಿರ್ಮಿಸಲು ಮುಂದಾಗಿದೆ. 134 ವರ್ಷಗಳ ಹಳೆಯ ರಾಮ್ ಜನ್ಮಭೂಮಿ-ಬಾಬರಿ ಮಸೀದಿ ವಿವಾದದಲ್ಲಿ ಪ್ರಗತಿಗೆ ಕಾರಣವಾಗುವ ವರದಿಯನ್ನು ಮೂಲಗಳು ಬಹಿರಂಗಪಡಿಸಿವೆ. ಇದನ್ನೂ ಓದಿ: ಅಯೋಧ್ಯೆ ಕೇಸ್ – ಸುಪ್ರೀಂನಲ್ಲಿ ಹೈಡ್ರಾಮಾ, ದಾಖಲೆ ಹರಿದ ಮುಸ್ಲಿಂ ಪರ ವಕೀಲ
ವಕ್ಫ್ ಮಂಡಳಿಯು ಭಾರತೀಯ ಪುರಾತತ್ವ ಇಲಾಖೆ(ಎಎಸ್‍ಐ) ಮಸೀದಿಗಳ ಪಟ್ಟಿಯನ್ನು ಸಲ್ಲಿಸಬಹುದು. ಜೊತೆಗೆ ನ್ಯಾಯಾಲಯದಿಂದ ನೇಮಿಸಲ್ಪಟ್ಟ ಸಮಿತಿಯು ಪ್ರಾರ್ಥನೆಗಾಗಿ ಸ್ಥಳದ ಹೆಸರನ್ನು ಪ್ರಸ್ತಾಪಿಸಬಹುದು ಎಂದು ಮಧ್ಯಸ್ಥಿಕೆ ಸಮಿತಿ ವರದಿ ಹೇಳುತ್ತದೆ ಎಂದು ರಾಷ್ಟ್ರೀಯ ಮಾಧ್ಯಮ ವರದಿ ಮಾಡಿವೆ.
ಇಂದಿಗೆ ಮುಕ್ತಾಯ: ಸರಿಸುಮಾರು ಒಂದು ಶತಮಾನದಿಂದ ಹಿಂದೂ ಮುಸ್ಲಿಮರ ನಡುವೆ ಕಗ್ಗಂಟಾಗಿ ಪರಿಣಮಿಸಿದ, ದೇಶದ ರಾಜಕೀಯ ದಿಕ್ಕನ್ನೇ ಬದಲಿಸಿದ ದೇಶದ ಹೈಪ್ರೊಫೈಲ್ ಕೇಸ್ ಅಯೋಧ್ಯೆಯ ಬಾಬ್ರಿ-ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಅಂತಿಮ ಘಟ್ಟ ತಲುಪಿದೆ. ಆಗಸ್ಟ್ ಆರಂಭದಿಂದ ಸಿಜೆಐ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ 40 ದಿನಗಳ ಕಾಲ ವಾದ ಪ್ರತಿವಾದ ಆಲಿಸಿದ್ದು ಇಂದು ಮುಕ್ತಾಯವಾಗಿದೆ. ನವೆಂಬರ್ 17ರಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನಿವೃತ್ತಿ ಆಗುತ್ತಿದ್ದು, ಅಷ್ಟರೊಳಗೆ ಅಂತಿಮ ತೀರ್ಪು ಹೊರಬೀಳುವ ನಿರೀಕ್ಷೆಯಿದೆ. ಹೀಗಾಗಿ ಕುತೂಹಲ ಗರಿಗೆದರಿದೆ.
ಲೆಕ್ಕಾಚಾರಗಳು ಜೋರಾಗಿವೆ. ಅಯೋಧ್ಯೆ ವಿವಾದ ಮೇಲ್ನೋಟಕ್ಕೆ ಹಿಂದೂ ಮುಸ್ಲಿಮರ ನಡುವಣ ವಿವಾದವಾಗಿ ಕಾಣಿಸುತ್ತೆ. ಆದ್ರೆ, ಇದು ಕೋಟಿ ಕೋಟಿ ಹಿಂದೂಗಳು- ಮುಸ್ಲಿಮರ ಪಾಲಿಗೆ ಭಾವನಾತ್ಮಕ ವಿಚಾರ. ಇದೇ ವಿಚಾರವನ್ನು ಇಟ್ಟುಕೊಂಡು ರಾಜಕೀಯ ಹೋರಾಟ ಸಂಘಟಿಸಿದ ಪಕ್ಷವೊಂದು ಕೇಂದ್ರದಲ್ಲಿ ಅಧಿಕಾರ ನಡೆಸಿದೆ. ಘಟಾನುಘಟಿ ನಾಯಕರನ್ನು ಕೋರ್ಟ್ ಕಟಕಟೆಗೆ ಎಳೆದುತಂದು ನಿಲ್ಲಿಸಿದೆ. ಎರಡು ಧರ್ಮಗಳ ನಡುವೆ ಅಂತರ ಹೆಚ್ಚಿಸಿದೆ. ಅಪಾರ ಸಾವು ನೋವಿಗೂ ಪರೋಕ್ಷವಾಗಿ ಕಾರಣವಾಗಿದೆ.
ಅಯೋಧ್ಯೆಯಲ್ಲಿದ್ದ ರಾಮಮಂದಿರವನ್ನು ನಾಶ ಮಾಡಿ 16ನೇ ಶತಮಾನದಲ್ಲಿ ಬಾಬ್ರಿ ಮಸೀದಿ ನಿರ್ಮಿಸಲಾಗಿದೆ ಎಂಬುದು ಇಲ್ಲಿ ವಿವಾದ. ಇದೇ ಸ್ಥಳದಲ್ಲಿ ಮತ್ತೆ ರಾಮಮಂದಿರ ನಿರ್ಮಿಸಬೇಕೆಂದು ಆರಂಭದಿಂದಲೂ ರಾಮನನ್ನು ಪೂಜಿಸುವ ಸನ್ಯಾಸಿಗಳ ಸಂಘಟನೆ ನಿರ್ಮೋಹಿ ಅಖಾಡ ಒತ್ತಾಯ ಮಾಡುತ್ತಿದೆ. ಇನ್ನು ವಿವಾದಾಸ್ಪದ ಸ್ಥಳವನ್ನು ತಮ್ಮ ವಶಕ್ಕೆ ನೀಡಬೇಕು. ಅಲ್ಲಿ ಮಂದಿರ ನಿರ್ಮಿಸುತ್ತೇವೆ ಎಂದು ವಿಹೆಚ್‍ಪಿ ಸದಸ್ಯರನ್ನು ಒಳಗೊಂಡ ರಾಮ್ ಲಲ್ಲಾ ಎಂಬ ಸಂಘಟನೆ, ಆರ್‍ಎಸ್‍ಎಸ್ ಸದಸ್ಯರೇ ಹೆಚ್ಚಿರುವ ರಾಮ್ ಜನ್ಮಸ್ಥಾನ್ ಎಂಬ ಸಂಘಟನೆ ಆಗ್ರಹಿಸಿದ್ದವು. ನಂತರದ ದಿನಗಳಲ್ಲಿ ವಿಹೆಚ್‍ಪಿಯ ರಾಮಜನ್ಮಭೂಮಿ ನ್ಯಾಸ್ ಜೊತೆ ಜೊತೆಗೆ ಹಿಂದೂ ಮಹಾಸಭಾ ಕೂಡ ಈ ಪ್ರಕರಣದಲ್ಲಿ ಮಧ್ಯ ಪ್ರವೇಶ ಮಾಡಿದವು. ಇಲ್ಲಿ ರಾಮ್ ಲಲ್ಲಾ ಸಂಘಟನೆ ಒಂದು ಕಡೆ ನಿಂತರೆ ಉಳಿದ ಹಿಂದೂ ಪರ ಸಂಘಟನೆಗಳು ಇನ್ನೊಂದು ಕಡೆ ನಿಲ್ಲುತ್ತವೆ.
ಬಾಬ್ರಿ ಮಸೀದಿ ಸ್ಥಳವನ್ನು ತಮ್ಮದು ಎಂದು ಅಖಿಲ ಭಾರತ ಶಿಯಾ ಕಾನ್ಫರೆನ್ಸ್, ಸುನ್ನಿ ವಕ್ಫ್ ಬೋರ್ಡ್‍ಗಳು ಎಂದು ವಾದ ಮಂಡಿಸುತ್ತಿವೆ. ಆದ್ರೆ ಮೊದಲಿನಿಂದಲೂ ಬಾಬ್ರಿ ಮಸೀದಿ ಸ್ಥಳಕ್ಕಾಗಿ ಹೋರಾಟ ಮಾಡ್ತಿರೋದು ಸುನ್ನಿ ವಕ್ಫ್ ಬೋರ್ಡ್. 1961ರಲ್ಲಿ ಕೋರ್ಟ್ ಮೆಟ್ಟಿಲೇರಿತ್ತು. 1992ರಲ್ಲಿ ಬಾಬ್ರಿ ಮಸೀದಿ ಧ್ವಂಸವಾದ ವಿವಾದಿತ 2.77 ಎಕರೆ ಪ್ರದೇಶವನ್ನು ಮೂರು ಭಾಗಗಳಾಗಿ ವಿಂಗಡಿಸಿ 2010ರಲ್ಲಿ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಆದರೆ ಇದಕ್ಕೆ ಆಕ್ಷೇಪಗಳು ಕೇಳಿಬಂದು ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಮೊದಲು ಸಂಧಾನದ ಮೂಲಕ ವಿವಾದ ಬಗೆಹರಿಸಲು ಸುಪ್ರೀಂಕೋರ್ಟ್ ಪ್ರಯತ್ನಿಸಿತ್ತು. ಆದ್ರೆ ಇದು ವಿಫಲವಾದ ಹಿನ್ನೆಲೆಯಲ್ಲಿ ಪ್ರತಿದಿನ ವಿಚಾರಣೆ ನಡೆಸಿ ವಿವಾದ ಬಗೆಹರಿಸಲು ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಾವಿಧಾನಿಕ ಪೀಠವನ್ನು ಸುಪ್ರೀಂಕೋರ್ಟ್ ರಚಿಸಿತ್ತು.
ಈ ನಡುವೆ, ಇಡೀ ವಿವಾದಿತ ಪ್ರದೇಶದಲ್ಲಿ ರಾಮಮಂದಿರ ನಿರ್ಮಿಸಬೇಕೆಂದು ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳ್ತಿದ್ದಾರೆ. ಒಂದೇ ಒಂದು ಇಂಚು ಭೂಮಿಯನ್ನು ಮುಸ್ಲಿಮರಿಗೆ ನೀಡಬಾರದು ಎಂದು ಬಿಜೆಪಿ ಮುಖಂಡ ಸುಬ್ರಹ್ಮಣಿಯನ್ ಸ್ವಾಮಿ ಒತ್ತಾಯ ಮಾಡ್ತಿದ್ದಾರೆ. ಈ ನಡುವೆ, ಲೋಕಸಭೆ ಚುನಾವಣೆಗೂ ಮುನ್ನ, ಸುಗ್ರೀವಾಜ್ಞೆ ಹೊರಡಿಸಿ ರಾಮಮಂದಿರ ನಿರ್ಮಿಸಬೇಕು ಎಂಬ ಕೂಗು ಕೂಡ ಕೇಳಿಬಂದಿತ್ತು.
ನವದೆಹಲಿ: ರಾಮಜನ್ಮ ಭೂಮಿ ಅಯೋಧ್ಯೆ ಪ್ರಕರಣ ಸಂಬಂಧ ರಚನೆ ಮಾಡಲಾಗಿದ್ದ ಸಂಧಾನ ಸಮಿತಿ ವಿಫಲವಾಗಿದ್ದು, ಆಗಸ್ಟ್ 6 ರಿಂದ ಸುಪ್ರೀಂ ಕೋಟ್ ದಿನನಿತ್ಯ ವಿಚಾರಣೆಯನ್ನು ಆರಂಭ ಮಾಡಲಿದೆ.
ಸುಪ್ರೀಂ ಕೋರ್ಟ್ ಅಯೋಧ್ಯೆ ವಿವಾದವನ್ನು ಪರಿಹಾರಿಸಿಕೊಳ್ಳಲು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಫ್‍ಎಂಐ ಕಲಿಫುಲ್ಲಾ, ಧರ್ಮಗುರು ಹಾಗೂ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿಶಂಕರ್ ಗುರೂಜಿ ಹಾಗೂ ಹಿರಿಯ ವಕೀಲ ಶ್ರೀರಾಮ್ ಮಂಚು ಅವರನ್ನು ಒಳಗೊಂಡ ತ್ರಿಸದಸ್ಯ ಸಮಿತಿಯನ್ನು ರಚಿಸಿತ್ತು. ಆದರೆ ಈ ವಿವಾದವನ್ನು ಬಗೆಹರಿಸಲು ಸಮಿತಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ದಿನ ನಿತ್ಯ ವಿಚಾರಣೆ ನಡೆಸಲಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾ. ರಂಜನ್ ಗೊಗೊಯಿ ಹೇಳಿದ್ದಾರೆ. ಅಲ್ಲದೇ ಎರಡು ಕಡೆಯವರು ದಿನನಿತ್ಯದ ವಿಚಾರಣೆ ಬೇಕಾದ ಮಾಹಿತಿಯನ್ನು ಸಿದ್ಧಪಡಿಸಿಕೊಳ್ಳಲು ಸೂಚನೆಯನ್ನು ನ್ಯಾಯಪೀಠ ನೀಡಿದೆ.
ಮಾರ್ಚ್ ತಿಂಗಳಿನಲ್ಲಿ ರಚನೆಯಾಗಿದ್ದ ಸಂಧಾನ ಸಮಿತಿ ರಚಿಸಿ 8 ವಾರಗಳ ಕಾಲಾವಕಾಶವನ್ನು ನೀಡಲಾಗಿತ್ತು. ಆದರೆ ಗುರುವಾರ ನ್ಯಾಯಾಲಯಕ್ಕೆ ತನ್ನ ವರದಿಯನ್ನು ಸಲ್ಲಿಕೆ ಮಾಡಿತ್ತು. ಈ ವರದಿಯಲ್ಲಿ ಎರಡು ಕಡೆಯವರು ಕೂಡ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದರು ಎಂದು ತಿಳಿಸಿತ್ತು.
2010 ರಲ್ಲಿ ಅಲಹಾಬಾದ್ ನ್ಯಾಯಾಲಯ ಅಯೋಧ್ಯೆ ಕುರಿತು ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ 14 ಮೇಲ್ಮನವಿ ಅರ್ಜಿಗಳು ಸಲ್ಲಿಕೆ ಮಾಡಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಸಂಧಾನ ಮೂಲಕವೇ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಸೂಚನೆ ನೀಡಿತ್ತು. ಆದರೆ ಈ ಸಂದರ್ಭದಲ್ಲೇ ಹಿಂದೂ ಧರ್ಮದ ಸಂಘಟನೆಗಳು 1950 ರಿಂದಲೂ ತೀರ್ಪಿಗಾಗಿ ಕಾಯುತ್ತಿದ್ದು, ಸಂಧಾನದಿಂದ ಇದರ ಪರಿಹಾರ ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದರು. ಇತ್ತ 2.7 ಎಕರೆ ಮಾತ್ರ ವಿವಾದಿತ ಪ್ರದೇಶ ಆಗಿರುವುದರಿಂದ ಮಧ್ಯಸ್ಥಿಕೆವೊಂದೇ ಪರಿಹಾರ ಮಾರ್ಗ ಎಂದು ವಕ್ರ್ಫ್ ಬೋರ್ಡ್ ಹೇಳಿತ್ತು.
Rashtriya Swayamsevak Sangh: We welcome Supreme Court’s decision to hold the hearing of Ayodhya land case on a day-to-day basis from 6 Aug. We’ve confidence that the long-pending case will be resolved in a definite period of time & the construction of #RamMandir will begin soon. pic.twitter.com/W7luDm0ngR
ನವದೆಹಲಿ: ಸುಪ್ರೀಂ ಕೋರ್ಟ್ ರಾಮಮಂದಿರ ಪ್ರಕರಣದಲ್ಲಿ ಬಹುಬೇಗ ಅಂತಿಮ ತೀರ್ಪನ್ನು ಪ್ರಕಟಿಸಬೇಕಿದ್ದು, ಪ್ರಕರಣದಲ್ಲಿ ಅನಗತ್ಯ ವಿಳಂಬ ಆಗುತ್ತಿರುವುದರಿಂದ ಜನರು ನ್ಯಾಯಾಂಗ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಮಾಧ್ಯಮ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಸಿಎಂ ಯೋಗಿ ಆದಿತ್ಯನಾಥ್, ನ್ಯಾಯಾಲಯ ಬಹುಬೇಗ ತೀರ್ಪನ್ನು ಪ್ರಕಟಿಸಬೇಕು ಎಂದು ಕೋರುತ್ತೇನೆ. ಒಂದೊಮ್ಮೆ ಅದನ್ನು ಮಾಡಲು ಸಾಧ್ಯವಿಲ್ಲದಿದ್ದರೆ, ನಮಗೇ ಪ್ರಕರಣವನ್ನು ನೀಡಲಿ. 24 ಗಂಟೆಯಲ್ಲಿ ಪ್ರಕರಣವನ್ನು ಬಗೆಹರಿಸುತ್ತೇವೆ. 25 ಗಂಟೆ ಕೂಡ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಕೋಟ್ಯಾಂತರ ಜನರ ನಂಬಿಕೆಯನ್ನು ತೃಪ್ತಿಪಡಿಸಲು ನಾವು ನ್ಯಾಯಾಲಯಕ್ಕೆ ಪ್ರಕರಣದ ತೀರ್ಪು ಬಹುಬೇಗ ನೀಡಲು ಮನವಿ ಮಾಡುತ್ತೇವೆ. ಇದು ಜನರ ನಂಬಿಕೆಯ ವಿಚಾರವಾಗಿದೆ. ಅನಗತ್ಯ ವಿಳಂಬ ಮತ್ತಷ್ಟು ವಿವಾದಕ್ಕೆ ಕಾರಣವಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಸಿಎಂ ಯೋಗಿ, ಕಾಂಗ್ರೆಸ್ ಪಕ್ಷಕ್ಕೆ ರಾಮ ಜನ್ಮ ಭೂಮಿ ವಿವಾದ ಬಗೆಹರಿಯುವುದು ಬೇಡವಾಗಿದೆ. ಅಯೋಧ್ಯೆ ವಿವಾದ ಅಂತ್ಯವಾದರೆ, ತ್ರಿವಳಿ ತಲಾಖ್ ಸೇರಿದಂತೆ ಹಲವು ವಿಷಯಗಳ ರಾಜಕೀಯ ಶಾಶ್ವತವಾಗಿ ಅಂತ್ಯಗೊಳ್ಳುತ್ತದೆ ಎಂಬ ಉದ್ದೇಶ ಹೊಂದಿದೆ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಮೈತ್ರಿ ರಾಜಕಾರಣದ ಬಗ್ಗೆ ಪ್ರತಿಕ್ರಿಯೆ ನೀಡಿ, ಜಾತಿ ರಾಜಕಾರಣದ ಹೆಸರಿನಲ್ಲಿ ಅವರು ಮತ್ತಷ್ಟು ಕೆಳ ಮಟ್ಟಕ್ಕೆ ಇಳಿದರೂ ಕೂಡ, ಅದು ಶೇ. 70 ಮತ್ತು 30 ರ ನಡುವಿನ ಹೋರಾಟ ಆಗುತ್ತದೆ. ಏಕೆಂದರೆ 70 ಮತದಾರರು ಬಿಜೆಪಿಯ ಪರ ಇದ್ದು, 30 ರಷ್ಟು ಮಂದಿ ಮಾತ್ರ ಮಹಾಘಟಬಂಧನ್ ಪರ ಇದ್ದಾರೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೇ ಕಾಂಗ್ರೆಸ್ ಪಕ್ಷ ಪ್ರಿಯಾಂಕ ಗಾಂಧಿ ಅವರನ್ನು ಕರೆತರುವ ಮೂಲಕ ಕುಟುಂಬ ರಾಜಕಾರಣ ಬಿಟ್ಟು ಬೇರೆ ಏನು ಬರುವುದಿಲ್ಲ ಎಂದು ಸಾಬೀತು ಪಡಿಸಿದೆ. 2014 ರಲ್ಲಿ ಪಕ್ಷ ಉತ್ತರ ಪ್ರದೇಶದಲ್ಲಿ ಗೆದ್ದ ಸ್ಥಾನಗಳಿಗಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದರು.