Tag: ಅಯೋಧ್ಯೆ ರಾಮಮಂದಿರ

  • ಅಯೋಧ್ಯೆ ರಾಮಮಂದಿರಕ್ಕೆ 3 ಸಾವಿರ ಕೋಟಿ ದೇಣಿಗೆ; 1500 ಕೋಟಿ ರೂ. ಖರ್ಚು

    ಅಯೋಧ್ಯೆ ರಾಮಮಂದಿರಕ್ಕೆ 3 ಸಾವಿರ ಕೋಟಿ ದೇಣಿಗೆ; 1500 ಕೋಟಿ ರೂ. ಖರ್ಚು

    ಅಯೋಧ್ಯೆ: ರಾಮಮಂದಿರಕ್ಕೆ (Ayodhya Ram Mandir) 3,000 ಕೋಟಿ ರೂ. ಹರಿದುಬಂದಿದ್ದು, ಅದರಲ್ಲಿ ದೇಗುಲ ಸಂಪೂರ್ಣ ನಿರ್ಮಾಣಕ್ಕೆ 1,500 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ತಿಳಿಸಿದೆ.

    ಅಯೋಧ್ಯೆ ರಾಮಮಂದಿರವನ್ನು ಈಗ ಸಂಪೂರ್ಣವಾಗಿ ನಿರ್ಮಿಸಲಾಗಿದೆ. ಭಗವಾನ್ ರಾಮನಿಗೆ ಸಮರ್ಪಿತವಾದ ಭವ್ಯ ದೇವಾಲಯವು ಪವಿತ್ರ ಸಂಕೀರ್ಣದ ಒಳಗೆ ಆರು ಸಹಾಯಕ ದೇವಾಲಯಗಳೊಂದಿಗೆ ಪೂರ್ಣಗೊಂಡಿದೆ. ಇದನ್ನೂ ಓದಿ: ಮೋದಿ ಮತಕ್ಕಾಗಿ ಡ್ಯಾನ್ಸ್ & ಡ್ರಾಮಾ, ಬೇಕಿದ್ರೆ ಭರತನಾಟ್ಯನೂ ಮಾಡ್ತಾರೆ – ರಾಹುಲ್‌ ಗಾಂಧಿ ಲೇವಡಿ

    ಶಿವ, ಗಣೇಶ, ಹನುಮಾನ್, ಸೂರ್ಯ, ಭಗವತಿ ಮತ್ತು ಅನ್ನಪೂರ್ಣ ದೇವಿಗೆ ಮೀಸಲಾಗಿರುವ ದೇವಾಲಯಗಳ ನಿರ್ಮಾಣವೂ ಪೂರ್ಣಗೊಂಡಿದೆ ಎಂದು ಟ್ರಸ್ಟ್‌ನ ಅಧಿಕಾರಿಗಳು ತಿಳಿಸಿದ್ದಾರೆ. ದೇವಾಲಯ ನಿರ್ಮಾಣ ಪೂರ್ಣಗೊಂಡಿದೆ ಎಂಬುದನ್ನು ಸಂಕೇತಿಸಲು ಪ್ರತಿ ದೇವಾಲಯದ ಮೇಲೆ ಧ್ವಜಗಳು ಮತ್ತು ಕಲಶಗಳನ್ನು ಸ್ಥಾಪಿಸಲಾಗಿದೆ.

    ದೇವಾಲಯದ ನಿರ್ಮಾಣ ಕಾರ್ಯ ಪೂರ್ಣಗೊಂಡ ಔಪಚಾರಿಕ ಆಚರಣೆಗಾಗಿ ನ.25 ರಂದು ಅದ್ಧೂರಿ ಧ್ವಜಾರೋಹಣ ಸಮಾರಂಭಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗಿದ್ದು, ಭಾರತ ಮತ್ತು ವಿದೇಶಗಳಿಂದ ಸಾವಿರಾರು ಭಕ್ತರು, ಸಂತರು, ಗಣ್ಯರು ಆಗಮಿಸುವ ನಿರೀಕ್ಷೆಯಿದೆ. ಇದನ್ನೂ ಓದಿ: ಸ್ವಾಮೀಜಿಯಾಗಿ ಕೀಳುಮಟ್ಟದ ಹೇಳಿಕೆ ನೀಡೋದು ಸರಿಯಲ್ಲ, ಗಂಭೀರವಾಗಿರಬೇಕು – ಕನ್ನೇರಿ ಶ್ರೀಗಳಿಗೆ ಸುಪ್ರೀಂ ತರಾಟೆ

    ರಾಮಮಂದಿರ ಟ್ರಸ್ಟ್‌ಗೆ ಪ್ರಪಂಚದಾದ್ಯಂತ ಭಕ್ತರಿಂದ ಅಗಾಧ ಬೆಂಬಲ ವ್ಯಕ್ತವಾಗಿದೆ. ಟ್ರಸ್ಟ್ 3,000 ಕೋಟಿ ರೂ.ಗಳಿಗೂ ಹೆಚ್ಚು ದೇಣಿಗೆ ಸಂಗ್ರಹಿಸಿದೆ. ಇದರಲ್ಲಿ 1,500 ಕೋಟಿ ರೂ.ಗಳನ್ನು ಈಗಾಗಲೇ ದೇವಾಲಯ ನಿರ್ಮಾಣ, ಮೂಲಸೌಕರ್ಯ ಮತ್ತು ಆವರಣದ ಸುತ್ತಮುತ್ತಲಿನ ಅಭಿವೃದ್ಧಿಗೆ ಖರ್ಚು ಮಾಡಲಾಗಿದೆ. ಉಳಿದ 1,800 ಕೋಟಿ ರೂ.ಗಳನ್ನು ದೇವಾಲಯ ಮತ್ತು ಪಕ್ಕದ ಸೌಲಭ್ಯಗಳ ಅಂತಿಮ ಸ್ಪರ್ಶ, ಸೌಂದರ್ಯೀಕರಣ ಮತ್ತು ನಿರ್ವಹಣೆಗೆ ಬಳಸಲಾಗುವುದು.

  • ಅಯೋಧ್ಯೆ ರಾಮನ ಕಪ್ಪುಶಿಲೆ ಸಿಕ್ಕ ಜಾಗದಲ್ಲಿ ವಿವಾದ – ದಕ್ಷಿಣ ರಾಮಮಂದಿರ ಮಾಡಲು ಮುಂದಾದ ಜಮೀನು ಮಾಲೀಕ

    ಅಯೋಧ್ಯೆ ರಾಮನ ಕಪ್ಪುಶಿಲೆ ಸಿಕ್ಕ ಜಾಗದಲ್ಲಿ ವಿವಾದ – ದಕ್ಷಿಣ ರಾಮಮಂದಿರ ಮಾಡಲು ಮುಂದಾದ ಜಮೀನು ಮಾಲೀಕ

    -ಇತ್ತ ದಲಿತ ಸಂಘಟನೆಗಳಿಂದ ಶಾಲೆ ಕಟ್ಟಲು ಹೋರಾಟ

    ಮೈಸೂರು: ಅಯೋಧ್ಯೆ (Ayodhya) ವಿವಾದದ ಬಳಿಕ ಇದೀಗ ಮೈಸೂರಿನಲ್ಲಿ  (Mysuru) ಮತ್ತೆ ವಿವಾದ ಶುರುವಾಗಿದೆ. ಅಯೋಧ್ಯೆ ರಾಮನನ್ನು ಕೆತ್ತಲು ಬಳಸಿದ ಕಪ್ಪುಶಿಲೆ ಸಿಕ್ಕ ಜಾಗದಲ್ಲಿ ದಕ್ಷಿಣ ರಾಮಮಂದಿರ ಕಟ್ಟಲು ಜಮೀನು ಮಾಲೀಕ ಮುಂದಾಗಿದ್ದಾರೆ. ಆದರೆ ದಲಿತ ಸಂಘಟನೆಗಳನ್ನು ಶಾಲೆ ಕಟ್ಟುತ್ತೇವೆ ಹೊರತಾಗಿ ಮಂದಿರಕ್ಕೆ ಅವಕಾಶ ಕೊಡಲ್ಲ ಎಂದು ಹೋರಾಟ ಆರಂಭಿಸಿದ್ದಾರೆ.

    ಮೈಸೂರು ತಾಲೂಕಿನ ಹಾರೋಹಳ್ಳಿ (Harohalli) ಗ್ರಾಮದ ರಾಮದಾಸ್ ಎಂಬುವವರು ಜಮೀನಿನಲ್ಲಿ ಸಿಕ್ಕಿದ್ದ ಕಪ್ಪುಶಿಲೆಯನ್ನು ಬಳಸಿ ಅಯೋಧ್ಯೆಯ ಬಾಲರಾಮನ ಮೂರ್ತಿಯನ್ನು ಕೆತ್ತಲಾಗಿತ್ತು. ಇದೀಗ ಜಮೀನು ಮಾಲೀಕ ಕಪ್ಪುಶಿಲೆ ಸಿಕ್ಕ ಜಾಗದಲ್ಲಿ ದಕ್ಷಿಣ ರಾಮಮಂದಿರ ಕಟ್ಟಲು ಮುಂದಾಗಿದ್ದು, ಇಂದು ದಕ್ಷಿಣ ಅಯೋಧ್ಯೆ ಹೆಸರಿನಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಶಂಕು ಸ್ಥಾಪನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.ಇದನ್ನೂ ಓದಿ: Delhi Election| ಆಪ್‌ಗಿಂತ ಮೂರು ಪಟ್ಟು ಹೆಚ್ಚು ಖರ್ಚು ಮಾಡಿತ್ತು ಕಾಂಗ್ರೆಸ್‌ – 68 ಮಂದಿಗೆ ಬಿಜೆಪಿಯಿಂದ ತಲಾ 25 ಲಕ್ಷ

    ಆದರೆ ದಲಿತ ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿ, ರಾಮಮಂದಿರ ಕಟ್ಟಲು ಬಿಡುವುದಿಲ್ಲ. ಇಲ್ಲಿ ಶಾಲೆ ಕಟ್ಟುತ್ತೇವೆ ಎಂದಿದ್ದಾರೆ. ಬಾಲರಾಮನ ಕಪ್ಪುಶಿಲೆ ಸಿಕ್ಕ ಜಾಗದಲ್ಲಿ ಕಾರ್ಯಕರ್ತರು ಬಾವುಟಗಳನ್ನ ನೆಟ್ಟು, ಶಂಕುಸ್ಥಾಪನೆಗೆ ಹಾಕಿದ ಚಪ್ಪರದ ಸುತ್ತ ಬಾವುಟಗಳನ್ನ ಕಟ್ಟಿ ಹೋರಾಟ ನಡೆಸಿದ್ದಾರೆ. ದಿಢೀರ್ ವಿವಾದದ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಜಮೀನು ಮಾಲೀಕ ಶಂಕುಸ್ಥಾಪನೆ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ.

    ಈ ಕುರಿತು ಜಮೀನು ಮಾಲೀಕ ರಾಮದಾಸ್ `ಪಬ್ಲಿಕ್ ಟಿವಿ’ ಜೊತೆ ಮಾತನಾಡಿ, ರಾಮಮಂದಿರ ಕಟ್ಟೇ ಕಟ್ಟುತ್ತೇನೆ. ಮಂದಿರ ಕಟ್ಟಬೇಕು ಎಂಬ ಸಂಕಲ್ಪ ಮಾಡಿದ್ದೆ. ಹೀಗಾಗಿ ಅದನ್ನು ಮಾಡಿಯೇ ಮಾಡುತ್ತೇನೆ. ಅದು ನನ್ನ ಜಮೀನು. ದೇವಸ್ಥಾನ ಕಟ್ಟುವುದು, ಬಿಡುವುದು ನನ್ನ ನಿರ್ಧಾರ. ಇದಕ್ಕೆ ಯಾರ ಒಪ್ಪಿಗೆಯೂ ಬೇಡ. ಕೆಲ ಸಂಘಟನೆಗಳು ರಾಮ ಮಂದಿರಕ್ಕೆ ವಿರೋಧ ಮಾಡಿದ್ದಾರೆ. ಅವರಿಂದ ಸಮಾರಂಭಕ್ಕೆ ಬರುವ ಗಣ್ಯರಿಗೆ ಮುಜುಗರ ಆಗುತ್ತದೆ ಎಂದು ಕಾರ್ಯಕ್ರಮ ಮುಂದೂಡಿದ್ದೇವೆ ಎಂದರು.ಇದನ್ನೂ ಓದಿ: ಚಿತ್ತಾಪುರದಲ್ಲಿ ಛಲವಾದಿ ಮೇಲೆ ಹಲ್ಲೆ ಯತ್ನ – ಸಿಎಂ, ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆಯಲಿ; ಕೆ.ಎಸ್ ನವೀನ್

  • ಆಕರ್ಷಣೀಯ ಪ್ರವಾಸಿ ತಾಣ – ತಾಜ್‌ಮಹಲ್‌ ಹಿಂದಿಕ್ಕಿ ಅಯೋಧ್ಯೆ ರಾಮಮಂದಿರ ನಂ.1

    ಆಕರ್ಷಣೀಯ ಪ್ರವಾಸಿ ತಾಣ – ತಾಜ್‌ಮಹಲ್‌ ಹಿಂದಿಕ್ಕಿ ಅಯೋಧ್ಯೆ ರಾಮಮಂದಿರ ನಂ.1

    ಲಕ್ನೋ: ಪ್ರವಾಸಿಗರ ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಅಯೋಧ್ಯೆ (Ayodhya) ರಾಮಮಂದಿರ (Ram Mandir) ಹೊರಹೊಮ್ಮಿದೆ. ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ತಾಣಗಳಲ್ಲಿ ಅಗ್ರ ಸ್ಥಾನದಲ್ಲಿದ್ದ ತಾಜ್‌ ಮಹಲ್‌ನ್ನು (Taj Mahal) ಹಿಂದಿಕ್ಕಿ ರಾಮಮಂದಿರ ನಂ.1 ಪಟ್ಟಕ್ಕೇರಿದೆ.

    ಉತ್ತರ ಪ್ರದೇಶಕ್ಕೆ ಪ್ರವಾಸಿಗರ ದಂಡೇ ಹರಿದುಬರುತ್ತಿದ್ದು, ಹೊಸ ದಾಖಲೆಯನ್ನು ಬರೆದಿದೆ. 2024ರ ಜನವರಿ-ಸೆಪ್ಟೆಂಬರ್ ನಡುವೆ 47.61 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಇವರ ಪೈಕಿ ಅಯೋಧ್ಯೆಗೆ 13.55 ಮಂದಿ ಪ್ರವಾಸ ಮಾಡಿದ್ದಾರೆ. ಅಲ್ಲದೇ, 3,153 ವಿದೇಶಿ ಪ್ರವಾಸಿಗರೂ ರಾಮಮಂದಿರ ಕಣ್ತುಂಬಿಕೊಂಡಿದ್ದಾರೆ. ಇದನ್ನೂ ಓದಿ: ಅಕಸ್ಮಾತ್ ಹುಂಡಿಗೆ ಬಿದ್ದ ಐಫೋನ್ ದೇವಸ್ಥಾನದ ಪಾಲು – ವಾಪಸ್ ಕೊಡಲ್ಲ ಎಂದ ಮಂಡಳಿ

    ಇದೇ ಅವಧಿಯಲ್ಲಿ ಆಗ್ರಾದಲ್ಲಿ ತಾಜ್‌ಮಹಲ್‌ಗೆ 12.51 ಕೋಟಿ ಜನರು ಭೇಟಿ ನೀಡಿದ್ದಾರೆ. 11.59 ಕೋಟಿ ಮಂದಿ ದೇಶೀಯ ಮತ್ತು 9,24,000 ಅಂತರರಾಷ್ಟ್ರೀಯ ಪ್ರವಾಸಿಗರು ವಿಸಿಟ್‌ ಮಾಡಿದ್ದಾರೆ.

    ಪ್ರವಾಸೋದ್ಯಮ ಸಚಿವ ಜೈವೀರ್ ಸಿಂಗ್ ಅವರು, ರಾಜ್ಯದ ಗಮನಾರ್ಹ ಸಾಧನೆ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶವು ಕಳೆದ ವರ್ಷ 48 ಮಿಲಿಯನ್ ಪ್ರವಾಸಿಗರನ್ನು ಸ್ವಾಗತಿಸಿದೆ. ಈ ವರ್ಷ ಕೇವಲ ಒಂಬತ್ತು ತಿಂಗಳಲ್ಲಿ ಈ ಮೈಲುಗಲ್ಲು ತಲುಪಿದೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಾಪ್ ಕಾರ್ನ್‌ ಮೇಲೆ 3 ರೀತಿಯ ಜಿಎಸ್‌ಟಿ – ಕೌನ್ಸಿಲ್‌ ಸಭೆಯಲ್ಲಿ ಒಪ್ಪಿಗೆ; ಯಾವುದು ದುಬಾರಿ?

    ಲಕ್ನೋ ಮೂಲದ ಹಿರಿಯ ಟ್ರಾವೆಲ್ ಪ್ಲಾನರ್ ಮೋಹನ್ ಶರ್ಮಾ, ಅಯೋಧ್ಯೆಯನ್ನು ಭಾರತದಲ್ಲಿನ ಆಧ್ಯಾತ್ಮಿಕ ಪ್ರವಾಸೋದ್ಯಮದ ಕೇಂದ್ರಬಿಂದು ಎಂದು ಬಣ್ಣಿಸಿದ್ದಾರೆ. ಧಾರ್ಮಿಕ ಪ್ರವಾಸಗಳಿಗಾಗಿ ಬುಕಿಂಗ್‌ನಲ್ಲಿ ಶೇ.70 ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

  • ಚಳಿಗಾಲದಲ್ಲಿ ಅಯೋಧ್ಯೆ ರಾಮನನ್ನು ಬೆಚ್ಚಗಿಡಲು ಚಾದರ, ಪಶ್ಮಿನಾ ಶಾಲು, ಹೀಟರ್‌ ವ್ಯವಸ್ಥೆ

    ಚಳಿಗಾಲದಲ್ಲಿ ಅಯೋಧ್ಯೆ ರಾಮನನ್ನು ಬೆಚ್ಚಗಿಡಲು ಚಾದರ, ಪಶ್ಮಿನಾ ಶಾಲು, ಹೀಟರ್‌ ವ್ಯವಸ್ಥೆ

    – ಬೆಚ್ಚಗಿನ ನೀರಲ್ಲಿ ರಾಮಲಲ್ಲಾನಿಗೆ ಸ್ನಾನ

    ಲಕ್ನೋ: ಚಳಿಗಾಲ ಸಮೀಪಿಸಿದ್ದು, ಅಯೋಧ್ಯೆ (Ayodhya) ರಾಮಮಂದಿರದ (Ram Mandir) ಬಾಲರಾಮನನ್ನು ಬೆಚ್ಚಗಿಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

    ನವೆಂಬರ್‌ 20 ರಿಂದ ಬರುವ ‘ಅಘರ್‌ ಕಿ ಪಂಚಮಿ’ಯಿಂದ ರಾಮಲಲ್ಲಾನಿಗೆ ಚಾದರ, ಪಶ್ಮಿನಾ ಶಾಲು ಹೊದಿಸಿ ಅಲಂಕಾರ ಮಾಡಲಾಗುವುದು. ಹೀಟರ್‌ ಅಳವಡಿಕೆ ಮಾಡಿ ಮೂರ್ತಿಗೆ ಬಿಸಿ ನೀರಿನ ಅಭಿಷೇಕ ಮಾಡುವುದು. ಬಾಲರಾಮನಿಗೆ ಮೊಸರು ನೈವೇದ್ಯದ ಬದಲು ಹವಾಮಾನ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ಒಣ ಹಣ್ಣುಗಳ ನೈವೇದ್ಯ ಇರುತ್ತದೆ. ಇದನ್ನೂ ಓದಿ: ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅರೆಸ್ಟ್‌ – ಬಿಷ್ಣೋಯ್‌ ಗ್ಯಾಂಗ್‌ ಜೊತೆ ನಂಟು ಸಾಬೀತು!

    ಚಳಿಗಾಲದ ಉಡುಗೆಯನ್ನು ದೆಹಲಿ ಮೂಲದ ವಿನ್ಯಾಸಕರು ಹೊಲಿಯುತ್ತಿದ್ದಾರೆ. ನ.20 ರಿಂದ, ರಾಮಲಲ್ಲಾ ಮೂರ್ತಿಗೆ ಉಗುರುಬೆಚ್ಚನೆಯ ನೀರಿನಿಂದ ಸ್ನಾನ ಮಾಡಲಾಗುವುದು ಮತ್ತು ಗರ್ಭಗುಡಿಯಲ್ಲಿ ಹೀಟರ್‌ಗಳನ್ನು ಅಳವಡಿಸಿ ಅದನ್ನು ಬೆಚ್ಚಗಿಡಲಾಗುತ್ತದೆ. ಹವಾಮಾನ ವೈಪರೀತ್ಯದ ಸಮಯದಲ್ಲಿ ಗರ್ಭಗುಡಿಯಲ್ಲಿ ಬ್ಲೋವರ್‌ನಿಂದ ಬೆಚ್ಚಗಿನ ಗಾಳಿಯನ್ನು ಸಹ ಒದಗಿಸಲಾಗುತ್ತದೆ.

    ರಾಮಲಲ್ಲಾ ಬಾಲಕ. ಹೀಗಾಗಿ, ಅವನ ಆರೈಕೆ ಮುಖ್ಯವಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಚಳಿಗಾಲದಲ್ಲಿ ಬಾಲಕ ರಾಮನಿಗೆ ವಿಶೇಷ ಗಮನ ಕೊಡಲಾಗುವುದು. ಇದನ್ನೂ ಓದಿ: ಮಹಿಳೆಯರಿಗೆ 3,000 ರೂ., ನಿರುದ್ಯೋಗ ಯುವಕ, ಯುವತಿಯರಿಗೆ 4,000 ರೂ. ಭತ್ಯೆ; ಕಾಂಗ್ರೆಸ್‌ ʻಮಹಾʼ ಗ್ಯಾರಂಟಿ!

    ದೇವಾಲಯದ ಟ್ರಸ್ಟ್‌ನ ವಕ್ತಾರ ಓಂಕಾರ್ ಸಿಂಗ್, ರಾಮಲಲ್ಲಾ ರಾಮಮಂದಿರದಲ್ಲಿ ರಾಜಕುಮಾರನಾಗಿ ಕುಳಿತಿದ್ದಾನೆ. ಆದ್ದರಿಂದ ಅವನ ಬಟ್ಟೆಗಳು ಅವನ ರಾಜಪ್ರಭುತ್ವಕ್ಕೆ ಹೊಂದಿಕೆಯಾಗಬೇಕು ಎಂದು ಸಿಂಗ್ ಹೇಳಿದರು.

  • ಅಯೋಧ್ಯೆ ರಾಮಮಂದಿರದ ಪ್ರಾಣಪ್ರತಿಷ್ಠಾಪನೆ ದಿನ ಬಂದಿತ್ತು 300 ಕೆಜಿ ತಿರುಪತಿ ಲಡ್ಡು

    ಅಯೋಧ್ಯೆ ರಾಮಮಂದಿರದ ಪ್ರಾಣಪ್ರತಿಷ್ಠಾಪನೆ ದಿನ ಬಂದಿತ್ತು 300 ಕೆಜಿ ತಿರುಪತಿ ಲಡ್ಡು

    ನವದೆಹಲಿ: ಅಯೋಧ್ಯೆ ರಾಮಮಂದಿರ (Ayodhya Ram Mandir) ಪ್ರತಿಷ್ಠಾಪನೆ ದಿನ 300 ಕೆಜಿ ತಿರುಪತಿ ಲಡ್ಡು (Tirupati Laddu) ಪ್ರಸಾದ ಬಂದಿತ್ತು ಎಂದು ಅಯೋಧ್ಯೆಯ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್‌ ತಿಳಿಸಿದ್ದಾರೆ.

    ರಾಮಮಂದಿರದಲ್ಲಿ ಭಕ್ತರಿಗೆ ಪ್ರಸಾದ ವಿತರಿಸಲಾಗಿತ್ತು. ಜನವರಿಯಲ್ಲಿ ರಾಮಮಂದಿರದ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ತಿರುಪತಿ ದೇವಸ್ಥಾನದಿಂದ 300 ಕೆಜಿ ಪ್ರಸಾದವನ್ನು ಭಕ್ತರಿಗೆ ಹಸ್ತಾಂತರಿಸಲಾಗಿದೆ ಎಂದು ಮುಖ್ಯ ಅರ್ಚಕರು ಖಚಿತಪಡಿಸಿದ್ದಾರೆ. ಇದನ್ನೂ ಓದಿ: Tirupati Laddu Row| ತಮಿಳುನಾಡು ಮೂಲದ ಕಂಪನಿಯಿಂದ ಕಲಬೆರೆಕೆ ತುಪ್ಪ: ಟಿಡಿಡಿ ಇಓ

    ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪದ ಸುದ್ದಿ ದೇಶಾದ್ಯಂತ ಚರ್ಚೆ ಹುಟ್ಟುಹಾಕಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ತಿರುಪತಿ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಪ್ರತಿಪಕ್ಷ YSRCP, ನಾಯ್ಡು ಅವರು ರಾಜಕೀಯ ಲಾಭಕ್ಕಾಗಿ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಟೀಕಿಸಿದೆ.

    ಆಂಧ್ರಪ್ರದೇಶದ ತಿರುಪತಿಯಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ‘ಪ್ರಸಾದ’ (ಲಡ್ಡು) ತಯಾರಿಸಲು ಪ್ರಾಣಿಗಳ ಕೊಬ್ಬು ಬಳಸುತ್ತಿದ್ದ ಬಗ್ಗೆ ಅಯೋಧ್ಯೆ ರಾಮಮಂದಿರದ ಮುಖ್ಯ ಅರ್ಚಕರು ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ತಿರುಪತಿ ಲಡ್ಡು ವಿವಾದ – ವರದಿ ಕೇಳಿದ ಕೇಂದ್ರ ಸರ್ಕಾರ

    ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಬೆರೆಸಿದ್ದರೆ ಅದು ಅಕ್ಷಮ್ಯ. ಇದರಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸತ್ಯೇಂದ್ರ ದಾಸ್ ಒತ್ತಾಯಿಸಿದ್ದಾರೆ.

  • ಅಯೋಧ್ಯೆ ರಾಮಮಂದಿರ – ರಾಮಲಲ್ಲಾನ ಪ್ರಾಣಪ್ರತಿಷ್ಠೆಯಲ್ಲಿ ಭಾಗಿಯಾಗಿದ್ದ ಅರ್ಚಕ ನಿಧನ

    ಅಯೋಧ್ಯೆ ರಾಮಮಂದಿರ – ರಾಮಲಲ್ಲಾನ ಪ್ರಾಣಪ್ರತಿಷ್ಠೆಯಲ್ಲಿ ಭಾಗಿಯಾಗಿದ್ದ ಅರ್ಚಕ ನಿಧನ

    ಲಕ್ನೋ: ಅಯೋಧ್ಯೆ ರಾಮಮಂದಿರದ (Ayodhya Ram Mandir) ರಾಮಲಲ್ಲಾನ ಪ್ರಾಣಪ್ರತಿಷ್ಠೆಯಲ್ಲಿ ಭಾಗಿಯಾಗಿದ್ದ ಅರ್ಚಕ ಪಂಡಿತ್‌ ಲಕ್ಷ್ಮೀಕಾಂತ್‌ ದೀಕ್ಷಿತ್‌ (Pandit Laxmikant Dixit) ನಿಧನರಾಗಿದ್ದಾರೆ.

    ಕಾಶಿಯ ಪ್ರಧಾನ ಅರ್ಚಕರೂ ಆಗಿದ್ದ ದೀಕ್ಷಿತ್‌ ಅವರು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಕಾಶಿಯ ಪ್ರಖ್ಯಾತ ವೈದಿಕ ಶ್ರೌತ-ಸ್ಮಾರ್ತ ಸಂಸ್ಕಾರ ತಜ್ಞ, ಸಾಂಗ್ವೇದ ವಿದ್ಯಾಲಯದ ಯಜುರ್ವೇದ ಶಿಕ್ಷಕ ಲಕ್ಷ್ಮೀಕಾಂತ ದೀಕ್ಷಿತ್ ಅವರ ನಿಧನದಿಂದ ಸನಾತನಿ ಜಗತ್ತು ತುಂಬಲಾರದ ನಷ್ಟವನ್ನು ಅನುಭವಿಸಿದೆ. ಇದನ್ನೂ ಓದಿ: ನಿರ್ಮಾಣ ಹಂತದಲ್ಲಿದ್ದ YSR ಕಾಂಗ್ರೆಸ್‌ ಪಕ್ಷದ ಕಚೇರಿ ಧ್ವಂಸ – ಸೇಡಿನ ರಾಜಕಾರಣ ಎಂದು ಆಕ್ರೋಶ

    ದೀಕ್ಷಿತ್‌ ಅವರ ನೇತೃತ್ವದಲ್ಲಿ ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರತಿಷ್ಠಾಪಿಸಲಾಯಿತು. ರಾಮಮಂದಿರದಲ್ಲಿ ಎಲ್ಲಾ ಪೂಜೆಗಳು ನೆರವೇರಿದ್ದವು. 2021ರ ಕಾಶಿ ವಿಶ್ವನಾಥ ಧಾಮದ ಉದ್ಘಾಟನೆಯ ಪೂಜೆಯಲ್ಲಿ ಅವರು ಪಾಲ್ಗೊಂಡಿದ್ದರು.

    ಕಾಶಿಯ ವಿದ್ವಾಂಸರೂ, ಶ್ರೀರಾಮ ಜನ್ಮಭೂಮಿ ಪ್ರಾಣಪ್ರತಿಷ್ಠೆಯ ಪ್ರಧಾನ ಅರ್ಚಕರೂ ಆದ ವೇದಮೂರ್ತಿ ಅವರು, ಆಚಾರ್ಯ ಶ್ರೀ ಲಕ್ಷ್ಮೀಕಾಂತ ದೀಕ್ಷಿತ್ ಅವರ ನಿಧನ ಅಧ್ಯಾತ್ಮ ಮತ್ತು ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಸಂಸ್ಕೃತ ಭಾಷೆ ಮತ್ತು ಭಾರತೀಯ ಸಂಸ್ಕೃತಿಗೆ ಅವರು ಮಾಡಿದ ಸೇವೆಗಾಗಿ ಅವರು ಯಾವಾಗಲೂ ಸ್ಮರಣೀಯರಾಗಿದ್ದಾರೆ ಎಂದು ಸ್ಮರಿಸಿದ್ದಾರೆ. ಇದನ್ನೂ ಓದಿ: ಪರೀಕ್ಷಾ ಅಕ್ರಮ ತಡೆಗಟ್ಟಲು ಕೇಂದ್ರ ಸರ್ಕಾರದಿಂದ ಹೊಸ ಕಾನೂನು; 5-10 ವರ್ಷ ಜೈಲು, ಒಂದು ಕೋಟಿ ಕನಿಷ್ಠ ದಂಡ

    ಇದೇ ವರ್ಷದ ಜ.22 ರಂದು ಅಯೋಧ್ಯೆ ರಾಮಮಂದಿರದಲ್ಲಿ ಬಾಲಕರಾಮ ಪ್ರಾಣಪ್ರತಿಷ್ಠೆ ಸಮಾರಂಭ ಜರುಗಿತು. ಪ್ರಧಾನಿ ಮೋದಿ ನೇತೃತ್ವದಲ್ಲಿ ಪ್ರಾಣಪ್ರತಿಷ್ಠೆ ನಡೆಯಿತು. ಅನೇಕ ಗಣ್ಯರು, ಸಿನಿತಾರೆಯರು, ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ, ರಾಮಮಂದಿರದ ಗರ್ಭಗುಡಿಯಲ್ಲಿ ವಿರಾಜಮಾನನಾದ ರಾಮಲಲ್ಲಾನನ್ನು ಕಣ್ತುಂಬಿಕೊಂಡಿದ್ದರು.

  • PublicTV Explainer: ‘ದಶಾವತಾರಿ ರಾಮ’ನೂರಿನ ಅಯೋಧ್ಯೆ ರಾಮಮಂದಿರದ 10 ವಿಶೇಷತೆಗಳು..

    PublicTV Explainer: ‘ದಶಾವತಾರಿ ರಾಮ’ನೂರಿನ ಅಯೋಧ್ಯೆ ರಾಮಮಂದಿರದ 10 ವಿಶೇಷತೆಗಳು..

    -ಅಯೋಧ್ಯೆಗೆ ಹೋಗುವಾಗ ಈ 10 ಅಂಶಗಳು ನಿಮಗೆ ತಿಳಿದಿರಲಿ..

    ಅಯೋಧ್ಯೆ (ಉತ್ತರ ಪ್ರದೇಶ): ಅಯೋಧ್ಯೆ ರಾಮಮಂದಿರದಲ್ಲಿ (Ayodhya Ram Mandir) ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಶುರುವಾಗಿದೆ. ದೇಶದೆಲ್ಲೆಡೆ ರಾಮಭಕ್ತರಲ್ಲಿ ಸಂಭ್ರಮ-ಸಡಗರ ಮನೆ ಮಾಡಿದೆ. 500 ವರ್ಷಗಳ ನಂತರ ಶ್ರೀರಾಮ ಮತ್ತೆ ಪಟ್ಟಕ್ಕೇರಲು ಸಿದ್ಧನಾಗಿದ್ದಾನೆ. ಸೋಮವಾರ ಪ್ರಾಣ ಪ್ರತಿಷ್ಠೆಗಾಗಿ ಅಯೋಧ್ಯೆ ಕಂಗೊಳಿಸುತ್ತಿದೆ.

    ವಾಲ್ಮೀಕಿ ರಾಮಾಯಣದ ಕೇಂದ್ರಬಿಂದು, ಪುಣ್ಯಪುರುಷ ಭಗವಾನ್‌ ರಾಮನ (Lord Rama) ಜೀವನ ಚರಿತ್ರೆಯೇ ರೋಚಕ. ಅಂತೆಯೇ ಅಯೋಧ್ಯೆ ನಗರ, ಸರಯೂ ನದಿ, ಭವ್ಯ ರಾಮಮಂದಿರ, ಅದರ ಶಿಲ್ಪಿ, ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗಲಿರುವ ಬಾಲರಾಮನ ವಿಗ್ರಹವೂ ತನ್ನದೇ ಆದ ವಿಶೇಷತೆ ಹೊಂದಿದೆ. ಅಯೋಧ್ಯೆಗೆ ಹೋಗುವಾಗ ಈ 10 ಅಂಶಗಳ ವಿಚಾರ ನಿಮಗೆ ತಿಳಿದಿರಲಿ. ಇದನ್ನೂ ಓದಿ: ಬಾಲರಾಮನ ಪ್ರಾಣಪ್ರತಿಷ್ಠಾಪನೆ; ವಿವಿಧ ರಾಜ್ಯಗಳ 50 ವಾದ್ಯಗಳಿಂದ ಹೊಮ್ಮಲಿದೆ ಮಂಗಳ ನಾದ

    1. ಅಯೋಧ್ಯೆ ಯಾವ ನದಿಯ ದಡದ ಮೇಲಿದೆ?
    ಹಿಂದೂಗಳ ಏಳು ಪವಿತ್ರ ಕ್ಷೇತ್ರಗಳಲ್ಲಿ ಅಯೋಧ್ಯೆಯೂ ಒಂದು. ಆದಿ ಮಹಾಕಾವ್ಯ ರಾಮಾಯಣದಲ್ಲಿ ಉಲ್ಲೇಖಿಸಿದಂತೆ ಅಯೋಧ್ಯೆಯು ಕೋಸಲ ದೇಶದ ರಾಜಧಾನಿ. ಈಗ ಉತ್ತರ ಪ್ರದೇಶ ರಾಜ್ಯದ ನಗರವಾಗಿದೆ. ಅಯೋಧ್ಯೆಯು ಸರಯೂ ನದಿಯ ದಡದ ಮೇಲಿರುವ ನಗರ. 234 ಕಿಮೀ ಸುತ್ತಳತೆ ಭೂಪ್ರದೇಶ ಹೊಂದಿದೆ. ಸರಯೂ ಭಾರತದ ಒಂದು ಪುರಾತನ ನದಿ. ರಾಮಾಯಣದ ಶ್ರೀರಾಮ ರಾಜ್ಯವಾಳಿದ್ದು, ಇದೇ ಸರಯೂ ತೀರದ ಅಯೋಧ್ಯೆಯಲ್ಲಿ. ಇದು ಹಿಮಾಲಯ ಪರ್ವತದ ಒಂದು ಸರೋವರದಲ್ಲಿ ಹುಟ್ಟಿ, ಪ್ರವಹಿಸುವುದರಿಂದ ಇದಕ್ಕೆ ಸರಯೂ ಎಂಬ ಹೆಸರು ಬಂದಿದೆ. ಶ್ರೀರಾಮ ತನ್ನ ಅವತಾರವನ್ನು ಸಮಾಪ್ತಿಗೊಳಿಸುವಾಗ, ತನ್ನ ಪರಿವಾರದೊಂದಿಗೆ ಸರಯೂ ನದಿಯಲ್ಲಿ ಮುಳುಗಿದನೆಂಬ ವಿವರಣೆ ಉತ್ತರ ರಾಮಾಯಣದಲ್ಲಿ ಬರುತ್ತದೆ.

    2. ಅಯೋಧ್ಯೆ ರಾಮಮಂದಿರ ಯಾವ ಶೈಲಿಯಲ್ಲಿದೆ?
    ರಾಮಮಂದಿರ ಭಾರತೀಯ ನಾಗರ ಶೈಲಿಯಲ್ಲಿದೆ. ಸಾಮಾನ್ಯವಾಗಿ ಉತ್ತರ ಭಾರತದ ಪುರಾತನ ದೇವಾಲಯಗಳೆಲ್ಲವೂ ನಾಗರ ಶೈಲಿಯಲ್ಲಿವೆ. ಗುಪ್ತರ ಕಾಲದ ದೇವಾಲಯಗಳು ಈ ಶೈಲಿಯಲ್ಲಿದ್ದವು. ನಾಗರ ಶೈಲಿಯ ವಿಶೇಷವೆಂದರೆ, ಕಲ್ಲುಗಳಿಂದ ವಿಶಾಲವಾದ ಮತ್ತು ಎತ್ತರವಾದ ವೇದಿಕೆ ನಿರ್ಮಿಸಿ ಅದರ ಮೇಲೆ ಮಂದಿರ ಕಟ್ಟಲಾಗುತ್ತದೆ. ದೊಡ್ಡ ಗೋಪುರದ ಕೆಳಗೆ ಗರ್ಭ ಗೃಹ ಇರುತ್ತದೆ. ಇದರ ಸುತ್ತ ಕೆಲವು ಮಂಟಗಳಿರುತ್ತವೆ. ಉಳಿದಂತೆ ಗೋಪುರ, ಕಳಸ ಮತ್ತು ಅದರ ಮೇಲಿನ ಧ್ವಜ ದಕ್ಷಿಣ ಭಾರತದ ದೇವಾಲಯಗಳ ಶೈಲಿಯಲ್ಲೇ ಇರುತ್ತವೆ. ಕೋನಾರ್ಕದ ಸೂರ್ಯ ದೇವಾಲಯ, ಒಡಿಶಾದ ಜಗನ್ನಾಥ ಮಂದಿರ, ಖಜುರಾಹೋದ ಲಕ್ಷ್ಮಣ ದೇವಾಲಯಗಳು ನಾಗರ ಶೈಲಿಯಲ್ಲೇ ಇವೆ. ಇದನ್ನೂ ಓದಿ: ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಗೆ ಸಜ್ಜಾದ ರಾಮಮಂದಿರ- ಫೋಟೋಗಳಲ್ಲಿ ನೋಡಿ..

    3. ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದವರು ಯಾರು?
    ಅಯೋಧ್ಯೆ ರಾಮಮಂದಿರಕ್ಕೆ 2020 ರ ಆಗಸ್ಟ್ 5 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದರು. ಅಲ್ಲಿಂದ ರಾಮಮಂದಿರ ನಿರ್ಮಾಣ ಪ್ರಾರಂಭವಾಯಿತು. ಭೂಮಿಪೂಜೆ ಕಾರ್ಯಕ್ರಮಕ್ಕೂ ಮುನ್ನ ಮೂರು ದಿನಗಳ ಕಾಲ ವೈದಿಕ ವಿಧಿವಿಧಾನಗಳನ್ನು ನೆರವೇರಿಸಲಾಗಿತ್ತು. ಆಗಸ್ಟ್ 5 ರಂದು ಪ್ರಧಾನಿ ಮೋದಿ ಅವರು ರಾಮಮಂದಿರದ ಶಂಕುಸ್ಥಾಪನೆಯಾಗಿ 40 ಕೆಜಿ ತೂಕದ ಬೆಳ್ಳಿಯ ಇಟ್ಟಿಗೆಯನ್ನು ಅಡಿಗಲ್ಲು ಹಾಕಿದರು. ಭೂಮಿಪೂಜೆಗೆ ಭಾರತದ ಹಲವಾರು ಪುಣ್ಯ ದೇವಾಲಯಗಳಿಂದ ಮಣ್ಣು ಮತ್ತು ಅನೇಕ ಪವಿತ್ರ ನದಿಗಳ ನೀರನ್ನು ಅಯೋಧ್ಯೆಗೆ ಕಳುಹಿಸಲಾಗಿತ್ತು. ಜೊತೆಗೆ ಬೇರೆ ಬೇರೆ ಧರ್ಮದ ಗುರುಗಳನ್ನೂ ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.

    4. ರಾಮಮಂದಿರದಲ್ಲಿರುವ ಕಂಬಗಳು ಮತ್ತು ಬಾಗಿಲುಗಳ ಸಂಖ್ಯೆ ಎಷ್ಟು?
    ಅಯೋಧ್ಯೆ ರಾಮಮಂದಿರವು ನಾಗರ ವಾಸ್ತುಶಿಲ್ಪದ ಶೈಲಿಯಾಗಿದೆ. ಮಂದಿರವು ಮೂರು ಅಂತಸ್ತಿನದ್ದಾಗಿದ್ದು, ಪ್ರತಿ ಮಹಡಿಯು 20 ಅಡಿ ಎತ್ತರವಿದೆ. ಇದು ಒಟ್ಟು 392 ಕಂಬಗಳು ಮತ್ತು 44 ಬಾಗಿಲುಗಳನ್ನು ಹೊಂದಿದೆ. ಮಂದಿರದ ಪ್ರವೇಶವು ಪೂರ್ವದಿಂದ, ಸಿಂಗ್ ದ್ವಾರದ ಮೂಲಕ 32 ಮೆಟ್ಟಿಲುಗಳನ್ನು ಏರುತ್ತದೆ. ಮಂದಿರದ ಒಟ್ಟು ಬಾಗಿಲುಗಳ ಪೈಕಿ 42 ಚಿನ್ನ ಲೇಪಿತ ಬಾಗಿಲುಗಳನ್ನು ಅಳವಡಿಸಲಾಗುವುದು. ಈಗಾಗಲೇ 13 ಚಿನ್ನದ ಬಾಗಿಲುಗಳನ್ನು ಅಳವಡಿಸಲಾಗಿದೆ. ಇದನ್ನೂ ಓದಿ: ರಾಮಲಲ್ಲಾ ವಿಗ್ರಹದ ಫೋಟೋ ವೈರಲ್‌ ಮಾಡಿದವ್ರ ವಿರುದ್ಧ ಕಠಿಣ ಕ್ರಮಕ್ಕೆ ಪ್ರಧಾನ ಅರ್ಚಕ ಒತ್ತಾಯ

    5. ರಾಮಮಂದಿರ ನಿರ್ಮಾಣ ಕಂಪನಿ ಯಾವುದು?
    ರಾಮಮಂದಿರ ನಿರ್ಮಾಣ ಮತ್ತು ವಿನ್ಯಾಸವನ್ನು ಎಲ್ & ಟಿ (ಅಂದರೆ, ಲಾರ್ಸೆನ್ ಮತ್ತು ಟುಬ್ರೋ) ಕಂಪನಿಗಳು ಮಾಡಲಿವೆ. ಇದರ ಮೇಲ್ವಿಚಾರಣೆ ಜವಾಬ್ದಾರಿಯನ್ನು ಕನ್ಸಲ್ಟಿಂಗ್ ಎಂಜಿನಿಯರ್ಸ್ ವಹಿಸಿಕೊಂಡಿದೆ. ಭಾರತೀಯ ತಂತ್ರಜ್ಞಾನ ಸಂಸ್ಥೆ ಐಐಟಿಯು ತಾಂತ್ರಿಕ ನೆರವು ಒದಗಿಸಲಿದೆ.

    6. ರಾಮಮಂದಿರ ಎತ್ತರ ಎಷ್ಟು?
    ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಮಂದಿರಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಮಮಂದಿರದ ಎತ್ತರ 161 ಅಡಿ. 380 ಅಡಿ ಈ ದೇವಾಲಯದ ಉದ್ದ. 250 ಅಡಿ ಅಗಲ. 84,000 ಚದರ ಅಡಿ ದೇವಾಲಯದ ವಿಸ್ತೀರ್ಣ. ದೇವಾಲಯ ಮೂರು ಅಂತಸ್ತಿನದ್ದಾಗಿದ್ದು, ಪ್ರತಿ ಮಹಡಿ 20 ಅಡಿ ಎತ್ತರವಿದೆ. ಇದನ್ನೂ ಓದಿ: ರಾಮಮಂದಿರ ವಿಚಾರದಲ್ಲಿ ಕಾಂಗ್ರೆಸ್ ನಿಲುವಿನಿಂದ ಅಸಮಾಧಾನ; ಗುಜರಾತ್‌ನ ‘ಕೈ’ ಶಾಸಕ ರಾಜೀನಾಮೆ

    7. ರಾಮಮಂದಿರ ವಾಸ್ತುಶಿಲ್ಪಿ ಯಾರು?
    ರಾಮಮಂದಿರದ ವಾಸ್ತುಶಿಲ್ಪಿ ಚಂದ್ರಕಾಂತ್ ಸೋಂಪುರ. ಇವರು ಗುಜರಾತ್‌ನ ಅಹಮದಾಬಾದ್‌ನ ಕರ್ಣಾವತಿಯವರು. ಚಂದ್ರಕಾಂತ್ ಅವರ ಅಜ್ಜ ಪ್ರಭಾಕರ್ ಸೋಂಪುರ ಗುಜರಾತ್‌ನ ಸೋಮನಾಥ ಮಂದಿರವನ್ನು ಕಟ್ಟಿದವರು. ನಾಗರ ಶೈಲಿಯಲ್ಲಿ ಮಂದಿರ ನಿರ್ಮಿಸಿದ ಶಿಲ್ಪಿ. ಗುಜರಾತ್‌ನ ಪ್ರಸಿದ್ಧ ಅಕ್ಷರಧಾಮ ದೇವಾಲಯದ ವಿನ್ಯಾಸವೂ ಇವರದೇ. ಅಂತೆಯೇ ರಾಮಮಂದಿರ ದೇವಾಲಯವು ಅತ್ಯುತ್ತಮ ಎಂಜಿನಿಯರಿಂಗ್ ಮತ್ತು ವಾಸ್ತುಶಿಲ್ಪಕ್ಕೆ ವಿಶಿಷ್ಟ ಉದಾಹರಣೆಯಾಗಿದೆ.

    8. ರಾಮಮಂದಿರದಲ್ಲಿರುವ ಮಂಟಪಗಳ ಸಂಖ್ಯೆ ಎಷ್ಟು?
    ದೇವಾಲಯವು ಐದು ಮಂಟಪಗಳನ್ನು (ಸಭಾಂಗಣ) ಒಳಗೊಂಡಿದೆ. ಅವುಗಳೆಂದರೆ ನೃತ್ಯ ಮಂಟಪ, ರಂಗ ಮಂಟಪ, ಸಭಾ ಮಂಟಪ, ಪ್ರಾರ್ಥನೆ ಮತ್ತು ಕೀರ್ತನ ಮಂಟಪ. ದೇವಾನುದೇವತೆಗಳ ಮೂರ್ತಿ ಕೆತ್ತನೆಗಳು ಕಂಬಗಳು ಮತ್ತು ಗೋಡೆಗಳನ್ನು ಅಲಂಕರಿಸಿವೆ. ಇದನ್ನೂ ಓದಿ: ಶ್ರೀರಾಮನ ಪ್ರಾಣಪ್ರತಿಷ್ಠೆಗೆ ಮೋದಿ ಕಠಿಣ ವ್ರತ – ಪ್ರತಿದಿನ 1 ಗಂಟೆ ವಿಶೇಷ ಮಂತ್ರ ಪಠಣ

    9. ದೇವಾಲಯದ ಪ್ರದೇಶದ ಬಗ್ಗೆ ನಿಮಗೆಷ್ಟು ಗೊತ್ತು?
    ಭಾರತೀಯ ಸಂಪ್ರದಾಯವನ್ನು ಅನುಸರಿಸಿ ಮತ್ತು ಸ್ಥಳೀಯ ತಂತ್ರಜ್ಞಾನವನ್ನು ಬಳಸಿಕೊಂಡು ಪರಿಸರ ಸಂರಕ್ಷಣೆಯ ಮೇಲೆ ಕೇಂದ್ರೀಕರಿಸಿ ಒಟ್ಟು 70 ಎಕರೆ ಪ್ರದೇಶದಲ್ಲಿ ಈ ದೇವಾಲಯ ನಿರ್ಮಿಸಲಾಗಿದೆ. 70% ಹಸಿರು ಪ್ರದೇಶ ಇದೆ. ದೇವಾಲಯದಲ್ಲಿ ಮಣ್ಣಿನ ತೇವಾಂಶ ತಪ್ಪಿಸಲು ೨೧ ಅಡಿ ಗ್ರಾನೈಟ್ ಅಡಿಪಾಯ ನಿರ್ಮಿಸಲಾಗಿದೆ.

    10. ಅಯೋಧ್ಯೆಯ ರಾಮಲಲ್ಲಾ ವಿಗ್ರಹ ನಿರ್ಮಿಸಿದವರು ಯಾರು?
    ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗಲಿರುವ ರಾಮಲಲ್ಲಾನ ವಿಗ್ರಹವನ್ನು ಕೆತ್ತಿದವರು ಶಿಲ್ಪಿ ಅರುಣ್ ಯೋಗಿರಾಜ್. ಇವರು ಕರ್ನಾಟಕದ ಮೈಸೂರು ಮೂಲದ ಶಿಲ್ಪಿ. ಮಕ್ಕಳ ಮುಖಭಾವನೆ ಕಲ್ಪಿಸಿಕೊಂಡು ರಾಮಲಲ್ಲಾ ಮೂರ್ತಿ ಕೆತ್ತನೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ಮೂರ್ತಿ ಕೆತ್ತನೆ ವೇಳೆ ಕಟ್ಟುನಿಟ್ಟಿನ ಸಾತ್ವಿಕ ಆಹಾರ ಸೇವನೆ ಮಾಡುತ್ತಿದ್ದರು. ಮೂರ್ತಿ ಕೆತ್ತನೆ ವೇಳೆ ಅವರ ಕಣ್ಣಿಗೆ ತೊಂದರೆಯಾಗಿತ್ತು. ವಿಗ್ರಹ ಕೆತ್ತನೆ ಕೆಲಸ ಪೂರ್ಣಗೊಳಿಸುವವರೆಗೆ (ಸುಮಾರು 6 ತಿಂಗಳು) ತಮ್ಮ ಕುಟುಂಬದ ಸದಸ್ಯರನ್ನು ಭೇಟಿ ಮಾಡಿರಲಿಲ್ಲ. ಎಲ್ಲಾ ಅಡೆತಡೆ, ಸವಾಲುಗಳನ್ನು ಎದುರಿಸಿ ರಾಮಲಲ್ಲಾ ಮೂರ್ತಿ ಕೆತ್ತನೆ ಮಾಡಿದ್ದಾರೆ. ಇದನ್ನೂ ಓದಿ: ತಲೆಗೂದಲಿಗೆ ಹಗ್ಗ ಕಟ್ಟಿಕೊಂಡೇ ರಾಮರಥ ಎಳೆದ ಸ್ವಾಮೀಜಿ; ಅಯೋಧ್ಯೆ ಕಡೆಗೆ 566 ಕಿಮೀ ಯಾತ್ರೆ

  • ಪ್ರಾಣಪ್ರತಿಷ್ಠೆಗಾಗಿ ಅರ್ಧದಿನ ರಜೆ ಘೋಷಿಸಿದ್ದ AIIMS – ಒಂದು ದಿನದ ನಂತ್ರ ಆದೇಶ ವಾಪಸ್‌!

    ಪ್ರಾಣಪ್ರತಿಷ್ಠೆಗಾಗಿ ಅರ್ಧದಿನ ರಜೆ ಘೋಷಿಸಿದ್ದ AIIMS – ಒಂದು ದಿನದ ನಂತ್ರ ಆದೇಶ ವಾಪಸ್‌!

    ನವದೆಹಲಿ: ಭಾರೀ ಗದ್ದಲದ ನಡುವೆ ದೆಹಲಿಯ ಏಮ್ಸ್‌ ಆಸ್ಪತ್ರೆ (AIIMS Hospital) ಪ್ರಾಣಪ್ರತಿಷ್ಠೆ ಹಿನ್ನೆಯೆಲ್ಲಿ ಸಿಬ್ಬಂದಿಗೆ ಘೋಷಿಸಿದ್ದ ಅರ್ಧದಿನ ರಜೆಯ ಆದೇಶವನ್ನು ಕೆಲವೇ ಗಂಟೆಗಳಲ್ಲಿ ಹಿಂಪಡೆದಿದೆ.

    ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಮಧ್ಯಾಹ್ನ 2:30ರ ವರೆಗೆ ಆಸ್ಪತ್ರೆಗೆ ರಜೆ ಘೋಷಿಸಿ ಸುತ್ತೋಲೆ ಹೊರಡಿಸಿತ್ತು. ಆದ್ರೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಆಡಳಿತ ಮಂಡಳಿ ರಜೆಯ ಆದೇಶವನ್ನು ವಾಪಸ್‌ ಪಡೆದುಕೊಂಡಿದೆ. ಅಲ್ಲದೇ ಹೊರ ರೋಗಿಗಳಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಅಯೋಧ್ಯೆಗೂ ಮುನ್ನ ರಾಮಸೇತು ನಿರ್ಮಿಸಿದ ಸ್ಥಳಕ್ಕೆ ಮೋದಿ ಭೇಟಿ – ವಿಶೇಷ ಪ್ರಾರ್ಥನೆ

    ಕಣ್ಮನ ಸೆಳೆಯುತ್ತಿದೆ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೆ ಸಜ್ಜಾದ ಅಯೋಧ್ಯೆಯ ರಾಮಮಂದಿರ

    ಏಮ್ಸ್‌ ಹೇಳಿದ್ದೇನು?
    ಕೇಂದ್ರ ಸರ್ಕಾರ ನೌಕರರಿಗೆ ಅರ್ಧದಿನ ರಜೆ ಘೋಷಿಸಿದ್ದನ್ನು ಉಲ್ಲೇಖಿಸಿ ದೆಹಲಿಯ ಏಮ್ಸ್ ಆಸ್ಪತ್ರೆ ಅರ್ಧದಿನ ರಜೆ ಘೋಷಿಸಿತ್ತು. ಜನವರಿ 22ರಂದು ಮಧ್ಯಾಹ್ನ 2.30ರಿಂದ ದೆಹಲಿ ಏಮ್ಸ್ ಆಸ್ಪತ್ರೆ ಎಂದಿನಂತೆ ಕಾರ್ಯನಿರ್ವಹಿಸಲಿದೆ. ಆದರೆ ಸೋಮವಾರ 2.30ರ ವರಗೆ ತುರ್ತು ಸೇವೆಗಳು ಮಾತ್ರ ಲಭ್ಯವಿರಲಿದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿತ್ತು. ಇದನ್ನೂ ಓದಿ: ರಾಮಮಂದಿರ ವಿಚಾರದಲ್ಲಿ ಕಾಂಗ್ರೆಸ್ ನಿಲುವಿನಿಂದ ಅಸಮಾಧಾನ; ಗುಜರಾತ್‌ನ ‘ಕೈ’ ಶಾಸಕ ರಾಜೀನಾಮೆ

    ಅಯೋಧ್ಯೆ ರಾಮ ಮಂದಿರ ಪ್ರಾಣಪ್ರತಿಷ್ಠೆ ಕಣ್ತುಂಬಿಕೊಳ್ಳಲು ಭಕ್ತರು ಸಜ್ಜಾಗಿದ್ದಾರೆ. ಆಸ್ಪತ್ರೆ ಸಿಬ್ಬಂದಿಗಳೂ ಪವಿತ್ರ ಕಾರ್ಯಕ್ರಮವನ್ನ ವೀಕ್ಷಿಸಲು ಹಾಗೂ ಪೂಜೆ, ಭಜನೆಯಲ್ಲಿ ತೊಡಗಿಸಿಕೊಳ್ಳಲು ಅರ್ಧ ದಿನ ರಜೆ ಘೋಷಿಸಲಾಗಿದೆ. ರೋಗಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಸಿಬ್ಬಂದಿಗೆ ರಜೆ ನೀಡಲಾಗಿದೆ. ಒಪಿಡಿ ವಿಭಾಗ ಸೇರಿದಂತೆ ತುರ್ತು ಸೇವೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ ಎಂದು ಏಮ್ಸ್ ಆಡಳಿತ ಮಂಡಳಿ ತಿಳಿಸಿತ್ತು. ಇದನ್ನೂ ಓದಿ: ರಾಮಲಲ್ಲಾ ಪ್ರಾಣಪ್ರತಿಷ್ಠೆ – ಜ.22ರಂದು ಅರ್ಧದಿನ ರಜೆ ಘೋಷಿಸಿದ AIIMS ಆಸ್ಪತ್ರೆ

    ಈ ಬೆನ್ನಲ್ಲೇ ಸಾರ್ವಜನಿಕರು ಹಾಗೂ ಪ್ರತಿಪಕ್ಷಗಳಿಂದ ಭಾರೀ ಟೀಕೆ ಕೇಳಿಬಂದಿತ್ತು. ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಸಹ, ಏಮ್ಸ್‌ ಮರ್ಯಾದಾ ಪುರುಷೋತ್ತಮ ರಾಮನನ್ನು ಸ್ವಾಗತಿಸಲು ರಜೆ ತೆಗೆದುಕೊಳ್ಳುತ್ತಿದೆ. ಆದ್ರೆ ಆರೋಗ್ಯ ಸೇವೆಗಳಿಗೆ ಅಡ್ಡಿಯಾಗುವುದನ್ನು ಶ್ರೀರಾಮ ಒಪ್ಪುತ್ತಾನಾ? ಎಂದು ಪ್ರಶ್ನಿಸಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದರು. ಇದನ್ನೂ ಓದಿ: ರಾಮಲಲ್ಲಾ ವಿಗ್ರಹದ ಫೋಟೋ ವೈರಲ್‌ ಮಾಡಿದವ್ರ ವಿರುದ್ಧ ಕಠಿಣ ಕ್ರಮಕ್ಕೆ ಪ್ರಧಾನ ಅರ್ಚಕ ಒತ್ತಾಯ 

  • ಸಿಎಂ ತವರಲ್ಲಿ ಶ್ರೀರಾಮನ ಸಂಭ್ರಮಕ್ಕೆ ಹೆಜ್ಜೆ ಹೆಜ್ಜೆಗೂ ಅಡ್ಡಿ – 24 ದಿನ ಉರಿಯುವ ಅಗರಬತ್ತಿಗೆ 2 ತಾಸು ಅನುಮತಿ

    ಸಿಎಂ ತವರಲ್ಲಿ ಶ್ರೀರಾಮನ ಸಂಭ್ರಮಕ್ಕೆ ಹೆಜ್ಜೆ ಹೆಜ್ಜೆಗೂ ಅಡ್ಡಿ – 24 ದಿನ ಉರಿಯುವ ಅಗರಬತ್ತಿಗೆ 2 ತಾಸು ಅನುಮತಿ

    – ಸಿಎಂ ತವರಲ್ಲಿ ಶ್ರೀರಾಮನ ಸಂಭ್ರಮಾಚರಣೆಗೆ ಹೆಜ್ಜೆ-ಹೆಜ್ಜೆಗೂ ಅಡ್ಡಿ

    ಮೈಸೂರು: ಸಿಎಂ ತವರಿನಲ್ಲಿ ಶ್ರೀರಾಮನ (Sri Rama) ಸಂಭ್ರಮಾಚರಣೆಗೆ ಹೆಜ್ಜೆ-ಹೆಜ್ಜೆಗೂ ಅಡ್ಡಿಯುಂಟಾಗುತ್ತಿದೆ ಎಂದು ರಾಮಭಕ್ತರಿಂದ ಆಕ್ಷೇಪ ವ್ಯಕ್ತವಾಗುತ್ತಿದೆ. ಶ್ರೀರಾಮನಿಗಾಗಿ ಮೈಸೂರಿನಲ್ಲಿ 24 ದಿನ ಉರಿಯುವ 111 ಅಡಿ ಉದ್ದದ ಅಗರ ಬತ್ತಿ ತಯಾರಾಗಿದೆ. ಆದ್ರೆ ಈ ಅಗರಬತ್ತಿಯನ್ನಿಡಲು ಮೈಸೂರು ಪೊಲೀಸರು (Mysuru Police) ಕೇವಲ 2 ತಾಸು ಅನುಮತಿ ಕೊಟ್ಟಿದ್ದಾರೆ.

    ಮೈಸೂರು ಅರಮನೆಯ (Mysore Palace) ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಈ ಅಗರಬತ್ತಿಯನ್ನಿಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದ್ರೆ 24 ದಿನ ಉರಿಯುವ ಅಗರಬತ್ತಿಗೆ ಪೊಲೀಸರು 2 ತಾಸಿನ ಅನುಮತಿ ನೀಡಿದ್ದಾರೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಗೆ ರಜೆ ಕೊಡೋ ಬಗ್ಗೆ ಬಿಜೆಪಿಯವ್ರು ಹೇಳಿಕೊಡಬೇಕಿಲ್ಲ: ಡಿಕೆ ಶಿವಕುಮಾರ್

    ಸಾಮ್ರಾಣಿ, ದೇವದಾರು, ಶ್ರೀಗಂಧ ಸೇರಿದಂತೆ ದಶಾಂಗಗಳನ್ನ ಬಳಸಿ ಅಗರಬತ್ತಿ ಮಾಡಿದ್ದೇವೆ. ಗಾಳಿ ಬೀಸಿದಾಗಲೂ ಕಿಡಿ ಹಾರುವುದಿಲ್ಲ. ಉತ್ತಮ ಸುವಾಸನೆ ಬೀರುತ್ತದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ ಎಂದು ಆಯೋಕಜರು ತಿಳಿಸಿದ್ದಾರೆ.

    ಲಕ್ಷ ದೀಪೋತ್ಸವಕ್ಕೂ ಅನುಮತಿ ರದ್ದು: ಸಿಎಂ ತವರಲ್ಲಿ ಶ್ರೀರಾಮನ ವಿಚಾರದಲ್ಲಿ ಮತ್ತೆ ಪಾಲಿಟಿಕ್ಸ್ ಶುರುವಾಗಿದೆ ಎಂಬ ಆರೋಪ ಕೇಳಿಬಂದಿದೆ. ಜನವರಿ 22ರಂದು ರಾಮಲಲ್ಲಾ ಪ್ರಾಣಪ್ರತಿಷ್ಠೆ ಹಿನ್ನೆಲೆ ಹಮ್ಮಿಕೊಳ್ಳಲಾಗಿದ್ದ ಶ್ರೀರಾಮನ ಹೆಸರಿನ ಲಕ್ಷದೀಪೋತ್ಸವಕ್ಕೆ ಮೈಸೂರು ಪೊಲೀಸರು ಇದ್ದಕ್ಕಿದ್ದಂತೆ ಅನುಮತಿಯನ್ನ ರದ್ದುಗೊಳಿಸಿದ್ದಾರೆ. ಕಳೆದ 10 ದಿನಗಳ ಹಿಂದೆಯಷ್ಟೇ ಲಕ್ಷ ದೀಪೋತ್ಸವಕ್ಕೆ ಅನುಮತಿ ಕೊಟ್ಟಿದ್ದ ಪೊಲೀಸರು, ಶನಿವಾರ ಇದ್ದಕ್ಕಿದ್ದಂತೆ ಅನುಮತಿ ರದ್ದುಪಡಿಸಿದ್ದೇವೆ ಎಂದು ಪತ್ರ ನೀಡಿದ್ದಾರೆ.

    ಸಂಚಾರಕ್ಕೆ ಅಡ್ಡಿ, ಕಾನೂನು ಸುವ್ಯವಸ್ಥೆ ಧಕ್ಕೆ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ಅನುಮತಿ ರದ್ದು ಮಾಡಿದ್ದೇವೆ ಎಂದು ನಗರ ಪೊಲೀಸ್ ಉಪ ಆಯುಕ್ತರು ತಿಳಿಸಿದ್ದಾರೆ. ಈ ಬಗ್ಗೆ ಲಕ್ಷದೀಪೋತ್ಸವ ಆಯೋಜಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇದನ್ನೂ ಓದಿ: ಪ್ರಾಣಪ್ರತಿಷ್ಠೆ ಸಮಯಕ್ಕೆ ಮೈಸೂರಿನಲ್ಲೂ ವಿಶೇಷ ಪೂಜೆ – ಶ್ರೀರಾಮನಿಗೆ ಸಪ್ತ ನದಿಗಳ ನೀರಿನಿಂದ ಜಲಾಭೀಷೇಕ! 

  • ಸಿಎಂ ತವರಲ್ಲಿ ಶ್ರೀರಾಮನ ಹೆಸರಿನ ಲಕ್ಷ ದೀಪೋತ್ಸವಕ್ಕೆ ಅನುಮತಿ ರದ್ದು – ರಾಮಭಕ್ತರಿಂದ ಆಕ್ಷೇಪ

    ಸಿಎಂ ತವರಲ್ಲಿ ಶ್ರೀರಾಮನ ಹೆಸರಿನ ಲಕ್ಷ ದೀಪೋತ್ಸವಕ್ಕೆ ಅನುಮತಿ ರದ್ದು – ರಾಮಭಕ್ತರಿಂದ ಆಕ್ಷೇಪ

    ಮೈಸೂರು: ಸಿಎಂ ತವರಲ್ಲಿ ಶ್ರೀರಾಮನ ವಿಚಾರದಲ್ಲಿ ಮತ್ತೆ ಪಾಲಿಟಿಕ್ಸ್ ಶುರುವಾಗಿದೆ ಎಂಬ ಆರೋಪ ಕೇಳಿಬಂದಿದೆ. ಜನವರಿ 22ರಂದು ರಾಮಲಲ್ಲಾ ಪ್ರಾಣಪ್ರತಿಷ್ಠೆ ಹಿನ್ನೆಲೆ ಹಮ್ಮಿಕೊಳ್ಳಲಾಗಿದ್ದ ಶ್ರೀರಾಮನ ಹೆಸರಿನ ಲಕ್ಷದೀಪೋತ್ಸವಕ್ಕೆ (Laksha Deepotsava) ಮೈಸೂರು ಪೊಲೀಸರು ಇದ್ದಕ್ಕಿದ್ದಂತೆ ಅನುಮತಿಯನ್ನ ರದ್ದುಗೊಳಿಸಿದ್ದಾರೆ.

    ಲಕ್ಷ ದೀಪೋತ್ಸವ ನಡೆಸಿದರೇ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುತ್ತದೆ ಎಂಬ ಕಾರಣ ನೀಡಿ ಅನುಮತಿ ರದ್ದುಗೊಳಿಸಿರುವುದಾಗಿ ಪೊಲೀಸರು (Mysuru Police) ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಾಣಪ್ರತಿಷ್ಠೆ ಮತ್ತೊಂದು ದೀಪಾವಳಿ, ಕ್ರಿಶ್ಚಿಯನ್ ಮಹಿಳೆಯಾದ್ರೂ ನಾನು ಆಚರಿಸುತ್ತೇನೆ – ಮೇರಿ ಮಿಲ್ಬೆನ್ ಸಂತಸ

    ಕಳೆದ 10 ದಿನಗಳ ಹಿಂದೆಯಷ್ಟೇ ಲಕ್ಷ ದೀಪೋತ್ಸವಕ್ಕೆ ಅನುಮತಿ ಕೊಟ್ಟಿದ್ದ ಪೊಲೀಸರು, ಶನಿವಾರ ಇದ್ದಕ್ಕಿದ್ದಂತೆ ಅನುಮತಿ ರದ್ದುಪಡಿಸಿದ್ದೇವೆ ಎಂದು ಪತ್ರ ನೀಡಿದ್ದಾರೆ. ಇದನ್ನೂ ಓದಿ: ಬಾಲರಾಮನ ಪ್ರಾಣಪ್ರತಿಷ್ಠೆಗೆ ಒಂದೇ ದಿನ ಬಾಕಿ – ಝಗಮಗಿಸಲು ಬೆಂಗ್ಳೂರಿನಲ್ಲಿ ಭರ್ಜರಿ ತಯಾರಿ

    ಸಂಚಾರಕ್ಕೆ ಅಡ್ಡಿ, ಕಾನೂನು ಸುವ್ಯವಸ್ಥೆ ಧಕ್ಕೆ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ಅನುಮತಿ ರದ್ದು ಮಾಡಿದ್ದೇವೆ ಎಂದು ನಗರ ಪೊಲೀಸ್ ಉಪ ಆಯುಕ್ತರು ತಿಳಿಸಿದ್ದಾರೆ. ಈ ಬಗ್ಗೆ ಲಕ್ಷದೀಪೋತ್ಸವ ಆಯೋಜಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇದನ್ನೂ ಓದಿ: ಎಲ್ಲೆಲ್ಲೂ ರಾಮಜಪ, ಜೈಶ್ರೀರಾಮ್ ಉದ್ಘೋಷ – ಇಟ್ಟಿಗೆಯಲ್ಲೇ ಸಾಕ್ಷಾತ್ ಶ್ರೀರಾಮನ ಕಂಡ ಕುಟುಂಬ!