Tag: ಅಯೋಧ್ಯೆ ತೀರ್ಪು

  • ಅಯೋಧ್ಯೆ ತೀರ್ಪು – ಸೋಷಿಯಲ್ ಮೀಡಿಯಾಗಳಲ್ಲಿ ಪಾಲಿಸಲೇಬೇಕಾದ 9 ಸೂಚನೆಗಳು

    ಅಯೋಧ್ಯೆ ತೀರ್ಪು – ಸೋಷಿಯಲ್ ಮೀಡಿಯಾಗಳಲ್ಲಿ ಪಾಲಿಸಲೇಬೇಕಾದ 9 ಸೂಚನೆಗಳು

    ಬೆಂಗಳೂರು: ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಪೊಲೀಸರು ಕೆಲವೊಂದು ಕಠಿಣ ಎಚ್ಚರಿಕೆ ನೀಡಿದ್ದಾರೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು-ಸುದ್ದಿ ಹರಡದಂತೆ ಸೂಚನೆ ನೀಡಿದ್ದಾರೆ.

    ಪರ-ವಿರೋಧ ತೀರ್ಪು ಬಂದರೆ ವಿಜಯೋತ್ಸವ ಆಚರಿಸುವುದಾಗಲೀ ಅಥವಾ ಘೋಷಣೆ ಕೂಗುವುದನ್ನಾಗಲಿ ಮಾಡದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ:ಅಯೋಧ್ಯೆಯಲ್ಲಿ ಸರ್ಪಗಾವಲು – ಇಂಟರ್‌ನೆಟ್ ಸ್ಥಗಿತ, 8 ತಾತ್ಕಾಲಿಕ ಜೈಲು ಸ್ಥಾಪನೆ

    ಸಾರ್ವಜನಿಕರಿಗೆ ಸೂಚನೆಗಳು
    – ಫೇಸ್‍ಬುಕ್, ಇನ್‍ಸ್ಟಾಗ್ರಾಮ್, ವಾಟ್ಸಾಪ್, ಟ್ವಿಟ್ಟರ್ ಹಾಗೂ ಇನ್ನಿತರೆ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಸಂದೇಶಗಳನ್ನು, ಪೋಸ್ಟ್‌ಗಳನ್ನು, ಕಮೆಂಟ್‍ಗಳನ್ನು ಹಾಕಬೇಡಿ.

    – ಸಾಮಾಜಿಕ ಜಾಲತಾಣಗಳಿಗೆ ಸಂಬಂಧಿಸಿದಂತೆ ಕಟ್ಟು ನಿಟ್ಟಿನಿಂದ ನಿಯಮಗಳು ಅನ್ವಯವಾಗಲಿದ್ದು, ಫೇಸ್‍ಬುಕ್, ಇನ್‍ಸ್ಟಾಗ್ರಾಮ್, ವಾಟ್ಸಾಪ್, ಟ್ವಿಟ್ಟರ್ ಹಾಗೂ ಇನ್ನಿತರೆ ಜಾಲತಾಣಗಳ ಮೇಲೆ ಸೂಕ್ತ ನಿಗಾವಹಿಸಲಾಗಿದೆ.  ಇದನ್ನೂ ಓದಿ:ರಾಜ್ಯಾದ್ಯಂತ ಕಟ್ಟೆಚ್ಚರ – ಬಸ್ಸು ಆಟೋ, ಟ್ಯಾಕ್ಸಿ, ಮೆಟ್ರೋ ಯಥಾಸ್ಥಿತಿ

    – ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ತಪ್ಪು ಸಂದೇಶಗಳನ್ನು ಯಾರಿಗೂ ರವಾನಿಸಬೇಡಿ, ಈ ಬಗ್ಗೆ ಮಕ್ಕಳು, ಸಹೋದರ, ಸಹೋದರಿಯರು, ಅಕ್ಕಪಕ್ಕದವರು ಹಾಗೂ ಸಂಬಂಧಿಕರಿಗೆ ಈ ಮಾಹಿತಿಯನ್ನು ತಿಳಿಸಿ.

    – ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಧರ್ಮಕ್ಕೆ ಸಂಬಂಧಿಸಿದಂತೆ ಆಕ್ಷೇಪಾರ್ಹ ಪೋಸ್ಟ್‌ ಅಥವಾ ವೀಡಿಯೋ ಸಂದೇಶಗಳನ್ನು ಪೋಸ್ಟ್‌ ಮಾಡಬೇಡಿ. ಇದನ್ನೂ ಓದಿ:ಒಂದೂವರೆ ಶತಮಾನದ ಅಯೋಧ್ಯೆ ವ್ಯಾಜ್ಯ ಇಂದು ಇತ್ಯರ್ಥ – ಯಾರ ವಾದ ಏನು? ಯಾವ ವರ್ಷ ಏನಾಯ್ತು?

    – ಯಾವುದೇ ರಾಜಕೀಯ ಹಾಗೂ ಧಾರ್ಮಿಕ ವಿಷಯದ ಬಗ್ಗೆ ನಿಂದನೀಯ ಸಂದೇಶಗಳನ್ನು ಕಳುಹಿಸುವುದು, ರವಾನಿಸುವುದು ಅಪರಾಧವಾಗಿದ್ದು ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ. ಸುದ್ದಿಯ ಮೂಲವನ್ನು ಪರಿಶೀಲಿಸದೇ ಅದನ್ನು ಇತರರಿಗೆ ಕಳುಹಿಸಲು ಹೋಗಬೇಡಿ.

    – ರಾಮ ಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ವಿಚಾರವು ದೇಶದ ಅತೀ ಗಂಭೀರ ವಿಚಾರವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಗ್ರೂಪ್ ಸದಸ್ಯರುಗಳು ಗಂಭೀರವಾಗಿ ಯೋಚಿಸಿ, ಕಾನೂನು ಸುವ್ಯವಸ್ಥೆಗೆ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆಯನ್ನುಂಟು ಮಾಡುವಂತಹ ಸಂದೇಶಗಳನ್ನು ಹಾಕಬೇಡಿ. ಇದನ್ನೂ ಓದಿ:ಅಯೋಧ್ಯೆ ತೀರ್ಪು ಏನೇ ಬಂದ್ರೂ ಶಾಂತಿಯುತವಾಗಿ ಸ್ವಾಗತಿಸ್ತೀವಿ: ರೋಶನ್ ಬೇಗ್

    – ಸಾಮಾಜಿಕ ಜಾಲತಾಣಗಳಲ್ಲಿ ಬಂದಂತಹ ಪ್ರಚೋದನಾತ್ಮಕ ಸಂದೇಶಗಳನ್ನು ಬೇರೆ ಗ್ರೂಪ್‍ಗಳಿಗೆ ಮರು ಕಳುಹಿಸುವುದು (Forward) ಕಂಡುಬಂದಲ್ಲಿ, ಸಂದೇಶವನ್ನು ಕಳುಹಿಸಿದ ವ್ಯಕ್ತಿ ಮತ್ತು ಗ್ರೂಪ್ ಅಡ್ಮಿನ್‍ಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುವುದು.

    – ಈ ವಿಚಾರವು ದೇಶದ ಸಾರ್ವಭೌಮತ್ವ ಹಾಗೂ ಸೌಹಾರ್ದತೆಗೆ ನೇರವಾಗಿ ಪರಿಣಾಮ ಬೀರುವಂತಹ ವಿಚಾರವಾದ್ದರಿಂದ ಯಾವುದೇ ತಪ್ಪು ಸಂದೇಶವನ್ನು ರವಾನಿಸಬೇಡಿ.

    – ನ್ಯಾಯಾಲಯದ ತೀರ್ಪನ್ನು ನಿಂದಿಸಬೇಡಿ. ತೀರ್ಪಿನ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿ ಅಭಿಪ್ರಾಯವನ್ನು ಎಲ್ಲೂ ಹಂಚಿಕೊಳ್ಳಬೇಡಿ.

    ತಪ್ಪದೇ ಈ ಮೇಲ್ಕಂಡ ವಿಚಾರವನ್ನು ಎಲ್ಲರಿಗೂ ತಿಳಿಸಿ, ವಿಷಯದ ಸಂಬಂಧ ನಿಯಮಗಳ ಬಗ್ಗೆ ಗಮನಹರಿಸಿ ಹಾಗೂ ಗುಂಪುಗಳು ಸದಾ ಜಾಗರೂಕರಾಗಿ ಇರಿ. ಮಾದರಿ ಸಮಾಜಕ್ಕೆ ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಿ ಎಂದು ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತರು ಮನವಿ ಮಾಡಿಕೊಂಡಿದ್ದಾರೆ.

  • ರಾಜ್ಯಾದ್ಯಂತ ಕಟ್ಟೆಚ್ಚರ – ಬಸ್ಸು ಆಟೋ, ಟ್ಯಾಕ್ಸಿ, ಮೆಟ್ರೋ ಯಥಾಸ್ಥಿತಿ

    ರಾಜ್ಯಾದ್ಯಂತ ಕಟ್ಟೆಚ್ಚರ – ಬಸ್ಸು ಆಟೋ, ಟ್ಯಾಕ್ಸಿ, ಮೆಟ್ರೋ ಯಥಾಸ್ಥಿತಿ

    ಬೆಂಗಳೂರು: ಇಂದು ಬೆಳಗ್ಗೆ 10.30ಕ್ಕೆ ಸುಪ್ರೀಂಕೋರ್ಟ್ ಅಯೋಧ್ಯೆ ತೀರ್ಪು ಪ್ರಕಟಿಸಲಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಮುನ್ನೆಚ್ಚರಿಕೆಯಾಗಿ ಶಾಲಾ-ಕಾಲೇಜಿಗೆ ರಜೆ ಘೋಷಿಸಲಾಗಿದೆ. ಇಂದು ನಿಗದಿಯಾಗಿದ್ದ ಕೆಲವೊಂದು ವಿವಿಗಳ ಪರೀಕ್ಷೆಗಳನ್ನು ಮುಂದೂಡಲಾಗಿದೆ.

    ರಾಜ್ಯಾದ್ಯಂತ ಬಸ್ ಸಂಚಾರ ಯಥಾಸ್ಥಿತಿಯಲ್ಲಿದೆ. ಬೆಳಗ್ಗೆಯಿಂದಲೇ ಬಸ್‍ಗಳ ಓಡಾಟ ಮಾಮೂಲಿನಂತೆ ಇದೆ. ಪರಿಸ್ಥಿತಿಯನ್ನು ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

    ಬಿಎಂಟಿಸಿ ಬಸ್‍ಗಳೂ ಸಂಚರಿಸುತ್ತಿವೆ. ಮೆಟ್ರೋ ಸಂಚಾರ ಕೂಡ ಮಾಮೂಲಿನಂತೆ ಇದೆ. ಆಟೋ, ಟ್ಯಾಕ್ಸಿಗಳು ಓಡಾಡುತ್ತಿವೆ. ಯಾವುದೇ ಆತಂಕವಿಲ್ಲದೆ ನಿಶ್ಚಿಂತೆಯಿಂದ ಓಡಾಡಬಹುದು.

    ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಬೆಂಗಳೂರಿನ ಸೂಕ್ಷ್ಮ ಪ್ರದೇಶಗಳಲ್ಲಿ ಭಾರೀ ಬಿಗಿಭದ್ರತೆ ಮಾಡಲಾಗಿದೆ. ಶಿವಾಜಿನಗರ, ಕೆಜಿ ಹಳ್ಳಿ, ಡಿಜಿ ಹಳ್ಳಿ, ಟ್ಯಾನರಿ ರಸ್ತೆ, ಕೆ.ಆರ್ ಮಾರ್ಕೆಟ್, ಗೋರಿಪಾಳ್ಯದಲ್ಲಿ ಹೈ ಅಲರ್ಟ್ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ನೇತೃತ್ವದಲ್ಲಿ ತುರ್ತು ಸಭೆ ನಡೆಸಿ, ಕಟ್ಟೆಚ್ಚರಕ್ಕೆ ಆದೇಶ ನೀಡಿದ್ದಾರೆ.

    ಹೋಂಗಾರ್ಡ್‍ಗಳೂ ಸೇರಿದಂತೆ ಸುಮಾರು 10,000ಕ್ಕೂ ಹೆಚ್ಚಿನ ಮಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಬೆಳಗ್ಗೆ 7 ಗಂಟೆಯಿಂದಲೇ ನಿಷೇಧಾಜ್ಞೆ ಜಾರಿಯಾಗಿದ್ದು, ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸೋಷಿಯಲ್ ಮೀಡಿಯಾ ಮೇಲೆ ಕಣ್ಗಾವಲು ಇರಿಸಲಾಗಿದ್ದು, ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿದೆ.

    ಪ್ಯಾರಾ ಮಿಲಿಟರಿ ಪಡೆ, ಕೆಎಸ್‍ಆರ್ ಪಿ ತುಕಡಿ, ಸಿಎಆರ್ ತುಕಡಿ ಸೇರಿ 6 ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದೆ. ಮೆರವಣಿಗೆ, ಘೋಷಣೆ ಕೂಗುವುದಕ್ಕೆ ನಿರ್ಬಂಧ ಹೇರಲಾಗಿದೆ. ತ್ರಿಬಲ್ ರೈಡ್ ಮಾಡುವವರ ವಿರುದ್ಧ ಕ್ರಮ ಹಾಗೂ ಕ್ರಿಮಿನಲ್ ಗೂಂಡಾಗಳ ಮೇಲೆ ಹದ್ದಿನ ಕಣ್ಣು ಇರಿಸಲಾಗಿದೆ.

    ಬೆಂಗಳೂರಷ್ಟೇ ಅಷ್ಟೇ ಅಲ್ಲ ರಾಜ್ಯಾದ್ಯಂತಲೂ ಹೈ ಅಲರ್ಟ್ ಘೋಷಿಸಲಾಗಿದ್ದು, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರನ್ನು ಅತಿಸೂಕ್ಷ್ಮ ಜಿಲ್ಲೆಗಳೆಂದು ಘೋಷಿಸಲಾಗಿದ್ದು, ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಾಂಸ್ಕೃತಿಕ ಕ ನಗರಿ ಮೈಸೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಚಿತ್ರದುರ್ಗ, ಎಲ್ಲೆಲ್ಲೂ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಹೆಜ್ಜೆಹೆಜ್ಜೆಗೂ ಖಾಕಿ ಕಣ್ಗಾವಲು ಇರಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

  • ಅಯೋಧ್ಯೆಯಲ್ಲಿ ಸರ್ಪಗಾವಲು – ಇಂಟರ್‌ನೆಟ್ ಸ್ಥಗಿತ, 8 ತಾತ್ಕಾಲಿಕ ಜೈಲು ಸ್ಥಾಪನೆ

    ಅಯೋಧ್ಯೆಯಲ್ಲಿ ಸರ್ಪಗಾವಲು – ಇಂಟರ್‌ನೆಟ್ ಸ್ಥಗಿತ, 8 ತಾತ್ಕಾಲಿಕ ಜೈಲು ಸ್ಥಾಪನೆ

    – ಉತ್ತರಪ್ರದೇಶಲ್ಲಿ ಸೋಮವಾರದವರೆಗೆ ಶಾಲಾ ಕಾಲೇಜುಗಳಿಗೆ ರಜೆ
    – 4 ಸಾವಿರ ಯೋಧರ ಅರೆಸೇನಾ ಪಡೆ ನಿಯೋಜನೆ

    ಲಕ್ನೋ: ಇಂದು ಅಯೋಧ್ಯೆ ಪ್ರಕರಣದ ಸಂಬಂಧ ಸುಪ್ರೀಂಕೋರ್ಟಿನಲ್ಲಿ ವಿಚಾರಣೆ ಮುಗಿದು ತೀರ್ಪು ನಿಗದಿ ಆದ ಬಳಿಕ ಅಯೋಧ್ಯೆಯಲ್ಲಿ ಕಂಡುಕೇಳರಿಯದ ಕಟ್ಟೆಚ್ಚರ ವಹಿಸಲಾಗಿದೆ. ಉತ್ತರಪ್ರದೇಶದ್ಯಾಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, 4 ಸಾವಿರ ಅರೆಸೇನಾ ಪಡೆ ಯೋಧರನ್ನ ನಿಯೋಜಿಸಲಾಗಿದೆ.

    ತೀರ್ಪು ಹೊರಬರುವ ಮುನ್ನವೇ ಶುಕ್ರವಾರ ಅಚ್ಚರಿಯ ರೀತಿಯಲ್ಲಿ ಸಿಜೆಐ ರಂಜನ್ ಗೋಗೋಯ್, ನ್ಯಾ. ಎಸ್ ಎ ಬೋಬ್ಡೆ, ನ್ಯಾ. ಅಶೋಕ್ ಭೂಷಣ್ ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಇಲಾಖೆ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದು, ಕೈಗೊಂಡಿರುವ ಮುಂಜಾಗ್ರತ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.

    ಅಯೋಧ್ಯೆಯಲ್ಲಿ ಸರ್ಪಗಾವಲು:

    ಅಯೋಧ್ಯೆಯಲ್ಲಿ ಬಹುಹಂತಗಳ ರಕ್ಷಣಾ ವ್ಯವಸ್ಥೆ ಮಾಡಲಾಗಿದ್ದು, ಪರಿಸ್ಥಿತಿ ಅವಲೋಕಿಸಲು ಡ್ರೋಣ್‍ಗಳ ಬಳಕೆ ಕೂಡ ಮಾಡಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಭಯೋತ್ಪಾದಕ ನಿಗ್ರಹ, ಬಾಂಬ್ ನಿಷ್ಕ್ರೀಯ ದಳ, ಕ್ಷಿಪ್ರ ಕಾರ್ಯಪಡೆಯನ್ನು ನಗರದಲ್ಲಿ ನಿಯೋಜಿಸಲಾಗಿದೆ. ತುರ್ತು ಸ್ಥಿತಿಯಲ್ಲಿ ಬಳಿಸಲು 2 ಹೆಲಿಕಾಪ್ಟರ್ ಗಳ ವ್ಯವಸ್ಥೆ ಕೂಡ ಮಾಡಿಕೊಳ್ಳಲಾಗಿದೆ. ಅಯೋಧ್ಯೆಯಲ್ಲಿ ಹೆಜ್ಜೆ ಹೆಜ್ಜೆಗೂ ಸೇನಾಪಡೆಗಳ ಕಾರ್ಯನಿರ್ವಹಿಸುತ್ತಿದೆ.

    ಅಷ್ಟೇ ಅಲ್ಲದೆ ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಹಾಗೆಯೇ ಪ್ರಚೋದನಕಾರಿ ಪೋಸ್ಟ್, ಸಂದೇಶ ಹರಬಾರದೆಂದು ಸಾಮಾಜಿಕ ಜಾಲತಾಣಗಳ ಮೇಲೂ ತೀವ್ರ ನಿಗಾವಹಿಸಲಾಗಿದೆ. ಹೊರ ರಾಜ್ಯಗಳಿಂದ ಬರುವವರ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಗಲಭೆಗಳಾದರೆ ಬಂಧಿತರನ್ನು ಇಡಲು ಉತ್ತರಪ್ರದೇಶದ ಅಂಬೇಡ್ಕರ್ ನಗರದಲ್ಲಿ 8 ತಾತ್ಕಾಲಿಕ ಜೈಲುಗಳ ನಿರ್ಮಾಣವಾಗಿದೆ.

    ಸಂಭಾವ್ಯ ಪರಿಸ್ಥಿತಿ ಎದುರಿಸಲು ಉತ್ತರ ಪ್ರದೇಶದ 75 ಜಿಲ್ಲೆಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ನ. 30ರವರೆಗೆ ಅಧಿಕಾರಿಗಳ ರಜೆ ರದ್ದುಗೊಳಿಸಲಾಗಿದೆ. ಸೋಮವಾರದವರೆಗೆ ಉತ್ತರ ಪ್ರದೇಶದ ಶಾಲಾ-ಕಾಲೇಜಿಗೆ ರಜೆ ಘೋಷಣೆಯಾಗಿದ್ದು, ಧಾರ್ಮಿಕ ಸ್ಥಳದಲ್ಲಿರೋ ರೈಲ್ವೆ ನಿಲ್ದಾಣಗಳಲ್ಲಿ ಬಿಗಿಭದ್ರತೆ ಒದಗಿಸಲಾಗಿದೆ.

    ಕರ್ನಾಟಕದಲ್ಲೂ ಕಟ್ಟೆಚ್ಚರ:
    ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು, ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇಂದು ನಡೆಯಬೇಕಿದ್ದ ಎಲ್ಲಾ ವಿವಿಗಳ ಪರೀಕ್ಷೆಗಳು ಮುಂದೂಡಲಾಗಿದೆ. ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿದೆ. ಆದರೆ ಸರ್ಕಾರಿ ಬಸ್ ಮತ್ತು ಖಾಸಗಿ ಬಸ್‍ಗಳು, ಕ್ಯಾಬ್, ಟ್ಯಾಕ್ಸಿ, ಆಟೋಗಳ ಓಡಾಟದಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ.

  • ರಾಮಮಂದಿರ ಸುಗ್ರೀವಾಜ್ಞೆಯ ಪ್ರಧಾನಿಗಳ ಹೇಳಿಕೆಗೆ ನಮ್ಮ ಸ್ವಾಗತವಿದೆ: ಪೇಜಾವರ ಶ್ರೀ

    ರಾಮಮಂದಿರ ಸುಗ್ರೀವಾಜ್ಞೆಯ ಪ್ರಧಾನಿಗಳ ಹೇಳಿಕೆಗೆ ನಮ್ಮ ಸ್ವಾಗತವಿದೆ: ಪೇಜಾವರ ಶ್ರೀ

    ಬೆಂಗಳೂರು: ಅಯೋಧ್ಯೆ ರಾಮಮಂದಿರ ನಿರ್ಮಾಣದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಹೇಳಿಕೆಗೆ ನಮ್ಮ ಸ್ವಾಗತವಿದೆ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.

    ನಗರದಲ್ಲಿ ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು, ದೇಶದಲ್ಲಿ ಕಾನೂನು ಮೀರಿ ಯಾವುದನ್ನು ಮಾಡಬಾರದು. ಈ ಬಗ್ಗೆ ಮೋದಿ ಅವರ ಹೇಳಿಕೆಯ ಬಗ್ಗೆ ನಮ್ಮ ಸ್ವಾಗತ ಇದೆ. ಆದರೆ ಮಂದಿರದ ನಿರ್ಮಾಣದ ಬಗ್ಗೆ ಕಾನೂನು ತಜ್ಞರು ಸಲಹೆ ಪಡೆದು ಸುಗ್ರೀವಾಜ್ಞೆ ಹೊರಡಿಸಬಹುದು. ಈ ಕುರಿತು ನಮ್ಮ ಹಂತದಲ್ಲಿ ಮತ್ತೆ ಕಾನೂನು ತಜ್ಞರೊಂದಿಗೆ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಕಾನೂನನ್ನೂ ಮೀರಿ ಯಾವುದೂ ಮಾಡಬಾರದು ಎಂಬ ಕಾರಣಕ್ಕೆ ಪ್ರಧಾನಿಗಳು ಈ ರೀತಿ ಹೇಳಿರಬಹುದು ಎಂದರು.

    ಮೋದಿ ಅವರು ಸಂವಿಧಾನದ ಒಳಗೆ ನಿರ್ಧಾರ ಮಾಡುವುದು ಎಂದು ಹೇಳಿದ್ದಾರೆ. ಆದ್ದರಿಂದ ನಾನು ರಾಮಮಂದಿರ ಬಗ್ಗೆ ಕಾನೂನು ತಜ್ಞರು ಹಾಗೂ ಸಂಘಟನೆಗಳೊಂದಿಗೆ ಬಗ್ಗೆ ಚರ್ಚೆ ನಡೆಸುತ್ತೇನೆ. ಸುಗ್ರೀವಾಜ್ಞೆ ಹೊರಡಿಸುವುದು ಸಂವಿಧಾನ ವಿರೋಧವಲ್ಲ ಎಂಬ ಅಭಿಪ್ರಾಯ ಇದೆ. ಈ ತಿಂಗಳ ಕೊನೆಗೆ ಕುಂಭಮೇಳ ನಡೆಯಲಿದ್ದು, ಇಲ್ಲಿ ಚರ್ಚೆ ನಡೆಸಿ ಅಂತಿಮ ನಿರ್ಧಾರ ತಿಳಿಸುತ್ತೇವೆ. ಈ ಬಳಿಕವೇ ನನ್ನ ಖಚಿತ ಅಭಿಪ್ರಾಯವೂ ತಿಳಿಸುತ್ತೇನೆ ಎಂದರು.

    ಮೋದಿ ಹೇಳಿದ್ದೇನು?
    ಸುಪ್ರೀಂ ಕೋರ್ಟ್ ಅಯೋಧ್ಯೆ ಕುರಿತು ತೀರ್ಪು ನೀಡಿದ ಬಳಿಕ ಸರ್ಕಾರ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ನ್ಯಾಯಾಲಯದಲ್ಲಿ ರಾಮಮಂದಿರಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವಿಳಂಬವಾಗಲು ಕಾಂಗ್ರೆಸ್ ವಕೀಲರು ಕಾರಣ. ರಾಮಮಂದಿರ ಬಿಜೆಪಿ ಭಾವಾತ್ಮಕ ವಿಚಾರವಾಗಿದ್ದು ಅದನ್ನು ನಾವು ನಿರ್ಲಕ್ಷ್ಯ ವಹಿಸಿಲ್ಲ. ರಾಮಮಂದಿರವನ್ನು ಸಂವಿಧಾನದ ವ್ಯಾಪ್ತಿಯಲ್ಲಿ ಇತ್ಯರ್ಥ ಪಡಿಸುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ತಿಳಿಸಿದೆ. ಹೀಗಾಗಿ ನಾವು ನ್ಯಾಯಾಂಗದಲ್ಲಿ ನಂಬಿಕೆ ಇಟ್ಟಿದ್ದೇವೆ. ಸುಪ್ರೀಂ ಕೋರ್ಟ್ ತೀರ್ಪಿನ ನಂತರವಷ್ಟೇ ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆಯನ್ನು ಹೊರಡಿಸುವ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಪ್ರಧಾನಿ ಮೋದಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv