Tag: ಅಯೋಧ್ಯೆ ಟೆಂಟ್‌ ಸಿಟಿ

  • ಐಷಾರಾಮಿಯಷ್ಟೇ ದುಬಾರಿ ಅಯೋಧ್ಯಾ ಟೆಂಟ್‌ ಹೌಸ್ – ಒಂದು ದಿನಕ್ಕೆ ಎಷ್ಟು ಹಣ ಗೊತ್ತಾ?

    ಐಷಾರಾಮಿಯಷ್ಟೇ ದುಬಾರಿ ಅಯೋಧ್ಯಾ ಟೆಂಟ್‌ ಹೌಸ್ – ಒಂದು ದಿನಕ್ಕೆ ಎಷ್ಟು ಹಣ ಗೊತ್ತಾ?

    – ಅಯೋಧ್ಯಾ ಟೆಂಟ್ ಸಿಟಿಯಲ್ಲಿ ಏನೆಲ್ಲಾ ವಿಶೇಷತೆಗಳಿವೆ ನೀವೇ ನೋಡಿ…

    ಅಯೋಧ್ಯೆ: ಇದೇ ಜನವರಿ 22ರಂದು ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮಂದಿರ (Ayodhya Ram Mandir) ಉದ್ಘಾಟನೆ ನೇರವೇರಲಿದೆ. ಈ ಐತಿಹಾಸಿಕ ಕ್ಷಣವನ್ನ ಕಣ್ತುಂಬಿಕೊಳ್ಳಲು ಇಡೀ ದೇಶದ ಜನ ಕಾದುಕುಳಿತಿದ್ದಾರೆ. ಆದ್ರೆ ಕೇವಲ ಧಾರ್ಮಿಕ ಕ್ಷೇತ್ರವಾಗಿ ಉಳಿಯದೇ ಸುಂದರ ಪ್ರವಾಸಿ ತಾಣವಾಗಿಯೂ ಬದಲಾಗುತ್ತಿರುವ ಅಯೋಧ್ಯೆಯಲ್ಲಿ (Ayodhya) ಹಲವು ವಿಶೇಷತೆಗಳು ಕಂಡುಬರುತ್ತಿವೆ.

    ಶ್ರೀರಾಮ ಮಂದಿರ ಗರ್ಭಗುಡಿ ಉದ್ಘಾಟನೆಯಾಗುತ್ತಿದ್ದಂತೆ ದೇಶ-ವಿದೇಶಗಳಿಂದ ಹೆಚ್ಚಿನ ಪ್ರವಾಸಿಗರು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಮಮಂದಿರ ಸಮೀಪದಲ್ಲೇ ಖಾಸಗಿ ಸಂಸ್ಥೆಗಳು ಐಷಾರಾಮಿ ಟೆಂಟ್ ಹೌಸ್‌ಗಳನ್ನ ನಿರ್ಮಾಣ ಮಾಡಿವೆ. ರಾಮಮಂದಿರ ಹಿಂಭಾಗದಲ್ಲಿ 200 ಮೀಟರ್ ದೂರದಲ್ಲಿರುವ ಬ್ರಹ್ಮಕುಂಡ ಪ್ರದೇಶದಲ್ಲಿ 30 ಟೆಂಟ್‌ಹೌಸ್ ಒಳಗೊಂಡ `ಟೆಂಟ್ ಸಿಟಿ’ (Ayodhya Tent City)ಯನ್ನ ನಿರ್ಮಿಸಲಾಗಿದೆ. ಈ ಟೆಂಟ್‌ಹೌಸ್‌ನಲ್ಲಿ ಒಂದು ದಿನದ ಖರ್ಚುವೆಚ್ಚ ಹೇಗಿರಲಿದೆ? ಏನೆಲ್ಲಾ ವಿಶೇಷತೆಗಳನ್ನು ಕಾಣಬಹುದು? ಪ್ರವಾಸಿ ತಾಣ ವೀಕ್ಷಣೆಗೆ ಅತಿಥಿಗಳಿಗೆ ಹೇಗೆ ಅನುಕೂಲವಾಗುತ್ತದೆ? ಅನ್ನೋದನ್ನ ತಿಳಿಯಲು ಮುಂದೆ ಓದಿ..

    ಟೆಂಟ್ ಸಿಟಿ ಒಳಾಂಗಣ ಪ್ರವೇಶಿಸುತ್ತಿದ್ದಂತೆ ಮೊದಲು ಶ್ರೀರಾಮನ ಪಾದುಕೆಗಳನ್ನು ಪ್ರತಿಬಿಂಬಿಸುವ ಸ್ತಬ್ಧಚಿತ್ರಗಳನ್ನ ನಿರ್ಮಿಸಲಾಗಿದೆ. ಬರುವ ಅತಿಥಿಗಳಿಗೆ ದೈವತ್ವದ ಭಾವನೆ ಮೂಡಲಿ ಅನ್ನೋ ಪರಿಲ್ಪನೆಯಿಂದ ಈ ಪಾದುಕೆಗಳನ್ನ ನಿರ್ಮಿಸಲಾಗಿದೆ. ಇದರ ಪಕ್ಕದಲ್ಲೇ ರಿಸೆಪ್ಷನ್ ಕೌಂಟರ್ ಇದ್ದು, ಅಲ್ಲಿ ಹೋಟೆಲ್ ಬುಕ್ಕಿಂಗ್‌ಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನ ಪಡೆದುಕೊಳ್ಳಬಹುದು. ಅದರ ಮುಂಭಾಗದಲ್ಲಿ ಐಷಾರಾಮಿ ವಾತಾವರಣದಿಂದ ಕೂಡಿದ ಡೈನಿಂಗ್ ಹಾಲ್ ಇರಲಿದೆ. ಹೋಟೆಲ್‌ನಲ್ಲಿ ವಾಸ್ತವ್ಯ ಹೂಡುವ ಅತಿಥಿಗಳಿಗೆ ಇಲ್ಲಿಯೇ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿಯ ಉಪಾಹಾರಗಳ ವ್ಯವಸ್ಥೆ ಸಿಗಲಿದೆ. ಇದನ್ನೂ ಓದಿ: ಶ್ರೀರಾಮನ ಭಕ್ತರಿಗೆ ಮಾತ್ರ ಅಯೋಧ್ಯೆಗೆ ಆಹ್ವಾನ: ಉದ್ಧವ್ ಠಾಕ್ರೆಗೆ ಆಚಾರ್ಯ ಸತ್ಯೇಂದ್ರ ದಾಸ್ ತಿರುಗೇಟು

    ಐಷಾರಾಮಿ ಕೊಠಡಿಗಳ ವಿಶೇಷತೆ ಏನು?
    30 ಟೆಂಟ್‌ಹೌಸ್‌ಗಳನ್ನು ಹೊಂದಿರುವ ಟೆಂಟ್ ಸಿಟಿಯಲ್ಲಿ ವಿಶಾಲ ಗಾರ್ಡನ್ ವ್ಯವಸ್ಥೆಯಿದ್ದು, ಕಾಲ ಕಳೆಯಲು ಕುರ್ಚಿ ಹಾಗೂ ಟೇಬಲ್‌ಗಳ ವ್ಯವಸ್ಥೆಯಿದೆ. ಇನ್ನೂ 30 ಕೊಠಡಿಗಳು ಒಂದೇ ರೀತಿಯಿದ್ದು, ಬಟ್ಟೆ ಸಾಮಗ್ರಿಯಲ್ಲಿ ಇದನ್ನು ನಿರ್ಮಿಸಲಾಗಿದೆ. ಕೊಠಡಿ ಮುಂಭಾಗಲ್ಲಿ ಎರಡು ಕುರ್ಚಿಗಳು ಮತ್ತು ಎರಡು ಫೈಯರ್‌ಗ್ಯಾಸ್ ಇದೆ. ಇದನ್ನೂ ಓದಿ: ರಾಮಮಂದಿರಕ್ಕೆ ದೇಣಿಗೆ ಸಂಗ್ರಹ ಹೆಸರಿನಲ್ಲಿ ವಂಚನೆ – ಎಚ್ಚರಿಕೆಯಿಂದ ಇರುವಂತೆ ಭಕ್ತರಿಗೆ ಸಲಹೆ

    ಈ ಕೊಠಡಿಗೆ ಝಿಪ್ ರೂಪದಲ್ಲಿ ದ್ವಾರಗಳಿದ್ದು, ಕೊಠಡಿಯ ಒಳಾಂಗಣದಲ್ಲಿ ಸಖತ್ ಐಷಾರಾಮಿ ಸೌಲಭ್ಯಗಳಿವೆ. ಎರಡು ಹಾಸಿಗೆಯುಳ್ಳ ಮಂಚ, ಒಂದು ಸ್ಟಡಿ ಟೇಬಲ್, ಮೂರು ಕುರ್ಚಿ, ಎಸಿ, ಫ್ಯಾನ್, ಚಳಿಗಾಲಕ್ಕಾಗಿ ಹೀಟರ್ ಸೌಲಭ್ಯ, ವಿಶೇಷ ಬೆಡ್‌ಲೈಟ್‌ಗಳು, ಮತ್ತೊಂದು ಹೆಚ್ಚುವರಿ ಟೇಬಲ್ ಇದೆ. ಅಷ್ಟೇ ಅಲ್ಲದೇ ಬಟ್ಟೆಗಳನ್ನು ಇಡಲು ಬೀರು, ತಂಪು ಪಾನೀಯ ಅಥವಾ ನೀರಿನ ಬಾಟಲಿಗಳನ್ನಿಡಲು ಮಿನಿ ಫ್ರಿಡ್ಜ್, ದೊಡ್ಡ ಸ್ಕ್ರೀನ್ ವ್ಯವಸ್ಥೆಯ ಟಿವಿ, ಹೈಟೆಕ್ ಶೌಚಾಲಯದ ವ್ಯವಸ್ಥೆಯಿದೆ. ಒಟ್ಟಿನಲ್ಲಿ ಇಲ್ಲಿರುವ ಒಂದೊಂದು ಟೆಂಟ್‌ಹೌಸ್ ಫೈಸ್ಟಾರ್ ಹೋಟೆಲ್‌ಗೆ ಹೋದಷ್ಟೇ ಅನುಭವ ನೀಡುತ್ತವೆ.

    ಒಂದು ದಿನಕ್ಕೆ 11,000 ರೂ.:
    ಗುಜರಾತ್ ಮೂಲದ ಖಾಸಗಿ ಕಂಪನಿಯೊಂದು ಈ ಟೆಂಟ್ ಸಿಟಿಯನ್ನ ನಿರ್ವಹಣೆ ಮಾಡುತ್ತಿದೆ. ಸಿಬ್ಬಂದಿ ಪ್ರಕಾರ ಇಲ್ಲಿ ವಾಸ್ತವ್ಯ ಹೂಡಲು ಒಂದು ದಿನಕ್ಕೆ ಜಿಎಸ್‌ಟಿ ಸೇರಿ 11,000 ರೂ. ವೆಚ್ಚ ತಗುಲಲಿದೆ. ದೇಶ-ವಿದೇಶಗಳ ಪ್ರವಾಸಿಗರಿಗೆ ಐಷಾರಾಮಿ ಅನುಭವ ನೀಡಬೇಕು ಅನ್ನೋ ಕಾರಣಕ್ಕೆ ಇಷ್ಟೆಲ್ಲ ಐಷಾರಾಮಿ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: Ayodhya Ram Mandir – ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ಪ್ರತಿಮೆ ಆಯ್ಕೆ?