Tag: ಅಯುತಾಯ

  • 3,500 ಕಿ.ಮೀ ದೂರದ ಥೈಲ್ಯಾಂಡ್‌ನಿಂದ ಅಯೋಧ್ಯೆ ರಾಮಮಂದಿರಕ್ಕೆ ಬರಲಿದೆ ವಿಶೇಷ ಮಣ್ಣು

    3,500 ಕಿ.ಮೀ ದೂರದ ಥೈಲ್ಯಾಂಡ್‌ನಿಂದ ಅಯೋಧ್ಯೆ ರಾಮಮಂದಿರಕ್ಕೆ ಬರಲಿದೆ ವಿಶೇಷ ಮಣ್ಣು

    ನವದೆಹಲಿ: ಅಯೋಧ್ಯೆಯ ರಾಮಮಂದಿರ (Ayodhya Ram Mandir) ಉದ್ಘಾಟನೆಗೆ ಇನ್ನೊಂದು ತಿಂಗಳಷ್ಟೇ ಬಾಕಿಯಿದೆ. ಈ ಐತಿಹಾಸಿಕ ದಿನಕ್ಕಾಗಿ ಕೇವಲ ಭಾರತವಷ್ಟೇ ಅಲ್ಲ ವಿದೇಶಗಳೂ ಕಾತುರದಿಂದ ಕಾಯುತ್ತಿದೆ. ಇದೀಗ ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕಾಗಿ ಥೈಲ್ಯಾಂಡ್ (Thailand) ವಿಶೇಷ ಮಣ್ಣನ್ನು (Soil) ಕಳುಹಿಸುತ್ತಿದೆ.

    ಹೌದು, ಅಯೋಧ್ಯೆಯಿಂದ 3,500 ಕಿ.ಮೀ ದೂರದಲ್ಲಿರುವ ಥೈಲ್ಯಾಂಡ್‌ನ ಅಯುತಾಯ (Ayutthaya) ನಗರದಿಂದ ವಿಶೇಷ ಮಣ್ಣನ್ನು ತರಲಾಗುತ್ತಿದೆ. 2024ರ ಜನವರಿಯಲ್ಲಿ ಉದ್ಘಾಟನೆಗೊಳ್ಳುತ್ತಿರುವ ರಾಮ ಮಂದಿರಕ್ಕೆ ಥೈಲ್ಯಾಂಡ್ ಮಣ್ಣನ್ನು ಕಳುಹಿಸುತ್ತಿದೆ.

    ಭಾರತ-ಥೈಲ್ಯಾಂಡ್ ಸಂಬಂಧ:
    ಥೈಲ್ಯಾಂಡ್‌ನ ಸಿಯಾಮ್ ಸಾಮ್ರಾಜ್ಯದಲ್ಲಿರುವ ಅಯುತಾಯಾವನ್ನು 13ನೇ ಶತಮಾನದಲ್ಲಿ ಸ್ಥಾಪಿಸಲಾಗಿದೆ ಎಂದು ನಂಬಲಾಗಿದೆ. ಸಿಯಾಮ್ ಸಾಮ್ರಾಜ್ಯದ ರಾಜಧಾನಿ ಮತ್ತು ಆರ್ಥಿಕ ಕೇಂದ್ರವೂ ಆಗಿತ್ತು. ಆದರೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಥೈಲ್ಯಾಂಡ್‌ನಿಂದ ಈ ರೀತಿ ಕಳುಹಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ರಾಮ ಮಂದಿರಕ್ಕಾಗಿ ಥೈಲ್ಯಾಂಡ್‌ನಿಂದ ವಿಶೇಷ ನೀರನ್ನು ಕಳುಹಿಸಲಾಗಿತ್ತು. ಈ ಕ್ರಿಯೆಯು ಥೈಲ್ಯಾಂಡ್ ಮತ್ತು ಭಾರತದ ನಡುವಿನ ಅನನ್ಯ ಸಾಂಸ್ಕೃತಿಕ ಸಂಬಂಧಗಳಿಂದ ಹುಟ್ಟಿಕೊಂಡಿದೆ. ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಆಳವಾಗಲಿದೆ. ವಿಶ್ವ ಹಿಂದೂ ಪರಿಷತ್ (VHP) ಕೈಗೊಂಡ ಉಪಕ್ರಮ ಮತ್ತು ವಿಎಚ್‌ಪಿಯ ಥೈಲ್ಯಾಂಡ್ ಅಧ್ಯಾಯದ ಅಧ್ಯಕ್ಷ ಸುಶೀಲ್‌ಕುಮಾರ್ ಸರಾಫ್ ಅವರ ಸಹಾಯದಿಂದ ಇದು ಸಾಧ್ಯವಾಗಿದೆ.

    ಭಾರತ ಮತ್ತು ಥೈಲ್ಯಾಂಡ್ ಬಲವಾದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂಬಂಧಗಳನ್ನು ಹೊಂದಿವೆ. ಥೈಲ್ಯಾಂಡ್‌ನ ಹಲವಾರು ರಾಜರು ರಾಮನ ವಂಶಸ್ಥರ ಭಾಗವಾಗಿದ್ದಾರೆ. ಇಲ್ಲಿರುವ ಪ್ರತಿಯೊಬ್ಬ ರಾಜನಿಗೂ ಅವರ ಹೆಸರಿನಲ್ಲಿ ರಾಮನ ಬಿರುದು ಇದೆ, ಇದು ಇಲ್ಲಿನ ಹಳೆಯ ಸಂಪ್ರದಾಯವಾಗಿದೆ ಎಂದು ವಿಶ್ವ ಹಿಂದೂ ಫೌಂಡೇಶನ್ (WHF) ಸ್ಥಾಪಕ ಮತ್ತು ಜಾಗತಿಕ ಅಧ್ಯಕ್ಷರಾದ ಸ್ವಾಮಿ ವಿಜ್ಞಾನಾನಂದ ತಿಳಿಸಿದ್ದಾರೆ.

    ಥಾಯ್ಲೆಂಡ್‌ನ ರಾಜಧಾನಿ ಬ್ಯಾಂಕಾಕ್ ಶ್ರೀಮಂತ ಹಿಂದೂ ಸಾಂಸ್ಕೃತಿಕ ಪರಂಪರೆಗೆ ನೆಲೆಯಾಗಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಗೆ ಸಾಕ್ಷಿಯಾಗುವ 51 ದೇಶಗಳನ್ನು ನಾವು ಗುರುತಿಸಿದ್ದೇವೆ. ಸಮಾರಂಭವನ್ನು ಬ್ಯಾಂಕಾಕ್‌ನಲ್ಲಿ ನೇರಪ್ರಸಾರ ಮಾಡಲಾಗುವುದು ಮತ್ತು ಪ್ರಪಂಚದಾದ್ಯಂತದ ಹಿಂದೂಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕೀರ್ತನೆ, ಭಜನೆ, ಪೂಜೆ ಮತ್ತು ಪಾರಾಯಣದಲ್ಲಿ ತೊಡಗುತ್ತಾರೆ ಎಂದು ಸ್ವಾಮಿ ವಿಜ್ಞಾನಾನಂದ ಹೇಳಿದರು. ಇದನ್ನೂ ಓದಿ: ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು – ಕೇಂದ್ರದ ನಿರ್ಧಾರವನ್ನು ಎತ್ತಿ ಹಿಡಿದ ಸುಪ್ರೀಂ

    ಅಯೋಧ್ಯೆಯಿಂದ ಪ್ರಸಾದವನ್ನು ಆರ್ಡರ್ ಮಾಡಿದ್ದೇವೆ. ಇಲ್ಲಿ ಅಯೋಧ್ಯೆ ದೇಗುಲದ ಪ್ರತಿಕೃತಿಯನ್ನು ನಿರ್ಮಿಸಲಾಗಿದೆ. ಅಯೋಧ್ಯೆಯಿಂದ ರಾಮ ಲಲ್ಲಾ ಜನ್ಮಸ್ಥಳದ ಚಿತ್ರವನ್ನು ಸಹ ತಂದಿದ್ದೇವೆ. ಚಿತ್ರದ ಪ್ರತಿಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಅವರು ಹೇಳಿದರು.

    ಅಯುತಾಯ

    ರಾಮ – ಅಯುತಾಯಕ್ಕೆ ಸಂಪರ್ಕ ಏನು?
    ಅಯುತಾಯ ಥಾಯ್ಲೆಂಡ್‌ನ ಪ್ರಸಿದ್ಧ ನಗರ. ಅಲ್ಲಿನ ರಾಜರು ‘ರಾಮತಿಬೋಧಿ’ (ಲಾರ್ಡ್ ರಾಮ) ಎಂಬ ಬಿರುದನ್ನು ಹೊಂದಿದ್ದರು. ರಾಮಾಯಣದಲ್ಲಿ ಅಯೋಧ್ಯೆಯನ್ನು ಭಗವಾನ್ ರಾಮನ ರಾಜಧಾನಿ ಎಂದು ಉಲ್ಲೇಖಿಸಿರುವ ಸಂದರ್ಭಕ್ಕೆ ಅಯುತಾಯವನ್ನು ಜೋಡಿಸಲಾಗಿದೆ. ಕ್ರಿ.ಶ. 1351 ರಿಂದ ಸಯಾಮಿ ಆಡಳಿತಗಾರರ ರಾಜಧಾನಿಯಾಗಿದ್ದ ಅಯುತಾಯವನ್ನು 1767 ರಲ್ಲಿ ಬರ್ಮಾ ಪಡೆಗಳು ಲೂಟಿ ಮಾಡಿ ಸಂಪೂರ್ಣವಾಗಿ ನಾಶಪಡಿಸಿದವು. ರಾಮಕೀನ್ ಎಂದು ಕರೆಯಲ್ಪಡುವ ಥಾಯ್ ಧಾರ್ಮಿಕ ಪಠ್ಯ ಥಾಯ್ ರಾಮಾಯಣಕ್ಕೆ ಸಮಾನವಾದ ಸ್ಥಾನಮಾನವನ್ನು ಹೊಂದಿದೆ. ‘300 ರಾಮಾಯಣ’ ಪುಸ್ತಕ ಬರೆದ ರಾಮಾನುಜನ್ ಅವರು ರಾಮಕೀನಿತ್ ಹಾಗೂ ವಾಲ್ಮೀಕಿಯವರ ರಾಮಾಯಣವನ್ನು ಹೋಲಿಸಿದ್ದಾರೆ. ಇದನ್ನು 18ನೇ ಶತಮಾನದಲ್ಲಿ ಕಿಂಗ್ ರಾಮ 1 ಹೊಸದಾಗಿ ರಚಿಸಿದ್ದಾನೆ ಎಂದು ನಂಬಲಾಗಿದೆ. ಈ ಪುಸ್ತಕದಲ್ಲಿ ಮುಖ್ಯ ಖಳನಾಯಕ ತೋತ್ಸಕನ್ ಹಿಂದೂ ಗ್ರಂಥದ ಲಂಕಾ ರಾಜ ರಾವಣ ಎನ್ನಲಾಗಿದೆ. ರಾಮನ ಆದರ್ಶವನ್ನು ಈ ಪುಸ್ತಕದ ನಾಯಕನಲ್ಲಿ ಚಿತ್ರಿಸಲಾಗಿದೆ.

    ಭಾರತ ಮತ್ತು ಥೈಲ್ಯಾಂಡ್ ನಡುವಿನ ಆಳವಾದ ಸಾಂಸ್ಕೃತಿಕ ಹೋಲಿಕೆಗಳು ಇಷ್ಟಕ್ಕೇ ಸೀಮಿತವಾಗಿಲ್ಲ. ಕಾರ್ತಿಕ ಪೂರ್ಣಿಮಾ ಮತ್ತು ದೀಪಾವಳಿಯನ್ನು ಭಾರತದಲ್ಲಿ ಆಚರಿಸಲಾಗುತ್ತದೆ. ಅದೇ ರೀತಿ ಥೈಲ್ಯಾಂಡ್‌ನಲ್ಲಿ ‘ಲಾಯ್ ಕ್ರಾಥೋಂಗ್’ ಹಬ್ಬವನ್ನು ದೀಪಗಳ ಹಬ್ಬವಾಗಿ ಆಚರಿಸಲಾಗುತ್ತದೆ. ಇದು ಭಾರತದ ದೀಪಾವಳಿಗೆ ಹೋಲುತ್ತದೆ. ಇದು ಥೈಲ್ಯಾಂಡ್‌ನ ಪ್ರಮುಖ ಹಬ್ಬವಾಗಿದೆ. ಈ ಸಮಯದಲ್ಲಿ ಜನರು ಶಿವ, ಪಾರ್ವತಿ, ಗಣೇಶ ಮತ್ತು ಇಂದ್ರನ ವಿಗ್ರಹಗಳನ್ನು ಪೂಜಿಸುತ್ತಾರೆ. ಇದನ್ನೂ ಓದಿ: ಮೇ ಕಳೆದ ಬಳಿಕ ಸರ್ಕಾರ ಪತನ ಖಚಿತ: ಹೆಚ್‍ಡಿಕೆ ಸ್ಫೋಟಕ ಭವಿಷ್ಯ