Tag: ಅಮ್ಮ

  • ಕಾಂಗ್ರೆಸ್ ವಿರುದ್ಧವೇ ಸಿಡಿದ ರಮ್ಯಾ ತಾಯಿ-30 ವರ್ಷ ದುಡಿದ್ರೂ ಕಾಂಗ್ರೆಸ್‍ನಿಂದ ಅನ್ಯಾಯ!

    ಕಾಂಗ್ರೆಸ್ ವಿರುದ್ಧವೇ ಸಿಡಿದ ರಮ್ಯಾ ತಾಯಿ-30 ವರ್ಷ ದುಡಿದ್ರೂ ಕಾಂಗ್ರೆಸ್‍ನಿಂದ ಅನ್ಯಾಯ!

    – ಅಂಬರೀಶ್ ವಿರುದ್ಧ ರಂಜಿತಾ ಸ್ಪರ್ಧೆ

    ಮಂಡ್ಯ: 2018 ರ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಸಂಸದೆ ರಮ್ಯಾ ಅವರ ತಾಯಿ ಸ್ಪರ್ಧೆ ಮಾಡಲಿದ್ದು, ಈ ಬಗ್ಗೆ ಇನ್ನೊಂದು ವಾರದಲ್ಲಿ ಮಂಡ್ಯಕ್ಕೆ ಬಂದು ಬೆಂಬಲಿಗರ ಜೊತೆ ಚರ್ಚಿಸಲಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.

    ತಮ್ಮ ಆಪ್ತರ ಬಳಿ ನೋವು ತೋಡಿಕೊಂಡಿರುವ ರಮ್ಯಾ ತಾಯಿ ರಂಜಿತಾ, ಕಳೆದ ಮೂವತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇವೆ. 1980ರ ದಶಕದಲ್ಲಿ 2 ರೂಪಾಯಿ ಕೊಟ್ಟು ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆದುಕೊಂಡಿದ್ದೇವೆ. ಅಂದಿನಿಂದ ಇಂದಿನವರೆಗೂ ಕಾಂಗ್ರೆಸ್ ಪಕ್ಷಕ್ಕಾಗಿ ಮನೆ ಮನೆ ಬಾಗಿಲಿಗೆ ಹೋಗಿ ಕ್ಯಾಂಪೇನ್ ಮಾಡಿದ್ದೇವೆ. ಆದ್ರೆ ಕಾಂಗ್ರೆಸ್ ಪಕ್ಷದವರು ಪಕ್ಷಕ್ಕಾಗಿ ದುಡಿದ ನಮ್ಮನ್ನು ಕಡೆಗಣಿಸಿದ್ದಾರೆ ಅಂತ ತನ್ನ ಅಳಲುತೋಡಿಕೊಂಡಿದ್ದಾರೆ.

    ರಮ್ಯಾ ಅವರು ಸೋತ ನಂತರ ಅವರಿಗೂ ಯಾವುದೇ ಸ್ಥಾನಮಾನ ಕೊಡಲಿಲ್ಲ. ಕಾಂಗ್ರೆಸ್ ಪಕ್ಷದ ಒಳಗಿದ್ದುಕೊಂಡೇ ರಮ್ಯಾರನ್ನು ಸೋಲಿಸಿದ್ರು. ರಾಜ್ಯ ರಾಜಕಾರಣದಲ್ಲಿ ರಮ್ಯಾರನ್ನು ಕಡೆಗಣಿಸಲಾಗಿದೆ. ಇದೆಲ್ಲ ಮನಸ್ಸಿಗೆ ನೋವುಂಟು ಮಾಡಿದೆ. ಈ ನೋವು ರಮ್ಯಾಗೂ ಇದೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಪಕ್ಷೇತರರಾಗಿ ಕಣಕ್ಕಿಳಿಯುತ್ತೇನೆ ಅಂತ ಅಸಮಾಧಾನ ಹೊರಹಾಕಿದ್ದಾರೆ.

    ಜನ ಆಶೀರ್ವಾದ ಮಾಡಿದ್ರೆ ಅವರ ಸೇವೆ ಮಾಡುತ್ತೇನೆ. ಕಾಂಗ್ರೆಸ್ ಪಕ್ಷದಿಂದಲೇ ಟಿಕೆಟ್ ಕೇಳುತ್ತಿದ್ದೆ. ಆದ್ರೆ ಅಂಬರೀಶ್ ಅಣ್ಣ ಕಾಂಗ್ರೆಸ್ ಪಕ್ಷದಿಂದ ಎಲೆಕ್ಷನ್‍ಗೆ ನಿಲ್ಲುತ್ತಿದ್ದಾರೆ. ಹಾಗಾಗಿ ಪಕ್ಷದಿಂದ ಟಿಕೆಟ್ ಕೇಳಿಲ್ಲ. ನನ್ನ ಸ್ಪರ್ಧೆಯ ಬಗ್ಗೆ ರಮ್ಯಾ ಜೊತೆ ಮಾತನಾಡಿಲ್ಲ. ರಮ್ಯಾರನ್ನು ನಂಬಿ ಓಟ್ ಮಾಡಿದ ಮತದಾರರಿಗಾಗಿ ದುಡಿಯಬೇಕಿದೆ. ಹಾಗಾಗಿ ಚುನಾವಣೆಗೆ ನಿಲ್ಲುತ್ತೇನೆ ಅಂತ ಆಪ್ತರ ಬಳಿ ಹೇಳಿಕೊಂಡಿರುವುದಾಗಿ ತಿಳಿದುಬಂದಿದೆ.

  • ನನ್ನ ಸಾವಿನಿಂದ ಅಪ್ಪ, ಸಹೋದರಿ ಖುಷಿಯಾಗ್ತಾರೆ- ಡೆತ್‍ನೋಟ್ ಬರೆದಿಟ್ಟು ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ

    ನನ್ನ ಸಾವಿನಿಂದ ಅಪ್ಪ, ಸಹೋದರಿ ಖುಷಿಯಾಗ್ತಾರೆ- ಡೆತ್‍ನೋಟ್ ಬರೆದಿಟ್ಟು ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ

    ಹೈದರಾಬಾದ್: ಕ್ಷುಲ್ಲಕ ಕಾರಣಕ್ಕೆ ಮನನೊಂದು ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆಯೊಂದು ನಾಗೊಳೆಯ ಜೈಪುರ ಕಾಲೋನಿಯಲ್ಲಿ ಗುರುವಾರ ನಡೆದಿದೆ.

    ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಯನ್ನು 18 ವರ್ಷದ ಸಾಯಿ ಪ್ರಿಯಾ ಎನ್ನಲಾಗಿದೆ. ಈಕೆ ಭೋಪಾಲ್ ರೆಡ್ಡಿ ಮಗಳು. ಸಾಯಿ ಪ್ರಿಯಾ ಇತ್ತೀಚೆಗೆಷ್ಟೇ ತನ್ನ ಪಿಯುಸಿ ಪರೀಕ್ಷೆ ಮುಗಿಸಿದ್ದು, ಫಲಿತಾಂಶಕ್ಕಾಗಿ ಕಾಯುತ್ತಿದ್ದಳು.

    ಏನಿದು ಘಟನೆ?: ಗುರುವಾರ ಸಂಜೆ ಸಾಯಿ ಪ್ರಿಯಾ ತನ್ನ ಸಹೋದರಿ ಜೊತೆ ವಾಟ್ಸಾಪ್ ನಲ್ಲಿ ಚಾಟ್ ಮಾಡುತ್ತಿದ್ದಳು. ಈ ವೇಳೆ ಮೊಬೈಲ್ ಜಾಸ್ತಿ ಬಳಕೆ ಮಾಡುತ್ತಿದ್ದೀಯಾ ಅಂತ ತಂದೆ ಬೈದಿದ್ದಾರೆ. ಹಾಗೂ ಅದರ ಬಳಕೆ ಕಡಿಮೆ ಮಾಡುವಂತೆ ಎಚ್ಚರಿಕೆ ನೀಡಿದ್ದಾರೆ. ಪರಿಣಾಮ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ.

    ಇದರಿಂದ ಮನನೊಂದ ಪ್ರಿಯಾ, ನೇರವಾಗಿ ತನ್ನ ಬೆಡ್ ರೂಂ ಗೆ ತೆರಳಿ ಫ್ಯಾನ್ ಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕೂಡಲೇ ಮಗಳ ಕೃತ್ಯವನ್ನು ಗಮನಿಸಿದ ಹೆತ್ತವರು ಕೋಣೆಯ ಬಾಗಿಲು ಒಡೆದು, ಮಗಳನ್ನು ತಕ್ಷಣವೇ ಸುಪ್ರಜಾ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ. ಆದ್ರೆ ಆಕೆ ಅದಾಗಲೇ ಮೃತಪಟ್ಟಿದ್ದಾಳೆ ಅಂತ ವೈದ್ಯರು ತಿಳಿಸಿದ್ದಾರೆ.

    ಆತ್ಮಹತ್ಯೆಗೂ ಮುನ್ನ ಪ್ರಿಯಾ ಡೆತ್ ನೋಟ್ ಬರೆದಿದ್ದು, ಅದರಲ್ಲಿ ತಾನು ಪರೀಕ್ಷೆಯನ್ನು ಚೆನ್ನಾಗಿಯೇ ಎದುರಿಸಿದ್ದೇನೆ ಅಂತ ಹೇಳಿದ್ದಾಳೆ. ಸದ್ಯ ಪ್ರಿಯಾಳ ತಂದೆ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    `ನಾನು ಎಲ್ಲರೊಂದಿಗೂ ಸಿಟ್ಟು ಮಾಡಿಕೊಳ್ಳುತ್ತಿದ್ದೇನೆ. ಹೀಗಾಗಿ ನಾನ್ಯಾಕೆ ಇನ್ನೂ ಬದುಕಿರಬೇಕು ಅನಿಸಿದೆ. ಕ್ಷಮಿಸಿ ಅಪ್ಪ… ಐ ಲವ್ ಯೂ ಅಮ್ಮ, ಅಪ್ಪ. ಪರೀಕ್ಷೆಯಲ್ಲಿ ಚೆನ್ನಾಗಿಯೇ ಬರೆದಿದ್ದೇನೆ. ಹೀಗಾಗಿ ಆ ಕಾರಣಕ್ಕೋಸ್ಕರ ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ… ನನ್ನ ಸಾವಿನಿಂದ ಅಪ್ಪ ಹಾಗೂ ಸಹೋದರಿ ಖುಷಿ ಪಡುತ್ತಾರೆ ಅಂತ ತನ್ನ ಡೆತ್ ನೋಟ್ ನಲ್ಲಿ ಬರೆದುಕೊಂಡಿದ್ದು, ಇದೀಗ ಪೊಲೀಸರು ಪತ್ರವನ್ನು ವಶಪಡಿಸಿಕೊಂಡಿದ್ದಾರೆ.

  • ಮಗ ಲವರ್ ಜೊತೆ ಪರಾರಿ-ಪುತ್ರನ ಪ್ರೇಮ ಪ್ರಣಯಕ್ಕೆ ಆಸ್ಪತ್ರೆ ಸೇರಿದ್ರು ಪೇರೆಂಟ್ಸ್

    ಮಗ ಲವರ್ ಜೊತೆ ಪರಾರಿ-ಪುತ್ರನ ಪ್ರೇಮ ಪ್ರಣಯಕ್ಕೆ ಆಸ್ಪತ್ರೆ ಸೇರಿದ್ರು ಪೇರೆಂಟ್ಸ್

    ಶಿವಮೊಗ್ಗ: ಪ್ರೀತಿ ಮಾಡಿ ಯುವತಿಯೊಂದಿಗೆ ನಾಪತ್ತೆಯಾದ ಯುವಕನ ತಂದೆ-ತಾಯಿ ಪೊಲೀಸರ ಟಾರ್ಚರ್ ತಾಳಲಾಗದೆ ವಿಷ ಸೇವಿಸಿದ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಅರಬಿಳಚಿ-ವಡ್ಡರಹಟ್ಟಿ ಗ್ರಾಮದಲ್ಲಿ ನಡೆದಿದೆ.

    ಈ ಗ್ರಾಮದ ದಶರಥ ಎಂಬ ಯುವಕ ಅಡಕೆ ಬೇಯಿಸುವ ಕೆಲಸಕ್ಕೆ ಹೋಗುತ್ತಿದ್ದ. ಇದೇ ಜಾಗಕ್ಕೆ ಅಡಕೆ ಸುಲಿಯಲು ಬರುತ್ತಿದ್ದ ಸಿಂಧೂ ಎಂಬಾಕೆಯೊಂದಿಗೆ ಸ್ನೇಹ ಬೆಳೆಸಿ ನಂತರ ಅದು ಪ್ರೀತಿಗೆ ತಿರುಗಿದೆ. ಈ ಜೋಡಿ ಹದಿನೈದು ದಿನದ ಹಿಂದೆ ಊರು ಬಿಟ್ಟು ಹೋಗಿದ್ದಾರೆ. ಈ ಬಗ್ಗೆ ಹುಡುಗಿ ಮನೆಯವರು ಹೊಳೆಹೊನ್ನೂರು ಠಾಣೆಗೆ ದೂರು ನೀಡಿದ್ದರು.

    ಹೊಳೆಹೊನ್ನೂರು ಠಾಣೆ ಪೊಲೀಸರು ಹುಡುಗ ದಶರಥನ ಅಪ್ಪ ಕುಮಾರಪ್ಪ ಹಾಗೂ ಅಮ್ಮ ನೀಲಾವತಿ ಅವರನ್ನು ಠಾಣೆಗೆ ಕರೆಸಿ ಹೊಡೆದಿದ್ದಾರೆ ಅಂತಾ ಹೇಳಲಾಗಿದೆ. ಅಲ್ಲದೇ ಮೂರು ದಿನದ ಒಳಗಾಗಿ ನಿಮ್ಮ ಮಗನನ್ನು ಕರೆದು ತನ್ನಿ ಎಂದು ಎಚ್ಚರಿಕೆ ನೀಡಿ ಮನೆಗೆ ಕಳಿಸಿದ್ದಾರೆ. ಇತ್ತ ಮನೆಯ ಬಳಿಯೂ ಹುಡುಗಿ ಕಡೆಯವರು ಬಂದು ಗಲಾಟೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಇದರಿಂದ ಬೇಸರಗೊಂಡ ಯುವಕನ ತಂದೆ-ತಾಯಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಸ್ಥಳೀಯರು ತೀವ್ರವಾಗಿ ಅಸ್ವಸ್ಥಗೊಂಡಿರುವ ಇಬ್ಬರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

  • ಮಧ್ಯರಾತ್ರಿ ಅಮ್ಮನಿಗಾಗಿ ಕೂಗಿ ಬಾಲಕ ನಿಗೂಢ ಸಾವು

    ಮಧ್ಯರಾತ್ರಿ ಅಮ್ಮನಿಗಾಗಿ ಕೂಗಿ ಬಾಲಕ ನಿಗೂಢ ಸಾವು

    ಮುಂಬೈ: ಬಾಲಕನೊಬ್ಬ ಮಧ್ಯರಾತ್ರಿ ವೇಳೆ ತನ್ನ ತಾಯಿಗಾಗಿ ಕೂಗಿ ನುಗೂಢವಾಗಿ ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ.

    ಇಲ್ಲಿನ ವೊರ್ಲಿಯ ಆದರ್ಶ್ ನಗರ್ ನಿವಾಸಿಯಾದ ಋತ್ವಿಕ್ ಘಾದ್ಶಿ ಮೃತ ಬಾಲಕ. ಈತ ದಾದರ್‍ನ ಶಿಶುವಿಹಾರ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಗುರುವಾರದಂದು ಆರಂಭವಾಗಬೇಕಿದ್ದ 10ನೇ ತರಗತಿ ಪರೀಕ್ಷೆಗಾಗಿ ಋತ್ವಿಕ್ ಸಿದ್ಧತೆ ನಡೆಸಿದ್ದ. ಬುಧವಾರ ರಾತ್ರಿ 11.30 ವೇಳೆಗೆ ಮಲಗುವಾಗ ಬೆಳಗ್ಗೆ 5 ಗಂಟೆಗೆ ಎದ್ದೇಳಿಸುವಂತೆ ತಾಯಿಗೆ ಹೇಳಿದ್ದ. ಆದ್ರೆ ಮಧ್ಯರಾತ್ರಿ ಸುಮಾರು 1.15ರ ಹೊತ್ತಿಗೆ ಅಮ್ಮನಿಗಾಗಿ ಕೂಗಿ ಬಳಿಕ ಸಾವನ್ನಪ್ಪಿದ್ದಾನೆ.

    ಋತ್ವಿಕ್ ಒಳ್ಳೇ ವಿದ್ಯಾರ್ಥಿಯಾಗಿದ್ದ. ಆತನಿಗೆ ಪರೀಕ್ಷೆಯ ಭಯ ಇರಲಿಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ. ಬುಧವಾರದಂದು ತನ್ನ ಸ್ನೇಹಿತರ ಜೊತೆ ಖುಷಿಯಿಂದ ಹೋಳಿ ಆಡಿದ್ದ. ಋತ್ವಿಕ್ ಹಾಗೂ ಇಬ್ಬರು ಸಹೋದರಿಯರನ್ನ ತಾಯಿ ಒಬ್ಬರೇ ಮನೆಗೆಲಸ ಮಾಡಿ ಸಾಕುತ್ತಿದ್ದರು ಎಂದು ವರದಿಯಾಗಿದೆ.

    ಮಧ್ಯರಾತ್ರಿ 1.15ರ ವೇಳೆಗೆ ತಾಯಿಗಾಗಿ ಕಿರುಚಿ, ಆತನಿಗೆ ಸ್ಥಳದಲ್ಲೇ ಮಲ ಮೂತ್ರ ವಿಸರ್ಜನೆಯಾಯಿತು. ಕೆಲವೇ ನಿಮಿಷಗಳಲ್ಲಿ ಪ್ರಜ್ಞೆ ತಪ್ಪಿದ ಎಂದು ಕಾಲೇಜು ವಿದ್ಯಾರ್ಥಿನಿಯಾದ ಋತ್ವಿಕ್ ಸಹೋದರಿ ಮನಾಲಿ ಹೇಳಿದ್ದಾರೆ. ಋತ್ವಿಕ್‍ನ ಮತ್ತೊಬ್ಬ ಸಹೋದರಿ ನರ್ಸ್ ತರಬೇತಿ ಪಡೆಯುತ್ತಿದ್ದು, ಕೆಲಸಕ್ಕಾಗಿ ಹೋಗಿದ್ದರು. ಘಟನೆ ನಡೆದಾಗ ಮನಾಲಿ ಕೂಡಲೇ ನೆರೆಹೊರೆಯವರಿಗೆ ವಿಷಯ ತಿಳಿಸಿದ್ದು, ಅವರು ಋತ್ವಿಕ್‍ನಲ್ಲಿ ಕೆಇಎಮ್ ಆಸ್ಪತ್ರೆಗೆ ರವಾನಿಸಿದ್ದರು ಎಂದು ವರದಿಯಾಗಿದೆ.

    ಆಸ್ಪತ್ರೆಯ ಡೀನ್ ಡಾ. ಅವಿನಾಶ್ ಸುಪೇ ಈ ಬಗ್ಗೆ ಪ್ರತಿಕ್ರಿಯಿಸಿ, ಬಾಲಕನನ್ನು ಆಸ್ಪತ್ರೆಗೆ ಕರೆತರುವ ವೇಳೆಗಾಗಲೇ ಸಾವನ್ನಪ್ಪಿದ್ದ. ಪ್ರಾಥಮಿಕ ಮರಣೋತ್ತರ ಪರೀಕ್ಷೆ ಅನಿಶ್ಚಿತವಾಗಿದ್ದು, ಹೆಚ್ಚಿನ ತನಿಖೆಗಾಗಿ ಶ್ವಾಸಕೋಶ ಹಾಗೂ ಅಂಗಾಂಶಗಳನ್ನು ಕಲೀನಾದ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದ್ದಾರೆ.

    ಋತ್ವಿಕ್ ಒಂದು ತಿಂಗಳ ಹಿಂದೆ ಜಾಂಡೀಸ್‍ನಿಂದ ಬಳಲುತ್ತಿದ್ದ. ಎರಡು ವಾರಗಳ ಹಿಂದಷ್ಟೇ ಆತನ ಚಿಕಿತ್ಸೆ ಮುಗಿದಿತ್ತು ಎಂದು ಮನಾಲಿ ತಿಳಿಸಿದ್ದಾರೆ.

  • ಅಮ್ಮನಂತೆ ನಾಟಕವಾಡಿ ಬಾಲಕಿಯ ಅಪಹರಣ ತಪ್ಪಿಸಿದ ಮಹಿಳೆ

    ಅಮ್ಮನಂತೆ ನಾಟಕವಾಡಿ ಬಾಲಕಿಯ ಅಪಹರಣ ತಪ್ಪಿಸಿದ ಮಹಿಳೆ

    ಕ್ಯಾಲಿಪೋರ್ನಿಯಾ: ಅಮ್ಮನಂತೆ ನಾಟಕವಾಡಿ ಮಹಿಳೆಯೊಬ್ಬರು ಬಾಲಕಿಯ ಅಪಹರಣವನ್ನು ತಪ್ಪಿಸಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

    ಕ್ಯಾಲಿಫೋರ್ನಿಯಾದ ಬಾಲಕಿ ಮಾರ್ಟಿನೆಜ್ ಸಾಂತಾ ಅನಾ ಸ್ಕೂಲ್ ಗೆ ಹೋಗುತ್ತಿದ್ದಳು. ಈ ಸಂದರ್ಭದಲ್ಲಿ ಯಾರೋ ದುಷ್ಕರ್ಮಿಯೊಬ್ಬ ಬಂದು ಬಾಲಕಿಯನ್ನು ಅಪಹರಿಸಲು ಯತ್ನಿಸಿದ್ದಾನೆ. ಈ ವೇಳೆ ಅಲ್ಲೆ ಇದ್ದ ಕ್ಲೌಡಿಯಾ ಎಂಬ ಮಹಿಳೆ ಇದನ್ನು ಗಮನಿಸಿದ್ದಾರೆ. ನಂತರ ಮಹಿಳೆ ಬಾಲಕಿಯ ಬಳಿ ಬಂದು ಅಮ್ಮನಂತೆ ಪೋಸು ಕೊಟ್ಟಿದ್ದಾರೆ.

    ಮಹಿಳೆ ಬಾಲಕಿಯ ಹೆಗಲ ಮೇಲೆ ಕೈಹಾಕಿಕೊಂಡು ಸುಮ್ಮನೇ ನಡೆದುಕೊಂಡು ಹೋಗಿದ್ದಾರೆ. ಆದರೆ ಬಾಲಕಿ ಅಪರಿಚಿತ ಮಹಿಳೆ ತನ್ನನ್ನು ಕರೆದುಕೊಂಡು ಹೋಗುತ್ತಿರುವುದನ್ನು ನೋಡಿ ಗಾಬರಿಯಿಂದ ಅಳಲಾರಂಭಿಸಿದ್ದಾಳೆ. ಬಾಲಕಿ ಅಳುತ್ತಿದ್ದರಿಂದ ಮಹಿಳೆ ಸ್ಪ್ಯಾನಿಶ್ ಭಾಷೆ ಮಾತನಾಡುತ್ತಿದ್ದರೂ ಬಾಲಕಿಗೆ ಸಮಾಧಾನ ಮಾಡಲು ಪ್ರಯತ್ನಿಸಿದ್ದಾರೆ. ನಂತರ ಅವಳನ್ನು ಶಾಲೆಯವರೆಗೂ ಬಿಟ್ಟಿದ್ದಾರೆ.

    ಮಹಿಳೆ ಶಾಲಾ ಅಧಿಕಾರಿಗಳಿಗೆ ನಡೆದ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಮಹಿಳೆಯ ಸಮಯ ಪ್ರಜ್ಞೆಯಿಂದಾಗಿ ಬಾಲಕಿ ಅಪಹರಣದಿಂದ ಪಾರಾಗಿದ್ದಾಳೆ. ಅಪಹರಣಕಾರರಿಂದ ತನ್ನನ್ನು ಕಾಪಾಡಿದ ಮಹಿಳೆ ನಿಜಕ್ಕೂ ಧೈರ್ಯವಂತೆ ಎಂದು ಬಾಲಕಿ ಹೇಳಿದ್ದಾಳೆ.

  • ಅಪ್ಪನ ಸಾವು, ಅಮ್ಮನಿಗೆ ಮರುಮದುವೆ, ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಾನೆ 7ರ ಪೋರ

    ಅಪ್ಪನ ಸಾವು, ಅಮ್ಮನಿಗೆ ಮರುಮದುವೆ, ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಾನೆ 7ರ ಪೋರ

    ಬೀಜಿಂಗ್: ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿರೋ 7 ವರ್ಷದ ಪುಟ್ಟ ಬಾಲಕನೊಬ್ಬನ ಕಥೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    7 ವರ್ಷದ ಕ್ಸಿಯೋ ಚಾಂಗ್ ಜಿಯಾಂಗ್ ಚೀನಾದ ಕಿಂಗ್‍ಡಾವೋ ನಗರದಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿದ್ದಾನೆ. ಈತನ ವಿಡಿಯೋವನ್ನ ಮೊದಲು ಚೀನಾದ ವಿಡಿಯೋ ಹಂಚಿಕೆ ಜಾಲತಾಣ ಪೀರ್‍ವಿಡಿಯೋದಲ್ಲಿ ಹಂಚಿಕೊಳ್ಳಲಾಗಿದ್ದು, ಅನಂತರ ವೈರಲ್ ಆಗಿದೆ.

    ವರದಿಗಳ ಪ್ರಕಾರ ಬಾಲಕನ ತಂದೆ ಅನಾರೋಗ್ಯದಿಂದ ಮೃತಪಟ್ಟಿದ್ದು, ತಾಯಿ ಪುಟ್ಟ ಮಗನನ್ನು ಒಂಟಿಯಾಗಿ ಬಿಟ್ಟು ಹೋಗಿ ಬೇರೊಂದು ಮದುವೆಯಾಗಿದ್ದಾಳೆ. ನಂತರ ಬಾಲಕ ತನ್ನ ತಂದೆಯ ಮಾಜಿ ಸಹೋದ್ಯೋಗಿಯ ಬಳಿ ಬೆಳೆದಿದ್ದಾನೆ. ಅವರನ್ನ ಈತ ಅಂಕಲ್ ಅಂತಾ ಕರೀತಾನೆ.

    ಮೊದಮೊದಲು ತನ್ನ ಅಂಕಲ್‍ಗೆ ಪ್ಯಾಕೇಜ್‍ಗಳನ್ನ ಡೆಲಿವರಿ ಮಾಡಲು ಸಹಾಯ ಮಾಡುತ್ತಿದ್ದ. ಆದ್ರೆ ನಂತರ ತನ್ನ ಕೆಲಸದ ಸಾಮರ್ಥ್ಯ ಹೆಚ್ಚಿಸಿಕೊಂಡಿದ್ದು, ತಾನಾಗೇ ಪ್ಯಾಕೇಜ್‍ಗಳನ್ನ ಡೆಲಿವರಿ ಮಾಡುತ್ತಾನೆ. ಒಂದು ದಿನಕ್ಕೆ 30 ಪ್ಯಾಕೇಜ್‍ಗಳನ್ನ ತಲುಪಿಸುತ್ತಾನೆ. ಹಾಗೇ ಈತ ಈ ಪ್ರದೇಶದಲ್ಲಿ ಸಖತ್ ಫೇಮಸ್ ಆಗಿದ್ದು, ಜನ ಈ ಬಾಲಕನನ್ನ ಮಿನಿ ಸೆಲೆಬ್ರಿಟಿ ಅಂತ ಕರೀತಾರೆ.

    ಈ ಕೆಲಸ ಮಾಡೋದ್ರಲ್ಲಿ ನನಗೆ ಎಷ್ಟು ಸಂತೋಷವಿದೆ ಎಂದ್ರೆ ಮುಂದೆ ದೊಡ್ಡವನಾದ ಮೇಲೂ ಡೆಲಿವರಿ ಬಾಯ್ ಆಗಬೇಕು ಎಂದು ಬಾಲಕ ಹೇಳಿದ್ದಾನೆ.

    ವಾಂಗ್ ಕಿಂಗ್ವೀ ಎಂಬವರು ಬಾಲಕನ ಫೋಟೋ ಹಂಚಿಕೊಂಡ ನಂತರ ಚಾಂಗ್ ನ ಕಥೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪುಟ್ಟ ಬಾಲಕ ಸ್ವಲ್ಪ ಕಷ್ಟ ಪಡುತ್ತಾ ನನಗೆ ಪ್ಯಾಕೇಜ್ ಡೆಲಿವರಿ ಮಾಡೋದನ್ನ ಕಂಡು ಆಶ್ಚರ್ಯವಾಯ್ತು ಎಂದು ಅವರು ಬರೆದುಕೊಂಡಿದ್ದಾರೆ.

    ಚಳಿಯಿಂದ ಬಾಲಕನ ಕೈ ಕೆಂಪಾಗಿತ್ತು. ಹೀಗಾಗಿ ಮನೆಯಲ್ಲಿ ಕೆಲ ಕಾಲ ವಿಶ್ರಮಿಸಲು ಹೇಳಿದೆ ಎಂದು ವಾಂಗ್ ಕಿಂಗ್ವೀ ಹೇಳಿದ್ದಾರೆ. ಬಾಲಕನಿಗೆ ಒಂದು ಚೆಸ್ ಸೆಟ್ ಉಡುಗೊರೆಯಾಗಿ ನೀಡಿದ್ದಾರೆ.

     

    ಬಾಲಕನ ಬಗ್ಗೆ ಸುದ್ದಿ ವರದಿಯಾದ ಬಳಿಕ ಸ್ಥಳೀಯ ಅಧಿಕಾರಿಗಳು ಆತನನ್ನು ವೆಲ್‍ಫೇರ್ ಅಸೋಸಿಯೇಷನ್‍ಗೆ ಕಳಿಸಿದ್ದು, ಬಾಲಕ ಅಲ್ಲಿ ತನ್ನ 7ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾನೆ. ಬಾಲಕನ ತಾಯಿಗಾಗಿ ಕೂಡ ಹುಡುಕಾಟ ನಡೆಸಲಾಗ್ತಿದೆ. ಅಲ್ಲಿಯವರೆಗೆ ಚಾಂಗ್ ವೆಲ್‍ಫೇರ್ ಅಸೋಸಿಯೇಷನ್‍ನಲ್ಲಿ ಇರಲಿದ್ದು, ಆತನ ವಿದ್ಯಾಭ್ಯಾಸವನ್ನ ಅವರೇ ನೋಡಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

  • ಅಮೆರಿಕದಿಂದ ಬಂದ ಟೆಕ್ಕಿ ನೋಡಿದ್ದು ಅಮ್ಮನ ಕೊಳೆತ ಶವ!

    ಅಮೆರಿಕದಿಂದ ಬಂದ ಟೆಕ್ಕಿ ನೋಡಿದ್ದು ಅಮ್ಮನ ಕೊಳೆತ ಶವ!

    ಮುಂಬೈ: ಇಲ್ಲಿನ ಅಂಧೇರಿಯ ಮನೆಯೊಂದರಲ್ಲಿ 63 ವರ್ಷದ ಮಹಿಳೆಯೊಬ್ಬರ ಕೊಳೆತ ಶವ ಭಾನುವಾರ ಪತ್ತೆಯಾಗಿದೆ.

    ಮೃತ ಮಹಿಳೆಯನ್ನು ಆಶಾ ಸಹಾನಿ ಎಂದು ಗುರುತಿಸಲಾಗಿದೆ. ಆಶಾ ಅವರ ಮಗ ಅಮೆರಿಕದಿಂದ ಮುಂಬೈನ ಮನೆಗೆ ಬಂದು ನೋಡಿದಾಗ ತನ್ನ ತಾಯಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.

    ಸಹಾನಿಯವರ ಗಂಡ ತೀರಿಕೊಂಡ ಬಳಿಕ ಅಂಧೇರಿಯ ಲೋಖಂಡ್ವಾಲಾ ಕಾಂಪ್ಲೆಕ್ಸ್ ನ ಅಪಾರ್ಟ್‍ಮೆಂಟ್‍ವೊಂದರಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಇವರ ಒಬ್ಬನೇ ಮಗನಾದ ರಿತುರಾಜ್ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು, ಅಮೆರಿಕದಲ್ಲಿ ನೆಲೆಸಿದ್ದಾರೆ ಅಂತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ರಿತುರಾಜ್ ಇಂದು ಬೆಳಗ್ಗೆ ಅಮೆರಿಕದಿಂದ ಮುಂಬೈಗೆ ಬಂದಿಳಿದರು. ತನ್ನ ಮನೆ ತಲುಪಿದ ನಂತರ ಡೋರ್ ಬೆಲ್ ಮಾಡಿದ್ರು. ಆದ್ರೆ ಮನೆ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಇದರಿಂದ ಆತಂಕಗೊಂಡ ರಿತುರಾಜ್ ಮನೆಗೆ ಕೀ ತಯಾರಕರನ್ನು ಕರೆಸಿದ್ದಾರೆ. ಅವರ ಸಹಾಯದಿಂದ ಸಂಜೆ ಸುಮಾರು 4.30ರ ಸುಮಾರಿಗೆ ಮನೆಯ ಕೀ ತೆಗೆದು ಒಳಗೆ ಹೋಗಿ ನೋಡಿದಾಗ ಅಮ್ಮನ ಶವ ಕೊಳೆತು ಬಿದ್ದಿರುವುದು ಪತ್ತೆಯಾಗಿದೆ. ಘಟನೆಗೆ ಕಾರಣವೇನು ಹಾಗೂ ಅವರು ಯಾವಾಗ ಸಾವನ್ನಪ್ಪಿದ್ದಾರೆ ಎಂಬುದು ತನಿಖೆಯಿಂದ ತಿಳಿಯಬೇಕಿದೆ ಅಂತ ಪೊಲೀಸರು ತಿಳಿಸಿದ್ದಾರೆ.

    ಸದ್ಯ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಸ್ಥಳೀಯ ಆಸ್ಪತ್ರೆಗೆ ಕಳುಹಿಸಲಾಗಿದೆ. ಒಶೀವಾರಾ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

  • ವಿಶೇಷಚೇತನ ತಾಯಿಗಾಗಿ ಗಲ್ಲಿಗಲ್ಲಿ ಶೋಧ- ಅಮ್ಮನಿಗಾಗಿ ಪೋಸ್ಟರ್ ಅಂಟಿಸ್ತಿದ್ದಾರೆ ಮಕ್ಕಳು

    ವಿಶೇಷಚೇತನ ತಾಯಿಗಾಗಿ ಗಲ್ಲಿಗಲ್ಲಿ ಶೋಧ- ಅಮ್ಮನಿಗಾಗಿ ಪೋಸ್ಟರ್ ಅಂಟಿಸ್ತಿದ್ದಾರೆ ಮಕ್ಕಳು

    ಉಡುಪಿ: ಮೊಮ್ಮಗನಿಗೆ ರಂಜಾನ್ ಗಿಫ್ಟ್ ಕೊಡಬೇಕು ಅಂತ ಮಹಿಳೆಯೊಬ್ಬರು ಭಟ್ಕಳದಲ್ಲಿ ಬಸ್ ಹತ್ತಿದ್ದಾರೆ. ಮಾತು ಬಾರದ ಕಿವಿ ಕೇಳದ ಅವರು ಒಂದು ಸ್ಟಾಪ್ ಮುಂದೆ ಬಸ್ಸಿಂದ ಇಳಿದಿದ್ದಾರೆ. ತಾನೆಲ್ಲಿ ಇಳಿದಿದ್ದೇನೆ ಅಂತ ತಿಳಿಯದ ಜುಲೇಖಾ ಊರೂರು ಸುತ್ತಿ ಕಣ್ಮರೆಯಾಗಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ರವೂಫ್ ಇದೀಗ ಅಮ್ಮನಿಗಾಗಿ ಕೈಯ್ಯಲ್ಲಿ ಪೋಸ್ಟರ್ ಹಿಡಿದು ಊರೂರು ಸುತ್ತುತ್ತಿದ್ದಾರೆ. ಜೂನ್ 23ರಂದು ಕರಾವಳಿಯಲ್ಲಿ ರಂಜಾನ್ ಹಬ್ಬವಿತ್ತು. ಭಟ್ಕಳದ ಜುಲೆಖಾ ಕುಂದಾಪುರದ ಹೆಮ್ಮಾಡಿಗೆ ತನ್ನ ಮೊಮ್ಮಗನನ್ನು ನೋಡಲು ಬಸ್ ಹತ್ತಿದ್ದರು. ಹೆಮ್ಮಾಡಿಯಲ್ಲಿ ಇಳಿಯುವ ಬದಲು ಕುಂದಾಪುರದಲ್ಲಿ ಇಳಿದಿದ್ದರು. ತಾನೆಲ್ಲಿ ಇಳಿದ್ದೇನೆ ಎಂಬುದನ್ನು ಅರಿಯದ ಜುಲೇಖಾ ಇದೀಗ ಕಳೆದುಹೋಗಿದ್ದಾರೆ. ತನ್ನ ತಾಯಿ ಕಳೆದು ಹೋಗಿದ್ದಾರೆ ಅನ್ನೋದು ಗೊತ್ತಾಗಿ ಕತಾರ್‍ನಿಂದ ಮಗ ಬಂದಿದ್ದಾರೆ. ಮಂಗಳೂರು ಸೇರಿ ಹಲವು ಕಡೆ ಹುಡುಕಾಟ ನಡೆದಿದೆ. ಆದ್ರೂ ಪ್ರಯೋಜನವಾಗಿಲ್ಲ. ಹೀಗಾಗಿ ಇದೀಗ ಗಲ್ಲಿ ಗಲ್ಲಿಯಲ್ಲಿ ಪೋಸ್ಟರ್- ಸ್ಟಿಕ್ಕರ್ ಅಂಟಿಸಲು ಶುರು ಮಾಡಿದ್ದಾರೆ.

    ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದ್ರೆ ಪೊಲೀಸರು ಪತ್ತೆಗೆ ಪ್ರಯತ್ನ ಮಾಡುತ್ತಿಲ್ಲ ಅಂತ ಕುಟುಂಬಸ್ಥರು ದೂರಿದ್ದಾರೆ. ಭಾವಚಿತ್ರದಲ್ಲಿರುವ ಜಲೇಕಾ ಎಲ್ಲಾದ್ರು ಕಾಣಸಿಕ್ಕರೆ ಮಾಹಿತಿ ಕೊಡಿ ಅಂತ ಕೇಳಿಕೊಂಡಿದ್ದಾರೆ.

  • ಗಂಡನ ಬಿಟ್ಟು ಲವ್ವರ್ ಜೊತೆ ಮಗಳ ಚೆಲ್ಲಾಟ: ಸಹಕರಿಸದ ಅಪ್ಪನ ಕೊಂದೇ ಬಿಟ್ಟ ತಾಯಿ-ಮಗಳು!

    ಗಂಡನ ಬಿಟ್ಟು ಲವ್ವರ್ ಜೊತೆ ಮಗಳ ಚೆಲ್ಲಾಟ: ಸಹಕರಿಸದ ಅಪ್ಪನ ಕೊಂದೇ ಬಿಟ್ಟ ತಾಯಿ-ಮಗಳು!

    ಬೆಳಗಾವಿ: ಕೈಹಿಡಿದು ಬಾಳಪೂರ್ತಿ ಜೀವನ ಸಂಗಾತಿಯಾಗಿರುವೆ ಎಂದು ಸಪ್ತಪದಿ ತುಳಿದ ಹೆಂಡತಿಯೇ ಗಂಡನನ್ನು ಕೊಲ್ಲಿಸಲು ಸುಪಾರಿ ನೀಡಿದ ಭಯಾನಟಕ ಘಟನೆ ಬೆಳಗಾವಿಯ ಗೋಕಾಕ ಹೊರವಲಯದ ಕಡಬಗಟ್ಟಿ ಗ್ರಾಮದಲ್ಲಿ ನಡೆದಿದೆ.

    ಮೂಲತಃ ಗೋಕಾಕ ತಾಲೂಕಿನ ಕೈತನಾಳ ಹೊಸೂರು ಗ್ರಾಮದ ಕೆಂಚಪ್ಪಾ ನೊಗನಿಹಾಳ ತನ್ನ ಪತ್ನಿ ಗೌರವ್ವಾ ನೊಗನಿಹಾಳ ಹಾಕಿದ ಮರ್ಡರ್ ಸ್ಕೆಚ್‍ಗೆ ಬಲಿಯಾಗಿದ್ದಾನೆ. ಕೊಲೆಯಾದ ಕೆಂಚಪ್ಪಾ ಮಗಳು ಸಿದ್ದವ್ವಾ ಕಟ್ಟಿಕಾರ, ಪತ್ನಿ ಗೌರಮ್ಮ ನೋಗನಿಹಾಳ ಸೇರಿ 70 ಸಾವಿರ ಸುಪಾರಿ ನೀಡಿ ಕೊಲೆಮಾಡಿಸಿದ್ದಾರೆ.

    ಮನೆ ಯಜಮಾನ ಮಿಸ್ಸಿಂಗ್ ಆಗಿದ್ದಾನೆ ಎಂದು ಊರಲ್ಲಿ ಸುದ್ದಿ ಹರಡಿಸಿ ಕೊಲೆ ಪ್ರಕರಣವನ್ನು ಮುಚ್ಚಿಹಾಕಲು ಪಾಪಿ ಪತ್ನಿ ಗೌರವ್ವ ಯತ್ನಿಸಿದ್ದಾಳೆ. ಆದ್ರೆ ಊರ ತುಂಬೆಲ್ಲಾ ಕೆಂಚಪ್ಪಾ ಕಾಣೆಯಾಗಿಲ್ಲ ಬದಲಾಗಿ ಕೊಲೆಯಾಗಿದ್ದಾನೆ ಎಂಬ ಗುಸು ಗುಸು ಸುದ್ದಿ ಹರಡಿತ್ತು. ಸಂಶಯದ ಮೆರೆಗೆ ಕೆಂಚಪ್ಪಾ ಸಹೋದರ ವಿಠ್ಠಲ ಪೊಲೀಸ್ ಠಾಣೆಗೆ ದೂರು ಕೊಟ್ಟರು. ತನಿಖೆ ಆರಂಭಿಸಿದ ಗೋಕಾಕ ಗ್ರಾಮೀಣ ಪೋಲೀಸರು ಈ ಪ್ರಕರಣವನ್ನು ಭೇದಿಸಿದ್ದಾರೆ.

    ಪ್ರಕಣದಲ್ಲಿ ಸುಪಾರಿ ಪಡೆದ ಪ್ರಮೂಖ ಆರೋಪಿ ಶಿವಾಜಿ ಹೊಳೆವ್ವಗೋಳ, ಶಂಕರ ದೇಶಿಂಗೆ, ದುರ್ಗಪ್ಪಾ ನಂದಿ, ರಾಮಸಿದ್ದದ್ದಪ್ಪ ನಂದಿ, ಗೌರವ್ವಾ ನೊಗನಿಹಾಳ ಹಾಗೂ ಸಿದ್ದವ್ವ ಕಟ್ಟಿಕಾರಳನ್ನ ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಒಟ್ಟಾರೆ ಪತ್ನಿ ಗೌರವ್ವ, ಮಗಳ ನೀಚ ಕೆಲಸಕ್ಕೆ ಅಪ್ಪ ಸಹಕರಿಸಲಿಲ್ಲ ಅಂತ ಸುಪಾರಿ ಕೊಟ್ಟು ಮುಗಿಸಿರುವುದು ಬೆಳಕಿಗೆ ಬಂದಿದೆ.

  • ಕ್ರಿಕೆಟ್ ಬ್ಯಾಟಿನಿಂದ ಹೊಡೆದು ಅಣ್ಣನಿಂದಲೇ ತಮ್ಮನ ಕಗ್ಗೊಲೆ!

    ಕ್ರಿಕೆಟ್ ಬ್ಯಾಟಿನಿಂದ ಹೊಡೆದು ಅಣ್ಣನಿಂದಲೇ ತಮ್ಮನ ಕಗ್ಗೊಲೆ!

    ಮುಂಬೈ: ಕ್ರಿಕೆಟ್ ಬ್ಯಾಟ್‍ನಿಂದ ಹೊಡೆದು ತಮ್ಮನನ್ನು ಕೊಲೆ ಮಾಡಿದ ಆರೋಪದ ಮೇಲೆ 35 ವರ್ಷದ ಅಣ್ಣನನ್ನು ಪೊಲೀಸರು ಬಂಧಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.

    ಆರೋಪಿ ಅಜಯ್ ಮುಕ್ವಾನಾ ತನ್ನ ತಮ್ಮ ಮುಕೇಶ್ ಮುಕ್ವಾನನ್ನು ಕೊಲೆ ಮಾಡಿದ್ದಾನೆ. ಸದ್ಯ ಆರೋಪಿ ಅಜಯ್ ನ್ನು ಪೊಲಿಸರು ಬಂಧಿಸಿದ್ದು, ನ್ಯಾಯಾಂಗಬಂಧನಕ್ಕೆ ಒಪ್ಪಿಸಿದ್ದಾರೆ.

    ಏನಿದು ಪ್ರಕರಣ?: ಆರೋಪಿ ಅಜಯ್ ಮಕ್ವಾನಾ ಮತ್ತು ತಮ್ಮ ಮುಖೇಶ್ ಮಕ್ವಾನಾ ಮಧ್ಯೆ ಮನೆಯಲ್ಲಿ ವಾಗ್ದಾನ ನಡೆದಿದ್ದೇ ಮುಖೇಶ್ ಕೊಲೆಗೆ ಕಾರಣ ಅಂತ ಭೋವಾಡಾ ಪೊಲೀಸ್ ಠಾಣೆಯ ಮೂಲಗಳು ತಿಳಿಸಿವೆ.

    ಅಜಯ್ ಮದ್ಯವ್ಯಸನಿಯಾಗಿದ್ದು, ಕೆಇಎಂ ಆಸ್ಪತ್ರೆಯಲ್ಲಿ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದ. ಮುಕೇಶ್ ಅನಕ್ಷರಸ್ಥನಾಗಿದ್ದನು. ಹೀಗಾಗಿ ಆತ ಮನೆಯಲ್ಲೇ ಇದ್ದು ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದನು. ಇದರಿಂದ ತಾಯಿಗೂ ಮುಕೇಶ್ ಮೇಲೆ ಜಾಸ್ತಿ ಪ್ರೀತಿ ಇತ್ತು. ಈ ಹಿನ್ನೆಲೆಯಲ್ಲಿ ಮೊದಲೇ ಮದ್ಯ ವ್ಯಸನಿಯಾಗಿದ್ದ ಅಜಯ್ ಕುಡಿದು ಬಂದು ತನ್ನ 75 ವರ್ಷದ ತಾಯಿಯ ಜೊತೆ ಪ್ರತೀದಿನ ಜಗಳವಾಡುತ್ತಿದ್ದನು. ಇದೇ ಕಾರಣಕ್ಕೆ ಅಣ್ಣ- ತಮ್ಮನ ಜೊತೆ ಕೂಡ ಜಗಳವಾಗಿದ್ದು, ಈ ವೇಳೆ ತಾಯಿ ಮುಕೇಶ್ ಜೊತೆ ಸೇರಿ ಅಣ್ಣ ಅಜಯ್‍ಗೆ ಬೈದಿದ್ದಾರೆ.

    ಇದ್ರಿಂದ ಕೋಪೋದ್ರಿಕ್ತನಾದ ಅಣ್ಣ ಅಜಯ್ ಅಲ್ಲೇ ಇದ್ದ ಕ್ರಿಕೆಟ್ ಬ್ಯಾಟಿನಿಂದ ತಮ್ಮ ಮುಕೇಶ್ ತಲೆಗೆ ಹೊಡೆದಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡ ಮುಕೇಶ್ ಅಲ್ಲೇ ಕುಸಿದುಬಿದ್ದಿದ್ದಾನೆ. ಇದರಿಂದ ಭಯಗೊಂಡ ಆರೋಪಿ ಅಜಯ್ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಗಂಭೀರ ಗಾಯಗೊಂಡ ಮುಕೇಶ್‍ನನ್ನು ಕೂಡಲೇ ಕೆಇಎಂ ಆಸ್ಪತ್ರೆಗೆ ದಾಖಲಿಸಿದ್ದರೂ, ಅದಾಗಲೇ ಆತ ಮೃತಪಟ್ಟಿದ್ದಾನೆ ಅಂತಾ ಪೊಲೀಸರು ತಿಳಿಸಿದ್ದಾರೆ.

    ಘಟನೆಯಿಂದಾಗಿ ಅಜಯ್ ವಿರುದ್ಧ ಪೊಲಿಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಜಯ್ ನನ್ನು ಭಾನುವಾರ ಪೊಲೀಸರು ಬಂಧಿಸಿದ್ದು, ಜುಲೈ 7 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.