Tag: ಅಮ್ಮಾಜಮ್ಮ

  • ತ್ರಿಕೋನ ಫೈಟಲ್ಲಿ ಯಾರ ಮುಡಿಗೆ ‘ಶಿರಾ’ ಕಿರೀಟ?- ನಾಳೆ ಬೆಳಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ

    ತ್ರಿಕೋನ ಫೈಟಲ್ಲಿ ಯಾರ ಮುಡಿಗೆ ‘ಶಿರಾ’ ಕಿರೀಟ?- ನಾಳೆ ಬೆಳಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ

    ತುಮಕೂರು: ಶಿರಾ ಉಪಚುನಾವಣೆಯ ಜಿದ್ದಾಜಿದ್ದಿನ ಅಖಾಡದ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಇತ್ತ ಅಭ್ಯರ್ಥಿಗಳ ಎದೆಯಲ್ಲಿ ಢವಢವ ಶುರುವಾಗಿದೆ. ಮೂರೂ ಪಕ್ಷಗಳ ಅಭ್ಯರ್ಥಿಗಳ ನಡುವೆ ತ್ರಿಕೋನ ಸ್ಪರ್ಧೆ ಇರೋಂದ್ರಿಂದ ಇಂದಿನ ಮತ ಎಣಿಕೆ ಇನ್ನಷ್ಟು ಮತ್ತಷ್ಟು ಕುತೂಹಲ ಕೆರಳಿಸಿದೆ.

    ಕಾಂಗ್ರೆಸ್, ಜೆಡಿಎಸ್‍ಗೆ ಮತ್ತೆ ಅಸ್ತಿತ್ವ ಉಳಿಸಿಕೊಳ್ಳುವ ತವಕವಿದ್ದರೆ, ಬಿಜೆಪಿಗೆ ಖಾತೆ ತೆರೆಯುವ ತವಕ. ಶಿರಾ ಅಖಾಡದಲ್ಲಿ ಸೋಲು ಗೆಲುವಿನ ಲೆಕ್ಕಾಚಾರ. ಭಾರೀ ಕುತೂಹಲ ಮೂಡಿಸಿರೋ ಶಿರಾ ಉಪಚುನಾವಣೆ ಫಲಿತಾಂಶ ಇವತ್ತು ಪ್ರಕಟಗೊಳ್ಳಲಿದೆ. ನವೆಂಬರ್ 3ರಂದು ಮತದಾರರು ಬರೆದ ಭವಿಷ್ಯ ಇಂದು ಬಹಿರಂಗವಾಗಲಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಈ ಮೂರೂ ಪಕ್ಷದ ಅಭ್ಯರ್ಥಿಗಳ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದ್ದು ವಿಜಯದ ಕಿರೀಟ ಯಾರ ತಲೆಯೇರಲಿದೆ ಅನ್ನೋದು ಮಧ್ಯಾಹ್ನದೊಳಗೆ ತಿಳಿಯಲಿದೆ.

    ತುಮಕೂರು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬೆಳಗ್ಗೆ 8 ಗಂಟೆಯಿಂದ ಮತಎಣಿಕೆ ಕಾರ್ಯ ಆರಂಭವಾಗಲಿದೆ. ಶಿರಾ ಉಪಚುನಾವನೆಯ ಕಣದಲ್ಲಿ ಒಟ್ಟು ಅಭ್ಯರ್ಥಿಗಳು 15 ಅದೃಷ್ಟ ಪರೀಕ್ಷೆ ನಡೆಸಿದ್ದು, ಕ್ಷೇತ್ರದಲ್ಲಿ 2,15,694 ಮತದಾರರಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಶೇ.84 ಅಂದರೇ 1,77,645 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. 4,821 ಅಂಚೆ ಮತಗಳು ಚಲಾವಣೆಯಾಗಿದೆ.

    ಇಂದು 24 ಸುತ್ತುಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಒಟ್ಟು 14 ಟೇಬಲ್‍ಗಳಲ್ಲಿ ಮತ ಎಣಿಕೆ ನಡೆಯಲಿದೆ. 330 ಮತಗಟ್ಟೆಗಳ ರಿಸಲ್ಟ್ ಹೊರಬೀಳಲಿದೆ. ಕೋವಿಡ್ ಹಿನ್ನಲೆಯಲ್ಲಿ ಭಾರೀ ಮುಂಜಾಗೃತೆ ವಹಿಸಿದ್ದು ಸಾಮಾಜಿಕ ಅಂತರ, ಸ್ಯಾನಿಟೈಸಿಂಗ್, ಥರ್ಮಲ್ ಸ್ಕಾನಿಂಗ್ ನಡೆಯಲಿದೆ.

    ಚುನಾವಣಾ ಮತ ಎಣಿಕೆಗೆ ಹಿನ್ನೆಲೆ ಬೆಳಗ್ಗೆ 6 ಗಂಟೆಯಿಂದ ನಾಳೆ ಬೆಳಗ್ಗೆ 6ರವರೆಗೂ ಮತ ಎಣಿಕಾ ಕೇಂದ್ರದ ಸುತ್ತ 5 ಕಿ.ಮೀ ವ್ಯಾಪ್ತಿ ಹಾಗೂ ಶಿರಾ ತಾಲೂಕಿನಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇನ್ನು ಕ್ಷೇತ್ರದಲ್ಲಿ ಮತ ಎಣಿಕೆ ಕೇಂದ್ರದ ಸುತ್ತ 3 ಸುತ್ತಿನ ಭದ್ರತೆ. ಮತ ಎಣಿಕೆ ಕೇಂದ್ರದ ಸುತ್ತ ಸೆಂಟ್ರಲ್ ಆರ್ಮಡ್ ಫೋರ್ಸ್ ಕಾರ್ಯನಿರ್ವಹಣೆ. 2 ಕೆಎಸ್‍ಆರ್‍ಪಿ, 3 ಡಿವೈಎಸ್ಪಿ, ಸಿಪಿಐ, ಪಿಎಸ್‍ಐ ಸೇರಿ 200ಕ್ಕೂ ಹೆಚ್ಚು ಸಿಬ್ಬಂದಿಯ ನಿಯೋಜನೆ ಮಾಡಲಾಗಿದೆ.

    ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ, ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಹಾಗೂ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ನಡುವೆ ತ್ರಿಕೋನ ಸ್ಪರ್ಧೆ ಇತ್ತು. ಈ ಹಿನ್ನಲೆಯಲ್ಲಿ ಒಂದೊಂದು ಸುತ್ತಿನಲ್ಲೂ ಒಬ್ಬೊಬ್ಬರು ಮುನ್ನಡೆ ಕಾಯ್ದುಕೊಂಡು ಫಲಿತಾಂಶದಲ್ಲಿ ಕುತೂಹಲ ಹುಟ್ಟುವ ಸಾಧ್ಯತೆ ಇದೆ. 6 ಜಿ.ಪಂ ಕ್ಷೇತ್ರ ಹಾಗೂ ನಗರ ಪ್ರದೇಶ ಸೇರಿ 7 ಕಡೆಗಳಲ್ಲಿ ಯಾರಿಗೆ ಎಷ್ಟು ಮತ ಬೀಳಲಿದೆ ಎಂಬುದು ಕುತೂಹಲ ಕೆರಳಿಸಿದೆ.

    ಈ ನಡುವೆ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಗೆಲುವು ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • ಸಭೆಯಲ್ಲಿ ಕುಸಿದು ಬಿದ್ದ ಶಿರಾ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ

    ಸಭೆಯಲ್ಲಿ ಕುಸಿದು ಬಿದ್ದ ಶಿರಾ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ

    ತುಮಕೂರು: ಶಿರಾ ಉಪಚುನಾವಣೆಯ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅವರು ಸಭೆಯಲ್ಲಿ ಕುಸಿದು ಬಿದ್ದಿದ್ದು, ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

    ಇಂದು ಉಪಚುನಾವಣೆ ಪ್ರಚಾರದ ಅಂಗವಾಗಿ ಜೆಡಿಎಸ್ ದೊಡ್ಡ ಮಟ್ಟದ ಸಮಾರಂಭವನ್ನು ಮಾಡುತ್ತಿದೆ. ಪ್ರಚಾರ ರ್ಯಾಲಿ ಸಮಾವೇಶವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಮ್ಮಾಜಮ್ಮ ಅವರು ಕಾರ್ಯಕ್ರಮದ ಮಧ್ಯದಲ್ಲೇ ಕುಸಿದು ಬಿದ್ದಿದ್ದಾರೆ. ಅವರನ್ನು ತಕ್ಷಣ ಅಲ್ಲಿಂದ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

    ಅಮ್ಮಾಜಮ್ಮ ಅವರು ಶಿರಾ ಕ್ಷೇತ್ರದ ಶಾಸಕರಾಗಿದ್ದ ದಿವಂಗತ ಸತ್ಯನಾರಾಯಣ್ ಅವರ ಪತ್ನಿಯಾಗಿದ್ದಾರೆ. ಸತ್ಯನಾರಾಯಣ್ ಅವರು ನಿಧನದಿಂದ ತೆರವಾದ ಶಾಸಕ ಸ್ಥಾನಕ್ಕೆ ಇಂದು ಉಪಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿ ಜೆಡಿಎಸ್ ಅಮ್ಮಾಜಮ್ಮಗೆ ಟಿಕೆಟ್ ನೀಡಿದೆ. ಈ ಹಿಂದೆ ಟಿಕೆಟ್ ಘೋಷಣೆಯಾದ ದಿನವೇ ಅಮ್ಮಾಜಮ್ಮ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ನಂತರ ಚಿಕಿತ್ಸೆ ಪಡೆದು ಗುಣಮಖರಾಗಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು.

    ಇಂದು ನಡೆಯುತ್ತಿರುವ ಜೆಡಿಎಸ್ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ಅವರ ಪುತ್ರ ನಿಖಿಲ್ ಕುಮಾರಸ್ವಾಮಿ, ಬಂಡೆಪ್ಪ ಕಾಶೆಂಪುರ್, ರಾಜ್ಯಾಧ್ಯಕ್ಷ ಎಚ್.ಕೆ ಕುಮಾರಸ್ವಾಮಿ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು. ಜೊತೆಗೆ ಐಬಿ ಸರ್ಕಲ್‍ನಿಂದ ರಾಮಚಂದ್ರಪ್ಪ ಬಯಲು ಮಂದಿರದವರೆಗೆ ಬೃಹತ್ ರ‍್ಯಾಲಿ ಕೂಡ ಮಾಡಲಾಯ್ತು.

  • ಶಿರಾ ಉಪಚುನಾವಣೆ- ಅಮ್ಮಾಜಮ್ಮಗೆ ಜೆಡಿಎಸ್ ಟಿಕೆಟ್

    ಶಿರಾ ಉಪಚುನಾವಣೆ- ಅಮ್ಮಾಜಮ್ಮಗೆ ಜೆಡಿಎಸ್ ಟಿಕೆಟ್

    ಬೆಂಗಳೂರು: ಶಿರಾ ಉಪಚುನಾವಣೆ ಕ್ಷೇತ್ರ ರಂಗೇರುತ್ತಿದ್ದು, ಜೆಡಿಎಸ್ ಪಕ್ಷ ತನ್ನ ಅಭ್ಯರ್ಥಿಯನ್ನು ಫೈನಲ್ ಮಾಡಿ ದಿವಂಗತ ಮಾಜಿ ಶಾಸಕ ಸತ್ಯನಾರಾಯಣ್ ಅವರ ಪತ್ನಿ ಅಮ್ಮಾಜಮ್ಮ ಅವರಿಗೆ ಟಿಕೆಟ್ ಘೋಷಿಸಿದೆ.

    ನವೆಂಬರ್ 3 ರಂದು ತುಮಕೂರಿನ ಶಿರಾ ಉಪಚುನಾವಣೆ ನಡೆಯಲಿದ್ದು, ಜೆಡಿಎಸ್ ವರಿಷ್ಠ ಎಚ್.ಡಿ.ದೇವೆಗೌಡ ಅವರು ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದಾರೆ. ಜೆಡಿಎಸ್ ಶಾಸಕ ಬಿ ಸತ್ಯನಾರಾಯಣ ಅವರ ನಿಧನದಿಂದಾಗಿ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದೆ. ಈಗಾಗಲೇ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಯನ್ನ ಈಗಾಗಲೇ ಫೈನಲ್ ಮಾಡಿದೆ.

    ದಿವಂಗತ ಮಾಜಿ ಶಾಸಕ ಸತ್ಯನಾರಾಯಣ್ ಅವರ ಪತ್ನಿ ಅಮ್ಮಾಜಮ್ಮ ಅವರಿಗೆ ಜೆಡಿಎಸ್ ಟಿಕೆಟ್ ನೀಡುವ ಮೂಲಕ ಗೆಲುವಿನ ಲೆಕ್ಕಾಚಾರವನ್ನು ಮಾಡಿದೆ. ಈ ಮೊದಲು ಸತ್ಯನಾರಾಯಣ್ ಅವರ ಮಗ ಸತ್ಯ ಪ್ರಕಾಶ್‍ಗೆ ಟಿಕೆಟ್ ನೀಡುತ್ತಾರೆ ಎನ್ನಲಾಗಿತ್ತು.

    ಕಳೆದ ಚುನಾವಣೆಯಲ್ಲಿ ಗೆಲುವು ಪಡೆದಿದ್ದ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಭಾರೀ ಪೈಪೋಟಿ ನಡೆದಿದ್ದರೇ, ಬಿಜೆಪಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಇತ್ತ ಶಿರಾ ಕ್ಷೇತ್ರದೊಂದಿಗೆ ಆರ್.ಆರ್ ನಗರ ಉಪಚುನಾವಣೆಯೂ ನ.3 ರಂದು ನಡೆಯಲಿದ್ದು, ಜೆಡಿಎಸ್ ಪಕ್ಷ ಇನ್ನಷ್ಟೇ ಅಭ್ಯರ್ಥಿಯನ್ನು ಘೋಷಣೆ ಮಾಡಬೇಕಿದೆ.