Tag: ಅಮೇಥಿ

  • ರಾಹುಲ್ ಗಾಂಧಿ ಅಸಮರ್ಥ ಸಂಸದ, ಈಗ ನಾಟಕದ ಮುಖವಾಡ ಕಳಚಿದೆ – ಸ್ಮೃತಿ ಇರಾನಿ

    ರಾಹುಲ್ ಗಾಂಧಿ ಅಸಮರ್ಥ ಸಂಸದ, ಈಗ ನಾಟಕದ ಮುಖವಾಡ ಕಳಚಿದೆ – ಸ್ಮೃತಿ ಇರಾನಿ

    ಲಕ್ನೋ: ಕೇಂದ್ರ ಸಚಿವೆ ಸ್ಮೃತಿ ಇರಾನಿ, ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ನಿಕಮ್ಮೆ ಸಂಸಾದ್(ಅಸಮರ್ಥ ಸಂಸದ) ಎಂದು ಹೇಳಿ ವ್ಯಂಗ್ಯವಾಡಿದ್ದಾರೆ.

    ಕೇರಳ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಾಹುಲ್ ಗಾಂಧಿ ನೀಡಿದ ಹೇಳಿಕೆ ವಿಚಾರವಾಗಿ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ ಸ್ಮೃತಿ ಇರಾನಿ, ಉತ್ತರ ಪ್ರದೇಶದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಸೋತ ಬಳಿಕ ಕೇರಳದಲ್ಲಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಹಲವಾರು ವರ್ಷಗಳಿಂದ ರಾಹುಲ್ ಧರಿಸಿದ್ದ ನಾಟಕದ ಮುಖವಾಡ ಇದೀಗ ಕಳಚಿ ಬಿದ್ದಿದೆ ಹಾಗೂ ಕಾಂಗ್ರೆಸ್ಸಿಗರ ಅಸಲಿ ಬಣ್ಣ ಬಯಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಮಂಗಳವಾರ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ನಾನು 15 ವರ್ಷ ಉತ್ತರ ಭಾರತದಲ್ಲಿ ಸಂಸದನಾಗಿ ಬೇರೆ ರೀತಿಯ ರಾಜಕೀಯಕ್ಕೆ ಒಗ್ಗೂಡಿಕೊಂಡಿದ್ದೆ. ಆದರೆ ಕೇರಳ ರಾಜಕೀಯ ನನ್ನ ಉತ್ಸಾಹ ಹೆಚ್ಚಿಸಿದೆ ಎಂದು ಹೇಳಿದ್ದರು. ಈ ವಿಚಾರವನ್ನು ಇಟ್ಟುಕೊಂಡು ಈಗ ಬಿಜೆಪಿ ನಾಯಕರು ರಾಹುಲ್ ಗಾಂಧಿ ಉತ್ತರಪ್ರದೇಶವನ್ನು ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.

    ಅಮೇಥಿ ಜನರು ಅವರಿಗೆ ಎಲ್ಲ ರೀತಿಯ ಅವಕಾಶವನ್ನು ನೀಡಿದರೂ ಕೂಡ, ಅವರು ಅಮೇಥಿ ಲೋಕಸಭಾ ಸ್ಥಾನ ಉಳಿಸಿಕೊಳ್ಳಲು ಕೇರಳಕ್ಕೆ ಓಡಿ ಹೋದರು. ಹಲವು ವರ್ಷಗಳಿಂದ ಅಮೇಥಿ ಜನತೆ ನಿಕಮ್ಮೆ(ಅಸಮರ್ಥ) ಸಂಸಾದ್‍ನನ್ನು ಸಹಿಸಿಕೊಂಡಿದ್ದರು. ಆದರೆ ಇದೀಗ ಉತ್ತರ ಭಾರತದಲ್ಲಿ ರಾಹುಲ್ ಗೆಲ್ಲಲು ವಿಫಲವಾದ ಬಳಿಕ ರಾಹುಲ್ ಅಮೇಥಿ ಜನತೆಗೆ ಅವಮಾನ ಮಾಡಿದ್ದಾರೆ ಎಂದು ಸ್ಮೃತಿ ಇರಾನಿ ಕಿಡಿ ಕಾರಿದರು.

    ಇಷ್ಟು ವರ್ಷ ಅಮೇಥಿ ಜನತೆ ರಾಹುಲ್ ಗಾಂಧಿ ಮತ್ತು ಅವರ ಕುಟುಂಬದವರಿಗೆ ಮತವನ್ನು ನೀಡಿ ಗೆಲ್ಲಿಸಿದ್ದಾರೆ. ಹಾಗಾಗಿ ಅಮೇಥಿ ಬಗ್ಗೆ ಮಾತನಾಡಿದರೆ ಅವರ ಕುಟುಂಬದವರು ಸಹಿಸುವುದಿಲ್ಲ. ಆದರೂ ರಾಹುಲ್ ಗಾಂಧಿ ಹೇಳಿಕೆ ವಿಚಾರವಾಗಿ ಪ್ರಿಯಾಂಕ ಹಾಗೂ ಸೋನಿಯಾ ಗಾಂಧಿ ಯಾಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.

  • ರೈಲು ಬರುತ್ತಿದ್ದಂತೆ ಕೈ-ಕೈ ಹಿಡಿದುಕೊಂಡು ಜಿಗಿದ ಜೋಡಿ

    ರೈಲು ಬರುತ್ತಿದ್ದಂತೆ ಕೈ-ಕೈ ಹಿಡಿದುಕೊಂಡು ಜಿಗಿದ ಜೋಡಿ

    -ಬೈಕ್ ದಾಖಲಾತಿಗಳಿಂದ ಯುವಕನ ಗುರತು ಪತ್ತೆ

    ಲಕ್ನೋ: ಯುವ ಪ್ರೇಮಿಗಳು ಕೈ-ಕೈ ಹಿಡಿದುಕೊಂಡು ಚಲಿಸುತ್ತಿದ್ದ ರೈಲಿನ ಮುಂದೆ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅಮೇಥಿ ಜಿಲ್ಲೆಯ ದೇವಿಪಾಟ್ನಾ ಎಂಬಲ್ಲಿ ನಡೆದಿದೆ. ಇಂದು ಬೆಳಗ್ಗೆ ಯುವಕ-ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಘಟನಾ ಸ್ಥಳದ ಸಮೀಪದಲ್ಲಿ ಬೈಕ್ ಪತ್ತೆಯಾಗಿದೆ. ಅದರಲ್ಲಿ ಕೆಲ ದಾಖಲೆಗಳಿಂದ ಯುವಕನ ಗುರುತು ಪತ್ತೆಯಾಗಿದೆ. ಮೃತ ಯುವಕನನ್ನು ಸಂಗ್ರಮಾಪುರದ ಅರ್ಜುನ್ ಕುಮಾರ್ ಎಂದು ಗುರುತಿಸಲಾಗಿದೆ. ಯುವತಿಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಪ್ರೇಮ ವಿಚಾರಕ್ಕೆ ಸಂಬಂಧಿಸಿದಂತೆ ಜೋಡಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ರೈಲ್ವೇ ಪೊಲೀಸರು ಶಂಕಿಸಿದ್ದಾರೆ.

    ಬೆಳಗ್ಗೆ ಗೌರಿಗಂಜ್ ನಿಂದ ಪ್ರತಾಪಗಢಕ್ಕೆ ಗೂಡ್ಸ್ ರೈಲು ಹೊರಟಿತ್ತು. ರೈಲು ಬರೋವರೆಗೂ ಟ್ರ್ಯಾಕ್ ಪಕ್ಕವೇ ನಿಂತಿದ್ದ ಜೋಡಿ, ಟ್ರೈನ್ ಸಮೀಪಿಸುತ್ತಿದ್ದಂತೆ ಕೈ-ಕೈ ಹಿಡಿದುಕೊಂಡು ಜಿಗಿದರು ಎಂದು ಲೋಕೋಪೈಲಟ್ ಮಾಹಿತಿ ನೀಡಿದ್ದಾರೆ. ಅಮೇಥಿ ರೈಲ್ವೇ ನಿಲ್ದಾಣದ ಸಿಬ್ಬಂದಿಗೆ ಲೋಕೋಪೈಲಟ್ ಮಾಹಿತಿ ನೀಡಿದ್ದಾರೆ.

  • ಬೆಂಬಲಿಗನ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ಸ್ಮೃತಿ ಇರಾನಿ  – ವಿಡಿಯೋ ನೋಡಿ

    ಬೆಂಬಲಿಗನ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ಸ್ಮೃತಿ ಇರಾನಿ  – ವಿಡಿಯೋ ನೋಡಿ

    ಲಕ್ನೋ: ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದ ಬೆಂಬಲಿಗ ಸುರೇಂದ್ರ ಸಿಂಗ್ ಅವರ ಪಾರ್ಥಿವ ಶರೀರಕ್ಕೆ ಸಂಸದೆ ಸ್ಮೃತಿ ಇರಾನಿ  ಹೆಗಲು ಕೊಟ್ಟಿದ್ದಾರೆ.

    ಅಮೇಥಿಯ ಬರೌಲಿಯಾ ಗ್ರಾಮದಲ್ಲಿ ಸುರೇಂದ್ರ ಸಿಂಗ್ ಅವರ ಪಾರ್ಥಿವ ಶರೀರವನ್ನು ಮೆರವಣಿಗೆ ಮಾಡಲಾಯಿತು. ಈ ವೇಳೆ ಸಂಸದೆ ಸ್ಮೃತಿ ಇರಾನಿ  ಅವರು ಶವಕ್ಕೆ ಹೆಗಲು ಕೊಟ್ಟು ಬಹು ದೂರದವರೆಗೆ ನಡೆದರು. ಸುರೇಂದ್ರ ಸಿಂಗ್ ಅವರ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.

    ಕೆಲ ದುಷ್ಕರ್ಮಿಗಳು ಸುರೇಂದ್ರ ಸಿಂಗ್ ಅವರ ಮೇಲೆ ಶನಿವಾರ ರಾತ್ರಿ ಗುಂಡಿನ ದಾಳಿ ನಡೆದಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಆಸ್ಪತ್ರೆ ದಾಖಲು ಮಾಡುವ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಘಟನೆ ಸಂಬಂಧ ಅನುಮಾನದ ಮೇರೆಗೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ. ಆದರೆ ಹತ್ಯೆ ಮಾಡಲು ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ. ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿಯೇ ಕೊಲೆ ಮಾಡಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸುರೇಂದ್ರ ಸಿಂಗ್ ಅಮೇಥಿಯ ಬರೌಲಿಯಾ ಗ್ರಾಮದವರಾಗಿದ್ದು, ಈ ಗ್ರಾಮವನ್ನು 2015 ರಲ್ಲಿ ಮನೋಹರ್ ಪರಿಕ್ಕರ್ ಅವರು ಸಂಸದರ ಆದರ್ಶ ಗ್ರಾಮ ಯೋಜನೆಯ ಅಡಿ ದತ್ತು ಪಡೆದಿದ್ದರು. ಆದರೆ ಬಿಜೆಪಿ ಪರ ಪ್ರಚಾರ ನಡೆಸಲು ಸುರೇಂದ್ರ ಅವರು ಹಳ್ಳಿಯನ್ನು ಬಿಟ್ಟು ಬೇರೆಡೆ ನೆಲೆಸಿದ್ದರು. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸ್ಮೃತಿ ಇರಾನಿ  ಪರ ನಿರಂತರವಾಗಿ ಪ್ರಚಾರ ನಡೆಸಿ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು. ಪ್ರಚಾರ ಸಭೆಯ ವೇಳೆ ಸ್ಮೃತಿ ಇರಾನಿ  ಅವರು ಸುರೇಂದ್ರ ಅವರ ಕಾರ್ಯವನ್ನು ಹಾಡಿಹೊಗಳಿದ್ದರು.

    ಕಳೆದ ಮೂರು ದಶಕಗಳಲ್ಲಿ 1998ರಲ್ಲಿ ಹೊರತು ಪಡಿಸಿ ಕಾಂಗ್ರೆಸ್ ಪಕ್ಷ ಅಮೇಥಿಯಲ್ಲಿ ಸೋಲುಂಡಿರಲಿಲ್ಲ. 2004ರ ಬಳಿಕ ರಾಹುಲ್ ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಹುಲ್ 55 ಸಾವಿರ ಮತಗಳ ಅಂತರದಲ್ಲಿ ಸೋಲು ಕಂಡಿದ್ದರು. ರಾಹುಲ್ ಅವರ ಈ ಸೋಲು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತೀವ್ರಮುಖ ಭಂಗ ಉಂಟು ಮಾಡಿತ್ತು.

  • ಗೆಲುವಿನ ಬೆನ್ನಲ್ಲೇ ಸ್ಮೃತಿ ಇರಾನಿ ಬೆಂಬಲಿಗನ ಕಗ್ಗೊಲೆ

    ಗೆಲುವಿನ ಬೆನ್ನಲ್ಲೇ ಸ್ಮೃತಿ ಇರಾನಿ ಬೆಂಬಲಿಗನ ಕಗ್ಗೊಲೆ

    ಅಮೇಥಿ: ಲೋಕಸಭಾ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ಭರ್ಜರಿ ಬಹುಮತದಿಂದ ಗೆಲುವು ಪಡೆದಿದ್ದ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಬೆಂಬಲಿಗನನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ.

    ಸುರೇಂದ್ರ ಸಿಂಗ್ ಹತ್ಯೆಯಾದ ಬಿಜೆಪಿ ಮುಖಂಡರಾಗಿದ್ದು, ಶನಿವಾರ ರಾತ್ರಿ ಘಟನೆ ನಡೆದಿದೆ. ಕೆಲ ದುಷ್ಕರ್ಮಿಗಳು ಸುರೇಂದ್ರ ಅವರ ಮನೆಯ ಬಳಿಯೇ ಗುಂಡಿನ ದಾಳಿ ನಡೆಸಿದ್ದು, ಕೂಡಲೇ ಅವರನ್ನು ಆಸ್ಪತ್ರೆ ದಾಖಲು ಮಾಡುವ ಪ್ರಯತ್ನ ನಡೆಸಿದರು ಯಾವುದೇ ಪ್ರಯೋಜನ ಆಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಘಟನೆ ಸಂಬಂಧ ಅನುಮಾನದ ಮೇರೆಗೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ. ಆದರೆ ಹತ್ಯೆ ಮಾಡಲು ಕಾರಣ ಏನೆಂಬುವುದು ತಿಳಿದು ಬಂದಿಲ್ಲ. ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿಯೇ ಕೊಲೆ ಮಾಡಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸುರೇಂದ್ರ ಸಿಂಗ್ ಅಮೇಥಿಯ ಬರೌಲಿಯಾ ಗ್ರಾಮದವರಾಗಿದ್ದು, ಈ ಗ್ರಾಮವನ್ನು 2015 ರಲ್ಲಿ ಮನೋಹರ್ ಪರಿಕರ್ ಅವರು ಸಂಸದರ ಆದರ್ಶ ಗ್ರಾಮ ಯೋಜನೆಯ ಅಡಿ ದತ್ತು ಪಡೆದಿದ್ದರು. ಆದರೆ ಬಿಜೆಪಿ ಪರ ಪ್ರಚಾರ ನಡೆಸಲು ಸುರೇಂದ್ರ ಅವರು ಹಳ್ಳಿಯನ್ನ ಬಿಟ್ಟು ಬೇರೆಡೆ ನೆಲೆಸಿದ್ದರು. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸ್ಮೃತಿ ಇರಾನಿ ಪರ ನಿರಂತರವಾಗಿ ಪ್ರಚಾರ ನಡೆಸಿ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು. ಪ್ರಚಾರ ಸಭೆಯ ವೇಳೆ ಸ್ಮೃತಿ ಇರಾನಿ ಅವರು ಸುರೇಂದ್ರ ಅವರ ಕಾರ್ಯವನ್ನು ಹಾಡಿಹೊಗಳಿದ್ದರು. ಸದ್ಯ ಅವರ ಹತ್ಯೆ ಹಿನ್ನೆಲೆಯಲ್ಲಿ ಸುರೇಂದ್ರ ಅವರ ಕುಟುಂಬವನ್ನು ಸಂಜೆ ವೇಳೆಗೆ ಭೇಟಿ ಮಾಡಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಕಳೆದ ಮೂರು ದಶಕಗಳಲ್ಲಿ 1998ರಲ್ಲಿ ಹೊರತು ಪಡಿಸಿ ಕಾಂಗ್ರೆಸ್ ಪಕ್ಷ ಅಮೇಥಿಯಲ್ಲಿ ಸೋಲುಂಡಿರಲಿಲ್ಲ. 2004ರ ಬಳಿಕ ರಾಹುಲ್ ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಹುಲ್ 55 ಸಾವಿರ ಮತಗಳ ಅಂತರದಲ್ಲಿ ಸೋಲುಂಡಿದ್ದರು. ರಾಹುಲ್‍ರ ಈ ಸೋಲು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತೀವ್ರಮುಖ ಭಂಗ ಉಂಟು ಮಾಡಿತ್ತು.

  • ಅಮೇಥಿಯಲ್ಲಿ ರಾಹುಲ್ ಗಾಂಧಿಗೆ ಭಾರೀ ಹಿನ್ನಡೆ

    ಅಮೇಥಿಯಲ್ಲಿ ರಾಹುಲ್ ಗಾಂಧಿಗೆ ಭಾರೀ ಹಿನ್ನಡೆ

    ನವದೆಹಲಿ: ಇಂದು ಲೋಕಸಮರದ ಮಹಾತೀರ್ಪಿನ ಹಿನ್ನೆಲೆ ಮತ ಏಣಿಕೆ ಪ್ರಕ್ರಿಯೆ ಆರಂಭವಾಗಿದ್ದು, ಪ್ರಧಾನಿ ಅಭ್ಯರ್ಥಿಯಾಗಿರುವ ಕೆಪಿಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಅಮೇಥಿಯಲ್ಲಿ ಭಾರಿ ಹಿನ್ನಡೆಯಾಗಿದೆ.

    ರಾಹುಲ್ ಗಾಂಧಿಯವರು ಅಮೆಥಿ ಹಾಗೂ ವಯನಾಡು ಎರಡು ಕ್ಷೇತ್ರದಿಂದ ಲೋಕಸಭಾ ಕಣಕ್ಕೆ ಇಳಿದಿದ್ದಾರೆ. ಬಿಜೆಪಿ ಅಭ್ಯರ್ಥಿ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ನಿಂತಿದ್ದ ಅಮೇಥಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿಗೆ ಆರಂಭಿಕ ಸುತ್ತುಗಳಲ್ಲಿ 5 ಸಾವಿರ ಮತಗಳಿಂದ ಹಿನ್ನಡೆಯಲ್ಲಿದ್ದಾರೆ.

    ಕೇರಳದ ವಯನಾಡಿನಲ್ಲಿ ರಾಹುಲ್ ಗಾಂಧಿ ಮುನ್ನಡೆಯಲ್ಲಿದ್ದಾರೆ. ಉತ್ತರ ಪ್ರದೇಶದ ರಾಯ್‍ಬರೇಲಿಯಲ್ಲಿ ಕಣಕ್ಕೆ ಇಳಿದಿರುವ ಸೋನಿಯಾ ಗಾಂಧಿ ಮುನ್ನಡೆಯಲಿದ್ದಾರೆ.

  • ರಾಹುಲ್, ಸೋನಿಯಾ ಪರ ಮತ ಯಾಚಿಸಿದ ಮಾಯಾವತಿ!

    ರಾಹುಲ್, ಸೋನಿಯಾ ಪರ ಮತ ಯಾಚಿಸಿದ ಮಾಯಾವತಿ!

    ಲಕ್ನೋ: ಉತ್ತರ ಪ್ರದೇಶದ ಅಮೇಥಿ ಹಾಗೂ ರಾಯ್‍ಬರೇಲಿ ಲೋಕಸಭಾ ಕ್ಷೇತ್ರದಿಂದ ಯಾಕೆ ಎಸ್‍ಪಿ-ಬಿಎಸ್‍ಪಿ ಮೈತ್ರಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿಲ್ಲ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‍ಪಿ) ನಾಯಕಿ ಮಾಯಾವತಿ ಸ್ಪಷ್ಟನೆ ನೀಡಿದ್ದಾರೆ.

    ಖಾಸಗಿ ಸುದ್ದಿ ಸಂಸ್ಥೆಯ ಜೊತೆಗೆ ಮಾತನಾಡಿರುವ ಮಾಯಾವತಿ ಅವರು, ದೇಶದ ಜನಹಿತಕ್ಕಾಗಿ ಹಾಗೂ ಬಿಜೆಪಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್ ) ಶಕ್ತಿಯನ್ನು ಕುಂದಿಸಲು ಅಮೇಥಿ ಹಾಗೂ ರಾಯ್‍ಬರೇಲಿ ಕ್ಷೇತ್ರವನ್ನು ಕಾಂಗ್ರೆಸ್‍ಗೆ ಬಿಟ್ಟುಕೊಟ್ಟಿದ್ದೇವೆ. ಈ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸ್ವಕ್ಷೇತ್ರದಿಂದ ಜಯಗಳಿಸಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

    ಒಂದು ವೇಳೆ ನಾವು ಅಮೇಥಿ ಹಾಗೂ ರಾಯ್‍ಬರೇಲಿ ಕ್ಷೇತ್ರದಿಂದ ಎಸ್‍ಪಿ-ಬಿಎಸ್‍ಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ ಅವರು ಎರಡು ಕ್ಷೇತ್ರಗಳ ಪ್ರಚಾರದಲ್ಲಿಯೇ ಕಳೆದುಹೋಗುತ್ತಿದ್ದರು. ಉತ್ತರ ಪ್ರದೇಶ ಬಿಟ್ಟು ಬೇರೆ ರಾಜ್ಯಗಳಲ್ಲಿ ಕಾಂಗ್ರೆಸ್ ನಾಯಕರ ಗೈರು ಬಿಜೆಪಿಗೆ ದೊಡ್ಡ ಅವಕಾಶ ನೀಡುತ್ತಿತ್ತು. ಹೀಗಾಗಿ ಮುಂದಾಲೋಚನೆಯಿಂದ ಉತ್ತರ ಪ್ರದೇಶದ ಎರಡು ಕ್ಷೇತ್ರವನ್ನು ಕಾಂಗ್ರೆಸ್‍ಗೆ ಬಿಟ್ಟುಕೊಟ್ಟಿದ್ದೇವೆ ಎಂದು ಹೇಳಿದರು.

    ಅಮೇಥಿ ಹಾಗೂ ರಾಯ್‍ಬರೇಲಿ ಲೋಕಸಭಾ ಕ್ಷೇತ್ರಗಳಲ್ಲಿ ಎಸ್‍ಪಿ-ಬಿಎಸ್‍ಪಿ ಮೈತ್ರಿಯ ಪ್ರತಿಯೊಂದು ಮತವೂ ಕಾಂಗ್ರೆಸ್‍ಗೆ ಸಿಗುತ್ತವೆ ಎನ್ನುವ ವಿಶ್ವಾಸ ನನಗಿದೆ ಎಂದು ಮಾಯಾವತಿ ತಿಳಿಸಿದರು.

    ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರಗಳಿದ್ದು, ಎಸ್‍ಪಿ-ಬಿಎಸ್‍ಪಿ ಮೈತ್ರಿ ಮಾಡಿಕೊಂಡಿವೆ. ಈ ಮೂಲಕ ಎಸ್‍ಪಿ 37 ಹಾಗೂ ಬಿಎಸ್‍ಪಿ 38 ಕ್ಷೇತ್ರಗಳನ್ನು ಹಂಚಿಕೊಂಡು ಸ್ಪರ್ಧೆ ಮಾಡಿವೆ. ಉಳಿದ ಐದು ಕ್ಷೇತ್ರಗಳ ಪೈಕಿ ಮೂರು ಪಕ್ಷೇತರ ಅಭ್ಯರ್ಥಿಗಳಿಗೆ ಹಾಗೂ ಎರಡು ಕಾಂಗ್ರೆಸ್‍ಗೆ ಬಿಟ್ಟುಕೊಡಲಾಗಿದೆ. ಉತ್ತರ ಪ್ರದೇಶದ ಅಮೇಥಿ, ರಾಯ್‍ಬರೇಲಿ ಲಕ್ನೋ, ಘಾಜಿಯಾಬಾದ್ ಸೇರಿದಂತೆ 14 ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದೆ. ಈ ಮೂಲಕ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ.

  • ರಾಹುಲ್ ಪೌರತ್ವ ವಿವಾದ – ‘ಬಕ್ವಾಸ್’ ಎಂದ ಪ್ರಿಯಾಂಕ ಗಾಂಧಿ

    ರಾಹುಲ್ ಪೌರತ್ವ ವಿವಾದ – ‘ಬಕ್ವಾಸ್’ ಎಂದ ಪ್ರಿಯಾಂಕ ಗಾಂಧಿ

    ಅಮೇಥಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪೌರತ್ವದ ವಿವಾದ ಕುರಿತು ಕೇಂದ್ರ ಗೃಹ ಇಲಾಖೆ ನೀಡಿರುವ ನೋಟಿಸ್ ಬಗ್ಗೆ ಪ್ರಿಯಾಂಕ ಗಾಂಧಿ ಕಿಡಿಕಾರಿದ್ದಾರೆ.

    ಸಹೋದರ ರಾಹುಲ್ ಪರ ಅಮೇಥಿಯಲ್ಲಿ ಪ್ರಚಾರ ನಡೆಸುತ್ತಿರುವ ಪ್ರಿಯಾಂಕ ಗಾಂಧಿ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಇಡೀ ದೇಶಕ್ಕೆ ರಾಹುಲ್ ಗಾಂಧಿ ಹಿಂದೂಸ್ತಾನಿ ಎಂಬುವುದು ಗೊತ್ತಿದೆ. ರಾಹುಲ್ ಭಾರತದಲ್ಲಿ ಹುಟ್ಟಿ ಬೆಳೆದಿದ್ದಾರೆ ಎಂಬುವುದು ತಿಳಿದಿದೆ. ಇಂತಹ ನಡೆ ಎಲ್ಲವೂ ‘ಬಕ್ವಾಸ್’ ಎಂದು ದೂರಿದರು.

    ರಾಹುಲ್ ಪೌರತ್ವ ವಿವಾದ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು ನೀಡಿರುವ ದೂರನ್ನು ಸ್ವೀಕರಿಸಿ ಕೇಂದ್ರ ಗೃಹ ಇಲಾಖೆ ರಾಹುಲ್ ಗಾಂಧಿ ಅವರಿಗೆ ನೋಟಿಸ್ ಜಾರಿ ಮಾಡಿದೆ. ಈ ನೋಟಿಸ್‍ಗೆ 15 ದಿನಗಳ ಒಳಗಾಗಿ ಪ್ರತಿಕ್ರಿಯೆ ನೀಡಬೇಕು ಎಂದು ಸೂಚಿಸಿದೆ.

    ರಾಹುಲ್ ಗಾಂಧಿ ಅವರು ಇಂಗ್ಲೆಂಡ್ ವಿಶ್ವವಿದ್ಯಾಲಯದ ಶೈಕ್ಷಣಿಕ ಪ್ರಮಾಣ ಪತ್ರ ಹಾಗೂ ಯುಕೆ ಕಂಪನಿಯ ಪ್ರಮಾಣ ಪತ್ರದಲ್ಲಿ ಬ್ರಿಟಿಷ್ ಪೌರತ್ವವನ್ನು ಪಡೆದಿದ್ದಾರೆ. ಭಾರತೀಯರಲ್ಲದವರಿಗೆ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶವಿಲ್ಲ. ಆದ್ದರಿಂದ ಅವರ ನಾಮಪತ್ರವನ್ನು ಪ್ರಜಾಪ್ರತಿನಿಧಿ ಕಾಯ್ದೆ ಅಡಿ ಪರಿಶೀಲನೆ ನಡೆಸಬೇಕು ಎಂದು ದೂರಿನಲ್ಲಿ ಸುಬ್ರಮಣಿಯನ್ ಸ್ವಾಮಿ ಮನವಿ ಮಾಡಿದ್ದರು. ಇದನ್ನು ಓದಿ: ರಾಹುಲ್ ಗಾಂಧಿ ‘ಪೌರತ್ವ ವಿವಾದ’ – ವಿವರಣೆ ಕೇಳಿ ಗೃಹ ಇಲಾಖೆಯಿಂದ ನೋಟಿಸ್

  • ಅಮೇಥಿಯಲ್ಲಿ ರಾಹುಲ್ ಗಾಂಧಿಗೆ ಹಿನ್ನಡೆಯಾದ್ರೆ ರಾಜಕೀಯ ನಿವೃತ್ತಿ- ನವಜೋತ್ ಸಿಂಗ್ ಸಿಧು

    ಅಮೇಥಿಯಲ್ಲಿ ರಾಹುಲ್ ಗಾಂಧಿಗೆ ಹಿನ್ನಡೆಯಾದ್ರೆ ರಾಜಕೀಯ ನಿವೃತ್ತಿ- ನವಜೋತ್ ಸಿಂಗ್ ಸಿಧು

    ಲಕ್ನೋ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿಗೆ ಹಿನ್ನಡೆಯಾದ್ರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಮಾಜಿ ಕ್ರಿಕೆಟಿಗ, ಸಚಿವ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜನರು ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿಯವರಿಂದ ರಾಷ್ಟ್ರೀಯತೆಯ ಪಾಠವನ್ನು ಕಲಿಯಬೇಕು ಎಂದು ತಿಳಿಸಿದ್ದಾರೆ.

    70 ವರ್ಷದ ಕಾಂಗ್ರೆಸ್ ಆಡಳಿತದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ಬಿಜೆಪಿ ಪದೇ ಪದೇ ಹೇಳಿಕೆ ನೀಡುತ್ತಿರುವುದರ ವಿರುದ್ಧ ಸಿಂಗ್ ಹರಿಹಾಯ್ದರು. ಅಲ್ಲದೆ ಒಂದು ಚಿಕ್ಕ ಸೂಜಿಯಿಂದ ಹಿಡಿದು ದೊಡ್ಡ ವಿಮಾನದವರೆಗಿನ ಅಭಿವೃದ್ಧಿಯನ್ನು ಕಾಂಗ್ರೆಸ್ ಅವಧಿಯಲ್ಲೇ ಮಾಡಲಾಗಿತ್ತು ಎಂದು ತಿರುಗೇಟು ನೀಡಿದರು.

    ಇದೇ ವೇಳೆ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರ ಹತ್ಯೆಯ ಬಳಿಕ ಕಾಂಗ್ರೆಸ್ಸನ್ನು ಮುನ್ನಡೆಸಿದ ಸೋನಿಯಾ ಗಾಂಧಿಯವರನ್ನು ಹೊಗಳಿದ ಸಿಧು, ಸೋನಿಯಾ ಗಾಂಧಿಯವರಿಂದಾಗಿಯೇ ಕೇಂದ್ರದಲ್ಲಿ ಕಾಂಗ್ರೆಸ್ ಮತ್ತೆ 10 ವರ್ಷ (2004-2014) ರವರೆಗೆ ಆಡಳಿತ ನಡೆಸಲು ಸಾಧ್ಯವಾಯಿತು ಎಂದರು.

    ರಫೇಲ್ ಯುದ್ಧ ವಿಮಾನ ವಿವಾದವೇ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿಯವರ ಸೋಲಿಗೆ ಕಾರಣವಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ನವಜೋತ್ ಸಿಂಗ್ ಅವರು ಮೊದಲು ಬಿಜೆಪಿಯಲ್ಲಿದ್ದು, ಪಂಜಾಬ್ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದರು. ಇದೀಗ ಅವರು ಪಂಜಾಬ್ ಸಚಿವರಾಗಿದ್ದಾರೆ.

  • ಸ್ಮೃತಿ ಇರಾನಿ ಮತದಾರರಿಗೆ ಸೀರೆ, ಶೂ ನೀಡುತ್ತಿದ್ದಾರೆ: ಪ್ರಿಯಾಂಕ ಆರೋಪ

    ಸ್ಮೃತಿ ಇರಾನಿ ಮತದಾರರಿಗೆ ಸೀರೆ, ಶೂ ನೀಡುತ್ತಿದ್ದಾರೆ: ಪ್ರಿಯಾಂಕ ಆರೋಪ

    ಲಕ್ನೋ: ಅಮೇಥಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಅವರು ಮತರಾರಿಗೆ ಹಣ, ಸೀರೆ ಹಾಗೂ ಶೂ ಹಂಚುತ್ತಿದ್ದಾರೆ ಎಂದು ಪೂರ್ವ ಉತ್ತರ ಪ್ರದೇಶದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ದೂರಿದ್ದಾರೆ.

    ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸ್ಮೃತಿ ಇರಾನಿಯವರು ತಮ್ಮ ಕ್ಷೇತ್ರದಲ್ಲಿ ಮಾಧ್ಯಮಗಳ ಮುಂದೆಯೇ ಮತದಾರರಿಗೆ ಆಮಿಷ ಒಡ್ಡುತ್ತಿದ್ದಾರೆ, ಇದು ತಪ್ಪು. ಅಮೇಥಿಯ ಜನರು ಯಾರ ಬಳಿಯೂ ಭಿಕ್ಷೆ ಬೇಡುವುದಿಲ್ಲ. ರಾಯ್‍ಬರೇಲಿ ಹಾಗೂ ಅಮೇಥಿಗೆ ನಾನು ಸಾಕಷ್ಟು ಬಾರಿ ಬಂದಿದ್ದೇನೆ. ಇಲ್ಲಿನ ಜನರ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ತಿಳಿಸಿದರು. ಇದನ್ನೂ ಓದಿ : ಅಣ್ಣ ತಂಗಿಯರ ಅನುಬಂಧಕ್ಕೆ ತಾಜಾ ಉದಾಹರಣೆಯಾದ್ರು ರಾಹುಲ್-ಪ್ರಿಯಾಂಕ ಗಾಂಧಿ

    ಬಿಜೆಪಿಯವರು ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಜನರನ್ನು ಹತ್ತಿಕ್ಕುವ ಕೆಲಸವನ್ನು ಮಾಡುತ್ತಿದ್ದಾರೆ. ಇಲ್ಲಿ ಶಿಕ್ಷಣ, ಉದ್ಯೋಗ ಹಾಗೂ ಆರೋಗ್ಯ ಸಮಸ್ಯೆಗಳು ಸ್ಪಷ್ಟವಾಗಿ ಕಾಣುತ್ತವೆ. ಈ ಬಗ್ಗೆ ಕಾಳಜಿವಹಿಸಿ ಪರಿಹಾರ ಕಂಡುಕೊಳ್ಳುವುದು ಸರ್ಕಾರ ಜವಾಬ್ದಾರಿ. ಆದರೆ ಬಿಜೆಪಿ ನಾಯಕರು ಜನರ ಸಮಸ್ಯೆಗಳನ್ನ ಆಲಿಸುತ್ತಿಲ್ಲ ಎಂದು ದೂರಿದರು.

    ಅಮೇಥಿ ಲೋಕಸಭಾ ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆಯಾಗಿದೆ. 1967ರಿಂದ 2014ರ ವರೆಗೆ ನಡೆದ ಲೋಕಸಭಾ ಚುನಾವಣೆ ಹಾಗೂ ಉಪ ಚುನಾವಣೆಗಳ ಪೈಕಿ ಎರಡು ಬಾರಿ ಮಾತ್ರ ಕಾಂಗ್ರೆಸ್ ಪರಾಜಯಗೊಂಡಿದೆ. ಅಷ್ಟೇ ಅಲ್ಲದೆ ಈ ಕ್ಷೇತ್ರದಿಂದ 2009 ಹಾಗೂ 2014 ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಜಯಗಳಿಸಿದ್ದಾರೆ. ಆದರೆ ಈ ಬಾರಿ ಕಾಂಗ್ರೆಸ್ ಭದ್ರಕೋಟೆ ಒಡೆಯಲು ಬಿಜೆಪಿ ಮುಂದಾಗಿದೆ.

    ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ 2014ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸ್ಮೃತಿ ಇರಾನಿ ಅವರು ಸುಮಾರು 1 ಲಕ್ಷ ಮತಗಳ ಅಂತರದಿಂದ ಪರಾಜಿತಗೊಂಡಿದ್ದರು. ಆದರೆ ಉತ್ತರ ಪ್ರದೇಶದ 2017ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿ ಸರ್ಕಾರ ರಚಿಸಿದೆ. ಇತ್ತ ಅಮೇಥಿ ಲೋಕಸಭಾ ವ್ಯಾಪ್ತಿಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಜಯಗಳಿಸಿದೆ. ಈ ಎಲ್ಲ ಬೆಳವಣಿಗೆಯಿಂದಾಗಿ ಸ್ಮೃತಿ ಇರಾನಿ ಅವರು ಈ ಬಾರಿ ಗೆಲ್ಲುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

  • ನಾಮಪತ್ರ ವಿವಾದ – ರಾಹುಲ್ ಗಾಂಧಿಗೆ ಬಿಗ್ ರಿಲೀಫ್

    ನಾಮಪತ್ರ ವಿವಾದ – ರಾಹುಲ್ ಗಾಂಧಿಗೆ ಬಿಗ್ ರಿಲೀಫ್

    ನವದೆಹಲಿ: ಉತ್ತರ ಪ್ರದೇಶದ ಅಮೇಥಿಯ ಲೋಕಸಭಾ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಅವರು ಸಲ್ಲಿಕೆ ಮಾಡಿದ್ದ ನಾಮಪತ್ರ ಅಂಗಿಕೃತವಾಗಿದ್ದು, ಈ ಕುರಿತು ಚುನಾವಣಾ ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

    ರಾಹುಲ್ ನಾಮಪತ್ರ ಸಲ್ಲಿಕೆ ಬಳಿಕ ಪಕ್ಷೇತರ ಅಭ್ಯರ್ಥಿ ದ್ರುವಲಾಲ್ ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ರಾಹುಲ್ ಗಾಂಧಿ ಶಿಕ್ಷಣ, ದಾಖಲೆಗಳು, ರಾಷ್ಟ್ರೀಯತೆ ಸಂಬಂಧಿಸಿದಂತೆ ಪರಿಶೀಲನೆ ನಡೆಸುವಂತೆ ದೂರಿನಲ್ಲಿ ಮನವಿ ಮಾಡಿದ್ದರು.

    ರಾಹುಲ್ ಗಾಂಧಿ ಅವರು ಇಂಗ್ಲೆಂಡ್ ವಿಶ್ವವಿದ್ಯಾಲಯದ ಶೈಕ್ಷಣಿಕ ಪ್ರಮಾಣ ಪತ್ರ ಹಾಗೂ ಯುಕೆ ಕಂಪನಿಯ ಪ್ರಮಾಣ ಪತ್ರದಲ್ಲಿ ಬ್ರಿಟಿಷ್ ಪೌರತ್ವವನ್ನು ಪಡೆದಿದ್ದಾರೆ. ಭಾರತೀಯರಲ್ಲದವರಿಗೆ ದೇಶದ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶವಿಲ್ಲ. ಆದ್ದರಿಂದ ಅವರ ನಾಮಪತ್ರವನ್ನು ಪ್ರಜಾಪ್ರತಿನಿಧಿ ಕಾಯ್ದೆ ಅಡಿ ಪರಿಶೀಲನೆ ನಡೆಸಬೇಕು ಎಂದು ದೂರಿನಲ್ಲಿ ದ್ರುವಲಾಲ್ ಮನವಿ ಮಾಡಿದ್ದರು.

    ರಾಹುಲ್ ಗಾಂಧಿ ಅವರ ವಿರುದ್ಧ ಆರೋಪಗಳು ಕೇಳಿ ಬರುತ್ತಿದಂತೆ ಚುನಾವಣಾ ಅಧಿಕಾರಿ ರಾಮ್ ಮನೋಹರ್ ಮಿಶ್ರಾ ಅವರು ನಾಮಪತ್ರ ಪರಿಶೀಲನೆ ದಿನಾಂಕವನ್ನು ಏ.22ಕ್ಕೆ ಮುಂದೂಡಿದ್ದರು.

    ಉತ್ತರ ಪ್ರದೇಶ ಸಿಎಂ ಯೋಗಿ ಅದಿತ್ಯನಾಥ್ ಅವರು ಕೂಡ ರಾಹುಲ್ ಹೆಸರು ಪ್ರಸ್ತಾಪ ಮಾಡಿ ಕಾಲೆಳೆದಿದ್ದರು. ರಾಹುಲ್ ಗಾಂಧಿ ಅವರ ಮೂಲ ಹೆಸರು ರಾಹುಲ್ ವಿಂಚಿ ಎಂಬುವುದು ಎಲ್ಲರ ಕಾಂಗ್ರೆಸ್ ನಾಯಕರಿಗೂ ತಿಳಿದಿದೆ. ಅದ್ದರಿಂದ ಜನರ ಮುಂದೇ ಬರುವ ಮೊದಲು ರಾಹುಲ್, ಪ್ರಿಯಾಂಕ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಕಿಡಿಕಾರಿದ್ದರು.

    ಸದ್ಯ ರಾಹುಲ್ ಗಾಂಧಿ ಅವರ ನಾಮಪತ್ರ ಅಮೇಥಿಯಲ್ಲಿ ಸಿಂಧು ಆಗಿರುವ ಪರಿಣಾಮ ವಯನಾಡಿನಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ ಎನ್ನಲಾಗಿದೆ. ರಾಹುಲ್ ನಾಮಪತ್ರಕ್ಕೂ ಮುನ್ನ ಅಮೇಥಿ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಸಲ್ಲಿಸಿದ್ದ ಶೈಕ್ಷಣಿಕ ದಾಖಲೆ ಬಗ್ಗೆಯೂ ದೂರು ಬಂದಿತ್ತು. ಆದರೆ ಶಿಕ್ಷಣದ ಕುರಿತು ಸಲ್ಲಿಕೆ ಮಾಡಿರುವ ದಾಖಲೆಗಳ ಅಡಿ ಅವರ ನಾಮಪತ್ರ ತಿರಸ್ಕರಗೊಳಿಸಲು ಸಾಧ್ಯವಿಲ್ಲ ಎಂದು ಆಯೋಗ ತಿಳಿಸಿತ್ತು. ರಾಹುಲ್ ಗಾಂಧಿ ಅವರ ಸ್ವಕ್ಷೇತ್ರ ಅಮೇಥಿಯಾಗಿದ್ದು, ಮೇ 6 ರಂದು ಮತದಾನ ನಡೆಯಲಿದೆ. ಮೇ 23ಕ್ಕೆ ಲೋಕಸಭಾ ಫಲಿತಾಂಶ ಪ್ರಕಟವಾಗಲಿದೆ.