Tag: ಅಮೇಜಾನ್ ಪ್ರೈಮ್

  • ಅಮೇಜಾನ್ ಪ್ರೈಮ್‌ಗೆ ಕಾಲಿಟ್ಟ ಫ್ಯಾಮಿಲಿ, ಸಸ್ಪೆನ್ಸ್ ಥ್ರಿಲ್ಲರ್ ‘ಅಮೃತ ಅಪಾರ್ಟ್‌ಮೆಂಟ್ಸ್‌’..!

    ಅಮೇಜಾನ್ ಪ್ರೈಮ್‌ಗೆ ಕಾಲಿಟ್ಟ ಫ್ಯಾಮಿಲಿ, ಸಸ್ಪೆನ್ಸ್ ಥ್ರಿಲ್ಲರ್ ‘ಅಮೃತ ಅಪಾರ್ಟ್‌ಮೆಂಟ್ಸ್‌’..!

    ಟಿಟಿ ಪ್ಲ್ಯಾಟ್ ಫಾರ್ಮ್‌ಗಳು ಈಗ ಸಿನಿ ಪ್ರೇಕ್ಷಕರ ಸಿನಿಮಾ ದಾಹವನ್ನು ತಣಿಸುವಲ್ಲಿ ನಂಬರ್ ಒನ್ ಸ್ಥಾನದಲ್ಲಿವೆ. ಎಲ್ಲಾ ಭಾಷೆಯ ಸಿನಿಮಾಗಳು ಒಂದೇ ವೇದಿಕೆಯಲ್ಲಿ ಸಿಗುತ್ತಿದ್ದು, ಕನ್ನಡದ‌ ಜೊತೆಗೆ ಬೇರೆ ಭಾಷೆ ಸಿನಿಮಾಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿದೆ. ಕನ್ನಡದ‌ ಸಾಲು ಸಾಲು ಸಿನಿಮಾಗಳು ಡೈರೆಕ್ಟ್‌ ಆಗಿ ಈಗ ಒಟಿಟಿಯತ್ತ ಮುಖ ಮಾಡಿವೆ. ಅದರಲ್ಲೂ ಕೊರೊನ ಕಾಲಿಟ್ಟ ಮೇಲಂತೂ ಹಲವರು ನೇರ ಒಟಿಟಿಯತ್ತಲೇ ಮುಖ ಮಾಡಿದ್ದಾರೆ. ಕೆಲವರು ಚಿತ್ರಮಂದಿರದಲ್ಲಿ ರಿಲೀಸ್ ಮಾಡಿ ನಂತರ ಒಟಿಟಿಯಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.

    ಈಗಾಗಲೇ ರಾಬರ್ಟ್, ಯುವರತ್ನ, ರಾಂಧವ ಸೇರಿದಂತೆ ಹಲವು ಸಿನಿಮಾಗಳು ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿದ್ದು, ಇದೀಗ ಆ ಸಾಲಿಗೆ ಫ್ಯಾಮಿಲಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ‘ಅಮೃತ ಅಪಾರ್ಟ್‌ಮೆಂಟ್ಸ್‌’ ಸೇರಿದೆ. ಸಿನಿಮಾ ನೋಡಲು ಈ ಲಿಂಕ್‌ ಕ್ಲಿಕ್‌ ಮಾಡಿ:   Amruth Apartments

    ಹೌದು, ಗುರುರಾಜ ಕುಲಕರ್ಣಿ ನಿರ್ದೇಶನ ಹಾಗೂ‌ ನಿರ್ಮಾಣದಲ್ಲಿ ನವೆಂಬರ್ 26ರಂದು ಚಿತ್ರಮಂದಿರದಲ್ಲಿ ಅಮೃತ ಅಪಾರ್ಟ್‌ಮೆಂಟ್ಸ್‌ ಸಿನಿಮಾ ತೆರೆಕಂಡಿತ್ತು. ಪ್ರೇಕ್ಷಕರಿಂದ ಮೆಚ್ಚುಗೆಗೂ ಪಾತ್ರವಾಗಿತ್ತು. ಇದೀಗ ಚಿತ್ರತಂಡ ಅಮೇಜಾನ್ ಪ್ರೈಮ್‌ನಲ್ಲಿ ಚಿತ್ರ ಬಿಡುಗಡೆ ಮಾಡಿದೆ. ಸಿನಿಮಾ ನೋಡದವರು ಅಮೇಜಾನ್ ಪ್ರೈಮ್‌ನಲ್ಲಿ ಈ ಸಿನಿಮಾವನ್ನು ಕಣ್ತುಂಬಿ ಕೊಳ್ಳಬಹುದಾಗಿದೆ.

    ಕೆಜಿಎಫ್, ಯುವರತ್ನ, ಕೋಟಿಗೊಬ್ಬ 3 ಸಿನಿಮಾಗಳಲ್ಲಿ ‌ಖಳನಟನಾಗಿ ಮಿಂಚಿರುವ ತಾರಕ್ ಪೊನ್ನಪ್ಪ ಮೊದಲ ಬಾರಿಗೆ ವಿಲನ್ ರೋಲ್ ಬಿಟ್ಟು ನಾಯಕ ನಟನಾಗಿ‌ ನಟಿಸಿರುವ ಅಮೃತ ಅಪಾರ್ಟ್‌ಮೆಂಟ್ಸ್‌ ಫ್ಯಾಮಿಲಿ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಒಳಗೊಂಡಿದೆ. ತಾರಕ್ ಪೊನ್ನಪ್ಪ ಜೋಡಿಯಾಗಿ ಊವರ್ಶಿ ಗೋವರ್ಧನ್ ನಟಿಸಿದ್ದು, ಮಾನಸ ಜೋಶಿ, ಬಾಲಾಜಿ ಮನೋಹರ್, ಸೀತಾ ಕೋಟೆ, ಸಂಪತ್ ಕುಮಾರ್ ಹಲವರನ್ನೊಳಗೊಂಡ ಕಲಾವಿದರ ಬಳಗ‌ ಚಿತ್ರದಲ್ಲಿದೆ.

    ಆಕ್ಸಿಡೆಂಟ್‌, ಲಾಸ್ಟ್ ಬಸ್ ಸಿನಿಮಾ ನಿರ್ಮಾಣ ಮಾಡಿ ಅನುಭವವಿರುವ ಗುರುರಾಜ ಕುಲಕರ್ಣಿ ಮೊದಲ ಬಾರಿಗೆ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿ ಸ್ವತಃ ನಿರ್ಮಾಣ ಮಾಡಿರುವ‌ ಸಿನಿಮಾ ಇದು. ಬಹು ಸಂಸ್ಕೃತಿಯ, ಬಹು ಭಾಷಿಗರ ತವರಾದ ಸಿಲಿಕಾನ್ ಸಿಟಿಯಲ್ಲಿ ನಿತ್ಯ ಜೀವನದಲ್ಲಿ ಘಟಿಸಬಹುದಾದ‌ ಕಾಲ್ಪನಿಕ ಕಥೆಯ ಹಂದರ ಸಿನಿಮಾದಲ್ಲಿದೆ. ಅರ್ಜುನ್ ಅಜಿತ್ ಛಾಯಾಗ್ರಹಣ, ಎಸ್.ಡಿ ಅರವಿಂದ್ ಸಂಗೀತ‌ ನಿರ್ದೇಶನ ಅಮೃತ ಅಪಾರ್ಟ್‌ಮೆಂಟ್ಸ್‌ ಚಿತ್ರಕ್ಕಿದೆ.

  • ಅಮೇಜಾನ್ ಪ್ರೈಮ್‍ನಲ್ಲಿ ಒಂದು ಮಿಲಿಯನ್ ವೀಕ್ಷಣೆ: ಫಸ್ಟ್ ಕ್ಲಾಸ್‍ನಲ್ಲಿ ಪಾಸಾದ ನಮ್ ಗಣಿ

    ಅಮೇಜಾನ್ ಪ್ರೈಮ್‍ನಲ್ಲಿ ಒಂದು ಮಿಲಿಯನ್ ವೀಕ್ಷಣೆ: ಫಸ್ಟ್ ಕ್ಲಾಸ್‍ನಲ್ಲಿ ಪಾಸಾದ ನಮ್ ಗಣಿ

    ಕೊರೊನಾ ಎಫೆಕ್ಟ್ ನಿಂದ ಸಿನಿಮಾ ರಿಲೀಸ್ ಆಗ್ತಿಲ್ಲ. ಚಿತ್ರಮಂದಿರಕ್ಕೆ ಬಂದು ಸಿನಿಮಾ ಕಣ್ತುಂಬಿಕೊಳ್ಳೋ ಭಾಗ್ಯ ಸಿನಿರಸಿಕರ ಪಾಲಿಗೆ ಸದ್ಯಕ್ಕಿಲ್ಲ. ಹಾಗಂತ ನಮ್ಮ ಸಿನಿ ಪ್ರೇಮಿಗಳು ಸಿನಿಮಾ ನೋಡೋದು ಬಿಟ್ಟಿಲ್ಲ. ಮನೆಯಲ್ಲಿದ್ದುಕೊಂಡೇ ಒಟಿಟಿಯಲ್ಲಿ ಕನ್ನಡ ಸಿನಿಮಾಗಳ ಮೇಲೆ ಅಪಾರ ಪ್ರೀತಿ ತೋರುತ್ತಿದ್ದಾರೆ.

    ನಿಜ ಹೇಳ್ಬೇಕು ಅಂದ್ರೆ ಥಿಯೇಟರ್ ಅಂಗಳದಲ್ಲೂ ಸಿಗದ ಅದ್ಭುತ ರೆಸ್ಪಾನ್ಸ್ ಒಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಕನ್ನಡ ಸಿನಿಮಾಗಳಿಗೆ ಸಿಕ್ತಿದೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ ‘ನಮ್ ಗಣಿ ಬಿ.ಕಾಂ ಪಾಸ್’ ಸಿನಿಮಾ. ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ‘ನಮ್ ಗಣಿ ಬಿ.ಕಾಂ ಪಾಸ್’ ಚಿತ್ರ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿತ್ತು. ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದ್ದ ಚಿತ್ರ ಸುಮಾರು 57 ದಿನಗಳ ಕಾಲ ಚಿತ್ರಮಂದಿರದ ಅಂಗಳದಲ್ಲಿತ್ತು.

    ಚಿತ್ರಕ್ಕೆ ಸಿಕ್ಕ ಪಾಸಿಟಿವ್ ರೆಸ್ಪಾನ್ಸ್ ನಿಂದ ಸಂತಸಗೊಂಡಿದ್ದ ಚಿತ್ರತಂಡ ಏಪ್ರಿಲ್ ತಿಂಗಳಲ್ಲಿ ಅಮೇಜಾನ್ ಪ್ರೈಮ್ ನಲ್ಲಿ ಸಿನಿಮಾವನ್ನ ಬಿಡುಗಡೆ ಮಾಡಿತ್ತು. ಚಿತ್ರತಂಡ ಊಹಿಸದ ರೀತಿಯಲ್ಲಿ ಅಮೇಜಾನ್ ಪ್ರೈಮ್ ನಲ್ಲಿ ಚಿತ್ರಕ್ಕೆ ದೊಡ್ಡ ಮಟ್ಟದ ಯಶ್ಸಸ್ಸು ಸಿಕ್ಕಿದೆ. ಇಲ್ಲಿವರೆಗೆ ಒಂದು ಮಿಲಿಯನ್ ವ್ಯೂ ಚಿತ್ರಕ್ಕೆ ಸಿಕ್ಕಿದೆ. ಅಷ್ಟೇ ಅಲ್ಲ ಸೋಶಿಯಲ್ ಮೀಡಿಯಾದಲ್ಲಿ ಚಿತ್ರತಂಡದವ್ರನ್ನು ಸಂಪರ್ಕಿಸಿ ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದು ಮತ್ತೊಂದು ಸಿನಿಮಾ ಮಾಡುವಂತೆ ಉತ್ತೇಜನ ಕೂಡ ನೀಡ್ತಿದ್ದಾರೆ ಎಂದು ಚಿತ್ರತಂಡ ಖುಷಿಯನ್ನು ಹಂಚಿಕೊಂಡಿದೆ.

    ಚಿತ್ರದ ನಾಯಕ ಕಂ ನಿರ್ದೇಶಕ ಅಭಿಷೇಕ್ ಶೆಟ್ಟಿ ಮೊದಲ ಚಿತ್ರ ಇದಾಗಿದ್ದು, ಮೊದಲ ಪ್ರಯತ್ನದಲ್ಲೇ ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆಗಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ಐಶಾನಿ ಶೆಟ್ಟಿ ನಟಿಸಿದ್ದು, ಪಲ್ಲವಿ ಗೌಡ, ರಚನಾ ದಶರಥ, ಸುಚೇಂದ್ರ ಪ್ರಸಾಧ್, ಸುಧಾ ಬೆಳವಾಡಿ ಚಿತ್ರದ ತಾರಾಬಳಗದಲ್ಲಿದ್ದಾರೆ. ವಿಕಾಸ್ ವಸಿಷ್ಠ ಸಂಗೀತ ನಿರ್ದೇಶನ ಚಿತ್ರಕ್ಕಿದ್ದು, ಬೃಂದಾವನ್ ಎಂಟರ್ ಪ್ರೈಸಸ್ ಬ್ಯಾನರ್ ನಡಿ ನಿರ್ಮಾಣವಾಗಿರೋ ಈ ಚಿತ್ರಕ್ಕೆ ನಾಗೇಶ್ ಕುಮಾರ್ ಯು.ಎಸ್ ಬಂಡವಾಳ ಹೂಡಿದ್ದಾರೆ.

    ಬಿ.ಕಾಂ ಪಾಸ್ ಆದ ಹುಡುಗ ಕೆಲಸ ಸಿಗದೇ ಇದ್ದಾಗ ಯಾವೆಲ್ಲ ಪಡಿಪಾಟಲು ಪಡುತ್ತಾನೆ. ಆತನ ಜೀವನನದಲ್ಲಿ ಏನೇನಾಗುತ್ತೆ ಅನ್ನೋದನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದ್ದು, ಹಾಸ್ಯದ ಹೂರಣದ ಜೊತೆ ಭಾವನಾತ್ಮಕ ಅಂಶಗಳು ಚಿತ್ರದಲ್ಲಿದೆ. ಒಟ್ಟಿನಲ್ಲಿ ಒಳ್ಳೆಯ ಸಿನಿಮಾಗಳು ಸೋಲೋದಿಲ್ಲ ಎನ್ನೋದಕ್ಕೆ ‘ನಮ್ ಗಣಿ ಬಿ.ಕಾಂ ಪಾಸ್’ ಚಿತ್ರ ಬೆಸ್ಟ್ ಉದಾಹರಣೆ.

  • ಅಮೇಜಾನ್ ಪ್ರೈಮ್‍ನಲ್ಲೀಗ ಫೇಸ್ ಟು ಫೇಸ್!

    ಅಮೇಜಾನ್ ಪ್ರೈಮ್‍ನಲ್ಲೀಗ ಫೇಸ್ ಟು ಫೇಸ್!

    ವರ್ಷದ ಹಿಂದೆ ಬಿಡುಗಡೆಯಾಗಿ ಪ್ರೇಕ್ಷಕರ ಕಡೆಯಿಂದ ಅಪಾರ ಪ್ರೀತಿ, ಮೆಚ್ಚುಗೆ ಗಳಿಸಿಕೊಂಡಿದ್ದ ಚಿತ್ರ ಫೇಸ್ ಟು ಫೇಸ್. ಸಂದೀಪ್ ಜನಾರ್ಧನ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಸಿನಿಮಾ ಹೊಸತನದ ಸುಳಿವು ಕೊಡುತ್ತಲೇ ಸೃಷ್ಟಿಸಿದ್ದ ಸಂಚಲನವನ್ನು ಪ್ರೇಕ್ಷಕರ್ಯಾರೂ ಮರೆತಿರಲಿಕ್ಕಿಲ್ಲ. ಹೊಸಬರ ತಂಡ, ಅದರ ಫಲವಾಗಿ ಪಡಿಮೂಡಿಕೊಂಡಿದ್ದ ಹೊಸ ಆವೇಗ… ಇಂಥಾ ಒಡ್ಡೋಲಗದಲ್ಲಿಯೇ ತೆರೆ ಕಂಡಿದ್ದ ಫೇಸ್ ಟು ಫೇಸ್ ಗೆದ್ದಿತ್ತು. ಇದೀಗ ಮತ್ತೆ ಅದರ ಹಂಗಾಮ ಅಮೇಜಾನ್ ಪ್ರೈಮ್‍ನಲ್ಲಿ ಶುರುವಾಗಿದೆ.

    ಈ ಚಿತ್ರದಲ್ಲಿ ನಾಯಕನ ಪಾತ್ರವನ್ನು ರೋಹಿತ್ ಭಾನುಪ್ರಕಾಶ್ ನಿರ್ವಹಿಸಿದ್ದರೆ, ದಿವ್ಯಾ ಉರುಡಗ ಮತ್ತು ಪೂರ್ವಿ ಜೋಶಿ ನಾಯಕಿಯರಾಗಿ ನಟಿಸಿದ್ದಾರೆ. ಈ ಎಲ್ಲರೂ ಕೂಡಾ ತಂತಮ್ಮ ಪಾತ್ರವನ್ನು ಉತ್ತಮವಾಗಿ ನಿರ್ವಹಿಸೋ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದರು. ಈಗ ಅಮೇಜಾನ್ ಪ್ರೈಮ್ ಮೂಲಕ ಮತ್ತಷ್ಟು ಪ್ರೇಕ್ಷಕರನ್ನು ತಲುಪಿಕೊಳ್ಳೋ ಖುಷಿ ಅವರೆಲ್ಲರಲ್ಲಿದೆ. ಮೇಲು ನೋಟಕ್ಕೆ ಸರಳವಾಗಿ ಕಾಣುವ, ಪ್ರೇಮದ ಸುತ್ತ ಗಿರಕಿ ಹೊಡೆಯುವಂತೆ ಕಾಣುವ ಕಥಾ ಎಳೆ ಅಷ್ಟು ಸಲೀಸಾಗಿ ಬಿಚ್ಚಿಕೊಳ್ಳುವಂಥಾದ್ದಲ್ಲ. ನಿರ್ದೇಶಕ ಸಂದೀಪ್ ಜನಾರ್ಧನ್ ಸ್ಕ್ರೀನ್ ಪ್ಲೇ ಮೂಲಕವೇ ಅದನ್ನು ಪರಿಣಾಮಕಾರಿಯಾಗಿಸಿದ್ದಾರೆ.

    ಕರಾವಳಿ ಮತ್ತು ಚಿಕ್ಕಮಗಳೂರು ಪ್ರದೇಶದ ಮಲೆನಾಡಿನಲ್ಲಿ ಕಥೆಯ ಗಾಲಿಗಳು ಅಡ್ಡಾಡುತ್ತವೆ. ಆದರೆÉ ಕಥೆಯೆಂಬುದು ಹಠಾತ್ತನೆ ಪಥ ಬದಲಿಸಿ ಎಲ್ಲವನ್ನೂ ಗೊಂದಲಕ್ಕೆ ತಳ್ಳುತ್ತಲೇ ಮತ್ತೆ ದಾರಿಗೆ ಮರಳುತ್ತೆ. ಒಂದು ಸಿನಿಮಾವನ್ನು ನೋಡುಗರ ಪಾಲಿಗೆ ಯಾವ್ಯಾವ ಅಂಶಗಳು ವಿಶೇಷವಾಗಿಸಬಹುದೋ ಅದೆಲ್ಲವನ್ನೂ ಒಳಗೊಂಡಿರೋ ಚಿತ್ರ ಫೇಸ್ ಟು ಫೇಸ್. ಕಥೆ ಸೇರಿದಂತೆ ಎಲ್ಲದರಲ್ಲಿಯೂ ಇಲ್ಲಿ ಹೊಸತನಗಳು ಕಾಣಿಸುತ್ತವೆ.

    ಅದರಲ್ಲಿಯೂ ವಿಶೇಷವಾಗಿ ಸ್ಕ್ರೀನ್ ಪ್ಲೇನಲ್ಲಿ ಹೊಸತನವಿದೆ. ಅದರ ಬಲದಿಂದಲೇ ಇಡೀ ಸಿನಿಮಾ ಹೆಜ್ಜೆಹೆಜ್ಜೆಗೂ ನೋಡುಗರನ್ನು ಸರ್‍ಪ್ರೈಸ್‍ಗಳೊಂದಿಗೆ ಮುಖಾಮುಖಿಯಾಗಿಸುತ್ತೆ. ಈ ಕೊರೋನಾ ಕಾಲದಲ್ಲಿ ಸದರಿ ಚಿತ್ರ ಅಮೇಜಾನ್ ಪ್ರೈಮ್‍ಗೆ ಆಗಮಿಸಿದೆ. ಹಾಗೆ ಅಮೇಜಾನ್ ಪ್ರೈಮ್‍ಗೆ ಬರುತ್ತಲೇ ಬಹು ಬೇಡಿಕೆಯೊಂದಿಗೆ ಮುಂದುವರೆಯುತ್ತಿದೆ. ಇದು ನಿಜಕ್ಕೂ ಹೊಸ ಬಗೆಯ ಚಿತ್ರ. ಇದನ್ನು ವೀಕ್ಷಿಸೋದರೊಂದಿಗೆ ನಿಮ್ಮ ಲಾಕ್‍ಡೌನ್ ಕಾಲಾವಧಿ ಸಹನೀಯವಾಗಲಿ!

  • ದಾಖಲೆಯ ಮೊತ್ತಕ್ಕೆ ರಾಬರ್ಟ್ ಖರೀದಿಗೆ ಮುಂದಾಯ್ತಾ ಅಮೆಜಾನ್ ಪ್ರೈಮ್?

    ದಾಖಲೆಯ ಮೊತ್ತಕ್ಕೆ ರಾಬರ್ಟ್ ಖರೀದಿಗೆ ಮುಂದಾಯ್ತಾ ಅಮೆಜಾನ್ ಪ್ರೈಮ್?

    ಬೆಂಗಳೂರು: ಡಿ ಬಾಸ್ ಅಭಿನಯದ ರಾಬರ್ಟ್ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದೆ. ಟೀಸರ್ ಹಾಗೂ ಹಾಡುಗಳು ಪ್ರೇಕ್ಷಕರಿಗೆ ಅಪ್ಯಾಯಮಾನವಾಗಿವೆ. ಹೀಗಾಗಿ ಚಿತ್ರ ಬಿಡುಗಡೆಗಾಗಿ ಅಭಿಮಾನಿಗಳು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಪರಿಸ್ಥಿತಿ ಸಹಜವಾಗಿ ಇದ್ದಿದ್ದರೆ, ಇಷ್ಟೊತ್ತಿಗೆ ಡಿ ಬಾಸ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿರುತ್ತಿತ್ತು. ಏಕೆಂದರೆ ಏಪ್ರಿಲ್ 9 ರಂದು ರಾಬರ್ಟ್ ಚಿತ್ರ ಡುಗಡೆ ಆಗಬೇಕಿತ್ತು. ಕೊರೊನಾ ವೈರಸ್ ಲಾಕ್‍ಡೌನ್‍ನಿಂದಾಗಿ ಎಲ್ಲವೂ ಅಲ್ಲೋಲಕಲ್ಲೋಲವಾಗಿದೆ. ಸಿನಿಮಾ ರಂಗದ ಸ್ಥಿತಿಯಂತೂ ಹೇಳತೀರದಾಗಿದೆ. ಹೀಗಾಗಿ ಸಿನಿಮಾ ಬಿಡುಗಡೆ ತಡವಾಗಿದೆ.

    ಇಷ್ಟು ದಿನ ಟೀಸರ್, ಹಾಡುಗಳು ಸೇರಿದಂತೆ ಸಿನಿಮಾ ಕುರಿತು ವಿವಿಧ ರೀತಿಯಲ್ಲಿ ಅಪ್‍ಡೇಟ್ ನೀಡುತ್ತಿದ್ದ ರಾಬರ್ಟ್ ಚಿತ್ರತಂಡ, ಇದೀಗ ಮೌನಕ್ಕೆ ಶರಣಾಗಿದೆ. ಈ ಹಿಂದೆ ಸ್ವತಃ ಡಿ ಬಾಸ್ ಟ್ವೀಟ್ ಮಾಡಿ ಲಾಕ್‍ಡೌನ್ ಇರುವುದರಿಂದ ಚಿತ್ರ ಬಿಡುಗಡೆಯನ್ನು ಮುಂದೂಡಲಾಗಿದೆ. ಆದಷ್ಟು ಬೇಗ ನಿಮ್ಮ ಮುಂದೆ ಬರುತ್ತೇವೆ ಎಂದು ತಿಳಿಸಿದ್ದರು. ಇದಾದ ಬಳಿಕ ಸಿನಿಮಾ ಕುರಿತು ಯಾವುದೇ ಅಪ್‍ಡೇಟ್ ಸಿಕ್ಕಿಲ್ಲ.

    ಈ ಮಧ್ಯೆ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಗಸ್ಟ್ 15ರಂದು ರಾಬರ್ಟ್ ತೆರೆಗೆ ಬರಲಿದೆ ಎನ್ನುವ ಮಾತುಗಳು ಸಹ ಕೇಳಿ ಬಂದಿವೆ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಹೇಳಿಲ್ಲ. ಸಿನಿಮಾ ಬಿಡುಗಡೆ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಇನ್ನೊಂದು ಸುದ್ದಿ ಹೊರ ಬಿದ್ದಿದೆ. ಓಟಿಟಿ ಪ್ಲಾಟ್‍ಫಾರ್ಮ್ ಆಗಿರುವ ಅಮೆಜಾನ್ ಪ್ರೈಮ್ ದಾಖಲೆ ಮೊತ್ತಕ್ಕೆ ರಾಬರ್ಟ್ ಸಿನಿಮಾ ಖರೀದಿಸಲು ಮುಂದಾಗಿದೆಯಂತೆ.

    ಲಾಕ್‍ಡೌನ್ ಇರುವ ಹಿನ್ನೆಲೆ ಇದನ್ನೇ ಅವಕಾಶವನ್ನಾಗಿ ಬಳಿಸಿಕೊಂಡಿರುವ ಒಟಿಟಿ ಪ್ಲಾಟ್‍ಫಾರ್ಮ್‍ಗಳು, ಥೀಯೇಟರ್ ನಲ್ಲಿ ಬಿಡುಗಡೆಯಾಗಬೇಕಿದ್ದ ಸಿನಿಮಾಗಳನ್ನು ಖರೀದಿಸಲು ಮುಂದಾಗಿವೆ. ಈ ಕುರಿತು ಹಲವು ಭಾಷೆಗಳ ಸಿನಿಮಾ ಇಂಡಸ್ಟ್ರಿಗಳಲ್ಲಿ ಚರ್ಚೆ ನಡೆದಿದೆ. ಅದೇ ರೀತಿ ಇದೀಗ ಅಮೆಜಾನ್ ಪ್ರೈಮ್ ರಾಬರ್ಟ್ ಚಿತ್ರಕ್ಕೂ ಬೇಡಿಕೆ ಇಟ್ಟಿದೆ. ಆದರೆ ಈ ಆಫರ್ ನ್ನು ನಿರ್ಮಾಪಕರು ತಿರಸ್ಕರಿಸಿದ್ದಾರಂತೆ.

    ಡಿ ಬಾಸ್ ಸಿನಿಮಾ ಎಂದರೆ ಅಭಿಮಾನಿಗಳಿಗೆ ಒಂದು ರೀತಿಯ ಹಬ್ಬ ಇದ್ದಂತೆ. ಚಿತ್ರ ರಿಲೀಸ್ ಆಗುತ್ತಿದ್ದಂತೆ ಸಂಭ್ರಮಾಚರಣೆ, ಕಟೌಟ್ ಹಾಕುವುದು, ಫಸ್ಟ್ ಡೇ ಫಸ್ಟ್ ಶೋ ನೋಡುವುದು ಹೀಗೆ ಅಭಿಮಾನಿಗಳು ಯೋಜನೆ ರೂಪಿಸಿರುತ್ತಾರೆ. ಒಟಿಟಿ ಪ್ಲಾಟ್‍ಫಾರ್ಮ್‍ನಲ್ಲಿ ಬಿಡುಗಡೆ ಮಾಡಿದರೆ ಈ ಸಂಭ್ರಮವೆಲ್ಲ ತಪ್ಪುತ್ತದೆ. ಹಣಕ್ಕಿಂತ ಅಭಿಮಾನಿಗಳ ಸಂಭ್ರಮ ಮುಖ್ಯ ಎಂದು ತೀರ್ಮಾನಿಸಿ ನಿರ್ಮಾಪಕರು ಈ ಆಫರ್ ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ತಡವಾದರೂ ಅಡ್ಡಿಯಿಲ್ಲ ಚಿತ್ರಮಂದಿರದಲ್ಲೇ ಬಿಡುಗಡೆ ಮಾಡಬೇಕು ಎಂದು ನಿರ್ಮಾಪಕರು ತೀರ್ಮಾನಿಸಿದ್ದಾರಂತೆ.

    ರಾಬರ್ಟ್ ಸಿನಿಮಾಗೆ ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳಿದ್ದು, ಉಮಾಪತಿ ಫಿಲಂಸ್ ಬ್ಯಾನರ್ ಅಡಿ ನಿರ್ಮಾಣವಾಗುತ್ತಿದೆ. ಪ್ರಮುಖ ಪಾತ್ರದಲ್ಲಿ ಜಗಪತಿಬಾಬು, ರವಿ ಕಿಶನ್, ದೇವರಾಜ್ ಹಾಗೂ ಆಶಾ ಭಟ್ ಕಾಣಿಸಿಕೊಳ್ಳುತ್ತಿದ್ದಾರೆ.