Tag: ಅಮೆರಿಕ ಚುನಾವಣೆ

  • ತೀವ್ರಗಾಮಿ ಎಡಪಂಥೀಯ ಮನೋಸ್ಥಿತಿಯ ಹ್ಯಾರಿಸ್‌ ಆಡಳಿತಕ್ಕೆ ಅನರ್ಹ: ಟ್ರಂಪ್‌

    ತೀವ್ರಗಾಮಿ ಎಡಪಂಥೀಯ ಮನೋಸ್ಥಿತಿಯ ಹ್ಯಾರಿಸ್‌ ಆಡಳಿತಕ್ಕೆ ಅನರ್ಹ: ಟ್ರಂಪ್‌

    ವಾಷಿಂಗ್ಟನ್‌: ಕಮಲಾ ಹ್ಯಾರಿಸ್ (Kamala Harris) ಆಡಳಿತ ನಡೆಸಲು ಅನರ್ಹರಾಗಿದ್ದು, ತೀವ್ರಗಾಮಿ ಎಡಪಂಥೀಯ ಮನೋಸ್ಥಿತಿಯವರು ಎಂದು ಅಮೆರಿಕದ ಮಾಜಿ ಅಧ್ಯಕ್ಷ ಹಾಲಿ ರಿಪಬ್ಲಿಕ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ (Donald Trump) ವಾಗ್ದಾಳಿ ನಡೆಸಿದ್ದಾರೆ.

    ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮೂರುವರೆ ವರ್ಷಗಳಿಂದ ಕಮಲಾ ಹ್ಯಾರಿಸ್‌ ಅವರು ಜೋ ಬೈಡೆನ್‌ (Joe Biden) ಮಾಡಿದ ದುರಂತದ ಚಾಲನಾ ಶಕ್ತಿಯಾಗಿದ್ದಾರೆ. ಅವರೆನಾದರೂ ಅಧಿಕಾರಕ್ಕೆ ಏರಿದರೆ ನಮ್ಮ ದೇಶವನ್ನು ದೇಶವನ್ನು ನಾಶಮಾಡುತ್ತಾರೆ. ಅಮೆರಿಕವನ್ನು (USA) ನಾಶ ಮಾಡಲು ನಾವು ಬಿಡುವುದಿಲ್ಲ ಎಂದು ತಿಳಿಸಿದರು.ಇದನ್ನೂ ಓದಿ: ಮೋದಿಯನ್ನು ಭೇಟಿಯಾದ ಹೆಚ್‌ಡಿಡಿ, ಹೆಚ್‌ಡಿಕೆ – ಮಹತ್ವದ ವಿಚಾರಗಳ ಕುರಿತು ಚರ್ಚೆ

    ಹ್ಯಾರಿಸ್‌ಗೆ ಹಾಕುವ ಒಂದು ಮತ ಇನ್ನೂ ನಾಲ್ಕು ವರ್ಷಗಳ ಅಪ್ರಾಮಾಣಿಕತೆ, ಅಸಮರ್ಥತೆ, ದೌರ್ಬಲ್ಯ ಮತ್ತು ವೈಫಲ್ಯಕ್ಕೆ ಹಾಕುವ ಮತವಾಗುತ್ತದೆ ಎಂದು ಟ್ರಂಪ್‌ ಹೇಳಿದರು. ಇದನ್ನೂ ಓದಿ: 2 ವರ್ಷಗಳ ಬಳಿಕ ಭಾರೀ ವಾಹನಗಳ ಸಂಚಾರಕ್ಕೆ ಪೀಣ್ಯ ಫ್ಲೈಓವರ್‌ ಮುಕ್ತ – ಈ ಷರತ್ತು ಅನ್ವಯ

    ಕಮಲಾ ಹ್ಯಾರಿಸ್‌ ಮುಟ್ಟಿದ್ದೆಲ್ಲವೂ ದುರಂತವಾಗುತ್ತದೆ ಎಂದು ಆರೋಪಿಸಿದ ಅವರು, ಉಕ್ರೇನ್‌ ದಾಳಿ ಮಾಡದಂತೆ ರಷ್ಯಾವನ್ನು ತಡೆಯಲು ಕಮಲಾ ಹ್ಯಾರಿಸ್ ಅವರನ್ನು ಯುರೋಪ್‌ಗೆ ಕಳುಹಿಸಿದಾಗ ಏನಾಯ್ತು? ಅವರು ತೆರಳಿದ ಐದು ದಿನಗಳ ನಂತರ ರಷ್ಯಾ ದಾಳಿ ಮಾಡುವ ಮೂಲಕ ಉತ್ತರಿಸಿತು. ಪುಟಿನ್ ಏನಿಲ್ಲವೆಂಬಂತೆ ಅವರನ್ನು ನೋಡಿ ನಕ್ಕರು. ಕಮಲಾ ಮುಟ್ಟಿದ್ದೆಲ್ಲವೂ ಸಂಪೂರ್ಣ ವಿಪತ್ತಿಗೆ ಕಾರಣವಾಗುತ್ತದೆ  ಎಂದು ವಾಗ್ದಾಳಿ ನಡೆಸಿದರು.

     

  • Trump Assassination Attempt | 48 ಗಂಟೆಯ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡ ಟ್ರಂಪ್‌

    Trump Assassination Attempt | 48 ಗಂಟೆಯ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡ ಟ್ರಂಪ್‌

    ವಾಷಿಂಗ್ಟನ್‌: ಶೂಟೌಟ್‌ ನಡೆದ ಎರಡು ದಿನದ ಬಳಿಕ ಮೊದಲ ಬಾರಿಗೆ ಡೊನಾಲ್ಡ್‌ ಟ್ರಂಪ್‌ (Donald Trump) ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಸೋಮವಾರ ಮಿಲ್ವಾಕಿಯಲ್ಲಿ ನಡೆದ ರಿಪಬ್ಲಿಕನ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಟ್ರಂಪ್‌ ಭಾಗವಹಿಸಿದರು.

    ಗುಂಡೇಟಿನಿಂದ ಬಲ ಕಿವಿಗೆ ಗಾಯವಾಗಿದ್ದು ಬ್ಯಾಂಡೇಜ್‌ ಹಾಕಲಾಗಿದೆ. ಟ್ರಂಪ್‌ ಬರುತ್ತಿದ್ದಂತೆ ರಿಪಬ್ಲಿಕನ್‌ ಪಕ್ಷದ ಕಾರ್ಯಕರ್ತರು ಭರ್ಜರಿ ಸ್ವಾಗತ ನೀಡಿದರು.

    ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ (Republican Party) ಅಭ್ಯರ್ಥಿಯಾಗಿ ಡೊನಾಲ್ಡ್ ಟ್ರಂಪ್ ಅವರನ್ನು ಆಯ್ಕೆ ಮಾಡಲಾಯಿತು. ರಿಪಬ್ಲಿಕನ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಈ ನಿರ್ಧಾರವನ್ನು ಘೋಷಿಸಲಾಯಿತು.  ಇದನ್ನೂ ಓದಿ: ಜೈಲಿನಲ್ಲಿರೋ ಇಮ್ರಾನ್‌ ಖಾನ್‌ಗೆ ಮತ್ತೆ ಶಾಕ್ – ದೇಶ ವಿರೋಧಿ ಚಟುವಟಿಕೆ ಆರೋಪದಡಿ ಪಿಟಿಐ ನಿಷೇಧ!

     

    2016 ರ ಚುನಾವಣೆಯಲ್ಲಿ ಟ್ರಂಪ್‌ ಅವರು ಹಿಲರಿ ಕ್ಲಿಂಟನ್‌ ಅವರನ್ನು ಸೋಲಿಸಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು. ಆದರೆ 2020ರ ಚುನಾವಣೆಯಲ್ಲಿ ಜೋ ಬೈಡನ್‌ ಮುಂದೆ ಟ್ರಂಪ್‌ ಸೋತಿದ್ದರು. ಈಗ ಎರಡನೇ ಬಾರಿ ಜೋ ಬೈಡನ್‌ ಅವರನ್ನು 78 ವರ್ಷದ ಟ್ರಂಪ್‌ ಎದುರಿಸಲಿದ್ದಾರೆ.

    ರಿಪಬ್ಲಿಕನ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಜೆಡಿ ವ್ಯಾನ್ಸ್ ಅವರನ್ನು ಡೊನಾಲ್ಡ್ ಟ್ರಂಪ್ ಅಧಿಕೃತವಾಗಿ ಘೋಷಿಸಿದ್ದಾರೆ. ಜೆಡಿ ವ್ಯಾನ್ಸ್ ಅವರ ಪತ್ನಿ ಉಷಾ ಚಿಲುಕುರಿ ವ್ಯಾನ್ಸ್, ಭಾರತೀಯ ಸಂಜಾತೆಯಾಗಿದ್ದಾರೆ.

    ಡೊನಾಲ್ಡ್ ಟ್ರಂಪ್ ಪೆನ್ಸಿಲ್ವೇನಿಯಾ ರಾಜ್ಯದ ಬಟ್ಲರ್‌ ಟೌನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹಿರಂಗ ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಥಾಮಸ್ ಕ್ರುಕ್ಸ್ ಗುಂಡು ಹಾರಿಸಿದ್ದ. ಅದೃಷ್ಟವಶಾತ್ ಗುಂಡು ಟ್ರಂಪ್ ಬಲ ಕಿವಿಯನ್ನು ಸೀಳಿ, ಕಾರ್ಯಕರ್ತನ ಎದೆಗೆ ನುಗ್ಗಿದೆ. ತಕ್ಷಣವೇ ಟ್ರಂಪ್ ಕೆಳಗೆ ಕೂತು ತಪ್ಪಿಸಿಕೊಂಡಿದ್ದಾರೆ.

    ಅರೆಕ್ಷಣದಲ್ಲೇ ಭದ್ರತಾ ಪಡೆಗಳು ಟ್ರಂಪ್ ಸುತ್ತುವರಿದು ರಕ್ಷಣೆ ನೀಡಿವೆ. ಕ್ಷಣಾರ್ಧದಲ್ಲೇ ಅಣತಿ ದೂರದ ಉತ್ಪಾದನಾ ಘಟಕದ ಛಾವಣಿಯ ಮೇಲೆ ಕೂತು ಗುಂಡು ಹಾರಿಸಿದ ಹಂತಕನನ್ನು ಅಮೆರಿಕ ಸ್ನಿಪ್ಪರ್‌ಗಳು ಹೊಡೆದುರುಳಿಸಿವೆ. ಹಂತಕನನ್ನು ಬೆಥೆಲ್ ಪಾರ್ಕ್ನ 20 ವರ್ಷದ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂದು ಎಫ್‌ಬಿಐ ಗುರುತಿಸಿದೆ. ಘಟನೆ ಬಳಿಕ ಸಾವರಿಸಿಕೊಂಡ ಟ್ರಂಪ್, ಕೈ ಎತ್ತಿ ಮುಷ್ಠಿ ಹಿಡಿದು ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಬಳಿಕ ಸರಣಿ ಟ್ವೀಟ್ ಮಾಡಿ, ನನ್ನ ಬಲಕಿವಿಯ ಮೇಲ್ಭಾಗದಲ್ಲಿ ಗಾಯವಾಗಿದೆ. ನಮ್ಮ ದೇಶದಲ್ಲಿ ಇಂತಹ ಕೃತ್ಯ ನಡೆದಿರುವುದನ್ನು ನಂಬಲಾಗುತ್ತಿಲ್ಲ. ಸೀಕ್ರೆಟ್ ಸರ್ವಿಸ್ ಹಾಗೂ ಕಾನೂನು ವ್ಯವಸ್ಥೆ ಕೈಗೊಂಡ ತ್ವರಿತ ಕ್ರಮಕ್ಕೆ ಧನ್ಯವಾದಗಳು ಎಂದಿದ್ದರು.

  • ಅಂದು ನನ್ನ ತಾಯಿ ಭಾರತದಿಂದ ಬಂದಾಗ ಇದನ್ನು ಊಹಿಸಿರಲಿಲ್ಲ: ಕಮಲಾ ಹ್ಯಾರಿಸ್

    ಅಂದು ನನ್ನ ತಾಯಿ ಭಾರತದಿಂದ ಬಂದಾಗ ಇದನ್ನು ಊಹಿಸಿರಲಿಲ್ಲ: ಕಮಲಾ ಹ್ಯಾರಿಸ್

    – ಗೆಲುವಿನ ಬಳಿಕ ಮೊದಲ ಭಾಷಣ ಮಾಡಿದ ಕಮಲಾ

    ವಾಷಿಂಗ್ಟನ್: ವಿಶ್ವದ ಗಮನವನ್ನೇ ಸೆಳೆದಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶ ಕೊನೆಗೂ ಅಚ್ಚರಿಯ ರೀತಿಯಲ್ಲಿ ಹೊರಬಿದ್ದಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷ ಅಭ್ಯರ್ಥಿ ಜೋ ಬೈಡನ್ 273 ಮತಗಳನ್ನು ಪಡೆಯುವುದರ ಮೂಲಕ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಇದರಿಂದಾಗಿ ಅಮೆರಿಕದಾದ್ಯಂತ ಸಂಭ್ರಮ ಮನೆ ಮಾಡಿದ್ದು, ಎಲ್ಲೆಡೆ ಜಯಘೋಷ ಕೇಳಿ ಬರುತ್ತಿದೆ. ಅದೇ ರೀತಿ ತಮಿಳುನಾಡು ಮೂಲದ ಕಮಲಾ ಹ್ಯಾರಿಸ್ ಅವರು ಉಪಾಧ್ಯಕ್ಷರಾಗಿರುವುದಕ್ಕೂ ಸಹ ಭಾರತೀಯರು ಸಂಭ್ರಮಿಸುತ್ತಿದ್ದಾರೆ.

    ಜೋ ಬೈಡನ್ 46ನೇ ಅಮೆರಿಕ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಳ್ಳಲಿದ್ದಾರೆ. ಪೆನ್ಸಿಲ್ವೇನಿಯಾದಲ್ಲಿ ಗೆಲುವು ಸಾಧಿಸುವ ಮೂಲಕ ಡೆಮಾಕ್ರೆಟ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಜಯಗಳಿಸಿದ್ದು, ಅಧ್ಯಕ್ಷ ಸ್ಥಾನಕ್ಕೆ 270 ಮ್ಯಾಜಿಕ್ ನಂಬರ್ ಆಗಿತ್ತು. 273 ಎಲೆಕ್ಟ್ರಲ್ ಮತಗಳನ್ನು ಗಳಿಸುವ ಮೂಲಕ ಅಧ್ಯಕ್ಷರಾಗಿ ಹೊರಹೊಮ್ಮಿದ್ದಾರೆ. ಉಪಾಧ್ಯಕ್ಷೆಯಾಗಿ ತಮಿಳುನಾಡು ಮೂಲದ ಕಮಲ ಹ್ಯಾರಿಸ್ ಆಯ್ಕೆಯಾಗಿದ್ದಾರೆ. ಭಾರತೀಯರಿಗೆ ಅವರು ನಮ್ಮ ದೇಶದವರು ಎಂಬ ಸಂಭ್ರಮವಾದರೆ, ಇತಿಹಾಸದಲ್ಲೇ ಪ್ರಥಮ ಬಾರಿಗೆ ಮಹಿಳೆಯೊಬ್ಬರು ಉಪಾಧ್ಯಕ್ಷರಾಗಿರುವುದು ಅಮೆರಿಕನ್ನರಿಗೆ ಸಂತಸ ತಂದಿದೆ.

    ಈ ಕುರಿತು ಸಂತಸ ವ್ಯಕ್ತಪಡಿಸಿರುವ ಕಮಲಾ ಹ್ಯಾರಿಸ್, ಪ್ರಜಾಪ್ರಭುತ್ವ ಅಧಿಕಾರವಲ್ಲ, ಅದು ಒಂದು ಪ್ರಕ್ರಿಯೆ ಎಂದು ಹೇಳಿದ್ದಾರೆ. ಅಲ್ಲದೆ ಈ ಸಂತಸದ ಸಂದರ್ಭದಲ್ಲಿ ಅವರ ತಾಯಿ ಶ್ಯಾಮಲಾ ಗೋಪಾಲನ್ ಹ್ಯಾರಿಸ್ ಅವರು ಸ್ಮರಿಸಿದ್ದು, ನನ್ನ ತಾಯಿಗೆ 19 ವರ್ಷದವಳಿದ್ದಾಗ ಭಾರತದಿಂದ ನನ್ನ ತಾಯಿ ಅಮೆರಿಕಗೆ ಬಂದಾಗ ಅವರು ಇದನ್ನು ಊಹಿಸಿರಲಿಲ್ಲ. ಆದರೆ ಈ ರೀತಿಯ ಒಂದು ಕ್ಷಣ ಅನುಭವಿಸಲು ಸಾಧ್ಯವಿರುವ ಅಮೆರಿಕವನ್ನು ಆಳವಾಗಿ ನಂಬಿದ್ದಳು ಭಾವನಾತ್ಮ ಭಾಷಣ ಮಾಡಿದ್ದಾರೆ.

    ಜೋ ಬೈಡನ್ ಅಮೆರಿಕದ ಅಧ್ಯಕ್ಷ ಎಂದು ಘೋಷಿಸಲಾಗಿದ್ದು, ಪೆನ್ಸಿಲ್ವೇನಿಯಾದಲ್ಲಿ 20 ಎಲೆಕ್ಟ್ರಲ್ ಮತಗಳನ್ನು ಪಡೆಯುವ ಮೂಲಕ ಬೈಡನ್ ಗೆಲುವು ಸಾಧಿಸಿರುವ ಕುರಿತು ಘೋಷಿಸಲಾಗಿದೆ. ಇನ್ನೇನು ಅಧಿಕಾರ ಸ್ವೀಕಾರ ಮಾತ್ರ ಬಾಕಿ ಉಳಿದಿದೆ. ಅಲ್ಲದೆ ಇಂದು ದೇಶವನ್ನುದ್ದೇಶಿಸಿ ಬೈಡನ್ ಭಾಷಣ ಮಾಡಲಿದ್ದಾರೆ.

  • ಮುನ್ನಡೆಯಲ್ಲಿ ಬೈಡನ್‌ – ಟ್ರಂಪ್‌ ಸೋತರೆ ಏನು ಮಾಡಬಹುದು?

    ಮುನ್ನಡೆಯಲ್ಲಿ ಬೈಡನ್‌ – ಟ್ರಂಪ್‌ ಸೋತರೆ ಏನು ಮಾಡಬಹುದು?

    ವಾಷಿಂಗ್ಟನ್‌: ನಾಲ್ಕು ದಿನ ಕಳೆದರೂ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಮಾತ್ರ ಇನ್ನೂ ಪೂರ್ಣವಾಗಿ ಹೊರಬಿದ್ದಿಲ್ಲ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಗೆಲುವಿನ ಅಂಚಿನಲ್ಲಿದ್ದರೂ, ಸಂಭ್ರಮಿಸುವ ಸ್ಥಿತಿಯಲ್ಲಿಲ್ಲ. ಫಲಿತಾಂಶ ಹೊರಬೀಳಬೇಕಿರುವ ಐದು ರಾಜ್ಯಗಳಲ್ಲಿ ಮತ ಎಣಿಕೆ ಮುಂದುವರೆದಿದ್ದು, ಟ್ರಂಪ್-ಬೈಡನ್ ನಡುವೆ ನಾನಾ ನೀನಾ ಎನ್ನುವಷ್ಟರ ಮಟ್ಟಿಗೆ ಟಫ್ ಫೈಟ್ ನಡೆಯುತ್ತಿದೆ.

    ನಿನ್ನೆಯವರೆಗೂ ನೆವಾಡದಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದ್ದ ಜೋ ಬೈಡನ್ ಇಂದು ಜಾರ್ಜಿಯಾದಲ್ಲಿಯೂ ಮೇಲುಗೈ ಸಾಧಿಸಿದ್ದಾರೆ. ಪೆನ್ಸಿಲ್ವೇನಿಯಾದಲ್ಲಿ ಟ್ರಂಪ್ ಮುನ್ನಡೆಯಲ್ಲಿದ್ದಾರೆ. ಆದರೆ ಮತ ಎಣಿಕೆ ಮುಂದುವರಿದಂತೆ ಜೋ ಬೈಡನ್ ನಿಕಟ ಸ್ಪರ್ಧೆ ನೀಡ್ತಿದ್ದಾರೆ. ಇಲ್ಲಿಯೂ ಯಾವುದೇ ಕ್ಷಣದಲ್ಲಿ ಜೋ ಬೈಡನ್ ಮುನ್ನಡೆ ಸಾಧಿಸುವ ಸಂಭವ ಕಂಡು ಬರುತ್ತಿದೆ.

     

    ಅಲಸ್ಕಾ ಮತ್ತು ನಾರ್ತ್ ಕೊರೋಲಿನಾದಲ್ಲಿ ಮಾತ್ರ ಟ್ರಂಪ್ ಸ್ಪಷ್ಟ ಮುನ್ನಡೆ ಕಾಯ್ದುಕೊಂಡಿದ್ದಾರೆ. ಈ ಐದರಲ್ಲಿ ಅಲಸ್ಕಾ ಬಿಟ್ಟು, ಯಾವುದೇ ರಾಜ್ಯವನ್ನು ಗೆದ್ದರೂ ಬೈಡನ್ ಅಧ್ಯಕ್ಷೀಯ ಚುನಾವಣೆ ಗೆದ್ದಂತೆ ಆಗುತ್ತದೆ.

    ಅಮೆರಿಕದಲ್ಲಿ ಕಳೆದ 120 ವರ್ಷಗಳಲ್ಲೇ ಕಂಡು ಕೇಳರಿಯದ ರೀತಿ ಅಂದ್ರೆ ಶೇ.66ರಷ್ಟು ಮತದಾನ ನಡೆದಿದೆ. ಈ ಹಿಂದಿನ ಎಲ್ಲಾ ಅಧ್ಯಕ್ಷೀಯ ಅಭ್ಯರ್ಥಿಗಳನ್ನು ಮೀರಿಸಿ ಬೈಡನ್ 7.10 ಕೋಟಿ ಮತ ಪಡೆದು ದಾಖಲೆ ಬರೆದಿದ್ದಾರೆ. ಇದು ಇನ್ನಷ್ಟು ಹೆಚ್ಚಾಗಲಿದೆ.

    ಫಲಿತಾಂಶದ ಬಗ್ಗೆ ಟ್ರಂಪ್ ತೀವ್ರ ಅಸಮಾಧಾನ ಹೊಂದಿದ್ದಾರೆ. ಮತ ಎಣಿಕೆ ವೇಳೆ ಅಕ್ರಮ ನಡೆಯುತ್ತಿದೆ. ಕೌಂಟಿಂಗ್ ಕೇಂದ್ರಗಳಿಗೆ ನಮ್ಮ ಪಕ್ಷದವರನ್ನು ಬಿಟ್ಟುಕೊಳ್ತಿಲ್ಲ ಎಂದು ಟ್ರಂಪ್ ದೂರುತ್ತಿದ್ದಾರೆ. ಈ ಮಧ್ಯೆ ಅಮೆರಿಕಾದ ಬಹುತೇಕ ರಾಜ್ಯಗಳಲ್ಲಿ ಉಭಯ ಪಕ್ಷಗಳ ಕಾರ್ಯಕರ್ತರು ಬೀದಿಗೆ ಇಳಿದು ಪ್ರತಿಭಟನೆ ನಡೆಸ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಬೈಡನ್‍ಗೆ ಭದ್ರತೆ ಹೆಚ್ಚಿಸಲಾಗಿದೆ. 538 ಸ್ಥಾನಗಳ ಪೈಕಿ ಮ್ಯಾಜಿಕ್ ನಂಬರ್ 270 ಆಗಿದ್ದು ಜೋ ಬೈಡನ್ 264 ಡೊನಾಲ್ಡ್ ಟ್ರಂಪ್ 214 ಗೆದ್ದುಕೊಂಡಿದ್ದಾರೆ.

    ಟ್ರಂಪ್‌ ಏನು ಮಾಡಬಹುದು?
    ಒಂದು ವೇಳೆ ಜೋ ಬೈಡನ್ ಗೆದ್ದರೂ ಅಷ್ಟು ಸುಲಭಕ್ಕೆ ಅಧಿಕಾರ ಬಿಟ್ಟು ಕೊಡುವುದಿಲ್ಲ ಎಂದು ಟ್ರಂಪ್ ಹೇಳಿದ್ದರು. ಚುನಾವಣೆಗೆ ಮೊದಲೇ ಪೋಸ್ಟಲ್‌ ವೋಟಿಂಗ್‌ನಲ್ಲಿ ಭಾರೀ ಅಕ್ರಮ ನಡೆಯಲಿದೆ ಎಂದಿದ್ದರು. ಈಗಲೂ ಈ ಮಾತನ್ನೇ ಹೇಳುತ್ತಿದ್ದಾರೆ. ಹೀಗಾಗಿ ಟ್ರಂಪ್ ಸೋತರೂ ಜನವರಿ 20ರವರೆಗೂ ಅಧಿಕಾರದಲ್ಲಿ ಮುಂದುವರಿಯಲು ಅವಕಾಶವಿದೆ.

    ಈಗಾಗಲೇ ಟ್ರಂಪ್‌ ಚುನಾವಣಾ ಮತ ಎಣಿಕೆಯ ಅಕ್ರಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ. ಬರೋಬ್ಬರಿ 76 ದಿನ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲೇ ಇದ್ದು ಅಧಿಕಾರ ಚಲಾಯಿಸಬಹುದು. ಟ್ರಂಪ್ ಕೈಯಲ್ಲಿ ಅಧಿಕಾರ ಇರುವ ಕಾರಣ ಅವರು ಏನು ಬೇಕಾದರೂ ಮಾಡಬಹುದು. ವಿವಾದಾತ್ಮಕ ನಿರ್ಣಯಗಳನ್ನು ಕೈಗೊಳ್ಳುವ ಮೂಲಕ ಉನ್ನತಾಧಿಕಾರಿಗಳ ವರ್ಗಾವಣೆಗಳನ್ನು ಮಾಡಬಹುದು .

    76 ದಿನಗಳ ಬಳಿಕವೂ ಟ್ರಂಪ್ ಅಧಿಕಾರ ಹಸ್ತಾಂತರ ಮಾಡದಿದ್ದರೆ ಮುಂದೇನು ಎಂಬ ಬಗ್ಗೆ ಸಂವಿಧಾನದಲ್ಲಿ ಉಲ್ಲೇಖವಿಲ್ಲ. ನೂತನ ಅಧ್ಯಕ್ಷರು, ಸೀಕ್ರೆಟ್ ಏಜೇನ್ಸಿ ನೆರವಿನಿಂದ ಟ್ರಂಪ್‍ರನ್ನು ಶ್ವೇತಸೌಧದಿಂದ ಹೊರಗೆ ಕಳಿಸಬಹುದು. ಟ್ರಂಪ್ ಮಾಜಿ ಅಧ್ಯಕ್ಷರಾಗುವ ಹಿನ್ನೆಲೆಯಲ್ಲಿ ಪ್ರೋಟೋಕಾಲ್ ಕೂಡ ಇದಕ್ಕೆ ಅಡ್ಡ ಬರಬಹುದು.

  • ಮತ ಎಣಿಕೆ ನಿಲ್ಲಿಸುವಂತೆ ಟ್ರಂಪ್‌ ಆಗ್ರಹ – ಗೂಂದಲದ ಗೂಡಾಯ್ತು ಚುನಾವಣೆ

    ಮತ ಎಣಿಕೆ ನಿಲ್ಲಿಸುವಂತೆ ಟ್ರಂಪ್‌ ಆಗ್ರಹ – ಗೂಂದಲದ ಗೂಡಾಯ್ತು ಚುನಾವಣೆ

    ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆ ಗೊಂದಲದ ಗೂಡಾಗಿ ಪರಿಣಮಿಸಿದೆ. ಎಲೆಕ್ಟೊರಲ್ ಮತಗಳ ಎಣಿಕೆಯಲ್ಲಿ ಜೋ ಬೈಡನ್ ಸ್ಪಷ್ಟ ಮುನ್ನಡೆ ಸಾಧಿಸಿದ್ದು, ಮ್ಯಾಜಿಕ್ ಫಿಗರ್ 270ರ ಸನಿಹದಲ್ಲಿದ್ದಾರೆ. ಸದ್ಯ ಜೋ ಬೈಡನ್‍ಗೆ 264 ಮತ ಬಿದ್ದಿದ್ರೆ, ಟ್ರಂಪ್‍ಗೆ 214 ಮತಗಳಷ್ಟೇ ಬಂದಿವೆ.

    ಇಲ್ಲಿಯವರೆಗೆ 45 ರಾಜ್ಯಗಳ ಫಲಿತಾಂಶ ಹೊರಬಿದ್ದಿದ್ದು, ಪೆನ್ಸಿಲ್ವೇನಿಯಾ, ಜಾರ್ಜಿಯಾ, ನಾರ್ತ್ ಕರೋಲಿನಾ, ನೆವಾಡ, ಅಲಸ್ಕಾ ರಾಜ್ಯಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ಮುಂದುವರೆದಿದೆ. ಈ ಐದರ ಪೈಕಿ ಮೂರರಲ್ಲಿ ಟ್ರಂಪ್ ಮುನ್ನಡೆಯಲ್ಲಿದ್ದಾರೆ.

    ಮಿಚಿಗನ್, ಜಾರ್ಜಿಯಾ ಮತ್ತು ಪೆನ್ಸಲ್ವೇನಿಯಾ ಫಲಿತಾಂಶದ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಟ್ರಂಪ್, ಮತ ಎಣಿಕೆ ನಿಲ್ಲಿಸುವಂತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಜೊತೆಗೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಅಂತಾ ಆರೋಪಿಸಿ ಅಮೆರಿಕಾದ ಎಲ್ಲೆಡೆ ಟ್ರಂಪ್ ಬೆಂಬಲಿಗರು ರಸ್ತೆಗಿಳಿದು ಪ್ರತಿಭಟನೆ ತೀವ್ರಗೊಳಿಸಿದ್ದಾರೆ.

    ಪರಿಸ್ಥಿತಿ ಉದ್ವಿಗ್ನಗೊಳ್ತಿದ್ದು, ಮತ ಎಣಿಕಾ ಕೇಂದ್ರಗಳ ಸುತ್ತ ಭದ್ರತೆ ಬಿಗಿಗೊಳಿಸಲಾಗಿದೆ. ಇದೆಲ್ಲವನ್ನು ನೋಡಿದ್ರೆ, ತಕ್ಷಣವೇ ಸಂಪೂರ್ಣ ಫಲಿತಾಂಶ ಪ್ರಕಟವಾಗುವ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ.

    ಯಾಕೆ ಈ ಗೊಂದಲ?
    ಅಧ್ಯಕ್ಷೀಯ ಚುನಾವಣೆ ಸಂಬಂಧ ಎಲ್ಲಾ ರಾಜ್ಯಗಳಲ್ಲಿ ಏಕರೂಪದ ನಿಯಮಗಳು ಇಲ್ಲ. ವೋಟಿಂಗ್, ಪೋಸ್ಟಲ್ ಬ್ಯಾಲೆಟ್‍ಗಳ ವಿಚಾರದಲ್ಲಿ ಒಂದೊಂದು ರಾಜ್ಯದಲ್ಲಿ ಒಂದೊಂದು ನಿಯಮವಿದೆ.

    ಭಾರತದಲ್ಲಿ ಚುನಾವಣೆ ನಡೆಸಲು ಚುನಾವಣಾ ಆಯೋಗ ಇರುತ್ತದೆ. ಆದರೆ ಇಲ್ಲಿ ರಾಜ್ಯ ಚುನಾವಣಾ ಸಂಸ್ಥೆಗಳೇ ಎಲೆಕ್ಷನ್ ನಿರ್ವಹಿಸುತ್ತವೆ. ನಮ್ಮ ದೇಶದಲ್ಲಿ 14 ಗುರುತಿನ ಚೀಟಿ ಪೈಕಿ ಯಾವುದನ್ನು ತೋರಿಸಿದರೂ ವೋಟ್ ಹಾಕಲು ಬಿಡುತ್ತಾರೆ. ಆದ್ರೆ ಅಮೇರಿಕಾದಲ್ಲಿ ಹಾಗಲ್ಲ. ಯಾವುದನ್ನು ಪರಿಗಣಿಸುತ್ತಾರೆ ಯಾವುದನ್ನು ತಿರಸ್ಕರಿಸುತ್ತಾರೆ ಎಂಬುದನ್ನು ಹೇಳುವುದೇ ಕಷ್ಟ. ಒಂದೊಂದು ರಾಜ್ಯದಲ್ಲಿಯೂ ಒಂದೊಂದು ನಿಯಮವಿದೆ.

    50 ರಾಜ್ಯಗಳ ಪೈಕಿ 33ರಲ್ಲಿ ರಾಜಕೀಯ ನಾಯಕರನ್ನೇ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಲಾಗುತ್ತದೆ. ಅವರ ರಾಜಕೀಯ ಹಿನ್ನೆಲೆ, ವ್ಯಕ್ತಿತ್ವದ ಆಧಾರದ ಮೇಲೆ ಚುನಾವಣಾ ಸಂಸ್ಥೆಯ ವ್ಯವಹಾರ ಶೈಲಿ ಇರುತ್ತದೆ. ಒಂದು ಪಕ್ಷದ ಪರವೇ ನಿರ್ಣಯ ಕೈಗೊಳ್ಳುವುದು ಹೆಚ್ಚು. ಇದು ವಿವಾದಕ್ಕೆ ಎಡೆ ಮಾಡುತ್ತಿದೆ. ಇದನ್ನೂ ಓದಿ: ಮತ ಎಣಿಕೆ 1 ದಿನ ಪೂರ್ಣಗೊಂಡರೂ ಇನ್ನೂ ಅಮೆರಿಕದ ಫಲಿತಾಂಶ ಪ್ರಕಟವಾಗಿಲ್ಲ ಯಾಕೆ?

    ಚುನಾವಣೆ ರ್ನಿಹಿಸುವ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರಗಳೇ ಇಲ್ಲ. ತಮ್ಮ ವಿವೇಚನೆ ಆಧರಿಸಿ ನಿರ್ಣಯ ತೆಗೆದುಕೊಳ್ಳುವುದಕ್ಕೆ ಇಲ್ಲಿ ಅವಕಾಶವೇ ಇಲ್ಲ. ಚುನಾವಣಾ ವಿವಾದ ಬಗೆಹರಿಸಲು ಪ್ರತ್ಯೇಕ ಸಂಸ್ಥೆಯಿಲ್ಲ. ಎಲೆಕ್ಷನ್ ವಿವಾದ ಬಗೆಹರಿಸಲು ಪ್ರತ್ಯೇಕ ಸಂಸ್ಥೆ ಇಲ್ಲ. ರಾಜ್ಯಕ್ಕೊಂದು ನಿಯಮ ಇರುವ ಕಾರಣ, ಎಲೆಕ್ಷನ್ ವಿವಾದಗಳು ಕೋರ್ಟ್ ಮೆಟ್ಟಿಲು ಹತ್ತುತ್ತವೆ. ಹೀಗಾಗಿಯೇ ಫಲಿತಾಂಶಗಳು ತಡವಾದ ಉದಾಹರಣೆಗಳು ಇವೆ.

    ಮತ ಎಣಿಕೆಗೂ ಒಂದು ಪದ್ಧತಿ ಎಂಬುದಿಲ್ಲ. ಅದರಲ್ಲೂ ಪೋಸ್ಟಲ್ ಬ್ಯಾಲೆಟ್‍ಗಳ ಎಣಿಕೆ ವಿಚಾರದಲ್ಲಿ ಇಷ್ಟ ಬಂದಂತೆ ನಡೆದುಕೊಳ್ಳಲಾಗುತ್ತದೆ. ರಾಜ್ಯದಿಂದ ರಾಜ್ಯಕ್ಕೆ ನಿಯಮಗಳು ಬದಲಾಗುತ್ತಿರುತ್ತವೆ.

  • ಆರಂಭದಲ್ಲಿ ಹಿನ್ನಡೆ, ಕೊನೆಗೆ ಟ್ರಂಪ್‌ ಮುನ್ನಡೆ – ಯಾರಾಗ್ತಾರೆ ಅಮೆರಿಕದ ಅಧ್ಯಕ್ಷ?

    ಆರಂಭದಲ್ಲಿ ಹಿನ್ನಡೆ, ಕೊನೆಗೆ ಟ್ರಂಪ್‌ ಮುನ್ನಡೆ – ಯಾರಾಗ್ತಾರೆ ಅಮೆರಿಕದ ಅಧ್ಯಕ್ಷ?

    ವಾಷಿಂಗ್ಟನ್‌: ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ರಿಪಬ್ಲಿಕನ್ ಪಕ್ಷದ ಡೋನಾಲ್ಡ್ ಟ್ರಂಪ್ ಹಾಗೂ ಡೆಮಾಕ್ರಟಿಕ್ ಪಕ್ಷದ ಜೋ ಬೈಡೆನ್ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ.

    ವಿಜೇತರನ್ನು ನಿರ್ಣಯಿಸುವ ಎಲೆಕ್ಟೋರಲ್ ಮತಗಳಲ್ಲಿ ಬೈಡೆನ್ ಮುನ್ನಡೆ ಸಾಧಿಸಿದ್ದಾರೆ. ಬೆಳಗ್ಗೆ ತೀರಾ ಹಿಂದಿದ್ದ ಟ್ರಂಪ್ ಸಂಜೆ ಹೊತ್ತಿಗೆ ಭಾರೀ ಪೈಪೋಟಿ ನೀಡಿದ್ದಾರೆ. ಯಾವುದೇ ಕ್ಷಣದಲ್ಲೂ ಜೋ ಬೈಡನ್‍ರನ್ನು ಹಿಂದಿಕ್ಕುವ ಸಾಧ್ಯತೆಗಳೂ ಇವೆ.

    ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳನ್ನು ಸುಳ್ಳು ಮಾಡಿ ಟ್ರಂಪ್ ಮುನ್ನುಗ್ಗುತ್ತಿದ್ದಾರೆ. ನಗರ ಮತದಾರರು ಬೈಡನ್ ಪರ ಇದ್ದರೆ ಗ್ರಾಮೀಣ ಮತದಾರರ ಟ್ರಂಪ್ ಬೆಂಬಲಕ್ಕೆ ನಿಂತಿದ್ದಾರೆ. ಅಮೆರಿಕ ಅಧ್ಯಕ್ಷರಾಗಿ ಹೊರಹೊಮ್ಮಲು ಕನಿಷ್ಠ 270 ಎಲೆಕ್ಟೋರಲ್ ಕಾಲೇಜ್ ಮತಗಳ ಅಗತ್ಯತೆ ಇದ್ದು, ಸದ್ಯ ಬೈಡನ್ 238 ಮತ, ಟ್ರಂಪ್ 213 ಮತ ಪಡೆದುಕೊಂಡಿದ್ದಾರೆ.

    ಮತ ಎಣಿಕೆ ನಡೆಯುತ್ತಿರುವ ಮಿಚಿಗನ್, ಜಾರ್ಜಿಯಾದಲ್ಲೂ ಟ್ರಂಪ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಹೀಗಾಗಿ ಇಬ್ಬರು ಅಭ್ಯರ್ಥಿಗಳ ನಡುವೆ ಅಂತರ ಇರೋದು ಸ್ವಲ್ಪ ಮಾತ್ರ. ಗಮನಿಸಬೇಕಾದ ವಿಚಾರ ಅಂದ್ರೆ, 20 ಎಲೆಕ್ಟೋರಲ್ ಮತಗಳಿರುವ ಪೆನ್ಸಿಲ್ವೇನಿಯಾದಲ್ಲೇ ಬೈಡನ್ ಹಿನ್ನಡೆ ಸಾಧಿಸಿದ್ದಾರೆ.

    ಮತ ಎಣಿಕೆ ಪೂರ್ಣಗೊಳ್ಳುವ ಮುನ್ನವೇ ತಾನು ಗೆದ್ದಿದ್ದೇನೆ ಎಂದು ಟ್ರಂಪ್ ಸ್ವಯಂ ಘೋಷಿಸಿಕೊಂಡಿದ್ದಾರೆ. ಕೆಲವು ಕಡೆ ಇನ್ನೂ ಮತದಾನಕ್ಕೆ ಅವಕಾಶ ನೀಡಲಾಗ್ತಿದೆ. ಇದನ್ನು ಕೂಡಲೇ ನಿಲ್ಲಿಸಬೇಕೆಂದು ಆಗ್ರಹಿಸಿದ್ದಾರೆ. ಮುಖ್ಯವಾಗಿ ಪೋಸ್ಟಲ್ ಬ್ಯಾಲೆಟ್‍ಗೆ ಅನುಮತಿ ನೀಡಿರೋದನ್ನು ಟ್ರಂಪ್ ವಿರೋಧಿಸ್ತಿದ್ದು, ಸುಪ್ರೀಂಕೋರ್ಟ್ ಮೊರೆ ಹೋಗುವ ಎಚ್ಚರಿಕೆ ನೀಡಿದ್ದಾರೆ.

    ಟ್ರಂಪ್ ಕೈ ಹಿಡಿದ ರಾಜ್ಯಗಳು
    ಫ್ಲೋರಿಡಾ, ಟೆಕ್ಸಾಸ್, ನ್ಯೂಜೆರ್ಸಿ, ಒಹಿಯೋ, ವ್ಯೋಮಿಂಗ್, ಕನ್ಸಾಸ್, ಮಿಸೌರಿ, ಮಿಸಿಸಿಪ್ಪಿ, ಕೆಂಟುಕಿ, ಇಂಡಿಯಾನಾ, ಸೌತ್ ಕರೋಲಿನಾ, ಮೊಂಟಾನಾ, ಉತ್ತರ ಡಕೋಟಾ, ದಕ್ಷಿಣ ಡಕೋಟಾ, ಅರ್ಕಾನ್ಸಾಸ್, ಇದಾಹೋ, ನೆಬ್ರಾಸ್ಕಾ, ಓಕ್ಲಾಹಾಮಾ, ಇಂಡಿಯಾನಾ,

    ಟ್ರಂಪ್ ಮುನ್ನಡೆಯಲ್ಲಿರುವ ರಾಜ್ಯಗಳು:
    ಮಿಚಿಗನ್, ಪೆನ್ಸಿಲ್ವೇನಿಯಾ, ಅಲಸ್ಕಾ, ನೆವಾಡ, ಜಾರ್ಜಿಯಾ, ನಾರ್ತ್ ಕರೋಲಿನಾ

    ಜೋ ಬೈಡೆನ್ ಕೈ ಹಿಡಿದ ರಾಜ್ಯಗಳು:
    ವಾಷಿಂಗ್ಟನ್, ಟೆಕ್ಸಾಸ್, ನ್ಯೂಯಾರ್ಕ್, ಅರಿಜೋನಾ, ನ್ಯೂಜೆರ್ಸಿ, ಕ್ಯಾಲಿಫೋರ್ನಿಯಾ, ಕೊಲರಾಡೋ, ಒರೆಗಾನ್, ಮಿನ್ನಿಸೋಟಾ, ನ್ಯೂ ಮೆಕ್ಸಿಕೋ, ಇಲಿನಾಯ್ಸ್, ವರ್ಜೀನಿಯಾ, ಮ್ಯಾಸಚೂಸೆಟ್ಸ್, ಹವಾಯ್, ವೆರ್ಮೋಂಟ್, ಮೈನೆ, ನ್ಯೂ ಹ್ಯಾಂಪ್‍ಷೈರ್, ಮೇರಿಲ್ಯಾಂಡ್,

    ಬೈಡನ್ ಮುನ್ನಡೆಯಲ್ಲಿರುವ ರಾಜ್ಯಗಳು:
    ನೆವಾಡ, ವಿಸ್ಕಿನ್ಸನ್

  • ಅಮೆರಿಕ ಚುನಾವಣೆ – ಮೊದಲ ಬಾರಿಗೆ ತಮಿಳಿನಲ್ಲಿ ಚುನಾವಣಾ ಪ್ರಚಾರ

    ಅಮೆರಿಕ ಚುನಾವಣೆ – ಮೊದಲ ಬಾರಿಗೆ ತಮಿಳಿನಲ್ಲಿ ಚುನಾವಣಾ ಪ್ರಚಾರ

    ವಾಷಿಂಗ್ಟನ್‌: ಅಮೆರಿಕ ಚುನಾವಣೆಯಲ್ಲಿ ಮೊದಲ ಬಾರಿ ತಮಿಳು ಭಾಷೆಯಲ್ಲಿ ಪ್ರಚಾರ ನಡೆದಿದೆ. ಡೆಮಾಕ್ರೆಟಿಕ್‌ ಪಕ್ಷದ ಅ‍ಭ್ಯರ್ಥಿಯಾಗಿರುವ ಕಮಲ ಹ್ಯಾರಿಸ್‌ ತಮಿಳಿನಲ್ಲಿ ಪ್ರಚಾರ ಮಾಡುವ ಮೂಲಕ ಅನಿವಾಸಿ ಭಾರತೀಯರ ಮನ ಗೆಲ್ಲುವ ಪ್ರಯತ್ನ ಮಾಡಿದ್ದಾರೆ.

    ಬುಧವಾರ ಡೆಮಾಕ್ರೆಟಿಕ್‌ ಪಕ್ಷದ ರಾಷ್ಟ್ರೀಯ ಸಮಾವೇಶ ನಡೆದಿತ್ತು. ಈ ವೇಳೆ ನವೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಜೋ ಬೈಡನ್ ಪರ ಮಾತನಾಡುವ ಸಂದರ್ಭದಲ್ಲಿ ‘ಚಿತ್ತಿ’ ಎಂದು ಸಂಬೋಧಿಸಿದ್ದಾರೆ.

    ನಾನು ಅಮೆರಿಕದ ಅಮೇರಿಕಾ ಉಪಾಧ್ಯಕ್ಷರಾಗಿ ನಿಮ್ಮ ನಾಮನಿರ್ದೇಶನವನ್ನು ನಾನು ಸ್ವೀಕರಿಸುತ್ತೇನೆ. ನನ್ನ ಪತಿ ಡೌಗ್. ನಮ್ಮ ಸುಂದರ ಮಕ್ಕಳು, ಕೋಲ್ ಮತ್ತು ಎಲಾ. ನನ್ನನ್ನು ಮೊಮಲಾ ಎಂದು ಕರೆಯುತ್ತಾರೆ. ನನಗೆ ತಂಗಿ ಇದ್ದಾಳೆ. ಕುಟುಂಬವು ನನ್ನ ಉತ್ತಮ ಸ್ನೇಹಿತ. ಚಿಕ್ಕಮ್ಮ ಮತ್ತು ಚಿತ್ತಿ ಇರುವ ಕುಟುಂಬ ನಮ್ಮದು ಎಂದು ಹೇಳಿದ್ದಾರೆ.

    ತಾಯಿಯ ತಂಗಿ, ತಂದೆಯ ಕಿರಿಯ ಸಹೋದರಿ,  ತಂದೆಯ ಕಿರಿಯ ಸಹೋದರನ ಪತ್ನಿಯನ್ನು ತಮಿಳು ಭಾಷೆಯಲ್ಲಿ ಚಿತ್ತಿ(ಚಿಕ್ಕಮ್ಮ) ಎಂದು ಕರೆಯಲಾಗುತ್ತದೆ.  ಇದನ್ನೂ ಓದಿ: ಫಸ್ಟ್ ಟೈಂ – ಅಮೆರಿಕ ಚುನಾವಣೆಯಲ್ಲಿ ಹಿಂದೂಗಳ ಓಲೈಕೆ

    ಕಮಲ ಹ್ಯಾರಿಸ್‌ ತಮಿಳು ಪದವನ್ನು ಬಳಸಿದ್ದು ತಮಿಳು ಭಾಷಿಗರಿಗೆ ಸಂತಸ ತಂದಿದೆ. ತಮಿಳುನಾಡಿನಲ್ಲಿ ಈ ಪದ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ ಸೃಷ್ಟಿಸಿದೆ.

    ಜೋ ಬೈಡೆನ್‍ ಅವರು ಭಾರತ ಮೂಲದ ಕ್ಯಾಲಿರ್ಫೋನಿಯಾದ ಸಂಸದೆ ಕಮಲ ಹ್ಯಾರಿಸ್‍ ಅವರನ್ನು ಉಪಾಧ್ಯಕ್ಷ ಅಭ್ಯರ್ಥಿಯನ್ನಾಗಿ ನೇಮಿಸಿದ್ದಾರೆ. ಈ ಮೂಲಕ ಭಾರತೀಯರ ಮತ್ತು ಕಪ್ಪು ವರ್ಣೀಯರ ಮತ ಸೆಳೆಯಲು ಮುಂದಾಗಿದ್ದಾರೆ.

    ಇಡಿ ವಿಶ್ವವೇ ಎದುರು ನೋಡುತ್ತಿರುವ ಚುನಾವಣೆಯಲ್ಲಿ ರಿಪಬ್ಲಿಕ್‌ ಪಕ್ಷದಿಂದ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಡೆಮಾಕ್ರೆಟಿಕ್‌ನಿಂದ ಜೋ ಬೈಡನ್ ಅಭ್ಯರ್ಥಿಗಳಾಗಿದ್ದು ಪ್ರಚಾರ ಜೋರಾಗಿದೆ.

    ತಮಿಳು ಮೂಲ ಹೇಗೆ?
    ಕಮಲ ಹ್ಯಾರಿಸ್‌ 1964ರ ಅಕ್ಟೋಬರ್‌ 20 ರಂದು ಕ್ಯಾಲಿಫೋರ್ನಿಯಾದಲ್ಲಿ ಜನಿಸಿದ್ದಾರೆ. ಇವರ ತಾಯಿ ಶ್ಯಾಮಲಾ ಗೋಪಾಲನ್‌, ತಂದೆ ಡೊನಾಲ್ಡ್‌ ಹ್ಯಾರಿಸ್‌. ತಮಿಳುನಾಡು ಮೂಲದ ಶ್ಯಾಮಲಾ ಅವರು 1959ರಲ್ಲಿ ಉನ್ನತ ವ್ಯಾಸಂಗಕ್ಕೆ ಅಮೆರಿಕಕ್ಕೆ ಬಂದಿದ್ದರು.

    https://twitter.com/JyotiGopal/status/1296409648162123776

  • ಫಸ್ಟ್ ಟೈಂ – ಅಮೆರಿಕ ಚುನಾವಣೆಯಲ್ಲಿ ಹಿಂದೂಗಳ ಓಲೈಕೆ

    ಫಸ್ಟ್ ಟೈಂ – ಅಮೆರಿಕ ಚುನಾವಣೆಯಲ್ಲಿ ಹಿಂದೂಗಳ ಓಲೈಕೆ

    ವಾಷಿಂಗ್ಟನ್‌: ಅಮೆರಿಕ ಚುನಾವಣೆಯ ಪ್ರಚಾರ ತೀವ್ರಗೊಳ್ಳುತ್ತಿರುವಂತೆ ಇದೇ ಮೊದಲ ಬಾರಿಗೆ ಡೆಮಾಕ್ರೆಟಿಕ್‌ ಮತ್ತು ರಿಪಬ್ಲಿಕ್‌ ಪಕ್ಷಗಳು ಹಿಂದೂಗಳ ಓಲೈಕೆಗೆ ಇಳಿದಿವೆ.

    ಹೌದು. ಇಡಿ ವಿಶ್ವವೇ ಎದುರು ನೋಡುತ್ತಿರುವ ಚುನಾವಣೆಯಲ್ಲಿ ರಿಪಬ್ಲಿಕ್‌ ಪಕ್ಷದಿಂದ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಡೆಮಾಕ್ರೆಟಿಕ್‌ನಿಂದ ಜೋ ಬೈಡನ್ ಅಭ್ಯರ್ಥಿಗಳಾಗಿದ್ದು ಪ್ರಚಾರ ಜೋರಾಗಿದೆ.

    ಸಾಧಾರಣವಾಗಿ ಅಮೆರಿಕ ಚುನಾವಣೆ ಅಲ್ಲಿನ ಸಮಸ್ಯೆ ಜೊತೆಗೆ ವಿಶ್ವದ ಸಮಸ್ಯೆಗಳನ್ನು ನಾವು ಹೇಗೆ ಪರಿಹಾರ ಮಾಡುತ್ತೇವೆ ಎಂಬುದನ್ನು ಅಧ್ಯಕ್ಷ ಅಭ್ಯರ್ಥಿಗಳು ಹೆಚ್ಚಾಗಿ ಪ್ರಸ್ತಾಪಿಸಿ ಮತದಾರ ಮನಸ್ಸನ್ನು ಗೆಲ್ಲಲು ಪ್ರಯತ್ನಿಸುತ್ತಾರೆ. ಆದರೆ ಈ ಬಾರಿ ಈ ವಿಚಾರಗಳ ಜೊತೆಗೆ ಭಾರತೀಯರ ಮತದಾರರ ಓಲೈಸಲು ಎರಡೂ ಪಕ್ಷಗಳು ಭರವಸೆ ನೀಡಲು ಆರಂಭಿಸಿವೆ.

     

    ಹಾಲಿ ಅಧ್ಯಕ್ಷ ಅಬ್‌ ಕೀ ಬಾರ್‌ ಟ್ರಂಪ್‌ ಸರ್ಕಾರ್‌ ಎಂಬ ಘೋಷಣೆ ಮಾಡುತ್ತಿರುವ ಬೆನ್ನಲ್ಲೇ, ಅವರ ಪ್ರತಿಸ್ಪರ್ಧಿ ಡೆಮಾಕ್ರೆಟಿಕ್‌ ಪಕ್ಷದ ಅಭ್ಯರ್ಥಿ ಜೋ ಬೈಡನ್‌ ಕನ್ನಡ ಸೇರಿದಂತೆ ಭಾರತದ 14 ಭಾಷೆಗಳಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಭಾರತೀಯರನ್ನು ಭಾವನಾತ್ಮಕವಾಗಿ ಸೆಳೆಯುವ ಸಲುವಾಗಿ ಬೈಡನ್‌ ಬೆಂಬಲಿಗರು ಕನ್ನಡ, ಹಿಂದಿ, ತಮಿಳು, ತೆಲುಗು, ಪಂಜಾಬಿ, ಮಲೆಯಾಳಂ, ಒರಿಯಾ ಹಾಗೂ ಮರಾಠಿ ಭಾಷೆಗಳಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ.

    ಈ ಪ್ರಕಾರ, ‘ಅಮೆರಿಕ ಕಾ ನೇತಾ ಕೈಸಾ ಹೋ, ಜೋ ಬೈಡನ್‌ ಜೈಸಾ ಹೋ’(ಅಮೆರಿಕದ ನಾಯಕ ಹೇಗಿರಬೇಕು ಎಂದರೆ ಅದು ಬೈಡನ್‌ ರೀತಿ) ಎಂಬ ಘೋಷ ವಾಕ್ಯಗಳೊಂದಿಗೆ ಈಗಾಗಲೇ ಅಮೆರಿಕಾದ್ಯಂತ ಪ್ರಚಾರ ನಡೆಸಲಾಗುತ್ತಿದೆ.

    ಜೋ ಬೈಡೆನ್‍ ಅವರು ಉಪಾಧ್ಯಕ್ಷ ಸ್ಥಾನಕ್ಕೆ ಭಾರತ ಮೂಲದ ಕ್ಯಾಲಿರ್ಫೋನಿಯಾದ ಸಂಸದೆ ಕಮಲ ಹ್ಯಾರಿಸ್‍ ಅವರನ್ನು ಉಪಾಧ್ಯಕ್ಷ ಅಭ್ಯರ್ಥಿಯನ್ನಾಗಿ ನೇಮಿಸಿದ್ದಾರೆ. ಈ ಮೂಲಕ ಭಾರತೀಯರ ಮತ್ತು ಕಪ್ಪು ವರ್ಣೀಯರ ಮತ ಸೆಳೆಯಲು ಮುಂದಾಗಿದ್ದಾರೆ.

    ಯಾರ ಭರವಸೆ ಏನು?
    ಟ್ರಂಪ್ ಪರ ಪ್ರಚಾರಕರು ನಮ್ಮ ಪಕ್ಷವನ್ನು ಮತ್ತೊಮ್ಮೆ ಆಯ್ಕೆ ಮಾಡಿದರೆ ಅಮೆರಿಕದಲ್ಲಿ ಹಿಂದೂಗಳಿಗೆ ಧಾರ್ಮಿಕ ಸ್ವಾತಂತ್ರ್ಯಕ್ಕಿರುವ ಅಡೆತಡೆಗಳನ್ನು ನಿವಾರಣೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಇತ್ತ ಜೋ ಬೈಡನ್ ಪರ ಪ್ರಚಾರಕರು ಹಿಂದೂಗಳ ನಂಬಿಕೆಗೆ ಆದ್ಯತೆ ನೀಡುತ್ತೇವೆ ಎಂದು ಹೇಳಿ ಓಲೈಸಿದ್ದಾರೆ.

    ಮೂರು ದಿನಗಳ ಹಿಂದೆ ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಮಾವೇಶ ನಡೆದಿತ್ತು. ಈ ಸಮಾವೇಶದಲ್ಲಿ ಅಮೆರಿಕದ ಹಿಂದೂ ಸಮುದಾಯದ ಪ್ರಮುಖ ನಾಯಕಿ ನೀಲಿಮಾ ಗೋಣುಗುಂಟ್ಲಾ ಅವರು ಭಾಗವಹಿಸಿದ್ದರು. ಹಿಂದೂ ಸಮುದಾಯದ ಬೆಂಬಲವನ್ನು ಸೂಚಿಸುವ ಸಲುವಾಗಿ ನೀಲಿಮಾ ಭಾಗವಹಿಸಿದ್ದರು ಎಂದು ವಿಶ್ಲೇಷಿಸಲಾಗುತ್ತಿದೆ.

    ಯಾಕೆ ಈ ಓಲೈಕೆ?
    2016ರ ಪ್ರಕಾರ ಅಮೆರಿಕದ ಒಟ್ಟು ಜನಸಂಖ್ಯೆಯಲ್ಲಿ ಶೇ.1ರಷ್ಟಿರುವ ಹಿಂದೂ ಸಮುದಾಯದವರಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ ಬಲಪಂಥಿಯ ಹಿಂದೂಗಳು ಟ್ರಂಪ್‌ ಪರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಚಾರ ನಡೆಸಿದ್ದರು. ಸಾಮಾಜಿಕ ಜಾಲತಾಣಗಳು ಚುನಾವಣೆಯಲ್ಲಿ ಭಾರೀ ಪ್ರಭಾವ ಬೀರುವ ಪರಿಣಾಮ ಈ ರೀತಿಯ ಪ್ರಚಾರ ಟ್ರಂಪ್‌ಗೆ ನೆರವು ನೀಡಿತ್ತು.

    ಅಮೆರಿಕ ನಂಬರ್‌ ಒನ್‌ ದೇಶವಾಗಿರುವ ಹಿಂದೆ ಭಾರತೀಯರ ಶ್ರಮವೂ ಇದೆ. ಅಮೆರಿಕಕ್ಕೆ ಎರಡನೇ ಅತಿ ಹೆಚ್ಚು ವಲಸೆ ಬಂದಿರುವುದು ಭಾರತೀಯರಿಂದ. ಬೌದ್ಧಿಕ ವಲಸೆಯಿಂದ ಅಮೆರಿಕಕ್ಕೆ ಅತ್ಯುತ್ತಮ ಶ್ರಮಿಕ ವರ್ಗ ಭಾರತದಿಂದ ಸಿಕ್ಕಿದೆ. ಪರಿಣಾಮ ತಂತ್ರಜ್ಞಾನ, ವೈದ್ಯಕೀಯ, ಸಂಶೋಧನೆ.. ಇತ್ಯಾದಿ ಕ್ಷೇತ್ರಗಳಲ್ಲಿ ಭಾರತೀಯರ ಕೊಡುಗೆಯಿದೆ.

    ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಭೇಟಿ ಮ್ಯಾಡಿಸನ್‌ ಸ್ಕ್ಯಾರ್‌ ಭಾಷಣ, ಕಳೆದ ವರ್ಷ ಹ್ಯೂಸ್ಟನ್‍ನಲ್ಲಿ ನಡೆದ ಹೌಡಿ ಮೋಡಿ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳಿಂದ ಭಾರತೀಯರ ಸಂಘಟನೆ ಮತ್ತು ಶಕ್ತಿ ಏನು ಎನ್ನುವುದು ಅಮೆರಿಕನ್ನರಿಗೆ ಗೊತ್ತಾಗಿದೆ. ಈ ಎಲ್ಲ ಕಾರಣಕ್ಕೆ ಈ ವರ್ಷ ಹಿಂದೆಂದೂ ಕಾಣದ ರೀತಿಯಲ್ಲಿ ಎರಡೂ ಪಕ್ಷಗಳು ಭಾರತೀಯರ ಓಲೈಕೆಗೆ ಮುಂದಾಗಿದೆ.

    ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಮೊದಲ ಬಾರಿಗೆ ಶ್ವೇತಭವನದಲ್ಲಿ ದೀಪಾವಳಿ ಆಚರಿಸಿದ್ದರು. ಮೋದಿ ಪ್ರಧಾನಿಯಾದ ಬಳಿಕ ಅಮೆರಿಕ ಭಾರತದ ಸಂಬಂಧ ಮತ್ತಷ್ಟು ವೃದ್ಧಿಯಾಗಿದೆ.

    2015ರಲ್ಲಿ ಭಾರತದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬರಾಕ್‍ ಒಬಾಮಾ ಆಗಮಿಸಿದ್ದರು. ಈ ವರ್ಷ ಟ್ರಂಪ್‍ ಭಾರತದ ಪ್ರವಾಸಕ್ಕೆ ಬಂದಾಗ ಅಹಮದಾಬಾದ್‍ನಲ್ಲಿ ‘ನಮಸ್ತೇ ಟ್ರಂಪ್‍’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

    ಕೋವಿಡ್‍ 19 ವೇಳೆ ಮೇ ತಿಂಗಳಿನಲ್ಲಿ ರಾಷ್ಟ್ರೀಯ ಪ್ರಾರ್ಥನಾ ದಿನಾಚರಣೆ ಅಂಗವಾಗಿ ಶ್ವೇತ ಭವನದಲ್ಲಿ ವೇದ ಮಂತ್ರ ಪಠಣ ಮಾಡಲಾಗಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮ್ಮುಖದಲ್ಲಿ ವಿಶ್ವದ ಎಲ್ಲೆಡೆ ಶಾಂತಿ ನೆಲೆಸಲೆಂದು ರಾಮ್ ಭಟ್ ಅವರು ವೇದ ಮಂತ್ರ ಪಠಣ, ಯಜುರ್ವೇದ ಮಂತ್ರ ಪಠಣ ಮಾಡಿದ್ದರು.