Tag: ಅಮೃತವರ್ಷಿಣಿ ಚಾನೆಲ್

  • ಅಮೃತವರ್ಷಿಣಿ ಎಫ್‍ಎಂ ಚಾನೆಲ್ ಸ್ಥಗಿತಗೊಳಿಸದಂತೆ ಪಿಎಂಗೆ ಮನವಿ

    ಅಮೃತವರ್ಷಿಣಿ ಎಫ್‍ಎಂ ಚಾನೆಲ್ ಸ್ಥಗಿತಗೊಳಿಸದಂತೆ ಪಿಎಂಗೆ ಮನವಿ

    ಬೆಂಗಳೂರು: ಆಕಾಶವಾಣಿಯ ಅಮೃತವರ್ಷಿಣಿ ಎಫ್‍ಎಂ ಚಾನೆಲ್ (100.10 ಎಫ್‍ಎಂ) ಅನ್ನು ಸ್ಥಗಿತಗೊಳಿಸಬಾರದು ಎಂದು ಹಿರಿಯ ವಕೀಲರಾದ ಎಸ್.ವಿ.ಶ್ರೀನಿವಾಸ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

    ರಾಜ್ಯದ ರೈತರು ಹಾಗೂ ಜನಸಾಮಾನ್ಯರ ಸಮಸ್ಯೆಗಳ ಪರವಾಗಿ ಹಲವಾರು ವ್ಯಾಜ್ಯಗಳನ್ನು ಮುನ್ನಡೆಸಿರುವ ಹಿರಿಯ ವಕೀಲರಾದ ಶ್ರೀನಿವಾಸ್ ಅವರು ಈ ಸಂಬಂಧ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಆಕಾಶವಾಣಿಯು ಸ್ಥಳೀಯ ಕಲೆ ಮತ್ತು ಸಂಸ್ಕೃತಿಯನ್ನು ಪಸರಿಸುವಲ್ಲಿ ಸದಾ ಮುಂಚೂಣಿಯಲ್ಲಿರುವ ಮಾಧ್ಯಮವಾಗಿದೆ. ಇದಕ್ಕೆ ಪೂರಕವಾಗಿ 2002ರಿಂದ ಇಲ್ಲಿವರೆಗೆ ಆಕಾಶವಾಣಿಯ ಅಮೃತವರ್ಷಿಣಿ ಎಫ್‍ಎಂ ಚಾನೆಲ್ ಕನ್ನಡನಾಡಿನ ಕಲೆ ಸಂಸ್ಕೃತಿಯನ್ನು ಬಿತ್ತರಿಸುತ್ತಾ ಬಂದಿದೆ ಎಂದು ಹೇಳಿದ್ದಾರೆ.  ಇದನ್ನೂ ಓದಿ: 14 ವರ್ಷದ ಬಳಿಕ ಬೆಂಕಿಪೊಟ್ಟಣದ ಬೆಲೆ ಏರಿಕೆ

    Amruthavarshini FM

    ಅಮೃತವರ್ಷಿಣಿಯು ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದರು ಮತ್ತು ಕಲಾವಿದರಿಗೆ ಸೂಕ್ತ ವೇದಿಕೆಯಾಗಿದೆ ಮತ್ತು ಪ್ರತಿಭಾನ್ವಿತರನ್ನು ಹೊರ ಜಗತ್ತಿಗೆ ತೋರಿಸುವ ಒಂದು ಉತ್ತಮ ಸಜ್ಜಿಕೆಯಾಗಿದೆ. ಕಳೆದ 2 ದಶಕಗಳಿಂದ ದಿನದ 24 ಗಂಟೆಯೂ ಶಾಸ್ತ್ರೀಯ ಕಲಾವಿದರಿಂದ ಹಲವಾರು ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದು, ಇದುವರೆಗೂ 3000 ಕ್ಕೂ ಹೆಚ್ಚು ಕಲಾವಿದರು ತಮ್ಮ ಕಲೆಯನ್ನು ಈ ಚಾನೆಲ್ ಮೂಲಕ ನೀಡಿದ್ದಾರೆ ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಠಾಣೆ ಮೆಟ್ಟಿಲೇರಿದ ಕಸ ಫೈಟ್ – ಪ್ರೊಡ್ಯೂಸರ್ ಪುತ್ರ, ಪತ್ನಿ ವಿರುದ್ಧ FIR

     Amruthavarshini FM

    ಇಂತಹ ಸ್ಥಳೀಯ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವಂತಹ ಅಮೃತವರ್ಷಿಣಿಯಂತಹ ದೇಶದ 14 ಚಾನೆಲ್‍ಗಳನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಕೈಬಿಟ್ಟು, ಚಾನೆಲ್ ಅನ್ನು ಇನ್ನೂ ಸದೃಢಗೊಳಿಸಲು ಕ್ರಮ ಕೈಗೊಳ್ಳಬೇಕು. ರಾಜ್ಯದ ಸಮಸ್ತ ಕನ್ನಡಿಗರ ಪರವಾಗಿ ಹಾಗೂ ರಾಜ್ಯದ ಸಮಸ್ತ ಕಲಾವಿದರ ಪರವಾಗಿ ಸಾಮಾಜಿಕ ಕಾಳಜಿಯನ್ನು ತೋರಿಸಿರುವ ಹಿರಿಯ ವಕೀಲರಾದ ಶ್ರೀನಿವಾಸ್ ಪ್ರಧಾನಿಗಳಿಗೆ ಮನವಿ ಮಾಡಿದ್ದಾರೆ.

    ವಕೀಲರಾದ ಎಸ್.ವಿ ಶ್ರೀನಿವಾಸ್ ಸಮಸ್ಯೆಗಳಿಂದ ತೊಂದರೆಗೀಡಾದ ಜನಸಾಮಾನ್ಯರ ಧ್ವನಿಯಾಗಿದ್ದಾರೆ. ಕಳೆದ ದಶಕಗಳಿಂದ ರಾಜ್ಯದ ಪ್ರಮುಖ ಸಮಸ್ಯೆಗಳಾದ ರೈತರು ಹಾಗೂ ಜನಸಾಮಾನ್ಯರ ಪರವಾಗಿ ಉಚ್ಛನ್ಯಾಯಾಲಯಗಳಲ್ಲಿ ಧ್ವನಿ ಎತ್ತಿದ್ದಾರೆ. ಈ ಬಾರಿ ರಾಜ್ಯದ ಕಲಾವಿದರ ಪರವಾಗಿ ಪ್ರಧಾನಿಗಳಿಗೆ ಪತ್ರ ಬರೆದಿದ್ದು ಮನವಿ ಮಾಡಿದ್ದಾರೆ.