Tag: ಅಮೂಲ್ಯ ಲಿಯೋನ

  • ಪಾಕ್ ಜಿಂದಾಬಾದ್ ಅಂದೋರು ಯಾರಿಗೆ ಹುಟ್ಟಿದ್ದಾರೆ – ಸಿಟಿ ರವಿ ಪ್ರಶ್ನೆ

    ಪಾಕ್ ಜಿಂದಾಬಾದ್ ಅಂದೋರು ಯಾರಿಗೆ ಹುಟ್ಟಿದ್ದಾರೆ – ಸಿಟಿ ರವಿ ಪ್ರಶ್ನೆ

    ಉಡುಪಿ: ಪಾಕ್ ಜಿಂದಾಬಾದ್ ಅಂದೋರು ಯಾರಿಗೆ ಹುಟ್ಟಿದ್ದಾರೆ ಎಂದು ಪ್ರಶ್ನಿಸುವ ಮೂಲಕ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ವಿವಾದತ್ಮಕ ಹೇಳಿಕೆ ನೀಡಿದ್ದಾರೆ.

    ಕಾರ್ಕಳ ತಾಲೂಕಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಾಕಿಸ್ತಾನ ಜಿಂದಾಬಾದ್ ಅಂದೋರು ಯಾರಿಗೆ ಹುಟ್ಟಿದ್ದಾರೆ? ಇಲ್ಲಿಯ ಅನ್ನ ತಿಂದು ಶತ್ರು ದೇಶದ ಗುಣಗಾನ ಮಾಡ್ತೀರಾ? ಈ ಮಾನಸಿಕತೆ ಬಹಳ ಡೇಂಜರ್ ಎಂದು ಅವರು ಗುಡುಗಿದರು.

    ಅಮೂಲ್ಯಳ ಹಿಂದೆ ಒಂದು ತಂಡವೇ ಇದೆ. ಸ್ವತಃ ಅಮೂಲ್ಯಳೇ ಈ ವಿಷಯ ಬಹಿರಂಗಪಡಿಸಿದ್ದಾಳೆ. ಬೆಂಗಳೂರು ಸಿಎಎ ಹೋರಾಟ ಪ್ರಕರಣವನ್ನು ನಾವು ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ. ಬೇರೆ ಎಲ್ಲದಕ್ಕೂ ಶಿಕ್ಷೆ ಹಾಗೂ ಕ್ಷಮೆ ಇದೆ. ದೇಶದ್ರೋಹದ ಚಟುವಟಿಕೆಗೆ ಪಾಕ್ ಜಿಂದಾಬಾದ್ ಅಂದೋರಿಗೆ ಕ್ಷಮೆ ಇಲ್ಲ. ಘೋಷಣೆ ಕೂಗಿದವರು ಕ್ಷಮಿಸಿ ಎಂದು ಯಾರು ಕೇಳಬಾರದು. ಇಂತಹ ಮಾನಸಿಕತೆಯೇ ಬಹಳ ಅಪಾಯಕಾರಿ ಎಂದು ಹೇಳಿದರು.

    ಇದೇ ವೇಳೆ ದೇಶದೊಳಗೆ ಇಂತಹವರು ಓಡಾಡುತ್ತಿದ್ದರೆ, ನಮ್ಮ ದೇಶದ ಸೈನಿಕರು ಗಡಿಯಲ್ಲಿ ಯಾಕೆ ಗುಂಡಿಗೆ ಬಲಿಯಾಗಬೇಕು. ಹಿಮಾಲಯದ ಮೈನಸ್ 20 ಡಿಗ್ರಿಯಲ್ಲಿ ಯಾಕೆ ದೇಶ ಕಾಯಬೇಕು. ವಿರೋಧ ರಾಷ್ಟ್ರದ ಶತ್ರುಗಳ ಗುಂಡಿಗೆ ಯಾಕೆ ಬಲಿಯಾಗಬೇಕು ಎಂದು ಪ್ರಶ್ನೆ ಮಾಡಿದರು.

  • ಅಮೂಲ್ಯ ಮಾತು ಸರಿಯಾದುದಲ್ಲ – ಹೆಚ್‍ಡಿಡಿ

    ಅಮೂಲ್ಯ ಮಾತು ಸರಿಯಾದುದಲ್ಲ – ಹೆಚ್‍ಡಿಡಿ

    ಹಾಸನ: ಪಾಕಿಸ್ತಾನದ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನ ವಿಚಾರದ ಬಗ್ಗೆ ಪೊಲೀಸರು ಏನು ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ನಾನು ಗಮನಿಸುತ್ತಿದ್ದೇನೆ, ಆಕೆ ಮಾತು ಸರಿಯಾದುದಲ್ಲ ಅಂತ ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡ ಬೇಸರ ವ್ಯಕ್ತಪಡಿಸಿದರು.

    ಶಿವರಾತ್ರಿಯ ಜಾಗರಣೆಯ ಸಲುವಾಗಿ ಬೆಂಗಳೂರಿನಿಂದ ಹುಟ್ಟೂರು ಹರದನಹಳ್ಳಿಗೆ ತೆರಳುವ ಸಂದರ್ಭದಲ್ಲಿ ವಿಶ್ರಾಂತಿಗೆಂದು ಹಾಸನದ ನಿವಾಸಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಪಾಕಿಸ್ತಾನದ ಹೆಸರಲ್ಲಿ ಜಿಂದಾಬಾದ್ ಅನ್ನೋದು ಸರಿಯಾದ ತೀರ್ಮಾನ ಅಲ್ಲ. ಪೊಲೀಸರು ಈಗಾಗಲೇ ಕ್ರಮ ಕೈಗೊಳ್ಳುತ್ತಿದ್ದಾರೆ ಯಾವ ಕಾರಣದಿಂದ ಆ ಹೆಣ್ಣು ಮಗು ಈ ರೀತಿ ಹೇಳಿತು ಅನ್ನೋದು ಗೊತ್ತಿಲ್ಲ ಈಗಾಗಲೇ ವಿಚಾರಣೆ ನಡೆಯುತ್ತಿದೆ ಎಂದರು.

    ಇದರ ಜೊತೆಗೆ ಕಾಶ್ಮೀರಿ ಫಲಕ ಹಿಡಿದಿರುವ ಬಗ್ಗೆ ಕೂಡ ಗಮನಿಸಿದ್ದೇನೆ. ಇದರ ಹಿನ್ನೆಲೆ ಕೂಡ ಏನ್ ಇರುತ್ತೋ ಗೊತ್ತಿಲ್ಲ ಎಂದು ಬೇಸರದಿಂದಲೇ ಮಾತು ಮುಂದುವರಿಸಿದರು. ಇಂತಹ ಸಂದರ್ಭದಲ್ಲಿ ಪೊಲೀಸರು ಕ್ರಮ ಕೈಗೊಳ್ಳುವುದು ಅವರ ಕರ್ತವ್ಯ ಎಂದು ತಿಳಿಸಿದರು. ಅಮೆರಿಕ ಅಧ್ಯಕ್ಷ ಟ್ರಂಪ್ ಗುಜರಾತ್ ಭೇಟಿ ವಿಚಾರದ ಬಗ್ಗೆ ಕೇಳಿದಾಗ, ಅವರ ಬಗ್ಗೆ ನಾನು ಈಗ ಪ್ರತಿಕ್ರಿಯಿಸಲ್ಲ ಎಂದು ತಮ್ಮ ಮಾತನ್ನು ಮೊಟಕುಗೊಳಿಸಿದರು.

  • ಅಮೂಲ್ಯ ಭಾಷಣ ಮಾಡಬೇಕಿದ್ದ ಕಾಪುವಿನ ಮೈದಾನದಲ್ಲಿ ಬಿರುಗಾಳಿ

    ಅಮೂಲ್ಯ ಭಾಷಣ ಮಾಡಬೇಕಿದ್ದ ಕಾಪುವಿನ ಮೈದಾನದಲ್ಲಿ ಬಿರುಗಾಳಿ

    ಉಡುಪಿ: ಬೆಂಗಳೂರಿನಲ್ಲಿ ನಡೆದ ಸಿಎಎ, ಎನ್.ಆರ್.ಸಿ ವಿರುದ್ಧ ಹೋರಾಟ ರಾಜಕೀಯ ಬಿರುಗಾಳಿಯನ್ನು ಎಬ್ಬಿಸಿದೆ. ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನ ಪರಪ್ಪನ ಅಗ್ರಹಾರ ಸೇರಿದ್ದಾಳೆ. ಈ ನಡುವೆ ಅಮೂಲ್ಯ ನಾಳೆ ಭಾಷಣ ಮಾಡಬೇಕಿದ್ದ ಮೈದಾನದಲ್ಲಿ ಸುಂಟರಗಾಳಿ ಎದ್ದಿದೆ.

    ಉಡುಪಿ ಜಿಲ್ಲೆ ಕಾಪು ತಾಲೂಕಿನ ಬೆಳಪು ಎಂಬಲ್ಲಿ ಸಿಎಎ ವಿರುದ್ಧದ ಮತ್ತೊಂದು ಹೋರಾಟಕ್ಕೆ ವೇದಿಕೆ ಸಜ್ಜಾಗಿತ್ತು. ಬೆಳಪು ಗ್ರಾಮದ ಮಲ್ಲಾರ್ ಮುಸ್ಲಿಂ ಒಕ್ಕೂಟ ಸಿಎಎ ವಿರೋಧಿ ಪ್ರತಿಭಟನಾ ಸಭೆಯನ್ನು ಆಯೋಜಿಸಿತ್ತು. ಪ್ರತಿಭಟನಾ ಸಭೆಗೆ ವೇದಿಕೆ ನಿರ್ಮಾಣ ಮತ್ತು ತಯಾರಿಗಳು ನಡೆಯುತ್ತಿದೆ. ಈ ಹೊತ್ತಿನಲ್ಲೇ ಬೆಳಪು ಮೈದಾನದಲ್ಲಿ ದೊಡ್ಡ ಸುಂಟರಗಾಳಿಯೊಂದು ಸುತ್ತಿದೆ. ಸುಂಟರಗಾಳಿಯ ರಭಸಕ್ಕೆ ಹತ್ತಾರು ಖುರ್ಚಿಗಳು ಗಾಳಿಯಲ್ಲಿ ಗಿರಕಿ ಹೊಡೆದವು. ನೆಲದಿಂದ ಚಿಮ್ಮಿಸಿದೆ.

    ಬಿರುಗಾಳಿ ಕಸ, ಕಡ್ಡಿ ಧೂಳು ಪೇಪರ್ ಎಲ್ಲವನ್ನು ಹಾರಿಸಿಬಿಟ್ಟಿದೆ. ಅಮೂಲ್ಯ ಅರೆಸ್ಟ್ ಆಗದಿದ್ದರೆ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣವನ್ನು ಮಾಡಬೇಕಿತ್ತು. ಮೈದಾನದಲ್ಲಿ ಎದ್ದ ಭೀಕರ ಸುಂಟರಗಾಳಿಯ ವಿಡಿಯೋ ಈಗ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಅಮೂಲ್ಯ ಸುಂಟರಗಾಳಿ ಎಂಬ ಹೆಸರಲ್ಲಿ ವೈರಲ್ ಆಗುತ್ತಿದೆ.

  • ಪಾಕ್ ಪರ ಘೋಷಣೆ ಕೂಗುವುದು ದೇಶ ದ್ರೋಹದ ಕೆಲಸ: ಎಚ್‍ಡಿಕೆ

    ಪಾಕ್ ಪರ ಘೋಷಣೆ ಕೂಗುವುದು ದೇಶ ದ್ರೋಹದ ಕೆಲಸ: ಎಚ್‍ಡಿಕೆ

    ರಾಮನಗರ: ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸಿಎಎ ವಿರುದ್ಧದ ಹೋರಾಟದ ವೇದಿಕೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಅಮೂಲ್ಯ ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿರುವುದು ಖಂಡನೀಯ. ಇಂತಹ ದೇಶದ್ರೋಹಿಗಳ ಬಗ್ಗೆ ಸಂಘಟನಕಾರರು ಎಚ್ಚರದಿಂದ ಇರಬೇಕು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ರಾಮನಗರದಲ್ಲಿ ತಿಳಿಸಿದ್ದಾರೆ.

    ರಾಮನಗರದ ಹೊರವಲಯದ ಜನಪದಲೋಕ ಬಳಿ ತಮ್ಮ ಪುತ್ರ ನಿಖಿಲ್ ಮದುವೆ ಹಿನ್ನೆಲೆಯಲ್ಲಿ ಭೂಮಿಗೆ ಶಕ್ತಿ ತುಂಬುವ ವಿಶೇಷ ಹೋಮ, ಹವನ, ಪೂಜಾ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು ಭಾರತೀಯರಾಗಿ ನಮ್ಮ ದೇಶಕ್ಕೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ. ಆಕೆ ಉದ್ದೇಶ ಪೂರ್ವಕವಾಗಿ ಹೀಗೆ ಮಾಡಿದ್ದಾಳೋ, ಇಲ್ಲ ಪ್ರಚಾರಕ್ಕಾಗಿ ಮಾಡಿದ್ದಾಳೋ, ಆಕೆಗೆ ಈ ಬಗ್ಗೆ ತಿಳಿವಳಿಕೆ ಇದೆಯೋ, ಇಲ್ಲವೋ ಗೊತ್ತಿಲ್ಲ. ಇಂತಹ ದೇಶ ದ್ರೋಹದ ಕೆಲಸ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ನಮ್ಮ ಪಕ್ಷದ ಕಾರ್ಯಕರ್ತರಾದ ಇಮ್ರಾನ್ ಸಹ ಕಾರ್ಯಕ್ರಮದ ಸಂಘಟನೆ ಹೊಣೆ ಹೊತ್ತಿದ್ದರು. ಯುವತಿ ಘೋಷಣೆ ಕೂಗಿದ ಕೂಡಲೇ ಆಕೆಯ ಮೈಕ್ ಕಸಿದುಕೊಂಡಿದ್ದಾರೆ. ಹೀಗಾಗಿ ಸಂಘಟನಕರಿಂದ ಆ ರೀತಿಯ ಪ್ರಯತ್ನ ಆಗಿಲ್ಲ ಎಂಬುದು ಸ್ಪಷ್ಟವಾಗಿದೆ. ಮೊದಲು ನಾನು ಭಾರತೀಯ ಎಂಬ ಭಾವನೆ ಇದ್ದಾಗ ಮಾತ್ರ ಹೋರಾಟಕ್ಕೆ ಇತರರು ಕೈಜೋಡಿಸುತ್ತಾರೆ. ಈ ರೀತಿಯ ಅಪಪ್ರಚಾರ ಯಾರಿಗೂ ಬೇಡ ಎಂದರು. ಬಿಜೆಪಿ ಈ ರೀತಿಯ ಪ್ರಯತ್ನಗಳಿಗೆ ಹೆಚ್ಚು ಪ್ರಚಾರ ಮಾಡುವ ಮೂಲಕ ತಮ್ಮ ಸರ್ಕಾರದ ವೈಫಲ್ಯಗಳನ್ನು ಮುಚ್ಚಲು ಹೊರಟಿದೆ. ದೇಶಭಕ್ತಿಯ ಬಗ್ಗೆ ಬಿಜೆಪಿಯಿಂದ ಪಾಠ ಕಲಿಯಬೇಕಿಲ್ಲ ಎಂದು ಗುಡುಗಿದರು.

    ಹೋರಾಟಗಾರರು ತ್ರಿವರ್ಣ ಧ್ವಜ ಹಿಡಿದು ಹೋರಾಟ ನಡೆಸಿದ್ದಾರೆಯೇ ಹೊರತು ಪಾಕಿಸ್ತಾನದ ಧ್ವಜವನ್ನಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಹಾರಿದ್ದ ರಾಷ್ಟ್ರಧ್ವಜಕ್ಕಿಂತ ಹತ್ತು ಪಟ್ಟು ಧ್ವಜಗಳು ಇಂದು ಹೋರಾಟದ ಹೆಸರಿನಲ್ಲಿ ಹಾರುತ್ತಿವೆ. ಸಂವಿಧಾನ ಕೊಟ್ಟ ಹಕ್ಕನ್ನು ಸಂವಿಧಾನದ ಆಶಯಗಳು ಮತ್ತು ದೇಶವನ್ನು ಯಾರಿಂದಲೂ ಛಿದ್ರಗೊಳಿಸಲು ಆಗದು. ಯಾರೋ ಒಬ್ಬರು ತಿಳಿಗೇಡಿ ಘೋಷಣೆ ಕೂಗಿದ ಮಾತ್ರಕ್ಕೆ ಅದರ ಗಮನವನ್ನು ಬೇರೆ ಕಡೆಗೆ ಸೆಳೆಯುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

  • ಮುಂದೇನು ಮಾತನಾಡುತ್ತಿದ್ದಳು ಎಂದು ಕಾದು ನೋಡಬೇಕಿತ್ತು: ಅಮೂಲ್ಯ ತಾಯಿ

    ಮುಂದೇನು ಮಾತನಾಡುತ್ತಿದ್ದಳು ಎಂದು ಕಾದು ನೋಡಬೇಕಿತ್ತು: ಅಮೂಲ್ಯ ತಾಯಿ

    ಬೆಂಗಳೂರು: ಸಾರ್ವಜನಿಕ ಸಮಾವೇಶದಲ್ಲಿ ಮಗಳು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದು ತಪ್ಪು. ಆದರೆ ಆಕೆ ಮುಂದೆ ಏನನ್ನ ಮಾತನಾಡುತ್ತಿದ್ದಳು ಅಂತ ಕಾದು ನೋಡಬೇಕಿತ್ತು ಎಂದು ದೇಶದ್ರೋಹಿ ಘೋಷಣೆ ಕೂಗಿದ ಅಮೂಲ್ಯ ಲಿಯೋನ ತಾಯಿ ಲವೀನಾ ನರೋನಾ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಲವೀನಾ ನರೋನಾ, ಗಡಿಗಳ ಎಲ್ಲೆ ಇಲ್ಲದೇ ಎಲ್ಲಾ ದೇಶಕ್ಕೂ ಸಮಾನವಾದ ಗೌರವ ಕೊಡಬೇಕು ಅಂತ ಮಗಳು ಒಂದು ಬಾರಿ ಪೋಸ್ಟ್ ಹಾಕಿದ್ದಳು. ಆ ವಿಚಾರವಾಗಿಯೇ ಸಿಎಎ ವಿರೋಧಿ ಸಮಾವೇಶದಲ್ಲಿ ಮಾತನಾಡಲು ಮುಂದಾಗಿದ್ದಳು ಅಂತ ಅನಿಸುತ್ತದೆ ಎಂದು ಮಗಳ ಪರ ಪರೋಕ್ಷವಾಗಿ ಬ್ಯಾಟ್ ಬೀಸಿದರು.

    ನಾವು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಎಂದು ಎಲ್ಲಾ ದೇಶಗಳಿಗೂ ಗೌರವ ಕೊಡಬೇಕು ಎಂದು ಮಗಳು ಹೇಳಿದ್ದಳು. ಇದಕ್ಕೆ ವೇದಿಕೆಯಲ್ಲಿ ಮಗಳು ಸ್ಪಷ್ಟಣೆ ಕೊಡುತ್ತಿದ್ದಳು. ಪಾಕಿಸ್ತಾನ ಜಿಂದಾಬಾದ್ ಎಂದ ಕೂಡಲೇ ಆಕೆಯನ್ನು ಪೊಲೀಸರು ವಶಕ್ಕೆ ಪಡೆದರು. ಆದರೆ ಮಗಳು ಹೇಳಿದ್ದು ತಪ್ಪು. ಅವಳ ಪರವಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದರು.

    ಇದಕ್ಕೂ ಪುತ್ರಿಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದ ಅಮೂಲ್ಯ ತಂದೆ ವಾಜೀದ್, ನನ್ನ ಮಗಳು ಮಾಡಿದ್ದನ್ನು ಕಂಡಿತ ಒಪ್ಪಿಕೊಳ್ಳುವುದಿಲ್ಲ. ಆಕೆ ಬೇಲ್ ಮೇಲೆ ಹೊರಗೆ ಬರುವುದು ಬೇಡ. 6 ತಿಂಗಳು ಜೈಲಿನಲ್ಲೇ ಇರಲಿ. ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಅಕ್ಷರಶಃ ತಪ್ಪು. ಮಗಳ ನಡೆಯನ್ನು ಎಂದಿಗೂ ಸಹಿಸುವುದಿಲ್ಲ ಎಂದು ತಿಳಿಸಿದ್ದರು.

  • ಮಗಳು ಮಾಡಿದ್ದು ತಪ್ಪು, ಅವಳ ಕೈ-ಕಾಲು ಮುರಿಯಲಿ: ಅಮೂಲ್ಯ ತಂದೆ

    ಮಗಳು ಮಾಡಿದ್ದು ತಪ್ಪು, ಅವಳ ಕೈ-ಕಾಲು ಮುರಿಯಲಿ: ಅಮೂಲ್ಯ ತಂದೆ

    – ಆಕೆಗೆ ಬೇಲ್ ಕೂಡ ಕೊಡುವುದಿಲ್ಲ

    ಚಿಕ್ಕಮಗಳೂರು: ನನ್ನ ಮಗಳು ಮಾಡಿದ್ದು ತಪ್ಪು. ಪೊಲೀಸರು ಅವಳ ಕೈ-ಕಾಲು ಮುರಿಯಲಿ ಎಂದು ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನಾ ತಂದೆ ವಾಜೀದ್ ಹೇಳಿದ್ದಾರೆ.

    ಪುತ್ರಿಯ ದೇಶದ್ರೋಹಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ವಾಜೀದ್ ಅವರು, ನನ್ನ ಮಗಳು ಮಾಡಿದ್ದನ್ನು ಕಂಡಿತ ಒಪ್ಪಿಕೊಳ್ಳುವುದಿಲ್ಲ. ಆಕೆ ಬೇಲ್ ಮೇಲೆ ಹೊರಗೆ ಬರುವುದು ಬೇಡ. 6 ತಿಂಗಳು ಜೈಲಿನಲ್ಲೇ ಇರಲಿ. ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಅಕ್ಷರಶಃ ತಪ್ಪು. ಮಗಳ ನಡೆಯನ್ನು ಎಂದಿಗೂ ಸಹಿಸುವುದಿಲ್ಲ ಎಂದು ತಿಳಿಸಿದರು.

    ನಾನು ಎಷ್ಟೇ ಬುದ್ಧಿವಾದ ಹೇಳಿದರೂ ಮಗಳು ಕೇಳುತ್ತಿರಲಿಲ್ಲ. ಕೆಲ ಮುಸ್ಲಿಮರ ಜೊತೆ ಸೇರಿ ಪ್ರಚೋದನಕಾರಿ ಮಾತುಗಳನ್ನು ಆಡುತ್ತಿದ್ದಳು. ಪೊಲೀಸರು ಆಕೆಯನ್ನು ಹೊರಗೆ ಬಿಡುವುದು ಬೇಡ. ನಾನು ಆಕೆಗೆ ಬೇಲ್ ಕೊಡಿಸುವುದಿಲ್ಲ, ಜೈಲಿನಲ್ಲೇ ಇರಲಿ. ಮಗಳ ಪರ ವಾದ ಮಾಡಲು ವಕೀಲರನ್ನು ನೇಮಕ ಮಾಡುವುದಿಲ್ಲ. ಸದ್ಯಕ್ಕೆ ಅವಳನ್ನು ಮನೆಗೂ ಸೇರಿಸುವುದಿಲ್ಲ. ಕಳೆದ ಐದು ದಿನದಿಂದ ಮಗಳು ನನ್ನ ಜೊತೆ ಯಾವುದೇ ಸಂಪರ್ಕದಲ್ಲಿ ಇಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನು ಓದಿ: ಪಾಕಿಸ್ತಾನ ಜಿಂದಾಬಾದ್ ಎಂದ ದೇಶದ್ರೋಹಿ ಅಮೂಲ್ಯ ಲಿಯೋನಾ ಯಾರು?

    ನಾನು ಹೃದಯಾಘಾತ ಸಮಸ್ಯೆ ಎದುರಿಸುತ್ತಿರುವೆ, ಆಸ್ಪತ್ರೆಗೆ ಹೋಗಬೇಕು ಬೆಂಗಳೂರಿನಿಂದ ಬಾ ಅಂತ ಹೇಳಿದ್ದೆ. ಆದರೆ ಮಗಳು, ನನಗೆ ನಿನ್ನ ಜವಾಬ್ದಾರಿ ಇಲ್ಲ, ನಾನು ಬರುವುದಿಲ್ಲ. ನಿನ್ನ ಆರೋಗ್ಯ ಜವಾಬ್ದಾರಿ ನೀನೇ ನೋಡಿಕೋ ಎಂದಿದ್ದಳು. ಆಗ ನಾನು ಫೋನ್ ಕಟ್ ಮಾಡಿದೆ. ಆನಂತರ ನಾನು ಆಕೆಯನ್ನು ಸಂಪರ್ಕಿಸಿಲ್ಲ. ಮಗಳ ವಿರುದ್ಧ ಕಾನೂನು ರೀತಿಯ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಿ. ಈ ವಿಚಾರದಲ್ಲಿ ನನ್ನದು ಏನು ಅಭ್ಯಂತರವಿಲ್ಲ ಎಂದು ಹೇಳಿದರು.

    ಅಮೂಲ್ಯ ಪಾಕಿಸ್ತಾನದ ಪರ ಘೋಷಣೆ ಕೂಗಿದ ನಂತರ ಆಕೆಯ ಚಿಕ್ಕಮಗಳೂರಿನ ನಿವಾಸಕ್ಕೆ ಬಿಜೆಪಿ ಕಾರ್ಯಕರ್ತರು ಮತ್ತು ಬಜರಂಗದಳ ಕಾರ್ಯಕರ್ತರು ಮುತ್ತಿಗೆ ಹಾಕಿದ್ದರು. ಬಳಿಕ ಅಮೂಲ್ಯ ತಂದೆ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ಈ ವಿಚಾರ ತಿಳಿದ ಕೂಡಲೆ ಕೊಪ್ಪ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಅಮೂಲ್ಯ ತಂದೆ ಕೆಲ ವರ್ಷಗಳ ಹಿಂದೆ ಮಲೆನಾಡಿನಲ್ಲಿ ನಡೆದ ಅಪ್ಪಿಕೊ ಚಳುವಳಿಯಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.

  • ಅಮೂಲ್ಯ ಜೊತೆ ವೇದಿಕೆಯಲ್ಲಿದ್ದ ಎಲ್ಲರ ಮೇಲೆ ದೇಶದ್ರೋಹ ಕೇಸ್ ಹಾಕಿ: ಅನಂತ್ ಕುಮಾರ್ ಹೆಗ್ಡೆ

    ಅಮೂಲ್ಯ ಜೊತೆ ವೇದಿಕೆಯಲ್ಲಿದ್ದ ಎಲ್ಲರ ಮೇಲೆ ದೇಶದ್ರೋಹ ಕೇಸ್ ಹಾಕಿ: ಅನಂತ್ ಕುಮಾರ್ ಹೆಗ್ಡೆ

    ಕಾರವಾರ: ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಸಿಎಎ ಹೋರಾಟ ಸಭೆಯಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ ಚಿಕ್ಕಮಗಳೂರು ಮೂಲದ ಅಮೂಲ್ಯ ಲಿಯೋನ ಜೊತೆಗೆ ವೇದಿಕೆ ಮೇಲಿರುವ ಎಲ್ಲರ ವಿರುದ್ಧ ದೇಶ ದ್ರೋಹದ ವಿರುದ್ಧ ಕೇಸು ದಾಖಲಿಸುವಂತೆ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗ್ಡೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಸಂಸದ ಅನಂತಕುಮಾರ್ ಹೆಗ್ಡೆ ಎಡಪಂಥೀಯ ವಿಚಾರ, ದೇಶದ್ರೋಹಿ ವಿಚಾರವಾಗಿ ಮಾರ್ಪಟ್ಟಿದೆ. ಸಿ.ಎ.ಎ ಹೋರಾಟ ದೇಶದ್ರೋಹಿ ಹೋರಾಟವಾಗಿ, ದೇಶದ್ರೋಹಿ ಚಟುವಟಿಕೆಯಾಗಿ ಹಿಂದು ವಿರೋಧಿ ಹೋರಾಟವಾಗಿ ಮಾರ್ಪಟ್ಟಿದೆ ಎಂದು ಕಿಡಿಕಾರಿದ್ದಾರೆ.

    ವೇದಿಕೆ ಮೇಲಿರುವ ಎಲ್ಲರ ಮೇಲೆ ದೇಶದ್ರೋಹದ ಕೇಸು ದಾಖಲಿಸಬೇಕು. ದೇಶದ್ರೋಹಿಗಳನ್ನು ತಕ್ಷಣ ಬಂಧಿಸಬೇಕು. ದೇಶದ್ರೋಹಿಗಳ ಆಡಂಬರ ಆಗಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಎಲ್ಲರನ್ನೂ ದೇಶದ್ರೋಹದ ಪ್ರಕರಣದಲ್ಲಿ ಬಂಧಿಸುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿದರು.