ಬೆಂಗಳೂರು: ಫ್ರೀಡಂ ಪಾರ್ಕ್ ನಲ್ಲಿ ಪಾಕ್ ಪರ ಘೋಷಣೆ ಕೂಗಿದ ಪ್ರಕರಣ ಸಂಬಂಧ ತನಿಖೆ ವೇಳೆ ಅಸಲಿ ವಿಚಾರವನ್ನ ಅಮೂಲ್ಯ ಲಿಯೋನಾ ಬಿಚ್ಚಿಟ್ಟಿದ್ದಾಳೆ.
ಆಯೋಜಕರು ಕರಿಯದೇ ನಾನು ಹೇಗೆ ಕಾರ್ಯಕ್ರಮಕ್ಕೆ ಬರಲು ಆಗುತ್ತೆ? ನನ್ನನ್ನ ಸಿಎಎ ಕುರಿತಾದ ಸಭೆ ಇದೆ ಎಂದು ಆಹ್ವಾನಿಸಲಾಗಿತ್ತು. ಜೆಡಿಎಸ್ ಸದಸ್ಯ ಇಮ್ರಾನ್ ಪಾಷಾ ಅವರ ಕಡೆಯವರೊಬ್ಬರು ಕರೆದಿದ್ದರು. ಹಾಗೆಯೇ ನನಗೆ ಭಾಷಣ ಮಾಡಲೂ ಕೂಡ ಅನುಮತಿ ಕೊಟ್ಟಿದ್ದರು. ನಾನು ಸಿಎಎ ಮತ್ತು ಎನ್‍ಆರ್‍ಸಿ ವಿರೋಧಿ ಹೋರಾಟದಲ್ಲಿ ಸಕ್ರಿಯವಾಗಿದ್ದೆ. ಈ ಹಿಂದೆ ಈ ರೀತಿಯ ಸಭೆಗಳಲ್ಲಿ ಭಾಗಿಯಾಗಿ ಭಾಷಣ ಮಾಡಿದ್ದೆ. ನಾನು ಪಾಕ್ ಜಿಂದಾಬಾದ್ ಅಂತ ಹೇಳುವಾಗ ಆಯೋಜಕರು ಮೈಕ್ ಕಸಿದುಕೊಂಡರು. ಆದರೆ ನನಗೆ ಸಂಪೂರ್ಣ ಭಾಷಣ ಮಾಡಲು ಅವಕಾಶ ಕೊಟ್ಟಿಲ್ಲ. ಅವಕಾಶ ಕೊಟ್ಟಿದ್ದರೆ ನಾನು ಬೇರೆ ಏನೋ ಹೇಳುತ್ತಿದ್ದೆ, ಆಗ ಎಲ್ಲರಿಗೂ ಅರ್ಥವಾಗ್ತಿತ್ತು ಎಂದು ಅಮೂಲ್ಯ ತನಿಖೆ ವೇಳೆ ಹೇಳಿಕೊಂಡಿದ್ದಾಳೆ.

ನಾನು ಭಾಷಣ ಮಾಡುವಾಗ ಮೈಕ್ ಕಸಿದುಕೊಂಡು ನನ್ನನ್ನು ಅರ್ಧಕ್ಕೆ ತಡೆಗಟ್ಟಿದ್ದರಿಂದ ಈ ರೀತಿ ಇಶ್ಯೂ ಕ್ರಿಯೇಟ್ ಆಗಿದೆ. ಹೀಗೆ ಅಸಲಿ ವಿಚಾರವನ್ನು ಬಾಯ್ಬಿಟ್ಟಿರುವ ಅಮೂಲ್ಯ ಹೇಳಿಕೆಯನ್ನ ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು, ಸದ್ಯ ಆಕೆಯ ಹೇಳಿಕೆ ಆಧರಿಸಿ ಆಯೋಜಕರ ತೀವ್ರ ವಿಚಾರಣೆ ನಡೆಸಲು ಮುಂದಾಗಿದ್ದಾರೆ.

ನಾಲ್ಕು ದಿನಗಳ ಕಾಲ ಅಮೂಲ್ಯಳನ್ನು ಪೊಲೀಸ್ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ಶನಿವಾರ ಕೋರಮಂಗಲದ ನ್ಯಾಯಾಧೀಶರ ಮನೆಗೆ ಆಕೆಯನ್ನು ಹಾಜರುಪಡಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಮಾರ್ಚ್ 5ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದರು.

ಪಾಕ್ ಪರ ಘೋಷಣೆ ಕೂಗಿದ ನಂತರ 14 ದಿನಗಳ ಕಾಲ ಅಮೂಲ್ಯಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಅಮೂಲ್ಯಳ ಹೆಚ್ಚಿನ ವಿಚಾರಣೆ ಅವಶ್ಯಕತೆ ಇದ್ದ ಕಾರಣ ಎಸ್‍ಐಟಿ ತಂಡ ರಚನೆಯಾಗಿ, ನ್ಯಾಯಾಂಗ ಬಂಧನದಲ್ಲಿದ್ದ ಅಮೂಲ್ಯಳನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ಪೊಲೀಸ್ ಕಸ್ಟಡಿ ವೇಳೆ ಕೆಲವೊಂದು ಸ್ಫೋಟಕ ಮಾಹಿತಿಗಳು ಲಭ್ಯವಾಗಿದ್ದು, ವಿವಿಧ ತಂಡಗಳ ತನಿಖಾಧಿಕಾಗಳು ಬೇರೆ ಬೇರೆ ಆಯಾಮಗಳಲ್ಲಿ ವಿಚಾರಣೆ ನಡೆಸಿದ್ದಾರೆ.

ಎಲ್ಲಾ ಆಯಾಮಗಳಲ್ಲಿ ವಿಚಾರಣೆ ನಡೆಸಿದ ಪೊಲೀಸರು, ಶನಿವಾರ ಮತ್ತೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮಾರ್ಚ್ 5ರಂದು ಮತ್ತೆ ತನಿಖೆಗೆ ಅಮೂಲ್ಯ ಅಗತ್ಯಬಿದ್ದರೆ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ ಎನ್ನಲಾಗಿದೆ.





















