Tag: ಅಮವಾಸ್ಯೆ

  • ಸಿಎಂಗೆ ಅಮಾವಾಸ್ಯೆಗೂ ಹುಣ್ಣಿಮೆಗೂ ವ್ಯತ್ಯಾಸ ಗೊತ್ತಿಲ್ಲ, ವೈಯಕ್ತಿಕ ಟೀಕೆ ಮಾಡೋದು ನನ್ನ ಸಂಸ್ಕಾರ ಅಲ್ಲ – ತೇಜಸ್ವಿ ಸೂರ್ಯ ಟಾಂಗ್

    ಸಿಎಂಗೆ ಅಮಾವಾಸ್ಯೆಗೂ ಹುಣ್ಣಿಮೆಗೂ ವ್ಯತ್ಯಾಸ ಗೊತ್ತಿಲ್ಲ, ವೈಯಕ್ತಿಕ ಟೀಕೆ ಮಾಡೋದು ನನ್ನ ಸಂಸ್ಕಾರ ಅಲ್ಲ – ತೇಜಸ್ವಿ ಸೂರ್ಯ ಟಾಂಗ್

    ಬೆಂಗಳೂರು: ಸೂರ್ಯನಿಗೂ ಚಂದ್ರನಿಗೂ, ಅಮಾವಾಸ್ಯೆಗೂ ಹುಣ್ಷಿಮೆಗೂ ವ್ಯತ್ಯಾಸ ತಿಳಿದು ಸಿದ್ದರಾಮಯ್ಯನವರು ಮಾತಾಡಲಿ ಅಂತ ಅಮಾವಾಸ್ಯೆ ಎಂದು ಕರೆದ ಸಿಎಂ ಸಿದ್ದರಾಮಯ್ಯಗೆ (Siddaramaiah) ಸಂಸದ ತೇಜಸ್ವಿ ಸೂರ್ಯ (Tejaswi Surya) ತಿರುಗೇಟು ನೀಡಿದ್ದಾರೆ.

    ಬೆಂಗಳೂರಿನಲ್ಲಿ ಮಾತಾಡಿದ ಅವರು, ಸಿದ್ದರಾಮಯ್ಯ ಹಿರಿಯರು, ಲೋಕಾನುಭ ಇರೋರು ಅವರಿಗೆ ಅಮಾವಾಸ್ಯೆ, ಹುಣ್ಣಿಮೆ ನಡುವಿನ ವ್ಯತ್ಯಾಸ ಗೊತ್ತಿಲ್ವಾ? ವರ್ಷದ 365 ದಿನವೂ ಬೆಳಕು ಕೊಡೋದು ಸೂರ್ಯ ಮಾತ್ರ, ಚಂದ್ರ ಅಲ್ಲ. ಚಂದ್ರನ ಪೂಜೆ ಮಾಡುವವರ ಜೊತೆಯಿದ್ದು, ಅಮಾವಾಸ್ಯೆ ದಿನ ಸೂರ್ಯ ಇರಲ್ಲ ಅಂತ ಸಿಎಂ ಗೊಂದಲಗೊಂಡಿರಬಹುದು ಎಂದು ಟಾಂಗ್ ಕೊಟ್ಟಿದ್ದಾರೆ.ಇದನ್ನೂ ಓದಿ: ಇದಾನಲ್ಲ ಅಮವಾಸ್ಯೆ ತೇಜಸ್ವಿ ಸೂರ್ಯ ಕೇಂದ್ರದಿಂದ ಹಣ ತರಲ್ಲ – ಸಿಎಂ

    ಸಿದ್ದರಾಮಯ್ಯ ಹಿರಿಯರು, ನನ್ನ ತಂದೆ ಸಮಾನ. ಅವರ ವಿರುದ್ಧ ನಾನು ವೈಯಕ್ತಿಕವಾಗಿ ಟೀಕಿಸಿದರೆ ನನಗೆ ಶೋಭೆ ತರಲ್ಲ. ಅದು ನನ್ನ ರಾಜಕಾರಣದ ಸಂಸ್ಕಾರ ಅಲ್ಲ, ನಮ್ಮ ಪಕ್ಷದ ಸಂಸ್ಕಾರವೂ ಅಲ್ಲ. ಆದರೆ ಸಿದ್ದರಾಮಯ್ಯ ಆಡಳಿತವನ್ನು ಪ್ರಶ್ನೆ ಮಾಡಲೇಬೇಕು. ಕರ್ನಾಟಕಕ್ಕೆ ಸಿದ್ದರಾಮಯ್ಯ ಆಡಳಿತ ಎಂಬ ಗ್ರಹಣ ಹಿಡಿದಿದೆ. ಬೆಂಗಳೂರಿನಲ್ಲಿ ನರಕ ಸ್ಥಿತಿ ಇದೆ. ಬೆಂಗಳೂರಿನಲ್ಲಿ ಗುಂಡಿಗಳಿಲ್ಲದ ರಸ್ತೆಗಳಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಆಗ್ತಿಲ್ಲ. ಅತ್ಯಾಚಾರ, ಕೊಲೆ ಪ್ರಕರಣಗಳು ಹೆಚ್ಚಾಗಿವೆ. ಕಂಪನಿಗಳು ಬೆಂಗಳೂರಿಗೆ ಬರ್ತಿಲ್ಲ. ಗೃಹ ಸಚಿವರು ಬೆಟ್ಟಿಂಗ್‌ನಲ್ಲಿ ಬ್ಯುಸಿ ಇದ್ದರೆ, ಐಟಿ ಸಚಿವರು ಆರ್‌ಎಸ್‌ಎಸ್ ಬ್ಯಾನ್ ಮಾಡೋದ್ರಲ್ಲಿ ಬ್ಯುಸಿ ಇದ್ದಾರೆ. ಇದು ಸಿದ್ದರಾಮಯ್ಯ ಆಡಳಿತದ ವೈಖರಿ ಎಂದು ವಾಗ್ದಾಳಿ ನಡೆಸಿದ್ದಾರೆ.

  • ಅಮಾವಾಸ್ಯೆ ಪ್ರಯುಕ್ತ ದೇವಿ ದೇಗುಲಗಳಲ್ಲಿ ಭಕ್ತಸಾಗರ – ಕೊರೊನಾ ನಿಯಮ ಮರೆತು ದರ್ಶನ

    ಅಮಾವಾಸ್ಯೆ ಪ್ರಯುಕ್ತ ದೇವಿ ದೇಗುಲಗಳಲ್ಲಿ ಭಕ್ತಸಾಗರ – ಕೊರೊನಾ ನಿಯಮ ಮರೆತು ದರ್ಶನ

    ಬೆಂಗಳೂರು: ದೀಪಾವಳಿ ಹಬ್ಬ ಮತ್ತು ಅಮಾವಾಸ್ಯೆ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿರುವ ಅಣ್ಣಮ್ಮ ದೇವಿಯ ದೇವಸ್ಥಾನಕ್ಕೆ ಭಕ್ತರ ದಂಡು ಹರಿದು ಬರುತ್ತಾ ಇದೆ.

    ಬೆಳ್ಳಂಬೆಳ್ಳಗ್ಗೆ ಪೂಜೆ ಸಲ್ಲಿಸಲು ಪುಟ್ಟ ಪುಟ್ಟ ಕಂದಮ್ಮಗಳನ್ನ ಜೊತೆ ಕುಟುಂಬ ಸಮೇತರಾಗಿ ಜನ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ. ಆದರೆ ಜನ ದೇವಸ್ಥಾನದ ಒಳಗೆ ಕೊರೊನಾ ನಿಯಮವನ್ನ ಪಾಲನೆ ಮಾಡುತ್ತಿಲ್ಲ. ಭಕ್ತರು ಸಾಮಾಜಿಕ ಅಂತರ ಮರೆತು ಗುಂಪು ಗೂಡಿದ್ದಾರೆ.

    ಮಾಸ್ಕ್ ಕೂಡ ಹಾಕದೇ ಪೂಜೆಯಲ್ಲಿ ನಿರತರಾಗಿದ್ದಾರೆ. ಕೆಲವರಂತೂ ಮಾಸ್ಕ್ ಹಾಕಿದರೂ ಸರಿಯಾಗಿ ಹಾಕಿಲ್ಲ, ಕಾಟಾಚಾರಕ್ಕೆ ಮಾಸ್ಕ್ ಧರಿಸಿದಂತೆ ಭಾಸವಾಗುತ್ತಿದೆ. ಇನ್ನೂ ಕೆಲವರು ಪುಟ್ಟ ಕಂದಮ್ಮನನ್ನ ದೇವಸ್ಥಾನಕ್ಕೆ ಕರೆತಂದಿದ್ದಾರೆ. ಆದರೆ ಮನೆಯವರು ಮಾಸ್ಕ್ ಹಾಕಿದ್ದರೆ ಕಂದಮ್ಮನಿಗೆ ಮಾಸ್ಕ್ ಹಾಕಿಲ್ಲ. ಈ ರೀತಿ ಅಣ್ಣಮ್ಮ ದೇವಸ್ಥಾನದ ಬಳಿ ಕೊರೊನಾ ನಿಯಮಗಳನ್ನ ಗಾಳಿಗೆ ತೂರಿದ್ದಾರೆ.

    ಇತ್ತ ಮಲ್ಲೇಶ್ವರಂ ದೇವಾಲಯಗಳು ಖಾಲಿ ಖಾಲಿಯಾಗಿವೆ. ಕೊರೊನಾ ಭಯದಿಂದ ದೇವಾಲಯದ ಕಡೆ ಜನರೇ ಬಂದಿಲ್ಲ. ಸರ್ಕಲ್ ಮಾರಮ್ಮ, ಗಂಗಮ್ಮ ದೇವಾಲಯ ಲಕ್ಷ್ಮೀ ನರಸಿಂಹ ದಕ್ಷಿಣ ಮುಖ ನಂದಿ ದೇವಾಲಯದಲ್ಲಿ ಬೆರಳೆಣಿಕೆಯಷ್ಟು ಭಕ್ತರು ಕಾಣಿಸುತ್ತಿದ್ದಾರೆ. ಇನ್ನು ಬಂಡೆ ಮಹಾಂಕಾಳಿ ದೇವಾಲಯದಲ್ಲಿ ಜನ ಜಾತ್ರೆ ತುಂಬಿ ತುಳುಕುತ್ತಿದ್ದು, ಜನ ಕೊರೋನಾ ನಿಯಮಗಳನ್ನ ಗಾಳಿಗೆ ತೂರಿದ್ದಾರೆ. ನೂರಾರು ಜನ ಕ್ಯೂ ನಿಂತಿದ್ದು, ಸಾಮಾಜಿಕ ಅಂತರವನ್ನೇ ಮರೆತು ದೇವರ ದರ್ಶನದಲ್ಲಿ ಮುಳುಗಿದ್ದಾರೆ.

  • ವೈಶಾಖ ಮಾಸದ ಕೃಷ್ಣ ಪಕ್ಷದ ಬಾದಾಮಿ ಅಮಾವಾಸ್ಯೆಯ ಆಚರಣೆ

    ವೈಶಾಖ ಮಾಸದ ಕೃಷ್ಣ ಪಕ್ಷದ ಬಾದಾಮಿ ಅಮಾವಾಸ್ಯೆಯ ಆಚರಣೆ

    – ಅಮವಾಸ್ಯೆಯಂದು ಶಕ್ತಿ ದೇವತೆಯ ಆರಾಧನೆ
    – ಆರಾಧನೆಯಿಂದ ಶತ್ರು ಭಾದೆ ನಿವಾರಣೆ

    ಬೆಂಗಳೂರು: ಬಹುತೇಕ ಜನರಿಗೆ ಅಮವಾಸ್ಯೆ ಇಂದು ಅಥವಾ ನಾಳೆಯೋ ಎಂಬ ಗೊಂದಲದಲ್ಲಿರುತ್ತಾರೆ. ಬಾದಾಮಿ ಅಮಾವಾಸ್ಯೆ ಎಂದರೆ ಕೇವಲ ಬಾದಾಮಿ ಬನಶಂಕರಿಯ ತಾಯಿಯ ಆರಾಧಕರು ಆಚರಣೆ ಮಾಡುತ್ತಾರೆ ಎಂಬ ಕಲ್ಪನೆಯನ್ನು ಹೊಂದಿರುತ್ತಾರೆ. ಬಾದಾಮಿ ಅಮಾವಾಸ್ಯೆಯಂದು ಶಕ್ತಿ ದೇವತೆಯನ್ನು ಆರಾಧನೆ ಮಾಡಲಾಗುತ್ತಿದೆ. ಪ್ರತಿಯೊಂದು ಕುಟುಂಬಕ್ಕೂ ಕುಲದೇವತೆ ಎಂಬುವುದು ಇರುತ್ತದೆ. ಈ ಅಮವಾಸ್ಯೆಯಂದು ಕುಲದೇವತೆ ಅಥವಾ ಗ್ರಾಮದೇವತೆಯನ್ನು ಭಕ್ತಿಯಿಂದ ಆರಾಧಿಸಬೇಕು.

    ಈ ಬಾದಾಮಿ ಅಮಾವಾಸ್ಯೆ ಇಂದು ಸಂಜೆ 4 ಗಂಟೆ 40 ನಿಮಿಷಕ್ಕೆ ಪ್ರಾರಂಭವಾಗಿ ಸೋಮವಾರ 3 ಗಂಟೆ 30ರಿಂದ 36 ನಿಮಿಷಕ್ಕೆ ಮುಕ್ತಾಯವಾಗುತ್ತದೆ. ಹಾಗಾಗಿ ಇಂದೇ ಸೋಮವಾರ ಅಮಾವಾಸ್ಯೆಯನ್ನು ಆಚರಿಸಬೇಕು. ಈ ಅಮಾವಾಸ್ಯೆಯ ಹಿಂದಿನ ಮತ್ತು ಮುಂದಿನ ದಿನವನ್ನು ಅನಧ್ಯಯನ ಎಂದು ಕರೆಯಲಾಗುತ್ತದೆ. ಈ ಅನಧ್ಯಯನದಂದು ಪ್ರಕೃತಿಯಲ್ಲಿ ಏರಿಳಿತಗಳು ಉಂಟಾಗುತ್ತವೆ ಎಂಬುವುದು ನಂಬಿಕೆ. ಶಕ್ತಿ ಸ್ವರೂಪಿನಿ ದೇವಿಯ ಶಕ್ತಿ ಈ ಅಮಾವಾಸ್ಯೆಯಂದು ಹೆಚ್ಚಾಗುತ್ತದೆ. ಇಂತಹ ಶಕ್ತಿ ದೇವತೆಯ ಆರಾಧನೆಯೇ ಬಾದಾಮಿ ಅಮವಾಸ್ಯೆಯ ವೈಶಿಷ್ಟ್ಯತೆ.

    ಸೋಮವಾರ ಮಡಿ ಮೈಲಿಗೆಯಿಂದ ನಿಮ್ಮ ಕುಲದೇವತೆ ಅಥವಾ ಗ್ರಾಮದೇವತೆಯನ್ನು ಭಕ್ತಿಯಿಂದ ಪೂಜೆ ಮಾಡಬೇಕು. ಯಾರು ಭಕ್ತಿ ಭಾವದಿಂದ ಕುಲದೇವತೆಯನ್ನು ಆರಾಧನೆ ಮಾಡುತ್ತಾರೋ ಅಂತಹವರಿಗೆ ಹಿತ ಶತ್ರು, ಅಹಿತ ಶತ್ರು ಮತ್ತು ನೀಚ ಶತ್ರು ಅಂತಹ ಶತ್ರು ಭಾದೆಗಳು ನಿವಾರಣೆ ಆಗುತ್ತದೆ ಎನ್ನುವ ನಂಬಿಕೆಯಿದೆ.

    ಉದ್ಯೋಗ, ವ್ಯಾಪಾರಗಳಲ್ಲಿ ಬಹಳಷ್ಟು ಜನರು ದೃಷ್ಟಿದೋಷದ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಅಂತಹವರು ಈ ಅಮಾವಾಸ್ಯೆಯಂದು ಶಕ್ತಿ ಆರಾಧನೆಯಿಂದ ದೋಷ ನಿವಾರಣೆ ಮಾಡಿಕೊಳ್ಳಬಹುದು.

    ಪೂಜೆ ಮಾಡೋದು ಹೇಗೆ?
    ಒಂದು ಕೂಷ್ಮಾಂಡ (ಕುಂಬಳಕಾಯಿ) ತೆಗೆದುಕೊಳ್ಳಬೇಕು. ಕುಂಬಳಕಾಯಿಯ ಮೇಲೆ ಕರ್ಪೂರವನ್ನಿಟ್ಟು ಹಚ್ಚಿ ಮನೆಯ ಒಳಗಡೆ ಓಡಾಡಬೇಕು. ಕರ್ಪೂರ ಹಚ್ಚಿದ ಕುಂಬಳಕಾಯಿ ಹಿಡಿದು ಹೋಗುವಾಗ ”ಸಕಲ ದೋಷ ನಿವಾರಾಣರ್ತು ಮಮಃ, ಗೃಹೆ ಸಕಲ ದೋಷನಿವಾರಣಾರ್ತು” ಎಂದು ಭಕ್ತಿಯಿಂದ ಹೇಳುತ್ತಾ ವ್ಯವಸ್ಥಿತವಾಗಿ ಮನೆಯ ಎಲ್ಲ ಭಾಗಗಳಿಗೆ ಕೂಷ್ಮಾಂಡವನ್ನು ತೋರಿಸಬೇಕು. ಕೊನೆಗೆ ಮನೆಯ ಹೊರಗಡೆ ಬಂದು ಕುಂಬಳಕಾಯಿಯನ್ನು ಒಡೆಯಬೇಕು.

    ಈ ರೀತಿ ಪೂಜೆ ಮಾಡುವುದರಿಂದ ಮನೆಯಲ್ಲಿರುವ ಕಷ್ಟ, ದರಿದ್ರತೆ ದೂರ ಹೋಗುತ್ತದೆ ಎನ್ನುವ ನಂಬಿಕೆಯಿದೆ. ‘ರಜೋಗುಣ’ ಎಂಬ ದೋಷವನ್ನು ನಿವಾರಣೆ ಮಾಡುವ ವಿಶಿಷ್ಟತೆಯನ್ನು ಈ ಅಮಾವಾಸ್ಯೆ ಹೊಂದಿದೆ. ಇಂತಹ ಅಮಾವಾಸ್ಯೆ ಬಂದಿದ್ದು, ಎಲ್ಲರನ್ನು ವ್ಯವಸ್ಥಿತವಾಗಿ ಪೂಜೆ ಮಾಡುವ ಮೂಲಕ ಸದುಪಯೋಗ ಪಡಿಸಿಕೊಳ್ಳಬಹುದು.

  • ದೀಪಾವಳಿಯಲ್ಲಿ ಧನಲಕ್ಷ್ಮೀ ಪೂಜೆ ಸಲ್ಲಿಸುವ ವಿಧಾನ ಹೇಗೆ? ಧನಲಕ್ಷ್ಮೀ ಚಕ್ರವನ್ನು ಯಾಕೆ ಬಳಕೆ ಮಾಡ್ತಾರೆ?

    ದೀಪಾವಳಿಯಲ್ಲಿ ಧನಲಕ್ಷ್ಮೀ ಪೂಜೆ ಸಲ್ಲಿಸುವ ವಿಧಾನ ಹೇಗೆ? ಧನಲಕ್ಷ್ಮೀ ಚಕ್ರವನ್ನು ಯಾಕೆ ಬಳಕೆ ಮಾಡ್ತಾರೆ?

    ದೀಪಾವಳಿ ಅಶ್ವಯಜ ಮಾಸದ ಕೃಷ್ಣ ಪಕ್ಷದಲ್ಲಿ ಆರಂಭವಾಗಿ ಕಾರ್ತಿಕ ಮಾಸದ ಪಾಡ್ಯದಲ್ಲಿ ಕೊನೆಗೊಳ್ಳುತ್ತದೆ. ದೀಪಾವಳಿಯನ್ನು ಒಟ್ಟು ಮೂರು ದಿನಗಳ ಕಾಲ ಆಚರಣೆ ಮಾಡಲಾಗುತ್ತದೆ. ಮೊದಲನೆಯ ದಿನ ನರಕ ಚತುರ್ದಶಿ, ಎರಡನೇ ದಿನ ಅಮವಾಸ್ಯೆ ಧನಲಕ್ಷ್ಮೀ ಪೂಜೆ ಮತ್ತು ಮೂರನೇಯ ದಿನ ಬಲಿಪಾಡ್ಯಮಿ ಬಲಿಯೇಂದ್ರನನ್ನು ಆರಾಧನೆ ಮಾಡುವ ಮೂಲಕ ದೀಪಾವಳಿ ಮುಗಿಯುತ್ತದೆ.

    ಹೆಚ್ಚಿನ ಜನರು ಮನೆಯಲ್ಲಿ ಧನಲಕ್ಷ್ಮೀ ಪೂಜೆಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುತ್ತಾರೆ. ನಾವೆಲ್ಲರು ಸಂಕಲ್ಪ ಮಾಡುವಾಗ ‘ಮಹಾಲಕ್ಷ್ಮೀ ಚಿರಕಾಲ ಸಂರಕ್ಷಣಾರ್ಥ’ ಎಂದು ಹೇಳುತ್ತೇವೆ. ಅಂದ್ರೆ ಮನೆಯಲ್ಲಿ ಇರುವಂತಹ ಮಹಾಲಕ್ಷ್ಮೀ ಚಿರಕಾಲ ಸಂರಕ್ಷಣೆ ಆಗಲಿ ಎಂಬರ್ಥ. ಹಾಗಾಗಿ ಧನಲಕ್ಷ್ಮಿ ಪೂಜೆಯನ್ನು ತುಂಬಾ ವ್ಯವಸ್ಥಿತವಾಗಿ ಮಾಡಬೇಕು.

    ಪೂಜಾ ವಿಧಾನ:
    ವ್ಯವಸ್ಥಿತವಾಗಿ ಧನಲಕ್ಷ್ಮೀಯ ಯಂತ್ರ ಅಥವಾ ಚಕ್ರವನ್ನಿಟ್ಟು ನಂತರ ಅದರ ಮೇಲೆ ಹಣ ಇಡಬೇಕು. ಆ ಹಣದ ಮೇಲೊಂದು ಕಲಶ ಸ್ಥಾಪಿಸಿ ವ್ಯವಸ್ಥಿತವಾಗಿ ಧನಲಕ್ಷ್ಮೀಯನ್ನು ಆವಾಹನೆ ಮಾಡಬೇಕು. “ಪದ್ಮಪ್ರಿಯೆ, ಪದ್ಮಿನಿ, ಪದ್ಮಹಸ್ತೆ, ಪದ್ಮಾಲಯೆ, ಪದ್ಮದಲಾಯತಾಕ್ಷೆ ವಿಶ್ವಪ್ರಿಯೆ ವಿಶ್ವಮನನುಕೂಲೆ ತದ್ವಾದ ಪದ್ಮಂ ಮಹಿಸನ್ನಿದತ್ವಂ” ಎಂದು ಹೇಳಿ ಮಹಾಲಕ್ಷ್ಮೀಯನ್ನು ಮನೆಗೆ ಬರುವಂತೆ ಕರೆಯಬೇಕು.

    ಯಾವ ಮನೆಯಲ್ಲಿ ಮಹಾಲಕ್ಷ್ಮಿ ನಿಲ್ಲಬೇಕೋ, ಅಲ್ಲಿ ಧನಲಕ್ಷ್ಮೀ ಮತ್ತು ಧಾನ್ಯ ಲಕ್ಷ್ಮೀಗೆ ಆದ್ಯತೆಯನ್ನು ಕೊಡಲೇಬೇಕು. ಕೆಲವರು ಮನೆಯಲ್ಲಿ ಹಣವನ್ನು ಎಸೆಯುತ್ತಿರುತ್ತಾರೆ. ಹಾಗೆಯೇ ಕೆಲವರು ಊಟ ಮಾಡುವ ಆಹಾರವನ್ನು ಅನಾವಶ್ಯಕವಾಗಿ ಚೆಲ್ಲುತ್ತಿರುತ್ತಾರೆ. ಅಂತಹವರ ಮನೆಗೆ ಮಹಾಲಕ್ಷ್ಮೀ ಬರಲು ಹಿಂದೇಟು ಹಾಕುತ್ತಾಳೆ ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ.

    ಧನಲಕ್ಷ್ಮೀ ಚಕ್ರ:
    ಧನಲಕ್ಷ್ಮೀ ಚಕ್ರವನ್ನು ಪಂಚಲೋಹದಿಂದ ಮಾಡಲಾಗಿರುತ್ತದೆ. ಚಕ್ರ ಬೀಜಕ್ಷರಗಳನ್ನು ಒಳಗೊಂಡಿರುತ್ತದೆ. ಶಂಕರಾಚಾರ್ಯರು ಸಹ ಬೀಜಕ್ಷರ ಮಂತ್ರಗಳಿಂದ ಸಿದ್ಧಿಯನ್ನು ಪಡೆದರು ಎಂಬ ಪ್ರತೀತಿ ಇದೆ. ಸಾಕಷ್ಟು ಪುರಾಣ ಇತಿಹಾಸವುಳ್ಳ ದೇವಸ್ಥಾನದಲ್ಲಿ ಶ್ರೀ ಚಕ್ರವನ್ನು ನಾವು ನೋಡಬಹುದು. ಅಂತಹ ದೇವಾಲಯದಲ್ಲಿ ಮಹಾಲಕ್ಷ್ಮೀ ಚಿರಕಾಲ ಸಂರಕ್ಷಣೆಯಾಗಿರುತ್ತಾಳೆ ಎಂಬುವುದನ್ನು ಸಾಕಷ್ಟು ಜನ ಒಪ್ಪಿಕೊಳ್ಳತ್ತಾರೆ. ಶ್ರೀ ಚಕ್ರವುಳ್ಳ ದೇವಸ್ಥಾನ ಹಂತ ಹಂತವಾಗಿ ಅಭಿವೃದ್ಧಿಯಾಗುತ್ತಾ ಹೋಗುತ್ತದೆ. ಈ ಹಿನ್ನೆಲೆಯಲ್ಲಿ ಮನೆಯಲ್ಲಿ ಧನಲಕ್ಷ್ಮೀ ಚಕ್ರವನ್ನು ಬಳಸಿದ್ರೆ ಒಳ್ಳೆಯದಾಗುತ್ತೆ ಎಂಬುವುದು ನಂಬಿಕೆ.

    ಮನೆಯೂ ಸಹ ಒಂದು ದೇವಾಲಯ. ಮನೆಯಲ್ಲಿಯೂ ದೇಗುಲ ಅಂತಾ ನಿರ್ಮಿಸಿ ಅಲ್ಲಿ ಪ್ರತಿನಿತ್ಯ ಪೂಜೆ ಸಲ್ಲಿಸಲಾಗುತ್ತದೆ. ಹಾಗಾಗಿ ಧನಲಕ್ಷ್ಮೀ ಚಕ್ರ ಬಳಸಿ ವ್ಯವಸ್ಥಿತವಾಗಿ ಪೂಜೆ ಸಲ್ಲಿಸಿದ್ರೆ ಶ್ರೇಯಸ್ಸು ಸಿಗಲಿದೆ.

    ಪ್ರತಿ ವರ್ಷ ಧನಲಕ್ಷ್ಮೀ ಪೂಜೆಗಾಗಿ ಸಿದ್ಧಿಗೊಳಿಸಿರುವ ಚಕ್ರವನ್ನು ಬಳಸಬೇಕು. ಚಕ್ರವನ್ನು ವ್ಯವಸ್ಥಿತವಾಗಿ ಪ್ರತಿಷ್ಠಾಪನೆಗೊಳಿಸಿ ಶ್ರೀ ಸೂಕ್ತ ಅಥವಾ ಬೀಜಕ್ಷರ ಮಂತ್ರ ಒಳಗೊಂಡಿರುವ ಧನಲಕ್ಷ್ಮೀ ಚಕ್ರ ಬಳಸುವ ಮೂಲಕ ಮಹಾಲಕ್ಷ್ಮೀಯನ್ನು ಆವಾಹನೆಯನ್ನು ಮಾಡಬೇಕು. ಮಹಾಲಕ್ಷ್ಮೀಗೆ ಕುಂಕುಮಾರ್ಚನೆ ಮಾಡುವುದರ ಜೊತೆಗೆ ಶೋಡಷ ಉಪಾಚರಗಳನ್ನು ಮಾಡಬೇಕು. ನಿಂಬೆ ಹಣ್ಣಿನ ಪಾನಕ ಮತ್ತು ಹೆಸರು ಬೇಳೆ ಕೋಸಂಬರಿಯನ್ನು ನೈವೇದ್ಯವನ್ನಾಗಿ ಮಾಡಿ, ಸುಮಂಗಲಿಯರಿಗೆ ಅರಿಶಿಣ-ಕುಂಕುಮ ನೀಡಬೇಕು. ಈ ರೀತಿಯಾಗಿ ಸಂಪ್ರದಾಯಬದ್ಧವಾಗಿ ಪೂಜೆ ಸಲ್ಲಿಸಿದ್ರೆ ಭವಿಷ್ಯದಲ್ಲಿ ಒಳ್ಳೆಯದಾಗುತ್ತದೆ ಎನ್ನುವ ನಂಂಬಿಕೆಯಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈಸೂರು ದಸರಾ ಗಜಪಡೆ ತಾಲೀಮಿಗೆ ಬ್ರೇಕ್!

    ಮೈಸೂರು ದಸರಾ ಗಜಪಡೆ ತಾಲೀಮಿಗೆ ಬ್ರೇಕ್!

    ಮೈಸೂರು: ಇಂದು ಅಮಾವಾಸ್ಯೆ ಹಿನ್ನೆಲೆಯಲ್ಲಿ ದಸರಾ ಗಜಪಡೆಗೂ ಅಮಾವಾಸ್ಯೆ ಬಿಸಿ ಮುಟ್ಟಿದ್ದು, ಗಜಪಡೆ ತಾಲೀಮಿಗೆ ಬ್ರೇಕ್ ಬಿದ್ದಿದೆ.

    ದಸರಾ ಪ್ರಯುಕ್ತ ಪ್ರತಿದಿನ ಬೆಳಗ್ಗೆ ಸಂಜೆ ಆನೆಗಳಿಗೆ ತಾಲೀಮು ನಡೆಯುತ್ತಿತ್ತು. ಪ್ರತಿದಿನ ಅರಮನೆಯಿಂದ ಕೆ.ಆರ್ ವೃತ್ತ ಸಯ್ಯಾಜಿರಾವ್ ರಸ್ತೆ ತಿಲಕ್‍ನಗರ ಬಂಬೂಬಜಾರ್, ಹೈವೆ ವೃತ್ತದ ಮೂಲಕ ಬನ್ನಿಮಂಟಪ ತಲುಪುತ್ತಿದ್ದವು. ಬಳಿಕ ಅದೇ ಮಾರ್ಗವಾಗಿ ಆನೆಗಳು ಮೈಸೂರು ಅರಮನೆಗೆ ವಾಪಸ್ಸಾಗುತ್ತಿದ್ದವು. ಆದರೆ ಇಂದು ಅಮಾವಾಸ್ಯೆಯಾಗಿದ್ದರಿಂದ ತಾಲೀಮು ನಡೆಯುತ್ತಿಲ್ಲ. ಪ್ರತಿ ಅಮಾವಾಸ್ಯೆ ಬಂದರೂ ಆನೆಗಳಿಗೆ ತಾಲೀಮು ನಡೆಸುವುದಿಲ್ಲ. ಇದನ್ನೂ ಓದಿ: ಮೈಸೂರೊಳಗೆ ದಸರಾ ಆನೆ ಟೀಂ ವಾಕಿಂಗ್- ವಿಡಿಯೋ ನೋಡಿ

    ಮೈಸೂರಿನ ಒಳಗೆ 40 ದಿನ ಗಜಪಡೆಯೂ ವಾಕಿಂಗ್ ಮಾಡುತ್ತದೆ. ದಸರಾ ತಾಲೀಮು ರೂಪದ ವಾಕಿಂಗ್ ಅನ್ನು ಗಜಪಡೆಯೂ ಬೆಳಗ್ಗೆ ಮತ್ತು ಸಂಜೆ ಮಾಡಲಿವೆ. ಕ್ಯಾಪ್ಟನ್ ಅರ್ಜುನ ನೇತೃತ್ವದ ಗಜಪಡೆಯ ವಾಕಿಂಗ್ ಪ್ರತಿದಿನ ಅರಮನೆಯ ಆವರಣದಿಂದ ಆರಂಭವಾಗುತ್ತದೆ.

    ತಾಲೀಮು ಏಕೆ?
    ಆನೆಗಳಿಗೆ ಜನರ ಗದ್ದಲ, ವಾಹನಗಳ ಧ್ವನಿ ಮತ್ತು ರಸ್ತೆಯ ಪರಿಚಯ ಮಾಡುವ ಉದ್ದೇಶದಿಂದ ಈ ತಾಲೀಮು ಮಾಡಿಸಲಾಗುತ್ತದೆ. ಅಲ್ಲದೆ ಕಾಡಿನಲ್ಲಿ ಓಡಾಡುವ ಆನೆಗಳು ಸಿಮೆಂಟ್ ಹಾಗೂ ಕಾಂಕ್ರಿಟ್ ರಸ್ತೆ ಮೇಲೆ ನಡೆಯುವುದನ್ನು ಅಭ್ಯಾಸ ಮಾಡಿಸುವುದು ಈ ತಾಲೀಮಿನ ಉದ್ದೇಶವಾಗಿದೆ. ತಾಲೀಮು ಮುಗಿದ ನಂತರ ಆನೆಗಳಿಗೆ ಪೌಷ್ಠಿಕ ಆಹಾರ ನೀಡಿ ಅವು ಸದೃಢವಾಗಿರುವಂತೆ ನೋಡಿಕೊಳ್ಳಲಾಗುತ್ತದೆ. ಯಾವುದೇ ಹಂತದಲ್ಲೂ ಆನೆಗಳು ಸಿಮೆಂಟ್ ಹಾಗೂ ಕಾಂಕ್ರಿಟ್ ರಸ್ತೆ ಮೇಲೆ ಸಾಗಿ ಸುಸ್ತಾಗದಂತೆ ನೋಡಿಕೊಳ್ಳುವುದು ಅತಿ ಮುಖ್ಯವಾಗಿದೆ ಎಂದು ಆನೆ ವೈದ್ಯರಾದ ಡಾ. ನಾಗರಾಜ್ ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಮಾವಾಸ್ಯೆ ಬೆನ್ನಲ್ಲೇ ಪ್ರತ್ಯೇಕ ಅಪಘಾತಗಳಲ್ಲಿ 5 ಮಂದಿ ದುರ್ಮರಣ!

    ಅಮಾವಾಸ್ಯೆ ಬೆನ್ನಲ್ಲೇ ಪ್ರತ್ಯೇಕ ಅಪಘಾತಗಳಲ್ಲಿ 5 ಮಂದಿ ದುರ್ಮರಣ!

    ಮಂಡ್ಯ: ಅಮಾವಾಸ್ಯೆ ಬೆನ್ನಲ್ಲೇ ಪ್ರತ್ಯೇಕ ಅಪಘಾತ ಪ್ರಕರಣದಲ್ಲಿ ಒಟ್ಟು ಐದು ಮಂದಿ ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

    ನಗರದ ಹೊರವಲಯದಲ್ಲಿ ಭಾನುವಾರ ಬೆಳಗ್ಗೆ ನಡೆದ ಬೈಕ್ ಮತ್ತು ಲಾರಿ ನಡುವಿನ ಅಪಘಾತದಲ್ಲಿ ಪ್ರವೀಣ್ ಹಾಗೂ ಪ್ರಮೋದ್ ಇಬ್ಬರು ಮೃತಪಟ್ಟಿದ್ದಾರೆ. ಈ ಬಗ್ಗೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇತ್ತ ಮದ್ದೂರು ತಾಲೂಕಿನ ಬೆಸಗರಹಳ್ಳಿ ಬಳಿ ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಕಾರಿಗೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದ ಪರಿಣಾಮ ಟ್ರಾಕ್ಟರ್ ಚಾಲಕ ಶಿವಕುಮಾರ್ ಸಾವನ್ನಪ್ಪಿದ್ದಾರೆ. ಈ ಪ್ರಕರಣ ಬಗ್ಗೆ ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

    ಮದ್ದೂರು ಪಟ್ಟಣದ ಟಿಎಪಿಸಿಎಂಎಸ್ ಗೋದಾಮಿನ ಬಳಿ ಕಾರ್ ಪಲ್ಟಿಯಾಗಿ ಬೆಂಗಳೂರಿನ ಉಮೇಶ್ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ಮಳವಳ್ಳಿ ತಾಲೂಕಿನ ಬೆಳಕವಾಡಿ ಸಮೀಪ ಬೈಕ್ ನಿಂದ ಆಯತಪ್ಪಿ ಬಿದ್ದು ನಾಗೇಂದ್ರ ಎಂಬ ಯುವಕ ಸಾವನ್ನಪ್ಪಿದ್ದಾರೆ.

    ಈ ಬಗ್ಗೆ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಇಂದು ಆಷಾಢ ಅಮಾವಾಸ್ಯೆ- ಕರಾವಳಿಯಲ್ಲಿ ಹಾಳೆ ಮರದ ಕಷಾಯ ಕುಡಿದು ಆಚರಣೆ

    ಇಂದು ಆಷಾಢ ಅಮಾವಾಸ್ಯೆ- ಕರಾವಳಿಯಲ್ಲಿ ಹಾಳೆ ಮರದ ಕಷಾಯ ಕುಡಿದು ಆಚರಣೆ

    ಉಡುಪಿ: ಇಂದು ಆಷಾಢ ಅಮಾವಾಸ್ಯೆ. ಕರಾವಳಿಯಲ್ಲಿ ಆಷಾಢ ಅಮಾವಾಸ್ಯೆಯನ್ನು ಹಾಳೆ ಮರದ ಕಷಾಯ ಕುಡಿಯುವ ಮೂಲಕ ಆಚರಣೆ ಮಾಡಲಾಗುತ್ತದೆ.

    ಕಷಾಯ ತಯಾರಿಸುವ ದ್ರವ್ಯಗಳು ನಗರವಾಸಿಗಳಿಗೆ ಲಭಿಸದ ಕಾರಣ ತುಳುಕೂಟ ಉಡುಪಿ ಸಂಘಟನೆ ಹಾಳೆ ಮರದ ಕಷಾಯದ ವ್ಯವಸ್ಥೆ ಮಾಡಿತ್ತು. ಉಡುಪಿಯ ಅಮ್ಮಣ್ಣಿ ರಾಮಣ್ಣ ಸಭಾಂಗಣದಲ್ಲಿ ಹಾಳೆ ಮರದ ಕಷಾಯ, ಮೆಂತೆ ಗಂಜಿ ಮತ್ತು ತುಪ್ಪದ ವ್ಯವಸ್ಥೆ ಮಾಡಿತ್ತು.

    ಆಷಾಢ ಮಾಸದಲ್ಲಿ ಹಾಳೆ ಮರದ ತೊಗಟೆಯಲ್ಲಿ ಅಪಾರ ಪ್ರಮಾಣದ ಔಷಧೀಯ ಗುಣ ಇರುತ್ತದೆ. ಅದರ ರಸ ತೆಗೆದು ಬೆಳ್ಳುಳ್ಳಿ, ಜೀರಿಗೆ, ಓಂ ಕಾಳು, ಮೆಣಸು, ಬೆರೆಸಿ ಒಗ್ಗರಣೆ ಕೊಟ್ಟು ಕಷಾಯ ಮಾಡಿ ಕುಡಿದರೆ ಸಕಲ ರೋಗ ಗುಣವಾಗುತ್ತದೆ. ಮಳೆಗಾಲದಲ್ಲಿ ಬರುವ ಯಾವುದೇ ರೋಗಗಳು ಬಾಧಿಸುವುದಿಲ್ಲ.

    ಇದು ಆಯುರ್ವೇದದಲ್ಲೂ ಸಾಬೀತಾಗಿದೆ. ಹಾಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಆಯುರ್ವೇದ ಆಸ್ಪತ್ರೆ ಕಾರ್ಯಕ್ರಮಕ್ಕೆ ಕೈ ಜೋಡಿಸಿ ಕಷಾಯ ತಯಾರಿಸುವ ವ್ಯವಸ್ಥೆ ಮಾಡಿತ್ತು. ಸಾವಿರಾರು ಜನ ಒಂದೇ ಕಡೆ ಕಷಾಯ ಕುಡಿದು, ಮೆಂತೆ ಗಂಜಿ ತಿಂದು ಆಷಾಢ ಅಮಾವಾಸ್ಯೆ ಆಚರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಮೌಢ್ಯಕ್ಕೆ ಜೈ- ಛಟ್ಟಿ ಅಮವಾಸ್ಯೆ ಹಿನ್ನೆಲೆ ಸಭೆಯನ್ನು ಮೂಂದೂಡಿದ ಕಾಂಗ್ರೆಸ್ ಜಿ.ಪಂ. ಅಧ್ಯಕ್ಷೆ

    ಮೌಢ್ಯಕ್ಕೆ ಜೈ- ಛಟ್ಟಿ ಅಮವಾಸ್ಯೆ ಹಿನ್ನೆಲೆ ಸಭೆಯನ್ನು ಮೂಂದೂಡಿದ ಕಾಂಗ್ರೆಸ್ ಜಿ.ಪಂ. ಅಧ್ಯಕ್ಷೆ

    ವಿಜಯಪುರ: ರಾಜ್ಯದಲ್ಲಿ ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ಸಿಎಂ ಸಿದ್ದರಾಮಯ್ಯ ಸಿದ್ಧತೆ ನಡೆಸಿದ್ದಾರೆ. ಆದರೆ ವಿಜಯಪುರದ ಜಿಲ್ಲಾ ಪಂಚಾಯತ್‍ನ ಕಾಂಗ್ರೆಸ್ ಅಧ್ಯಕ್ಷೆ ನೀಲಮ್ಮ ಮೇಟಿ ಇಂದು ನಡೆಯಬೇಕಿದ್ದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯನ್ನು ಛಟ್ಟಿ ಅಮವಾಸ್ಯೆ ಹಿನ್ನೆಲೆಯಲ್ಲಿ ಮುಂದೂಡಿ ಮೌಢ್ಯಕ್ಕೆ ಜೈ ಎಂದಿದ್ದಾರೆ.

    ಎಲ್ಲ ಸದಸ್ಯರು ಅಮವಾಸ್ಯೆ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ಹೋಗಬೇಕೆಂದು ಒತ್ತಡ ಹಾಕಿದ್ದರಿಂದ ಇಂದು ನಿಗದಿಯಾಗಿದ್ದ ಸಾಮಾನ್ಯ ಸಭೆಯನ್ನು ನವೆಂಬರ್ 28ಕ್ಕೆ ಮುಂದೂಡಲಾಗಿದೆ. ಜಿಲ್ಲಾ ಪಂಚಾಯ್ತಿ ಆಡಳಿತದ ಈ ನಿರ್ಧಾರ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಆದರೆ ಜಿಲ್ಲಾ ಪಂಚಾಯ್ತಿ ಸದಸ್ಯರು ತಮ್ಮ ನಿಲುವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಇಂದು ನಡೆಯಬೇಕಿದ್ದ ಸಭೆಯನ್ನು ಅಮವಾಸ್ಯೆ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ ಎಂದು ಸಾಮನ್ಯ ಸಭೆ ಆಯೋಜಿಸುವ ಮುಖ್ಯ ಯೋಜನಾಧಿಕಾರಿ ಕಚೇರಿ ಸಿಬ್ಬಂದಿಯಿಂದ ಫೋನ್ ಬಂದಿತ್ತು ಎಂದು ಕಾಂಗ್ರೆಸ್ ಸದಸ್ಯರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

    ಅಧ್ಯಕ್ಷರು ಯಾವ ಸದಸ್ಯರೊಂದಿಗೆ ಚರ್ಚಿಸದೇ ಸಾಮನ್ಯ ಸಭೆಯ ದಿನಾಂಕವನ್ನು ಅಮವಾಸ್ಯೆಯಂದು ನಿರ್ಧರಿಸಿದ್ದರು. ಅಮವಾಸ್ಯೆಯ ದಿನ ನಾವು ಸಭೆಗೆ ಹಾಜರಾಗಲ್ಲ ಎಂದು ವಿರೋಧ ಮಾಡಲಾಯಿತು. ಹೆಚ್ಚಿನ ಸದಸ್ಯರು ಮನೆದೇವರ ದರ್ಶನಕ್ಕಾಗಿ ತೆರಳುತ್ತಿರುವುದರಿಂದ ಕೊನೆ ಕ್ಷಣದಲ್ಲಿ ಸಭೆಯ ದಿನಾಂಕವನ್ನು ಬದಲಿಸಲಾಯಿತು ಎಂದು ಕನಮಡಿ ಜಿ.ಪಂ. ಕ್ಷೇತ್ರದ ಬಿಜೆಪಿ ಸದಸ್ಯ ಸಾಬು ಮಾಶ್ಯಾಳ ತಿಳಿಸಿದ್ದಾರೆ.

    ಸಾಮಾನ್ಯ ಸಭೆ ಮುಂದೂಡಿದ್ದು ಮೂರ್ಖತನದ ಪರಮಾವಧಿ. ವೈಜ್ಞಾನಿಕ ಯುಗದಲ್ಲೂ ಜನಪ್ರತಿನಿಧಿಗಳು ಹೀಗೆ ಮಾಡುವುದು ಸರಿಯಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇಂದಿಗೂ ಮೌಢ್ಯತೆಯನ್ನು ಇಷ್ಟು ಬಲವಾಗಿ ನಂಬಿರುವುದು ದುರಂತವಾಗಿದೆ ಎಂದು ಎಐಡಿಎಸ್‍ಒ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಎಚ್.ಟಿ. ಭರತ್‍ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಒಂದೆಡೆ ರಾಜ್ಯ ಸರ್ಕಾರ ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಸಿದ್ಧತೆಯನ್ನು ನಡೆಸಿದೆ. ಈ ಸಮಯದಲ್ಲಿ ಕಾಂಗ್ರೆಸ್ ಸರ್ಕಾರದ ಸದಸ್ಯರು ಈ ರೀತಿಯ ಮೌಢ್ಯಕ್ಕೆ ಜೈ ಎಂದು ಹೇಳುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ. ಒಂದು ವೇಳೆ ಅಮಾವಸ್ಯೆಯ ದಿನ ದೇವಸ್ಥಾನಗಳಿಗೆ ಹೋಗುವುದಿದ್ದರೆ ಮೊದಲೇ ಎಲ್ಲಾ ಜಿಲ್ಲಾ ಪಂಚಾಯ್ತಿ ಸದಸ್ಯರ ಸಹಮತದ ಮೇರೆಗೆ ದಿನಾಂಕವನ್ನು ನಿಗದಿ ಮಾಡಬೇಕಾಗಿತ್ತು. ಏಕಾಏಕಿ ಅಮಾವಸ್ಯೆಯ ಕಾರಣ ಹೇಳಿ ಸಭೆಯ ದಿನಾಂಕವನ್ನು ಕೊನೆ ಕ್ಷಣದಲ್ಲಿ ಬದಲಾಯಿಸುವುದು ಎಷ್ಟು ಸರಿ ಎಂದು ಸಾರ್ವಜನಿಕರು ಆಕ್ರೋಶವನ್ನು ಹೊರಹಾಕಿದ್ದಾರೆ.