Tag: ಅಮರೇಗೌಡ

  • ರಮೇಶ್ ಜಾರಕಿಹೊಳಿಗೆ ಬಿಜೆಪಿಯ ಗರ್ಭಗುಡಿ ಸಂಸ್ಕೃತಿ ಒಗ್ಗುತ್ತಿಲ್ಲ: ಅಮರೇಗೌಡ

    ರಮೇಶ್ ಜಾರಕಿಹೊಳಿಗೆ ಬಿಜೆಪಿಯ ಗರ್ಭಗುಡಿ ಸಂಸ್ಕೃತಿ ಒಗ್ಗುತ್ತಿಲ್ಲ: ಅಮರೇಗೌಡ

    ಕೊಪ್ಪಳ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಿಜೆಪಿ ಬಿಟ್ಟು ಬೇರೆ ಪಕ್ಷ ಸೇರಬಹುದು. ಅವರಿಗೆ ಬಿಜೆಪಿಯ ಗರ್ಭಗುಡಿ ಸಂಸ್ಕೃತಿ ಒಗ್ಗುತ್ತಿಲ್ಲ ಎನ್ನುವುದು ಅವರ ನಡುವಳಿಕೆಯಿಂದ ತಿಳಿಯುತ್ತಿದೆ ಎಂದು ಕುಷ್ಟಗಿ ಕ್ಷೇತ್ರದ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದ್ದಾರೆ.

    ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಮರೇಗೌಡರು, ಜಾರಕಿಹೊಳಿ ಇತ್ತೀಚೆಗೆ ಕೆಲವರೊಂದಿಗೆ ಮುಂಬೈಗೆ ಹೋಗಿರುವುದನ್ನು ನೋಡಿದರೆ ಅವರು ಬಿಜೆಪಿ ತೊರೆಯುವ ಸಾಧ್ಯತೆ ಇದೆ. ಅವರೊಂದಿಗೆ ಕೆಲವರು ಕಾಂಗ್ರೆಸ್ ಅಥವಾ ಜೆಡಿಎಸ್‍ಗೆ ಮತ್ತೆ ಸೇರುವ ಸಾಧ್ಯತೆ ಇದೆ. ಒಂದು ವೇಳೆ ಅವರು ವಾಪಸ್ ಬಂದರೆ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಸರ್ಕಾರ ಬೀಳಿಸಿ, ರಚಿಸುವ ಶಕ್ತಿ ದೇವರು ಕೊಟ್ಟಿದ್ದಾನೆ: ರಮೇಶ್ ಜಾರಕಿಹೊಳಿ

    ಯಾವುದೇ ಪಕ್ಷದ ಶಾಸಕರಾಗಲಿ ಅವಧಿಯ ಮುನ್ನ ಪಕ್ಷಾಂತರ ಮಾಡಬಾರದು. ಚುನಾವಣಾ ಸಂದರ್ಭದಲ್ಲಿ ಪಕ್ಷಾಂತರ ಮಾಡಿದರೆ ನಡೆಯುತ್ತೆ. ಜಾರಕಿಹೊಳಿಯವರು ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ತೆಗೆಯಲು ಹೊರಟಿಲ್ಲ ಅನಿಸುತ್ತದೆ. ಯಾಕೆಂದರೆ ಯಡಿಯೂರಪ್ಪ ಅಧಿಕಾರಕ್ಕೆ ಬರಲು ರಮೇಶ್ ಜಾರಕಿಹೊಳಿ ಕಾರಣ. ಬಿಜೆಪಿ ಯಡಿಯೂರಪ್ಪ ಅವರನ್ನು ಬದಲಾಯಿಸುವುದು ಕಷ್ಟ ಬಿಜೆಪಿಯಲ್ಲಿ ಯಡಿಯೂರಪ್ಪ ಇಲ್ಲಂದ್ರೆ ಬಿಜೆಪಿ ಇಲ್ಲ ಎಂದು ಮತ್ತೊಮ್ಮೆ ಹೇಳಿದರು.

    ಸಮಯ ಸಂದರ್ಭ ಬಂದಾಗ ಶಾಸಕರು ಪಕ್ಷ ಬದಲಾಯಿಸುವುದು ಸಹಜ, ಆದರೆ ಇತ್ತೀಚಿನ ದಿನಗಳಲ್ಲಿ ಅವರು ಅತಿರೇಕಕ್ಕೆ ಹೋಗಿದೆ. ಕಾಂಗ್ರೆಸ್ ಸಿಎಂ ಸ್ಥಾನದ ಬಗ್ಗೆ ಈಗ ಚರ್ಚಿಸಿದರೆ ಬಿಜೆಪಿಗೆ ಅನುಕೂಲವಾಗಲಿದೆ. ನಾವೇ ಅವರಿಗೆ ಆಹಾರವಾಗುವುದು ಬೇಡ, ಕಾಂಗ್ರೆಸ್ 7-8 ಜನ ಸಿಎಂ ಸ್ಥಾನದ ಅರ್ಹತೆ ಹೊಂದಿದವರು ಇದ್ದಾರೆ. ಚುನಾವಣೆಯ ನಂತರ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ. ಕೆಲವರು ಕೆಲವರ ಹೆಸರು ಹೇಳುತ್ತಿದ್ದರೂ ತಪ್ಪೇನಿಲ್ಲ ಎಂದು ಸಮಾಜಾಯಿಷಿ ನೀಡಿದರು.

  • ಯಡಿಯೂರಪ್ಪ ಇಲ್ಲಾಂದ್ರೆ ಬಿಜೆಪಿ ಇಲ್ಲ, ಬಿಜೆಪಿ ಇಲ್ಲಾಂದ್ರೆ ಯಡಿಯೂರಪ್ಪ ಇಲ್ಲ: ಅಮರೇಗೌಡ

    ಯಡಿಯೂರಪ್ಪ ಇಲ್ಲಾಂದ್ರೆ ಬಿಜೆಪಿ ಇಲ್ಲ, ಬಿಜೆಪಿ ಇಲ್ಲಾಂದ್ರೆ ಯಡಿಯೂರಪ್ಪ ಇಲ್ಲ: ಅಮರೇಗೌಡ

    ಕೊಪ್ಪಳ: ಯಡಿಯೂರಪ್ಪ ಇಲ್ಲ ಅಂದರೆ ಬಿಜೆಪಿ ಇಲ್ಲ, ಬಿಜೆಪಿ ಇಲ್ಲ ಅಂದರೆ ಯಡಿಯೂರಪ್ಪ ಇಲ್ಲ ಎಂದು ಕಾಂಗ್ರೆಸ್ ಶಾಸಕ ಅಮರೇಗೌಡರವರು ಹೇಳಿದ್ದಾರೆ.

    ಇತ್ತೀಚೆಗೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಜೋರಾಗಿ ನಡೆಯುತ್ತಿದೆ. ಈ ಮಧ್ಯೆ ಕೊಪ್ಪಳದಲ್ಲಿ ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಮಾತನಾಡಿ, ಈ ಪುಣ್ಯಾತ್ಮ ಯಡಿಯೂರಪ್ಪ ಇರುವುದರಿಂದಲೇ ಕೇಂದ್ರದವರು ರಾಜ್ಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ.

    ಕೇಂದ್ರದಿಂದ ಸರಿಯಾದ ಅನುದಾನ ನೀಡುತ್ತಿಲ್ಲ, ಇತ್ತೀಚಿನ ಚಂಡಮಾರುತದಿಂದ ಕರಾವಳಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿಗಳು ವರದಿ ನೀಡಿದ್ದಾರೆ. ಆದರೆ ರಾಜ್ಯಕ್ಕೆ ಅತ್ಯಲ್ಪ ಪರಿಹಾರ ಬಿಡುಗಡೆಯಾಗಿದೆ. ಯಡಿಯೂರಪ್ಪ ಇಳಿಸಲು ಕೇಂದ್ರದ ಅವರ ಹೈಕಮಾಂಡ್ ಹಾಗೂ ರಾಜ್ಯದ ಲೋ ಕಮಾಂಡ್ ಸಹ ಕೆಲಸ ಮಾಡುತ್ತಿದೆ.

    ರಾಜ್ಯದಲ್ಲಿ ಪರಿಸ್ಥಿತಿ ಕೆಟ್ಟು ಹೈದರಾಬಾದ್‍ನಂತೆ ಆಗಿದೆ. ಹಿಂದೆ ಜನಾರ್ದನರೆಡ್ಡಿ ಹೈದರಾಬಾದ್‍ಗೆ ಶಾಸಕರನ್ನು ಕರೆದುಕೊಂಡು ಹೋಗಿದ್ದರು. ಈಗ ಆಡಳಿತವೇ ಕೆಟ್ಟು ಹೈದರಾಬಾದ್‍ನಂತೆ ಆಗಿದೆ ಎಂದು ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಟೀಕಿಸಿದ್ದಾರೆ. ಇದನ್ನೂ ಓದಿ: ಒಂದೆರಡು ದಿನಗಳಲ್ಲಿ ಹೆಚ್ಚಿನ ಪ್ರಮಾಣದ ಕೋವಿಡ್ ಲಸಿಕೆ ಲಭ್ಯ: ಸಿಎಂ ಯಡಿಯೂರಪ್ಪ

  • ಸುರೇಶ್ ಕುಮಾರ್ ಆತ್ಮವಂಚನೆ ಮಾಡಿಕೊಂಡು ಪಿಯುಸಿ ಪರೀಕ್ಷೆ ರದ್ದು ಮಾಡಿದ್ದಾರೆ – ಅಮರೇಗೌಡ

    ಸುರೇಶ್ ಕುಮಾರ್ ಆತ್ಮವಂಚನೆ ಮಾಡಿಕೊಂಡು ಪಿಯುಸಿ ಪರೀಕ್ಷೆ ರದ್ದು ಮಾಡಿದ್ದಾರೆ – ಅಮರೇಗೌಡ

    ಕೊಪ್ಪಳ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಆತ್ಮವಂಚನೆ ಮಾಡಿಕೊಂಡು ರಾಜ್ಯದಲ್ಲಿ ಪಿಯುಸಿ ಪರೀಕ್ಷೆ ರದ್ದು ಮಾಡುವ ನಿರ್ಧಾರ ತೆಗೆದು ಕೊಂಡಿದ್ದಾರೆ ಎಂದು ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಅಭಿಪ್ರಾಯಪಟ್ಟಿದ್ದಾರೆ.

    ಕೊಪ್ಪಳದ ಕುಷ್ಟಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಅಮರೇಗೌಡ ಅವರು, ಜುಲೈ 3ನೇ ವಾರದಲ್ಲಿ ನಡೆಯಬೇಕಾಗಿದ್ದ ಪರೀಕ್ಷೆಯ ಬಗ್ಗೆ ಈಗಲೇ ನಿರ್ಧಾರ ತೆಗೆದುಕೊಳ್ಳಬಾರದಿತ್ತು. ಜುಲೈ ಮೊದಲ ವಾರದಲ್ಲಿ ಆಗಿನ ಪರಿಸ್ಥಿತಿ ನೋಡಿಕೊಂಡ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಸಿಎಂ, ಶಿಕ್ಷಣ ಸಚಿವರು ಹಾಗೂ ಸರ್ಕಾರ ತೆಗೆದುಕೊಂಡ ನಿರ್ಧಾರದಿಂದ ನನಗೆ ಅಸಮಾಧಾನವಿದೆ ಎಂದರು. ಇದನ್ನೂ ಓದಿ: ದ್ವಿತೀಯ ಪಿಯುಸಿ ಮಕ್ಕಳು ಪರೀಕ್ಷೆ ಇಲ್ಲದೇ ಪಾಸ್: ಸುರೇಶ್ ಕುಮಾರ್

    ಪಿಯುಸಿ ಪರೀಕ್ಷೆ ನಡೆಸಬೇಕು ಎನ್ನುವ ಹಂಬಲ ಶಿಕ್ಷಣ ಸಚಿವರಿಗೆ ಇತ್ತು. ಸಿಬಿಎಸ್‍ಇ ಪರೀಕ್ಷೆ ರದ್ದಾದ ಹಿನ್ನೆಲೆ, ಮೋದಿ ಅವರನ್ನು ವಿರುದ್ಧ ಹಾಕಿಕೊಳ್ಳಲಾಗದೆ ಪರೀಕ್ಷೆ ರದ್ದು ಮಾಡಿದ್ದಾರೆ. ಅನೇಕ ಬಾರಿ ಸಚಿವರೊಂದಿಗೆ ನಾನು ಮಾತನಾಡಿದ್ದೇನೆ. ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಯನ್ನು ನಡೆಸಬೇಕು ಎನ್ನುವ ಮನಸ್ಥಿತಿಯಲ್ಲಿ ಸಚಿವರು ಇದ್ದರು. ಇದೀಗ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಿದ್ದಾರೆ. ಪಿಯುಸಿ ಪರೀಕ್ಷೆ ರದ್ದಾಗಿದ್ದು ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗುತ್ತದೆ. ಪಿಯುಸಿ ಪರೀಕ್ಷೆಯನ್ನು ಸ್ವಲ್ಪ ದಿನ ಕಾದು ನಡೆಸಬಹುದಿತ್ತು. ಸಚಿವರು ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸುತ್ತೇನೆ ಎಂದು ಹೇಳಿದ್ದು ಸ್ವಾಗತಾರ್ಹ ಎಂದು ನುಡಿದಿದ್ದಾರೆ. ಇದನ್ನೂ ಓದಿ:ಎಸ್‍ಎಸ್‍ಎಲ್‍ಸಿ ಪರೀಕ್ಷೆ ಹೇಗೆ ನಡೆಯುತ್ತೆ? ಪಿಯುಸಿ ವಿದ್ಯಾರ್ಥಿಗಳು ಹೇಗೆ ಪಾಸ್?

  • ಕೇವಲ 100ರೂ. ವ್ಯಾಕ್ಸಿನ್‍ನಲ್ಲಿ ಪ್ರಚಾರ ಪಡೆಯಲು ಬಿಜೆಪಿ ಮುಂದಾಗಿದೆ: ಅಮರೇಗೌಡ

    ಕೇವಲ 100ರೂ. ವ್ಯಾಕ್ಸಿನ್‍ನಲ್ಲಿ ಪ್ರಚಾರ ಪಡೆಯಲು ಬಿಜೆಪಿ ಮುಂದಾಗಿದೆ: ಅಮರೇಗೌಡ

    ಕೊಪ್ಪಳ: ಕೇಂದ್ರ ಸರ್ಕಾರ ಕತ್ತೆಯ ಮುಂದೆ ಹುಲ್ಲು ಕಟ್ಟಿದಂತೆ ನಡೆದುಕೊಳ್ಳುತ್ತಿದೆ. ಅಚ್ಚೆ ದಿನ್, ಅಚ್ಚೆ ದಿನ್ ಎಂದು ಹೇಳುತ್ತಾ ಮಾತಿನಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಭಯ್ಯಾಪುರ ಟೀಕಿಸಿದ್ದಾರೆ.

    ಕೊಪ್ಪಳದ ಕುಷ್ಟಗಿಯಲ್ಲಿ ಅಲೆಮಾರಿ ಜನಾಂಗದವರಿಗೆ ಆಹಾರ ಕಿಟ್ ವಿತರಿಸಿದ ಬಳಿಕ ಮಾತನಾಡಿದ ಅವರು, ಅಚ್ಛೆದಿನ್ ಯಾರಿಗೆ ಬಂದಿದೆ ಎಂದು ಪ್ರಶ್ನಿಸಿದರು. ನಮಗ್ಯಾರಿಗೂ ಅಚ್ಛೆದಿನ್ ಬಂದಿಲ್ಲ. 7 ವರ್ಷದಲ್ಲಿ ಕೇಂದ್ರ ಸಾಧನೆ ಏನು? 70 ವರ್ಷದಲ್ಲಿ ಮಾಡಿದಿರುವ ಸಾಧನೆ ಮಾಡಿದ್ದೇವೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಈ ಸಾಧನೆ ಏನು ಎಂಬುವುದನ್ನು ಶ್ವೇತಪತ್ರ ಹೊರಡಿಸಲಿ ಎಂದು ಆಗ್ರಹಿಸಿದರು.

    ಲಾಕ್ ಡೌನ್ ಮಾಡಿದರೂ ಕೊರೊನಾ ನಿಯಂತ್ರಿಸಲಾಗಿಲ್ಲ. ಕೊರೊನಾ ನಿಯಂತ್ರಿಸಲು ರಾಜ್ಯ ಹಾಗೂ ಕೇಂದ್ರ ಸರಕಾರಗಳು ವಿಫಲವಾಗಿವೆ. ಲಾಕ್ ಡೌನ್ ಸಂದರ್ಭದಲ್ಲಿ ಸರ್ಕಾರ ಬಡವರ ನೆರವಿಗೆ ಬರಬೇಕಿತ್ತು. ವ್ಯಾಕ್ಸಿನ್ ಹಾಕಬೇಕಿತ್ತು. ವ್ಯಾಕ್ಸಿನ್ ನಲ್ಲಿ ಕಾಂಗ್ರೆಸ್ ರಾಜಕಾರಣ ಮಾಡಿದೆ ಎನ್ನುತ್ತಾರೆ. ಆದರೆ ಕಾಂಗ್ರೆಸ್ ಅವುಗಳ ಪರೀಕ್ಷೆ ಮಾಡಲು ಹೇಳಿದ್ದು ಸತ್ಯ. ಈಗ ವ್ಯಾಕ್ಸಿನ್ ಹಾಕಿಸಿಕೊಂಡು ಎಲ್ಲರೂ ಹಾಕಿಸಿಕೊಳ್ಳಲು ಹೇಳುತ್ತಿದ್ದೇವೆ. ಕೇವಲ ನೂರು ರೂಪಾಯಿಯ ವ್ಯಾಕ್ಸಿನ್ ನಲ್ಲಿ ಪ್ರಚಾರ ಪಡೆಯಲು ಬಿಜೆಪಿ ಮುಂದಾಗಿದೆ. ವ್ಯಾಕ್ಸಿನ್ ಮುಕ್ತ ಮಾರುಕಟ್ಟೆ ಗೆ ಬಂದರೆ ಎಲ್ಲರೂ ಹಾಕಿಸಿಕೊಳ್ಳುತ್ತಾರೆ ಎಂದರು.