Tag: ಅಭ್ಯರ್ಥಿ

  • ಇವಿಎಂ ಒಡೆದು ಹಾಕಿದ ಅಭ್ಯರ್ಥಿ!

    ಇವಿಎಂ ಒಡೆದು ಹಾಕಿದ ಅಭ್ಯರ್ಥಿ!

    ಹೈದರಾಬಾದ್: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಯೇ ಇವಿಎಂ ಒಡೆದು ಹಾಕಿದ ಘಟನೆ ಅನಂತರಪುರ ಜಿಲ್ಲೆಯ ಗುತ್ತಿಯಲ್ಲಿ ನಡೆದಿದೆ.

    ಜನಸೇನಾ ಪಾರ್ಟಿ ಅಭ್ಯರ್ಥಿ ಮಧುಸೂದನ್ ಗುಪ್ತಾನೇ ಮತ ಯಂತ್ರವನ್ನು ಪೀಸ್ ಪೀಸ್ ಮಾಡಿರುವ ಅಭ್ಯರ್ಥಿಯಾಗಿದ್ದಾರೆ. ಪೋಲಿಂಗ್ ಬಾಕ್ಸ್ ಗೆ ಎಂಪಿ ಅಥವಾ ಎಂಎಲ್‍ಎ ಎಂದು ಪೋಸ್ಟ್ ಅಂಟಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಗುಪ್ತಾ, ಇವಿಎಂ ಒಡೆದು ಹಾಕುವ ಮೂಲಕ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ.

    ಸಾವಿರಾರು ಸಂಖ್ಯೆಯಲ್ಲಿ ಜನ ಮತದಾನ ಮಾಡಲು ಬಂದಿದ್ದಾರೆ. ಆದ್ರೆ ಒಬ್ಬ ಪೊಲೀಸ್ ಸಿಬ್ಬಂದಿಯೂ ಇಲ್ಲದೇ ಜನ ಪರದಾಡಿದ್ದಾರೆ. ಈ ವೇಳೆ ಮಧುಸೂದನ್ ಗುಪ್ತಾ ಬೆಂಬಲಿಗರು ಹಾಗೂ ಪೊಲೀಸರ ಮಧ್ಯೆ ವಾಗ್ವಾದವೂ ನಡೆಯಿತು. ಸದ್ಯ ಆಂಧ್ರ ಪ್ರದೇಶದ ಪೊಲೀಸರು ಗುಪ್ತಾರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

    ಆಂಧ್ರದ ವಿಜಯನಗರ ಲೋಕಸಭಾ ಕ್ಷೇತ್ರದಿಂದ ಟಿಡಿಪಿ ಅಭ್ಯರ್ಥಿಯಾಗಿ ಅಶೋಕ್ ಗಜಪತಿರಾಜು, ವಿಶಾಖಪಟ್ಟಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಪುರಂದರೇಶ್ವರಿ ಕಣದಲ್ಲಿದ್ದಾರೆ.

    ಐಇಡಿ ಬ್ಲಾಸ್ಟ್!:
    ಮತದಾನದ ದಿನ ಬೆಳ್ಳಂಬೆಳಗ್ಗೆ ನಕ್ಸಲರು ಅಟ್ಟಹಾಸ ಮೆರೆದಿದ್ದು, ಛತ್ತೀಸ್‍ಗಡದ ನಾರಾಯಣಪುರದಲ್ಲಿ ಐಇಡಿ ಬ್ಲಾಸ್ಟ್ ಮಾಡಲಾಗಿದೆ. ಘಟನೆ ನಡೆದ ಕೂಡಲೇ ಪೊಲೀಸರು ದೌಡಾಯಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬುದಾಗಿ ತಿಳಿದುಬಂದಿದೆ.

    ಮೊದಲ ಹಂತದ ಮತದಾನ:
    ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಈಗಾಗಲೇ ಆರಂಭಗೊಂಡಿದ್ದು, 18 ರಾಜ್ಯಗಳು 2 ಕೇಂದ್ರಾಡಳಿತ ಪ್ರದೇಶಗಳ ಒಟ್ಟು 91 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ.

    ಒಂದು ಲಕ್ಷದ 66 ಸಾವಿರ ಮತಗಟ್ಟೆಗಳಲ್ಲಿ 1961 ಅಭ್ಯರ್ಥಿಗಳ ಭವಿಷ್ಯ ಮೊದಲ ಹಂತದದಲ್ಲಿ ನಿರ್ಧಾರ ಆಗಲಿದೆ. ಕ್ಷೇತ್ರವಾರು ಮತದಾನಕ್ಕೆ ಚುನಾವಣಾ ಆಯೋಗ ಸಮಯ ನಿಗದಿ ಮಾಡಿದ್ದು ಉತ್ತರ ಪ್ರದೇಶ, ಜಮ್ಮು ಕಾಶ್ಮೀರ, ಪಶ್ಚಿಮ ಬಂಗಾಳ, ಅಂಡಮಾನ್ ನಿಕೋಬಾರ್ ನಲ್ಲಿ ಬೆಳಗ್ಗೆ ಏಳರಿಂದ ಸಂಜೆ ಆರು ಗಂಟೆ, ಉತ್ತಾರಖಂಡ್ ಮತ್ತು ಈಶಾನ್ಯ ರಾಜ್ಯಗಳಲ್ಲಿ ಬೆಳಗ್ಗೆ ಏಳರಿಂದ ಸಂಜೆ ಐದು ಗಂಟೆ, ಅರುಣಾಚಲ ಪ್ರದೇಶ, ಮಿಜೋರಾಂ, ಸಿಕ್ಕಿಂ, ತ್ರಿಪುರ, ಮಣಿಪುರ, ನಾಗಲ್ಯಾಂಡ್, ಮೇಘಾಲಯ ದಲ್ಲಿ ಬೆಳಗ್ಗೆ ಏಳರಿಂದ ಸಂಜೆ ನಾಲ್ಕು ಗಂಟೆವರೆಗೂ ಮತದಾನಕ್ಕೆ ಅವಕಾಶ ನೀಡಲಾಗಿದೆ. ಮತದಾನದ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಸರಕಾರದಲ್ಲಿ ಕೇಂದ್ರ ಭದ್ರತಾ ಪಡೆಗಳನ್ನು ಸುರಕ್ಷತೆಗೆ ನೇಮಕ ಮಾಡಲಾಗಿದೆ.

  • ಸುಮಲತಾ ರೀತಿಯೇ ಡ್ರೆಸ್, ಕನ್ನಡಕ – ಕ್ರ.ಸಂ.19ರಲ್ಲಿ ಡೂಪ್ಲಿಕೇಟ್ ಸುಮಲತಾ!

    ಸುಮಲತಾ ರೀತಿಯೇ ಡ್ರೆಸ್, ಕನ್ನಡಕ – ಕ್ರ.ಸಂ.19ರಲ್ಲಿ ಡೂಪ್ಲಿಕೇಟ್ ಸುಮಲತಾ!

    ಮಂಡ್ಯ: ಸುಮಲತಾ ಎದುರಾಳಿಯಾಗಿ ಸುಮಲತಾ ಹೆಸರಿನ ಮಹಿಳೆಯರು ಕಣದಲ್ಲಿ ಇರುವುದು ನಿಮಗೆ ಗೊತ್ತೇ ಇದೆ. ಈಗ ಥೇಟ್ ಸುಮಲತಾರಂತೆ ಕನ್ನಡಕ ಮತ್ತು ಅವರಂತೆ ಡ್ರೆಸ್ ಮಾಡಿಸಿ ಸುಮಲತಾ ಅವರ ಫೋಟೋ ಇವಿಎಂನಲ್ಲಿ ಇರಲಿದೆ.

    ಹೌದು, ಎವಿಎಂನ ಕ್ರಮ ಸಂಖ್ಯೆ 20ರಲ್ಲಿ ಸುಮಲತಾ ಅಂಬರೀಶ್ ಸ್ಪರ್ಧಿಸುತ್ತಿದ್ದರೆ ಕ್ರಮ ಸಂಖ್ಯೆ 19ರಲ್ಲೂ ಸುಮಲತಾ ಸ್ಪರ್ಧಿಸುತ್ತಿದ್ದಾರೆ. ಕ್ರ.ಸಂಖ್ಯೆ 19ರ ಸುಮಲತಾ ಅವರನ್ನು ಸುಮಲತಾ ಅವರಂತೆ ಮೇಕಪ್ ಮಾಡಿ ಫೋಟೋ ತೆಗೆಸಿದ್ದು, ಆ ಫೋಟೋ ಇವಿಎಂನಲ್ಲಿ ಇರಲಿದೆ.

    ಎವಿಎಂನ ಕ್ರಮ ಸಂಖ್ಯೆ 19ರ ಸುಮಲತಾ ಅವರನ್ನು ತಕ್ಷಣ ನೋಡಿದರೆ ಮತದಾರರು ಕನ್‍ಫ್ಯೂಸ್ ಆಗುವ ಸಾಧ್ಯತೆಯಿದೆ. ಸುಮಲತಾ ಅವರಂತೆ ಫುಲ್ ಬ್ಲೌಸ್, ಡ್ರೆಸ್ ಮತ್ತು ಕನ್ನಡಕ ಹಾಕಿಸಿ ಫೋಟೋ ಕ್ಕಿಕ್ಕಿಸಿದ್ದಾರೆ. ಆ ಫೋಟೋವನ್ನೇ ಎವಿಎಂನಲ್ಲೂ ಹಾಕಲಾಗಿದೆ.

    ಈ ಬಗ್ಗೆ ಮಂಡ್ಯದ ಹೆಬ್ಬಕವಾಡಿಯಲ್ಲಿ ಪ್ರತಿಕ್ರಿಯೆ ನೀಡಿದ ಸುಮಲತಾ ಅವರು, ನನ್ನನ್ನು ಸೋಲಿಸಲು ಅಭ್ಯರ್ಥಿಗಳನ್ನು ಹಾಕಿದ್ದು ಮಾತ್ರವಲ್ಲದೇ ಈಗ ಕುತಂತ್ರ ರಾಜಕೀಯ ಮಾಡುತ್ತಿದ್ದಾರೆ. ನನ್ನ ಥರವೇ ಫುಲ್ ಬ್ಲೌಸ್ ಹಾಕಿಸಿ ಕನ್ನಡಕ ಹಾಕಿಸಿ ಅಭ್ಯರ್ಥಿ ನಿಲ್ಲಿಸಿದ್ದಾರೆ. ಸೀರಿಯಲ್ ನಂಬರ್ 19ನೇ ಅಭ್ಯರ್ಥಿಯನ್ನ ಥೇಟ್ ನನ್ನಂತೆ ಬಿಂಬಿಸಿದ್ದಾರೆ. ನೈತಿಕತೆ ಇಟ್ಟುಕೊಂಡು ರಾಜಕೀಯ ಮಾಡಬೇಕು. ಈ ರೀತಿ ಕುತಂತ್ರ ಮಾಡುವುದು ಸರಿಯಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ

  • 5 ವರ್ಷ ತೇಜಸ್ವಿ ಸೂರ್ಯ ಕೈಯಲ್ಲಿ ನರಳಿದ್ದೇನೆ -ಬಿಜೆಪಿ ಅಭ್ಯರ್ಥಿ ವಿರುದ್ಧ ಮಹಿಳೆ ಗಂಭೀರ ಆರೋಪ

    5 ವರ್ಷ ತೇಜಸ್ವಿ ಸೂರ್ಯ ಕೈಯಲ್ಲಿ ನರಳಿದ್ದೇನೆ -ಬಿಜೆಪಿ ಅಭ್ಯರ್ಥಿ ವಿರುದ್ಧ ಮಹಿಳೆ ಗಂಭೀರ ಆರೋಪ

    – ಇದು ಮೀಟೂ ಕೇಸಾ ಎಂದು ಕಾಂಗ್ರೆಸ್ ಪ್ರಶ್ನೆ

    ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಸಲು ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆಯೇ ಅವರ ವಿರುದ್ಧ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಇದೀಗ ಆ ಮಹಿಳೆಯ ಆರೋಪವನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ಪ್ರಶ್ನೆ ಮಾಡುತ್ತಿದೆ.

    ಹೌದು. ಡಾ. ಸೋಮ್ ದತ್ತಾ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸರಣಿ ಟ್ವೀಟ್ ಮಾಡುವ ಮೂಲಕ ತೇಜಸ್ವಿ ಸೂರ್ಯ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.

    ಆರೋಪವೇನು?:
    5 ವರ್ಷ ನಾನು ತೇಜಸ್ವಿ ಸೂರ್ಯ ಕೈಯಲ್ಲಿ ನಲುಗಿದ್ದೇನೆ. ನನ್ನ ಪ್ರೀತಿ ಕುರುಡಾಗಿತ್ತು. ನನ್ನನ್ನು ನಂಬಿ ನಾನು ಮೊದಲನೇಯ ಬಲಿಪಶು ಅಲ್ಲ, ಕೊನೆಯವಳೂ ಅಲ್ಲ. ಪ್ರತಿಯೊಬ್ಬ ಹಿಂದೂವು ನಿಜವಾದ ಅರ್ಥದಲ್ಲಿ ಧಾರ್ಮಿಕನಾಗಿರಲ್ಲ. ದೊಡ್ಡದಾಗಿ ಭಾಷಣ ಮಾಡೋರೆಲ್ಲ ದೊಡ್ಡ ವ್ಯಕ್ತಿ ಆಗಿರಲಿಲ್ಲ ಎಂದಿದ್ದಾರೆ.

    ಸತ್ಯ ಗೊತ್ತಿಲ್ಲದೆ ತೇಜಸ್ವಿ ಸೂರ್ಯಗೆ ಪುಕ್ಕಟೆ ಪ್ರಚಾರ ಕೊಡಬೇಡಿ. ಇಂಥ ವ್ಯಕ್ತಿಗೆ ಟಿಕೆಟ್ ಕೊಡುವ ಮೊದಲು ಬಿಜೆಪಿ ಹಿನ್ನೆಲೆಯನ್ನ ಪರಿಶೀಲಿಸಬೇಕಿತ್ತಲ್ಲ. ತೇಜಸ್ವಿ ಸೂರ್ಯ ಜೊತೆಗಿನ ನಂಟಿದ್ದ ನನ್ನ ತಂದೆ-ತಾಯಿ ಕೂಡ ನೋವು ಅನುಭವಿಸಿದ್ದಾರೆ. ನನ್ನ ತಂದೆ-ತಾಯಿ ಮತ್ತಷ್ಟು ಕೊರಗುವುದು ನನಗೆ ಇಷ್ಟವಿಲ್ಲ ಎಂದು ಮಹಿಳೆ ತೇಜಸ್ವಿ ಸೂರ್ಯ ವಿರುದ್ಧ ಆರೋಪಿಸಿದ್ದಾರೆ.

    ಮಹಿಳೆ ಆರೋಪ ಮಾಡುತ್ತಿದ್ದಂತೆಯೇ ಎಚ್ಚೆತ್ತ ಕಾಂಗ್ರೆಸ್ ಈ ಟ್ವೀಟನ್ನೇ ಉಲ್ಲೇಖಿಸಿ, ತೇಜಸ್ವಿ ಸೂರ್ಯ ವಿರುದ್ಧ `ತೇಜಸ್ವಿ ಸೂರ್ಯ ಮತ್ತೊಬ್ಬ ಮೀಟೂ ಎಂಜೆ ಅಕ್ಬರ್..’ ಎಂದು ಪ್ರಶ್ನಿಸಿದೆ.

    ದತ್ತಾ ಮನವಿ:
    ದತ್ತಾ ಟ್ವೀಟ್ ಗಳು ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ. ನನ್ನ ಹಾಗೂ ತೇಜಸ್ವಿ ವಿಚಾರವನ್ನು ಇಲ್ಲಿಗೆ ನಿಲ್ಲಿಸಿ. ಇದು ನನ್ನ ವಿನಮ್ರ ಮನವಿಯಾಗಿದೆ. ನಾವಿಬ್ಬರೂ ಒಳ್ಳೆಯ ಮನೆತನ ಇರುವ ಕುಟುಂಬದಿಂದ ಬಂದಿದ್ದೇವೆ. ಹೀಗಾಗಿ ಈ ವಿಚಾರವನ್ನು ಎಳೆದುಕೊಂಡು ಹೋದರೆ ಇಬ್ಬರ ಕುಟುಂಬಕ್ಕೂ ತೊಂದರೆಯಾಗುತ್ತದೆ. ಸದ್ಯ ನನ್ನ ಎಲ್ಲಾ ಟ್ವೀಟ್ ಗಳನ್ನು ಡಿಲೀಟ್ ಮಾಡಿದ್ದೇನೆ. ದಯವಿಟ್ಟು ಈ ವಿಚಾರವನ್ನು ಇಲ್ಲೇ ಬಿಟ್ಟುಬಿಡಿ. ನಾವಿಬ್ಬರೂ ನಮ್ಮದೇ ದಾರಿಯಲ್ಲೇ ಹೋಗುತ್ತಿದ್ದೇವೆ ಎಂದು ಹೇಳಿದ್ದಾರೆ.

    ತೇಜಸ್ವಿ ಅಭಿಮಾನಿಗಳು ಗರಂ:
    ಇದೂವರೆಗೆ ಪ್ರಶ್ನೆ ಮಾಡದ ಈಕೆ ತೇಜಸ್ವಿ ಅವರಿಗೆ ಟಿಕೆಟ್ ಸಿಕ್ಕಿದ ಕೂಡಲೇ ಉದ್ದೇಶಪೂರ್ವಕವಾಗಿಯೇ ಈ ರೀತಿ ಮಾಡುತ್ತಿದ್ದಾರೆ. ತೊಂದರೆ ಆಗಿದ್ದರೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಬಹುದಿತ್ತು. ದೂರು ನೀಡದೇ ಈಗ ತೇಜೋವಧೆ ಮಾಡಲು ಈ ಮಹಿಳೆ ಮುಂದಾಗಿದ್ದಾರೆ ಎಂದು ತೇಜಸ್ವಿ ಅಭಿಮಾನಿಗಳು ಹಾಗೂ ಬಿಜೆಪಿಗರು ಕಿಡಿಕಾರಿದ್ದಾರೆ.

  • ಮದ್ಯ ನಿಷೇಧಿಸಿದ ರಾಜ್ಯದಲ್ಲೇ ಕುಡಿದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿ ಅಂದರ್

    ಮದ್ಯ ನಿಷೇಧಿಸಿದ ರಾಜ್ಯದಲ್ಲೇ ಕುಡಿದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿ ಅಂದರ್

    ಪಟ್ನಾ: ಬಿಹಾರ ರಾಜ್ಯದಲ್ಲಿ ಮದ್ಯ ಮಾರಾಟವನ್ನು ಬ್ಯಾನ್ ಮಾಡಲಾಗಿದೆ. ಆದ್ರೆ ಇಲ್ಲಿನ ಪುರ್ನಿಯಾ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯೊಬ್ಬರು ಕಂಠ ಪೂರ್ತಿ ಕುಡಿದು ಬಂದು ನಾಮಪತ್ರ ಸಲ್ಲಿಸಿ, ಪೊಲೀಸರ ಅತಿಥಿಯಾಗಿದ್ದಾರೆ.

    ಹೌದು, ಪುರ್ನಿಯಾ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿರುವ ರಾಜೀವ್ ಕುಮಾರ್ ಸಿಂಗ್ ಮಂಗಳವಾರ ನಾಮಪತ್ರ ಸಲ್ಲಿಕೆ ವೇಳೆ ಮದ್ಯಪಾನ ಮಾಡಿಕೊಂಡು ಬಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜೀವ್ ಮೂಲತಃ ಭಗಲ್‍ಪುರ ಜಿಲ್ಲೆಯವರು. ಮಂಗಳವಾರ ನಾಮಪತ್ರ ಸಲ್ಲಿಸಲು ಜಿಲ್ಲಾಧಿಕಾರಿಗಳ ಕಚೇರಿಗೆ ಬಂದ ಸಂದರ್ಭದಲ್ಲಿ ಅಧಿಕಾರಿಗಳಿಗೆ ಅಭ್ಯರ್ಥಿಯ ವರ್ತನೆ ಕಂಡು ಅನುಮಾನ ಬಂದಿದೆ. ಆಗ ಆಲ್ಕೋ ಮೀಟರ್ ನಿಂದ ಅಭ್ಯರ್ಥಿಯನ್ನು ಪರೀಕ್ಷಿಸಿದಾಗ ಆತ ಕುಡಿದಿರುವುದು ಖಚಿತವಾಗಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

    ಈ ಬಗ್ಗೆ ಖಚಿತವಾದ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ರಾಜೀವ್ ಕುಮಾರ್‍ನನ್ನು ಬಂಧಿಸಿದ್ದಾರೆ. ಅಲ್ಲದೆ ರಾಜ್ಯದಲ್ಲಿರುವ ಕಾನೂನನ್ನು ಉಲ್ಲಂಘಿಸಿದಕ್ಕೆ ಆರೋಪಿ ಮೇಲೆ ಪ್ರಕರಣ ಕೂಡ ದಾಖಲಿಸಲಾಗಿದೆ. 2016 ರಲ್ಲಿ ನಿತೀಶ್ ಕುಮಾರ್ ಸರ್ಕಾರ ಆಡಳಿತದಲ್ಲಿದಾಗ, ಬಿಹಾರದಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಿತ್ತು. ಆದರೂ ಕೂಡ ಬಿಹಾರದಲ್ಲಿ ಮದ್ಯ ಮಾರಾಟ ನಿಂತಿಲ್ಲ ಅನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದ್ದು, ಈ ಕುರಿತು ರಾಜಕೀಯ ಪಾಳಯದಲ್ಲಿ ವ್ಯಾಪಕ ಚರ್ಚೆ ಶುರುವಾಗಿದೆ.

    ಬಿಹಾರದ ಪುರ್ನಿಯಾ ಕ್ಷೇತ್ರದಿಂದ ಒಟ್ಟು 18 ಅಭ್ಯರ್ಥಿಗಳು ಲೋಕಸಮರಕ್ಕೆ ಕಣಕ್ಕಿಳಿಯಲಿದ್ದಾರೆ. ಅವರಲ್ಲಿ ಈಗಾಗಲೇ 11 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

  • ಕಾಂಗ್ರೆಸ್ ಉಳಿಸಲು ಜೆಡಿಎಸ್ ಅಭ್ಯರ್ಥಿಯಾದೆ: ಪ್ರಮೋದ್ ಮಧ್ವರಾಜ್

    ಕಾಂಗ್ರೆಸ್ ಉಳಿಸಲು ಜೆಡಿಎಸ್ ಅಭ್ಯರ್ಥಿಯಾದೆ: ಪ್ರಮೋದ್ ಮಧ್ವರಾಜ್

    – ಒಂದು ಶಾಲು ಎರಡು ಚಿಹ್ನೆ ಮುದ್ರಣ

    ಉಡುಪಿ: ಕಾಂಗ್ರೆಸ್ ನಾಯಕ ಪ್ರಮೋದ್ ಮಧ್ವರಾಜ್ ಜೆಡಿಎಸ್ ಟಿಕೆಟ್ ಪಡೆದು ಉಡುಪಿಗೆ ಆಗಮಿಸಿದ್ದಾರೆ. ಮೈತ್ರಿ ಟಿಕೆಟ್ ಪಡೆದು ಉಡುಪಿಗೆ ಬಂದ ಅವರು ಮೊದಲು ಕಾಂಗ್ರೆಸ್ ಕಚೇರಿಗೆ ಭೇಟಿ ಕೊಟ್ಟರು. ವಿಭಿನ್ನ ಡಿಸೈನ್ ಶಾಲು ತೊಟ್ಟು ಬಂದು ಮೈತ್ರಿ ಧರ್ಮ ಪಾಲಿಸಿದರು. ವಿಭಿನ್ನ ಶಾಲು ತಯಾರಿ ಮಾಡಿರುವ ಪ್ರಮೋದ್ ಮಧ್ವರಾಜ್, ಕೈ ಮತ್ತು ತೆನೆ ಹೊತ್ತ ರೈತ ಮಹಿಳೆಯ ಚಿತ್ರ ಮುದ್ರಿಸಿಕೊಂಡಿದ್ದಾರೆ.

    ಒಂದೇ ಶಾಲಿನಲ್ಲಿ ಎರಡು ಪಕ್ಷದ ಚಿಹ್ನೆ ಮುದ್ರಿಸಿಕೊಂಡಿದ್ದೇನೆ. ಇಂತಹ ಶಾಲು ಈವರೆಗೆ ಯಾರೂ ತಯಾರು ಮಾಡಿಲ್ಲ. ಈ ಶಾಲನ್ನು 18ರ ವರೆಗೆ ತೊಟ್ಟಿರುತ್ತೇನೆ. ಚಿಹ್ನೆಯ ಬಗ್ಗೆ ಜನರಿಗೆ ಉತ್ತರ ಕೊಟ್ಟು ಸುಸ್ತಾಯ್ತು. ಹಾಗಾಗಿ ಗೊಂದಲವೇ ಬೇಡ ಅಂತ ಶಾಲಿಗೊಂದು ಹೊಸ ರೂಪ ಕೊಟ್ಟಿರುವುದಾಗಿ ಪ್ರಮೋದ್ ಪ್ರತಿಕ್ರಿಯಿಸಿದ್ದಾರೆ.

    ಕಾಂಗ್ರೆಸ್ ಉಳಿಸಲು ಜೆಡಿಎಸ್ ಅಭ್ಯರ್ಥಿಯಾದೆ:
    ಕಾಂಗ್ರೆಸ್ ಉಳಿಸಲು ಜೆಡಿಎಸ್ ಅಭ್ಯರ್ಥಿಯಾದೆ. ರಾಜ್ಯದಲ್ಲಿ ಹೇಗಿದ್ಯೋ ಗೊತ್ತಿಲ್ಲ. ಉಡುಪಿಯಲ್ಲಿ ಕಾಂಗ್ರೆಸ್- ಜೆಡಿಎಸ್ ಹಾಲು ಜೇನಿನಂತೆ ಬೆರೆಯಲಿದೆ. ನಾನು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಮೈತ್ರಿ ಧರ್ಮದಂತೆ ಉಡುಪಿ-ಚಿಕ್ಕಮಗಳೂರು ಜೆಡಿಎಸ್ ಪಾಲಾಯ್ತು. ಜೆಡಿಎಸ್ ಅಭ್ಯರ್ಥಿಯಾಗಿ ಕಾಂಗ್ರೆಸ್ ಪರವಾಗಿ ಸ್ಪರ್ಧಿಸ್ತೇನೆ. ಇಡೀ ದೇಶದಲ್ಲಿ ಪ್ರಥಮ ಬಾರಿಗೆ ಈ ಅವಕಾಶ ಸಿಕ್ಕಿದೆ ಎಂದರು.

    ಕೆಲಸ ಮಾಡುವ ಎಂಪಿ ಆಗುವೆ:
    ಕ್ಷೇತ್ರಕ್ಕೆ ಕೆಲಸ ಮಾಡುವ ಸಂಸದರನ್ನು ಆಯ್ಕೆ ಮಾಡಿ ಎಂದು ಪ್ರಮೋದ್ ಮಧ್ವರಾಜ್ ಕರೆ ನೀಡಿದರು. ಮನೆಗೆ ಹೋಗುವ ಮೊದಲು ಕಾಂಗ್ರೆಸ್ ಕಚೇರಿಗೆ ಭೇಟಿ ಕೊಟ್ಟಿದ್ದೇನೆ. ಮಾರ್ಚ್ 25ಕ್ಕೆ ನಾಮಪತ್ರ ಸಲ್ಲಿಸುತ್ತೇನೆ. ಎರಡು ದಿನದಲ್ಲಿ ಎರಡು ಜಿಲ್ಲೆಗಳ ಪ್ರವಾಸ ಮಾಡುತ್ತೇನೆ ಎಂದರು. ಕಾಂಗ್ರೆಸ್ ಪಕ್ಷ ಉಳಿಸಲು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಗೆದ್ದು ಬಂದರೆ ರಾಜಧರ್ಮ ಪಾಲಿಸುತ್ತೇನೆ ಎಂದು ಮಧ್ವರಾಜ್ ಹೇಳಿದರು.

  • ಸುಮಲತಾರನ್ನು ಜೆಡಿಎಸ್ ಅಭ್ಯರ್ಥಿ ಮಾಡುವ ಆಸೆ ಇತ್ತು: ಸಚಿವ ಡಿ.ಸಿ.ತಮ್ಮಣ್ಣ

    ಸುಮಲತಾರನ್ನು ಜೆಡಿಎಸ್ ಅಭ್ಯರ್ಥಿ ಮಾಡುವ ಆಸೆ ಇತ್ತು: ಸಚಿವ ಡಿ.ಸಿ.ತಮ್ಮಣ್ಣ

    ಮಂಡ್ಯ: ಸುಮಲತಾರನ್ನು ಜೆಡಿಎಸ್ ಅಭ್ಯರ್ಥಿ ಮಾಡುವ ಆಸೆ ಇತ್ತು ಎಂದು ಮಂಡ್ಯದ ಮದ್ದೂರಿನಲ್ಲಿ ಸಚಿವ ಡಿ.ಸಿ.ತಮ್ಮಣ್ಣ ಹೇಳಿಕೆ ನೀಡಿದ್ದಾರೆ.

    ಈ ಬಗ್ಗೆ ಮಾತನಾಡಿದ ಅವರು, ಸುಮಲತಾರನ್ನೇ ಜೆಡಿಎಸ್ ಅಭ್ಯರ್ಥಿ ಮಾಡುವ ಆಸೆ ನನಗಿತ್ತು. ಜೆಡಿಎಸ್ ವರಿಷ್ಠರನ್ನು ಭೇಟಿ ಮಾಡಿಸುವ ಯತ್ನ ಮಾಡಿದ್ದೆ. ಆದರೆ ಸಂಬಂಧಿ ಮಧು ಮೂಲಕ ಮಾಡಿದ ಪ್ರಯತ್ನ ವಿಫಲವಾಯ್ತು ಎಂದು ಹೇಳಿದ್ದಾರೆ.

    ಮಧು ಎಂಬವರು ಸಚಿವ ತಮ್ಮಣ್ಣ ಮತ್ತು ಅಂಬಿ ಕುಟುಂಬದ ಸಂಬಂಧಿ. ಸಂಧಾನಕ್ಕೆ ನಾನು, ನನ್ನ ಮಗ ಸಕಲ ಪ್ರಯತ್ನ ಮಾಡಿದ್ದೇವು. ಸಂಧಾನಕ್ಕೆ ಸುಮಲತಾ ಅವರೇ ಒಪ್ಪಲಿಲ್ಲ. ಎಚ್.ಡಿ ಕುಮಾರಸ್ವಾಮಿ ಹಾಗೂ ಸುಮಲತಾ ನಡುಡುವೆ ಏನು ನಡೆದಿದೆಯೋ ನನಗೆ ಗೊತ್ತಿಲ್ಲ. ಹೀಗಾಗಿ ಕುಮಾರಸ್ವಾಮಿ ಮೇಲೆ ಒತ್ತಡ ಹೇರಲಿಲ್ಲ. ಸುಮಲತಾ ಅವರು ಕುಮಾರಸ್ವಾಮಿಯನ್ನು ಭೇಟಿಯಾಗಿ ನಾನೇ ಅಭ್ಯರ್ಥಿ ಆಗ್ತೀನಿ ಟಿಕೆಟ್ ಕೊಡಿ ಎಂದು ಸುಮಲತಾ ಕೇಳಬೇಕಿತ್ತು. ಆದರೆ ಭೇಟಿಯಾಗೋಕೆ ಅವರೇ ಒಪ್ಪಲಿಲ್ಲ ಎಂದು ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಚಿವರು, ಅಂಬರೀಶ್ ಅವರ ಅಣ್ಣನ ಮಗ ಮಧು ಮೂಲಕ ನಾನು ಹಾಗೂ ನನ್ನ ಮಗ ಸುಮಲತಾ ಬಳಿ ಮಾತನಾಡಿದ್ದೇನೆ. ಸುಮಲತಾ ಅವರು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದಾಗಲೇ ನಾವು ಕೇಳಿದ್ದೇವೆ. ಅಂಬರೀಶ್ ಹಾಗೂ ಕುಮಾರಸ್ವಾಮಿ ಇಬ್ಬರು ಒಳ್ಳೆಯ ಸ್ನೇಹಿತರು. ಇಬ್ಬರ ನಡುವೆ ಒಳ್ಳೆಯ ಸಂಬಂಧ ಬೆಳೆಯಲಿ ಎಂದು ಇಬ್ಬರು ಕುಳಿತು ಸ್ಪರ್ಧೆ ಬಗ್ಗೆ ಮಾತನಾಡಲಿ ಎಂದು ಈ ರೀತಿ ಮಾಡಿದ್ದೆ ಎಂದರು.

    ಸುಮಲತಾ ಅವರು ನಮ್ಮ ಮನವಿಯನ್ನು ಏಕೆ ತಿರಸ್ಕರಿಸಿದರು ಎಂಬುವುದು ಗೊತ್ತಿಲ್ಲ. ಅವರು ಈ ವಿಷಯದ ಬಗ್ಗೆ ಒಲವು ತೋರಿಸದ ಕಾರಣ ಒತ್ತಾಯಿಸಲಿಲ್ಲ. ನಾನು ಸುಮಲತಾ ಅವರ ಜೊತೆ ನೇರವಾಗಿ ಮಾತನಾಡಿಲ್ಲ. ಮಧು ಮೂಲಕ ನಾವು ಈ ವಿಷಯದ ಬಗ್ಗೆ ಮಾತನಾಡಿದ್ದೇವೆ. ದೇವೇಗೌಡರು ಹಾಗೂ ಸುಮಲತಾ ಅವರು ನಮಗೆ ಸಂಬಂಧಿಕರೇ. ಸುಮಲತಾ ಅವರು ಈ ಬಗ್ಗೆ ಒಲವು ತೋರಿಸಿದ್ದರೆ, ನಾವು ಕುಮಾರಸ್ವಾಮಿ ಅವರ ಮೇಲೆ ಒತ್ತಡ ಹಾಕುತ್ತಿದ್ದೇವು ಎಂದು ತಮ್ಮಣ್ಣ ಸ್ಪಷ್ಟಪಡಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ನಿನ್ನೆ ಹಾಸನದಲ್ಲಿ ಪ್ರಜ್ವಲ್ ಪಟ್ಟಾಭಿಷೇಕ – ಇಂದು ಮಂಡ್ಯದಲ್ಲಿ ನಿಖಿಲ್‍ಗೆ ಟಿಕೆಟ್ ಪಕ್ಕಾ..!

    ನಿನ್ನೆ ಹಾಸನದಲ್ಲಿ ಪ್ರಜ್ವಲ್ ಪಟ್ಟಾಭಿಷೇಕ – ಇಂದು ಮಂಡ್ಯದಲ್ಲಿ ನಿಖಿಲ್‍ಗೆ ಟಿಕೆಟ್ ಪಕ್ಕಾ..!

    -ತರಾತುರಿಯಲ್ಲಿ ರಾತ್ರಿಯಿಡೀ ವೇದಿಕೆ ಸಿದ್ಧ

    ಮಂಡ್ಯ: ಬುಧವಾರಷ್ಟೇ ಹಾಸನದಲ್ಲಿ ಹಿರಿಯ ಮೊಮ್ಮಗ ಪ್ರಜ್ವಲ್‍ಗೆ ಪಟ್ಟಾಭಿಷೇಕ ಮಾಡಿರುವ ಮಾಜಿ ಪ್ರಧಾನಿ ದೇವೇಗೌಡರು ಇಂದು ಕಿರಿಯ ಮೊಮ್ಮಗನ ಪಟ್ಟಾಭಿಷೇಕಕ್ಕೆ ಅಣಿಯಾಗಿದ್ದಾರೆ. ಮಂಡ್ಯದಲ್ಲಿಂದು ನಿಖಿಲ್ ಕುಮಾರಸ್ವಾಮಿ ಹೆಸರನ್ನ ಅಧಿಕೃತವಾಗಿ ಘೋಷಿಸಲಾಗುತ್ತಿದ್ದು, ಇದಕ್ಕಾಗಿ ಬೃಹತ್ ಸಮಾವೇಶ ನಡೆಯಲಿದೆ.

    ಇಂದು ಮಂಡ್ಯದಲ್ಲಿ ಸ್ವತಃ ದೇವೇಗೌಡರೇ ನಿಖಿಲ್ ಕುಮಾರಸ್ವಾಮಿಯನ್ನು ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ಇದಕ್ಕಾಗಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಮಂಡ್ಯದ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮದ್ದೂರಿನಿಂದ ಬೆಳಗ್ಗೆ 11 ಗಂಟೆಗೆ ನಿಖಿಲ್ ಕುಮಾರಸ್ವಾಮಿಯನ್ನು ಬೃಹತ್ ಬೈಕ್ ರ‍್ಯಾಲಿಯಲ್ಲಿ ಸಮಾವೇಶದ ಸ್ಥಳಕ್ಕೆ ಕರೆತರಲು ವ್ಯವಸ್ಥೆ ಮಾಡಲಾಗಿದೆ. ಜೆಡಿಎಸ್ ಕಾರ್ಯಕ್ರಮವಾದ್ದರಿಂದ ಸಿಎಂ ಸಹಿತ ಪಕ್ಷದ ನಾಯಕರಷ್ಟೇ ಭಾಗಿಯಾಗಲಿದ್ದಾರೆ.

    ಇನ್ನು ತರಾತುರಿಯಲ್ಲಿ ಕಾರ್ಯಕ್ರಮ ಘೋಷಣೆ ಆಗಿರುವುದರಿಂದ ಇಡೀ ರಾತ್ರಿ ವೇದಿಕೆ ನಿರ್ಮಾಣ ಕಾರ್ಯ ನಡೆದಿದೆ. ಕಾರ್ಯಕ್ರಮದ ಉಸ್ತುವಾರಿಯನ್ನು ಸಚಿವ ಪುಟ್ಟರಾಜು ಹೆಗಲಿಗೆ ವಹಿಸಲಾಗಿದೆ. ಹೀಗಾಗಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದ ಸಚಿವರು ಅಂತಿಮ ಹಂತದ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಸಚಿವ ಪುಟ್ಟರಾಜು, ಮೈತ್ರಿಕೂಟದ ಅಭ್ಯರ್ಥಿಯಾಗಿ ನಿಖಿಲ್ ಅಧಿಕೃತವಾಗಿ ಘೋಷಣೆಯಾಗಿರುವುದರಿಂದ ಕಾಂಗ್ರೆಸ್ ಮುಖಂಡರು ಒಮ್ಮತದಿಂದ ಬೆಂಬಲಿಸಲಿದ್ದಾರೆ ಎಂದಿದ್ದಾರೆ.

    ಇತ್ತ ಸುಮಲತಾ ಅಂಬರೀಶ್ ಇಂದು ಕೂಡ ಮಂಡ್ಯದಲ್ಲಿ ಪ್ರವಾಸ ಮುಂದುವರಿಸಲಿದ್ದು, ಮೇಲುಕೋಟೆ ಚಲುವನಾರಾಯಣಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ತಮ್ಮ ಪ್ರಚಾರ ಆರಂಭಿಸಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಹುತಾತ್ಮ ಯೋಧನ ಪತ್ನಿಯನ್ನು ಚುನಾವಣಾ ಕಣಕ್ಕಿಳಿಸಲು ಒತ್ತಾಯ!

    ಹುತಾತ್ಮ ಯೋಧನ ಪತ್ನಿಯನ್ನು ಚುನಾವಣಾ ಕಣಕ್ಕಿಳಿಸಲು ಒತ್ತಾಯ!

    ಮಂಡ್ಯ: ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ವೀರಯೋಧ ಗುರು ಪತ್ನಿ ಕಲಾವತಿ ಅವರನ್ನ ಮಂಡ್ಯ ಲೋಕಸಭೆ ಚುನಾವಣೆಯ ಅಭ್ಯರ್ಥಿಯನ್ನಾಗಿ ಮಾಡಲು ರಾಜ್ಯದ ಮೂರು ಪಕ್ಷಗಳ ಅಧ್ಯಕ್ಷರಿಗೆ ಪತ್ರ ಬರೆದು ಒತ್ತಾಯಿಸಲಾಗುತ್ತಿದೆ.

    ಹೌದು, ಬೆಂಗಳೂರು ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಅವರು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಈ ಮೂರು ಪಕ್ಷಗಳ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಜಿಲ್ಲೆಯ ಮದ್ದೂರು ತಾಲೂಕಿನ ಗುಡಿಗೆರೆ ಕಾಲೋನಿಯ ಹುತಾತ್ಮ ಯೋಧ ಗುರು ನಿವಾಸದಲ್ಲಿ ಪತ್ರ ಬಿಡುಗಡೆ ಮಾಡಿದ ವೆಂಕಟೇಶ್ ಅವರು ಕಲಾವತಿಯವರನ್ನು ಚುನಾವಣಾ ಅಭ್ಯರ್ಥಿಯನ್ನಾಗಿ ಮಂಡ್ಯದಿಂದ ಸ್ಪರ್ಧಿಸಲು ಅವಕಾಶ ನೀಡಿ ಎಂದು ರಾಜಕೀಯ ಪಕ್ಷಗಳ ನಾಯಕರಿಗೆ ಮನವಿ ಮಾಡಿಕೊಂಡಿದ್ದಾರೆ.

    ಬಿಜೆಪಿ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್, ಹಾಗೂ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್‍ಗೆ ವೆಂಕಟೇಶ್ ಅವರು ಪತ್ರ ಬರೆದಿದ್ದಾರೆ. ಈಗಾಗಲೇ ಲೋಕಸಭೆ ಚುನಾವಣೆಗೆ ಮಂಡ್ಯದಿಂದ ಕಣಕ್ಕಿಳಿಯಲು ನಟಿ ಸುಮಲತಾ, ನಟ ನಿಖಿಲ್ ಕುಮಾರಸ್ವಾಮಿ, ಲಕ್ಷ್ಮಿ ಅಶ್ವಿನ್ ಗೌಡ ಸೇರಿದಂತೆ ಹಲವರ ಹೆಸರು ಕೇಳಿ ಬರುತ್ತಿದೆ. ಆದ್ರೆ ಯೋಧನ ಪತ್ನಿ ಕಲಾವತಿ ಅವರನ್ನ ಸಂಸತ್‍ಗೆ ಅವಿರೋಧವಾಗಿ ಆಯ್ಕೆ ಮಾಡಿ ಕಳುಹಿಸಿಕೊಡುವ ಬಗ್ಗೆ ಎಲ್ಲಾ ಪಕ್ಷಗಳು ಮುಂದಾಗುವಂತೆ ಈ ಪತ್ರದಲ್ಲಿ ಉಲ್ಲೇಖಿಸಿಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೆಲೆಕ್ಷನ್, ಕರೆಕ್ಷನ್, ರಿಜೆಕ್ಷನ್, ಪ್ರಮೋಷನ್ ಎಲ್ಲ ನಿಮ್ಮದೇ: ಉಪೇಂದ್ರ

    ಸೆಲೆಕ್ಷನ್, ಕರೆಕ್ಷನ್, ರಿಜೆಕ್ಷನ್, ಪ್ರಮೋಷನ್ ಎಲ್ಲ ನಿಮ್ಮದೇ: ಉಪೇಂದ್ರ

    -ಅಭ್ಯರ್ಥಿಗಳಿಗೆ ಕೇಳುವ  ಪ್ರಶ್ನೆಗಳನ್ನು ಬಿಚ್ಚಿಟ್ಟ ಉಪೇಂದ್ರ

    ಹುಬ್ಬಳ್ಳಿ: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ 28 ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತೇವೆ. ಸೆಲೆಕ್ಷನ್, ಕರೆಕ್ಷನ್, ರಿಜೆಕ್ಷನ್ ಹಾಗೂ ಪ್ರಮೋಷನ್ ಅನ್ನು ಜನರೇ ಮಾಡಬೇಕು. ನಮ್ಮ ಪಕ್ಷದ ಅಭ್ಯರ್ಥಿಗಳಾದ ಮೇಲೆ ಯಾವ ರೀತಿ ಕೆಲಸ ಮಾಡ್ತೀರಿ ಎನ್ನುವ ಕುರಿತು 9 ಪ್ರಶ್ನೆಗಳನ್ನು ಮಾಡಲಾಗುವುದು. ಪಕ್ಷದ ನಿಯಮಗಳನ್ನು ಅಭ್ಯರ್ಥಿಗಳು ಪಾಲಿಸಬೇಕು ಎಂದು ಉತ್ತಮ ಪ್ರಜಾಕೀಯ ಪಕ್ಷದ ಸ್ಥಾಪಕ ಉಪೇಂದ್ರ ತಿಳಿಸಿದ್ದಾರೆ.

    ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪೇಂದ್ರ, ನಮ್ಮ ಪಕ್ಷದಿಂದ ಸ್ಪರ್ಧೆ ಮಾಡುವ ವ್ಯಕ್ತಿಗಳು ಜನರ ಕೆಲಸಕ್ಕಾಗಿ ತಮ್ಮ ಸಂಪೂರ್ಣ ಸಮಯವನ್ನು ನೀಡಬೇಕು. ಜನರಿಗೆ ಮೊದಲ ಆದ್ಯತೆ ಕೊಡುವಂತಹ ಅಭ್ಯರ್ಥಿಗಳು ನಮ್ಮ ಪಕ್ಷಕ್ಕೆ ಬೇಕು. ರಾಜಕೀಯದಲ್ಲಿ ಬದಲಾವಣೆ ತರಬೇಕಾದ್ರೆ ಅದು ಜನರಿಂದ ಮಾತ್ರ ಸಾಧ್ಯ. ಕೇವಲ ಭರವಸೆ ನೀಡುವ ನಾಯಕರು ಬೇಕೋ ಅಥವಾ ಜನಪರವಾಗಿ ಕೆಲಸ ಮಾಡುವ ವ್ಯಕ್ತಿಗಳು ಬೇಕೋ ಅಂತ ಜನರು ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.

    ಅಷ್ಟೇ ಅಲ್ಲದೆ, ದೊಡ್ಡ ಹೆಸರು ಗಳಿಸಿದವರು ಹಾಗೂ ಹಣದ ಬಲ ಇರುವವರು ಮಾತ್ರ ಹೆಚ್ಚಾಗಿ ರಾಜಕೀಯದಲ್ಲಿ ಇರುತ್ತಾರೆ. ಅಂತಹ ವ್ಯಕ್ತಿಗಳು ಜನಕ್ಕೆ ಬೇಡ, ಜನರ ಪರವಾಗಿ ಕೆಲಸ ಮಾಡಿ ಸಮಾಜಕ್ಕೆ ಒಳ್ಳೆಯದನ್ನು ಮಾಡುವ ಜನನಾಯಕ ಬೇಕು. ಆದ್ದರಿಂದ ನಮ್ಮ ಪಕ್ಷದಿಂದ ಚುನಾವಣಾ ಕಣಕ್ಕೆ ಉತ್ತಮ ಅಭ್ಯರ್ಥಿಯನ್ನೇ ನಿಲ್ಲಿಸುತ್ತೇವೆ ಎಂದು ಉಪೇಂದ್ರ ಭರವಸೆ ನೀಡಿದ್ರು.

    ಅಭ್ಯರ್ಥಿಗೆ ಕೇಳುವ ಪ್ರಶ್ನಾವಳಿಗಳು:

    1. ವೈಯಕ್ತಿಕ ವಿವರ/ ಬಯೋ ಡೇಟಾ (ನಿಮ್ಮ ಮತದಾರರ ಗುರುತಿನ ಚೀಟಿಯನ್ನು ಲಗತಿಸಿ)
    2. ಸಂಸದರಾದ ನಂತರ ನಮ್ಮ ಕ್ಷೇತ್ರದ ಜನರೊಂದಿಗೆ ಸಂಪರ್ಕದಲ್ಲಿ ಉಳಿಯಲು ನೀವು ಯೋಜಿಸುವ ಕ್ರಮಗಳು ಮತ್ತು ವಿಧಾನಗಳು ಯಾವುದು?
    3. ನಮ್ಮ ಅಗತ್ಯತೆಗಳು ಹಾಗೂ ನಿರೀಕ್ಷೆಗಳ ಬಗ್ಗೆ ನಿರಂತರವಾಗಿ ಮಾಹಿತಿಯನ್ನು ಸಂಗ್ರಹಿಸಲು ನೀವು ಹೇಗೆ ಯೋಜಿಸುತ್ತೀರಿ? (ಎಂ.ಪಿ ವ್ಯಾಪ್ತಿಯ ಒಳಗೆ)
    4. ನಮ್ಮ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ನೀವು ಹೇಗೆ ಪರಿಹರಿಸುವಿರಿ? ಮತ್ತು ಅದನ್ನು ಹೇಗೆ ದೃಢೀಕರಿಸುವಿರಿ?
    5. ಸಂಸತ್ತಿನಲ್ಲಿ ಚರ್ಚಿಸಬೇಕಾದ ನಮ್ಮ ಕ್ಷೇತ್ರದ ಸಮಸ್ಯೆಗಳನ್ನು ಪ್ರಸ್ತುತ ಪಡಿಸಲು ನೀವು ಹೇಗೆ ಸಿದ್ಧತೆಯನ್ನು ಮಾಡಿಕೊಳ್ಳುತ್ತೀರಾ?
    6. ನಿಮ್ಮ ಕಾರ್ಯಕ್ಷಮತೆಯ ವರದಿಯನ್ನು ನಮ್ಮ ಕ್ಷೇತ್ರದ ಜನರಿಗೆ ಮತ್ತು ಯು.ಪಿ.ಪಿ ಪಕ್ಷಕ್ಕೆ ಎಷ್ಟು ಸಮಯಕ್ಕೊಮ್ಮೆ ಹೇಗೆ ಪ್ರಸ್ತುತ ಪಡಿಸುವಿರಿ?
    7. ನೀವು ಭ್ರಷ್ಟಾಚಾರವಿಲ್ಲದೆ ಪ್ರಮಾಣಿಕವಾಗಿ ಕೆಲಸ ಮಾಡುತ್ತೀರಿ ಎಂದು ಹೇಗೆ ಸಾಭೀತುಪಡಿಸುವಿರಿ?
    8. ಈ ಕೆಲಸಕ್ಕಾಗಿ ಇತರರಿಂದ ನಿಮ್ಮನ್ನು ಪ್ರತ್ಯೇಕಿಸುವ ನಿಮ್ಮ ವಿಶಿಷ್ಟ ಕಾರ್ಯ ಶೈಲಿಯನ್ನು ಪಟ್ಟಿಮಾಡಿ
    9. ನೀವು ನೀಡಲು ಬಯಸುವ ಯಾವುದೇ ಸಲಹೆಗಳು

    https://www.youtube.com/watch?v=ZqLSa6pP7LU

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಲೋಕಸಭಾ ಚುನಾವಣೆಗೆ ವರಿಷ್ಠರ ಗ್ರೀನ್ ಸಿಗ್ನಲ್ – ಸಂತಸ ವ್ಯಕ್ತಪಡಿಸಿದ ಪ್ರಜ್ವಲ್ ರೇವಣ್ಣ

    ಲೋಕಸಭಾ ಚುನಾವಣೆಗೆ ವರಿಷ್ಠರ ಗ್ರೀನ್ ಸಿಗ್ನಲ್ – ಸಂತಸ ವ್ಯಕ್ತಪಡಿಸಿದ ಪ್ರಜ್ವಲ್ ರೇವಣ್ಣ

    ಹಾಸನ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಪಕ್ಷದ ವರಿಷ್ಠರು ಗ್ರೀನ್ ಸಿಗ್ನಲ್ ನೀಡಿರುವುದಕ್ಕೆ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣ ಸಂತಸ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪ್ರಜ್ವಲ್ ರೇವಣ್ಣ, ಹಾಸನ ಕ್ಷೇತ್ರದ ಕ್ಷೇತ್ರದಿಂದ ಲೋಕಸಭಾ ಚುನಾವಣೆ ಎದುರಿಸಲು ಸಿದ್ಧನಿದ್ದು, ಪಕ್ಷದ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದು ಸಂತೋಷವಾಗಿದೆ. ಜಿಲ್ಲೆಯ ಮುಖಂಡರು, ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.

    ಕಳೆದ ನಾಲ್ಕು ತಿಂಗಳುಗಳಿಂದ ಜಿಲ್ಲೆಯ ಬೇಲೂರು, ಹೊಳೇನರಸಿಪುರ ಸೇರಿದಂತೆ ಕ್ಷೇತ್ರ ಹಲವೆಡೆ ಪ್ರವಾಸ ಮಾಡುತ್ತಿದ್ದೇನೆ. ನಮ್ಮ ಸರ್ಕಾರದ ಹಲವು ಇಲಾಖೆಗಳಿಂದ ಆಗುತ್ತಿರುವ ಅಭಿವೃದ್ದಿ ಕೆಲಸಗಳಿಂದಾಗಿ ಒಳ್ಳೆಯ ವಿಶ್ವಾಸ ಇದೆ. ಚುನಾವಣೆ ಸ್ಪರ್ಧೆ ಕುರಿತು ಹಿರಿಯರಾದ, ಮಾಜಿ ಪ್ರಧಾನಿ ದೇವೇಗೌಡರು ಎಲ್ಲರೊಂದಿಗೆ ಚರ್ಚೆ ಮಾಡಿಯೇ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದುಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಪಕ್ಷದ ಹಿರಿಯರ ಮನೆಗಳಿಗೆ ಭೇಟಿ ನೀಡಿ ಎಲ್ಲರ ಆಶೀರ್ವಾದ ಪಡೆಯುತ್ತೇನೆ ಎಂದರು.

    ಜಿಲ್ಲೆಯ ಜನತೆ ನನ್ನನು ಒಬ್ಬ ಮಗನಾಗಿ ಸ್ವೀಕರಿಸಿದ್ದಾರೆ. ನಾನೂ ಕೂಡ ಕೆಲಸ ಮಾಡಬೇಕು ಎನ್ನುವ ದೂರ ದೃಷ್ಟಿ ಇಟ್ಟುಕೊಂಡಿದ್ದೇನೆ. ಜಿಲ್ಲೆಯಲ್ಲಿ ಜೆಡಿಎಸ್ ಮಾಡಿರುವ ಅಭಿವೃದ್ಧಿ ಕೆಲಸಗಳು ನನ್ನ ಕೈ ಹಿಡಿಯಲಿವೆ. ಪಕ್ಷದ ಒಮ್ಮತದ ಅಭ್ಯರ್ಥಿಯಾದರೆ, ನಾನು ಸ್ಪರ್ಧಿಸಲು ಹಿಂಜರಿಯುವುದಿಲ್ಲ. ಜಿಲ್ಲೆಯ ಲೋಕಸಭಾ ಅಭ್ಯರ್ಥಿ ವಿಚಾರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಒಪ್ಪಂದ ಕುರಿತು ರಾಹುಲ್ ಗಾಂಧಿ ಮತ್ತು ದೇವೇಗೌಡರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಕಾಂಗ್ರೆಸ್ ನಾಯಕರ ಆಕ್ಷೇಪದ ಬಗ್ಗೆ ದೊಡ್ಡವರು ನೋಡಿಕೊಳ್ಳುತ್ತಾರೆ. ಅವರ ನಿರ್ಧಾರದಂತೆ ನಡೆದುಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv