ಬೆಂಗಳೂರು: ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳ ಚುನಾವಣೆಗೆ ತಯಾರಿ ನಡೆಯುತ್ತಿದ್ದು, 4 ಕ್ಷೇತ್ರಗಳಿಗೆ ಜೆಡಿಎಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.
ಅಕ್ಟೋಬರ್ 28 ರಂದು ನಡೆಯುವ ಚುನಾವಣೆಗೆ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಆರ್ ಚೌಡರೆಡ್ಡಿ ತೂಪಲ್ಲಿ, ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಶಿವಶಂಕರ ಕಲ್ಲೂರ, ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ತಿಮ್ಮಯ್ಯ ಪುರ್ಲೆ ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಎ. ಪಿ.ರಂಗನಾಥ್ ಹೆಸರುಗಳನ್ನು ತೆನೆ ಪಕ್ಷ ಘೋಷಿಸಿದೆ.
ಭಾರತ ಚುನಾವಣಾ ಆಯೋಗವು ರಾಜ್ಯದಲ್ಲಿ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದಿಂದ ತೆರವಾಗಿರುವ ವಿಧಾನಪರಿಷತ್ತು ಸದಸ್ಯರ ಸ್ಥಾನಗಳನ್ನು ತುಂಬಲು ಅ.28ರಂದು ಚುನಾವಣೆ ನಡೆಸುವುದಾಗಿ ಪ್ರಕಟಿಸಿದೆ. ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಈ ಚುನಾವಣೆಯನ್ನು ಆಯೋಗ ಮುಂದೂಡಿತ್ತು.
ತುಮಕೂರು: ಶಾಸಕ ದಿ. ಸತ್ಯನಾರಾಯಣ್ ನಿಧನದಿಂದ ತೆರವಾಗಿರುವ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಘೋಷಣೆಯಾಗಿದೆ. ಈ ಬೆನ್ನಲ್ಲೇ ಶಿರಾದಲ್ಲಿ ಜೆಡಿಎಸ್ ಅಭ್ಯರ್ಥಿಯ ಹುಡುಕಾಟ ಶುರುವಾಗಿದೆ.
ಜೆಡಿಎಸ್ ತೆಕ್ಕೆಯಲ್ಲೇ ಇರುವ ಕ್ಷೇತ್ರವನ್ನು ಉಳಿಸಿಕೊಳ್ಳಲು ಜೆಡಿಎಸ್ ಇನ್ನಿಲ್ಲದ ಕಸರತ್ತು ಮುಂದುವರಿಸಿದೆ. ಶಿರಾ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಲು ಶಾಸಕ ಸತ್ಯನಾರಾಯಣ್ ಪುತ್ರ ಸತ್ಯಪ್ರಕಾಶ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆಯ ಪತಿ ಕಲ್ಕೆರೆ ರವಿ ಹಾಗೂ ಸತ್ಯನಾರಾಯಣ್ ಪತ್ನಿ ಅಮ್ಮಾಜಮ್ಮ ಸೇರಿದಂತೆ ಹಲವರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಮುಖಂಡರು ಕಾರ್ಯಕರ್ತರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದ್ದಾರೆ.
ಇಂದು ಶಿರಾ ನಗರದ ಜೆಡಿಎಸ್ ಕಚೇರಿ ಎದುರು ಕಾರ್ಯಕರ್ತರ ಸಮಾವೇಶ ನಡೆಸಿದ ಮುಖಂಡರು, ಸಮಾವೇಶದಲ್ಲಿ ಅಭ್ಯರ್ಥಿಗಳು ಯಾರಾಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ, ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಜಿಲ್ಲೆಯ ಹಾಲಿ ಮಾಜಿ ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಶಾಸಕ ಸತ್ಯನಾರಾಯಣ್ ಪುತ್ರ ಸತ್ಯಪ್ರಕಾಶ್ ಹಾಗೂ ಕಲ್ಕರೆ ರವಿ ಅವರು ತಮ್ಮ ನಾಯಕರ ಮುಂದೆ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಎಲ್ಲಾವನ್ನು ಅವಲೋಕಿಸಿರುವ ಜೆಡಿಎಸ್ ಮುಖಂಡರು ಅಭ್ಯರ್ಥಿಯ ಹೆಸರನ್ನು ಶೀಘ್ರದಲ್ಲೇ ಘೋಷಿಸುವುದಾಗಿ ಹೇಳಿದ್ದಾರೆ. ಇತ್ತ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಬಿರುಸಿನ ಪ್ರಚಾರ ಶುರು ಮಾಡಿದ್ದಾರೆ. ಬಿಜೆಪಿ ಮುಖಂಡರು ಕ್ಷೇತ್ರದ ತುಂಬಾ ಓಡಾಟ ಮಾಡಿ ಬೂತ್ ಮಟ್ಟದ ಸಭೆ ನಡೆಸಿದ್ದಾರೆ.
ಇನ್ನೊಂದೆಡೆ ಕಾಂಗ್ರೆಸ್ ತಮ್ಮ ಅಭ್ಯರ್ಥಿ ಹೆಸರನ್ನು ಫೈನಲ್ ಮಾಡಿದೆ. ಜೊತೆಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಪ್ರಭಾವಿ ಮುಖಂಡ ಕೆ.ಎನ್.ರಾಜಣ್ಣ ಅವರ ಮನವೊಲಿಕೆ ಮಾಡಿರುವ ಮುಖಂಡರು, ಜಯಚಂದ್ರ ಹಾಗೂ ಕೆ.ಎನ್.ರಾಜಣ್ಣ ನಡುವಿನ ಭಿನ್ನಾಭಿಪ್ರಾಯವನ್ನು ತೊಡೆದು ಹಾಕಿ ಪಕ್ಷವನ್ನು ಗಟ್ಟಿಗೊಳಿಸಿದ್ದಾರೆ. ಈ ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಭರ್ಜರಿ ಸಿದ್ಧತೆ ನಡೆಸಿರುವ ನಡುವೆ ಜೆಡಿಎಸ್ ಕೂಡ ಇಂದು ಕಾರ್ಯಕರ್ತರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದೆ.
ಹಾವೇರಿ: ಜೆಡಿಎಸ್ ಅಭ್ಯರ್ಥಿಯಾಗಿ ಹಿರೇಕೆರೂರು ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದಿದ್ದ ಕಬ್ಬಿಣಕಂಥಿ ಮಠದ ಸ್ವಾಮೀಜಿ ಈಗ ನಾಮಪತ್ರ ವಾಪಸ್ ಪಡೆದಿದ್ದು, ಇದರಿಂದ ಬಿಜೆಪಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಪಂಚಮಠಾಧೀಶರ ಒತ್ತಡಕ್ಕೆ ತಲೆಬಾಗಿ ಶಿವಲಿಂಗ ಶಿವಾಚಾರ್ಯ ಶ್ರೀಗಳು ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ. ಸಂಸದ ರಾಘವೇಂದ್ರ ಸಮ್ಮುಖದಲ್ಲಿ ಶಿವಾಚಾರ್ಯ ಸ್ವಾಮೀಜಿ ತಮ್ಮ ನಾಮಪತ್ರವನ್ನು ವಾಪಾಸ್ ಪಡೆದಿದ್ದಾರೆ. ಮಾಲೆ ಹಾಕುವ ಮೂಲಕ ರಾಘವೇಂದ್ರ ಅವರು ಸ್ವಾಮೀಜಿ ಅವರನ್ನು ಸ್ವಾಗತಿಸಿದ್ದಾರೆ. ಇದನ್ನೂ ಓದಿ: ನಾಮಪತ್ರ ಹಿಂಪಡೆಯಲು ಹಿರೇಕೆರೂರು ಜೆಡಿಎಸ್ ಅಭ್ಯರ್ಥಿ ಸ್ವಾಮೀಜಿ ನಿರ್ಧಾರ
ಮಂಗಳವಾರ ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಶ್ರೀಗಳು, ನಾಮಪತ್ರ ಹಿಂಪಡೆಯಲು ನಿರ್ಧರಿಸಿರುವುದಾಗಿ ತಿಳಿಸಿದ್ದರು. ಹಿರಿಯ ಮಠಾಧೀಶರ ಆದೇಶದಿಂದ ನಿರ್ಧಾರ ಬದಲಿಸಿದ್ದೇನೆ. ಸಾಧ್ಯವಾದರೆ ಬುಧವಾರವೇ ನಾಮಪತ್ರ ಹಿಂಪಡೆಯುತ್ತೇನೆ. ಒಂದು ವೇಳೆ ಸಾಧ್ಯವಾಗದಿದ್ದರೆ ಗುರುವಾರ ನಾಮಪತ್ರ ವಾಪಸ್ ಪಡೆಯುವುದು ಖಚಿತ. ಯಾರೇ ಜನಪ್ರತಿನಿಧಿ ಆಯ್ಕೆಯಾಗಿ ಬಂದರೂ ತಾಲೂಕಿನ ಅಭಿವೃದ್ಧಿ ಕೆಲಸಗಳನ್ನು ಅನುಷ್ಠಾನಕ್ಕೆ ತರುವ ಅಜೆಂಡಾಗೆ ಒಪ್ಪಿಗೆ ನೀಡಿದ್ದಾರೆ. ಹೀಗಾಗಿ ವಾಪಸ್ ಪಡೆಯುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದರು. ಇದನ್ನೂ ಓದಿ:ನಾನು ಸೇಫ್ ಆಗಿದ್ದೇನೆ, ನಿಲುವು ಬದಲಿಸಲ್ಲ: ಜೆಡಿಎಸ್ ಅಭ್ಯರ್ಥಿ ಹಿರೇಕೆರೂರು ಸ್ವಾಮೀಜಿ
ಕೆಲ ದಿನಗಳ ಹಿಂದೆ ಹಿರೇಕೆರೂರು ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿಗೆ ಭಕ್ತರು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಮಾಡಿದ್ದರು. ಹಿರೇಕೆರೂರು ಕ್ಷೇತ್ರದ ರಾಜಕಾರಣ ಅಪಮೌಲ್ಯ ಆಗಿದೆ. ಕ್ಷೇತ್ರದ ರಾಜಕೀಯ ವ್ಯವಸ್ಥೆ ಸರಿಪಡಿಸಲು ಚುನಾವಣೆಗೆ ಸ್ಪರ್ಧಿಸಿ ಎಂದು ಒತ್ತಡ ಹಾಕಿದ್ದರು. ಕಳೆದ ಎರಡು ದಿನಗಳ ಹಿಂದೆ ಚುನಾವಣೆಗೆ ನಿಲ್ಲದಿರಲು ನಿರ್ಧರಿಸಿದ್ದ ಸ್ವಾಮೀಜಿ, ರಾತ್ರೋರಾತ್ರಿ ಹಿರೇಕೆರೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದರು. ಅದರಂತೆ ಸೋಮವಾರ ಜೆಡಿಎಸ್ ಅಭ್ಯರ್ಥಿಯಾಗಿ ಹಿರೇಕೆರೂರು ಕ್ಷೇತ್ರದಿಂದ ನಾಮಪತ್ರ ಸಹ ಸಲ್ಲಿಸಿದ್ದರು. ಇದನ್ನೂ ಓದಿ: ಗುರುಗಳ ಬಳಿ ಭಕ್ತರೇ ಹೋಗಬೇಕು, ಭಕ್ತರ ಬಳಿ ಗುರುಗಳು ಹೋಗಬಾರದು: ಶಿವಲಿಂಗ ಸ್ವಾಮೀಜಿಗೆ ತರಾಟೆ
ಚುನಾವಣೆಗೆ ನಿಲ್ಲಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಬೇಡಿಕೊಂಡಿದ್ದರು. ಬಿ.ಸಿ ಪಾಟೀಲ್ ಅವರನ್ನು ಸೋಲಿಸಲು ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಅಲ್ಲದೆ ವೀರಶೈವ ಲಿಂಗಾಯತರ ಮತ ಒಡೆಯಲು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಈ ರಣತಂತ್ರ ರೂಪಿಸಿದ್ದಾರೆ ಎಂದು ಭಕ್ತರು ಸ್ವಾಮೀಜಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರ ಹಾಕಿದ್ದರು.
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ.ಪಿ ಬಚ್ಚೇಗೌಡ ಅವರನ್ನು ಬದಲಾಯಿಸಿ ರಾಧಾಕೃಷ್ಣ ಎಂಬವರನ್ನು ಜೆಡಿಎಸ್ ಹೈಕಮಾಂಡ್ ಆಯ್ಕೆ ಮಾಡಿದೆ.
ಈ ಮೊದಲು ಮಾಜಿ ಶಾಸಕ ಕೆ.ಪಿ ಬಚ್ಚೇಗೌಡ ಅಭ್ಯರ್ಥಿ ಎಂದು ಜೆಡಿಎಸ್ ಹೈಕಮಾಂಡ್ ಫೈನಲ್ ಮಾಡಿತ್ತು. ಆದರೆ ತಡರಾತ್ರಿ ಕೆ.ಪಿ ಬಚ್ಚೇಗೌಡ ಅವರನ್ನು ಬದಲಾಯಿಸಿರುವ ಜೆಡಿಎಸ್ ಶಿಡ್ಲಘಟ್ಟ ತಾಲೂಕು ನಾಗಮಂಗಲ ನಿವಾಸಿ ರಾಧಾಕೃಷ್ಣ ಅವರಿಗೆ ಮಣೆ ಹಾಕಿದೆ.
ರಾಧಾಕೃಷ್ಣ
ಸೋಮವಾರ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಚಿಕ್ಕಬಳ್ಳಾಪುರಕ್ಕೆ ಆಗಮಿಸುತ್ತಿದ್ದು, ಅವರ ಜೊತೆಗೂಡಿ ರಾಧಾಕೃಷ್ಣ ನಾಮಪತ್ರ ಸಲ್ಲಿಸಲಿದ್ದಾರೆ. ಜೆಡಿಎಸ್‍ನ ದಿಢೀರ್ ಬದಲಾವಣೆಗೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುಧಾಕರ್ ವಾಗ್ದಾಳಿ ನಡೆಸಿದರು.
ತಾಲೂಕಿನ ಆವಲಗುರ್ಕಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿ ಈ ಬಗ್ಗೆ ಪ್ರತಿಕ್ರಿಯಿಸಿದ ಸುಧಾಕರ್, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ವ್ಯಕ್ತಿತ್ವವಿರುವ ಅಭ್ಯರ್ಥಿ ಇಲ್ಲ ಎಂದು ಎರಡು ಪಕ್ಷದವರಿಗೆ ಎನಿಸಿರಬಹುದು. ಹಣ ಇದೆ ಎಂದು ಬೇರೆ ಕ್ಷೇತ್ರದಿಂದ ಅಭ್ಯರ್ಥಿಗಳನ್ನು ಕರೆ ತಂದು ಕಣಕ್ಕಿಳಿಸಿದ್ದಾರೆ. ಇದು ಕ್ಷೇತ್ರ ಜನರಿಗೆ ಮಾಡಿದ ಅವಮಾನ ಎಂದು ಕಿಡಿಕಾರಿದರು.
ಬೆಂಗಳೂರು: ರಾಜ್ಯದ 15 ಕ್ಷೇತ್ರಗಳಿಗೆ ಉಪಚುನಾವಣೆ ಹಿನ್ನೆಲೆ ರಾಜ್ಯ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ನಡೆಸಿದ್ದು, 15 ಕ್ಷೇತ್ರಗಳಲ್ಲಿ 10 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ ಎಂಬ ಮಾಹಿತಿ ಲಭಿಸಿದೆ. ಉಳಿದ 5 ಕ್ಷೇತ್ರಗಳಲ್ಲಿ 2 ರಿಂದ 3 ಟಿಕೆಟ್ ಅಭ್ಯರ್ಥಿಗಳು ಟಿಕೆಟ್ ಪಡೆಯುವ ರೇಸ್‍ನಲ್ಲಿದ್ದಾರೆ.
ಇಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷಯ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸೇರಿದಂತೆ ಹಲವು ಹಿರಿಯ ಮುಖಂಡರು ಭಾಗಯಾಗಿದ್ದರು. ಈ ಸಭೆಯಲ್ಲಿ ಚರ್ಚೆ ನಡೆಸಿದ ನಾಯಕರು 10 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗಳಿಸಿದ್ದಾರೆ. ಆದರೆ ಅನರ್ಹ ಶಾಸಕರ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ನ್ಯಾಯಾಲಯದ ಬೆಳವಣಿಗೆಗಳ ಬಳಿಕ ಚರ್ಚೆ ನಡೆಸಿ ಪಟ್ಟಿಯನ್ನ ಹೈಕಮಾಂಡ್ ಗೆ ರವಾನಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಯಾವ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್?
ಹೊಸಕೋಟೆ-ಪದ್ಮಾವತಿ ಸುರೇಶ್, ಕೆಆರ್ ಪುರಂ-ನಾರಾಯಣಸ್ವಾಮಿ, ಕೆಆರ್ ಪೇಟೆ-ಕೆಬಿ ಚಂದ್ರಶೇಖರ್, ಗೋಕಾಕ್-ಲಖನ್ ಜಾರಕಿಹೊಳಿ, ಕಾಗವಾಡ-ಪ್ರಕಾಶ್ ಹುಕ್ಕೇರಿ, ರಾಣಿ ಬೆನ್ನೂರು-ಕೆ.ಬಿ.ಕೋಳಿವಾಡ, ಹೊಸಕೋಟೆ-ಸೂರ್ಯ ನಾರಾಯಣರೆಡ್ಡಿ, ಹಿರೇಕೆರೂರು- ಬನ್ನಿಕೋಡ್, ಮಹಾಲಕ್ಷ್ಮಿ ಲೇಔಟ್-ಶಿವರಾಜ್ ಕಣಕ್ಕೆ ಇಳಿಯುವುದು ಬಹುತೇಕ ಖಚಿತ ಎನ್ನಲಾಗಿದ್ದು, ಉಳಿದಂತಹ ಕ್ಷೇತ್ರಗಳಾದ ಯಶವಂತಪುರ ಸೇರಿ 5 ಸ್ಥಾನಗಳಿಗೆ ಎರಡರಿಂದ, ಮೂವರು ಅಭ್ಯರ್ಥಿಗಳಲ್ಲಿ ಪೈಪೋಟಿ ಇದೆ ಎಂಬ ಮಾಹಿತಿ ಮಾಹಿತಿ ಲಭಿಸಿದೆ.
ಸಭೆ ಬಳಿಕ ಮಾತನಾಡಿದ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರು, ಬಿಜೆಪಿಯನ್ನು ಚುನಾವಣೆಯಲ್ಲಿ ಮಣಿಸಲು ಕಾಂಗ್ರೆಸ್ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಸಭೆ ನಡೆಸಿದ್ದು, ಸಭೆಗೆ ವೈಯಕ್ತಿಕ ಕಾರಣದಿಂದ ಮಾಜಿ ಡಿಸಿಎಂ ಪರಮೇಶ್ವರ್ ಗೈರಾಗಿದ್ದಾರೆ. ಇದನ್ನ ವಿಶೇಷ ಸುದ್ದಿ ಮಾಡುವ ಅಗತ್ಯವಿಲ್ಲ ಎಂದು ಹೇಳಿದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಸುಪ್ರೀಂ ಕೋರ್ಟ್ ಆದೇಶ ನೋಡಿಕೊಂಡು ಆದಷ್ಟು ಬೇಗ ಅಂತಿಮ ಪಟ್ಟಿ ಮಾಡುತ್ತೇವೆ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ, ನಾಳೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
ಬೆಂಗಳೂರು: ಇಂದು ಕೆ.ಆರ್ ಪೇಟೆಯ ಜೆಡಿಎಸ್ ಅಭ್ಯರ್ಥಿ ಫೈನಲ್ ಆಗುತ್ತಾ ಎನ್ನುವ ಚರ್ಚೆ ವ್ಯಾಪಕವಾಗಿದೆ.
ನಾರಾಯಣಗೌಡ ಅನರ್ಹತೆಯಿಂದಾಗಿ ಕೆ.ಆರ್ ಪೇಟೆ ಕ್ಷೇತ್ರಕ್ಕೆ ನಿಖಿಲ್ ಹೆಸರು ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರ ಅಭಿಪ್ರಾಯ ಪಡೆಯಲು ಎಚ್.ಡಿ ಕುಮಾರಸ್ವಾಮಿ ಮುಂದಾಗಿದ್ದಾರೆ. ಈ ಸಂಬಂಧ, ಇಂದು ಕೆ.ಆರ್ ಪೇಟೆಗೆ ಭೇಟಿ ನೀಡುತ್ತಿದ್ದು, ಸಂಜೆ 4 ಗಂಟೆಗೆ ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಲಿದ್ದಾರೆ.
ಉಪಚುನಾವಣೆಯಲ್ಲಿ ಗೆಲುವು ಸಾಧಿಸಲು ರಣತಂತ್ರ ರೂಪಿಸಲಿದ್ದಾರೆ. ಕೆ.ಆರ್ ಪೇಟೆ ಪಟ್ಟಣದ ಯಶಸ್ವಿನಿ ಸಮುದಾಯ ಭವನದಲ್ಲಿ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ಚರ್ಚೆ ನಡೆಯಲಿದೆ. ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಚಿವರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಮತ್ತು ಪಕ್ಷದ ಪದಾಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿಯಾಗಿಸುವ ಹಿಂದಿರುವ ಲೆಕ್ಕಾಚಾರ: 1) ಜೆಡಿಎಸ್ ಭದ್ರಕೋಟೆಯಾದ ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಗೆಲುವು ಸುಲಭವಾಗಲಿದೆ. 2) ಕುಮಾರಸ್ವಾಮಿಯವರ ಸರ್ಕಾರ ಕೆಡವಲು ನಾರಾಯಣಗೌಡರು ಸಹ ಕಾರಣ ಎನ್ನುವ ಜನರ ಸಿಟ್ಟು ಸಹಾಯವಾಗಲಿದೆ. 3) ಒಕ್ಕಲಿಗ ಸಮುದಾಯದ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಸಹಾಯವಾಗಲಿದೆ. 4) ಶಾಸಕರ ಬಂಡಾಯದಿಂದ ಅಧಿಕಾರ ಕಳೆದುಕೊಂಡ ಕುಮಾರಸ್ವಾಮಿಯವರ ಬಗ್ಗೆ ಇರುವ ಸಿಂಪತಿ ಮರವಾಗಿ ಪರಿವರ್ತನೆ ಆಗಲಿದೆ. 5) ಲೋಕಸಭಾ ಚುನಾವಣೆಯಲ್ಲಿ ಸೋತ ನಿಖಿಲ್ ಅವರನ್ನು ಈ ಬಾರಿ ಜನ ಅನುಕಂಪದಲ್ಲಿ ಕೈ ಹಿಡಿತಾರೆ ಎನ್ನುವ ಲೆಕ್ಕಾಚಾರ. 6) ಅಧಿಕಾರಕ್ಕಾಗಿ ಆಪರೇಷನ್ ಕಮಲ ಮಾಡಿದ್ರು ಕೆ.ಆರ್.ಪೇಟೆಯಲ್ಲಿ ಬಿಜೆಪಿಗೆ ನೆಲೆಯೇ ಇಲ್ಲ. 7) ಕಾಂಗ್ರೆಸ್‍ಗಿಂತ ಜೆಡಿಎಸ್ ವಿಚಾರದಲ್ಲಿ ಜನರಿಗೆ ಅನುಕಂಪ ಇದೆ ಎನ್ನುವ ಅಂಶ ಸಹಾಯವಾಗಬಹುದು.
ಹೀಗೆ ಎಲ್ಲಾ ರೀತಿಯಲ್ಲೂ ಅಳೆದು ತೂಗಿ ನಿಖಿಲ್ ಅವರನ್ನ ಅಭ್ಯರ್ಥಿಯಾಗಿಸಲು ಜೆಡಿಎಸ್ ನಾಯಕರು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಚಂಡೀಗಢ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೂ 13 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ.50ರಷ್ಟು ಮತಗಳನ್ನು ಪಡೆದಿದೆ. ಆದರೆ ಪಂಜಾಬ್ ರಾಜ್ಯದಲ್ಲಿ ಅಭ್ಯರ್ಥಿಯೊಬ್ಬರು ಕೇವಲ 5 ಮತಗಳನ್ನು ಪಡೆದಿದ್ದು, ಕಣ್ಣೀರು ಹಾಕಿದ್ದಾರೆ.
ನೀತು ಶುಟ್ಟರ್ನ್ ವಾಲಾ ಕಣ್ಣೀರು ಹಾಕಿದ ಅಭ್ಯರ್ಥಿ. ಇವರು ಪಂಜಾಬ್‍ನ ಜಲಂಧರ್ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಆದರೆ ಮತ ಎಣಿಕೆಯಲ್ಲಿ ಕೇವಲ 5 ಮತಗಳನ್ನು ಪಡೆದಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ತಮಗೆ ಐದು ಮತಗಳು ಬಂದಿದ್ದಕ್ಕೆ ಅವರು ಕಣ್ಣೀರು ಹಾಕಿರಲಿಲ್ಲ. ಅವರ ಕುಟುಂಬದವರೇ ತಮಗೆ ವೋಟು ಹಾಕಿಲ್ಲ ಎಂದು ಬೇಸರ ವ್ಯಕ್ತಪಡಿಸಿ ಕಣ್ಣೀರು ಹಾಕಿದ್ದಾರೆ.
ವಾಲಾ ನೀಡಿರುವ ಸಂದರ್ಶನ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕ್ಯಾಮೆರಾ ಮುಂದೆಯೇ ಗಳಗಳನೇ ಅತ್ತಿದ್ದಾರೆ. ನನಗೆ ಐದು ಮತ ಬಂದಿದ್ದಕ್ಕೆ ನೋವಾಗಿಲ್ಲ. ಆದರೆ ನಮ್ಮೆ ಮನೆಯಲ್ಲಿ 9 ಮಂದಿ ಇದ್ದಾರೆ. ಅವರೇ ನನಗೆ ಮತ ಹಾಕಿಲ್ಲ. ಇದರಿಂದ ನನಗೆ ನೋವಾಗಿದೆ ಎಂದು ಕುಟುಂಬದವರ ಮೇಲೆ ಆರೋಪ ಮಾಡಿದ್ದಾರೆ. ಜೊತೆಗೆ ಇವಿಎಂ ಮೇಲೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ.
ವಾಲಾ ಅವರು ಸಂದರ್ಶನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ವಿಭಿನ್ನವಾಗಿ ಕಮೆಂಟ್ಸ್ ಮಾಡುತ್ತಿದ್ದಾರೆ.
ಹುಬ್ಬಳ್ಳಿ: ನಾಮಪತ್ರ ಸಲ್ಲಿಕೆಗೆ ಬಂದಿದ್ದ ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡರು ಸಮಯದ ಅಭಾವದ ಹಿನ್ನೆಲೆಯಲ್ಲಿ ಓಡೋಡಿ ಬಂದ ಪ್ರಸಂಗ ಧಾರವಾಡದ ಕುಂದಗೋಳದಲ್ಲಿ ನಡೆದಿದೆ.
ಇಂದು ಕುಂದಗೋಳ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್ ಐ ಚಿಕ್ಕನಗೌಡರ ನಾಮಪತ್ರ ಸಲ್ಲಿಕೆಗೆ ಕುಂದಗೋಳ ತಹಶೀಲ್ದಾರ್ ಕಚೇರಿಗೆ ಆಗಮಿಸುತಿದ್ದರು. ಆದರೆ ನಾಮಪತ್ರ ಸಲ್ಲಿಸಲು ಕೇವಲ 5 ನಿಮಿಷ ಬಾಕಿಯಿತ್ತು. ಆದ್ದರಿಂದ ಅಭ್ಯರ್ಥಿ ಚಿಕ್ಕನಗೌಡರು ಓಡೋಡಿ ಕಚೇರಿ ಒಳಗೆ ಬಂದು ಕೊನೆ ಘಳಿಗೆಯಲ್ಲಿ ನಾಮಪತ್ರ ಸಲ್ಲಿಸಿದರು.
ಚಿಕ್ಕನಗೌಡರಿಗೆ ಸಂಸದ ಪ್ರಹ್ಲಾದ್ ಜೋಶಿ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಾಥ್ ನೀಡಿದ್ದರು. ಭರ್ಜರಿ ಮೆರವಣಿಗೆ ಮೂಲಕ ಅಭ್ಯರ್ಥಿಯನ್ನು ತಹಶೀಲ್ದಾರ್ ಕಚೇರಿಗೆ ಕರೆತರಲಾಯ್ತು. ಆದ್ರೆ ಅಭ್ಯರ್ಥಿ ನಾಮಪತ್ರ ಸಲ್ಲಿಸಲು ಓಡೋಡಿ ಹೋಗುತ್ತಿದ್ದಂತೆ ಅವರ ಹಿಂದೆಯೇ ಬಿಜೆಪಿ ನಾಯಕರೂ ಕೂಡ ಓಡೋಡಿ ಕಚೇರಿಗೆ ಬಂದರು.
ಈ ಮೊದಲು ಚಿಕ್ಕನಗೌಡರು ಸಾಂಕೇತಿಕವಾಗಿ ಒಂದು ಸೆಟ್ ನಾಮಪತ್ರ ಸಲ್ಲಿಕೆ ಮಾಡಿದ್ದರು. ಇಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಚಿತ್ರದುರ್ಗ: ಸಾಮಾನ್ಯವಾಗಿ ಚುನಾವಣೆಗೂ ಮುನ್ನ ಅಭ್ಯರ್ಥಿಗಳ ಪರ ವಿರೋಧ ಚರ್ಚೆಗಳು ಸರ್ವೆ ಸಾಮಾನ್ಯ. ಆದ್ರೆ ಚುನಾವಣೆ ಮುಗಿದ ಬಳಿಕವೂ ಸಾಮಾಜಿಕ ಜಾಲತಾಣಗಳಲ್ಲಿ ಕೈ ಹಾಗೂ ಬಿಜೆಪಿ ಕಾರ್ಯಕರ್ತರ ಸಮರ ಮುಂದುವರಿದಿದೆ.
ಹೌದು. ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಏಪ್ರಿಲ್ 18 ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರೋ ಬಿಜೆಪಿ ಅಭ್ಯರ್ಥಿ ಆನೇಕಲ್ ನಾರಾಯಣಸ್ವಾಮಿ ಹಾಗೂ ಇಬ್ಬರು ಕೂಡ ವಲಸಿಗರು. ಹೀಗಾಗಿ ಅವರಿಗೆ ಟಿಕೆಟ್ ಸಿಕ್ಕ ಮರುದಿನವೇ ಜಿಲ್ಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.
ಮೈತ್ರಿ ಅಭ್ಯರ್ಥಿ ಚಂದ್ರಪ್ಪ
ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂಬ ಕೂಗು ಕೂಡ ಕೇಳಿಬಂದಿತ್ತು. ಆದರೂ ಯಾರ ಮಾತಿಗೂ ಸೊಪ್ಪು ಹಾಕದ ರಾಷ್ಟ್ರೀಯ ಪಕ್ಷಗಳು ಈ ಅಭ್ಯರ್ಥಿಗಳನ್ನೇ ಅಂತಿಮ ಅಖಾಡಕ್ಕೆ ಇಳಿಸಿದ್ದವು. ಹೀಗಾಗಿ ಚುನಾವಣೆಯೂ ಕೂಡ ಶಾಂತಿಯುತವಾಗಿ ನಡೆದು ಕಳೆದ ಬಾರಿಗಿಂತ ಅಧಿಕ ಪ್ರಮಾಣದಲ್ಲಿ ಶೇ 70.79 ರಷ್ಟು ಮತದಾನವಾಗಿದೆ. ಆದ್ರೆ ಚುನಾವಣೆ ನಡೆದ ಮರುದಿನವೇ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ಚಿತ್ರದುರ್ಗದಿಂದ ಕಾಲ್ಕಿತ್ತಿದ್ದಾರೆ.
ಅಲ್ಲದೆ ಕೋಟೆನಾಡಿನಿಂದ ಆನೇಕಲ್‍ಗೆ ತೆರಳಿದ್ದು, ಫಲಿತಾಂಶಕ್ಕೂ ಮುನ್ನವೇ ನಾಪತ್ತೆಯಾಗಿರೋ ನಾರಾಯಣಸ್ವಾಮಿ ಮತ್ತೆ ವಾಪಾಸ್ ಬರೋದು ಬೇಡ. ಯಾಕಂದ್ರೆ ಇಲ್ಲಿ ಕಾಂಗ್ರೆಸ್ ಜಯ ಗಳಿಸಲಿದೆ ಎಂದು ಕೈ ಕಾರ್ಯಕರ್ತರು ಉದ್ವಿಗ್ನ ಹೇಳಿಕೆಗಳನ್ನು ಸಾಮಾಜಿಕ ಜಾಲಾತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇದನ್ನು ಕೈ ನಾಯಕರು ಕೂಡ ಸಮರ್ಥಿಸಿಕೊಂಡಿದ್ದಾರೆ.
ಕೈ ನಾಯಕರ ಈ ಹೇಳಿಕೆಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ನವೀನ್ ಪ್ರತಿಕ್ರಿಯಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕೈ ನಾಯಕರು ಹೀಗೆ ಸಕ್ರಿಯರಾಗಿರುವಷ್ಟು ಈ ಜಿಲ್ಲೆಯ ಅಭಿವೃದ್ಧಿಯತ್ತ ಕಾಳಜಿ ವಹಿಸುತ್ತಿದ್ದರೆ, ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಕೊನೆ ಪಕ್ಷ ತೀವ್ರ ತರಹದ ಸ್ಪರ್ಧೆಯನ್ನಾದರೂ ಒಡ್ಡಬಹುದಿತ್ತು. ಆದ್ರೆ ಇಂತಹ ಸಮಯ ವ್ಯರ್ಥ ಮಾಡುವ ಕೈ ನಾಯಕರ ಕಾಯಕಗಳಿಂದಲೇ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಮಲ ಅರಳಿದೆ. ಇನ್ನು ಈ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ಪ್ರಚಂಡ ಬಹುಮತಗಳಿಂದ ಜಯಗಳಿಸಲಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಒಟ್ಟಾರೆ ಬೆಂಕಿ ಆರಿದರೂ ಹೊಗೆ ಮಾತ್ರ ನಿಲ್ಲಲಿಲ್ಲ ಎಂಬಂತೆ ಚುನಾವಣೆ ಮುಗಿದರೂ ಕೂಡ ಚಿತ್ರದುರ್ಗ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ವಾಕ್ ಸಮರ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಇನ್ನೂ ನಿಂತಿಲ್ಲ.
ಕಲಬುರಗಿ: ಬಿಜೆಪಿ ನಾಯಕರೆಲ್ಲ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಗೆದ್ದೇ ಗೆಲ್ತಾರೆ ಎಂದು ಓಡಾಡುತ್ತಿದ್ದಾರೆ. ಆದರೆ ಬಿಜೆಪಿ ಅಭ್ಯರ್ಥಿ ಮಾತ್ರ ಇದು ನನಗೆ ಡು ಆರ್ ಡೈ. ಇದು ನನಗೆ ಕೊನೆಯ ಅವಕಾಶ ಎಂದು ಹೇಳಿದ್ದಾರೆ.
ಹೌದು. ಕಲಬುರಗಿ ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಅವರು ಶುಕ್ರವಾರ ರಾತ್ರಿ ಕಲಬುರಗಿಯ ಎಸ್‍ಸಿ ಸಮಾವೇಶದಲ್ಲಿ ಮಾತನಾಡುತ್ತಾ ಇದು ನನಗೆ ಡು ಆರ್ ಡೈ ಅನ್ನುವಂತ ಸ್ಥಿತಿ. ನನಗೆ ಇನ್ನೂ ಸೆಟ್ ಆಗುತ್ತಿಲ್ಲ. ರಾಜಕೀಯವಾಗಿ ಇದು ಲಾಸ್ಟ್ ಚಾನ್ಸ್. ಹೀಗಾಗಿ ನೀವು ನನ್ನನ್ನ ಕೈ ಬಿಡಬೇಡಿ. ಈ ಯುದ್ಧದಲ್ಲಿ ನನ್ನನ್ನು ಗೆಲ್ಲಿಸಬೇಕು ಎಂದು ಜನರನ್ನ ಮನವಿ ಮಾಡಿದ್ದಾರೆ.
ಇದೇ ವೇಳೆ ಗೋವಿಂದ ಕಾರಜೋಳ ಅವರೇ ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಬೇಕು ಎಂದು ವಿನಂತಿಸಿಕೊಂಡರು. ಒಟ್ಟಿನಲ್ಲಿ ಇದೀಗ ಖರ್ಗೆ ವಿರುದ್ಧ ಸ್ಪರ್ಧೆ ಮಾಡಿ ಸಂಸದನಾಗುವ ಕನಸು ಕಂಡಿದ್ದ ಉಮೇಶ್ ಜಾಧವ್ ಈ ರೀತಿ ಹೇಳಿದ್ಯಾಕೆ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.