Tag: ಅಭಿಷೇಕ್

  • ಚುನಾವಣೆಯಲ್ಲಿ ಸ್ಪರ್ಧಿಸುವ ಸುಳಿವು ಕೊಟ್ಟ ಸುಮಲತಾ

    ಚುನಾವಣೆಯಲ್ಲಿ ಸ್ಪರ್ಧಿಸುವ ಸುಳಿವು ಕೊಟ್ಟ ಸುಮಲತಾ

    ಮಂಡ್ಯ: ಸ್ಯಾಂಡಲ್ ವುಡ್ ನಟ ದಿ.ಅಂಬರೀಶ್ ಅವರು ಮೊದಲಿನಿಂದಲೂ ಕಾಂಗ್ರೆಸ್‍ನಲ್ಲಿ ಗುರುತಿಸಿಕೊಂಡಿದ್ದಾರೆ. ಆದ್ದರಿಂದ ನಾನು ಕೂಡ ಖಂಡಿತವಾಗಿಯೂ ಕಾಂಗ್ರೆಸ್ಸಿನಿಂದಲೇ ಸ್ಪರ್ಧಿಸಲು ಅಪೇಕ್ಷಿಸುತ್ತೇನೆ ಎಂದು ಸುಮಲತಾ ಅಂಬರೀಶ್ ಅವರು ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ.

    ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರಕ್ಕೆ ಮಗ ಅಭಿಷೇಕ್ ಜೊತೆ ಭೇಟಿ ಕೊಟ್ಟ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕಾಲಭೈರವೇಶ್ವರನ ದರ್ಶನ ಪಡೆದು ಸ್ವಾಮೀಜಿಯ ಆಶೀರ್ವಾದ ಪಡೆಯಬೇಕು ಎಂದು ಎರಡು ತಿಂಗಳಿಂದ ಅಂದುಕೊಂಡಿದ್ದೆವು. ಎಲ್ಲರೂ ರಾಜಕೀಯವಾಗಿ ಮೊದಲ ಹೆಜ್ಜೆ ಪಡೆಯಲು ಇಲ್ಲಿಗೆ ಬಂದು ವಿಶೇಷ ಪೂಜೆ ಸಲ್ಲಿಸುತ್ತಾರೆ ಎಂದು ನನಗೆ ಗೊತ್ತಿಲ್ಲ. ನೀವು ಹೇಳಿದ ಮೇಲೆ ಗೊತ್ತಾಗಿದೆ ಎಂದು ಹೇಳಿದ್ದಾರೆ.

    ರಾಜಕೀಯ ಎಂಟ್ರಿ:
    ಅಂಬರೀಶ್ ಜೀವನದಲ್ಲಿ ಯಾರೇ ಗೆಲ್ಲಿಸಿದ್ದರೂ, ಸೋಲಿಸಿದ್ದರೂ ಅಭಿಮಾನಿಗಳು ಮಾತ್ರ ಯಾವತ್ತೂ ಅವರ ಜೊತೆಯಲ್ಲಿಯೇ ಇದ್ದರು. ಆ ಅಭಿಮಾನಿಗಳ ಪ್ರೀತಿ, ವಿಶ್ವಾಸ, ಆಸೆ ಏನಿದೆ ಅದನ್ನು ನೆರವೇರಿಸಬೇಕು ಎಂಬ ಆಸೆ ನನಗೂ ಇದೆ. ಯಾಕೆಂದರೆ ಅವರ ಪ್ರೀತಿಯನ್ನು ಬಿಟ್ಟುಕೊಡುವುದಕ್ಕೆ, ಕಳೆದುಕೊಳ್ಳುವುದಕ್ಕೆ ನನಗೆ ಇಷ್ಟವಿಲ್ಲ. ಅವರ ಆಸೆ ಏನಿತ್ತು ಅದಕ್ಕೆ ಸೋಲಾಗಬಾರದು, ಗೆಲುವಾಗಬೇಕು ಎನ್ನುವ ಆಸೆ ನನಗಿದೆ. ಸದ್ಯಕ್ಕೆ ಈ ನಿರ್ಧಾರ ನನ್ನೊಬ್ಬಳ ಕೈಯಲ್ಲಿಲ್ಲ. ಎಲ್ಲರನ್ನೂ ಭೇಟಿ ಮಾಡಿ ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧರಿಸಬೇಕಿದೆ. ಅದಕ್ಕೂ ಕಾಲಕೂಡಿ ಬರಬೇಕು. ನಾನು ಯೋಚನೆ ಮಾಡಬೇಕು ಎಂದರು.

    ಅಂಬರೀಶ್ ಅವರು ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದವರು ಎಂದೇ ಗುರುತಿಸಿಕೊಂಡಿದ್ದಾರೆ. ಆದ್ದರಿಂದ ನಾನು ಕೂಡ ಖಂಡಿತವಾಗಿಯೂ ಕಾಂಗ್ರೆಸ್ಸನಿಂದಲೇ ಸ್ಪರ್ಧಿಸಲು ಅಪೇಕ್ಷಿಸುತ್ತೇನೆ. ಒಂದು ವೇಳೆ ಜೆಡಿಎಸ್ ಗೆ ಟಿಕೆಟ್ ಕೊಟ್ಟರೆ ಪಕ್ಷೇತರವಾಗಿ ನಿಲ್ಲಬೇಕು ಎಂದು ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ. ಆದ್ದರಿಂದ ಅವರ ಆಸೆಯನ್ನು ನಾನು ಗೆಲ್ಲಿಸುತ್ತೇನೆ ಎಂದು ತಿಳಿಸಿದರು.

    ನಾನು ನೋವಿನಲ್ಲಿದ್ದ ಸಮಯದಲ್ಲಿ ಅವರು ನನಗೆ ಸ್ಪಂದಿಸಿದ್ದಾರೆ. ಈಗ ಅವರು ನನ್ನ ಕಡೆಗೆ ನೋಡಿ, ನೀವು ನಮ್ಮ ಜೊತೆ ಇರಬೇಕು ಎಂದು ಹೇಳುತ್ತಿದ್ದಾರೆ. ಅವರ ಆಸೆಗೆ ನಾನು ಸ್ಪಂದಿಸುತ್ತೇನೆ. ಸಮಯ ಬಂದಾಗ ನಾನೇ ಹೇಳುತ್ತೇನೆ. ಆದರೆ ನಾನಾಗಲಿ, ಅಭಿಷೇಕ್ ಆಗಲಿ ಜೀವನ ಪರ್ಯಂತ ಅಭಿಮಾನಿಗಳ ಜೊತೆಯೇ ಇರುತ್ತೇವೆ ಎಂದು ಹೇಳಿದರು. ಆದ್ರೆ ಮಂಡ್ಯ ಗೌಡ್ತಿ ಅಲ್ಲ ಎಂಬ ಹೇಳಿಕೆಯ ಬಗ್ಗೆ ಸುಮಲತಾ ಪ್ರತಿಕ್ರಿಯಿಸಲು ನಿರಾಕರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಭಿಮಾನಿ ಮೈ ಮೇಲೆ ನಟ ದರ್ಶನ್

    ಅಭಿಮಾನಿ ಮೈ ಮೇಲೆ ನಟ ದರ್ಶನ್

    ಬೆಂಗಳೂರು: ಅಭಿಮಾನಿಗಳು ತಮ್ಮ ನೆಚ್ಚಿನ ನಟ ಹೆಸರು ಅಥವಾ ಮೊದಲ ಅಕ್ಷರವನ್ನು ತಮ್ಮ ಕೈ ಮೇಲೆ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಅಭಿಮಾನಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭಾವಚಿತ್ರವನ್ನೇ ತನ್ನ ಮೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

    ಆನಂದ ರಾಮ್ ನಟ ದರ್ಶನ್ ಅವರ ಭಾವಚಿತ್ರವನ್ನು ತನ್ನ ಬೆನ್ನ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈ ಮೂಲಕ ಆನಂದ್ ರಾವ್ ದರ್ಶನ್ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ನಟ ದರ್ಶನ್ ಹುಟ್ಟುಹಬ್ಬ ಮುಂದಿನ ತಿಂಗಳು 16 ರಂದು ಇದೆ. ಆದರೆ ಅಭಿಮಾನಿ ಆನಂದ್ ರಾಮ್ ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ದರ್ಶನ್ ಅವರಿಗೆ ಈಗಲೇ ಉಡುಗೊರೆ ನೀಡಿದ್ದಾರೆ. ದರ್ಶನ್ ಅಭಿನಯಿಸಿದ್ದ ಸಿನಿಮಾವೊಂದರಲ್ಲಿ ಬೀಡಿ ಸೇದುತ್ತಿದ್ದ ಫೋಟೋವನ್ನು ಅಭಿಮಾನಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಕೊನೆಯಲ್ಲಿ ‘ಯಜಮಾನ್ರು’ ಎಂಬ ಅಡಿ ಬರಹವನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ.

    ಆನಂದ್ ‘ಕರುನಾಡ ಕುಲದೀಪ ದರ್ಶನ್ ತೂಗುದೀಪ ಅಭಿಮಾನಿ’ ಸಂಘದ ಅಧ್ಯಕ್ಷರಾಗಿದ್ದು, ಈ ಸಂಘದ ಮೂಲಕ ಆನಂದ್ ದರ್ಶನ್ ಅಭಿಮಾನಿಗಳೊಂದಿಗೆ ನಟನಿಗಾಗಿ ಕೆಲಸಗಳನ್ನು ಮಾಡುತ್ತಾರೆ. ಆನಂದ್ ರಾವ್ ಟ್ಯಾಟೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ದರ್ಶನ್ ಅಭಿಮಾನಿಗಳು ಟ್ವೀಟ್ ಮಾಡುವ ಮೂಲಕ ಶೇರ್ ಮಾಡುತ್ತಿದ್ದಾರೆ.

    ಟ್ಯಾಟೂ ಹಾಕಿಸಿಕೊಂಡಿರುವ ಆನಂದ್ ಜೊತೆ ಟ್ಯಾಟೂ ಹಾಕಿರುವ ಶಿವರಾಜ್ ಕೂಡ ದರ್ಶನ್ ಅಭಿಮಾನಿಯಾಗಿದ್ದಾರೆ. ಅಭಿಮಾನಿ ಹಾಕಿಸಿಕೊಂಡಿದ್ದ ದರ್ಶನ್ ಟ್ಯಾಟೂ ನೋಡಿ ನಟ ಅಭಿಷೇಕ್ ಕೂಡ ಆಶ್ಚರ್ಯ ಪಟ್ಟಿದ್ದಾರೆ. ಈ ಟ್ಯಾಟೂ ಸುಮಾರು 1.5 ಫೀಟ್ ಉದ್ದ, 1.5 ಅಗಲ ಇದೆ.

    https://twitter.com/CSDSK1/status/1090099525383901184

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಅಂಬರೀಶ್ ನಮ್ಮನ್ನು ಅಗಲಿ ಇಂದಿಗೆ 2 ತಿಂಗಳು – ಕಂಠೀರವ ಸ್ಟುಡಿಯೋದಲ್ಲಿ ಪತ್ನಿ, ಮಗನಿಂದ ಸಮಾಧಿಗೆ ಪೂಜೆ

    ಅಂಬರೀಶ್ ನಮ್ಮನ್ನು ಅಗಲಿ ಇಂದಿಗೆ 2 ತಿಂಗಳು – ಕಂಠೀರವ ಸ್ಟುಡಿಯೋದಲ್ಲಿ ಪತ್ನಿ, ಮಗನಿಂದ ಸಮಾಧಿಗೆ ಪೂಜೆ

    ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಅಗಲಿ ಇಂದಿಗೆ ಎರಡು ತಿಂಗಳಾಗಿದೆ. ಈ ಹಿನ್ನೆಲೆಯಲ್ಲಿ ಪತ್ನಿ, ನಟಿ ಸುಮಲತಾ ಅಂಬರೀಶ್ ಹಾಗೂ ಪುತ್ರ ಅಭಿಷೇಕ್ ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.

    ಅಂಬರೀಶ್ ಅವರ ಎರಡನೇ ತಿಂಗಳ ಪುಣ್ಯ ಸ್ಮರಣೆ ಆಗಿದ್ದು, ಸುಮಲತಾ ಹಾಗೂ ಅಭಿಷೇಕ್ ಜೊತೆ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ಅಂಬಿ ಆಪ್ತ ಶ್ರೀನಿವಾಸ್, ದೊಡ್ಡಣ್ಣ ಸೇರಿದಂತೆ ಅಭಿಮಾನಿಗಳು ಪೂಜೆಯಲ್ಲಿ ಭಾಗಿ ಆಗಿದ್ದಾರೆ.

    ಪೂಜೆ ಮಾಡುವ ವೇಳೆ ಸಮಾಧಿ ಮುಂದೆ ಅಂಬಿ ಇಷ್ಟದ ಇಡ್ಲಿ, ದೋಸೆ, ಚಿಕನ್, ಮಟನ್, ಅಕ್ಕಿ ರೊಟ್ಟಿ, ಕೇಸರಿ ಬಾತ್ ಇಟ್ಟು ಪೂಜೆ ಮಾಡಿದ್ದಾರೆ. ಅಲ್ಲದೇ ಪೂಜೆ ಮುಗಿಸಿದ ಬಳಿಕ ಸುಮಲತಾ ಹಾಗೂ ಅಭಿಷೇಕ್ ಅಭಿಮಾನಿಗಳಿಗೆ ಅನ್ನದಾನ ಮಾಡಿದ್ದಾರೆ.

    ಕಿಡ್ನಿ ಹಾಗೂ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅಂಬರೀಶ್ ಅವರು ನವೆಂಬರ್ 24ರಂದು ರಾತ್ರಿ ನಿಧನರಾಗಿದ್ದರು. ಅಂದೇ ಮಂಡ್ಯದ ಕನಗನಮರಡಿಯಲ್ಲಿ ಬಸ್ ದುರಂತ ನಡೆದಿದ್ದು, ಘಟನೆ ನೋಡಿ ಬೇಸರಗೊಂಡಿದ್ದ ಅಂಬರೀಶ್ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆಂದು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂಬರೀಶ್ ಕುಟುಂಬಕ್ಕೆ ಪರೋಕ್ಷವಾಗಿ ಮಂಡ್ಯ ಟಿಕೆಟ್ ನಿರಾಕರಿಸಿದ ಸಿಎಂ ಎಚ್‍ಡಿಕೆ

    ಅಂಬರೀಶ್ ಕುಟುಂಬಕ್ಕೆ ಪರೋಕ್ಷವಾಗಿ ಮಂಡ್ಯ ಟಿಕೆಟ್ ನಿರಾಕರಿಸಿದ ಸಿಎಂ ಎಚ್‍ಡಿಕೆ

    – ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಸುಳಿವು ಬಿಚ್ಚಿಟ್ಟ ಸಿಎಂ
    – ಪೂರ್ವನಿರ್ಧರಿತ ಕಾರ್ಯಕ್ರಮದಿಂದಾಗಿ `ಅಂಬಿ ನಮನ’ಕ್ಕೆ ಗೈರು

    ಮಂಡ್ಯ: ರೆಬಲ್ ಸ್ಟಾರ್ ಅಂಬರೀಶ್ ಪತ್ನಿ ಸುಮಲತಾ ಅಥವಾ ಪುತ್ರ ಅಭಿಷೇಕ್‍ಗೆ ಮಂಡ್ಯ ಲೋಕಸಭಾ ಟಿಕೆಟ್ ಕೊಡಲು ಸಾಧ್ಯವಿಲ್ಲ ಎಂದು ಸಿಎಂ ಕುಮಾರಸ್ವಾಮಿ ಪರೋಕ್ಷವಾಗಿ ಹೇಳಿದ್ದಾರೆ.

    ಅಂಬರೀಶ್ ನಿಧನರಾದ ಹಿನ್ನೆಲೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಅಥವಾ ಅಭಿಷೇಕ್ ಅಂಬರೀಶ್ ಅವರನ್ನು ನಿಲ್ಲಿಸುವ ಬಗ್ಗೆ ಕಾಂಗ್ರೆಸ್ ಚಿಂತನೆ ನಡೆಸಿದೆ ಎನ್ನುವ ಸುದ್ದಿ ಈಗ ಮುನ್ನೆಲೆಗೆ ಬಂದಿದೆ. ಈ ವಿಚಾರವಾಗಿ ಮಾಧ್ಯಮಗಳು ಪ್ರಶ್ನೆ ಕೇಳಿದ್ದಕ್ಕೆ ಸಿಎಂ, ಅಂಬರೀಶ್ ಕುಟುಂಬ ಕಾಂಗ್ರೆಸ್‍ನಲ್ಲಿದೆ. ರೆಬಲ್ ಸ್ಟಾರ್ ಜೆಡಿಎಸ್ ಪಕ್ಷಕ್ಕೆ ಬಂದಿರಲಿಲ್ಲ. ಆದರೆ ಅವರು ವಿಧವಶರಾಗಿದ್ದಾಗ ರಾಜ್ಯದ ಮುಖ್ಯಮಂತ್ರಿಯಾಗಿ ಜನರ ಭಾವನೆಗೆ ಸ್ಪಂದಿಸಿ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಿ ಗೌರವ ಸಲ್ಲಿಸಿದ್ದೇನೆ. ಆದರೆ ಜೆಡಿಎಸ್ ಪಕ್ಷಕ್ಕೆ ಅಂಬಿ ಆಪ್ತರಾಗಿದ್ದರೂ ಎನ್ನುವುದು ಸುಳ್ಳು ಎಂದು ಹೇಳುವ ಮೂಲಕ ಮಂಡ್ಯ ಕ್ಷೇತ್ರದ ಟಿಕೆಟ್ ಬಿಟ್ಟು ಕೊಡಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ತಿಳಿಸಿದರು.

    ಟಿಕೆಟ್‍ಗಾಗಿ ಹೋರಾಡುವುದಕ್ಕೆ ಇದು ಮಹಾಭಾರತದ ಕುರುಕ್ಷೇತ್ರವಲ್ಲ. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿಯನ್ನು ಪ್ರಕಟ ಮಾಡುತ್ತೇವೆ ಎಂದ ಅವರು, ಮಂಡ್ಯ ಕ್ಷೇತ್ರದ ಅಭ್ಯರ್ಥಿ ಬಗ್ಗೆ ತೀರ್ಮಾನ ಆಗಿಲ್ಲ. ನಮ್ಮ ಕಾರ್ಯಕರ್ತರು ನನ್ನ ಪುತ್ರ ನಿಖಿಲ್ ಕುಮಾರ್ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ. ಅಭ್ಯರ್ಥಿ ಯಾರೆಂಬುದನ್ನು ಶೀಘ್ರವೇ ನಿರ್ಧರಿಸುತ್ತೇವೆ ಎಂದರು.

    ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ಲಾನ್ ರೂಪಿಸುತ್ತಿದ್ದೇವೆ. ಜಿಲ್ಲೆಯ ಜನರ ಮೇಲೆ ನಮ್ಮ ಕುಟುಂಬ ವಿಶೇಷ ಪ್ರೀತಿ ಹೊಂದಿದೆ. ಈ ಬಾರಿಯ ಬಜೆಟ್‍ನಲ್ಲಿ ಜಿಲ್ಲೆಗೆ ಕೆಲ ಯೋಜನೆಗಳನ್ನು ಮಾತ್ರ ಕೊಟ್ಟಿದ್ದೇವೆ. ಇದರಿಂದಾಗಿ ಮಂಡ್ಯದ ಅಭಿವೃದ್ಧಿ ವಿಚಾರದಲ್ಲಿ ನಮ್ಮಿಂದ ಅನ್ಯಾಯವಾಗಿದೆ. ಆದರೂ ಕೆಲವರು ಮಂಡ್ಯ, ಹಾಸನ ಬಜೆಟ್ ಎಂದು ಟೀಕೆ ಮಾಡುತ್ತಾರೆ ದೂರಿದರು.

    ನಾನು ಸಿಎಂ ಆಗಲು ಮಂಡ್ಯ ಜನರ ಕೊಡುಗೆ ದೊಡ್ಡದು. ಮಂಡ್ಯ ಮೈಶುಗರ್ ಕಾರ್ಖಾನೆ ಪುನರಾರಂಭಕ್ಕೆ ಸರ್ಕಾರ ಬದ್ಧನಾಗಿರುವೆ. ಜಿಲ್ಲೆಯನ್ನು ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ ಎಂದ ಅವರು, ಕೆಆರ್‍ಎಸ್ ಅಣೆಕಟ್ಟು ಒಡೆದು ಹಾಳು ಮಾಡುತ್ತಾರೆ ಅಂತ ಕೆಲವರು ಆರೋಪಿಸುತ್ತಾರೆ. ನಾನು ಹಾಗೇ ಮಾಡಲ್ಲ. ಡಿಸ್ನಿಲ್ಯಾಂಡ್ ಮಾದರಿ ಅಭಿವೃದ್ಧಿಯಿಂದ ಈ ಭಾಗದ ಜನಕ್ಕೆ ಕೆಲಸ ಸಿಗಲಿದೆ ಎನ್ನುವ ವಿಶ್ವಾಸ ನನಗಿದೆ ಎಂದರು.

    ಅಂಬಿ ನುಡಿನಮನ ಕಾರ್ಯಕ್ರಮಕ್ಕೆ ಗೈರು ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ, ಅಂಬಿ ನುಡಿನಮನ ಕಾರ್ಯಕ್ರಮ ಯಾರು ಕೇಳಿ ನಿಗದಿ ಮಾಡಿದ್ದರು. ಚರ್ಚೆ ಮಾಡಿ ನಿಗದಿ ಮಾಡದೇ ಏಕಾಏಕಿ ನಿಗದಿ ಮಾಡಿದರೆ ನಾನು ಬರುವುದಕ್ಕೆ ಆಗುತ್ತಾ? ನಾನು ಮುಖ್ಯಮಂತ್ರಿಯಾಗಿದ್ದು ಮೊದಲೇ ಕಾರ್ಯಕ್ರಮಗಳು ಪೂರ್ವ ನಿಗದಿಯಾಗಿರುತ್ತದೆ ಎಂದು ಹೇಳಿದರು.

    ಜೆಡಿಎಸ್ ಬಳಿ ಉಳಿದ ಎರಡು ಸಚಿವ ಸ್ಥಾನ ಹಂಚಿಕೆ ಹಾಗೂ ನಿಗಮ ಮಂಡಳಿ ನೇಮಕಾತಿ ಕುರಿತು ಪ್ರತಿಕ್ರಿಯೆ ನೀಡಿ ಕುಮಾರಸ್ವಾಮಿ ಅವರು, ಸೂಕ್ತ ಸಂದರ್ಭ ಬಂದಾಗ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇವೆ. ಆದರೆ ನಿಗಮ ಮಂಡಳಿ ನೇಮಕ ಪ್ರಕ್ರಿಯೆ ಶೀಘ್ರವೇ ನಡೆಯಲಿದೆ ಎಂದರು.

    ಕಾಂಗ್ರೆಸ್ ಜೊತೆಗೆ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಮೈತ್ರಿ ಮಾಡುತ್ತೇವೆ. ಅದರಲ್ಲಿ ಅನುಮಾನವಿಲ್ಲ. ನಮ್ಮ ಸರ್ಕಾರ ಐದು ವರ್ಷ ಭದ್ರವಾಗಿರುತ್ತದೆ. ಸರ್ಕಾರ ಬೀಳುವ ಪ್ರಶ್ನೆಯೇ ಇಲ್ಲ. ಸರ್ಕಾರ ಬೀಳುತ್ತದೆ ಎನ್ನುವ ವಿಪಕ್ಷ ಶಾಸಕರು ಹಾಗೂ ನಾಯಕರ ಮಾತಿಗೆ ನಾನು ತಲೆ ಕೆಡಿಸಿಕೊಳ್ಳಲ್ಲ. ನನ್ನ ಗಮನ ರಾಜ್ಯದ ಅಭಿವೃದ್ಧಿ ಕಡೆಗೆ. ಜನರ ನಿರೀಕ್ಷೆಯನ್ನು ಈಡೇರಿಸದೇ ನಾನು ನಿರ್ಗಮಿಸಲ್ಲ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಡ್ಯದಲ್ಲಿ ಭಾರೀ ಸೌಂಡ್ ಮಾಡ್ತಿದೆ ಅಭಿ-ನಿಖಿಲ್ ಹೆಸರು..!

    ಮಂಡ್ಯದಲ್ಲಿ ಭಾರೀ ಸೌಂಡ್ ಮಾಡ್ತಿದೆ ಅಭಿ-ನಿಖಿಲ್ ಹೆಸರು..!

    ಮಂಡ್ಯ: ಜಿಲ್ಲೆಯ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಂಬರೀಶ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ ಬೆನ್ನಲ್ಲೇ ಮಂಡ್ಯ ರಾಜಕೀಯ ವಲಯದಲ್ಲಿ ನಿಖಿಲ್ ಕುಮಾರಸ್ವಾಮಿ ವರ್ಸಸ್ ಅಭಿಷೇಕ್‍ಗೌಡ ಎಂಬ ಚರ್ಚೆ ಶುರುವಾಗಿದೆ.

    ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಆಗಮಿಸದ ಜೆಡಿಎಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಶನಿವಾರ ನಡೆದ ಅಂಬಿ ನುಡಿನಮನ ಕಾರ್ಯಕ್ರಮದಲ್ಲಿ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಖಾನ್ ಹೊರತುಪಡಿಸಿ ಬೇರೆ ಯಾರೂ ಭಾಗವಹಿಸಿರಲಿಲ್ಲ. ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಜಿಲ್ಲೆಯ ಏಳು ಜನ ಶಾಸಕರು ಆಗಮಿಸುತ್ತಾರೆ ಎಂದು ಪ್ರಚಾರ ಮಾಡಲಾಗಿತ್ತು. ಆದರೆ ಜೆಡಿಎಸ್ ಮುಖಂಡರೆಲ್ಲ ಗೈರಾಗಿದ್ದು, ರಾಜಕೀಯ ಕಾರಣಕ್ಕೆ ಎಂದು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಆಕ್ರೋಶ ಹೊರಹಾಕುತ್ತಿದ್ದಾರೆ.

    ಮುಂಬರುವ ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡಬೇಕೆಂಬ ಚರ್ಚೆ ಈಗಾಗಲೇ ಜಿಲ್ಲೆಯಲ್ಲಿ ಶುರುವಾಗಿದ್ದು, ಇದಕ್ಕೆ ಹಲವು ಜೆಡಿಎಸ್ ಮುಖಂಡರು ದನಿಗೂಡಿಸಿದ್ದಾರೆ. ಈ ನಡುವೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅಭಿಮಾನಿಗಳು ಅಭಿಷೇಕ್ ಅವರಿಗೆ ಟಿಕೆಟ್ ಕೇಳಬಹುದೆಂದು ಜೆಡಿಎಸ್ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕುತ್ತಿದ್ದಾರೆ.

    ಕಳೆದೊಂದು ವಾರದ ಹಿಂದೆ ಕಾಂಗ್ರೆಸ್ ಮಾಜಿ ಸಚಿವ ಎ.ಮಂಜು ಮಂಡ್ಯದಿಂದ ಅಂಬಿ ಪುತ್ರ ಅಭಿಷೇಕ್‍ಗೆ ಟಿಕೆಟ್ ಕೊಡಿ ಎಂದು ಮೊದಲು ದನಿ ಎತ್ತಿದ್ದರು. ಬಳಿಕ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‍ನಿಂದ ನಿಖಿಲ್ ಆದರೆ ಕಾಂಗ್ರೆಸ್ಸಿನಿಂದ ಅಂಬರೀಶ್ ಪುತ್ರ ಅಭಿಷೇಕ್‍ ರನ್ನ ಕಣಕ್ಕಿಳಿಸಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಪಕ್ಷಕ್ಕೆ ಒತ್ತಾಯ ಹೇರುತ್ತಿದ್ದಾರೆ. ಅಷ್ಟೇ ಅಲ್ಲದೇ ಮುಂಬರುವ ಲೋಕಸಭಾ ಚುನಾವಣೆಗೆ ಅಂಬರೀಶ್ ಪುತ್ರ ಅಭಿಷೇಕ್‍ಗೌಡ ಅವರಿಗೆ ಮಂಡ್ಯ ಕ್ಷೇತ್ರದ ಟಿಕೆಟ್ ನೀಡಬೇಕು. ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ನಾವು ನಿಖಿಲ್ ಕುಮಾರಸ್ವಾಮಿಗೆ ಸಪೋರ್ಟ್ ಮಾಡಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳುತ್ತಿದ್ದಾರೆ.

    ಇತ್ತ ಜೆಡಿಎಸ್‍ನವರೂ ಕೂಡ ನಿಖಿಲ್ ಕುಮಾರಸ್ವಾಮಿಯೇ ಅಭ್ಯರ್ಥಿ ಆಗಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದ ಮುಂಬರುವ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಅಥವಾ ಅಭಿಷೇಕ್‍ಗೌಡ ಇಬ್ಬರಲ್ಲಿ ಯಾರು ಸ್ಪರ್ಧಿಸುತ್ತಾರೆ ಎಂಬ ಬಿರುಸಿನ ಚರ್ಚೆ ಶುರುವಾಗಿದೆ. ಹೀಗಾಗಿ ಮಂಡ್ಯ ರಾಜಕೀಯದ ಅಖಾಡದಲ್ಲಿ ಕಳೆದೊಂದು ವಾರದಿಂದ ಅಂಬರೀಶ್ ಪುತ್ರ ಅಭಿಷೇಕ್ ಹೆಸರೂ ಕೇಳಿಬರುತ್ತಿದೆ.

     ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಡ್ಯದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ನೆನೆದು ಕಣ್ಣೀರಾದ ಅಭಿಮಾನಿಗಳು!

    ಮಂಡ್ಯದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ನೆನೆದು ಕಣ್ಣೀರಾದ ಅಭಿಮಾನಿಗಳು!

    ಮಂಡ್ಯ: ಸಕ್ಕರೆ ನಾಡು ಮಂಡ್ಯದ ವಿಶ್ವೇಶ್ವರಯ್ಯ ಸ್ಟೇಡಿಯಂನಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ನೆನೆದು ಸ್ಯಾಂಡಲ್‍ವುಡ್ ಹಿರಿಯ ನಟ, ನಟಿಯರು, ನಿರ್ದೇಶಕರು, ಕಲಾವಿದರು ಸೇರಿದಂತೆ ಅಭಿಮಾನಿಗಳು ಕಣ್ಣೀರಾದರು.

    ಅಂಬರೀಶ್ ಅಭಿಮಾನಿಗಳ ಬಳಗವು ಅಂಬಿ ಸಾರ್ಥಕ ನುಡಿನಮನ ಹಾಗೂ ಕನಗನಮರಡಿ ಬಸ್ ದುರಂತದಲ್ಲಿ ಮಡಿದವವರ ಕುಟುಂಬಗಳಿಗೆ ಪರಿಹಾರ ವಿತರಣಾ ಕಾರ್ಯಕ್ರಮವು ವಿಶ್ವೇಶ್ವರಯ್ಯ ಸ್ಟೇಡಿಯಂನಲ್ಲಿ ಶನಿವಾರ ರಾತ್ರಿ ನಡೆಸಿತು. ಈ ಕಾರ್ಯಕ್ರಮದಲ್ಲಿ ಅಂಬರೀಶ್ ಪತ್ನಿ ಸುಮಲತಾ, ಪುತ್ರ ಅಭಿಷೇಕ್, ನಟ ಶಿವರಾಜ್‍ಕುಮಾರ್, ರಾಕಿಂಗ್ ಸ್ಟಾರ್ ಯಶ್, ನಿರ್ದೇಶಕ ಯೋಗರಾಜ್ ಭಟ್, ನಟ ಜಗ್ಗೇಶ್, ಸಾಧುಕೋಕಿಲಾ, ನಿರ್ಮಾಪಕ ರಾಕಲೈನ್ ವೆಂಕಟೇಶ್ ಸೇರಿದಂತೆ ಅನೇಕರು ಭಾಗಿಯಾಗಿ, ಅಂಬರೀಶ್ ಅವರನ್ನು ಸ್ಮರಿಸಿಕೊಂಡರು.

    ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಹುತೇಕರ ಭಾಷಣ ಕೇಳಿ ಸುಮಲತಾ ಅಂಬರೀಶ್ ಅವರು ಭಾವುಕರಾಗಿ ಕಣ್ಣೀರು ಹಾಕಿದರು. ಬಳಿಕ ವೇದಿಕೆಗೆ ಆಗಮಿಸಿದ ಅವರು, ಕನಗನಮರಡಿ ಬಸ್ ದುರಂತದಲ್ಲಿ ಮಡಿದವರ 30 ಜನರ ಕುಟುಂಬಸ್ಥರಿಗೆ ಪರಿಹಾರ ನೀಡಿದರು. ಅದೇ ದಿನ ಅಂಬರೀಶ್ ಕೂಡ ಇಹಲೋಕ ತ್ಯಜಿಸಿದ್ದರು. ಎಲ್ಲವನ್ನೂ ನೆನೆದ ಸುಮಲತಾ  ಕಣ್ಣಲ್ಲಿ ನೀರು ತುಂಬಿ ಬಂತು.

    ರಾಕಿಂಗ್ ಸ್ಟಾರ್ ಯಶ್ ಮಾತನಾಡಿ, ಅಂಬರೀಶ್ ಅಣ್ಣನ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ. ಮಂಡ್ಯ ಇಂಡಿಯಾಗೆ ಗೊತ್ತು ಅಂತಾರೆ. ಅದು ಅಂಬರೀಶ್ ಅಣ್ಣನ ಸ್ವತ್ತು. ಯಾರೇ ಬಂದ್ರು ಅದೇ ಗತ್ತು ಎಂದರು. ಬಳಿಕ ವೇದಿಕೆಯ ಮೇಲೆ ಅಭಿಷೇಕ್ ಅವರನ್ನು ತಬ್ಬಿಕೊಂಡು ಸಾಂತ್ವಾನ ಹೇಳಿದರು.

    ಅಂಬರೀಶ್ ಅಧಿಕಾರಕ್ಕಾಗಿ, ಹಣಕ್ಕಾಗಿ ಎಂದೂ ಆಸೆ ಪಟ್ಟವರಲ್ಲ. ಕಾವೇರಿಗಾಗಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸರಳ ಜೀವಿ, ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದ ಅವರು ಒಂದು ಗತ್ತು ಹೊಂದಿದ್ದರು ಎಂದು ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್.ಆರ್.ರಂಗನಾಥ್ ಹೇಳಿ, ಅಂಬಿ ಜೊತೆಗಿನ ಕ್ಷಣಗಳನ್ನು ಮೆಲುಕು ಹಾಕಿದರು.

    ಅಂಬರೀಶ್ ಅವರನ್ನು ಕರ್ಣನಿಗೆ ಹೋಲಿಸಿದ ಹಿರಿಯ ನಟ ದೊಡ್ಡಣ್ಣ ಅವರು, ಕಲಾವಿದರ ಸಂಘದ ಕಟ್ಟಡ ನಿರ್ಮಾಣಕ್ಕೆ ಅಂಬರೀಶ್ ಹೋರಾಡಿದ್ದನ್ನು ನೆನೆಪಿಸಿಕೊಂಡು ಕಣ್ಣೀರಿಟ್ಟರು. ಅಂಬರೀಶ್ ಅವರು ಕನಗನಮರಡಿ ಬಸ್ ದುರಂತ ಕೇಳಿ ಮಗುವಿನಂತೆ ತೊಳಲಾಡಿದರು. ನಾನು ಘಟನಾ ಸ್ಥಳಕ್ಕೆ ಹೋಗಬೇಕು ಎಂದು ಪಟ್ಟು ಹಿಡಿದಿದ್ದರು. ಆದರೆ ವಿಧಿ ಅವರನ್ನು ಅವತ್ತೇ ರಾತ್ರಿ ಕರೆದುಕೊಂಡುಬಿಟ್ಟಿತು ಎಂದು ಸ್ಮರಿಸಿದರು. ಈ ವೇಳೆ ಸ್ಟೇಡಿಯಂನಲ್ಲಿ ಮೌನ ಮನೆಮಾಡಿ, ಅಂಬಿ ಕುಟುಂಬಸ್ಥರು, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಹಾಗೂ ಅಭಿಮಾನಿಗಳು ಭಾವುಕರಾದರು.

    ನಿರ್ದೇಶಕ ಯೋಗರಾಜ್ ಭಟ್ ಮಾತನಾಡಿ, ಬೆಂಗಳೂರು ಮೊಬೈಲ್ ಇದ್ದಂತೆ, ಮಂಡ್ಯ ಚಾರ್ಜರ್ ಇದ್ದಂತೆ ಎಂದು ರೆಬೆಲ್ ಸ್ಟಾರ್ ಬಗ್ಗೆ ತಮ್ಮದೇ ಶೈಲಿಯಲ್ಲಿ ಡೈಲಾಗ್ ಹೊಡೆದರು. ರಾಜಾಹುಲಿ ಸಿನಿಮಾದ ‘ಗೊಂಬೆ ಆಡ್ಸೋನು’ ಹಾಡಿ ಶೂಟಿಂಗ್ ಮಾಡುವಾಗ ಮಂಡ್ಯದವರಿಗೊಬ್ಬರಿಗೆ ಕೈಮ ಉಂಡೆ, ಮುದ್ದೆ ತರಲು ಅಂಬರೀಶ್ ಹೇಳಿದ್ದರು. ಆದರೆ ಒಬ್ಬರಲ್ಲ ಇಬ್ಬರಲ್ಲ ಅನೇಕರು ಅಂಬರೀಶ್ ಅವರು ಶೂಟಿಂಗ್‍ಗೆ ಬಂದಿದ್ದನ್ನು ಕೇಳಿ ಊಟ ತಂದಿದ್ದರು ಅಂತ ನೆನಪಿಸಿಕೊಂಡರು.

    ರಕ್ತಕಣ್ಣಿರು ಚಿತ್ರದ ‘ವೇದಾಂತಗಳು, ಸಿದ್ಧಾಂತಗಳು ಯಾರೋ ಬರೆದಿಟ್ಟ ಕಟ್ಟು ಕಥೆ. ಜೀವನದ ರಸ ಸವಿಯೋಕೆ ನಾನೇ ನಿಮಗೆ ದಂತ ಕಥೆ ಎಂಬ ಹಾಡಿನ ಮೂಲಕ ಅಂಬಿ ಏನು ಎಂಬುದನ್ನು ನಟ, ನಿದೇರ್ಶಕ, ಸಂಗೀತ ನಿರ್ದೇಶಕ ಸಾಧುಕೋಕಿಲಾ ಕಟ್ಟಿಕೊಟ್ಟರು.

    ಹಿರಿಯ ನಟಿ ಬಿ.ಸರೋಜಾದೇವಿ ಮಾತನಾಡಿ, ಅಂಬಿ ಏನನ್ನೂ ಬಯಸಿದವನಲ್ಲ. ಎಲ್ಲವೂ ಆತನನ್ನೇ ಹುಡುಕಿಕೊಂಡು ಬಂದಂತಿದ್ದು. ಆದರೆ ಸುಮಲತಾ ಅವರನ್ನು ಹೆಚ್ಚು ಇಷ್ಟಪಟ್ಟ ಅಂಬಿ, ಮಡದಿಯಾಗಿ ಪಡೆದರು. ರಾಜನಾಗಿಯೇ ಬಂದ ರೆಬೆಲ್ ಸ್ಟಾರ್ ರಾಜನಾಗೇ ಹೋದ ಎಂದ ಅವರು, ನನ್ನ ಆಯಸ್ಸು ಕೊಡ್ತೀನಿ ಅಂದ್ರೆ ಯಾರಿಗೆ ಬೇಕು ನಿಮ್ಮ ನೆಕ್ಲೇಸ್ ಕೊಡಿ ಅಂತ ಅಂಬರೀಶ್ ಒಮ್ಮೆ ಹಾಸ್ಯ ಮಾಡಿದ್ದರು ಎಂದು ನೆನೆದು ಕಣ್ಣೀರಾದರು.

    ಅಂಬರೀಶ್ ಪುತ್ರ ಅಭಿಷೇಕ್ ಮಾತನಾಡಿ, ನಮ್ಮಪ್ಪನ ಬಗ್ಗೆ ಹೆಚ್ಚಾಗಿ ನಾನು ಏನು ಹೇಳಲ್ಲ. ಅಂಬರೀಶ್ ಅವರು ಹೇಗಿದ್ದರು, ಹೇಗೆ ಹೋದರು ಅಂತ ನಿಮಗೆ ಗೊತ್ತು. ಹಣ ಮುಖ್ಯ ಅಲ್ಲ ಮಗನೇ ಜನ ಮುಖ್ಯ ಅಂತ ಅಪ್ಪ ಯಾವಾಗ್ಲೂ ಹೇಳುತ್ತಿದ್ದರು. ಅಂತ್ಯಸಂಸ್ಕಾರದಲ್ಲಿಯೂ ಅಭಿಮಾನವನ್ನು ಮಂಡ್ಯ ಜನತೆ ಮೆರೆಯಿತು. ನಿಮಗೆ ನಾನು ಚಿರಋಣಿ ಎಂದರು.

    ಅಭಿಷೇಕ್ ಮಾತನಾಡುವಾಗ ಕೆಲ ಅಭಿಮಾನಿಗಳು ಕೂಗಾಡುತ್ತಿದ್ದರು. ಈ ವೇಳೆ ಅಂಬಿ ಸ್ಟೇಲ್‍ನಲ್ಲಿಯೇ ಅಭಿಷೇಕ್ ಕೂಗಾಡಿ ನಮ್ಮಪ್ಪನಿಗೂ ಕೇಳಲಿ ಎಂದು ಭಾವುಕರಾದರು. ನಮ್ಮ ತಾಯಿ ನಿಮ್ಮ ಪ್ರೀತಿಯಲ್ಲಿ ಒಂದಿಷ್ಟು ಭಾಗ ಮಗ ಅಭಿಷೇಕ್ ಕೊಡಿ ಅಂತ ಕೇಳಿದ್ದಾರೆ. ಅಪ್ಪ ನಡೆದ ದಾರಿಯಲ್ಲಿ ನಡೆದರೆ ಅಷ್ಟೇ ಪ್ರೀತಿ ನಮಗೆ ಕೊಡುತ್ತಾರೆ ಎಂದು ಸುಮಲತಾ ಅವರಿಗೆ ಅಭಿಷೇಕ್ ಇದೇ ವೇಳೆ ಹೇಳಿದರು.

    https://www.youtube.com/watch?v=vRxf0E_5PXE

    https://www.youtube.com/watch?v=tv9fwk6eo9Q

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆತ್ಮಹತ್ಯೆಗೆ ಶರಣಾಗಿದ್ದ ಅಭಿಮಾನಿ ಮನೆಗೆ ಸುಮಲತಾ, ಅಭಿಷೇಕ್ ಭೇಟಿ

    ಆತ್ಮಹತ್ಯೆಗೆ ಶರಣಾಗಿದ್ದ ಅಭಿಮಾನಿ ಮನೆಗೆ ಸುಮಲತಾ, ಅಭಿಷೇಕ್ ಭೇಟಿ

    ಮಂಡ್ಯ: ರೆಬಲ್ ಸ್ಟಾರ್ ಅಂಬರೀಶ್ ಅವರ ಸಾವಿನಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದ ಅಭಿಮಾನಿ ಮನೆಗೆ ನಟಿ ಸುಮಲತಾ ಅಂಬರೀಶ್ ಹಾಗೂ ಅಭಿಷೇಕ್ ಭೇಟಿ ನೀಡಿದ್ದಾರೆ.

    ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೊಟ್ಟೇಗೌಡನದೊಡ್ಡಿ ಗ್ರಾಮದ ತಮ್ಮಯ್ಯ ಆತ್ಮಹತ್ಯೆಗೆ ಶರಣಾಗಿದ್ದರು. ತಮ್ಮಯ್ಯ ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದರು. ಈ ವಿಷಯ ತಿಳಿದ ಸುಮಲತಾ ಅವರು ಇಂದು ಅವರ ಮನೆಗೆ ಭೇಟಿ ನೀಡಿ ಸಾಂತ್ವನ ನೀಡಿದ್ದರು.

    ಸುಮಲತಾ ಅವರು ತಮ್ಮಯ್ಯ ಮನೆಯವರಿಗೆ ಹೆದರಬೇಡಿ. ಕಷ್ಟ ಇದ್ದರೆ ನಮ್ಮನ್ನು ಭೇಟಿ ಮಾಡಿ. ನಿಮ್ಮ ಜೊತೆ ನಾವಿರುತ್ತೇವೆ ಎಂದು ಸಾಂತ್ವನ ಹೇಳಿ 30 ಸಾವಿರ ರೂ. ಪರಿಹಾರ ಚೆಕ್ ವಿತರಿಸಿದ್ದಾರೆ. ಇದೇ ವೇಳೆ ಸುಮಲತಾ ಅವರಿಗೆ ಹಿರಿಯ ನಟ ದೊಡ್ಡಣ್ಣ ಹಾಗೂ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಸಾಥ್ ನೀಡಿದ್ದರು.

    ಅಲ್ಲದೇ ಸುಮಲತಾ ಹಾಗೂ ಅಭಿಷೇಕ್ ಅವರು ಮದ್ದೂರು ತಾಲೂಕಿನ ಗೊರವನ ಹಳ್ಳಿ ಗ್ರಾಮಕ್ಕೂ ಭೇಟಿ ನೀಡಿದ್ದಾರೆ. ಗೊರವನ ಹಳ್ಳಿಯ ಅಂಬಿ ಅಭಿಮಾನಿ ಸುರೇಂದ್ರ(50) ನೇಣಿಗೆ ಶರಣಾಗಿದ್ದರು. ಸುಮಲತಾ ಹಾಗೂ ಅಭಿಷೇಕ್ ಸುರೇಂದ್ರ ಅವರ ಕುಟುಂಬಕ್ಕೂ ಸಾಂತ್ವನ ಹೇಳಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿಗಳ ಕುಟುಂಬಸ್ಥರಿಗೆ ಅದನ್ನು ಭರಿಸುವ ಶಕ್ತಿ ನೀಡಲಿ ಎಂದು ಸುಮಲತಾ ಗೊರವನ ಹಳ್ಳಿಯಲ್ಲಿ ಹೇಳಿದ್ದಾರೆ. ಅವರ ಸಾವು ದೈವ ಇಚ್ಚೆ. ಆದರೆ ಇಲ್ಲಿ ಆಗ ಬಾರದಿತ್ತು. ನಮ್ಮ ಕೈಯಲ್ಲಿ ಸಾಂತ್ವನ ಹೇಳಲಿಕ್ಕಷ್ಟೆ ಆಗುವುದು ಎಂದು ಸುಮಲತಾ ಅವರು ಅಂಬಿಯನ್ನು ನೆನೆದು ಗದ್ಗದಿತರಾದರು.

    ಸುಮಲತಾ, ಅಭಿಷೇಕ್, ದೊಡ್ಡಣ್ಣ ಹಾಗೂ ರಾಕ್ ಲೈನ್ ವೆಂಕಟೇಶ್ ಅವರು ಮೃತ ಸುರೇಶ್ ಮನೆಯಲ್ಲಿ ಎಳನೀರು ಕುಡಿದು ಕುಟುಂಬಸ್ಥರ ಜೊತೆ ಸ್ವಲ್ಪ ಸಮಯ ಕಳೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದರ್ಶನ್, ಅಂಬಿ ಅಭಿಮಾನಿಗಳಿಗೆ ಸಿಹಿಸುದ್ದಿ

    ದರ್ಶನ್, ಅಂಬಿ ಅಭಿಮಾನಿಗಳಿಗೆ ಸಿಹಿಸುದ್ದಿ

    ಬೆಂಗಳೂರು: ಚಾಲೆಂಜಿಂಗ್‍ಸ್ಟಾರ್ ದರ್ಶನ್ ಹಾಗೂ ರೆಬೆಲ್‍ಸ್ಟಾರ್ ಅಂಬರೀಷ್ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದು ತೇಲಿಬಂದಿದೆ. ಕರ್ಣನ ಪುತ್ರ ಅಭಿಷೇಕ್ ಹಾಗೂ ಮಾನಸಪುತ್ರ ದಾಸ ದರ್ಶನ್ ಅವರನ್ನು ಒಂದೇ ಸ್ಕ್ರೀನ್‍ನಲ್ಲಿ ನೋಡುವಂತಹ ಭಾಗ್ಯ ಅಭಿಮಾನಿಗಳಿಗೆ ಸಿಗಲಿದೆ.

    ಹೌದು, ಅಭಿಷೇಕ್ ನಟನೆಯ `ಅಮರ್’ ಸಿನಿಮಾಗೆ ದರ್ಶನ್ ಬಣ್ಣಹಚ್ಚಿದ್ದಾರೆ. ರೆಬೆಲ್ ಕುಟುಂಬಕ್ಕೆ ದೊಡ್ಡ ಮಗನಂತಿರುವ ದರ್ಶನ್, ಸಹೋದರನ ಚೊಚ್ಚಲ ಚಿತ್ರಕ್ಕೆ ಸಾತ್ ಕೊಟ್ಟಿದ್ದಾರೆ. ಅಮರ್ ಸಿನಿಮಾದಲ್ಲಿ ದರ್ಶನ್ ಪಾತ್ರವೊಂದನ್ನು ನಿರ್ವಹಿಸುವ ಕುರಿತು ನಿರ್ಮಾಪಕ ಸಂದೇಶ್ ನಾಗರಾಜ್ ಖಚಿತಪಡಿಸಿದ್ದಾರೆ.

    ಮೈನಾ ಖ್ಯಾತಿಯ ನಾಗಶೇಖರ್ ಅವರು ಅಮರ್ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಚಿತ್ರೀಕರಣ ಭರದಿಂದ ನಡಿಯುತ್ತಿದೆ. ಅಮರ್ ಸಿನಿಮಾದಲ್ಲಿ ದರ್ಶನ್ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಸಿಹಿ ಸುದ್ದಿಯಾಗಿದೆ. ತಂದೆಯ ಅಗಲಿಕೆಯ ನೋವಿನಿಂದ ಚೇರಿಸಿಕೊಂಡು ಶೂಟಿಂಗ್‍ನಲ್ಲಿ ತೊಡಗಿದ್ದ ಅಭಿಷೇಕ್‍ಗೆ ಈಗ ಚಾಲೆಂಜಿಂಗ್ ಸ್ಟಾರ್ ಬಣ್ಣ ಹಚ್ಚಿ ನೋವು ಕಡಿಮೆ ಮಾಡುವ ಪ್ರಯತ್ನ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಡ್ಯದ ಗಂಡು ಅಗಲಿ ಇಂದಿಗೆ 1 ತಿಂಗಳು

    ಮಂಡ್ಯದ ಗಂಡು ಅಗಲಿ ಇಂದಿಗೆ 1 ತಿಂಗಳು

    ಬೆಂಗಳೂರು: ಹಿರಿಯ ನಟ, ರೆಬೆಲ್ ಸ್ಟಾರ್ ಅಂಬರೀಶ್ ಅವರು ನಮ್ಮೆಲ್ಲರನ್ನೂ ಅಗಲಿ ಇಂದಿಗೆ ಒಂದು ತಿಂಗಳು ಕಳೆದಿದೆ.

    ನವೆಂಬರ್ 24 ಶನಿವಾರ ರಾತ್ರಿ ಅನಾರೋಗ್ಯದ ಕಾರಣ ಅಂಬರೀಶ್ ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆಸಿದ್ದರು. ಬಳಿಕ ಅವರ ಮೃತದೇಹವನ್ನು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇರಿಸಲಾಗಿದ್ದು, ಸಿನಿಮಾ ರಂಗದವರು ಮತ್ತು ಆತ್ಮೀಯರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

    ಅಂಬರೀಶ್ ಅವರು ಮಂಡ್ಯದ ಗಂಡು ಎಂದೇ ಖ್ಯಾತಿ ಪಡೆದಿದ್ದರು. ಆದ್ದರಿಂದ ಅವರ ಮೃತದೇಹವನ್ನು ಭಾನುವಾರ ಹುಟ್ಟೂರಿಗೆ ಕೊಂಡೊಯ್ದು, ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಸೋಮವಾರ ಅಲ್ಲಿಂದ ವಿಮಾನದ ಮೂಲಕ ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗಿದ್ದು, ಮೆರವಣಿಗೆ ಮೂಲಕ ಕಂಠೀರವ  ಸ್ಟುಡಿಯೋಗೆ ತೆರಳಲಾಯಿತು. ಅಲ್ಲಿ ಸಂಜೆ 6 ಗಂಟೆ ಸುಮಾರಿಗೆ ಅವರ ಅಂತ್ಯಕ್ರಿಯೆ ಮಾಡಲಾಗಿತ್ತು. ಪುತ್ರ ಅಭಿಷೇಕ್ ಅಗ್ನಿ ಸ್ಪರ್ಶ ನೆರವೇರಿಸಿದ್ದರು. ಈ ವೇಳೆ ಕುಟುಂಬಸ್ಥರು, ಚಿತ್ರೋದ್ಯಮದ ಗಣ್ಯರು, ರಾಜಕಾರಣಿಗಳು ಸೇರಿದಂತೆ ಸಾವಿರಾರು ಅಭಿಮಾನಿಗಳು ಈ ವೇಳೆ ಭಾಗಿಯಾಗಿದ್ದರು.

    ಸಿಮೆಂಟ್, ಇಟ್ಟಿಗೆಯಿಂದ 16*16 ಸುತ್ತಳತೆಯಲ್ಲಿ ನಿರ್ಮಾಣಗೊಂಡಿದ್ದ ಚಿತೆಗೆ ವಿಕಿ ಆರ್ಟ್ಸ್ ವತಿಯಿಂದ ಕಲಾಸ್ಪರ್ಶ ನೀಡಲಾಗಿತ್ತು. ಅಂಬಿ ಅಭಿಮಾನಿಗಳಾದ 5 ಜನ ಕಲಾವಿದರು ಅಂಬರೀಶ್ ಹಾಗೂ ಸೂರ್ಯ ಮುಳುಗುತ್ತಿರುವ ಪರಿಸರ ದೃಶ್ಯವನ್ನು ಚಿತೆಯ ಮೇಲೆ ಬಿಡಿಸಿ, ಕನ್ನಡ ಚಿತ್ರರಂಗದ ಭೀಷ್ಮ ಇನ್ನಿಲ್ಲ ಅಂತ ಬರೆದಿದ್ದರು. ಎಲ್ಲರಿಗೂ ಕಾಣಿಸಲೆಂದು ಒಂದೂವರೆ ಅಡಿ ಎತ್ತರದಲ್ಲಿ ಚಿತೆಯನ್ನು ನಿರ್ಮಾಣ ಮಾಡಲಾಗಿತ್ತು. ಚಿತೆಗೆ 500 ಕೆ.ಜಿ ಕಟ್ಟಿಗೆಯಲ್ಲಿ 300 ಶ್ರೀಗಂಧವನ್ನು ಬಳಸಲಾಗಿತ್ತು. ಉಳಿದ 200 ಕೆಜಿ ಹುಣಸೆ, ಸಾಮೆ, ಸರ್ವೆ ಹಾಗೂ ನೀಲಗಿರಿ ಮರಗಳ ಕಟ್ಟಿಗೆ ಬಳಕೆ ಮಾಡಲಾಗಿತ್ತು. ಜೊತೆಗೆ 30 ಕೆ.ಜಿ. ಕರ್ಪೂರವನ್ನು ಚಿತೆಗೆ ಹಾಕಲಾಗಿತ್ತು.

    ನಟ ಅಂಬರೀಶ್ ಅವರ ಅಗಲಿಕೆಗೆ ಇಡೀ ಭಾರತೀಯ ಸಿನಿಮಾರಂಗದವರೇ ಕಣ್ಣೀರಿಟ್ಟಿತ್ತು. ಬಳಿಕ ಪ್ರತಿ ಜಿಲ್ಲೆಯಲ್ಲೂ ಅವರ ಅಭಿಮಾನಿಗಳು ಪುಣ್ಯತಿಥಿ ಕಾರ್ಯಕ್ರಮ ಮಾಡಿದ್ದರು. ಅಂಬರೀಶ್ ಮೃತ ಮಟ್ಟ ಕೆಲವು ದಿನಗಳಲ್ಲೇ ಅವರ ಮದುವೆ ವಾರ್ಷಿಕೋತ್ಸವವಿತ್ತು. ಅಂದಿನ ದಿನ ಸುಮಲತಾ ಅವರು ಅಂಬರೀಶ್ ಬಗ್ಗೆ ಬರೆದು ಒಂದು ಭಾವನಾತ್ಮಕ ಪೋಸ್ಟ್ ಹಾಕಿದ್ದರು. ಪುತ್ರ ಅಭಿಷೇಕ್ ಕೂಡ ಮತ್ತೆ ತನ್ನ ಉದ್ಯೂಗದತ್ತ ಮುಖ ಮಾಡಿದ್ದು, ಅಪ್ಪನ ಫೋಟೋ ಕೈಯಲ್ಲಿ ಹಿಡಿದ ತನ್ನ ಫೋಟೋವನ್ನು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದರು. ಆ ಫೋಟೋದ ಮೇಲೆ ನನ್ನ ತಂದೆ ರೆಬೆಲ್ ನನ್ನನ್ನು ನೋಡುತ್ತಿದ್ದಾರೆ. ಮತ್ತೆ ಕೆಲಸದತ್ತ ಮುಖಮಾಡುವುದಾಗಿ ಬರೆದುಕೊಂಡಿದ್ದರು.

    https://www.youtube.com/watch?v=jlNS3zR6NqQ

    https://www.youtube.com/watch?v=1zAHuxijg6Q

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಪ್ಪನ ಫೋಟೋ ಹಿಡಿದು ಕೆಲಸಕ್ಕೆ ಹೊರಟ್ರು ಅಭಿಷೇಕ್ ಅಂಬರೀಶ್

    ಅಪ್ಪನ ಫೋಟೋ ಹಿಡಿದು ಕೆಲಸಕ್ಕೆ ಹೊರಟ್ರು ಅಭಿಷೇಕ್ ಅಂಬರೀಶ್

    ಬೆಂಗಳೂರು: ತಂದೆ ಅಂಬರೀಶ್ ನಿಧನದ ಬಳಿಕ ದುಃಖದಲ್ಲಿದ್ದ ಪುತ್ರ ಅಭಿಷೇಕ್ ಇಂದಿನಿಂದ ತಮ್ಮ ಉದ್ಯೋಗದತ್ತ ಮುಖ ಮಾಡಿದ್ದಾರೆ.

    ತಮ್ಮ ಫೇಸ್ ಬುಕ್ ಖಾತೆಯಲ್ಲಿ ಅಪ್ಪನ ಫೋಟೋ ಹಿಡಿದುಕೊಂಡಿರೋ ತನ್ನ ಫೋಟೋವೊಂದನ್ನು ಅಭಿಷೇಕ್ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಆ ಫೋಟೋದ ಮೇಲೆ ಮತ್ತೆ ಕೆಲಸಕ್ಕೆ ತೆರಳುತ್ತಿರುವೆ. ನನ್ನಪ್ಪ ರೆಬೆಲ್ ಇದನ್ನೆಲ್ಲ ನೋಡುತ್ತಿದ್ದಾರೆ ಅಂತಾ ಭಾವುಕವಾಗಿ ಬರೆದುಕೊಂಡಿದ್ದಾರೆ.

    ಸದ್ಯ ಅಪ್ಪನ ಫೋಟೋ ಹಿಡಿದು ಮತ್ತೆ ಕೆಲಸಕ್ಕೆ ಹೋಗುತ್ತಿರುವೆ ಅಂತಾ ಬರೆದಿರುವ ಅಭಿಗೆ ಅಭಿಮಾನಿಗಳು, ತಂದೆ ನಿಮಗೆ ಸದಾ ಹಾರೈಸುತ್ತಿರುತ್ತಾರೆ. ಹಾಗೆಯೇ ನಿಮ್ಮ ಸಿನಿಮಾ ಕ್ಷೇತ್ರದ ಜರ್ನಿ ಚೆನ್ನಾಗಿರಲಿ ಅಂತಾ ಎಲ್ಲರೂ ಶುಭ ಹಾರೈಸಿದ್ದಾರೆ.

    ಕಿಡ್ನಿ ಹಾಗೂ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅಂಬರೀಶ್ ಅವರು ನವೆಂಬರ್ 24ರಂದು ರಾತ್ರಿ ನಿಧನರಾಗಿದ್ದರು. ಅಂದೇ ಮಂಡ್ಯದಲ್ಲಿ ಬಸ್ ದುರಂತ ನಡೆದಿದ್ದು, ಘಟನೆ ನೋಡಿ ಸುಸ್ತಾಗಿದ್ದ ಅಂಬರೀಶ್ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆಂದು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂಬರೀಶ್ ನಿಧನಕ್ಕೆ ರಾಜಕೀಯ, ಚಿತ್ರರಂಗ ಸೇರಿದಂತೆ ದೇಶಾದ್ಯಂತ ಕಂಬನಿ ಮಿಡಿದಿತ್ತು.


    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv