Tag: ಅಭಿಷೇಕ್

  • ಜಪಾನ್ ಹಡಗಿನಲ್ಲಿದ್ದ ಕಾರವಾರದ ಅಭಿಷೇಕ್ ಸೇರಿದಂತೆ 119 ಭಾರತೀಯರು ವಾಪಸ್

    ಜಪಾನ್ ಹಡಗಿನಲ್ಲಿದ್ದ ಕಾರವಾರದ ಅಭಿಷೇಕ್ ಸೇರಿದಂತೆ 119 ಭಾರತೀಯರು ವಾಪಸ್

    – ವಿಶೇಷ ಏರ್ ಇಂಡಿಯಾ ವಿಮಾನದಲ್ಲಿ ಬಂದಿಳಿದ ಭಾರತೀಯರು
    – 4 ದೇಶಗಳ ಪ್ರಜೆಗಳನ್ನು ಕರೆತಂದ ಭಾರತ

    ನವದೆಹಲಿ/ಕಾರವಾರ: ಜಪಾನ್ ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿದ್ದ ಕಾರವಾರದ ಅಭಿಷೇಕ್ ಸೇರಿದಂತೆ 119 ಭಾರತೀಯರನ್ನು ಭಾರತ ಸರ್ಕಾರ ಸುರಕ್ಷಿತವಾಗಿ ಕರೆ ತರುವಲ್ಲಿ ಯಶಸ್ವಿಯಾಗಿದೆ.

    119 ಮಂದಿ ಭಾರತೀಯರಿದ್ದ ಏರ್ ಇಂಡಿಯಾ ವಿಶೇಷ ವಿಮಾನ ಟೋಕಿಯೋದಿಂದ ಹೊರಟು ಇಂದು ಬೆಳಗ್ಗೆ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ.

    ಈ ವೇಳೆ ಸರ್ಕಾರ ಮಾನವೀಯತೆ ತೋರಿಸಿದ್ದು, ಹಡಗಿನಲ್ಲಿದ್ದ ಶ್ರೀಲಂಕಾ, ನೇಪಾಳ, ದಕ್ಷಿಣ ಆಫ್ರಿಕಾ, ಪೆರು ದೇಶದ ಪ್ರಜೆಗಳನ್ನು ಕರೆದುಕೊಂಡು ಬಂದಿದೆ.

    ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿ ಸಿಬ್ಬಂದಿ ಸೇರಿ 132 ಭಾರತೀಯರು ಸೇರಿ ಬೇರೆ ದೇಶದ 6 ಮಂದಿ ಪ್ರಯಾಣಿಸುತ್ತಿದ್ದರು. ಪರೀಕ್ಷೆ ನಡೆಸಿದ ವೇಳೆ 16 ಮಂದಿಯಲ್ಲಿ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಅವರು ಜಪಾನಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಳಿದ ಭಾರತೀಯರು ಇಂದು ಲ್ಯಾಂಡ್ ಆಗಿದ್ದಾರೆ.

    ಅಭಿಷೇಕ್ ಅವರ ನವದೆಹಲಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಕಾರವಾರದ ಪದ್ಮನಾಭ ನಗರದ ಅಭಿಷೇಕ್ ಮನೆಗೆ ತರಳಿ ಸಂಪರ್ಕಿಸಲು ಪ್ರಯತ್ನಿಸಿದೆ. ಈ ವೇಳೆ ದೆಹಲಿಗೆ ಬಂದಿರುವ ಅಭಿಷೇಕ್ ಅವರನ್ನು ಹೆಚ್ಚಿನ ತಪಾಸಣೆಗೆ ಹರ್ಯಾಣಕ್ಕೆ ಕರೆದುಕೊಂಡು ಹೋಗಿದ್ದಾರೆ. 14 ದಿನಗಳ ಕಾಲ ಅವರ ಆರೋಗ್ಯವನ್ನು ಪರೀಕ್ಷಿಸಿ ಬಳಿಕ ಅವರು ಆಸ್ಪತ್ರೆಯಿಂದ ಹೊರ ಬರಲಿದ್ದಾರೆ ಎಂದು ಮನೆಯವರು ತಿಳಿಸಿದ್ದಾರೆ.

    ಜಪಾನಿನ ಯೊಕೊಹಾಮ ಬಂದರಿನಿಂದ ಜ.20 ರಂದು ಹೊರಟಿದ್ದ ಡೈಮಂಡ್ ಪ್ರಿನ್ಸೆಸ್ ಹಡಗು ಜ.25 ರಂದು ಹಾಂಕಾಂಗ್ ತಲುಪಿತ್ತು. ಈ ವೇಳೆ ಕೊರೊನಾ ವೈರಸ್ ಹರಡಿತ್ತು. ಫೆ.1 ರಂದು ಯೊಕೊಹಾಮ ಬಂದ­ರಿನಲ್ಲಿ ನಿಂತಿದ್ದ ಈ ಹಡಗಿನಿಂದ ಯಾರೂ ಹೊರ ಬಾರದಂತೆ ದಿಗ್ಭಂದನ ವಿಧಿಸಲಾಗಿತ್ತು. ಇದಾದ ಬಳಿಕ ಹಡಗಿನಲ್ಲಿದ್ದ ಇಬ್ಬರು ವೃದ್ಧರು ಮೃತಪಟ್ಟಿದ್ದರು.

  • ಎಚ್‍ಡಿಕೆ ಬಗ್ಗೆ ಮಾತನಾಡುವಷ್ಟು ದೊಡ್ಡವನು ನಾನಲ್ಲ: ಅಭಿಷೇಕ್ ಅಂಬರೀಷ್

    ಎಚ್‍ಡಿಕೆ ಬಗ್ಗೆ ಮಾತನಾಡುವಷ್ಟು ದೊಡ್ಡವನು ನಾನಲ್ಲ: ಅಭಿಷೇಕ್ ಅಂಬರೀಷ್

    ಬೆಂಗಳೂರು: ಮಂಗಳವಾರ ಸಿಎಂ ಸ್ಥಾನಕ್ಕೆ ಹೆಚ್.ಡಿ ಕುಮಾರಸ್ವಾಮಿ ಅವರು ರಾಜೀನಾಮೆ ನೀಡಿರುವ ಹಿನ್ನೆಲೆ ನಟ ಅಭಿಷೇಕ್ ಅಂಬರೀಶ್ ಅವರು ಮಾತನಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಇಂದು ರೆಬೆಲ್ ಸ್ಟಾರ್ ಅಂಬರೀಶ್ ಅವರ 8ನೇ ತಿಂಗಳ ಪುಣ್ಯತಿಥಿಯಾಗಿದ್ದು, ಸುಮಲತಾ ಅನುಪಸ್ಥಿತಿಯಲ್ಲಿ ಅಭಿಷೇಕ್ ಅಂಬರೀಷ್ ಮತ್ತು ರಾಕ್‍ಲೈನ್ ವೆಂಕಟೇಶ್ ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿಗೆ ಪೂಜೆ ಸಲ್ಲಿಸಿದರು.

    ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸದ್ಯದ ರಾಜಕೀಯ ವಿದ್ಯಮಾನಗಳ ಬಗ್ಗೆ ಮತ್ತು ಮುಂದಿನ ಸರ್ಕಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಒಬ್ಬ ಸಂಸದೆಯ ಮಗನಾಗಿ ರಾಜಕೀಯದ ಬಗ್ಗೆ ಮಾತನಾಡಲು ನಮಗೆ ಅಧಿಕಾರವಿಲ್ಲ. ಆದರೆ ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ಈ ಬಗ್ಗೆ ನಾನು ಮಾತನಾಡಬಹುದು ಅಷ್ಟೇ. ಏನಾಗಿದೆ ಎನ್ನುವುದು ಮಾಧ್ಯಮಗಳ ಮೂಲಕ ಇಡೀ ರಾಜ್ಯವೇ ನೋಡಿದೆ. ಸರ್ಕಾರದಲ್ಲಿ ಬದಲಾವಣೆಯಾಗಿದೆ. ರಾಜ್ಯದಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ಕೂಡ ಅಭಿವೃದ್ಧಿ ಆಗಲಿ, ರಾಜ್ಯ ಉದ್ಧಾರವಾಗಲಿ, ಒಳ್ಳೆಯ ಕೆಲಸವಾಗಲಿ ಎಂದು ನಾವು ಬೇಡಿಕೆ ಇಡುತ್ತೇವೆ ಎಂದರು.

    ಸಿಎಂ ಬಗ್ಗೆ ಮಾತನಾಡುವಷ್ಟು ದೊಡ್ಡವನು ನಾನಲ್ಲ. ಅಧಿಕಾರ ಶಾಶ್ವತವಲ್ಲ ಎಂದು ಎಲ್ಲರೂ ಹೇಳಿದ್ದಾರೆ. ರಾಜಕಾರಣಿಗಳೆಲ್ಲರೂ ಮಾತನಾಡಿದ್ದಾರೆ. ಇದು ಅವರಿಗೆ ಗೊತ್ತಿಲ್ಲದ ವಿಚಾರವೇನಲ್ಲ. ನಾವು ಅವರಿಗೆ ಸಲಹೆ ನೀಡುವಷ್ಟು ದೊಡ್ಡವರು ಅಲ್ಲ. ಅವರು ಅಧಿಕಾರದಲ್ಲಿ ಇದ್ದರೆ ಒಳ್ಳೆಯದು. ಇಲ್ಲದಿದ್ದರೆ ಒಳ್ಳೆಯದು ಎನ್ನುವ ಮನೋಭಾವವಿಲ್ಲ. ಅವರು ಅಧಿಕಾರದಲ್ಲಿದ್ದರೂ ಕೂಡ ನಮ್ಮ ತಾಯಿ ಅವರ ಜೊತೆ ಕೆಲಸ ಮಾಡಲು ತಯಾರಿದ್ದರು. ಈಗ ಬೇರೆ ಸರ್ಕಾರ ಬಂದಿದೆ. ಇವರ ಜೊತೆ ಕೂಡ ನಮ್ಮ ತಾಯಿ ಕೈ ಜೋಡಿಸಿ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.

    ಮುಂದೆ ಯಾವ ಸರ್ಕಾರ ಬಂದರೂ ಆಗ ತಮ್ಮ ತಾಯಿ ಎಂಪಿ ಆಗಿದ್ದರೆ, ಅವರ ಜೊತೆಗೂಡಿ ಕೆಲಸ ಮಾಡುತ್ತಾರೆ. ಅಭಿವೃದ್ಧಿ ಕೆಲಸ ಆಗಬೇಕೆಂದರೆ ವಿರೋಧ ಪಕ್ಷ ಅಥವಾ ಆಡಳಿತ ಪಕ್ಷ ಯಾವುದಾದರೂ ಆಗಲಿ ನಾವು ಕೆಲಸ ಮಾಡಲೇಬೇಕು. ಯಾವುದೇ ಸರ್ಕಾರ ಬಂದರೂ ನಮ್ಮ ಜವಾಬ್ದಾರಿ ನಾವು ನಿಭಾಯಿಸಲು ತಯಾರಿದ್ದೇವೆ ಎಂದಿದ್ದಾರೆ.

  • ದೇವಸ್ಥಾನದಲ್ಲಿ ಅಭಿಮಾನಿಯಿಂದ ಸುಮಲತಾ, ಅಭಿಷೇಕ್‍ಗೆ ಸಕ್ಕರೆ-ತುಪ್ಪದ ತುಲಾಭಾರ

    ದೇವಸ್ಥಾನದಲ್ಲಿ ಅಭಿಮಾನಿಯಿಂದ ಸುಮಲತಾ, ಅಭಿಷೇಕ್‍ಗೆ ಸಕ್ಕರೆ-ತುಪ್ಪದ ತುಲಾಭಾರ

    ಧಾರವಾಡ: ಮಂಡ್ಯ ಸಂಸದೆ ಸುಮಲತಾ ಅವರ ಪುತ್ರ ಅಭಿಷೇಕ್ ಅಂಬರೀಶ್ ಚೊಚ್ಚಲ ‘ಅಮರ್’ ಚಿತ್ರದ ಪ್ರಚಾರಕ್ಕಾಗಿ ಧಾರವಾಡಕ್ಕೆ ಭೇಟಿ ನೀಡಿದ್ದಾರೆ.

    ಧಾರವಾಡ ಹೊರವಲಯದ ನುಗ್ಗಿಕೇರೆ ಹನುಮಂತ ದೇವಸ್ಥಾನದಲ್ಲಿ ತುಪ್ಪ ಮತ್ತು ಸಕ್ಕರೆ ತುಲಾಭಾರ ಮಾಡಿಸಿದ್ದಾರೆ. ಸುಮಲತಾ ಅಂಬರೀಶ್ ಗೆ 75 ಕೆಜಿ ಸಕ್ಕರೆ, 15 ಕೆಜಿ ತುಪ್ಪದಿಂದ ತುಲಾಭಾರ ಮಾಡಿದರೆ, ಅಭಿಷೇಕ್ ಅವರಿಗೆ 100 ಕೆಜಿ ಸಕ್ಕರೆ, 15 ಕೆಜಿ ತುಪ್ಪದಲ್ಲಿ ತುಲಾಭಾರ ಮಾಡಿಸಲಾಗಿದೆ. ಅಭಿಮಾನಿ ನಾರಾಯಣ್ ಕಲಾಲ್ ಅಪೇಕ್ಷೆ ಮೇರೆಗೆ ಈ ತುಲಾಭಾರ ನಡೆದಿದೆ. ಈ ವೇಳೆ ನಟ ದೊಡ್ಡಣ್ಣ, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ನಿರ್ದೇಶಕರಾದ ಯೋಗರಾಜ್ ಭಟ್, ನಾಗಶೇಖರ್ ಉಪಸ್ಥಿತರಿದ್ದರು.

    ಇದೇ ವೇಳೆ ಮಾತಾನಾಡಿದ ಅಭಿಷೇಕ್, ತುಲಾಭಾರ ಕಾರ್ಯಕ್ರಮ ಇರುವುದು ನನಗೆ ಗೊತ್ತಿರಲಿಲ್ಲ. ಇಲ್ಲಿ ಬಂದ ಮೇಲೆ ಗೊತ್ತಾಯಿತು. ನನ್ನ ತುಲಾಭಾರ ಮಾಡುವುದಕ್ಕೆ ಮೂರು ಸರಿ ಯೋಚಿಸಬೇಕು. ಏಕೆಂದರೆ ನನ್ನ ಭಾರಕ್ಕೆ ಎಷ್ಟು ಅಕ್ಕಿ ಬೇಕು ಎಂದು ಯೋಚನೆ ಮಾಡಬೇಕು. ಆದರೂ ಸಹ ಅವರು ಮಾಡಿದ್ದಾರೆ. ನನಗೆ ತುಂಬಾ ಖುಷಿಯಾಯಿತು. ಚುನಾವಣೆಯಾಗಲಿ, ಸಿನಿಮಾವಾಗಲಿ ಅವರು ಇದು ಮಾಡಿಲ್ಲ. ಅವರು ಪಕ್ಕಾ ಅಂಬರೀಶಣ್ಣನ ಅಭಿಮಾನಿ. ನಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ತುಲಾಭಾರ ಮಾಡಿದ್ದಾರೆ. ಅಮರ್ ಸಿನಿಮಾಗೆ ಇಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಲೈಫ್‍ನಲ್ಲಿ ಮೊದಲ ಸಲ ಹುಬ್ಬಳ್ಳಿ ಕಡೆ ಬಂದಿದ್ದೇನೆ. ಈ ಕಡೆ ಜನ ಕೇಳಿಕೊಂಡ ಹಿನ್ನೆಲೆಯಲ್ಲಿ ನಾನು ಅಮರ ಚಿತ್ರದ ಪ್ರಚಾರಾರ್ಥ ಬಂದಿದ್ದೇವೆ ಎಂದರು.

    ಸುಮಲತಾ ಅವರು ಕೂಡ ಮಾತನಾಡಿ, ಅಂಬರೀಶ್ ಅವರ ಜೊತೆ ಸುಮಾರು ಆರೇಳು ವರ್ಷಗಳ ಹಿಂದೆ ಹುಬ್ಬಳ್ಳಿ-ಧಾರವಾಡ ಕಡೆ ಬಂದಿದ್ದೆ. ಅದಾದ ಬಳಿಕ ನಾನು ಇಂದು ಬಂದಿದ್ದೇನೆ. ನನ್ನ ಚುನಾವಣೆ ವೇಳೆ ಸಾಕಷ್ಟು ಜನ ಹುಬ್ಬಳ್ಳಿ ಕಡೆಯಿಂದಲೂ ಬೆಂಬಲ ನೀಡಲು ಮಂಡ್ಯಕ್ಕೆ ಬಂದಿದ್ದರು. ಅಂಬರೀಶ್ ಅವರ ಅಭಿಮಾನಿಗಳು ನನ್ನ ಗೆಲುವಿಗೆ ಈ ಕಡೆಯಲ್ಲೂ ಪೂಜೆ ಸಲ್ಲಿಸಿ ಆಶೀರ್ವಾದ ಮಾಡಿದ್ದರು. ಹಾಗಾಗಿ ಅವರನ್ನು ಭೇಟಿ ಮಾಡೋಣ ಎಂದು ಇಲ್ಲಿಗೆ ಬಂದಿದ್ದೇವೆ ಎಂದರು.

    ಬಳಿಕ ಮಾತನಾಡಿದ ಅವರು, ಅಮರ್ ಚಿತ್ರದ ಪ್ರಚಾರಕ್ಕೆ ಬೇರೆ ಕಡೆ ಹೋಗಿದ್ದೇವು. ಉತ್ತರ ಕರ್ನಾಟಕ ಭಾಗಕ್ಕೆ ಬಂದಿರಲಿಲ್ಲ. ಹುಬ್ಬಳ್ಳಿ ವಿಶೇಷವಾದ ಊರು. ಹಾಗಾಗಿ ಮೊದಲ ಬಾರಿಗೆ ಹುಬ್ಬಳ್ಳಿಗೆ ಬಂದಿದ್ದೇವೆ. ಹೀಗಾಗಿ ಇಲ್ಲಿಂದ ಉತ್ತರ ಕನ್ನಡ ಚಿತ್ರದ ಪ್ರಮೋಷನ್ ಆರಂಭಿಸುತ್ತಿದ್ದೇವೆ. ಅಭಿಷೇಕ್ ಒಂದಿಷ್ಟು ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಲಿದ್ದಾರೆ. ನಾನು ಚುನಾವಣೆಯಲ್ಲಿ ಯಾವುದೇ ಹರಕೆ ಹೊತ್ತಿರಲಿಲ್ಲ. ಆದರೆ ನನ್ನ ಪರವಾಗಿ ಸಾಕಷ್ಟು ಜನ ಹರಕೆ ಹೊತ್ತಿದ್ದರು. ಅವರ ಆಸೆಯಂತೆ ಧಾರವಾಡದಲ್ಲಿ ತುಲಾಭಾರ ನಡೆದಿದೆ ಎಂದು ಸುಮಲತಾ ಹೇಳಿದರು.

  • ನಿಖಿಲ್ ರಾಜಕೀಯ ಪ್ರಬುದ್ಧತೆಗೆ ಎಸ್‍ಎಂಕೆ ಮೆಚ್ಚುಗೆ

    ನಿಖಿಲ್ ರಾಜಕೀಯ ಪ್ರಬುದ್ಧತೆಗೆ ಎಸ್‍ಎಂಕೆ ಮೆಚ್ಚುಗೆ

    ಬೆಂಗಳೂರು: ಲೋಕಸಭಾ ಚುನಾವಣೆಯ ಸೋಲಿನ ಹೊಣೆಯನ್ನ ತಾನೇ ವಹಿಸಿಕೊಳ್ಳುತ್ತೇನೆ ಎಂದು ಹೇಳಿ ನಟ ಅಭಿಷೇಕ್ ಅವರ ಮೊದಲ ಸಿನಿಮಾಗೆ ಶುಭಕೋರಿದ್ದ ನಿಖಿಲ್‍ರ ನಡೆಗೆ ಮಾಜಿ ಸಿಎಂ ಎಂಎಸ್ ಕೃಷ್ಣ ಮೆಚ್ಚುಗೆ ಸೂಚಿಸಿದ್ದಾರೆ.

    ನಿಖಿಲ್ ನಡೆಯ ಕುರಿತು ಟ್ವೀಟ್ ಮಾಡಿರುವ ಎಂಎಸ್‍ಕೆ, ಅಭಿಷೇಕ್ ಅವರ ಹೊಸ ಸಿನಿಮಾಗೆ ಶುಭ ಕೋರಿದ್ದ ನಿಮ್ಮ ಪೋಸ್ಟನ್ನು ನಾನು ನೋಡಿದ್ದೇನೆ. ನಿಮ್ಮ ನಡೆಯಿಂದ ಪ್ರಭಾವಿತನಾಗಿದ್ದು, ಇದನ್ನೇ ರಾಜಕೀಯ ಪ್ರಬುದ್ಧತೆ ಎಂದು ಕರೆಯುತ್ತೇವೆ. ರಾಜಕೀಯ ಬದುಕಿನಲ್ಲಿ ಚುನಾವಣೆಗಳು ಬರುತ್ತವೆ ಹೋಗುತ್ತವೆ. ಆದರೆ ಬದುಕು ರಾಜಕಾರಣಕ್ಕಿಂತಲೂ ದೊಡ್ಡದು. ಇದೇ ರೀತಿ ಮುಂದುವರಿದರೆ, ನಿನಗೆ ಜಯ ಖಂಡಿತ ಲಭಿಸುತ್ತದೆ ಎಂದು ಶುಭ ಹಾರೈಸಿದ್ದಾರೆ.

    ಮಂಡ್ಯ ಸೋಲಿನ ನಂತರವೂ ಅಭಿಷೇಕ್‍ಗೆ ಶುಭ ಕೋರಿದ್ದ ನಿಖಿಲ್, ಶುಕ್ರವಾರ ಬಿಡುಗಡೆಯಾಗುತ್ತಿರುವ ನನ್ನ ಸಹೋದರ ಅಭಿ ನಟನೆಯ ಚೊಚ್ಚಲ `ಅಮರ್’ ಸಿನಿಮಾ ಯಶಸ್ಸನ್ನು ಕಾಣಲಿ ಎಂದು ಹಾರೈಸುತ್ತಿದ್ದೇನೆ. ಎಲ್ಲರೂ ದಯವಿಟ್ಟು ಥಿಯೇಟರ್ ಗಳಿಗೆ ಹೋಗಿ `ಅಮರ್’ ಚಿತ್ರವನ್ನು ನೋಡಿ. ಅಭಿ ಸಿನಿಮಾದಲ್ಲಿ ಚೆನ್ನಾಗಿ ಅಭಿನಯಿಸಿರುತ್ತಾರೆ ಎಂಬ ನಂಬಿಕೆ ಇದೆ ಎಂದು ಮೊದಲಿಗೆ ಅಭಿಷೇಕ್‍ಗೆ ವಿಶ್ ಮಾಡಿದ್ದರು.

    ನಿಖಿಲ್ ವಿಶ್‍ಗೆ ಪ್ರತಿಕ್ರಿಯೆ ನೀಡಿದ್ದ ಅಭಿಷೇಕ್, ಧನ್ಯವಾದ ಗೆಳೆಯ. ನಿಜಕ್ಕೂ ಇದು ಖುಷಿಯ ವಿಚಾರ. ನಿನಗೂ ಗೊತ್ತಿರುತ್ತೆ. ಮೊದಲ ಸಿನಿಮಾ ಬಿಡುಗಡೆ ಆಗುವ ದಿನ ಹೇಗಿತ್ತು ಅನ್ನೋದು. ನಿನ್ನ ಮಾತುಗಳು ನನ್ನ ಮೇಲಿರುವ ಪ್ರೀತಿಯನ್ನ ತೋರುತ್ತದೆ. ಮತ್ತು ಕನ್ನಡ ಸಿನಿಮಾ ರಂಗದಲ್ಲಿನ ಒಗ್ಗಟ್ಟನ್ನು ಪ್ರದರ್ಶಿಸುತ್ತದೆ. ನಾವಿಬ್ಬರು ಇದೇ ರೀತಿ ಮುಂದುವರಿಯೋಣ. ಒಬ್ಬ ಸ್ನೇಹಿತನಾಗಿ ನಿನ್ನ ಯಶಸ್ಸನ್ನು ಸದಾ ಬಯಸುತ್ತೇನೆ. ಹಿನ್ನಡೆಗಳಿಂದ ನಿರಾಶೆಗೊಳ್ಳಬೇಡ. ಏಕೆಂದರೆ ಅದು ಜೀವನದ ಭಾಗವೆಂದು ನಮಗೆ ತಿಳಿದಿದೆ.

    ಮಂಡ್ಯದ ಜಿಲ್ಲೆಯ ಬಗ್ಗೆ ನಿಮ್ಮ ಮಾತುಗಳು ಬಹಳ ಪ್ರೋತ್ಸಾಹದಾಯಕವಾಗಿವೆ. ನೀನು ನನ್ನ ತಾಯಿಯ ಪ್ರಯತ್ನವನ್ನು ಬೆಂಬಲಿಸುತ್ತಾ ಮುಂದುವರಿದರೆ ನಾವು ಎಲ್ಲರೂ ಮಂಡ್ಯದ ಸುಧಾರಣೆಗೆ ಒಟ್ಟಿಗೆ ಕೆಲಸ ಮಾಡಬಹುದು. ಮಂಡ್ಯದ ಬಗ್ಗೆ ನೀವು ಹೇಳಿರುವಂತೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಅನ್ವಯವಾಗಲಿ. ನಿಮ್ಮ ಮಾತುಗಳಿಗೆ ಧನ್ಯವಾದಗಳು ಎಂದಿದ್ದರು.

  • ಮಂತ್ರಿ ಸ್ಥಾನ ಬೇಡ, ಅಭಿವೃದ್ಧಿಗೆ ಸಹಕಾರ ನೀಡಿದರೆ ಅಷ್ಟೇ ಸಾಕು: ಸುಮಲತಾ

    ಮಂತ್ರಿ ಸ್ಥಾನ ಬೇಡ, ಅಭಿವೃದ್ಧಿಗೆ ಸಹಕಾರ ನೀಡಿದರೆ ಅಷ್ಟೇ ಸಾಕು: ಸುಮಲತಾ

    ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ನನಗೆ ಮಂತ್ರಿ ಸ್ಥಾನ ಸಿಗಬೇಕು ಅನ್ನೊದು ಸರಿಯಲ್ಲ. ಅವರು ಅಭಿವೃದ್ಧಿ ಕೆಲಸಗಳಿಗೆ ಸಹಕಾರ ನೀಡಿದರೇ ಅಷ್ಟೇ ಸಾಕು ಎಂದು ನೂತನ ಸಂಸದೆ ಸುಮಲತಾ ಅಂಬರೀಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಇಂದು ಸುಮಲತಾ ಅವರು ತಮ್ಮ ಪುತ್ರನ ಮೊದಲ ಚಿತ್ರ ಅಮರ್ ಪ್ರಮೋಷನ್‍ಗಾಗಿ ಮಂಡ್ಯದ ಸಂಜಯ ಚಿತ್ರಮಂದಿರಕ್ಕೆ ಆಗಮಿಸಿ, ಅಭಿಮಾನಿಗಳ ಜೊತೆ ಸ್ವಲ್ಪ ಸಮಯ ಮಾತುಕತೆ ನಡೆಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಜೂನ್ 6 ಅಥವಾ 7 ರಂದು ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಇರಬಹುದು ಎಂದು ತಿಳಿಸಿದರು.

    ಮೋದಿ ಸಂಪುಟದಲ್ಲಿ ನಿಮ್ಮ ಹೆಸರೂ ಇತ್ತಾ ಎಂಬ ಪ್ರಶ್ನೆಗೆ ಉತ್ತರಿಸಿ, ನನಗೆ ಮಂತ್ರಿ ಸ್ಥಾನ ಸಿಗಬೇಕು ಅನ್ನೋದು ಸರಿಯಲ್ಲ. ಅವರು ಅಭಿವೃದ್ಧಿಗೆ ಸಹಕಾರ ನೀಡಿದರೆ ಅಷ್ಟೇ ಸಾಕು. ನಮ್ಮ ಯೋಜನೆಗಳಿಗೆ ಅನುಮೋದನೆ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.

    ಮಂಡ್ಯ ನಗರದ ಕೆ.ಆರ್ ವೃತ್ತದಲ್ಲಿರುವ ಸಂಜಯ ಚಿತ್ರ ಮಂದಿರಕ್ಕೆ ಆಗಮಿಸಿದ ಸುಮಲತಾ ಅಂಬರೀಶ್ ಅವರನ್ನು ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು. ನಂತರ ಬಾಲ್ಕಾನಿಗೆ ಆಗಮಿಸಿ ಸುಮಲತಾ ಅವರು ಚಿತ್ರ ವೀಕ್ಷಕರಿಗೆ ಕೈ ಬೀಸಿ ಕೃತಜ್ಞತೆ ಸಲ್ಲಿಸಿದರು.

    ಪುತ್ರನ ಅಭಿನಯದ ಬಗ್ಗೆ ನಾನು ಹೇಳಬಾರದು, ಅಭಿಮಾನಿಗಳು ಹೇಳಬೇಕು. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಮಂಡ್ಯ ಅಭಿಮಾನಿಗಳಂತೆ ಇತರೆ ಜಿಲ್ಲೆಯ ಅಭಿಮಾನಿಗಳು ಚಿತವನ್ನು ಸ್ವಾಗತಿಸುವ ವಿಶ್ವಾಸವಿದೆ ಎಂದರು. ನನಗೆ ಅಂಬಿ ಅಭಿನಯದ ಒಲವಿನ ಉಡುಗೊರೆ ಹಾಡು ತುಂಬಾ ಇಷ್ಟ. ಹಾಗಾಗಿ ನಾನೇ ಹೇಳಿ ಆ ಹಾಡನ್ನು ಈ ಚಿತ್ರಕ್ಕೆ ಹಾಕಿಸಿದ್ದೇನೆ ಎಂದು ಖುಷಿಯನ್ನು ಹಂಚಿಕೊಂಡರು.

  • ‘ಅಮರ್’ ಸಿನಿಮಾದ ಕೆಲ ದೃಶ್ಯಗಳಲ್ಲಿ ಅಂಬರೀಶ್ ನೆನಪಾಗ್ತಾರೆ: ಸುಮಲತಾ

    ‘ಅಮರ್’ ಸಿನಿಮಾದ ಕೆಲ ದೃಶ್ಯಗಳಲ್ಲಿ ಅಂಬರೀಶ್ ನೆನಪಾಗ್ತಾರೆ: ಸುಮಲತಾ

    ಬೆಂಗಳೂರು: ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ನಟಿಸುತ್ತಿರುವ ‘ಅಮರ್’ ಚಿತ್ರ ಇಂದು ಬಿಡುಗಡೆಯಾಗಿದ್ದು, ಮಗನ ಸಿನಿಮಾದ ಕೆಲವು ದೃಶ್ಯಗಳನ್ನ ಸುಮಲತಾ ಅವರು ಅಭಿಮಾನಿಗಳೊಂದಿಗೆ ಕುಳಿತು ನೋಡಿದ್ದಾರೆ.

    ‘ಅಮರ್’ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಸುಮಲತಾ ಅವರು ಬೆಂಗಳೂರಿನ ನರ್ತಕಿ ಚಿತ್ರಂದಿರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಗನ ಸಿನಿಮಾದ ಕೆಲವು ದೃಶ್ಯಗಳನ್ನು ಅಭಿಮಾನಿಗಳೊಂದಿಗೆ ಕುಳಿತು ನೋಡಿದರು. ಆ ಬಳಿಕ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, ನಿನ್ನೆಯಷ್ಟೇ ಪೂರ್ಣ ಸಿನಿಮಾವನ್ನು ಕುಟುಂಬದೊಂದಿಗೆ ನೋಡಿದ್ದೆ. ಇಂದು ಅಭಿಮಾನಿಗಳ ಭೇಟಿಗೆ ಆಗಮಿಸಿದ್ದೆ. ಅಂಬರೀಶ್ ಅಭಿಮಾನಿಗಳ ಪ್ರೀತಿ ‘ಅಮರ್’ ಇಷ್ಟೊಂದು ಒಳ್ಳೆ ಒಪನಿಂಗ್ ಪಡೆದಿದೆ. ಸಿನಿಮಾದ ಕೆಲವು ದೃಶ್ಯಗಳಲ್ಲಿ ಅಂಬರೀಶ್ ನೆನಪಾಗುತ್ತಾರೆ. ಅವರು ಗಳಿಸಿದ ಪ್ರೀತಿಯನ್ನು ಅಭಿಷೇಕ್ ಗಳಿಸಲು ಸಾಕಷ್ಟು ಪ್ರಯತ್ನ ಪಡಬೇಕಿದೆ ಎಂದರು.

    ಮೊದಲ ಸಿನಿಮಾ ನನಗೆ ಇನ್ನು ಅಭಿ ಚಿಕ್ಕವನಂತೆ ಕಾಣುತ್ತಾರೆ. ಆದ್ದರಿಂದಲೇ ಅವರ ಮೊದಲ ಹೆಜ್ಜೆ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ನನ್ನ ಪರೀಕ್ಷೆಯಲ್ಲಿ ನಾನು ಪಾಸ್ ಆಗಿದ್ದೆ, ಇಂದು ಅಭಿಷೇಕ್ ನಿನ್ನ ಪರೀಕ್ಷೆ ಎಂದು ಹೇಳಿದ್ದೆ. ಇದರಲ್ಲೂ ಅಭಿ ಪಾಸ್ ಆಗಿದ್ದು, ಅಂಬರೀಶ್ ಅವರ ಅಭಿಮಾನಿಗಳ ಪ್ರೀತಿಗೆ ಉತ್ತಮ ಪ್ರಾರಂಭ ಸಿಕ್ಕಿದೆ ಎಂದರು. ಇತ್ತ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದ ಅಭಿಷೇಕ್ ಅವರು, ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಸಂತಸ ಹಂಚಿಕೊಂಡರು.

    ಸಿನಿಮಾ ಬಿಡುಗಡೆ ಮುನ್ನ ಸ್ಯಾಂಡಲ್‍ವುಡ್ ನಟರಾದ ದರ್ಶನ್, ಸುದೀಪ್, ಉಪೇಂದ್ರ ಸೇರಿದಂತೆ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ, ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಭಾರತ ತಂಡದ ಕ್ರಿಕೆಟ್ ಆಟಗಾರ ಕೆ.ಎಸ್ ರಾಹುಲ್ ಶುಭ ಕೋರಿದ್ದರು. ರಾಜ್ಯಾದ್ಯಂತ ಅಭಿಷೇಕ್  ಅಭಿನಯದ ಅಮರ್ ಸಿನಿಮಾ  ಸುಮಾರು 300ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದೆ. ಚಿತ್ರಕ್ಕೆ ನಾಗಶೇಖರ್ ಅವರ ನಿರ್ದೇಶನವಿದ್ದು, ತಾನ್ಯ ಹೋಪ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಸಂದೇಶ್ ನಾಗರಾಜ್ ನಿರ್ಮಾಣದಲ್ಲಿ ‘ಅಮರ್’ ಸಿನಿಮಾ ಮೂಡಿಬಂದಿದೆ.

  • ಯಂಗ್ ರೆಬೆಲ್‍ಗೆ ಸ್ಯಾಂಡಲ್‍ವುಡ್‍ನಿಂದ ಶುಭಾಶಯಗಳ ಮಹಾಪೂರ

    ಯಂಗ್ ರೆಬೆಲ್‍ಗೆ ಸ್ಯಾಂಡಲ್‍ವುಡ್‍ನಿಂದ ಶುಭಾಶಯಗಳ ಮಹಾಪೂರ

    -ಗೆಳೆಯನಿಗಾಗಿ ವಿಡಿಯೋ ಮಾಡಿದ ಕ್ರಿಕೆಟಿಗ ಕೆ.ಎಲ್ ರಾಹುಲ್

    ಬೆಂಗಳೂರು: ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ನಟಿಸುತ್ತಿರುವ “ಅಮರ್” ಚಿತ್ರ ಇಂದು ಬಿಡುಗಡೆ ಆಗಲಿದ್ದು, ಚಿತ್ರ ಬಿಡುಗಡೆಗೂ ಮುನ್ನ ಸ್ಯಾಂಡಲ್‍ವುಡ್ ನಟರಾದ ದರ್ಶನ್, ಸುದೀಪ್, ಉಪೇಂದ್ರ, ಮೆಗಾಸ್ಟಾರ್ ಚಿರಂಜೀವಿ, ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಭಾರತ ತಂಡದ ಕ್ರಿಕೆಟ್ ಆಟಗಾರ ಕೆ.ಎಸ್ ರಾಹುಲ್ ಶುಭ ಕೋರಿದ್ದಾರೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಟ್ವಿಟ್ಟರಿನಲ್ಲಿ, ಯಂಗ್ ರೆಬೆಲ್ ಸ್ಟಾರ್ ನಮ್ಮ ಅಭಿ ಅಭಿನಯದ `ಅಮರ್’ ಇಂದು ಬಿಡುಗಡೆಯಾಗುತ್ತಿದೆ. ಈ ಚಿತ್ರವೂ ಭರ್ಜರಿ ಯಶಸ್ಸು ಕಾಣಲಿ ಎಂದು ಆಶಿಸುತ್ತೇನೆ. ಅಪ್ಪಾಜಿಗಿಂತಲೂ ಇನ್ನು ಹೆಚ್ಚು ಎತ್ತರಕ್ಕೆ ಅವರ ಮಗ ಬೆಳೆಯಲಿ. ನಿಮ್ಮ ಪ್ರೀತಿ- ಪ್ರೋತ್ಸಾಹ ಸದಾ ಹೀಗೆ ಇರಲಿ. ಇಡೀ ಚಿತ್ರತಂಡಕ್ಕೆ ನನ್ನ ಶುಭ ಹಾರೈಕೆಗಳು ಎಂದು ಟ್ವೀಟ್ ಮಾಡಿದ್ದಾರೆ.

    ಕಿಚ್ಚ ಸುದೀಪ್ ಅವರು `ಅಭಿ ನಿನಗೆ ಶುಭಾಶಯಗಳು. ಚಿತ್ರ ನಿನಗೆ ಹೊಸದಲ್ಲ ಆದರೆ ಮೊದಲ ಹೆಜ್ಜೆ ಮುಖ್ಯವಾಗುತ್ತದೆ. ಚಿತ್ರದಲ್ಲಿ ನೀನು ನಿನ್ನ ಬೆಸ್ಟ್ ಕೊಟ್ಟಿರುತ್ತೀಯಾ ಎಂದು ನನಗೆ ಗೊತ್ತು. ಮೇಲಿಂದ ನೋಡುತ್ತಿರುವ ಗ್ರೇಟ್ ಸೋಲ್‍ನ ಆಶೀರ್ವಾದ ಇದೆ ಎಂದು ಟ್ವೀಟ್ ಮಾಡಿ ಅಭಿಷೇಕ್ ಅವರಿಗೆ ಶುಭ ಕೋರಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಅವರು ಕೂಡ, “ಅಮರ” ನಮ್ಮ ಅಂಬರೀಷ್ ಅಣ್ಣ ಸುಪುತ್ರ ಅಭಿಷೇಕ್ ಯಂಗ್ ರೆಬೆಲ್ ಸ್ಟಾರ್ ಆಗಿ ಬೆಳ್ಳಿತೆರೆಯ ಮೇಲೆ ಬರುತ್ತಿರುವ `ಅಮರ್’ ಚಿತ್ರ ಅದ್ಭುತ ಯಶಸ್ಸು ಗಳಿಸಲಿ ಎಂದು ಶುಭಕೋರಿದ್ದಾರೆ.

    ಭಾರತ ಕ್ರಿಕೆಟ್ ತಂಡದ ಆಟಗಾರ ಕೆ.ಎಲ್ ರಾಹುಲ್ ಅವರು ಕೂಡ ವಿಡಿಯೋ ಮೂಲಕ ಅಭಿಷೇಕ್ ಹಾಗೂ ಅಮರ್ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ರಾಹುಲ್ ವಿಡಿಯೋವನ್ನು ಸುಮಲತಾ ಅವರು ತಮ್ಮ ಟ್ವಿಟ್ಟರಿನಲ್ಲಿ ಟ್ವೀಟ್ ಮಾಡಿ ಅದಕ್ಕೆ, “ಅಭಿಷೇಕ್ ಅಂಬರೀಶ್ ಅವರ ಆಪ್ತ ಗೆಳೆಯ ಹಾಗೂ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಕೆ.ಎಲ್.ರಾಹುಲ್ ಇಂದು ಬಿಡುಗಡೆಯಾಗಲಿರುವ ಅಮರ್ ಚಿತ್ರಕ್ಕೆ ಶುಭಹಾರೈಸಿದ್ದಾರೆ” ಎಂದು ಬರೆದುಕೊಂಡಿದ್ದಾರೆ.

    ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಕೂಡ ವಿಡಿಯೋ ಮೂಲಕ ಅಭಿಷೇಕ್ ಅವರಿಗೆ ಶುಭ ಕೋರಿದ್ದಾರೆ. ಈ ವಿಡಿಯೋವನ್ನು ಸುಮಲತಾ ಅವರು “ಅಮರ್ ಗೆ ಶುಭಾಶಯ ಕೋರುವ ಸರದಿ ಈಗ ಮೆಗಾಸ್ಟಾರ್ ಚಿರಂಜೀವಿಯವರದ್ದು, ಶುಕ್ರವಾರ ಬಿಡುಗಡೆಯಾಗಲಿರುವ ಅಮರ್ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಎಂದು ಟ್ವೀಟ್ ಮಾಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಅವರು ಕೂಡ ವಿಡಿಯೋ ಮೂಲಕ ಚಿತ್ರಕ್ಕೆ ಹಾಗೂ ಅಭಿಷೇಕ್‍ಗೆ ಶುಭ ಕೋರಿದ್ದರು.

    `ಅಮರ್’ ಸಿನಿಮಾ ನಿರ್ದೇಶಕ ನಾಗಶೇಖರ್ ಸಾರಥ್ಯದಲ್ಲಿ ಮೂಡಿಬಂದಿದ್ದು, ಸಿನಿಮಾದಲ್ಲಿ ಅಭಿಷೇಕ್‍ಗೆ ಜೋಡಿಯಾಗಿ ನಟಿ ತಾನ್ಯಾ ಹೋಪ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಟ ದರ್ಶನ್ ಸಹ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.

  • ಫಲಿತಾಂಶದ ಹೊಣೆಯನ್ನು ನಾನೇ ಹೊರುತ್ತೇನೆ: ನಿಖಿಲ್ ಮೊದಲ ಪ್ರತಿಕ್ರಿಯೆ

    ಫಲಿತಾಂಶದ ಹೊಣೆಯನ್ನು ನಾನೇ ಹೊರುತ್ತೇನೆ: ನಿಖಿಲ್ ಮೊದಲ ಪ್ರತಿಕ್ರಿಯೆ

    ಬೆಂಗಳೂರು: ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಲೋಕಸಭಾ ಚುನಾವಣೆ ಫಲಿತಾಂಶ ಬಂದ ನಂತರ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ.

    ನಿಖಿಲ್ ಅವರು ಇನ್‍ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಸಂಪೂರ್ಣವಾಗಿ ಫಲಿತಾಂಶದ ಸೋಲು, ಮುಂದಿನ ನಡೆಯ ಬಗ್ಗೆ ತಿಳಿಸಿದ್ದಾರೆ.

    ಅಭಿಗೆ ಶುಭಾಶಯ:
    ನಾಳೆ(ಶುಕ್ರವಾರ) ಬಿಡುಗಡೆಯಾಗುತ್ತಿರುವ ನನ್ನ ಸಹೋದರ ಅಭಿ ನಟನೆಯ ಚೊಚ್ಚಲ ‘ಅಮರ್’ ಸಿನಿಮಾ ಯಶಸ್ಸನ್ನು ಕಾಣಲಿ ಎಂದು ಹಾರೈಸುತ್ತಿದ್ದೇನೆ. ಎಲ್ಲರೂ ದಯವಿಟ್ಟು ಥಿಯೇಟರ್ ಗಳಿಗೆ ಹೋಗಿ ‘ಅಮರ್’ ಚಿತ್ರವನ್ನು ನೋಡಿ. ಅಭಿ ಸಿನಿಮಾದಲ್ಲಿ ಚೆನ್ನಾಗಿ ಅಭಿನಯಿಸಿರುತ್ತಾರೆ ಎಂಬ ನಂಬಿಕೆ ಇದೆ ಎಂದು ಮೊದಲಿಗೆ ಅಭಿಷೇಕ್‍ಗೆ ವಿಶ್ ಮಾಡಿದ್ದಾರೆ.

    ಸುಮಕ್ಕಗೆ ಅಭಿನಂದನೆ:
    ಕೆಲವರು ನಾನು ತೋರ್ಪಡಿಕೆಗಾಗಿ ವಿಶ್ ಮಾಡುತ್ತಿದ್ದೇನೆ ಅಂದುಕೊಳ್ಳುತ್ತಾರೆ. ಅಂತಹವರಿಗೆ ನಾನು ಹೇಳಲು ಇಷ್ಟಪಡುವುದೇನೆಂದರೆ, ಪ್ರಚಾರದ ಸಮಯದಲ್ಲೂ ನಾನು ಸಂಬಂಧಗಳಿಗೆ ಬೆಲೆ ಕೊಡುತ್ತೇನೆ ಎಂದು ಹೇಳಿದ್ದೆ. ಈಗಲೂ ಅದನ್ನೇ ಹೇಳುತ್ತೇನೆ. ಸುಮಕ್ಕ ಮಂಡ್ಯದಲ್ಲಿ ಗೆದ್ದಿದ್ದಾರೆ. ಹೀಗಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಜೊತೆಗೆ ನಾನು ಮಂಡ್ಯದ ಅಭಿವೃದ್ಧಿಗೆ ಯಾರ ಜೊತೆಗೆ ಬೇಕಾದರೂ ಕೈ ಜೋಡಿಸಲು ಸಿದ್ಧನಾಗಿದ್ದೇನೆ ಎಂದು ತಿಳಿಸಿದ್ದಾರೆ.

    ನಾನೇ ಹೊಣೆ:
    ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶದ ಜವಾಬ್ದಾರಿಯನ್ನು ಸಂಪೂರ್ಣವಾಗಿ ನಾನೇ ಹೊರುತ್ತೇನೆ. ಈ ಫಲಿತಾಂಶದ ಬಗ್ಗೆ ನಿಖಿಲ್ ಕುಮಾರಸ್ವಾಮಿ ಒಬ್ಬರನ್ನೇ ಟೀಕಿಸಿ. ಶಾಸಕರು, ವಿಧಾನ ಪರಿಷತ್ ಸದಸ್ಯರು, ಕಾರ್ಯಕರ್ತರು, ಗೌರವಾನ್ವಿತ ಮುಖ್ಯಮಂತ್ರಿ ಹಾಗೂ ಜೆಡಿಎಸ್ ವರಿಷ್ಠ ಅಧಿಕಾರಿ ದೇವೇಗೌಡರನ್ನು ಟೀಕಿಸುವುದು ಬೇಡ. ನನ್ನ ಎಲ್ಲಾ ಕಾರ್ಯಕರ್ತರ ಬಳಿಕ ನಾನು ಕ್ಷಮೆಯಾಚಿಸುತ್ತೇನೆ. ಯಾಕೆಂದರೆ ಜನರು ನಿಖಿಲ್ ಕುಮಾರಸ್ವಾಮಿಯನ್ನು ತಿರಸ್ಕರಿಸಿದ್ದಾರೆ. ಇದರಿಂದ ಕೆಲವು ಕಾರ್ಯಕರ್ತರು ನನ್ನಿಂದ ನಿರಾಸೆಯಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಮತದಾರರಿಗೆ ಧನ್ಯವಾದಗಳು:
    ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈ ವರ್ಷದ ಬಜೆಟ್ ಮಂಡನೆಯಲ್ಲಿ ಮಂಡ್ಯ ಜಿಲ್ಲೆಗಾಗಿ 8,671 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದರು. ಹೀಗಾಗಿ ಆ ಕೆಲಸಗಳು ಸರಿಯಾಗಿ ನಡೆಯುತ್ತಿದೆಯೋ ಎನ್ನುವುದನ್ನು ನಾನು ನೋಡಿಕೊಳ್ಳುತ್ತೇನೆ. ಯಾಕೆಂದರೆ ಅದು ನಮ್ಮ ಕರ್ತವ್ಯವಾಗಿದೆ. ನನ್ನ ಮೇಲೆ ನಂಬಿಕೆ ಇಟ್ಟು ಮತ ಹಾಕಿದ ಎಲ್ಲರಿಗೂ ಧನ್ಯವಾದಗಳು. 5 ಲಕ್ಷದ 76 ಸಾವಿರ 400 ಮತಗಳು ಬಂದಿವೆ. ಉಳಿದ ಮತದಾರರ ನಂಬಿಕೆ ಗಳಿಸಲು ಮುಂದಿನ ದಿನದಲ್ಲಿ ನಾನು ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

    ಈ ಬಾರಿಯ ಚುನಾವಣೆಯಲ್ಲಿ ನಾನು ಸೋತಿರಬಹುದು. ಆದರೆ ನಾನು ಈ ಪಯಣದಲ್ಲಿ ಸಾಕಷ್ಟು ಪಡೆದುಕೊಂಡಿದ್ದೇನೆ ಎಂದು ಭಾವಿಸುತ್ತೇನೆ. ನಾನು ಮೊದಲ ದಿನದಿಂದ ಪಾಸಿಟಿವ್ ವ್ಯಕ್ತಿಯಾಗಿದ್ದೇನೆ. ನಿಮಗೆ ನಿಖಿಲ್ ಕುಮಾರಸ್ವಾಮಿ ಒಬ್ಬ ಗಂಭೀರವಾದ ರಾಜಕಾರಣಿಯೇ? ಎನ್ನುವ ಪ್ರಶ್ನೆ ಮೂಡಿದ್ದರೆ, ನಾನು ಇಡೀ ರಾಜ್ಯದೆಲ್ಲೆಡೆ ಪ್ರವಾಸ ಮಾಡಿ ಅಲ್ಲಿನ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುತ್ತೇನೆ. ಜೊತೆಗೆ ನಮ್ಮ ಪಕ್ಷದ ಕಾರ್ಯಕರ್ತರನ್ನು ಪ್ರೇರೇಪಿಸುತ್ತೇನೆ. ಈ ಬಗ್ಗೆ ಒಂದೆರಡು ದಿನಗಳಲ್ಲಿ ಪತ್ರಿಕಾಗೋಷ್ಠಿ ಮಾಡುತ್ತೇನೆ. ನಿಮ್ಮ ಬೆಂಬಲ ಮತ್ತು ಪ್ರೀತಿಗೆ ಧನ್ಯವಾದಗಳು ಎಂದು ನಿಖಿಲ್ ಕುಮಾರ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

    https://www.instagram.com/p/ByE3AIbHwi7/?utm_source=ig_embed

  • ಮಗು ಅಂದುಕೊಂಡ್ವಿ, ಆದ್ರೆ ಈ ಮಗು ಈಗ ರೊಮ್ಯಾನ್ಸ್ ಮಾಡುತ್ತೆ: ದರ್ಶನ್

    ಮಗು ಅಂದುಕೊಂಡ್ವಿ, ಆದ್ರೆ ಈ ಮಗು ಈಗ ರೊಮ್ಯಾನ್ಸ್ ಮಾಡುತ್ತೆ: ದರ್ಶನ್

    – ಅಮರ್ ಚಿತ್ರಕ್ಕೆ ಶುಭಕೋರಿದ ಸೂಪರ್ ಸ್ಟಾರ್ ರಜನಿಕಾಂತ್

    ಬೆಂಗಳೂರು: ನಟ ಅಭಿಷೇಕ್ ಅಭಿನಯದ ಚೊಚ್ಚಲ `ಅಮರ್’ ಸಿನಿಮಾ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಈ ಚಿತ್ರಕ್ಕಾಗಿ ಅಂಬರೀಶ್ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಹೀಗಿರುವಾಗ ಸೂಪರ್ ಸ್ಟಾರ್ ರಜನಿಕಾಂತ್ ಅವರು ಚಿತ್ರಕ್ಕೆ ಶುಭ ಕೋರಿದ್ದಾರೆ.

    ರಜನಿಕಾಂತ್ ಅವರು ವಿಡಿಯೋದಲ್ಲಿ ಅಮರ್ ಚಿತ್ರ ಯಶಸ್ಸು ಕಾಣಲಿ ಎಂದು ಹೇಳಿ ಅಭಿಷೇಕ್ ಅವರಿಗೆ ಶುಭ ಹಾರೈಸಿದ್ದಾರೆ. ಹಾಗೆಯೇ ಮಂಡ್ಯದಲ್ಲಿ ಬುಧವಾರ ನಡೆದ ಸ್ವಾಭಿಮಾನಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ದರ್ಶನ್ ಅವರು ಕೂಡ ಶುಭ ಕೋರಿದ್ದಾರೆ.

    ರಜನಿಕಾಂತ್ ಹೇಳಿದ್ದೇನು?
    ನನ್ನ ಆತ್ಮೀಯ ಗೆಳೆಯ ಅಂಬರೀಶ್ ಹಾಗೂ ನನ್ನ ಸಹೋದರಿ ಸುಮಲತಾ ಅವರ ಪುತ್ರ ಅಭಿಷೇಕ್ ನಟಿಸಿದ ‘ಅಮರ್’ ಚಿತ್ರ ದೊಡ್ಡ ಯಶಸ್ಸು ಗಳಿಸಲಿ. ಅಂಬರೀಶ್ ಹೇಗೆ ಕನ್ನಡ ಜನಗಳ ಹೃದಯಲ್ಲಿ ವಿಜೃಂಭಿಸಿದ್ದನೋ, ಹಾಗೆ ಅಭಿಷೇಕ್ ಕೂಡ ಚಿತ್ರರಂಗದಲ್ಲಿ ಹಾಗೂ ಕನ್ನಡ ಜನರ ಹೃದಯದಲ್ಲಿ ವಿಜೃಂಭಸಲಿ ಎಂದು ದೇವರ ಬಳಿ ಪ್ರಾಥಿಸುತ್ತೇನೆ ಎಂದು ರಜನಿಕಾಂತ್ ಅವರು ವಿಡಿಯೋದಲ್ಲಿ ಹೇಳಿದ್ದಾರೆ.

    ಬುಧವಾರ ಮಂಡ್ಯದಲ್ಲಿ ನಡೆದ ಸ್ವಾಭಿಮಾನಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ನೀವೆಲ್ಲರೂ ನಮ್ಮಂತಹ ಪುಟ್ಟ-ಪುಟ್ಟ ಕಲಾವಿದರನ್ನು ಆಶೀರ್ವದಿಸಿ ಬೆಳೆಸುತ್ತಿದ್ದೀರಿ. ಮೇ 31ಕ್ಕೆ ನಮ್ಮ ಮಗು ಸಿನಿಮಾ ಬರುತ್ತಿದೆ. ಅಭಿಷೇಕ್‍ನನ್ನು ಹರಿಸಿ, ಬೆಳೆಸಿ, ಆಶೀರ್ವದಿಸಿ. ಏಕೆಂದರೆ ಇವನನ್ನು ನೋಡಿದಾಗಲೆಲ್ಲಾ ಮಗು ಎಂದು ಅನಿಸುತ್ತದೆ. ಆದರೆ ಸ್ಕ್ರೀನ್‍ನಲ್ಲಿ ರೊಮ್ಯಾನ್ಸ್ ಮಾಡುವುದನ್ನು ನೋಡಿದಾಗ ನಮಗಿಂತ ದೊಡ್ಡವನು ಆಗಿದ್ದಾನೆ ಎಂದು ಅನಿಸುತ್ತದೆ. ಹಾಗಾಗಿ ಮೇ 31ರಂದು ನನ್ನ ತಮ್ಮನ ಸಿನಿಮಾ ಬರುತ್ತಿದೆ. ನೀವೆಲ್ಲರು ಬೆಂಬಲ ನೀಡಿ ಪ್ರೋತ್ಸಾಹಿಸಿ ಅಂಬರೀಶ್ ಅಪ್ಪಾಜಿಯಂತೆ ಎತ್ತರವಾಗಿ ಬೆಳೆಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡರು.

    `ಅಮರ್’ ಸಿನಿಮಾ ನಿರ್ದೇಶಕ ನಾಗಶೇಖರ್ ಸಾರಥ್ಯದಲ್ಲಿ ಮೂಡಿಬಂದಿದ್ದು, ಸಿನಿಮಾದಲ್ಲಿ ಅಭಿಷೇಕ್‍ಗೆ ಜೋಡಿಯಾಗಿ ನಟಿ ತಾನ್ಯಾ ಹೋಪ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಟ ದರ್ಶನ್ ಸಹ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. `ಅಮರ್’ ಸಿನಿಮಾ ಇದೇ ತಿಂಗಳ 31 ರಂದು ತೆರೆಗೆ ಬರಲಿದೆ.

  • ಇಂದು ಅಂಬಿಯ 67ನೇ ಹುಟ್ಟುಹಬ್ಬ – ಕನ್ನಡದ ಕರ್ಣನ ಸಮಾಧಿಗೆ ವಿಶೇಷ ಅಲಂಕಾರ

    ಇಂದು ಅಂಬಿಯ 67ನೇ ಹುಟ್ಟುಹಬ್ಬ – ಕನ್ನಡದ ಕರ್ಣನ ಸಮಾಧಿಗೆ ವಿಶೇಷ ಅಲಂಕಾರ

    ಬೆಂಗಳೂರು: ಇಂದು ರೆಬೆಲ್ ಸ್ಟಾರ್ ಅಂಬರೀಶ್ ಅವರ 67ನೇ ಜಯಂತೋತ್ಸವ.

    ಅಂಬರೀಶ್ ಅವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಇಂದು ಅವರ ಸಮಾಧಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ಅಲ್ಲದೆ ಇಂದು ಅಂಬರೀಶ್ ಪತ್ನಿ, ನೂತನ ಸಂಸದೆ ಸುಮಲತಾ ಹಾಗೂ ಮಗ ಅಭಿಷೇಕ್ ಅವರು ಅಂಬಿ ಸಮಾಧಿಗೆ ಪೂಜೆ ಮಾಡಲಿದ್ದಾರೆ.

    ಇಂದು ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಸುಮಲತಾ ಹಾಗೂ ಅಭಿಷೇಕ್ ಮಂಡ್ಯಕ್ಕೆ ತೆರಳಲಿದ್ದಾರೆ. ಅಂಬಿ ಹುಟ್ಟುಹಬ್ಬಕ್ಕೆ ಇಂದು ಮತ್ತಷ್ಟು ಮೆರಗು ತಂದಿದೆ. ಸದ್ಯ ಸುಮಲತಾ ಅವರು ಸಂಸದರಾಗಿ ಆಯ್ಕೆ ಮಾಡಿದ ಮಂಡ್ಯ ಜನರಿಗೆ ಅಭಿನಂದನೆ ಸಲ್ಲಿಸಲಿದ್ದಾರೆ. ಸಾವಿರಾರು ಅಭಿಮಾನಿಗಳು ಬರುವ ಸಾಧ್ಯತೆ ಇದೆ.

    ರೆಬೆಲ್ ಸ್ಟಾರ್ ಅಂಬಿ ಹುಟ್ಟಿದ ದಿನವಾಗಿದ್ದು, ಅಂಬಿ ಜಯಂತಿ ಹಾಗೂ ಸ್ವಾಭಿಮಾನಿ ವಿಜಯೋತ್ಸವ ಮಂಡ್ಯದಲ್ಲಿ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಇಂದಿನ ವಿಜಯೋತ್ಸವದ ಜೋಡೆತ್ತು ದರ್ಶನ್ ಮತ್ತು ಯಶ್ ಮೇನ್ ಅಟ್ರ್ಯಾಕ್ಷನ್ ಆಗಲಿದ್ದಾರೆ. ಸುಮಲತಾ ಗೆಲುವಿಗೆ ಸ್ಟಾರ್ ಡಮ್ ಬಿಟ್ಟು ಹಗಲಿರುಳು ಪ್ರಚಾರ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ನಟ ದೊಡ್ಡಣ್ಣ, ಅಂಬಿ ಪುತ್ರ ಅಭಿಷೇಕ್ ಸೇರಿ ಹಲವರು ಸುಮಲತಾಗೆ ವಿಜಯ ಯಾತ್ರೆಯಲ್ಲಿ ಸಾಥ್ ನೀಡಲಿದ್ದಾರೆ.

    ಕಿಡ್ನಿ ಹಾಗೂ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅಂಬರೀಶ್ ಅವರು ನವೆಂಬರ್ 24ರಂದು ರಾತ್ರಿ ನಿಧನರಾಗಿದ್ದರು. ಅಂದೇ ಮಂಡ್ಯದ ಕನಗನಮರಡಿಯಲ್ಲಿ ಬಸ್ ದುರಂತ ನಡೆದಿದ್ದು, ಘಟನೆ ನೋಡಿ ಬೇಸರಗೊಂಡಿದ್ದ ಅಂಬರೀಶ್ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆ ಎಂದು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಂಬರೀಶ್ ನಿಧನರಾಗಿದ್ದರು.