Tag: ಅಭಿಷೇಕ್‌ ಶರ್ಮಾ

  • IPL ಸ್ಟಾರ್‌ ಜೊತೆ ಗೆಳೆತನ ಹೊಂದಿದ್ದ ರೂಪದರ್ಶಿ ನಿಗೂಢ ಸಾವು – ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌!

    IPL ಸ್ಟಾರ್‌ ಜೊತೆ ಗೆಳೆತನ ಹೊಂದಿದ್ದ ರೂಪದರ್ಶಿ ನಿಗೂಢ ಸಾವು – ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌!

    ಗಾಂಧಿನಗರ: 28 ವರ್ಷ ವಯಸ್ಸಿನ ರೂಪದರ್ಶಿ ತಾನ್ಯಾ ಸಿಂಗ್ ಅವರ ನಿಗೂಢ ಸಾವು ಪ್ರಕರಣ ಗುಜರಾತ್ ರಾಜ್ಯದ ಸೂರತ್ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಎರಡು ದಿನಗಳ ಕಳೆದರೂ ಸಾವಿನ ಯಾವುದೇ ಸುಳಿವು ಪತ್ತೆಯಾಗದ ಕಾರಣ ಪೊಲೀಸರು ತಲೆ ಕೆಡಿಸಿಕೊಂಡು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ.

    ಸದ್ಯ ತಾನ್ಯಾಳ ಸಾವಿಗೆ ಕಾರಣವೇನು ಎಂದು ಪತ್ತೆ ಮಾಡಲು ಹೊರಟಿರುವ ಪೊಲೀಸರಿಗೆ, ಕ್ರಿಕೆಟ್ ಆಟಗಾರನ ಜೊತೆ ತಾನ್ಯಾಗೆ ಇರುವ ಲಿಂಕ್ ಪತ್ತೆಯಾಗಿದೆ. ಐಪಿಎಲ್‌ ತಂಡ ಸನ್‌ರೈಸರ್ಸ್‌ ಹೈದರಾಬಾದ್‌ನ ಆಲ್‌ರೌಂಡರ್ ಆಟಗಾರ ಅಭಿಷೇಕ್ ಶರ್ಮಾ ಜೊತೆ ತಾನ್ಯಾ ಸಿಂಗ್‌ಗೆ ಇದ್ದ ನಂಟನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಸದ್ಯಕ್ಕೆ ಇದನ್ನು ಆತ್ಮಹತ್ಯೆ ಎಂದೇ ಹೇಳಲಾಗುತ್ತಿದೆ.

    ರೂಪದರ್ಶಿ ತಾನ್ಯಾ ಸಿಂಗ್ ಹಾಗೂ ಸನ್ ರೈಸರ್ಸ್‌ ಹೈದರಾಬಾದ್ ತಂಡದ ಆಲ್ ರೌಂಡರ್ ಆಟಗಾರ ಅಭಿಷೇಕ್ ಶರ್ಮಾ ನಡುವೆ ಗೆಳೆತನ ಇತ್ತು ಅನ್ನೋದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ವಿ. ಆರ್. ಮಲ್ಹೋತ್ರಾ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಆತ್ಮಹತ್ಯೆ ಮಾಡಿಕೊಂಡ ಮಾಡೆಲ್ ತಾನ್ಯಾ ಸಿಂಗ್ ತಾನು ಸಾವಿಗೆ ಶರಣಾಗುವ ಮುನ್ನ ಐಪಿಎಲ್‌ ಸ್ಟಾರ್‌ ಅಭಿಷೇಕ್ ಶರ್ಮಾಗೆ ವಾಟ್ಸಪ್ ಮೂಲಕ ಸಂದೇಶ ರವಾನೆ ಕಳಿಸಿದ್ದಾಳೆ. ಆದ್ರೆ ಅದಕ್ಕೆ ಅಭಿಷೇಕ್‌ ಉತ್ತರ ಕೊಟ್ಟಿಲ್ಲ. ಪೊಲೀಸರ ತನಿಖೆಯಲ್ಲಿ ಈವರಿಬ್ಬರ ನಡುವಿನ ಮಾತುಕತೆಗಳು ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಇನ್ನೂ ಅಭಿಷೇಕ್‌ ಶರ್ಮಾರನ್ನ ಸಂಪರ್ಕಿಸಿಲ್ಲ. ಆದ್ರೆ ಹೆಚ್ಚಿನ ಸ್ಪಷ್ಟೀಕರಣಕ್ಕಾಗಿ ಅವರಿಗೆ ನೋಟಿಸ್‌ ಕಳುಹಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆಲ್ ರೌಂಡರ್ ಆಗಿರುವ ಅಭಿಷೇಕ್ ಶರ್ಮಾ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡುತ್ತಿದ್ದಾರೆ.

    ಕಳೆದ ಸೋಮವಾರ ಬೆಳಗ್ಗೆ ತಾನ್ಯಾ ಸಿಂಗ್‌ ಅವರ ತಂದೆ ಭನ್ವರ್‌ ಸಿಂಗ್‌ ಆಕೆಯನ್ನು ಎಬ್ಬಿಸಲು ಹೋದಾಗ ಆಕೆ ಮೃತಪಟ್ಟಿರುವುದು ಕಂಡುಬಂದಿದೆ. 28 ವರ್ಷದ ಮಾಡೆಲ್‌ ತಾನ್ಯಾ ಫ್ಯಾಷನ್ ಡಿಸೈನರ್ (ವಸ್ತ್ರ ವಿನ್ಯಾಸಕಿಯಾಗಿಯೂ) ಕೆಲಸ ಮಾಡ್ತಿದ್ದಾರೆ. ಸದ್ಯ ತಾನ್ಯಾ ಆತ್ಮಹತ್ಯೆ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರಿಗೆ ಯಾವುದೇ ಡೆತ್‌ ನೋಟ್‌ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಕಾಲ್‌ ಡಿಟೇಲ್ಸ್‌ ಪರಿಶೀಲನೆ: ಸದ್ಯದ ಮಟ್ಟಿಗೆ ರೂಪದರ್ಶಿ ತಾನ್ಯಾ ಸಿಂಗ್ ಜೊತೆಗೆ ಅಭಿಷೇಕ್ ಶರ್ಮಾಗೆ ಗೆಳೆತನ ಇತ್ತು ಅನ್ನೋದಷ್ಟೇ ನಮಗೆ ಗೊತ್ತಾಗಿದೆ. ಈ ಪ್ರಕರಣದ ಕುರಿತಾಗಿ ಇನ್ಯಾವುದೇ ಹೆಚ್ಚಿನ ಮಾಹಿತಿ ಈವರೆಗೆ ಸಿಕ್ಕಿಲ್ಲ. ತನಿಖೆ ನಡೆಯುತ್ತಿದೆ. ಆಕೆಯ ಫೋನ್‌ನಿಂದ ದೂರವಾಣಿ ಕರೆಗಳ ದತ್ತಾಂಶಗಳ ಮಾಹಿತಿ ಕಲೆಹಾಕುತ್ತಿದ್ದೇವೆ ಎಂದು ಎಸಿಪಿ ಮಲ್ಹೋತ್ರಾ ಹೇಳಿದ್ದಾರೆ.

  • ಜೋರಾಯ್ತು IPL ಮ್ಯಾಚ್‌ ಫಿಕ್ಸಿಂಗ್‌ ಸದ್ದು

    ಜೋರಾಯ್ತು IPL ಮ್ಯಾಚ್‌ ಫಿಕ್ಸಿಂಗ್‌ ಸದ್ದು

    ಜೈಪುರ: ಐಪಿಎಲ್‌ನಲ್ಲಿ (IPL) ನೋಬಾಲ್‌ ವಿವಾದಗಳು (Noball Controversy) ಇದೇ ಮೊದಲೇನಲ್ಲಾ. ಪ್ರತೀ ಪಂದ್ಯದಲ್ಲೂ ಒಂದಿಲ್ಲೊಂದು ನೋಬಾಲ್‌ ಇದ್ದೇ ಇರುತ್ತವೆ. ಆದ್ರೆ ಕೆಲವೊಂದು ಪಂದ್ಯಗಳಲ್ಲಿ ಡೆತ್‌ ಓವರ್‌ಗಳಲ್ಲಿ ನೀಡುವ ನೋಬಾಲ್‌ ಇಡೀ ಪಂದ್ಯದ ಗತಿಯನ್ನೇ ಬದಲಿಸಿಬಿಟ್ಟಿವೆ.

    ಭಾನುವಾರ ರಾಜಸ್ಥಾನ್‌ ರಾಯಲ್ಸ್‌ (Rajasthan Royals) ಹಾಗೂ ಹೈದರಾಬಾದ್‌ (Sunrisers Hyderabad) ನಡುವಿನ ಪಂದ್ಯದಲ್ಲಿ ರಾಜಸ್ಥಾನ್‌ ಆಟಗಾರ ಸಂದೀಪ್‌ ಶರ್ಮಾ (Sandeep Sharma) ನೀಡಿದ ನೋಬಾಲ್‌ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ. ನೆಟ್ಟಿಗರಿಂದ ಭಾರೀ ಟೀಕೆ ವ್ಯಕ್ತವಾಗುತ್ತಿದ್ದು, ಮ್ಯಾಚ್‌ ಫಿಕ್ಸಿಂಗ್‌ ಸದ್ದು ಕೇಳಿಬರುತ್ತಿದೆ.

    ತವರಿನಲ್ಲಿ ನಡೆದ ಪಂದ್ಯದಲ್ಲಿ ಕೊನೆಯ ಓವರ್‌ನಲ್ಲಿ ಬೌಲಿಂಗ್‌ನಲ್ಲಿದ್ದ ಸಂದೀಪ್‌ ಶರ್ಮಾ 19 ರನ್‌ ಬೇಕಿದ್ದಾಗ 14 ರನ್‌ ಚಚ್ಚಿಸಿಕೊಂಡಿದ್ದರು. ಕೊನೇ ಎಸೆತದಲ್ಲಿ 5 ರನ್‌ ಅಗತ್ಯವಿದ್ದಾಗ ಕ್ರೀಸ್‌ನಲ್ಲಿದ್ದ ಅಬ್ದುಲ್‌ ಸಮದ್‌ ಸಿಕ್ಸ್‌ ಸಿಡಿಸಲು ಪ್ರಯತ್ನಿಸಿ ಕ್ಯಾಚ್‌ ನೀಡಿದ್ದರು. ಆದ್ರೆ ಸಂದೀಪ್‌ ಶರ್ಮಾ ಕ್ರೀಸ್‌ನಲ್ಲಿ ನೋಬಾಲ್‌ ಕೊಟ್ಟಿದ್ದರು. ಇದರಿಂದ ರಾಜಸ್ಥಾನ್‌ ತಂಡಕ್ಕೆ ಪಂದ್ಯಗೆದ್ದ ಖುಷಿ ಮಿಂಚಿನಂತೆ ಮಾಯವಾಗಿ ಸೋಲಿನ ಕಹಿ ಅನುಭವಿಸುವಂತಾಯಿತು.

    ಇದಾದ ಬಳಿಕ ಇದು ಪಕ್ಕಾ ಮ್ಯಾಚ್‌ ಫಿಕ್ಸಿಂಗ್‌ ಎಂದು ನೆಟ್ಟಿಗರಿಂದ ಟೀಕೆಗಳು ವ್ಯಕ್ತವಾಗುತ್ತಿದೆ. ಸಂದೀಪ್‌ ಶರ್ಮಾ ಹಾಗೂ ರಾಜಸ್ಥಾನ್‌ ತಂಡದ ವಿರುದ್ಧ ಕ್ರಿಕೆಟ್‌ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: IPL 2023ː ಕೊನೇ ಎಸೆತದಲ್ಲಿ ನೋಬಾಲ್‌ ಎಡವಟ್ಟು – ಹೈದರಾಬಾದ್‌ಗೆ ರೋಚಕ ಜಯ

    ಐಪಿಎಲ್‌ನಲ್ಲಿ ಈ ಹಿಂದೆಯೂ ಮ್ಯಾಚ್‌ ಫಿಕ್ಸಿಂಗ್‌ ಪ್ರಕರಣಗಳು ಬೆಳಕಿಗೆ ಬಂದಿದೆ. ಟೀಂ ಇಂಡಿಯಾ ಮಾಜಿ ವೇಗಿ ಎಸ್‌ ಶ್ರೀಶಾಂತ್‌, ಅಂಕಿತ್‌ ಚವಾಣ್‌ ಹಾಗೂ ಅಜಿತ್‌ ಚಂಡೀಲಾ ಅವರು ಮ್ಯಾಚ್ ಫಿಕ್ಸಿಂಗ್‌ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದರು. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮಾಜಿ ಫ್ರಿನ್ಸಿಪಾಲ್‌ ಗುರುನಾಥ್‌ ಮೇಯಪ್ಪನ್‌ ಅವರು ಕೂಡ ಇವರ ಜೊತೆ ಶಿಕ್ಷೆಗೆ ಒಳಗಾಗಿದ್ದರು. ಬಾಂಗ್ಲಾದೇಶ ಮಾಜಿ ನಾಯಕ ಶಕಿಬ್‌ ಅಲ್‌ ಹಸನ್ ಅವರು 2021ರಲ್ಲಿ ಭ್ರಷ್ಟಚಾರದ ಕುರಿತು ವರದಿ ಮಾಡುವಲ್ಲಿ ವಿಫಲರಾಗಿದ್ದರಿಂದ ಅವರು ಕೆಲ ತಿಂಗಳ ಕಾಲ ಅಮಾನತು ಶಿಕ್ಷೆಗೆ ಗುರಿಯಾಗಿದ್ದರು. ಇದನ್ನೂ ಓದಿ: ಧೋನಿ ಕ್ಯಾಪ್ಟನ್‌ ಆಗಿದ್ದಿದ್ದರೆ RCB ಮೂರು ಬಾರಿ ಕಪ್‌ ಗೆಲ್ಲುತ್ತಿತ್ತು ಎಂದ ಪಾಕ್‌ ಮಾಜಿ ಕ್ರಿಕೆಟಿಗ

    BCCI ಭ್ರಷ್ಟಾಚಾರ ನಿಗ್ರಹ ಘಟಕ ಹೇಳುವುದೇನು?
    ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಆಟಗಾರರು ಹಾಗೂ ಅಧಿಕಾರಿಗಳನ್ನ ಸಂಪರ್ಕಿಸಿದರೆ, ತಕ್ಷಣ ಅವರು ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ ಮಾಹಿತಿ ನೀಡಬೇಕು. ಇಲ್ಲದೇ ಇದ್ದಲ್ಲಿ ಅಂತಹ ಆಟಗಾರರು ಅಮಾನತು ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇದೆ. ಈ ವಿಷಯದಲ್ಲಿ ವಿಳಂಬ ಧೋರಣೆ ಅನುಸರಿಸಿದರೆ, ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕದ ಕಾರ್ಯ ಪ್ರಕ್ರಿಯೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಭ್ರಷ್ಟಚಾರ ನಿಗ್ರಹ ಘಟಕ ಹೇಳಿದೆ.

  • IPL 2023ː ಕೊನೇ ಎಸೆತದಲ್ಲಿ ನೋಬಾಲ್‌ ಎಡವಟ್ಟು –  ಹೈದರಾಬಾದ್‌ಗೆ ರೋಚಕ ಜಯ

    IPL 2023ː ಕೊನೇ ಎಸೆತದಲ್ಲಿ ನೋಬಾಲ್‌ ಎಡವಟ್ಟು – ಹೈದರಾಬಾದ್‌ಗೆ ರೋಚಕ ಜಯ

    ಜೈಪುರ: ರಾಜಸ್ಥಾನ್‌ ರಾಯಲ್ಸ್‌ (Rajasthan Royals) ತಂಡದ ಬೌಲರ್‌ ಸಂದೀಪ್‌ ಶರ್ಮಾ (Sandeep Sharma) ಕೊನೆಯ ಎಸೆತದಲ್ಲಿ ಮಾಡಿದ ನೋಬಾಲ್‌ ಎಡವಟ್ಟಿನಿಂದ ರಾಜಸ್ಥಾನ್‌ ರಾಯಲ್ಸ್‌ ತಂಡ ವಿರೋಚಿತ ಸೋಲನುಭವಿಸಿತು. ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ತಂಡ 6 ವಿಕೆಟ್‌ಗಳ ರೋಚಕ ಜಯ ಸಾಧಿಸಿತು.

    ಕೊನೆಯ 6 ಎಸೆತಗಳಲ್ಲಿ ಹೈದರಾಬಾದ್‌ ಗೆಲುವಿಗೆ 19 ರನ್‌ಗಳ ಅಗತ್ಯವಿತ್ತು. ಸಂದೀಪ್‌ ಶರ್ಮಾ ಬೌಲಿಂಗ್‌ನಲ್ಲಿದ್ದರು. ಮೊದಲ ಎಸೆತದಲ್ಲಿ 2 ರನ್‌ ಕೊಟ್ಟ ಸಂದೀಪ್‌ 2ನೇ ಎಸೆತದಲ್ಲಿ ಸಿಕ್ಸ್‌ ಹೊಡೆಸಿಕೊಂಡರು. 3ನೇ ಎಸೆತದಲ್ಲಿ 2 ರನ್‌ ಹಾಗೂ 4 ಮತ್ತು 5ನೇ ಎಸೆತದಲ್ಲಿ ತಲಾ ಒಂದೊಂದು ರನ್‌ ಬಿಟ್ಟುಕೊಟ್ಟರು. ಕೊನೆಯ ಎಸೆತದಲ್ಲಿ 5 ರನ್‌ ಬೇಕಿದ್ದಾಗ ಅಬ್ದುಲ್ ಸಮದ್ (Abdul Samad) ಸಿಕ್ಸ್‌ ಸಿಡಿಸಲು ಯತ್ನಿಸಿ ಕ್ಯಾಚ್‌ ನೀಡಿದರು. ರಾಜಸ್ಥಾನ ತಂಡ ಗೆದ್ದಾಯಿತು ಎಂದು ಸಂಭ್ರಮಿಸುತ್ತಿದ್ದಂತೆ 3ನೇ ಅಂಪೈರ್‌ನಿಂದ ನೋಬಾಲ್‌ ಫಲಿತಾಂಶ ಹೊರಬಂದಿತು. ಮರು ಎಸೆತದಲ್ಲೇ ಸಮದ್‌ ಭರ್ಜರಿ ಸಿಕ್ಸರ್‌ ಸಿಡಿಸಿ ತಂಡವನ್ನ ಗೆಲ್ಲಿಸಿದರು.

    ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್‌ ರಾಯಲ್ಸ್‌ ತಂಡ 20 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 214 ರನ್‌ ಸಿಡಿಸಿತ್ತು. ಈ ಗುರಿ ಬೆನ್ನತ್ತಿದ್ದ ಹೈದರಾಬಾದ್‌ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 217 ರನ್‌ ಬಾರಿಸಿ ಗೆಲುವು ಸಾಧಿಸಿತು.

    ಚೇಸಿಂಗ್‌ ಆರಂಭಿಸಿದ ಹೈದರಾಬಾದ್‌ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್‌ ಪತನಕ್ಕೆ 5 ಓವರ್‌ಗಳಲ್ಲಿ 51 ರನ್‌ ಗಳಿಸಿದ್ದ ಹೈದರಾಬಾದ್‌ 2ನೇ ವಿಕೆಟ್‌ಗೆ 12.4 ಓವರ್‌ಗಳಲ್ಲಿ 116 ರನ್‌ ಕಲೆಹಾಕಿತ್ತು. 2ನೇ ವಿಕೆಟ್‌ ನಲ್ಲಿ ರಾಹುಲ್‌ ತ್ರಿಪಾಠಿ (Rahul Tripathi) ಹಾಗೂ ಅಭಿಷೇಕ್‌ ಶರ್ಮಾ (Abhishek Sharma) ಅವರ ಭರ್ಜರಿ ಬ್ಯಾಟಿಂಗ್‌ನಿಂದ ತಂಡದಲ್ಲಿ ಗೆಲುವಿನ ಆಸೆ ಚಿಗುರಿತ್ತು. ಇನ್ನೂ 18 ಎಸೆತಗಳಲ್ಲಿ 44 ರನ್‌ ಬೇಕಿರುವಾಗಲೇ ಯಜುವೇಂದ್ರ ಚಾಹಲ್‌ ಬೌಲಿಂಗ್‌ನಲ್ಲಿ ರಾಹುಲ್‌ ತ್ರಿಪಾಠಿ ಬೌಂಡರಿ ಲೈನ್‌ನಲ್ಲಿ ಕ್ಯಾಚ್‌ ನೀಡಿ ಪೆವಿಲಿಯನ್‌ ಸೇರಿದರು. ಮಧ್ಯಮ ಕ್ರಮಾಂಕದಲ್ಲಿ ಬಂದ ಗ್ಲೇನ್‌ ಫಿಲಿಪ್ಸ್‌ (Glenn Phillips) 7 ಎಸೆತಗಳಲ್ಲಿ ಸ್ಫೋಟಕ 25 ರನ್‌ ಚಚ್ಚಿ ವಿಕೆಟ್‌ ಒಪ್ಪಿಸಿದರು. ಕೊನೆಯ ಓವರ್‌ನಲ್ಲಿ ಪಂದ್ಯ ರೋಚಕ ತಿರುವು ಪಡೆದಿತ್ತು. ರಾಜಸ್ಥಾನ್‌ಗೆ ಗೆಲ್ಲುವ ಅವಕಾಶವಿದ್ದರೂ ಬೌಲರ್‌ ಸಂದೀಪ್‌ ಶರ್ಮಾ ಮಾಡಿದ ಬೌಲಿಂಗ್‌ ಎಡವಟ್ಟಿನಿಂದ ವಿರೋಚಿತ ಸೋಲನುಭವಿಸಿತು.

    ಹೈದರಾಬಾದ್‌ ಪರ ಅನ್ಮೋಲ್ಪ್ರೀತ್ ಸಿಂಗ್ 33 ರನ್‌, ಅಭಿಷೇಕ್‌ ಶರ್ಮಾ 55 ರನ್‌ (34 ಎಸತೆ, 2 ಸಿಕ್ಸರ್‌, 5 ಬೌಂಡರಿ), ರಾಹುಲ್‌ ತ್ರಿಪಾಠಿ 47 ರನ್‌ (29 ಎಸೆತ, 3 ಸಿಕ್ಸರ್‌, 2 ಬೌಂಡರಿ), ಹೆನ್ರಿಚ್‌ ಕಳಸೇನ್‌ 26 ರನ್‌ (12 ಎಸೆತ, 2 ಸಿಕ್ಸರ್‌, 2 ಬೌಂಡರಿ), ಫಿಲಿಪ್ಸ್‌ 25 ರನ್‌ (7 ಎಸೆತ, 3 ಸಿಕ್ಸರ್‌, 1 ಬೌಂಡರಿ) ಗಳಿಸಿದರೆ, ಕೊನೆಯಲ್ಲಿ ಅಬ್ದುಲ್‌ ಸಮದ್‌ 7 ಎಸೆತಗಳಲ್ಲಿ 17 ರನ್‌ ಚಚ್ಚಿ ತಂಡದ ಗೆಲುವಿಗೆ ಕಾರಣರಾದರು.

    ರಾಜಸ್ಥಾನ್‌ ಪರ 4 ಓವರ್‌ಗಳಲ್ಲಿ 29 ರನ್‌ ನೀಡಿದ ಯಜುವೇಂದ್ರ ಚಾಹಲ್‌ 4 ವಿಕೆಟ್‌ ಕಿತ್ತರೆ, ಕುಲ್‌ದೀಪ್‌ ಯಾದವ್‌ ಹಾಗೂ ರವಿಚಂದ್ರನ್‌ ಅಶ್ವಿನ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್‌ ತಂಡ ಅಮೋಘ ಪ್ರದರ್ಶನ ನೀಡಿತ್ತು. ಯಶಸ್ವಿ ಜೈಸ್ವಾಲ್‌, ಜೋಸ್‌ ಬಟ್ಲರ್‌, ನಾಯಕ ಸಂಜು ಸ್ಯಾಮ್ಸನ್‌ ಅವರ ಸಿಕ್ಸರ್‌ ಬೌಂಡರಿ ಬ್ಯಾಟಿಂಗ್‌ನಿಂದ ತಂಡ 200 ರನ್‌ಗಳ ಗಡಿ ದಾಟಿತ್ತು. ರಾಜಸ್ಥಾನ್‌ ಪರ ಯಶಸ್ವಿ ಜೈಸ್ವಾಲ್‌ 35 ರನ್‌, ಜೋಸ್‌ ಬಟ್ಲರ್‌ (Jos Buttler) 95 ರನ್‌ (59 ಎಸೆತ, 10 ಬೌಂಡರಿ, 4 ಸಿಕ್ಸರ್‌), ಸಂಜು ಸ್ಯಾಮ್ಸನ್‌ (Sanju Samson) 66 ರನ್‌ (38 ಎಸೆತ, 4 ಬೌಂಡರಿ,5 ಸಿಕ್ಸರ್‌), ಶಿಮ್ರಾನ್‌ ಹೆಟ್ಮೇಯರ್‌ 7 ರನ್‌ ಗಳಿಸಿದರು.

    ಹೈದರಾಬಾದ್‌ ಪರ ಭುವನೇಶ್ವರ್‌ ಕುಮಾರ್‌ ಹಾಗೂ ಮಾರ್ಕೋ ಜಾನ್ಸೆನ್‌ ತಲಾ ಒಂದೊಂದು ವಿಕೆಟ್‌ ಪಡೆದರು.