Tag: ಅಭಿಷೇಕ್ ಮನು ಸಿಂಘ್ವಿ

  • ಭಾರತ ವಿರೋಧಿ ಸ್ನೇಹಿತರು ಟ್ರುಡೊರನ್ನು ರಕ್ಷಿಸಬಹುದು: ಇದು ಕರ್ಮ ಎಂದ ಸಿಂಘ್ವಿ

    ಭಾರತ ವಿರೋಧಿ ಸ್ನೇಹಿತರು ಟ್ರುಡೊರನ್ನು ರಕ್ಷಿಸಬಹುದು: ಇದು ಕರ್ಮ ಎಂದ ಸಿಂಘ್ವಿ

    ನವದೆಹಲಿ: ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau) ಅವರನ್ನು ‘ಭಾರತ ವಿರೋಧಿ ಸ್ನೇಹಿತರು’ ರಕ್ಷಿಸಬಹುದು ಎಂದು ನಾನು ಭಾವಿಸಿದ್ದೇನೆ. ಕೆನಡಾ ಪ್ರಧಾನಿ ಈಗ ತಮ್ಮ ದೇಶದಲ್ಲೇ ರಕ್ಷಣೆಗಾಗಿ ರಹಸ್ಯ ಸ್ಥಳಕ್ಕೆ ಸ್ಥಳಾಂತರವಾಗಿದ್ದಾರೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಅಭಿಷೇಕ್ ಮನು ಸಿಂಘ್ವಿ (Abhishek Manu Singhvi) ಟ್ವೀಟ್ ಮಾಡಿ ಚರ್ಚೆಗೆ ಗ್ರಾಸವಾಗಿದ್ದಾರೆ.

    ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿ ಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ ಕಾಂಗ್ರೆಸ್ ಜೊತೆಗೆ ಕೆನಡಾ ಪ್ರಧಾನಿ ಕೂಡ ಬೆಂಬಲ ಸೂಚಿಸಿದ್ದರು. ಆ ಮೂಲಕ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಪರೋಕ್ಷವಾಗಿ ಮಾತನಾಡಿದ್ದರು. ಆದರೆ ಕಾಂಗ್ರೆಸ್ ಹಿರಿಯ ನಾಯಕರೊಬ್ಬರೇ ಈಗ ಕೆನಡಾ ಪ್ರಧಾನಿ ಹೇಳಿಕೆ ಉಲ್ಲೇಖಿಸಿ ಟೀಕಿಸಿರುವುದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಹಾಗಾದರೆ ಸಿಂಘ್ವಿ ಅವರ ಮುಂದಿನ ರಾಜಕೀಯ ನಡೆ ಏನು ಎಂಬ ಪ್ರಶ್ನೆ ವ್ಯಕ್ತವಾಗಿದೆ. ಇದನ್ನೂ ಓದಿ: ಫೆಬ್ರವರಿಯಲ್ಲಿ 12 ದಿನ ಬ್ಯಾಂಕುಗಳಿಗೆ ರಜೆ

    ಕೆನಡಾದಲ್ಲಿ ಕೋವಿಡ್ ವ್ಯಾಕ್ಸಿನ್ ವಿರೋಧಿ ಪ್ರತಿಭಟನೆಯು ತೀವ್ರಗೊಂಡಿದ್ದು, ರಕ್ಷಣೆಗಾಗಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ರಹಸ್ಯ ಸ್ಥಳದಲ್ಲಿ ತಲೆಮರೆಸಿಕೊಂಡಿದ್ದಾರೆ. ಇದನ್ನು ಭಾರತದ ರೈತರ ಪ್ರತಿಭಟನೆಗೆ ತಳಕು ಹಾಕಿ ನೋಡಿರುವ ಕಾಂಗ್ರೆಸ್‌ನ ಅಭಿಷೇಕ್ ಸಿಂಘ್ವಿ, ‘ಭಾರತ ವಿರೋಧಿ ಸ್ನೇಹಿತರು’ ಟ್ರುಡೊರನ್ನು ರಕ್ಷಿಸಬಹುದು ಎಂದು ನಾನು ಭಾವಿಸಿದ್ದೇನೆ. ಭಾರತದ ಆಂತರಿಕ ವಿಷಯಗಳಿಗೆ ಮೂಗು ತೂರಿಸುವ ಮೊದಲು ತಮ್ಮ ದೇಶದಲ್ಲಿನ ಕಠಿಣ ಪರಿಸ್ಥಿತಿಗಳ ಬಗ್ಗೆ ಅರಿಯಬೇಕು ಎಂದು ಟ್ವೀಟ್ ಮಾಡಿ ಕುಟುಕಿದ್ದಾರೆ.

    ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ೨೦೨೦ರಿಂದ ಸತತ ಒಂದು ವರ್ಷಗಳ ಕಾಲ ರೈತರು ದೆಹಲಿಯ ಗಡಿಭಾಗಗಳಲ್ಲಿ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಕಾಂಗ್ರೆಸ್ ಸೇರಿದಂತೆ ವಿಶ್ವದ ಅನೇಕ ರಾಜಕೀಯ ಪಕ್ಷಗಳು ಹಾಗೂ ನಾಯಕರು ಬೆಂಬಲ ಸೂಚಿಸಿದ್ದರು. ಈ ವೇಳೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಕೂಡ ಭಾರತದ ರೈತರ ಪರವಾಗಿ ಮಾತನಾಡಿದ್ದರು. ಇದನ್ನೂ ಓದಿ: ಸಚಿವ ಸ್ಥಾನಕ್ಕೆ ಲಾಬಿ ಆರಂಭಿಸಿದ ವಲಸಿಗ ಶಾಸಕರು

    ಕಾಂಗ್ರೆಸ್‌ನಲ್ಲಿ ಸೂಕ್ತ ಗೌರವ ಸಿಗದ ಕಾರಣ ಅಭಿಷೇಕ್ ಮನು ಸಿಂಘ್ವಿ ಅವರು ಪಕ್ಷ ತೊರೆಯಲಿದ್ದಾರೆ ಎಂಬ ಸುದ್ದಿಗಳು ಇತ್ತೀಚೆಗೆ ಹರಿದಾಡಿದ್ದವು. ನಾನು ಪಕ್ಷ ತೊರೆಯುವ ಮಾತು ಸುಳ್ಳು ಎಂದು ಸಿಂಘ್ವಿ ಅಲ್ಲಗಳೆದಿದ್ದರು.

  • ಇಡಿ ವಾದ ಸಿನಿಮಾ ಕಥೆಯಂತಿದೆ – ಸೆ.25ಕ್ಕೆ ಆದೇಶ ಪ್ರಕಟ

    ಇಡಿ ವಾದ ಸಿನಿಮಾ ಕಥೆಯಂತಿದೆ – ಸೆ.25ಕ್ಕೆ ಆದೇಶ ಪ್ರಕಟ

    ನವದೆಹಲಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಜಾಮೀನು ಅರ್ಜಿಯ ಆದೇಶವನ್ನು ಸೆ.25ರಂದು ಪ್ರಕಟವಾಗಲಿದೆ.

    ಇಂದು ಬೆಳಗ್ಗೆ 11 ಗಂಟೆಯಿಂದ ಸುದೀರ್ಘವಾದ ವಾದ, ಪ್ರತಿವಾದ ಆಲಿಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್ ಸೆ.25 ರಂದು ಮಧ್ಯಾಹ್ನ 3.30ಕ್ಕೆ ಆದೇಶ ಪ್ರಕಟಿಸುವುದಾಗಿ ತಿಳಿಸಿದರು. ಡಿಕೆ ಶಿವಕುಮಾರ್ ಪರ ವಕೀಲ ಅಭಿಷೇಕ್ ಮನುಸಿಂಘ್ವಿ ವಾದ ಮಂಡಿಸಿ ಇಡಿ ವಾದ ವಾದ ಕೇವಲ ಊಹಾತ್ಮಕ, ಸಿನಿಮಾ ಸ್ಟೋರಿಯಂತಿದೆ. ಹೀಗಾಗಿ ಜಾಮೀನು ಮಂಜೂರು ಮಾಡಿ ಎಂದು ಕೇಳಿಕೊಂಡರು.

    ಸಿಂಘ್ವಿ ಅವರ ವಾದ ಹೇಗಿತ್ತು? ಇಡಿ ಪೂರ್ವಾಗ್ರಹ ಪೀಡಿತವಾಗಿ ನಮ್ಮ ಕಕ್ಷಿದಾರರ ಮೇಲೆ ಆರೋಪವಾಗಿದ್ದು, ಇಡಿ ವಾದವೆಲ್ಲ ಊಹಾತ್ಮಕವಾಗಿದೆ. ಬೇಕಂತಲೇ ನನ್ನ ಕಕ್ಷಿದಾರರಿಗೆ ಹಿಂದೆ ನೀಡಲಾಗುತ್ತಿದೆ. ಎಲ್ಲವನ್ನು ಇವರೇ ಹೇಳಿದ್ರೆ ಟ್ರಯಲ್ ಅವಶ್ಯಕತೆ ಏನು? ವಶದಲ್ಲಿರುವ ಆರೋಪಿಯ ವಿಚಾರಣೆ ಸುಲಭ. ಕೇವಲ 4 ದಿನ ವಿಚಾರಣೆ ನಡೆಸಿದ್ದಾರೆ ಎಂದು 18 ದಿನ ಏನು ಮಾಡಿದರು. ಇಡಿ ಅಧಿಕಾರಿಗಳು 162 ಗಂಟೆ ವಿಚಾರಣೆ ಮಾಡಿದ್ದು, 22 ಗಂಟೆಗ ಆಸ್ಪತ್ರೆಯಲ್ಲಿದ್ದರು. ಅಪರಾಧ ಮಾಡಿಲ್ಲ ಅಂದ್ರೆ ಸತ್ಯ ಹೇಗೆ ಬರುತ್ತದೆ? ಇಡಿ ಕೇಳಿದ ಸುಳ್ಳಿಗೆ ಆರೋಪಿ ಸತ್ಯ ಎಂದು ಒಪ್ಪಿಕೊಳ್ಳಬೇಕಾ? ಇಡಿ ಊಹಾತ್ಮಕದಿಂದ ಹೊರ ಬಂದು ಕಥೆ ಹೇಳುವದನ್ನು ನಿಲ್ಲಿಸಬೇಕು. ಇಡಿ ಸುಳ್ಳನ್ನು ಆರೋಪಿ ಸತ್ಯ ಎಂದು ಒಪ್ಪಿಕೊಳ್ಳಬೇಕಾ. ಇಡಿ ವಿಚಾರಣೆ ವೇಳೆ ವಿಫಲವಾಗಿದೆ. ಅರ್ಥ ಕಕ್ಷಿದಾರರಿಗೆ ಜಾಮೀನು ನೀಡಬೇಕು. 18 ದಿನ ನೇರವಾಗಿ ವಿಚಾರಣೆ ನಡೆಸಬೇಕಿದೆ. ಡಿಕೆಶಿ ದೇಶ ಬಿಟ್ಟು ಪರಾರಿಯಾಗುವಂತಹ ವ್ಯಕ್ತಿಯೂ ಅಲ್ಲ. ಅಕ್ರಮವನ್ನು ವಿಚಾರಣೆ ವೇಳೆ ಸಾಬೀತು ಮಾಡಲು ವಿಫಲವಾಗಿದೆ. ಹೇಳಿಕೆಗಳು ಬದಲಾಗಿದ್ರೆ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಿ. ಇಡಿ ಆರೋಪ ಕೇವಲ ಮೌಖಿಕವಾಗಿದ್ದು, ಇಡಿ ವಾದ ಸಿನಿಮಾ ಕಥೆಯಾಗಿದೆ. ಇದನ್ನೂ ಓದಿ: ಸೆ.25ಕ್ಕೆ ಆದೇಶ ಪ್ರಕಟ- ಜಾಮೀನು ಆದೇಶ ಕಾಯ್ದಿರಿಸಿದ ಕೋರ್ಟ್

    ಸಂಬಂಧ ಇಲ್ಲದ್ದು ಮತ್ತು ಇಡಿ ಹೇಳಿದಕ್ಕೆ ತಲೆಯಾಡಿಸಿ ಒಪ್ಪಿಕೊಳ್ಳಬೇಕಾ? 120 ಬಿ ಘೋಷಿತ ಅಪರಾಧ ಎಂದು ಇಡಿ ಹೇಳುತ್ತದೆ. ಹಾಗಾದರೆ ಬೇರೆಯವರ ಹಣಕ್ಕೆ ಡಿಕೆಶಿಯವರೇ ಮಾಲೀಕರು ಅಂದ್ರೆ ಹೇಗಾಗುತ್ತದೆ. ಡಿಕೆಶಿ ಯಾವ ದಾಖಲೆಗಳನ್ನು ನಕಲು ಮಾಡಿಲ್ಲ, ಸಾಕ್ಷಿಗಳನ್ನು ತಿರುಚಿಲ್ಲ. ಮೌಖಿಕ ಅರೋಪಗಳಿಗೂ ಬೆಲೆ ಇಲ್ಲ. ಡಿಕೆಶಿ ಅತ್ಯಾಚಾರಿ ಅಲ್ಲ, ಭಯೋತ್ಪಾದಕರು ಅಲ್ಲ. ಅಂತಹ ಕ್ರಿಮಿನಲ್ ಗಳಿಗೆ ಬಳಸುವ ಸೆಕ್ಷನ್ ಗಳನ್ನು ಡಿಕೆ ಶಿವಕುಮಾರ್ ಅವರಿಗೆ ಬಳಸಲಾಗಿದೆ. ಇದರಿಂದ ಡಿ.ಕೆ.ಶಿವಕುಮಾರ್ ಅವರಿಗೆ ನೋವು ಆಗಿದೆ. ಆರೋಪಿಯೂ ನಿರಪರಾಧಿಯಾಗಿದ್ದು, ಜಾಮೀನು ನೀಡಬೇಕು.

    ಎಲ್ಲ ದಾಖಲೆಗಳು ಇಡಿ ಬಳಿಯಲ್ಲಿವೆ ಎಂದು ಹೇಳುತ್ತಾರೆ. ಡಿಕೆ ಶಿವಕುಮಾರ್ ದಾಖಲೆಗಳನ್ನು ತಿದ್ದಲು ಹೇಗೆ ಸಾಧ್ಯ. ಹಣ್ಣನ್ನು ನೋಡಿ ನಾಯಿ ಬಾಲ ಅಲ್ಲಾಡಿಸಯುವಂತೆ ಈ ಪ್ರಕರಣ ಆಗಿದೆ. ಮರದ ಮೇಲೆ ಹಣ್ಣು ನೇತಾಡುತ್ತಿದೆ. ಕೆಳಗೆ ನಾಯಿ ನಿಂತಿದ್ದು, ಇದೊಂದು ತ್ರಿಶಂಕು ಪರಿಸ್ಥಿತಿ. ಇಡಿ ಮಾಡುತ್ತಿರುವ ಮೌಖಿಕ, ಊಹಾತ್ಮಕ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ.

    2017ರಲ್ಲಿ 1960-70ರ ಆಸ್ತಿಯ ಖರೀದಿಯನ್ನು ಕೆದಕಲಾಗುತ್ತಿದೆ. ಅವರ ತಂದೆಯವರ ಆಸ್ತಿಗೆ ಡಿ.ಕೆ.ಶಿವಕುಮಾರ್ ಹೇಗೆ ಉತ್ತರ ನೀಡಬೇಕು. 2017ರಲ್ಲಿ ಐಟಿ ಪ್ರಕರಣ ದಾಖಲು ಮಾಡಿಕೊಂಡು 2019ರಲ್ಲಿ ಸಮನ್ಸ್ ನೀಡುತ್ತದೆ. ಇಡಿಗೆ ತನಿಖೆ ಮಾಡಲು ಎರಡು ವರ್ಷ ಬೇಕಾಯ್ತಾ? ಎಂದು ಪ್ರಶ್ನೆ ಮಾಡಿದರು. ಇಡಿಗೆ ತನಿಖೆ ಮಾಡಲು ಎರಡು ವರ್ಷ  ಬೇಕಾ? ಇದರಿಂದ ಇಡಿ ಪೂರ್ವಾಗ್ರಹ ಪೀಡಿತ ಎಂಬುದು ಗೊತ್ತಾಗುತ್ತದೆ. ಇಡಿ ಅಧಿಕಾರಿಗಳು ಎರಡು ವರ್ಷ ಏನು ಮಾಡಿದ್ರು, 18 ದಿನ ಏನು ವಿಚಾರಣೆ ಮಾಡಿದರು ಎಂಬುದನ್ನು ಉತ್ತರಿಸಬೇಕು. ಇದು ಪ್ರಜಾಪ್ರಭುತ್ವದ ಅಂಗ ಎಂಬ ಅನುಮಾನ ಮೂಡುತ್ತಿದೆ.

    ಕ್ರಿಮಿನಲ್ ಪ್ರಕರಣಗಳಿಗೆ ಪೂರ್ವ ಅನ್ವಯ ಗುಣಗಳಿರುವುದಿಲ್ಲ. ಪ್ರಕರಣ ನಡೆದಾಗಲೇ ತನಿಖೆ ನಡೆಸಿ ಶಿಕ್ಷೆ ನೀಡಬೇಕು. ತಪ್ಪು ನಡೆದಾಗ ಚಾಲ್ತಿಯಲ್ಲಿದ್ದ ಕಾಯ್ದೆ ಪ್ರಕಾರವೇ ಶಿಕ್ಷೆ, ದಂಡ ವಿಧಿಸಬೇಕೆ ಹೊರತು ಆ ಬಳಿಕ ಜಾರಿಗೆ ಬಂದ ಕಾಯ್ದೆ, ನಿಯಮದಡಿಯಲ್ಲ. ಒಂದು ಮರವೇ ಘೋಷಿತ ಅಪರಾಧಿಯಾದರೇ ಅದರ ಎಲ್ಲ ಟೊಂಗೆ ಹಣ್ಣುಗಳು ಅಕ್ರಮ ಫಲಗಳಾ? ಹಣ್ಣು ಮೇಲೆ ಕೆಳಗೆ ಮಧ್ಯ ಬುಡದಲ್ಲಿದ್ರು ಅಕ್ರಮವೇ? ಅದರೆ ಮರ ಎಲ್ಲಿದೆ ಎಂದು ತೋರಿಸಬೇಕು. ಇಡಿ ಈಗ ಇಲ್ಲದ ಮರದಿಂದ ಹಣ್ಣು ತಂದಿರುವ ಆರೋಪ ಮಾಡುತ್ತಿದೆ.

    ತಪ್ಪನ್ನು ಪತ್ತೆ ಮಾಡಲೇಬೇಕು ಎಂದು ಇಡಿ ಅಧಿಕಾರಿಗಳು ಪುರ್ವಾಗ್ರಹಪೀಡಿತವಾದಂತಿದೆ. ಎಲ್ಲವೂ ಕಪ್ಪು ಹಣ ಎಂಬುದು ತಪ್ಪು, ಕೆಲವು ವ್ಯವಹಾರ ನಗದಿನಲ್ಲಿ ನಡೆಯುತ್ತದೆ. 1960-70ರ ಕಾಲದಲ್ಲಿ ಡಿ.ಕೆ.ಶಿವಕುಮಾರ್ ತಂದೆ ನಡೆಸಿರುವ ವ್ಯವಹಾರಗಳಿಗೆ ದಾಖಲೆ ನೀಡಲು ಸಾಧ್ಯವಿಲ್ಲ. ಎಲ್ಲವೂ ಕಪ್ಪು ಹಣ ಅಲ್ಲ. ಐಟಿ ಅಡಿ ಶಿಕ್ಷೆಯಾಗುವ ಕೇಸ್ ಗೆ ದೇಶದ ಬುಡ ಅಲುಗಾಡುವ ಉದಾಹರಣೆಗೆ ಕೊಡಲಾಗುತ್ತಿದೆ. ಹಫ್ತಾ ವಸೂಲಿಯು ದರೋಡೆಯಡಿ ಪರಿಗಣಿತವಾಗುತ್ತದೆ. ಅದು ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಬರುತ್ತದೆ. ಹಣವನ್ನು ಒಬ್ಬರಿಂದ ಒಬ್ಬರಿಗೆ ನೀಡಿದರೆ ಅದು ವರ್ಗಾವಣೆ. ಜೇಬುಗಳ್ಳತನವನ್ನು ಹವಾಲಾ ಪ್ರಕರಣದಲ್ಲಿ ಸೇರಿಸುವ ಪ್ರಯತ್ನ ಮಾಡಲಾಗುತ್ತಿದೆ. ಕಿಸೆಕಳ್ಳತನಕ್ಕೆ ಇಲ್ಲಸಲ್ಲದ ಬಣ್ಣ ಬಳಿಯಲಾಗುತ್ತಿದೆ. ಆದಾಯ ತೆರಿಗೆ ಕಾಯ್ದೆ ಅಡಿ ಕೇವಲ ಸಕ್ರಮ ಹಣವನ್ನು ಪರಿಗಣಿಸಲಾಗುತ್ತದೆ ಎಂಬುದೂ ಸರಿಯಲ್ಲ.

    ಸೆಕ್ಷನ್ 45ನ್ನು ಈ ಪ್ರಕರಣದಲ್ಲಿ ಪರಿಗಣಿಸಬಾರದು. ಕಕ್ಷಿದಾರರರಿಗೆ ಜಾಮೀನು ನೀಡಲೇಬೇಕು. ಈ ವೇಳೆ ಸಿಂಘ್ವಿ ಅವರು ಕೆಲವು ಹಳೆ ಆದೇಶಗಳನ್ನು ಪ್ರಸ್ತಾಪ ಮಾಡಿದರು. ಸೆಕ್ಷನ್ 45ಕ್ಕೆ ತಿದ್ದುಪಡಿಯನ್ನು ತರಲಾಗಿದೆ. ಹಾಗಾಗಿ ತಿದ್ದುಪಡಿಯನ್ನು ಪರಿಗಣಿಸಬೇಕು. ಇಲ್ಲದ ಆರೋಪಗಳನ್ನು ನನ್ನ ಕಕ್ಷಿದಾರರ ಮೇಲೆ ಹೊರಿಸಿ ವೈಭವೀಕರಿಸಲಾಗುತ್ತಿದೆ.

    ಸೆಕ್ಷನ್ 14ಕ್ಕೆ ತಿದ್ದುಪಡಿ ತಂದಿದೆ. ತಿದ್ದುಪಡಿ ಬಳಿಕ ಅದನ್ನ ಸ್ಥಗಿತಗೊಳಿಸಿದಂತಾಗಿದ್ದು, ಪಿಎಂಎಲ್‍ಎ ಆಕ್ಟ್ ಅಡಿ ಇದನ್ನು ಹೇಗೆ ಪರಿಗಣಿಸುವುದು. ಸೆಕ್ಷನ್ 45 ತಿದ್ದುಪಡಿ ಬಗೆಗಿನ ಹಳೆ ಜಡ್ಜಮೆಂಟ್ ಬಗ್ಗಗೆ ವಿವರಣೆ ನೀಡಲಾಯ್ತು. ಹಾಗಾಗಿ ಈ ಸೆಕ್ಷನ್ ಅಡಿ ಪ್ರಕರಣ ದಾಖಲಾದರೂ ಷರತ್ತು ವಿಧಿಸಕೂಡದು ಎಂದೇ ಹೇಳಬೇಕಾಗುತ್ತದೆ. ಈ ಸೆಕ್ಷನ್ ಅನ್ನು ಒತ್ತಾಯಪೂರ್ವಕವಾಗಿ ಹೇರುವುದರ ಉದ್ದೇಶವೇನು ಎಂದು ಇಡಿ ಸ್ಪಷ್ಟಪಡಿಸಬೇಕಿದೆ. ಪ್ರಾಸಿಕ್ಯುಷನ್ ಇದನ್ನು ಸಮರ್ಥಿಸಿ ವಾದ ಮಂಡಿಸಿರುವುದು ಆಶ್ಚರ್ಯಕರ. ಜಾರಿಯೇ ಇಲ್ಲದ ಕೆಲವು ಕಾನೂನುಗಳ ಕುರಿತು ಅವರು ವಾದ ಮಂಡಿಸುತ್ತಿದ್ದಾರೆ.

    41 ಲಕ್ಷ ರೂ. ಮಾತ್ರ ಆರೋಪಿಯಿಂದ ವಶಪಡಿಸಿಕೊಂಡಿದೆ. ರಾಜೇಂದ್ರ ಎಂಬವರಿಂದ ಡೈರಿ ವಶಪಡಿಸಿಕೊಂಡಿದೆ. ರಾಜೇಂದ್ರಗೂ ಡಿಕೆಶಿಗೂ ಸಂಬಂಧ ಇಲ್ಲ. ರಾಜೇಂದ್ರ ಶರ್ಮಾ ಟ್ರಾವೆಲ್ಸ್ ಗೆ ಸಂಬಂಧಿಸಿದ ವ್ಯಕ್ತಿಯಾಗಿದ್ದಾರೆ. ಇನ್ನು ಸಚಿನ್ ನಾರಾಯಣ್ 30 ಲಿಕ್ಕರ್ ಶಾಪ್ ಹೊಂದಿದ್ದು, ಅಧಿಕೃತವಾಗಿ ಅವರೆಲ್ಲ ನಗದಿನಲ್ಲಿ ವ್ಯವಹಾರ ಮಾಡುತ್ತಾರೆ. ಇವರ ಬಳಿಕ ಸಿಕ್ಕ ಹಣಕ್ಕೂ ದಾಖಲೆಗೂ ಡಿಕೆಶಿಗೂ ಸಂಬಂಧ ಇಲ್ಲ. ಲೂಸ್ ಪೇಪರ್ಸ್ ಗೂ ಸಂಬಂಧ ಇಲ್ಲ. ಈ ವೇಳೆ ಕೋರ್ಟ್‍ಗೆ ಕೆಲ ದಾಖಲೆಗಳನ್ನ ಸಿಂಘ್ವಿ ನೀಡಿದರು.

    ಎಲ್ಲವೂ ಆಸ್ತಿ ಇದೆ, ಮಾರ್ಕೆಟ್ ವ್ಯಾಲ್ಯೂ ಮಾತ್ರ ಜಾಸ್ತಿಯಾಗಿದೆ. ಇದನ್ನ ಅಕ್ರಮ ಹಣ ವರ್ಗಾವಣೆ ಎನ್ನಲಾಗದು. ಡಿಕೆಶಿಯವರ ಪುತ್ರಿ ಐಶ್ವರ್ಯರ ಮೇಲೆ ಸುಮ್ಮನೆ ಆರೋಪ ಮಾಡಿದೆ. 40 ಕೋಟಿ ವಿಜಯಾ ಬ್ಯಾಂಕ್ ಸಾಲ ಪಡೆದಿದೆ. ಆಕೆಗೆ ಮೂವರು ತಲಾ 1- ಕೋಟಿ ಸಾಲ ನೀಡಿದ್ದಾರೆ. ರಾಜೇಂದ್ರ ಸುನೀಲ್ ಶರ್ಮಾ,  ಸಚಿನ್  ನಾರಾಯಣ್ ಎಲ್ಲರ ಖಾತೆ ಆರೋಪಿಯದ್ದು ಅಂದ್ರೆ ಹೇಗಾಗುತ್ತದೆ. 20 ಖಾತೆಯ ಮಾಹಿತಿ ನೀಡಿದೆ. ಎಲ್ಲರ ಖಾತೆಗಳನ್ನ ಡಿಕೆ ಶಿವಕುಮಾರ್ ಅವರದ್ದು ಎಂದು ಬಿಂಬಿಸಲಾಗಿದೆ. ಸಂಬಂಧಿಕರ ಖಾತೆಗಳನ್ನ ಡಿಕೆಶಿಯವರಲ್ಲಿ ಸೇರಿಸಲಾಗಿದೆ ಎಂದು ಅಭಿಷೇಕ್ ಮನು ಸಿಂಘ್ವಿ ತಮ್ಮ ವಾದ ಮುಗಿಸಿದರು.

    ಸಿಂಘ್ವಿ ಅವರ ವಾದದ ಬಳಿಕ ಡಿಕೆಶಿ ಪರ ಮತ್ತೋರ್ವ ವಕೀಲರಾದ ಮುಕುಲ್ ರೋಹ್ಟಗಿ ತಮ್ಮ ವಾದ ಆರಂಭಿಸಿ, ನಮ್ಮ ಕಕ್ಷಿದಾರ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಗೌರವಾನ್ವಿತ ವ್ಯಕ್ತಿ ಜನಪ್ರತಿನಿಧಿಯಾಗಿದ್ದಾರೆ. ಕಕ್ಷಿದಾರರ ಮನೆಯಲ್ಲಿ ಕೇವಲ 41 ಲಕ್ಷ ರೂ. ಮಾತ್ರ ದೊರಕಿದೆ. ಈ ವೇಳೆ ರೋಹ್ಟಗಿ ಸುಪ್ರೀಂ ಕೋರ್ಟಿನ ತೀರ್ಪುಗಳನ್ನು ಓದಿದರು. ಕಕ್ಷಿದಾರರ ಮನೆಯಲ್ಲಿ ವಶಪಡಿಸಿಕೊಂಡಿರುವ 41 ಲಕ್ಷ ರೂ.ಯಿಂದ ರಾಷ್ಟ್ರದ ಅರ್ಥಿಕತೆ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದರು.

  • 317 ಖಾತೆ, 800 ಕೋಟಿ ಆಸ್ತಿ ಪತ್ತೆ – ಸೆ.17ರವರೆಗೆ ಇಡಿ ಕಸ್ಟಡಿಗೆ ಡಿಕೆಶಿ

    317 ಖಾತೆ, 800 ಕೋಟಿ ಆಸ್ತಿ ಪತ್ತೆ – ಸೆ.17ರವರೆಗೆ ಇಡಿ ಕಸ್ಟಡಿಗೆ ಡಿಕೆಶಿ

    ನವದೆಹಲಿ: ಅಕ್ರಮ ಹಣಕಾಸು ವ್ಯವಹಾರ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಡಿಕೆ ಶಿವಕುಮಾರ್  ಅವರ ಇಡಿ ಕಸ್ಟಡಿ ಅವಧಿಯನ್ನು  ವಿಶೇಷ ಕೋರ್ಟ್ 4 ದಿನ ವಿಸ್ತರಿಸಿದೆ.

    ಇಂದು ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಶಿವಕುಮಾರ್ ಅವರನ್ನು ಮಧ್ಯಾಹ್ನ 3.20ಕ್ಕೆ ಇಡಿ ಅಧಿಕಾರಿಗಳು ರೋಸ್ ಅವೆನ್ಯೂ ನ್ಯಾಯಾಲಯ ಸಮುಚ್ಚಯದ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.

    ಅನಾರೋಗ್ಯದ ಹಿನ್ನೆಲೆಯಲ್ಲಿ ಜಾಮೀನು ಮಂಜೂರು ಮಾಡಬೇಕೆಂದು ಡಿಕೆಶಿ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದ್ದರೆ, ವಿಚಾರಣೆ ಪೂರ್ಣಗೊಂಡಿಲ್ಲ 5 ದಿನ ಕಸ್ಟಡಿಗೆ ನೀಡಿ ಎಂದು ಇಡಿ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಎಂ.ನಟರಾಜ್‌ ವಾದಿಸಿದರು. ವಿಚಾರಣೆ ಸಂದರ್ಭದಲ್ಲಿ ಜಡ್ಜ್ ಸೋಮವಾರದ ಒಳಗಡೆ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಇಡಿಗೆ ಸೂಚಿಸಿದರು. ಎರಡು ಕಡೆ ವಾದ, ಪ್ರತಿವಾದ ಆಲಿಸಿದ ಕೋರ್ಟ್ ಡಿಕೆಶಿಯನ್ನು ಸೆ.17ರವರೆಗೆ ಇಡಿ ಕಸ್ಟಡಿಗೆ ನೀಡಿತು.

    ವಾದ – ಪ್ರತಿವಾದ ಹೀಗಿತ್ತು:
    ಇಡಿ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ನಟರಾಜ್ ವಾದ ಮಂಡಿಸಿ, ವಿಚಾರಣೆ ಸಂದರ್ಭದಲ್ಲಿ ಆದಾಯದ ಮೂಲ ತೋರಿಸಿಲ್ಲ, ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿಲ್ಲ. ಬಹಳಷ್ಟು ಆಸ್ತಿಗಳನ್ನು ಬೇನಾಮಿಯಾಗಿ ಮಾಡಿದ್ದಾರೆ, ಒಟ್ಟು 317 ಬ್ಯಾಂಕ್ ಖಾತೆಯ ಮೂಲಕ ಹಣವನ್ನು ವರ್ಗಾವಣೆ ಮಾಡಿದ್ದು 800 ಕೋಟಿಗೂ ಅಧಿಕ ಆಸ್ತಿ ಪತ್ತೆಯಾಗಿದೆ. 22 ವರ್ಷದ ಮಗಳು 108 ಕೋಟಿ ಗಳಿಸಿದ್ದಾರೆ. ತನಿಖಾ ಸಂಸ್ಥೆ ಸಾಕಷ್ಟು ದಾಖಲೆಗಳನ್ನು ಸಂಗ್ರಹಿಸಿ ವಿಚಾರಣೆ ನಡೆಸುತ್ತಿದೆ. ಹೀಗಾಗಿ 5 ದಿನಗಳ ಕಾಲ ಮತ್ತೆ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು.

    ಈ ಸಂದರ್ಭದಲ್ಲಿ ಮುಂದಿನ 5 ದಿನಗಳಲ್ಲಿ ಈ ಎಲ್ಲ ಪ್ರಶ್ನೆಗಳಿಗೆ ಆರೋಪಿ ಉತ್ತರ ನೀಡುತ್ತಾರಾ ಎಂದು ಜಡ್ಜ್ ಪ್ರಶ್ನಿಸಿದರು. ಈ ಪ್ರಶ್ನೆಗೆ, ಹಲವು ದಾಖಲೆಗಳಿಗೆ ಸಂಬಂಧಿಸಿದಂತೆ ವಿಚಾರಣೆ ಬಾಕಿಯಿದೆ ಎಂದು ನಟರಾಜ್ ಉತ್ತರಿಸಿದರು.

    ಮುಂದಿನ 5 ದಿನದಲ್ಲಿ ಆರೋಪಿ ನಿಮ್ಮ ಪ್ರಶ್ನೆಗಳಿಗೆ ಉತ್ತರ ನೀಡುವುದು ಅನುಮಾನ. ಹೀಗಾಗಿ 5 ದಿನ ಕಸ್ಟಡಿ ಯಾಕೆ ಎಂದು ಜಡ್ಜ್ ಮರು ಪ್ರಶ್ನೆ ಹಾಕಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇತರೇ ಆರೋಪಿಗಳ ಹೇಳಿಕೆಯನ್ನು ಆಧಾರಿಸಿ ಪ್ರಶ್ನೆ ಮಾಡಬೇಕಿದೆ ಎಂದು ಎಎಸ್‍ಜಿ ನಟರಾಜ್ ಉತ್ತರಿಸಿದರು.

    ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿ, ಶಿವಕುಮಾರ್ ಅವರನ್ನು ಈಗಾಗಲೇ 100 ಗಂಟೆಗೂ ಅಧಿಕ ಕಾಲ ವಿಚಾರಣೆ ನಡೆಸಲಾಗಿದೆ. ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ಹೈ ಬಿಪಿಯಿಂದ ಬಳಲಿದ್ದರು. ನಾನು ಈ ಹಿಂದೆ ಕಸ್ಟಡಿಯಲ್ಲಿ ಮೃತಪಟ್ಟ ಡಿಕೆ ಬಸು ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿದ್ದೆ. ಅತ್ಯಂತ ಕ್ರಿಮಿನಲ್‍ಗೂ ವೈದ್ಯಕೀಯ ನೆರವು ನೀಡಲಾಗುತ್ತದೆ. ಹೀಗಾಗಿ ನನ್ನ ಕಕ್ಷಿದಾರರಿಗೂ ವೈದ್ಯಕೀಯ ನೆರವು ಈಗ ಅಗತ್ಯವಿದೆ. ಡಿಕೆ ಶಿವಕುಮಾರ್ ಅವರು ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಇನ್ನು ವಿಚಾರಣೆ ನಡೆಸುವ ಅಗತ್ಯವಿಲ್ಲ. ಅನಾರೋಗ್ಯದಲ್ಲಿರುವ ವ್ಯಕ್ತಿಯನ್ನು ವಿಚಾರಣೆ ನಡೆಸಬಾರದು. ಆಂಜನೇಯ, ಸಚಿನ್ ನಾರಾಯಣ್, ಸುನಿಲ್ ಶರ್ಮಾ ಬೇರೆ ವ್ಯಕ್ತಿಗಳು. ಅವರು ಪ್ರತ್ಯೇಕವಾಗಿ ಆದಾಯ ತೆರಿಗೆ ಪಾವತಿಸುತ್ತಿದ್ದಾರೆ. ಆದರೆ ಇಡಿ ಇವರ ಆಸ್ತಿಯೂ ಡಿಕೆ ಶಿವಕುಮಾರ್ ಅವರದ್ದು ಎಂದು ಹೇಳುತ್ತಿದೆ. ಕರ್ನಾಟಕ ಹೈಕೋರ್ಟ್ ಈ ಪ್ರಕರಣದ ವಿಚಾರಣೆಗೆ ತಡೆ ನೀಡಿದೆ. ಯಾರದ್ದೋ ಆಸ್ತಿ ವಿಚಾರಣೆಗಾಗಿ ಶಿವಕುಮಾರ್ ಅವರನ್ನು ಇಡಿ ಪ್ರಶ್ನೆ ಮಾಡುವುದು ಸರಿಯಲ್ಲ. ಬಿಪಿ ಎಂಬುದು ನಾಟಕ ಮಾಡುವ ವಿಷಯವಲ್ಲ. ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡುತ್ತಿಲ್ಲ. ಒಬ್ಬ ವ್ಯಕ್ತಿ ಎಷ್ಟು ಒತ್ತಡಗಳನ್ನು ಸಹಿಸಿಕೊಳ್ಳಲು ಸಾಧ್ಯ. 13 ದಿನಗಳ ನಿರಂತರ ವಿಚಾರಣೆಯಿಂದ ಶಿವಕುಮಾರ್ ಅವರ ಆರೋಗ್ಯ ಹದಗೆಟ್ಟಿದೆ. ಕಕ್ಷಿದಾರರ 22 ವರ್ಷದ ಪುತ್ರಿಯನ್ನು ಇಡಿ ವಿಚಾರಣೆಗೆ ಒಳಪಡಿಸಿದೆ. ಶಿವಕುಮಾರ್ ಏನು ಮುಚ್ಚಿಡುವುದಿಲ್ಲ. ಎಲ್ಲಿಗೂ ಓಡಿ ಹೋಗುವುದಿಲ್ಲ. ವಿಚಾರಣೆಗೆ ಬೇಕೆಂದಾಗ ಹಾಜರಾಗುತ್ತಾರೆ ಎಂದು ಕೋರ್ಟ್ ಗಮನಕ್ಕೆ ತಂದರು.

    ಈ ವೇಳೆ ಡಿಕೆಶಿ, ನನಗೆ ಹೈ ಬಿಪಿ, ಥೈರಾಯ್ಡ್, ಹೈ ಶುಗರ್ ಇದೆ. ಹೀಗಾಗಿ ಜಾಮೀನು ಮಂಜೂರು ಮಾಡುವಂತೆ ನ್ಯಾಯಾಧೀಶರ ಬಳಿ ಮನವಿ ಮಾಡಿಕೊಂಡರು.

    ಎರಡು ಕಡೆಯ ವಾದ ಪ್ರತಿವಾದ ಆಲಿಸಿದ ಬಳಿಕ ಆದೇಶ ಕಾಯ್ದಿರಿಸಿ ಸಂಜೆ 5:05ರ ವೇಳೆ ನ್ಯಾಯಾಧೀಶರು ಚೇಂಬರ್ ಕಡೆ ನಡೆದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆಶಿ, ಇಡಿ ನನ್ನ ಬಳಿ 317 ಖಾತೆ ಇದೆ ಎಂದು ಆರೋಪಿಸುತ್ತಿದೆ. ನನ್ನ ಬಳಿ ಇರುವ ಎಲ್ಲ ಖಾತೆಯ ವಿವರವನ್ನು ಚುನಾವಣಾ ಆಯೋಗಕ್ಕೆ ತಿಳಿಸಿದ್ದೇನೆ. 317 ಖಾತೆ ಇದ್ದರೆ ಎಲ್ಲವನ್ನೂ ಜಾರಿ ನಿರ್ದೇಶನಾಲಯಕ್ಕೆ ಬರೆದು ಕೊಡುತ್ತೇನೆ ಎಂದು ತಿಳಿಸಿದರು.

    ಅಕ್ರಮ ಹಣಕಾಸು ವರ್ಗಾವಣೆ ಆರೋಪದಡಿಯಲ್ಲಿ ಶಿವಕುಮಾರ್ ಅವರನ್ನು ಸೆ.3 ರಂದು ಇಡಿ ಬಂಧಿಸಿ ಸೆ.4 ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಿತ್ತು. ಈ ವೇಳೆ ಡಿಕೆ ಶಿವಕುಮಾರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಜಾಮೀನು ಮಂಜೂರು ಮಾಡಬೇಕೆಂದು ವಕೀಲ ಅಭಿಷೇಕ್ ಮನು ಸಿಂಘ್ವಿ ಮನವಿ ಮಾಡಿದ್ದರು. ಆದರೆ ಇವರ ಮನವಿಯನ್ನು ತಿರಸ್ಕರಿಸಿದ ಕೋರ್ಟ್ ಸೆ.13 ರವರೆಗೆ ಇಡಿ ಕಸ್ಟಡಿಗೆ ನೀಡಿ ಆದೇಶ ಪ್ರಕಟಿಸಿತ್ತು.

  • ಮೋದಿ ವಿರುದ್ಧ ವ್ಯಕ್ತಿಗತ ನಿಂದನೆ ಬೇಡ: ‘ಕೈ’ ಮುಖಂಡ ಸಿಂಘ್ವಿ

    ಮೋದಿ ವಿರುದ್ಧ ವ್ಯಕ್ತಿಗತ ನಿಂದನೆ ಬೇಡ: ‘ಕೈ’ ಮುಖಂಡ ಸಿಂಘ್ವಿ

    ನವದೆಹಲಿ: ಕಾಂಗ್ರೆಸ್ ಹಿರಿಯ ಮುಖಂಡ ಜೈರಾಮ್ ರಮೇಶ್ ಬೆನ್ನಲ್ಲೇ ಮತ್ತೊಬ್ಬ ‘ಕೈ’ ಹಿರಿಯ ನಾಯಕ ಅಭಿಷೇಕ್ ಮನು ಸಿಂಘ್ವಿ ಅವರು ಪ್ರಧಾನಿ ನರೇಂದ್ರ ಮೋದಿ ಪರ ಬ್ಯಾಟ್ ಬೀಸಿದ್ದಾರೆ.

    ಕಾಂಗ್ರೆಸ್‍ನ ಹಿರಿಯ ನಾಯಕ ಅಭಿಷೇಕ್ ಮನು ಸಿಂಘ್ವಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ವ್ಯಕ್ತಿಗತವಾಗಿ ನಿಂದಿಸುವುದು ಸರಿಯಲ್ಲ. ಅವರು ರಾಷ್ಟ್ರದ ಪ್ರಧಾನಿಯಾಗಿದ್ದು, ಪ್ರತಿ ನಡೆಯಲ್ಲೂ ಉತ್ತಮ, ಕಳಪೆ, ವಿರೋಧಗಳಿರುತ್ತವೆ. ಆದರೆ ಅದನ್ನು ವ್ಯಕ್ತಿಗತವಾಗಿ ನೋಡದೆ, ವಿಷಯಾಧಾರಿತವಾಗಿ ವಿಮರ್ಶಿಸಬೇಕಾಗಿದೆ. ಪಕ್ಷದ ಮುಖಂಡ ಜೈರಾಮ್ ರಮೇಶ್ ಹೇಳಿರುವ ಮಾತಿನಲ್ಲಿ ಅರ್ಥವಿದೆ. ನರೇಂದ್ರ ಮೋದಿ ಮೋದಿ ನೇತೃತ್ವದ ಸರ್ಕಾರ ಜಾರಿಗೆ ತಂದ ಉಜ್ವಲ ಯೋಜನೆ ನಿಜಕ್ಕೂ ಉತ್ತಮ ಕಾರ್ಯ. ಮೋದಿ ಅವರ ವಿರುದ್ಧ ಮಾತನಾಡುವುದರಿಂದ ಅವರಿಗೆ ಮತ್ತಷ್ಟು ಪ್ರಚಾರ ಸಿಕ್ಕಂತೆ ಆಗುತ್ತೆ  ಎಂದು ಟ್ವೀಟ್ ಮಾಡಿದ್ದಾರೆ.

    ಜೈರಾಮ್ ರಮೇಶ್ ಅವರ ಮಾತುಗಳನ್ನು ಸಮರ್ಥಿಸಿಕೊಂಡು ಅಭಿಷೇಕ್ ಮನು ಸಿಂಘ್ವಿ ಅವರು ಪ್ರಧಾನಿ ಮೋದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೈರಾಮ್ ಹಾಗೂ ಅಭಿಷೇಕ್ ಮನು ಸಿಂಘ್ವಿ ಅವರ ನಡೆಯ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಈ ಹಿಂದೆ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರು ಜಮ್ಮು-ಕಾಶ್ಮೀರ ವಿಶೇಷ ಸ್ಥಾನವನ್ನು ರದ್ದು ಮಾಡಿದ್ದಕ್ಕೆ ಪ್ರಧಾನಿ ಮೋದಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

    ಜೈರಾಮ್ ಹೇಳಿದ್ದೇನು?:
    ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಐದು ವರ್ಷಗಳಲ್ಲಿ ಮಾಡಿರುವ ಕೆಲಸಗಳನ್ನು ಗುರುತಿಸಬೇಕಾಗಿದೆ. ಈ ಬಗ್ಗೆ ಟೀಕೆ ಮಾಡುವ ಬದಲು ಅವುಗಳ ಅಧ್ಯಯನ ಮಾಡಬೇಕಾಗಿದೆ. ಅವರು ಜನರಿಗೆ ಹತ್ತಿರವಾಗುವ ಕೆಲಸ ಮಾಡಿದ್ದಾರೆ. ಹೀಗಾಗಿಯೇ 2019ರಲ್ಲಿ ಶೇಕಡ 30ರಷ್ಟು ಹೆಚ್ಚು ಮಂದಿ ಮೋದಿ ಮೆಚ್ಚಿಕೊಂಡಿದ್ದಾರೆ ಎಂದು ಜೈರಾಮ್ ರಮೇಶ್  ತಿಳಿಸಿದ್ದರು.

    ಪ್ರಧಾನಿ ಮೋದಿ ಅವರನ್ನು ಸದಾ ಟೀಕಿಸುತ್ತಿರುವುದರಿಂದ ಯಾವುದೇ ಪ್ರಯೋಜನವಿಲ್ಲ. ಅವರು ಮಾಡಿರುವ ಕೆಲಸಗಳ ಬಗ್ಗೆ ವಿಮರ್ಶೆ ಮಾಡಬೇಕಾಗಿದೆ. ಅಧ್ಯಯನ ಮಾಡಬೇಕಾಗಿದೆ. ಜನರನ್ನು ಸೆಳೆಯುವ ಕಲೆ ಮೋದಿ ಅವರಲ್ಲಿ ಮನೆ ಮಾಡಿದೆ. ಹೀಗಾಗಿ ಅವರನ್ನು ಜನ ವಿಶ್ವಾಸದಿಂದ ಕಾಣುತ್ತಾರೆ, ನಂಬುತ್ತಾರೆ. ಇದನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಜೈರಾಮ್ ರಮೇಶ್ ಹೇಳಿದ್ದರು.