Tag: ಅಭಿಷೇಕ್ ಬ್ಯಾನರ್ಜಿ

  • ಕಲ್ಕತ್ತಾ ಹೈಕೋರ್ಟ್‌ Vs ಸುಪ್ರೀಂ  – ಸಂಜೆ ತುರ್ತು ವಿಚಾರಣೆ, ನ್ಯಾ. ಅಭಿಜಿತ್ ಗಂಗೋಪಾಧ್ಯಾಯ ಆದೇಶಕ್ಕೆ ತಡೆ

    ಕಲ್ಕತ್ತಾ ಹೈಕೋರ್ಟ್‌ Vs ಸುಪ್ರೀಂ – ಸಂಜೆ ತುರ್ತು ವಿಚಾರಣೆ, ನ್ಯಾ. ಅಭಿಜಿತ್ ಗಂಗೋಪಾಧ್ಯಾಯ ಆದೇಶಕ್ಕೆ ತಡೆ

    ನವದೆಹಲಿ: ಬಹಳ ಅಪರೂಪದ ಬೆಳವಣಿಗೆಯೊಂದರಲ್ಲಿ ಸುಪ್ರೀಂ ಕೋರ್ಟ್‌ (Supreme Court) ಶುಕ್ರವಾರ ಸಂಜೆ ದಿಢೀರ್‌ ವಿಚಾರಣೆ ನಡೆಸಿ ಕಲ್ಕತ್ತಾ ಹೈಕೋರ್ಟ್‌ (Calcutta High Court ) ಆದೇಶಕ್ಕೆ ತಡೆ ನೀಡಿದೆ.

    ತಾನು ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದ ವರದಿ ಮತ್ತು ಸುಪ್ರೀಂ ಆದೇಶದ ಅಧಿಕೃತ ಪ್ರತಿಯನ್ನು ರಾತ್ರಿ 12:15ರ ಒಳಗಡೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೆಕ್ರೆಟರಿ ಜನರಲ್‌ಗೆ ಹೈಕೋರ್ಟ್‌ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ (Justice Abhijit Gangopadhyay) ಆದೇಶಿಸಿದ್ದರು.

    ಈ ಆದೇಶ ಪ್ರಕಟವಾದ ಬೆನ್ನಲ್ಲೇ ಸುಪ್ರೀಂ ನ್ಯಾಯಮೂರ್ತಿಗಳಾದ ಎಎಸ್ ಬೋಪಣ್ಣ ಮತ್ತು ಹಿಮಾ ಕೊಹ್ಲಿ ಅವರ ಪೀಠವು ಸಂಜೆ ತುರ್ತು ವಿಚಾರಣೆ ನಡೆಸಿ ಹೈಕೋರ್ಟ್‌ನ ಆದೇಶವು ಅಸಮರ್ಪಕ ಮತ್ತು ನ್ಯಾಯಾಂಗ ಶಿಸ್ತಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟು ಆದೇಶಕ್ಕೆ ತಡೆ ನೀಡಿದೆ. ಇದನ್ನೂ ಓದಿ: ದ್ವೇಷ ಭಾಷಣದ ವಿರುದ್ಧ ಸ್ವಯಂಪ್ರೇರಿತ ಕೇಸ್‌ ದಾಖಲಿಸಿ: ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಆದೇಶ

    ಏನಿದು ಪ್ರಕರಣ?
    ಪಶ್ಚಿಮ ಬಂಗಾಳದ ಪ್ರಾಥಮಿಕ ಶಿಕ್ಷಕರ ನೇಮಕಾತಿ ಹಗರಣದ ಸಂಬಂಧಿಸಿದ ಅರ್ಜಿ ವಿಚಾರಣೆಯನ್ನು ನ್ಯಾ.ಗಂಗೋಪಾಧ್ಯಾಯ ನಡೆಸುತ್ತಿದ್ದರು. ವಿಚಾರಣೆ ನಡೆಸುತ್ತಿರುವಾಗಲೇ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದರು.

    ಟಿವಿ ವಾಹಿನಿಗೆ ಸಂದರ್ಶನ ನೀಡಿದ್ದನ್ನು ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್‌ ಬ್ಯಾನರ್ಜಿ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಮುಖ್ಯ ನ್ಯಾಯಾಧೀಶ ಡಿ.ವೈ ಚಂದ್ರಚೂಡ್‌ ಗರಂ ಆಗಿ ಬಾಕಿ ಉಳಿದಿರುವ ವಿಷಯಗಳ ಕುರಿತು ಸುದ್ದಿ ವಾಹಿನಿಗಳಿಗೆ ಸಂದರ್ಶನ ನೀಡುವುದು ನ್ಯಾಯಾಧೀಶರ ಕೆಲಸವಲ್ಲ. ಅರ್ಜಿದಾರರ ಬಗ್ಗೆ ನ್ಯಾಯಾಧೀಶರು ಅಭಿಪ್ರಾಯವನ್ನು ನೀಡಿದರೆ, ಅವರು ಆ ಪ್ರಕರಣದ ವಿಚಾರಣೆ ನಡೆಸಲು ಸಾಧ್ಯವಿಲ್ಲ.ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಹೊಸ ಪೀಠವನ್ನು ರಚಿಸಬೇಕು ಎಂದು ಸಿಜೆಐ ಸೂಚಿಸಿದ್ದರು.

    ಶಿಕ್ಷಕರ ನೇಮಕಾತಿ ಹಗರಣದ ವಿಚಾರಣೆಯನ್ನು ನ್ಯಾ. ಗಂಗೋಪಾಧ್ಯಾಯ ಅವರು  ನಡೆಸಬಾರದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶ ನೀಡಿತ್ತು. ಈ ಆದೇಶದ ಬೆನ್ನಲ್ಲೇ ನ್ಯಾ. ಅಭಿಜಿತ್ ಗಂಗೋಪಾಧ್ಯಾಯ ಅವರು ರಾತ್ರಿ 12 ಗಂಟೆಯ ಒಳಗಡೆ ತಾನು ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದ ವರದಿಯನ್ನು ನೀಡಬೇಕು. ನಾನು 12:15ರವರೆಗೆ ನನ್ನ ಚೇಂಬರ್‌ನಲ್ಲಿ ಕಾಯುತ್ತೇನೆ. ಇದರೊಂದಿಗೆ ಶಿಕ್ಷಕರ ನೇಮಕಾತಿ ಪ್ರಕರಣದ ವಿಚಾರಣೆಯಿಂದ ನನ್ನನ್ನು ತೆಗೆದುಹಾಕಲು ಕಾರಣವಾದ ದಾಖಲೆಗಳನ್ನು ತನ್ನ ಮುಂದೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ನ ಸೆಕ್ರೆಟರಿ ಜನರಲ್‌ಗೆ ತಕ್ಷಣವೇ ತಿಳಿಸುವಂತೆ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ಸೂಚಿಸಿದ್ದರು. ಈ ಆದೇಶಕ್ಕೆ ಸುಪ್ರೀಂ ಈಗ ತಡೆ ನೀಡಿದೆ.

  • ಮಮತಾ ಬ್ಯಾನರ್ಜಿ ಸೋದರಳಿಯನಿಗೆ ಇಡಿ ನೋಟಿಸ್

    ಮಮತಾ ಬ್ಯಾನರ್ಜಿ ಸೋದರಳಿಯನಿಗೆ ಇಡಿ ನೋಟಿಸ್

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಸಂಸದ ಅಭಿಷೇಕ್ ಬ್ಯಾನರ್ಜಿಗೆ ಜಾರಿ ನಿರ್ದೇಶನಾಲಯ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. ಅಭಿಷೇಕ್ ಬ್ಯಾನರ್ಜಿ ಪತ್ನಿ ರೂಜಿರಾ ಅವರಿಗೂ ನೋಟಿಸ್ ನೀಡಲಾಗಿದೆ.

    ಸೆಪ್ಟೆಂಬರ್ 3ರಂದು ಬ್ಯಾಂಕ್ ದಾಖಲೆಗಳ ಜೊತೆ ವಿಚಾರಣೆಗೆ ಹಾಜರಾಗುವಂತೆ ಅಭಿಷೇಕ್ ಬ್ಯಾನರ್ಜಿ ಅವರಿಗೆ ಇಡಿ ಸೂಚಿಸಿದೆ. ಅದೇ ರೀತಿ ಪತ್ನಿ ರೂಜಿರಾ ಅವರಿಗೆ ಸೆಪ್ಟೆಂಬರ್ 1ರಂದು ವಿಚಾರಣೆಗೆ ದಿನಾಂಕ ನೀಡಿದೆ. ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಗಳ ಖಾತೆಗೆ ಇಬ್ಬರು ತಮ್ಮ ಕಂಪನಿಯಿಂದ ಹಣ ವರ್ಗಾವಣೆ ಮಾಡಿರುವ ಆರೋಪ ಕೇಳಿ ಬಂದ ಹಿನ್ನೆಲೆ ಕೇಂದ್ರಿಯ ತನಿಖಾ ಸಂಸ್ಥೆ ಎಫ್‍ಐಆರ್ ದಾಖಲಿಸಿತ್ತು. ನಂತರ ಅಕ್ರಮ ಹಣ ವರ್ಗಾವಣೆ ಆರೋಪದಡಿ ಇಡಿ ಸಹ ಪ್ರಕರಣ ದಾಖಲಿಸಿತ್ತು. ಇದನ್ನೂ ಓದಿ: ದೇಶದ ಆಸ್ತಿ ಬಿಜೆಪಿ, ಮೋದಿಯ ಸ್ವಂತದ್ದಲ್ಲ: ಮಮತಾ ಬ್ಯಾನರ್ಜಿ

    ಹಣ ವರ್ಗಾವಣೆ ಬದಲಾಗಿ ಕಂಪನಿ ಜೊತೆ ನಕಲಿ ಒಪ್ಪಂದಗಳನ್ನ ಮಾಡಿಕೊಂಡಿರುವ ಆರೋಪಗಳು ಅಭಿಷೇಕ್ ಬ್ಯಾನರ್ಜಿ ಅವರ ಮೇಲಿದೆ. ಅಭಿಷೇಕ್ ಬ್ಯಾನರ್ಜಿ ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ. ಜೊತೆಗೆ ತೃಣಮೂಲ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಹ ಆಗಿದ್ದಾರೆ. ಇದನ್ನೂ ಓದಿ: ಮುಂದುವರಿದ ಸಂಘರ್ಷ – ಸಿಎಂ ಮಮತಾ ಬ್ಯಾನರ್ಜಿ 9 ಪ್ರಶ್ನೆಗಳಿಗೆ ಕೇಂದ್ರದ ಉತ್ತರ

  • ವಿಶೇಷ ನ್ಯಾಯಾಲಯದಿಂದ ಅಮಿತ್ ಶಾಗೆ ಸಮನ್ಸ್ ಜಾರಿ

    ವಿಶೇಷ ನ್ಯಾಯಾಲಯದಿಂದ ಅಮಿತ್ ಶಾಗೆ ಸಮನ್ಸ್ ಜಾರಿ

    ಕೋಲ್ಕತಾ: ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಅವರು ದಾಖಲಿಸಿದ್ದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಮನ್ಸ್ ಜಾರಿ ಮಾಡಿದೆ.

    ಅಭಿಷೇಕ್ ಬ್ಯಾನರ್ಜಿ ಅವರು ದಾಖಲಿಸಿದ್ದ ಮಾನಹಾನಿ ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ಫೆಬ್ರವರಿ 22 ರಂದು ಖುದ್ದಾಗಿ ಅಥವಾ ವಕೀಲರ ಮೂಲಕ ವಿಚಾರಣೆಗೆ ಹಾಜರಾಗುವಂತೆ ಅಮಿತ್ ಶಾ ಅವರಿಗೆ ಸಮನ್ಸ್ ನಲ್ಲಿ ಸೂಚಿಸಿದೆ.

    2018 ರ ಆಗಸ್ಟ್ 11 ರಂದು ಕೋಲ್ಕತ್ತಾದ ಮಾಯೊ ರಸ್ತೆಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಅಮಿತ್ ಶಾ ಅವರು ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರಿಗೆ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದರು ಎಂದು ದೂರು ದಾಖಲಿಸಲಾಗಿತ್ತು. ಅಭಿಷೇಕ್ ಬ್ಯಾನರ್ಜಿ ಪರ ವಕೀಲ ಸಂಜಯ್ ಬಸು ಅವರು ನ್ಯಾಯಾಲಯದಲ್ಲಿ ವಾದಮಂಡಿಸಿದ್ದರು. ವಾದವನ್ನು ಆಲಿಸಿರುವ ನ್ಯಾಯಾಧೀಶರು ಖುದ್ದು ಅಮಿತ್ ಶಾ ಹಾಜರಾಗುವಂತೆ ತಿಳಿಸಿದ್ದಾರೆ ಎಂದು ಸಂಜಯ್ ಬಸು ತಿಳಿಸಿದ್ದಾರೆ.